ನಾರಾಯಣ ಭಟ್ಟ ಅಣ್ಣನವರು, ಕೃಷ್ಣಭಟ್ರು ತಮ್ಮನವರು, ನಾರಾಯಣ ಭಟ್ರು ಯಜಮಾನಿದ್ರು. ಅವಾಗೆ ದಾನ ಮಾತಾ ಇರ್ತಿದ್ರು. ಊಟ ಆಗ್ದಿದ್ದವ್ರಿಗೆ ಊಟ ಹಾಕ್ತಿದ್ರು. ಕಾರ್ಯ ಮಾಡುವವರಿಗೆ ಕಾರ್ಯ ಮಾಡಸೂರು. ಇದೇ ರೂಪದಲ್ಲಿ ಕಾಲ ಕಳೀತಾ ಇದ್ರು.

ವಂದಲ್ಲಾ ವಂದ ದಿವ್ಸದಲ್ಲಿ ಅಣ್ಣ-ತಮ್ಮ ಯೆರಡೂ ಜನ್ರು ಬಟ್ರು ಸುಖದಲ್ಲಿ ಊಟ ಮಾಡಿ ಕುಂತಾಗ ಕೃಷ್ಣ ಭಟ್ರು ಕೇಳ್ತವ್ರೆ ಅಣ್ಣನ ಕೈಲಿ- “ಅಣ್ಣಯ್ಯ ಇಟ ಕಾಲ ಪರ್ಯಂತ್ರ ಅನ್ನದಾನ ಮಾಡ್ತ ಬಂದಿರುವ; ಅನ್ನದಾನ ಮಾಡಿದ್ರೆ ಯೇನ್ ಫಲ ಶಿಕ್ತದೆ? ಅಂದಿ ಅವ್ರ ಅನುಭವ ಅರ್ತ ಕಂಡಿದ್ಯೋ?” ಕೇಳಿದ್ರು.

ಆವಾಗೆ ನಾರಾಯಣ ಭಟ್ರಿಗೆ ಕಂಡ ಬಂತು. ತನ್ನ ತಮ್ಮ ಹೇಳ್ದು ಯೋಗ್ಯ. ಶಿಕ್ಕೂದು ತಿಳಿಸಿ ಬೆಳಿಗ್ಗೆ ಕೈ ಕಾಲು ಮೊಕತೊಳ್ದಿ ದೇವ್ರ ಸ್ಮೊರಣೆ ಮಾಡ್ಕಂಡು ವಸ್ತ್ರಾಭರಣ ಹಾಯ್ಕಂಡಿ ವಂದಲ್ಲಾ ವಂದ ದಿವಸಕ್ಕೆ ವಟ್ಟೂ ಬಿಟ್ಟು ನೆಡ್ದೆ ಬಿಟ್ರು. ಯಾಕೆ ಅಂದರೆ ಪರಮಾತ್ಮನ ಸ್ಮೊರನೆ ಮಾಡ್ತಾ ಅನ್ನದಾನ ಮಾಡಿದ್ರೆ ಯೇನ್ ಫಲ ಶಿಕ್ಕಿತು ಅಂತ ಅನುಭವದಿಂದ ಗೋರಾಣ ಅಡವಿಮದ್ದೆ ನೆಡ್ದೆ ಬಿಟ್ರು. ಅಲ್ಲಿ ಬರೆ ಹೋಗಲಿಕೆ ಅಲ್‌ವಂದ ಅಡವಿ ವಳಗೆ ಅಲ್ಲಿ ಹೋಗುವ ದಿಕ್ಕೆ ಒಂದು ಬಯ್ಲು ಜಮೀನು ಸಿಕ್ತು. ಅಲ್ಲಿ ಸಂಜೀಕಾಲಾಯ್ತು.

ಅಲ್ಲಿ ಆ ಜಮೀನ ಮಾಡ್ದ ಮರಾಠಿ ಅಲ್ಲಿ ಜಮೀನ್ನವಳಗಿದ್ದ. ಇವ್ರದೇ ದಾರೀಲಿ ಹೋಗ್ವರಿಗೆ ಮರಾಟೆ ಕೇಳ್ತಾನೆ ಇವ್ರ ಕೈಲಿ. ಭಟ್ರೇ ಇಟ್ ಸಮಿನಲ್ಲಿ ಸಂಜ್ಯಾಗೋಯ್ತು. ಯೆಲ್ಲಿಂದ ಬಂದ್ರಿ?” ಅಂತ ಮರಾಟೆ ಕೇಳ್ತಾನೆ, ಆವಾಗ “ತಾನ ಬಾಳ ದೂರದಿಂದ ಬಂದೆ, ಸಂಜ್ಯಾಯ್ತು ಹೌದು”.

“ನಿಮ್ಗೆ ಬಾಳ ಸಾಕಾಗ್ತದೆ; ಸಂಜ್ಯಾಯ್ತು ಇನ್ ಮುಂದೆಯೆಲ್ಲಿ ಹೋಗ್ಲಿಕ್ಕಾಗ್ತದೆ? ಇಲ್ಲೇ ಉಳಿರಿ” ಮರಾಟೆ ಹೇಳ್ದ, ಆಆಗೆ ಇವರು  ಹೌದು ಅಂತ ತಿಳ್ದಿ ಮರಾಟೆ ಸಂತಿಗೆ ಅವ್ರೆ ಮನ್ಗೆ ಹೋದ್ರು.

