ವಂದ್ ರಾಜಾ ಇದ್ನಂತೆ. ರಾಜ ವಂದ ಹೆಂಡ್ತಿ ಮದಿಯಾದ್ನಂತೆ. ಮತ್ತೆ ವಂದ ಹೆಂಡ್ತಿ ಮದಿಯಾದ್ನಂತೆ. ಕಡಿಗೆ ಅವಳಿಗೂ ಹುಡ್ಗರಾಗಲಿಲ್ಲಂತೆ. ಹುಡ್ಗರಾಗದಿದ್ದ ಕೂಡ್ಲವೇವ ಹೆಂಗ್ಸರೆಲ್ಲ ನೀರಿಗೆ ಹೋಗ್ವಾಗೆ ಅವನಿಗೆ ನೆಂಜ ಉಗಳತಾರೆ ಬಂಜೆರಾಜ ಅಂದ್ಕಂಡಿ. ಅವ ವಂದ ಸಂಡಾಸ್ಕೆ ಹೋಗೂದಿದ್ರೂವ ಯಾರೂ ಯೇಳೂಕಿಂತ ಮೊದ್ಲೆ ಸಂಡಾಸ್ಕ ಹೋಗಬಂದ ಬಿಡ್ತ. ಕಡೆಗೆ ಹೆಂಡ್ರು ಹೊರಬಿದ್ರೂ ಹಾಗೇ ಹೇಳ್ತಾರೆ. ಅವ್ರು ಹೆಂಗ್ಸರೂ ಹೊರಬೀಳೂದೆಲ್ಲ. ಹಿರಿಯ ಹೆಂಡ್ತಿಗೆ ವಂದ ಮನೆ, ಕಿರಿಯ ಹೆಂಡ್ತಿಗೆ ಒಂದ ಮನೆ ಕಟ್ಸಿರ್ತ. ಯೆರಡೆರಡು ಹೆಂಗಸ್ರು ವನಂದೆ ಮನೀಲೆ ಆಳ ಇತ್ತು. ಆಳಿದ್ರೆ ಎಲ್ಲರೂ ಚೀಚೀ ಅಂತ್ರು. ಯೆನ್ ಮಾಡ್ಬೇಕಾಯ್ತು ಅಂದಿ ಹಿರಿಯ ಹೆಂಡ್ತಿ ಕಿರಿಯ ಹೆಂಡ್ತಿ ಹೇಳ್ತಾರೆ. ಇನ್ನೊಂದು ಮದಿಯಾದ್ರೆ ಆಗೂದು ಅಂದಿ ಹಿರಿಯ ಹೆಂಡ್ತಿ ಕೈಲಿ ವಂದ ಬುತ್ತಿ ಕಟ್ಟು ಅಂತಾ, ಕಿರಿಯ ಹೆಂಡ್ತಿ ಕೈಲಿ ವಂದ ಬುತ್ತಿ ಕಟ್ಟು ಅಂತಾ ಕಡಿಗೆ ಕೊದ್ರಿ ಮೇಲೆ ಹೋಗ್ತಾನೆ. ಬುತ್ತಿ ತಕಂಡ ಹೋಗ್ತಾನೆ.

ಕುದ್ರಿ ಮೇಲೆ ಬುತ್ತಿ ತಕೊಂಡ ಹೋದ. ಆವಾಗ ಆಸ್ರಾಗಿ ನೀರ ಕುಡಿಯಲಿಕ್ಕೆ ಹೋಗ್ವಾ, ಅಂದ್ರೆ ಕುದರಿಗೆ ನೀಡ ಸಿಕ್ತದೆ. ಬಂಜೆರಾಜ ಅಂದಿ ಕೆರೆನೀರ ಹೇಳ್ತದೆ. ಆ ಕೆರೆ ಇಳ್ದೆ ಹೋದ ಕೂಡ್ಲೇವ ನೀರು ಕೆಳ್ಗೇ ಹೋತದೆ. ಯೇನಾದ್ರೂ ಆಗಲಪ್ಪಾ ನನಗೆ ಹೇಳಿ ಹಾರತನೆ. ಕೂಡ್ಲೆ ಹೊಡಿಯಾಗೆ ಬಿಡ್ತದೆ. ನೀರೆ ಇರೂದಿಲ್ಲ. ತಾ ಬಂಜೆರಾಜ ಹೌದು ಹೇಳ್ಕಂಡಿ ಮುಂದೆ ಹೋದ. ಕೆರೆ ಕಾಣ್ತದಂತ ಹೋದ್ರೆ ಹಿಂದೆ ಕೆರೆ.

