ಶ್ರೀಗೆ ವಚಃಶ್ರೀಗೆ ಜಯ
ಶ್ರೀಗೆ ಯಶಃಶ್ರೀಗೆ ತಾನೆ ನೆಲೆಯಾಗಿ ಜಗ
ಕ್ಕಾಗಳುಮಭಿಮತಸುಖಮಂ
ಬೇಗಂ ಕುಡುಗಭವನೆಮಗೆ ತಾಂ ಸನ್ಮತಿಯಂ || ೧ ||

ಗುರುಗಳಣಮಿಲ್ಲ ನಿಯಮಿಸು
ವರಿಲ್ಲ ಬೞಿಕೋದಿನಿಷ್ಟಮಿಲ್ಲೊರ್ವರನೊ
ರ್ವರೆ ಕಂಡುಮವರ್ ನೆಗೞ್ದುದೆ
ಯಿರೆ ತಾನುಂ ಲೋಕಮೂಢಮೆಂದಱಿಗಱಿವಂ || ೨ ||

ನಿಟ್ಟೆಯೊಳೆ ಕಿವುಡಬೆನಕನ
ನಿಟ್ಟೆಲೆ ಕೇಳೆಮ್ಮ ಕಾರ್ಯಮಂ ತೀರ್ಚೆಂಬರ್
ಬಟ್ಟೆಯ ಕಣ್ಣೊಳ್ ಕಲ್ಗಳ
ನಿಟ್ಟವರೆಲೆ ಬೀರತಣಿಯನಿತ್ತುಂ ಮೂಢರ್ || ೩ ||

ಕನ್ನಡಿಯಂ ತಂದಿತ್ತೊಡೆ
ಮುನ್ನಾಕಾಶಕ್ಕೆ ನೆಲಕೆ ಬೆಸಮುಟ್ಟಿಂಗಂ
ತನ್ನಯ ಕಟ್ಟಿದ ಸುರಿಗೆಗೆ
ಮನ್ನಣೆಯಿಂ ಕಟ್ಟಿದ ಸುರಿಗೆಗೆ
ಮನ್ನಣೆಯಿಂ ತೋಱಿ ಬಳಿಕೆ ನೋೞ್ಪರ್ ಮೂಢರ್ || ೪ ||

ತವಗುಣಬಡ್ಡಿಸೆ ಮೀಸಲ
ನವಿವೇಕಿಗಳಿಕ್ಕಿ ಕಿರ್ಚಿನೊಳ್ ಕಿಱಿದಂ ಮಿ
ಕ್ಕವುೞಂ ಪೊಱಗಣ್ಗೀಡಾ
ಡುವರುಣ್ಬರ್ ನೆಲದೊಳಿಕ್ಕಿ ಕಿಱಿದಂ ಬೞಿಯಂ || ೫ ||

ಬದರಿಯ ಬನ್ನಿಯ ರಥಚ
ಕ್ರದೆಲೆಗಳಂ ತೀವೆ ತಲೆಯೊಳಿಟ್ಟಾತಂಗ
ಭ್ಯುದಯಮುಮೊಳ್ಳುಣಿಸುಂ ಮೆ
ಚ್ಚಿದ ಸುಖಮುಂ ಕೂಡಿಬರ್ಕುಮೆಂಬರ್ ಮೂಢರ್ || ೬ ||

ಮೊಸರೊಕ್ಕೊಡೆ ಹಾಲೊಕ್ಕೊಡೆ
ನೊಸಲೊಳ್ ಬೊಟ್ಟಿಟ್ಟುಕೊಳ್ವ ಬೀದಿಗಳೊಳ್ ಧಾ
ನ್ಯಸಮಾಜಮೊಕ್ಕೊಡವನೆ
ತ್ತಿ ಸೇಸೆವೊಲ್ ತಲೆಯೊಳಿಟ್ಟುಕೊಳ್ವರ್ ಮೂಢರ್ || ೭ ||