ಅವಗೆ ಮರಾಟೆ ಹೇಳ್ತನೆ. ಅವ್ರ ಬಾಳ ದೊರದಿಂದ ಬಂದವ್ರಂತೆ. ಬೆಳಿಗ್ಗೆ ಎದ್ದಿ ಬಂದ್ರವ್ರಂತೆ. ಊಟಿಲ್ಲ, ಬೀಟಿಲ್ಲ. ನಿನ್ನೆ ತಾವು ಬೆದ್ರಕ್ಕಿ ಮಾಡಿದ್ರಲ್ಲ ಸಲ್ಪಾದರೂ ಅದ್ಯಾ ಹೇಳಿ ಕೇಳ್ದ ಮರಾಟೆ ಹೆಂಡ್ತಿ ಹತ್ರ.

ಮರಾಟೆ ಹೆಂಡ್ತಿ ಹೇಳ್ತದೆ, “ವಂದೆ ಶಿದ್ ಅಕ್‌ಅದೆ”. (ಮರಾಟೆ) ಅಳ್ಳಕ್ಕಿ ನಾವಿಟ್ಕಳ್ವ ನಮಗಾಯ್ತು. ಅಳ್ಳಕ್ಕಿ ಬಟ್ರೆಗೆ ಕೊಡಬೇಕು. ಮತ್ತೆ ಹಸುನ ಹಾಲ್ ಕರ್ಕಂಬಂದದ ಅರ್ಧ ಅಟ್ಟು ಬಟ್ಟರಿಗೆ ಕೊಡು ಅಂದ. ಅಂತಾ ಅರ್ಧ ಅಕ್ಕಿ, ಅರ್ಧ ಹಾಲು ನಾವಿಟ್ಕಳ್ವ; ನಾವ್ ಊಟ ಮಾಡ್ವ; ಅಡ್ಗಿ ಮಾಡಿ ಅಂತಾ ಹೇಳಿ ಅವರಿಗೆ ಹೇಳ್ದ.

ಅದು “ಅರ್ಧ ಅಕ್ಕಿ ಕೊಡ್ಲಿಕೆ ಬರೂದಿಲ್ಲ. ಅರ್ದಾಂಸ ಅಕ್ಕಿ ಅವ್ರಿಗೆ ಕೊಡೂದಾದ್ರೆ ನಮ್ಗೆ ಅಕ್ಕಿಲ್ಲ ಅರ್ಧಾಂಸ್ನ ಅಕ್ಕಿ ಮತ್ತು ಅರ್ದಾಂಸ್ನ ಹಾಲು ಅವರಿಗೆ ಕೊಡಿ” ಅಂತ ಹೇಳಿ ಮರಾಟೆ ಹೆಂಡ್ತಿ ಹೇಳ್ತು.

ಆವಾಗೆ ಯೇನೆ ಹೇಳಿದ್ರು ಕೇಳದಿದ್ರಿಂದ ಅರ್ದಾಂಸ ಹಾಲು ಅರ್ದಾಂಸ ಅಕ್ಕಿ ಇವ್ನ ಪಾಲಿಂದ್ ಯೇನದೆ ಅವ್ರಿಗೆ ಕೊಟ್ಟಿ, “ರಾತ್ರಿ ಅದು ಅಡ್ಗಿ ಮಾಡಿ ಉಣ್ಣಿ” ಅಂತ ಹೇಳ್ದ.

ಇದರ್ದಾಂಸ ಅಕ್ಕಿ ಮತ್ತು ಹಾಲು ಇದ್ ಅಡ್ಗಿ ಮಾಡ್ಕಂಡೆ ಉಣ್ತು. ಇವ್ ಉಪಾಸ ಉಳ್ದ. ಇವ್ನ ಪಾಲ್ನ ಅಕ್ಕಿ ಬಟ್ರಗೆ ಕೊಟ್‌ಬಿಟ್ಟ.

ಬಟ್ಟರಗ ಅವ್ರದು ಯೆಲ್ಲಾ ಊಟಾಯ್ತು. ಯಾವ ತಾವನಲೆ ಮಲ್ಗ ಬೇಕಾಯ್ತು. ಅವ್ರ ಗಂಡ ಹೆಂಡ್ತಿ ಯೆಯ್ಡೂ ಜನ್ರ್ ಮಾಳಾ ಕಾಯಾಕೆ ಹೋಗತಿದ್ರು. ಅದ್ರಿಂದ ಬಟ್ರು ಇಲ್ಲೇ ವಬ್ರೇ ಇರಬೇಕಾತದೆ ಹೇಳ್ಕಂಡ ಬಟ್ರ ಕರ್ಕಂಡ ಹೋಗ್ವಾ ಅಂದ ಹೇಳಿ ಆ ಮರಾಟೆ ಹೇಳ್ದ. ಕರ್ಕಂಡ್ ಹೋದ್ರು ಆ ಬಯ್ಲಕೆ ಮಾಳಾ ಕಾಯ್ಲಿಕ್ಕೆ.