ಪರಮಾತ್ಮ ಅವ್ನ ವಾಕ ನೋಡಲಾರದೇಯೆ ವಂದು ಕೆರಿಯ ಮಾಡ್ಕಂಡಿ ಕೆರೆ ತೋಟ ಸಣ್ಣದು ಇಟ್ಕಂಡಿ ವಂದ ಕೋಲು ಹಿಡ್ಕಂಡಿ ನಿತ್ಕತ್ತ. ಬಟ್ರು ಅಂಬಾಗೆ ಅನ್ಸತದೆ. ರಾಜಗೆ ಹೋಗಿ ನೀಡು ಕುಡ್ದಿ ಬಾ ಅಂದೆ ಹೇಳ್ತಾರೆ. ಬೇಕಟ ನೀರು ಕುಡ್ದ ಬರ್ತಾನೆ. ಮೇಲೆ ಬಂದು ಕೇಳ್ತಾರೆ ಅವನ ಜನರೆಲ್ಲ ಬಂಜೆರಾಜ ಅಂದಿ ಹೇಳ್ತಾರೆ” ಅಂದಿ ಹೇಳ್ತಾನೆ. “ಹುಡುಗರ ಫಲ ನನ್ಗೆ ಅದ್ಯೋ ಇಲ್ಲವೋ?” ಅಂದು ಹೇಳ್ತಾನೆ. ಅವ್ರ ಹೆಳ್ತಾರೆ. “ಈ ಮಾಯಿನ ಮರದಗೆ ಮಾಯಿನ ಹಣ್ಣಿಗೆ ಎರಡೇ ಹಣ್ಣು ಕೊಯ್ಕಂಡ ಬಾ” ಹೇಳ್ತಾರೆ. “ರಾಜಿದ ಬಹಳ ಮಂದಿ ಮಕ್ಕಳಾಗದವರವರೆ” ಹೇಳಿ ಐದಾರ ಹಣ್ ಕೊಯ್ಕಂಡ ಇಳಿತ. ಇಳ್ದ ನೋಡ್ವಲ್ಲಿವರಿಗೆ ಎರಡೇ ಹಣ್ಣಿರ್ತದೆ. ಇವ್ರು ಪರಮಾತ್ಮ ಅಂದೇ ತೆಳ್ಕಂಳ್ತ. ಕೆಳಗಿಳ್ದೆ ಬಂದಿ ಬಟ್ರ ಕೈಲಿ ಕೇಳ್ತ “ಇದ ಯೇನ್ ಮಾಡ್ಬೇಕು?” ಎರಡೂ ಹಣ್ಣು ತಕಂಡ ಹೋಗಿ ವಬ್ಬಳ್ಗೇ ಕೊಡ್ಬೇಡ. ಎರಡೂ ತಂದು ಎರಡೂ ಹೆಂಡ್ತಿಗೆ ಕೊಡು. ಎರಡೂ ವಬ್ಳೆ ತಿಂದ್ರೆ ರಾಕ್ಷೇಸ ಹುಟ್ತಾನೆ ಅಂದಿ ಹೇಳ್ತಾರೆ.

ಕಡಗಿವ್ರ ಬಂದ್ರು ಹಿರಿಯ ಹೆಂಡ್ತಿ ಕೈಲೇ ಎರಡು ಹಣ್ಣು ತಂದು ಕೊಡ್ತಾರೆ. ಅಕ್ಕಗೆ ಒಂದು ಕೊಡು ಅಂದ ಹೇಳಿ ಕೊಡ್ತಾರೆ. ಇದನ್ನು ತಿಂದ್ರೆ ಹುಡ್ಗರಾಗ್ತರ್ಯೋ ಕೇಳ್ತದೆ. ಹೌದು ಅಂದಿ ಹೇಳ್ತಾನೆ. ಎರಡೂ ಹಣ್ಣು ಒಬ್ಬಳೇ ತಿಂದು ಬಿಡ್ತದೆ ತನಗೊಂದೇ ಹುಡ್ಗರ ಹುಟ್ಲಿ ಹೇಳಿ. ರಾಜ ಹೇಳಿರೂದೆಲ್ಲ ರಾಕ್ಷಸ ಹುಟ್ತ ಹೇಳಿ.

ಆಳಗೊಳು, ಹಿರಿಯ ಹೆಂಡ್ತಿ ಆಳಗೊಳು ರಾಜರು ಬಂದಾರೆ ಬರ್ಲೆಲ್ಲ ಇಲ್ಲಿ ಅಂದ ಹೇಳ್ತಾರೆ. ಗದ್ದಿ ಕೊಯ್ಲ ಟಾಯಮ್. “ಅದು ಯೆಂತಾ ತಂದರೆ ಅಂದಿ ತೆಳ್ಕಂಬಾ” ಹೇಳ್ತದೆ. ರಾಜರು ಬಂದ್ಕಾರೆ ಹೇಳಿ ನೋಡ್ದೂರು ಹೇಳೂಕೆ ಬಂದ್ರು. ಆವಾಗ ನೋಡುವರಿಗೆ ಎರಡೂ ಹಣ್ಣು ಶಿಪ್ಪಿ ಸಿಗ್ತದೆ.

