ಪೊನ್ನುಳ್ಳೊಡಲ್ಪದೋಷಿಯು
ಮನ್ನೂಱಂ ಬೇೞ್ಪರಧಿಕದೋಷಿ ದರಿದ್ರಂ
ಚಿನ್ನಮನಿತ್ತೊಡೆ ಪೋಕುಮೆ
ನಿನ್ನಘಮೆಂಬರ್ ಮಹಾತ್ಮರೇನಂ ಮಾಡರ್ || ೮೧ ||

ಬೆಂದಿರ್ದ ಸೀರೆಗಂ ಪಗ
ಲಿಂದ ತುರಂಗಮಕ(?) ಮೆಲ್ಲಿಯುಂ ಸತ್ತರ ಮೆ
ಯ್ಕಿಂದುಣ್ಬುದ[ಕ್ಕ]ಮೆಲ್ವಂ
ಮಂದಾಕಿನಿಗೊಯ್ವುದ[ಕ್ಕ]ಮರ್ಹರ್ ಪಾರ್ವರ್ || ೮೨ ||

ಅಲಸದೆ ಯಾಚಿಪುದರ್ಕಂ
ಸಲೆ ಜನ್ನಮನಿರ್ಪುದರ್ಕಮಱಗುಲಿತನಕಂ
ಪಲಬರ ಪಾಪಮನೆಂತುಂ
ಬೆಲೆಯಿಟ್ಟುಂ ಕೊಳ್ವುದರ್ಕಮರ್ಹರ್ ಪಾರ್ವರ್ || ೮೩ ||

ಕೃತ್ಸ್ನಮನೆ ಮಾೞ್ಪುದೆಂಬರ್
ಕೃತ್ಸ್ನಂ ಮಾಡಲ್ಕೆ ಶಕ್ತಿಯಿಲ್ಲದೊಡೆಮಗಾ
ಕೃತ್ಸ್ನದ ಬೆಲೆಯಂ ಕೊಟ್ಟೊಡೆ
ಕೃತ್ಸ್ನದ ಫಲಮಕ್ಕುಮೆಂದು ಕೊಳ್ವರ್ ತಕ್ಕರ್ || ೮೪ ||

ಕುಡದೆ ಪರಮಂಗೆ ಪೂಜೆಯ
ನೊಡಲಂ ದಂಡಿಸದೆ ನಿಯಮದಿಂದಾಪೊೞ್ತುಂ
ನಡೆಯದೆ ಪಾರ್ವರ ಮಾತಿಂ
ಕಿಡಲಱಿಗುಮೆ ಬಱಿದೆ ನರರ ನೆರಪಿದ ದುರಿತಂ || ೮೫ ||

ಕುತ್ತಕ್ಕೆ ಮರ್ದುಮಾಡದೆ
ಕುತ್ತಂ ಪೋಗೆಂದೊಡಂತೆ ಪೋಕುಮೆ ನರರಂ
ಪತ್ತಿದ ಪಾಪಂ ಪ್ರಾಯ
ಶ್ಚಿತ್ತಂ ಪೊಱಗಾಗಿ ವಚನದಿಂ ಪೋದಪುದೇ || ೮೬ ||

ಒಡಲಂ ದಂಡಿಸಿ ನಿಯಮದೆ
ನಡೆಯದೆ ಪೋಕೆಂದು ಪಾರ್ವರೆಂದೊಡೆ ಪಾಪಂ
ಬಿಡೆ ಪೋಪಂತದು ಪೇೞಾ
ತುಡುಗುಣಿಯೋ ತಿರಿವ ಗೊರವನೋ ಪೇೞಿಮಿಂದಂ || ೮೭ ||

ಮತಿಹೀನ[ರ ಲೌಲ್ಯರ] ದು
ರ್ಮತದಿಂದೆಸಗಲ್ಕೆ ಪಱಿಗುಮೇ ಪಾಪಂ ಸ
ನ್ಮತಿ ಪಾಪಭಂಜನಂ ಪೇ
ೞ್ದ ತೆಱದೆ ನೆಗೞ್ದಂದು ಪಾಱಗುಂ ಪಾಪಚಯಂ || ೮೮ ||

ಬೆರಲೊಳ್ ಪುಲ್ಲಿಲ್ಲದೆ ದೇ
ವರನರ್ಚಿಸೆ ಸಂಜೆವಾಸೆ ದಾನಂಗುಡೆ ಪಾ
ರ್ವರಿಗಿಕ್ಕೆ ಸುಕೃತಮಂ ಮಾ
ಡೆ ರಾಕ್ಷಸರ್ ಫಲಮನೊಯ್ವರೆಂಬರ್ ಪಾರ್ವರ್ || ೮೯ ||

ಪುಲ್ಲಾದುದೆ ಪಾಪದಿನಾ
ಪುಲ್ಲೆಂದು ಪವಿತ್ರಮಾಯ್ತೊ ಪೇೞ್ ತಾಮಂತಾ
ಪುಲ್ಲಿಂ ಪವಿತ್ರರಪ್ಪೊಡೆ
ಪುಲ್ಲಿಂದಂ ಕಷ್ಟಮಾಗವೇೞ್ಕುಂ ಪಾರ್ವರ್ || ೯೦ ||

