‘ಇಳಿದು ಬಾ ತಾಯಿ’ ಹಾಡನ್ನು ಕೇಳಿದ್ದೀರಾ?

ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ
ಹರಿಯ ಅಡಿಯಿಂದ,
ನುಸುಳಿ ಬಾ……..

ಈ ಹಾಡು ನೀವೆಲ್ಲಾ ಕೇಳಿಯೇ ಇರಬೇಕು. ಇದರ ಹೆಸರು ‘ಗಂಗಾವತರಣ’ ಎಂದು. ಇದನ್ನು ಬರೆದವರು ಕನ್ನಡದ ಹಿರಿಯ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು. ಗಂಗಾವತರಣ ಎಂದರೆ ಗಂಗೆ ಇಳಿಯುವುದು ಎಂದು. ಗಂಗೆ ಮೊದಲು ದೇವಲೋಕದಲ್ಲಿ ಇದ್ದವಳು. ಅವಳು ಭೂಮಿಗೆ ಬಂದಳು. ನಮ್ಮ ದೇಶ ಭಾರತಕ್ಕೆ ಇಳಿದು ಬಂದಳು. ಅವಳಿಂದ ಈ ದೇಶದಲ್ಲಿ ಧಾನ್ಯ ಬೆಳೆಯಿತು. ಜೀವ ಬಂತು. ಜೀವನವೂ ಬಂತು. ಜೊತೆಗೆ ಜನಕ್ಕೆಲ್ಲಲ ಒಳ್ಳೆ ಸಂಸ್ಕಥಿ ಬಂತು. ನಮ್ಮ ಪ್ರಪಂಚದಲ್ಲಿ ಗಂಗೆಯಷ್ಟು ಪವಿತ್ರವಾದದ್ದು ಇನ್ನಾವುದೂ ಇಲ್ಲ.

‘ಹಾಗಾದರೆ ಅವಳು ದೇವಲೋಕದಿಂದ ಇಲ್ಲಿಗೆ ಹೇಗೆ ಬಂದಳು’ ಎನ್ನುತ್ತೀರಲ್ಲವೇ? ಅದೊಂದು ದೊಡ್ಡ ಕಥೆ. ಒಳ್ಳೆಯ ಕಥೆ.

ಸಗರ ಯಾರಮ್ಮಾ?’

ಕೋಸಲ ದೇಶ ಎಂಬ ರಾಜ್ಯ. ಅಯೋಧ್ಯೆ ಅದರ ರಾಜಧಾನಿ. ಅಲ್ಲೊಬ್ಬ ರಾಜ. ಭಗೀರಥ ಎಂದು ಅವನ ಹೆಸರು. ಹದಿನಾರೇ ವರ್ಷ ಅವನಿಗೆ. ಅವನಿನ್ನೂ ಸಣ್ಣ ಮಗುವಾಗಿದ್ದಾಗಲೇ ಅವನ ತಂದೆ ಕಾಲವಾಗಿದ್ದ. ಹಾಗಾಗಿ ಅವನ ತಾಯಿಯೇ ಅವನನ್ನು ಸಾಕಿದ್ದಳು. ವಿದ್ಯೆ ಬುದ್ಧಿ ಕಲಿಸಿದ್ದಳು. ಒಳ್ಳೆ ರಾಜನಾಗಲು ಬೇಕಾದ ಎಲ್ಲ ಶಿಕ್ಷಣ ಕೊಟ್ಟಿದ್ದಳು.

ಭಗೀರಥನೂ ಬುದ್ಧಿವಂತ. ತಾಯಿಯನ್ನು ಕಂಡರೆ ತುಂಬಾ ಪ್ರೀತಿ, ಭಕ್ತಿ. ವಿದ್ಯೆಯ ಜೊತೆಗೆ ಗುಣವನ್ನೂ ಕಲಿತ. ಮನುಷ್ಯ ಬದುಕುವುದು ತನಗಾಗಲ್ಲ, ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಲೆಂದೇ ಮನುಷ್ಯ ಬದುಕಬೇಕು ಎಂಬುದನ್ನು ಅರ್ಥ ಮಾಡಿಕೊಂಡಿದ್ದ.

ಅವನಿಗೆ ಹದಿನಾರು ವರ್ಷ ಆಯ್ತು. ತಾಯಿ ಮಗನಿಗೆ ರೂಪವತಿಯೂ, ಗುಣವತಿಯೂ ಆದ ರಾಜಕುಮಾರಿಯನ್ನು ತಂದು ಮದುವೆ ಮಾಡಿದಳು. ಅನಂತರ ಭಗೀರಥ ರಾಜನಾದ. ತಾಯಿ ಒಳ್ಳೆಯ ದಾರಿ ತೋರಿಸುವಳು; ವಿವೇಕಿಗಳಾದ ಮಂತ್ರಿಗಳು ಸರಿಯಾದ ಸಲಹೆಗಳನ್ನು ಕೊಡುವರು; ಇವರ ಸಹಾಯ ಪಡೆದು ತನ್ನ ವಿವೇಕದಿಂದ ಸಮರ್ಥನಾಗಿ ರಾಜ್ಯ ಆಳುತ್ತ ಇದ್ದ.

ಒಂದು ದಿನ ರಜನು ರಾಜಸಭೆಗೆ ಬಂದ.  ಬರುತ್ತಿದ್ದಂತೆ ಸಭೆಯಲ್ಲಿದ್ದ ಹೊಗಳುಭಟರು ಎತ್ತರದ ಸ್ವರದಲ್ಲಿ ಜಯಘೋಷ ಮಾಡಿದರು : “ಕೋಸಲ ಸಾರ್ವಭೌಮರಿಗೆ ಪರಾಖ್‌! ಸಗರ ವಂಶರತ್ನ ಭಗೀರಥ ಮಹಾರಾಜರಿಗೆ ಪರಾಕ್‌! ಧರ್ಮದುರಂಧರ ದಿಲೀಪರಾಜರ ಕುವರರಿಗೆ ಪರಾಕ್‌ !”

ರಾಜಸಭೆಯ ಕೆಲಸಗಳೆಲ್ಲ ಮುಗಿದನಂತರ ರಾಜನು ಮಂತ್ರಿಯೊಂದಿಗೆ ತನ್ನ ವಾಸಸ್ಥಾನದ ಕಡೆಗೆ ತೆರಳಿದ.

ಅವನ ತಲೆಯಲ್ಲಿ ಅವನು ಕೇಳಿದ ಎರಡೇ ಹೆಸರು ನಲಿಯುತ್ತಿದ್ದವು. ಸಗರ, ದಿಲೀಪ! ದಿಲೀಪನಂತೂ ತಂದೆ. ಸಗರ ಯಾರು ? ಕುತೂಹಲ ತಡೆಯಲಾರದೆ ಮಂತ್ರಿಯನ್ನು ಕೇಳಿಯೂ ಕೇಳಿದ.

“ಮಂತ್ರಿಗಳೇ, ಈ ಸಗರ ಎಂದರೆ ಯಾರು?”

“ಪ್ರಭು, ಅವರು ನಿಮ್ಮ ಪೂರ್ವಜರು. ನೂರು ಅಶ್ವಮೇಧ ಮಾಡಿದ ಮಹಾ ಪ್ರತಾಪಿ. ಅವರಿಗೆ ಮಕ್ಕಳು ಅರವತ್ತು ಸಾವಿರ ಜನ. ಅವರ ವಂಶದಲ್ಲೇ ನೀವು ಬೆಳೆದು ಬಂದಿರುವುದು” ಎಂದುತ್ತರಿಸಿದ ಮಂತ್ರಿ.

ಪ್ರಶ್ನೆಗೆ ಉತ್ತರ ಸಿಕ್ಕಿತು. ಆದರೆ ಭಗೀರಥನಿಗೆ ಸಮಧಾನವಾಗಲಿಲ್ಲ. ಅವನ ಕುತೂಹಲ ಇನ್ನೂ ಹೆಚ್ಚಿತು. ವಿಚಾರವಂತರಿಗೆ ಪ್ರಶ್ನೆಗೆ ಮೊದಲಿನಿಂದ ಕಡೆಯವರೆಗೆ ವಿವರವಾಗಿ ಉತ್ತರ ಸಿಕ್ಕದೆ ತೃಪ್ತಿಯಾಗದಷ್ಟೇ ? ಭಗೀರಥನು ಮನೆಗೆ ಬಂದು ತಾಯಿಯನ್ನು ಕೇಳಿದ, “ಅಮ್ಮಾ, ನಮ್ಮ ಪೂರ್ವ ಜರ ಪೈಕಿ ಸಗರ ಎಂಬುವವರು ತುಂಬಾ ದೊಡ್ಡವರಂತೆ, ಹೌದೇ?”

“ಹೌದು” ಎಂದಳು ತಾಯಿ.

“ಅವರಿಗೆ ಅರವತ್ತು ಸಾವಿರ ಮಕ್ಕಳಂತೆ, ಹೌದಾ?”

“ಹೌದು”.

“ಹಾಗಾದರೆ ನಮ್ಮ ಮನೆಯಲ್ಲಿ ಇಷ್ಟೊಂದು ಕಡಿಮೆ ಜನ ಇದ್ದೇವಲ್ಲಾ, ಇದಕ್ಕೇನು ಕಾರಣ? ಅರವತ್ತು ಸಾವಿರ ಮಕ್ಕಳಿದ್ದರೆ ಅವರ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಗಳು ಇವರೆಲ್ಲ ಸೇರಿ ದೊಡ್ಡ ಗುಂಪೇ ಆಗಬೇಕಲ್ಲಾ? ನಮ್ಮಲ್ಲಾದರೋ ನಾವು ಮೂರೇ ಜನ. ಇದೇನು ಕಾರಣ?” ಎಂದು ಕೇಳಿದ.

“ಮಗೂ”, ತಾಯಿ ಹೇಳಿದಳು, “ನಾನೇ ಹೇಳಬೇಕಾಗಿದ್ದ ವಿಷಯ ಇದು. ನೀನೇ ಕೇಳಿದೆ. ಒಳ್ಳೆಯದಾಯ್ತು. ನಿನ್ನ ಪೂರ್ವಜರ ಕಥೆ ಕೇಳು, ಹೇಳ್ತೀನಿ. ಕಥೆ ಕೇಳಿದ ನಂತರ ಏನು ಮಾಡ್ತೀಯೋ  ನೋಡೋಣ!”

“ಹೇಳಮ್ಮಾ” ಎಂದ ಭಗೀರಥ.

ತಾಯಿ ಹೇಳಲಾರಂಭಿಸಿದಳು:

ಪ್ರಜೆಗಳನ್ನು ಗೋಳಾಡಿಸುವ ಮಗನೇ ಬೇಡ

“ಇದೇ ಅಯೋಧ್ಯೆಯಲ್ಲಿ ಸಗರ ಆಳುತ್ತಿದ್ದುದು.  ತುಂಬಾ ಒಳ್ಳೆಯ ದೊರೆ. ಶಕ್ತಿವಂತನೂ ಹೌದು. ಅವನ ಪರಾಕ್ರಮ ಜಗತ್ತಿಗೇ ಹೆಸರಾದುದು. ತೊಂಬತ್ತೊಂಬತ್ತು ಅಶ್ವಮೇಧಯಾಗ ಮಾಡಿದ್ದ. ಅಶ್ವಮೇಧಯಾಗ ಎಂದರೆ ಗೊತ್ತು ತಾನೇ? ಚಕ್ರವರ್ತಿ ಎನ್ನಿಸಿಕೊಳ್ಳಲು ಈ ಯಾಗ ಮಾಡುತ್ತಾರೆ.  ಈ ಯಾಗದಲ್ಲಿ ಕುದುರೆ ಮುಖ್ಯ. ಒಂದು ಒಳ್ಳೆಯ ಕುದುರೆಗೆ ಚೆನ್ನಾಗಿ ಅಲಂಕಾರ ಮಾಡಿ, ಮುಖಕ್ಕೆ ಚಿನ್ನದ ತಗಡೊಂದನ್ನು ಕಟ್ಟುತ್ತಾರೆ. ತಗಡಿನಲ್ಲಿ ‘ಇದು ಇಂತಹ ರಾಜನ ಕುದುರೆ. ಶಕ್ತಿ ಇದ್ದವರು ಇದನ್ನು ತಡೆದು ಕಟ್ಟಬಹುದು. ಇಲ್ಲದೆ ಹೋದರೆ ಕಪ್ಪಕಾಣಿಕೆ ಕೊಟ್ಟು ಮುಂದೆ ಬಿಡಬಹುದು’- ಎಂದು ಬರೆದಿರುತ್ತಾರೆ. ಯಾರಾದರೂ ರಾಜ ಕುದುರೆಯನ್ನು ಕಟ್ಟಿ ಹಾಕಿದರೆ, ಕುದುರೆಯ ಹಿಂದೆ ಬರುತ್ತಿರುವ ಸೈನ್ಯದೊಡನೆ ಯುದ್ಧ ಮಾಡಬೇಕು. ಹೀಗೆ ಒಂದು ವರ್ಷ ಕುದುರೆಯನ್ನು ಸುತ್ತಾಡಲು ಬಿಟ್ಟು ಒಂದು ವರ್ಷದ ನಂತರ ಯಾಗ ಮುಗಿಸಬೇಕು. ಅಷ್ಟರಲ್ಲಿ ಅನೇಕ ರಾಜರು ಸಾಮಂತರಾಗಿರುತ್ತಾರೆ. ಈ ರೀತಿ ಅಶ್ವಮೇಧ ಯಾಗವನ್ನು ಸಗರ ಚಕ್ರವರ್ತಿ ತೊಂಬತ್ತೊಂಬತ್ತು ಬಾರಿ ಮಾಡಿ ಪ್ರಸಿದ್ಧನಾಗಿದ್ದ. ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲ ಆನಂದದಿಂದಿದ್ದರು.

