ಗೌರವರ್ಣ, ವಿಶಾಲಕಾಯ, ಭವ್ಯ ಮುಖಮಂಡಲ, ಅಗಲವಾದ ಹಣೆ, ಕಾಂತಿಯಿಂದ ಕೂಡಿದ ಕಣ್ಣು, ಬೆಳ್ಳಿಯಂತೆ ಹೊಳೆಯುವ ಕೇಶರಾಶಿ, ಶುಭ್ರ, ಮೀಸೆ, ನೀಳವಾದ ಬಿಳಿಯ ಗಡ್ಡ, ಹಾಲಿನಂತೆ ಬೆಳ್ಳಗಿರುವ ಪಂಚೆ ಉಟ್ಟ, ಕಂದು ಬಣ್ಣದ ಜುಬ್ಬ ತೊಟ್ಟ, ಶಾಂತ ಸೌಮ್ಯ ವ್ಯಕ್ತಿಯನ್ನು “ಸೇವಾಶ್ರಮ”ದಲ್ಲಿ ಕಂಡಾಗ ಪ್ರಾಚೀನ ಆರ್ಯ ಋಷಿಗಳ ನೆನಪು ಬರುತ್ತಿತ್ತು.

ಅವರ ಹೆಸರೇ ಭಗವಾನ್ ದಾಸ್.

ಕಾಶಿ ಒಂದು ಜಗತ್ಪ್ರಸಿದ್ಧ ನಗರ. ಅದು ವಾರಣಾ ಮತ್ತು ಅಸಿ ನದಿಗಳ ನಡುವೆ ನೆಲಸಿದೆ; ಆದ್ದರಿಂದ ಅದಕ್ಕೆ ವಾರಣಾಸಿಯೆಂದೂ ಹೆಸರು. ಶಿವ, ವಿಷ್ಣು, ಬ್ರಹ್ಮ ಮತ್ತು ದುರ್ಗಾ ಮುಂತಾದ ದೇವತೆಗಳ ಎಲ್ಲ ಧರ್ಮದವರಿಗೆ, ಮತದವರಿಗೆ ಪ್ರಿಯವಾದ ನಗರ.

ಕಾಶಿಯು ವೇದಕಾಲದಿಂದ ಇಂದಿನವರೆಗೆ ವಿದ್ಯಾಕೇಂದ್ರ. ಇದರಲ್ಲಿ ಮಹಾಮಹಾ ಪಂಡಿತರು, ವಿದ್ಯಾವಿನಯ ಸಂಪನ್ನರು, ಆಚಾರ್ಯರು ಹುಟ್ಟಿದರು, ತಮ್ಮ ತಮ್ಮ ತತ್ವಗಳನ್ನು ಕುರಿತು ವಾದಿಸಿದರು, ಮನ್ನಣೆ ಪಡೆದರು. ಸತ್ಯಹರಿಶ್ಚಂದ್ರನು ತನ್ನ ಸತ್ಯ ಪರೀಕ್ಷೆಯಲ್ಲಿ ಉತ್ತೀರ್ಣನಾದದ್ದು ಕಾಶಿಯಲ್ಲಿ; ಬುದ್ಧನು ತನ್ನ ಧರ್ಮೋಪದೇಶ ಮಾಡಿದ ಸ್ಥಾನ ಸಾರನಾಥ ಇರುವುದು ಕಾಶಿಯ ಬಳಿಯಲ್ಲಿಯೇ; ಶಂಕರಾಚಾರ್ಯರು ತಮ್ಮ ಅದ್ವೈತವಾದದ ವಿಜಯ ಧ್ವಜವನ್ನು ಹಾರಿಸಿದುದು ಕಾಶಿಯಲ್ಲಿ; ಕಬೀರದಾಸರು ತಮ್ಮ ವಾಣಿಯ ಮೂಲಕ ಪರಧರ್ಮ ಸಹಿಷ್ಣುತೆಯ ಪಾಠವನ್ನು ಕಲಿಸಿ, ಜನತೆಗೆ ಪ್ರೇಮದಿಂದ ಬಾಳಲು ಬೋಧಿಸಿ, ಜ್ಞಾನ ಮಾರ್ಗವನ್ನು ಉಪದೇಶ ಮಾಡಿದ್ದು ಕಾಶಿಯಲ್ಲಿ. ಗೋಸ್ವಾಮಿ ತುಳಸೀದಾಸರು ತಮ್ಮ ಅಮರ ಕೃತಿಯಾದ “ರಾಮಚರಿತ ಮಾನಸ”ಕ್ಕೆ ವಿಶ್ವನಾಥನಿಂದ ಮನ್ನಣೆ ಪಡೆದದ್ದು ಕಾಶಿಯಲ್ಲಿ. ನಮ್ಮ ಚರಿತ್ರನಾಯಕರಾದ ಭಗವಾನದಾಸರು ಹುಟ್ಟಿ, ಬೆಳೆದು, ಆಳವಾಗಿ ಎಲ್ಲ ಧರ್ಮಗಳ ಅಧ್ಯಯನ ಮಾಡಿ, ಅವುಗಳ ಮೂಲತತ್ವಗಳು ಒಂದೇ ಎಂದು ಸಾರಿ, ಸರ್ವಧರ್ಮ ಸಮನ್ವಯಕಾರರೆಂದು ಪ್ರಸಿದ್ಧಿಯನ್ನು ಪಡೆದು, ಕರ್ಮವೇ ವರ್ಣದ ತಳಹದಿಹಾಗಿರಬೇಕೆಂದು ಪ್ರತಿಪಾದಿಸಿ, ವಿಶ್ವದ ಶ್ರೇಷ್ಠ ದಾರ್ಶನಿಕರು, ದೇಶಭಕ್ತರು, ಸಮಾಜ ಸುಧಾರಕರು, ಅಜಾತ ಶತ್ರುವೆಂದು “ಭಾರತ ರತ್ನ” ರೆಂದು ಹೆಸರು ಗಳಿಸಿ ಕೀರ್ತಿಶೇಷರಾದದ್ದು ಕಾಶಿಯಲ್ಲಿಯೇ. ಇವೆಲ್ಲವುಗಳಿಂದಾಗಿಯೇ ಕಾಶಿಗೆ ಮಹತ್ವ.

ಬಾಲ್ಯ

೧೮೬೯ನೆಯ ಇಸವಿ. ಜನವರಿ ೧೨ನೆಯ ತಾರೀಖು, ಸೋಮವಾರ ಅರುಣೋದಯದ ಕಾಲ ಆರು ಗಂಟೆ ಐದು ನಿಮಿಷಕ್ಕೆ ಭಗವಾನದಾಸರ ಜನನ. ಅವರು ತಮ್ಮ ತಂದೆಗೆ ಎರಡನೆಯ ಮಗ. ಅವರ ತಂದೆ ಮಾಧವದಾಸ. ತಾಯಿ ಕಿಶೋರಿದೇವಿ. ತಂದೆ ತಾಯಿ ಇಬ್ಬರೂ ಸದಾಚಾರ ಸಂಪನ್ನರು, ಭಾರತೀಯ ಸಂಸ್ಕೃತಿಯಲ್ಲಿ ಅಚಲ ಶ್ರದ್ಧೆಯುಳ್ಳವರು, ಅತಿಥಿ ಸತ್ಕಾರದಲ್ಲಿ ಸದಾ ಮುಂದಿರುವವರು, ತಂದೆ ತಾಯಿಯ ಎಲ್ಲ ಸದ್ಗುಣಗಳು ಮಗನಿಗೆ ಬಂದವು.

ಬಾಲ್ಯದಲ್ಲಿಯೇ ಭಗವಾನ್‌ದಾಸರು ಎಲ್ಲರ ಗಮನ ಸೆಳೆಯುವ ವಿಶಿಷ್ಟ ಬಾಲಕನಾಗಿದ್ದರು. ಅವರಿಗೆ ಮೂರು ವರುಷವಾಗಿದ್ದಾಗ ಅವರ ತಂದೆ ಅವರಿಗೆ ಅಕ್ಷರಾಭ್ಯಾಸ ಮಾಡಿಸಿದರು. ಬಾಲಕ ಭಗವಾನ್ ದಾಸರ ಬುದ್ಧಿ ಬಲು ಚುರುಕು; ನೆನಪಿನ ಶಕ್ತಿ ಅದ್ಭುತ, ವಾಣಿ ಸ್ಪಷ್ಟ. ಸ್ವಲ್ಪ ಸಮಯದಲ್ಲಿ ಮಾತೃ ಭಾಷೆಯಾದ ಹಿಂದಿಯನ್ನು ಓದಲು ಮತ್ತು ಬರೆಯಲು ಕಲಿತರು.

ಭಗವಾನ್‌ದಾಸರ ಅಜ್ಜಿ ಪಾರ್ವತಿದೇವಿ; ದಾರ್ಮಿಕ ವೃತ್ತಿಯವರು. ದಿನಾಲು ಭಗವದ್ಗೀತೆಯನ್ನು ಕೇಳುವ ಹಂಬಲ ಅವರಿಗೆ. ಭಗವಾನ್‌ದಾಸರು ದಿನಾಲು ಬೆಳಿಗ್ಗೆ ಗೀತೆಯ ಒಂದು ಅಧ್ಯಾಯವನ್ನು ಓದಿ ಹೇಳುತ್ತಿದ್ದರು ಮತ್ತು ಅದರ ಅರ್ಥವನ್ನು ಹಿಂದಿಯಲ್ಲಿ ಹೇಳುತ್ತಿದ್ದರು. ಇಂಥ ಮೇಧಾವಿ ಮೊಮ್ಮಗನ ಬಗ್ಗೆ ಅವರಿಗೆ ಎಲ್ಲೆಯಿಲ್ಲದ ಹೆಮ್ಮೆ.

ಕಾಶಿಯಲ್ಲಿ ಕ್ವೀನ್ಸ್ ಕಾಲೇಜು ಒಂದು ಪ್ರಸಿದ್ಧ ಹಳೆಯ ಶಿಕ್ಷಣ ಸಂಸ್ಥೆ. ಭಗವಾನ್‌ದಾಸರು ಅದರಲ್ಲಿ ಕಲಿಯುತ್ತಿದ್ದರು. ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿಯೇ ಎನ್‌ಟ್ರೆನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅನಂತರ ಅದೇ ಕಾಲೇಜನ್ನು ಸೇರಿದರು. ಎಲ್ಲರ ಗಮನವೂ ಅವರ ಕಡೆಗೇ. ಇಷ್ಟು ಎಳೆ ವಯಸ್ಸಿನ ಬಾಲಕನನ್ನು ಕಾಲೇಜಿನ ತರಗತಿಯಲ್ಲಿ ಕಂಡು ಸರ್ವರಿಗೂ ಅಚ್ಚರಿ. ಅವರು ತಮ್ಮ ಪ್ರತಿಭೆ, ಅದ್ಭುತ ನೆನಪಿನ ಶಕ್ತಿ, ನಯ-ವಿನಯದ ನಡೆ-ನುಡಿಯಿಂದ ಪ್ರಾಧ್ಯಾಪಕ ವೃಂದಕ್ಕೆ ಮತ್ತು ಸಹಪಾಠಿಗಳಿಗೆ ಅಚ್ಚುಮೆಚ್ಚಿನವರಾದರು. “ವಿದ್ಯಾ ವಿನಯೇನ ಶೋಭತೆ” ಎಂಬ ನಾಣ್ಣುಡಿಗೆ ಪ್ರತೀಕವಾದರು. ಇಂಗ್ಲೀಷು, ಮನೋವಿಜ್ಞಾನ, ದರ್ಶನ ಶಾಸ್ತ್ರ, ಸಂಸ್ಕೃತ ವಿಷಯ ತೆಗೆದುಕೊಂಡು ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾದರು. ಜ್ಞಾನಾರ್ಜನೆಯ ಹಸಿವು ಹಿಂಗಲಿಲ್ಲ. ಕಲ್ಕತ್ತಾ ವಿಶ್ವವಿದ್ಯಾನಿಲಯದ ಎಂ.ಎ. ಪರೀಕ್ಷೆಗೆ ಕಟ್ಟಿದರು. ಆಗ ಬಿ.ಎ.ದ ಅನಂತರ ಒಂದೇ ವರುಷದ ಪಾಠಕ್ರಮ ಎಂ.ಎ. ಪರೀಕ್ಷೆಗೆ ಇತ್ತು. ತಮ್ಮ ಹದಿನೇಳನೆಯ ವಯಸ್ಸಿನಲ್ಲಿ ದರ್ಶನಶಾಸ್ತ್ರ ತೆಗೆದುಕೊಂಡು ಆನರ್ಸದೊಡನೆ ಎಂ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕಾಶಿಯ ಜನತೆ, ಕಲ್ಕತ್ತಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕವೃಂದ ಅವರನ್ನು ಕೊಂಡಾಡಿ ಸತ್ಕರಿಸಿತು. ಸ್ಕೂಲು ಕಾಲೇಜು ಶಿಕ್ಷಣದ ಜೊತೆಗೆ ಪ್ರತ್ಯೇಕವಾಗಿ ಸಂಸ್ಕೃತ, ಫಾರಸಿ, ಅರಬೀ, ಉರ್ದು ಮುಂತಾದ ಭಾಷೆಗಳ ಆಳವಾದ ಅಭ್ಯಾಸ ಮಾಡಿದರು. ಯಾವಾಗಲೂ ಚಿಂತನ-ಮನನದಲ್ಲಿ ತೊಡಗಿರುತ್ತಿದ್ದರು. ಆದರೆ ಭಗವಾನ್‌ದಾಸರು ಪುಸ್ತಕದ ಹುಳುವಾಗಿರಲಿಲ್ಲ. ದಿನಾಲು ಬೆಳಿಗ್ಗೆ ವ್ಯಾಯಾಮ ಮಾಡುತ್ತಿದ್ದರು. ಶುದ್ಧ ಸಾತ್ವಿಕ ಆಹಾರ ಸೇವಿಸುತ್ತಿದ್ದರು. ಶಾರೀರಿಕ ಮತ್ತು ಮಾನಸಿಕ ವ್ಯಾಯಾಮ ಅವರ ಜೀವನದ ಉಸಿರಾಗಿದ್ದವು. ಅವರಲ್ಲಿ ಆಲಸ್ಯವೆಂಬುದೇ ಇರಲಿಲ್ಲ. ಆಲಸ್ಯವು ಶರೀರದಲ್ಲಿರುವ ಮಹಾಶತ್ರು ಎಂದು ಅವರು ಬಗೆಯುತ್ತಿದ್ದರು.

