lipi_loka1ಆಗಿನ್ನೂ ಕಲಬುರ್ಗಿ ಅಥವಾ ಗುಲಬರ್ಗಾ ಹೆಸರು ಬಂದಿರಲಿಲ್ಲ. ಪ್ರಾಚೀನ ನಾಗರೀಕತೆಯ ಯಾವ ಕುರುಹುಗಳು ಕಾಣಿಸದಷ್ಟು ಹಿಂದಕ್ಕಿದ್ದ ಊರದು. ಅನತಿ ದೂರದಲ್ಲಿ ಭೀಮಾಶಂಕರದಿಂದ ಇಳಿದು ಬಂದ ಭೀಮಾ ನದಿಯ ಭೋರ್ಗರೆತದ ಜುಳುವಿನಲ್ಲಿ ಹಾಯಾಗಿ ಮಲಗಿದ್ದ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿಯ ಸಮೀಪದ ಕನಗನಹಳ್ಳಿ. ಈ ಕನಗನಹಳ್ಳಿ ಒಮ್ಮಿಂದೊಮ್ಮೆಲೇ ಜಗತ್ತಿನ ಮೂಲೆಗೂ ಸಹ ತನ್ನ ಹೆಸರನ್ನು ಪಸರಿಸಿಕೊಳ್ಳುತ್ತದೆ. ಅದು ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕಲ್ಲ. ಘಟಿತ ಘಟನೆಗಳ ದಾಖಲೀಕರಣದ ಕುರುಹುಗಳಿಂದ. ಧರ್ಮ ಪ್ರಸಾರಕ್ಕಾಗಿ ನೆಲೆ ಕಂಡುಕೊಂಡ ಉತ್ತರದ ಕೊಂಡಿಯಿಂದ.
ಹೌದು ನಮ್ಮ ಇತಿಹಾಸ ಬೆಳೆದು ಬಂದದ್ದೆ ಹಾಗೆ. ನದಿಯ ಬುಡದಿಂದ ಬೆಳೆದು ವಿಸ್ತಾರವಾಗಿ ಹರಡಿದ್ದು. ಆದರೆ ಇಲ್ಲಿ ಉತ್ತರದಿಂದ ಆರಂಭಗೊಂಡು ಪ್ರಬಲವಾಗುತ್ತ ಬಂದ ಧರ್ಮವನ್ನು ಪ್ರಚಾರಗೊಳಿಸಲೋಸುಗ ಸ್ತೂಪವೊಂದನ್ನು ನಿರ್ಮಿಸಿ ಅಲ್ಲಿ ಬ್ರಾಹ್ಮಿ ಮತ್ತು ಪ್ರಾಕೃತವನ್ನು ಬಳಸಿ ಧರ್ಮ ಪ್ರಸಾರ ಮಾಡಲಾಯ್ತು. ಬುದ್ಧನ ಜಾತಕ ಕಥೆಗಳೊಂದಿಗೆ ಆತನ ಚಿತ್ರವನ್ನು ಕಡೆಯಲಾಯ್ತು. ಅಲ್ಲಿ ಲಿಖಿಸಿದ ಅಕ್ಷರ ಸುಧಾರಿತ ಸ್ಪಷ್ಟವಾಗಿತ್ತು. ಸಿರಿ ಪುಳುಮಾವಿಯ ಮತ್ತು ಅಸೋಕನ ಹೆಸರನ್ನು ಉಲ್ಲೇಖಿಸಿ ಬರೆದ ಸ್ತೂಪ ಶಾಸನವನ್ನೂ ಸೇರಿ ಎಲ್ಲವೂ ಸಹ ಅಶೋಕನ ಕಾಲದ ಬ್ರಾಹ್ಮಿಗಿಂತಲೂ ಬಹಳ ಸಂಸ್ಕರಿತಗೊಂಡವು. ಅಕ್ಷರಗಳು ಸ್ಪಷ್ಟವಾಗಿ ಶುದ್ಧವಾಗಿ ಮತ್ತು ಶಿಲೆಯನ್ನು ಆಯ್ಕೆ ಮಾಡಿಕೊಳ್ಳುವುದರಲ್ಲೂ ಒಂದು ವಿಧದ ಪ್ರಾವೀಣ್ಯತೆ ನೋಡಬಹುದಾಗಿದೆ. ಬ್ರಾಹ್ಮಿ ಲಿಪಿ ಸುಂದರವಾಗತೊಡಗಿತು. ಅಂದರೆ ಶಿಲ್ಪಿಗಳ ಒಂದು ಪರಂಪರೆ ಹುಟ್ಟಿಕೊಂಡಿತು. ಆದರೆ ಅದು ಬ್ರಾಹ್ಮಿಯ ಅವಸಾನದ ಅಂಚಿನ ಕಾಲಘಟ್ಟದಲ್ಲಿ.
