ಬ್ರಹ್ಮಾನಂದರು —ಶ್ರೀ ರಾಮಕೃಷ್ಣ ಪರಮಹಂಸರಿಗೆ ಪ್ರಿಯರಾದ ಶಿಷ್ಯರು. ಭಕ್ತಿ- ಆಧ್ಯಾತ್ಮ  ಜ್ಞಾನ  ಕರ್ಮಗಳ ಸಂಗಮ.

ಬ್ರಹ್ಮಾನಂದರು

ಎಂದಿನಂತೆ ಒಂದು ದಿನ. ದಕ್ಷಿಣೇಶ್ವರದ ಕಾಳೀ ಮಂದಿರದ ಪೂಜಾರಿ ದೇವಿಯ ಮುಂದೆ ನಿಂತು ಅನನ್ಯ ಭಾವದಿಂದ ದೇವಿಯನ್ನು ಬೇಡಲಾರಂಭಿಸಿದ. ‘ಅಮ್ಮಾ ಜಗನ್ಮಾತಾ, ಇಲ್ಲಿಗೆ ಬರುವ ಎಲ್ಲರೊಂದಿಗೆ ಪ್ರಪಂಚದ ಮಾತುಕತೆಗಳನ್ನಾಡಿ ನಾಲಿಗೆ ಬೆಂಕಿಯ ಉಂಡೆ ಯಂತಾಗಿದೆ. ಸದಾ, ಸರ್ವದಾ ನಿನ್ನ ಬಗ್ಗೆ, ದೇವರ ಬಗ್ಗೆ ಮಾತನಾಡುವ ಜೊತೆಗಾರನನ್ನು ನನಗೆ ನೀಡು ತಾಯಿ.’

ಮತ್ತೊಂದು ದಿನ ಅದೇ ಪೂಜಾರಿ ಜಗನ್ಮಾತೆಯನ್ನು ಬೇಡಿದ: ‘ಅಮ್ಮಾ ನನಗಂತೂ ಮಕ್ಕಳಿಲ್ಲ, ಮಕ್ಕಳಾಗುವುದಿಲ್ಲ. ಎಲ್ಲ ಹೆಂಗಸರನ್ನು ನಿನ್ನಂತೆಯೇ ಕಾಣುವವನು ನಾನು. ಆದರೆ ನನ್ನ ಮನಸ್ಸಿನಲ್ಲಿ ಒಂದು ಬಯಕೆ. ಶುದ್ಧ ಮನಸ್ಸಿನ, ಶುದ್ಧ ಸತ್ವದ ಒಬ್ಬ ಹುಡುಗ ನನ್ನ ಜೊತೆಯಲ್ಲೇ ಇರುವುದಾದರೆ! ಜಗನ್ಮಾತೆ, ಅಂತಹ ಒಬ್ಬ ಮಗನನ್ನು ನನಗೆ ನೀಡುತ್ತೀಯಾ?’

ಮಾನಸ ಪುತ್ರ

ಸ್ವಲ್ಪ ದಿನಗಳು ಕಳೆಯುವ ಹೊತ್ತಿಗೆ ಒಂದು ಘಟನೆ ನಡೆಯಿತು ಎಂದು ಹೇಳುತ್ತಾರೆ. ಆ ಘಟನೆ ಇದು. ದಕ್ಷಿಣೇಶ್ವರದ ಕಾಳೀ ಮಂದಿರಕ್ಕೆ ಸೇರಿದ ಪಂಚವಟಿಯಲ್ಲಿ ಆಲದಮರದ ಕೆಳಗೆ ಪೂಜಾರಿ ನೋಡುತ್ತಾನೆ. ಒಬ್ಬ ಹುಡುಗ ನಿಂತಿದ್ದಾನೆ. ಅವನನ್ನು ಭಾವದ ಕಣ್ಣುಗಳಿಂದ ಕಂಡ ಪೂಜಾರಿ ಯೋಚಿಸಿದ; ‘ಇದೇನಿದು? ಆಲದಮರದ ಕೆಳಗೆ ಒಬ್ಬ ಹುಡುಗ ನಿಂತಿರುವುದು ಕಾಣುತ್ತಿದೆಯಲ್ಲ. ಇದರ ಕಾರಣವೇನು?’ ಮುಗ್ಧ ಸ್ವಭಾವದ ಪೂಜಾರಿ ತನ್ನ ಬಂಧು ಹೃದಯನನ್ನು ಕಾರಣ ಕೇಳಿದ. ಅದಕ್ಕವನು ‘ಮಾಮ, ನಿನಗೊಂದು ಮಗುವಾಗುತ್ತದೆ. ಅದನ್ನೇ ಈಗ ಮುನ್ಸೂಚನೆಯಾಗಿ ನೀನು ಕಾಣುತ್ತಿದ್ದೀಯೇ!’ ಎಂದ. ಅದರಿಂದ ಚಕಿತನಾದ ಪೂಜಾರಿ ಗಾಬರಿಗೊಂಡು ತನ್ನ ತಾಯಿ ಜಗನ್ಮಾತೆಯಾದ ಕಾಳಿಯ ಬಳಿಗೆ ಓಡಿದ. ‘ಅಮ್ಮಾ ಇದೇನಿದು! ಹೃದಯ ಹೀಗೆ ಹೇಳುತ್ತಿದ್ದಾನಲ್ಲ!’ ಅದಕ್ಕೆ ಜಗನ್ಮಾತೆ ನಗುತ್ತಾ ಒಮ್ಮೆಗೇ ಒಂದು ಮಗುವನ್ನು ಪೂಜಾರಿಯ ತೋಡೆಯಮೇಲೆ ಕೂರಿಸಿ ಹೇಳಿದಳು: ‘ಇದು ನಿನ್ನ ಮಗು,’ ಮತ್ತೆ ಪೂಜಾರಿ ನಡುಗಿದ. ‘ಅಮ್ಮಾ ಇದೇನಿದು! ನನಗೆ ಮಕ್ಕಳೇ!’ ಅದಕ್ಕೆ ಜಗನ್ಮಾತೆ ಮಗುಳು ನಕ್ಕು ಹೇಳಿದಳು: ‘ಮಗೂ, ನೀನು ಮಗು ಬೇಕೆಂದು ಬಯಸಿದ್ದೆಯಲ್ಲ! ಆ ಮಗು ಇದು. ಪ್ರಪಂಚದ ರೀತಿಯಲ್ಲಿ ನೋಡುವ ಮಗುವಲ್ಲ ಇದು. ಶುದ್ಧ ಮನಸ್ಸಿನ, ಕೋಮಲ ಹೃದಯದ ತ್ಯಾಗೀ ಭಾವದ ಮಗು. ಅವನು ನಿನ್ನ ಮಾನಸ ಪುತ್ರ. ಅವನು ಸ್ವಭಾವದಿಂದ ನಿನ್ನ ಮಗನಂತೆಯೆ ಇರುತ್ತಾನೆ, ನಿನ್ನ ಮಗನಂತೆಯೇ ನಿನ್ನನ್ನು ಪ್ರೀತಿಸುತ್ತಾನೆ’ ಪೂಜಾರಿಗೆ ಜಗನ್ಮಾತೆಯ ಮಾತನ್ನು ಕೇಳಿ ಸಮಾಧಾನವಾಯಿತು.

ಮತ್ತೊಂದು ದಿನ. ಪೂಜಾರಿ ತನ್ನ ಮಾನಸ ಪುತ್ರನ ಬರವಿಗಾಗಿ ಕಾಯುತ್ತಾ ಗಂಗಾ ತೀರದಲ್ಲಿ ಯೋಚಿಸುತ್ತಾ ಕುಳಿತಿದ್ದಾನೆ. ಒಮ್ಮೆಗೇ ಗಂಗಾನದಿಯ ಮಧ್ಯದಲ್ಲಿ ನೂರು ದಳಗಳ ಕಮಲ ಅರಳಿ ನಿಂತಿದ್ದನ್ನು ಕಂಡ. ಪ್ರತಿಯೊಂದು ದಳವೂ ಅಪೂರ್ವ ಶೋಭೆಯಿಂದ ಕೂಡಿದೆ. ಕಮಲದ ಮಧ್ಯದಲ್ಲಿ ಗೋಕುಲದ ಎಲ್ಲರ ಕಣ್ಮಣಿ ಶ್ರೀ ಕೃಷ್ಣ ತನ್ನದೇ ವಯಸ್ಸಿನ ಇನ್ನೊಬ್ಬ ಸಖನೊಂದಿಗೆ ನೃತ್ಯ ಮಾಡುತ್ತಿದ್ದಾನೆ. ಇಬ್ಬರ ಕಾಲಿನಲ್ಲೂ ನೂಪುರ ಗಲಗಲ ದನಿ ಮಾಡುತ್ತಿದೆ. ಅದೆಂತಹ ಮನೋಹರ ನೃತ್ಯ! ನೃತ್ಯದ ಒಂದೊಂದು ಭಂಗಿಯೂ ಪ್ರೇಮದ ಕಡಲೋ ಎಂಬಂತಿದೆ. ನೋಡುತ್ತಾ ನೋಡುತ್ತಾ ಪೂಜಾರಿ ತನ್ನನ್ನೇ ತಾನು ಮರೆತ. ಆ ಹೊತ್ತಿಗೆ ಸರಿಯಾಗಿ ಕೋನ್ನಗರದಿಂದ ದಕ್ಷಿಣೇಶ್ವರದ ತೀರಕ್ಕೆ ಒಂದು ನೌಕೆ ಚಲಿಸುತ್ತಾ ಬಂತು. ಪೂಜಾರಿ ನೋಡುತ್ತಾನೆ-ಅದೇ ಬಾಲಕ. ದಿಟ್ಟಿಸಿ ನೋಡಿದ: ಹೌದು, ಅದೇ ಬಾಲಕ. ಆಲದಮರದ ಕೆಳಗೆ ಯಾವ ಬಾಲಕ ಕಂಡನೋ, ಜಗನ್ಮಾತೆ ಯಾವ ಮಗುವನ್ನು ತನ್ನ ಮಡಿಲಿಗೆ ಹಾಕಿದ್ದಳೋ, ಸ್ವಲ್ಪ ಮುಂಚೆ ವ್ರಜ ಕಿಶೋರ ಶ್ರೀಕೃಷ್ಣನೊಂದಿಗೆ ಯಾವ ಬಾಲಕ ನೃತ್ಯ ಮಾಡುತ್ತಿದ್ದನೋ ಅದೇ ಬಾಲಕ ಬಂದಿದ್ದಾನೆ. ಭಾವುಕ ಕಣ್ಣುಗಳಿಂದ ನೋಡಿದ್ದ ಪೂಜಾರಿ ಈಗ ತನ್ನ ನಿಜವಾದ ಕಣ್ಣುಗಳಿಂದ ನೋಡುತ್ತಿದ್ದಾನೆ. ಆ ಬಾಲಕನೇ ಪ್ರತ್ಯಕ್ಷನಾಗಿ ನಿಂತಿದ್ದಾನೆ. ‘ತನ್ನ ಮಾನಸ ಪುತ್ರ! ಸದಾ ಸರ್ವದಾ ದೇವರನ್ನೇ, ಜಗನ್ಮಾತೆಯನ್ನೇ ಕುರಿತು ಮಾತನಾಡಲು ಬಯಸಿದ ತನ್ನ ಪುತ್ರ!’ ಪೂಜಾರಿ ಆನಂದದಿಂದ ಮೈ ಮರೆತ.

ಜಗದ್ವಿಖ್ಯಾತರಾದ ವಿವೇಕಾನಂದರನ್ನು ನೀಡಿದ ಶ್ರೀ ರಾಮಕೃಷ್ಣ ಪರಮಹಂಸರೇ ಆ ಕಾಳೀ ಮಂದಿರದ ಪೂಜಾರಿ. ಅವರು ಇದ್ದದ್ದು ಹತ್ತೊಂಬತ್ತನೆಯ ಶತಮಾನದಲ್ಲಿ. ಅದು ಜಗತ್ತಿನಲ್ಲೆಲ್ಲ ಜನ ‘ದೇವರು ಇದ್ದಾನೆಯೆ?’ ಎಂದು ಪ್ರಶ್ನಿಸಿಕೊಳ್ಳುತ್ತಿದ್ದ ಕಾಲ. ನಂಬಲೂ ಆಗದೆ, ನಂಬದೆ ಬಿಡಲೂ ಆಗದೆ ತೊಳಲುತ್ತಿದ್ದ ಕಾಲ. ಹೀಗೆ ಪ್ರಪಂಚ ನಂಬಿಕೆ ಅಪನಂಬಿಕೆಗಳ ಮಧ್ಯೆ ತೂಗುಯ್ಯಾಲೆ ಆಡುತ್ತಿದ್ದಾಗ ‘ದೇವರಿದ್ದಾನೆ’ಎಂದು ದೃಢ ನಂಬಿಕೆಯಿಂದ ಸಾರಿದರು  ರಾಮಕೃಷ್ಣ ಪರಮಹಂಸರು.