ವಿವಾಹ

ಭಗವಾನ್ ದಾಸರ ಮೊದಲ ಹೆಂಡತಿ ಮದುವೆಯಾದ ಮೂರೇ ತಿಂಗಳಲ್ಲಿ ಕಾಲವಶರಾದರು. ಆನಂತರ ಅವರು ಕಾಶಿಯ ವಿಶ್ವೇಶ್ವರ ಪ್ರಸಾದರ ಸುಪುತ್ರಿ ಚಮೇಲಿದೇವಿಯನ್ನು ಮದುವೆಯಾದರು. ಕಾಲಕ್ರಮದಲ್ಲಿ ಅವರಿಗೆ ಇಬ್ಬರು ಗಂಡುಮಕ್ಕಳಾದರು. ಶ್ರೀಪ್ರಕಾಶ, ಚಂದ್ರಭಾಲ; ಇಬ್ಬರು ಹೆಣ್ಣು ಮಕ್ಕಳಾದರು – ಶಾಂತಾದೇವಿ, ಸುಶೀಲಾದೇವಿ. ಜ್ಯೇಷ್ಠಪುತ್ರರಾದ ಶ್ರೀ ಪ್ರಕಾಶರು ಸಹ ಒಳ್ಳೆಯ ಮೇಧಾವಿ, ಭಾಷಣಕಾರರು, ಲೇಖಕರು, ಪ್ರಾಧ್ಯಾಪಕರು. ತಮ್ಮ ಶಿಷ್ಯರನ್ನು ಅಪಾರ ಪ್ರೀತಿಯಿಂದ ಕಾಣುತ್ತಿದ್ದರು. ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರ‍್ ಪದವೀಧರರಾಗಿ ಮರಳಿ ಬಂದರು. ಶಿಕ್ಷಣ, ಪತ್ರಿಕೋಧ್ಯಮ ಮತ್ತು ರಾಜಕಾರಣದ ಕ್ಷೇತ್ರಗಳಲ್ಲಿ ಭಾಗವಹಿಸಿದರು. ಭಾರತವು ಸ್ವತಂತ್ರವಾದ ಬಳಿಕ ಪಾಕಿಸ್ತಾನದಲ್ಲಿ ಹೈಕಮೀಷನರರಾಗಿ, ಅನಂತರ ಅಸ್ಸಾಮ್, ಮದರಾಸು ಮತ್ತು ಮುಂಬಯಿಯ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ದ್ವಿತೀಯ ಪುತ್ರ ಚಂದ್ರಭಾಲ ಅವರೂ ವ್ಯವಸಾಯ ಮಾಡುತ್ತ ರಾಜಕಾರಣದಲ್ಲಿ ಆಸಕ್ತಿ ವಹಿಸಿದ್ದರು. ಅವರು ಉತ್ತರ ಪ್ರದೇಶದ ವಿಧಾನಸಭೆಯ ಅಧ್ಯಕ್ಷರು ಕೂಡ ಆಗಿದ್ದರು.

ಭಗವಾನ್‌ದಾಸರ ಗಂಭೀರ ಅಧ್ಯಯನದ ಪ್ರಭಾವ ಮತ್ತು ಕಾರ್ಯದಕ್ಷತೆಯ ಪ್ರಭಾವ ಕೂಡ ಪರಿವಾರದವರೆಲ್ಲರ ಮೇಲೆ ಬಿದ್ದಿತ್ತು. ಮಕ್ಕಳು, ಮೊಮ್ಮಕ್ಕಳು, ಕುಟುಂಬದವರೆಲ್ಲರೂ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಮನೆಯಲ್ಲಿ ನಿರ್ಭಯ ವಾತಾವರಣವಿತ್ತು. ಆದುದರಿಂದ ಪ್ರತಿಯೊಬ್ಬರೂ ಅವರ ಬಳಿಗೆ ಹೊಗಿ ತಮ್ಮ ಸಂಶಯಗಳನ್ನು ನಿವಾರಿಸಿಕೊಳ್ಳುತ್ತಿದ್ದರು. ಅವರ ಆದೇಶದ ಮೇರೆಗೆ ನಡೆಯುತ್ತಿದ್ದರು. ಅವರು ಶ್ರೀಮಂತರಾಗಿದ್ದರೂ ಅವರ ಜೀವನವು ಆಡಂಬರವಿಲ್ಲದ್ದೂ ಅತ್ಯಂತ ಸರಳ-ಸಾದಾತನದಿಂದ ಕೂಡಿದ್ದೂ ಆಗಿತ್ತು. ಅವರು ಆಳು ಕಾಳುಗಳನ್ನು ತಮ್ಮ ಮಕ್ಕಳಂತೆ ಕಾಣುತ್ತಿದ್ದರು.

ಭಗವಾನ್‌ದಾಸರು ತಮ್ಮ ಮನೆಗೆ “ಸೇವಾಶ್ರಮ” ಎಂದು ಹೆಸರಿಸಿದ್ದರು. ಅದು ಪೂರ್ವ-ಪಶ್ಚಿಮ ಸಂಸ್ಕೃತಿಗಳ ಸಂಗಮದ ಮನೆ. ಶ್ರೀಪ್ರಕಾಶರು ಬ್ಯಾರಿಸ್ಟರ್ ಆಗಿ ಬಂದಿದ್ದರೂ ಬೆಳಿಗ್ಗೆ ಎದ್ದ ಕೂಡಲೆ ತಂದೆ-ತಾಯಿಯ ಪಾದಮುಟ್ಟಿ ನಮಸ್ಕಾರ ಮಾಡುತ್ತಿದ್ದರು. ಮಕ್ಕಳು ಬೆಳಿಗ್ಗೆ ಎದ್ದ ಕೂಡಲೆ ತಂದೆ ತಾಯಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿದ್ದರು. ಪರಿವಾರದಲ್ಲಿ ಅಚ್ಚುಕಟ್ಟುತನ ಹೆಚ್ಚು. ಎಲ್ಲ ಸಾಮಾನುಗಳೂ ಅವುಗಳಿಗೆ ಯೋಗ್ಯವಾದ ಸ್ಥಳದಲ್ಲಿ ಇರಬೇಕು. ಯಾವುದೂ ಅಸ್ತವ್ಯಸ್ತವಾಗಿರಬಾರದು ಎಂಬುದರ ಕಡೆಗೆ ಗಮನವೀಯುತ್ತಿದ್ದರು. ತಮ್ಮ ಜುಬ್ಬದ ಇಸ್ತ್ರಿ ಮುರಿಯಬಾರದೆಂಯುದರ ಕಡೆಗೂ ಅವರು ಲಕ್ಷ್ಯಗೊಡುತ್ತಿದ್ದರು. ಕರವಸ್ತ್ರವನ್ನು ಸಹ ಸರಿಯಾಗಿ ಮಡಿಸಿ ಜೇಬಿನಲ್ಲಿ ಇರಿಸಿಕೊಳ್ಳುತ್ತಿದ್ದರು. ಅವರ ಅಧ್ಯಯನ ಓರಣವಾಗಿರುತ್ತಿತ್ತು. ಅದರಂತೆಯೇ ಅವರ ಸ್ವಂತದ ಸಮೃದ್ಧ ಪುಸ್ತಕಾಲಯವೂ ಸಹ.

ಭಗವಾನ್‌ದಾಸರು ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವಲ್ಲಿ ಆಸಕ್ತಿ ವಹಿಸುತ್ತಿದ್ದರು ಹೆಣ್ಣು ಮಕ್ಕಳು ಆತ್ಮರಕ್ಷಣೆಗಾಗಿ ಕತ್ತಿವರಸೆ, ಲಾಠಿವರಸೆ ಕಲಿಯಬೇಕೆಂದು ಅಪೇಕ್ಷಿಸುತ್ತಿದ್ದರು. ಅವರು ತಮ್ಮ ಇಬ್ಬರು ಹೆಣ್ಣು ಮೊಮ್ಮಕ್ಕಳಿಗೆ ಕತ್ತಿ ವರಸೆ, ಲಾಠಿ ವರಸೆ ಕಲಿಸುವ ಏರ್ಪಾಡು ಮಾಡಿದ್ದರು.

ಸರಕಾರಿ ನೌಕರರಾಗಿ

ಭಗವಾನ್ ದಾಸರಿಗೆ ಸರಕಾರಿ ನೌಕರಿ ಮಾಡುವುದು ಇಷ್ಟವಿರಲಿಲ್ಲ. ಆದರೂ ಅವರ ತಂದೆಯ ಅಪೇಕ್ಷೆಯಂತೆ ಸರಕಾರಿ ಕೆಲಸ ಒಪ್ಪಿಕೊಂಡರು. ೧೮೯೦ ರಿಂದ ೧೮೯೭ರವರೆಗೆ ಉತ್ತರ ಪ್ರದೇಶದ ಬೇರೆ ಬೇರೆ ಜಿಲ್ಲೆಗಳಲ್ಲಿ ತಹಸೀಲದಾರರಾಗಿ, ಡೆಪ್ಯುಟಿ ಕಲೆಕ್ಟರರಾಗಿ, ಮ್ಯಾಜಿಸ್ಟ್ರೇಟರಾಗಿ ನೌಕರಿ ಮಾಡಿದರು. ದಕ್ಷ, ನ್ಯಾಯ – ನಿಷ್ಠುರ, ದಯಾಳು ಅಧಿಕಾರಿಯೆಂದು ಪ್ರಸಿದ್ಧಿ ಪಡೆದರು. ತಂದೆ  ಮಾಧವದಾಸರು ೧೮೯೭ ರಲ್ಲಿ ತೀರಿಕೊಂಡ ಬಳಿಕ ಸ್ವಲ್ಪ ಸಮಯದವರೆಗೆ ನೌಕರಿ ಮಾಡಿದರು. ಅನಂತರ ರಾಜೀನಾಮೆ ಕೊಟ್ಟು ಮರಳಿ ಸೇವಾಶ್ರಮಕ್ಕೆ ಬಂದರು; ಸ್ವತಂತ್ರ ಅಧ್ಯಯನ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ನಿರತರಾದರು.

ಸಹಾಯ ಹಸ್ತ

ಮದರಾಸಿನಲ್ಲಿ ಒಂದು ಉದಾರ ಧಾರ್ಮಿಕ ಸಾಮಾಜಿಕ ಸಂಸ್ಥೆ ಇದೆ. ಅದಕ್ಕೆ ಥಿಯೊಸಾಫಿಕಲ್ ಸೊಸೈಟಿ ಎಂದು ಹೆಸರು. ಎಲ್ಲ ಧರ್ಮಗಳು ಒಬ್ಬನೇ ದೇವನ ಉಪಾಸನೆ ಕಡೆಗೆ ಒಯ್ಯುವ ದಾರಿಗಳು ಮತ್ತು ಎಲ್ಲ ಧರ್ಮಗಳ ಮೂಲತತ್ವಗಳು ಒಂದೇ ಎಂಬುದು ಆ ಸಂಸ್ಥೆಯ ನಮಬಿಕೆ. ಈ ಸಂಸ್ಥೆಯ ಪ್ರಭಾವ ಭಗವಾನ್ ದಾಸರ ಮೇಲೆ ಬಹಳವಾಗಿತ್ತು. ಈ ಸಂಸ್ಥೆಯ ಕಾರ್ಯವನ್ನು ಮುಂದುವರೆಸಲು ಇಂಗ್ಲೆಂಡಿನಿಂದ ಒಬ್ಬ ಧೀಮಂತ ಶ್ರೀಮಂತ ಮಹಿಳೆ ಬಂದಿದ್ದರು. ಅವರಿಗೆ ಭಾರತದ ಬಗ್ಗೆ ಕಳಕಳಿ ಇದ್ದಿತು. ಅವರೇ ಅನಿಬೆಸೆಂಟ್. ಭಗವಾನ್‌ದಾಸರು ಅನಿಬೆಸೆಂಟರ ಆಪ್ತ ಕಾರ್ಯದರ್ಶಿಯಾದರು.

