ಶಾರ್ದೂಲವಿಕ್ರೀಡಿತ

ಪೊಂಬೆಟ್ಟಂ ಪಲವಾದುವೆಂಬ ತೆಱದಿಂ ನಾನಾ ಪ್ರಕಾರಂಗಳಿಂ
ಚೆಂಬೊನ್ನಿಂ ಸಮೆದಂಬರಂ ಬೆಳೆದ ಮಾನಸ್ತಂಭಸಂದೋಹದಿಂ
ಬಿಂಬಾಡಂಬರ ರತ್ನಕೂಟ ಜಿನಚೈತ್ಯಾವಾಸದಿಂ ಚೆಲ್ವು ಕ
ಣ್ಗಿಂಬಾಗಿರ್ಪ ಗೃಹಂಗಳಿಂದೆ ಮೆಱುಗುಂ ಶ್ರೀವೈಜಯಂತೀಪುರಂ ೫೫

ಕಂದ

ಬಳಸಿದುದು ಸಕಳ ದಿಗ್ಮಂ
ಡಳಮಂ ನವರತ್ನ ಖಚಿತ ನಾನಾಕೂಟಂ
ಗಳ ಬೆಳಕೆವೆಳಗು ಪಸರಿಸಿ
ತೊಳಗುವ ನವಶಕ್ರಚಾಪವೆಂದೆನಿಸುವವೊಲ್ ೫೬

ಉದಯಾರ್ಕದ್ಯುತಿಯೆಂಬಂ
ದದೆ ಪೊನ್ನಿಂ ಸಮೆದ ಮಾಟಕೂಟ ಪ್ರಾಸಾ
ದದ ಮೇಲೆ ತೊಳಪ ಮಾಣಿ
ಕ್ಯದ ಕಳಶಜ್ಯೋತಿ ನಿಮಿರ್ದುದೆಂಟುಂ ದೆಸೆಯೊಳ್ ೫೭

ಬಿಸಿಲಂ ಕಡುಗತ್ತಲೆಯಂ
ಸಸಿಕಿರಣಮನಲ್ಲಿ ತೋರ್ಪವಿರುಳುಂ ಪಗಲುಂ
ಕಿಸುಗಲ್ಲಿನ ಹರಿನೀಲದ
ಪೊಸಮುತ್ತಿನ ಕಾಂತಿ ಪರ್ವಿ ತತ್ಪುರವನದೊಳ್ ೫೮

ಚಂಪಕಮಾಲೆ

ಅನುಪಮಮಪ್ಪ ಕತ್ತುರಿಯ ಸಾರಣೆ ಮುತ್ತಿನ ರಂಗವಲ್ಲಿ ಚಂ
ದನ ಘನಸಾರ ಕರ್ಪೂರದ ಕಾರಣೆ ಕುಂಕುಮಮಿಶ್ರತೋಯಸೇ
ಚನವಖಿಳೋದ್ಘ ಸೌರಭವಿರಾಜಿತಪೂವಲಿ ಪಚ್ಚೆದೋರಣಂ
ಮನೆಮನೆಗಪ್ಪುದೆಣ್ದೆಸೆಯ ಗೋಪುರವಾದಿಯ ಬೀದಿಬೀದಿಯೊಳ್ ೫೯

ಕಂದ

ಪೂವಲಿಗೆಱಗುವ ತುಂಬಿಯ
ಗಾವರವಲ್ಲಲ್ಲಿ ಪಾಡುವೋದುವ ನೃಪರಂ
ಕೈವಾರಿಪ ಬುಧರಿಂ ಶೋ
ಭಾವಹಮೆನಿಸಿದುದು ಬೀದಿಬೀದಿಯೊಳೆಲ್ಲಂ ೬೦

ಉತ್ಪಲಮಾಲೆ

ಮಾಲೆಯನೆತ್ತಿತೋರ್ಪ ಯುವತೀಕಮನೀಯನಖಾಂಶು ನೀಳ್ದು ಪೂ
ಮಾಲೆಯ ಮೇಲಿದೊಂದು ಪೊಸಪೂವಿನಮಾಲೆಯಿದೆಂಬ ಶೋಭೆಯಂ
ಮೇಳಿಸೆ ಮನ್ಮಥಂಗೆ ಕುಸುಮಾಯುಧವೆಯ್ದೆ ಸಮಸ್ತಧಾತ್ರಿಯಂ
ಸೋಲಿಸಲೆಯ್ದೆ ಬಂದು ಫಲಮಂ ಪಡೆದೀವವೊಲೊರ್ವಳೊಪ್ಪಿದಳ್ ೬೧

ಓದಿಪೆನೆಂದದೊಂದು ಗಿಳಿಯಂ ಕರದಿಂ ಪಿಡಿಯಲ್ಕದೆಯ್ದೆಕೆಂ
ಪಾದುದು ತತ್ಕರದ್ಯುತಿಯಿನಂತದನೀಕ್ಷಿಸೆ ಲೋಚನಾಂಶುವಿಂ
ದಾದುದು ಬೆಳ್ಪದರ್ಕಗಿದು ಮಾಯದ ಪಕ್ಕಿಯಿದೆಂದು ಮುಗ್ಧೆತಾ
ನೋದಿಸಲಂಜಿ ಭೀತಿ ಮಿಗೆ ಪಂಜರದೊಳ್ ಪುಗಿಸಿಟ್ಟು ಮುಚ್ಚಿದಳ್ ೬೨

ಚಂಪಕಮಾಲೆ

ಕುಣಿಕುಣಿದಾಡೆ ತೋರಮೊಲೆಗಳ್ ಪದಕಂ ತೊನೆದಾಡೆ ಕರ್ಣಭೂ
ಷಣಮೊಲೆದಾಡೆ ಘರ್ಮಜಳವಂಗದೊಳೊಯ್ಯನೆ ಮೂಡೆ ಕುಂತಳಂ
ಪಣೆವಿಡಿದಾಡೆ ತೋರಿಹ ಬಳಲ್ಮುಡಿ ಬೆಂಬಿಡಿದಾಡೆ ಪಿಂಡುಗಂ –
ಕಣದ ಝಣತ್ಕೃತಂ ನೆಗಳೆ ಘಟ್ಟಿಮಗಳ್ಚುವುದಂಗನಾಜನಂ ೬೩