ಜಳಗಂಧಾಕ್ಷತೆ ಪುಷ್ಟಂ
ಗಳಿವೆಲ್ಲಂ ಜೈನಪೂಜೆಯಿಂದ ಪವಿತ್ರಂ
ಗಳವಕ್ಕುಂ ನಿಜದಿಂದಂ
ಜಳ ದರ್ಭಾದಿಗಳೆ ತಾಮವಲ್ಲ ಪವಿತ್ರಂ || ೯೧ ||

ಮಿಥ್ಯಾಪುರಾಣಮಾಕ್ಯಮೆ
ತಥ್ಯಂ ತಮಗಾಗೆ ದೋಷಿಯಾದೊಡಮೇನಾ
[ತಿ]ಥ್ಯಂ ಪಾತ್ರಮೆನುತ್ತುಂ
ಮಿಥ್ಯಾತ್ವದೆ ಕೂೞನಿಕ್ಕಿ ಕಿಡುವರ್ ಮೂಢರ್ || ೯೨ ||

ಭೂತಬಲಿಯಿಕ್ಕುವಲ್ಲಿಗೆ
ಪಾತಕನುಂ ಬಂದು ದಾನಮಂ ಬೇಡುಗೆ ತಾ
ನಾತಿಥ್ಯಂ ಶ್ವಪಚನುಮ
ಕ್ಕಾತಂಗುಣಲಿಕ್ಕುಗೆ ಪುಣ್ಯಹೇತುವೆಂಬರ್ ಪಾರ್ವರ್ || ೯೩ ||

|| ಸ್ರ || ಉಣಲಿರ್ದಾಪೋಶನಂಗೊಳ್ವೆಡೆಯೊಳೆ ಪಿರಿದುಂ ಕಾಂಕ್ಷೆಯಿಂ ಪಾರ್ವನಂತಾ
ಕ್ಷಣದುಣ್ಬಂದನ್ನಮಂ ಬೇಡಿದೊಡೆ ತಳಿಗೆಯಂ ಕೂೞುಮಂ ಕೊಟ್ಟು ತಾನಂ
ದುಣಿಸಂಮಾಣ್ದುಂಡವಮಗೋವದೆ ತುಡುಗೆಯಮಂ ಸೀರೆಯಂ ಪೊನ್ನುಮಂ ದ
ಕ್ಷಿಣೆಗೊಟ್ಟಂಗೊಳ್ಪುಸಾರ್ಗುಂ ಕುಡದೊಡೆ ಪಿರಿದುಂ ದೋಷಮೆಂಬರ್ ಮಹಾತ್ಮರ್ || ೯೪ ||

ಏನೆಂಬುದಣಕಮಂ ಪ್ರ
[ಧ್ಯಾ]ನಂಗೆಯ್ದಂಗೆ ತಳಿಗೆವರೆಸರಿ[ತ್ತ]ದವಂ
ಗೂನಮನೇಱಿಸಿ ಪಾರ್ವಂ
ತಾನಾತನ ಸುಕೃತಮಂ ಗಡ ಕೊಂಡೊಯ್ವಂ || ೯೫ ||

ಆಪೋಶನಮಂ ಪಿಡಿದಿ
ರ್ದೋಪಳುಮಂ ಬೇ[ಡಿ] ಕುಡಲೆವೇೞ್ಕುಂ ಪಾರ್ವಂ
ಗೇಪಚ್ಚೊ ಕುಡದೊಡಾಗಳ್
ಪೋಪಂ ನರಕಕ್ಕೆ ದಾನಿಯೆಂಬರ್ ತಕ್ಕರ್ || ೯೬ ||

ಕಂಡೞ್ತಿಕಾಱರೊಂದಂ
ಕಂಡಿರೆ ಸರ್ವಸ್ವದಾನಮಂ ಕುಡುವೆಡೆಯೊಳ್
ಪೆಂಡತಿಯುಮನೀವುದು ಗಡ
ಪೆಂಡತಿಯಂ ಕುಡುವುದಾವ ಮತದೊಳಗುಂ[ಟೋ] || ೯೭ ||

ವೇದಂ ಧರ್ಮಕ್ಕೆ ಮೊದಲ್
ವೇದಂ ಮೋಕ್ಷಕ್ಕೆ ಮಾರ್ಗಮೆಂಬರ್ ನಾಲ್ಕುಂ
ವೇದದ ಸಾರಂ ಜನ್ನಂ
ವೇದಂ ಧರ್ಮಕ್ಕೆ ಮೂಲಮತ್ತೆಂತಾಯ್ತೋ || ೯೮ ||

ಇಂತಪ್ಪೆಡೆಗಳೊಳಿರ್ದಪು
ವಿಂತಪ್ಪಾ ಬಣ್ಣದಡಗು ಪಶುವಿನೊಳೆಂದೋ
ರಂತಿರೆ ಪೇೞ್ವಾಗಮಮಿ
ನ್ನಂತದು ತಾಂ ಸೂನೆಗಾಱಿಮತವೆಂಗಱಿವಂ || ೯೯ ||

ಜನ್ನಕ್ಕೆ ಕೊಂದ ಪಶುವಂ
ಮುನ್ನಿನ ಯುಗದಂದು ಮತ್ತೆ ಪಡೆವರ್ ಗಡ ಮ
ತ್ತಿನ್ನೀಗಳೇಕೆ ಪಡೆಯರೊ
ಜನ್ನಕ್ಕೆಂದೞಿದ ಪಲವು ಪಶುಗಳೊಳೊಂದಂ || ೧೦೦ ||

