ಒಂದರಸೂಗೆ ರಾಜಿಪಟ್ಣವೇ ಅವಗೆಲ್ಲ ಇದ್ದದ್ದು. ಅವಗೆ ಹುಡುಗ್ರೇ ಯೆಲ್ಲ. ಬಾರಿ ಚಿಂತಿ ಮೇನೆ ಉಳ್ದೆ ಬಿಟ್ರು. ಯೇನ್ ಹೇಳದ್ರು ಹೆಂಡ್ತಿ ಕೈಲಿ? “ತಾನೇ ಇಂದೆ ದೋರ ಹೋಗ್ ಬಿಡ್ತೆ. ಬರುಕಾದ್ರೆ ಬಂದೆ; ಯೆಲ್ಲದಿದ್ರೆ ಯೆಲ್ಲ ನಾಳೆ ಬತ್ತೆ’ ಹೇಳ್ದರು. ಬಿದ್ ಮಾರಿಗ ಹಿಡ್ಕಂಡಿ ಹೋಗ್ ಹೋಗ ಹೋಗ್ ಹೋಗಿ ಆರಾಣದ ಅಡವೀಗೆ ಗೋರಂಗಟ್ಲಿಗೆ ಹೋಗೆ ಕೂತ್‌ಬಿಟ್ರು. (ಕತ್ಲು) ತೀಡಕಂತಿ “ನನ್ಗ್‌ಇಟ್ಟಲ್ಲಾ ಐಶಿರಿ ಇದ್ದು ಯೇನ್ ಸ್ವಾರ್ತಕಾಯ್ತು” ಅಂದೇಳಿ ದ್ಯೆವ್ರೆನನ್ಕಂತಿ ಕೂತ್ ಸ್ಮೊರಣಿ ಮಾಡ್ಕಂತಿ ಉಳ್ದೆ ಬಿಟ್ರು.

ಸ್ಮೊರಣಿ ಮಾಡ್ಕಂತ್ ಕುಳ್ಳಬೇಕಿದ್ರೆ ಈಸ್ವರ ದೇವ್ರು ಪಾರ್ವತೆ ದೇವ್ರು ಸೋರೀ ತಿರ್ಗೆ ಬರಬೇಕಿದ್ರೆ ಅವರು ವಲಿಯಾಗಬೇಕಿದ್ರೆ “ನಾವು” ಹಿಂಡ್ತಿ ಗಂಡ್ನಾರ್ ಹತ್ರ ಹೇಳ್ತದೆ “ಈ ಆರಾಣದಡವೀಲಿ ನರಮನ್ಸರ್ ವಲಿಯಾತದೆ. ಯಾರೂ ಯೇನೂ ಹೇಳಿ ನೋಡ್ ಬರಬೇಕು.”

ಗಂಡ “ಹೋಗೂದೇ ಬೇಡ. ನರಮನ್ಸರು ಈ ಅಡವೀಲಿ ಬರೂದೇ ಯೆಲ್ಲ. ಹೋಗೂದೇ ಬೇಡ” ಅದ್ ಕೇಳೂದೆಲ್ಲ. ಹೋಗಲೇಬೇಕು. ನೋಡ್ಕಂಡ್ ಬರಲೇಬೇಕು. ಅಂತದೆ. ಆಗ ಹೋದ್ರು ಗಂಡ ಹೆಂಡ್ತಿ ಯಿಬ್ಬರೂವ.

ಅಲ್ಲಿ ತೀಡ್ಕಂತ್ ಬಿದ್ದಾರೆ. ಆಗ ಅವ್ನೆ ಕೈಲಿ ಯಚಾರ ಮಾಡದ್ರು. “ಯೇನು ಯೇನ್‌ತಾನ? ಅಂದಿ”. ನಂಗ್ ಯೇನ್ ಚಿಂತಿಲ್ಲ. ಹುಡ್ಗರ ಸಂತೋಚನೇ ನನ್ಗೆಲ್ಲ. ಅದ್ರಿಂದ ಚಿಂತಿ ಮೇನ್ ಕೂತನ್ ಅಂದೆ ಹೇಳಿದ್ರು. ಆಗ ಅವ್ರೆ ಹೇಳ್‌ದ್ರು “ನೀ ಮನಿಗೆ ಹೋಗುತನವಾ ನಿನ್ ಹೆಂಡ್ತಿ ಗರ್ಭಿಣಿ ಉಳಿತದೆ. ನಿನ್ಗೆ ಒಂದೆ ಹುಡ್ಗಿ ಹುಟ್ತಿದೆ. ಚಂದ್ರಕಾಂತಿ ಅಂದೆ ಇರ್ಸಬೇಕು. ಆಗ ಹುಟ್ದಿ ಗಳಿಗಿಲಲಿ ಹುಟ್ದಿ ಕೊಡ್ಲೇಯ ನಿನ್ ಹೆಂಡ್ತಿಗೆ ಕಣ್ಣೇ (ಕಾಣ್ಸುದಿಲ್ಲ). ಕಣ್ ಕಾಣ್ಸಿದಿದ್ರೂ ನೀ ಚಿಂತಿ ಮಾಡೂಕೆಲ್ಲ.”

ಅಟ್ಟೊಂದ್ ಕೇಳ್ಕಂಡಾ ಅರಸೂ ಬಂದ ಮನಿಗೆ. ಬರ್ವಲ್ಲಿವರಿಗೆ ಹೆಂಡ್ತಿ ಗರ್ಭಿಣಿ ಅದೆ. ಮನಿಗೆ ಬಂದೆ ನೋಡೂತನ ಆಳುಮಂದಿ ಕೈಲಿ ಹೇಳ್ದ. ನೀವು ಜೋಪಾನ ಮಾಡ್ತಿರಬೇಕು. ಕಾವ್ಲಿಗಿರಬೇಕು. ನಾ ವಂದೆ ಸರಿ ಮನಿಲಿರುವದೆಲ್ಲ. ಹೇಳ್ದ ದೇಸ್ದ ಮೇನ್ ನಡದೇ ಬಿಟ್ಟ.

ಹೋಗ ವಂದ ದಡ್ಡ ಅರ್ಸತನದ್ದೇ ಪಟ್ಣ ಇಟ್ಟನೆ. ಆ ಪಟ್ಣದಲ್ಲಿ ವಂದೆ ಸಾವ್ರ ಮಂದಿ ಆವ್ರೆ. ಆಗ ಅಲ್ಗೆ ಹೋದ. ಮತ್ ಮಾರನ್ ದಿವ್ಸ ಪರತ್ ಮನಿಗೆ ಬಂದ. ಬರೂವರಿಗೆ ಹೆಂಡ್ತಿ ಜನ್ನಿ ಆಗದೆ. ಜನ್ನಿ ಆಗಿ ಹುಡ್ಗಿ ಹುಟ್ಟಿದೆ. ಹುಡ್ಗಿ ಹುಟ್ದ ಕೂಡ್ಲೆ ಅದ್ಕೆ ಕಣ್ಣೀಯಲ್ಲ. ಹ್ಯಾಂಗ್ ನೋಡ್ತೆ ಅಂದ್ರೆ ಕಣ್ಣೀಯೆಲ್ಲ.

ಕಡಿಗೆ ಗೌಡರ ಕೈಲಿ ಹೇಳ್ತದೆ ಅದು “ಮತ್ತೆ ನೀವು ಚಂದಾಗೆ ಹುಟ್ಟದೆ ಯೇನು ಯೆಂತದು ನೀವ ನೋಡ್ರಪಾ: ಅಂತದೆ. ಅವ್ರ ಹೇಳ್ತದೆ “ಹೆಣ್ ಶಿಶು ಚೆಂದಾಗಿದ್ದದೆ.” ಆಗ ಬಂದ್ ಕೂಡ್ಲೆಯ ಹುಡ್ಗೀ ಬಾಳಂತಿಗ್ಯೆಲ್ಲಾ ನೀರ್ ಹಾಕ್ತು. ಚೊಕ್ ಮಾಡ್ಕಂಡ ಬಂದ್ರು. ಅದ್ಕೆ ಕಣ್ ಕಾಣ್ಸೂದೆಲ್ಲ; ನೀವು ಹಾಲು ಗೀಲು ಕುಡ್ಸ್‌ಬೇಕು ಅಂತ.

“ಆಯ್ತಪ್ಪ ನಾವು ಅಟ್ಟೆಲ್ಲಾ ವಾಕ್‌ಕ್ಸೇಮ ಮಾಡ್ತೇ ಉಳೀತ್ರು. ನೀವದ್ಕ್‌ಇದ್ರ ಮಾಡೂದೇ ಬೇಡ” ಅಂದೆ ಹೇಳಿದ್ರು. ಅವರು “ನಾ ಹಾಗಾರ್ ರಾಜಪಟ್ಟಣಕ್ಕೆ ಹೋತೆ”. ಅಂದೆ ಹೇಳ್ ಹೋದ್ರು ಅವರು. ಹೋದ್ ಕೂಡ್ಲೆ ಇದು ವಂದಿವ್ಸೆ ಮೊಲಿ ಕುಡಿಸತು. ಆಳಗೀಳ ಅದ್ರು ನೆಕ್‌ಕೊಟ್ಕಂಡ್ ಮಾಡ್ಕಂಡ ಉಳದ್ರು ಅವ್ರು.

ಮಾರನ್ ದಿವ್ಸೆ ಇಲ್ಗೆ ಬಂದ ಅಪ್ಪ. ತಂದಿ ಬಂದ್ಕೊಂಡ್ ಯೇನಂದ ಹೆಂಡ್ತಿ ಹತ್ರೆ “ತಾನು ರಾಜಪಟ್ಟಣದಲ್ಲೇ ಕರ್ಕಂಡ ಹೋಗಿ ಜೋಪಾನ್ನ ಮಾಡೆ ಇಟ್ಕಂತೆ. ನೀನು ಇಲ್ಲೇ ಉಳಿ” ಅಂತ. ಕರ್ಕಂಡಿ ರಾಜಪಟ್ಟಣಕ್ಕೆ ಹೋದ. ಹೋಗಿ ಗೌಡೀರ್ ಹತ್ರ “ಯೇನ್ ಬೇಕು ಅಟ್ ಹೊತ್ಗೆ ಕುಡಿಸಿ ವಾಗ್‌ಕ್ಷೇಮ ಮಾಡಬೇಕು” ಅಂದ.