ಶಶಿರವಿಬಿಂಬಮಂ ಮಸೆದು ತೆಳ್ಪೆಸೆಯಲ್ ಪೊರೆಯೆತ್ತಿ ತೀಡಿನು
ಣ್ಣಿಸಿ ಪಲವಂದದಿಂ ಸಮೆದು ಪಂತಿಗಳಾಗಿರಿಸಿಟ್ಟರೆಂಬವೊಲ್
ಮಿಸುಗುವ ಭೋರೆಯಂ ಪರಿಯಣಂ ಮುಕುರಂ ಪೊಸಢಾಳೆಯಂಗಳಿಂ
ದೆಸೆವುದು ಕಂಚಗಾಱಪಸರಪ್ರಸರಂ ಮಿಗೆ ನೋಡೆ ನಾಡೆಯುಂ ೬೪

ಚಂಪಕಮಾಲೆ

ಸುರಗಿರಿಯಂದದಿಂದೆ ಸುಮನೋವ್ರಜರಜಿತವಿಂದುಬಿಂಬದಂ
ತಿರೆ ಕಮಳಾಸ್ಪದಂ ಗಗನದಂತಿರೆ ಮಂಗಳಯುಕ್ತಮಬ್ಧಿಯಂ
ತಿರೆ ಹರಿಸಂಚಯಂ ಸರಸಿಯಂತಿರೆ ಸನ್ನುತಪುಂಡರೀಕ ವಿ
ಸ್ತರಮೆನಿಸಿರ್ಪುದಾ ಪುರವಿಳಾವನಿತಾ ಕಮನೀಯನೂಪುರಂ ೬೫

ಕಂದ

ಆ ಪುರದಧಿಪತಿ ಜಿತರಿಪು
ಭೂಪತಿಯವನರಸಿ ವಾಯುವೇಗಿಯೆನಿಸಿರ್ಪಳ್
ರೂಪಿಂ ರತಿಗೆಣೆಯಖಿಳ ಕ
ಳಾಪರಿಣತೆಯಿಂದೆ ವಾಣಿಗೆಣೆಯೆನೆ ಮೆಱೆವಳ್ ೬೬

ವಚನ

ಅಂತವರಿರ್ವರುಂ ಸುಖಸಂಕಥಾವಿನೋದದಿಂದಿಷ್ಟಭೋಗ ಕಾಮಸುಖಮನನುಭವಿಸುತ್ತಮಿರೆ ಕೆಲವುಂದಿವಸಕ್ಕೆಯಾ ಸತಿ ಪುಱ್ಪವತಿಯಾಗಿ ಚತುರ್ಥಸ್ನಾನಮಂ ಮಾಡಿ ಸೂಳ್ಗೆವಂದು ದುಗ್ಧಾಬ್ಧಿಯಂತೆ ದುಕೂಲವಸನಾಚ್ಫಾದನಂಗೆಯ್ದು ಹಂಸತೂಳತಲ್ಪದೊಳ್ ಸಿರಿಯುಂ ಸರೋಜನಯನನುಮೆಂಬ ಶೋಭೆಗಾಭರಣನು ಮಾಗಿ ಸುರತಾಮೃತಾರ್ಣವದೊಳೋಲಾಡಿ ತದನಂತರಂ ಕಲ್ಪಕುಜನುಂ ಬಳಸಿದ ಕಲ್ಪಲತೆಯಂತೆ ಪ್ರಾಣವಲ್ಲಭಾಲಿಂಗನಂಗೆಯ್ದು ನಿದ್ರಾಮುದ್ರಿತರಾಗಿರ್ದ ಸಮಯದೊಳ್

ಕಂದ

ಸಿರಿಯಂ ಕೇಸರಿಯಂ ಸುರ
ಕರಿಯಂ ಹಿಮಕರನನಹಿಮಕರನಂ ಕನಸಿಂ
ತರುಣಿ ಬೆಳಗಪ್ಪ ಜಾವದೊ
ಳುರುಮುದದಿಂ ಕಂಡು ಬೇಗದಿಂದೆಚ್ಚತ್ತಳ್ ೬೭

ವಚನ

ಅಂತು ನಿದ್ರೆಯಿಂದೆಚ್ಚತ್ತು ತನ್ನ ಕಂಡ ಕನಸಂ ಪ್ರಾಣೇಶ್ವರಂಗೆ ಪೇಳೆ ಕೇಳ್ದು ನೈಮಿತ್ತಿಕರಂ ಕರೆಸಿ ಕೇಳಲವರಿಂತೆಂದರ್

ಕಂದ

ಸಿರಿಯಿಂದಂ ಶ್ರೀಪತಿ ಕೇ
ಸರಿಯಿಂದಂ ಸಿಂಹವಿಕ್ರಮಂ ಕರಿಯಿಂದಂ
ಸುರರಾಜವೈಭವಂ ಹಿಮ
ಕರನಿಂ ನಿಜಕುಲಪಯೋಧಿ ವರಶೀತಕರಂ ೬೮

ಕಂದ

ಮಾರ್ತಾಂಡನಿಂದೆ ತೇಜೋ
ಮಾರ್ತಾಂಡಪ್ರತಿಮನೆನಿಸುವತ್ಮ ಭವಂ ಸತ್
ಕೀರ್ತಿಯುತಂ ಮನಸಿಜನಿಭ
ಮೂರ್ತಿಯುತಂ ನಿನ್ನ ಕಾಮಿನಿಗೆ ಜನಿಯಿಸುಗುಂ ೬೯

ವಚನ

ಎಂದು ಸ್ವಪ್ನದ ಫಲಮಂ ನೈಮಿತ್ತಿಕರ್ ಪೇಳೆ ಕೇಳ್ದು ಸಂತಸಂಬಟ್ಟು ಅವರ್ಗೆ ಬೇಡಿತಂ ಕೊಟ್ಟು ಸುಖದಿನಿರುತಿರೆ ಕೆಲವಾನುಂ ದಿವಸಕ್ಕೆ