ಆವಾಗೆ ಇವ ಯೇನ್ ಹೇಳ್ತನೆ ಕೇಳದ್ರೆ “ಮಾಳ್ದಮೇನ್ ಬಟ್ರೆ ಮಲಗಲಿ; ನೀನು ವಂದೆ ಬದಿ ಪಾರಸನಲೆ ಮಲ್ಗು; ನಾನ್ನೊಂದ ಪಾರಸನಲೆ ಮಲ್ಗತೇ.”

ಅವ್ರ್ ಪಾರ್ಸದಲೆ ಮಲ್ಗಲಿ; ಬದಿ ಅಂಚಿನಲ ಮಲ್ಗಿರ ಅವ್ರಗೆ ಅಬ್ಬೇಸಿಲ್ಲ. ಅವ್ರ ಮರ್ದ ಕೆಳ್ಗೆ ಬಿದಹೋಗೂರು. ಅದ್ರಿಂದ ಮದ್ದಿದಲ್ಲೇ ಮಲ್ಗಲಿ ಅಂದ. ನೀವು ನಾನು ವಂದೇ ಬದಿಗೆ ಮಲ್ಗಬೇಕು. ಬಟ್ರು ವಂದ ಬದಿಗೆ ಮಲ್ಗಲಿ ಯಂದ ಹೇಳಿ ಹೇಳ್ತದ. ಆವಾಗ ಬಟ್ರ ಕೈಲಿ “ನೀವು ವಂದ ಬದಿಯಲ್ಲಿ ನಾವಿಬ್ರೂ ವಂದ್ ಬದೀಗ್ ಮಲ್ಗತ್ರು” ಅಂದೇಳಿದರು.

ಆವಾಗೆ ಮಲ್ಗ್‌ ಮೂರು ಜನ್ಕ ನಿದ್ರಿ ಬಂದ ಮೇಲೆ ಮರಾಟೆ ಹಿಂಡ್ಕಂಡೇ ಇತ್ತು. ಅದು ಮರಾಟೆ ಮರಾಟೆ ಹೆಂಡ್ತಿ ಕೆಳ್ಗೆ ಬಿದ್ರು. ಮರಚಿ, ಹುಲಿ ಬಂದ ಇಬ್ರನ್ನೂ ತಿಂದ್ಕಂಡ ಹೋಯ್ತು.

ಬೆಳ್ಗಾಗುವರಿಗೆ ಯೆಚ್ಚಲಾಗಲಿಲ್ಲ ಬಟ್ರಗೆ. ಬೆಳ್ಗಾದ ಮೇಲೆ ಬಂದ್ಕಂಡ ನೋಡ್ತಾರೆ ಮರಾಟೆ ಮರಾಟೆ ಹೆಂಡ್ತಿ ಇಲ್ಲಾ. ಅವ್ರ ವಸ್ತ್ರ ರಕ್ತಯೆಲ್ಲ ಬಿದ್ದದ್‌ಸ್ವತಾ ನೋಡದ್ರು. “ಯೇನೋ ಅನಾಹುತಾಗೆ ಹೋದ್ರು ಅಂದ ತೆಳ್ಕಂಡ ಪರಾಮಶಿಂದ ಬಿದ್ರು ಕಾಣ್ತದೆ. ನನ್ಗೆ ಇಟ್ ಉಪ್ಕಾರ ಮಾಡದ್ನಲ್ಲಾ ಇವ? ಹಸಿದ ಬಂದವ್ನಿಗೆ ಇಟ್ ಉಪ್ಕಾರ ಮಾಡಿದ್ದ ಅಂತ ಮರಾಟೆ ಹೋಗೆ ಬಿಟ್ಟ. ಯೇನ ಯೆಣಿಕಂಡೆ ಬಂದೆ? ಆಗ್ಲಿ ನಾನು ಮುಂದೆ ನೆಡೀಬೇಕಾಯ್ತು. ದೇವ್ರ ಸ್ಮರಣಿಂದ ಮುಂದೆ ನೆಡೀತೇನೆ” ಅಂದಿ ಹೋದ.

ಅಡವೀ ಬಿದ್ ಹೋಗುವಾಗ ಬಾವಾಜಿ ರೂಪವಾಗಿ ಒಬ್ಬವ ಬಂದು ದಾರೀಲಿ ಶಿಕ್ದ. “ಬಟ್ರೇ ಎಲ್‌ಹೋಗತ್ರಿ? ಬಲೆ ಜೋರಿನಿಂದ ಹೋಗತ್ರಿ? ಯೆಲ್ ಹೋಗತ್ರಿ” ಕೇಳ್ತಾನೆ. ಬಟ್ರ ಹೇಳ್ತಾರೆ. ಮತ್ತೆ ತಾನು ಮದ್ಯಾನಲೆ ನಾನು ಬಾಳ ಜನ್ಕ ಅನ್ನದಾನ ಮಾಡಿದೆ. ಅನ್ನದಾನ ಮಾಡಿದ್ರೆ ಯೋಗ್ಯ ಫಲ ಯೇನ್ ಶಿಕ್ತದೆ ತಿಳೀದೇ ಪರಮಾತ್ಮನ ಹತ್ರ ಅನ್ನದಾನ ಮಾಡಿದ್ರೆ ಯೇನ ಫಲ ಅಂದಿ ಕೇಳೂಕೆ ಪರಮಾತ್ಮನ ನೆನೀತಾ ಹೋಗ್ತೆ” ಅಂದ ಹೇಳದ್ರು ಬಟ್ರು. ಹಾಂಗಾದ್ರೆ ನೀನು ಬರಬೇಕಿದ್ರೆ ಯೆಲ್ಲಿದ್ದೆ? “ಮನಿಂದ ಬಂದಿ ವಸ್ತಿ ಯೆಲ್ಲಿದೆ?” ಕೇಳಿದ್ರು ಬಾವಾಜೀ.

