ಅಕ್ಷಯತೃತೀಯೆ (೪೨) : ಜೈನಪರ್ವಗಳಲ್ಲೊಂದು. ವೃಷಭನಾಥನು ಚರಿಗೆಗೆಂದು ಬಿಜಯಂಗೈದ ಕಾಲದಲ್ಲಿ ಹಸ್ತಿನಾಪುರದ ದೊರೆಯಾದ ಸೋಮಪ್ರಭನ ಸೋದರನಾದ ಶ್ರೇಯಾಂಸನು, ಅಣ್ಣನೊಡಗೂಡಿ, ಸ್ವಾಮಿಯನ್ನು ನಿಲ್ಲಿಸಿ, ಭಕ್ತಿಯಿಂದ ಆಹಾರದಾನಮಾಡಿದನು. ಚಿನ್ನದ ಕಲಶಗಳಲ್ಲಿ ತುಂಬಿದ ಅಮೃತತೋಪಮವಾದ ಕಬ್ಬಿನ ಹಾಲನ್ನು ಅವನ ಬೊಗಸೆಗೆರೆದುಕೊಟ್ಟನು. ಆಗ ಹೂವಿನ ಮಳೆ ಕರೆಯಿತು. ಆ ಅಣ್ಣ ತಮ್ಮಂದಿರು ಜಿನನ ಪಾದಗಳಿಗೆರುವಾಗ ‘ಅಪೂರ್ವವಾದ ಈ ದಾನವು ಅಕ್ಷಯವಾಗಲಿ’ ಎಂದು ಸ್ವಾಮಿಯು ಹರಿಸಿದನು. ಅದರ ಫಲವಾಗಿ ಆ ಪುಣ್ಯದಿನವು ‘ಅಕ್ಷಯತೃತೀಯೆ’ ಎಂದು ಭೂಲೋಕದಲ್ಲಿ ಹೆಸರುವಾಸಿಯಾಯಿತು. ಜೈನಸಮಾಜದಲ್ಲಿ ಆ ಹಬ್ಬವು ಇಂದಿಗೂ ಅಕ್ಷಯತೃತೀಯೆ ಎಂಬ ಹೆಸರಿನಲ್ಲಿಯೇ ಆಚರಣೆಯಲ್ಲಿದೆ.

ಅಷ್ಟಕರ್ಮಗಳು (೭೩) : ಆತ್ಮನ ಅನಂತಜ್ಞಾನ, ಅನಂತವೀರ್ಯ ಮೊದಲಾದ ಗುಣಗಳನ್ನು ಮಲಿನಗೊಳಿಸುವ ಸಂಗತಿಗಳೇ ಅಷ್ಟಕರ್ಮಗಳು. ಜ್ಞಾನಾವರಣೀಯ, ದರ್ಶನಾವರಣೀಯ, ಮೋಹನೀಯ, ಅಂತರಾಯ, ವೇದನೀಯ, ಆಯು, ನಾಮ, ಗೋತ್ರ ಎಂಬ ಎಂಟು ಹೆಸರುಗಳು ಅವಕ್ಕಿವೆ. ಜ್ಞನಾವರಣೀಯವು ಆತ್ಮನ ಜ್ಞಾನಗುನವನ್ನು ಪ್ರಕಟವಾಗಲು ಬಿಡುವುದಿಲ್ಲ. ದರ್ಶನಾವರಣೀಯವು ದರ್ಶನಶಕ್ತಿಯನ್ನು ಮುಚ್ಚಿಬಿಡುತ್ತದೆ. ಮೋಹನೀಯಕರ್ಮವು ಸಮ್ಯಕ್ ದರ್ಶನಗುಣ ಹಾಗೂ ಚಾರಿತ್ರ್ಯದ ಮೇಲೆ ತನ್ನ ದುಷ್ಟಪ್ರಭಾವವನ್ನು ಬೀರುತ್ತದೆ. ಅಂತರಾಯಕರ್ಮವು ಆತ್ಮನ ದಾನ, ಲಾಭ, ಭೋಗ, ಉಪಭೋಗ, ವೀರ‍್ಯಗಳನ್ನು ನಷ್ಟಗೊಳಿಸುತ್ತದೆ. ಮಾನವ, ಪಶು, ಪಕ್ಷಿ ಇತ್ಯಾದಿ ದೇಹಗಳಲ್ಲಿ ಇಂತಿಷ್ಟು ದಿವಸ ಇರಬೇಕೆಂದು ಆಯುಕರ್ಮವು ಕಟ್ಟುಗೊಳಿಸುತ್ತದೆ. ನಾಮಕರ್ಮವು ಅನೇಕಪ್ರಕಾರದ ಶರೀರ, ಅವಯವ, ರೂಪಗಳನ್ನು ಉಂಟುಮಾಡುತ್ತದೆ. ಗೋತ್ರಕರ್ಮವು ಆತ್ಮನನ್ನು ಗೋತ್ರದಿಂದ ಬಂಧಿಸಿಬಿಡುತ್ತದೆ.