ಎರಡೂ ಸಿಪ್ಪಿ ತಕಂಡ ಹೋಗಿ ರಾಜರ ಹಿರಿಯ ಹೆಂಡ್ತಿ ಕೊಡ ಕೊಡ್ತಾರೆ. ಅದ ಕಲ್ಲಲ್ ಹಾಕಿ ಅರಿತು. ರಸ ಕುಡಿತು. ನೀರ ಕುಡಿತು. ಜಗಟ ತಗ್ದಿ ಆಕಳೀಗ ಹೊತಾಕ್ತು. ಗರ್ಭಿಣಾಯ್ತು. ಆಕಲೂ ಗರ್ಭಿಣ್ಯಾಯ್ತು. ಹಿರಿಯ ಹೆಂಡ್ತಿದಲ್ಲಿ ಇರು ಎರಡು ಆಳ್ಗೊಳು ನಮ್ಮ ರಾಜರ ಹೆಂಡ್ತಿ ಬಸರಿ. ನೀರ್ಗ ಹೋದೊರ್ ಹಿರಿಯ ಹೆಂಡ್ತಿ ಆಳುಗೊಳು “ಯೆಷ್ಟೆ ತಿಂಗಳಾಯ್ತು?” (ಕೇಳ್ವರೆ ಕಿರಿಯ ಹೆಂಡ್ತಿ ಆಳ್ಗೊಳು)” ಮೂರು ತಿಂಗಳಾಯ್ತು” ಹೇಳ್ತದೆ. ಇದ್ರ (ಕಿರಿಯ ಹೆಂಡ್ತಿಯ) ಆಳ್ಗೊಳು ನಮ್ಮ ರಾಣಿಯೂ ಬಸರಿಯಾಗದೆ ಅಂದ್ರು. ರಾಜ್ಯದಲ್ಲಿ ಕಿರಿಯ ಹೆಂಡ್ತಿ ಕ್ರೋಸ ಮಾಡ್ತದೆ. ನೀವು ಅದ್ರ ಮನಿಗೆ ಹೋಗಲೆಲ್ಲ. ಅದ ಹೆಂಗ್ ಬಸರಾಯ್ತು. ಹಿರಿಯ ಹೆಂಡ್ತಿ? ಊರಿಗೆ ದೊಡ್ಡ ರಾಜರಲ್ಲವ? ಕುಟ್ ಕುಟ್ ಹೇಳಿ ಕೇಳ್ತದೆ.

ಆವಾಗ ರಾಜ್ಯಗೆ ಮರ್ಯಾದೆ ಆಗ್ತದೆ. ಯೆರಡು ಮಂದಿ ಸೇವಕಗೊಳ ಕರಿತಾನೆ “ಇದ್ರ ಹಿರಿಯ ಹೆಂಡ್ತಿಯ ತಕಂಡ ಹೋಗಿ ಅಡವಿಯಲಿ ತಲಿ ಹೊಡ್ದಿ ಆ ರಕ್ತ ತಂದಿ ತನ್ಗೆ ತಂದೆ ತೋರ್ಸಿ” ಅಂತಾ. “ರಕ್ತ ತಂದ ಕಿರಿಯ ಹೆಂಡ್ತಿ ಹಣಿಗೆ ಹಚ್ಚಿ” ಹೇಳಿ ಹೇಳಿ ಕಳಿಸ್ತಾನೆ. ಕರ್ಕಂಡ್ ಹೋದ್ರು ಅಡವಿಗೆ ಕರ್ಕಂಡ ಹೋಗಿ (ಪಟ ನೆಗುರೊಳಗೆ) ಪಟದಲ್ಲಿ ಶಿಸ ಹೊಳಿತು. ರೊಂಡ ಮಾಡುಕಾಗುದಿಲ್ಲ. ಇವ್ರು “ಇಲ್ಲೇ ಉಳಿ” ಹೇಳಿ ರಾಜ್ರ ಹಿರಿಯ ಹೆಂಡ್ತಿ ಕೂಡ ಹೇಳಿ “ನಾವು ಸೊಪ್ನ ಮನೆ ಕಟಕೊಡ್ತೆವೆ ಇಲ್ಲೆ ಉಳಿ ಅಂದೆ ಹೇಳಿ ಹೊನ್ನಿರಸ ತಕಂಡ ಹೋಗಿ ರಾಜ್ರ ಕಿರಿಯ ಹೆಂಡ್ತಿ ಹಣಿಗೆ ತಾ ಹಚಿತ್ರು.” ಹೇಳಿ ಬಿಟ್ ಹಾಕಬರ್ತಾರೆ ಕಿರಿಯ ರಾಣಿ ಹಣಿಗೆ ಹೊನ್ನಿರಸ ಹಚ್ಚಿದ್ರು.

