ವಂದ ರಾಜಗೆ ವಂದ ಮಗಳಿರ್ತದೆ. ರಾಜನದಲ್ಲಿ ವಂದ ಕೆರಿ ಇರ್ತದೆ. ರಾಜನ ಮಗಳ ಮದ್ವಿಯಾಗ್ತೆ ಹೇಳುವವರು ಆ ಕೆರಿಯ ವಂದ ಹೊತ್ತು ವಂದ ರಾತ್ರಿ ನಿಲಬೇಕು. ಬಂದ ಅಂದ್ರೆ ಮಗಳ ಕೊಡೂದು ಹೇಳಿ ರಾಜನೇ ಪಣ ಮಾಡಿರ್ತ. ರಾಶಿಜನ ರಾಜ್ನ ಮಗಳ ಮದಿಯಾಗಬೇಕು ಹೇಳಿ ಬರತ್ರು. ಬಂದ ನಿತ್ತಿ ಅಲ್ಲೇ ಸತ್‌ಹೋದ್ರು “ಅವ ಹೇಗೆ ಸತ್ನೋ ಯೇನೋ” (ಹೋಗಿ ನಿತ್ತವ) ಹೇಳಿ ಬಹಳ ಮಂದಿ ಹೋಗಿ ನಿತ್ತಿ ಬಹಳ ಮಂದಿ ಸತ್ ಹೋಗಿಬಿಟ್ರು.

ಒಬ್ಬ ಬಡವರ ಹುಡ್ಗಾ. ಅಪ್ಪ ಸತ್ ಹೋದ. ಇವ ಸತ್ರೂ ಅಷ್ಟೇ ಹೇಳಿ ಅವನಿಗೆ ಪುಸಲಾಯಿಸಿ ನಿಲ್ಸತ್ತಾರೆ. ಅವನ ತೌರಿ ಅವ ಹೋಗುವಾಗ ಅಮ್ಮ ನೀನು ಓಂ ನಮಃ ಶಿವಾಯ ಹೇಳಿ ಬೆಳಗಾಗೂವರಿಗೂ ಹೇಳು ಹೇಳಿ ಕಳ್ಸೆತು. ಆವಾಗೆ ಅವ ಹಗಲಿಗೆ ಮತ್ತು ರಾತ್ರಿಡೀ ಓಂ ನಮಃ ಶಿವಾಯ ಹೇಳಕೋತೇಯ ಬೆಳಗಾಗೂವರಿಗೂ ನಿತ್ತ. ಅದು ಕೆರೊಯಂದು ನೀರು ಹೆಚ್ ಕೋಟಿ ಬರ್ಪನಾಗೆ ಕೈ ಹಚ್ದ ಹಾಗೆ ಆತದೆ. ಅವಗೆ ನಿತ್ಯ ನೀರು ಬಹಳ ಬಿಸಿಯಾಗಿ ಬಿಡ್ತದೆ. ನೀನು ವನಂದೆ ಸಲ ಬಂದಿ ಬಿಸಿರಾಗ್ರದೆ. ದೇವರು ಇದೆ ಮಾಡ್ತದೆ. ದೇವರು ಜನ ಹೇಗೆ ಅವ್ನ ಕಾಪಾಡ್ಬೇಕು ಹೇಳಿ ದೇವ್ರು ಅವ್ನ ಕಾಪಾಡ್ತದೆ. ಬೆಳಿಗ್ಗೆ ಯೇಳ ಗಂಟೆವರೆಗೆ ಕರೆಕಂಡ್ ಬರಲಿಲ್ಲ. ಸಂಜೆಯವರೆಗೂ ಕೆರಿ ಮದ್ಯದಲ್ಲಿ ಜಪ ಮಾಡ್ನ ನಿತ್ಕಂಡ ಉಳ್ದ. ಅವ ಚೆಂದಿಲ್ಲ ಅಂದಿ ಬಡವನಾದ್ರೂ ಅವನಿಗೆ ಬರತೊಡೂಕೆ ತಯಾರಾಗಿದ್ರು. ಹುಡಗಿಗೂ ತಂದಿಗೂ ಮನ್ಸಿಲ್ಲ. ತಾಯಿಗೂ ಮನ್ಸಿಲ್ಲ. ಅವ ಸಂಜಿವರಿಗೂ ಉಳೀಲಿ, ಅಲ್ಲೇ ಸತ್ ಹೋಗ್ಲಿ ಹೇಳಿ ಮೂರನೆ ದಿವ್ಸ್‌ಕಪ್ಪಾದ ಮೇಗೆ ಕರ್ಕಂಬಂದ್ರು.