ಅಷ್ಟಾಂಗಗಳು (೧೩) : ನಿಃಶಂಕೆ, ನಿಃಕಾಂಕ್ಷೆ, ನಿರ್ವಿಚಿಕಿತ್ಸೆ, ಅಮೂಢದೃಷ್ಟಿ, ಉಪಗೂಹನ, ಸ್ಥಿತಿಕರಣ, ವಾತ್ಸಲ್ಯ, ಪ್ರಭಾವನೆ ಎಂಬಿವು ಅಷ್ಟಗುಣಗಳು. ಜೈನತತ್ತ್ವವೇ ತತ್ತ್ವ, ಅದಲ್ಲದೆ ಬೇರೆ ಯಾವುದೂ ಇಲ್ಲವೆಂದು ನಿಷ್ಕಂಪಖಡ್ಗಧಾರೆಯ ನೀರಿನಂತೆ ಸನ್ಮಾರ್ಗದಲ್ಲಿ ಸಂಶಯರಹಿತ ಶ್ರದ್ಧೆಯನ್ನಿಡುವುದು ನಿಃಶಂಕೆ. ಕರ್ಮದ ಸ್ವಾಧೀನದಲ್ಲಿದ್ದು ಕೊನೆಗೆ ನಾಶವಾಗುವಂಥದೂ ಉದಯಕಾಲದಲ್ಲಿ ದುಃಖಮಿಶ್ರಿತವಾಗಿರತಕ್ಕದ್ದೂ ಪಾಪದ ಬೀಜದಂತೆ ಇರುವಂಥದೂ ಆದ ಸುಖವೂ ಅನಿತ್ಯವಾದುದು ಎಂದು ನಂಬುವುದು ನಿಃಕಾಂಕ್ಷೆ. ಶರೀರವು ಸ್ವಭಾವತಃ ಅಶುದ್ಧವಾಗಿದೆ, ಆದರೆ ಅದು ರತ್ನತ್ರಯಗಳಿಂದ ಪವಿತ್ರವಾಗುತ್ತದೆ, ಮುಕ್ತಿಯನ್ನು ಪಡೆಯಲು ಸಾಧನರೂಪವಾಗಿದೆ; ಆದ್ದರಿಂದ ಅದನ್ನು ತಿರಸ್ಕಾರಮಾಡದೆ ಅದರ ವಿಶಿಷ್ಟಗುಣಗಳನ್ನು ಪ್ರೀತಿಸಬೇಕೆಂಬುದೇ ನಿರ್ವಿಚಿಕಿತ್ಸೆ. ದುಃಖದ ಮಾರ್ಗವಾಗಿರುವ ಮಿಥ್ಯಾಮಾರ್ಗದ ವಿಷಯದಲ್ಲಾಗಲಿ ಮಿಥ್ಯಾಮಾರ್ಗದಲ್ಲಿ ನಡೆಯುವ ಜನರ ವಿಷಯದಲ್ಲಾಗಲಿ ಸಮ್ಮತಿ ಸೂಚಿಸದಿರುವುದು, ಸತ್ಕಾರ ಮಾಡದಿರುವುದು, ಹೊಗಳದಿರುವುದು ಆ ಮೂಢ ದೃಷ್ಟಿಯೆನಿಸುತ್ತದೆ. ಸ್ವತಃ ಶುದ್ಧವಾಗಿರುವ ಮೋಕ್ಷಮಾರ್ಗದಲ್ಲಿ ಅಜ್ಞಾನಿಗಳೂ ಅಶಕ್ತರೂ ಆದ ಜನರ ಆಚರಣೆಯಿಂದ ಆಗುವ ನಿಂದೆಯನ್ನು ದೂರಮಾಡುವುದೇ ಉಪಗೂಹನ. ಸಮ್ಯಗ್ದರ್ಶನ ಹಾಗೂ ಸಮ್ಯಕ್ ಚಾರಿತ್ರಗಳಿಂದ ಚ್ಯುತರಾಗುತ್ತಿರುವವರನ್ನು ಧರ್ಮದ ಮೇಲೆ ಪ್ರೀತಿಯಿಟ್ಟು, ಉಪದೇಶದ ಮೂಲಕ ಸದ್ಧರ್ಮದಲ್ಲಿ ನೆಲೆಗೊಳ್ಳುವಂತೆ ಮಾಡುವುದೇ ಸ್ಥಿತಿಕರಣ. ಕಪಟಭಾವವಿಲ್ಲದೆ ಸದ್ಭಾವನೆಯಿಂದ ಧರ್ಮಬಂಧುವಿಗೆ ತನ್ನ ಯೋಗ್ಯತೆಗೆ ತಕ್ಕಂತೆ ಅದರ ಸತ್ಕಾರಮಾಡುವುದೇ ವಾತ್ಸಲ್ಯ. ಅಜ್ಞಾನವೆಂಬ ಕತ್ತಲೆಯು ಹಬ್ಬಿದ್ದರೆ ಅದನ್ನು ದೂರಮಾಡಿ ಶಕ್ತ್ಯನುಸಾರ ಜೈನಧರ್ಮದ ಮಾಹಾತ್ಮ್ಯವನ್ನು ಪ್ರಕಟಗೊಳಿಸುವುದೇ ಪ್ರಭಾವನೆ.