ನಡುಬೀದಿಯೊಳಂ ಗೋಹಳಿ
ಯೆಡೆಗಳೊಳಂ ಭಾಗ್ಯವಂತರುಂ ಭಯವಶದಿಂ
ದಡಕೆಯ ಭಾಗಂ ಬಾಯಿಂ
ಕೆಡೆದೊಡದಂ ಕಳೆದುಕೊಂಡು ಮೆಲ್ವರ್ ಮೂಢರ್ || ೮ ||

ಸಿರಿಪರ್ವತಕ್ಕೆ ಗಂಗೆಗೆ
ಕುರುಭೂಮಿಗೆ ಸಾಮಿಗತ್ತ ಸೇತುಗೆ ರಾಮೇ
ಶ್ವರನಲ್ಲಿಗಿತ್ತ ಸೋಮೇ
ಶ್ವರಕ್ಕೆ ತಿರಿತರ್ಪರಂತೆ ಜಾತ್ರೆಗೆ ಮರುಳ್ಗಳ್ || ೯ ||

ಎರಡುಂ ಗ್ರಹಣಂಗಳೊಳು
ತ್ತರಾಯಣಂಗಳೊಳುಮೆಲ್ಲ ತಾಣದೊಳೆಂದುಂ
ಪರಿತಂದು ಗಂಗೆ ನಿಯಮದೆ
ಬೆರಸಿರ್ಕುಂ ಗಡ ವಿಚಿತ್ರವಿನ್ನವುಮೊಳವೇ || ೧೦ ||

ಮ || ಕಡಲೇೞುಂ ಮೊದಲಾಗಿ ತೊಱೆಯೆಲ್ಲಂ ನೆತ್ತಿ ಸಂಗಕ್ಕೆ ಸಂ
ಗಡದಿಂ ಬರ್ಪುವು ಭಾಸ್ಕರಗ್ರಹಣ[ದಂ]ದಿಂಗೆಂಬರಂತಾದೊಡಾ
ಮಡು ಮುನ್ನಂ ಪಿರಿದಾಗದೇಕೆ ಪೞೆಯಂತಾಗಿರ್ಪುದೇನೆಂಬರೀ
ನುಡಿಯಂ ವೇದಜಡಾತ್ಮರೀ ಜಗಜನಕ್ಕೀಯಂದದಿಂ ವ್ಯಾಜಿಪರ್ || ೧೧ ||

ಉ || ಧಾತ್ರಿಯೊಳುಳ್ಳ ದೈತ್ಯಬಲಮಂ ಚತುರಂಗಸಮನ್ವಿತಂ ಮಹಾ
ಕ್ಷತ್ರಿಯವರ್ಗಮಂ ತಱಿದ ತಾಣಮೆ ಪಾವನಮಂತದಂ ಕುರು
ಕ್ಷೇತ್ರಮನೊರ್ಮೆ ಮೆಟ್ಟಿದೊಡೆ ಪುಟ್ಟುವರಲ್ಲಮಮೋಘಮೆಂಬುದಂ
ಜಾತ್ರೆಮರುಳ್ಗಳೆಯ್ದೆ ಬಲವರ್ಪರನೇಕರುಮಿಂತು ಸಂತತಂ || ೧೨ ||

[ಧುರ]ದೊಳ್ ಕುರುಬಲಮೞಿದೊಡೆ
ಕುರುಭೂಮಿಯೆ ತೀರ್ಥಮಕ್ಕುಮಪ್ಪೊಡೆ ದೂರಂ
ಪರಿಯಲ್ ವೇಡ ಸಮೀ[ಪದೆ]
ದೊರೆಕೊಳ್ಗುಂ ನೃಪರ ಕಾದಿದೆಡೆಗಳ್ ಪಲವುಂ || ೧೩ ||