ಕಾಶಿಯಲ್ಲಿ ಅನಿಬೆಸೆಂಟರು ಸೆಂಟ್ರಲ್ ಹಿಂದೂ ಕಾಲೇಜನ್ನು ಸ್ಥಾಪಿಸಬೇಕೆಂದು ಸಂಕಲ್ಪ ಮಾಡಿದರು ಅವರಿಗೆ ಭಗವಾನ್‌ದಾಸರು ಸಕ್ರಿಯವಾಗಿ ನೆರವಾದರು. ಸೆಂಟ್ರಲ್ ಹಿಂದೂ ಕಾಲೇಜು ಸ್ಥಾಪಿತವಾಯಿತು. (೧೮೯೮). ಸುಮಾರು ಹದಿನೈದು ವರ್ಷ ಭಗವಾನ್‌ದಾಸರು ಈ ಕಾಲೇಜಿನ ಸಂಸ್ಥಾಪಕ ಸದಸ್ಯರಾಗಿದ್ದು, ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.

ಪಂಡಿತ ಮದನಮೋಹನ ಮಾಲವೀಯರು ಭಾರತದ ಸುಪುತ್ರರಲ್ಲಿ ಒಬ್ಬರು. ಅವರು ಪ್ರಾಚೀನ ಭಾರತೀಯ ಸಂಸ್ಕೃತಿಯ ಅಭಿಮಾನಿಗಳು. ಕಾಶಿ ಹಿಂದು ವಿಶ್ವವಿದ್ಯಾನಿಲಯದ ಸ್ಥಾಪನೆಗಾಗಿ ಮಾಲವೀಯರು ಭಗವಾನ್ ದಾಸ್ ಅವರ ಸಹಾಯ ಕೋರಿದರು. ಭಗವಾನ್‌ದಾಸರು ಮಾಲವೀಯರಿಗೆ ತಮ್ಮ ಸಂಪೂರ್ಣ ಸಹಕಾರ ನೀಡಿದರು. ಅದರ ಸಂಸ್ಥಾಪಕ ಸದಸ್ಯರಾಗಿ ಅನೇಕ ವರ್ಷಗಳವರೆಗೆ ವಿಶ್ವವಿದ್ಯಾನಿಲಯದ ಆಡಳಿತ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದರು.

ರಾಜಕಾರಣ

ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾಕ್ಕೆ ವಕೀಲರಾಗಿ ಹೋಗಿದ್ದರು. ಅಲ್ಲಿ ನೆಲೆಸಿದ್ದ ಭಾರತೀಯರ ಗೋಳನ್ನು ಕಂಡು ಅವರ ಹೃದಯ ಕರಗಿತು. ಭಾರತೀಯರ ಹಕ್ಕುಗಳಿಗಾಗಿ ಅಲ್ಲಿಯ ಸರಕಾರದೊಡನೆ ಸತ್ಯಾಗ್ರಹದ ಹೋರಾಟ ನಡೆಸಿದರು. ಅದರಲ್ಲಿ ಅವರು ಯಶಸ್ವಿಯಾದರು. ಅನಂತರ ಅವರು ಭಾರತಕ್ಕೆ ಬಂದರು. ಅವರ ವಿಚಾರ ರೀತಿ ಮತ್ತು ಹೋರಾಟದ ರೀತಿಗಳಿಂದ ಅನೇಕರು ಆಕರ್ಷಿತರಾದರು. ಅವರಲ್ಲಿ ಭಗವಾನದಾಸರು ಒಬ್ಬರು.

ಶಿವಪ್ರಸಾದ ಗುಪ್ತರು ಕಾಶಿಯ ಒಬ್ಬ ಶ್ರೇಷ್ಠ ದೇಶಭಕ್ತರು, ಅವರೊಡನೆ ಭಗವಾನ್‌ದಾಸರು ಸಹ ಲಖನೌ ಕಾಂಗ್ರೆಸ್ಸಿಗೆ ಹೋದರು. ಗಾಂಧೀಜಿಯವರೂ ಆಗಮಿಸಿದ್ದರು. ಗಾಂಧೀಜಿಯವರೊಡನೆ ಮಾತನಾಡುವ ತವಕ ಭಗವಾನ್‌ದಾಸರಿಗೆ. ಒಂದು ದಿನ ಬೆಳಿಗ್ಗೆ ಅವರು ಗಾಂಧೀಜಿಯ ಕುಟೀರಕ್ಕೆ ಹೋದರು. ಒಳಗೆ ಇಣಿಕಿ ನೋಡಿದರು. ಗಾಂಧೀಜಿ ಸರ್ಕಾರಿ ಗೆಜೆಟ್ ಓದುತ್ತ ಕುಳಿತಿದ್ದರು. ಭಗವಾನ್‌ದಾಸರು “ಒಳಗೆ ಬರಲೇ?” ಎಂದು ಕೇಳಿದರು. ಗಾಂಧೀಜಿ ತಲೆಯಲ್ಲಾಡಿಸಿ ಸಮ್ಮತಿ ಸೂಚಿಸಿದರು. ಭಗವಾನ್‌ದಾಸರು ಒಳಗೆ ಹೋಗಿ ಕೈಜೋಡಿಸಿ ನಮಸ್ಕರಿಸಿದರು. ಗಾಂಧೀಜಿಯವರೂ ಪ್ರತಿಯಾಗಿ ನಮಸ್ಕರಿಸಿದರು. ಭಗವಾನ್‌ದಾಸರು ಕೇಳಿದರು “ಮಹಾತ್ಮಾ ಜೀ, ಕೆಲವು ದಿನಗಳ ಹಿಂದೆ ತಾವು ಒಂದು ಸುತ್ತೋಲೆ ಕಳಿಸಿದ್ದೀರಿ. ಅದರಲ್ಲಿ ಬ್ರಿಟಿಷ್ ಸರಕಾರದೊಂದಿಗೆ ಅಸಹಕಾರ ಮಾಡಬೇಕೆಂದೂ ಖಾದಿಯನ್ನು ಧರಿಸಬೇಕೆಂದೂ ಸಲಹೆ ಮಾಡಿದ್ದಿರಿ, ಸೂಚನೆ ಕೊಟ್ಟಿದ್ದಿರಿ. ತಮ್ಮ ಈ ಸಲಹೆ – ಸೂಚನೆ ಅಪತ್ಕಾಲಕ್ಕೋ, ಸಂಪತ್ಕಾಲಕ್ಕೋ?” ಗಾಂಧೀಜಿ ಉತ್ತರಿಸಿದರು. “ಆಪತ್ಕಾಲಕ್ಕೆ!” ಆಗ ಭಗವಾನ್‌ದಾಸರು “ಸರಿ, ನನಗಿನ್ನು ಹೆಚ್ಚಿಗೆ ಕೇಳುವುದೇನೂ ಇಲ್ಲ” ಎಂದು ತಮ್ಮ ಬಿಡಾರಕ್ಕೆ ಮರಳಿದರು.

ಅದೇ ವರುಷ ಲಕ್ನೋದಲ್ಲಿ ಥಿಯಾಸಾಫಿಕಲ್ ಸೊಸೈಟಿಯ ವಾರ್ಷಿಕ ಅಧಿವೇಶನವೂ ನೆರೆದಿತ್ತು. ಅದರ ಸಂಚಾಲಕರಾಗಿದ್ದ ಅನಿಬೆಸೆಂಟರೂ ಬಂದಿದ್ದರು ಬ್ರಿಟಿಷ್ ಸರಕಾರದೊಡನೆ ಅಸಹಕಾರ ಮಾಡಬೇಕೆಂಬ ಮಾತನ್ನು ಅವರು ಬಹು ಕಾಲದಿಂದ ಹೇಳುತ್ತ ಬಂದಿದ್ದರು.

ಅನಿಬೆಸೆಂಟರು ಬ್ರಿಟಿಷ್ ಸರಕಾರದ ವಿರುದ್ಧ ಹೋಮ್‌ರೂಲ್ (ಸ್ವರಾಜ್ಯ) ಚಳವಳಿ ಆರಂಭಿಸಿದ್ದರು. ಸರಕಾರವ ಅವರನ್ನು ಬಂಧಿಸಿ ಒಂದು ಬಂಗಲೆಯಲ್ಲಿ ಇಟ್ಟಿತ್ತು. ಅದೇ ಬಂಗಲೆಯಲ್ಲಿ ಇನ್ನಿಬ್ಬರು ಚಳವಳಿಗಾರರನ್ನೂ ಇಟ್ಟಿತ್ತು. ಮೂವರು ಸೇರಿ ಆ ಬಂಗಲೆಯ ಮೇಲೆ ಹೋಮ್‌ರೂಲ್ ಧ್ವಜವನ್ನು ಹಾರಿಸಿದರು. ಪೊಲೀಸರು ಅದನ್ನು ಇಳಿಸುತ್ತಿದ್ದರು. ಮೂವರು ಚಳವಳಿಗಾರರು ಅದನ್ನು ಪುನಃ ಏರಿಸುತ್ತಿದ್ದರು. ಹೀಗೆ ಅದೆಷ್ಟೋ ಸಲ ನಡೆಯಿತು. ಪೊಲೀಸರೇ ಬೇಸತ್ತು ತೆಪ್ಪಗೆ ಕುಳಿತರು. ಸರಕಾರದ ರೀತಿಯನ್ನು ಪ್ರತಿಭಟಿಸುವುದಕ್ಕಾಗಿ ಭಗವಾನ್‌ದಾಸರು ಕಾಶಿಯ ಪುರಭವನದಲ್ಲಿ ಒಂದು ಭಾರಿ ಸಭೆಯನ್ನು ಏರ್ಪಡಿಸಿದರು. ಅದರ ಅಧ್ಯಕ್ಷತೆಯನ್ನೂ ಅವರೇ ವಹಿಸಿದ್ದರು. ಈ ಉದ್ದೇಶದಿಂದ ಜರುಗಿದ ಈ ಸಭೆ ಭಾರತದಲ್ಲಿಯ ಮೊಟ್ಟ ಮೊದಲನೆಯದು. ಆನಂತರ ಇಂಥ ಸಭೆಗಳು ಭಾರತದಲ್ಲೆಲ್ಲ ಜರುಗಿದವು.

ಲೋಕಮಾನ್ಯ ತಿಲಕರಿಗೆ ಸತ್ಕಾರ

ಕಾಶಿಯಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಅಧಿವೇಶನ (೧೯೨೦). ಭಗವಾನ್ ದಾಸರು ಸದಸ್ಯರಲ್ಲದಿದ್ದರೂ ಅವರಿಗೆ ವಿದೇಶ ಆಮಂತ್ರಣವಿತ್ತು. ಅದರಲ್ಲಿ ಭಾಗವಹಿಸಲು ಪ್ರಸಿದ್ಧ ದೇಶಭಕ್ತ ಲೋಕಮಾನ್ಯ ತಿಲಕರೂ ಆಗಮಿಸಿದ್ದರು. ಒಂದು ದಿನ ಬೆಳಿಗ್ಗೆ ಭಗವಾನ್ ದಾಸರು ಅವರನ್ನು ಕಾಣಲು ಹೋದರು. ನಮಸ್ಕಾರ, ಪರಸ್ಪರ ಪರಿಚಯ ಮಾಡಿಕೊಂಡ ಬಳಿಕೆ ವೈದಿಕ ಶೋಧ, ಗಣಿತ, ಜ್ಯೋತಿಷ, ದರ್ಶನ ಶಾಸ್ತ್ರ, ಗೀತಾರಹಸ್ಯ ಕುರಿತು ಚರ್ಚೆ ಮಾಡಿದರು.