ಕಂದ

ಪೊಂಗಿತು ಬಲಿದುದರಂ ಮಿಗೆ
ತುಂಗಕುಚಂ ಬಿಗಿದು ವಕ್ಷ ಜಡನಾದುವು ಕೇ
ಶಂಗಳ್ ನಿಮಿರ್ದುವು ನಯವಾ
ಯ್ತಂಗಂ ಕರಿದಾಯ್ತು ಬಾಸೆ ಗರ್ಭಂ ನೆಲೆಸಲ್ ೭೦

ಚಂಪಕಮಾಲೆ

ವಿಕಸಿತ ಪುಂಡರೀಕದವೊಲಾನನವೆಯ್ದೆ ಬೆಳರ್ತುದಂಬುಜಂ
ಮುಕುಳಿತಮಾಗೆ ಬಂದೆಱಗಿದಾಱಡಿಯಂತೆ ಪಯೋಧರಾಗ್ರದೊಳ್
ಪ್ರಕಟಿತವಾಯ್ತು ಕರ್ಪು ಜಳರೇಖೆಗಳಂತಿರೆ ಯಾದವಾವಳಿ
ಪ್ರಕರಮೆನಲ್ಕೆ ಶೋಭಿಸುವಳಾ ಸತಿಯುನ್ನತ ಗರ್ಭಭಾರದಿಂ ೭೧

ವಚನ

ಅಂತು ಗರ್ಭಚಿಹ್ನಂ ಪ್ರಕಟಿಸಿ ವಿರಾಜಿಸುತ್ತಿರೆ ಸಪ್ತಮಾಸಕ್ಕೆ ಗೌಂಟಗೆಯಂ ಕಟ್ಟಿಸಿ ನವಮಾಸಂ ತೀವಿ ಬೆಸಲೆಯಪ್ಪುದುಂ ಜಾತಕರ್ಮಮಂ ಮಾಡಿ ತದನಂತರಂ ಮನೋವೇಗನೆಂಬ ನಾಮಕರಣಂಗೆಯ್ದು ಅನ್ನ ಪ್ರಾಶನ ಚೌಲೋಪನಯನಾದಿ ಕ್ರಿಯೆಗಳಂ ನಿರ್ವರ್ತಿಸಿ ಏಳ್ಗೆಪಾಡಿವದ ಚಂದ್ರನಂತೆ ಬೆಳೆಯೆವೆಳೆಯೆ

ಕಂದ

ನಡೆಗಲ್ತಂ ಜಿನಮಾರ್ಗದೆ
ನುಡಿಗಲ್ತಂ ಜಿನಪುರಾಣಶಾಸ್ತ್ರೋಕ್ತಿಗಳಿಂ
ನಡೆನುಡಿಗಲಿಯದ ಮುನ್ನಂ
ಕುಡಗಲ್ತಂ ಕಲ್ಪಭೂಜಮೆನೆ ಖಚರಸುತಂ ೭೨

ವಚನ

ಅಂತಿರ್ಪುದುಮಿತ್ತಲ್

ಕಂದ

ಆ ವಿಜಯಾರ್ಧಮಹೀಂದ್ರಂ
ಭೂವನಿತೆಯ ಮಕುಟದಂತೆ ರಾಜಿಸುತಿರ್ಕುಂ
ಭಾವಿಸುವೊಡದಱ ಬಡಗಲ್
ದೇವೇಂದ್ರ ಪುರಂಗಳಿಂತಿವೆನೆ ಕಣ್ಗೊಳಿಕುಂ ೭೩

ವಚನ

ಅವಾವುವೆನೆ ವಾರುಣಿ ದಾರುಣಿ ಕೈಳಾಸಂ ಕಿಳಖಲಂ ವಿದ್ಯುತ್ಕಾರಂ ವಿಮಳಂ ಸುಪ್ರಭಂ ಮುಸಿರಾವತಿ ಕುರುವಂಶಪುರಂ ನಿಷಧಂ ನೀಲವಾಸಂ ಸ್ವಯಂಭು ಅಶೋಕ ವಿದಿಶೋಖೆ ಅಳಕಾಪುರಂ ಶಿವಮಂದಿರಂ ತಿಳಕಾಪುರಂ ಭೂತಿಳಕಂ ದಿವ್ಯತಿಳಕಂ ನಾಗಪುರಂ ಗಂಧರ್ವಪುರಂ ಸೀಮಂಕರಿ ಸಿದ್ಧಾರ್ಧಕಂ ವಸುಮತಿ ವಿಷಭೋರುಕಂ ಸುರೇಂದ್ರಕಾಂತಂ ದೀಪತಿಲಕಂ ಗಗನವಲ್ಲಭಂ ಸಂಡಿತೆ ನಾಗಂ ಮುಖ್ಯಸುರಭಿ ಶ್ರೀನಿಳಯಂ ಮಂದಿರಂ ಕುಮುದಪುರಂ ಗೋಕ್ಷೀರ ಫೇನಂ ಮುಕ್ತಾ ಫಲಂ ಶ್ವೇತ ಶುದ್ಧಂ ಮನೋಜಂ ವಿಷಸುಂ ವಿಷಯಣಂ ಶೈಲಾರ್ಧಂ ಗಿರಿಶಿಖರಂ ವಾಸನಾಶನಂ ನಂದನಂ ನಂದಿಪುರಂ ಧರಣಿ ಧಾರಣಿ ವಸುಂಧರಿ ಸುದರ್ಶನದುರ್ಗಂ ದುರ್ಧರಂ ಇಂದ್ರಂ ಇಂದ್ರಪುರಂ ಸಂಧ್ಯಾಭ್ರಂ ವಿಜಯಂ ವಿಜಯಪುರಂ ಆಚಳಂ ಅಕ್ಷೋಭಂ ರತ್ನರತ್ನಾಕರಂ ರತ್ನ ಸಂಚಯವೆಂಬಱುವತ್ತುಂ ಪಟ್ಟಣಂಗಳೊಳ್

