ಯೌವನದ ತೇರಿನೊಲು ನೀ ತೇಲಿ ಬಂದೆ
ನನ್ನ ಬಳಿಯೇ ಹಾದು ಮುಂದೆ ನಡೆದೆ
ನೀ ನಡೆದ ಮೇಲೆ ನಾ ಮರುಗಿದೆನು ನಿನಗೆ
ಬಲು ಮೌನದೊಳಗೆ !

ವರುಷಗಳ ಕೋಡೊತ್ತಿ ಕಣ್ಣ ಸುತ್ತಲು ಕೊರೆದ ಗೆರೆಯ ಉಂಗುರವ,
ತೆಳುಬಿದ್ದ ಗಲ್ಲಗಳ, ನಿಟ್ಟುಸಿರು ಕಂದಿಸಿದ ಅಧರಗಳ ಇರವ
ಬಣ್ಣ ಸ್ನೋ ಪೌಡರನು ಮೆತ್ತಿ ಚೆಲುವನು ಹೇರಿ ಮೆರೆಸುವೀ ಪರಿಗೆ
ಮರುಗಿದೆನು ನಿನಗೆ !

ಕಡಲತ್ತ ಹರಿದ ಹೊಳೆಯನು ಮತ್ತೆ ಉಗಮದೆಡೆ ತಿರುಗಿಸುವ ಬಯಕೆ
ಹಾರಿ ಹೋದಾ ಕಂಪ ತಿರುಗಿ ತುಂಬುವ ಬಯಕೆ ಹೂವಿನೊಳಗೆ
ಸಾಧ್ಯವೇ ಬದುಕಿನೊಳಗೆ ?

ಓ ಭಗ್ನ ಚಲುವೆ
ನಿನ್ನನು ಕಂಡು ಮರುಗಿ ನಿಲುವೆ.
ಯುಗ ಯುಗದ ಸಂಸ್ಕೃತಿಯ ನಾಗರಿಕತೆಯ
ಪುನರುಜ್ಜೀವನದ ವ್ಯಥೆಯ ಕಥೆಯನು ನೆನೆದು
ನಿಡುಸುಯ್ಯುವೆ !