ಬಿಟಹಾಕೆ ಬಂದದ್ದೇಯ ಬಾಳಂತ್ಯಾಗ್ರದೆ. ಕೂಡಲೇವ ರಾತ್ರಿ ಹುಡ್ಗ ಹುಟ್ತ. ಇಡೀ ಕತ್ಲೆ ಬೆಳಕಾಗಬಿಡ್ತದೆ ಅಡವೀಲಿ ಅಚಕನ್ನಿ ದೇವಕನ್ನೆಯೋರು ಇವತ್ ಯೇನ್ ಬೆಳಕು ಹೇಳಿ ನೋಡ್ತಾರೆ. ಐದ ಜನ ಇದ್ದಲ್ಲಿ ವಂದ ಕಿರಿಯ ಕನ್ಯೆ ಹುಡ್ಗನ ನೆಕ್ಕಂಡ್ ಹೋತದೆ, ದೇವಸ್ಥಾನದಲ್ಲಿ ತಕ ಹೋಗ ಇಟ್ಕಂಡತು. “ನಾನ್ ಮದಿಯಾದ್ರೆ ಇದೇ ಹುಡ್ಗನ್ನೇಯ” ಅಂದಿ ಹಣ್ಣ ಮೇಲೆ ಕಲೆ ಗುರ್ತು ಮಾಡ್ತು. ಶೇಕರಾಜ ಅಂದಿ ಹೆಸರಿಟ್ರು. ಹೆಸರಿಟ್ಟು ನಂತರ ಅಕ್ಕ ದಿಕ್ಳು ನಾಕ ಜನ ಬಂದೊರು ಅವರೂ “ನಮಗೂ ಗಂಡ ಇವನೇಯ” ಹೇಳಿ ಗುರ್ತು ಹಾಕಿ ತಾಯಿ ಆಕಳು, ಆಕಳ ಕರ ಮತ್ತೆ ಹುಡ್ಗ, ಹುಡ್ಗನ ತಾಯಿ ಅದ್ರ ತಾಯಿ ಮನಿಗೆ ಕಳ್ಸಿಕೊಟ್ರು.

ಕಡಿಗೆ ಹಾಗೇ ಹುಡ್ಗ ದೊಡ್ಡಾಗ ಬಿಡ್ತ. ವ ಯಾರೂ ಕೊಲಲಾಗದಂತಾ ಹಕ್ಕಿ, ಗಿಳಿ ಯೆಲ್ಲ ಕೊಲ್ತಾನೆ. ಸಾಲಿಗೆ ಹೋತ; ಸಾಲಿಗೆ ಕಿರಿ ಹೆಂಡ್ತಿ ಮಗನೂ ಬರ್ತಾನೆ. ಇಬ್ಬರೂ ಗೆಳಿತನ ಮಾಡ್ತಾರೆ. ಅವಗೆ ಏನೂ ಬರೂದೆಲ್ಲ. ರಾಕ್ಷಸ್ನ ಹಾಗೇ ಮಾಡ್ತ. ಇವ ಹುಸಾರಿರ್ತ.

ರಾಜ ವಂದಿವ್ಸ “ಕಿರಿಯ ಹೆಂಡ್ತಿ ಮಗ್ನ ಮದಿ ಮಾಡೆಬೇಕು” ಅಂದಿ ಅರಸೂಮನಿ ಹೆಣ್ ಕೇಳೂಕೆ ರಾಜ ಪ್ರಧಾನಿ ಆಗಿ ಹೋಗತಾರೆ. ಅರಸೂ ಮನಿಲಿ ಯಾರ್ ಬಂದ್ರಿ? ಅಂದ ಕೇಳ್ತಾರೆ. ಮಗಗೆ ಹೆಣಗಾರ್ಕಿ ಸಲವಾಗಿ ಬಂದೋರು ಹೇಳತ್ರು. ಅವ್ರೇಗ್ ತೆಳೀತಾರೆ ಈ ಹಕ್ಕಿ ಕೊಂದವ ಮದಿಯಾಗ್ವವ ಅಂದ ತಿಳ್ಕತ್ತಾರೆ. ಹೆಣ್ ಕೊಡೂ ಅರಸು ಮನ್ಯೋರು “ಕೊಟ್ಟೇ ಕೊಡೆತ್ರು” ಅಂತಾರೆ.

ಕಿರಿಯ ಹೆಂಡ್ತಿ ಮಗ್ನ ಕೈಲಿ ರಾಜ ಕೇಳ್ತಾನೆ.  “ನೀನ್ ಮದಿಯಾಕೆ ಪಾಲ್ಕಿ ಮೇಲೆ ಪಾಲ್ಕಿಲಿ ಕೂತ್ಕುಂಡಿ ಹೋಗಬೇಕು.” “ಪಾಲ್ಕಿಮೇಲೆ ನಾ ಕೂತ್ಕಳೂದೇಲ್ಲ. ಪಾಲ್ಕಿ ಮೇಲೆ ನಾ ಕುಳ್ಳೂದಾರೆ ಗಂಡ ಸತ್ ಹೋದವ್ರು ನಾಲ್ಕು ಮಂದಿ ಹೆಂಗ್ಸುರ ಪಾಲ್ಕೆ ಹೊತ್ಕಂಡ್ರೆ ನಾನು ಪಾಲ್ಕಿ ಮೇಲೆ ಕೂತ್ಕಳಬೇಕು. ಮುಂದೆ ಎರಡು ಜನ ಹಿಂದೆ ಎರಡು ಜನ ಮುಂದೆ ಆಗಿ ಹೊತ್ಕಳಬೇಕು. ಇಲ್ಲಾದ್ರೆ ನಾ ಮದಿಯಾಗೂದಿಲ್ಲ” ಹೇಳ್ತ.