ಆವಾಗ ಬರಬೇಕಿದ್ರೆ ಇವರಿಗೆ ಭಾರೀ ಚಂದಾಗೆಬಿಟ್ಟ. “ಇವ ಯೇನ ದೊರೆ, ಊರೆಲ್ ಯಾರೂ ಇಷ್ಟ ಚೆಂದಿಲ್ಲ. ಇವಿಗೆ ಕೊಡದೆ ಮತ್ಯಾರಿಗೆ ಕೊಡುದು” ಹೇಳಿ ವಳ್ಗೆ ಕರ್ಕಂಡಬಂದ. ಮಗಳಿದ್ದಲ್ಲೇ ಅವ್ನ ನೋಡ್ಕಂತಿದ್ದ ಹುಡ್ಗಿ ಅವ ಚೆಂದಿಲ್ಲ. ನಂಗೆ ಯೋಗ್ಯಾದವಲ್ಲ. ಹೇಗೂ ಹೋತಾ” ಹೇಳಿ ತಿಳ್ಕಳ್ತದೆ. ಅವ ಸತ್ತೇ ಹೋಗಲಿಲ್ಲ. ಅದು “ಅವ ಚೆಂದಿಲ್ಲ ಹೇಳಿ ನಾ ಮದ್ಯಾಗೊದೆಲ್ಲ” ಹೇಳಿ ಹಟ ಮಾಡ್ತದೆ. ಒಳಗೆ ತೀಡ್ತಾದೆ. ರಾಜಗೂ ತಲೆ ಬಿಸಿ, ತಲ ವಡ್ತಾ ಸುರವಾಗ್ತದೆ. ಕೆರಿಲಿದ್ದಿ ಕರ್ಕಂಡೇ ಅನ್ತಾರೆ. ಈ ಊರಲ್ಲಿ ಯಾರೂ ಇಲ್ಲಾ ಅಷ್ಟ ಚೆಂದಾಗ ಬಿಟಾ ಇವಾ ಹೇಳಿ ತಲಿ ಯೆಲ್ಲಾಗಿ ಬಿಡ್ತದೆ. “ಬಾರೀ ಚಂದ ಅವನ್ಯಲ್ಲ ಇವ” ಹೇಳಿ ಅವ ಬೇರ್ಯವ ಇರಬೇಕು ಹೇಳಿ “ಆ ಬಡವನ ಮನಿಗೆ ನೋಗ ನೋಡ್ಕಂಡ್ ಬನಿ ಅವ ರಾತ್ರಿಯೇ ವೋಡ್ ಹೋಗ್ ಬಿಟನ್ ಕೆರಿಂದ. ಇವ ದೇವರೋ ಯೆಂತದೋ ಯೇನೋ. ದೇವ್ರೇ ಇರಬೇಕು ಇವ. ಈಸ್ವರ ಹೇಗೆ ಇರಬಹುದು ಅವ. ಆ ಬಡವನ ಮಗಲ್ಲ. ನನ್ನ ಮಗಳ್ಗೆ ಗಂಡ ಚಲೋ ಸಿಕ್ಕುದೆಲ್ಲ ಹೇಳಿ ಈಸ್ವರನೇ ಮದ್ವೇಯಾಗೂಕೆ ಬಂದವ” ಹೇಳಿ ರಾಜ ತಿಳಕಳತ್ತ. ಆಳಕಳ್ಸತ್ತಾ ಬಡವನ ಮನಿಗೆ ಹೋಗಿ ಬಡವಿ ಹುಡ್ಗಾ ಅವಳ ಮನಿಲಿ ಅವನ್ಯೋ ಹೇಗೆ ನೋಡ್ಕ ಬನಿ ಅಂದಾ. “ರಾತ್ರೋರಾತ್ರಿ ಬಂದ ಮಗ್ನ ಬರ್ಪದಲ್ಲಿ ಉಳಿವಾಗಿಲ್ಲ. ನನಗಿರವವ ಇದೊಂದೇ ಮಗ. ಗಂಡನೂ ಇಲ್ಲ ಹೇಳಿ ಅವ್ನ ವಳ್ಕಂಡ್ ಹೋಗದೇ ಹೇಳಿ ರಾಜ ಹೇಳ್ತಾ “ನೋಡ್ಕ ಬನಿ” ಹೇಳಿ, ಕಡೀಗೆ ಅವ್ರೆ ಹೋಗ್ ಕೇಳದು, ಆಳು ಹೋಗಿ “ನಿಮ್ಮ ಮಗ್ನ ರಾತ್ರಿ ಯಳ್ಕಂಬಂದ್ಯೋ? ಹೇಳಿ”, ಆ ಬಡವಿ ಹತ್ರ ಹೇಳಿದ್ರು.