ಅಷ್ಟಮದಗಳು (೧೦೧) : ಜ್ಞಾನ, ಪೂಜೆ, ಕುಲ, ಜಾತಿ, ಬಲ, ಐಶ್ವರ್ಯ, ತಪ ಮತ್ತು ಶರೀರ ಎಂಬೀ ಎಂಟು ಸಂಗತಿಗಳನ್ನು ಅಷ್ಟಮದಗಳೆಂದು ಕರೆಯಲಾಗಿದೆ. ನಾನು ಜ್ಞಾನಿ, ಸಕಲಶಾಸ್ತ್ರಗಳ ಜ್ಞಾತ ಎಂದು ತಿಳಿಯುವುದು ಜ್ಞಾನಮದ. ನಾನು ಸರ್ವಮಾನ್ಯ, ರಾಜಮಹಾರಾಜರು ನನ್ನ ಸೇವೆಮಾಡುತ್ತಾರೆ ಎಂದು ತಿಳಿಯುವುದು ಪೂಜಾಮದ. ತನ್ನ ಪಿತೃಪಕ್ಷವು ಅತ್ಯಂತ ಉಜ್ವಲವಾದುದು, ಅದರಲ್ಲಿ ಬ್ರಹ್ಮಹತ್ಯೆ ಅಥವಾ ಋಷಿಹತ್ಯೆ ಮೊದಲಾದುದು ದೂಷಿತಕಾರ‍್ಯಗಳು ಈವರೆಗೆ ನಡೆದಿಲ್ಲ ಎಂಬ ಗರ್ವವು ಕುಲಮದ. ತನ್ನ ತಾಯಿಯ ಪಕ್ಷವು ಬಹಳ ಉನ್ನತವಾದುದು, ಆಕೆ ಶೀಲದಲ್ಲಿ ಉನ್ನತಳು ಎಂದು ಅಹಂಕರಿಸುವುದು ಜಾತಿಮದ. ನಾನು ಸಹಸ್ರಭಟ, ಲಕ್ಷಭಟ, ಕೋಟಿಭಟಸಮನ್ವಿತ ಎಂದು ಕೊಳ್ಳುವುದು ಬಲಮದ. ನಾನು ವಿಶೇಷ ಸಿದ್ಧಿಗಳನ್ನು ಪಡೆದುಕೊಂಡಿದ್ದೇನೆ ಎಂದು ಬೀಗುವುದು ಋದ್ಧಿಮದ. ನನ್ನ ಇಡೀ ಜೀವನ ತಪಸ್ಸಿಗೆ ಸಮರ್ಪಿತವಾಗಿದೆ ಎಂದು ಭಾವಿಸುವುದು ತಪೋಮದ. ತನ್ನ ರೂಪದ ಮುಂದೆ ಕಾಮದೇವನೂ ಏನೇನೂ ಅಲ್ಲ ಎಂದು ಬಗೆಯುವುದು ರೂಪಮದ.