ಛಾಗದ ಪದೋತ್ಥಧೂಳಿಯೊ
ಳಾಗದೆ ಬಹಿರಂಗಮಶುಚಿಯೆಂಬರ್ ಮತ್ತಂ
ಯಾಗವ್ಯಾಜದಿನವನಾ
ರೋಗಿಸಲವರಂತರಂಗಮೇಂ ಶುಚಿಯಾಯ್ತೇ || ೧೦೧ ||

ಕುಲಹೀನನೇೞು ಬೇಲಿಯ
ತಲೆಯವನುಂ ಸತ್ತ ಪಶುವನಲ್ಲದೆ ಮುಟ್ಟಂ
ಕುಲಜಂ ಪಶುವಿನ ಗೋಣಂ
ನುಲಿದುಂ ತಿಂದಮರಪಥಕೆ ತಾಂ ಗಡ ಸಲ್ವಂ || ೧೦೨ ||

ಸೆರಗಿಲ್ಲದೆ ಪಶುವಂ ಕೊಂ
ದರಿದಾವಗಮಟ್ಟು ಸುಟ್ಟು ತಿಂದುಂ ಪಾರ್ವರ್
ಸುರಪುರಮಂ ಪುಗುವರ್ ಗಡ
ನರಕಂಬುಗುವಾತನೇತಱಿಂದಂ ಪುಗುವಂ || ೧೦೩ ||

ಪಶುಕರ್ಮಂಗೆಯ್ವುದೆ ವೇ
ದಸಾರಸರ್ವಸ್ವವಲ್ಲಿ ಪೊನ್ನುಳ್ಳಂಗಂ
ಪಶುಕರ್ಮಗೆಯ್ವುದೆ ಧ
ರ್ಮಸಾಧನಂ ವಿಪ್ರತತಿಗೆ ಪೆಱತಿಲ್ಲೊಂದುಂ || ೧೦೪ ||

ಜಗದೊಳಾರುಂ ನೆಗೞದ
ನೆಗೞ್ತೆಯಂ ನೆಗೞ್ದು ಸಗ್ಗಮಂ ಕೊಂಡಪೆವೆಂ
ಬಗಣಿತಸಾಹಸಧನರಿಂ
ಮಿಗಿಲೊಳರೇ ಪಾರ್ವರಿಂದಮತಿಸಾಹಸಿಗರ್ || ೧೦೫ ||

ಆರಾನುಂ ಕಂಡಪರೆಂ
ದೂರಿಂ ಪೊಱಗೊಯ್ದುವೊಳಱದಂತಿರೆ ಪಶುವಂ
ಘೋರಂಬಡಿಸಿಯೆ ಕೊಂದದ
ನಾರೋಗಿಪ ವಿಪ್ರಸಮಿತಿ ಗೆಯ್ಯದುದುಂಟೇ || ೧೦೬ ||

ಬಸನಿಗಳೊಳ್ ಮಿಕ್ಕವನುಂ
ಪಶುಕರ್ಮಂಗೆಯ್ವನೆನ್ನನುಂ ಅರಿದಪನೇ
ಪಶುಕರ್ಮಂ ಗೆಯ್ವರೆ ಮಿ
ಕ್ಕ ಸಾಧುಗಳ್ ತಮಗೆ ಸಾರ್ವೊಡಂ ಸಾಮ್ರಾಜ್ಯಂ || ೧೦೭ ||

ಜೀವವಧೆಯಿಂದೆ ತತ್ಫಲ
ಸೇವನೆಯಿಂ ಸ್ವರ್ಗಮಕ್ಕುಮೆಂಬೋದುಗಳಂ
ಭಾವಿಸಿ ನೆಗೞ್ವಾತಂ ನಾ
ನಾವಿಧ ದುಃಖಕ್ಕೆ ತಾನೆ ಭಾಜನನಕ್ಕುಂ || ೧೦೮ ||

ಗರಳವನೆ ತಿಂದುಮಜರಾ
ಮರತ್ವಮಂ ಪಡೆದೆವೆಂಬರಂದದಿನತಿದು
ಶ್ಚರಿತರ್ ಪಾಪದೆ ಸಗ್ಗಂ
ದೊರೆಕೊಳ್ಗುಂ ನಿರುತಮೆಂದು ಕೊಂದುದ ತಿಂಬರ್ || ೧೦೯ ||

ಕೊಲೆಯಿಂದಡಗಿಂ ನಾಱುವ
ಪೊಲಸಿಂ ಕರ[ಮಾ] ಪ[ಲಾಶ]ರಿಂ ಮದ್ಯಪರಿಂ
ಖಳರಿಂ ಜನ್ನದ ಮನೆಗಂ
ಪೊಲೆವನೆಗಂ ಭೇದಮಿಲ್ಲ ನೋಡುವೊಡೆಂತುಂ || ೧೧೦ ||

ಸುರಪುರಮಂ ಪರಿದೇಱಲ್
ಭರವಸದಿಂ ಮಾೞ್ಪಿ [ಯಾ]ಜನಂ ಕಂಡರ್ ಕೊ
ಕ್ಕರಿಪಂತು ಮಾೞ್ಪ ಧರ್ಮದ
ಪುರುಳೀ ಧರೆಯಲ್ಲಿ ಕುಲಕ್ಕೆ ಬೆಸೆದಿರ್ಪವರಾ || ೧೧೧ ||