ಆರಂಭಕಾಲೀನ ಸಹಸ್ರಮಾನದ ಆರಂಭದಲ್ಲಿ ಅಂದರೆ ಕ್ರಿಸ್ತ ಶಕೆಯ ಆರಂಭದಲ್ಲಿ ಕೆಳಗಿನ ದಕ್ಷಿಣದಲ್ಲಿ ಶಾತವಾಹನರ ಯುಗ ಆರಂಭವಾಯಿತು. ಆಗ ತಮ್ಮ ಕಾರ್ಯಸಾಧನೆಗಳನ್ನು ಮತ್ತು ಪೂರ್ವೇತಿಹಾಸಗಳನ್ನು ಬರೆದಿಡುವ ಕಾಯಕಕ್ಕೆ ಲಿಪಿಕಾರರ ಅವಶ್ಯಕತೆ ಮನಗಂಡರು. ಆಗ ಪುನಃ ಲಿಪಿಕಾರರನ್ನು ಗುರುತಿಸುವ ಕೆಲಸದ ಆರಂಭವಾಯ್ತು. ಆದರೆ ಆ ಕಾಲದಲ್ಲಿ ಅಶೋಕನದ್ದೆನ್ನುವ ಶಾಸನಗಳು ಮತ್ತು ಇತರ ರಾಜರುಗಳ ಶಾಸನಗಳು ಬ್ರಾಹ್ಮಿÃ ಲಿಪಿಯನ್ನು ಬಳಸಿಕೊಂಡಿದ್ದವು ಮತ್ತು ಗ್ರಾಮೀಣ ಸೊಗಡನ್ನು ಪ್ರತಿನಿಧಿಸುವ ಪ್ರಾಕೃತವನ್ನು ಆಯ್ದುಕೊಂಡಿದ್ದವು. ಆದರೆ ದಕ್ಷಿಣದಲ್ಲಿ ಶಾತವಾಹನರು ಕ್ರಿಸ್ತ ಶಕ ೨ನೇ ಶತಮಾನದ ಅಂತ್ಯದಿಂದ ಮೂರನೇ ಶತಮಾನಗಳಲ್ಲಿ ಸಂಸ್ಕೃತ ಭಾಷೆ ಮತ್ತು ಲಿಪಿಯನ್ನು ಬ್ರಾಹ್ಮಿಯಲ್ಲಿ ಬರೆಯಲಾರಂಭಿಸಿದರು ಇದಾದ ಕೆಲವೇ ಸಮಯಗಳಲ್ಲಿ ಕನ್ನಡ ಭಾಷೆಯ ಶಾಸನಗಳು ಒಂದೊಂದಾಗಿ ಇತಿಹಾಸದ ಪುಟದಲ್ಲಿ ಖಾತೆ ತೆರೆಯಲಾರಂಭಿಸಿದವು. ಆದರೆ ಅನಿವಾರ್ಯತೆಯೋ ಅಥವಾ ಆಗಿನ್ನೂ ಲಿಪಿಯ ಟಿಸಿಲು ಸರಿಯಾಗಿ ಒಡೆದಿರಲಿಲ್ಲವೋ ಲಿಪಿಯನ್ನು ಬ್ರಾಹ್ಮಿ ಆವರಿಸಿತ್ತು. ಅಥವಾ ಲಿಪಿಯ ವಿಕಾಸದ ಹಂತದ ಕನ್ನಡ ಕ್ರಮೇಣ ಉಪಕ್ರಮಿಸುತ್ತಿತ್ತು.