ದಿವಿಜಾಸುರ ಪಾಂಡವ ಕೌ
ರವ ಬಲಮೞಿದಿರ್ದ ಭೂಮಿಯೊಳ್ ಪಣಮಂ ಬಿ
ತ್ತುವುದುಂ ಬಂಡಿಯ ಪ
ಣವಕ್ಕುಂ ತತ್ಸುವರ್ಣಮೆಂಬರ್ ಮೂಢರ್ || ೧೪ ||

ಪರಿತಂದು ಸಯ್ತು ಪೆರ್ದೊಱೆ
ಸಿರಿಪರ್ವತದಲ್ಲಿ ತೊಲಗಿದೊಡೆ ಕಂಡು ಮಹೇ
ಶ್ವರನಾರ್ದನಕ್ಕಟಂದಿಂ
ಪಿರಿದು ತಾಂ ಪೀರ್ದು ಪರಿದುದೆಂಬರ್ ಮೂಢರ್ || ೧೫ ||

ಅರಸುಮಗನೊರ್ವ[ನ]ತ್ತೊಂ
ದರಸನ ಪೆರ್ಗಡೆಯ ಮೇಲೆ ಬೆಳ್ದೊನ್ನಪ್ಪಂ
ತಿರೆ ತಳಿಯೆ ನೀರನದನಿದಿ
ರರಸಂ ನೀರ್ದಳಿದು ಕಳೆದನೆಂಬರ್ ಮೂಢರ್ || ೧೬ ||

ಚಂ || ನರಪತಿಯೊರ್ವನರ್ಘ್ಯಮನಿನಂಗಭಿಮಂತ್ರಿಸಿ ಪೊನ್ನ ಬಟ್ಟಲೊಳ್
ನಿರವಿಸಿ ಕೊಟ್ಟೊಡೆಯ್ದಿ ರವಿಯಂ ಸುರಿದಾಗಳದಲ್ತೆ ಬರ್ಪುದುಂ
ಪರನೃಪನೊರ್ವನಾತ್ಮ ಸಚಿವರ್ಕಳಿಗರ್ಘ್ಯಮನಾಣೆ[ಯಿ]ಟ್ಟು ತಾಂ
ನಿಲಿಸಿದನೆಂಬರಿನ್ನವಘಟಂಗಳನಾವನೊ ಕೇಳ್ದುಂ ಸೈರಿಪಂ || ೧೭ ||

ಕರಿದಂ ಬಿಳಿದಂ ಬಿಳಿದಂ
ಕರಿದಾಗಿರೆ ಮಾೞ್ಪ ಪೋಪ ಬಟ್ಟಲ್ಗಳನಂ
ಬರದೊಳ್ ನಿಲಿಪ ಮಹೀಭುಜ
ರರಸುಗಳಲ್ಲವರ್ಗಳಿಂದ್ರಜಾಲಿಗರಕ್ಕುಂ || ೧೮ ||

ಅರಸುಮಗನೊರ್ವನಂ ಸುಡು
ತಿರಲಾಗಡೆ ಬಂದು ಪಾವು ಗಡ ಬೇವುದು ತ
ದ್ಧರಣೀಶ್ವರನೊಡನೆನುತಿ
ರ್ಪರ ನುಡಿ ದಿಟವೆಂದು ಮೂಢರವಂರಂತೂಳ್ವರ್ || ೧೯ ||

ಆಯುಷ್ಯಂ ಪಿಎರ್ಚುಗುಮಿಂ
ತೀಯೌಷಧದಿಂದಮೆಂದು ಪೇೞ್ದೊಡೆ ನಂಬಿ
ರ್ದಾಯುಷ್ಯಂ ಪೆರ್ಬುಗುಮೆಂ
ದಾಯೌಷಧಸೇವೆಗೆಯ್ವರಳಪರ್ ಮೂಢರ್ || ೨೦ ||