“ಸಗರನಿಗೆ ಇಬ್ಬರು ಹೆಂಡತಿಯರು. ವಿದರ್ಭ ರಾಜನ ಮಗಳು ಕೇಶಿನಿ ಮೊದನೆಯವಳು. ಎರಡನೆಯವಳು ಅರಿಷ್ಟನೇಮಿ ಎಂಬ ರಾಜನ ಮಗಳು ಸುಮತಿ”.

“ಆದರೆ ಇಷ್ಟೆಲ್ಲ ವೈಭವ, ಸುಖ ತುಂಬಿದ್ದರೂ ರಾಜನಿಗೆ ಸಮಧಾನ ಇರಲಿಲ್ಲ. ಕಾರಣ ಅವನಿಗೆ ಮಕ್ಕಳೇ ಇರಲಿಲ್ಲ. ಇದೇ ಚಿಂಥೆ ಅವನಿಗೆ. ಕೊನೆಗೆ ಜೀವನದಲ್ಲೇ ಬೇಸತ್ತು ರಾಜ್ಯಾಡಳಿತವನ್ನೆಲ್ಲಾ ಮಂತ್ರಿಗಳಿಗೆ ವಹಿಸಿಕೊಟ್ಟು ತನ್ನ ಹೆಂಡತಿಯರೊಡನೆ ಹಿಮಾಲಯಕ್ಕೆ ಹೊರಟುಹೋದ. ಹೋಗುತ್ತಿರುವಾಗ ಒಂದು ಸುಂದರವಾದ ಸ್ಥಳ ಸಿಕ್ಕಿತು. ಒಳ್ಳೆ ನೆರಳು, ಪಕ್ಕದಲ್ಲೇ ನೀರು. ಸುತ್ತಲೂ ಹಿಮಾಲಯದ ಶ್ರೇಣಿ. ಅದರ ಹೆಸರು ‘ಭೃಗುಪ್ರಸ್ರವಣ’ ಎಂದು. ಅದರ ಸೌಂದರ್ಯಕ್ಕೆ ಮನಸೋತು ಅಲ್ಲೇ ನಿಂತರು – ಮೂರೂ ಜನ. ಆಶ್ರಮವೊಂದನ್ನು ಕಟ್ಟಿಕೊಂಡರು. ಮಕ್ಕಳನ್ನು ಪಡೆಯುವ ಹಂಬಲವಿಟ್ಟುಕೊಂಡ ಸಗರ ಚಕ್ರವರ್ತಿ ಅತಿ ಕಠಿಣವಾದ ತಪಸ್ಸಿನಲ್ಲಿ ಮಗ್ನನಾದನು. ಸಮಯ ಕಳೆದಂತೆ ಅವನ ತಪಸ್ಸಿನ ತೀವ್ರತೆ ಹೆಚ್ಚಿತು. ಕಡಿಮೆ ಆಗಲಿಲ್ಲ. ಸಗರನ ಉಗ್ರ ತಪಸ್ಸಿಗೆ ಮೆಚ್ಚಿ ಭೃಗು ಋಷಿಗಳು ಪ್ರತ್ಯಕ್ಷರಾದರು. ಸಗರನೂ, ಅವನ ಪತ್ನಿಯರೂ ಅವರಿಗೆ ನಮಸ್ಕಾರ ಮಾಡಿ ‘ನ ಮಗೆ ಮಕ್ಕಳಾಗುವಂತೆ ವರ ನೀಡಿ. ವಂಶ ಮುಂದುವರಿಯುವಂತೆ ಮಾಡಿ’ ಎಂದು ಬೇಡಿಕೊಂಡರು. ಭೃಗು ಮಹರ್ಷಿಗಳು ಸಂತೃಪ್ತರಾಗಿ ‘ರಾಜಾ, ಚಿಂತಿಸಬೇಡ. ನಿನ್ನ ತಪಸ್ಸಿನಿಂದ ನಿನಗೆ ಮಕ್ಕಳಾಗುತ್ತಾರೆ. ನಿನ್ನ ಪತ್ನಿಯರಲ್ಲಿ ಒಬ್ಬಳಿಗೆ ವಂಶೋದ್ಧಾರಕನಾದ ಒಬ್ಬ ಮಗನೂ, ಇನ್ನೊಬ್ಬಳಿಗೆ ಪರಾಕ್ರಮಶಾಲಿಗಳೂ, ಕೀರ್ತಿ ಪಡೆಯುವವರೂ ಆದ ಅರವತ್ತು ಸಹಸ್ರ ಮಕ್ಕಳೂ ಹುಟ್ಟುತ್ತಾರೆ’ ಎಂದು ವರ ನೀಡಿದರು. ರಾಣಿಯರಿಗೆ ಬಹು ಸಂತೋಷ ಆಯ್ತು. ಜೊತೆಗೆ ಕುತೂಹಲ ಕಾಡಿತು. ಯಾರಿಗೆ ಯಾವ ಮಗು? ಕೊನೆಗೆ ಧೈರ್ಯದಿಂದ ಮಹರ್ಷಿಗಳನ್ನೇ ಕೇಳಿದರು. ಅವರಾದರೋ ಶಾಂತರಾಗಿ ‘ನೀವೇ ಆರಿಸಿಕೊಂಡು ಹೇಳಿ’ ಎಂದರು. ಹಿರಿಯಳಾದ ಕೇಶಿನಿ, ‘ವಂಶೋದ್ಧಾರಕನಾದ ಒಬ್ಬ ಮಗ ನನಗೆ ಸಾಕು’ ಎಂದಳು. ಕಿರಿಯ ಹೆಂಡತಿ ಸುಮತಿ, ‘ವೀರರೂ ಕೀರ್ತಿವಂತರೂ ಆದ ಬಹುಮಂದಿ ಮಕ್ಕಳ ತಾಯಿಯಾಗುವುದೇ ನನ್ನಾಸೆ’ ಎಂದಳು. ಮಹರ್ಷಿಗಳು ನಸುನಗುತ್ತಾ ‘ತಥಾಸ್ತು’ ಎಂದು ಹೇಳಿ ಅಲ್ಲಿಂದ ತೆರಳಿದರು. ಸಗರನೂ ಆನಂದದಿಂದ ರಾಜಧಾನಿಗೆ ಹಿಂತಿರುಗಿದನು.

“ಸ್ವಲ್ಪ ಕಾಲ ಕಳೆಯಿತು. ಇಬ್ಬರೂ ರಾಣಿಯರೂ ಗರ್ಭವತಿಯರಾದರು. ಒಂಭತ್ತು ತಿಂಗಳಾದೊಡನೆ ಕೇಶಿನಿಗೊಂದು ಗಂಡುಮಗು ಆಯ್ತು. ರಾಜನಿಗಷ್ಟೆ ಅಲ್ಲ, ರಾಜ್ಯಕ್ಕೆಲ್ಲ ಆನಂದವಾಯ್ತು.  ರಾಜಕುಮಾರನ ಜನನ ಆಯ್ತೆಂದು ಬೀದಿ ಬೀದಿಗಳಲ್ಲಿ ಸಂಭ್ರಮದಿಂದ ಉತ್ಸವ ಮಾಡಿದರು. ಮಗನಿಗೆ ಅಸಮಂಜನೆಂದು ಹೆಸರಿಟ್ಟರು. ಮಗು ಬೆಳೆಯತೊಡಗಿತು. ಮುದ್ದಾದ ಮಗು. ಜೊತೆಗೆ ತುಂಬಾ ಚೂಟಿ. ಎಲ್ಲರ ಮುದ್ದಿನ ಮಗನಾಗಿ ನೆಲವನ್ನೇ ಸೋಕದೆ ಅಸಮಂಜ ಬೆಳೆಯುತ್ತಿದ್ದ.

“ಎಷ್ಟೋ ದಿನಗಳ ನಂತರ ಸುಮತಿಗೂ ಮಕ್ಕಳಾದವು. ಅವಳಿಗೆ ಆನಂದವೋ ಆನಂದ. ಅವಳ ಆಸೆಯೂ ಪೂರ್ತಿಯಾಗಿತ್ತು. ಅರವತ್ತು ಸಾವಿರ ಮಕ್ಕಳು ಹುಟ್ಟಿದ್ದರು. ಪ್ರತಿಯೊಂದು ಮಗುವಿಗೂ ಬೇರೆ ಬೇರೆ ದಾದಿಯರನ್ನಿಟ್ಟು ಸಾಕುವ ವ್ಯವಸ್ಥೆ ಮಾಡಲಾಯ್ತು.

‘ಈಗ ಅರಮನೆಯಲ್ಲಿ ಗದ್ದಲವೋ ಗದ್ದಲ. ಎರಡು ಮಕ್ಕಳಿದ್ದ ಮನೆಯಲ್ಲೇ ಗಲಾಟೆ ತಡೆಯಲಸಾಧ್ಯ. ಇನ್ನು ಅರವತ್ತು ಸಾವಿರ ಮಕ್ಕಳು ಒಂದೇ ಬಾರಿ ಗಲಾಟೆ ಮಾಡುತ್ತಿದ್ದರೆ! ಆದರೆ ಆ ಗಲಾಟೆಯಲ್ಲೇ ಆನಂದ. ಮಕ್ಕಳು ಕ್ರಮವಾಗಿ ಬೆಳೆದರು. ಸುಂದರರಾದರು. ಬಲಿಷ್ಠರೂ ಆದರು.

“ಆದರೆ ಮೊದಲ ಮಗ ಅಸಮಂಜ ಮಾತ್ರ ಏಕೋ ವಕ್ರವಾಗಿ ವರ್ತಿಸಲಾರಂಭಿಸಿದ. ಚಕ್ರವರ್ತಿಯ ಮೊದಲ ಮಗ. ಎಲ್ಲರ ಮುದ್ದಿನ ಕಣ್ಮಣಿ. ಈ ಅತಿ ಮುದ್ದಿನ ಪರಿಣಾಮ ಆಗಬೇಕಾದುದೇ ಆಯ್ತು. ತುಂಬಾ ಹಟಮಾರಿಯಾದ. ಕಂಡವರ ಮೇಲೆಲ್ಲಾ ದರ್ಪ ತೋರಿಸಲಾರಂಭಿಸಿದ. ಜೊತೆಯಲ್ಲಿ ಮಕ್ಕಳು ಆಡುತ್ತಿದ್ದರೆ ಅವರನ್ನು ರಸ್ತೆಯಲ್ಲಿ ದರದರನೆ ಎಳೆದು ಗಾಯಗೊಳಿಸುತ್ತಿದ್ದ. ಮಕ್ಕಳು ರಾಜಕುಮಾರನ ಮೇಲೆ ಕೈಮಾಡಲಾಗದೆ ಅಳುತ್ತಿದ್ದರೆ ಅವನಿಗೆ ವಿಕೃತ ಆನಂದ. ಅವನ ಚೇಷ್ಟೆ ಅಲ್ಲಿಗೇ ನಿಲ್ಲಲಿಲ್ಲ. ಅವರನ್ನು ಎಳೆದೆಳೆದು ಸರಯೂ ನದಿಗೆ ಕೊಂಡೊಯ್ದು ಮುಳುಗಿಸುತ್ತಿದ್ದ. ಈಜು ಬಾರದ ಮಕ್ಕಳು ಕೈಕಾಲು ಬಡಿದು ಕಿರುಚುತ್ತಾ ಒದ್ದಾಡಿ ಪ್ರಾಣ ಬಿಟ್ಟರೆ, ಇವನು ದಡದಲ್ಲಿ ನಿಂತು ಕೇಕೆ ಹಾಕಿ ನಗುತ್ತಿದ್ದ. ಇಂತಹ ಕುಕೃತ್ಯ ದಿನದಿನಕ್ಕೆ ಹೆಚ್ಚಿತೇ ವಿನಹ ಕಡಿಮೆ ಆಗಲಿಲ್ಲ.

“ಜನ ಪ್ರಾರಂಭದಲ್ಲಿ ಭಯದಿಂದ, ಸಂಕೋಚದಿಂದ ಸುಮ್ಮ ನಿದ್ದರು. ಆದರೆ ಅಸಮಂಜನ ಹಾವಳಿ ವಿಪರೀತವಾದಂತೆ ಎಲ್ಲ ಒಟ್ಟಿಗೆ ರಾಜನಾದ ಸಗರನ ಬಳಿ ಹೋದರು. ‘ಸ್ವಾಮಿ, ನಿಮ್ಮ ಮಗನನ್ನು ಹೀಗೆ ಬಿಟ್ಟರೆ ನಮ್ಮ ಊರಲ್ಲಿ, ಯಾರ ಮನೆಯಲ್ಲೂ ಒಂದು ಮಗುವೂ ಉಳಿಯುವುದಿಲ್ಲ. ದಯವಿಟ್ಟು, ನಮ್ಮನ್ನು ರಕ್ಷಿಸಿ’ ಎಂದು ಗೋಳಾಡಿದರು.

“ಸಗರ ರಾಜನು ಪ್ರಜೆಗಳ ದುಃಖವನ್ನು ಕೇಳಿದ. ಎಷ್ಟಾದರೂ ಯೋಗ್ಯರಾಜ. ಪ್ರಜೆಗಳ ಸುಖವೇ ತನ್ನ ಸುಖ  ಎಂದು ನಡೆಯುವವನು. ಹೀಗಿರುವಾಗ ತನ್ನ ಮಗನೇ ಪ್ರಜೆಗಳ ಸುಖಕ್ಕೆ ವಿರುದ್ಧವಾದರೆ? ಪ್ರಜೆಗಳನ್ನು ಗೋಳಾಡಿಸುವ ಮಗನೇ ಬೇಡ ಎಂದು, ಅವನನ್ನು ಕರೆಸಿ ‘ಅಸಮಂಜ, ಪ್ರಜಾದ್ರೋಹಿ ನೀನು. ಕೂಡಲೇ ನನ್ನ ರಾಜ್ಯವನ್ನು ಬಿಟ್ಟು ತೊಲಗು!’ ಎಂದು ನಿರ್ದಾಕ್ಷಿಣ್ಯವಾಗಿ ಆಜ್ಞಾಪಿಸಿದನು.

“ಅಸಮಂಜನೂ ಸಂತೋಷದಿಂದ ತನಗಾದ ಶಿಕ್ಷೆಯನ್ನು ಸ್ವೀಕರಿಸಿದನು. ಆಂತರಿಕ ಯೋಗಿಯಾಗಿದ್ದ ಅವನು ತನ್ನ ದೇಹದಿಂದ ಮುಕ್ತನಾಗಲು ಈ ಕೆಟ್ಟ ಕಾರ್ಯದಲ್ಲಿ ತೊಡಗಿದ್ದನಂತೆ. ತಂದೆಯೇ ದೇಶದಿಂದ ಹೊರದೂಡಿದಾಗ ಅವನಿಗೆ ಆನಂದವೇ ಆಯಿತು. ಹೋಗುವ ಮುನ್ನ ತಾನು ಕೊಂದಿದ್ದ ಮಕ್ಕಳನ್ನೆಲ್ಲ ತನ್ನ ಯೋಗಶಕ್ತಿಯಿಂದ ಬದುಕಿಸಿ, ಅವರನ್ನು ಮನೆಗಳಿಗೆ ಕಳುಹಿಸಿದ ಎಂದು ಕಥೆ ಹೇಳುತ್ತದೆ. ನಂತರ ಯೋಗಾಭ್ಯಾಸ ಮಾಡುತ್ತಾ ತನ್ನ ದೇಹವನ್ನು ಕಳಚಿಕೊಂಡು ಸದ್ಗತಿಯನ್ನು ಪಡೆದನು. ಇಷ್ಟಾಗುವಾಗ ಅಸಮಂಜನಿಗೊಬ್ಬ ಮಗನಿದ್ದನು. ಅವನ ಹೆಸರು ಅಂಶುಮಂತ.

ಕುದುರೆಯ ಹಿಂದೆಸಾವಿನ ಮನೆಗೆ

“ಸಗರನಿಗೆ ಈಗ ಮತ್ತೊಂದು ಯೋಚನೆ ಬಂತು. ಮಕ್ಕಳೆ ಬೆಳೆದು ದೊಡ್ಡವರಾದರು. ಮಾಡಲು ಏನೂ ಕೆಲಸವಿಲ್ಲದೆ ನಿಷ್ಕಾರಣ ಗಲಭೆಗಳಿಗೆ ಕಾರಣರಾಗಬಹುದ. ಮೊದಲನೇ ಮಗ ಕೆಟ್ಟುದು ಹಾಗೇ ಅಲ್ಲವೇ? ಅದಕ್ಕಾಗಿ ಎಲ್ಲ ಮಕ್ಕಳಿಗೂ ಯೋಗ್ಯ ಕೆಲಸ ಕೊಡಲು ಆಲೋಚನೆ ಮಾಡಿದನು. ಅವನ ಮನಸ್ಸಿನ ಆಸೆಯೂ ಒಂದಿತ್ತು. ನೂರು ಅಶ್ವಮೇಧಯಾಗ ಮಾಡಿದವರಿಗೆ ಇಂದ್ರಪದವಿ ಸಿಕ್ಕುವುದಂತೆ. ತಾನಂತೂ ತೊಂಬತ್ತೊಂಬತ್ತು ಯಾಗ ಮಾಡಿದ್ದಾಗಿದೆ. ಇಷ್ಟೊಂದು ಮಕ್ಕಳ ಬೆಂಬಲದಿಂದ ಇನ್ನೊಂದು ಯಾಗ ಮಾಡಿದರೆ ಇಂದ್ರಪದವಿ ಎಂದು ಲೆಕ್ಕಹಾಕಿದನು ರಾಜ”.

“ಸಗರ ರಾಜನ ಮಂತ್ರಿಗಳಿಗೆ ಈ ಸಲಹೆ ಒಪ್ಪಿಗೆಯಾಯ್ತು. ನೂರನೆಯ ಅಶ್ವಮೇಧ ಯಾಗ ಪ್ರಾರಂಭವಾಯ್ತು. ಕುದುರೆಯನ್ನು ಪೂಜಿಸಿ ಓಡಾಡಲು ಬಿಟ್ಟರು. ಅದರ ಹಿಂದೆ ಸಗರನ ಸಮಸ್ತ ಸೈನ್ಯವೂ ಹೊರಟಿತು ಅಶ್ವರಕ್ಷಣೆಗೆ. ಆ ಸೈನ್ಯಕ್ಕೆ ಪ್ರಮುಖನಾಗಿ ಎಲ್ಲರ ಪ್ರೀತಿಗೆ ಪಾತ್ರನಾದ ಸಗರನ ಮೊಮ್ಮಗ ಅಂಶುಮಂತನನ್ನು ನಿಯಮಿಸಿದ್ದಾಯಿತು. ಹೀಗೆ ಯಜ್ಞದ ಕುದುರೆ, ಅದರ ಹಿಂದೆ ಅಂಶುಮಂತನ ಸೈನ್ಯ ರಾಜ್ಯದಿಉಂದ ರಾಜ್ಯಕ್ಕೆ ನಡೆಯಿತು. ಅವರನ್ನು ತಡೆಯುವ ಎದೆಗಾರಿಕೆ ಯಾರಿಗೂ ಇರಲಿಲ್ಲ”.

“ಇತ್ತ ಸ್ವರ್ಗದಲ್ಲಿ ದೇವೇಂದ್ರನಿಗೆ ಭಯದಿಂದ ಮೈನಡುಗಿತು. ಅಶ್ವಮೇಧಯಾಗವನ್ನು ಮಾಡಿದವನು ಇಂದ್ರನಾಗುತ್ತಾನೆ. ತಾನು ಸ್ಥಾನ ಬಿಡಬೇಕಾಗುತ್ತದೆ. ಈ ಚಿಂತೆಯಿಂದ ಅವನಿಗೆ ಯಾವುದರಲ್ಲೂ ಆಸಕ್ತಿ ಇಲ್ಲದಂತಾಯ್ತು. ಅಧಿಕಾರಕ್ಕೆ ಆಶಿಸುವವರ ಗತಿ ಯಾವಾಗಲೂ ಹಾಗೆಯೇ! ಅಧಿಕಾರ ಸಿಕ್ಕುವ ತನಕ ಒಂದು ರೀತಿಯ ತವಕ. ಸಿಕ್ಕಿದ ನಂತರ ಅದನ್ನು ಉಳಿಸಿಕೊಳ್ಳುವ ತವಕ. ತನ್ನ ಅಧಿಕಾರ ಹೋಗಬಾರದೆಂದು ಅವನೊಂದು ಉಪಾಯ ಮಾಡಿದ”.

“ಅಶ್ವಮೇಧ ಯಾಗದಲ್ಲಿ ಕುದುರಯೆ ಮುಖ್ಯತಾನೆ? ಅದು ಸಂಚಾರ ಪೂರೈಸಿ ವಾಪಸಾದ ನಂತರವೇ ಯಾಗ ಮುಗಿಯುವುದು. ಆ ಕುದುರೆಯೇ ಇಲ್ಲವಾದರೆ ಯಾಗ ಮುಗಿಯುವುದು ಹೇಗೆ? ಅದಕ್ಕಾಗಿ ಇಂದ್ರ ಯಾರಿಗೂ ಕಾಣದಂತೆ ಬಂದು ಆ ಯಾಗದ ಕುದುರೆಯನ್ನು ಕದ್ದು ಅದನ್ನು ದೂರ ಸಾಗಿಸಿದ. ಪಾತಾಳ ಲೋಕಕ್ಕೆ ಅದನ್ನು ಕೊಂಡುಹೋದ. ಅಲ್ಲಿ ಕಪಿಲರೆಂಬ ಮಹಾ ಋಷಿಗಳು ತಪಸ್ಸು ಮಾಡುತ್ತಿದ್ದರು. ಇಂದ್ರ ಯಾಗಾದ ಕುದುರೆಯನ್ನು ಅವರ ಆಶ್ರಮದಲ್ಲಿ ಕಟ್ಟಿಹಾಕಿದ”.

“ಕುದುರೆ ಕಾಣದಾದ ಕೂಡಲೆ ಅಂಶುಮಂತನ ಸೈನ್ಯದಲ್ಲಿ ಗಲಿಬಿಲಿ ಪ್ರಾರಂಭವಾಯ್ತು. ಎಲ್ಲರೂ ಕಂಡ ಕಂಡಲ್ಲೆಲ್ಲಾ ಹುಡುಕಿದರು. ಕುದುರೆ ಸಿಗಲೇ ಇಲ್ಲ. ಕೊನೆಗೆ ನಿರಾಶರಾಗಿ ಅಯೋಧ್ಯೆಗೆ ಹಿಂತಿರುಗಿ ಚಕ್ರವರ್ತಿಗೆ ವಿಷಯ ತಿಳಿಸಿದರು”.

“ಸಗರನಿಗೆ ಬಹು ಯೋಚನೆಯಾಯಿತು. ತನ್ನ ಅರವತ್ತು ಸಹಸ್ರ ಮಕ್ಕಳನ್ನು ಕರೆದು ‘ಎಲ್ಲಿದ್ದರೂ ಆ ಕುದುರೆಯನ್ನು ಹುಡುಕಿ ತನ್ನಿ. ಕದ್ದವನನ್ನು ಶಿಕ್ಷಿಸಿ’ ಎಂದು ಹೇಳಿ ಸೈನ್ಯ ಕೊಟ್ಟು ಕಳುಹಿಸಿದ. ಅವರೋ ತರುಣರು. ಬಲಾಢ್ಯರು ಎಂಬ ಗರ್ವ ಬೇರೆ. ಜೊತೆಗೆ ದೊಡ್ಡ ಸೈನ್ಯ. ತಂದೆಯದ ಆದೇಶವೂ ಸಿಕ್ಕಿತು. ಸರಿ, ಆ ಮಹಾ ಸೈನ್ಯ ರಣಘೋಷ ಮಾಡುತ್ತಾ ದಿಕ್ಕುದಿಕ್ಕುಗಳಲ್ಲಿ ಕುದುರೆಯನ್ನು ಹುಡುಕಿತು. ಕಾಡು, ಗುಡ್ಡ, ಪರ್ವತ – ಯಾವುದನ್ನೂ ಬಿಡಲಿಲ್ಲ. ಆದರೂ ಕುದುರೆ ಸಿಕ್ಕಲಿಲ್ಲ”.

“ಅವರಿಗೆ ನಿರಾಸೆಗಿಂತ ಕೋಪ  ಉಕ್ಕೇರಿತು. ಭೂಮಿಯನ್ನೆಲ್ಲ ಹುಡುಕಿದರೂ ಕುದುರೆ ಕಾಣಲಿಲ್ಲ. ಸರಿ ಪಾತಾಳಕ್ಕೆ ಹೋಗಿ ನೋಡೋಣ – ಎಂದುಕೊಂಡರು. ಪಾತಾಳದ ದಾರಿ ಗೊತ್ತಿಲ್ಲ. ಆದರೇನಂತೆ, ದಾರಿ ಮಾಡೋಣ ಎಂದುಕೊಂಡು ಭೂಮಿಯನ್ನು ಅಗೆಯಲಾರಂಭಿಸಿದರು. ಸ್ವಲ್ಪ ಸಮಯದಲ್ಲಿ ಅಲ್ಲೊಂದು ದೊಡ್ಡ ಬಿಲ ಆಯ್ತು. ಅವರೆಲ್ಲ ಅದರಲ್ಲಿ ನುಗ್ಗಿ ಪಾತಾಳ ಸೇರಿದರು. ಅಲ್ಲೂ ಆರ್ಭಟಮಾಡುತ್ತಾ, ಹುಡುಕಾಡಿದರು. ಕಪಿಲ ಮಹರ್ಷಿಗಳ ಆಶ್ರಮಕ್ಕೂ ಬಂದರು. ಅಲ್ಲಿದ್ದ ಗಿಡ, ಬಳ್ಳಿಗಳನ್ನೆಲ್ಲ ಕಿತ್ತು ಹಾಕಿದರು. ಅವರಿಗೆ ಯಾರ ಭಯವೂ ಇರಲಿಲ್ಲ. ಕಂಡದ್ದನ್ನೆಲ್ಲ ಕತ್ತರಿಸುವಂತಹ ಕೋಪವೂ ತುಂಬಿತ್ತು. ಈ ಸ್ಥಿತಿಯಲ್ಲೇ ಮುಂದುವರಿದ ಅವರಿಗೆ ಧ್ಯಾನಮಗ್ನರಾಗಿದ್ದ ಕಪಿಲ ಮಹರ್ಷಿಗಳು ಕಂಡರು. ಅಲ್ಲೇ ಕುದುರೆಯೂ ಹುಲ್ಲು ತಿನ್ನುತ್ತಿತ್ತು. ಕುದುರೆಯನ್ನು ಕಂಡು ‘ಇವನೇ ಕುದುರೆ ಕದ್ದಿರುವವನು’ ಎನ್ನಿಸಿ ಕೋಪ ಬಂದಿತು. ಕುದುರೆಯನ್ನು ಕದ್ದು ತಪಸ್ಸು ಮಾಡುವ ನಟನೆ ಮಾಡುತ್ತಿದ್ದಾನೆ ಎನ್ನಿಸಿತು. ಆದ್ದರಿಂದ ಎಲ್ಲರೂ ‘ಕಳ್ಳನನ್ನು ಹಿಡಿಯಿರಿ, ಹೊಡೆಯಿರಿ’ ಎಂದು ಗರ್ಜಿಸುತ್ತಾ ಅವರೆಡೆಗೆ ನುಗ್ಗಿದರು. ಮಹರ್ಷಿಗಳ ತಪೋಭಂಗವಾಯಿತು. ನನ್ನ ತಪಸ್ಸಿಗೆ ಅಡ್ಡಿ ಬಂದವರಾರು ಎಂದು ಕೋಪದಿಂದ ಅವರನ್ನು ದುರದುರನೆ ನೋಡಿದರು. ಅವರ ಕಣ್ಣಿನಿಂದ ಕೋಪದ ಉರಿ ಹೊರಚಿಮ್ಮಿತು. ಅರವತ್ತು ಸಾವಿರ ಸೋದರರೂ ಆ ಉರಿಯಲ್ಲಿ ಸುಟ್ಟುಹೋದರು. ಅವರಿದ್ದ ಜಾಗದಲ್ಲಿ ದೊಡ್ಡದೊಂದು ಬೂದಿಯ ರಾಶಿ ಮಾತ್ರ ಉಳಿದಿತ್ತು. ಕುದುರೆಯೂ ಆಶ್ರಮದಲ್ಲೇ ಉಳಿಯಿತುಇ”.

ವಂಶಕ್ಕೆ ಬಂದ ಹೊಣೆ

“ಅನೇಕ ದಿನಗಳು ಕಳೆದರೂ ಮಕ್ಕಳು ಹಿಂದಿರುಗಲಿಲ್ಲ. ಸಗರ ಚಕ್ರವರ್ತಿಗೆ ಮತ್ತೆ ಚಿಂತೆ ಕವಿಯಿತು. ತಾನು ಯಜ್ಞ ದೀಕ್ಷೆ ವಹಿಸಿದ್ದಾನೆ. ಆದ್ದರಿಂದ ತಾನು ಕುದುರೆಯನ್ನು ಹುಡುಕಿ ಹೊರಡುವಂತಿಲ್ಲ. ಕೊನೆಗೆ ಮೊಮ್ಮಗನಾದ ಅಂಶುಮಂತನನ್ನೇ ಕರೆದು, ‘ಮಗೂ , ನಿನ್ನ ಚಿಕ್ಕಪ್ಪಂದಿರು ಅರವತ್ತು ಸಾವಿರ ಜನರೂ ಕುದುರೆ ಹುಡುಕಲು ಹೋದರು. ಇಷ್ಟು ದಿನವಾದರೂ ಹಿಂತಿರುಗಿ ಬರಲಿಲ್ಲ. ನೀನಾದರೂ ಹೋಗಿ, ಅವರನ್ನೂ ಕುದುರೆಯನ್ನೂ ಹುಡುಕಿ ಬಾ. ಎಚ್ಚರಿಕೆ, ವಿವೇಕದಿಂದ ವರ್ತಿಸಿ ಯಶಸ್ವಿಯಾಗಿ ಹಿಂತಿರುಗು’ ಎಂದು ಆಶೀರ್ವದಿಸಿ ಕಳುಹಿಸಿಕೊಟ್ಟನು”.

“ಅಂಶುಮಂತನು ಅಜ್ಜನ ಅಪ್ಪಣೆಯಂತೆ ಸೈನ್ಯ ಸಮೇತ ಹೊರಟನು. ಭೂಮಿಯನ್ನೆಲ್ಲ ಸುತ್ತಿದರೂ ಕುದುರೆ ಕಾಣಲಿಲ್ಲ. ಕೊನೆಗೆ ಸಗರಪುತ್ರರು ನಿರ್ಮಿಸಿದ್ದ ಬಿಲದ ಬಳಿ ಬಂದು ಅದರೊಳಗೆ ನಡೆದು ಪಾತಾಳ ಸೇರಿದನು. ಅಲ್ಲಿ ಓಡಾಡುತ್ತಿರುವಾಗ ಕಪಿಲ ಮಹರ್ಷಿಯ ಆಶ್ರಮವೂ ಅಲ್ಲಿ ಪರ್ವತದಂತೆ ಬಿದ್ದಿದ್ದ ಬೂದಿಯ ರಾಶಿಯೂ ಕಾಣಿಸಿತು. ದೂರದಲ್ಲಿ ಕುದುರೆ ಮೇಯುತ್ತಿತ್ತು. ಮುಂದೆ ದಾರಿ ಇರಲಿಲ್ಲ.

“ಆಗ ಅವನಿಗೆ ಸ್ವಲ್ಪ ಭಯವಾಯ್ತು. ಮುಂದೆ ದಾರಿಯೂ ಇಲ್ಲ. ಇಷ್ಟು ದೊಡ್ಡ ಬೂದಿಯ ರಾಶಿ ಇದೆ. ಇದು ಹೇಗಾಯ್ತು? ಎಂದು ಚಿಂತಿಸಲಾರಂಭಿಸಿದ. ಆಗ ಅಶರೀರವಾಣಿಯೊಂದು , “ಮಗೂ, ಇದು ನಿನ್ನ ಚಿಕ್ಕಪ್ಪಂದಿರ ಬೂದಿಯ ರಾಶಿ. ಅವರು ಕಪಿಲ ಋಷಿಗಳ ಕೋಪದಿಂದ ನಾಶವಾದರು’ ಎಂದು ಹೇಳಿತು. ಇದನ್ನು ಕೇಳಿದ ಅಂಶುಮಂತನಿಗೆ ಅತ್ಯಂತ ವ್ಯಸನವಾಯ್ತು. ಸತ್ತವರ ಆತ್ಮಗಳಿಗೆ ಒಳ್ಳೆಯದಾಗಲಿ ಎನ್ನುವುದಕ್ಕೋಸ್ಕರ ಸಂಸ್ಕಾರ ಮಾಡಬೇಕೆಂದು ನೀರಿಗಾಗಿ ಅಲ್ಲೆಲ್ಲ ಹುಡುಕಾಡಿದರೂ ನೀರು ಸಿಕ್ಕಲಿಲ್ಲ. ಮುಂದೇನು ಗತಿ ಎಂದು ಚಿಂತೆಯಿಂದ ಯೋಚಿಸುತ್ತ ಇರುವಾಗ ಆಕಾಶದಲ್ಲಿ ಗರುಡನು ಕಾಣಿಸಿದನು. ಅಂಶುಮಂತನನ್ನು ಕುರಿತು ‘ರಾಜಪುತ್ರ, ಚಿಂತಿಸಬೇಡ. ನಿನ್ನ ಚಿಕ್ಕಪ್ಪಂದಿರು ಮೃತರಾದುದು ಲೋಕಹಿತಾರ್ಥವಾಗಿಯೆ. ಋಷಿ ಶಾಪದಿಂದ ಅವರಿಗೀ ಗತಿ ಬಂದಿದೆ. ಸಾಮಾನ್ಯ ಜಲಕ್ರಿಯೆಗಳಿಂದ ಅವರಿಗೆ ಸದ್ಗತಿ ದೊರಕದು. ದೇವಲೋಕದ ಗಂಗೆಯನ್ನು ತಂದು ಈ ಬೂದಿಯ ರಾಶಿಯ ಮೇಲೆ ಹರಿಸಿದಾಗ ಮಾತ್ರ ಅವರಿಗೆ ಸದ್ಗತಿ ಲಭಿಸೀತು. ಆದರೂ, ಮೊದಲು ಕುದುರೆಯನ್ನು ಕೊಂಡೊಯ್ದು ನಿನ್ನ ತಾತನಿಗೆ ಕೊಡು’ ಎಂದನು.

ಮಿಂಚಿನ ಪ್ರವಾಹದಂತೆ ಗಂಗೆ ಇಳಿದು ಬಂದಳು.

“ಅಂಶುಮಂತನಿಗೂ ಸದ್ಯಕ್ಕುಳಿದುದು ಅದೊಂದೇ ಮಾರ್ಗ. ಕುದುರೆಯನ್ನು ಹಿಡಿದುಕೊಂಡು ಅಯೋಧ್ಯೆಗೆ ಹಿಂದಿರುಗಿ, ತಾತನಿಗೆ ಕುದುರೆಯನ್ನು ಒಪ್ಪಿಸಿದನು. ಸಗರನಿಗೆ ಕುದುರೆಯನ್ನು ಕಂಡು ಆನಂದವಾಯಿತಾದರೂ ತನ್ನ ಪರಾಕ್ರಮಿ ಮಕ್ಕಳೆಲ್ಲರೂ ಒಟ್ಟಿಗೇ ಮೃತರಾದುದನ್ನು ತಿಳಿದು ಅತ್ಯಂತ ದುಃಖವಾಯಿತು. ಆದರೂ, ಯಜ್ಞದೀಕ್ಷೆ ತೊಟ್ಟಿದ್ದನಾಗಿ ತನ್ನ ದುಃಖವನ್ನು ತಡೆಹಿಡಿದು ಯಾಗವನ್ನಂತೂ ಕ್ರಮವಾಗಿ ಪೂರೈಸಿದನು. ಆದರೆ ತನ್ನ ಮಕ್ಕಳಿಗೆ ಸದ್ಗತಿ ಬರುವಂತೆ ದೇವಗಂಗೆಯನ್ನು ತರುವುದು ಹೇಗೆಂಬ ಚಿಂತೆ ಅವನನ್ನು ಕಾಡುತ್ತಲೇ ಇತ್ತು. ಕೊನೆಗೆ ಹತಾಶನಾಗಿ, ರಾಜ್ಯವನ್ನು ಮೊಮ್ಮಗನಾದ ಅಂಶುಮಂತನಿಗೇ ಒಪ್ಪಿಸಿ, “ನಿನ್ನ ಚಿಕ್ಕಪ್ಪಂದಿರಿಗೆ ಸದ್ಗತಿ ಒದಗಿಸುವ ಕೆಲಸವನ್ನು ನೀನೇ ಮಾಡು”  ಎಂದು ಹೇಳಿ ತಾನು ತಪಸ್ಸು ಮಾಡಲೆಂದು ಕಾಡಿಗೆ ತೆರಳಿದನು.”

“ಅಂಶುಮಂತನು ರಾಜನಾದರೂ, ತನ್ನ ಸುಖದ ಬಗ್ಗೆ ಯೋಚಿಸಲಿಲ್ಲ. ತನ್ನ ತಾತನ ಆಜ್ಞೆಯಂತೆ ದೇವಗಂಗೆಯನ್ನು ತರುವುದು ಹೇಗೆಂದು ಚಿಂತಿಸುತ್ತಿದ್ದನು. ಆದರೂ ಆ ಕೆಲಸದಲ್ಲಿ ಯಾವ ಮಾರ್ಗವೂ ಹೊಳೆಯಿದೆ ತನ್ನ ಸಮಯದ ನಂತರ, ಮಗ ದಿಲೀಪನಿಗೆ ರಾಜ್ಯವನ್ನು ಒಪ್ಪಿಸಿ, ತನ್ನ ಮೇಲಿನ ಹೊಣೆಯನ್ನು ಅವನಿಗೊಪ್ಪಿಸಿದನು”.

ಇಷ್ಟು ಕಥೆಯನ್ನು ಹೇಳಿ, ತಾಯಿ ಮುಂದಕ್ಕೆ ಹೇಳಿದಳು :

“ದಿಲೀಪನು ರಾಜನಾದನು. ಆ ದಿಲೀಪನೆ ನಿನ್ನ ತಂದೆ. ಅವರೂ ಗಂಗೆಯನ್ನು ತರುವುದು ಹೇಗೆಂದು ಯೋಚಿಸುತ್ತಲೇ ಇದ್ದರು. ಇದರ ಜೊತೆಗೆ ಅವರಿಗೆ ಮಕ್ಕಳಿಲ್ಲದ ಚಿಂತೆಯೂ ಸೇರಿತು. ಕೊನೆಗೆ ನಮ್ಮ ಗುರುಗಳಾದ ವಸಿಷ್ಠರ ಕೃಪೆಯಿಂದ ಅವರಲ್ಲಿದ್ದ ನಂದಿನೀಧೇನುವನ್ನು ನಾವಿಬ್ಬರೂ ಪೂಜಿಸಿದೆವು. ಅದರ ಪ್ರಸಾದದಿಂದಲೇ ನಿನ್ನನ್ನು ಪಡೆದವು. ಆದರೂ ಗಂಗೆಯನ್ನು ತರಲಿಲ್ಲವಲ್ಲಾ, ತಾತಂದಿರಿಗೆ ಸದ್ಗತಿ ಕಾಣಿಸಲಿಲ್ಲವಲ್ಲಾ, ಎಂಬ ಚಿಂತೆಯಿಂದ ನೀನಿನ್ನೂ ಚಿಕ್ಕವನಗಿರುವಾಗಲೇ ಅವರು ಸ್ವರ್ಗಸ್ಥರಾದರು.”