ಬೆಳ್ಳಿ ತೊಟ್ಲದಾಗ ಶರಣ್ ತಂದೆ ಹಾಕಿ ತೊಟ್ಲಲೆ ವರ್ಗೆಸ್ ಇಟ್ರು. ಇರ್ಸ್‌ಕೂವ ದಾತ್ರಿಯಾಗೆ ಹೋಯ್ತು. ಹುಡ್ಗಿ ಕರ್ಕಂಡ ಹೋದ ನಂತ್ರ ಅವಿಗೆ ಕಣ್ಣ್ ಬಂದ್ ಹೋಯ್ತು. ಆಗ ಯೇನಂತು ಅವಿ?

ಅಪ್ಪ ‘ದಾತ್ರಿಗೆ ವಂದ್ ಸಾವ್ರ ಜನ್ರ್‌ಗೆ ಐನೂರ್ ಜನ್ರು ಹುಡ್ಗಿ ಕಾವ್ಲಿಗೆ ಇರಬೇಕು. ಐನೂರ್ ಜನ್ರು ಬೆಳ್ಳಿ ಕಾವಲಿಗೆ ಇರಬೇಕು’. ಅಂದ್ ಹಾಗೆ ಹೇಳ್ದೊರು ಆಗುದು ಅಂದೆ ಹೇಳ್‌ದ್ರು ಅವರು. ತಾನು ಮನಿಗೆ ಹೋಗ್ ಬತ್ತದೆ. ಅಂದ್ರು ಅರಸಗೋಳು. ಅವ್ರೆ ಮನಿಗೆ ಬಂದ್ ಕೂಡ್ಲೆ ಸುಮಾರ್ ಅರ್ದ ರಾತ್ರಿ ಮೇನ್ ನೆದ್ರಿ ಬಿದ್ ಹೋದ್ ಕೂಡ್ಲೆಯ ಈ ಹುಡ್ಗಿಗೆ ಯಚ್ಚರ್ಕಯಾಗೆ ಹೋಯ್ತು. ಯೆಚ್ಚರ್ಕಿ ಆದ ಗಳಗೀಲಿ ಅದ ತೊಟ್ಲಲ್ಲಿ ಯೆದ್ ಕೂತ್ಕಂಬಿಟ್ತು. ಯೆದ್ ಕುಳ್ಳೂವರಿಗೆ ಯೋಳ್ ಸಂದ್ರದ ಆಚೆ ಕೀಳ್ ಸಂದ್ರದಲ್ ಮಾದೊಡ್ಡ ಯೋಳ್ ಹೆಡಿ ಮಾಶೇಶದೆ. ಮಾಶೇಶಕೆ, ಇದೆ ಯೇಳೂವರಿಗೆ ಇದ್ರೆ ಬೆಳ್ಕು ಮಾಶೇಶೆಗೆ ಹೋಗ್ ಅಸದ್ ಹೋಯ್ತು. ಚಂದ್ರಕಾಂತಿ ಬೆಳಕು.

“ಅಬ್ಬ ! ನನಕಿಂದ ಹೆಚ್ನೋರ್ ಯಾರಾಗ್‌ಬವೆದು? ಇಡೀ ಜಗತ್ ಭೂಮಿ ಹೊತ್ತಿದಾವ್ ನಾನು ಮಾಶೇಶ. ನನಕಿಂದೂ ಹೆಚ್ನವ್ರ್ ಯಾರಿಬವ್ದು? ಅಂದ್ ಹೇಳ್ ಬಂತು. ಮದ್‌ರಾತ್ರಿಗೆ ಬರಬೇಕಾದ್ರೆ ಬಂದ್ ಬಂದೆ ಬಂದೆ ತೊಟ್ಲದಲ್ಲೇ ಬಂತು. ಬಂದಿ ಯೇಳು ಹೆಡಿಮೇನೆ ತೊಟ್ಲ ಕೀಲ ತಪ್ಸಿ ತೊಟ್ಲಗೂಡಿ ಚಂದ್ರಕಾಂತಿನೂ ಕೂಡಿ ಯೋಳ ಹೆಡಿಮೇನ್ ಇಟ್ಕಂಡ್ತು.

ಚಂದ್ರಕಾಂತಿ ತೀಡ್ತದೆ. ಹೊತ್ಕಹೋಬೇಕಿದ್ರೆ. ಹೊತ್ಕಂಡ ಹೋಗಬೇಕತಿದ್ರೆ’ ಚಂದ್ ಊರಲ್ಲಿ ವಂದ ಅಜ್ ಮುದ್ಕಿತ್ತು. ಅಜ್‌ಮುದ್ಕಿ ಇದ್ದದ್ದು ಹೆರಗೆ ಬಂದಿತ್ತು. ಅದ್ ಹೊತ್ಕಂಡ್ ಹೋಗುವಾಗೆ ಬಾಲಿ ತೀಡ್ತದೆ.

ಆಗ “ಅಬ್ಬಾ! ಇದೆ ಯಾವ ತಾಯ್ ಹಡ್ದ ಹುಡಗೋ ಹುಡಗ್ಯೋ. ಮಾಶೇಶ ಹೊತ್ಕ ಹೋತದೆ. ಯಾವ ದೇಸವೋ ಯಾವ ಊರೋ ಅಂದಿ ತೆಳೂದೆಲ್ಲಾ” ಅಂದೆ ಹೆಳ್ಕಂಡಿ ಹೋಯ್ತು ಅದು ಮನಿಗೆ.

ಆಗ ಅರ್ಸ ಬಂದ ರಾಜಪಟ್ಟಣಕ್ಕೆ ಮನೆಲಿದ್ದವ, ಇಲ್ ಬರುವರಿಗೆ ಹುಡ್ಗೆಲ್ಲ. ಎಲ್ಲ ಆಳುಮಕ್ಳಿದ್ದೋರ್ ತೀಡ್ಕಂತ್ ಇದ್ದರೆ. ತೊಟ್ಲನೂ ಯೆಲ್ಲ ಹುಡ್ಗಿನೂ ಯಲ್ಲ.

“ಆಗಿಲ್ ಯಾರ್ ಬಂದಿರು? ಯೇನ್ತನ? ನಿಮ್ಗ್ ಇಲ್ಲಿ ಯೆಲ್ಲರ್ಗೂ ನಿದ್ರೆ ಬಂದಿತ್ತೋ? ಯೇನ್ತನ? ಕೇಳ್ತ ಅರಸು. ಹೌದು, ನಮ್ಗೆ ವಬ್ಬರ್ಗೂ ಯೆಚ್ಚರೆಲ್ಲ. ಯಾರ್ ಯೇನ್ ಮಾಡಿದ್ರೊ ಯೆನೋ ಸ್ವಾಮೀ, ನಮ್ಗ್ ಗೊತ್ತಿಲ್ಲ.

ಆಗೆ ವಂದರಸು, ಅರಸು ಮಗ, ವಂದೆ ಪರದಾನಿ ಮಗ ದಾರೀ ಮೇನ್ ಬತ್ತೇ ಇದ್ದಿರು. ಬರಬೇಕಿದ್ರೆ ಅರಸು ಅವರ ಕರ್ದೆ. ಮನಸಲಿ ಕರದಿ ಅರಸೂಕಲಿ ಪರದಾನಿ ಕಲಿ ಇಲ್ ಬನಿ ಅಂದ. ಬಂದ್ರು ಅವರು. ಅವ್ರೆ ಹತ್ರೆ ತೊಟ್ಲಲ್ ಹಾಕಿಟ್ಟ ಹುಡ್ಗಿ ಬೆಳಗಾಗುತ್ಲು ಯೆಲ್ಲ. ಯಾರ್ ಮಾಯ ಮಾಡ್ಕಂಡ್ ಹೋದ್ರೋ ಯೇನೋ. ನೀವು ಯಾರೂಬ್ರ ಹುಡ್ಗಿಯ ತಾಪಾಸ್ ಮಾಡಿ ತಂದ ಕೊಟ್ರೆ ನಿಮಗೆ ಅರಸು ಮಗನಿಗೆ ದಾರಿ ಯೆರ್ದು ಕೊಡ್ತೆ. ಅಂದ ಯೆರಡೂ ಜನಕೂ ಯೇಳಿ ಮಾಡಿ ಕೊಟ್ರು. “ಯೆಯ್ದ್ ಜನ್ರೂ ಯೇಳಿ ಹಿಡ್ಕಣಬೇಕು ಯಾರ್ ತಕ ಹೋಗವ್ರೆ”? ಅಂದೆ ಹೇಳಿ ಅವ ಆಗ ಪರದಾನಿ ಮಗನ ಕೈಲಿ ಅರಸು ಮಗ ಕೇಳ್ದ. “ನೀನೇ ಹೋತ್ಸ? ನಾ ಹೋಬೇಕ? ಇಬ್ರೂ ವಟ್ಟಾಗೆ ಹೋಗಬೇಕಾ? ಅಂದ ಕೇಳ್ದ. ಪರ್ದಾನಿ ಮಗ ಯೆನಂದಾ? ನಾನು ನನ್ ಸಂಗ್ತಿಗೆ ಪೂರಾಕ್ ಬರ್ವವ್ನಲ್ಲ. ಅರ್ದಕೆ ಬಂದು ಹಿಂತಿರ್ಗೆ ಬರ್ವವ. ನಂಕಲ್ ಶಕ್ಯೆಲ್ಲ ಅರ್ಸಕಂಡ್ ಬರುಕೆ ಅಂದ.

ಅರಸೂ ಹುಡ್ಗನ ಹೆಸ್ರ್ ಸೂಲಿಕಾಂತ ಹೇಳಿ. ಪರದಾನಿ ಮಗ ಅವ್ನ ಸಂತಿಗೆ ವಟ್ಟಾಗಿ ಹೋದ್ರು. ಹೋಗಿ ಸುಮಾರ್ ಅರ್ದಕೆ ಹೋಗ್ವಲಿಗೆ ಪರದಾನಿ ಮಗ ಸೂಲಿಕಾಂತ್ನ ಕೈಲೀ ನಮ್ಮ ಹತ್ರ ಅರಸೂಕೆ ಸಾದ್ಯೆಲ್ಲ. ಯಾವುರ್ಗೆ ಹೋಗದೇ ಯಾವ ದೇಶ್ಕೆ ಹೋಗದ್ಯೋ ಯೇನೊ. ನೀನು ಹೋಗ್ ಅರ್ಸಕ ಬರೂಕೆ ಅಡ್ಡೆಲ್ಲ.