ಅಷ್ಟಾಹ್ನಿಕಪರ್ವ/ನಂದೀಶ್ವರ (೪೩) : ನಂದೀಶ್ವರವೆಂಬುದು ಮಧ್ಯಲೋಕದ ಎಂಟನೆಯ ದ್ವೀಪ. ಚತುರ್ನಿಕಾಯ ದೇವತೆಗಳು ಪ್ರತಿವರ್ಷವೂ ಆಷಾಢ ಕಾರ್ತೀಕ ಫಾಲ್ಗುಣಗಳಲ್ಲಿ ನಂದೀಶ್ವರದ್ವೀಪಕ್ಕೆ ಯಾತ್ರೆ ಕೈಗೊಳ್ಳುತ್ತಾರೆ. ಅಲ್ಲಿರುವ ಆಕೃತ್ರಿಮಚೈತ್ಯಾಲಯಗಳಲ್ಲಿ ಭವ್ಯಾತಿಶಯಗಳಿಂದ ಜಿನಪೂಜೆಯನ್ನು ನೆರವೇರಿಸುತ್ತಾರೆ. ಶುಕ್ಲಪಕ್ಷದ ಅಷ್ಟಮಿಯಿಂದ ಪೌರ್ಣಮಿಯವರೆಗೆ ಎಂಟೆಂಟು ದಿನ ಪೂರ್ವಾಹ್ನ ಅಪರಾಹ್ನ ಪೂರ್ವರಾತ್ರಿ ಪಶ್ವಿಮರಾತ್ರಿಗಳಲ್ಲಿ ಎರಡೆರಡು ಜಾವವೆಂಬಂತೆ ಒಟ್ಟು ಎಂಟು ಜಾವಗಳು ಜಿನಪ್ರತಿಮೆಗಳ ಪ್ರದಕ್ಷಿಣಪೂರ್ವಕವಾದ ಈ ಪೂಜೆಯನ್ನು ಭಕ್ತ್ಯಾದರಗಳಿಂದ ಕೈಗೊಳ್ಳುತ್ತಾರೆ. ಆದ್ದರಿಂದಲೇ ಅದು ಅಷ್ಟಾಹ್ನಿಕಪರ್ವವೆನಿಸಿದೆ. ಅದನ್ನು ಅನುಸರಿಸಿಯೇ ಭೂಲೋಕದಲ್ಲಿಯು ಜಿನಭಕ್ತರು ಜಿನಬಿಂಬಗಳನ್ನು ಅಣಿಗೊಳಿಸಿ ಸಿದ್ಧಭಕ್ತಿ, ನಂದೀಶ್ವರಚೈತ್ಯಭಕ್ತಿ, ಪಂಚಗುರುಭಕ್ತಿ, ಶಾಂತಿಭಕ್ತಿ ಮುಂತಾದ ಪೂಜೆಗಳ ಮೂಲಕ ನಂದೀಶ್ವರ ಅಷ್ಟಾಹ್ನಿಕವನ್ನು ನೆರವೇರಿಸುತ್ತಾರೆ.