“ಇದು ನಿನ್ನ ವಂಶದ ಕಥೆ ಮಗು. ಪ್ರಶ್ನೆಗೆ ಉತ್ತರವೂ ಹೌದು. ಇದೆಲ್ಲ ಕೇಳಿದೆಯಷ್ಟೆ? ಇನ್ನು ನೀನೇನು ಮಾಡುತ್ತೀಯೆ ನೋಡೋಣ ” – ಹೀಗೆಂದು ತಾಯಿ ತನ್ನ ಮಗನಾದ ಭಗೀರಥನಿಗೆ ಹೇಳಿ, ಅವನೇನು ಹೇಳುತ್ತಾನ ಓ ಕೇಳಲು ಕುತೂಹಲದಿಂದ ಅವನ ಕಡೆಗೇ ನೋಡುತ್ತಾ ಕುಳಿತಳು.

ಕರ್ತವ್ಯದ ಕರೆಗೆ ಓಗೊಟ್ಟು

ಭಗೀರಥನಿಗೆ ಬೇರಾವುದೋ ಲೋಕದಿಂದ ಭೂಮಿಗೆ ಎಳೆದು ತಂದಂತಾಯಿತು. ಅವನ ಮನಸ್ಸು ಕಥೆ ಇನ್ನೂ ಮುಂದುವರಿಯುವುದೆಂದು ಭಾವಿಸಿ , ಕಥೆಗಾಗಿ ಕಾದಿತ್ತು. ಆದರೆ, ಕಥೆಯ ಬದಲು ಪ್ರಶ್ನೆ ಅವನೆದುರು ಬಂದಿತು. ಕೇವಲ ಪ್ರಶ್ನೆಯಲ್ಲ, ಸವಾಲು. ಕಥೆ ಕೇಳುವುದಲ್ಲ, ಕಥೆ ನಿರ್ಮಿಸಬೇಕು. ತನ್ನ ತಂದೆ ತಾತಂದಿರು ಮಾಡಲು ಸಾಧ್ಯವಾಗದೆ ಹೋದ ಕೆಲಸವನ್ನು ಮಾಡಬೇಕು. ತನ್ನ ಪೂರ್ವಜರಿಗೆ ಸದ್ಗತಿ ಕೊಡಿಸುವ ಕೆಲಸವನ್ನು ತಾನು ಸಾಧಿಸಬೇಕು ಎಂಬ ವಿಷಯ ಅವನ ಮನಸ್ಸಿನಲ್ಲಿ ಬಂದಿತು. ತಾಯಿಗೆ ನಮಸ್ಕರಿಸಿ, ‘ಅಮ್ಮಾ, ನನ್ನ ಹಿರಿಯರ ಆಸೆ ಪೂರೈಸುವೆ. ದೇವಗಂಗೆಯನ್ನು ಭೂಲೋಕಕ್ಕೆ ಕರೆತಂದು ಹಿರಿಯರಿಗೆ ಸದ್ಗತಿ ಕೊಡುಸುವೆ. ಅದಕ್ಕಾಗಿ ಶರೀರದಲ್ಲಿ ತೊಟ್ಟು ರಕ್ತವಿರುವವರೆಗೂ ಶ್ರಮಿಸಲು ಸಿದ್ಧವಾಗಿರುವೆ’ ಎಂದು ತನ್ನ ತಾಯಿಗೆ ವಾಗ್ದಾನ ಮಾಡಿದನು. ತಾಯಿಯೂ ಅವನ ತಲೆಯನ್ನು ಸವರಿ, ‘ಯಶಸ್ವಿ ಆಗು, ಮಗೂ,’ ಎಂದು ಹರಸಿದಳು.

ಭಗೀರಥನ ಮನಸ್ಸಿನ ತುಂಬಾ ಒಂದೇ ಯೋಚನೆ ಗಂಗೆಯನ್ನು ತರುವ ದಾರಿ ಯಾವುದು ಎಂದು. ಕೊನೆಗೆ ತಪಸ್ಸಿನ ಮೂಲಕ ಬ್ರಹ್ಮನನ್ನು ಮೆಚ್ಚಿಸಿ ಗಂಗೆಯನ್ನು ತರುವುದೆಂದು ನಿಶ್ಚಯಿಸಿದನು. ಅವನ ಎಳೆಯ ಪತ್ನಿಗೆ ತನ್ನ ಪತಿಯು ಅರಮನೆಯ ಸುಖವನ್ನು ಬಿಟ್ಟು ತಪಸ್ಸಿಗೆ ಹೊರಟಿರುವುದನ್ನು ಕೇಳಿ ತುಂಬಾ ದುಃಖವಾಯಿತು. ಅವಳು ಕಣ್ಣೀರಿಡುತ್ತಾ ತಪಸ್ಸಿಗೆ ಹೋಗದಂತೆ ತನ್ನ ಗಂಡನನ್ನು ಒಪ್ಪಿಸಲು ಪ್ರಯತ್ನಿಸಿದಳು. ಇಷ್ಟು ಸಣ್ಣ ವಯಸ್ಸಿನಲ್ಲಿ ಎಂತಹ ತಪಸ್ಸು? ವಯಸ್ಸಾದ ಮೇಲೆ ಮಾಡಿದರಾಯ್ತು. ಈಗ ಅರಮನೆಯಲ್ಲಿ ಸುಖವಾಗಿರಬಾರದೆ? ಎಂದು ಮತ್ತೆ ಮತ್ತೆ ಕೇಳಿದಳು. ಭಗೀರಥನು ಆ ಯಾವ ಮಾತುಗಳಿಗೂ ಜಗ್ಗಲಿಲ್ಲ. ಹಿರಿಯರ ಹಿರದಾಸೆಯನ್ನು ಪೂರೈಸುವವರೆಗೆ ಸುಖ, ಆನಂದ, ನನಗಲ್ಲ; ಮೊದಲು ಕರ್ತವ್ಯಪೂರ್ತಿ; ನಂತರ ಸುಖ ಎಂದು ತನ್ನ ನಿರ್ಧಾರವನ್ನು ತಿಳಿಸಿದ. ಭಗೀರಥನು ಪತ್ನಿಯನ್ನು ಒಪ್ಪಿಸಿ ಅಯೋಧ್ಯೆಯನ್ನು  ಬಿಟ್ಟು ಕಾಡಿನತ್ತ ಹೊರಟನು.

ತಪಸ್ವಿ ಭಗೀರಥ

ಹೀಗೆ ರಾಜ್ಯ, ತಾಯಿ, ಹೆಂಡತಿ ಎಲ್ಲವನ್ನೂ ಬಿಟ್ಟು ಹೊರಟ ಭಗೀರಥನು ನೇರವಾಗಿ ಹಿಮಾಲಯ ಪರ್ವತ ಪ್ರದೇಶಕ್ಕೆ ಬಂದನು. ಅಲ್ಲಿ ಸುಂದರವಾದ ಸರೋವರವೊಂದಿತ್ತು. ಅದರಲ್ಲಿ ಸ್ನಾನ ಮಾಡಿ ಶುಚಿಯಾಗಿ ‘ಗಂಗೆಯ ಭೂಮಿಗೆ ಬರಲಿ, ಪಿತೃಗಳಿಗೆ ಸದ್ಗತಿ ಸಿಗಲಿ’ ಎಂದು ಸಂಕಲ್ಪ ಮಾಡಿ ತಪಸ್ಸು ಮಾಡಲಾರಂಭಿಸಿದನು. ಭಗೀರಥನ ತಪಸ್ಸು ಸಾಮಾನ್ಯವಾದುದಲ್ಲ. ಪ್ರಾರಂಭದಲ್ಲಿ ಒಂದು ಕಡೆ ಪದ್ಮಾಸನದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದನು. ಮನಸ್ಸಿನಲ್ಲಿ ಬೇರೆ ಯಾವ ವಿಷಯಕ್ಕೂ ಪ್ರವೇಶವಿಲ್ಲ. ರಕ್ತದ ಕಣಕಣವೂ, ಬಿಡುವ ಪ್ರತಿ ಉಸಿರೂ ಗಂಗೆ ಬರಲಿ, ಗಂಗೆ ಬರಲಿ ಎನ್ನುತ್ತಿದ್ದವು. ಕೆಲವು ದಿನಗಳಾದ ನಂತರ ಛಳಿಗಾಲ ಬಂದಿತು. ಆಗ ಆ ಸರೋವರದಲ್ಲಿ ಎದೆ ಎತ್ತರದ ನೀರಿನಲ್ಲಿ ನಿಂತು ಏಕಾಗ್ರತೆಯಿಂದ ತಪಸ್ಸು ಮಾಡಲಾರಂಭಿಸಿದನು. ಛಳಿಗಾಲ ಕಳೆದು ಬೇಸಗೆ ಬಂದಿತು. ಆಗ ಪಂಚಾಗ್ನಿ ತಪಸ್ಸನ್ನು ಪ್ರಾರಂಭಿಸಿದನು. ಪಂಚಾಗ್ನಿ ತಪಸ್ಸೆಂದರೆ, ಸುತ್ತಲೂ ಧಗಧಗಿಸುವ ಬೆಂಕಿ, ಮೇಲೆ ಉರಿಯುವ ಸೂರ್ಯ. ಈ ಐದು ಬೆಂಕಿಯ ಮಧ್ಯೆ ನಿಂತು ಕಣ್ಣು ಬಿಟ್ಟು ಸೂರ್ಯನನ್ನೇ ನೋಡುತ್ತಾ ತಪಸ್ಸು ಮಾಡುವುದು.

ಅವನ ಆಹಾರವೂ ಹಾಗೆ ವ್ಯತ್ಯಸವಾಗುತ್ತಾ ಹೋಯಿತು. ಮೊದಲ ದಿನಗಳಲ್ಲಿ ದಿನಕ್ಕೊಮ್ಮೆ ಮಾತ್ರ ಆಹಾರ ಸ್ವೀಕರಿಸುತ್ತಿದ್ದನು. ಅನಂತರ ನಾಲ್ಕಾರು ದಿನಗಳಿಗೊಮ್ಮೆ ಆಹಾರ. ಅನಂತರ ತಿಂಗಳಿಗೊಮ್ಮೆ. ಮತ್ತೆ ಸ್ವಲ್ಪ ನೀರನ್ನು ಮಾತ್ರ ಕುಡಿದು ಕೊನೆ ಕೊನೆಗೆ ನೀರನ್ನೂ ಸೇವಿಸದೆ ಕೇವಲ ವಾಯುಸೇವನೆ ಮಾಡುತ್ತಾ ತಪಸ್ಸು ಮಾಡುತ್ತಿದ್ದನು. ಈ ರೀತಿ ತಪಸ್ಸು ಮಾಡಿದಾಗ ತಪಸ್ಸು ಮಾಡುವವರ ಶರೀರದಿಂದ ಜ್ವಾಲೆಯೊಂದು ಹೊರಡುತ್ತದೆ. ಅದನ್ನು ತಪೋಜ್ವಾಲೆ ಎನ್ನುತ್ತಾರೆ. ಭಗೀರತನ ತಪೋಜ್ವಾಲೆ ಅತಿ ಉಗ್ರವಾಯಿತು. ಅವರೆಲ್ಲರ ಕಣ್ಣಿಗೆ ಭಗೀರಥನು ಸೂರ್ಯನಂತೆಯೇ ತೇಜಸ್ವಿಯಾಗಿ ಕಾಣುತ್ತಿದ್ದನು. ಹೀಗೆ ಅವನ ತಪೋಜ್ವಾಲೆಯನ್ನು ತಡೆಯಲಾರದ ದೇವತೆಗಳು ಬ್ರಹ್ಮದೇವನಲ್ಲಿಗೆ ಓಡಿದರು. ಅವನನ್ನು ಕಂಡು, ‘ದೇವಾ, ಭಗೀರತನ ತಪಸ್ಸು ಸಹಿಸಲಸಾಧ್ಯವಗಿದೆ. ಅದರಿಂದ ನಮ್ಮನ್ನು ರಕ್ಷಿಸಬೇಕು’ ಎಂದು ಮೊರೆಯಿಟ್ಟರು. ಬ್ರಹ್ಮನು ಎಲ್ಲರನ್ನೂ ಸಮಾಧಾನ ಮಾಡಿ ಕಳುಹಿಸಿ ಭಗೀರಥ ಇರುವಲ್ಲಿಗೆ ಬಂದನು.

