ವಂದು ರಾಜ, ವಂದು ಮಂತ್ರಿ ಇದ್ದರಂತೆ. ರಾಜನ್ದೂ ಮದ್ವಿಯಾಗದೆ, ಮಂತ್ರಿಯೂ ಮದ್ವಿಯಾಗದೆ. ಕಡೆಗೆ ರಾಜನಿಗೆ ದಿನಾ ಮೀನು ಬೇಕಾತ್ತಂತೆ. ಅಂಬಿಗರಣ್ಣ ದಿನಾ ಮೀನು ಹಿಡ್ಕಂಡ್ ಬಂದೆ ಕೊಡ್ತಿದ್ದ. ಮೀನು ಹಿಡ್ಕಂಡು ತಂದು ಕೊಟ್ಟವಂಗೆ ಆಳ್ಳಕಿಂತ ಹೆಚ್ಚು ಕೊಡೂಕಿಲ್ಲ. ಅದೂ ಕೊಜ್ಜಕ್ಕಿ ಕೊಡೂದು. ಹೆಚ್ ಕೊಟ್ರೆ ಹೆಂಡ್ತಿಗೆ ಬಯ್ತು. ಬಾಳ ಬಡೂರವ ಅವ. ಮನೆನೂ ಇಲ್ಲ. ಬೇಯ್ಸಿಕೊಂಡ ತಿಂಬೂಕೆ ಅಡವೀಲೆ ತಕಂಡೆ ಹೋಗಿ ಬೇಯ್ಸಿಕೆ ತಿಂತಿದ್ದ. ದಿನಾ ಅದೇ ಕತೆ ಅವರದು.

ವಂದಿವ್ಸಾ ಪರಮಾತ್ಮ ನೋಡ್ತಾನೆ. “ಇವನೀಗೆ ರಾಜ್ರ ಮನಿಗೆ ಹೋಗಿ ಕಷ್ಟ ಬಿಡೂದೆ ಬೇಡ” ಹೇಳಿ ವಂದೆ ಪೆಟ್ಗೆ ಮಾಡಿ ವಂದ್ ಹುಡ್ಗ ಮಾಡಿ, ವಂದ್ ಮುಂಗುರ್ಸಿ ಮಾಡಿ ಪೆಟ್ಗಿಲಿ ಹುಡಗೀನೂ ಮುಂಗುರ್ಸಿನೂ ಹಾಕಿ, ಬಿಟ್ ಹಾಕ್ತಾನೆ ಹೊಳೀಲಿ. ಇವ್ನ ಗಾಳಕ್ಕೆ ಸುರ್ದೆ ಬೀಳ್ತದೆ ಪೆಟ್ಗಿ. ಆ ದಿವ್ಸ ಮೀನು ಸಿಕ್ಕೊದೆಲ್ಲ. ಅವನಿಗೆ ಆ ಪೆಟ್ಗಿನೇಯ “ಇದ್ಯೆಂತಾ ಹಾಳ ಪೆಟ್ಗಿ?” “ಹೇಳಿ ತಕೊಂಡು ಹೋಗಿ ಅಡ್ಗಿ ಮಾಡ್ವಲ್ಲೇ ಇಡ್ತ. ಇಟ್ಟಾಕ್ ಬಂದಿ “ಹೊಟ್ಟಿಗೆ ಯೇನ ಮಾಡ್ ಸಾವ್ದಪ್ಪ?” ಅಂದಿ ಆಲೋಚ್ನೆ ಮಾಡ್ತ. ಮುಂಗುರ್ಸಿ ಹೆರ ಬೀಳ್ತದೆ. ಹುಡ್ಗಿಯ ಪೆಟ್ಗೆ ಕನ್ ಮಾಡಿ ಹೊರ್ಗೆ ಹಾಕ್ತದೆ. ಹುಡ್ಗಿ “ವಿಚಾರ ಮಾಡ್ಬೇಡ, ನಾ ನಿನ್ಗೆ ಮನೆ, ಮಠ ಎಲ್ಲಾ ಮಾಡಿ ನಾನು ಕೊಡ್ತೆ. ನಿನ್ನೇ ಗಂಡ್ನ ಮಾಡ್ಕಂತೆ” ಹೇಳ್ತದೆ. “ನಾ ನಿನ್ನ ಹೆಂಡ್ತಿಯಾಗೂಕೇ ಬಂದವಳು”. ಮದವೆಯಾಗ್ತಾರೆ ಇಬ್ರೂ ಕೂಡಿ.