“ಸಂಜ್ಯಾಯ್ತು ಅಲ್ಲೊಂದ್ ಬೈಲಿತ್ತು. ಅಲ್ಲಿ ಮರಾಟೆ ಮನಿತ್ತು. ಮರಾಟೆ ಸಂಜ್ಯಾಯ್ತು. ಯೆಲ್ ಹೋತ್ರಿ, ಇಲ್ಲಿ ಉಳೀರಿ, ನಾಳೆ ಹೋಲಕ್ಕಿ ಅಂದ ಹೇಳ್ದ, ಉಳ್ದೆ”.

ಕಡಿಗೆ ಯೇನಂದ ಆ ಮರಾಟೆ; “ಮತ್ತೇನಲ್ಲ? ತಾವ್ ಬಡವರ ಅವರೆ. ನಿನ್ನೆ ಸಲ್ಪ ಚಿದ್ರಕ್ಕ ಮಾಡ್ಯಾಗಿತ್ತು. ಅದ ಸಲ್ಪ ಅದ್ಯೋ?” ಅಂದಿ ಹೆಂಡ್ತಿ ಹತ್ರ ಕೇಳ್ದ. ಅದು ವಂದ ಶಿದ್ ಅಕ್ಯದೆ ಅಂತು ಅದು “ಅಳ್ಳಕ್ಕಿ ಈಗ ಕರ್ಕಬಂದ ಹಸು ಹಾಲದೆ ಅದ್ರ ಅರ್ಧ ಅವ್ರಿಗೆ ಕೊಡು. ಹಸುನಲ್ ಬಂದವ್ರಂತೆ. ಅರ್ದಾಂಸ ನಾವ್ ಉಣ್ವ” ಹೇಳ್ದ ಆ ಮರಾಟೆ. ಆವಾಗೆ ಅದ್ ಹೇಳ್ತದೆ. “ತನ್ ಪಾಲ್ನ ಅಕ್ಕಿ ಕೊಡ್ಲಿಕ್ಕಿಲ್ಲ. ನಿಮ್ಮ ಪಾಲ್ನ ಅರ್ದಾಂಸ ಅಕ್ಕಿ ಹಾಲಿ ಅವ್ರಿಗೆ ಕೊಡ್ಲಿಕ್ಕಡ್ಡಿಲ್ಲ” ಹೇಳ್ತು.

ಆವಾಗೆ ಆಯ್ತಪ್ಪ ಅಂದೆ ಹೇಳಿ ಮರಾಟೆ ಅವ್ನ ಪಾಲ್ನ ಅಕ್ಕಿ ಹಾಲು ನ್ಗೆ “ಅಡ್ಗಿ ಮಾಡ್ಕಂಡ ಉಣ್ಣಿ” ಹೇಳಿ ಕೊಟ್ಟು “ಬೈಲಿಗೆ ಮಾಳಾ ಕಾಯೂಕೆ ಹೋಗತ್ರು. ನೀವೂ ಬನ್ನಿ. ಇಲ್ಲಿ ವಬ್ರ ಯಾಕೆ ಫಲಗೂದು”. ಹೇಳ್ದ. ಆವಾಗ ಅದ ತಾನೆ ಒಪ್ಪಿ ಅವ್ರ್ ಸಂಗಡ ತಾನೂ ಬಂದೆ ಆ ಜಮೀನಿ ಮಾಳ್ಕೆ. ಮಾಳ್ಕ ಬಂದ ಕೂಡ್ಲೆ ಮರಾಟೆ ಯೇನಂದ ಹೆಂಡ್ತಿ ಹತ್ರೆ “ನೀನು ಆಚೆ ಮಲಗು; ನಾನು ಈಚಿಗೆ ಮಲ್ಗತೇನೆ; ಬಟ್ರು ನೆಡಗೆ ಮಲಗ್ಲಿ. ಅವ್ರಿಗೆ ಮಾಳ್ದಲ್ ಮಲ್ಗಿ ಅಬ್ಬೇಸಿಲ್ಲ. ಮರಚಿ ಕೆಳ್ಗೆ ಬೀಳೂರು ಅಂದಿ ಆ ಮರಾಟೆ ಹೇಳ್ದ. ಅದಾಗ್ಲಿಕ್ಕಿಲ್ಲ ತಾನು ನೀವು ವಂದ್ ಬದಿಗೆ ಮನ್ಗ ಬೇಕು. ವಂದ ಬದಿಗೆ ಬಟ್ರು ಮನ್ಗ ಬೇಕು.” ವಂದೆ ಬದಿಗ ತಾನು ಮನ್ಗೆಬೇಕು.” ಅಂತ ಹೇಳಿ ಮರಾಟೆ ಹೆಂಡ್ತಿ ಹೇಳ್ತದೆ ಹಟಾ ಹಿಡ್ದೆ ಹೇಳ್ದಾಗ “ಬಟ್ರೇ ನೀವ ವಂದೆ ಮನ್ಗಿ. ನಾನು ಅದು ವಂದೆ ಬದೀಗೆ ಮನ್ಗೆತ್ರು” ಅಂದ ಹೇಳಿ ಮನ್ಗದ್ರು. ತನ್ಗೆ ನೆದ್ರಿ ಬಿದ್ ಹೋದಾಗ ಯೆಟ್ ಹೊತ್ನಾಗ ಮಾಳ್ದ ಕೆಳ್ಗೆ ಬಿದ್ದರು; ಯೆಟ್ ಹೊತನಾಗೆ ಹುಲಿ ತಿಂಡ್ಕಂಡ ಹೋಯ್ತು; ಯೇನಾಯ್ತು ಅದೆ ನನ್ಗೆ ಗೊತ್ತಿಲ್ಲ. ಬೆಳಿಗ್ಗೆ ಯೇಳೋವರಿಗೆ ಅಯ್ಯೋ ತನ್ಗೆ ಊಟ ಇಲ್ದಿದ್ರೂ ಬಟ್ರ ಊಟ ಆಸ್ತಿ ಆಗ ಮಾಡವಂತೆ ಮಾಡ್ದ ಇವ, ಉಪಕಾರ ಮಾಡ್ದವ್ನಿಗೆ ಏನಾಯ್ತೋ ಯೇನ್ ಹೋಯ್ತೋ ಆವಾಗಿದು ತಿಳ್ವಳ್ಕಿಲ್ದೆ ಹೋದ್ನಲಾ ಅಂತಾ ಪಚಾತಾಪ ಯೆಣ್ದೆ.