ಆಗ ಅರಸು ಮಗ “ನೀ ಬರದಿದ್ರೆಲ್ಲ. ಹಾಗೂ ಮನಿಗೆ” ಅಂದ ಪರದಾನಿ ಮಗ ಹಿಂದೇ ಅರಸೂಮನಿಗೇ ಬಂದ. ಅರ್ಸಗೋಳು “ಯೇನು ಸೂಲಿಕಾಂತ್ನ ಸಂಗ್ತಿಗೆ ಹೋಗಲೆಲ್ಲ? ಹಿಂದೆ ಬಂದೆ ನೀನು” ಕೇಳ್ತು.

“ನಾನು ಬರೂದೆಲ್ಲ. ಚಂದ್ರಕಾಂತಿ ಅರಸು ಹುಡ್ಗಿ ಪತ್ರಿ (ಮಾಡೂಕೆ) ಅವ ಅರಸೂ ಹುಡುಗಿ ಅರಸೂಕೆ ಹೋದ. ನಾನು “ನನ್ ಹತ್ರಿ ಸಾದ್ದಿಲ್ಲ”. ಅಂದೆ ಹೇಳ್ ಪರತ್ ಬಂದೆ.”

ಆಗ ಸೂಲಿಕಾಂತ ಹೋದ. ಹೋಗ್ ಹೋಗ್ ಹೋಗ್ ಹೋಗಿ ನೋಡಿ ಅಜ್ಜಿ ಮುದ್ಕಿ ಅಂದಿದ್ದೆ. ಅದ್ರ ಸರ್ತಕ್ ಹೋದ. ಅಲ್ಲಿ ಮಾದೊಡ್ಡ ಕೆರಿತ್ತು. ಕೆರಿದಲ್ ಹೋಗ್ ಕೂತ್ಕಂಡ ದನುವಾಗಿ. ಕೂತ್ಕಂತ್ನೂ ಅಜ್ಜಿ ಮುದ್ಕಿ ನೀರೀಗ್ ಬಂತು. ಅವ್ನ ಮಾತಾಡಸ್ತು. “ಯಾವೂರವ ನೀನು? ಯೆಲ್ ಹೋತೆ? ಯೇನ್ ತಾನ? ಕೇಳ್ತು. ತಾನು ಆರ್ಸಗೋಳ್ ಹುಡ್ಗ. ಹೀಗೆ ಊರ ತಿರಗೋಕೆ ಬಂದೊರಾಗಿತ್ತು. ಮತ್ತೆ ಅರಸೂ ಹುಡ್ಗಿ ಚಂದ್ರಕಾಂತಿ ಯಾರೋ ವಯ್ಕಂಡೆ ಹೋಗರೆ. ಅಂದೆ ಹೇಳಿ ಅವ್ರು ಕರ್ದ ಹೇಳರ್ರು. ನೀವು ಅರ್ಸಕಂಡ್ ಬಂದ್ರೆ ನಿಮ್ ಯೆಬೆರಾರವಳಗೆ ಯಾರಾದ್ರೂ ಅರ್ಸ ಕಂಡೆ ಬಂದ್ರೆ. ತಾನು ಮದ್ವೆ ಮಾಡ್‌ಕೊಡ್ತೆ ಅಂದ ಹೇಳಿದ್ರು. ಕಡಿಗೆ ಪರದಾನಿ ಹುಡ್ಗ ಅರೆದಕ ಬಂದ. ತನ್ನತ್ರ ಆಗೂದೆಲ್ಲ ಅರ್ಸ್‌ಕಂಡೆ ಬರೂಕೆ…… ಅಂದೆ ಹೇಳ್ ಹಿಂದೇ ಹೋದ. ನಾನು ಬಂದೆ ಇಲ್ಲಿ” ಅಂದ.

ಆಗ ಅಜ್‌ಮುದ್ಕ್ ಹೇಳ್ತು…. “ಮಗನೇ, ನಿನ್ನ ಕೈಲಿ ಆಗೂದೋ ತರೂಕೆ? ಯೇಳ ಹೆಡೆ ಮಾಶೇಶ ಅದ್ರ ಹೊತ್ಕ ಹೋಗದೆ. ಯೇಳ ಸಂದ್ರದಾಚೆ ಕೀಳ ಸಂದ್ರಕೆ ತಕಹೋಗದೆ. ಕೀಳ ಸಂದ್ರದಲೆ ತಾ ಹೋಗಿ ಮಾದೊಡ್ಡ ಯೆಳ್ಳಿ ಮರ ಅದೆ. ಆ ಯೆಳ್ಳಿ ಮರನ ತುದಿಗೆ ಕಟ್ಟಿಟ್ಟಾದೆ ತೊಟ್ಲ. ನೀ ಅಲ್ಗೆ ಹೋಗೆ ತರೂದೆ ಹೌದೋ? ಮಗನೇ ನಿನ್ ಕೈಲಿ ಹೋಗೆ ತರೂಕೆ ಶಕ್ಯಿಲ್ಲ” ಅಂತು.

“ಅಜ್ಜವ್ವಾ, ಯಾವ ಉಪಾಯ್ದಲೆ ತರಬೇಕಾಯ್ತು” ಹೇಳ್ದ. ಮಗನೇ, ಯೇನಲ್ಲ ನೀನು ಮುಂದೆ ಹೋದ ಕೂಡ್ಲೆ ವಂದ ದುಕಾನ ಸಿಕ್ತದೆ. ಅರವತ್ ಮೂರ ನೇಣ ತಕಳಬೇಕು. ಮರಕ್ ಮುಟ್‌ಬೇಕು. ಆದ್ರ ತಕಂಡೆ ಮುಂದೆ ಹೋಗು. ಮಾದೊಡ್ ವಂದ ಅಡ್ವಿ ಸಿಕ್ತದೆ. ಆ ಅಡವಿಲಿ ದನ ಕಾವ ಮಕ್ಳು ಉಳಿತರೆ. ಅವ್ರ ಕೈಲಿ ಯೋಳ ಅವ್ಳ ಕೈಲಿ ಕೊಡ್ತದೆ. ಯೇನ್ ಕೊಡ್ತದೆ ಅಲ್ ಆ ಯೇಳ ಸಮ್‌ದ್ರಲ್ ಹೋಗಿ ವಂದ ಹಳ್ಳ ಹೊಡಿಬೇಕು. ಹೋದ ನೇಣ ತಕಂಡಿ. ದನ ಕಾವ  ಮಕ್ಕಳ್ ಸಿಕದ್ರು. ಅವ ದಾರೀಲಿ ಯೋಳ್ ಸಂದ್ರಕೆ ಹೋಗೂ ದಾರಿ ತೋರ್ ಕೊಡಿ ಅಂದ ಕೇಳ್ದ. ಅವ್ರು ತೋರ್ ಕೊಟ್ರು. ತೋರ್ ಕೊಟ್ ಕೂಡ್ಲೆ ಸಂದ್ರದಲ್ ಹೋಗೆ ನಿಂತ್ಕಂಡ. ನಿತ್ಕಂಡ ಕೂಡ್ಲೇಯ ಒಂದ ನಾಣ್ಕದ ಹಳ್ಳು ತೊತಾಕ್ದ. ಯೋಳ ಸಂದ್ರನೂ ಅತ್ತಗಿತ್ತಾಗ ಆಗಿ ನಡೆಗೆ ಕೀಳ ಸಂದ್ರದವರಿಗೂ ಮಾರ್ಗಾಗ್ಲಿ ಹೇಳ ಹೊಡ್ದ. ಆಚೀ ಈಚಾಗೆ ಕೀಳ ಸಂದ್ರದವರಿಗೂ ಮಾರ್ಗ ಆಯ್ತು.

ಆಗ ಅವ ನೇಣ ತಕಂಡಿ ಮಾರ್ಗದಾಗೆ ಹೋದ. ಕೀಳ ಸಂದ್ರದವರಿಗೂ ಹೋದ. ಹೋಗ್ತೆ ಹೋಗ್ತೇ ಇರಬೇಕಿದ್ರೆ ಚಂದ್ರಕಾಂತಿ ಹೇಳ್ತದೆ. ಓಡಿಬಾ ಓಡಿಬಾ, ಬೇಗ ಇಳಿಸು, ಮಾಶೇಶ ಕಂಡ್ರೆ ನಿನ್ ತೆಗದೆ ಬಿಡೂದು ಅಂತದೆ. ಇವ ಹೋಗ್ ಹೋಗ್ ಹೋಗ ಹೋಗ್ ಮರಕೆ ಹೋಗ ಮುಟ್ದ.

ಯೆಲಿ ಯೆಲಿಗ್ಯೆಲ್ಲ ಮಾಶೇಶ ಏನಂದೆ ಗೆಂಟಿ ಕಟ್ ಇರ್ಸತದೆ. ಗೆಂಟಿ ಶಬ್ದಾದ್ ಕೂಡ್ಲೆ ಹೆರ್ಗೆ ಬರ್ತದೆ. ಇವ ನೇಣ ಹಾರ್ಸೆ ಬಿಡ್ತನೆ. ಹಾರ್ಸಿ ತೊಟ್ಲವ ನೇಣಿಗೆ ಸಿಕ್ಕಿ ಯೆಲಿಗೆ ಯೆಲ್ಲೆಲ್ಲೂ ತಾಗ್ಸದೆ ತೊಟ್ಲಿಗೂ ಸಿಕ್ಕಿ ನೇಣಿನ ಮೇಲೆ ಹತ್ ಹೋಗ್ತ. ಹತ್ ಹೋಗಿ ತೊಟ್ಕ ನೇಣಿಗೆ ಸಿಕ್ಸಿ ಅವ ಇಳ್ದ ಕೆಳಗೆ. ಕೆಳಗೆ ಯೆಯಡೂ ನೇಣಿನ ಮೇನ್ ಇಳ್ದ. ಇಳದಿ ಬರಬೇಕಿದ್ರೆ ಇಳಿತೆ ಬರಬೇಕಿದ್ರೆ ವಂದ್ ಗಂಟಿಗೆ ಸ್ವಲ್ಪ ನೇಣಿ ತಾಗ್ತು. ತಾಗೆ ದಣಿಗೆಟ್ ಹೋಯ್ತು. ಚಂದ್ರಕಾಂತಿ ಸೂಲಿಕಾಂತ್ನ ಕೈಲಿ ಹೇಳ್ತದೆ. ತೊಟ್ಲ ಹತ್ತೊ ಹೇಳ್ತದೆ. ಮಾಶೇಶ ಬಂದ. ಹಳ್ಳ್ ಹೊಡ್ದ. ಸಂದ್ರಾಗ್ಲಿ ಹೇಳಿ ಯೆರಡ್ನೇ ಹಳ್ ಹೊಡ್ದ. ತೊಟ್ಲ ಹತ್ತರು. ತೊಟ್ಲ ಹತ್ತಿ ನೀರ್ನ ಮೇನೆ ಹೋದ್ರು.