ಕಡಿಗಾ ಮನೆ ಮಟಯೆಲ್ಲಾ ಆಗ್ತದೆ. ಯೆಣಿತದೆ ಹುಡ್ಗಿನೇಯ. ಯೆಲ್ಲಾ ಆಗೆ ಬಿಡ್ತು. ನೀನು ರಾಜ್ರ ಮನಿಗೆ ಹೋಗೂದೆ ಬೇಡ ಅಂತದೆ. ರಾಜ್ರ ಮನಿಲಿ ಇವ ಯಾಕೆ ಬರ್ಲೆಲ್ಲ. ಮೀನ್ ಹಿಡ್ಕಂಡಿ ಅಂದಿ ಮಂತ್ರಿ ಕಳ್ಸ್‌ತೆ. ರಾಜ ಊಟ ಮಾಡ್ಲೆಲ್ಲ. ನಾನು ಸಂಜಿಯಾಯ್ತು, ಅಂಬಿಗಾರಣ್ಣ ಮೀನ್ ತಕಂಡಿ ಇನ್ನೂ ಬರಲಿಲ್ಲ ಅಂತಾನೆ.

ಮಂತ್ರಿ ಹೋಗಿ ನೋಡ್ದ. ನೋಡ್ದವ “ಯೇನೋ ಅಂಬೀರಣ್ಣ ಇದ್ ಯೆಲ್ಲಿ ಹುಡ್ಗಿಯೋ?” ಕೇಳ್ತಾನೆ. ಇದೆ ನನ್ ಹೆಂಡ್ತಿ. ರಾಜ್ರ ಮನಿಗೆ ಹೋಗ್ ಬೇಡ ಅಂದದೆ. ಅಂದ. “ಯೆಲ್ಲ್ ಹೋಯ್ತು ನಿನ್ ಹೆಂಡ್ತಿ?” ಅಂದಾ. ರಾಜ್ರ ಮನೀಗೆ ವೋಡ್ ಹೋಗೆ ಹೇಳ್ದಾ “ರಾಜರೇ, ಅಂಬೀರಣ್ಣ ಹೆಂಡ್ತಿ ಸಾಮಾನ್ಯ ಚಂದಲ್ಲ. ಮನೆ ಮಟ ಯೆಲ್ಲಾ ಯೇನ ಬೇಕಾದ್ ಮಾಡ ಬಿಟ್ಟದೆ” “ಅವ್ನ ಹೆಂಡ್ತಿ ನಾವೂ ಹೋಗ್ ನೋಡ್ಕಂಡ್ ಬರ್ವ” ಹೇಳಿ ರಾಜ್ರು ಮಂತ್ರಿ ಇವ್ರ್‌ಬಿಬ್ರೂ ನೋಡೂಕೆ ಹೋದ್ರು. ರಾಜ “ಅಂಬೀರಣ್ಣ ಯಾಕೆ ಬರೂದಿಲ್ಲ?. ಮೀನ್ ತಕ ಬರುದಿಲ್ಲ” ಹೇಳಿ ಕೇಳ್ದ. “ನಾನ್ ಹೆಂಡ್ತಿ ಹೋಗ್ ಬೇಡ ಅಂತು” ಅಂದಾ.