ಯೆಡರು ಬಂಡಿ ಅನ್ನ ಕೊಪ್ಪರ್ಕಿ ಅನ್ನ ಉಣಬೇಕು. “ಎರಡು ಕೊಪ್ಪರ್ಕಿ ಅನ್ನ ವಂದ ಕೊಪ್ಪರ್ಕಿ ಸಾರು ಆಗಬೇಕು” ಅಂತ ಹಾಗೇ ಮಾಡ್ಕಂಡ ಕರ್ಕಂಡ ಬರತ್ರು.

ಸಾಲಿಲಿ ಗೆಳಿದಿಕ್ಳು (ಹಿರಿಯ ಹೆಂಡ್ತಿ ಮಗ್ನ ಹತ್ರ, ಶೇಕರಾಜ್ನ ಹತ್ರ) “ನಿನ್ನ ಅಣ್ಣನ ಮದುವಿ, ನೀಯೆಂತಕ ಸಾಲಿಗೆ ಬಂದೆ? ಹೋಗು ಮದ್ವಿಗೆ” ಹೇಳ ಹಿಂದೆ ಕಳ್ಗತಾರೆ. ಮನಿಗೆ ಬಂದಿ “ಅಣ್ಣನ ಮದಿಗೆ ಹೋಗ್ತೆ” ಅಂದಿ ಹಟ ಮಾಡ್ತ ತಾಯಿ ಹತ್ರ “ನಾ ಮದ್ವಿಗೆ ಹೋಗ್ವವನೇಯ” ಅಂದಿ ಹೇಳ್ತ. ತಾಯಿ ಕೈಲಿ “ಬೇಡ ಅಂತದೆ ಹೋಗಬೇಡ”.

ಹೋದ ಮದ್ವಿಗೆ ಹೋಗುವರಿಗೆ “ನಾನವನ ಮದಿ ಆಗೂದೆಲ್ಲ. ಕೊದ್ರಿ ಹಾರ್ಸಿ ನಿಂಬೆ ಹಣ್ಣ ತಕೊಂಡ ನಾ ಕೂತಲ್ಲಿ ನಿಂಬೆ ಹಣ್ಣ ಹೊಡಿಬೇಕು, ನನ್ಗ ತಾಗಬೇಕು” ಹೇಳಿ ಕೂತ್ಕಳ್ತದೆ.

ಇವನ ಹತ್ರ ಕುದ್ರಿ ಹಾರ್ಸೂಕಾಗುದೆಲ್ಲ. ಶೇಕರಾಜ “ಅವ ನನ್ನ ಅಣ್ಣಾಗ್ತಾನೆ. ನಾ ಹೊಡಿತೆ ನಿಂಬೆ ಹಣ್ಣು” ಅಂತ. ರಾಜನ ಕುದ್ರಿನೇ ತಕಂಡಿ ಅಣ್ಣನ ಕುದ್ರಿ ಹಾರ್ಸಿ ನಿಂಬೆ ಹಣ್ಣು ಹೊಡಿತಾನೆ ಅದ್ಕೆ. ನಿಂಬೆ ಹಣ್ಣು ದ್ಕೆ ತಾಗ್ತದೆ. ಮಾಳ್ಗಿ ಮೇಲಿನಿಂದ ಕೆಳ್ಗೆ ಬತ್ತದೆ. ಬಂದೋಳು ಹೆಳ್ತದೆ. “ಅವನಿಗೆ ಮದಿಯಾಗುದೇ ನಾನು ಆಗೂದಿದ್ರೆ ಇವನ ಮದಿಯಾಗ್ತೆ” ಅಂತದೆ. ರಾಜ ಅವನ ನನ್ನ ಮಗನಲ್ಲ, ಇವನೇ ನನ್ನ ಮಗ ಇವನಿಗೇ ಮದ್ವಿಯಾಗು ಹೇಳ್ತು”. “ಇಲ್ಲ ನಾನಾಗೂದಿಲ್ಲ” ಅಂತದೆ. “ನಿನ್ನ ಮಗನಲ್ಲ. ಅವನ್ನ ಏಳು ಸಮುದ್ರದಾಚೆ ಕೀಳ ಸಮುದ್ರ. ಅಲ್ಲದೆ ನಾಗದೇವತೆ, ನಿನ್ನ ಮಗ ಅಲ್ಲಿಗೆ ಹೋಗಿ, ಮಾಣ್ಕದ ಹಳ್ ತಕಂಡ ಬರ್ಬೇಕು.” ಹೇಳ್ತದೆ. ಕಡಿಗೆ ಮಗ್ನಕೈಲಿ ಹೇಳ್ತ “ಆಗೂದೊ ನಿನ ಹತ್ರ?” ಆಗೊದೆಲ್ಲ ಹೇಳ್ತ.