ಮೊದಲೊಳ್ ಧಾತ್ರಂ ಸಮಕ
ಟ್ಟಿದನಿನಿತಲ್ಲದೆ ವಿಶೇಷಮಾಯುಷ್ಯಮನಾ
ರೊದವಿಪರೆಂದುಗುೞಂ ಮಾ
ಣದೆ ಪೀರುತ್ತಿರ್ಪರಾಸೆಯಿಂದಂ ಮೂಢರ್ || ೨೧ ||

ಸೇವಿಸಿದೊಡೆ ಪಲಕಾಲಮ
ನೀ ವಿಧದಿಂದಂ ಗಮೇಧ್ಯಮುಂ ಮೂತ್ರಮುಮುಂ
ಸೇವಿಸೆ ಮೆಯ್ಯಂ ಪೂಸುವ
ಕೀವಿಲನಾಶ್ರಯಿಸಿ ಪೇೞ್ದು ಕೇಳ್ವರ್ ಮಾರ್ಖರ್ || ೨೨ ||

ದೆಸೆಗೆಟ್ಟ ಜರಾಮರಣದು
ದ್ದೆಸದಿಂ ನಿಜಗೂಥಮೂತ್ರಸೇವನೆ ಗೆಯ್ವಾ
ಕಿಸುಗುಳಿ ಪೇಲ್ ತಿಂದುಂ ಮಾ
ನಸವಾೞಂ ಬೞ್ವನವನ ನುಡಿ ಜನಹಿತಮೇ || ೨೩ ||

ಮೃಡನಂ ಜಾನಿಸುವೆಡೆಯೊಳ್
ಬಿಡೆ ಚಕ್ಕಣದಿಂದೆ ನಾಲ್ವೆರಲ್ ನೆಗೆದಿರ್ಪಂ
ಗಡ ಯೋಗಿಯೆಂದು ನುಡಿವರ
ನುಡಿಯಂ ನಂಬಲ್ಕೆ ಸಲ್ಲ ಚಾತುರ್ಯಪರಂ || ೨೪ ||

ಚಂ || ಇದು ಪುಸಿ ನನ್ನಿಯೆಂದಱಿಯದಾ ಋಣಮೋಚನತೀರ್ಥಮೆಂಬ ಕೊಂ
ಡದೊಳಿರದಿಕ್ಕಿದಾಗ ಕರಿದಾಗಡೆ ತಾಂ ಬಿಳಿದಪ್ಪುದನ್ನವ
ಪ್ಪುದಕಮನೊರ್ಮೆ ಮೀಯೆ ಗಡ ಕೊಂಡ ಋಣಂಗಳ ದೋಷಮಂತೆ ಪೋ
ಪುದು ಗಡ ಸಾಲ್ವ ಸಾಲಿಗರ್ಗೆ ನಿಗ್ಗವಮಲ್ಲದೆ ಪೋಪುದೇ ಋಣಂ || ೨೫ ||

ಕೊಂಡದೊಳಿರ್ದೊಡೆ ಸಾಲಂ
ಗೊಂಡ ಋಣಂ ಪೋಕುಮಪ್ಪೊಡೆಲ್ಲಂ ಸಾಲಂ
ಗೊಂಡು ಪರಿದಲ್ಲಿ ಮೀವುದು
ಕೊಂಡಾತನನಿತ್ತಲಡಸಿ ತಗೆಯದೊಡಕ್ಕುಂ || ೨೬ ||

ಅಱಿಕೆಯ ಪುರಾಣದಿಷ್ಟದಿ
ನುಱಿ ಮಿಂದವರೊರ್ಮೆ ಪೋಗಿ ಋಣಮೋಚನಮಂ
ಮೊಱೆಯೋ ಕೊಟ್ಟಂ ತಗೆದಂ
ದಱಿವಿರ್ ನೀಮೆಂದು ಪಿಡಿಗೆ ತೊವಲಂ ಚದುರಂ || ೨೭ ||