ಕಡಗಿವ್ರು ಹೇಳ್ತ ಬರ್ತಾರೆ ರಾಜ ಮಂತ್ರಿ ಅವ್ರು. ಮಂತ್ರಿ “ದೊಡ್ ಬಾವಿ ತೋಡ್ಸೆಬೇಕು. ಅಂಬೀರಣ್ಣ ಕೈಲಿ ಆಳ ನೋಡ್ಕ ಬಾ ನೀರ್ ಬರೂದೋ ನೋಡೂಕೆ” ಅಂದ. ಹೆಂಡ್ತಿ ಕೈಲಿ “ಯೇನ್ ಮಾಡ್ಬೇಕು?” ಕೇಳ್ತ. ಆಗೂದು ಅಂದ ಹೇಳಿ ಹೇಳ್ತದೆ ಹೆಂಡ್ತಿ. “ಮುಂಗರ್ಸಿ ಕೈಲಿ ನಮ್ಮನಿಗೆ ಹೋಕಂಡೆ ಸುರಂಗ ಮಾಡ್ ಬಾ ಹೇಳ್ತೆ. ಕಲ್ಲು ಮುಳ್ಳು ಹಾಕುವರಿಗೆ ನೀವು ಸುರಂಗದಲ್ಲಿ ಹೊರಗೆ ಬಂದ್ ಬಿಡಿ” ಹೇಳ್ತದೆ. ಮುಂಗುರ್ಸಿ ಮನಿಗೆ-ಭಾವಿಗೆ ಸುರಂಗ ಮಾಡ್ತು. “ಇಳಿ ಅಂಬಿಗರಣ್ಣ, ನೀ ಇಳ್ದೆ ಹೊರ್ತು ನೀರ್ ಬರೂದೆಲ್ಲ, ಇಳಿ” ಹೇಳ್ತಾರೆ. ಇವ್ ಇಳ್ದಾ. ಕಲ್ಲು ಮುಳ್ಳು ಹಾಕಿ ಮುಚ್ಚಿ ಬಿಟ್ರು ಬಾವೀಯ. ಮಂತ್ರಿ ಹೇಳ್ತಾ ಕಡಿಗೆ, “ಅಂಬಿಗರಣ್ಣನ ಹೆಂಡ್ತಿ ನಿಮ್ಗೆ, ನಿಮ್ಮ ಹೆಂಡ್ತಿ ನನಗೆ, ನನ್ ಹೆಂಡ್ತಿ ನಿಮ್ಮನಿಗೆ ಶಗಣಿ ತೆಗೂಕೆ” ಅಂದ.

ಅಂಬಿಗರಣ್ಣನ ಮನಿಗೆ ವೋಡಿ ಬಂದು, “ಯೇನ್ ನಿನ್ನ ಗಂಡ ಬಾವಿಲಿ ಇಳ್ದವ್ ಆಗೆ, ಹತ್ ಬಂದನೆ. ಇನ್ನೂ ಬರಲಿಲ್ಲವೋ? ಕೇಳ್ತಾರೆ, “ಇಲ್ಲಾ ಬರ್ಲಿಲ್ಲ” ಅಂದೆ ಬೇಕಂತ ಸುಳ್ಳ ಹೇಳ್ತಾಳೆ. “ಬಾ ನಮ್ಮನಿಗೆ ಹೋಗ್ವನಿ” ಅಂದ.

ಇದು ಮಂತ್ರಸಕ್ತಿಂದ ಮತ್ತೊಂದು ಹುಡ್ಗಿ ಮಾಡಿ ಬಿಡ್ತದೆ. ಆವಾಗೆ ಇದ್ರ ಗಂಡ ಮತ್ತೆ ಆ ಗುಡ್ಗಿ ಹೆರ್ ಬಿದ್ ಬರ್ತಾರೆ. “ಯೆಲ್ಲಿ ಹೋಗಿದ್ಯೋ? ಪಾತಾಳ್ಕೆ ಹೋದವ ನೀನ್ ಹ್ಯಾಂಗ್ ಬಂದೆ? ಈ ಹುಡ್ಗಿ ಹೇಂಗೆ ಶಿಕ್ತೊ ನಿನ್ಗೆ?” ಕೇಳ್ತಾ.