ಸ್ವಾಮಿ ಬ್ರಹ್ಮಾನಂದರೇ ಜಗನ್ಮಾತೆ ನೀಡಿದ ಶ್ರೀ ಕೃಷ್ಣನೊಂದಿಗೆ ಗೆಳೆಯನಾಗಿ ನೃತ್ಯ ಮಾಡಿದ ಬಾಲಕ. ಅವರು ಪರಮಹಂಸರ ಮಾನಸಪುತ್ರರೆಂದು ಕರೆಸಿಕೊಂಡರು. ಎಲ್ಲರಿಂದಲೂ ‘ರಾಜಾ’ ಎಂದು ಹೆಸರಿಸಿ ಕೊಂಡರು. ಸದಾ ಬ್ರಹ್ಮದಲ್ಲಿಯೇ ಆನಂದವನ್ನು ಹೊಂದುತ್ತಿದ್ದರು. ನೂರಾರು ಆಧ್ಯಾತ್ಮ ಪಿಪಾಸುಗಳಿಗೆ ತಮ್ಮ ತಪಸ್ಸನ್ನು ಧಾರೆಯೆರೆದರು. ಶ್ರೀ ರಾಮಕೃಷ್ಣ ಸಂಘದ ಪ್ರಥಮ ಅಧ್ಯಕ್ಷರಾಗಿ ಇಪ್ಪತ್ತು ವರ್ಷಗಳ ಕಾಲ ಭಾರತದ ಆಧ್ಯಾತ್ಮ ಜೀವಿಗಳಿಗೆ ಅವಿಚ್ಛಿನ್ನವಾಗಿ ತಮ್ಮ ವಾಣಿ, ಉಪದೇಶ, ಧ್ಯಾನ, ಭಕ್ತಿ, ಜಪ, ಕೀರ್ತನೆ ಮುಂತಾದವುಗಳಿಂದ ರಕ್ಷೆಯನ್ನು ನೀಡಿದರು.

ಕೃಷ್ಣನ ಸ್ನೇಹಿತ

ಸ್ವಾಮಿ ಬ್ರಹ್ಮಾನಂದರ ಪೂರ್ವಾಶ್ರಮದ ಹೆಸರು ರಾಖಾಲಚಂದ್ರ ಘೋಷ್ ಎಂದು. ರಾಖಾಲ ಎಂದರೆ ಗೋಪ ಬಾಲಕ, ಶ್ರೀ ಕೃಷ್ಣನ ಸಖ ಎಂದು. ರಾಖಾಲ್ ಆನಂದಮೋಹನ ಘೋಷ್ ಮತ್ತು ಕೈಲಾಸ ಕಾಮಿನಿ ಎಂಬ ಸಾತ್ವಿಕ ದಂಪತಿಗಳಿಗೆ ೧೮೬೩ ನೇ ಜನವರಿ ೨೧ರಂದು ಶಿಕ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು. ಕೈಲಾಸ ಕಾಮಿನಿಗೆ ಕೃಷ್ಣನೆಂದರೆ ಅಪಾರ ಭಕ್ತಿ, ಅಪೂರ್ವ ಪ್ರೇಮ. ಕೃಷ್ಣನಂತಿರುವ ಮಗು ತನಗೆ ಬೇಕೆಂಬ ಆಕಾಂಕ್ಷೆ ಆದ್ದರಿಂದ ಸದಾ ಕೃಷ್ಣನ ಪೂಜೆ, ಕೃಷ್ಣ ಜಪ ಮತ್ತು ಭಾಗವತವನ್ನು ಪಾರಾಯಣ ಮಾಡುವುದು ಕೈಲಾಸ ಕಾಮಿನಿಯ ಕೆಲಸವಾಯಿತು. ಕಾಲಕ್ರಮದಲ್ಲಿ ಗರ್ಭಿಣಿಯಾಗಿ, ಗಂಡು ಮಗುವನ್ನು ಹಡೆದಾಗ, ನೋಡುವುದಕ್ಕೆ ಕೃಷ್ಣನಂತೆಯೇ ಮುದ್ದಾಗಿದ್ದ ಮಗುವಿಗೆ ರಾಖಾಲಚಂದ್ರ ಎಂದೇ ಹೆಸರಿಟ್ಟಳು.

ರಾಖಾಲನಿಗೆ ಐದು ವರ್ಷ ವಯಸ್ಸಾಗಿದ್ದಾಗ ತಾಯಿ ಕೈಲಾಸ ಕಾಮಿನಿ ತೀರಿಕೊಂಡಳು. ಇರುವ ಒಬ್ಬ ಮಗನನ್ನು ನೋಡಿಕೊಳ್ಳುವುದಕ್ಕೆ ಆನಂದಮೋಹನ ಹೇಮಾಂಗಿನಿ ಎಂಬುವಳನ್ನು ಮದುವೆಯಾದರು. ಹೇಮಾಂಗಿನಿ ರಾಖಾಲನಿಗೆ ಮಲತಾಯಿಯಾದರೂ ಸಹ ತನ್ನ ಮಗನಂತೆಯೇ ಅವನನ್ನು ಕಂಡಳು. ಅವಳ ಪ್ರೀತಿಯ ಮಡಿಲಿನಲ್ಲಿ ರಾಖಾಲ ಬೆಳೆದ.

ಇತರರಂತಲ್ಲದ ಹುಡುಗ

ರಾಖಾಲ ಸದಾ ಗಂಭಿರನಾಗಿರುತ್ತಿದ್ದ. ಯಾವುದೋ ದೂರ ದಿಗಂತವನ್ನು ನೋಡುವ ಭಾವುಕ ಕಣ್ಣುಗಳು. ಮನಸ್ಸು-ಹೃದಯವಂತೂ ಅತಿ ಕೋಮಲ. ಆಟದಲ್ಲಿ ಇವನನ್ನು ಆ ಹಳ್ಳಿಯಲ್ಲಿ ಮೀರಿಸುವವರೇ ಇರಲಿಲ್ಲ. ಪಾಠದಲ್ಲಿಯೂ ಹಾಗೆಯೇ. ದೇವ ದೇವಿಯರಿಗೆ ಸಂಬಂಧಪಟ್ಟ ಹಾಡು, ಕೀರ್ತನೆ, ಕತೆ ಮುಂತಾದುವು ಗಳನ್ನು ಕೇಳುತ್ತಾ ಚಿಕ್ಕ ವಯಸ್ಸಿನಲ್ಲಿಯೇ, ತನ್ಮಯನಾಗಿ ಭಾವಪರವಶನಾಗಿ ಕುಳಿತುಬಿಡುತ್ತಿದ್ದ. ಪ್ರತಿ ವರ್ಷ ನಡೆಯುವ ದುರ್ಗಾಪೂಜೆ, ಕಾಳೀಪೂಜೆ ಮುಂತಾದ ದಿನಗಳಲ್ಲಿ ಕಲ್ಲಿನ ವಿಗ್ರಹದಂತೆ ದೇವಿಯ ಮುಂದೆ ಧ್ಯಾನಮಗ್ನನಾಗಿ ಕುಳಿತುಬಿಡುತ್ತಿದ್ದ.

ಇವನು ಹಳ್ಳಿಯಲ್ಲಿ ಎಲ್ಲ ಬಾಲಕರಂತೆ ಶಾಲೆಗೆ ಹೋಗುತ್ತಿದ್ದಾಗ, ಮಾತು ಕೇಳದ ಬಾಲಕರಿಗೆ ಉಪಾಧ್ಯಾಯರು ಶಿಕ್ಷೆ ನೀಡುತ್ತಿದ್ದರು. ಕುರ್ಚಿ ಕೂರಿಸುವುದು, ಬೆಂಚಿನಮೇಲೆ ನಿಲ್ಲಿಸುವುದು ಅಥವಾ ಬೆತ್ತದಲ್ಲಿ ಹೊಡೆಯುವುದು ಮುಂತಾದ ಶಿಕ್ಷೆಯನ್ನು ಎಲ್ಲ ಬಾಲಕರೂ ಅನುಭವಿಸುತ್ತಿದ್ದರು. ರಾಖಾಲ ಶಾಲೆಯಲ್ಲಿ ಓದುವುದರಲ್ಲಿ ತುಂಬ ಬುದ್ಧಿವಂತ. ಅಷ್ಟೇ ಅಲ್ಲ, ತಂದೆ ಆ ಹಳ್ಳಿಯ ಜಮೀನ್ದಾರರು. ಆದ್ದರಿಂದ ಉಪಾಧ್ಯಾಯರಿಗೆ ಇವನನ್ನು ಕಂಡರೆ ತುಂಬ ಪ್ರೀತಿ. ಅವನಿಗೆ ಎಂದೂ ಶಿಕ್ಷೆ ಆಗುತ್ತಿರಲಿಲ್ಲ. ಆದರೆ ಬೇರೆಯವರಿಗೆ ಉಪಾಧ್ಯಾಯರು ಶಿಕ್ಷೆ ನೀಡಿದರೆ ರಾಖಾಲ ಬಹಳಷ್ಟು ಹಿಂಸೆ ಪಡುತ್ತಿದ್ದ. ಕೆಲವೊಮ್ಮೆ ಅವನಿಗೆ ತಿಳಿಯದಂತೆಯೇ ಕಣ್ಣಿನಿಂದ ನೀರು ಒಸರುತ್ತಿತ್ತು.

ಉಪಾಧ್ಯಾಯರಿಗೆ ಆಶ್ಚರ್ಯ, ‘ಬೇರೆ ಹುಡುಗರಿಗೆ ಹೊಡೆದರೆ ಇವನೇಕೆ ಅಳುತ್ತಾನೆ?’ ಎಂದು ಅವರಿಗೆ ಕೌತುಕ. ಒಂದು ದಿನ ಉಪಾಧ್ಯಾಯರು ರಾಖಾಲನನ್ನು ಕೇಳಿದರು. ಅದಕ್ಕವನು ಉತ್ತರಿಸಿದ. ‘ನನ್ನ ಸಹಪಾಠಿಗಳಿಗೆ ಹೊಡೆದರೆ ನನ್ನ ಮೈಗೆ ಹೊಡೆದಂತೆ ನನಗೆ ಹಿಂಸೆಯಾಗುತ್ತದೆ.  ಬಹಳ ನೋವಾಗುತ್ತದೆ.’ ಇವನ ಕೋಮಲ ಮನಸ್ಸನ್ನು ಕಂಡ ಉಪಾಧ್ಯಾಯರು ಅಂದಿನಿಂದ ಇತರ ಮಕ್ಕಳಿಗೆ ಶಿಕ್ಷೆ ನೀಡುವುದನ್ನು ನಿಲ್ಲಿಸಿದರು. ಅಷ್ಟು ಕರುಣಾಳು ಈ ರಾಖಾಲ.

ಸ್ನೇಹಿತ ನರೇಂದ್ರ

ರಾಖಾಲನ ಮಲತಾಯಿ ಹೇಮಾಂಗಿನಿಯ ತವರುಮನೆ ಇದ್ದಿದ್ದು ಕಲ್ಕತ್ತೆಯಲ್ಲಿ ರಾಖಾಲನಿಗೆ ಹನ್ನೆರಡು ವರ್ಷ ವಯಸ್ಸಾಗುತ್ತಲೇ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಆನಂದಮೋಹನ್ ತನ್ನ ಮಗನನ್ನು ತನ್ನ ಮಾವನ ಮನೆಯಲ್ಲಿ ಓದಲು ಬಿಟ್ಟರು. ೧೮೭೫ರಲ್ಲಿ ತನ್ನ ಅಜ್ಜನ ಮನೆಯ ಸಮೀಪದಲ್ಲಿಯೇ ಇದ್ದ ಟ್ರೈನಿಂಗ್ ಅಕ್ಯಾಡೆಮಿ ಎಂಬ ಶಾಲೆಗೆ ರಾಖಾಲ ಸೇರಿದ. ಮೊದಲಿನಿಂದಲೂ ರಾಖಾಲನಿಗೆ ಆಟದಲ್ಲಿ ಹೆಚ್ಚು ಒಲವು. ಕಲ್ಕತ್ತೆಗೆ ಬಂದ ನಂತರ ಮನೆಯ ಬಳಿಯೇ ಇದ್ದ ಗರಡಿ ಮನೆಯಲ್ಲಿ ತಾನೂ ವ್ಯಾಯಾಮಕ್ಕಾಗಿ ಸೇರಿದ. ರಾಖಾಲ ಸಾಮಾನ್ಯವಾಗಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ತುಂಬಾ ಗಂಭೀರ ಸ್ವಭಾವ ಅವನದು. ಆದರೂ ಅಲ್ಲಿ ವ್ಯಾಯಾಮಕ್ಕಾಗಿ ಬರುತ್ತಿದ್ದ ಮತ್ತೊಬ್ಬ ಬಾಲಕನಿಂದ ಇವನು ಆಕರ್ಷಿತನಾದ. ಅವನ ಹೆಸರು ನರೇಂದ್ರ. ಆ ಬಾಲಕನೇ ಮುಂದೆ ಸ್ವಾಮಿ ವಿವೇಕಾನಂದ ಎಂದು ಪ್ರಸಿದ್ಧಿ ಪಡೆದಿದ್ದು. ನರೇಂದ್ರನಿಗೂ ರಾಖಾಲನಿಗೂ ಕೇವಲ ಒಂಬತ್ತು ದಿನಗಳ ಅಂತರ. ಅಲ್ಲಿ ಗೆಳಯರಾದ ಇವರು ಕೊನೆಯವರೆಗೂ ಒಂದೇ ಗುರುವಿನ ಬಳಿಯಲ್ಲಿ ಆಧ್ಯಾತ್ಮ ಸಾಧನೆ ಮಾಡಿದರು. ನರೇಂದ್ರ ಸೂರ್ಯನಂತೆ, ರಾಖಾಲ ಚಂದ್ರನಂತೆ. ನರೇಂದ್ರನದು ತೀಕ್ಷ್ಣ ಬುದ್ಧಿ!  ರಾಖಾಲನದು ಮುಗ್ಧ ಮನಸ್ಸು.