ಅದೇ ದಿನ ಸಂಜೆ ಲೋಕಮಾನ್ಯರಿಗೆ ಸತ್ಕಾರದ ಸಭೆ. ಭಗವಾನ್‌ದಾಸರೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಂದಿನ ಸಭೆಯಲ್ಲಿ ಲೋಕಮಾನ್ಯರು ಅಸಹಕಾರದ ವ್ಯಾಖ್ಯೆ ಮಾಡಿದರು. ಮಹಾಭಾರತದಲ್ಲಿ ಶ್ಲೋಕಗಳನ್ನು ಉದಾಹರಿಸಿ ಹೇಳಿದರು – “ನಿಮ್ಮೊಡನೆ ಯಾರು ಯಾವ ರೀತಿಯಾಗಿ ನಡೆದುಕೊಳ್ಳುತಾರೋ ಅವರೊಡನೆ ಅದೇ ರೀತಿಯಾಗಿ ನಡೆದುಕೊಳ್ಳಿರಿ. ಒಳ್ಳೆಯ ವ್ಯವಹಾರ ಮಾಡಿದವರೊಡನೆ ಒಳ್ಳೆಯ ವ್ಯವಹಾರ ಮಾಡಿರಿ. ಕೆಟ್ಟ ವ್ಯವಹಾರ ಮಾಡಿದವರ ಕೂಡ ಕೆಟ್ಟ ವ್ಯವಹಾರ ಮಾಡಿರಿ. ಲಾಭದಾಯಕ ಕಾರ್ಯದಲ್ಲಿ ಸಹಕಾರ ನೀಡಿರಿ, ಅನಿಷ್ಟ ಕಾರ್ಯಗಳಲ್ಲಿ ಅಸಹಕಾರ ಮಾಡಿರಿ. ಅದರ ಮಾಡಿದವರಿಗೆ ಆದರ ಮಾಡಿರಿ, ಅನಾದರ ಮಾಡಿದವರಿಗೆ ಅನಾದರ; ಅವರಿಂದ ಒಳ್ಳೆಯದು ಸಿಕ್ಕರೆ ಅದನ್ನು ಗ್ರಹಿಸಿರಿ, ಹೆಚ್ಚಿನ ಅನುಕೂಲತೆಗಾಗಿ ಹೋರಾಡಿರಿ”. ಈ ಮಾತುಗಳಲ್ಲಿ ಎಲ್ಲ ಮಾತುಗಳು ಬ್ರಿಟಿಷ್ ಆಡಳಿತಗಾರರಿಗೆ ಅನ್ವಯಿಸುತ್ತಿದ್ದವು.

ಆದರೆ ಗಾಂಧೀಜಿಗೆ ಈ ನೀತಿ ಇಷ್ಟವಿರಲಿಲ್ಲ. ಆದರೆ ಭಗವಾನ್ ದಾಸರಿಗೆ ಒಪ್ಪಿಗೆಯಾಗಿತ್ತು ಎಂದು ಹೇಳಬಹುದು. ಗಾಂಧೀಜಿ ಕೇಡು ಬಗೆಯುವವರಿಗೂ ಒಳಿತು ಮಾಡಿರಿ ಎನ್ನುತ್ತಿದ್ದರು. ಲೋಕಮಾನ್ಯರ ಈ ಮಾತುಗಳನ್ನು ಭಗವಾನ್‌ದಾಸರು ಅನಿಬೆಸೆಂಟರಲ್ಲಿ ನಿವೇದಿಸಿದರು. ಅವರಿಗೂ ತಿಲಕರ ಅಭಿಪ್ರಾಯ ಒಪ್ಪಿಗೆಯಾಗಲಿಲ್ಲ. ಭಗವಾನ್‌ದಾಸರು ಲೋಕಮಾನ್ಯರ ಹೇಳಿಕೆಯ ನಿಲುವನ್ನು ಅನಿಬೆಸಂಟರಿಗೆ ವಿವರಿಸಿದರು. “ಸರ್ಕಾರವೇ ತನ್ನ ನೀತಿಯಿಂದಾಗಿ ಜನರಿಗೆ ಶಸ್ತ್ರ ಹಿಡಿಯಲು ಹಚ್ಚುತ್ತದೆ, ಲೋಕಮಾನ್ಯರಲ್ಲ. ಲೋಕಮಾನ್ಯರ ಮಾತು ಬಿರುಸು, ಸ್ಪಷ್ಟ! ಹೌದು; ಅವರು ಬ್ರಿಟಿಷ್ ರಾಜಕಾರಣಿಗಳಂತೆ ಕೂಟ ನೀತಿಯವರಲ್ಲ, ಮೋಸಗಾರರಲ್ಲ. ಬ್ರಿಟಿಷರು ಗುಪ್ತವಾಗಿ ಯಾವುದನ್ನು ಮಾಡುತ್ತಾರೋ ಅದನ್ನು ಸ್ಪಷ್ಟವಾಗಿ, ಬಹಿರಂಗವಾಗಿ ಮಾಡಲು ಲೋಕಮಾನ್ಯರು ಹೇಳುತ್ತಾರೆ. ಸರಕಾರದ ಆಳ್ವಿಕೆ ಇಬ್ಬಗೆಯದು. ಒಂದು ಕಡೆ ಅದು ಶಾಸನ ಸುಧಾರಣೆ, ಕಾಯದೆ ಸುಧಾರಣೆಯ ಮತು ಆಡುತ್ತದೆ, ಇನ್ನೊಂದು ಕಡೆ ದಬ್ಬಾಳಿಕೆ ನಡೆಸುತ್ತದೆ. ತಿಲಕರು ಮುಚ್ಚು-ಮರೆ ಮಾಡುವುದಿಲ್ಲ ಬ್ರಿಟಿಷರಂತೆ”. ಬೆಸಂಟರು ಭಗವಾನ್‌ದಾಸರು ಸಾರವತ್ತಾದ ಈ ವಿವರಣೆಯನ್ನು ಮನ್ನಿಸಿದರು.

ಭಗವಾನ್‌ದಾಸರು ಆನಿಬೆಸಂಟರೊಂದಿಗೆ

ರಾಜಕುಮಾರನ ಬಹಿಷ್ಕಾರ

ಗಾಂಧೀಜಿ ಅಸಹಕಾರದ ಸಮಯದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಶಾಲೆ ಕಾಲೇಜುಗಳನ್ನು ಬಿಡಿರಿ ಎಂದು ಉಪದೇಶಿಸಿದರು. ಆದರೆ ಇದು ಭಗವಾನ್ ದಾಸರಿಗೆ ಒಪ್ಪಿಗೆಯಾಗಲಿಲ್ಲ. ಅವರು ವಿದ್ಯಾರ್ಥಿಗಳು ರಾಜಕಾರಣದಿಂದ ದೂರ ಇರಬೇಕೆಂದು ಹೇಳಿದರು.

ಭಗವಾನ್‌ದಾಸರಿಗೆ ಭಾರತರತ್ನ ಪ್ರಶಸ್ತಿ ದೊರೆಯಿತು.

  ಒಮ್ಮೆ ಹೀಗಾಯಿತು. ಇಂಗ್ಲೆಂಡಿನ ರಾಜಕುಮಾರನಿಗೆ – ಡ್ಯೂಕ್ ಆಫ್ ವಿಂಡ್ಸರನಿಗೆ ಡಾಕ್ಟರೇಟ್ ಡಿಗ್ರಿ ಕೊಡುವ ಸಮಾರಂಭವಿತ್ತು. ಅದನ್ನು ವಿರೋಧಿಸಿ ಆಚಾರ‍್ಯ ಕೃಪಲಾನಿಯವರು ವಿಶ್ವವಿದ್ಯಾನಿಲಯದಿಂದ ಹೊರಬಿದ್ದು ತಮ್ಮ ೩೦-೪೦ ವಿದ್ಯಾರ್ಥಿಗಳೊಂದಿಗೆ ಬಂದಿದ್ದರು. ಗಾಂಧೀಜಿ ಅಸಹಕಾರ ಮಾಡಲು ಉಪದೇಶ ಮಾಡಿದರು. ಭಗವಾನ್‌ದಾಸರು ಡ್ಯೂಕ್ ಆಫ್ ವಿಂಡ್ಸರನಿಗೆ ಬಹಿಷ್ಕರಿಸಲು ಉಪದೇಶ ಮಾಡಿದರು. ಇದರಿಂದಾಗಿ ಆಚಾರ‍್ಯ ಕೃಪಲಾನಿ ಅವರೊಡನೆ ಭಗವಾನ್‌ದಾಸರಿಗೂ ಒಂದು ವರ್ಷ ಶಿಕ್ಷೆಯಾಯಿತು.

ಈ ಹೊತ್ತಿಗೆ ಭಗವಾನ್‌ದಾಸರು ತಮ್ಮ ಪಾಂಡಿತ್ಯದಿಂದ, ಸುವಿಚಾರಗಳಿಂದ ಸಾಹಿತ್ಯ ಕೃತಿಗಳಿಂದ ದೇಶವಿದೇಶಗಳಲ್ಲಿ ಲೋಕಪ್ರಿಯರಾಗಿದ್ದರು. ಅವರ ಬಂಧನ ಹಾಗೂ ಬಿಡುಗಡೆಗಾಗಿ ಅನೇಕ ದೇಶ – ವಿದೇಶಗಳ ವಿದ್ವಾಂಸರು ಸರಕಾರಕ್ಕೆ ಒತ್ತಾಯಪಡಿಸಿದರು.

ಇದರಿಂದಾಗಿ ಐದೇ ತಿಂಗಳುಗಳಲ್ಲಿ ಭಗವಾನ್ ದಾಸರ ಬಿಡುಗಡೆಯಾಯಿತು.

ಕಾಶೀ ವಿದ್ಯಾಪೀಠದ ಸ್ಥಾಪನೆ

ಶಿವಪ್ರಸಾದ ಗುಪ್ತ ಅವರು ವಿದೇಶ ಯಾತ್ರೆಗೆ ಹೊರಟರು (೧೯೧೪).  ಅನೇಕ ದೇಶಗಳ ಸಂಚಾರ ಮಾಡಿ, ಅಲ್ಲಿಯ ಶಿಕ್ಷಣ ಸಂಸ್ಥೆಗಳ ಅಭ್ಯಾಸ ಮಾಡಿ ಜಪಾನಿಗೆ ಬಂದರು. ಅಲ್ಲಿ ಒಂದು ಶಿಕ್ಷಣ ಸಂಸ್ಥೆಯು ಅವರ ಮನಸ್ಸಿನ ಮೇಲೆ ಬಹಳ ಪರಿಣಾಮ ಮಾಡಿತು. ಆ ಸಂಸ್ಥೆ ಸರಕಾರದ ಯಾವ ಕಟ್ಟಳೆಗು ಒಳಗಾಗಿದ್ದಿಲ್ಲ. ಅದು ರಾಜ್ಯದಿಂದ ಯಾವ ಆರ್ಥಿಕ ಸಹಾಯವನ್ನೂ ತೆಗೆದುಕೊಳ್ಳುತ್ತಿದ್ದಿಲ್ಲ. ಅದು ಬಹಳ ಲೋಕಪ್ರಿಯವಾಗಿತ್ತು. ಸಹಸ್ರಾರು ವಿದ್ಯಾರ್ಥಿಗಳು ಅದರಲ್ಲಿ ಕಲಿಯುತ್ತಿದ್ದರು, ಅದರ ಪದವೀಧರರಿಗೆ ಎಲ್ಲ ಕಡೆಗೆ ಬೇಡಿಕೆ. ಸರಕಾರಕ್ಕು ಆ ಸಂಸ್ಥೆಯ ಪದವೀಧರರೇ ಬೇಕು. ಶಿವಪ್ರಸಾದರು ಇಂಥದೊಂದು ಶಿಕ್ಷಣ ಸಂಸ್ಥೆಯನ್ನು ಭಾರತದಲ್ಲಿ ಸ್ಥಾಪಿಸಬೇಕೆಂಬ ಸಂಕಲ್ಪವನ್ನು ಮಾಡಿದರು.