ಚಂಪಕಮಾಲೆ

ಪಳುಕಿನ ಭಿತ್ತಿಯಿಂದೆ ಶಶಿಕಂತದ ಬಾಗಿಲುವಾಡದಿಂದೆ ಕಂ
ಡಳಿಸಿದ ವಜ್ರವೇದಿಕೆಗಳಿಂ ಹರಿನೀಲದ ಕುಟ್ಟಮಂಗಳಿಂ
ತೊಳಗುವ ರತ್ನ ಕೂಟಗೃಹದಿಂ ಪೊಸಮುತ್ತಿನ ತೋರಣಂಗಳಿಂ
ವಿಳಸಿತಮಾದುದಾ ಪುರವಿಳಾಸವನಿತಾ ಕಮನೀಯನೂಪುರಂ ೭೪

ಕಂದ

ವಿಜಯಪುರಮದಱಧೀಶಂ
ತ್ರಿಜಗತ್ಸ್ತುತನೆನಿಸುವ ಪ್ರಭಾಶಂಖಮಹೀ
ಭುಜನಾಥನರಸಿ ವರ ಸರ
ಸಿಜಲೋಚನೆ ವಿಮಳಮತಿ ಕರಂ ಸೊಗಯಿಸುವಳ್ ೭೫

ಕಂದ

ಮುರವೈರಿಗಮಿಂದಿರೆಗಂ
ಸ್ಮರನುದಯಿಸುವಂದದಿಂ ಪ್ರಭಾಶಂಖಂಗಂ
ಹರಿಣಾಕ್ಷಿಮಿಮಳಮತಿಗಂ
ಸ್ಥಿರತೇಜಂ ಪವನವೇಗನುದಯಂಗೈದಂ ೭೬

ವಚನ

ಅಂತುದಯಿಸಿ ಕೆಲವಾನುಂದಿವಸಕ್ಕೆ ಬೆಳೆದುಮಾ ಮನೋವೇಗಂಗಂ ಮತ್ತಮೀ ಪವನವೇಗಂಗಂ ಪೂರ್ವಭವಮಿತ್ರತ್ವಕಾರಣಂ ಪರಸ್ಪರಸ್ನೇಹಮಾಗೆ ತಮ್ಮಿರ್ವರುಂ ಪುಷ್ಪದಂತರೆಂಬುಪಾಧ್ಯಾಯರಲ್ಲಿ ಓದುತಿರ್ದು ಸಕಳಶಾಸ್ತ್ರವಿದ್ಯೆಗಳೊಳ್ ವಿಚಕ್ಷಣರಾಗಿ ಗೌರಿ ಗಾಂಧಾರಿ ಮನೋಹರಿ ಶೀಘ್ರಪ್ರಜ್ಞಪ್ತಿಯೆಂಬ ಪಲವುಂತೆಱದ ವಿದ್ಯೆಗಳಂ ಸಾಧಿಸಿ ಸುಖದಿಂದಿರುತಿರ್ದೊಂದುದಿನಂ ಮನೋವೇಗಂ ಸಮ್ಯಗ್ದೃಷ್ಟಿಯಪ್ಪುದಱಂ

ಕಂದ

ಭರತಾರ‍್ಯಾಖಂಡದ ಜಿನ
ವರರಂ ಪೂಜಿಸುವ ಭಕ್ತಿಯಿಂ ಪೋಗೆ ಸವಿ
ಸ್ತರಮೆನಿಸುವ ಪುಣ್ಯಕಥಾಂ
ತರಮೊಂದುದಯಿಸಿದುದುಖಿಳಜನಸೇವ್ಯಕರಂ ೭೭

ವಚನ

ಅದೆಂತೆಂದೊಡೆ

ಮತ್ತೇಭವಿಕ್ರೀಡಿತ

ಪಿರಿದುಂ ಕೌಶಲದೇಶದೊಳ್ ಮೆಱುವಯೋಧ್ಯಾಪಟ್ಟಣಾಧೀಶ್ವರಂ
ಸ್ಥಿರತೇಜೋನ್ನತ ವಾಸುಪೂಜ್ಯಮಹಿಪಂ ತನ್ಮಂಡಳೇಶಂ ಜಯಂ
ಧರನಂತಾತನ ಕಾಂತೆ ಸೌಂದರಿಯೆನಿಪ್ಪಳ್ ಲೋಕವಿಖ್ಯಾತೆ ವಿ
ಸ್ತರದಾನೋನ್ನತೆ ಸದ್ಗುಣಾನ್ವಿತೆ ವಿವೇಕಾಧಾರೆ ಭೂಚಕ್ರದೊಳ್ ೭೮

ಕಂದ

ಕುಲತಿಲಕ ಜಯಂಧರಮಂ
ಡಳಿಕಂಗಂ ಗುಣನಿಧಾನೆ ಸೌಂದರಿಗಂ ಭೂ
ತಳವೆಯ್ದೆ ಬಣ್ಣಿಸುತ್ತಿರೆ
ಜಳಜಾನನೆ ಸುಮತಿಯೆಂಬ ಸುತೆಯುದಯಿಸಿದಳ್ ೭೯

ವಚನ

ಅಂತುದಯಿಸಿ ಕೆಲವಾನುಂ ದಿವಸಕ್ಕೆ ಶೈಶವಮಂ ಪತ್ತುವಿಟ್ಟು ನವಯೌವನ ಪ್ರಾಪ್ತಿಯಾಗಲಾ ವಾಸುಪೂಜ್ಯಮಹೀಪಾಳಂಗೆ ಶುಭದಿನ ಶುಭಮುಹೂರ್ತದೊಳ್ ವಿವಾಹಮಂ ಮಾಡಲೊಡನೆ ಆ ಜಯಂಧರನ ತಂಗಿಯಂ ಮಗಂ ಸೋದರಳಿಯಂ ಪಿಂಗಳಾಕ್ಷನೆಂಬ ರೂಪದರಿದ್ರಂ ಬಂದು