ಆಡಂ ಕೊಂದುಂ ಕುಱಿದಱಿ
ಮಾಡಿದರಂ ಮುಟ್ಟೆ ಪುಣ್ಯಮೞಿಯದೆ ಪೋಗಿ
ರ್ದಾಡಂ ಕಟ್ಟಿದ ಮರನಂ
ನೋಡಿರೆ ಮುಟ್ಟಿದೊಡೆ ಮೀವರೆಂಬರ್ ಪಾರ್ವರ್ || ೧೧೨ ||

ಆವ ತೆಱದಿಂದೆ ಸತ್ತರ
ಜೀವಂಗಳ್ ಮಗುೞೆ ಬಂದು ಲೋಗರ ಬಾಯೊಳ್
ತಾವುಂಡಪ್ಪುವೆಂದಿಕ್ಕುವ
ಗಾವಿಲರೆಸಕಕ್ಕೆ ನಗದೆ ಮಾಣ್ಬರೆ ಚದುರರ್ || ೧೧೩ ||

ಒಡಲಿಂದಿತ್ತಲ್ ಜೀವಂ
ಬಿಡಲೊಡನಾ ಕ್ಷಣದೆ ಪೋಗಿ ಪೆಱತೊಂದೊಡಲೊಳ್
ತೊಡರ್ದಿರ್ದಪ್ಪುದಱಿಂದಂ
ಪಡೆಯದು ಪೋ ಜೀವಮೆಂದು ನಂಬರ್ ಮೂಢರ್ || ೧೧೪ ||

ನೆರಪಿದ ಪುಣ್ಯದ ಪಾಪದ
ಪರಿಣತಿಯಿಂ ಸ್ವರ್ಗ ಮರ್ತ್ಯ ನರಕಂಗಳೊಳಂ
ಪರಿದಾಗಳೆ ಪುಟ್ಟುವರಿ
ರ್ಪರೆ ತಾರಾಂತರದೊಳನಿಬರುಂ ಸತ್ತವರ್ಗಳ್ || ೧೧೫ ||

ಕರೆಯಲೊಡಂ ಬರ್ಪುವು ಸ
ತ್ತರ ಜೀವಂ ಪಿತೃನಿವಾಸದಿಂ ಶ್ರಾದ್ಧಂ ಮಾ
ೞ್ಪರ ಮನೆಗೆ ಬೇಗಮೆಂದೂ
ಳ್ವರಂತುಟಾದಂದು ನಾಲ್ಕು ಗತಿಯುಂ ಶೂನ್ಯಂ || ೧೧೬ ||

ಸತ್ತರ್ ಸುಟ್ಟಾಗಳೆ ಪೋ
ದತ್ತಲ್ ಪೋಗಿರ್ದು ಸೇಲೆಯಂ ಕಂಚುಮನೊ
ಲ್ದಿತ್ತೊಡೆ ನಭಕ್ಕೆ ಪೋಪರ್
ಪತ್ತುದಿನಂ ಕಾಗೆಯಾಗಿ ಪಿಂಡಮನುಣ್ಬರ್ || ೧೧೭ ||

ಪಿಂಡಮನಿಡೆ ಕಾಗೆಯದಂ
ಕೊಂಡೊಡೆ ತಮ್ಮಿತ್ತ ಪಿಂಡಮಂ ಸತ್ತಾತಂ
ಕೊಂಡಂ ಕೂರ್ಪವರಿಟ್ಟುದ
ನುಂಡನೆನುತ್ತಾಗಳೞ್ತು ಮೀವರ್ ಮೂಢರ್ || ೧೧೮ ||

ಪನ್ನೊಂದು ದಿನದೊಳೊರ್ವಂ
ಗನ್ನಮನಿತ್ತೊಡದನುಂಡು ಪಿತೃಗಳೊಳಾತಂ
ಪನ್ನೆರಡು ದಿವಸದಂದು ಗ
ಡಂ ನಿಯಮೆದೆ ಪೋಗಿ ಪಿತೃನಿವಾಸದೊಳರ್ಪಂ || ೧೧೯ ||

ಅಲ್ಲಲ್ಲಿ ಕೂಡೆ ಸತ್ತವ
ರೆಲ್ಲಂ ಪಿತೃಲೋಕದಲ್ಲಿ ನೆಲಸಿರ್ಪೊಡೆ ಮ
ತ್ತೆಲ್ಲಿಯ ಸಗ್ಗಂ ನರಕಮ
ದೆಲ್ಲಿತ್ತೇಂ ಪುಣ್ಯಪಾಪಮುಂ ವೃಥೆಯಲ್ತೇ || ೧೨೦ ||

ಮಾಡಿಸಿದೊಡೊಡಂಬಟ್ಟೊಡೆ
ಮಾಡಿದೊಡಾತಂಗೆ ಸಾಕ್ಷಿಯೊಳ್ ಪುಣ್ಯಫಲಂ
ಕೂಡುಗುಮಲ್ಲದೆ ಸತ್ತೊಡೆ
ಕೂಡದು ಮತ್ತೊಂದು ತಾಣದೊಳ್ ಪುಟ್ಟಿದ[ನಿಂ] || ೧೨೧ ||

ಜನನೀಜನಕಸಹೋದರ
ತನುಜಾತರ ಮೇಲೆ ಕೆಡೆದೞಲ್‌ಪಡೆ[ಯದೆ] ಕಿ
ರ್ಚನೆ ಕೊಟ್ಟು ಸುಟ್ಟುಮವರೆ
ಲ್ವನಾಯಲುಂ ಪಡೆಯೆವೆಂದು ದುಃಖಿಪರರೆಬರ್ || ೧೨೨ ||