ಉತ್ತರದ ಮೌರ್ಯರ ಸಾಮ್ರಾಜ್ಯದ ಅಳಿವಿನ ನಂತರ ದಕ್ಷಿಣದಲ್ಲಿ ಕ್ರಮೇಣ ಶಾತವಾಹನರ ಪ್ರಾಬಲ್ಯ ಅಧಿಕಗೊಂಡಿತು. ಒಂದೊಮ್ಮೆ ಮೌರ್ಯರೇ ಆಮೇಲೆಯೂ ಪ್ರಬಲರಾಗಿದ್ದರೆ ದಕ್ಷಿಣದ ಲಿಪಿಯ ಇತಿಹಾಸ ಮೊಟಕುಗೊಳ್ಳುತ್ತಿತ್ತು. ಆದರೆ ಶಾತವಾಹನರು ಅದಕ್ಕೆ ವ್ಯತಿರಿಕ್ತವಾಗಿ ಶಿಲ್ಪಿಗಳ, ಕಲಾಕಾರರ ಒಂದು ವರ್ಗವನ್ನೆ ಬೆಳೆಸತೊಡಗಿದರು ಇದು ಕೇವಲ ಲಿಪಿಯ ಇತಿಹಾಸ ಮಾತ್ರವಲ್ಲ ದಕ್ಷಿಣದಲ್ಲಿ ಕಲೆಯ ಸಾಮ್ರಾಜ್ಯವನ್ನು ಹುಟ್ಟುಹಾಕಿದರು ಎನ್ನ ಬಹುದು. ಬೌದ್ಧ ಧರ್ಮವನ್ನೆ ಆಯ್ದು ಕೊಂಡಿದ್ದರೂ ಸಹ ಇಡೀ ದೇಶದಾದ್ಯಂತ ಅತೀ ಕಡಿಮೆ ಅವಧಿಯಲ್ಲಿ ಕಲಾವರ್ಗ ಒಂದನ್ನು ಬೆಳೆಸಿದರು ಹಾಗೆಯೇ ವಿಸ್ತರಿಸಿದರು. ಮುಖ್ಯವಾಗಿ ದಕ್ಷಿಣದ ಭಾಗವನ್ನು ಒಂದುಗೂಡಿಸುವಲ್ಲಿ ಶ್ರಮಿಸಿದರು. ಇದರಿಂದಾಗಿ ಪೂರ್ವ ಪಶ್ಚಿಮದ ಕರಾವಳಿಗಳ ಮಧ್ಯದ ಪ್ರದೇಶವನ್ನು ಒಂದುಗೂಡಿಸುವಲ್ಲಿ ಹೆಚ್ಚು ಒತ್ತು ಕೊಟ್ಟದ್ದರ ಪರಿಣಾಮ ಅದಕ್ಕೂ ಕೆಳಗಿನ ತಮಿಳುನಾಡಿಗಿಂತ ಮೊದಲು ತಮಿಳಿನ ಲಿಪಿಗಿಂತ ಮೊದಲು ಕನ್ನಡ ಖಾತೆ ತೆರೆಯಿತು. ಉಳಿದೆಲ್ಲಾ ಭಾಗಕ್ಕಿಂತ ಮೊದಲು ಲಿಪಿಯ ಸಂಸ್ಕೃತಿಯ ಅಡಿಯಲ್ಲಿ ದಾಖಲಾಯಿತು. ಬುದ್ಧನ ಜಾತಕ ಕಥೆಗಳು, ವಿನಯ ಮತ್ತು ಸೂತ್ರವೇ ಮೊದಲಾದ ಬೌದ್ಧ ಸಾಹಿತ್ಯವನ್ನು ಕರಗತ ಮಾಡಿಕೊಂಡಿದ್ದ ಶಿಲ್ಪಗಳು ಹೊಸ ಹೊಸ ಬಗೆಯ ವಿನ್ಯಾಸಗಳನ್ನೂ ಹೊಸ ಬಗೆಯ ಕೆಲಸಗಳನ್ನು ತಿಳಿದವರಾಗಿದ್ದರಿಂದ ಇವರನ್ನು ನವಕರ್ಮಿಗಳು ಎನ್ನುವುದಾಗಿ ಕರೆಯಲಾಗಿತ್ತು. ಮೌರ್ಯೋತ್ತರ ಕಾಲದ ಕುಷಾನರ ರಾವಲ್ಪಿಂಡಿ, ಪೇಶಾವರ, ತಕ್ಷಶಿಲಾ ಶಾಸನಗಳಲ್ಲಿ ಇವರ ಉಲ್ಲೇಖ ಕಾಣಸಿಗುತ್ತದೆ. ಇವರು ಸಂಘಾರಾಮ ಸ್ತೂಪ ವಿಹಾರಗಳನ್ನು ಮಾಡಿ ವಿನ್ಯಾಸಗೊಳಿಸಿದ್ದರು. ಇವರಲ್ಲಿ ಸಂಘಮಿತ್ರನೆನ್ನುವವನು ಸ್ತೂಪ ನಿರ್ಮಿಸುತ್ತಿದ್ದ, ಬುರಿತನೆನ್ನುವವ ಶಿಲ್ಪಿ ಹಾಗೂ ಶಾಸನಗಳನ್ನು ಬರೆಯುತ್ತಿದ್ದ. ತಾಮ್ರ ಪಟವನ್ನು ರೋಹಿಣೀಪುತ್ರ ಬರೆದ. ನವಕರ್ಮಿಗಳಂತೆ, ಸುತ್ತಾಂತಿಕ, ಮುಂತಾದವರೂ ಇದ್ದರು.