ಪಾತಾಳ್ಕೆ ಹೋದ್ರೆ ಸಾಕು ಮತ್ತೊಂದೆ ಹುಡ್ಗಿ ಮದಿಯಾಗು ನೀನು ಹೇಳ್ತಾರೆ. ಮತ್ತೊಂದು ಹುಡ್ಗಿ ಕೊಟ್ಟೇ ಕಳ್ಸಿರೂ. ಕಡಿಗೆ ಇವರು ಹಾಂಗ್ ಮಾಡರು ಅವು ಕೇಳದ್ರು ಹೌದು. ಅಲ್ ಹೋದವ್ರಿಗೆ ವತ್ತಾಯ ಮಾಡಿ ಮದ್ವಿ ಮಾಡೇ ಕಳ್ಸಿತಾರೆ ಅಂತಾ. ಯೆಟ್ ಹೇಳಿದ್ರೂ ಹೇಳೂದೆಲ್ಲ. ನಮ್ಗೆ ಹುಡ್ಗಿ ಮದ್ವಿಮಾಡೇ ಮೇನ ಹತ್ಸ್‌ತಾರೆ. ನಾನು ಹೋಗ್ವನೇ ಅಂದಿ ಹೇಳ್ದೆ. ಮೇನ್ ಹಾಕ್ಸ್ ಕಳ್ಸತಾರೆ. ಅಲ್ಲೇ ತಾ ಉಳಿವೆ ಅಂದ್ರೆ ಇಟಕಂತಿರು ಅವ್ರು. ನಾ ಉಳೂದಿಲ್ಲ ಅಂದ ಹೇಳ್ದೆ. ಮೇನ್ ಹತ್ ಕಳ್ಸೆರು ಅಂದಾ.

ಕಡಿಗೆ ಮಂತ್ರಿ “ಹೌದಲ್ಲ! ರಾಜಾ ಇನ್ನು ಮತ್ತೊಂದು ಕೆಲ್ಸ ಮಾಡಬೇಕು. ಜನ್ಕ ಏನಂದೆ ಹುಡ್ಗಿ ಆಗ್ ಹೋಯ್ತು. ಈಗ ನಮ್ಮ ಹಿಂಡ್ರು ಹೆರಗನ ಕೆಲಸ ಮಾಡ್ವೊರು, ಈಗ ಹೊಂಡ ತೋಡಿ ಅಗ್ನಿ ಮಾಡಬೇಕು. ನಾವು ಅಂಬೀರಣ್ಣ ಅಗ್ನಿಲೆ ಹಾಕಿ ಸುಟ್ ಸತ್ ಹೋಗ್ತಾ” ಅಂದೆ ಹೇಳಿ ಬರಬೇಕಿದ್ರೆ ಮಾತಾಡ್ಕಂತ ಬತ್ರು.

ಅಂಬೀರಣ್ನ ಹೆಂಡ್ತಿಗೆ ಗೊತ್ತಾಯ್ತು. “ಕೊಂಡ ಮಾಡ್ತಾರೆ ಕೆಂಡದಲ್ಲಿ ಹಾಕುಕೆ. ಬಾ ಹೇಳೆ ಕಳ್ಸ್‌ತಾರೆ. ಕಂಡ ಮಾಡ್ತಾರೆ. ನೀನು ಅದ್ರಲೆ ಬೀಳು ಹೇಳ್ತಾರೆ. ನಿನ್ನ ನಾ ಆಗಿಂದಾಗ ಯೆತ್ತಿ ಸುರಂಗದಲ್ಲಿ ಹಾಕ್ತೆ. “ಅಡ್ಡಿಲ್ಲ” ಹೇಳಿ ಹೋಗಿ ಬೀಳು. ಕೆಂಡದಲ್ಲಿ ಬೀಳೂಕೆ ಕೊಡುದೆಲ್ಲ”.