ಆವಾಗೆ ತಾನೇನು ಯೆಣಿಕಂತ ಬಂದನೆ ಅದನೂ ತಿಳಿಬೇಕಾಯ್ತುಲ್ಲ? ಅಂದೇಳಿ ಪರಮಾತ್ಮನ ಸ್ಮರಣೆ ಮಾಡ್ ತಾನು ಮುಂದಕೆ ಹೋಗ್ತೆ ಹೇಳಿ ಬಾವಾಜಿ ಹತ್ರ ಹೇಳಿದ್ರು. “ಯೆಟ್ ಹೊತ್ತಿಗೆ ಪರಮಾತ್ಮನ ದರ್ಶನ ಆಗತದ್ಯೋ? ನಾನು ಪರಮಾತ್ಮನ ಹತ್ರ ಅನ್ನದಾನದ ಫಲ ಯೇನಂತ ಯೇನ್ ಸಿಕ್ತದೆ ಅಂಬುದ ತಿಳ್ಕಂಬೇಕು. ಅಂಬುದಕ್ಕಾಗಿ ಕೇಳಿ ತಿಳ್ಕಂಡ ಬರಬೇಕು ಅಂತ ತಾನೇ ಹೋಗತೇನೆ. ಪರಮಾತ್ಮ ಯೆಲ್ ದರ್ಶನ ಆಗ್ತದೆ” ಅಂತ ಬಾವಾಜಿ ಹತ್ರ ಹೇಳದ.

ಅವಗೆ ಅಟ್ಟೇಯ ಅವ ಹೇಳೂವರೇಗಿ ಬಾವಾಜಿ ಹೇಳ್ದಾ. ಬಟ್ರೇ ನೀವು ಉಳಿದ ಸ್ಥಳದಲ್ಲಿ ಯೇನು ಸಂಗ್ತಿ? ಅನ್ನುದು ನಿಮಗೆ ಗುತ್ತಲ್ಲಾ? ನೀನು ಮುಂದರ್ಸ್‌ಹೋಗು. ಇದೇ ರಸ್ತಿ ಹಿಡ್ದೆ ಹೋದಲ್ಲಿ ವಂದು ಅರಸ್ತಾನ ಶಿಕ್ತದೆ. ಮುಂದೆ ಇದೇ ಅಡವಿ ಬಿಟ್ಟಕ್ಕಿ ರಸ್ತಿ ಹಿಡ್ಕಂಡ್ ಹೋಗು.

ಆ ಅರಸುತನ ಆಳೂ ಅರಸೂ ಹೆಂಡ್ತಿ ಗರ್ಭಿಣಿ ಅದೆ. ನೀನ್ ಹೋಗೂವರಿಗೆ ಸಂಜಿಯಾಗ್ತದೆ. ಆ ದಿವ್ಸ ಅಲ್ಲಿ ಉಳದಿ ಉಳೂವರಿಗೆ ಅಲ್ಲಿ ಆ ಅರಸೂ ಹೆಂಡ್ತಿಗೆ ಜನ್ಯಾಗ್ತದೆ. ಬೆಳಿಗ್ಗೆ ವಂದು ಚಲೋ ಹುಡ್ಗ ಹುಟ್ತಾನೆ.