ಭಾರತದಲ್ಲಿ, ಅದರಲ್ಲೂ ಬಂಗಾಳದಲ್ಲಿ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧ ವಿಶಿಷ್ಟವಾದ ಕಾಲ. ಇಂಗ್ಲಿಷರು ಪ್ರಾರಂಭಿಸಿದ ಶಿಕ್ಷಣ ಪದ್ಧತಿ, ಇಂಗ್ಲಿಷರ ಚರಿತ್ರೆಯ ಅಭ್ಯಾಸ, ಇಂಗ್ಲಿಷ್ ಬರಹಗಾರರ ಪುಸ್ತಕಗಳ ಅಧ್ಯಯನ ಇವುಗಳಿಂದ ಭಾರತೀಯರ ಮನಸ್ಸಿನ ಮೇಲೆ ಪ್ರಭಾವವಾಗಿತ್ತು. ಅವರು ಹಿಂದಿನ ವಿಚಾರಗಳನ್ನು ಪದ್ಧತಿಗಳನ್ನು ಸುಮ್ಮನೆ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಎಲ್ಲವನ್ನೂ ಪ್ರಶ್ನಿಸುವರು, ತಾವೇ ಯೋಚನೆ ಮಾಡುವರು.

ಅದರಲ್ಲೂ ಯುವಜನತೆ ಎಚ್ಚೆತ್ತಿದ್ದರು. ‘ಯಂಗ್ ಬೆಂಗಾಲ್’ ಎಂದೇ ಅವರನ್ನು ಕರೆಯುತ್ತಿದ್ದರು. ರಾಜಾರಾಮಮೋಹನರಾಯ್, ಕೇಶವಚಂದ್ರಸೇನ್, ಮಹರ್ಷಿ ದೇವೇಂದ್ರನಾಥ ಠಾಕೂರ್ ಮುಂತಾದ ಧೀಮಂತರು ಯುವಜನತೆಯನ್ನು ಬಡಿದೆಬ್ಬಿಸಿದರು.ಅವರ ಪ್ರಭಾವಕ್ಕೆ ಸಿಕ್ಕವರಲ್ಲಿ ರಾಖಾಲನೂ ಒಬ್ಬ. ನರೇಂದ್ರನ ಜೊತೆಯಲ್ಲಿ ಕೇಶವಚಂದ್ರಸೇನರ ಉಪನ್ಯಾಸ ಕೇಳುವುದು ಕೇಳುವುದಕ್ಕೆಂದು ಬ್ರಹ್ಮಸಮಾಜಕ್ಕೆ ಹೋಗುತ್ತಿದ್ದ ರಾಖಾಲನಿಗೆ ಅವರ ಪ್ರಭಾವ ಹೆಚ್ಚಾಯಿತು. ವಿದ್ಯಾಭ್ಯಾಸ ವನ್ನು ಮರೆತ. ಸದಾ ನಿರಾಕಾರದ ಧ್ಯಾನ, ಕೇಶವಚಂದ್ರ ಸೇನರ ಉಪನ್ಯಾಸ ಇಷ್ಟೇ ರಾಖಾಲನ ಕೆಲಸವಾಯಿತು. ನರೇಂದ್ರನೊಂದಿಗೆ ತಾನೂ ಬ್ರಹ್ಮಸಮಾಜದ ಸದಸ್ಯನಾಗಿ ಪ್ರತಿಜ್ಞೆಯನ್ನು ಕೈಗೊಂಡ.

ಮದುವೆ

ರಾಖಾಲನ ಬ್ರಹ್ಮಸಮಾಜದ ಚಟುವಟಿಕೆ, ದೇವರ ನಿರಾಕಾರ ಧ್ಯಾನ, ಮತ್ತು ಗರಡಿಮನೆ ಇವುಗಳನ್ನು ನೋಡಿದ ರಾಖಾಲನ ತಾತ ತನ್ನ ಅಳಿಯ ಆನಂದಮೋಹನ್‌ಗೆ ಪತ್ರ ಬರೆದರು. ತಂದೆಯೂ ಸಹ ಚಿಂತಾಕುಲರಾದರು. ಇರುವ ಒಬ್ಬ ಮಗ ಹೀಗಾದರೆ ಎಂಬ ಚಿಂತೆ ಅವರನ್ನು ಬಾಧಿಸಲಾರಂಭಿಸಿತು. ರಾಖಾಲನಿಗೆ ಹದಿನೇಳು ವರ್ಷ. ಅವನ ರೋಗಕ್ಕೆ ಔಷಧಿ ಎಂದರೆ ಮದುವೆ ಮಾಡುವುದು ಎಂದು ಆನಂದಮೋಹನ್ ನಿಶ್ಚಯಿಸಿದರು. ಆಗಲಾದರೂ ತನ್ನ ಮಗ ರಾಖಾಲನ ಮನಸ್ಸು ಪ್ರಪಂಚದತ್ತ ತಿರುಗುವುದೇನೋ ಎಂಬ ಆಸೆ ತಂದೆಯದು.

ದೇವರ ರೀತಿಗಳೇ ವಿಚಿತ್ರ. ಕಲ್ಕತ್ತೆಯಲ್ಲಿಯೇ ಸರ್ಕಾರಿ ಉದ್ಯೋಗದಲ್ಲೇ ಮನಮೋಹನ ಮಿತ್ರ ಎಂಬುವವರಿದ್ದರು. ಅವರಿಗೆ ವಿಶ್ವೇಶ್ವರಿ ಎಂಬ ಹೆಸರಿನ ತಂಗಿ. ಅವಳಿಗೆ ಹನ್ನೊಂದು ವರ್ಷ ವಯಸ್ಸು. ರಾಖಾಲನ ಅಜ್ಜನಿಗೆ ಅವರ ಬಗ್ಗೆ ಗೌರವವಿತ್ತು. ಹೀಗಾಗಿ ತಂದೆ ಕಲ್ಕತ್ತೆಗೆ ಬಂದು ಮಾತುಕತೆ ನಡೆಸಿದ ನಂತರ ರಾಖಾಲನಿಗೂ ವಿಶ್ವೇಶ್ವರಿಗೂ ೧೮೮೧ರಲ್ಲಿ ಮದುವೆ ನೆರವೇರಿತು.

ರಾಮಕೃಷ್ಣರ ದರ್ಶನ

ವಿವಾಹ ಬಂಧನದಿಂದ ರಾಖಾಲನನ್ನು ಪ್ರಪಂಚದ ಕಡೆಗೆ ಎಳೆಯಬಹುದೆಂಬ ಆನಂದ ಮೋಹನರ ನಿರೀಕ್ಷೆ ಸುಳ್ಳಾಯಿತು. ವಿವಾಹ ಬಂಧನವೇ ರಾಖಾಲನಿಗೆ ಮುಕ್ತಿಯ ಬಾಗಿಲಾಯಿತು. ರಾಖಾಲನ ಪತ್ನಿ ವಿಶ್ವೇಶ್ವರಿಯ ತಾಯಿಯೂ ಮತ್ತು ಮನಮೋಹನ ಮಿತ್ರನೂ ರಾಮಕೃಷ್ಣ ಪರಮಹಂಸರ ಭಕ್ತರು. ಹೊಸದಾಗಿ ಮದುವೆಯಾಗಿ ಬಂದ ತನ್ನ ಅಳಿಯನನ್ನು ರಾಮಕೃಷ್ಣರ ದರ್ಶನಕ್ಕೆಂದು ಅತ್ತೆ, ವಿಶ್ವೇಶ್ವರಿಯ ತಾಯಿ, ಶ್ಯಾಮಾಸುಂದರಿ ದೇವಿ ಕರೆದೊಯ್ದರು. ಪ್ರಥಮ ದರ್ಶನದಲ್ಲಿಯೇ ರಾಮಕೃಷ್ಣ ಪರಮಹಂಸರು ರಾಖಾಲ ನನ್ನು ಆಕರ್ಷಿಸಿದರು. ಆಧ್ಯಾತ್ಮಿಕ ತಂದೆಯನ್ನು ಕಂಡ ರಾಖಾಲ, ಮಾನಸ ಪುತ್ರನನ್ನು ಕಂಡುಕೊಂಡ ರಾಮಕೃಷ್ಣ ಇಬ್ಬರೂ ಪರಸ್ಪರ ಜನ್ಮಗಳ ತಮ್ಮ ಸಂಬಂಧವನ್ನು ಕಂಡುಕೊಂಡರು.

ಶ್ರೀ ರಾಮಕೃಷ್ಣರು ತಮ್ಮ ಮನಸ್ಸಿಗೆ ಒಗ್ಗಿದವರನ್ನು ‘ಮತ್ತೆ ಬಾ’ ಎನ್ನುವ ರೂಢಿ. ಹಾಗೆಯೇ ಪ್ರಥಮ ಭೇಟಿಯಲ್ಲಿ ಕಂಡ ರಾಖಾಲನನ್ನು ‘ಮತ್ತೆ ಬಾ’ ಎಂದರು. ‘ಮತ್ತೆ ಬಾ’ ಎನ್ನುವ ರಾಮಕೃಷ್ಣರ ಪುಂಗಿಯ ನಾದಕ್ಕೆ ರಾಖಾಲನ ಮನಸ್ಸು ಸೋತಿತು. ಸಮಯ ದೊರಕಿದಾಗೆಲ್ಲಾ ರಾಖಾಲ ರಾಮಕೃಷ್ಣರನ್ನು ಭೇಟಿ ಮಾಡಲಾರಂಭಿಸಿದ. ಅವರಿಬ್ಬರ ಸಂಬಂಧ ಯಾವ ಮಟ್ಟಕ್ಕೆ ಬಂದಿತೆಂದರೆ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರದಾದರು. ರಾಖಾಲ ದಕ್ಷಿಣೇಶ್ವರ ಬಿಟ್ಟು ಹೋದನೆಂದರೆ ರಾಮಕೃಷ್ಣರು ಕಂಗಾಲಾಗುತ್ತಿದ್ದರು. ರಾಖಾಲನಿಗೂ ಅಷ್ಟೇ. ದಕ್ಷಿಣೇಶ್ವರ ದಿಂದ ಹೊರಬಂದ  ಕೊಡಲೇ ಮತ್ತೆ ಮನಸ್ಸು ದಕ್ಷಿಣೇಶ್ವದ ಕಡೆಗೇ ಹೋಗುತ್ತಿತ್ತು. ಹಸುವಿನಿಂದ ಅಗಲಿದ ಕರುವಿನಂತೆ ರಾಖಾಲ ಒದ್ದಾಡುತ್ತಿದ್ದ. ಯಾವ ತಂದೆತಾಯಿಯೂ ಸುರಿಸದಿದ್ದ ಪ್ರೀತಿಯನ್ನು ರಾಮಕೃಷ್ಣರು ರಾಖಾಲನ ಮೇಲೆ ಸುರಿಸಿದ್ದರು. ಅವರಿಬ್ಬರ ಸಂಬಂಧ ಅಲೌಕಿಕವಾದದ್ದು.  ಪ್ರಾಪಂಚಿಕ ಅಳತೆಗೋಲಿನಿಂದ ಅಳೆಯುವುದಕ್ಕೆ ಸಾಧ್ಯವಿಲ್ಲದ್ದು. ರಾಖಾಲ ದಿನೇ ದಿನೇ ರಾಮಕೃಷ್ಣ ಮಯವಾದ. ಅವರ ಸೇವೆಯನ್ನು ತಾನೇ ಕೈಗೊಂಡ. ಅವರ ನಿತ್ಯ ಕಿಂಕರನಾದ; ದಿವ್ಯ ಸಹಚರನಾದ. ದಕ್ಷಿಣೇಶ್ವರದಲ್ಲಿಯೇ ಉಳಿದ. ರಾಖಾಲನ ಪತ್ನಿಯ ಕಡೆಯವರು ರಾಮಕೃಷ್ಣರ ಭಕ್ತರೇ ಆದ್ದರಿಂದ ಅವರಿಂದ ಯಾವ ಅಡಚಣೆಯೂ ಬರಲಿಲ್ಲ. ಆದರೆ ತಂದೆಗೆ ಚಿಂತೆ, ಮದುವೆ ಆದರೂ ಮಗ ಸರಿಹೋಗಲಿಲ್ಲವಲ್ಲ ಎಂದು. ಸಮಾಧಾನದಿಂದ ಮಗನಿಗೆ ಆನಂದಮೋಹನ್ ನಾನಾ ರೀತಿಯಲ್ಲಿ ಉಪದೇಶ ಮಾಡಿದರು. ರೂಮಿನಲ್ಲಿ ಕೂಡಿಹಾಕಿ ಬಯ್ದು ಬುದ್ಧಿವಾದ ಹೇಳಿದರು. ಏನಾದರೂ ಮಗನ ಹುಚ್ಚು ಬಿಡಲಿಲ್ಲ. ಕೊನೆಗೆ ಆನಂದಮೋಹನರೇ ರಾಮಕೃಷ್ಣರ ಬಳಿ ಸೋತು ಬಂದರು. ತಾವೂ ಅವರ ಭಕ್ತರಾದರು. ಅಷ್ಟೊಂದು ಪ್ರೇಮಮಯ- ಶ್ರೀ ರಾಮಕೃಷ್ಣ ಪರಮಹಂಸರು.