ಶಿವಪ್ರಸಾದರು ಜಪಾನಿನಲ್ಲಿರುವಾಗಲೇ ತಾವು ಕಂಡ ಸಂಸ್ಥೆಯ ವಿಷಯವನ್ನು ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಿರಿಯರಾಗಿದ್ದ ಸಮಾಜ ಸುಧಾರಕರು ಧೋಂಡೋ ಕೇಶವ ಕರ್ವೆಯರಿಗೆ ಪತ್ರ ಬರೆದು ತಿಳಿಸಿದರು. ಆ ಪತ್ರದಿಂದ ಪ್ರಭಾವಿತರಾಗಿ ಕರ್ವೆಯವರು ತಮ್ಮ ಮಹಿಳಾ ವಿಶ್ವವಿದ್ಯಾಲಯವನ್ನು ಪುಣೆಯಲ್ಲಿ ಸ್ಥಾಪಿಸಿದರು. ಶಿವಪ್ರಸಾದರು ಭಾರತಕ್ಕೆ ಹಿಂತಿರುಗಿದ ಕೂಡಲೆ ಕಾಶಿಯಲ್ಲಿ ಜಪಾನಿನಲ್ಲಿ ಕಂಡಂತಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಪ್ರಯತ್ನ ಪ್ರಾರಂಭಿಸಿದರು. ೧೯೨೦ ರಲ್ಲಿಯ ಗಾಂಧೀಜಿಯ ಆಂದೋಲನದಿಂದ ಅವರಿಗೆ ಆಸೆಯುಂಟಾಯಿತು. ರಾಜಕೀಯ ಸ್ವಾತಂತ್ರ‍್ಯ ಮತ್ತು ದೇಶಿ ಭಾಷೆಯಲ್ಲಿ ಶಿಕ್ಷಣ ಇವೆರಡೂ ಆದರ್ಶ ಸಾಧಿಸುವ ಲಕ್ಷಣ ತೋರಿದವು. ಇದೇ ವೇಳೆಗೆ ಭಗವಾನ್‌ದಾಸರು ಬನಾರಸ (ಕಾಶಿ) ಹಿಂದೂ ವಿಶ್ವವಿದ್ಯಾನಿಲಯ ಮತ್ತು ಸೆಂಟ್ರಲ್ ಹಿಂದೂ ಕಾಲೇಜಿನ ಸೇವೆಯಿಂದ ನಿವೃತ್ತರಾಗಿದ್ದರು. ಅವರತ್ತ ಶಿವಪ್ರಸಾದರ ಗಮನ ಹರಿಯಿತು. ಆದರೆ ಭಗವಾನ್‌ದಾಸರು ಅಷ್ಟೊಂದು ಆಸಕ್ತಿ, ಉತ್ಸಾಹ ತೋರಲಿಲ್ಲ. ಶಿವಪ್ರಸಾದರು ಗಾಂಧೀಜಿಯವರಿಂದ ಭಗವಾನ್‌ದಾಸರಿಗೆ ಒಂದು ಪತ್ರ ಬರೆಯಿಸಿದರು:

“ಭಗವಾನ್‌ದಾಸಜೀ, ಈಗ ನಮ್ಮ ಕಾಶಿಯಲ್ಲಿ ಒಂದು ಮಹಾವಿದ್ಯಾಲಯ ತೆರೆಯುವುದು ಅವಶ್ಯಕವೆನಿಸುತ್ತದೆ. ಶಿಕ್ಷಣ ಪದ್ಧತಿ ಮುಖ್ಯ ವಿಷಯವಲ್ಲ. ಅಸಹಕಾರವು ಮುಖ್ಯ ವಿಷಯ. ಸರಕಾರದೊಡನೆ ನಾವು ಅಸಹಕಾರ ಮಾಡುತ್ತಿರುವುದು ಅದು ರಾವಣ ಸರಕಾರವಾಗಿರುವುದರಿಂದ. ಸರಕಾರಿ ವಿದ್ಯಾಲಯಗಳಲ್ಲಿ ಶಿಕ್ಷಣವು ಚೆನ್ನಾಗಿಲ್ಲ; ಇದೂ ಒಂದು ಕಾರಣವಾಗಬಹುದು ತ್ಯಾಗಕ್ಕೆ. ಆದ್ದರಿಂದ ಶಿಕ್ಷಣದ ವಿಚಾರದಲ್ಲಿ ವಿದ್ಯಾಲಯದ ಸ್ಥಾಪನೆಯನ್ನು ತಡೆಯಬಾರದೆಂದು ತಮ್ಮಲ್ಲಿ ನನ್ನ ಪ್ರಾರ್ಥನೆ. ಹೆಚ್ಚು ವಿಷಯ ಭಾಯಿ ಶಿವಪ್ರಸಾದರು ತಮಗೆ ತಿಳಿಸುತ್ತಾರೆ. ತಮ್ಮ ಮೋಹನದಾಸ ಗಾಂಧಿ”.

ಶಿವ ಪ್ರಸಾದರು ಭಗವಾನ್‌ದಾಸರ ಬಳಿ ಬಂದರು ತಮ್ಮ ಇಚ್ಛೆಯನ್ನು ನಿವೇದಿಸಿದರು. “ಒಂದು ಭಾರತೀಯ ಸಂಸ್ಕೃತಿ ಮತ್ತು ಶಿಕ್ಷಣ ಪದ್ಧತಿಗೆ ಪೋಷಕವಾಗಿರುವಂಥ ಶಿಕ್ಷಣ ಸಂಸ್ಥೆ ಸ್ಥಾಪಿಸಬೇಕು. ಈ ಸಂಸ್ಥೆ ಸ್ಥಾಪಿಸಬೇಕು. ಈ ಸಂಸ್ಥೆ ಸರಕಾರದ ನಿಯಮಗಳಿಗೆ ಒಳಗಾಗಿರಬಾರದು. ಸರಕಾರದಿಂದ ಧನಸಹಾಯ ತೆಗೆದುಕೊಳ್ಲಬಾರದು. ಮಾತೃಭಾಷೆಯ ಮುಖಾಂತರ ಶಿಕ್ಷಣ ಕೊಡುವ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳ ಚಾರಿತ್ರ್ಯ ನಿರ್ಮಾಣ ಮಾಡಬೇಕು. ಶಿಕ್ಷಣ ಮುಗಿದ ಬಳಿಕ ಸರಕಾರಿ ನೌಕರಿಯನ್ನು ಅವಲಂಬಿಸದಂಥ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಭಾರತದ ಆಯಾಕಾಲದ ಸ್ಥಿತಿಗತಿಗೆ ಅನುಕೂಲವಾಗುವಂತೆ ಹಣ ತೆಗೆದುಕೊಳ್ಳದೆ ಶಿಕ್ಷಣವೀಯುವ ಸಂಸ್ಥೆಯನ್ನು ಕಟ್ಟಲು ತಮ್ಮ ಪೂರ್ಣ ಸಕ್ರಿಯ ಸಹಕಾರ, ಸಲಹೆ ಅಗತ್ಯ. ಹಣದ ಬಗ್ಗೆ ಚಿಂತೆ ಬೇಡ. ನಾನು ನನ್ನ ತಮ್ಮನ ಹೆಸರಿನಲ್ಲಿ “ಹರಪ್ರಸಾದ ಶಿಕ್ಷಾನಿಧಿ”ಯೆಂದು ಹತ್ತು ಲಕ್ಷ ರೂಪಾಯಿ ಕೊಡುತ್ತೇನೆಂದು ವಾಗ್ದಾನ ಮಾಡುತ್ತೇನೆ.”

ಭಗವಾನ್ ದಾಸರ ವಿಚಾರ ರೀತಿಯೂ ಹೀಗೆಯೇ ಇದ್ದಿತು. ಅವರು ಒಪ್ಪಿದರು. ರಾಷ್ಟ್ರೀಯ ವಿಶ್ವವಿದ್ಯಾಲಯದ ಸ್ಥಾಪನೆಯ ಕಾಲ ಸಮೀಪಿಸಿದೆ ಎಂದು ಅನಿಸಿ, ಇನ್ನು ವಿಳಂಬ ಮಾಡಬಾರದೆಂದು ಕಾಶೀ ವಿದ್ಯಾಪೀಠದ ಸ್ಥಾಪನೆಯ ದಿನವನ್ನು ನಿಶ್ಚಯಿಸಿದರು. ಅದರ ಉದ್ಘಾಟನೆಗೆ ಗಾಂಧೀಜಿಯವರನ್ನು ಆಮಂತ್ರಿಸಿದರು. ಗಾಂಧೀಜಿ ಕಾಶಿಗೆ ಬಂದರು. ೧೯೨೧ ಫೆಬ್ರವರಿ ೧೦ ರಂದು ೧೦ ಗಂಟೆಗೆ ಶುಭಮುಹೂರ್ತದಲ್ಲಿ ಕಾಶೀ ವಿದ್ಯಾಪೀಠದ ಸ್ಥಾಪನೆಯಾಯಿತು.

ಕಾಶಿಯಲ್ಲಿ ಒಂದು ರಾಷ್ಟ್ರೀಯ ಶಿಕ್ಷಣ ಸಮ್ಮೇಳನವು ಜರುಗಿತು.(೧೯೨೩). ಅದರ ಅಧ್ಯಕ್ಷತೆಯನ್ನು ಭಗವಾನ್ ದಾಸರೇ ವಹಿಸಿದ್ದರು. ಆ ಮೇರೆಗೆ ಕಾಶಿ ವಿದ್ಯಾಪೀಠದಲ್ಲಿ ವಿದ್ಯಾದಾನವು ಪ್ರಾರಂಭವಾಯಿತು. ಹಿಂದೀ, ಇಂಗ್ಲಿಷ್, ಸಂಸ್ಕೃತ ಕಡ್ಡಾಯದ ವಿಷಯಗಳು, ದರ್ಶನಶಾಸ್ತ್ರ, ಗಣಿತ, ಇತಿಹಾಸ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ, ರಾಜ್ಯಶಾಸ್ತ್ರ ಇತ್ಯಾದಿ ಐಚ್ಛಿಕ ವಿಷಯಗಳು; ಇವುಗಳಲ್ಲಿ ಬೋಧನೆ ಆರಂಭವಾಯಿತು. ಶಿಕ್ಷಣದ ಮಾಧ್ಯಮ ಹಿಂದೀ ದೇಶೀಭಾಷೆಯ ಅಥವಾ ಮಾತೃಭಾಷೆಯ ಮುಖಾಂತರ ಉಚ್ಚ ಶಿಕ್ಷಣ ಕೊಡುವ ಪ್ರಯೋಗ ಪ್ರಾರಂಭವಾಯಿತು. ಯಶಸ್ವಿಯೂ ಆಯಿತು. ಲಾಲ್ ಬಹಾದೂರ ಶಾಸ್ತ್ರೀಯವರಂತಹ ಹಲವರು ಈ ಸಂಸ್ಥೆಯ ಸ್ನಾತಕರಾಗಿ ಹೊರಬಿದ್ದು ದೇಶದ ಸೇವೆ ಮಾಡಿದರು.

ಶಾಸ್ತ್ರೀ ಪದವಿ

ಭಗವಾನ್ ದಾಸರು ಸೆರೆಮನೆಯಿಂದ ಬಿಡುಗಡೆಯಾದ ಬಳಿಕ ಶಿಕ್ಷೆಯ ಉಳಿದ ತಿಂಗಳುಗಳನ್ನು ಕಾಶೀವಿದ್ಯಾಪೀಠದ ಭವನದಲ್ಲಿ ಕಳೆದರು. ಕಾಶೀ ವಿದ್ಯಾಪೀಠದ ಕುಲಪತಿಯಾಗಿ ಶಿಕ್ಷಣ ಕಾರ್ಯವನ್ನು  ಮುಂದುವರಿಸಿದರು. ಭಾರತದ ರಾಜಕಾರಣದಲ್ಲಿ ಹಿರಿಯ ಮುಖಂಡರು ವಿದ್ಯಾಪೀಠದಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರಲ್ಲಿ ಪ್ರಮುಖರಾದವರು ಆಚಾರ‍್ಯ ನರೇಂದ್ರ ದೇವ, ಶ್ರೀ ಶ್ರೀಪ್ರಕಾಶ, ಡಾಕ್ಟರ್ ಸಂಪೂರ್ಣಾನಂದ, ಡಾಕ್ಟರ್ ಬಿ.ವಿ. ಕೇಸರ್ ಮುಂತಾದವರು.

ಮೆಟ್ರಿಕ್ ಪರೀಕ್ಷೆಯ ನಂತರ ನಾಲ್ಕು ವರ್ಷಗಳ ಕಾಲ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಕಾಶೀವಿದ್ಯಾಪೀಠವು “ಶಾಸ್ತ್ರೀ” ಎಂಬ ಪ್ರಶಸ್ತಿಯನ್ನು ಕೊಡುತ್ತಿತ್ತು. ಅನೇಕರಿಗೆ ಇದು ಒಪ್ಪಿಗೆಯಾಗಲಿಲ್ಲ. ಅವರು ಭಗವಾನ್ ದಾಸರಿಗೆ “ಇದು ಸಂಸ್ಕೃತದ ಪದವಿ ಎಂದೂ ಪೌರೋಹಿತ್ಯದ ಶಿಕ್ಷಣಕ್ಕೆ ಸಂಬಂಧಿಸಿದ್ದು ಎಂದೂ ಜನ ಭಾವಿಸುತ್ತಾರೆ. ಈ ಪದವಿಗೆ ಬೇರೊಂದು ಹೆಸರು ಕೊಡಿ” ಎಂದು ಕೋರಿದರು. ಭಗವಾನ್‌ದಾಸರು, “ನೀವು ಅಧ್ಯಯನ ಮಾಡುವುದು ಸಂಸ್ಕೃತವನ್ನು ಮಾತ್ರ ಅಲ್ಲ. ಅರ್ಥಶಾಸ್ತ್ರ ರಾಜ್ಯಶಾಸ್ತ್ರ, ತತ್ವಶಾಸ್ತ್ರ, ಮನಃಶಾಸ್ತ್ರ, ಗಣಿತಶಾಸ್ತ್ರ ಹೀಗೆ ಜ್ಞಾನದ ಹಲವು ವಿಭಾಗಗಳನ್ನು ಅಧ್ಯಯನ ಮಾಡುತ್ತೀರಿ. ಒಂದೊಂದು ವಿಭಾಗ ಒಂದೊಂದು ಶಾಸ್ತ್ರ; ಅದರಲ್ಲಿ ಪಾರಂಗತರಾದವರನ್ನು ಶಾಸ್ತ್ರೀ ಒಂದು ಕರೆಯುವುದು ಉಚಿತವಾಗಿದೆ” ಎಂದು ವಿವರಿಸಿದರು, ಭಗವಾನ್ ದಾಸರ ವಿದ್ವತ್ತು ಎಷ್ಟೆಂದರೆ ಅನೇಕರು ಕಠಿಣ ಇಂಗ್ಲಿಷ್ ಶಬ್ದಗಳ ಅರ್ಥ ತಿಳಿಯಲು ಅವರ ಬಳಿ ಹೋಗುತ್ತಿದ್ದರು, ಭಗವಾನ್‌ದಾಸರು ಸರಿಯಾಗಿ ಹಿಂದಿಯಲ್ಲಿ ಅರ್ಥ ವಿವರಿಸುತ್ತಿದ್ದರು. ಜನ ಅವರನ್ನು ’ನಡೆದಾಡುವ ಶಬ್ದಕೋಶ’ ಎಂದೇ ಕರೆಯುತ್ತಿದ್ದರು.