ಸಾಲ್ವಿನೆಗಂ ಮುಳಿದಾತಂ
ಕೊಲ್ವೆಂ ಬಱಿಗೆಯ್ವೆನೆಂದು ಬಯ್ಗುಂ ಕಾಯ್ಪಿಂ
ದೆಲ್ವುಗಳನಾಯ್ವೆನೆಂಗುಂ
ಸಲ್ವುದೆ ಗುಣಿಗಿಷ್ಟರೆಲುಗಳಂ ತಾನಾಯಲ್ || ೧೨೩ ||

ಉಗುರಂ ತಲೆ ನವಿರ್ಗಳನೆ
ಲ್ವುಗಳಂ ಗಂಗೆಯೊಳಗಿಕ್ಕಿದೊಡೆ ಸುರಪುರದಿಂ
ದಗಲದೆಯಿರ್ಪರುವೆಂಬೋ
ದುಗಳಂ ಕೇಳ್ದಲ್ಲಿಗೆಲ್ವನೊಯ್ವರ್ ಮೂಢರ್ || ೧೨೪ ||

ಜೀವಂ ಪೋದೊಡೆ ಪೆಱಗೆ ಕ
ಳೇವರದಂಗಮನೆ ಗಂಗೆಯೊಳಗಿಕ್ಕಿದೊಡ
ತ್ತಾವನೊ ಸಗ್ಗಮನೆಯ್ದುವ
ನೋವುಬ್ಬಟೆಯಿಂತುಟೆಂಬುದಾಗಲೆ ವೇೞ್ಕುಂ || ೧೨೫ ||

ಮಿಂದೊಲ್ಲಣಿಗೆಯ ಪಿೞಿನೀ
ರಿಂದಂ ಕಾಲ್ಗರ್ಚಿ ನೆಲದೊಳಿರ್ದಾ ಕೊೞೆನೀ
ರಿಂದಂ ಪಾರ್ವರ ಮಡಗೂ
ೞಿಂದಂ ಪಿತೃತುಷ್ಟಿಯಕ್ಕುಮೆಂಬರ್ ಪಾರ್ವರ್ || ೧೨೬ ||

ಪಿಡಿತಂದು ಪೋರಿಯಂ ಮಿಡ
ಮಿಡಮಿಡುಕಲ್ ಚುರ್ಚಲೊಡನೆ ಸತ್ತವರಂತಾ
ಗಡೆ ಸುಗತಿವಡೆವರೆಂಬರ
ನುಡಿಯಂ ಕೇಳ್ದಾಗಳಂತೆ ಬಸವಂ ಬಿಡುವರ್ || ೧೨೭ ||

ಬಸವಂ ಕೆಯ್ಯಂ ಪೊಕ್ಕೊಡೆ
ಬಸವನ ಕಾಲುಡಿಯೆ ಬಡಿದು ಕುಡಿಯಂ ಬಯ್ವಂ
ಬಸವಂ ಬಿಟ್ಟನನದಱಿಂ
ಬಸವಂ ಬಿಡೆ ಬಯ್ಗುಳಲ್ಲದಾಗದು ಪುಣ್ಯಂ || ೧೨೮ ||

ಬಸವಂಗಳ್ ಕೊರ್ವಿ ಕರಂ
[ಬ]ಸಮಲ್ಲದೆ ಪೊರ್ದಿ ಸಾಗು ಮೇಣಿಱಿಗುಂ ಮಾ
ನಸರನದಱಿಂದಮೆಂತುಂ
ಬಸವಂ ಬಿಟ್ಟಂಗೆ ಪಾಪಮದೆ ಮೊದಲೊಡ್ಡಂ || ೧೨೯ ||

|| ಕ್ರಮದಿಂದೊಪ್ಪಿಡಿ ತುಯ್ಯಲಾಮಿಷಚಯಂ ಖಳ್ಗಾಮಿಷಂ ಕಾಳಶಾ
ಕಮಿವೆಂದುಂ ಸಲೆಯಾ ಸವತ್ಸರ ದಶಾಬ್ದಾನೇಕ ಸಂವತ್ಸರ
ಪ್ರಮಿತಂ ತೃಪ್ತಿಕರಂ ಗಡಂ ಪಿತೃಸಮೂಹಕ್ಕಿಕ್ಕಿದಂದೆಂಬರೆಂ
ತು ಮರುಳ್ಗೊಂಡರೊ ಪಾರ್ವರಾ ಪಿತೃಗಳಂ ಮತ್ತೇಕೆ ತಾ[ಮೂ]ಡುವರ್ || ೧೩೦ ||

ಶ್ಲೋಕ || ಜನ್ಮನಾ ಜಾಯತೇ ಶೂದ್ರಃ ಕ್ರಿಯಯಾ ದ್ವಿಜ ಉಚ್ಯತೇ|
ಶ್ರುತೇನ ಶ್ರೋತ್ರಿಯೋ ಜ್ಞೇಯೋ ಬ್ರಹ್ಮಚರ್ಯೇಣ ಬ್ರಾಹ್ಮಣಃ ||