ಅರ್ದೆಕೆ ಹೋಗ್ವಲ್ಲಿವರಿಗೂವ ಸಂದ್ರ ಆರ್ ಸಂದ್ರಾಗೆ ಹೋಗ್ವಲ್ಲಿವರಿಗೂವ ಸಂದ್ರ ತುಂಬೆ ಹೋಗ್ಲಿ ಅಂದ ಹೇಳಿ ಯೆಯಡ್ನೇ ಹಳ್ಳ ಹೊಡ್ದ. ಯೇಳ ಸಂದ್ರಾನೂ ಚತ್ತಾತ್ತಾಯ್ತು. ಅದು ನೀರ್ನ ಬಕ್ಕಂತ್ ಬರತದೆ. ಬೋರ್ ಬೋರ್ ಗುಟ್ಟತ ಬತ್ತದೆ. ಬರಬೇಕಿದ್ರೆ ಚಂದ್ರಕಾಂತಿ ಕಯ್ಯನ್ ಹಳ್ಳ ಹೊಡಿತು. ಯೇಳ್ ಸಂದ್ರ ಆಗ್ಲಿ ಹೇಳ ತನ್ ಕಯ್ಯನ ಹಳ್ಳ ಹೊಡಿತು.

ಅಡ್ಡದಾರಿಲಿ ಬಂದಿ ವಂದ್ ದೇವಸ್ಥಾನದಾಗೆ ಸಾಕಾಗಿ ಮನ್ಗೆ ಬಿಟ್ಟ. ಚಂದ್ರಕಾಂತಿ ಯೇಳ್ಸತದೆ “ಇಲ್ ಮಾಶೇಶ ಬರೂದೂ. ಯೇಳು ಹೋಗ್ವನಿ ಅಂತದೆ. ಇವಗೆ ಏನೇನ ಮಾಡ್ರೂ ಯಚ್ಚರ್ಕೆಯಾಗೂದಿಲ್ಲ. ಬಂದಿ ಚಂದ್ರಕಾಂತಿದ್ದಲ್‌ಹೋಯ್ತು. ಹೋಗೊ ಹೊತ್ಕೆ ಚಂದ್ರಕಾಂತಿ ಅವ ಯಂತಕೆ ಬಂದಿದ್ನೋ ಯೇನೋ ಅವಗೆ ಹೊಡಿ ಬೇಡ. ತಾನು ತಾಯ್ ಮನಿಗೆ ಹೋಗಬೇಕು ಅಂದ್ ಹೇಳ್ ಇಳ್ದ ಬಂದಿದೆ. ಅವ ಕರ್ಕ ಹೋಕ್ಕ ಬಂದವ್ನಲ್ಲ. ತಾ ನಿನ್ ಸಂತಿಗೆ ಯೇಗ್ ಬರ್ತೆ ಅಂತು. ಆಗೆ ಹಂಗಾರ ಹೇಳು ಅಂತು. ಚಂದ್ರಕಾಂತಿ ಚಿನ್ನದ ಉಂಗ್ಲ ಕಳಚಿ ಕೈಲಿ ಹಿಡ್ಕಂತು. ಇರ್ಗೆಲೆಲ್ಲ ಮುತ್ನ ಸರ ತಗದಿ ಹುಸಿದಿ ಅವ ಮನ್ಗೆ ದಲ್ ಬೀಳ್ತು. ಬಿದ್ದ ಮಾರ್ಗದಲ್ಲೆ ಹೋಯ್ತು. ಹೊತ್ಕಂಡಿ ಮಾಶೇಶ ಹೋಗಬೇಕಿದ್ರೆ ಮುತ್ನ ಸರವ ಬೀರ್ತೇ ಹೋತದೆ ಅದು. ಹೋಗ್ ಹೋಗ್ ಹೋಗ್ ಹೋಗಿ ದನ ಕಾವ ಮಕ್ಕಳು ಮತ್ತೊಂದು ಅಡವಿಗೆ ಆ ದಿವಸ ಬತ್ತರೆ. ಆ ಅಡವಿಗೆ ಹೋಯ್ತು. ಹೋಗುವವರೆಗೆ ಅಲ್ಲೆ ಆ ಅಡವಿಯಲ್ಲಿ ಇಟ್ಕಂಡಿ ಅರವತ್ ಮಾರ್ನ ನೇಣ ಮುಚ್ಚೂಕೆ ಹೊಂಡ ತೋಡ್ತು. ಹೊಂಡದಾಗೆ ಆ ತೊಟ್ಕ ಇಳೀಸ್ತು. ಅದ್ರ ಉಟ್ ಸಾಲಿಸೆರ್ಗೆ ಹರಡಿ. ಆ ಉಂಗ್ಲವ ಹೊಂಡ ತೋಡಿ ತನ್ನ ಅಟ್ ಕೆಲ್ಸ ಮಾಡ್ತು. ಅದ್ರ ಸಾಲಿ ಸೆರ್ಗೆಗೆ ಕಟ್ತು. ಕಟ್ ಮೇಲೆ ಯೆಯ್ಡ್‌ಮುತ್ ಬೀರ್ತು ಕೂತಲ್ಲೇಯ.

ಅಲ್ಲಿ ಹೊಂಡ್ದಗೆ ಹಾಕಿ ಮೇನೆಲ್ಲ ಸೊಪ್ ಹಾಕಿ ಮಣ್ ಮುಚ್ತು. ಮಾಶೇಶ ಮುಚ್ಕ ದೇವಸ್ತಾನದಲ್ಲಿ ಬಂತು. ದೇವಸ್ಥಾನದಲ್ಲಿ ಬರುತನ ಇವಗೆ ಯಚ್ಚರಕೆಯಾಯ್ತು. ಯಚ್ಚರಕೆಯಾಗ್ವಲ್ಲಿವರಿಗೆ ನನ್ನ ಈ ಮಾಶೇಶ ತೆಗದೇ ಬಿಡ್ತದೆ. ಯೇನ್ ಮಾಡ ಬೇಕಾಯ್ತು ಅಂದಿ ಮನ್ಗೆದಲೆ ಅಲೋಚ್ನೆ ಮಾಡ್ಕಂಡ. ಮಾಡ್ಕಂಬುತನವ ದೇವ್ರ್‌ಉ ಅದ್ರದ (ತನ್ನ) ಬೋರ್ ಬೋರ್ ಬೋರೆ ಗುಡ್ಡ ಬಂತು. ಕಡ್ ಕಡ್ ಕಡ್ ಕಡ್ಡಿ ತುಂಡ ತುಂಡ ತುಂಡ ತುಂಡ್ ಮಾಡಬಿಟ್ಟ.

ತುಂಡ್ ಮಾಡ್ದೆ ಕೂಡ್ಲೇಯ ರಾಶಿ ಬಿದ್ ಹೋಯ್ತು. ಆಗ ಆ ಪಟ ಯೆಯ್ಡೂ ದೇವ್ರಗೆ ಕೊಟ್ಟ. ದೇವ್ತೆ ಯೇನ ಆಲೋಚ್ನಿ ಮಾಡಬೇಕಾಯ್ತು? ಸೂಲಿಕಾಂತಿ ಯಾವ ದೇಸ್ಕೆ ಯೋಗ್ತೋ ಅದರ ಅರಸೂ ಪಾಯ ಯಾವದು? ಅಂದೆ ಅಲಚ್ನಿ ಮಾಡೂತನ್ನ ಅರ ಮಣಿಸರ ಬೀರ್ದು ಮಣಿ ಸಿಕ್ತು. ಅದ್ರು ಹೆಕ್ದ. ಆಗೆ ಇದೇ ಹಾದಿಲಿ ಹೋಗ್ವನಿ ಅಂದೆ ಹೇಳಿ ಮಣಿ ಸಿಕ್ಕ ದಾರಿಲಿ ಹೋಗ್ತ. ಯೆಯಡೂ ಶಿಕ್ಕೇ ಹೋಯ್ತು ಮಣಿ. ಹೋದ ನೇಣ ತಕಂಡೇ ಅವನೆ ಅವ. ಅಲ್ಲಿ ಮಣ್ಣದಲಿ ಅಗ್ದ. ರಾಶಿದಲಿ ಹೋಗಿ ಯಯ್ಡ ಮುತ್ ಹೆಕ್ದ. ಹೆಕ್ಕಂಡಿ ಹೀಂದ ಈ ಬದಿ ನೋಡೂತನವ ಅದ್ರ ಕಪ್ಪದ ಶಾಲಿ ತುಂಡು ಗಾಳಿಗೆ ಹಾರ್ದ ಹಾಂಗೆ ಆಯ್ದು. ಅದ್ರ ಹೋಗೆ ನೋಡ್ದ.