ನೀನು ಬೆಳಗಾದ ಕೂಡ್ಲೆ ಕೈಕಾಲಮೊಕ ತೊಳದಿ ಅಲ್ ದೇವ್ರ ಸ್ಮರಣೆ ಮಾಡಿ ಅವ್ರ ಕೈಲಿ ಬೇಡಕಳಬೇಕು ವಂದೆ ತಾಸ್ನ ಮಾತ್ಗೆ ಆ ಹಸಬಾಲಿಯ ನನ್ ಹತ್ರ ಕೊಡಬೇಕು. ತಾನು ಅದ್ರ ಹತ್ರ ನನ್ನ ಆಲೋಚ್ನಿ ಜೇಳೂದದೆ. ನಾ ಯೇಣಿಕಂಡೆ ಬಂದ ಸಂಗ್ತಿ ಅವ್ನ ಹತ್ರ ಕೇಳೂದದೆ ಅಂತ ಬೇಡಿಕೋ. ಆವಾಗ ಆ ಸಿಸು ನಿನ್ಗೆ ನೋಡ್ತದೆ.

ಆ ಸಿಸು ತಕಂಡ್ ಅಡವೀಗೆ ಕರಕಂಡ ಹೋಗಿ ಚಲೋ ಹೊತ್ನಲೆ ಅದ್ರ ನಿನ್ನ ತೊಡಿ ಮೇಲೆ ಕುಳ್ಸಕಂಡೆ ಕೇಳು. ಆ ಶಿಶು ನಿನ್ನ ಅನ್ನದಾನ ಮಾಡ್ದ ಫಲ ಹೇಳ್ತದೆ. ಹೇಳ್ದೆ ಕೂಡ್ಲೆ ನೀನು ಆ ಶಿಸು ತಕ್ಕಂಡ್ ಹೋಗ ಅರಸೂ ಕೂಡ್ ಕೊಟ್ಟ ಆ ಶಿಸು ಹೇಳ್ದ ಪರಿ ತಿಳಿತದ್ಯಲ್ವೋ ನಿನ್ಗೆ ತೆಳ್ಕ” ಅಂದ.

ಮತ್ತೆ ಅದೇ ರಸ್ತಿ ಹಿಡ್ದ ಹೋದರು. ಹೋಗ್ ಹೋಗ್ ಹೋಗ್ ಹೋಗಿ ವಂದಲ್ಲಾ ವಂದ ದೇಸ್ಕ ಹೋಗುವಾಗ ಸಂಜ್ಯಾಯ್ತು. ಉಲ್ಲಿ ಅರ್ಸ್‌ಗೋಳ ಮನಿ ಯೆಲ್ಲದೆ ಅಂತ ಕೇಳ್ದ. ಅಲ್ಲಿ ಕೇಳ್ಕಂಡ ಅವ್ರ ಮನಿಗೆ ಹೋಗ್ ವಳ್ದ.

ಮದ್ರಾತ್ರಿ ವೇಳಿಗೆ ಆ ಅರಸನ ಹೆಂಡ್ತಿ ಜನ್ಯಾಯ್ತು. ಚಲೋ ಹುಡ್ಗ ಹುಟ್ದ. ಮರುದಿವಸ ಬೆಳಿಗ್ಗೆ ಆದ ಮೇನೆ ಅರ್ಸನೋರ ಹತ್ರ ಕೇಲತಾ. ನಿಮ್ಗೆ ಈಗ ಹುಟ್ಟಿದ ಬಾಲ್ನ ತನ್ಗೆ ವಂದ ತಾಸ ಕೊಡಬೇಕು. ಯೇನೋ ವಂದೆ ಗುಬ್ತ ಆಲೋಚ್ನಿ ಅವ್ನಿಂದಾ ತೆಳ್ಕಳ್ಳುದದೆ ಕೇಳಿ. ಅದ್ಕೆ ಅರ್ಸಗೋಳು ಹೇಳ್ತಾರೆ “ಈ ಹಸಬಾಲಿ ನಿಮ್ಗೆ ಯೆಂತ ಹೇಳ್ವ? ಮಾತಾಡ್ಲಿಕೆ ಬರದಿದ್ದವ. ಅಂತಾ ಶಿಸು ಹತ್ರ ವಂದ ಗುಬ್ತ ಅಲಚ್ನಿ ಕೇಳಬೇಕು ಅಂದ ಹೇಳ್ತೆ ನೀನು. ಇದೇನೆ ಕರೇ ಮಾತೇನೋ?” ಕೇಳ್ದ ಅರಸು.

“ಹೌದು ಕತೇತನ್ದ ಮಾತು ಸ್ವಾಮೀ, ಸುಳ್ಳಲ್ಲ. ಅದ್ರಿಂದ ವಂದೇ ತಾಸ್ನ ಮಾತ್ಗೆ ಆ ಶಿಸುವನ್ನು ಕೊಡಬೇಕೆಂದೆ” ಅವ್ರ ಹತ್ರ ಕಾಡಿ ಬೇಡ್ಕಂಡ, ಆವಾಗ ಶಿಸು ಇವ್ನ ಹತ್ರಿ ಅರ್ಸಗೋಳು ಕೊಡಿ ಅಂತಾ ಹೇಳರು. ಆ ಶಿಸು ತಂದಿ ಅವ್ನ ಹತ್ರ ಕೊಟ್ರು. ಆ ಶಿಸ ತಕಂಡಿ ಇವ ಯಾರೂ ಇಲ್ಲದಿದ್ದಂತಾ ತಾಮದಲ್ಲಿ ತೆಗೆದಕೊಂಡ ಹೋಗಿ ಅಡವೀಲಿ ಇಳಿಸಕಂಡ ತೊಡೀಮೇನೆ ಕುಳ್ಸಕಂಡ್ ಕೇಳ್ತ ಶಿಸುನೆ ಹತ್ರ.