ಮಾರ್ಗದರ್ಶನ

ದಕ್ಷಿಣೇಶ್ವರಕ್ಕೆ ಶ್ರೀ ರಾಮಕೃಷ್ಣರ ಶಿಷ್ಯರಾಗಿ ಒಬ್ಬೊಬ್ಬರಾಗಿ ಬರಲು ಆರಂಭಿಸಿದ್ದರು. ಮುಂದೆ ವಿವೇಕಾನಂದರಾದ ನರೇನ್, ಪ್ರೇಮಾನಂದರೆಂದು ಕರೆಯಿಸಿಕೊಂಡ ಬಾಬುರಾಮ್, ಅದ್ಭುತಾನಂದರೆಂದು ಕರೆಯಿಸಿಕೊಂಡ ಲಾಟು, ಹೀಗೆ ಒಬ್ಬೊಬ್ಬರಾಗಿ ಬರಲಾರಂಭಿಸಿದ ಮೇಲೆ ರಾಖಾಲನೂ ಅವರೊಂದಿಗೆ ಸೇರಿ ದೇವರು, ಅಧ್ಯಾತ್ಮ, ಧ್ಯಾನ, ಜಪ ಮುಂತಾದುವು ಗಳಲ್ಲಿ ನಿರತನಾದ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಶ್ರೀ ರಾಮಕೃಷ್ಣರ ಸೇವೆಯೇ ಅವನಿಗೆ ಪ್ರಿಯ. ಶ್ರೀರಾಮಕೃಷ್ಣ ರಾಖಾಲರ ಸಂಬಂಧವಂತೂ ಯಶೋದೆ ಕೃಷ್ಣನ ಸಂಬಂಧದಂತೆ. ರಾಮಕೃಷ್ಣರು ರಾಖಾಲನನ್ನು ಪ್ರೀತಿಸಿ ದಷ್ಟೇ, ತಪ್ಪಿದಾಗ ಖಂಡಿಸುತ್ತಲೂ ಇದ್ದರು.

ಒಂದು ದಿನ ರಾಖಾಲ ಅಲ್ಲಿಯೇ ಅಡ್ಡಾಡುತ್ತಿದ್ದಾಗ ರಸ್ತೆಯಲ್ಲಿ ಒಂದು ಕಾಸು ಬಿದ್ದಿದ್ದನ್ನು ಕಂಡ. ರಾಮಕೃಷ್ಣರು ತಮ್ಮ ಶಿಷ್ಯರೆಲ್ಲರಿಗೂ ಹಣಕ್ಕೆ ಆಸೆ ಪಡಬಾರದೆಂದು ಯಾವಾಗಲೂ ಹೇಳುತ್ತಿದ್ದರು. ಕಾಸನ್ನು ಕಂಡಕೂಡಲೇ ರಾಖಾಲನಿಗೆ ರಾಮಕೃಷ್ಣರ ಉಪದೇಶ ನೆನಪಿಗೆ ಬಂತು. ಆದರೂ, ಯಾರಿಗಾದರೂ ಅಗತ್ಯವಿರುವವರಿಗೆ ಕೊಟ್ಟರಾಯಿತೆಂದು ಆ ಕಾಸನ್ನು ತೆಗೆದಿಟ್ಟುಕೊಂಡ. ರಾಮಕೃಷ್ಣರ ಬಳಿ ಯಾವ ವಿಷಯವನ್ನೂ ಮುಚ್ಚಿಡದೆ ಇರುತ್ತಿದ್ದ ರಾಖಾಲ ಈ ವಿಷಯವನ್ನು ಹೇಳಿದ. ರಾಮಕೃಷ್ಣರು ಕೂಡಲೇ ಹೇಳಿದರು; ‘ಮೀನನ್ನು ತಿನ್ನದವ, ಮೀನನ್ನು ಮಾರುವ ಸ್ಥಳಕ್ಕೆ ಏಕೆ ಹೋಗಬೇಕು? ನಿನಗೆ ಆ ಕಾಸು ಅಗತ್ಯವಿಲ್ಲದಿರುವಾಗ ಅದನ್ನೇಕೆ ಮುಟ್ಟಿದೆ?’ ರಾಖಾಲನಿಗೆ ಅರ್ಥವಾಯಿತು.

ಮತ್ತೊಂದು ದಿನ. ರಾಖಾಲನ ಮುಖ ಏಕೋ ಕಳೆಗುಂದಿದೆ. ರಾಮಕೃಷ್ಣರು ರಾಖಾಲನನ್ನೇ ಕೇಳಿದರು, “ಮಗೂ, ನಿನ್ನ ಮುಖ ಕಪ್ಪಿಟ್ಟಿದೆ, ಎಂದಿನಂತಿಲ್ಲ. ನಿನ್ನ ಮುಖವನ್ನು ನಾನು ನೋಡಲಾಗುತ್ತಿಲ್ಲ. ನೀನು ಏನಾದರೂ ತಪ್ಪು ಮಾಡಿದ್ದೀಯಾ?’ ಎಂದರು. ರಾಖಾಲನಿಗೆ ಎಷ್ಟು ಯೋಚಿಸಿದರೂ ತಾನೇನು ತಪ್ಪು ಮಾಡಿದ್ದೇನೆಂದು ತಿಳಿಯಲಿಲ್ಲ. ಮತ್ತೆ ರಾಮಕೃಷ್ಣರೇ ರಾಖಾಲನನ್ನು ಕೆದಕಿ ಕೇಳಿದರು. ‘ಏನಾದರೂ ಸುಳ್ಳು ಮಾತನಾಡಿದ್ದೀಯಾ, ಯೋಚಿಸು’, ಆಗ ತಕ್ಷಣ ರಾಖಾಲನಿಗೆ ನೆನಪು ಬಂತು. ಅಂದು ಬೆಳಿಗ್ಗೆ ತನ್ನ ಗೆಳೆಯರೊಂದಿಗೆ ತಮಾಷೆ ಮಾಡುತ್ತಾ ಮಾತನಾಡುತ್ತಿದ್ದಾಗ ತಮಾಷೆಗೆ ಒಂದೆರಡು ಸುಳ್ಳುಗಳನ್ನು ಹೇಳಿದ್ದ ರಾಖಾಲ. ತತ್‌ಕ್ಷಣವೇ ತಾನು ತಮಾಷೆಗಾಗಿ ಸುಳ್ಳಾಡಿದ್ದನ್ನು ಒಪ್ಪಿಕೊಂಡ. ಆಗ ರಾಮಕೃಷ್ಣರು  ‘ನೋಡು ರಾಖಾಲ್; ಕಲಿಯುಗದಲ್ಲಿ ಸತ್ಯ ಹೇಳುವುದೇ ತಪಸ್ಸು, ಸತ್ಯಕ್ಕೆ ಅಂಟಿಕೊಂಡರೆ ಸಾಕ್ಷಾತ್ಕಾರವಾಗುತ್ತದೆ. ಸತ್ಯವಿಲ್ಲದಿದ್ದರೆ ನೀನು ಏನು ಸಾಧನೆ ಮಾಡಿದರೂ ಕಾಲಕ್ರಮದಲ್ಲಿ ನಷ್ಟವಾಗಿ ಹೋಗುತ್ತದೆ. ನಾನು ದೇವರ ಸಾಕ್ಷಾತ್ಕಾರ ಆದ ನಂತರ ಜ್ಞಾನ – ಅಜ್ಞಾನ, ಶುಚಿ-ಅಶುಚಿ, ಪಾಪ-ಪುಣ್ಯ, ಒಳ್ಳೆಯದು – ಕೆಟ್ಟದ್ದು ಎಲ್ಲವನ್ನೂ ದೇವಿಯ ಪದತಲದಲ್ಲಿ ಪುಷ್ಪಾಂಜಲಿಯಾಗಿ ಅರ್ಪಿಸಿದೆ, ದೇವಿಗೆ ಎಲ್ಲವನ್ನೂ ಕೊಟ್ಟರೂ ‘ಸತ್ಯ’ವನ್ನು ಮಾತ್ರ ದೇವಿಗೆ ಕೊಡಲಾಗಲಿಲ್ಲ. ತಮಾಷೆಗೂ ಸುಳ್ಳನ್ನು ಹೇಳಬೇಡ. ನಿನ್ನ ಸಾಧನೆಯೆಲ್ಲ ಸತ್ಯದ ಮೇಲೆ ನಿಂತಿದೆ’ ಎಂದು ಗದರಿಸಿದರು. ‘ಅನುಭವದ ಬೆಳಕಿನಲ್ಲಿ ನಡೆಯಬೇಕು’

ಇನ್ನೊಂದು ದಿನ, ರಾಖಾಲ, ಸ್ಮೈಲ್ ಎಂಬುವನು ಬರೆದಿರುವ ‘ಸ್ವಸಹಾಯ’ ಎಂಬ ಪುಸ್ತಕವನ್ನು ಓದುತ್ತಿದ್ದ. ಅದರಲ್ಲಿ ಲಾರ್ಡ್ ಎರ್ಸ್‌ಕಿನ್ ಎಂಬುವನ ವಿಷಯ. ರಾಮಕೃಷ್ಣರು ಮಹೇಂದ್ರನಾಥ ಗುಪ್ತರನ್ನು ಕೇಳಿದರು. “ರಾಖಾಲ್ ಓದುತ್ತಿರುವುದೇನು? ಅದರಲ್ಲಿ ಏನಿದೆ?” ಎಂದು. ಅದಕ್ಕುತ್ತರವಾಗಿ ಮಹೇಂದ್ರನಾಥಗುಪ್ತರು ಹೇಳಿದರು. ‘ಫಲದ ಆಸೆಯಿಲ್ಲದೇ ಕರ್ತವ್ಯ ಮಾಡುವ ಬಗ್ಗೆ ನಿಷ್ಕಾಮಕರ್ಮದ ಬಗ್ಗೆ  ಆ ಪುಸ್ತಕದಲ್ಲಿ ಬರೆದಿದೆ, ‘ಅದನ್ನು ಕೇಳಿದ ರಾಮಕೃಷ್ಣರು ಅಂದರು: ‘ಒಳ್ಳೆಯದು ಆದರೆ ಪೂರ್ಣಜ್ಞಾನದ ಲಕ್ಷಣವೇನು ಗೊತ್ತೇ? ಒಂದೇ ಒಂದು ಪುಸ್ತಕವೂ ಜೊತೆಯಲ್ಲಿ ಇಲ್ಲದಿರುವುದು. ಶುಕದೇವನಂತೆ ಅನುಭವದ ಬೆಳಕಿನಲ್ಲಿ ನಡೆಯುವುದು. ಹಾಲನ್ನು ಕುಡಿಯದೆ, ಹಾಲಿನ ಬಗ್ಗೆ ಪುಸ್ತಕಗಳನ್ನು ಓದಿದರೆ ಏನು ಪ್ರಯೋಜನ? ಸಾಧು ಸಾರವನ್ನು ಗ್ರಹಿಸಿ ಸಿಪ್ಪೆಯನ್ನು ಬಿಸಾಕಬೇಕು. ಪುಸ್ತಕಕ್ಕೆ ಅಂಟಿಕೊಂಡರೆ ಏನೂ ‘ಪ್ರಯೋಜನವಿಲ್ಲ’ ರಾಖಾಲನಿಗೆ ಅದೂ ಒಂದು ಪಾಠವಾಯಿತು. ಹೆಚ್ಚು ಹೆಚ್ಚು ಸಾಧನೆಯಲ್ಲಿ ತನ್ನ ಸಮಯ ಕಳೆಯುವುದಕ್ಕೆ ರಾಖಾಲನಿಗೆ ಆ ಘಟನೆ ಪ್ರೇರಣೆ ಯಾಯಿತು.