ನಿರ್ಭಯ ವೈಚಾರಿಕ

ಭಗವಾನ್‌ದಾಸರು ತಮ್ಮ ಅಭಿಪ್ರಾಯಗಳನ್ನು ನಿರ್ಭಯವಾಗಿ ಮಂಡಿಸುತ್ತಿದ್ದರು. ಅಂಜಿಕೆ ಎಂಬುದು ಅವರಿಗೆ ಗೊತ್ತಿದ್ದಿಲ್ಲ. ಅವರದು ಶೋಧಕ ಬುದ್ಧಿ, ಚಿಕಿತ್ಸಕ ಬುದ್ಧಿ. ಮುಂಬಯಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆ ಸೇರಿತು. ಅದರ ಸದಸ್ಯರಾಗಿ ಭಗವಾನ್‌ದಾಸರು ಅದರಲ್ಲಿ ಭಾಗವಹಿಸಿದರು. ಆಗ ಲೋಕಮಾನ್ಯ ತಿಲಕರು ಗತಿಸಿ ಹೋಗಿದ್ದರು. ಕಾಂಗ್ರೆಸ್ ಎಂದರೆ ಗಾಂಧಿ, ಗಾಂಧಿ ಎಂದರೆ ಕಾಂಗ್ರೆಸ್ ಎಂಬಂತಾಗಿತ್ತು. ಆಗ ಭಾರತಕ್ಕೆ ಎಂಥ ಸ್ವರಾಜ್ಯ ಬೇಕು ಎಂಬ ಬಗ್ಗೆ ಚರ್ಚೆ ನಡೆದಿತ್ತು. ಚರ್ಚೆಯಲ್ಲಿ ದೇಶ ಬಂಧು ಚಿತ್ತರಂಜನದಾಸ್, ಮೋತಿಲಾಲ್ ನೆಹರು, ಮತ್ತು ಗಾಂಧೀಜಿ ಭಾಗವಹಿಸಿದ್ದರು. ಭಗವಾನ್ ದಾಸರು ಚರ್ಚೆಯಲ್ಲಿ ಭಾಗವಹಿಸಿದರು. ಕೆಲವರು ವಸಾಹತು ಸ್ವರಾಜ್ಯ ಬೇಕು ಎಂದರೆ ಕೆಲವರು ಸಂಪೂರ್ಣ ಸ್ವತಂತ್ರ ಸ್ವರಾಜ್ಯ ಬೇಕು ಎನ್ನುತ್ತಿದ್ದರು. ಭಗವಾನ್‌ದಾಸರು ಸಂಪೂರ್ಣ ಸ್ವಾತಂತ್ರ್ಯ ಬೇಕು ಎನ್ನುವವರು. ಭಗವಾನ್‌ದಾಸರು ಗಾಂಧೀಜಿಯನ್ನು ಎಲ್ಲರ ಮುಂದೆ ಕೇಳಿದರು : “ಮಹಾತ್ಮಾಜೀ, ವಸಾಹತು ಸ್ವರಾಜ್ಯಕ್ಕೆ ಒಂದು ಅರ್ಥವಿದೆ. ಆದರೆ ಸ್ವಾರಜ್ಯ ಶಬ್ದಕ್ಕೆ ಏನೂ ಸ್ಪಷ್ಟ ಅರ್ಥವಿಲ್ಲ. ಬೇಕಾದವರು ಅದಕ್ಕೆ ಬೇಕಾದ ಅರ್ಥ ಮಾಡುತ್ತಾರೆ. ಜಮೀನುದಾರರು ಜಮೀನುದಾರರ ರಾಜ್ಯ, ಬಂಡವಾಳಗಾರರು ಬಂಡವಾಳಗಾರರ ರಾಜ್ಯ, ಕೂಲಿಗಾರರು ಕೂಲಿಗಾರರ ರಾಜ್ಯ, ಹೀಗೆ ಅರ್ಥ ಮಾಡುತ್ತಾರೆ. ಇದರಿಂದ ನೀವು ಉಪದೇಶ ಮಾಡುವ ಐಕ್ಯತೆಯೂ ಹೋಗಿ, ಅವರು ತಮ್ಮತಮ್ಮಲ್ಲಿ ಹೋರಾಡುವಂತೆ, ಆಗುವುದಿಲ್ಲವೆ?” ಗಾಂಧೀಜಿ ಈ ಮಾತಿಗೆ ಉತ್ತರವಿತ್ತರು. “ಸ್ವರಾಜ್ಯವೆಂದರೆ ರಾಮ ರಾಜ್ಯ ಎಂದು ಕೇಳಿದವರಿಗೆ ಹೇಳಿರಿ.” ಭಗವಾನ್‌ದಾಸರು “ಮಹಾತ್ಮಜೀ, ಇದು ಸ್ವರಾಜ್ಯದ ಇನ್ನೂ ಕಠಿಣವಾದ ವಿವರಣೆ. ರಾಮರಾಜ್ಯದಲ್ಲಿ ಎಲ್ಲ ಜನರು ಸುಖಿಯಾಗಿದ್ದರು, ಯಾರೂ ಬಡವರಿಲ್ಲ ಎಂದು ತಿಳಿಯುತ್ತಿದ್ದರೆ ಅದು ದೊಡ್ಡ ತಪ್ಪು” ಎಂದು ಹೇಳಿ ವಾಲ್ಮೀಕಿ ರಾಮಾಯಣದ ಅನೇಕ ಉದಾಹರಣೆಗಳನ್ನು ಕೊಟ್ಟರು; ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬೇಕೆಂದು ಪ್ರತಿಪಾದಿಸಿದರು. ಕಾಂಗ್ರೆಸ್ ಪೂರ್ಣ ಸ್ವಾತಂತ್ರ್ಯದ ಗೊತ್ತುವಳಿಯನ್ನು ಸ್ವೀಕರಿಸಿದಾಗ ಅವರ ವಿಚಾರಗಳ ಸತ್ಯತೆಯು ಗೊತ್ತಾಯಿತು.

ಭಗವಾನ್‌ದಾಸರು ತಮ್ಮ ಅದ್ವಿತೀಯ ವಿಚಾರಗಳನ್ನು ವ್ಯಕ್ತಮಾಡಲು ಅನೇಕ ಗ್ರಂಥಗಳನ್ನು ಇಂಗ್ಲೀಷಿನಲ್ಲಿಯೂ, ಹಿಂದಿಯಲ್ಲಿಯೂ ಬರೆದರು. ಅವುಗಳ ಅತ್ಯಂತ ಮುಖ್ಯವಾದವು : ಸೈನ್ಸ್ ಆಫ್ ಇಮೋಶನ್ಸ್ (ಮನೋಭಾವ ವಿಜ್ಞಾನ), ಸೈನ್ಸ್ ಆಫ್ ಪೀಸ್ (ಶಾಂತಿ ವಿಜ್ಞಾನ), ಎಸೆನ್‌ಷಿಯಲ್ ಯುನಿಟಿ ಆಫ್ ಆಲ್ ರಿಲಿಜನ್ಸ್ (ಸರ್ವಧರ್ಮಗಳ ಸಾರಗಳ ಐಕ್ಯ), ಮಾನವ ಧರ್ಮಸಾರ, ಸಮನ್ವಯ ಪುರುಷಾರ್ಥ ಇತ್ಯಾದಿ. ಇವುಗಳಲ್ಲಿ “ಪುರುಷಾರ್ಥ”ವು ಅತ್ಯಂತ ಲೋಕಪ್ರಿಯವಾದ ಪುಸ್ತಕ.

ಏಕಾಂತವಾಸ

ಕಾಶೀ ವಿದ್ಯಾಪೀಠದ ಸ್ಥಾಪನೆಯ ಪ್ರಾರಂಭದಿಂದ ಭಗವಾನ್‌ದಾಸರು ಅದರ ಕುಲಪತಿಯಾಗಿದ್ದುಕೊಂಡು, ದೃಢವಾದ ನಿಷ್ಠೆಯಿಂದ ದಣಿಯಿಲ್ಲದೆ ಪರಿಶ್ರಮ ಮಾಡಿ, ಅನೇಕ ತೊಂದರೆ – ವಿರೋಧಗಳನ್ನು ಎದುರಿಸುತ್ತ ವಿದ್ಯಾಪೀಠವನ್ನು ಪ್ರಗತಿಪಥದಲ್ಲಿ ಮುನ್ನಡೆಸಿದರು. ಆದರೆ ಗೌರವವನ್ನು, ಪ್ರತಿಷ್ಠೆಯನ್ನು ಹೆಚ್ಚಿಸಿದರು. ಮುಪ್ಪಿನಿಂದಾಗಿ ಕಾಶೀ ವಿದ್ಯಾಪೀಠದ ಹೊಣೆಯನ್ನು ತಮ್ಮ ನೆಚ್ಚಿನ ಆಚಾರ್ಯ ನರೇಂದ್ರ ದೇವರಿಗೆ ೧೯೨೯ ರಲ್ಲಿ ಒಪ್ಪಿಸಿದರು. ಅನಂತರ ಚುನಾರದಲ್ಲಿ ಪ್ರಶಾಂತ ಗಂಗಾ ನದಿಯ ತೀರದ ಮೇಲೆ ಆಶ್ರಮ ಕಟ್ಟಿಕೊಂಡು ವಿಶ್ರಾಂತಿ ಪಡೆಯಲಾರಂಭಿಸಿದರು; ಏಕಾಂತವಾಸದಲ್ಲಿದ್ದು ಪರಮಾತ್ಮನ ಚಿಂತನೆಯಲ್ಲಿ ಪ್ರಾಚೀನ ಋಷಿಯಂತೆ ಜೀವನ ಕಳೆಯಲಾರಂಭಿಸಿದರು. ಆದರೆ ಆಗಾಗ್ಗೆ ನಾಡಸೇವೆಯ ಕರೆ ಬಂದಾಗ ಓಗೊಡದೆ ಇರುತ್ತಿದ್ದಿಲ್ಲ.

ಭಗವಾನ್‌ದಾಸರು ಯಾವುದೇ ವಿಷಯ ತೆಗೆದುಕೊಂಡರೂ ಅದರ ಸಾಧಕ ಬಾಧಕ ಕಾರಣಗಳನ್ನು ತೂಗಿ ನೋಡುತ್ತಿದ್ದರು; ಅನಂತರ ತಮ್ಮ ಸ್ಪಷ್ಟ ಅಭಿಪ್ರಾಯ ಹೇಳಿ ಸಲಹೆ ಕೊಡುತ್ತಿದ್ದರು. ಜನರಿಗೆ ಬೇಕಾದದ್ದೂ ಇದೆ. ಆದುದರಿಂದ ಅವರ ಅಭಿಪ್ರಾಯ ಹೇಳಿ ಸಲಹೆ ಕೊಡುತ್ತಿದ್ದರು. ಜನರಿಗೆ ಬೇಕಾದದ್ದೂ ಇದೆ. ಆದುದರಿಂದ ಅವರ ಅಭಿಪ್ರಾಯಗಳಿಗೆ ಸಲಹೆಗಳಿಗೆ ಸರ್ವರ ಮನ್ನಣೆ, ಅವರ ಸಲಹೆಯಲ್ಲಿ ನಾನಾ ಕ್ಷೇತ್ರಗಳ ನಾಯಕರ ನಂಬಿಕೆ; ಗಾಂಧೀಜಿಗೂ ಸಹ. ಎಲ್ಲರಿಂದ ಅವರಿಗೆ ಕರೆ. ಯಾರಿಗೂ “ಇಲ್ಲ” ಎನ್ನುತ್ತಿದ್ದಿಲ್ಲ.