ಅವಳು “ಇಲ್ಲ, ನಾನು ಯೆಳ್ಕಂಡ ಬರಲಿಲ್ಲ. ಓಂ ನಮಃ ಶಿವಾಯ ಹೇಳಿ ಅದೇ ಕೆರೀಲಿ ಉಳಿ ಹೇಳಿ ಅಸೀ ಬಿಟ್ಟು ನನ್ನ ಮಗನ ಕಳಿಸಿದ್ದೆ ನಾನು” ಅಂದೆ ಹೇಳ್ತದೆ ಅವ್ರ ಕೈಲಿ. ನಿನ್ನ ಮಗ್ನ ಕಂಡ ಹಾಗೆ ಆಗುದಿಲ್ಲ. ಅವ ನೋಡಿದ್ರೆ  ಬೇತಾಳನಾಗ ಇದ್ದ. ಇವ ಚೆಂದ ಕಾಣ್ತಾನೆ. ಈಸ್ವರ ಹೇಳ್ತಾರೆ. ನಿನ್ನ ಮಗನಲ್ಲ. ಅಂದ ರಾಜರು ಅವ ರಾತ್ರಿ ವೋಡ ಹೋಗಿರ್ತ ಇಲ್ಲ ತಾಯಿ ಯೆಳ್ಕಂಡ್ ಹೋಯ್ತು ಹೇಳಿದ್ರು. ತಾಯಿ ನೀ ಬಾ ಹೇಳಿದ್ರು ವೋಡೇ ಹೋಗ್ತದೆ ರಾಜನ ಮನಿಗೆ. ಯೆಲ್ ಹೋದ ನನ್ ಮಗ ಕೇಳ್ತದೆ.

ಕರ್ಕಂಡ ಹೋಗಿ ಮಗಳದಲ್ಲಿ ಕುಳ್ಸಾನೆ ರಾಜ. ಮಗಳಿಗೂ ವಪ್ಗಯಾಗದೆ. ಆವಾಗ ಮಗ್ನ ಕರಿತದೆ ಅದು. ವೋಡ ಬರ್ತ ಅವ. ಅವ್ನ ಹೆಸರೂ ರಾಜರು ಕೇಳಿರೊದೇಯೇನಲ್ಲ. ನಿನ್ನ ಮಗನಲ್ಲ. ಬೇರಾವರು ಅಂದ ಹೇಳದ್ರು. ನಿನ್ನ ಕರೆದರೆ ನನ್ನ ಮಗನಾದ್ರೆ ಬರ್ವೆ ಇಲ್ಲಾದ್ರೆ ಬರುದೆಲ್ಲ. ಅದಕ್ಕಾಗಿ ನಿನ್ನ ಹೆಸ್ರ ಕರ್ದೆ ಅಂತದೆ ತಾಯಿ (ಮಗನ ಹೆಸರು ಈಸ್ವರ ಅಂದಿ ಕರೆದದ್ದು) ತಾಯಿ ನಾನು ನಿನ್ನ ಮಗನೇಯ ನೀನು ಬೆಳಗಾಗೂವರಿಗೂ ಓಂ ನಮಃ ಶಿವಾಯ ಹೇಳಿ ಕೊಟ್ಟಿದ್ಯಲ್ಲ ನಾನು ನೀ ಹೇಳ್ದ ಹಾಗೇ ಮಾಡಿದ್ದೇಯ ನೀರು ಅತ್ ಹೊತ್ಗೆ ಬಿಸಿಯಾಯ್ತು. ನನಗೇನೂ ತೊಂದ್ರೆಯಾಗಲಿಲ್ಲ ಹೇಳ್ದ.