ಕರ್ನಾಟಕದ ಸನ್ನತಿಯ ಕನಗನಹಳ್ಳಿಯಲ್ಲಿ ಅನೇಕ ತುಂಡು ಶಾಸನಗಳು ದೊರೆತದ್ದು ಇದರ ರಚಕರು ಅಥವಾ ಲಿಪಿಕರು ಹಿಮಾಲಯ ಮೂಲದ ಮಹಿನತ ಮತ್ತು ಮಲಗಿ ನವಕರ್ಮಿಗಳು ಮಾಡಿದ್ದು, ಶಿಲಾ ಫಲಕಗಳಲ್ಲಿ ದಾಯಕಮ್ಮನ ಮಗನಾದ ಆಯಮಲ(ಆರ್ಯಮಲ್ಲ) ನೆನ್ನುವ ನವಕರ್ಮಿಯ ಹೆಸರನ್ನು ಸೂಚಿಸುತ್ತವೆ. ಹೀಗೆ ಅನೇಕ ರೀತಿಯ ಹೆಸರುಗಳು ಉಲ್ಲೇಖಗೊಂಡಿದ್ದು ಇಂತವುಗಳು ದಕ್ಷಿಣದ ಅನೇಕ ಶಾಸನಗಳಲ್ಲಿ ಪುನರಾವರ್ತನೆಯಾಗಿರುವುದು ಗೋಚರಿಸುತ್ತವೆ. ಹೀಗೇ ದಕ್ಷಿಣದಲ್ಲಿ ಸುಮಾರು ಮೂರನೇ ಶತಮಾನದ ಅಂತ್ಯದ ತನಕವೂ ಬ್ರಾಹ್ಮಿ ಪ್ರಾಕೃತದ ಸ್ವಾಮಿತ್ವ ಕಾಣ ಸಿಗುತ್ತವೆ.
ಕ್ರಿ.ಶ ೨ನೇ ಶತಮಾನದ ಅಂತ್ಯ ಮತ್ತು ಮೂರನೇ ಶತಮಾನದ ಆರಂಭದ ಕಾಲದಲ್ಲಿ ಶಾತವಾಹನ ದೊರೆ ಪುಳುಮಾವಿಯು ಕಲಾ ಇತಿಹಾಸಕ್ಕೆ ಒಂದು ನಾಂದಿ ಹಾಡಿದನು. ವಾಸ್ತುಶಿಲ್ಪ ಮತ್ತು ಕಲೆಯ ಆಯಾಮಗಳನ್ನು ಬಲ್ಲಂತಹ ಓರ್ವ ಶಿಲ್ಪಿಯನ್ನು ಬಳಸಿಕೊಂಡು ತನ್ನ ಪೂರ್ವಜರ ಸ್ಮರಣೆಗಾಗಿ ಚಂಡೇಶಿವ ಮಹಾದೇವನ ದೇವಾಲಯವನ್ನು ನಿರ್ಮಿಸಿದ್ದು ಕನ್ನಡದ ನೆಲದಲ್ಲಿ, ಮತ್ತು ಕನ್ನಡದ ನೆಲದಲ್ಲಿ ದೇವಾಲಯ ವಾಸ್ತುವಿಗೆ ಪ್ರಥಮ ಉದಾಹರಣೆ ಇದು ಇರಬಹುದು. ಅಲ್ಲಿ ವರ್ಧಕಿ ಅಥವಾ ವಡ್ಡಗಿ-ಬಡಗಿಯನ್ನು ಬಳಸಿಕೊಂಡುದರ ಬಗ್ಗೆ ಶಾಸನದಲ್ಲಿಯೂ ಉಲ್ಲೇಖಿಸಿರುವುದರಿಂದ ಬಡಗಿ ಶಬ್ದವೊಂದರ ವ್ಯತ್ಪತ್ತಿಯೂ ಆಗಲೇ ಆಗಿತ್ತು ಎಂದು ಗುರುತಿಸಬಹುದು. ಇದು ಕರ್ನಾಟಕದ ಇತಿಹಾಸದಲ್ಲಿ ಪ್ರಾಕೃತ ಭಾಷೆಯಲ್ಲಿನ ಶಿವಾಲಯದ ಮೊದಲ ಉಲ್ಲೇಖ ಇದಾಗಿದ್ದು. ಆಮೇಲಿನ ಉಲ್ಲೇಖಗಳೆಲ್ಲಾ ಸಂಸ್ಕೃತದಲ್ಲಿ ಅಥವಾ ಕನ್ನಡದಲ್ಲಾಗಿವೆ. ಆದರೆ ಅದಾಗಲೇ ಸಂಸ್ಕೃತದಲ್ಲಿ ಬರೆಯಲ್ಪಟ್ಟ ನಾಗಾರ್ಜುನಕೊಂಡದ ಶಾಸನಕ್ಕಿಂತಲೂ ಮೊದಲೇ ನಿರ್ಗುಂದದ ಶಿವಾಲಯ ನಿರ್ಮಾಣವಾಗಿದ್ದು. ಇದರ ರಚನೆಯ ಬಗ್ಗೆ ಅಷ್ಟಾಗಿ ತಿಳಿಯದೇ ಇರುವುದು ಸೋಜಿಗವೆನ್ನಿಸುತ್ತದೆ. ಆದರೆ ಆ ಕಾಲಕ್ಕಾಗಲೇ ಶಿಲಾ ದೇಗುಲ ನಿರ್ಮಾಣ ಮತ್ತು ಶಾಸನಗಳನ್ನು ಖಂಡರಿಸಲು ನೈಪುಣ್ಯತೆಯನ್ನು ಪಡೆದಿದ್ದರು.
ಪಲ್ಲವ ದೊರೆ ಶಿವ ಸ್ಕಂದವರ್ಮನ ಒಂದು ತಾಮ್ರಪಟ ಶಾಸನವು ಪ್ರಾಕೃತ ಭಾಷೆಯಲ್ಲಿದ್ದು ಇಲ್ಲಿ ಬ್ರಾಹ್ಮಿ ಲಿಪಿಯು ತನ್ನ ತನವನ್ನು ಸಡಿಲಿಸಿ ದಕ್ಷಿಣದ ಲಿಪಿಗೆ ಹತ್ತಿರವಾಗಿದ್ದು ಪ್ರಾಕೃತಭಾಷೆಯಲ್ಲಿರುವ ಅತ್ಯಂತ ದೀರ್ಘಶಾಸನವೆನ್ನುವ ಹೆಗ್ಗಳಿಕೆ ಹೊಂದಿದೆ. ಈ ಶಾಸನದ ಅಂತ್ಯವನ್ನು ಗಮನಿಸಿದರೆ ಶಾಸನದ ಇತಿಹಾಸದಲ್ಲಿ ದಕ್ಷಿಣಕ್ಕೆ ಬ್ರಾಹ್ಮಣರ ಸೇರ್ಪಡೆಯನ್ನು ಸೂಚಿಸುತ್ತದೆ. ಕೋಲಿವಾಲದ ಭೋಜಕ ಭಟ್ಟ ಶಮ್ಮನು ತನ್ನ ಹಸ್ತದಿಂದಲೇ ಬರೆದಿದ್ದು ಗೋ ಮತ್ತು ಬ್ರಾಹ್ಮಣರನ್ನು ವಂದಿಸಿದ್ದಲ್ಲದೇ ರಹಸ್ಯಾಧಿಕನಾಗಿದ್ದನ್ನು ಪ್ರತಿಧ್ವನಿಸುತ್ತದೆ. ಈ ಬ್ರಾಹ್ಮಣ ಸಮುದಾಯವು ಮೊದ ಮೊದಲು ಕ್ರಿ. ಶ ೨-೩ ನೇ ಶತಮಾನದಲ್ಲಿ ಪ್ರಚಲಿತವಿದ್ದ ಸ್ಥಳೀಯ ಭಾಷೆ ಮತ್ತು ಲಿಪಿಗಳನ್ನು ಬಳಸಿಕೊಂಡು ಕರ್ನಾಟಕದ ನೆಲದಲ್ಲಿ ನೆಲೆ ನಿಂತು ಇಲ್ಲಿಯೇ ಮುಂದೆ ವ್ಯಾವಹಾರಿಕದಿಂದ ಸಾಹಿತ್ಯಿಕ ನೆಲೆಯನ್ನು ಬಳಸಿಕೊಂಡ ಬಗ್ಗೆ ಅನೇಕ ಕಡೆ ಉದಾಹರಣೆಗಳು ದೊರಕುತ್ತವೆ. ವಲಸಿಗರಿಂದ ಬರೆಯಲ್ಪಟ್ಟ ಶಾಸನಗಳೆಲ್ಲಾ ಮುಂದಕ್ಕೆ ಸ್ಥಳೀಯ ಕನ್ನಡವನ್ನು ಲಿಪಿಯಾಗಿಸಿಯೂ ಸಂಸ್ಕೃತ ವನ್ನು ಮಾಧ್ಯಮದ ಭಾಷೆಯನ್ನಾಗಿಯೂ ಬಳಸಿಕೊಂಡರು. ಆದರೆ ಗಾಂಧಾರದ ಖರೋಷ್ಠಿ ಪಂಡಿತ ಚಪಡ ಅಶೋಕನ ಶಾಸನಗಳನ್ನು ಬ್ರಾಹ್ಮಿ ಮತ್ತು ಪ್ರಾಕೃತದಲ್ಲಿ ಬರೆದಂತೆ ಮುಂದಕ್ಕೆ ಯಾರೂ ಶುದ್ಧ ಪ್ರಾಕೃತವನ್ನು ಮಾತ್ರ ಬಳಸಿ ಬರೆದಂತೆ ಕಾಣಿಸುತ್ತಿಲ್ಲ. ಅಂದರೆ ಒಂದೋ ಮುಂದೆ ಪ್ರಾಕೃತದ ಪ್ರಭಾವ ಕಡಿಮೆ ಆಗಿ ಸಂಸ್ಕೃತ ಆ ಭಾಗವನ್ನು ಕ್ರಮೇಣ ಆವರಿಸಿತು. ಅಥವಾ ಸಾಮಾನ್ಯ ಜನರಲ್ಲೂ ಸಂಸ್ಕೃತದ ಒಲವು ಹೆಚ್ಚಾಗಿರಬಹುದು. ಅದಕ್ಕೆ ಉದಾಹರಣೆ ಎಂದರೆ ಪಲ್ಲವ ಶಿವಸ್ಕಂದವರ್ಮನ ಹಿರೇಹಡಗಲೀ ಶಾಸನ. ಚಪಡನಂತೆ ಇಲ್ಲಿ ಇದನ್ನು ಭಟ್ಟ ಶಮ್ಮ ಅಥವಾ ಭಟ್ಟಶರ್ಮ ಬರೆದಿದ್ದಾನೆ ಆದರೆ ಈ ಶಾಸನದಲ್ಲಿ ಪ್ರಾಕೃಅತದ ಜೊತೆಗೆ ಸಂಸ್ಕೃತವನ್ನೂ ತೂರಿಸಿರುವುದು ಕಾಣಸಿಗುತ್ತದೆ. ಚಪಡ ಪ್ರಾಕೃತದಿಂದ ಪ್ರಭಾವಿತನಾಗಿದ್ದರೆ ಇಲ್ಲಿ ಭಟ್ಟ ಶರ್ಮ ಸಂಸ್ಕೃತದಿಂದ ಪ್ರಭಾವಿತನಾಗಿದ್ದ ಆದುದರಿಂದ ಉಭಯ ಭಾಷೆಗಳಲ್ಲೂ ಹಿಡಿತ ಸಾಧಿಸಿದ್ದರೂ ಸಹ ಕೆಲವೊಮ್ಮೆ ಒಂದು ಭಾಷೆಯಲ್ಲಿ ಇನ್ನೊಂದು ಭಾಷೆಯ ಪ್ರಯೋಗ ಸಾಮಾನ್ಯ ಮತ್ತು ಅನಿವಾರ್ಯವೆನ್ನಿಸುತ್ತದೆ. ಆದರೆ ಚಪಡನ ಕಾಲದಲ್ಲಿ ಬ್ರಾಹ್ಮಣ್ಯದ ಕುರುಹಗಳಿಲ್ಲ. ಇಲ್ಲಿ ಹಿರೇ ಹಡಗಲಿಯ ಶಾಸನದಲ್ಲಿ ‘ಸ್ವಸ್ತಿ ಗೋ ಬ್ರಾಹ್ಮಣ ಲೇಖಕ ವಾಚಕ ಶ್ರೋತ್ರಿಭ್ಯಃ’ ಎಂದು ಗೋವುಗಳು ಮತ್ತು ಬ್ರಾಹ್ಮಣರ ಜೊತೆಗೆ ಲೇಖಕ ವಾಚಕ ಮತ್ತು ಶ್ರೋತ್ರೀಯರನ್ನೂ ಸಹ ಸ್ಮರಿಸಿಕೊಂಡು ಶುಭಕೋರಿದ್ದಾನೆ.