ಭಗೀರಥನಿಗೆ ಬ್ರಹ್ಮನ ಆಗಮನದಿಂದ ಅತ್ಯಂತ ಸಂತೋಷವಾಯ್ತು. ಬ್ರಹ್ಮನಿಗೆ ನಮಸ್ಕರಿಸಿ ಅವನನ್ನು ಭಕ್ತಿಯಿಂದ ಸ್ತುತಿಸಿದನು. ಬ್ರಹ್ಮನು ತೃಪ್ತನಾಗಿ ‘ರಾಜಾ, ನಿನಗೇನು ಬೇಕು? ಈ ಘೋರ ತಪಸ್ಸನ್ನೇಕೆ ಮಾಡುತ್ತಿರುವೆ?’ ಎಂದು ಕೇಳಿದನು. ಭಗೀರಥನು ‘ದೇವಾ! ನನ್ನ ಪಿತೃಗಳು ಪಾತಾಳದಲ್ಲಿ ಸುಟ್ಟು ಬೂದಿಯಾಗಿ ಬಿದ್ದಿದ್ದಾರೆ. ಸಂಸ್ಕಾರವೆ ಇಲ್ಲದೆ ಅವರಿಗೆ ಸದ್ಗತಿ ಇಲ್ಲ. ಅವರೆಲ್ಲರನ್ನೂ ಉದ್ಧರಿಸಲು ದೇವಗಂಗೆಯೇ ಬರಬೆಕು. ಅದಕ್ಕಾಗಿ ದೇವಗಂಗೆಯನ್ನು ಕಳುಹಿಸಿಕೊಟ್ಟು ನನ್ನನ್ನು ಉದ್ಧರಿಸು. ಜೊತೆಗೆ ನನಗೆ ಮಕ್ಕಳಿಲ್ಲೊ. ವಂಶವೇ ನಿಂತು ಹೋಗುತ್ತದೆ. ಅದಕ್ಕಾಗಿ ನನಗೆ ಪುತ್ರ ಸಂತಾನವಾಗುವಂತೆ ಅನುಗ್ರಹಿಸು’ ಎಂದು ಬೇಡಿಕೊಂಡನು. ಬ್ರಹ್ಮನು ‘ಭಗೀರಥ, ಇಂತಹ ಉಗ್ರ ತಪಸ್ಸು ಮಾಡಿದ ನೀನು ಧನ್ಯ. ದೇವಗಂಗೆಯನ್ನು ಭೂಮಿಗೆ ತರಬೇಕೆಂಬ ನಿನ್ನ ಆಕಾಂಕ್ಷೆ ಅತ್ಯುತ್ತಮವಾದುದು. ನಾನಂತೂ ಸಂತೋಷದಿಂದ ಗಂಗೆಯನ್ನು ಕಳುಹಿಸಿಕೊಡುತ್ತೇನೆ. ಆದರೆ ಸ್ವರ್ಗದಿಂದ ಅವಳು ಭೂಮಿಗೆ ಇಳಿಯುವಾಗ ಅವಳ ರಭಸವನ್ನು  ಭೂಮಿ ತಡೆಯಲಾರದು. ಅವಳ ಪ್ರವಾಹದ ರಭಸಕ್ಕೆ ಭೂಮಂಡಲವೇ ನಾಶವಾಗುತ್ತದೆ. ಆದ್ದರಿಂದ ಅವಳ ರಭಸವನ್ನು ಯಾರಾದರೂ ತಡೆಯಬೇಕು. ಈ ಕೆಲಸವು ಲೋಕಲೋಕೇಶನಾದ ಈಶ್ವರನಿಗೆ ಮಾತ್ರ ಸಾಧ್ಯ. ಇನ್ನಾರಿಂದಲೂ ಅಲ್ಲ. ಆದ್ದರಿಂದ ಈಶ್ವರನನ್ನು ಕಂಡು ಗಂಗೆಯ ರಭಸವನ್ನು ತಡೆದು ಅವಳು ಶಾಂತಳಾಗುವಂತೆ ಮಾಡಲು ಅವನ ಮನವೊಲಿಸು. ಅನಂತರ ಗಂಗೆಯನ್ನು ಕಳುಹಿಸುವೆ. ಇನ್ನು ನಿನ್ನ ಎರಡನೆಯ ಬೇಡಿಕೆ. ನಿನ್ನ ವಂಶ ಯೋಗ್ಯರಾದ ಮಕ್ಕಳಿಂದ ಖಂಡಿತ ಮುಂದುವರಿಯುತ್ತದೆ , ಚಿಂತಿಸಬೇಡ’ ಎಂದು ಹೇಳಿ ತೆರಳಿದನು.

ಭಗೀರಥನಿಗೆ ಬ್ರಹ್ಮನನ್ನು ಕಂಡು ತನ್ನ ಕೆಲಸ ಪೂರೈಸಿದಷ್ಟೇ ಆನಂದವಾಯ್ತು. ಆದರೆ ಅಷ್ಟರಲ್ಲಿ ಹೊಸದೊಂದು ತೊಂದರೆ ಬಂತು. ಗಂಗೆ ಭೂಮಿಗಿಳಿಯುವಾಗ ಅವಳ ರಭಸವನ್ನು ತಡೆಯಲು ಈಶ್ವರನನ್ನು ಒಪ್ಪಿಸುವುದು ಹೇಗೆ?

ಕೆಲಸ ಮಾಡುವವರಲ್ಲಿ ಮೂರು ವಿಧ. ಕೆಲಸ ಪ್ರಾರಂಭ ಮಾಡಿದರೆ ಮಧ್ಯೆ ತೊಂದರೆ ಬರುವುದೆಂದು ಹೆದರಿ ಕೆಲಸವನ್ನು ಪ್ರಾರಂಭವೇ ಮಾಡದಿರುವ ಹೇಡಿಗಳು ಒಂದು ವಿಧ. ಮೊದಲು ಕೆಲಸ ಪ್ರಾರಂಭಿಸಿ ಅನಂತರ ಬರುವ ತೊಂದರೆಗಳಿಗೆ ಅಂಜಿ ಕೈಬಿಡುವ ಮಧ್ಯಮರು ಎರಡನೆ ಗುಂಪು. ಇವರಿಬ್ಬರೂ ಕೆಲಸದ ದೃಷ್ಟಿಯಿಂದ ಅಪ್ರಯೋಜಕರೇ! ಆದರೆ ತೊಂದರೆಗಳು ಒಂದಾದ ಮೇಲೊಂದು ಬಂದು ಅಪ್ಪಳಿಸಿ ಕಾಡಿದರೂ ಬಿಡದೆ, ಕೆಲಸ ಮಾಡುತ್ತಾ ಕಾರ್ಯ ಸಾಧಿಸುವ ಧೀರರದ್ದು ಮೂರನೆಯ ಗುಂಪು.

ಭಗೀರಥನು ಧೀರರ ಸಾಲಿಗೆ ಸೇರಿದವನು. ಗಂಗೆಯನ್ನು ಹೇಗೆ ತರುವುದು ಎಂಬ ದಾರಿ ಸಿಕ್ಕಿತು. ಗಂಗೆ ಇಳಿದು ಬರುತ್ತಾಳೆ ಎಂಬ ವಿಶ್ವಾಸವೂ ಬಂತು. ಇನ್ನು ದಾರಿಯಲ್ಲಿ ಬರುವ ಸಮಸ್ಯೆಗಳಿಗೆ ಉತ್ತರ ಕೊಟ್ಟು ಯಶಸ್ವಿ ಆಗಬೇಕು. ಆಗುತ್ತೇನೆ ಎಂದುಕೊಂಡವನು ಭಗೀರಥ. ಅದರಂತೆ ಈಶ್ವರನನ್ನು ಕುರಿತು ಉಗ್ರ ತಪಸ್ಸು ಮಾಡಲಾರಂಭಿಸಿದನು. ಎರಡೂ ಕೈಗಳನ್ನು ಮೇಲಕ್ಕೆತ್ತಿ ಒಂದೇ ಕಾಲಿನಲ್ಲಿ ನಿಂತು ಏಕಾಗ್ರ ಚಿತ್ರನಾಗಿ ಒಂದು ವರ್ಷ ತಪಸ್ಸು ಮಾಡಿದನು. ಇದನ್ನು ಮೆಚ್ಚಿ ಈಶ್ವರನು ಭಗೀರಥನಿರುವಲ್ಲಿಗೇ ಬಂದು, ‘ಭಕ್ತನೇ, ನಿನಗೇನಾಗಬೇಕಾಗಿದೆ? ಏಕೆ ನನ್ನನ್ನು ಧ್ಯಾನಿಸಿದೆ?’ ಎಂದು ಕೇಳಿದನು.

ಭಗೀರಥನು ಕೈಮುಗಿದುಕೊಂಡು, ‘ದೇವಾ, ಸರ್ವಜ್ಞನಾದ ನಿನಗೆ ಗೊತ್ತಿಲ್ಲದಿರುವುದು ಯಾವುದು? ಗಂಗೆ ಭೂಮಿಗಿಳಿಯಬೇಕೆಂಬ ನನ್ನ ಪ್ರಾರ್ಥನೆಯನ್ನು ಬ್ರಹ್ಮದೇವನು ಒಪ್ಪಿದ್ದಾನೆ. ಆದರೆ, ಗಂಗೆಯ ರಭಸವನ್ನು ಭೂಮಿ ತಡೆಯಲಾರದು. ಆದ್ದರಿಂದ ಕೆಳಗಿಳಿಯುವ ಗಂಗೆಯ ಪ್ರವಾಹವೇಗವನ್ನು ನೀನು ಭರಿಸಬೇಕು’ ಎಂದು ಬೇಡಿಕೊಂಡನು. ಈಶ್ವರನು ನಸುನಗುತ್ತಾ ‘ಆಗಲಿ, ಗಂಗೆಯ ಪ್ರವಾಹವನ್ನು ನಾನು ತಲೆಯಲ್ಲಿ ಸ್ವೀಕರಿಸುವೆ’ ಎಂದನು. ಹೀಗೆ ಹೇಳಿ ಈಶ್ವರನು ಅಲ್ಲಿಯೇ ಇದ್ದ ಮಹಾಶಿಖರವೊಂದನ್ನೇರಿ ನಿಂತು ಗಂಗೆಯನ್ನು ಸ್ವೀಕರಿಸಲು ಸಿದ್ಧನಾದನು.

ಇಳಿದು ಬಂದ ಗಂಗೆ ಎಲ್ಲಿ?

ಭಗೀರಥನಿಗೆ ಆನಂದವೋ ಆನಂದ. ಸದ್ಯ ಬಂದಿದ್ದ ಆತಂಕ ಮುಗಿಯಿತು. ಈಶ್ವರನು ಗಂಗೆಯ ವೇಗವನ್ನು ತಡೆಯುತ್ತಾನೆ. ಇನ್ನು ನನ್ನ ಕೆಲಸ ಆದಂತೆಯೆ ಎಂದುಕೊಂಡು ಗಂಗಾವತರಣವನ್ನು ಕುತೂಹಲದಿಂದ ನಿರೀಕ್ಷಿಸತೊಡಗಿದನು. ಪಾರ್ವತಿಯಾದಿಯ ಆಗಿ ಎಲ್ಲ ದೇವಗಣ ಆಶ್ಚರ್ಯದಿಂದ ನೋಡುತ್ತಿದ್ದರು. ಬ್ರಹ್ಮದೇವನ ಆಜ್ಞೆಯಂತೆ ಗಂಗೆಯು ಭೂಮಿಗಿಳಿಯಲು ಸಂಕಲ್ಪಿಸಿದಳು. ಅಷ್ಟರಲ್ಲಿ ಅವಳಿಗೆ ಬ್ರಹ್ಮನು ಹೇಳಿದ್ದ ಮಾತು – ‘ಗಂಗೆಯ ವೇಗವನ್ನು ಯಾರೂ ತಡೆಯಲಾರರು’ ಎಂಬ ಮಾತು – ನೆನಪಿಗೆ ಬಂತು. ಬ್ರಹ್ಮನೇ ಹಾಗೆ ಹೇಳಿರುವಾಗ ಈ ಈಶ್ವರ ನನ್ನ ವೇಗವನ್ನು ತಡೆಯಬಲ್ಲನೇ? ಎಂಬ ಗರ್ವವೂ ಜೊತೆಗೆ ಬಂತು. ಆ ಗರ್ವದಿಂದ ಉನ್ಮತ್ತಳಾದ ಗಂಗೆ, ವೇಗವಾಗಿ ಹರಿದು ಈಶ್ವರನನ್ನು ಕೊಚ್ಚಿಕೊಂಡು ಹೋಗಬೇಕು, ದೇವತೆಗಳಿಗೆಲ್ಲ ಹಾಸ್ಯಕ್ಕೆ ಒಂದು ವಿಷಯ ಸಿಕ್ಕುತ್ತದೆ ಎಂದು ಯೋಚಿಸಿ ಅತಿ ರಭಸದಿಂದ ಈಶ್ವರನ ತಲೆಯ ಮೇಲೆ ಧುಮುಕಿದಳು.

ಹಾಗೆ ಬೀಳುತ್ತಿದ್ದ ಗಂಗಾ ಪ್ರವಾಹ ನೋಡಲು ಅತಿ ಮಹೋಹರವಾಗಿತ್ತು. ಪ್ರವಾಹದೊಡನೆ ಮೀನು, ಮೊಸಳೆ, ಹಾವು, ಆಮೆ ಇತ್ಯಾದಿ ಜಲಚರಗಳು ಬೀಳುತ್ತಿದ್ದುವು. ತೆರೆತೆರೆಯಾಗಿ ಬಿಳಿಯ ನೊರೆಯನ್ನು ಚೆಲ್ಲುತ್ತಾ, ಮಿಂಚಿನ ಪ್ರವಾಹದಂತೆ ಗಂಗೆ ಇಳಿದು ಬರುತ್ತಿದ್ದರೆ ಎಲ್ಲರೂ ಸಂತೋಷದಿಂದ ನೋಡುತ್ತಿದ್ದರು.

