ಮಾನವನು ಸಮಾಜದೇವಿ. ತನ್ನ ಬೌದ್ಧಿಕ ಶಕ್ತಿಯಿಂದ ಜಗತ್ತಿನಲ್ಲಿ ಇತರ ಪ್ರಾಣಿಗಳಿಗಿಂತಲೂ ಭಿನ್ನವಾಗಿ ಉನ್ನತ ಮಟ್ಟದಲ್ಲಿರುವನು. ಪ್ರಾಚೀನಕಾಲದಿಂದಲೂ ಮಾನವನು ತಾಯಿಗೆ ‘ದೇವತೆ’ಯ ಸ್ಥಾನವನ್ನು ಕೊಟ್ಟಿರುವನು. ಮಾತೆಯೇ ಮಾನವನ ಪ್ರಗತಿಯಲ್ಲಿ ಪ್ರಮುಖಸ್ಥಾನವನ್ನು ವಹಿಸಿರುವಳು. ಆದುದರಿಂದ ಮಾತೃದೇವತೆಯ ಆರಾಧನೆಯು ಎಲ್ಲ ಜನಾಂಗಗಳಲ್ಲಿಯೂ ಕಂಡು ಬರುತ್ತದೆ. ಒಂದು ಕಾಲದಲ್ಲಿ ಮಾತೃದೇವತೆಯ ಆರಾಧನೆಯು ಕೆಲವೊಂದು ಬುಡಕಟ್ಟುಗಳಿಗೆ ಅಥವಾ ಜನಾಂಗಕ್ಕೆ ಸೀಮಿತವಾದುದೆಂಬ ಭಾವನೆಯಾಗಿತ್ತು. ಆದರೆ ಆದಿಕಾಲದಿಂದಲೂ ಮಾತೃದೇವತೆಯ ಆರಾಧನೆ ಇದ್ದುದು ಸರ್ವವಿಧಿತವಾಗಿದೆ. ಆರಾಧನೆಗಳು, ಕಟ್ಟಳೆಗಳು, ಮೊದಲಿನಿಂದಲೂ ಬೆಳೆದುಕೊಂಡುಬಂದಿವೆ. ಈ ಪದ್ಧತಿಯು ಎಲ್ಲಕಾಲದಲ್ಲಿಯೂ ನಮ್ಮ ದೇಶದಲ್ಲಿ ಬೆಳೆದುಕೊಂಡು ಬಂದಿದೆ.

ಸೈಂಧವ ಸಂಸ್ಕೃತಿಯ ಅವಶೇಷಗಳನ್ನು ಅವಲೋಕಿಸಿದಾಗ ಅಲ್ಲಿ ದೇವಿಯ ಚಿತ್ರಗಳು ಮರದಿಂದಲೇ ಹೊರಹೊಮ್ಮಿಕೊಂಡು ಬಂದಂತೆ ಕಾಣುತ್ತವೆ. ಈ ಸಂಸ್ಕೃತಿಯ ಜನರು ಪ್ರಕೃತಿಯನ್ನು ಕೆಂಪು ಬಣ್ಣದಿಂದ ಕಂಡಿದ್ದರು ಆದರೆ ಪ್ರಕೃತಿಯನ್ನು ಕೆಂಪು ಬಣ್ಣದಿಂದ ಕಾಯುವದು ಪುರಾತನ ಪದ್ಧತಿಯೂ ಆಗಿತ್ತು ಆದುದರಿಂದ ದೇವಿಯ ಮೈಬಣ್ಣ, ಉಡಿಗೆ, ತೊಡಿಗೆ, ಅಲಂಕಾರ ಇವೆಲ್ಲವುಗಳು ದೇವಿಗೆ ಪ್ರಿಯವಾದ ವಸ್ತುಗಳೆಂದು ಅವೆಲ್ಲವುಗಳು ಕೆಂಪು ಬಣ್ಣದಿಂದ ಒಡಗೂಡಿವೆ.

ಈಗಲೂ ದೇವಿಗೆ ಅರ್ಪಿಸುತ್ತ ಬಂದಿರುವ ಕುಂಕುಮ, ಕೆಂಪು ದಾಸಾಳ ಹೂವು, ರಕ್ತವಸ್ತ್ರ, ರಕ್ತಫಲ, ಮೊದಲಾದವುಗಳು ದೇವಿಗೆ ಪ್ರಿಯಕರವಾದವು ಎಂಬ ಕಲ್ಪನೆ ಇದೆ.