ತಾಯಿ, ತಂದೆ, ಗುರು

ವಿದ್ಯಾರ್ಥಿದೆಸೆಯಲ್ಲಿಯೇ ನರೇಂದ್ರ ಮತ್ತು ರಾಖಾಲ್ ಬ್ರಹ್ಮಸಮಾಜದ ಸದಸ್ಯರಾಗಿ ಪ್ರತಿಜ್ಞಾ ವಿಧಿ, ಕೈಗೊಂಡಿದ್ದರು. ಅದರಲ್ಲಿ ಒಂದು ನಿಬಂಧನೆ ಯೆಂದರೆ ದೇವರನ್ನು ನಿರಾಕಾರ ರೂಪದಲ್ಲಿ (ಎಂದರೆ, ಯಾವ ರೂಪವನ್ನೂ ತಾಳದ ದೇವರನ್ನು) ಪೂಜಿಸುವುದು. ಒಂದು ದಿನ ರಾಮಕೃಷ್ಣರು ರಾಖಾಲನೊಂದಿಗೆ ದಕ್ಷಿಣೇಶ್ವರದ ಕಾಳೀಮಂದಿರ, ಕೃಷ್ಣಮಂದಿರ, ದ್ವಾದಶ ಶಿವಮಂದಿರಗಳನ್ನು ಪ್ರದಕ್ಷಿಣೆ ಹಾಕಿಕೊಂಡು, ನಮಸ್ಕಾರ ಮಾಡುತ್ತಾ ಬರುತ್ತಿದ್ದಾರೆ. ರಾಖಾಲನೂ ರಾಮಕೃಷ್ಣರನ್ನು ಅನುಸರಿಸಿ ತಾನೂ ನಮಸ್ಕಾರ ಮಾಡುತ್ತಾ ಬರುತ್ತಿರುವಾಗ ಅಲ್ಲಿಗೆ ನರೇಂದ್ರ ಬಂದ. ರಾಖಾಲನ ಚರ್ಯೆಯನ್ನು ಕಂಡು ಬೆರಗಾದ. ನಂತರ ಅವನೊಬ್ಬನನ್ನೇ ಕರೆದೊಯ್ದು ಬ್ರಹ್ಮಸಮಾಜದಲ್ಲಿ  ಮಾಡಿದ್ದ ಪ್ರತಿಜ್ಞೆಯನ್ನು ನೆನಪಿಸಿ ರಾಖಾಲನನ್ನು ಬಯ್ದ. ರಾಖಾಲನಿಗೆ ತಾನು ಏನೋ ತಪ್ಪು ಮಾಡಿದ್ದೇನೆನ್ನುವ ಭಾವ. ನರೇಂದ್ರನೊಂದಿಗೆ ಮಾತನಾಡಲೂ ಸಂಕೋಚ. ರಾಮಕೃಷ್ಣರು ಒಂದೆರಡು ದಿನ ಇವರಿಬ್ಬರ ಚರ್ಯೆಯನ್ನು ಗಮನಿಸಿದರು. ರಾಖಾಲ ನರೇಂದ್ರನೊಂದಿಗೆ ಸಹಜವಾಗಿ ಬೆರೆಯುತ್ತಿಲ್ಲದಿರುವುದನ್ನು ಗಮನಿಸಿದರು. ವಿಷಯ ತಿಳಿಯಿತು; ನರೇಂದ್ರನೊಂದಿಗೆ ಹೇಳಿದರು. ‘ನರೇನ್, ಎಲ್ಲೆಲ್ಲಿಯೂ ದೇವರಿದ್ದಾನೆ ಎಂದು ತಾನೇ ನಿನ್ನ ಅಭಿಮತ. ಹಾಗಾದರೆ ಈ ಮೂರ್ತಿಗಳಲ್ಲಿ, ವಿಗ್ರಹಗಳಲ್ಲಿಯೂ ದೇವರಿದ್ದಾನೆ ಎಂಬುದು ಸತ್ಯ. ಆದ್ದರಿಂದ ರಾಖಾಲ ಆ ವಿಗ್ರಹಗಳಿಗೆ ನಮಸ್ಕಾರ ಮಾಡಿದರೆ ಅದರಲ್ಲಿ ತಪ್ಪೇನಿದೆ? ಅಷ್ಟೇ ಅಲ್ಲದೆ, ಪ್ರತಿಯೊಬ್ಬರು ಸಾಧನೆಯ ಒಂದೊಂದು ಹಂತದಲ್ಲಿದ್ದಾರೆ. ಎಲ್ಲರನ್ನೂ ನಿನ್ನ ನೆಲೆಯಲ್ಲಿ ನಿಂತು ಅಳೆಯಬೇಡ. ರಾಖಾಲನಿಗೆ ಸಾಕಾರದಲ್ಲಿ ನಂಬಿಕೆ. ನಿನಗೆ ನಿರಾಕಾರದಲ್ಲಿ ವಿಶ್ವಾಸ. ನಿಮ್ಮ ನಿಮ್ಮ ನಂಬಿಕೆ ನಿಮಗಿರಲಿ, ಇನ್ನೊಬ್ಬರ ನಂಬಿಕೆಗಳನ್ನು ಹಾಳುಮಾಡಬೇಡಿ’, ಅಂದಿನಿಂದ ಮತ್ತೆ ರಾಖಾಲ-ನರೇಂದ್ರ ಸಹಜವಾಗಿ ಬೆರೆಯಲಾರಂಭಿಸಿದರು.

ಆಧ್ಯಾತ್ಮ ಸಾಧನೆಯಲ್ಲಿ ರಾಖಾಲನಿಗೆ ತಾಯಿಯಾಗಿ, ತಂದೆಯಾಗಿ, ಗುರುವಾಗಿ, ಗೆಳೆಯನಾಗಿ ಶ್ರೀ ರಾಮಕೃಷ್ಣರು ಅವನನ್ನು ಬೆಳೆಸಿದರು. ಪ್ರತಿಯೊಂದು ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸಿ ರಾಖಾಲನನ್ನು ತಿದ್ದಿದರು. ಪ್ರತಿದಿನ ದಕ್ಷಿಣೇಶ್ವರದಲ್ಲಿ ರಾಮಕೃಷ್ಣರ ದಿವ್ಯಾಶ್ರಯದಲ್ಲಿ ನಡೆಯುತ್ತಿದ್ದ ಶಿಕ್ಷಣ, ತತ್ಸಂಬಂಧವಾದ ಘಟನೆಗಳು ಎಷ್ಟೋ!

ರಾಖಾಲ ಮೇಲೆ ಎಷ್ಟೇ ಆಧ್ಯಾತ್ಮ ಪಿಪಾಸುವಾಗಿ ಕಂಡರೂ ಮನಸ್ಸಿನ ಯಾವುದೋ ಮೂಲೆಯಲ್ಲಿ ಅವನಿಗೆ ಸ್ವಲ್ಪ ಸುಖದ ಆಸೆ ಇದೆ ಎಂಬುದನ್ನು ತಮ್ಮ ಒಳಗಣ್ಣಿನಿಂದ ರಾಮಕೃಷ್ಣರು ಕಂಡರು. ರಾಖಾಲ ದಕ್ಷಿಣೇಶ್ವರದಲ್ಲಿಯೇ ಶಾಶ್ವತವಾಗಿ ವಾಸಿಸಲಾರಂಭಿಸಿದರೂ ಒಂದೊಂದು ದಿನ ತನ್ನ ಮನೆಗೆ ಹೋಗಿ ಬರುವಂತೆ ಆಜ್ಞಾಪಿಸುತ್ತಿದ್ದರು. ರಾಖಾಲನ ಬಗ್ಗೆ ಶ್ಯಾಮಾಸುಂದರಿ ದೇವಿಗೆ ಯಾರಾದರೂ ಹೇಳಿದರೆ ‘ನನ್ನ ಅಳಿಯ ಸಾಧುವಾದರೆ ನನ್ನ ವಂಶಕ್ಕೆ ಒಳ್ಳೆಯದು’ ಎಂದು ಅವರೇ  ಬೇರೆಯವರ ಬಾಯಿ ಮುಚ್ಚಿಸುತ್ತಿದ್ದರು. ರಾಮಕೃಷ್ಣರ ಆಜ್ಞೆಯಿಂದ ರಾಖಾಲ ಆಗಾಗ ಮನೆಗೆ ಹೋಗಿ ಹೆಂಡತಿ ವಿಶ್ವೇಶ್ವರಿಯ ಜೊತೆಗೆ ಕಾಲಕಳೆದು ಬರುತ್ತಿದ್ದ, ರಾಮಕೃಷ್ಣಪರಮಹಂಸರೂ ಸಹ ಒಂದು ದಿನ ವಿಶ್ವೇಶ್ವರಿಯನ್ನು ದಕ್ಷಿಣೇಶ್ವರಕ್ಕೆ ಕರೆಯಿಸಿಕೊಂಡು ಆಮೂಲಾಗ್ರವಾಗಿ ಪರೀಕ್ಷಿಸಿದರು. “ಪರವಾಗಿಲ್ಲ, ಈ ಹುಡುಗಿಯದು ದೇವೀಶಕ್ತಿ” ಎಂದುಕೊಂಡು ತಮ್ಮ ಪತ್ನಿ ಶಾರದಾಮಣಿ ದೇವಿಗೆ ಹೇಳಿಕಳುಹಿಸಿದರು; ‘ಸೊಸೆ ಬಂದಿದ್ದಾಳೆ, ಮೊದಲಬಾರಿಗೆ ದುಡ್ಡು ಕೊಟ್ಟು ಸೊಸೆಯ  ಮುಖ ನೋಡು’ ಎಂದು.

ರಾಖಾಲನಲ್ಲಿದ್ದ ಸುಖದ ಆಸೆ ತೀರಿಬಂದಿತ್ತು. ಸಾಧನೆ ತೀವ್ರವಾಗುತ್ತಿತ್ತು. ರಾಖಾಲನಿಗೆ ಯಾವುದಾದರೂ ಸರ್ಕಾರಿ ಕೆಲಸ ಕೊಡಿಸಿ ಪ್ರಪಂಚದ ಕಡೆ ಮನಸ್ಸನ್ನು ತಿರುಗಿಸಬೇಕೆಂಬ ಆಕಾಂಕ್ಷೆ ಕೆಲವರಲ್ಲಿ ಇರುವುದು ಅವರಿಗೆ ತಿಳಿದು ಅದನ್ನು ರಾಮಕೃಷ್ಣರಿಗೂ ಹೇಳಿದ. ‘ದೇವರಿಗಾಗಿ ಗಂಗೆಯಲ್ಲಿ ಮುಳುಗಿ ಸತ್ತ ಎಂದರೆ ಕೇಳಿಯೇನು, ಆದರೆ ಬೇರೆಯವರ ದಾಸತ್ವವನ್ನು ವಹಿಸಿಕೊಂಡು, ಹಣಕ್ಕಾಗಿ ಕೆಲಸ ಮಾಡುವ ಮಾತು ನಾನು ಕೇಳದಂತಾಗಲಿ’ ಎಂದರು ರಾಮಕೃಷ್ಣರು. ರಾಖಾಲನ ಆಧ್ಯಾತ್ಮ ಬದುಕು ಸುಗಮವಾಗಲೆಂದೋ ಏನೋ ರಾಖಾಲನ ಹೆಂಡತಿ ವಿಶ್ವೇಶ್ವರಿ, ಒಬ್ಬ ಮಗನೂ ಇಹಲೋಕವನ್ನು ತ್ಯಜಿಸಿದರು. ಅಂದಿನಿಂದ ದಕ್ಷಿಣೇಶ್ವರ ರಾಖಾಲನ ಮನೆಯಾಯಿತು.

‘ಸಾಧನೆ ಮಾಡಬೇಕು’

ಸಾಧನೆ, ಭಜನೆ, ಜಪ, ಧ್ಯಾನ, ವ್ಯಾಸಂಗ, ರಾಮಕೃಷ್ಣರ ಸೇವೆಯೇ ರಾಖಾಲನ ಬದುಕಾಯಿತು. ಪ್ರತಿದಿನವೂ ಯಾರಾದರೊಬ್ಬರು ರಾಮಕೃಷ್ಣರ ಬಳಿ ಬಂದು ತಮ್ಮ ಆಧ್ಯಾತ್ಮ ಸಾಧನೆಯಲ್ಲಿ ಕಂಡ ವಿಶಿಷ್ಟಅನುಭವಗಳನ್ನು ಹೇಳಿ ಅವರಿಂದ ಸಮಾಧಾನ ಪಡೆದು ಹೋಗುತ್ತಿದ್ದರು. ಆದರೆ ರಾಖಾಲ ಧ್ಯಾನಕ್ಕೆ ಕುಳಿತರೆ ಏನೋ ಬರಡು-ಬರಡು, ಶುಷ್ಕತೆ, ಧ್ಯಾನದಲ್ಲಿ, ಜಪದಲ್ಲಿ ಆಸಕ್ತಿ ಇಲ್ಲದಂತೆ ಕಾಣುತ್ತಿತ್ತು.

ರಾಖಾಲ ಒಂದು ದಿನ ರಾಮಕೃಷ್ಣರಲ್ಲಿ ಇದನ್ನು ವಿನಂತಿಸಿಕೊಂಡ. ಅದಕ್ಕೆ ಅವರೆಂದರು: ‘ಏನೋ ನಿಯಮದಂತೆ ಒಂದಿಷ್ಟು  ಜಪ ಮಾಡಿದರೆ, ಈ ರೀತಿಯ ದರ್ಶನವಾಗುವುದುಂಟು. ಅದರ ಬಗ್ಗೆ ಹೆಚ್ಚು ಯೋಚಿಸಬೇಡ, ನಿಯಮದಂತೆ ಜಪ, ಧ್ಯಾನ ಮಾಡು. ಎಲ್ಲವೂ ಸರಿಯಾಗುವುದ’. ಒಂದೆರಡು ದಿನಗಳ ನಂತರ ನೋಡುತ್ತಾರೆ. ರಾಖಾಲ ಅಡ್ಡಾಡುತ್ತಿದ್ದಾನೆ. ‘ಇದೇನಿದು ರಾಖಾಲ್? ನಿಯಮದಂತೆ ಜಪ ಮಾಡು ಎಂದರೆ ಅಡ್ಡಾಡುತ್ತಿದ್ದೀಯಲ್ಲಾ, ನಿನಗೇನಾಗಿದೆ?’ ಎಂದರು ರಾಮಕೃಷ್ಣರು. ಅದಕ್ಕುತ್ತರವಾಗಿ ರಾಖಾಲ ನುಡಿದ. “ಎಲ್ಲ ಸಮಯಗಳಲ್ಲಿಯೂ ಧ್ಯಾನ, ಜಪ ಬೇಕು ಎನಿಸುವುದಿಲ್ಲ. ಮನಸ್ಸು ಇಷ್ಟಪಡುವುದಿಲ್ಲ, ಭಾವ ಉಂಟಾಗುವುದಿಲ್ಲ. ಆದ್ದರಿಂದ ನಿಯಮದಂತೆ ಕುಳಿತುಕೊಳ್ಳಲು ಸಾಧ್ಯ ವಾಗುತ್ತಿಲ್ಲ’. ಅದನ್ನು ಕೇಳಿದ ರಾಮಕೃಷ್ಣರು ‘ಇದೇನೋ ಇದು! ಸಾಧನೆ ಮಾಡಬೇಕೆಂದರೆ ಅಚಲವಾದ ನಿರ್ಧಾರಬೇಕು. ನಿಯಮದಂತೆ ಸಾಧನೆ ಮಾಡಬೇಕು. ನಿಜವಾದ ಕೃಷಿಕನಾದವನು, ಯಾರೋ ಒಬ್ಬರು ಈ ವರ್ಷ ಅವನ ಜಮೀನಿನಲ್ಲಿ ಫಸಲಾಗುವುದಿಲ್ಲವೆಂದು ಹೇಳಿದ ಮಾತ್ರಕ್ಕೆ ವ್ಯವಸಾಯವನ್ನು ಬಿಡುತ್ತಾನೇನು? ಹಾಗೇ ವಿಶ್ವಾಸದಿಂದ, ನಿರ್ಧಾರದಿಂದ ಸಾಧನೆ ಮಾಡಬೇಕು. ಹೀಗೆ ಅಡ್ಡಾಡುತ್ತಿರಬೇಡ’ ಎಂದರು. ರಾಖಾಲನಿಗೆ ಈ ಉಪದೇಶ ಬಾಣದಂತೆ ಹೃದಯವನ್ನು ಪ್ರವೇಶಿಸಿತು. ಸಾಧನೆ ಇನ್ನು ತೀವ್ರವಾಯಿತು.