ಆಗೆ ಇದು ಅಲ್ಗೆ ಹೋಗಿ ನೋಡುವರಿಗೆ ಚಿನ್ನದ ಉಂಗ್ಲ ಸಿಕ್ತು ಅವಗೆ. ಅದ್ರ ತೆಕ್ಕಂಡ. ತೆಕ್ಕಂಡ ಕೂಡ್ಲೇಯ ಆ ಉಂಗ್ಲವ ಕೈಗೆ ಹಾಕಂಡ. ಆಗ ಮಣ್ಣಿಲ್ಲಾ ಬಗ್ದೆ ಬಗ್ದೆ ಬಗ್ದೆ ರಾಶಿ ಹಾಕಿ, ಚಂದ್ರಕಾಂತಿ ಕಾಣ್ಸದ ನೇಣವ ಇಟ್ಟಿ ತೊಟ್ಲ ಉಳ್ ಹಾಕ್ದ. ತೊಟ್ಲ ಮೊಳಿಗೆ ಶಿಕ್ಸದ. ಯೆಳ್ದ ಬರುದೆಲ್ಲ ಮೇನೆ. ಆಗ ಅರಸೂ ಮನಿಗೆ ಹೋದ. ಅಲ್ಲಿ ತನ್ನ ಪರದಾನಿ ಮಗನ ಕರ್ಕಂಡ ಬಂದ. ಆ ಪರದಾನಿ ಮಗ ಮೋಸ ಮಾಡ್ತನೆ. ಹಾಂಗೇಯ ತಕ ಬಂದ. “ಚಂದ್ರಕಾಂತಿ ಹೊಂಡದಗದೆ, ಬಾ ಯೇಳ್ಸಕಂ ಬರಬೇಕು” ಅಂದ. ಹೋಯ್ರೆ ಹೋಗಿ ಅರಸೂ ಮಗ ಇಳಿ ಅಂದ. ಪರದಾನಿ ಮಗನ ಹತ್ರ ಅವ ಯೇನಂದ? ನಾ ಇಳೊದೆಲ್ಲ ನೀವೇ ಇಳಿ ಅಂದ.

ಕಡಿಗೆ ಅರಸೂ ಮಗನೇ ಇಳ್ದ. ಮೇನೆ ಚಂದ್ರಕಾಂತಿಯ ವಗ್ದ ತಕಂಡ. ಅರಸೂಮಗ ಇಳ್ದ್ ಕೂಡ್ಲೆಯ ಮತ್ ನೇಣ ಬಿಟ್ಟ. ಅರಸೂ ಅರ್ಧಕೆ ಹತ್ದ. ಕೂಡ್ಲೆಯ ಅರ್ದಕೆ ಬಿಟ್ಟ. ಹಿಂಡ್ಗ ಕಟ್ದ ನೇಣ ತೆಗದಿ. ಚಂದ್ರಕಾಂತಿ ತಕಂಡ್ ಅರಸೂ ಮನಿಗೆ ಹೋದ. ಅರಸುಗೋಳ ಕೈಲಿ ಹೇಳ್ದ. “ತಾ ತಂದೆ ಚಂದ್ರಕಾಂತಿಯ. ತನಗೆ ಗ್ನ ಮಾಡಕೊಡ್ಬೇಕು” ಅಂದ. ಅಪ್ಪ ಹುಡ್ಗಿ ಕೈಲಿ ಹೇಳ್ತನೆ “ನಿನ್ಗೆ ಆಗೂದು ಆ ಗಂಡ?” ಹುಡ್ಗಿ ಕೈಲಿ ಹೇಳ್ತನೆ “ನಗ್ನ ಮಾಡ್ತೆ” ಅಂದ.

ಹುಡ್ಗಿ ಹೇಳ್ತದೆ “ನೀ ಲಗ್ನ ಮಾಡೂದಾದ್ರ ತಡ ಅದೆ. ನೀ ಬೇರೆ ಮನೆ ಕಟ್ಟಿ ಬೇರೆ ಇರ್ಸಬೇಕು ನನ್ನ” ಅಂತದೆ. ಈ ಬೆಟ್ಟಕೆ ದನ ಕಾವ ಮಕ್ಳು ಬಂದ್ರ. ಬಂದ ಕೂಡ್ಲೆ ಚಂದ್ ಹುಡ್ಗ ಅಡ್ಕಂತ ಅಡ್ಕಂತ ಅಡ್ಕಂತ ಹೊಡ ಇದ್ದಲಿ ಬಂದ ಬಿಟ್ಟ. ಹೀಗೆ ಅರಗೆ ನೋಡ್ದ. ಇಲ್ ಅರ್ಸಗೊಳ ಹುಡ್ಗ ಹೋತಾಡ್ಸಿ ಬಿದ್ ಬಿಟ್ಟರ್ಯಂತ. ಆಗ ದನ ಕಾವ ಹುಡಗ ಏಳ ಜನ ಅಣ್ಣ ತಮ್ಮಂದಿರ ಹತ್ರ ಹೋಗಿ ಅರ್ಸ್‌ಗೋಳ ಹುಡ್ಗರ್ ಹೊಂಡದಗೆ ಜೋತಾಡ್ತೆ ಬಿದ್ದರೆ ಹೇಳ್ ಅವ್ರ ಕರಕಬಂದ. ಅವ್ರು ಇಳದಿ ತೆಗ್ದ ಮೇನ್ ಕುಳ್ಸಕಂಡಿ ಹಳ್ಳದಗೆ ಹೋಗೆ ನೀರ್ ತಂದಿ ಅವಗೆ ಕುರಿಸ್ಕಂಡ್ ಕೂತ್ಕಂಡರೆ. ಅವ ತಕೆಂಡೋದ ಬುತ್ತಿ ಅನ್ನ ಯೆಲ್ಲ ಅವಗೆ ಉಣಿಸಿ ಸ್ವಲ್ಪ ಗಾಳಿ ಗೀಳಿ ಹಾಕಿ ಮಾತಾಡ್ವಾಂಗೆ ಸೋಗೆ ಮಾಡಿ ಇರ್ಸ್‌ರು ದನ ಕಾವ ಮಕ್ಕಳು.

ಇಲ್ಲೇ ಕೂತ್ಕಣಿ ನಾವ್ ಹೋತ್ರು ಮನಿಗೆ ಅಂದ್ ಹೇಳ ಹೇಳ್ತರೆ. ಆಗ ಆ ಹುಡ್ಗರ್ಗೆ ಯೋಳ್ ಜನ್ಕೆ ಜನ್ಕೆ ಯೆಂಟೆಂಟ್ ರೂಪಾಯಂತೆ ಕೊಡ್ತಾನೆ. ಯೆಲ್ ಹೋದ್ರೂ ನಮ್ಗೆ ಬೆಟ್ಟಿಯಾಗಬೇಕು. ಅಂತ ಅವ್ರೆ ಮನೀಗೆ ಹೋತ್ರು. ಈ ಅರಸೂ ಹಗೂರ್ಕೆ ಯೆದ್ದಿ ಚಂದ್ರಕಾಂತಿ ಅಪ್ಪನ ಮನಿಗೆ ಬಂದ.

ಬಂದ ಕೂಡ್ಲೆಯ ಪರದಾನಿ ಹುಡ್ಗ ಕಾವಲಿಗೆ ಉಳೀತನೆ. “ಯೇ! ಅವನ ತಕಂಡೆ ಹೋಗಿ ಅಡವಿಲಿ ಯೆಯ್ಡು ಕಾಲು ಕಡ್ಡಿ ಬನಿ” ಅಂತ. ಅರ್ಸೆಗೊಳ ಕೇಳೂದೇ ಇಲ್ಲ ಅವ. ಅಡವಿಗೆ ತಕಂಡೆ ಹೋಗಿ ಅವ್ನ ಕಾಲ ಕಡಿದಿ ವಂದ್ ಹಿಂಡ್ಗೆ ವಗ್ದೆ ಬರತ್ರು. ಜೀವಿರ್ತದೆ. ಆ ದನ ಕಾವ ಮಕ್ಕಳು ಮೂರ ಬೆಟ್ಟದೆ. ದಿನ ವಂದೆ ಬೆಟ್ಟಕೆ ಬತ್ತರೆ ದನ ಕಾವೂಕೆ. ಬಂದ್ರ ದನ ಕಾವಕೆ.

ಆಗ ಕಾಲ ಕಡ್ಡಲ್ಲಿ ನೆಣ ಕೂತಿ ಬೋರ್ ಗುಡ್ತದೆ ನೆಳ. ಕಯ್ಯೆಲ್ಲ, ಕಾಲೆಲ್ಲ, ಯೇಯವೊಂದಿದೆ ಅವಗೆ. ಆ ಹುಡ್ಗರು ನಮ್ ವಂದೆ ದನ ಕಾಂಬದೆಲ್ಲ ಅಂದಿ ಅರ್ಸಕಂಡೆ ಬಂದ್ರು. ಇಲ್ಲಿ ನೇಣ ಹಾರಾಡ್ತದೆ ಅಂದೆ ನೋಡುಕೆ ಬಂದ್ರ. ಬರುವರಿಗೆ ಅರಸೂಮಗ.

ಅವ ನನ್ ಕಾಲ ಕಡ್ದರೆ ಅಂಬೂರಾಗೆ ಅಟ್ಟೂ ಜನ್ರು ಅಲ್ಲಿದ್ದಾ ವೋಡ್ ಬಂದ ತಕಂಡೆ ಹಳ್ಳಕೋದ್ರು. ಅವ್ರ ಮೈಕೈಯೆಲ್ಲ ತೊಳ್ಸಕಂಡಿ ಮುಲಾಂ ಕಟ್ಕಂಡಿ ಹಿಂದೆ ಬೆಟ್ಟಕೆ ಕರ್ಕಂಡ ಬಂದ್ರು. ಊಟಕೆ ತಂದದ್ಯೆಲ್ಲಾ ಅವರೇ ಉಣಸೆತ್ರು.

ಬಾಯ್ ತೊಳ್ಸಕಿ ತೋಡಿ ಇದ್ದದ್ ಇಟ್ಟಿ, ಸೊಪ್ಯೆಲ್ಲಾ ಕಡ್ಡಿ ಚಪ್ರಮಾಡಿ ಇಟ್ ಕೊಟ್ಟು ಬತ್ರು. “ಯೆಂಟ್ ಯೆಂಟ್ ರುಪೈ ಸೊಂಡ್ದಗಿಂಡ ತೆಕ್ಕಣಿ, ಅಂದ ಕೊಟ್ಟ. ಅವ್ರ್ ತಕಂಡ್ರು. “ನಾಳಿಕೆ ನಾವ್ ಇದೇ ಅಡವಿಗೆ ಬತ್ರು. ನೀವಿಲ್ಲೇ ಉಳಿರಿ” ಅಂದೆ ಹೇಳ್ಕ ಹೋತ್ರು.