[1] ಇದೇ ಕಲ್ಪನೆಯನ್ನು ಧರ್ಮ ಗ್ರಂಥಗಳಲ್ಲಿ ಶಾಸ್ತ್ರಪುರಾಣಗಳಲ್ಲಿಯೂ ಕಾಣುತ್ತೇವೆ. ಆದುದರಿಂದ ಸೈಂದವ ಸಂಸ್ಕೃತಿಯಲ್ಲಿ ಮಾತೃದೇವತೆಗೆ ಪ್ರಮುಖವಾದ ಸ್ಥಾನವಿತ್ತು. ಪಿತೃದೇವತೆಗಿಂತ ಮಾತೃದೇವತೆಯ ಕಲ್ಪನೆ ಪ್ರಾಚೀನವೆಂಬ ಸತ್ಯ ಪ್ರಾಗೈತಿಹಾಸಿಕ ಜನ ವಾಸ್ತವ್ಯದ ನೆಲೆಗಳ ಉತ್ಖನನಗಳನ್ನು ಗಮನಿಸಿದಾಗ ನಮಗೆ ಖಚಿತವಾಗುತ್ತದೆ. ಯುರೋಪಿನ ಶಿಲಾಯುಗದ ಉತ್ಖನನಗಳನ್ನು ಗಮನಿಸಿದಾಗಲೂ ಬಹುಪ್ರಾಚೀನ ಮಣ್ಣಿನ ಹಾಗೂ ಕಲ್ಲಿನ ಪ್ರತಿಮೆಗಳೆಂದರೆ ಮಾತೃದೇವತೆಯ ಪ್ರತಿಮೆಗಳೇ[2] ಇಂತಹ ಅಂಶಗಳು ಮಾತೃದೇವತೆಯ ಕಲ್ಪನೆಯ ಬಗೆಗೆ ಪುಷ್ಠಿಯನ್ನು ಒದಗಿಸುತ್ತವೆ.

ವೈದಿಕ ಸಂಸ್ಕೃತಿಯ ಜನರು ಪಿತೃಪ್ರಧಾನ ಸಮಾಜದ ವ್ಯವಸ್ಥೆಯನ್ನು ಹೊಂದಿದವರಾಗಿದ್ದರು. ಈ ಸಂಸ್ಕೃತಿಯ ಗಂಡಸರು ಬೇಟೆಯಾಡುವದು, ಕುದುರೆ ಹತ್ತುವದು, ಈ ಅಂಶಗಳು ಪ್ರಮುಖವಾಗಿ ಕಂಡುಬರುತ್ತವೆ. ಅಲ್ಲದೆ ಇವರು ಇಂದ್ರ, ವರುಣ, ಸೂರ್ಯ, ವಿಷ್ಣು, ರುದ್ರ ಈ ದೇವತೆಗಳ ಆರಾಧಕರಾಗಿದ್ದರು. ಆದುದರಿಂದ ಈ ಸಂಸ್ಕೃತಿಯಲ್ಲಿ ಪುರುಷ ಪ್ರಧಾನವಾದ ಸಮಾಜ ನಿರ್ಮಾಣಗೊಂಡಿತ್ತು. ಪುರುಷನೇ ಕುಟುಂಬದ ಕೇಂದ್ರ ಬಿಂದು ಆಗಿದ್ದನು.

