ಕಂಡೆ ನಾನು, ಬೆಂತರನೊಲು ನಿಂತ ತಂತಿ ಕಂಬದಿ
ಸಿಕ್ಕಿ ರೆಕ್ಕೆ ಬಡಿವ ಗಾಳಿಪಟವೊಂದನು ಮರುಕದಿ
ಆಷಾಢದ ಮೋಡದ ಹೊಳೆ ಮೇಲೆ ಹರಿಯುತಿದ್ದಿತು
ಕೆಳಗೆ ಬಯಲಿನಲ್ಲಿ ಮಕ್ಕಳಾಟ ನಡೆಯುತಿದ್ದಿತು.

ಸಾಲು ಸಾಲು ತಂತಿಯೆನಿತೊ ಕಂಬದಿಂದ ಕಂಬಕೆ
ತುಡಿವ ಗಾಳಿಪಟದ ಸುಯ್ಲ ಗಮನಿಸದೊಲು ಮುಂದಕೆ
ಹರಿಯುತಿರಲು, ಹುಚ್ಚುಗಾಳಿ ಮೊರೆದು ಪಟವ ಹೆದರಿಸಿ
ಕುಣಿಯುತಿತ್ತು ಮರ ಮರಗಳ ಮಯ್ಯನೆಲ್ಲ ನಡುಗಿಸಿ.

ಆಷಾಢದ ಗಾಳಿಗೆ ಪಟ ಸಿಕ್ಕು ಶೀರ್ಣವಾಗಿದೆ
ಬರಿಯಕಡ್ಡಿ ಎಲುಬಿನೊಡಲು ಸಾವಿನೊಡನೆ ಸೆಣಸಿದೆ,
ಏರಲಾರದಿಳಿಯಲಾರದಂಥ ಮುಷ್ಟಿ ಬಿಗಿತಕೆ
ಸಿಕ್ಕಿ ನರಳಿ ಕೊರಗಿರುವುದು ಜಿನುಗಿದಂಥ ಸೋನೆಗೆ.

ಒಮ್ಮೆ ಇದೂ ಆಕಾಶದ ಬಯಲಲಾಡುತಿದ್ದಿತು
ಸುತ್ತ ಬಂದ ಹಕ್ಕಿಗಳನು ಹೆದರಿಸೋಡಿಸಿದ್ದಿತು,
ಕೆಳೆಯ ಪಟಗಳೆಲ್ಲ ಇಳಿದು ಮನೆಯ ಸೇರಿಕೊಂಡವು.
ಆದರಯ್ಯೊ ದಾರ ಹರಿದು ಇಲ್ಲಿ ಬಂದು ಬಿದ್ದಿತು.

ಈಗ ಹಲವು ಹಕ್ಕಿಗಳೂ ಇದರ ಪಾಡ ನೋಡುತ
ಅಣಕಿಸುತ್ತ ಹಾರುತಿಹವು ತಮ್ಮ ಗರಿಯ ಕೆದರುತ
ಮೇಲೆ ನಡೆವ ಕಪ್ಪುಮೋಡ ಮುಖಕೆ ನೀರನೆರಚಿದೆ
ನೊಂದವರನು ನೋಯಿಸುವುದೆ ಜಗದ ಲೀಲೆ ಎನಿಸಿದೆ !

ಕೆಳಗೆ ಪಟದ ಸೂತ್ರಧಾರನೊಬ್ಬನಿರುವನೆಂಬುದ
ಮರೆತು ತಾನೆ ಬಾನೊಳಲೆವ ಶೂರನೆಂದು ಬೀಗಿದ
ಹಮ್ಮಿಗಿಂಥ ಪತನವಾಯ್ತೊ ; ಅಥವ ದುರದೃಷ್ಟವೊ,
ನೆನೆಯಬೇಡ ಹಿಂದನೆಲ್ಲ ಅದನು ನಾವು ಬಲ್ಲೆವೊ ?

ಹೇಗೊ ಏನೊ ಇತ್ತ ಬಂದು ಪತಿತಯೋಗಿಯಂದದಿ
ಸಿಕ್ಕುದಾಯ್ತು ಕಂಬದಲ್ಲಿ ಮತ್ತೆ ಅಲುಗದಂದದಿ
ಯಾವ ಕೈಯಿ ಬಂದು ಇದರ ಬಂಧನವನು ಹರಿವುದೊ
ಬಿಡಿಸಿದರೂ ಹರಿದ ಪಟವದೆಂತು ಮೇಲಕೇರ‍್ವುದೊ !

ಕಂಬದಿಂದ ಕಂಬದೆಡೆಗೆ ತಂತಿಯೆನಿತೊ ಓಡಿವೆ
ಬಾನ ಬಯಲಿನಲ್ಲಿ ಹಲವು ಗಾಳಿಪಟಗಳಾಡಿವೆ
ಕೆಳಗೆ ಬಯಲಿನಲ್ಲಿ ಮಕ್ಕಳಾಟ ನಿಲದೆ ಸಾಗಿದೆ
ತಂತಿ ಕಂಬದಲ್ಲೀ ಪಟ ದೀನವಾಗಿ ನೋಡಿದೆ !