ಆದರೂ ಬೇರೆ ಸಾಧಕರಿಗೆ ಆಗುವ ಅನುಭವಗಳಾಗಲೀ, ದರ್ಶನಗಳಾಗಲೀ ಇಲ್ಲ. ರಾಖಾಲ ವ್ಯಾಕುಲನಾದ, ಮತ್ತೆ ಮತ್ತೆ ಶ್ರೀ ರಾಮಕೃಷ್ಣರ ಬಳಿ ತನ್ನ ಹೃದಯವನ್ನು ತೋಡಿಕೊಂಡ.

ಇಷ್ಟದೇವತೆ ಬಾಳನ್ನು ತುಂಬಿದಾಗ

ಒಂದು  ದಿನ ಎಂದಿನಂತೆ ರಾಖಾಲ ಶ್ರೀ ಭವತಾರಿಣಿಯ ಮಂದಿರದಲ್ಲಿ ಗಂಭೀರ ಧ್ಯಾನದಲ್ಲಿ ತನ್ಮಯವಾಗಿ ಕುಳಿತಿದ್ದಾನೆ. ಆ ಸಮಯಕ್ಕೆ ಸರಿಯಾಗಿ ಭಾವಾವಿಷ್ಟರಾದ ಶ್ರೀ ರಾಮಕೃಷ್ಣರು  ಅಲ್ಲಿಗೆ ಬಂದು ‘ರಾಖಾಲ್ ನೋಡು, ನಿನ್ನ ದೇವತೆಯನ್ನು; ತಗೋ ನಿನ್ನ ಇಷ್ಟಮಂತ್ರವನ್ನು!’ ಎನ್ನುತ್ತಾ ಇಷ್ಟಮಂತ್ರವನ್ನು ನುಡಿದು ಇಷ್ಟದೇವತೆಯತ್ತ ಬೆರಳು ತೋರಿಸಿದರು. ಹಾಗನ್ನುತ್ತಿದ್ದಂತೆಯೇ ರಾಖಾಲನಿಗೆ ಪ್ರಪಂಚ ಮಾಯ ವಾಗಿ ಎಲ್ಲೆಲ್ಲೂ ಇಷ್ಟದೇವತೆಯೇ ಕಾಣಿಸಿಕೊಳ್ಳ ಲಾರಂಭವಾಯಿತು. ಗುರು ಕರುಣಿಸಿದ ಮಂತ್ರ ಮನಸ್ಸು ಹೃದಯಗಳಲ್ಲಿ ನೆಲೆಯೂರಿತು. ಶುಷ್ಕವೂ, ಕಠಿಣವೂ ಆದ ಜಪ, ಧ್ಯಾನ ಆನಂದದಿಂದ ತುಂಬಿತು. ಭಕ್ತಿ ಸಿಂಚನವಾಯಿತು. ರಸಪರಿಪ್ಲೂತವಾಯಿತು.

ಗುರುಸೇವೆಗಾಗಿ ಬಂದ ರಾಖಾಲನನ್ನು ಗುರುವೇ ಉಪಚರಿಸುವಷ್ಟು ಮಟ್ಟಿಗೆ ರಾಖಾಲ ಧ್ಯಾನಾಸಕ್ತನಾದ. ಹೃದಯದಲ್ಲಿ ಇಷ್ಟಮಂತ್ರ ಜಪಿಸುತ್ತಿದ್ದಂತೆ ಕಣ್ಣುಗಳು ತೇವವಾಗುತ್ತಿದ್ದವು. ಮೈ ರೋಮಾಂಚನಗೊಳ್ಳುತ್ತಿತ್ತು. ಮುಖ ಕಮಲದಂತೆ ಅರಳುತ್ತಿತ್ತು. ಯಾವುದೋ ದಿವ್ಯಾನಂದದಲ್ಲಿ ಮನಸ್ಸು ಮಗ್ನವಾಗಿ ಸುತ್ತಮುತ್ತಿನ ಆಗುಹೋಗುಗಳನ್ನು ಮರೆಯುತ್ತಿತ್ತು.

ಶ್ರೀ ರಾಮಕೃಷ್ಣರು ರಾಖಾಲನನ್ನು ನೆರಳಿನಂತೆ ನೋಡಿಕೊಳ್ಳುತ್ತಿದ್ದರು. ಅವನ ಮನಸ್ಸಿನಲ್ಲಿ ಸಣ್ಣ ಪುಟ್ಟ ದೋಷಗಳು, ಕೀಳು ಆಸೆಗಳು ಮುಂತಾದವು ಬಂದರೆ, ಕೂಡಲೇ ಮೊಳಕೆಯಲ್ಲಿಯೇ ತಮ್ಮ ತಪಸ್ಸಿನ ಶಕ್ತಿಯಿಂದ ಚಿವುಟಿಹಾಕುತ್ತಿದ್ದರು.

ಬೃಂದಾವನದಲ್ಲಿ

ರಾಖಾಲ ನಿಜವಾಗಿಯೂ ಶ್ರೀ ರಾಮಕೃಷ್ಣರ ಮಾನಸಪುತ್ರನಾದ. ಆದರೇನು! ಮಕರಂದದತ್ತ ದುಂಬಿಗಳು ಬರುವಂತೆ  ಶ್ರೀ ರಾಮಕೃಷ್ಣರನ್ನು ಹುಡುಕಿ ಕೊಂಡು ಆಧ್ಯಾತ್ಮ ಪಿಪಾಸುಗಳು ಬರ ಲಾರಂಭಿಸಿದರು. ಆಧ್ಯಾತ್ಮದ ದಿವ್ಯ ತೇಜಸ್ಸನ್ನು ಹೃದಯದಲ್ಲಿ ತುಂಬಿಟ್ಟು ಕೊಂಡು ಅಭಿವ್ಯಕ್ತಿಗಾಗಿ ಕಾಯುತ್ತಿದ್ದ ಹುಡುಗರನ್ನು ಕಂಡರೆ ರಾಮಕೃಷ್ಣರಿಗೆ ಪರಮ ಪ್ರೀತಿ, ಅವರಿಗಾಗಿ ಏನು ಬೇಕಾದರೂ ಮಾಡಿಯಾರು! ನರೇಂದ್ರ, ಬಾಬೂರಾಮ್, ಶಶಿ, ಶರತ್, ಲಾಟು, ಹರಿ ಎಲ್ಲರೂ ಒಂದೊಂದು ಬೆಂಕಿಯ ಉಂಡೆ. ಬೆಂಕಿಯ ಪ್ರಕಾಶವನ್ನು ತೋರುವುದಕ್ಕೆ, ಉಂಡೆಯ ಮೇಲೆ ಮುಚ್ಚಿರುವ ಬೂದಿಯನ್ನು ತೆಗೆಯುವುದಕ್ಕೆ ಶ್ರೀ ರಾಮಕೃಷ್ಣರು ಬೀಸಣಿಗೆಯಾಗಿ ನಿಂತರು. ಇವರೆಲ್ಲರತ್ತ ರಾಮಕೃಷ್ಣರು ಗಮನ ಹರಿಸುವುದನ್ನು ಕಂಡು ರಾಖಾಲನಿಗೆ ಮನಸ್ಸಿನೊಳಗೆ ಅಸೂಯೆ. ರಾಖಾಲನ ಮನಸ್ಸನ್ನು ಕಂಡ ರಾಮಕೃಷ್ಣರು ಭವತಾರಿಣಿಯಲ್ಲಿ ಪ್ರಾರ್ಥಿಸ ಲಾರಂಭಿಸಿದರು. ಇಪ್ಪತ್ತೊಂದು ವರ್ಷದ ರಾಖಾಲ, ದಷ್ಟಪುಷ್ಟನಾಗಿ ಮೈತುಂಬಿಕೊಂಡು ಓಡಾಡುತ್ತಿದ್ದ ಯುವಕ ರಾಖಾಲನಿಗೆ ಜ್ವರ ಅಂಟಿಕೊಂಡಿತು.ಎಷ್ಟು ಔಷಧೋಪಚಾರ ಮಾಡಿದರೂ ಗುಣವಾಗಲಿಲ್ಲ. ಕಲ್ಕತ್ತೆಯಲ್ಲಿ ತಂದೆಯ ಮನೆಯಲ್ಲಿಯೂ ಉಪಚಾರ ಮಾಡಿದ್ದು ಪ್ರಯೋಜನ ವಾಗಲಿಲ್ಲ. ವೈದ್ಯರು ಹವಾ ಬದಲಾವಣೆಯಾಗ ಬೇಕೆಂದರು.

ಆ ಹೊತ್ತಿಗೆ ಸರಿಯಾಗಿ ರಾಮಕೃಷ್ಣರ ಭಕ್ತರಲ್ಲಿ ಒಬ್ಬರಾದ ಬಲರಾಮ ಬಸು ಎಂಬುವರು ಬೃಂದಾವನಕ್ಕೆ ಹೊರಟಿದ್ದರು. ಅವರು ರಾಖಾಲನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಒಪ್ಪಿದರು. ಹೀಗಾಗಿ ೧೮೮೪ನೇ ಸೆಪ್ಟೆಂಬರ್ ತಿಂಗಳಲ್ಲಿ ರಾಖಾಲ ಬೃಂದಾವನಕ್ಕೆ ತೆರಳಿದ. ರಾಮಕೃಷ್ಣರಿಗೆ ಹೆದರಿಕೆ, ರಾಖಾಲ ಬೃಂದಾವನದಲ್ಲಿಯೇ ಎಲ್ಲಿ ದೇಹವನ್ನು ತ್ಯಜಿಸುತ್ತಾನೋ ಎಂದು. ದೇವಿಯನ್ನು ಪ್ರಾರ್ಥಿಸಿದರು. ರಾಖಾಲ ಬೃಂದಾವನದಲ್ಲಿಯೂ ತೀವ್ರ ಸಾಧನೆ ಮಾಡ ಲಾರಂಭಿಸಿದ. ಅವನಲ್ಲಿದ್ದ ಕಿಂಚಿತ್ ಅಸೂಯೆ, ದ್ವೇಷ ಮುಂತಾದ ಸಣ್ಣ ದೋಷಗಳು ವಿಶ್ವಪ್ರಿಯನಾದ ಶ್ರೀ ಕೃಷ್ಣನ ಬೃಂದಾವನದಲ್ಲಿ ಕರಗಿಹೋದವು. ಮೂರು ತಿಂಗಳಾದ ಮೇಲೆ ನವೆಂಬರ್ ೧೮೮೪ರಲ್ಲಿ ದಕ್ಷಿಣೇಶ್ವರಕ್ಕೆ ಹಿಂದಿರುಗಿದ ರಾಖಾಲನನ್ನು ಕಂಡು ರಾಮಕೃಷ್ಣರು ಆಶ್ಚರ್ಯಚಕಿತರಾದರು. ‘ಎಂತಹ ಪರಿವರ್ತನೆ’ ಎಂದರು. ರಾಖಾಲನೆಂದ: ‘ಚಂದಮಾಮ ಎಲ್ಲರಿಗೂ ಮಾಮ ನಲ್ಲವೇ, ಹಾಗೆ ನೀವು ಎಲ್ಲರಿಗೂ ತಂದೆ, ಆಧ್ಯಾತ್ಮಿಕ ತಂದೆ.’

“ಸಣ್ಣ ಸಿದ್ಧಿಗಳಿಗೆ ಸೋಲಬೇಡ’

ರಾಖಾಲ ಧ್ಯಾನದಲ್ಲಿ ಮಗ್ನನಾದ ಮೇಲೆ ಅವನಿಗೆ ಒಂದೊಂದಾಗಿ ಆಧ್ಮಾತ್ಮಿಕ ಅನುಭವಗಳು ಆಗುತ್ತಿದ್ದವು. ಗಾಜಿನ ಲೋಟದಲ್ಲಿಟ್ಟ ವಸ್ತು ಹೇಗೆ ಹೊರಕ್ಕೆ ಕಾಣಿಸುವುದೋ ಹಾಗೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಆಗುತ್ತಿದ್ದ ಯೋಚನೆಗಳೆಲ್ಲವನ್ನೂ ಇವನು ತಿಳಿಯುತ್ತಿದ್ದ.