ಬ್ರಿಟಿಷ್ ಸರಕಾರ ನೀಡಿದ ಒಂದು ತೀರ್ಮಾನದ ವಿರುದ್ಧ ಗಾಂಧೀಜಿಯವರು ಯರವಾಡಾ ಸೆರೆಮನೆಯಲ್ಲಿ ಉಪವಾಸ ಪ್ರಾರಂಭಿಸಿದರು. ಏಕೆಂದರೆ ಈ ನಿರ್ಣಯದಿಂದ ಹರಿಜನರನ್ನು ಹಿಂದೂಗಳಿಂದ ಪ್ರತ್ಯೇಕಿಸಲಾಗಿತ್ತು. ಆಗ ಗಾಂಧೀಜಿ ಹರಿಜನರ ದೇವಾಲಯ ಪ್ರವೇಶದ ಬಗ್ಗೆ ಸಲಹೆ ನೀಡಲು ಭಗವಾನ್ ದಾಸರನ್ನು ಆಮಂತ್ರಿಸಿದ್ದರು. ಭಗವಾನ್‌ದಾಸರು ಯೋಗ್ಯ ಸಲಹೆ ಮಾಡಿ ಮರಳಿ ಬಂದಿದ್ದರು ಕಾಶಿಗೆ. ಅವರಿಗೆ ಹರಿಜನ ಸಮ್ಮೇಳನದ ಅಧ್ಯಕ್ಷ ಸ್ಥಾನ ಕಾದಿತ್ತು. ೧೯೧೯ ರಿಂದ ೧೯೩೫ ರವರೆಗೆ ರಾಜಕೀಯ, ಸಾಮಾಜಿಕ, ಹರಿಜನ, ಭಾರತೀಯ ಸಂಸ್ಕೃತಿ ಸಮ್ಮೇಳನಗಳ ಅಧ್ಯಕ್ಷ ಪದಗಳನ್ನು ಅಲಂಕರಿಸಿದರು. ಕಾಶೀ ನಗರಪಾಲಿಕೆಯ ಅಧ್ಯಕ್ಷ ಸ್ಥಾನವನ್ನು ಆಲಂಕರಿಸಿ ಕಾಶೀನಗರ ಸುಧಾರಣೆಯ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿದರು ಮತ್ತು ಜನತೆಗೆ ಯೋಗ್ಯ ಸಲಹೆ-ಸೂಚನೆಯಿತ್ತರು.

೧೯೩೦ರಲ್ಲಿ ಕಾಶಿಯಲ್ಲಿ ಮತ್ತು ಕಾನಪುರದಲ್ಲಿ ಮುಸ್ಲಿಮ್=ಹಿಂದೂ ಗಲಭೆಗಳಾದವು. ಎರಡೂ ಬಣಗಳಲ್ಲಿ ಅನೇಕರು ಹತರಾದರು. ಸಾವಿರಾರು ಜನ ಗಾಯಗೊಂಡರು. ಸರಕಾರವು ಗಲಭೆಯ ವಿಚಾರಣೆ ಮಾಡಿಸುವ ಕಡೆಗೆ ಗಮನವೀಯಲಿಲ್ಲ. ಕಾಂಗ್ರೆಸ್ ಗಲಭೆಯ ವಿಚಾರಣೆ ಮಾಡಿ ಸೂಕ್ತ ಸಲಹೆಗಳನ್ನು ಕೊಡಲು ಮತ್ತು ಮುಂದೆ ಇಂತಹ ಕಲಹಗಳಾಗದಂತೆ ಏನು ಮಾಡಬೇಕೆಂದು ಸೂಚಿಸಲು ಒಂದು ಸಮಿತಿಯನ್ನು ನಿಯಮಿಸಿತು. ಅದರ ಅಧ್ಯಕ್ಷತೆಯನ್ನೂ ಭಗವಾನ್ ದಾಸರೇ ವಹಿಸಿದರು. ಹಲವು ತಿಂಗಳು ದಣಿವಿಲ್ಲದೆ ತನಿಖೆ ನಡೆಸಿ, ಒಂದು ಬೃಹತ್ ವರದಿಯನ್ನು ಕಾಂಗ್ರೆಸ್ ಸಲ್ಲಿಸಿದರು.

೧೯೩೫ ನೆಯ ಇಸವಿ ಕೇಂದ್ರೀಯ ವಿಧಾನಸಭೆಗೆ ಚುನಾವಣೆ ನಡೆಯಿತು. ಹಿಂದೂ ಮಹಾಸಭೆ, ಮುಸ್ಲಿಮ್ ಲೀಗು, ಫಾರ್ವರ್ಡ್ ಬ್ಲಾಕು ಮುಂತಾದ ಸಂಸ್ಥೆಗಳು ತಮ್ಮ ತಮ್ಮ ಹೆಸರಾಂತ ಉಮೇದುವಾರರನ್ನು ಚುನಾವಣೆಗೆ ನಿಲ್ಲಿಸಿದವು. ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸು ಭಗವಾನ್ ದಾಸರ ಮನವೊಲಿಸಿ, ಅವರನ್ನು ಚುನಾವಣೆಗೆ ನಿಲ್ಲಿಸಿತು. ಭಗವಾನ್ ದಾಸರ ಹೆಸರು ಪತ್ರಿಕೆಗಳಲ್ಲಿ ಪ್ರಕಟವಾದ ಕೂಡಲೇ ಎಲ್ಲ ಉಮೇದುವಾರರು ತಮ್ಮ ತಮ್ಮ ನಾಮ ಪತ್ರಗಳನ್ನು ಹಿಂತೆಗೆದುಕೊಂಡರು. ಭಗವಾನ್‌ದಾಸರು ಅವಿರೋಧವಾಗಿ ಆಯ್ಕೆಯಾದರು. ಅವರನ್ನು ಕಂಡರೆ ಎಲ್ಲರಿಗೂ ಇಷ್ಟು ಗೌರವ.

ಆರೋಗ್ಯದ ಕಾಳಜಿ

“ಶರೀರಮಾದ್ಯಂ ಖಲು ಧರ್ಮ ಸಾಧನಂ” ಎಂಬುದೊಂದು ಸುಭಾಷಿತ. ಅದರಲ್ಲಿ ಶರೀರದ ಆರೋಗ್ಯವನ್ನು ಕಾಪಾಡಿಕೊಂಡು ಧರ್ಮ ಸಾಧನೆ ಮಾಡಬೇಕು ಎಂಬುದು ಅಡಕವಾಗಿರುವ ಅರ್ಥ. ಭಗವಾನ್‌ದಾಸರು ಈ ಸುಭಾಷಿತದಂತೆ ನಡೆಯುವವರು. ತಮ್ಮ ಆರೋಗ್ಯದ ಕಡೆಗಷ್ಟೇ ಅಲ್ಲ ತಮ್ಮ ಪರಿವಾರದವರ, ಸಹೋದ್ಯೋಗಿಗಳ, ವಿದ್ಯಾರ್ಥಿಗಳ ಮತ್ತು ಸ್ನೇಹಿತರ ಆರೋಗ್ಯದ ಕಾಳಜಿ ಭಗವಾನ್ ದಾಸರಿಗೆ. ಆಗಾಗ್ಗೆ ಅವರು ತಮ್ಮ ಈ ನಿಕಟವರ್ತಿಗಳಿಗೆಲ್ಲ ಯೋಗ್ಯ ಸಲಹೆ ಕೊಡುತ್ತಿದ್ದರು.

ಗಾಂಧೀಜಿಯೊಡನೆ ಭಗವಾನ್ ದಾಸರ ಸಂಪರ್ಕ ಬೆಳೆದು ಹೆಚ್ಚು ಆತ್ಮೀಯವಾಗಿತ್ತು. ಕಾಶೀ ವಿದ್ಯಾಪೀಠದಲ್ಲಿ ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ಸಭೆ ಜರುಗಿತು (೧೯೩೪). ಆಗ ಗಾಂಧೀಜಿಯ ಆರೋಗ್ಯ ಕೆಟ್ಟಿತು. ಭಗವಾನ್‌ದಾಸರು ಹೆಸರಾಂತ ಡಾಕ್ಟರರಿಂದ ಚಿಕಿತ್ಸೆ ಮಾಡಿಸಿದರು. ಅತಿಸಾರ ನಿಂತಿತು. ಆದರೆ ಗಾಂಧೀಜಿಯವರ ಕೆಲಸ ಎಡೆಬಿಡದೆ ಹಾಗೇ ಸಾಗಿತ್ತು. ಆದ್ದರಿಂದ ಡಾಕ್ಟರರ ಎದುರಿಗೇ ಭಗವಾನ್‌ದಾಸರು ಗಾಂಧೀಜಿಯನ್ನು ದೂರಿದರು. “ಗಾಂಧೀಜಿ ಅಪಥ್ಯ ಮಾಡುತ್ತಾರೆ” ಎಂದರು.

ಗಾಂಧೀಜಿಗೆ ಭಗವಾನ್ ದಾಸರ ಮಾತಿನ ಅರ್ಥವಾಗಿರಲಿಲ್ಲ. ಅವರೆಂದರು “ನೀವು ಹಾಗೆ ಹೇಳುತ್ತೀರ?”

ಭಗವಾನ್ ದಾಸರೆಂದರು “ಹೌದು, ನಾನೇ ಹೇಳುತ್ತೇನೆ ಹಾಗೆ. ತಾವು ಮಾಡುವುದು ಸಾಧಾರಣ ಅಪಥ್ಯವಲ್ಲ. ತಾವು ಅರ್ಧ ರಾತ್ರಿಯವರೆಗೆ ಜನರನ್ನು ಭೇಟಿಯಾಗುತ್ತೀರಿ; ಅವರೊಡನೆ ಮಾಡನಾಡುತ್ತೀರಿ. ಆನಂತರ ಎರಡು ಗಂಟೆ ವಿಶ್ರಮಿಸಿ ಏಳುತ್ತೀರಿ. ಆಪ್ತ ಕಾರ್ಯದರ್ಶಿಯ ನಿದ್ದೆಯನ್ನು ಕೊಂದು, ಅವನನ್ನು ಎಬ್ಬಿಸುತ್ತೀರಿ ಪತ್ರ ಬರೆಯಲು ಹಚ್ಚುತ್ತೀರಿ. ಇದೇ ತಾವು ಮಾಡುವ ಅಪಥ್ಯ.” ಈ ಮಾತುಗಳನ್ನು ಕೇಳಿ ಗಾಂಧೀಜಿಯ ಮುಖದ ಮೇಲೆ ನಸುನಗೆ ಮೂಡಿತು, ಅಲ್ಲಿದ್ದವರೆಲ್ಲರ ಮುಖಗಳು ಪ್ರಸನ್ನತೆಯಿಂದ ಅರಳಿದವು.

ವ್ಯಕ್ತಿತ್ವ

ಯುಗ ಯುಗಗಳಿಂದ ಸಂಪಾದಿಸಿದ ಭಾರತೀಯ ಜ್ಞಾನ ಸಂಪತ್ತಿನ ನಿಜವಾದ ಉತ್ತರಾಧಿಕಾರಿಯಾಗಿದ್ದವರು ಭಗವಾನ್‌ದಾಸರು. ವೇದ, ಉಪನಿಷತ್ತು, ವೇದಾಂಗ (ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದ ಮತ್ತು ಜ್ಯೋತಿಷ), ಪುರಾಣ, ಇತಿಹಾಸ, ಷಡ್‌ದರ್ಶನ (ನ್ಯಾಯ, ಸಾಂಖ್ಯ, ಯೋಗ, ಪೂರ್ವ ಮೀಮಾಂಸಾ, ಉತ್ತರ ಮೀಮಾಂಸಾ, ವೈಶೇಷಿಕ), ಕಾವ್ಯ ಮುಂತಾದವುಗಳ ಅದ್ವಿತೀಯ ಜ್ಞಾನಿಯಾಗಿದ್ದರು ಅವರು. ಇವುಗಳ ಜೊತೆಗೆ ಪ್ರಾಚೀನ ಶರೀರ ವಿಜ್ಞಾನ, ನಾಡೀ ವಿಜ್ಞಾನ, ಆಯುರ್ವೇದ ಮತ್ತು ಯೌಗಿಕ ಕ್ರಿಯೆ – ಪ್ರಕ್ರಿಯೆಗಳ ಅಭ್ಯಾಸಿಯಾಗಿದ್ದರು ಅವರು. ಅವರು ಆಧುನಿಕ ವಿಜ್ಞಾನದ ಹಲವು ಶಾಖೆಗಳ ಭೌತಿಕ ಶಾಸ್ತ್ರ, ರಸಾಯನ ಶಾಸ್ತ್ರ, ಜೀವ ವಿಜ್ಞಾನ, ವನಸ್ಪತಿ ವಿಜ್ಞಾನ, ಅರ್ಥಶಾಸ್ತ್ರ, ಇತಿಹಾಸ, ಮನೋವಿಜ್ಞಾನ, ಸಮಾಜ ವಿಜ್ಞಾನ ಮುಂತಾದವುಗಳ ಗಹನ ಅಧ್ಯಯನ ಮಾಡಿದ್ದರು. ಬೇರೆ ಬೇರೆ ದೇಶಗಳ ರಾಜಕೀಯ, ಸಾಮಾಜಿಕ ಪ್ರಗತಿಯ ಒಳ್ಳೆಯ ಜ್ಞಾನವೂ ಅವರಿಗಿತ್ತು.