ಕಡಿಗೆ “ಕೊಂಡದಲ್ಲಿ ಬೀಳೋ ಅಂತಾರೆ.” ಆಯ್ತು ಅಂತ ಬೀಳ್ತಾನೆ. “ಕೊಂಡದಲ್ಲಿ ಗಯಾ, ಈಗ ಸತ್ ಹೋದ, ಈಗ ನಮ್ಗೆ ಚಾನ್ಸ್ ಜರ್ದೆ ಹೋಯ್ತು” ಅಂದ್ರ. ಕೆಡಗದವ್ರು ಸೀದಾ ಇವನ ಮನೀಗೆ ಬಂದ್ರು. “ಜನ ವಂದದ ಹೆಣ್ ತಕ ಹೋಗ್ವ” ಅಂದಿ ಬಂದ್ರು. “ಮತ್ತೊಂದು ಹುಡ್ಗಿ ಮಂತ್ರದಿಂದ ಮಾಡಿ ಕೊಡ್ತದೆ. ಇವ ಮತ್ತೊಂದು ಹುಡ್ಗಿ ತಕಂಡು ಹೆರ್ಗೆ ಬಿದ್ದ ಕೋಣಿಂದ “ಮತ್ತೊಂದ್ ಹುಡ್ಗಿ ಮದಿ ಮಾಡಿ ತನ ಕಳ್ಸೆ ಕೊಟ್ರು” ಅಂತ. “ಈಗ ಅವ ಬೀಳುದೆ ಬೇಡಾ, ನಾವೇ ಬೀಳ್ವಾ. ಅಂಬೀರಣ್ನ ಹತ್ರೇ ನಮ್ಮ ದೂಡ್ ಹೇಳ್ವಾ” ಹೇಳಿ ಮತ್ತೊಂದ್ ದೊಡ್ಡ ಹೊಂಡ ತೆಗೀತಾರೆ ಇಬ್ರೂ ಬೀಳೊಖೆ. ಆವಾಗ ಅಂಬೀರಣ್ನ ಕೈಲಿ ಬಾ ಹೇಳಿ ಕಳ್ಸಿತಾರೆ. “ನಮ್ಮಿಬ್ರನೂ ಹೊಂಡದಾಗೆ ದೂಡ್ ಹಾಕು, ಕಲ್ಲು, ಮುಳ್ಳು ಜಡಿ” ಅಂತಾರೆ. ಹೊಂಡದಲ್ಲಿ ದೂಡ್ ಕೆಡಗೆದ. ಕಲ್ಲು, ಮುಳ್ಳು ಜಡ್ದಿ ಸತ್ ಹೋದ್ರು ಇಬ್ರೂವ್.

ಅವ್ರ ಹೆಂಡ್ರು ಮನಿಗೆ ಬಂದು “ನೀನು ಆಗಿಂದಾಗೇ ಬತ್ತಿದೆ. ಇವ್ರಿನ್ನೂ ಬರ್ಲೆಲ್ಲ”. ಅಂತ ರಾಜರ ಹೆಂಡ್ತಿ, ಮಂತ್ರಿ ಹೆಂಡ್ತಿ ಬಂದು ಹೇಳ್ತಾರು, ಅಂಬಿಗರಣ್ಣ ಹೇಳ್ತಿ “ಯೆಂತಕ್ಕೆ ಬರ್ವದು?. ಅಲ್ ಅಂತಾ ಹುಡ್ಗಿ, ಆಸ್ತಿ ಸಿಕ್ಕ ಬೇಕಾರೆ ಯೆಂತಕೆ ಬತ್ರು?” ಕೇಳ್ದಾ ಅಂಬೀರಣ್ಣ. ಅವ್ರು ಸತಿ ಹೋದಲ್ಲೇ ಹೋಗ್ರವ್ವ ಅಂದಿ ಹೇಳ್ದಾ. ಹೋದ್ರು. “ನಮ್ಗೆ ಅವ್ರ ಹೇಸ್ರೇ ಬೇಡ” ಅಂದ್ರು. ಅಂಬಿಗರಣ್ನ ಹೆಂಡ್ತಿ “ನೀವು ನಮ್ಮನಿಲ್ಲೇ ಬಂದ್ ಬಿಡಿ” ಹೇಳ್ತದೆ. ನಮ್ಮನಿ ಕೆಲ್ಸ ಮಾಡ್ಕಂಡಿ ಉಳೀರಿ ಹೇಳಿ ಹೇಳ್ತು. ಬಂದ್ ಉಳದ್ರು ಹೇಳಿ ಹೇಳಾಯ್ತು.

ಹೇಳಿದವರು:

ಸೌ. ಮಹಾದೇವಿ ಜಟ್ಟಪ್ಪ ಪಟಗಾರ,
ಮೊಸಳೆ ಸಾಲು, ಅವರ ಮನೆಯಲ್ಲಿ ಬರೆದುಕೊಂಡದ್ದು.
ದಿ: ೦೩—೦೪-೨೦೦೧