ಕಡಿಗೆ ತಾಯಿ ಕೇಳದೆ “ದೇವ್ರ ಕಂಡಿತ್ತೋ?” ಹೇಳ್ತದೆ ಇಲ್ಲ. ದೇವ್ರು ಕಾಣ್ಣಿಲ್ಲ. ವನಂದೆ ಸಲ ಜಗಜಗ ಅಂದಿತ್ತು. ನೀರೊಳಗೆ ಅಂದಾ. ಅದೇ ದೇವ್ರು ಮಗ ಅಂತು. ರಾಜ್ರು ಮಂಟಪ ಚಪ್ರ ಚಾವದಡಿ ಹಾಕಿ, ಇಡೀ ಊರ್ಗು ದಂಗ್ಲ ಸಾರಿ ಮಗಳ ಮದ್ವಿ ಮಾಡ್ ಕೊಟ್ಟ. ಅವಗ ಯೇನ್ ಕಂಡ ಕೊಟ್ರಪ್ಪಾ, ಯೇನ್ ಕಂಡ ಕೊಟ್ರಪ್ಪಾ ಹೇಳಿ ಸಂಬಂಧಿಕರೂ ಎಲ್ಲಾ ಹಾಗೆ ಹೇಳ್ತಾ ಬರ್ತಾರೆ. ನೋಡ್ಕಂಡೀ ಅಯ್ಯಯ್ಯಪ್ಪಾ ಇವ ಇಷ್ಟ ಚಂದ ಅವನ್ಯಪಾ ಯಾರೂ ಇಲ್ಲ ಹೇಳಿ ಆಶೀರ್ವಾದ ಮಾಡ್ರು. ಇಂತಾ ವಳ್ಳೆ ಗಂಡ ನಿನ್ಗೆ ಯೆಲ್ಲೂ ಸಿಕ್ಕೂದಿಲ್ಲಾಗಿತ್ತು. ಅಣ್ಣ ತಮ್ಮ ಯಾರೂ ಇಲ್ಲ. ಅವರು ಗಂಡ ಹೆಣ್ತಿ ನಿನ್ನ ಮನಿಲೇ ಬಂದ್ ಉಳಿತ್ರು ಹೇಳ ಹೇಳಿದ್ರು. ರಾತ್ರಿ ಬೆಳಗಾಗುವರಿಗೆ ಕೆರಿಲಿ ಅವ ಉಳಿತಾನೆ ಹೇಳಿದ್ರೆ ದೇಬ್ರೇ ಅಲ್ಲ ಅವ ಹೇಳಿ ಊಟ ಮಾಡಿ ಮನಿಗೆ ಹೋಗ್ತಾರೆ. ತಾಯಿ, ಮಗ, ಸೊಸಿ ರಾಜರ ಮನೀಲೇ ಉಳೀತಾರೆ. ಆಸ್ತಿ ಪಾಸ್ತಿ ಯೆಲ್ಲಾ ಅಳಿನ್ ಹೆಸರಲಿ ಬರ್ದ ರಾಜ.

 ಹೇಳಿದವರು:

ಸೌ. ಮಹಾದೇವಿ ಜಟ್ಟಪ್ಪ ಪಟಗಾರ,
ಮೊಸಳೆ ಸಾಲು, ಅವರ ಮನೆಯಲ್ಲಿ ಬರೆದುಕೊಂಡದ್ದು.
ದಿ: ೦೩—೦೪-೨೦೦೧