ಮತ್ತೇಭವಿಕ್ರೀಡಿತ

ಎನಗೆಂದಿರ್ದ ಸಮಸ್ತರೂಪಯುತ ಕನ್ಯಾರತ್ನಮಂ ಪೂರ್ವಸೂ
ಚನೆಯಂ ಕೇಳದೆ ಭೂಮಿಪಂ ಮದುವೆಯಾದಂ ಕಾದಿಕೊಂಡೊಯ್ವೆನೆಂ
ಬೆನೆನೆನ್ನಿಂದ ಸಮರ್ಥನೆಂದು ಪಿರಿದೊಂದುದ್ರೇಕಮಂ ತಾಳ್ದಿನೆ
ಟ್ಟನೆ ಮುಂದೊಂದುಭವಕ್ಕೆ ಕಾಡುವೆನೆನುತ್ತಾಂತಂ ತಪೋವೇಷಮಂ ೮೦

ವಚನ

ಅಂತು ತಾಪಸವೇಷಧಾರಿಯಾಗಿ ನಿಧಾನಶಲ್ಯದಿಂದುಗ್ರೋಗ್ರತಪಮಂ ಮಾಡಿ ಕ್ರೋಧದಿಂ ಸತ್ತು ದಿತಿಜಕುಲದೊಳ್ ಧೂಮಕೇತುವೆಂಬ ರಾಕ್ಷಸದೇವನಾಗಿ ಪುಟ್ಟಿ ವರ್ತಿಸುತ್ತಿರೆಯಿರೆ

ಕಂದ

ಇತ್ತಲಯೋಧ್ಯಾಪುರಪತಿ
ಚಿತ್ತಜನಿಭ ವಾಸುಪೂಜ್ಯಮಹಿಪಂಗಂ ರೂ
ಪೋತ್ತಮೆ ಸುಮತಿಗಮೊಗೆದನು
ದಾತ್ತಯಶಂ ಬ್ರಹ್ಮದತ್ತನೆಂಬ ಕುಮಾರಂ ೮೧

ವಚನ

ಅಂತು ಪುತ್ರೋತ್ಪತ್ತಿಯಾಗೆ ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತು ಮಿರ್ದೊಂದುದಿನಂ ಬ್ರಹ್ಮದತ್ತಕುಮಾರಂಬೆರಸು ವಾಸುಪೂಜ್ಯಮಹೀಪಾಲಂ ಪಿರಿದೊಂದೊಡ್ಡೋಲಗಂ ಕೊಟ್ಟು ಕುಳ್ಳುರ್ದ ಸಮಯದೊಳ್

ಕಂದ

ಮರನಂತಿರೆ ತತ್‌ಕ್ಷಣದೊಳ್
ಕರಿಯಂತಿರೆ ಭಾವಿಸಲ್ಕೆ ತತ್‌ಕ್ಷಣದೊಳ್ ಕೇ
ಸರಿಯಂತಿರೆ ತತ್‌ಕ್ಷಣದೊಳ್
ಗಿರಿಯಂತಿರೆ ನೆಗೆದುದಲ್ಲಿ ಗಗನಾಂತರದೊಳ್ ೮೨

ಪಿರಿದೊಡ್ಡಿದ ಮೇಘಾಡಂ
ಬರಮಂ ಬಿಱುಗಾಳಿ ಪೊಯ್ಯೆ ಪರೆವುದನವನೀ
ಶ್ವರನೀಕ್ಷಿಸಿ ಸಂಸಾರದ
ಪರಿಯಂ ನೆನೆದತಿವಿರಕ್ತಚಿತ್ತಮನಾಂತರ ೮೩

ತನಯಂಗೆ ಪಟ್ಟಮಂ ಕ
ಟ್ಟಿ ನಿರಂತರ ದೀಕ್ಷೆಗೊಂಡು ಪನ್ನೆರಡಬ್ಧಂ
ಮುನಿಪನ ಸಮೀಪದೊಳ್ ನೆ
ಟ್ಟನೆ ಕಲ್ತಂ ಜಿನಮತ ಪ್ರಸಿದ್ಧಾಗಮಮಂ ೮೪

ವಚನ

ಅಂತು ಸಕಲಾಗಮ ಪ್ರವೀಣನಾಗಿ ಅಲ್ಲಿಂ ಬಳಿಕ್ಕೆ ಗುರುಗಳಂ ಬೀಳ್ಕೊಂಡು ಬಾಹ್ಯಾಭ್ಯಂತರಪರಿಗ್ರಹನಿವೃತ್ತನಾಗಿಯುಗ್ರೋಗ್ರತಪಮಂ ಮಾಡುತ್ತೆ

ಮತ್ತೇಭವಿಕ್ರೀಡಿತ

ಬಲಗೈಯಂ ಪೆಗಲ್ಗಿಕ್ಕಿ ಸಂಯಮನಿಮಿತ್ತಂ ಕುಂಚಮಂ ವಾಮದೊಳ್
ತಳೆದಾದಂ ಮಳೆಗಾಲಿಯಾತಪಕೆ ಮೆಯ್ಯಂ ಸಾರ್ಚಿ ಮಾರಂತರಂ
ನೆಲನಂ ಶೋಧಿಸಿ ನೋಡಿನೋಡಿ ನಡೆಯುತ್ತುಂ ಪಾಪಸಂದೋಹದೊಂ
ದೊಲವಂ ಪೊರ್ದದರಣ್ಯದೊಳ್ ಚರಿಯಿಪಂ ಶ್ರೀಜೈನಯೋಗೀಶ್ವರಂ ೮೫