ಕದಂಬರಾಜನ ಮೂರನೇ ಶತಮಾನದ ಶಿವಮೊಗ್ಗ ಜಿಲ್ಲೆಯ ಮಳವಳ್ಳಿಯ ಕಲ್ಲೇಶ್ವರ ದೇವಾಲಯದಲ್ಲಿನ ಶಿಲಾಶಾಸನ ಪ್ರಾಕೃತ ಮತ್ತು ಕೊನೆಯ ಹಂತದ ಬ್ರಾಹ್ಮಿ ಲಿಪಿಯಲ್ಲಿ ಖಂಡರಿಸಲಾಗಿದೆ. ಇಲ್ಲಿಯ ತನಕ ಸ್ವರಾಕ್ಷರಗಳನ್ನು ಬಳಸಲಾಗಿದ್ದರೂ ಸಹ “ಋಕಾರದ ಬಳಕೆ ಇದೇ ಮೊದಲ ಸಲ ಎನ್ನ ಬಹುದಾಗಿದೆ. “ಬ್ರಹ್ಮ ದೆಜ್ಜಂ ಸೇ ಕದಂಬೇಸು ಋಧಮಾತೇ ವಿಸಸತ್ತು” ಎನ್ನುವ ಸಾಲು ಲಿಪಿಯ ಅಧ್ಯಯನದ ದೃಷ್ಟಿಯಿಂದ ಮಹತ್ವ ಪಡೆದುಕೊಳ್ಳುತ್ತದೆ. ಹಾಗೆಯೇ ಲಿಪಿಕಾರನ ಬಗ್ಗೆ “ಲಿಖಾಪಿತಂ” ಎನ್ನುವುದಾಗಿ ಹೇಳಿದ್ದರೂ ಬರೆದವನನ್ನು ವಿಶ್ವಕಮ್ಮಾ ಎಂದು ಹೇಳಿಕೊಂಡಿದ್ದಾನೆ. ನಾಲ್ಕನೆಯ ಸಾಲಿನಲ್ಲಿ ಸ್ಪಷ್ಟವಾಗಿ “ಉಕ್ತಂ ಖಣ್ಡೊ ವಿಶ್ವಕಮ್ಮಾ” ಎನ್ನುವುದು ದಕ್ಷಿಣದಲ್ಲಿನ ಪ್ರಾಕೃತ ಭಾಷೆಯಲ್ಲಿನ ಮೊತ್ತ ಮೊದಲ ವಿಶ್ವಕರ್ಮನ ಉಲ್ಲೇಖ ಎನ್ನುವುದಾಗಿ ಪರಿಗಣಿಸ ಬಹುದು. ಪ್ರಾಕೃತದ ಮತ್ತು ಬೌದ್ಧ ಸ್ತೂಪ ನಿರ್ಮಾಣಕಾರರಾದ ನವಕರ್ಮಿಗಳ ದೀರ್ಘ ಉಲ್ಲೆÃಖದ ನಂತರದ ಈ ಉಲ್ಲೇಖ ಮಹತ್ವ ಪಡೆಯುತ್ತದೆ. ಮುಂದೆ ವಿಶ್ವಕರ್ಮರೇ ನವಕರ್ಮಿಗಳ ಸ್ಥಾನ ಪಡೆದುಕೊಳ್ಳುತ್ತಾರೆ. ಆದರೆ ಇದೇ ಶಾಸನದ ಕೊನೆಗೆ “ನಾಗದತ್ತೇನ” ಎನ್ನುವ ಅಂಶವೂ ಬರುವುದು. ನಾಗದತ್ತನಿಂದ ಈ ಶಿಲಾಲೇಖವು ಯೋಗ್ಯ ಶೈಲಿಯಲ್ಲಿ ಬರೆಯಲ್ಪಟ್ಟಿತು ಎನ್ನಲಾಗುತ್ತಿದೆ. ಆದರೆ ಈ ಶಾಸನವನ್ನು ಮೊದಲಾರ್ಧ ಚುಟು ಶಾತಕರ್ಣಿ ಬರೆಸಿದ್ದು ಆ ನಂತರದ್ದು ಶಿವಸ್ಕಂದವರ್ಮ ಬರೆಸಿದ ಎನ್ನುವ ಅಭಿಪ್ರಾಯಗಳಿವೆ.