ಈಶ್ವರನಿಗೆ ಗಂಗೆಯ ರಭಸ ಅನುಭವವಾಯಿತು. ಗಂಗೆಯ ಗರ್ವ ಅರ್ಥವಾಯಿತು. ಕೋಪದಿಂದ ಭಯಂಕರನಾದ. ತನ್ನ ಮೇಲೆ ಆರ್ಭಟದಿಂದ ಬೀಳುತ್ತಿದ್ದ ಗಂಗೆಯನ್ನು ತನ್ನ ಬಿರುಗೂದಲ ನಡುವೆ ಜಾರಿ ಹೋಗದಂತೆ ಬಲವಾಗಿ ಕಟ್ಟಿಹಾಕಿದ. ಅಷ್ಟೊಂದು ರಭಸದಿಂದ ಕೊಚ್ಚಿಹಾಕಲು ಬಂದ ಗಂಗೆ ಕಟ್ಟಿಹಾಕಲ್ಪಟ್ಟಳು. ತನ್ನ ಸಮಾನವಿಲ್ಲವೆಂದು ಗರ್ವ ಪಡುವವರಿಗೆ ಇದೇ ಗತಿ. ಅವರು ತಾವು ಕಷ್ಟಪಡುತ್ತಾರೆ. ‘ಇಳಿದು ಬಾ ತಾಯಿ’ ಎಂದು ಭಕ್ತಿಯಿಂದ ಕೈಮುಗಿದು ಬೇಡುತ್ತಿದ್ದ ಭಗೀರಥ ಬಿಳಿಬಿಳಿಯಾಗಿ ಇಳಿಯುತ್ತಿದ್ದ ಗಂಗ ಪ್ರವಾಹವನ್ನು  ನೋಡಿದ್ದ. ಗಂಗೆ ಭೂಮಿಗೆ ಬಂದಳು ಎಂದು ಸಂತೋಷದಿಂದ ಕಣ್ಮುಚ್ಚಿ ಧ್ಯಾನಸ್ಥನಂತೆ ನಿಂತಿದ್ದ. ಸ್ವಲ್ಪ ಕಾಲ ಕಳೆದು ಕಣ್ತೆರೆದು ನೋಡಿದರೆ ಗಂಗೆಯೂ ಇಲ್ಲ, ಪ್ರವಾಹವೂ ಇಲ್ಲ. ಕಣ್ಣಿಗೆ ಕಂಡುದು ರೋಷಭೀಷಣನಾಗಿ ಕಣ್ಣಲ್ಲಿ ಕಿಡಿಕಾರುತ್ತಾ, ಸೊಂಟದ ಮೇಲೆ ಕೈಯಿಟ್ಟು ನಿಂತ ಈಶ್ವರ ಮಾತ್ರ.

ಭಗೀರಥನಿಗೆ ‘ಕೆಟ್ಟೆ’ ಎನಿಸಿತು. ಇನ್ನೆಲ್ಲ ಮುಗಿಯಿತು ಎಂದಿರುವಾಗ ಮತ್ತೆ ತೊಂದರೆ ಬಂತಲ್ಲಾ ಎನ್ನಿಸಿತು. ಗರ್ವಿಷ್ಠಳಾದ ಗಂಗೆಗೆ ಶಿಕ್ಷೆ ಅಗತ್ಯ. ಆದರೆ ಅದನ್ನೊಪ್ಪಿ ನಾನು ಕುಳಿತರೆ ನನ್ನ ಕೆಲಸದ ಗತಿ! ಚಿಂತಿಸುತ್ತಾ ಕೂಡಲು ಸಮಯವೂ ಇಲ್ಲ. ಕಾರ್ಯಸಾಧಕ ಅವನು. ಕೂಡಲೇ ಈಶ್ವರನ ಮುಂದೆ ಕೈಮುಗಿದು ನಿಂತು , ‘ದೇವಾ! ದಯಮಾಡಿ  ಗಂಗೆಯನ್ನು ಬಿಡುಗಡೆ ಮಾಡು. ಅವಳು ಭೂಮಿಗಿಳಿಯಲಿ, ಪ್ರವಹಿಸಲಿ, ನನ್ನ ಪೂರ್ವಜನರನ್ನೂ, ಇಲ್ಲಿನ ಜನರನ್ನೂ ಪುಣ್ಯವಂತರನ್ನಾಗಿ ಮಾಡಲಿ’ ಎಂದು ಬೇಡಿಕೊಂಡನು. ಈಶ್ವರನು ತೃಪ್ತನಾಗಿ ‘ಭಗೀರಥ, ನಿನ್ನ ನಿಷ್ಠೆ, ವಿನಯಗಳಿಗೆ ಮೆಚ್ಚಿದೆ. ಇದೋ, ಗಂಗೆಯನ್ನು ನನ್ನ ಜಟೆಯಿಂದ ಬಿಡುಗಡೆ ಮಾಡುತ್ತೇನೆ. ಆದರೆ ಒಂದೇ ಪ್ರವಾಹದಲ್ಲಿ ಬಿಡಲಾರೆ. ಒಟ್ಟಿಗೆ ಬಿಟ್ಟರೆ ನಿನಗೇ ತೊಂದರೆ. ಅವಳು ಗರ್ವದಲ್ಲಿ ಮತ್ತೆ ತೊಂದರೆ ತಂದಾಳು. ಅದಕ್ಕಾಗಿ ಅವಳನ್ನು ಏಳು ಭಾಗಗಳಲ್ಲಿ ಬಿಡುಗಡೆ ಮಾಡುವೆ. ಮೂರು ಭಾಗ ಪಶ್ಚಿಮಕ್ಕೆ, ಮೂರು ಭಾಗ ಪೂರ್ವಕ್ಕೆ ಹೋಗಲಿ. ಒಂದು ಭಾಗ ಮಾತ್ರ ನಿನ್ನ ಹಿಂದೆಯೇ ಬರಲಿ’ ಎಂದು ಹೇಳಿ ತನ್ನ ತಲೆಯಲ್ಲಿದ್ದ ಗಂಗೆಯನ್ನು ಬಿಡುಗಡೆ ಮಾಡಿದನು.

ಕಷ್ಟವಾಗಿ ಬಂದುದು ಇಷ್ಟದಂತೆಯೇ ಆದುದರಿಂದ ಭಗೀರಥನಿಗೂ ಆನಂದವಾಯ್ತು. ಏಳು ಭಾಗವಾಗಿ ಹರಿದ ಗಂಗೆಯ ಒಂದು ಭಾಗ ತನ್ನ ಹಿಂದೆ ಬರುವಂತಾದುದು ಪರಮೇಶ್ವರನಿಗೆ ನಮಸ್ಕಾರ ಮಾಡಿ ದಕ್ಷಿಣ ದಿಕ್ಕಿನಲ್ಲಿ ಹೊರಟನು. ಅವನ ಹಿಂದೆ ಗಂಗೆಯೂ ಶಾಂತಳಾಗಿ ಹೊರಟಳು. ಮುಗ್ಧ ಬಾಲಿಕೆಯೊಬ್ಬಳು ತನ್ನ ತಂದೆಯ ಹೆಜ್ಜೆಯನ್ನೇ ಅನುಸರಿಸುತ್ತಾ ಕುಣಿ ಕುಣಿದು ಮುಂದೆ ಸಾಗುವಂತಿತ್ತು ಅವಳ ಪ್ರವಾಹಶೈಲಿ. ಹರಿದಲ್ಲೆಲ್ಲ ಶಾಂತಿ ಬೀರುತ್ತಾ, ಹಸಿರು ಚಿಮ್ಮಿಸುತ್ತಾ, ಜೀವ ತುಂಬಿಸುತ್ತಾ ಮುನ್ನಡೆದಳು. ಕೆಲವೊಮ್ಮೆ ಶಾಂತವಾಗಿ, ಕೆಲವೊಮ್ಮೆ ವೇಗವಾಗಿ ಭಗೀರಥನ ಹಿಂದೆ ಗಂಗೆ ನಲಿನಲಿದು ನಡೆದಳು. ಭಗೀರಥನೂ ಆವಿರತವಾಗಿ ನಡೆಯುತ್ತಲೇ ಇದ್ದ. ಅವನಿಗೋ ತುಂಬಾ ಆತುರ. ಎಂದು ಪಾತಾಳವನ್ನು ತಲುಪೇನು? ಪೂರ್ವಜರ ಬೂದಿಯನ್ನು ಯಾವಾಗ ಗಂಗಾಪ್ರವಾಹದಿಂದ ತೊಳೆದೇನು? ಹಿಡಿದ ಕೆಲಸ ಪೂರ್ಣ ಮಾಡೇನು? ಎಂದುಕೊಂಡೇ ಮುನ್ನುಗ್ಗುತ್ತಿದ್ದ. ಒಂದಾದ ಮೇಲೊಂದು ಕಷ್ಟಗಳು ಬಂದುದರಿಂದ ಅವನಿಗೆ ಅರ್ಧ ಭಯವೂ ಇತ್ತು. ಈ ಕಾರ್ಯದಲ್ಲಿ ಮತ್ತೆ ಯಾವ ವಿಘ್ನ ಬರುವುದೋ ಎಂದು. ಅದಕ್ಕಾಗಿ ಒಳ್ಳೆಯ ಕೆಲಸವನ್ನು ಮಾಡಿ ಪೂರೈಸುವುದು ಅವಶ್ಯ ಎಂದು ಬೇಗಬೇಗನೆ ನಡೆಯುತ್ತಿದ್ದನು.

ಭಗೀರಥನು ಹಿಮಾಲಯ ಪ್ರಾಂತದಿಂದ ಕೆಳಗಿಳಿದು ವಿಶಾಲವಾದ ಬಯಲು ಪ್ರದೇಶಕ್ಕೆ ಬಂದಿದ್ದನು. ಸಮತಟ್ಟಾದ ಪ್ರದೇಶದಲ್ಲಿ ನಿಧಾನವಾಗಿ ನಡೆಯುತ್ತಿದ್ದ ಅವನ ಹಿಂದೆ ಗಂಗೆಯೂ ನವವಧುವಿನಂತೆ ನಾಚುತ್ತಾ, ನಲಿಯುತ್ತಾ ನಿಧಾನವಾಗಿ ಸಾಗಿದ್ದಳು. ಭಗೀರಥನ ಮನಸ್ಸು ಸುಪ್ರಸನ್ನವಾಗಿತ್ತು.

ದಾರಿಯಲ್ಲಿ ಒಂದು ಆಶ್ರಮ ಸಿಕ್ಕಿತು. ಸುಂದರವಾಗಿತ್ತು. ಸುತ್ತೆಲ್ಲ ಹೂವು, ಹಣ್ಣುಗಳು ಬೆಳೆದು ಬೆಳಗುತ್ತಿತ್ತು. ಶಾಂತಿ ಸೂಸುತ್ತಿತ್ತು. ಅದು ಜಹ್ನು ಋಷಿಗಳು ಆಶ್ರಮ. ಭಗೀರಥನಿಗೆ ಗೊತ್ತಿದ್ದ ಸ್ಥಾನವೇ. ಹಾಗಾಗಿ ಭಗೀರಥ ಭಕ್ತಿಯಿಂದ ಆಶ್ರಮದೊಳಗೆ ಪ್ರವೇಶ ಮಾಡಿದನು.

ಅದೇಕೋ ಏನೋ! ಅಲ್ಲಿನವರೆಗೆ ನಾಚುತ್ತಾ ಮೆಲುಮೆಲನೆ ಅವನ ಹಿಂದೆ ಬರುತ್ತಿದ್ದ ಗಂಗೆಗೆ ಈ ಆಶ್ರಮದೊಳಗೆ ಪ್ರವೇಶ ಮಾಡುತ್ತಲೇ ಸ್ವಲ್ಪ ಚೇಷ್ಟೆ ಮಾಡೋಣವೆನ್ನಿಸಿತು. ಸಣ್ಣ ಹುಡುಗಿಯಂತೆ ಆಶ್ರಮದ ತುಂಬೆಲ್ಲಾ ಓಡಾಡಿದಳು. ಎಲ್ಲಾ ಕಡೆ ನೀರೇ ನೀರು. ಇಡೀ ಆಶ್ರಮವೇ ಕೊಚ್ಚಿಹೋಗುತ್ತೇನೋ ಎನ್ನಿಸಿತು. ಎಲ್ಲೆಡೆ ಹಾಹಾಕಾರ,  ಇದನ್ನೆಲ್ಲ ಕಂಡು ತುಂಬ ಹುಡುಗಿಯಂತೆ ಗಂಗೆಯು ಕಲಕಲ ನಗುತ್ತಲೇ ಇದ್ದಳು.