ವಚನ

ಅಂತು ವಿಹಾರಿಸುತ್ತಂ ಬಂದುಂ ಗ್ರಾಮೈಕರಾತ್ರಂ ನಗರೇ ಪಂಚರಾತ್ರಂ ಅಟವ್ಯಾಂ ದಶರಾತ್ರಮೆಂಬಂತು ಶಾಸ್ತ್ರೋಕ್ತಕ್ರಮದಿಂ ಗ್ರಾಮ ನಗರ ಖೇಡ ಖರ್ವಟ ಮಡಂಬ ಪಟ್ಟಣ ದ್ರೋಣಾಮುಖಮೆಂಬನೇಕಪಟ್ಟಣಂಗಳೊಳ್ ವಿಹಾರಕ್ರಮದಿಂ ಬಂದವಂತೀವಿಷಯದ ಉಜ್ಜಯಿನಿಯೆಂಬಪುರದ ಬಹಿರುದ್ಯಾನಮಂ ಸಾರ್ದು ಮುನ್ನಂ ಸುಕುಮಾರಸ್ವಾಮಿ ಪ್ರಾಯೋಪಗಮನಂಗೆಯ್ದು ರತ್ನತ್ರಯಮಂ ಸಾಧಿಸಿದ ಠಾವಿನೊಳ್ ಒಂದು ರಾತ್ರಿ ಪ್ರತಿಮಾಯೋಗದೊಳಿರೆಯಾ ಸಮಯದೊಳ್ ಧೂಮಕೇತುವೆಂಬ ರಾಕ್ಷಸಂ ವಿಮಾನಾರೂಢನಾಗಿ ಜಂಬೂದ್ವೀಪಮಂ ನೋಡುತ್ತುಂ ಗಗನಮಾರ್ಗಂ ಬರುತ್ತಿರೆ ವಿಮಾನಂ ಮುನೀಶ್ವರರ ಮೇಲೆ ನಡೆಯದೆ ಕಲ್ಲಂ ತಾಗಿದ ಮಿಟ್ಟೆಯಂತೆ ಬೆಟ್ಟಮಂ ಪಳಂಚಿದ ಭೈತ್ರದಂತೆ ಪೆಱಸಾರ್ದುನಿಂದು ನಡೆಯದಿರೆ ಪೊಱಮಟ್ಟು ದೆಸೆದೆಸೆಯಂ ನೋಡಿಯೇನುವಂ ಕಾಣದೆ ಇಂತಿದೇಂ ವಿಸ್ಮಯವೆಂದು ಬೆಱಗಾಗಿ ತೊಟ್ಟನೆ ವಿಭಂಗಜ್ಞಾನದಿಂ ನೋಡೆ ವಾಸುಪೂಜ್ಯಂ ತನ್ನ ವೈರಿಯೆಂದಱದು

ಪಂಚಚಾಮರ

ಪೂರ್ವವೈರಮಂ ಮನಸ್ಸಿನೊಳ್ ವಿಚಾರಿಸುತ್ತೆ ಬಂ
ದೊರ್ವನಿಲ್ಲಿ ಸಿಲ್ಕಿದಂ ಪೊದಳ್ದು ಕೊಲ್ವೆನೆಂದು ದೋ
ರ್ಗರ್ವದಿಂದೆ ಪರ್ವತಂಗಳಿಂದಿಡುತ್ತೆ ತನ್ನ ವೈ –
ಕುರ್ವಣತ್ವಮಂ ಪೊಣರ್ಚುತೈದೆ ಬಂದು ನೋಡಿದಂ ೮೬

ವಚನ

ಅಂತು ನೋಡೆ ಕೋಪಮಂ ಮಾಡಿ ನೀಂ ರಾಜ್ಯಂಗೆಯ್ವಲ್ಲಿ ಯೆನಗೆಂದಿರ್ದ ಸುಮತಿಯೆಂಬ ಕನ್ಯೆಯಂ ಸೆಳೆದುಕೊಂಡ ದರ್ಪಮಮಿನ್ನಱಿವೆನೆಂದು ಕರಡಿಯಂ ಕವಿಸುತುಂ ಪುಲಿಯಂ ಮೇಲ್ವಾಯಿಸುತ್ತುಂ ಸಿಂಧುರದಿಂ ಸೀಳಿಸುತ್ತುಂ ಕೇಸರಿಯಿಂ ಗರ್ಜಿಸುತ್ತುಂ ಪಾವುಗಳಿಂ ಕರ್ಚಿಸುತ್ತುಂ ಚೇಳುಗಳಿಂದೂಱಿಸುತ್ತುಂ ಕಿಚ್ಚಂ ಕೆದಱಿಸುತ್ತುಂ ಭೂತವೇತಾಳರಿಂ ಬೆಚ್ಚಿಸುತ್ತುಂ ಅಸಿ ಮುಸಲ ಕಣೆಯ ಕಂಪನ ಮುಸುಂಡಿ ಪಿಂಡಿವಾಳ ಮುದ್ಗರ ತೋಮರಮಿಟ್ಟಿ ಬಿಟ್ಟೇಱು ಸುರಿಗೆ ಸಬಳ ಸಲ್ಲೇಹ ಸೂಲಿಗೆ ಚಕ್ರಚಾಪ ಸೆಲ್ಲೆಹ ಬಲ್ಲೆಹ ಕತ್ತಿಗೆ ಕಠಾರಿಯಾದಿಯಾದ ಕರಮುಕ್ತ ಯಂತ್ರಮುಕ್ತ ಮುಕ್ತಾಮುಕ್ತವೆಂಬ ಪಲವುಂ ತೆಱದ ಕೈದುಗಳಿಂದಿಱಿವ ಎಸೆವ ಇಡುವ ಪೊಯ್ವ ಕಡಿವ ಬಡಿವ ಸೀಳ್ವ ಅಗುರ್ವುರ್ವಿ ಪರ್ವೆ ಪಲವುಂ ತೆಱದುಪಸರ್ಗಮಂ ಮಾಡೆಯುಂ ವಾಸುಪೂಜ್ಯಂ ಮೇರುವಿನಂತಚಳಿತ ಧೈರ್ಯನಾಗಿ ಶುಭಜ್ಞಾನಚಿತ್ತದೊಳಿರೆ ರಾಕ್ಷಸಂ ಮಾಡಿದುಪಸರ್ಗಮೇನುಂ ಕೊಳ್ಳದಿರೆಯಾ ಮುನೀಶ್ವರಂಗೆ ಕೇವಲಜ್ಞಾನೋತ್ಪತ್ತಿಯಾಗೆಯದಕೆ ದೇವೇಂದ್ರನಾಸಕಂಪನಮಾಗೆ ಯವಧಿಯಿಂದಱಿದು ಸಕಲಸುರಸಮಿತಿವೆರಸು ಇಂದ್ರಂ ಬಂದನೇಕತೆಱದ ಅರ್ಚನೆಯಿಂದ ಅರ್ಚಿಸಿ ಸ್ತುತಿಶತಸಹಸ್ರಂಗಳಿಂ ಸ್ತುತಿಯಿಸುತಿರ್ಪುದುಂ ದೈತ್ಯಂ ಕಂಡು ಬೆಕ್ಕಸಂಬಟ್ಟು ವೈರಮಂ ಬಿಟ್ಟು ಬಲವಂದು ಪಲತೆಱದಿಂ ವಂದಿಸಿ ಪೋಗೆ ಯಿತ್ತಲ್