ಅಲ್ ಉಳಿತನೆ. ದಾತ್ರೆ ದೇವ್ರ ಸೋರಿ ತಿರ್ಗೂಕೆ ಹೋಗಬೇಕಾದ್ರೆ ತೀಡ್ಕಂತ ಉಳಿತಾನೆ. ದೇವ್ರ ವರ ಪರಾಣಿಯಾಗತದೆ ಅಂದು. ಪಾರ್ವತಿ ಪರಮೇಸ್ರು ಆರಾಣದ ಅಡವಿಲಿ ಯಾವ ವಲಯಾಗತದೆ ಅಂತಿ ನೋಡತಾರೆ. ಕೈಯಿ ಕಾಲು ಅಟ್ಟ ಕಡ್ದೆ ಬಿಟ್ಟಾರೆ ಅವ್ರು. ಯೇನಾಯ್ತು ಯಾರು ಕಡ್ದರು ಹೇಳ್ತು.

ಪರದಾನಿ ಹುಡ್ಗ ಹುಕುಂ ಕೊಟ್ಟಿದ್ದ. ಕಡ್ದೆ ಹಾಕ ಬಿಟ್ರು ಕಾಲು ಕೈಯಾ. ನಿನ್ಗೆ ಯೇನ್ ಬೇಕು ಬೇಡ್ಕ ಅಂದ್ರು. “ನನ್ಗೆ ಯೇನೂ ಬೇಡ, ಕೈಯಿ ಕಾಲು ಮಾತ್ರ ಬೇಕು. ಕಯ್ಯಿ ಕಾಲು ನಾನು ಹೋಗು ಅಂದ್ರ ಹೋಗಬೇಕು, ಬಾ ಅಂದ್ರೆ ಬರಬೇಕು. ಅನಮನೀ ಮಾಡಬೇಕು.” ಅಂದ. ಕೈಕಾಲ್ ಮಾಡದ್ರು. ಕಡಿಗೆ ಹೋಗಿ ಅಂದ ಹೇಳು, ಅಂದ್ರ. ಹೋಯ್ತು, ಕೈಕಾಲು ಮತ್ ಬರಲಿ ಅಂದೆ ಹೇಳು ಅಂದ್ರು. ಬಂತು ಆಗ.

ಬಂದ ಕೂಡ್ಲೇಯ ಇದೇ ನಮೂನಿ ಇರುದೆ ಬೇಕೋ? ನರಮನ್ಸರ್ ಕಿಟ್ಟರೆ ಮಾತ್ರ ನಿನ್ ಕೈಕಾಲ್ ಗಟ್ಟಿಯಾಗ ಹೋಗುದು. ಆಗ ಯೇನ್ ಮಾಡ್ತೆ? ಅಂದ ಹೇಳ್ರು ಆಗ ಗಟ್ಯಾದ್ರೆ ಅಡ್ಡಿಲ್ಲ, ಅಂದ. ನಾನು ಹೋಗ್ಲಿ ಕೈಕಾಲು ಅಂದ ದಿವ್ಸ ಹೋಗಬೇಕು. ಬರಲಿ ಕೈ ಕಾಲು ಅಂದಾಗ ಬರಬೇಕು, ಅಂದ. ಅಟ್ಟೆವರು ಸಾಕಾ ಕೇಳ್ರು. ಸ್ವಾಮಿ ನಂಗೆ ಅಟ್ಟೇ ಸಾಕು ಅಂದ. ಅವ್ರೆ ನೆಡ್ಡೆ ಬಿಟ್ಟ್ರು.

ದನಕಾವ ಮಕ್ಕಳು ಬರಬೇಕಿದ್ರೆ. ಕರದ ಅವ. ಆಗವ್ರ್‌ಬಂದ್ಕಂಡಿ ಕೈ ಮುಗ್ದರು. ಕೈ ಕಾಲ್ ಬಂತೋ? ಕೇಳ್ರು… ನಿಮ್ ಊರೈಲ್ಲಿ ದೇಸ್ಯೆಲ್ಲಿ ಅಂದ ಹೇಳಬೇಕು, ನೀವು. ನಾ ಕರ್ಯ ಕೊಟ್ಟಾಗ ಅಷ್ಟೂ ಜನ್ರು ಬರಬೇಕು ಅಂದ.

“ನಮ್ಮೂರು ದಡ್ಡೂರು ದಡ್ಡೂರು ಅಂದ ಹೇಳ್ರು. ನಾವು ಒಂದ ತಂದಿಗೆ ಯೇಳ್ ಜನ ಗಂಡ ಮಕ್ಕಳು.

“ತನ್ ಪತ್ರ ಕೊಟ್ರ ನೀವ್ ಬರೂರೋ?” ಕೇಳ್ತ ಆ ಹುಡ್ಗರ ಕೂಲಿ. “ಆಗೂದು ನಾವ ಬತ್ರು!” ಅಂದ ಹೇಳಿದ್ರು ಹುಡ್ಗರು. ಅಟ್ಟೇ ಕೇಳ್ಕಂಡ್ ಜನ್ಕ ಹತ್ ಹತ್ ಹತ್ ರೂಪಾಯಿಯಂತೆ ಕೊಟ್ಟ. ಅಜ್‌ಮುದ್ಕಿ ಮನಿಗೆ ಬಂದ. ಬಂದ್ಕಂಡಿ, ತೋಟ್ದ ಮೂಲೀಲೇ ದೊಡ್ಡ ಹೂಂಗ್ನ ವನ ಇತ್ತು. ಅಲ್ಲಿ ಹೂಂಗ್ನ ವನದಲ್ಲಿ ಬಂದ್ಕಂಡಿ “ದೇವ್ರೇ ನನ್ನ ಕೈ ಕಾಲ ಹೋಗ್ಲಿ” ಅಂದ ಹೇಳಿ ಅಲ್ ಕುತ್ಕಂಡ. ಆಗ ವಂದ ಅಜ್‌ಮುದ್ಕಿ ದಿವಸಾಕೂ ಅಲ್ಲಿ ಹೋಂಗ್ ಹೊಯ್ತಿತ್ತು. ಹೂಂಗ್ ಹೊಯ್ಯಬೇಕಿದ್ರೆ ಬೆಳ್ದಾಮುಂಚೆ ಯಿದೆ ಬಂತು ಹೊಂಗೆ ಕೊಯ್ಯುಕೆ.

ಅದೆ ಬರ್ವಲ್ಲಿ ವರಿಗೆ ಅದ್ರ ಮಾತಾಡ್ಸ್‌ದ. “ಅಜ್ಜವ್ವಾ ಅಂದ” ಯೇ ಮೊಮ್ಮಗ್ನೇ ಯೆಲ್ಲಿದೆ ಬಂದಿದ್ಯೋ? ಕಯ್ಯಿಕಾಲು ಇಲ್ಲಲ್ಲೋ, ಹೇಗೆ ಬಂದಿದ್ಯೋ?” ಕೇಳ್ತ. ಅವ ಯೇನಲ್ಲ ಅಜ್ಜವ್ವ, ಹೀಂಗೆ ಹೊತ್ಕಂಡು ವಬ್ಬಂವ ಬಿಟ್ಟ್‌ಕ್ ಹೋದ ಅಂದ. ಕಡಿಗೆ “ನೀಯೆಂತಾ ಕೆಲ್ಸ ಮಾಡ್ತೆ? ಅಜ್ಜವ್ವಾ?” ಕೇಳ್ದ.

“ಯೇನಲ್ಲ ಮಗನೇ, ಅರ್ಸ್‌ಗೋಳ ಮಗಳಿಗೆ ಹೂಂಗೆ ಕೊಂಡ್ಕಂಡು ದಂಡಿ ಕಟ್ಲಂಡು ಹೋಗೂದು. ಅವರು ವಂದ ಶಿದ್ ಅಕ್ಕಿ ಕೊಡ್ತಾರೆ. ಅನ್ನ ಮಾಡ್ಕಂಡ ಊಟ ಮಾಡ್ವದು ಅಂತು. ಅಜ್ಜವ್ವಾ, ಇಂದ ನಾ ಕಟ್ತೆ ಹೂಂಗಾ ಇಲ್ಲೇ ಇರ್ಸ್‌ಹೋಗು ಅಂದ.

ಆಗ ಅಜ್ಜವ್ವ ಹೇಳ್ತದ “ಯೇನು ಮಗನೇ, ಕಯ್ಯಿಲ್ಲ, ಕಾಲಿಲ್ಲ ಹೇಂಗ್ ಮಾಡಿ ಕಟ್ತೆ?” ಕೇಳ್ತು. “ನಾ ಬಾಯ್ಲ್‌ಕಟ್ತೆ”ಅಂದ. ಹೂಂಗಟ್ಟು ತೆಗ್ದಿಟ್ ಹೋಯ್ತು. “ನಂಗಿಟ್ ಊಟಕ್ ತಕಂಡಿ ಬಾ. ನಾ ಕಟ್ ಇರ್ಸತೆ ಹೋಗು” ಅಂದ.

ಆಗ ಹೂಂಗೆ ಕೊಯ್ದಿ ಚೊಬ್ಬಿಲ್ ಹಾಕಿಟ್ಲಿ ಅನ್ನ ಪದಾರ್ತ ಮಾಡ್ಕಂಡ ತಕಂಡ್ ಬಂತು. ಚಂದ್ ಮಾಡ್ ಇಟ್ಟನೆ ಹೂಂಗ್ನ ದಂಡ್ಯ. ಆಗ ಅಜ್‌ಮುದ್ಕಿ ಅನ್ನ ತಕಂಡೆಬಂದ ಇಟ್ತು. ಮೊಮ್ಮಗನೇ, ನಿನ್ಗೆ ಕಯ್ಯಿಲ್ಲ, ಕಾಲಿಲ್ಲ. ನಾ ಉಣ್ಸಿಕೊಡ್ತೆ ಅಂತು. “ಉಣ್ಸ ಕೊಡೂದೆ ಬೇಡ ಅಜ್ಜವ್ವಾ. ನಾ ಉಣ್ತೆ. ನೀನ್ ಹೂಂಗ್ನದಂಡಿ ತಕಂಡಿ ಅರಸೂ ಮನಿಗೆ ಹೋದು. ಅರಸಗೊಳ ಉಡ್ಗಿ ಯಾರೂ ದಂಡೆ ಕಟ್‌ದೋರು ಕೇಳಿದ್ರೆ ನನ್ನ ಮೊಮ್ಮಗ. ನಮ್ಮನಿಗೆ ಬಂದನೆ. ಮೊಮ್ಮಗ ಕಟ್ಟನೆ ಹೇಳಿ” ಅಂದ.