ಆತಪಯೋಗ/ಸೂರ್ಯಪ್ರತಿಮಾಯೋಗ () : ಗ್ರೀಷ್ಮ ಋತುವಿನಲ್ಲಿ ಪ್ರಖರವಾದ ಸೂರ್ಯನ ಕಿರಣಗಳನ್ನು ಸಹಿಸಿಕೊಂಡು ಮಾಡುವ ತಪಸ್ಸಿಗೆ ಆತಪಯೋಗವೆಂದು ಹೆಸರು. ಅದನ್ನು ಸೂರ್ಯಪ್ರತಿಮಾ ಯೋಗವೆಂದೂ ಸೂಚಿಸಲಾಗಿದೆ.

ಪರಿಗ್ರಹ (೧೧೧) : ಇದು ನನ್ನದು ಎಂಬ ಭಾವವನ್ನು ಗಟ್ಟಿಗೊಳಿಸಿಕೊಳ್ಳುವುದೇ ಪರಿಗ್ರಹ. ಅದರಲ್ಲಿ ಆಭ್ಯಂತರ ಪರಿಗ್ರಹ, ಬಾಹ್ಯಪರಿಗ್ರಹ ಎಂದು ಎರಡು ಬಗೆ. ರಾಗದ್ವೇಷಗಳಿಂದ ಕೂಡಿದ ಚಿತ್ತವೃತ್ತಿಗಳು ಅಭ್ಯಂತರಪರಿಗ್ರಹಗಳು. ಅವುಗಳ ಪರಿಣಾಮವಾಗಿ ಮನುಷ್ಯನು ಬಾಹ್ಯಜಗತ್ತಿನ ವಿವಿಧವಸ್ತುಗಳನ್ನು ತನ್ನದಾಗಿಸಿಕೊಂಡು ಗುಡ್ಡೆಹಾಕಿಕೊಳ್ಳುವುದು ಬಾಹ್ಯಪರಿಗ್ರಹ. ಕ್ಷೇತ್ರ ವಾಸ್ತು ಧನ ಧಾನ್ಯ ದಾಸಿ ದಾಸ ಸುವರ್ಣ ರಜತ ಭಾಂಡ ಹಿರಣ್ಯ ಇವೆಲ್ಲ ಬಾಹ್ಯಪರಿಗ್ರಹಗಳು.

ಆರ್ತಧ್ಯಾನ (೧೦೯) : ಸಂಸಾರಿಜೀವಿಗಳ ಮನಸ್ಸಿನ ಮೇಲೆ ಕಲುಷಿತಸಂಗತಿಗಳು ಅಹರ್ನಿಶಿ ತಮ್ಮ ಪ್ರಭಾವವನ್ನು ಬೀರುತ್ತಲೇ ಇರುತ್ತವೆ. ಇಷ್ಟವಾದುದು ಕಳೆದುಹೋಯಿತೆಂದೋ ಅನಿಷ್ಟವಾದುದು ಮೇಲೆರಗಿತೆಂದೋ, ಈ ವೇದನೆಯನ್ನು ಸಹಿಸುವ ಪರಿಯಾದರೂ ಎಂತೆಂದೋ, ಮುಂಬರುವ ಭೋಗಗಳನ್ನು ಅನುಭವಿಸುವ ಕನಸು ಕಂಡೋ ಜೀವಗಳು ತೊಳಲಾಡುತ್ತಲೇ ಇರುತ್ತವೆ. ಅಂತಹ ತೊಳಲಾಟವೇ ಆರ್ತಧ್ಯಾನ. ಅದು ಪಾರಮಾರ್ಥಿಕ ಅಧಃಪತನಕ್ಕೆ ಕಾರಣವಾಗುತ್ತದೆ.