ಕಂದ

ಸುರಪತಿ ಪೇಳಲ್ ಧನದಂ
ವಿರಚಿಸಿದಂ ಸಮವಸರಣಮಂ ನಾನಾ ತೆಱವಿ
ಸ್ತರದಿಂದೆ ವಿಭುಧತತಿಗೆ
ಚ್ಚರಿಯಪ್ಪಂತಖಿಲರತ್ನ ಸಂಕುಳದಿಂದಂ ೮೭

ವಚನ

ಅಂತು ಸಮವಸರಣಮಂ ನಿರ್ಮಿಸಿ ಪುಷ್ಟವೃಷ್ಟಿ ಮಂದಮಾರುತಂ ಕಂಕೇಲ್ಲಿ ಭೂಜಂ ಸ್ಫಟಿಕಮಯಭದ್ರಾಸನಂ ದೇವಾಗಮನಮೆಂದಿಂತು ನಾಲ್ಕುಂ ಮಹಾಪ್ರಾತಿ ಹಾರ‍್ಯದಿಂದನಗಾರಕೇವಳಿಯಪ್ಪವಾಸುಪೂಜ್ಯಮುನೀಂದ್ರನುಜ್ಜಯಿನಿಯ ಬಹಿರುದ್ಯಾನದೊಳ್ ವಿರಾಜಿಸುತಿರ್ಪ ಸಮಯದೊಳ್

ಮಹಾಸ್ರಗ್ಧರೆ

ಭರತಾರ್ಯಾಖಂಡದೊಳ್ ಶೋಭಿಪ ಜಿನವರರಂ ಪೂಜೆಯಂ ಮಾಡಿ ಬೇಗಂ
ಬರುತಿರ್ಪಾಗಳ್ ವಿಮಾನಂ ನಡೆಯದಿರಲದೇನೆಂದು ತಾಂ ನೋಡಿಯಾ ಖೇ
ಚರರಾಜಂ ಚೋದ್ಯಮಾಗಲ್ ಸಮವಸರಣಮಂ ಕಂಡುವಲ್ಲಿಂದ ಬಂದಾ
ದರದಿಂದಂ ಭಕ್ತಿಯಿಂ ವಂದಿಸಿ ನೆಱೆಯುಚಿತಸ್ಥಾನದೊಳ್ ಕುಳ್ಳಿರಿರ್ದಂ ೮೮

ವಚನ

ಅಂತು ಕುಳಿತಿರ್ದು ಧರ್ಮಶ್ರವಣಮಂ ಕೇಳ್ದು ತದನಂತರಂ ಸಮುದ್ರದತ್ತನೆಂಬ ವಣಿಗ್ವರಂ ಕರಕಮಳಮಂ ಮುಗಿದು ಸಂಸಾರಜೀವಸುಖದುಃಖಪ್ರಮಾಣಮಂ ಬೆಸಸಿಮೆನೆಯಾ ಮುನೀಶ್ವರನಿಂತೆಂದಂ

ಉತ್ಪಲಮಾಲೆ

ನೆಟ್ಟನೆ ಸತ್ಪಥಂ ಪಿಡಿದು ಪೋಪ ನರಂ ಮತಿಗೆಟ್ಟು ಪಾಯ್ದು ಪು
ಲ್ವಟ್ಟೆಯನೆಯ್ದಿ ಪೋಗುತಿರೆ ಕಾನನದೊಳ್ ಗಜವೊಂದು ಕಂಡು ಬೆ
ನ್ನಟ್ಟಿದೊಡೋಡಿ ಬಿರ್ದು ಪಳಬಾವಿಯ ಮಧ್ಯದ ವೃಕ್ಷಮೂಲಮಂ
ತೊಟ್ಟನೆ ಪತ್ತಿ ಜೋಲುತಿರಲಲ್ಲಿ ಸಿತಾಸಿತಮೂಷಕದ್ವಯಂ ೮೯

ಚಂಪಕಮಾಲೆ

ಕಡಿದವು ಬೇರನಾಂತಜಗರಂ ಕೆಳಗಾ ದೆಸೆನಾಲ್ಕಱತ್ತ ಪಾ
ಯ್ವೆಡೆ ನೆಲಸಿರ್ಪ ನಾಲ್ಕು ಫಣಿಯಾಗಜವಗ್ರದ ಭೂಜದಲ್ಲಿ ಕೋ
ಡಿಡೆ ನೆಲಸಿರ್ದ ಜೇನನೊಣವೆರ್ದು ಶರೀರಮನೂಱೆ ಮೇಲೆ ಬಾ
ಯ್ವಿಡೆ ಮಧುವಿಂದು ಬಾಯೊಳುಗಲಂತದನಾಟಿಸುವಂತೆ ಭವ್ಯನೇ ೯೦