ನೃಪನಾದಿಯಾಗೆ ಕಡೆಯೊಳ್
ಶ್ವಪಚಂಬರಮಾವ ಜಾತಿಯಂ ಮಾಡಲ್ವೇ
ಡ ಪುನರ್ಭವರನಿಬರುಮಂ
ತೆ ಪಾರ್ವನಲ್ಲಂ ಸ್ವಯಂಭುವಾದೊಡೆ ಪಾರ್ವಂ || ೧೩೧ ||

ಕುಲಮೊಂದೆ ಸಾಲ್ಗುಮೆಂಬರ್
ಕುಲಮೇಂ ಸಗ್ಗಕ್ಕೆ ಕೊಂಡುಪೋಕುಮೆ ತಮ್ಮಂ
ಸಲೆ ಸನ್ಮಾರ್ಗದೆ ನಡೆಯದೆ
ಕುಲಜಂ ಸ್ವರ್ಗಕ್ಕೆ ಪೋದುದುಳ್ಳೊಡೆ ಪೇೞಿಂ || ೧೩೨ ||

ನೂತನಮಣಿ ಗುಣಮಿಲ್ಲದೆ
ಜಾತಿತ್ವದೆ ಪೂಜ್ಯಮಲ್ಲದಂತಿರೆ ಪಾರ್ವಂ
ಜಾತಿತ್ವದಿಂದೆ ಪೂಜ್ಯಂ
ಜಾತಿ ಗುಣಾನ್ವಿತ[ಮಾ]ದೊಡಧಿಕಂ ಪೂಜ್ಯಂ || ೧೩೩ ||

ಪೊಲೆಯರ್ ನೆಗೞ್ದೊಂದಂದೆ
ಸಲೆ ನೆಗೞ್ದುಂ ಪೊಲೆಯನಲ್ಲದಲ್ಲಂ ಕುಲಜಂ
ಕುಲಜರವೊಲ್ ಸನ್ಮಾರ್ಗದೆ
ಸಲೆ ನಡೆವೊಡೆ ಕುಲಜನಲ್ಲದಲ್ಲಂ ಪೊಲೆಯಂ || ೧೩೪ ||

ಪೊಲೆಯಂ ನರಕಕ್ಕಿಱಿಗುಮೆ
ಕುಲಜಂ ಸ್ವರ್ಗಕ್ಕೆ ನೆಗೆಗುಮೇ ನೆಗೆಯಂ ನಿ
ರ್ಮಳಚರಿತನಾವನಾತನೆ
ಕುಲಜಂ ಸ್ವರ್ಗಮುಮವಂಗೆಯಿದಿರ್ಬಂದಿರ್ಕುಂ || ೧೩೫ ||

ಕುಲಜಂ ನರಕಂಬುಗುವೊಡೆ
ಕುಲಜನೆ ಬೇಡೆಂದು ಮಾಣಿಕುಮೆ ದುಷ್ಕೃತನಂ
ಪೊಲೆಯಂ ಸ್ವರ್ಗಂಬುಗುವೊಡೆ
ಪೊಲೆಯನೆ ಪುಗಲೆಂದು ನೂಂಕುವರೆ ಸುಚರಿತನಂ || ೧೩೬ ||

ಕುಲಜಂಗಮಕುಲಜಂಗಂ
ಪೊಲೆಯಂಗಂ ಸಚ್ಚರಿತ್ರದಿಂದಲ್ಲದೆ ನಿ
ಶ್ಚಲಸೌಖ್ಯಮಾಗದದಱಿಂ
ಕುಲಮೊಪ್ಪಿಡಿ ತವುಡುಮಿರದು ಚರಿತಮಮೂಲ್ಯಂ || ೧೩೭ ||

ಏನೋವಶದಿಂದಾತ್ಮಂ
ತಾನೆಂತಪ್ಪಲ್ಲಿ ಪುಟ್ಟಿದೊಡಮಮಳನೆ [ಸು]
ಜ್ಞಾನಿಯೆ ಪೊನ್ನೆ[೦]ತಿರ್ದುಂ
ತಾನುತ್ತಮಮೆಂತು ಜೀವನಂತಿರೆ ಶುದ್ಧಂ || ೧೩೮ ||

ಚಂ || ಪರಿಕಿಸೆ ಜಾತಿಯೆಂದನಿತಱಿಂ ಗುಣಮಿಲ್ಲದೆ ರತ್ನಮಾದೊಡಂ
ಪಿರಿದುಮಪೂಜ್ಯಮೆಂದೊಡಱಿವಿಲ್ಲದನುತ್ತಮಜಾತಿಯಾದೊಡಂ
ನರಪಶು ತಾನೆನಿಪ್ಪ ಗುಣವಿಲ್ಲದ ಪಾರ್ವನುಮೇಕದಂಡಿಯುಂ
ಗೊರವನುಮೆಂತು ಪೂಜ್ಯರೊ ಸುಬೋಧಚರಿತ್ತವಿಹೀನರಪ್ಪವರ್ || ೧೩೯ ||

ಆಯುಷ್ಯಂ ನಿಡಿದಕ್ಕೆನ
ಲಾಯುಷ್ಯಂ ಪೆರ್ಚದಮಲಮುನಿಗಳ್ ಪುಣ್ಯ
ಶ್ರೀಯಕ್ಕೆನೆ ಮುಪ್ಪಿಲ್ಲದ
ಸಾಯದ ಸತ್ಪದವಿಯಕ್ಕುಮಿದನಱಿಗಱಿವಂ || ೧೪೦ ||