ಕಲ್ನೆಲೆನಿಲ್ () : ಜೈನಯತಿಗಳು ಬೇಸಗೆಯಲ್ಲಿ ಕಲ್ಲ ಮೇಲೆ ಸ್ಥಿರವಾಗಿ ನಿಂತು ಮಾಡುವ ತಪಸ್ಸು.

ಕುಕ್ಕುಟಾಸನ () : ಕಾಯಕ್ಲೇಶವಾಗಲೆಂದೇ ಜಿನಮುನಿಗಳು ಕೋಳಿಯಂತೆ ಕುಳಿತುಕೊಳ್ಳುವುದು.

ದ್ವಾದಶಗಣಗಳು (೧೮೮) : ಸಮವಸರಣ ಮಂಟಪದಲ್ಲಿ ಜಿನೇಶ್ವರನ ದಿವ್ಯಧ್ವನಿಯನ್ನು ಕೇಳಲು ನೆರೆಯುವ ಹನ್ನೆರಡು ಸಮುದಾಯಗಳು. ಗಣಧರರು ಮತ್ತು ಮುನಿಗಳು, ಆರ್ಯಿಕೆಯರು ಮತ್ತು ಶ್ರಾವಿಕೆಯರು, ಕಲ್ಪವಾಸಿ ದೇವರು, ಕಲ್ಪವಾಸಿ ದೇವಿಯರು, ಭವನವಾಸಿದೇವರು. ಭವನವಾಸಿದೇವಿಯರು, ವ್ಯಂತರದೇವರು, ವ್ಯಂತರ ದೇವಿಯರು, ಜ್ಯೋತಿಷದೇವರು, ಜ್ಯೋತಿಷದೇವಿಯರು, ಚಕ್ರವರ್ತಿಗಳು ಮುಂತಾದ ಶ್ರಾವಕರು, ಮೂಕಪ್ರಾಣಿಗಳು ಮುಂತಾದುವೇ ದ್ವಾದಶಗಣಗಳು.

ದೇವತಾಮೂಢ/ಮೂಢತ್ರಯ () : ಸಮ್ಯಕ್ತ್ವದ ಸಾಧಕರು ತೊರೆಯಬೇಕಾಗಿರುವಂಥ ಮೂರು ಬಗೆಯ ಮೂಢಗಳು ತ್ರಿಮೂಢಗಳು. ಲೋಕಮೂಢ, ದೇವತಾಮೂಢ, ಪಾಖಂಡಿಮೂಢ ಎಂದು ಅವುಗಳಲ್ಲಿರುವ ಹೆಸರು. ಆಕೃತ್ರಿಮವಾದ ಲೋಕಸ್ವರೂಪವನ್ನು ತಿಳಿಯದಿರುವುದು ಲೋಕಮೂಢ. ಒಬ್ಬರನ್ನು ಕಂಡು ಮತ್ತೊಬ್ಬರು ಅವರು ಮಾಡುವಂತೆ ತಾವೂ ಮಾಡುವುದು ಕೂಡ ಲೋಕಮೂಢವೆನಿಸುತ್ತದೆ (೧೨ – ೨) ನಿರರ್ಥಕವಾದ ತೀರ್ಥಸ್ನಾನ, ಸಮುದ್ರಸ್ನಾನ, ಜಲಪ್ರವೇಶಮರಣ ಮುಂತಾದುವನ್ನು ಪುಣ್ಯಲಾಭಕ್ಕಾಗಿ ಮಾಡುವುದು; ಧಾನ್ಯ ರತ್ನ ಸುವರ್ಣ ವಸ್ತ್ರ ಗೃಹೋಪಕರಣ ಆರಂಭೋಪಕರಣ ಗ್ರಾಮೋಪಕರಣ ರಾಜ್ಯೋಪಕರಣ ಜೀವನೋಪಕರಣಗಳಿಗೆ ನಮಸ್ಕರಿಸುವುದೂ ಲೋಕಮೂಢವೇ (೧೨ – ೬,೯). ಪರಿಗ್ರಹ ಆರಂಭ ಮತ್ತು ಹಿಂಸೆಗಳಿಂದ ಕೂಡಿದ ಸಂಸಾರವೆಂಬ ತಿರುಗಣೆಯಲ್ಲಿ ಸುತ್ತುತ್ತಿರುವಂತಹ ಪಾಖಂಡಿಸಾಧುವಿನ ಪೂಜೆ, ಆದರ ಸತ್ಕಾರಾದಿಗಳನ್ನು ಮಾಡುವುದು ಪಾಖಂಡಿ ಮೂಢವೆನಿಸುತ್ತವೆ (೧ – ೪೨, ೧೪ – ೨).