ಭಾರತೀಯ ಸಂಸ್ಕೃತಿಯ ಹಿನ್ನೆಲೆಯನ್ನು ಅವಲೋಕಿಸಿದಾಗ ಈ ಸಂಸ್ಕೃತಿಯು ಆರ್ಯ-ದ್ರಾವಿಡ ಸಂಸ್ಕೃತಿಗಳು ಸಮ್ಮಿಲನವಾಗಿದೆ. ಈ ಸಂಸ್ಕೃತಿಯಲ್ಲಿ ಮಾತೃ ಪ್ರಧಾನವಾದ ದ್ರಾವಿಡ ಸಂಸ್ಕೃತಿ ಹಾಗೂ ಪಿತೃಪ್ರಧಾನವಾದ ಆರ್ಯ ಸಂಸ್ಕೃತಿಗಳ ಸಮ್ಮಿಳನವಾಗಿದೆ. ಹರಪ್ಪ ಮೊಹೆಂಜೋದಾರೊಗಳಲ್ಲಿ ದೊರೆತ ವಿಗ್ರಹಗಳನ್ನು ಗಮನಿಸಿದರೆ ಅವು ಜೇಡಿ ಮಣ್ಣಿನ ನಗ್ನ ‘ಸ್ತ್ರೀ’ ವಿಗ್ರಹಗಳು. ಶಿರೋವಸ್ತ್ರ ಕೇಶಾಲಂಕಾರ, ಸೊಂಟದ ಪಟ್ಟಿ ಹೀಗೆ ಅನೇಕ ವಸ್ತು ಒಡವೆಗ ಳನ್ನು ಗಮನಿಸಿದರೆ ಭಾರತೀಯ ಸಂಸ್ಕೃತಿಯಲ್ಲಿ ಮಾತೃದೇವತೆಯ ಉಪಾಸನೆಯು ಆದಿಕಾಲದಿಂದಲೂ ಪ್ರಚಾರದಲ್ಲಿತ್ತು ಎಂಬುದಕ್ಕೆ ಸಾಕ್ಷಿಯಾಗಿವೆ. ಇವುಗಳಿಗೆ ಆಧಾರವಾಗಿ ಸಿಂಧೂ ಕಣಿವೆಯಲ್ಲಿ ದೊರೆತ ಅವಶೇಷಗಳೇ ಆಧಾರವಾಗಿವೆ. ಮಾತೃದೇವತಾ ಪೂಜೆ, ಶೀವ-ಶಕ್ತಿಗಳ ಆರಾಧನೆಯು ಮುಂದೆ ದ್ರಾವಿಡ ಸಂಸ್ಕೃತಿಯಲ್ಲಿ ಭಾಗಶಃ ರೂಡಿಯಲ್ಲಿ ಬಂದಿರುತ್ತದೆ. ಅಲ್ಲದೆ ಮೆಸಪೊಟೋಮಿಯಾ, ಸಿರಿಯಾ, ಏಷ್ಯಾಮೈನರ, ಈಜಿಪ್ಟ್ ಮೊದಲಾದ ಕಡೆಯಲ್ಲಿಯೂ ಅನೇಕ ಸ್ತ್ರೀ ವಿಗ್ರಹಗಳು ದೊರಕಿದುದರ ಬಗೆಗೆ ಉಲ್ಲೇಖಗಳು ಇವೆ. ಈ ಅಂಶಗಳನ್ನು ಗಮನಿಸಿದರೆ ಪ್ರಾಚೀನ ನಾಗರಿಕತೆಯಲ್ಲಿಯೂ ಮಾತೃದೇವತೆ ಅಗ್ರಪೂಜಕಗಳಾಗಿದ್ದಳು ಎಂಬ ಅಂಶ ಗಮನಕ್ಕೆ ಬರುತ್ತದೆ. ಇದರಿಂದ ಇಡೀ ಭಾರತೀಯ ಸಂಸ್ಕೃತಿಯೇ ಮಾತೃ ಪ್ರಧಾನವಾದ ದ್ರಾವಿಡ ಸಂಸ್ಕೃತಿಯ ಮೂಲ ಲಕ್ಷಣವೆನಿಸಿತು. ಮಾತೃದೇವತೆಯ ಪೂಜೆ ಇದು ಆರ್ಯ ಸಂಸ್ಕೃತಿಗೆ ಹೊರತಾದುದೆಂದೂ ಅದು ದ್ರಾವಿಡರ ಕೊಡುಗೆಯೆಂದೂ ಒಂದು ಕೂಗು ಕೇಳಿಸುತ್ತದೆ. ನಮ್ಮ  ಜನಸ್ತೋಮದಲ್ಲಿ ಪ್ರಾಗಾರ್ಯ, ಆರ್ಯ, ದ್ರಾವಿಡ ಎಂಬ ವಿಭಜನೆಗೆ ಆಧಾರಗಳು ಕಡಿಮೆ ಪ್ರಮಾಣದಲ್ಲಿವೆ ಯಾಕೆಂದರೆ ಹಲವಾರು ಬುಡಕಟ್ಟುಗಳ ಸಮ್ಮಿಳನ ಆರಂಭಕಾಲದಿಂದಲೂ ನಡೆಯುತ್ತ ಬಂದಿದೆ. ಅದಕ್ಕಾಗಿ ಆರ್ಯರು ದ್ರಾವಿಡರು ಎಂದು ಪ್ರತ್ಯೇಕಿಸುವದು ಸಾಧ್ಯವಿಲ್ಲ.[3] ಆದರೆ ಸಿಂಧೂಸಂಸ್ಕೃತಿಯ ಧರ್ಮದಲ್ಲಿ ಒಂದು ಕಡೆ ಮಾತೃದೇವತೆಯ ಕಲ್ಪನೆ ವೃಕ್ಷಗಳು ಪ್ರಾಣಿಗಳು, ಇನ್ನೊಂದು ಕಡೆ ಪ್ರಕೃತಿಯ ಪೂಜೆ ಕಂಡುಬರುತ್ತದೆ. ಆ ಪ್ರಕೃತಿಯನ್ನು ಅಂತರ್ಗೊಳಿಸಿ ಕೊಂಡ ಶಿವ, ಅವನ-ಸಂಕೇತವಾದ ಲಿಂಗದ ಅನುಸಂತಾನವನ್ನು ಕಾಣುತ್ತದೆ. ಈ ಎಲ್ಲ ಅಂಶಗಳ ಸಹಾಯದಿಂದ ಮಾತೃದೇವತೆಯ ಕಲ್ಪನೆಯು ಪ್ರಾಚೀನ ಜನಾಂಗದಲ್ಲಿ ಪ್ರಮುಖವಾಗಿತ್ತು ಎಂಬ ಅಂಶ ಸ್ಪಷ್ಟವಾಗುತ್ತದೆ. ಮಾನವನ ಉತ್ಪತ್ತಿಯನ್ನು ಗಮನಿಸಿದರೆ ತಂದೆ ತಾಯಿಗಳ ಪಾತ್ರ ಹಿರಿದಾಗಿದೆ. ಈ ಹಿನ್ನೆಲೆಯಲ್ಲಿ ತಂದೆ ತಾಯಿಗಳೂ ದೇವರ ಸ್ವರೂಪ ಹೊಂದಿದವರು. ಆದರೆ ಈ ಹಿನ್ನೆಲೆಯಲ್ಲಿ ತಾಯಿಯ ಪಾತ್ರ ಮಹತ್ವದ್ದು ಎಂದು ಕಂಡುಬಂದಿತು. ತಾಯಿಯ ಉದರದಲ್ಲಿ ಹುದುಗಿಕೊಂಡಿರುವ ನಿಗೂಢವಾದ ಶಕ್ತಿ ಸ್ವಾರಸ್ಯವಾದ ಸ್ವಭಾವ ಅದ್ಭುತವೆನಿಸುವ ಪ್ರಸವ ಸಾಮರ್ಥ್ಯ ಮೋಹಕವಾದ ಸ್ವರೂಪ ಇವೆಲ್ಲವು ಈ ಹಂತದಲ್ಲಿ ಸೇರಿಕೊಂಡವು.[4]