ಹೀಗಾಗಿ ರಾಮಕೃಷ್ಣರ ಬಳಿಗೆ ಬರುತ್ತಿದ್ದವರನ್ನು ಪರೀಕ್ಷಿಸಿ, ನಿಜವಾದ ಸಾಧಕರನ್ನು ಮಾತ್ರ ರಾಮಕೃಷ್ಣರ ಬಳಿ ಮಾತನಾಡಲು ಬಿಡುತ್ತಿದ್ದ. ರಾಮಕೃಷ್ಣರಿಗೆ ಇದು ತಿಳಿಯಿತು. ರಾಖಾಲನನ್ನು ಕರೆದರು. ‘ರಾಖಾಲ್, ನಾನು ತಾಯಿಯನ್ನು ಪ್ರಾರ್ಥಿಸುವಾಗಲೆಲ್ಲ ಅವಳನ್ನು ಬೇಡುತ್ತಿದ್ದೆ: ‘ಅಮ್ಮಾ, ನನಗೆ ಅಷ್ಟಸಿದ್ಧಿಗಳು ಬೇಡ ಲೋಕಮಾನ್ಯತೆ ಬೇಡ! ನನಗೆ ಬೇಕಿರುವುದು ಕೇವಲ ನಿನ್ನ ಪಾದಪದ್ಮಗಳಲ್ಲಿ ಶ್ರದ್ಧೆ, ಮತ್ತು ಭಕ್ತಿ.’ ತಾಯಿ ನನಗೆ ಅದನ್ನು ಕೊಟ್ಟಳು, ನೀನು ಸಾಧನೆ ಮಾಡುತ್ತಿರುವುದು ಭಗವಂತನ ಸಾಕ್ಷಾತ್ಕಾರಕ್ಕಾಗಿ. ಇದೇನಿದು, ನಿನ್ನ ಹೀನ ಬುದ್ಧಿ? ಇತರರ ಮನಸ್ಸಿನಲ್ಲಿರು ವುದನ್ನು ತಿಳಿಯುವುದು. ಇಂತಹ ಚಮತ್ಕಾರಗಳ ಕಡೆ ನಿನ್ನ ಮನಸ್ಸನ್ನು ಕೊಟ್ಟರೆ ಭಗವಂತನ ದರ್ಶನ ಆಗುವುದಿಲ್ಲ. ಛೀ, ಛೀ, ಇನ್ನು ಮುಂದೆ ಈ ರೀತಿ ಮಾಡಬೇಡ’ ಎಂದು ಎಚ್ಚರಿಕೆ ನೀಡಿದರು. ರಾಖಾಲ ಮುಂದೆ ಈ ಬಗ್ಗೆ ಎಚ್ಚರಿಕೆ ವಹಿಸಿದ. ‘ಮನುಷ್ಯನ ಬದುಕು ಭಗವಂತನ ಸಾಕ್ಷಾತ್ಕಾರಕ್ಕಾಗಿ ಮಾತ್ರ’ ಎಂಬುದನ್ನು ಕಂಡು ಕೊಂಡ.

ಶ್ರೀ ರಾಮಕೃಷ್ಣರು ಇನ್ನಿಲ್ಲ

ಶ್ರೀ ರಾಮಕೃಷ್ಣರಿಗೆ ಗಂಟಲುನೋವು ಕಾಣಿಸಿಕೊಂಡಿತು. ಅವರ ಸುತ್ತಲಿದ್ದ ಎಲ್ಲ ಯುವಕರೂ ಅವರನ್ನು ಉಪಚರಿಸಲಾರಂಭಿಸಿದರು. ಆದರೆ ಸಾಧನೆಯಲ್ಲಿ ಜರ್ಝರಿತವಾಗಿದ್ದ ಶ್ರೀ ರಾಮಕೃಷ್ಣರ ದೇಹ ದುರ್ಬಲವಾಗುತ್ತಾ ಬಂದಿತ್ತು. ನೋವು ವ್ರಣವಾಯಿತು. ಅವರ ಶಿಷ್ಯರ ಆಧ್ಯಾತ್ಮ ಸಾಧನೆ ಒಂದು ಹಂತಕ್ಕೆ ಬಂದಿತ್ತು. ಇನ್ನು ಭಯವಿರಲಿಲ್ಲ. ಎಂತಹ ನೋವಿನಲ್ಲೂ ಅವರಿಗೆ ಶಿಷ್ಯರ ಆಧ್ಯಾತ್ಮ ಬದುಕಿನತ್ತ ಗಮನ. ಅದು ಪೂರ್ಣಗೊಂಡಿತ್ತು. ಹೀಗಾಗಿ ೧೮೮೬ನೇ ಆಗಸ್ಟ್ ೧೫ರಂದು ಶ್ರೀ ರಾಮಕೃಷ್ಣರು ತಮ್ಮ ದೇಹವನ್ನು ತ್ಯಜಿಸಿದರು.

ತಂದೆಯನ್ನು ಕಳೆದುಕೊಂಡ ಮಾನಸ ಪುತ್ರ ರಾಖಾಲ ದುಃಖದಿಂದ ತುಂಬಿದ. ರಾಮಕೃಷ್ಣರ ಭಕ್ತ ಬಲರಾಮ ಬಸುವಿನ ಮನೆಯಲ್ಲಿ ಉಳಿದ. ರಾಖಾಲರನ್ನು ಚೆನ್ನಾಗಿ ನೋಡಿಕೊಳ್ಳುವಂತೆ, ಅವನ ಮೇಲೆ ವಿಶೇಷ ದೃಷ್ಟಿ ಇಡುವಂತೆ ರಾಮಕೃಷ್ಣರು ಬಲರಾಮ ಬಸುವಿಗೆ ಹೇಳಿದ್ದರು. ಅನಂತರ ರಾಮಕೃಷ್ಣರ ಮತ್ತೋರ್ವ ಶಿಷ್ಯರ ಸಹಾಯದಿಂದ ವರಾಹ ನಗರವೆಂಬಲ್ಲಿ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡು, ರಾಖಾಲ, ತಾರಕ, ಹರಿ, ಶಶಿ, ಶರತ್ ಮುಂತಾದ ಯುವಕರೆಲ್ಲರೂ ಸಾಧನೆ, ಭಜನೆಯಲ್ಲಿ ತೊಡಗಿದ್ದರು. ರಾಖಾಲನ ಬಗ್ಗೆ ರಾಮಕೃಷ್ಣರಿಗೆ ವಿಶೇಷ ಪ್ರೇಮವಿರುವುದನ್ನು ಅವರ ಶಿಷ್ಯರೆಲ್ಲರೂ ಕಂಡುಕೊಂಡಿದ್ದರು. ರಾಮಕೃಷ್ಣರ ಪುತ್ರರೆಂದೇ ಅವರಿಗೆ ತಮ್ಮ ವಯಸ್ಸಿನವರಾದರೂ ಬಹಳ ಗೌರವ ನೀಡುತ್ತಿದ್ದರು. ‘ರಾಖಾಲನಿಗೆ ಒಂದು ರಾಜ್ಯವನ್ನೇ ಆಳುವ ಸಾಮರ್ಥ್ಯವಿದೆ; ಬೇಕೆಂದರೆ ಅವನು ಸಾಮ್ರಾಜ್ಯದ ಚಕ್ರವರ್ತಿಯಾಗಬಲ್ಲ’ ಎಂದಿದ್ದರು ರಾಮಕೃಷ್ಣರು. ಇದರಿಂದಾಗಿ ನರೇಂದ್ರ ಮೊದಲ್ಗೊಂಡು ಎಲ್ಲರೂ ರಾಖಾಲನನ್ನು ‘ರಾಜಾ’ ಎಂದೇ ಕರೆಯುತ್ತಿದ್ದರು. ರಾಮಕೃಷ್ಣರಿಗೂ ಅದು ಬಹಳ ಇಷ್ಟವಾಗಿತ್ತು.

ವರಾಹ ನಗರ ಮಠದಲ್ಲಿ ರಾಖಾಲನ ನೇತೃತ್ವದಲ್ಲಿ ಮನೆ ಬಿಟ್ಟು ಬಂದ ಹುಡುಗರೆಲ್ಲರೂ ಸೇರಿ ಧ್ಯಾನ, ಜಪ ಮಾಡಲಾರಂಭಿಸಿದರು. ಎಲ್ಲರೂ ೧೯ರಿಂದ ೨೪ ವರ್ಷ ವಯಸ್ಸಿನ  ಯುವಕರು. ತಮ್ಮ ಮುಂದೆ ಶ್ರೀರಾಮಕೃಷ್ಣರ ಆದರ್ಶ. ರಾಮಕೃಷ್ಣರು ತಮಗೆ, ತಮ್ಮ ಪೀಳಿಗೆಗೆ ಬಿಟ್ಟುಹೋದ ಅಪಾರ ಆಧ್ಯಾತ್ಮಿಕ ಸಂಪತ್ತು ಹಿಮಾಲಯದಷ್ಟು ತಪಸ್ಸಿನ ರಾಶಿ. ಮತ್ತೇನು ಬೇಕು?

‘ಸ್ವಾಮಿ ಬ್ರಹ್ಮಾನಂದ’

ಡಿಸೆಂಬರ್ ತಿಂಗಳು. ಎಲ್ಲರೂ ಬಾಬೂರಾಮನ ಊರಾದ ಆಂಟಿಪುರಕ್ಕೆ ಬಂದರು. ಚಳಿಗಾಲ. ರಾತ್ರಿಯ ಹೊತ್ತು. ಮಧ್ಯೆ ಬೆಂಕಿ ಹಾಕಿದರು. ನರೇಂದ್ರ ‘ಕ್ರಿಸ್ತಾನುಸರಣ’ ಎಂಬ ಪುಸ್ತಕವನ್ನು ಓದಿ ವ್ಯಾಖ್ಯಾನ ಮಾಡಲಾರಂಭಿಸಿದ. ನಡುರಾತ್ರಿಯಾಯಿತು. ತ್ಯಾಗ, ವೈರಾಗ್ಯ, ಭಕ್ತಿ, ಪ್ರೇಮ, ಪಾವಿತ್ರ್ಯ ಇವುಗಳ ಬಗ್ಗೆ ನರೇಂದ್ರ ಮಾತನಾಡಿದ. ಅಗ್ನಿಯ ಮುಂದೆ ಕುಳಿತಿದ್ದ ಯುವಕರೆಲ್ಲರಿಗೂ ಸ್ಫೂರ್ತಿ ಬಂದಿತ್ತು. ಜ್ವಲಂತ ತಪಸ್ವಿ ರಾಮಕೃಷ್ಣರ ಪರಮ ಪ್ರೀತಿಯ ಶಿಷ್ಯರಲ್ಲವೇ! ಅಗ್ನಿಯ ಮುಂದೆ ಪ್ರತಿಜ್ಞೆ ಮಾಡಿದರು. ತಾವೂ ಭಗವಂತನಿಗಾಗಿ ಜೀವವನ್ನು ಮುಡುಪಾಗಿಡಬೇಕು ಎಂದು. ೧೮೮೬ರ ಡಿಸೆಂಬರ್ ೨೪-ಕ್ರಿಸ್‌ಮಸ್ ಹಬ್ಬದ ರಾತ್ರಿ ಎಲ್ಲ ಯುವಕರೂ ನಿರ್ಧರಿಸಿದರು ತಾವು ಸಂನ್ಯಾಸಿ ಗಳಾಗಬೇಕೆಂದು. ರಾಮಕೃಷ್ಣ ಸಂಘವನ್ನು ಕಟ್ಟಬೇಕೆಂದು. ೧೮೮೭ ನೇ ಜನವರಿ ತಿಂಗಳಲ್ಲಿ ಶ್ರೀ ರಾಮಕೃಷ್ಣರ ಪಾದುಕೆಯ ಮುಂದೆ ಎಲ್ಲರೂ ಸೇರಿ ಶಾಸ್ತ್ರದಂತೆ ವಿರಜಾ ಹೋಮ ಮಾಡಿ ವೈದಿಕವಾಗಿ ಸಂನ್ಯಾಸ ಸ್ವೀಕರಿಸಿದರು. ರಾಖಾಲಚಂದ್ರ ಘೋಷ್ ಸ್ವಾಮಿ ಬ್ರಹ್ಮಾನಂದರಾದರು. ರಾಮಕೃಷ್ಣ ಸಾಮ್ರಾಜ್ಯದ ‘ರಾಜ’ರಾದರು. ‘ಮಹಾರಾಜ್’ ಎಂದು ಕರೆಸಿಕೊಂಡರು.