“ಆದ್ರೆ ತಾನು ನಿನ್ ಕರ್ಕಂಡ ಬಂದದ್ದು ಅರ್ಸಗೋಳ ತನ್ ಹತ್ರ ನಿನ್ ಕೊಟ್ಟರೆ ನಾನು ನಿನ್ ಹತ್ರ ವಂದ್ ಮಾತಾಡ್ಬೇಕು. ಅನ್ನದಾನದ ಫಲ ಯೇನು ಅಂತ ನಿನ್ನ ಕೊಡೆ ಕೇಳ್ಬೇಕು. ಅನೇಕ್ರ ಕರದಿ ನಾನು ಅನ್ನದಾನ ಮಾಡಾನೆ. ಅದ್ರ ಫಲ ಏನು ಅಂತ ನಿನ್ ಹತ್ರ ಹೇಳಬೇಕು ಅಂದಿ ಬಂದೆ ನಾನು” ಅಂದ.

ಕಡೆಗೆ ಆ ಶಿಸ ಯೇನ್ ಹೇಳ್ತದೆ ಕೇಳಿದ್ರೆ “ನೀನು ಅನ್ನದಾನ ಮಾಡ್ದ ಫಲದ ಸಂಗ್ತಿ ನಾನೆ ಹೇಳ್ತೇನೆ. ನೀನ್ ಬರಬೇಕಿದ್ರೆ ಮನಿಂದ ಹೊಂಟೆ. ಬಂದು ವಂದ ಮರಾಟಿ ಮನಿಲಿ ಮಲಗಿದ್ಯಲ್ವೋ?” ನೀನು ಆ ಮರಾಟೆ ನಿನ್ ಕೈಲಿ ಉಳಿ ಅಂದ್ ಹೇಳ್ದ. ಉಳಿದ್ಯಲ್ವೋ? ಹೌದು. ಆ ಮರಾಟೆ ನಿನ್ನ ಕುಳ್ಸ್‌ಕಂಡಿ ಹೆಂಡ್ತಿ ಹತ್ರ ಹೇಳ್ದ. ನಾವು ಬಾಳ ಸುಖದಲ್ಲಿವೆ. ಬೆದ್ರಕ್ಕಿ ಮಾಡ್ದ ಅದ್ಯೇನಾದ್ರೂ ಸ್ವಲ್ಪ ಮಟ್ಟಿಗೆ ಅದೇ ಹೇಳ್ತು. ಬಟ್ರು ಅವ್ರು ಬೆಳಿಗ್ಗೆ ಯೆದ್ದಿ ಇಲ್ಗೆ ಬಂದಾರೆ. ಊಟಿಲ್ಲಂತೆ. ಊಟಕ್ಕೆ ಅವ್ರೆಗೆ ಅರ್ದ ಅಂಸ ಕೊಡ್ಬೇಕು, ಅರ್ಧ ಅಂಸಾ ನಾವು ಊಟ ಮಾಡ್ವೆ ಅರ್ದಾಂಶ ಹಾಲ್ ಕೊಡ್ಬೇಕು ಅವರ್‌ಗ್ಗೆ. ಅರ್ದಾಂಶ ಹಾಲ್ ಬೇಯ್ಸಿ ನಾವು ಊಟ ಮಾಡ್ಬೇಕು ಅಂದಿ ಮರಾಟೆ ಹೇಳಿದ ಹೌದಲ್ವೋ? ಹೌದು. ಆವಾಗ ಅದ್ ಹೇಳ್ತದೆ. ನನ್ ಪಾಲ್ಕ್ಕಿ ಕೊಡ್ಲಿಕ್ಕಿಲ್ಲ. ನಿಮ್ಮ ಪಾಲ್ನಕ್ಕಿ ಬೇಕಾದ್ರೆ ನೀವ್ ಕೊಡಿ ಅಂದ ಹಟ ಮಾಡೆ ಸಾದ್ನಿಂದ ಕೊಡಿ ಹೇಳ್ತಲ್ವೋ? “ಹೌದು” ಅಂದ ಬಟ್ಟ. ಊಟಾಯ್ತು ನಿಮ್ ಪಾಲ್ಗೆ ಅವ ಊಟ ಮಾಡ್ದೆ ಅವ ಉಪಾಸಬಿದ್ದ. ನೀವು ಊಟ ಮಾಡ್ದೆ. ಆವಾಗ ಮರಾಟೆ ಹೇಳ್ದ “ಮೂರು ಜನ್ರ ಅಲ್ಲೇ ಮಾಳದಲ್ಲಿ ಮಲಿಕಳ್ವ” ಅಂದ ಹೇಳ್ದ ಮರಾಟೆ ಅಲ್ವೋ ಅವ? “ಶೊಸ ಹೇಳ್ತದೆ. ನಂತ್ರ ನಿನ್ಗೆ ನದ್ರಿ ಬಿತ್ತು ಮಲಗದವ ನೆದ್ರಿ ಬಂದ ಮೇಲೆ ಅವ್ತೆ ಯೆಯ್ಡೂ ಜನ್ರಾ ಹುಲಿ ತಿಂದ್ಕಂಡೆ ಹೋಯ್ತು ಅಲ್ವೋ? “ಹೌದು, ಯೇನಾದ್ರಿಂದೆ ತಿಳ್ಯ” ಹೇಳ್ದಾ.