[ಶ]ರ್ವನೆ ತನ್ನಂ ತೋರ್ಪಂ
ಪರ್ವದೊಳಾ ತುಂಗೆ ಭದ್ರೆಯೊಳ್ ಗೌತಮಿಯೊಳ್
ಪರ್ವತದೊಳ್ ಗಂಗೆಯೊಳೆಂ
ದುರ್ವುವರಱಿವಿಲ್ಲದವರ್ಗಳೇನಂ ನುಡಿಯರ್ || ೨೮ ||

ಕಂಡಿರೆ ನರನುರಿಯೆಣ್ಣೆಯ
ಕೊಂಡಮನವಯವದೆ ಪೊಕ್ಕು ಮಿಕ್ಕಿದ ಮರ್ದಂ
ಕೊಂಡಾ ಸಿದ್ಧಂ ಬೆಳ್ಳಿಯ
ಗುಂಡಾಗಿರ್ದಪ್ಪನೆಂದು ನುಡಿವರ್ ಮೂಢರ್ || ೨೯ ||

ಮನುಜನೊಡಲಣ್ಣ ಕಲ್ಲುಂ
ಕನಕಮುಮೇನಾಗಲಱಿಗುಮೆ ಮರ್ದಿಂದಂ
ಕನಕಮುಮಕ್ಕೆಮ ಜೀವಮ
ದಿನಿಸುಂ ಗುಂಡಿನೊಳಮಿಲ್ಲ ನೃಪನೆಂತಕ್ಕುಂ || ೩೦ ||

ಅಸುರನ ಮೆಯ್ಯೆಲುಗಳ್ ತಾಂ
ಕಿಸುಗುಳಮುಂ ರತ್ನಮುಮಾದುವೆಂದತಿಮೂಢರ್
ಪುಸಿನುಡಿದರ್ ಬಹುರತ್ನಾ
ವಸುಂಧರಾ ವಾಕ್ಯಮೆಂಬ ಪುಸಿಯಂತಕ್ಕುಂ || ೩೧ ||

ಗಾವಿಲನದೊರ್ವ ಪಾರ್ವಂ
ಧಾವ[ಳಿಯಂ] ಹಿಳಿದು ನಭದೊಳೊಣಗಿಕ್ಕಿದೊಡಾ
ಧಾವ[ಳಿ]ಯೊಡವರ್ಪುದೆನಲ್
ತಾವದನೀಕ್ಷಿಸಿದರಂತೆ ನುಡಿವರ್ ಮೂಢರ್ || ೩೨ ||

ಚಿರುಕುಟಮನುಟ್ಟು ಕಯ್ಯೊಳ್
ತಿರಿದುಣುತುಂ ದೆಸೆಗೆ ನಗುತುಮಾಡುತ್ತಿರ್ಪಾ
ಮರುಳೊಂದಂ ನುಡಿದೊಡದಂ
ನಿರುತಮದಾದೇಶವಚನಮೆಂಬರ್ ಮೂರ್ಖರ್ || ೩೩ ||

ಚಿರುಕುಟಮನುಟ್ಟು ಕಯ್ಯೊಳ್
ತಿರಿದುಣುತುಂ ದೆಸೆಗೆ ನಗುತುಮಾಡುತ್ತಿರ್ಪಾ
ಮರುಳೊಂದಂ ನುಡಿದೊಡದಂ
ನಿರುತಮದಾದೇಶವಚನಮೆಂಬರ್ ಮೂರ್ಖರ್ || ೩೩ ||

ಕ್ರಿಯೆಯಿಂ ನೆಗೞ್ದ ವಕಾರ
ತ್ರಯಮಂ ನೆಱೆ ಬಲ್ಲೆನೆಂಬ ಠಕ್ಕನೊಳಂ ಕ
ಳ್ಳಿಯ ಕಾಯುವಿಲ್ಲ ಮಾಯಾ
ವಿಯ ಮಾತಂ ನಂಬಲಾಗದೆಂತುಂ ಜೈನಂ || ೩೪ ||