ನವಪದಾರ್ಥಗಳು (೭೯) : ಜೀವ, ಅಜೀವ, ಆಸ್ರವ, ಬಂಧ, ಸಂವರ, ನಿರ್ಜರೆ, ಮೋಕ್ಷ ಎಂಬ ಸಪ್ತತತ್ತ್ವಗಳಿಗೆ ಪುಣ್ಯ, ಪಾಪ ಎಂಬ ಮತ್ತೆರಡು ತತ್ತ್ವಗಳು ಸೇರಿದರೆ ಒಟ್ಟು ಒಂಬತ್ತು ತತ್ತ್ವಗಳಾಗುತ್ತವೆ. ಅವುಗಳನ್ನು ನವಪದಾರ್ಥಗಳು ಎಂದು ಕರೆಯಲಾಗಿದೆ.

ಪಂಚನಮಸ್ಕಾರಮಂತ್ರ (೧೧೫) : ಣಮೋ ಅರಹಂತಾಣಂ, ಣಮೋ ಸಿದ್ಧಾಣಂ, ಣಮೋ ಆಯಾರಿಯಾಣಂ, ಣಮೋ ಉವಜ್ಝಾಯಾಣಂ, ಣಮೋ ಳೋಏ ಸಬ್ಬಸಾಹೂಣಂ ಎಂಬುದೇ ಪಂಚಪರಮೇಷ್ಠಿಗಳ ನಮಸ್ಕಾರಮಂತ್ರ.

ಪಕ್ಷೋಪವಾಸ () : ಹದಿನೈದು ದಿನಗಳು ಸತತವಾಗಿ ಉಪವಾಸಮಾಡುವ ವ್ರತವನ್ನು ಕೈಗೊಳ್ಳುವುದು ಪಕ್ಷೋಪವಾಸ. ಹೀಗೆಯೇ ಒಂದು ತಿಂಗಳು ಪೂರ್ತಿ ಮಾಡುವ ಉಪವಾಸವು (೭ – ೭) ಮಾಸೋಪವಾಸ.