ಅಜ್ಞರ ಕುಮತದೊ[ಳೇಂ] ಸ
ರ್ವಜ್ಞರ ಸನ್ಮತಮೆ ತಥ್ಯಮೆನುತುಂ ಕೇಳ್ವಂ
ಪ್ರಜ್ಞಂ ತತ್ತ್ವಜ್ಞಂ ಧ
ರ್ಮಜ್ಞಂ ಕೇಳ್ವವರೊಳವರೆ ತಾಂ ಸರ್ವಜ್ಞ[ರ್] || ೧೪೧ ||

ಕೊಲೆಯಡಗ ತಿಂಬುದಂ ಪರ
ಲಲನೆಯರೊಳ್ ನೆರೆವುಪಾಯಮನೆ ಪೇೞ್ವುದಱಿಂ
ಕೆಲಬರೆ ವೇದಮನೊಲ್ವರ್
ಪಲರುಂ ಪುಣ್ಯಾತ್ಮರದಱ ದೆಸೆಯಂ ಪೊರ್ದರ್ || ೧೪೨ ||

ಅನಿತುಂ ವೇದಂಗಳನಾ
ಮನುಧರ್ಮಮನಾ ಪುರಾಣಮುಮನಾಜ್ಞಾಸಿ
ದ್ಧನುಮಂ ಹೇತುಗಳಿಂ ನೆ
ಟ್ಟನೆ ಮುಱಿಯಲ್ ಸಲ್ಲ ದೋಷಮೆಂಬರ್ ತಕ್ಕರ್ || ೧೪೩ ||

ಎನಿತೆನಿತು ನೋೞ್ಪೊಡಂ ಮ
ತ್ತನಿತನಿತೆ ವಿಚಾರಸಹಮೆನಿಪ್ಪುದಱಿಂದಂ
ಜಿನಮತಮಂ ಸೋದಿಸಲಾ
ಗೆನಲೊಲ್ಲರ್ ತಿಳಿವುದೆಂತುಮೆಂಬರ್ ಜೈನರ್ || ೧೪೪ ||

ಜಿನಮತಮನೋಜೆಯಿಂ ಕೇ
ಳ್ದನಪ್ಪೊಡವನಿಪತಿ ಪಾರ್ವರಂ ಗೊರವರುಮಂ
ಮನೆವುಗಲುಮೀಯನೆಂಬುದ
ನೆ ನಿಶ್ಚಯಂಗೆಯ್ದು ಕೇಳಲಾಗದನೆಂಬರ್ || ೧೪೫ ||

ಶಿವ ವಿಷ್ಣು ಸೂರ್ಯ ಶಶಿಲೋ
ಕವೆಂಬಿವೊಳವಲ್ಲದಿಲ್ಲ ಜಿನಲೋಕಮದೆಂ
ಬವರ ನುಡಿ ತಕ್ಕುದನಿತ
ಕೈವೊಡೆಯನಪ್ಪಂಗೆ ಬೇಱದೇಕೆಯೊ ಲೋಕಂ || ೧೪೬ ||

ಮಾದೇವನ ಬಮ್ಮನ ಲ
ಕ್ಷ್ಮೀದಯಿತನ ಧರ್ಮಮೊಳವು ಜೈನರ ಧರ್ಮಂ
ವೇದಕ್ಕೆ ಬಾಹ್ಯಮೆಂಬರ
ಬಾದುಚಿತಂ ದುಷ್ಕೃತಕ್ಕೊಡಂಬಡದುದಱಿಂ || ೧೪೭ ||

ಸರ್ವಜ್ಞರೆಂದು ಕೆಲಬರ್
ಸರ್ವಂ ವಸ್ತುಗಳುಮಾಮೆ ಪೆಱತಿಲ್ಲೆನುತುಂ
ನಿರ್ವಂದದೆ ನುಡಿವವರೊಳ್
ಸರ್ವಜ್ಞತೆಯೆಂತು ಪೇೞ್ ಸಮನಿಪುದೋ || ೧೪೮ ||

ಸರ್ವಗತನಾತ್ಮನೆಂಬೊಡ
ಮುರ್ವಿಯೊಳತ್ತಿತ್ತ ವೋಪ ಬಂದಪರೆಂಬೀ
ಪರ್ವಿರ್ದ ಮಾತು ಶೂನ್ಯಂ
ಸರ್ವಗತತ್ವಕ್ಕೆ ಹಾನಿ ಬಗೆವೊಡದೆಂತುಂ || ೧೪೯ ||

ಏಕಾತ್ಮನೆಂದು ನುಡಿವರ
ದೇಕೆಯೊ ಜಡರವನಿಯೊಳಗೆ ಸುಖದುಃಖಮನೇ
ನೇಕತ್ವದಿನುಂಡಪನೆಯ
ನೇಕಂ ರೂಪಿಂದೆ ಪಲರುಮುಣುತಿರ್ದಪ್ಪರ್ || ೧೫೦ ||

ಬಲ್ಲಾಳ್ಗೆ ಬಟ್ಟೆ ಸಯ್ತೆಂ
ದೆಲ್ಲಿಲ್ಲದ ಸಿತಮತಂಗ[ಳುಂ] ಪುಸಿವುದಿದಂ
ಸಲ್ಲ[ವೊ]ಳವೆಂದು ಬಾರಿಸ
ಬಲ್ಲರೆ ಪೇೞ್ ಜೈನದವರ್ಗಳಲ್ಲದದೆಂತುಂ || ೧೫೧ ||