ಮಗನಂ ಪಡೆವಂತಿರೆ ಬಂ
ಜೆಗೆ ಮರ್ದಂ ಮಾೞ್ಪೆನೆಂಬ ಸಸಿಗನೇಂ ತಾಂ
ಪುಗಿಸುವನೆ ಜೀವಮಂತದು
ವೆ ಗರ್ಭದೊಳಮೞ್ದೆ ಮೆಣದಕ್ಕುಮೆ ಜೀವಂ || ೩೫ ||

ಮಕ್ಕಳನೆ ಪಡೆವೆನೆಂಬ ಬ
ಯಕ್ಕೆಯೆ ಪಿರಿದಾಗೆ ಪುಲಿಯ ಕಣ್ಣಂ ಮತಿಗೆ
ಟ್ಟುಕ್ಕೆವಮಿಕ್ಕಿದ ಮರ್ದಂ
ಒಕ್ಕಲಿಗರ್ ಕೊಟ್ಟ ಜನ್ನದಡಗಂ ತಿಂಬರ್ || ೩೬ ||

ಅನುದಿನಮಾತ್ಮೇಶನ ಸಾ
ಧನ ಸೇವನೆಯಿಂದೆ ಬಂಜೆಗಾಗದ ಬಸಿಱೊಂ
ದಿನಿಸಂ ಜನ್ನದೊಳೞಿದಾ
ಡಿನ ಮೂತ್ರಮನೊರ್ಮೆ ಸವಿದೊಡೇನಾದಪುದೇ || ೩೭ ||

ಕುತ್ತಂಗುಳಿಗಂ ಗರ್ಭಮ
ದೊತ್ತಂಬದಿನಕ್ಕುಮಲ್ಲಿ ನೆಲಸಲ್ ಜೀವಂ
ಮತ್ತೆ ಪಟುಮರ್ದನುಂಡುಂ
ಪೆತ್ತಪಳೇ ಜೀವನಲ್ಲಿ ನೆಲಸದೊಡೆಂತುಂ || ೩೮ ||

ಕನಕಮುಮಂ ಮಕ್ಕಳುಮಂ
ನಿನಗಾಂ ಮಾಡಿದಪೆನೆಂಬ ಠಕ್ಕನ ಮಾತಂ
ಜಿನಸಮಯಿ ನಂಬಬೇಡೊ
ಳ್ಪಿನೊಳಕ್ಕುಂ ಮಾಡುವವರ ವಶವಲ್ಲದಱಿಂ || ೩೯ ||

ತಮತಮಗೆ ಡಂಬಕರ್ ಬ
ಲ್ಲೆಮೆಂದು ಛಿದ್ರಿಸಲೆ ವಾ[ಜ]ವಶ್ಯವಯಸ್ತಂ
ಭಮನರ್ಥಮುಳ್ಳಿನಂ ಪೊ
ರ್ದಿ ಮಾಡುತುಂ ಪಱಿಯೆ ತಿಂದು ನೊಚ್ಚನೆ ನೆಗೆವರ್ || ೪೦ ||

ಅಱಿದವನಾ ವಿದ್ಯೆಗಳಿಂ
ನೆಱೆ ಸುಖಿಯಾಗಿಪ್ಪನಲ್ಲದೆಲ್ಲಾ ನಾಡಂ
ನೆಱೆ ಪೊಕ್ಕು ತಿರಿದು ತಿಂಬನ
ತೆಱನಱಿವವರಿನಿತನಱಿದುಮೆಂತೊಳಗಪ್ಪರ್ || ೪೧ ||

ನರಿ ತೊಡರ್ವಂತಿರಲೇಂ ಕೇ
ಸರಿ ತೊಡರ್ಗುಮೆ ಬಲೆಯೊಳಂತೆ ಡಂಬಿಸಿ ತಿರಿತ
ರ್ಪರ ತೆಱೆಯೊಕ್ಕಲೆನಿಪ್ಪ
ನ್ಯರ ತೆೞದಿಂ ತೊಡರಲೆಂತುಮಱಿವನೆ ಜೈನಂ || ೪೨ ||