‘ಸಜಯತಕಸ ಅಚರಿಯಸ (ದ)ಮೊರಕಸ ಸಿಸೇನ ಣಟಕೇನ ನಾಗೋ ಕತೋ’ ಇದು ಬನವಾಸಿಯ ವಿನ್ಹುಕಡ ಸತಕನ್ನಿಯ ನಾಗ ಶಾಸನದ ವಾಕ್ಯ. ಇದು ಸಜಯತ ಎನ್ನುವುದು ಸಂಸ್ಕೃತದ ಸಂಜಯಂತಿ ಯನ್ನು ಸೂಚಿಸುತ್ತಿದ್ದು ಅದು ಆಗಿನ ವೈಜಯಂತೀ ಈಗಿನ ಬನವಾಸಿಯನ್ನು ಹೆಸರಿಸುತ್ತದೆ. ನಾಗ ಶಿಲ್ಪವನ್ನು ಮಾಡಿದವನನ್ನು ಆಚಾರಿ ಎನ್ನುವುದಾಗಿ ಉಲ್ಲಖಿಸಿದ್ದು ಆಚಾರ್ಯ ಪದದ ಉಲ್ಲೇಖದ ಪ್ರಥಮ ಮಾಹಿತಿ ದೊರೆಯುತ್ತದೆ. ಆಚಾರ್ಯ ಎನ್ನುವ ಪದ ಸರ್ವೇ ಸಾಮಾನ್ಯವಾಗಿದ್ದರೂ ಶಾಸನವೊಂದರಲ್ಲಿ ಸಾತಕರ್ಣಿಗಳ ಕಾಲದಲ್ಲಿ ಪ್ರಥಮ ಎನ್ನಬಹುದಾಗಿದೆ. ಆದರೆ ಈ ಮೊದಲು ಬೌದ್ಧ ಶಾಸನಗಳಲ್ಲಿ ‘ಆಚಾರ್ಯ’ ಪದ ಬಳಕೆ ಆಗಿದ್ದರೂ ಸಹ ಅದು ಬಹಳ ವಿರಳ. ನಾಗ ಶಿಲ್ಪವೊಂದರಲ್ಲಿ ಇದನ್ನು ಪ್ರಥಮ ಎನ್ನಬಹುದಾಗಿದೆ. ಇದರ ನಂತರದ ಕದಂಬರ ಕಾಲಕ್ಕಾಗಲೇ ಪ್ರಾಕೃತ ಈ ನೆಲದಿಂದ ನೇಪಥ್ಯಕ್ಕೆ ಸರಿದು ಆ ಜಾಗವನ್ನು ಸಂಸ್ಕೃತ ಮತ್ತು ಸ್ಥಳೀಯ ಕನ್ನಡ ಆಕ್ರಮಿಸಿಕೊಂಡಾಗಿತ್ತು. ಹೀಗೆ ಕನ್ನಡದ ನೆಲದಲ್ಲಿ ಕನ್ನಡತನ ತನ್ನ ಅಸ್ತಿತ್ವವನ್ನು ಹುಡುಕುತ್ತಿತ್ತು.