ತಾವು ಮಾಡುವುದು ಸಾಧಾರಣ ಅಪಥ್ಯವಲ್ಲ

ಭಗವಾನ್‌ದಾಸರು ಇಡೀ ಜೀವನ ವಿದ್ಯಾರ್ಥಿಯಾಗಿದ್ದರು. ಸಂಶೋಧಕರಾಗಿದ್ದರು ಮತ್ತು ಲೇಖಕರಾಗಿದ್ದರು. ಆದರೆ ರಾಜನೀತಿಯಿಂದ ಪೂರ್ಣ ಬೇರೆ ಇರಲು ಸಾಧ್ಯವಾಗುತ್ತಿಲ್ಲ. ಆಗಾಗ್ಗೆ ರಾಜಕೀಯ ಕ್ಷೇತ್ರದಲ್ಲಿಯೂ ತಮ್ಮ ಸೇವೆ ಸಲ್ಲಿಸುತ್ತಿದ್ದರು. ಹಿಂದೀ ಭಾಷೆಯ ಬಗ್ಗೆ ಪ್ರೇಮವಿದ್ದುದರಿಂದ ಸಾಹಿತ್ಯಕಿ ಸಂಸ್ಥೆಗಳೊಡನೆ ಅವರ ನಿಕಟ ಸಂಪರ್ಕವಿತ್ತು. ಅವುಗಳ ಉನ್ನತಿಗೆ ತಮ್ಮ ಪೂರ್ಣ ಸಹಕಾರವೀಯುತ್ತಿದ್ದರು. ಅವರ ಮಾರ್ಗದರ್ಶನದಿಂದ ಕಾಶಿ ನಾಗರಿ ಪ್ರಚಾರಿಣಿ ಸಭಾ ಮತ್ತು ಅಲಹಾಬಾದಿನ ಹಿಂದೀ ಸಾಹಿತ್ಯ ಸಮ್ಮೇಳನ ಪ್ರಗತಿ ಪಥದಲ್ಲಿ ಮುನ್ನಡೆದವು. “ರಸಮೀಮಾಂಸಾ” ಪುಸ್ತಕ ಬರೆದು ಸಾಹಿತ್ಯಕ ವಾಙ್ಮಯದಲ್ಲಿ ಕ್ರಾಂತಿಯನ್ನುಂಟು ಮಾಡಿದರು. ಅವರ ಗಹನ ವಿಚಾರ ಪೂರ್ವಕವಾದ ಗ್ರಂಥಗಳು ಹಿಂದೀ ಸಾಹಿತ್ಯವನ್ನು ಸಮೃದ್ಧಗೊಳಿಸಿವೆ. ಸಂಸ್ಕೃತ, ಅರಬಿ, ಪಾರಸಿ, ಇಂಗ್ಲಿಷ್ ಮತ್ತು ಹಿಂದೀ ಭಾಷೆಗಳಲ್ಲಿ ಅವರು ವಿದ್ವಾಂಸರು. ಅವರ ಸಾಹಿತ್ಯದಲ್ಲಿ ಈ ಎಲ್ಲ ಭಾಷೆಗಳ ಜ್ಞಾನದ ಸಮನ್ವಯವಾದುದು ಕಾಣುತ್ತದೆ. ವಿಷಯ ಸಾಮಗ್ರಿಯ ಬಾಹುಳ್ಯವು ಅದಕ್ಕೆ ಒಂದು ಸಮಗ್ರತೆಯನ್ನು ತಂದುಕೊಟ್ಟಿದೆ. ರಾಜನೀತಿ, ಸಮಾಜ, ಧರ್ಮ ಹೀಗೆ ಹಲವು ವಿಷಯಗಳನ್ನರಿತು ಅವರು ಪುಸ್ತಕಗಳನ್ನು ಬರೆದರು. ಇವು ವಿದ್ವಾಂಸರಿಗೂ ಸಾಮಾನ್ಯ ಓದುಗರಿಗೂ ಮೆಚ್ಚಿಕೆಯಾದವು. ಅವರು ಯಾವ ವಿಷಯವನ್ನು ಕುರಿತು ಬರೆದರೂ ಆಳವಾಗಿ ಯೋಚಿಸಿ ಬರೆಯುತ್ತಿದ್ದರು. ೧೯೨೦ ರಲ್ಲಿ ಅವರನ್ನು ಕಲ್ಕತ್ತೆಯಲ್ಲಿ ನಡೆದ ಹಿಂದೀ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸಿ ಗೌರವಿಸಲಾಯಿತು.

ಸಮಾಜ ಸುಧಾರಕ

ಭಗವಾನ್‌ದಾಸರು ಸಮಾಜ ಸುಧಾರಕರೂ ಆಗಿದ್ದರು. ಪ್ರಾಚೀನ ವರ್ಣ ವ್ಯವಸ್ಥೆ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಇರುವ ಸಮಾಜ ವ್ಯವಸ್ಥೆ) ಕೆಲಸಕ್ಕೆ ಸಂಬಂಧಿಸಿದ್ದು ಎಂದು ಅವರ ಸ್ಪಷ್ಟ ಅಭಿಪ್ರಾಯ. ಹುಟ್ಟಿನಿಂದ ಒಬ್ಬಾತ ಈ ವರ್ಣದವನು ಎಂದು ಹೇಳುವಂತಿಲ್ಲ.ಅವನು ಆರಿಸಿಕೊಳ್ಳುವ ವೃತ್ತಿಯಿಂದ ಹೇಳಬೇಕು ಎಂದು ಅವರ ಅಭಿಪ್ರಾಯ. ಜಾತಿ, ಉಪಜಾತಿಗಳ ಪರಸ್ಪರ ದ್ವೇಷಪೂರ್ಣ ವ್ಯವಹಾರವು ದೇಶದ ಪ್ರಗತಿಗೆ ಬಾಧಕ, ಅಡ್ಡಿ ಎಂದು ಅವರು ತಿಳಿಯುತ್ತಿದ್ದರು. ದೇಶದಲ್ಲಿ ಒಗ್ಗಟ್ಟು ಇರಬೇಕು, ಎಲ್ಲರೂ ಒಂದಾಗಿ ಬಾಳಬೇಕು. ಅಸ್ಪೃಶ್ಯತೆ, ಸಮಾಜದಲ್ಲಿ ಅನ್ಯಾಯ, ಅರ್ಥವಿಲ್ಲದ ಪದ್ಧತಿಗಳು, ಕುರುಡು ನಂಬಿಕೆಗಳು ಇವುಗಳಿಂದ ಹಿಂದೂ ಸಮಾಜಕ್ಕೆ ಹಾನಿಯಾಗಿದೆ ಎಂದು ಅವರ ಭಾವನೆ. ಇದನ್ನು ಹೋಗಲಾಡಿಸಲು ಶ್ರಮಿಸಿದರು. ಭಗವಾನ್‌ದಾಸರು ಉದಾರವಾದಿ. ತಮ್ಮ ಜಾತಿ ದೊಡ್ಡದು ಅಥವಾ ತಮ್ಮ ಧರ್ಮವೇ ಶ್ರೇಷ್ಠ ಅಥವಾ ತಮ್ಮ ದೇಶವೇ ಹಿರಿದು ಎಂಬ ಸಂಕುಚಿತ ಭಾವನೆಗಳಿಂದ ಪ್ರಪಂಚಕ್ಕೆ ಅಪಾಯ, ವಿಶ್ವಧರ್ಮ, ವಿಶ್ವಶಾಸನ, ಅಥವಾ ಮಾನವಧರ್ಮವೇ ಮನುಷ್ಯನ ಆದರ್ಶವಾಗಬಲ್ಲದು ಎಂದು ಅವರ ಅಭಿಪ್ರಾಯವಾಗಿತ್ತು.

ಅತಿಥಿ ಸತ್ಕಾರ

ಭಗವಾನ್ ದಾಸರ ಮನೆ “ಸೇವಾಶ್ರಮ” ಅತಿಥಿ ಸತ್ಕಾರಕ್ಕೆ ಹೆಸರಾದುದು. ಅದೊಂದು ಅದ್ವಿತೀಯ ಅತಿಥಿ ಶಾಲೆಯಾಗಿತ್ತು. ಭಾರತದ ಅಥವಾ ವಿದೇಶಗಳಿಂದ ರಾಷ್ಟ್ರೀಯ ಖ್ಯಾತಿಯವರು ಕಾಶಿಗೆ ಯಾರೇ ಬರಲಿ ಅವರಿಗೆ ಸೇವಾಶ್ರಮದಲ್ಲಿ ಆತಿಥ್ಯ ಕಾದಿರುತ್ತಿತ್ತು. ಪ್ರತಿದಿನ ವಿದೇಶಗಳಿಂದ ಬಂದ ಅತಿಥಿಗಳು ಇದ್ದೇ ಇರುತ್ತಿದ್ದರು.

ಭಗವಾನ್‌ದಾಸರ ವ್ಯಾಪಕ ಪಾಂಡಿತ್ಯ, ವಿಚಾರ ಪ್ರಬೋಧಕ ವಿಪುಲ ಸಾಹಿತ್ಯವನ್ನು ಮೆಚ್ಚಿ ಕಾಶಿಯ ಹಿಂದೂ ವಿಶ್ವವಿದ್ಯಾಲಯವು ೧೯೨೯ರಲ್ಲಿ, ಅಲಹಾಬಾದ್ ವಿಶ್ವವಿದ್ಯಾನಿಲಯವು ೧೯೩೭ ರಲ್ಲಿ ಅವರಿಗೆ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್) ಪದವಿಯನ್ನಿತ್ತು ಗೌರವಿಸಿದವು.

ಭಗವಾನ್‌ದಾಸರ ಅಪೂರ್ವ ಸಮಾಜಸೇವೆ, ನಿಷ್ಪಕ್ಷ ಮತ್ತು ನಿರ್ಭೀತ ವಿಚಾರ, ತ್ಯಾಗ, ವಿದ್ವತ್ತುಗಳನ್ನು ಮೆಚ್ಚಿ, ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ರಾಜೇಂದ್ರಪ್ರಸಾದರು ಅವರಿಗೆ ಭಾರತದ ಅತ್ಯಚ್ಛ ಪದವಿಯಾದ “ಭಾರತ ರತ್ನ” ಪದವಿಯನ್ನಿತ್ತು ಸನ್ಮಾನಿಸಿದರು.

ಭಗವಾನ್‌ದಾಸರ ವ್ಯಕ್ತಿತ್ವವೇ ವಿರೋಧಗಳ ಸಮನ್ವಯದ್ದು. ಅವರು ಒಂದು ಕಡೆ ಪುರಾತನ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಪರಮ ಸಮರ್ಥಕರು. ಇನ್ನೊಂದು ಕಡೆ ಹೊಸ ವೈಜ್ಞಾನಿಕ ದೃಷ್ಟಿಯ ಪರಮ ಅನುಮೋದಕರು. ಪರಂಪರಾವಾದಿಗಳಾಗಿದ್ದರೂ ಪ್ರಗತಿವಾದಿ, ಶಾಸ್ತ್ರಾನುಗಾಮಿಗಳಾಗಿದ್ದರೂ ಅಂಧ ವಿಶ್ವಾಸ, ಆಡಂಬರದ ವಿರೋಧಿ. ಭೇದಗಳಲ್ಲಿ ಅಭೇಧ, ಅನೇಕತೆಗಳಲ್ಲಿ ಏಕತೆ, ವಿರೋಧಗಳಲ್ಲಿ ಸಮನ್ವಯ, ಅಸಂಗತಿಗಳಲ್ಲಿ ಸಂಗತಿ, ತೊಡಕುಗಳಲ್ಲಿ ವಿಂಗಡಣೆ, ಸಮಸ್ಯೆಗಳಲ್ಲಿ ಸಮಾಧಾನ, ಇಂತು ಅವರ ವ್ಯಕ್ತಿತ್ವ ಅಪೂರ್ವವಾದದ್ದು.

ನಿಧನ

ಭಗವಾನ್‌ದಾಸರು ಸರಸ್ವತಿಯ ಉಪಾಸನೆ, ದೇಶ ಸೇವೆ, ಸಮಾಜ ಸೇವೆ, ಸಾಹಿತ್ಯ ಸೇವೆ, ಮಾನವ ಹಿತ, ಮತ್ತು ವಿಶ್ವಕಲ್ಯಾಣದ ಮಾರ್ಗದಲ್ಲಿ ತಮ್ಮ ಅಪೂರ್ವ ಪ್ರತಿಭೆಯಿಂದ ಸೇವೆ ಸಲ್ಲಿಸುತ್ತ ಎಂಬತ್ತೊಂಬತ್ತು ವರ್ಷ ತುಂಬು ಬಾಳಿ ಬದುಕಿ ೧೯೫೮ ಡಿಸೆಂಬರ್ ೧೮ ರಂದು.