ಪರಮಜಿನೋದಿತಮಲ್ಲದ
ದರವುರವಿದ್ಯೆಗಳನಱಿವರಂ ತೋಱಿದೊಡ
ಚ್ಚರಿಯೆನ್ನನಿವೆಲ್ಲಂ ಡೊಂ
ಬರ ವಿದ್ಯೆಗಳೆಂದೆ ಬಗೆವನುತ್ತಮಜೈನಂ || ೪೩ ||

ಮರಗಳ ಪೊಱಸುಗಳ ನೆೞಲ್
ಪರಿದೊಡೆ ಕುಱಿ ನಡೆದೆಡೆ ಧೂಳಿ ಪೊರೆದೊಡೆ ಪೋಕುಂ
ಸಿರಿಯೆಂಬರಂತು ಪೋಗಲ್
ಸಿರಿ ಗಾಳಿಯ ಸೊಡರೆ ನೆಗೞ್ದ ಪುಣ್ಯಾಧಿಕರಾ || ೪೪ ||

ಇದು ಯುಕ್ತಮಪ್ಪುದಲ್ತೆ
ನ್ನದೊಂತಿ ತಲೆಯಲ್ಲಿ ಬೀೞೆ ಬೋೞಿಪರಾಯಂ
ದದೆ ಬುದ್ಧಿವಂತರಂತದು
ತುದಿಮೂಗಿನ ಮೇಲೆ ಕೆಡೆದೊಡದನೇಗೆಯ್ವರ್ || ೪೫ ||

ದೇವಾರ್ಚನೆ ದಾನಂ ಸಂ
ಧ್ಯಾವಂದನೆ ಜಪವೆನಿಪ್ಪುವಂ ಮಾೞ್ಪಾ ವಿ
ಪ್ರಾವಳಿಗೆ ದರ್ಭೆಯಿಲ್ಲದೊ
ಡಾವ ಫಲ[ಮುಮಿಲ್ಲ]ಮಸುರರುಂ ಗಡ ಕೊಳ್ವರ್ || ೪೬ ||

ಕಳದೊಳ್ ತೂಱಿದ ಬತ್ತಮ
ನಳೆಯದೆ ನಿಂದಂದು ದನುಜರಾ ಧಾನ್ಯಮನಾ
ಗಳೆ ಕೊಳ್ವರೆಂಬರಳೆದೊಡೆ
ಕೊಳಲಱಿಯರೆ ತಮಗೆ ಬಾೞ್ತೆಯುಳ್ಳೊಡೆ ದನುಜರ್ || ೪೭ ||

ಪಗವದ ಬತ್ತಂ ಕಿಡದಂ
ತಗಲದೆ ಕಾಪಿರಿಸಿದೊಂದು ಬೆರಣೆಯ ಬೆನಕಂ
ನಗೆಯಲ್ತು ಕಾದೊಡಕ್ಕುಂ
ಪಗವಮನಿರುಳಗುೞ್ದು ಕೊಳ್ವ ಕಳ್ಳರನಿನಿಸುಂ || ೪೮ ||

ಇಂತಿವು ಮೊದಲಾಗಿರೆ ಪಲ
ವುಂ ತೆಱದಾ ಮೂಢಮೆಲ್ಲಮಂ ಸನ್ಮತಿಯಿಂ
ದಂ ತಿಳಿದು ಬಿಸುಟು ಜಿನಮತ
ದಿಂ ತಪ್ಪದೆ ನೆಗೞುತಿರ್ಪನುತ್ತಮಜೈನಂ || ೪೯ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಜರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ

ಸಮಯಪರೀಕ್ಷೆಯೊಳ ಲೋಕಮೂಢಸ್ವರೂಪನಿರೂಪಣಂ ದ್ವಾದಶಾಧಿಕಾರಂ