ಆಶ್ರಮದೊಳಗೆ ಧ್ಯಾನದೊಳಗಿದ್ದರು ಜಹ್ನು ಮಹರ್ಷಿ. ಅವರಿಗೆ ಎಲ್ಲವೂ ತಿಳಿಯಿತು. ತುಂಟ ಹುಡುಗಿಗೆ ಸರಿಯಾದ ಬುದ್ಧಿ ಕಲಿಸಬೇಕೆಂದುಕೊಂಡರು, ಗಂಗೆಯನ್ನು ತಮ್ಮ ಕೈಯೊಳಗೆ ಆಕರ್ಷಿಸಿ ಒಂದೇ ಬಾರಿಗೆ ಆಪೋಶನದಂತೆ ಕುಡಿದುಬಿಟ್ಟರು. ಭಗೀರಥನು ನೋಡುತ್ತಾನೆ. ಗಂಗೆ ಕಾಣುತ್ತಿಲ್ಲ. ಎಲ್ಲಿ ಹೋದಳು? ಮತ್ತೆ ಏನೋ ಸಂಕಟ ಬಂತಲ್ಲಾ ಎಂದು ಅವನ ಮನಸ್ಸು ಕಳವಳಗೊಂಡಿತು. ಆದರೆ ಕಳವಳಗೊಂಡು ಸುಮ್ಮನಿರುವಂತಿಲ್ಲ. ಜಹ್ನು ಋಷಿಯ ಆಶ್ರಮದೊಳಗೆ ಗಂಗೆ ಮಾಯವಾಗಿದ್ದಾಳೆ. ಆದ್ದರಿಂದ ಜಹ್ನು ಋಷಿಗಳಿಗೆ ಗೊತ್ತಿರಲೇಬೇಕು ಎಂದು ಯೋಚಿಸಿ ಅವರ ಬಳಿಗೇ ಹೋದನು. ಅಲ್ಲಿ ಹೋಗಿ ಅವರಿಗೆ ವಿನಯದಿಂದ ನಮಸ್ಕರಿಸಿ ತನ್ನ ಕಥೆಯೆಲ್ಲವನ್ನೂ ಹೇಳಿ ‘ನಿಮ್ಮನ್ನು ನೋಡಲು ಒಳಬರುತ್ತಿದ್ದೆ. ಆದರೆ ಅಷ್ಟರಲ್ಲಿ ಗಂಗೆ ಅಂತರ್ಧಾನಳಾಗಿದ್ದಾಳೆ. ಅವಳ ವಿಷಯ ನಿಮಗೇನಾದರೂ ಗೊತ್ತಿದ್ದರೆ ದಯಮಾಡಿ ತಿಳಿಸಿ’ ಎಂದು ಬೇಡಿಕೊಂಡನು. ಋಷಿಗಳು ಎಲ್ಲವನ್ನೂ ಕೇಳಿ ‘ಗಂಗೆಯ ಚೇಷ್ಟೆಗೆ ತಕ್ಕ ಶಿಕ್ಷೆ ವಿಧಿಸಬೇಕೆಂದುಕೊಂಡು ನಾನೇ ಅವಳನ್ನು ಆಪೋಶನವಾಗಿ ಸ್ವೀಕರಿಸಿದ್ದೇನೆ’ ಎಂದು ಹೇಳಿದರು. ಭಗೀರಥನಿಗೆ ಮಾತನಾಡಲು ತೋಚಲೇ ಇಲ್ಲ. ಏನು ಹೇಳುವುದು? ಗಂಗೆಯನ್ನು ಬಿಟ್ಟುಕೊಡಿ ಎಂದು ಕೇಳುವುದು ಹೇಗೆ? ಆದರೂ, ಧೈರ್ಯಮಾಡಿ ‘ಹಿರಿಯರೇ, ನಮ್ಮ ಹಿರಿಯರಿಗೆ ಸದ್ಗತಿ ತರಲೆಂದು ಅತಿಶ್ರಮದಿಂದ ಬ್ರಹ್ಮರುದ್ರಾದಿಗಳನ್ನು ಮೆಚ್ಚಿಸಿದೆ. ಗಂಗೆಯನ್ನು ಇಲ್ಲಿನವರೆಗೆ ಕರೆತಂದೆ. ಆದರೆ ಅವಳ ಹುಡುಗಾಟ ನನ್ನ ಕಾರ್ಯಕ್ಕೆ ಅಡ್ಡಿ ತಂದಿದೆ. ಅದಕ್ಕಾಗಿ ನಿಮ್ಮಲ್ಲಿ ಕ್ಷಮಾಯಾಚನೆ ಮಾಡುತ್ತೇನೆ. ದಯಮಾಡಿ ಅವಳನ್ನು ಬಿಡುಗಡೆ ಮಾಡಿ, ನನ್ನ ಹಿರಿಯರಿಗೆ ಸದ್ಗತಿ ನೀಡಿ’ ಎಂದು ಬೇಡಿಕೊಂಡನು. ಭಗೀರಥನ ಪ್ರಾರ್ಥನೆ, ನಮ್ರತೆಗಳಿಗೆ ಕರಗಿ ಋಷಿಗಳು ಗಂಗೆಯನ್ನು ತಮ್ಮ ಕಿವಿಯಿಂದ ಹೊರಬಿಟ್ಟು ‘ಗಂಭೀರಳಾಗಿರು’ ಎಂದು ಆಜ್ಞಾಪಿಸಿ ಕಳುಹಿಸಿಕೊಟ್ಟರು.

ಸುಜಲಾಂ ಸುಫಲಾಂ

ಭಗೀರಥನಿಗೆ ತುಂಬಾ ಸಂತಸ ಆಯ್ತು. ಜಹ್ನು ಋಷಿಗಳಿಗೆ ಮತ್ತೆ ಮತ್ತೆ ನಮಸ್ಕಾರ ಮಾಡಿದನು. ‘ನಿಮ್ಮಿಂದ ತುಂಬಾ ಉಪಕಾರ ಆಯ್ತು’ ಎಂದು ವಿನಂತಿಸಿಕೊಂಡು ಹೊರಟನು. ಇನ್ನು ತಡಮಾಡಿದರೆ ಇನ್ನಾವ ವಿಘ್ನ ಬಂದೀತೋ ಎಂಬ ಅಂಜಿಕೆ ಅವನಿಗೆ. ನೇರವಾಗಿ ತನ್ನ ಹಿರಿಯರು ಅಗೆದಿದ್ದ ಬಿಲದ ಬಳಿಗೆ ಬಂದನು.

ಗಂಗೆಗೂ ಈಗ ಸ್ವಲ್ಪ ವಿವೇಕ ಬಂದಿತ್ತು. ತನ್ನ ಅಹಂಕಾರಗಳು, ತನ್ನ ಹುಡುಗಾಟಗಳು ತನಗೆ ತಂದ ತೊಂದರೆ, ಅಪಮಾನಗಳ ಅರಿವಾಯ್ತು ಅವಳಿಗೆ. ಜೊತೆಗೆ ಅದರಿಂದ ತನ್ನನ್ನು ಭಕ್ತಿಯಿಂದ ಪೂಜಿಸಿದ ಭಗೀರಥನಿಗಾದ ಮನಃಕ್ಲೇಶ – ಶಾರೀರಿಕ ಕ್ಲೇಶಗಳ ಅರಿವೂ ಆಗಿತ್ತು. ಆದ್ದರಿಂದ ಅವಳು ತನ್ನ ಅವಿವೇಕವನ್ನು ಬದಿಗಿಟ್ಟು ಭಗೀರಥನ ಹಿಂದೆ ವೇಗವಾಗಿ ಸಾಗಿದಳು. ಬಿಲದ್ವಾರದ ಬಳಿ ಸೇರಿ ಒಳಹೊಕ್ಕು ಭಗೀರಥನ ಹಿಂದೆ ಅವಳೂ ನುಗ್ಗಿದಳು. ಆ ಇಡೀ ಪ್ರದೇಶ ಮುಂಚೆ ದೊಡ್ಡ ಹಳ್ಳವಾಗಿದ್ದುದು – ಗಂಗೆ ತುಂಬಿ ಬಂದುದರಿಂದ ದೊಡ್ಡ ಜಲಾಶಯ ಆಯ್ತು. ಸಗರನ ಮಕ್ಕಳು ಅಗೆದು ಅಗೆದು ನಿರ್ಮಾಣವಾದುದರಿಂದ ಅದನ್ನು ‘ಸಾಗರ’ ಎಂದು ಕರೆದರು.

ಭಗೀರಥನು ಪಾತಾಳವನ್ನು ಸೇರಿ ಅಲ್ಲಿದ್ದ ಬೂದಿಯ ರಾಶಿಯ ಬಳಿ ನಿಂತನು. ಗಂಗೆಯನ್ನು ಕುರಿತು, ‘ತಾಯೇ! ನನ್ನ ಪೂರ್ವಿಕರ ಬೂದಿರಾಶಿ ಇಲ್ಲಿದೆ. ದಯಮಾಡಿ ಇದರ ಮೇಲೆ ಪ್ರವಹಿಸಿ ಇವರ ಆತ್ಮಗಳಿಗೆ ಮೋಕ್ಷಕೊಡು’ ಎಂದು ಬೇಡಿಕೊಂಡನು. ಗಂಗೆಯೂ ನೇರವಾಗಿ ಆ ಬೂದಿಯ ರಾಶಿಯ ಮೇಲೆ ನುಗ್ಗಿದಳು. ಅನೇಕ ವರ್ಷಗಳಿಂದ ಗತಿಗಾಣದೆ ಬಿದ್ದಿದ್ದ ಸಗರನ ಅರವತ್ತು ಸಹಸ್ರ ಮಕ್ಕಳ ಆತ್ಮಗಳೂ ಶುದ್ಧರಾಗಿ ಪಾಪಮುಕ್ತರಾಗಿ ಸ್ವರ್ಗ ಸೇರಿದರು. ಇದೆಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದ ದೇವತೆಗಳು, ಯಕ್ಷರು, ಕಿನ್ನರರು ಭಗೀರತನ ಕಾರ್ಯಸಾಧನೆಯನ್ನು ಮನಸಾರೆ ಹೊಗಳಿದರು. ಭಗೀರಥನಿಗೆ ತನ್ನ ಜೀವನದ ಉದ್ದೇಶ ಪೂರ್ತಿಯಾದುದು ಅತೀವ ಆನಂದವನ್ನು ನೀಡಿತ್ತು. ತೃಪ್ತನಾಗಿ ಮನೆಗೆ ಹಿಂತಿರುಗುವ ಮೊದಲು ಗಂಗೆಗೆ ನಮಸ್ಕಾರ ಮಾಡಿದನು. ಸುತ್ತಲಿದ್ದ ದೇವತೆಗಳಿಗೆಲ್ಲ ವಂದಿಸಿದನು. ಎಲ್ಲರೂ ಅವನನ್ನು ಹೊಗಳುವವರೇ! ಗಂಗೆಯನ್ನು ನಾನಾ ಹೆಸರಿನಿಂದ ವಂದಿಸುವವರೇ! ಭಗೀರಥನ ಹಿಂದೆ ಮಗಳಂತೆ ಬಂದುದರಿಂದ ಭಾಗೀರಥಿ ಎಂದರು. ಸ್ವರ್ಗ ಭೂಮಿ ಪಾತಾಳ – ಹೀಗೆ ಮೂರು ಲೋಕಗಳಲ್ಲಿ ಹರಿದುದರಿಂದ ತ್ರಿಪಥಕೆ ಎಂದರು. ಜಹ್ನು ಋಷಿಯ ಕಿವಿಯಿಂದ ಹೊರಬಂದು ಅವರ ಮಗಳಾದುದರಿಂದ ಜಾಹ್ನವಿ ಎಂದರು. ಹೀಗೆ ನಾನಾ ಹೆಸರುಗಳಿಂದ ವಂದಿತಳಾದ ಗಂಗೆಯನ್ನು ಭೂಮಿಗೆ ತಂದ ಭಗೀರಥನು ತನ್ನ ರಾಜ್ಯಕ್ಕೆ ಹಿಂತಿರುಗುವಾಗ ಮಾರ್ಗದಲ್ಲಿ ಎಲ್ಲರೂ ಅವನನ್ನು ಮಹಾನುಭಾವನೆಂದರು, ಜೀವದಾನಿ ಎಂದರು. ಹೀಗೆ ಎಲ್ಲರಿಂದ ಪೂಜಿಸಲ್ಪಡುತ್ತಾ ಭಗೀರಥನು ರಾಜಧಾನಿಗೆ ಹಿಂತಿರುಗಿ, ಕಾಯುತ್ತಾ ಕುಳಿತಿದ್ದ ತಾಯಿಗೆ ನಮಸ್ಕರಿಸಿದನು. ಯಶಸ್ವಿಯಾಗಿ ಹಿಂತಿರುಗಿದ ಮಗನನ್ನು ಕಂಡು ತಾಯಿಗೆ ಆನಂದವಾಯ್ತು. ಬಾಯ್ತುಂಬಾ ಮಗನನ್ನು ಹರಸಿದಳು.

ಹೀಗೆ ಎಲ್ಲರೂ ಆನಂದಪಡುವಂತಹ ಕಾರ್ಯವನ್ನು ಮಾಡಿ, ತನಗೆ, ತನ್ನ ಕುಟುಂಬಕ್ಕೆ, ದೇಶಕ್ಕೆ ಕೀರ್ತಿ ತಂದು ಭಗೀರಥನು ಅನೇಕ ವರ್ಷಕಾಲ ಪ್ರಜಾರಂಜಕನಾಗಿ ರಾಜ್ಯವಾಳಿ ಕೀರ್ತಿ ಪಡೆದನು. ಅದರಿಂದಲೇ, ತುಂಬ ಕಷ್ಟಪಟ್ಟು ದೊಡ್ಡ ಕೆಲಸವನ್ನು ಸಾಧಿಸುವುದಕ್ಕೆ ‘ಭಗೀರಥ ಪ್ರಯತ್ನ’ ಎನ್ನುತ್ತಾರೆ. ನೀರೇ ಇಲ್ಲದೆ ಏನೂ ಬೆಳೆಯದೆ ಬೆಂಗಾಡಾಗಿದ್ದ ಪ್ರದೇಶಕ್ಕೆ ಬಹು ಕಷ್ಟಪಟ್ಟು ಭಗೀರಥ ಗಂಗೆಯನ್ನು ತಂದ; ಗಂಗೆಯ ನೀರು ಆ ಪ್ರದೇಶವನ್ನು ಸುಜಲ ಹಾಗೂ ಸುಫಲವನ್ನಾಗಿ ಮಾಡಿತು. ಮರುಭೂಮಿ ತುಂಬಿದ ಬೆಳೆಯಿಂದ ನಗುನಗುತ್ತಿರುವಂತಾಯಿತು. ಪೂರ್ವಜರೊಂದಿಗೆ ಮುಂದಿನ ಪೀಳಿಗೆಗಳೂ ಪುಣ್ಯಭಾಜನರಾಗುವಂತೆ ಮಾಡಿತು.

ಭಗೀರಥ ಗಂಗೆಯನ್ನು ಭೂಲೋಕಕ್ಕೆ ತಂದ ಕಥೆ ರೋಮಾಂಚಕಾರಿ, ಅಲ್ಲವೇ? ಭಗೀರಥನ ಕರ್ತವ್ಯ ನಿಷ್ಠೆ, ಎಂತಹ ಕಷ್ಟಗಳಿಗೂ ಹೆದರದ ದೃಢಮನಸ್ಸು ಕಥೆಯಲ್ಲಿ ಬೆಳಗುತ್ತವೆ. ಆ ವಜ್ರಸಮ ಸಂಕಲ್ಪ ನಮಗೆ ಮೇಲ್ಪಂಕ್ತಿಯಾಗಬೇಕು.