“ನನ್ನ ಅಣ್ನಾದ ಅಲ್ಲ? ನಾ ಹೋಗಿ ತರ್ತೆ” ಅಂದ. ತಮ್ಮ ಶೇಕರಾಜ. ಅಣ್ಣನ ಮದುವೆ ಆಗಬೇಕಲ್ಲ? ಆಯ್ತು ಅಂದ ಹೇಳ್ತಾರೆ. ಅಚಕನ್ನಿ ದೇವಕನ್ನಿ ಹೇಳ್ತಾರೆ. “ಇವ ಯೆಂತಕ ವಪಕಂಡನಪ್ಪ?” ರಾತ್ರಿಯಾಗಹೋಯ್ತು. “ರಾತ್ರಿ ಅವ ಬೆಟ್ಟದಲ್ಲಿ ಮಲ್ಗತಾನೆ” ಅಂದ. ಬೆಳಗಾದ್ದ ನೋಡ್ತಾರೆ. “ಶೇಕರಾಜ ಬಂದಿರಬೇಕು. ಅದ್ಕೇ ಬೆಟ್ಟೆಲ್ಲಾ ಬೆಳಕು” ಅಂದಿ ಹೇಳ್ತಾರೆ. ಅಚಕನ್ನೆ ದೇವಕನ್ಯೆ “ಶೇಕರಾಜ, ನೀ ಹೋಗಬೇಡಾ, ನಾಗದೇವತೆ ನಿನ್ನ ಇರ್ಸೂದಿಲ್ಲ. ಆರತಿಂಗಳ ನಿದ್ರೆ ಅದ್ಕೆ. ಈಗ ಯೆಚ್ಚರಾಗದೆ. ಆರು ತಿಂಗಳ ಯಚ್ಚರ್ಕಿ ಅದ್ಕೆ, ನೀನ ಹೋಗಬೇಡ. ಮಾಣ್ಕದ ಹಳ್ಳ ಅದ್ ತೆಗೆದಿಡಲಿಲ್ಲ. ನೀನ್ ಹೋಗಬೇಡ” ಹೇಳ್ತಾರೆ. ಅವ್ “ಇಲ್ಲಾ ನಾನ್ ಮಾತುಕೊಟ್ಟೆ ಬಂದ ಬಿಟಾನೆ ಆ ಮಾತು ನೆಡ್ಸಿಕೊಡಬೇಡ್ವಾ” ಕೇಳ್ತು.

ಆಚ್‌ಕನ್ನಿ ದೇವಕನ್ಯೆ “ನಾವು ಮೂರು ಹಳ್ ಕೊಡತ್ರು. ಕತಂಡ್ ಹೋಗು” ಅಂದೆ ಮೂರು ಹಳ್ ಕೊಟ್ರು. ನೀನು ಯೇಳು ಸಮುದ್ರ ದಾಟಿ ಕೀಳ ಸಮುದ್ರಕ್ಕೆ ಹೋಗು. ರಾಶಿ ಹಾವಿರ್ತದೆ. “ಅದೆಲ್ಲ ಮುಟಹೊಗ್ಲಿ. ನೀರಾಗೆ ನನ್ಗೆ ಹೋಗುಕೆ ದಾರಿಯಾಗಲಿ” ಅಂದ. ಬಹಳ ‌ಜ್ಯೋತಿ ಮಾಣ್ಕದ ಹಳ್ ತೆಗದಿಟ್ಟ. ಅದ್ಕ ನೆದ್ರ ಬಳಿ ಅಂದಿ ವಂದ ಹಳ್ಳ ಹೊಡಿ ಅಂದ್ರ. ಅದ ಮಾಣ್ಕದ ಹಳ್ಳ ತೆಗದಿಟ್ಟ. ನೆದ್ರಿ ಬಿದ್ ಹೋಗ್ತದೆ ಅದ್ಕೆ. ಮಾಣ್ಕದ ಹಳ್ಳ ತೆಕಂಡಿ ಬರಬೇಕಿದ್ರೆ ಮತ್ತೊಂದ ಹಳ್ಳ್ ಅದ್ಕಂಹುಚ್ಚರಾಗಿ ಹೇಳಿ ವಂದ ಹಳ್ಳ ಹೊರಿ ಹೇಳದ್ರು. ಮೂರು ಹಳ್ಳ ಕೊಟ್ರು.