“ನೀವು ಬೆಳ್ಗಾಗೆ ಯೆದ್ ನೋಡ್ವರಿಗೆ ಮರಾಟೆ ಮರಾಟೆ ಹೆಂಡ್ತಿ ಯಾರೂ ಇಲ್ಲ. ಅಲ್ ಪಚಾತಾಪ ಮಾಡಿ ನೀವು ಅಯ್ಯೋ ನಾನು ಶಹಿದ್ ಬಂದವ್ಗೆ ಅವ ಊಟ ಹಾಕಿದ್ನಲ್ಲಾ? ಅಂದಿ ಅಲ್ಲೇ ಪಚಾತಾಪ ಯೆಣ್ದಿ? ಹೌದೋ?” ಹೌದು.

ಆವಾಗ ಆ ಮರಾಟೆ ಅಲ್ ಮೂರ್ಚ ಬಿದ್ದವ ಅವ್ನ ಕಾಯ ತಂದಿ ದೇವ್ರು ಯೆಲ್ಲಿಟ್ರು ಅಂದಿ ನಿನ್ಗೆ ಗೊತ್ತಿಲ್ಲ. ಅರ್ಸಗೋಳ ಹೆಂಡ್ತಿ ಗರ್ಭಿಣಿ ಇದ್ದವ್ಳ ಪಿಂಡದಲ್ಲಿ ತಂದಿ ಆ ಕಾಯ ತಂದಿ ದೇವ್ರ ಕುಳಸ್ರು.

ಆ ಮರಾಟೆ ಹೆಂಡ್ತೊ ಒದ್ದೊತಲ್ವಾ? ಅವ್ಳ ಈ ಹಂದಿ ಜನ್ಮದಲ್ಲಿ ತಕಂಡ್ ಹೋಗ ಹಾಕ್ದ. ಈಗ ಹೆಳ್ದವ್ನೇ ನಾನು ಮರಾಟೆ. ಹಿಂದ್ನ ಜನ್ಮದಲ್ಲಿ ನಿನ್ಗೆ ಉಪ್ಕಾರ ಮಾಡಿದೆ. ನಾನು ಆ ಉಪಕಾರಕ್ಕೆ ನನ್ಗೆ ದೇವ್ರು ಅರಸೂ ಹೆಂಡ್ತಿ ಪಿಂಡದಲ್ಲಿ ತಂದ ಇಟ್ಟ. ನಾನೇ ಅರಸೂ ಮಗ ರಾಜಕುಲದಲ್ಲಿ ಉತ್ಪನ್ನಾದೆ. ಮರಾಟೆ ಹೆಂಡ್ತಿ ಅದು ಅಟ್ಟು ಮಾಡ್ದಕ್ಕೆ ಹಂದಿ ಜನ್ಮದಲ್ಲಿ ತಕಂಡ್ ಹೋಗಿ ಹಾಕ್ದ. ಸ್ವಾಮಿ ಕೊಡ್ವದೆ ನೋಡು ನೀನ ಅನ್ನದಾನ ಮಾಡದ್ರೆ ಯೇನ್ ಸಿಕ್ತದೆ ಅಂದಿ ಕೇಳ್ದೆ. ನೀನ ಅನ್ನದಾನ ಮಾಡಿದೆ. ಮುಂದಿನ ಜನ್ಮದಲ್ಲಿ ಚಲೋ ಕುಲವುಳ್ಳವನಾಗಿವಲೋ ರಾಜಸ್ಥಾನದಲ್ಲಿ ಉತ್ಪನ್ನಕ್ಕೆ ಭರ್ತಿ. ಶಿಶು ತಂದಿ ಬಟ್ರು ಅರ್ಸಗೋಳ ಕೈಲಿ ಕೊಟ್ರು ಆಟ್ ಕೇಳ್ದವ ಹಾಗೆಯೇ ಊರಿಗೆ ಬರ್ತ. ಅನ್ನದಾನ ಮಾಡಿದ್ರೆ ಮುಂದಣ ಜನ್ಮದಲ್ಲಿ ಯೋಗ್ಯ ಸ್ಥಾನ ಉತ್ಪನ್ನ ಮಾಡ್ತಾನೆ “ಅಂತ ಕೇಳ್ಕಂಡ್‌ಬಂದೆ” ಅಂದ.

 ಹೇಳಿದವರು

ಬೊಬ್ಬು ಪಟಗಾರ,
ಮಿರ್ಜಾನ,
ದಿ: ೨೦-೦೨-೧೯೭೨