ವಚನ

ಎಂದುದಂ ವ್ಯಕ್ತೀಕರಿಸಲೆಂದು ಮತ್ತಮಿಂತೆಂದರಾ ನಗರಮಾರ್ಗಮೆ ಮುಕ್ತಿ ಮಾರ್ಗಮದಂ ಬಿಡದುದು ಸಮ್ಯಕ್ತ್ವಂ ವಿಂಧ್ಯಾಟವೀಮಾರ್ಗ ಸಂಸಾರಮಾರ್ಗಮದು ಮಿಥ್ಯಾತ್ತ್ಜಂ ಅಡವಿಯಪ್ಪುದು ಸಂಸಾರಂ ಮತ್ತಗಜಂ ಮೃತ್ಯುಕೂಪಂ ಶರೀರಂ ವೃಕ್ಷಮೂಲಮಾಯುಷ್ಯಂ ಶ್ವೇತಕೃಷ್ಣಮೂಷಕಂಗಳ್ ಶುಕ್ಲಕೃಷ್ಣಪಕ್ಷಂಗಳ್ ಅಜಗರಂ ದುರ್ಗತಿ ಸರ್ಪಚತುಷ್ಟಯಂಗಳ್ ಕಷಾಯಂಗಳ್ ವೃಕ್ಷಕರ್ಮಬಂಧಂ ಮಕ್ಷಿಕಂಗಳ ಭಾಧೆ ನೂಱೆಂಟುವ್ಯಾಧಿಗಳ್ ಮಧುಬಿಂದುವಿನಾಸ್ವಾದುಯೌವನದ ಸುಖವೆಂದು ಮುನೀಶ್ವರಂ ನಿರೂಪಮಂ ಕುಡೆ ಕೇಳ್ದು ತದನಂತರಂ ಮನೋವೇಗಂ ಕರಕಮಳ ಮುಕುಳಿತನಾಗಿಯಿಂತೆಂದಂ

ಉತ್ಪಲಮಾಲೆ

ಎನ್ನ ಮಹಾಸಖಂ ಪವನವೇಗನವಂ ಜಿನಧರ್ಮಮೆಂಬಿದಂ
ಮನ್ನಿಸನಾಲಿಸಂ ಪದೆದಭೀಕ್ಷಿ ಸನಾತನಕರ್ಮಬಂಧಮಿ
ನ್ನೆನ್ನ ವರಂ ತೊಳಲ್ಚಿಸುವುದೀ ಭವಮಾಲೆಯೊಳಾತನೇನುಮಂ
ಸನ್ನುತ ಧರ್ಮಮಂ ತಿಳಿವುಪಾಯಮನೀಂ ಬೆಸಸಿಂ ಮುನೀಶ್ವರಾ ೯೧

ಕಂದ

ಎಂದು ಮನೋವೇಗಂ ಭರ
ದಿಂದಂ ತನ್ನಯ ಸಖಂಗೆ ಹಿತಮಂ ಪಡೆಯಲ್
ಮಂದರಧೈರ್ಯಂ ಪಿರಿದಾ
ನಂದದಿ ಬೆಸಗೊಳ್ವುದುಂ ನಿರಂತರದಿಂದಂ ೯೨

ಕರುಣಾಳೋಕನ ರುಚಿ ಸುರು
ಚಿರದೇಹಮರೀಚಿ ನೀಳ್ದು ವರಭವ್ಯ ಜನೋ
ತ್ಕರ ಚಿತ್ತ ತಿಮಿರಮಂ ಪರಿ
ಹರಿಸುವಿನಂ ಮುನಿಲಲಾಮನಂದಿಂತೆಂದಂ ೯೩

ರಥೋದ್ಧತ

ಪಾಟಳೀಪುತ್ರಾಖ್ಯ ಪಟ್ಟಣದಲ್ಲಿಯನ್ಯಪುರಾಣಮಂ
ಕೂಟಮಾಳ್ಪಾಕಾರದಿಂ ಕುಮತಾಗಮಾಚರಣತ್ವ ನಿ
ರ್ದಾಟಮಂ ಮಾಡಲ್ಕೆ ನಿನ್ನ ಮನೋರಥಂ ದೊರೆಕೊಳ್ವುತಾಂ
ಪಾಟಿಪಂ ಸಮ್ಯಕ್ತ್ವಮಂ ಜಿನಧರ್ಮದ್ ಕೆಳೆಯಂ ನೃಪಾ ೯೪

ಕಂದ

ಎಂದು ಮುನೀಶಂ ಮನದೊಲ
ವಿಂದಂ ಪೇಳಲ್ಕೆ ಕೇಳ್ದು ಧರ್ಮಕ್ಕೆ ಸಖಂ
ಸಂದೆಯಮಿಲ್ಲದ ಬಂದಪ
ನೆಂದುತ್ಸಾಹಮನೆ ತಾಳ್ದಿದಂ ಖಚರೇಂದ್ರಂ ೯೫

ತನ್ನಯ ಸಖಂಗೆ ಸುಖಸಂ
ಪನ್ನತೆಯಂ ಕುಮತಕಧಮವೃತ್ತಿಯನಱವೊಂ
ದುನ್ನತಿಯಂ ಮಾಳ್ಪೊಂದನು
ವನ್ನೆನೆದಂ ಮುನಿಯ ಮತದೆ ವೃತ್ತವಿಲಾಸಂ ೯೬

ಗದ್ಯ

ಇದು ವಿನಯದಮರಮಕುಟತಟಘಟಿತ ಮಣಿಗಣಮರೀಚಿಮಂಜರೀಪುಂಜರಂಜಿತ
ಪಾದಾರವಿಂದ ಭಗವದರ್ಹತ್ಪರಮೇಶ್ವರವದನವಿನಿರ್ಗತ ಶ್ರುತಾಂಬೋಧಿವರ್ಧನ
ಸುಧಾಕರ ಮದಮರಕೀರ್ತಿರಾವುಳವ್ರತೀಶ್ವರಚರಣಸರಸೀರುಹಷಟ್ಟದಂ
ವೃತ್ತ ವಿಲಾಸವಿರಚಿತಮಪ್ಪ ಧರ್ಮಪರೀಕ್ಷೆಯೊಳ್
ಮನೋವೇಗಪವನವೇಗೋತ್ಪತ್ತಿ ನಿರೂಪಣಂ
ಪ್ರಥಮಾಶ್ವಾಸಂ