ಈ ತೆರನಾಗಿ ಮಾತೃದೇವತೆಯ ಕಲ್ಪನೆ ಮಾನವ ಜನಾಂಗದಲ್ಲಿ ಮೂಡಲು ಯಾವ ಅಂಶ ಪ್ರಚೋದನೆ ನೀಡಿರಬೇಕು ಎಂಬ ಅಂಶವನ್ನು ಗಮನಿಸಿದಾಗ ಕಂಡುಬರುವ ಸಂಗತಿಯೆಂದರೆ ಪ್ರಕೃತಿಯ ಒಡಲಲ್ಲಿರುವ ನೀರಿನ ಪ್ರವಾಹ, ಗಾಳಿಯ ರಭಸ, ಮಿಂಚು, ಗುಡುಗು-ಸೂರ್ಯ, ಚಂದ್ರಾದಿಗಳ ಪ್ರಕಾಶ, ಬೆಂಕಿಯ ಪ್ರಕಾಶ ಇತ್ಯಾದಿ ಅಂಶಗಳು, ಇವು ಒಂದು ಕಡೆಗಾದರೆ ಕಾಡಿನಲ್ಲಿ ವಾಸಿಸುವ ಕ್ರೂರ ಮೃಗಗಳು ಗಗನದಲ್ಲಿ ಹಾರಾಡುವ ಪಕ್ಷಿಗಳ ಸಮೂಹ, ಜಲಚರಗಳು ಇತ್ಯಾದಿ ಅಂಶಗಳು. ಈ ಎಲ್ಲ ಅಂಶಗಳ ಪ್ರಭಾವದಿಂದ ಕಾಲಕ್ರಮೇಣ ಪ್ರಕೃತಿಯಲ್ಲಿಯ ಹುಟ್ಟು ಸಾವುಗಳಿಗೆ ಹೆಣ್ಣು ಕಾರಣ ಎಂಬ ಅಂಶ ಅವನಲ್ಲಿ ಪ್ರಮುಖವಾಗಿ ಕಂಡಾಗ ಮಾನವ ಆಕೆಯನ್ನು ಅತ್ಯಂತ ಗೌರವದಿಂದ ಕಂಡಿರಬೇಕು. ಸರ್ವಸಾಕಾರ ಮೂರ್ತಿಯಾದ ಸ್ತ್ರೀಯನ್ನು ಕಂಡಂತಹ ಮಾನವ ಆಕೆಯನ್ನು ಮಾತೃದೇವತೆಯ ಸಂಕೇತದಿಂದ ಕಂಡಂತೆ ಕಾಣುತ್ತದೆ.