ಅವ ಹಾಗೇ ಮಾಡ್ಕಂಡಿ ಮಾಣ್ಕದ ಹಳ್ಳ್ ತಕಂಡ ಬಂದ ಬಿಡ್ತಾ. ಅವ ಬಂದಿ ದಿನಾ ಮನ್ಗದಲ್ಲೇ ಮನ್ಗತಾ. ಬಂದಿ “ಹಳ್ಯ ತಂದ್ಯಾ” ಹೇಳಿ ಕೇಳ್ತಾರೆ. “ಹೌದು” ಅಂದ. ಅವರ ಹತ್ರ ಕೊಡಬೇಡಾ ಕುದ್ರಿ ಹಾರ್ಸಿ ಅರಸೂ ಹುಡ್ಗಿ ತೋರ್ಸಿ ಮಾಳ್ಗಿ ಮೇಲೆ ಅದೆ ಅದು ಹೇಳ್ತಾರೆ. ಇವ ಹಾಗೇ ಮಾಡ್ತಾ ಕಡಿಗೆ ಅದು ದಡದಡ ಕೆಳಗಿಳಿದು ಬರ್ತದೆ.

ರಾಜ “ತನ್ನ ಮಗ ತಂದಾ. ಬಾ ಈಗ” ಅಂತಾನೆ. “ನಿನ್ನ ಮಗಲ್ಲ ತಂದದ್ದು, ನಿನ್ನ ಮಗಲ್ಲ ತಂದದ್ದು, ಯಾರೆಂದು ನನ್ಗೆಗುತ್ತದೆ. ಅವನ್ನೇ ಮದಿಯಾಗ್ವವ್ಳು” ಹೇಳ್ತದೆ.

ಚಿಕ್ಕಿಗೆ ಸಿಟ್ ಬರ್ತದೆ. ಅಕ್ಕನ ಮಗನ ಕೊಲ್ಲುಕೆ ತಯಾರಾಗ್ತದೆ. “ಐದಾರು ಜನ ಗಂಡ್ಸರೆಲ್ಲ ಕೂಡಿ ಅವ್ನ ನಿದ್ರೆ ಬಂದಾಗ ಅವ್ನ ಕೊಟ್ಟಿ ರುಂಡ ಹಾರ್ಸಿ ಪಾರಿಜಾತ ಗಿಡಕ್ಕೆ ಹಾಕಿ” ಅಂತದೆ.

ಅವ್ನ ಕೊಚ್ಚಿ, ತುಂಬಕಂಡ ಹೋಗಿ ಕಟ್ಟಿ ಇಡ್ತಾರೆ. ಅವ್ನ ಕೊಚ್ಚಿ ಗುಡ್ಡಿ ಮೇಲೆ ಪಾರಿಜಾತ ಗಿಡಕ್ಕೆ ಹಾಕಿ ಹೋಗತಾರೆ. ಆವಾಗೆ ಆಚಕನ್ಯೆ ದೇವಕನ್ಯೆಯರು “ಇವೆತ್ಯೇನ ಬೆಳಕಾಗದೆ?” ಅಂದಿ ನೋಡತಾರೆ. ಆವಾಗ ಕಿರಿಯವಳು ಬಂದ್ ಪಾರಿಜಾತ ಗಿಡದ ಅಡಿಗೆ ಕೂತ್ಕಳತದೆ, ರಕ್ತದ ಹುಂಡು ತಲಿ ಮೇಲೆ ಬೀಳ್ತದೆ. “ಯೆಂತಾ ಹುಂಡು?” ಅಂದಿ ಮೇಲೆ ನೋಡ್ತದೆ. ಪೊಟ್ಲೆ ಜಗಜಗ ಅಂತದೆ. ಬೆಳಗಾಗಿ ಹೊಳಿತದೆ. ಕೆಳಗಿಳಿಸ್ತಾರೆ. ವಟ್ಟೂ ಜನ ಕೂಡಿ. ಮೊದ್ಲನಂತೆ ಶೇಕರಾಜ್ನ ಮಾಡ್ತಾರೆ. ಹೋಗಬೇಡ ಅಂದ್ರೂ ಕೇಳೊದೆಲ್ಲ.