ಜಟಮಟಿಗರ ಪೇೞ್ದೋದನೆ
ದಿಟಮೆಂದದನೊಲ್ದು ಕೇಳ್ವರಲ್ಲದೆ ಪಿರಿದುಂ
ಘಟಿಯಿಸದಿವೆನ್ನರೇನ
ಕ್ಕಟ ಪಂಡಿತರೆನಿಸಿದವರುಮಜ್ಞಾನತೆಯಿಂ || ೧೫೨ ||

ಇರೆ ಸದಸದಾದಿವಸ್ತು
ಸ್ವರೂಪಕಥನಪ್ರವೀಣಜಿನಭಾಷಿತಮುಂ
ಇರೆ ಪೇೞ್ದ ಕುಮತಮಂ ಕೇ
ಳ್ವರೆಗ್ಗರಮೃತಮಿರೆ ನಂಜನೆಂಜಲಿಸುವುದೇ || ೧೫೩ ||

ಚಂ || ಭ್ರಮಿತಮನಹ್ಲಾದಂಗೆ ಫಣಿದಷ್ಟನ ನಾಲಗೆಗೆಂತು ತಿಕ್ತವ
ರ್ಗಮೆ ಮಧುರಂಗಳಾಗಿ ಮಧುರಂಗಳೆ ತಿಕ್ತರಸಂಗಳಾಗಿ ಸಂ
ಕ್ರಮಿಸುಗುಮಂತೆ ಕಿಲ್ಬಿಷವಿಷಂ ಪುದಿದಿರ್ಪ ಕುದೃಷ್ಟಿಗಾತ್ಮತ
ತ್ತ್ವಮೆ ಮೃಷತತ್ತ್ವಮಾಗಿ ಮೃಷತತ್ತ್ವಮೆ ತತ್ತ್ವಮೆಯಾಗಿ ತೋಱುಗುಂ || ೧೫೪ ||

|| ಬಗೆವಂದನ್ಯರ ಕೂಡೆ ಮಾಡಿದ ಕುತರ್ಕಂಗಳ್ ಕರಂ ಭ್ರಾಂತಿಹೇ
ತುಗಳತ್ಯಂತಮಳೀಮಸಂಗಳವನೋದಲ್ವೇಡ ಸೌಖ್ಯಾಭಿಲಾ
ಷಿಗಳೋರಂತಿರೆ ಕೇಳಿ ಭಾವಿಸುಗೆ ಲೋಕಾನಂದಮಂ ಜೈನಸೂ
ಕ್ತಿಗಳಂ ಮೋಕ್ಷಫಲಪ್ರದಾಯಿಗಳನಾತ್ಮ ಜ್ಞಾನಸಾರಂಗಳಂ || ೧೫೫ ||

ತೆಗೆದು ಕೆಯ್ಯಿಕ್ಕಿ ದೊಣೆಯಂ
ಬಿಗಿದೊಡಮೇಂ ಪಂದೆಯಿಸದ ತೆಱದವೊಲೆನಿತಂ
ಪುಗಿಸಿದೊಡಂ ಜೈನಮತಂ
ಪುಗಲೇನಱಿದಪುದೊ ಪಾಪಕರ್ಮನ ಮತಮಂ || ೧೫೬ ||

ಪದುಳಿದನಲ್ಲದನಂ ಕಲಿ
ಸಿದೊಡಂ ತಿಳಿಪಿದೊಡಮೇಂ ನಿಲಲ್ಕಱಿಗುಮೆ ಚಿ
ತ್ತದೊಳಾಪ್ತನ ವಚನಮದು ಪು
ಸಿದೊಡಂ ಪುಂಡಾಗಲೆಂತುಮಱಿಯದ ತೆಱದಿಂ || ೧೫೭ ||

ಬಾದಿನೊಳೆ ಶೈವ ಸೌಗತ
ವೈದಿಕ ವೈಷ್ಣವರೆನಿಪ್ಪವರ್ ನಿಜಚರಿತ
ಕ್ಕಾದಮನುಸಾರಿಯಾಗರ
[ರೋ]ದುಮನಾಪ್ತನುಮನಂತೆ ಮಾೞ್ಪರೆ ಜೈನರ್ || ೧೫೮ ||

|| ಸ್ರ || ಜಗಮಂ ಹಿಂಸಾನೃತಾದಿ ಬ್ರತವಿಷಮವಿಷೋಗ್ರಾಗ್ನಿ ಪರ್ವಿತ್ತು ಮತ್ತಾ
ವಗಮಾ ಕಿರ್ಚಿಂಗೆ ಪೆರ್ಚಂ ಪಡೆಗುಮವಿದಿತಾತ್ಮ ಜ್ಞವಾಕ್ಯೇಂಧನಂ ಸಂ
ದೆಗಮೇನಜ್ಞಾನಮಾರ್ಗಾಚರಣನಿರತ[ಏಂ] ಬೇಯರೇ ಪೊರ್ದದಿರ್ಪ
ನ್ನೆಗಮೀ ಜೈನೇಂದ್ರವಾಕ್ಯಾಮೃತಜಳಧಿತರಂಗೋಚ್ಚಳಚ್ಛೀಕರೌಘಂ || ೧೫೯ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಚರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ

ಸಮಯಪರೀಕ್ಷೆಯೊಳ್ ವೈದಿಕವಿಡಂಬನಂ ಏಕಾದಶಾಧಿಕಾರಂ