ಈ ರೀತಿಯಾಗಿ ಮಾತೃದೇವತೆಯ ಇತಿಹಾಸ, ಚರಿತ್ರೆಗಳು ಆರಂಭಗೊಂಡು ಜಾನಪದರ ಕಟ್ಟಳೆಗಳ ಬುನಾದಿಯ ಮೇಲೆ ಬೀಡು ಬಿಟ್ಟಿವೆ. ಈ ಪುರಾತನವಾದ ಶಕ್ತಿಯು ಪ್ರಿಯವಾಗಿದ್ದು ಒಳ್ಳೆಯ ಜನರ ಸಮೂಹದಲ್ಲಿಯೂ ಪ್ರವೇಶಮಾಡಿ ತನ್ನ ಪ್ರಭಾವವನ್ನು ಸ್ಪಷ್ಟವಾಗಿ ಬೀರಿದೆ. ಆದರೆ ಜಾನಪದ ಪ್ರಿಯವಾಗಿದ್ದ ಶಕ್ತಿವಾದದಲ್ಲಿ, ಶಕ್ತಿ ಎಂಬ ಎಣಿಕೆಯಲ್ಲಿ ಶಾಕ್ತರ ನಂಬಿಕೆ” ಎಲ್ಲ ಹೆಂಗಸರೂ ದೇವತಾ ಸ್ವರೂಪರು” ಈ ನಂಬಿಕೆ ನೂರಾರು ಮಾತೃದೇವತೆಯರಿಗೆ ದಾರಿ ಮಾಡಿ ಕೊಟ್ಟಿತು. ಹೀಗೆ ಮಾತೃದೇವತೆಯರು ಅನೇಕರ ಆಸರೆಯಲ್ಲಿ ಬೆಳೆದು ಕೊಂಡು ಬಂದವರಾಗಿರುವುದರಿಂದ ಈಗ ನಾವು ಸಾವಿರಾರು ಮಾತೃದೇವತೆಗಳ ಪ್ರಭಾವಗಳ ಪ್ರತೀತಿ ಇರುವುದನ್ನು ಕಾಣುತ್ತೇವೆ. ಈ ಎಲ್ಲ ಮಾತೃದೇವತೆಗಳ ಕಥೆ ಮತ್ತು ಪ್ರಭಾವಳಿಗಳಲ್ಲಿ ಸಾಮಾನ್ಯವಾಗಿ ತುಂಬಾ ಸಾಮ್ಯ ಅಂಶಗಳಿರುತ್ತವೆ. ಈ ಸಾದೃಶ್ಯವನ್ನು ಅವಲಂಬಿಸಿ ಬರುಬರುತ್ತ ಒಬ್ಬಳೇ ಮಾತೃದೇವತೆ ಅನೇಕ ಸ್ವರೂಪಗಳಲ್ಲಿ ಮೈದೋರಿರುವಳೆಂಬ ಭಾವನೆ ಮೂಡಿಬಂದಿತು. “ದೇವನೊಬ್ಬ ನಾಮಹಲವು”-ಎಂಬ ಹೆಗ್ಗಳಿಕೆಯಂತೆ ಅನೇಕ ಬಗೆಯ ಹೆಸರುಗಳನ್ನು ಹೊಂದಿದಂತಹ ದೇವಿಯರು ಮೂಲದಲ್ಲಿ ಒಂದೇ ಹೆಸರಿನವರು. ಉದಾ-ಎಲ್ಲಮ್ಮನ ಅವತಾರ-ಎಲ್ಲರ ಅಮ್ಮ ಎಲ್ಲಮ್ಮ. ಹೀಗೆ ಒಂದೇ ಅವತಾರವನ್ನು ಧರಿಸಿದ್ದರೂ ಆಕೆಯನ್ನು ಅನೇಕರು ಬೇರೆ ಬೇರೆ ಹೆಸರುಗಳಲ್ಲಿ ಕರೆಯುವದುಂಟು. ಫಲಗೌರಿ, ರೇಣುಕೆ, ಮಾರಿಕಾ, ಭವಾನಿ ಇತ್ಯಾದಿ. ಈ ಎಲ್ಲ ಹೆಸರು ಜಾನಪದ ನೆಲೆಯಿಂದ ಮೂಡಿಬಂದಿವೆ. ಆದುದರಿಂದ ಭಾರತೀಯ ಸಂಸ್ಕೃತಿಯಲ್ಲಿ ಮಾತೃದೇವತೆ ಅತ್ಯಂತ ಮಹತ್ವವನ್ನು ಪಡೆದಿರುವಳು. ‘ಮನೆಯೇ ಮೊದಲು ಪಾಠಶಾಲೆ ಜನನಿತಾನೆ ಮೊದಲು ಗುರು’ ‘ಮಾತೃದೇವೋಭವ’ ಇಂಥ ಶ್ಲೋಕಗಳು ಕೂಡಾ ಮಾತೃದೇವತೆಯ ಕಲ್ಪನೆಯು ಭಾರತೀಯರ ಸ್ಮೃತಿ ಪಟಲದಲ್ಲಿ ಹೇಗೆ ಅಲಂಕೃತವಾಗಿತ್ತು ಎಂಬುದಕ್ಕೆ ಇಂದಿಗೂ ಈ ನುಡಿಗಳೇ ಸಾಕ್ಷಿಯಾಗಿ ನಿಂತಿವೆ. ಆದುದರಿಂದ ಸ್ತ್ರೀಯನ್ನು ಮಹಾಮಾತೆಯೆಂದೂ, ಸರ್ವಕಾಲಿಕ ಕನ್ಯೆಯೆಂದೂ, ದಿವ್ಯಸತಿ, ಮಹಾಸಂಹಾರಿಣಿ ಎಂದು ಕರೆಯುವುದುಂಟು. ಆದುದರಿಂದ ಭಾರತೀಯರು ಮಾತೃದೇವತೆಗೆ ಅತ್ಯಂತ ಗೌರವದ ಸ್ಥಾನ ನೀಡಿ ಪೂಜಿಸುತ್ತ ಬಂದಿರುವದುಂಟು.