ಅಜ್‌ಮುದ್ಕಿ ಹೂಂಗ್ ತಕಂಡಿ ಅರ್ಸ್‌ಗೊಳ ಮನಿಗೆ ಹೋಯ್ತು. ಅರ್ಸ್‌ಗೊಳ ಹುಡ್ಗಿ “ಅಜ್ಜವ್ವಾ, ಇಂದ್ ಯಾರ್ ಕಟ್ಟರೆ? ಬಾರಿ ಚೆಂದಾಗದೆ. ನೀ ಹೀಂಗ್ ಕಟ್ಟುದಿಲ್ಲಾಗಿತ್ತು. ಇಂದ ಯಾರ್ ಬಂದರೆ ನಿಮ್ಮನ್ಗೆ?” ಕೇಳ್ತು.

“ನನ್ ಮೊಮ್ಮಗ ಬಂದನೆ. ಅವನೇ ಕಟ್ದವ”, “ನಿನ್ ಮೊಮ್ಮಗ್ನ ಕೈಲಿವ ದಿವ್ಸ ಇಲ್ ಬರೂಕ್ ಹೇಳು” ಅಂತು. ಹೇಳ್ತೆ ಮಗನೇ, ಅವ ಯೇನ ಬರವಾಂಗೆಲ್ಲ”. ಹೇಳ್‌ದ್ರೂವ ಹೇಳ್ತದೆ ಅದು “ಯೆಂತಕ್ಕಿಲ್ ಬರೂದೆಲ್ಲ, ಯೇನೆಲ್ಲ, ಬರುದೆಲ್ಲ?” “ಹೇಳ್ತು. ಬಂತು. ಬಂದ ಕೂಡ್ಲೆಯ, ಇವ ಹೋಗ್ಲಿ ಕೈಕಾಲ ಹೇಳ್ದ. ಕಂಟನಾಗೆ ಕುತ್ಕಂಡ “ಯೇ ಅಜ್ಜವ್ವಾ, ಯೇನ್ ಹೇಳ್ತದೆ?” ಕೇಳ್ದ.

“ನಿಂಕಲ್ ಬರೂಕೆ ಹೇಳದೆ ಮೊಮ್ಮಗನೇ”

ಮಾರನೆ ದಿವ್ಸ “ನೀ ಇಂದ ಹೂಂಗೆ ಕೊಯ್ಕ ಬರಬೇಡ. ನಾನೇ ಕೊಯ್ದಿ ದಂಡಿ ಕಟ್ ಇರ್ಸತೆ, ದಂಡಿ ತಕಂಡ ಹೋಗು” ಅಂದ.

ಬೆಳಗಾ ಮುಂಚ್ಯೆದ್ದಿ ಕೊಯ್ದಿ ದಂಡಿ ಕಟ್ಟಿ ಚೆಂದ ಮಾಡಿಟ್ಟ. ಮಾರನೆ ದಿವ್ಸ್‌ಬೆಳಗಾ ಮುಂಚೆ ಕೊಟ್ಟಾಕ್‌ಬಾ ಅಂದ.

“ನೀ ಕರ್ಕಂಬಾ ಅಂದ್ರೆ ನನ್ನ ಮೊಮ್ಮಗ ಕುಂಟ. ಕಾಲಿಲ್ಲ, ಕೈಯಿಲ್ಲ. ಬರೂಕಾಗೊದೆಲ್ಲ ಅಂದೆ ಹೇಳು” ಅಂದ ಹೋಯ್ತು ಅಜ್‌ಮುದ್ಕಿ.

“ಅಜ್ಜವ್ವ, ಯೆಲ್ ಹೋದ್ನೆ ನಿನ್ನ ಮೊಮ್ಮಗ? “ಯೆಲ್ ಬರುದೆಲ್ಲ ಕೈಕಾಲೆಲ್ಲ” “ಹೇಂಗ ಕಟ್ತ ದಂಡಿಯ? “ಹೇಂಗ್ ಕಟ್‌ತ್ನೊ ಯೇನೋ ಕಟ್ತ ಅಂತೂವ” ಅಂತು.

ಆಗ “ಅಜ್ಜವ್ವಾ, ಹಾಂಗೆ ಹೇಳ್ದ ಕೂಡ್ಲೆಯ ಹೂಂಗ್ನ ದಂಡಿ ಮಾತ್ರ ಕುಡಿಕಂಡ್ ಮುದಿ ಹೇಳು” ಹೇಳಕಳ್ಸಿದ್ದ. ಅದೆ ಹಾಂಗೇ ಹೇಳ್ತು.

ಕುಡಿಕಂಡ್ ಮುಡಿತ್ನೂವ ಅರಗೆ ಸಣಿ ಮುತ್ನ ಹಳ್ಳ ಹೂಂಗ ದಂಡಿಲ್ ಉದ್ರಯೋಯ್ತು, ಅಗದೆ ಹೆಕ್ತು. ಹೆಕ್ಕಂಡಿ, ಇದ್ಗೆ ಯೆದಿಲ್ ಗುಂಡ್ ಹೊಡ್ದಾಂಗೆ ಆಗ್ ಹೋಯ್ತು. ಅಜ್‌ಮುದ್ಕಿ ಬಂತು ಆಗೆ.

“ಅಜ್ ಮುದ್ಕೀ, ನಿಮ್ಮನಿಲ್ ಯಾದ ಬಂದರೆ, ಹೇಳು. ನೀನು ಕುಂಟ್ನಲ್ಲಿ, ಕುಯ್ಡನಲ್ಲ. ಯಾರು ಹೇಳು” ಹೇಳ್ತದೆ. ಯಾರಿಲ್ಲ. ಕುಂಟ್ನೇಯ ಅಂತದೆ. ಆಗ್ಲಿ; ಕುಂಟಾದ್ರೆ ಅಡ್ಡೆಲ್ಲ! ಅವ್ನ ಕೈಲ್ ವಂದೆಶತಿ ಬರೂಕೆ ಹೇಳು” ಅಂತು.

ಅಜ್‌ಮುದ್ಕ ಬಂತು ಇಲ್ಗೆ. “ಮೊಮ್ಮಗ್ನೇ, ಅರ್ಸಗೊಳ ಹುಡ್ಗ್ಯರು ವಂದ ಸಾರ ಬಂದ ಹೋಗು ಅಂದರೆ; ನಿಮ್ ಕೈಲಿ ಮಾತಾಡಬೇಕೆಂತ” ಅಂತು. ಆಗ ಯೇನಂದ್ರಂತೆ? “ನಾನು ಬರುದಾದ್ರೆ ಹೇಳ್ತೆ ಅಜ್ಜವ್ವಾ. ನೀನು ಹೂಂಗ್ನ ದಂಡಿ ಕಟ್ಟಿ ಯೇನುಪಾಯ ಮಾಡೂದದೆ ನಾ ಮಾಡ್ ಕಳ್ಸೆತೆ, ಇಂದ ನಂಗೆ ವಂದ ಶಿದ್ದಕ್ಕಿ ಯೊಯ್ದಿ ಆಶಿಮಾಡಿ ಅನ್ನ ಮಾಡ್ಕಂಡೆ ಬರಬೇಕು” ಅಂದ. ನಾನು “ವಂದ ಶಿದ್ದಕ್ಕಿ ಅನ್ನ ಮಾಡ್ಕಂಡ ಬರುವರ್ಗೆ ಹೂಂಗ್ನ ಕೊಯ್ದಿ ಚೆಂದಾಗ ದಂಡಿ ಕಟ್ಟಿ ಇರ್ಸೆತೆ” ಅಂದ.

ಹೂಂಗೆಲ್ಲ ಕೊಯ್ದಿ ಚೆಂದ ಮಾಡಿ ದಂಡಿ ಕಟ್ಟಿ ಚಿನ್ನದ ಉಂಗರ ಮುತ್ನಸರ ಹಾಕಿ ಕಟ್ಟಿ ವಂದ ಚೀಟಿ ವಳಗೆ ಬರದ. ನಿನ್ನ ಮಲ್ಗಿ ಸರ ಇದು. ನಾನು ಇಟ್ ಸಾಸ ಬಿಟ್ಟವ. ಪರದಾನಿ ಹುಡ್ಗ ನನ್ ಕಾಲ್ ಕಡ್ದನೆಯೆಲ್ಲ ಬರದಿ ಕಳ್ಗಸ್ದ.

ಅಜ್ಜಿಮುದ್ಕಿ ಬಂತು. “ಅಲ್ಲ ಮೊಮ್ಮಗ್ನೇ, ವಂದ ತುತ್ ಉಣ್ಸಿಕೊಡ್ತೆ ನಾನು. ನಿನ್ನ ಕೈಲಾಗುದೆಲ್ಲ” ಅಂತು.