ಬೆಳಗಾಗುವರಿಗೆ ನಾಗದೇವತಿ ಅರಸನ ಮನೀಗೆ ಬತ್ತದೆ. ರಾಜ್ನಮನಿಗೆ ಬಂದೇ ಬಿಟ್ರು. ಹಳ್ಳ್‌ತೆಕ್ಕಂಬಂದನಲ್ಲ? ಅವ ಧೈರ್ಯ ಇದ್ರೆ ನನ್‌ಕೊಲೆ ಮಾಡ್ಬೇಕು. ಪಟದಲ್ಲಿ ಹೊಡ್ದೆ ಅಂತದೆ. ಆವಾಗೆ ಅರಸ್ರು ಮಗಳು ಹೇಳ್ತದೆ. ಕೊಲ್ಲು ಹೇಳು ನಿನ್ನಮಗ್ನ ಕೈಲಿ ಹೇಳ್ತದೆ. ಕೊಲ್ಲುಕಾಗುದಿಲ್ಲ. ಅವ ಬಿದ್ದ ಹೋದ. ಅವನಲ್ಲ ತಂದವ. ತಂದವ ಬೇರೆಯವ ಹೇಳ್ತದೆ ಚಿಕ್ಕತಾಯಿ. ಶೇಕರಾಜ ನಾನು ತಂದವ ಹೇಳಿ ಯೆದಿಕೊಟ್ತು ನಿಲ್ತ. “ಹಾಗಾದ್ರೆ ಯುದ್ಧ ಮಾಡು ನನಹತ್ರೆ” ಹೇಳ್ತದೆ. ಪಟ ಹಿಡ್ಕಂಡೆ ನಿಂತ. ವನಂತ ಸಾರೆ ಕುತ್ಗಿ ಕಡೆದ್ರೆ ನೂರಾರು ಹಾವು ಆಗಿಬಿಡ್ತದೆ. ಕಡಿಗವ ಆಗುದಿಲ್ಲ ಹೇಳಿ ಸೋತೆ ಹೇಳುವಾಗ ಆಚಕನ್ಯೆ ದೇವಕನ್ಯೆ ವಂದ ಹಳ್ ಹೊಡಿತಾರೆ. ಅವ ಕಡ್ದಂತದಷ್ಟೂ ನಿಸ್ಸಿತ್ನಾಗಬೇಕು. ಯಾವದೂ ಇರುಕೇ ಹೇಳಿ ಹಳ್ಳ್‌ಹೊಡೀತಾರೆ. “ಎಲ್ಲಾ ನಾಸ್ಯಾಗಿ ಹೋಗಲಿ ನಾಗದೇವತೆ ವಂದೇ ಉಳಿಬೇಕು” ಹೇಳಿ ಹಳ್ ಹೊಡೀತಾರೆ.

ಆವಾಗ ನಾಗದೇವತೆ ಕೈಲಿ ಇವ್ನ ಸೋಲ್ಸಿಕಾಗದೇ ಇಲ್ಲ ಹೇಳ್ತದೆ. “ನೀ ಮಾಣ್ಕದ ಹಳ ತಂದಿಲ್ಲಾ? ನನ್ನೇ ಮದಿವೆಯಾಗಬೇಕು.” ಅಂತದೆ. ರಾಜ್ನ ಮಗಳೂ ನನ್ನ ಮದುವೆಯಾಗಬೇಕು ಅಂತದೆ. ಇತ್ಲಾಗೆ ಅಚಕನ್ಯೆ ದೇವಕನ್ಯೆ “ನಮ್ಮ ಮದುವೆಯಾಗಬೇಕು” ಅಂತರೆ. ಏಳು ಜನ್ರಾತದೆ ಅಂದತೆ ಈಗ.

ಐದು ಜನ ಅಚಕನ್ಯೆ ದೇವಕನ್ಯೆ “ಅಟ್ಟೂ ಜನ ನಿಲ್ಲುದು. ಯಾರ ತಲಿ ಮೇಲೆ ತೊಂಗೆ ಹಾರ್ತದೆ ಅವ್ರಿಗೆ ಮಾಲಿ ಹಾಕುವದು ಅವ” ಅಂದಿ ಹೇಳ್ರಾರೆ. ಕಡಿಗೆ ಕಿರಿಯ ತಂಗಿರುದೆಲ್ವ? ಅವಳ ತಲೆಯ ಮೇಲೆ ಹಾರ್ತದೆ ತೊಂಬೆ. ಅವಳನ್ನೇ ಕಿರಿಯ ದೇವಕನ್ಯೆ ಮದುವೆಯಾಕ ಬತ್ತ. ಅವರೆಲ್ಲಾ ತಂತಮ್ಮ ಜಾಗಕ್ಕೆ ಹೋದ್ರು. ಅರಸ್ನು ಹುಡುಗಿ ಬೇರೆಯವ್ನ ಮದುವೆಯಾಗಿ ಹೋಯ್ತು. ವಂದೇ ಹೆಂಡ್ತಿಯಾಗ್ಲಿ ಹೇಳಿ ತಾಯಿ ರಾಜನ ಕೆಲ ಹೇಳ್ತದೆ. ನೀನು ದ್ರೋಹ ಮಾಡ್ದೆ ಹೇಳಿ ಕಿರಿಯ ಹೆಂಡ್ತಿನು ಕಡಿದು. ಮಗನ್ನೂ ಕಡಿದು ತೋರಣ ಹಾಕಿ ಅದರಲ್ಲಿ ನುಸದು ಮನಿಗೆ ಹೋಗ್ತ.

 ಹೇಳಿದವರು

ಸೌ. ಮಹಾದೇವಿ ಜಟ್ಟಪ್ಪ ಪಟಗಾರ, ಮೊಸಳೆ ಸಾಲು, ತಾಲೂಕು ಕುಮಟಾ, ಅವರ ಮನೆಯಲ್ಲಿ
ದಿನಾಂಕ: ೦೩—೦೪-೨೦೦೧ ರಂದು ಹೇಳಿಸಿ ಬರೆದುಕೊಂಡದ್ದು.