ಈ ರೀತಿಯಾಗಿ ಮಾನವ ಜನಾಂಗದಲ್ಲಿ ತಾಯಿಯನ್ನು ಮಾತೃದೇವತೆಯ ಸ್ಥಾನಕ್ಕೆರಿಸಿ ಆಕೆಯನ್ನು ದೇವತೆ ಅಷ್ಟೇಏಕೆ, ಸಾಕ್ಷಾತ್‌ದೇವತೆ ಎಂಬ ಪರಿಕಲ್ಪನೆ ಮೂಡಿ ಬಂದಿತು. ಇಂತಹ ನಂಬಿಕೆಯಿಂದ ಗ್ರಾಮದೇವತೆಗಳ ಕಲ್ಪನೆ ಮೂಡಲಿಕ್ಕೆ ಮಾರ್ಗದರ್ಶಿಯಾಯಿತು.[1] ಭಾರತೀಯ ದೇವಾಲಯಗಳ ಜಾನಪದ ಮೂಲ-ಎಸ್‌.ಕೆ. ರಾಮಚಂದ್ರರಾವ್‌ ಪುಟ. ೭೯

[2] ಜಾನಪದ ಸಾಹಿತ್ಯದರ್ಶನ ಭಾಗ-೮, ಲೇಖನ: ಡಾ. ವಿಲ್ಯಂ ಮಾಡ್ತ ಪುಟ. ೮೧

[3] ಭಾರತೀಯ ದೇವಾಲಯಗಳ ಜಾನಪದ ಮೂಲ-ಎಸ್‌.ಕೆ. ರಾಮಚಂದ್ರರಾವ್‌ ಪು. ೭೪

[4] ಮೂರ್ತಿಶಿಲ್ಪ-ಹಿನ್ನೆಲೆ-ಎಸ್‌.ಕೆ.ರಾಮಚಂದ್ರರಾವ್‌ ಪು. ೧೬೧