(ಕ್ರಿ. ಶ. ೧೬೨೩-೧೬೬೨) (ಹೈಡ್ರಾಲಿಕ್ ಪ್ರೆಸ್)

ಇಂದು ಉದ್ಯಮ ಕ್ಷೇತ್ರದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿರುವ ಹೈಡ್ರಾಲಿಕ್ ಯಂತ್ರವನ್ನು ಕಂಡು ಹಿಡಿದ ವಿಜ್ಞಾನಿ, ಬ್ಲೇಸ್ ಪಾಸ್ಕಲ್.

ಬ್ಲೇಸ್ ಪಾಸ್ಕಲ್ ಜೂನ್ ೧೯, ೧೬೨೩ರಲ್ಲಿ ಫ್ರಾನ್ಸಿನ ಕ್ಲೆರ‍್ಮೆಂಟ್ ಫೆರೆಂಡ್ ಎಂಬಲ್ಲಿ ಜನಿಸಿದರು. ತಂದೆ ಗಣಿತ ವಿಜ್ಞಾನಿಯಾಗಿದ್ದ. ಪಾಸ್ಕಲನಿಗೂ ಗಣಿತ ಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಇತ್ತು. ತನ್ನ ಹದಿನಾರನೆಯ ವಯಸ್ಸಿನಲ್ಲೇ ಆತ ಶಂಖುವಿನ ಛೇದ ಮುಖ ಆಕೃತಿಗಳ ಜ್ಯಾಮಿತಿ ಕುರಿತಾದ ಪುಸ್ತಕ ಬರೆದರು. ತನ್ನ ತಂದೆ ಲೆಕ್ಕ ಮಾಡಲು ಅಧಿಕ ಸಮಯ ಕಳೆಯುತ್ತಿದ್ದುದನ್ನು ಕಂಡು ಆತ ವಿಶೇಷ ಚಕ್ರಗಳು ಅಳವಡಿಸಲ್ಪಟ್ಟ ಲೆಕ್ಕ ಮಾಡುವ ಒಂದು ಯಂತ್ರವನ್ನೇ ತಯಾರು ಮಾಡಿದರು. ಆ ಯಂತ್ರ ಗಣಕ ಯಂತ್ರಗಳ ಆವಿಷ್ಕಾರಕ್ಕೆ ನಾಂದಿಯಾಯಿತು.

ಗಣಿತ ಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದ ಈತ ಸಂಭವನೀಯತಾ ಸಿದ್ಧಾಂತವನ್ನು ಕಂಡು ಹಿಡಿದರು. ಅದು ಇಂದು ಗಣಿತದ ಒಂದು ಉಪ ಶಾಖೆಯಾಗಿ ಬೆಳೆದು ಬಂದಿದೆ. ಆದರೆ ಭೌತ ವಿಜ್ಞಾನದಲ್ಲಿ ಬ್ಲೇಸ್ ಪಾಸ್ಕಲ್ ಮಾಡಿದ ಸಂಶೋಧನೆ ಅದ್ಭುತವಾದದ್ದು. ದ್ರವವು ತನ್ನ ಮೇಲಿನ ಒತ್ತಡವನ್ನು ಎಲ್ಲ ಕಡೆಗೂ ಸಮನಾಗಿ ವಿತರಿಸುತ್ತದೆಂಬ ನಿಯಮವನ್ನು ಆತ ಕಂಡು ಹಿಡಿದರು. ಇದನ್ನು ಪಾಸ್ಕಲ್ ನಿಯಮ ಎಂದೇ ಕರೆಯಲಾಗುತ್ತದೆ. ಈ ನಿಯಮವು ಹೈಡ್ರಾಲಿಕ್ ಪ್ರೆಸ್ ನ (ಚರದ್ರವ ಒತ್ತುಗ) ಮೂಲತತ್ವವಾಗಿದೆ. ಹೈಡ್ರಾಲಿಕ್ ಪ್ರೆಸ್ ಯಂತ್ರದ ರಚನೆ ತೀರ ಸರಳ. ಒಂದು ಸಣ್ಣ ಮತ್ತು ಇನ್ನೊಂದು ದೊಡ್ಡ ಬಾಯಿ ಇರುವ ಎರಡು ಬಾಯಿಯ ಪಾತ್ರೆಯೊಂದರಲ್ಲಿ ನೀರು ತುಂಬಿ ಸಣ್ಣ ಬಾಯಿಗೆ ಸಣ್ಣ ಬೆಣೆ, ದೊಡ್ಡ ಬಾಯಿಗೆ ದೊಡ್ಡ ಬೆಣೆ ಹಾಕಿ ಸಣ್ಣ ಬೆಣೆಯನ್ನು ಕೆಳಕ್ಕೆ ಒಂದು ನಿಯಮಿತ ಒತ್ತಡದಿಂದ ದೂಡಿದಾಗ ಅದು ಪಾಸ್ಕಲ್ ನ ನಿಯಮದಂತೆ ದೊಡ್ಡ ಬೆಣೆಯ ಮೇಲೆ ಅಷ್ಟೇ ಒತ್ತಡ ಉಂಟಾಗುತ್ತದೆ. ದೊಡ್ಡ ಬೆಣೆಯ ಮುಖದ ವಿಸ್ತೀರ್ಣ ಅಧಿಕವಾಗಿರುವುದರಿಂದ ಅದರ ಮೇಲಿನ ಒಟ್ಟು ಬಲದ ಪರಿಣಾಮವೂ ಅಧಿಕವಾಗಿರುತ್ತದೆ. ಹೀಗೆ ಸಣ್ಣ ಬೆಣೆಯ ಮೇಲೆ ಅಲ್ಪ ಭಾರ ಹಾಕಿ ಭಾರೀ ತೂಕದ ವಸ್ತುವನ್ನೇ ಮೇಲಕ್ಕೆತ್ತಬಹುದು. ಇಂಥ ಯಂತ್ರಗಳ ಸಹಾಯದಿಂದ ಹತ್ತಿ, ಬಟ್ಟೆ ಮುಂತಾದ ವಸ್ತುಗಳನ್ನು ಮೂಟೆಗಳಲ್ಲಿ ಒತ್ತಾಗಿ ತುಂಬುವುದು ಸುಲಭವಾಗಿದೆ. ಬ್ಲೇಸ್ ಪಾಸ್ಕಲ್ ೧೬೬೨ರಲ್ಲಿ ಮೃತಪಟ್ಟರು.