“ಅಜ್ಜವ್ವಾ, ನಾ ಉಣ್ತೆ. ನೀನು ತಕಂಡ್ ಹೋಗ ಹೂಂಗ್ನ ದಂಡಿ ಕೊಡು. “ಕರಕಬರಲಿಲ್ಲವೊ ಮೊಮ್ಮಗ್ನ?” ಹೇಳ್ತದೆ ಹೊಡೂಕೆ ಬತ್ತದೆ. ಆಗ ನೀನು ವೋಡ್ ಬಂದೆ ಬಿಡು. ಕಡಿಗಾ ಹೂಂಗ್ನ ದಂಡಿ ಮಂಚಕ ಜಪ್ ಬಿಡ್ತದೆ. ಉಂಗ್ಲ, ಮುತ್ನಸರ ಬೀಳ್ತದೆ. ಆಗ ನೀ ಮುಂದೆ ಹೋಗು. ಆಗ ಹೇಳ್ತದೆ ನಿಂಕೈಲಿ. ಯಾರ ಬಂದರೆ, ಯೆಲ್ಲವ್ರೆ ಕೇಳ್ತದೆ. ಆಗ ಕಯ್ಯಿಲ್ಲ, ಕಾಲಿಲ್ಲ, ನಿಮ್ಮ ತೋಟದ ಮೊರಿಲ ಅವನೆ. ಮತ್ತೆ ಚಿನ್ನದ ಪಾಲಕಿ ತಕ್ಕಂಡಿ ಆಳಮಂದಿ ಕೈಲಿ ತೆಗಿಸ್ಕಂಡಿ ಬರಬೇಕು. ಅಂದನೆ ಹೇಳು ಅಂತ. ತಕಂಡ ಹೋಯ್ತು.

“ಮೊಮ್ಮಗ ಯೆಂತಕ ಬರ್ಲಿಲ್ಲ?” ಕೇಳ್ತು ಅವ ಬರುದಿಲ್ಲ. ಬರೂಕಾಲೆಲ್ಲ ಹೇಳ್ತು. ಕಡೀಗೆ ದಂಡಿ ಜಪ್ತು. ಅಷ್ಟರೊಳಗೆ ಉಂಗ್ಲ, ಮುತ್ನಸರ ಚೀಟಿ ಯೆಲ್ಲ ಬಿತ್ತು, ಚೀಟಿ ವೋದ್ ನೋಡ್ತು. ಮುತ್ನ ಸರ ಯೆಲ್ಲ ಪರಿಕ್ಸಿ ಮಾಡಿ ಆಗ ಮುದ್ಕಿ ಕರೀತು. ಮುದ್ಕಿ ಕಲಿ ಕೇಳ್ತದೆ. “ಯಾರ ಬಂದರೆ ಯೇನತನ ನಂ ಗುತ್ತಾಯ್ತು. ಯೇನ ಚಿನ್ನಪ್ಪ ಹೇಳರೆ?” ಕೇಳ್ತು.

“ಯೇನಲ್ಲ, ನಿಮ್ಮ  ಅಪ್ನ ಮನಿ ತೋಟದಲ್ಲಿ ಬಂದವ್ನೆ, ಚಿನ್ನದ ಪಾಲಕಿ ತಕಂಡಿ ನಿಮ್ಮ ಕೈಲಿ ಬರೂಕೆ ಹೇಳರೆ” ಅಂತು.

ಅದು ಆಳಮಂದಿ ಪಾಲಕಿ ತಕಂಡಿ, ತೋಟ್ದ ಮೂಲಿಗೆ ಬಂದು. ಬಂದು ಅವ್ನ ಕುಳ್ಸಕಂಡಿ ಮನಿಗೆ ಬಿಡಾರಕ್ಕೆ ಕರ್ಕಹೋಯ್ತು. ಹೋಗಿ ನೀರ್ ಕಾಸಿ ಯೆಣ್ಣಿ ತಿಕ್ಕಿ ನೀರ್ ಮೀಸ್ತು. ಮೀಸಿ ಹತ್ತಿ ಹಾಸ್ಗಿ ಮಾಡಿ ಮನಗೆಸ್ರು. ಕೈಕಾಲ್ ಬಂದಾಗ ಮುಟ್ಟಿಗೆ ಮಾತ್ರ ಗಟ್ಯಾಗ ಹೋತದೆ.

ಕಡಿಗೆ  ಕೈಕಾಲೆಲ್ಲ ಇದೇ ತೊಳಿಸಕಂಡ ಬಂದು ಊಟಕೆ ತಾನೇ ಮಾಡಿ ಬಡ್ಸಿ ಉಣಿಸಿ ಮೊಕಗಿಕ ಯೆಲ್ಲ ತೊಳಿಸ್ತು, ತೊಳಿಸಿ ವರಸಿತು.

ಮಾರದಿವಸ “ನೀ ಬಚ್ಲಲೆ ನೀರ್ ಕಾಸಿ ಹದಾ ಮಾಡಿ ಇಟ್ ಬಾ. ಮೀಸೂದ ಬೇಡ ಅಂದ. ಹ್ಯೇಂಗ ಮಿಂದಬರ್ತಿ?” ಕೇಳ್ತು. “ನಾ ಹೇಂಗಾದ್ರೂ ಮಿಂದ ಬತ್ತೆ” ಅಂದ. ಬಚ್ಲಲೆ ಬಾಗ್ಲ ಹಾಕಂಡಿ ಕದ ಹಾಯ್ಕಂಡಿ ಮೀವ್ಕ ಹೋದ, ಕೈ ಕಾಲು ಬರಲಿ ಅಂದ್ರ. ಕೈಕಾಲು ಬತ್ಲೆ ಮಿದ್ಕಂಡಿ ಉದ್ಕಂಡ ನಿತ್ಕಂಡ್ರು. ಬಾಗ್ಲ ತಕ್ಕಂಡ ಕೈಕಾಲ ಹೋಗ್ಲಿ ಅಂದ್ರ. ಕೈಕಾಲು ಹೋಯ್ತು. ಉಣಿಸಿ ಮಂಚ್ದ ಮೇನೆ ಮನಗ್ಸಿ ಊಟ ಉಪಚಾರ ಮಾಡಿ ಕೇಳ್ತು “ಕೈ ಕಾಲ್ ಯಾರ್ ಕರೆದ್ರು ಯೆಂತಾಯ್ತು” ಕೇಳ್ತದೆ.

“ನೀನು ಯಾರ್ಗೆ ನಗ್ನಾತೆ ಅವ್ರೆಗೆ ನಗ್ನಾಗು ಕಡ್ಡೆಲ್ಲ. ನಾ ಕುಂಟ. ನೀ ಯಾರ್ಗೂ ನಗ್ನಾಗು. ನನ್ಗೆ ಬೇಜಾರೆಲ್ಲ” ಅಂದ. ಅಂದ ಹೇಳ್ತದೆ “ಇಟ್ಟೆಲ್ಲಾ ಸಾಸ ಮಾಡ್ದೊರು ನೀನೇಯ. ಕುಂಟನಾದ್ರೂ ಅಡ್ಡಿಲ್ಲ” ಹೇಳ್ತದೆ; ನಿಮ್ ಕೈಕಾಲೆಲ್ಲ. ಯಾವ ತರದಲಿ ತಿರಗಾಡೂರಿ? ಕಯ್ ಕಾಲೇ ಇಲ್ಲ “ಕಯ್ ಕಾಲ್ ಇಲ್ಲದಿರೆ ನಾ ಹೇಗೆ ಉಳಿತೆ. ನಿಂಗೂ ತರಾಸೆ ಕೊಟೆ ಹಾಂಗಾತದೆ. ಯಾರಾದ್ರೂ ಲಗ್ನಾಗೆ ನೀನು” ಹೇಳ್ತೆ. ತರಾಸಾದ್ರೂ ಅಡ್ಡೆಲ್ಲ. ನಿನ್ನೇ ಮದ್ಯಾತೆ ತಾನು ಅಂತು. ಮಾರನೆ ದಿವಸ ನೀರ್ ಕಾಸಿ ಹದಾ ಮಾಡಿ ಕೊಡಪಾಸ ಇಟ್ಟು ಕುಳ್ಸ ಬಂದಿ ಬಾಗ್ಲ ಹಾಕಿ ಬಂತು. ನೀರು ಹದ ಮಾಡ್ಕಂಡ ಮೇನಿಂದ್ ಮೇನ್ ಹತ್ ಹೋಗಿ ವೋಡ್ಲ ತೆಗಿತು. ಅರಗೆ ನೋಡ್ತು, ಸಬಂದೆ ಕಯ್ಯಿಕಾಲು ಅಟ್ಟೂ ಅದೆ. ಮೀಯ್ತು.

ಕಡಿಕೆ ಯೆಯ್ಡ ಮಾರನೆ ಶರಗಿ ತಕಂಡೆತು. ಮಿಂದ್ಕಂತ ಇರಬೇಕಾದ್ರೇಯ ಆ ಶರಗಿ ಅವ್ನ ಮೈಮೇನ ಬಿಟ್‌ಬಿಡ್ತು. ಅವ ಆಗ “ಕೈ ಹೋಗ್ಲಿ ಕಾಲ ಹೋಗ್ಲಿ” ಅಂತ ಹೋಗುದೆಲ್ಲ.

ಅವಗೆ ನಗ್ನಾಗುಕೆ ಅಪ್ಪಗೆ ಹೇಳ್ತದೆ. ಕೇಳೂರ್ಗೆ ದಂಗ್ಲ ಸಾರ್ ಕೇಳ್ದೆದೆ. ಊರಿಗೆ ವಾಲಿಬರದು ನಗ್ನಕೆ ತಯಾರಾಯ್ತು. ಯೇಳೂ ಜನ್ಗೆ ಕರ್ಯೆ ಕೊಟ್ಟ ಅವ. ಯೇಳೂ ಜನ್ರೂ ಬಂದ್ರು, ಯೆಂಟ್ ಜನ ಲಗ್ನಾಗ್ತಾರೆ. ಚಂದ್ರಕಾಂತಿ “ಪರದಾನಿ ಮಗನ ಆರಣದ ಅಡವಿಗೆ ತಕಂಡ ಹೋಗಿ ಕೊಂಡ ಹಾಕಬೇಕು ಅಂದಿ; ಅವ್ನ ಬಸ್ಮ ತಕಂಡ ಬಂದಿ ತನ್ಗೆ ತೋಡಬೇಕು. ಅಟ್ಟು ಮೋಸ ಮಾಡ್ದವ್ನೇ ಅವ” ಅಂತ ಅವ್ರಗ ಹೇಳ್ತದೆ. ಇವ್ರ್‌ಮನಿಲೆ ಉಳ್ಕಂತದೆ.

 ಹೇಳಿದವರು:

ತಿಪ್ಪಿ ಕೋ ಪರಮೇಶ್ವರ ಪಟಗಾರ ಮಿರ್ಜಾನ.
ದಿ: ೦೭-೦೫-೧೯೭೨