ಪರೀಷಹ (೨೦) : ಮುನಿಗಳು ಸಾಧನಾಮಾರ್ಗದಲ್ಲಿ ನಡೆಯುವಾಗ ಅನೇಕ ವಿಘ್ನಬಾಧೆಗಳು ಉಂಟಾಗುತ್ತವೆ. ಆ ವಿಘ್ನಗಳಿಗೆ ಪರೀಷಹಗಳು ಎಂದು ಹೆಸರು. ಅವುಗಳನ್ನು ಗೆದ್ದು ಗುರಿಮುಟ್ಟುವುದೇ ಪರೀಷಹಜಯ. ಪರೀಷಹಗಳ ಸಂಖ್ಯೆ ಇಪ್ಪತ್ತೆರಡು. ಹಸಿವು ಬಾಯಾರಿಕೆ ಶೀತ ಉಷ್ಣ ಕ್ರಿಮಿಕೀಟಗಳ ಕಡಿತ ಅಹಂಕಾರ ಎಂಬೀ ಪರೀಷಹಗಳನ್ನು ಗೆಲ್ಲಬೇಕು. ಬೆತ್ತಲೆಯಿರುವುದು, ಸ್ನಾನಮಾಡದಿರುವುದು, ಸ್ನೇಹ ತೋರುವ ಜನರಿಲ್ಲದಿರುವುದು, ಹೆಚ್ಚು ಕಾಲ ಸಂಚಾರದಲ್ಲಿಯೇ ಇರುವುದು, ಭಿಕ್ಷೆ ಸಿಗದೆ ಹೋಗುವುದು ಎಂಬೀ ಪರೀಷಹಗಳಿಂದ ಉಂಟಾಗುವ ನೋವನ್ನು ಗೆಲ್ಲಬೇಕು. ತನ್ನ ತಪಸ್ಸಿಗೆ ತಕ್ಕ ಮಹಿಮೆ ಸಿದ್ಧಿಸಲಿಲ್ಲ, ತನಗಿನ್ನೂ ಉತ್ತಮಜ್ಞಾನ ಪ್ರಾಪ್ತವಾಗಿಲ್ಲ, ಜನರಿನ್ನೂ ತನ್ನನ್ನು ಪುರಸ್ಕರಿಸುತ್ತಿಲ್ಲ ಎಂಬೀ ಭಾವನೆಗಳಿಂದಾಗುವ ನಿರಾಸೆಯನ್ನು ಗೆಲ್ಲಬೇಕು. ಇವೇ ಒಟ್ಟು ಇಪ್ಪತ್ತೆರಡು ಪರೀಷಹಜಯಗಳು.

ಬೆಳ್ಳವಾಸವ್ರತ () : ಕೊರೆಯುವ ಚಳಿದಿನಗಳಲ್ಲಿ ಹಿಮವನ್ನು ಲೆಕ್ಕಿಸದೆ ಮೊಳಕಾಲುದ್ದ ನೀರಿನಲ್ಲಿ ನಿಂತು ಮಾಡುವ ಕಠಿಣತಪಸ್ಸು.

ಮನಃಪರ್ಯಯಜ್ಞಾನ (೧೦೪) : ಅನ್ಯರ ಮನಸ್ಸನ್ನು ಇಂದ್ರಿಯಗಳ ನೆರವಿಲ್ಲದೆ ತಿಳಿದುಕೊಳ್ಳುವ ಜ್ಞಾನ.

ರೌದ್ರಧ್ಯಾನ (೧೬) : ಕ್ರೂಚಿತ್ತವು ರೌದ್ರಧ್ಯಾನದ ಮೂಲ. ಹಿಂಸೆ ಅಸತ್ಯ ಕಳ್ಳತನ ಮತ್ತು ವಿಷಯ ಸಂರಕ್ಷಣೆಗಾಗಿ ಯಾವಾಗಲೂ ಚಿಂತನೆಮಾಡುವುದು.

ಸರ್ವಾರ್ಥಸಿದ್ಧಿ (೬ – ೧೧೫) : ಕಲ್ಪಾತೀತ ಸ್ವರ್ಗಲೋಕದಲ್ಲಿ ಎಲ್ಲಕ್ಕೂ ಎತ್ತರದಲ್ಲಿರುವ ಪಂಚಾಣೂತ್ತರ ವಿಮಾನಗಳಲ್ಲಿ ಸರ್ವಾರ್ಥಸಿದ್ಧಿ ಅತ್ಯಂತ ಶ್ರೇಷ್ಠವಾದುದು. ಅಲ್ಲಿ ಹುಟ್ಟಿದವರಿಗೆ ಸಮಸ್ತ ಅರ್ಥಗಳೂ ಯತ್ನವಿಲ್ಲದೆ ಸಿದ್ಧಿಸುವುದು.