ವರಾಹ ನಗರ ಮಠದಲ್ಲಿ ಒಂದೊಂದು ಘಳಿಗೆಯೂ ಆನಂದದ ಘಳಿಗೆ. ಒಂದೊಂದು ದಿನವೂ ಚಿರಸ್ಮರಣೀಯ ದಿನ. ದೇಹದಲ್ಲಿ ಶಕ್ತಿ, ಹೃದಯದಲ್ಲಿ ಭಕ್ತಿ. ಹೊರಗೆ ವಿಶ್ವವನ್ನೇ ತಮ್ಮ ಪವಿತ್ರತೆಯಿಂದ ಜ್ವಲಿಸುವ ಸಂಕೇತವೋ ಎಂಬಂತೆ ಕಾವಿಬಟ್ಟೆ. ಎಲ್ಲರೂ ಇನ್ನೂ ಯುವಕರು. ಮುಂದೆ ಶ್ರೀರಾಮಕೃಷ್ಣರ ಆದರ್ಶ. ಮತ್ತೇನು ಬೇಕು! ಹೊಟ್ಟೆ ಬಟ್ಟೆಯ ಯೋಚನೆಯೇ ಇಲ್ಲದೆ, ಅಧ್ಯಯನ, ಜಪ, ಧ್ಯಾನ, ಕೀರ್ತನೆ ಮುಂತಾದುವುಗಳಲ್ಲಿ ಈ ಯುವ ಸನ್ಯಾಸಿಗಳು ತೊಡಗಿದರು. ಸನ್ಯಾಸಿ ಎಂದ ಮೇಲೆ ಅವನಿಗೆ ಮನೆಯಿಲ್ಲ. ಇಡೀ ಪ್ರಪಂಚವೇ ಅವನ ಮನೆ. ಸ್ವಾಮಿ ಬ್ರಹ್ಮಾನಂದರೂ ತೀರ್ಥಯಾತ್ರೆ ಕೈಗೊಂಡರು. ಕೆಲವೊಮ್ಮೆ ಏಕಾಂಗಿಯಾಗಿ, ಕೆಲವೊಮ್ಮೆ ತಮ್ಮ ಜೊತೆಯವರೊಂದಿಗೆ ಭಾರತದ ಪವಿತ್ರ ಕ್ಷೇತ್ರಗಳನ್ನು ದರ್ಶಿಸಿದರು. ಪವಿತ್ರ ನದಿಗಳ ತೀರದಲ್ಲಿ ತಪಸ್ಸು ಮಾಡಿದರು. ಅವರು ಯಾತ್ರೆ ಮಾಡಿದ ಸ್ಥಳಗಳಂತೂ ಹಲವಾರು. ಓಂಕಾರ್‌ನಾಥ್, ಪುರಿ, ದ್ವಾರಕಾ, ಭುವನೇಶ್ವರ, ಪಂಚವಟಿ, ಮಧುರೆ, ರಾಮೇಶ್ವರ, ಬೆಂಗಳೂರು, ಅಬು, ಅಲ್ಮೋರಾ, ದೆಹಲಿ, ಮುಂಬಯಿ, ಮಥುರಾ, ಬೃಂದಾವನ ಮುಂತಾದವು.

ಅವುಗಳಲ್ಲಿ ಅವರಿಗೆ ಮಥುರಾ, ಬೃಂದಾವನ ಎಂದರೆ ಬಹಳ ಪ್ರೀತಿ. ಒಮ್ಮೆ ಬೃಂದಾವನದಲ್ಲಿ ತಪಸ್ಸು ಮಾಡುತ್ತಿದ್ದಾಗ ರಾಮಕೃಷ್ಣರ ಆಪ್ತರೂ, ಪ್ರಸಿದ್ಧ ವೈಷ್ಣವ ಸಾಧುಗಳೂ ಆದ ವಿಜಯಕೃಷ್ಣ ಗೋಸ್ವಾಮಿ ಎಂಬುವರು ಇವರ ತಪಸ್ಸಿನ ತೀವ್ರತೆಯನ್ನು ಕಂಡು ‘ಪರಮಹಂಸರು ತಮ್ಮ ಆಧ್ಯಾತ್ಮಿಕ ಜೀವನದ ಸಾರ ಸರ್ವಸ್ವವನ್ನೂ ನಿಮಗೆ ನೀಡಿರುವಾಗ ನೀವು ಇಷ್ಟೊಂದು ಕಠೋರವಾದ ತಪಸ್ಸನ್ನಾಚರಿಸುವ ಅಗತ್ಯವೇನು?’ ಎಂದು ಬ್ರಹ್ಮಾನಂದ ರನ್ನು ಕೇಳಿದರು. ‘ರಾಮಕೃಷ್ಣರ ಕೃಪೆಯಿಂದ, ಏನೆಲ್ಲ ಅನುಭವದರ್ಶನಗಳಾಗಿವೆಯೋ ಅವೆಲ್ಲವನ್ನೂ ಈಗ ನನ್ನದನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ’ ಎಂದರು ಬ್ರಹ್ಮಾನಂದರು.

ಒಂದು ಜೀವಂತ ಡೈನಮೊ

ಬ್ರಹ್ಮಾನಂದರು ಭಾರತದಲ್ಲಿ ಸಂಚರಿಸುತ್ತ ತಪಸ್ಸು-ಧ್ಯಾನ-ಜಪಗಳಲ್ಲಿ ಮಗ್ನರಾಗಿದ್ದಂತೆ ವಿವೇಕಾ ನಂದರು ಅಮೇರಿಕಕ್ಕೆ ಹೋಗಿ ಭಾರತದ ಆಧ್ಯಾತ್ಮ ವನ್ನು ಉಪದೇಶಿಸಿ ವೇದಾಂತದ ಜಯಭೇರಿ ಹೊಡೆದು ಹಿಂದಿರುಗಿ ಬಂದು ಕಲ್ಕತ್ತೆಯ ಬಳಿ ‘ಬೇಲೂರು’ಎಂಬಲ್ಲಿ ರಾಮಕೃಷ್ಣ ಸಂಘವನ್ನು ಸ್ಥಾಪಿಸಿದರು. ಅದಕ್ಕೆ ಬ್ರಹ್ಮಾನಂದರೇ ಪ್ರಥಮ ಅಧ್ಯಕ್ಷರಾದರು. ವಿವೇಕಾನಂದರು ಭಾರತಕ್ಕೆ ಹಿಂದಿರುಗಿದೊಡನೆ ಬ್ರಹ್ಮಾನಂದರನ್ನು ಕಂಡವರೇ ‘ಗುರುವತ್ ಗುರುಪುತ್ರೇಷು’ (ಗುರುಗಳ ಮಗ ಗುರುವಿನಂತೆ) ಎಂದು ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದಂತೆಯೇ ಬ್ರಹ್ಮಾನಂದರು ಸಹ ‘ಜೇಷ್ಠ ಭ್ರಾತಾ ಪಿತುಃ ಸಮಃ’(ಅಣ್ಣ ತಂದೆಗೆ ಸಮ) ಎಂದೆನ್ನುತ್ತ ತಾವೂ ವಿವೇಕಾನಂದರಿಗೆ ಪ್ರಣಾಮ ಮಾಡಿದರು. ಅವರಿಬ್ಬರ ಅನ್ಯೋನ್ಯತೆ ಹಾಗಿತ್ತು. ವಿವೇಕಾನಂದರನ್ನು ನೋಡಲು ಬಂದ ವಿದೇಶಿಯರಿಗೆ ಸ್ವಾಮೀಜಿ ಬ್ರಹ್ಮಾನಂದರನ್ನು ಕುರಿತು ಹೇಳುತ್ತಿದ್ದರು: ‘ಇಲ್ಲೊಂದು ಡೈನಮೊ ಇದೆ, ನಾವೆಲ್ಲ ಆ ಡೈನಮೊ ಅಧೀನ.’

ತಮ್ಮ ಬಳಿಗೆ ಬಂದವರಿಗೆಲ್ಲ ಬ್ರಹ್ಮಾನಂದರು ಹೇಳುತ್ತಿದ್ದರು.”ನೀವು ನೂರಾರು ಜನ್ಮಗಳನ್ನು ವ್ಯರ್ಥವಾಗಿ ಕಳೆದಿದ್ದೀರಿ. ವಿವೇಕಾನಂದರ ಕೆಲಸಕ್ಕೋಸ್ಕರ ಒಂದು ಜನ್ಮವನ್ನು ತ್ಯಾಗಮಾಡಿ, ವಿವೇಕಾನಂದರು ಕಂಡ ಭವ್ಯ ಭಾರತದ ಕನಸನ್ನು ನನಸನ್ನಾಗಿ ಮಾಡಲು ಶ್ರಮಿಸಿ. ಈ ಕೆಲಸದಲ್ಲಿ ನಿಮ್ಮ ಜನ್ಮ ವ್ಯರ್ಥ ಎನಿಸಿದರೂ ಚಿಂತೆಯಿಲ್ಲ”.

‘ನಿಮ್ಮ ಮನಸ್ಸೆಲ್ಲವನ್ನೂ ದೇವರಿಗೆ ಅರ್ಪಿಸಿ. ನಿಮ್ಮ ಶಕ್ತಿಯನ್ನು ವ್ಯರ್ಥಗೊಳಿಸದೆ ಇದ್ದರೆ ಅದರ ಒಂದು ಅಂಶದಿಂದ ಪ್ರಚಂಡ ಕೆಲಸವನ್ನು ಈ ಪ್ರಪಂಚದಲ್ಲಿ ಸಾಧಿಸಬಹುದು. ಅದನ್ನು ನೋಡಿ ಪ್ರಪಂಚವೇ ಆಶ್ಚರ್ಯ ಪಡುವುದು’ ಎನ್ನುತ್ತಿದ್ದ ಬ್ರಹ್ಮಾನಂದರ ಜೀವನವೇ ಅದಕ್ಕೆ ಸಾಕ್ಷಿ. ಬ್ರಹ್ಮಾನಂದರು ಎಂದೂ ಭಾವೋದ್ವೇಗಕ್ಕೆ ಒಳಗಾಗುತ್ತಿರಲಿಲ್ಲ. ಇನ್ನೊಬ್ಬರಲ್ಲಿ ಕೆಟ್ಟದ್ದನ್ನು ಕಾಣು ತ್ತಿರಲಿಲ್ಲ. ವಿವೇಕಾನಂದರು ತಳಪಾಯ ಹಾಕಿದ ರಾಮಕೃಷ್ಣ ಸಂಘದ ಭವ್ಯಸೌಧವನ್ನು ಕಟ್ಟುವುದಕ್ಕೆ ತಮ್ಮ ತಪಸ್ಸನ್ನು ಧಾರೆಯೆರೆದು ಹಗಲಿರುಳೂ ಅದಕ್ಕೆ ಶ್ರಮಿಸಿದ ಪುಣ್ಯಜೀವಿ ಬ್ರಹ್ಮಾನಂದರು.

‘ಆಧ್ಯಾತ್ಮಿಕತೆಯ ತಳಹದಿಯ ಮೇಲೆ ನಿಮ್ಮ ಬಾಳನ್ನು ಕಟ್ಟಿ’ ಎನ್ನುವುದೇ ಅವರ ಜೀವನದ ಪಲ್ಲವಿಯಾಗಿತ್ತು. ಬ್ರಹ್ಮಾನಂದರು ಮೌನಿ, ಅವರನ್ನು ಬಲವಂತವಾಗಿ ಪೀಡಿಸಿದರೆ ಮಾತ್ರ ಮಾತನಾಡುತ್ತಿದ್ದರು. ಧ್ಯಾನ, ತಪಸ್ಸು, ಭಕ್ತಿ ಎಂದು ಮಾತನಾಡುತ್ತಿದ್ದರೆ ಏನು ಬಂತು? ಹೋಗು, ನಾಲ್ಕು ವರ್ಷ ಜಪ ಮಾಡು. ಏನೂ ಆಗದಿದ್ದರೆ ಮತ್ತೆ ಬಂದು ನನ್ನನ್ನು ಕೇಳು. ಸುಮ್ಮನೆ ಮಾತನಾಡಬೇಡ’ ಎನ್ನುತ್ತಿದ್ದರು ತಮ್ಮ ಶಿಷ್ಯರಿಗೆ. ಅವರು ಅನೇಕ ಶಿಷ್ಯರಿಗೆ ಬರೆದ ಪತ್ರಗಳು, ಅವರು ಆಗಾಗ ನೀಡಿದ ಉಪದೇಶಗಳು ಇಂದಿಗೂ ಸಾಧಕರಿಗೆ ಮಾರ್ಗದರ್ಶಿ ಯಾಗಿವೆ.

ನಿಮ್ಮ ದೇಹ ಮನಸ್ಸನ್ನು ಪ್ರಾಪಂಚಿಕ ಭೋಗಕ್ಕೆ ಬಲಿಕೊಟ್ಟರೆ ಅದು ಎರಡನ್ನೂ ನಾಶಮಾಡುವುದು. ಅದೇ ದೇಹ, ಮನಸ್ಸನ್ನು ಭಗವಂತನ ಪ್ರೀತಿ ಮತ್ತು ಕೆಲಸಗಳಿಗೆ ಉಪಯೋಗಿಸಿ. ಇದರಿಂದ ದೇಹಾರೋಗ್ಯವೂ  ಮಹದಾನಂದವೂ ನಿಮ್ಮದಾಗುವುದು’ ಎನ್ನುತ್ತಿದ್ದರು ಬ್ರಹ್ಮಾನಂದರು.

ಬ್ರಹ್ಮಾನಂದರು ೧೯೨೨ನೇ ಇಸವಿ ಏಪ್ರಿಲ್ ಹತ್ತರಂದು ತಮ್ಮ ದೇಹವನ್ನು ತ್ಯಜಿಸಿದರು.

ಭಕ್ತಿ-ಆಧ್ಯಾತ್ಮ -ಜ್ಞಾನ -ಕರ್ಮಗಳ ಸಂಗಮ ವಾದ ಬ್ರಹ್ಮಾನಂದ ನದಿ ರಾಮಕೃಷ್ಣ ಸಾಗರವನ್ನು ಸೇರಿತು.