೧೯೧೯ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಾಳಿಯಲ್ಲಿ ಜನಿಸಿದ ಪಂಡಿತ ಶುಕ್ಲ ಚಂದ್ರಶೇಖರ ರಾಮಕೃಷ್ಣ ಭಟ್‌ ಸಂಗೀತದಲ್ಲಿ ತಮ್ಮ ಪ್ರಾರಂಭಿಕ ಶಿಕ್ಷಣ ಪಡೆದದ್ದು. ಶ್ರೀ ಹೊನ್ನಾವರ ಕೃಷ್ಣಭಟ್ಟ ಮತ್ತು ಡಾ.ಎಸ್‌.ಎನ್‌. ರತನ್‌ ಜಂಕರ್ ಅವರಲ್ಲಿ. ೧೯೩೮ರಲ್ಲಿ ಲಕ್ನೋದ ಮೇರೀಸ್‌ ಸಂಗೀತ ಕಾಲೇಜಿನಲ್ಲಿ ಬಾತ್‌ ಖಂಡೆ ನೆನಪಿನ ಚಿನ್ನದ ಪದಕದೊಂದಿಗೆ ಬ್ಯಾಚುಲರ್ ಪದವಿ ಪಡೆದ ನಂತರ ತಾವು ವಿದ್ಯೆ ಕಲಿತ ವಿದ್ಯಾಪೀಠ, ಭಾರತೀಯ ವಿದ್ಯಾಭವನದ ಸಂಗೀತ ಶಿಕ್ಷಣ ಪೀಠ, ಈಗ ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀವಲ್ಲಭ ಸಂಗೀತಾಲಯಗಳಲ್ಲಿ ಗುರುವಾಗಿ ನಿರಂತರ ಕೆಲಸ ಮಾಡುತ್ತಾ ಬಂದರು.

ಸ್ವರ, ಲಯ, ರಾಗಗಳ ಮೇಲೆ ಅಪಾರ ಹಿಡಿತ ಹೊಂದಿರುವ ಭಟ್‌ ಅವರು ಕಳೆದ ೫೫ ವರ್ಷಗಳಿಂದ ಆಕಾಶವಾಣಿ, ದೂರದರ್ಶನಗಳೂ ಸೇರಿದಂತೆ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಗಾನಸುಧೆ ಹರಿಸಿದ್ದಾರೆ. ದ್ರುಪದ್‌ ಹಾಗೂ ದಮಾರ್ ಸಂಪ್ರದಾಯಕ್ಕೆ ಭಟ್‌ ಅವರ ಕೊಡುಗೆ ಯಾವತ್ತೂ ಅನನ್ಯವಾದುದು.

ತಮ್ಮ ಕ್ರಿಯಾಶೀಲ ಬೋಧನಾ ಕ್ರಮದಿಂದ ವಿದ್ಯಾರ್ಥಿಗಳಲ್ಲಿ ಪ್ರಾರಂಭಿಕ ಹಂತದಿಂದ ಸ್ವರಜ್ಞಾನ ವೃದ್ಧಿಸುವ ಅಪರೂಪದ ಗುರು ಪಂಡಿತ್‌ ಎಸ್‌.ಸಿ.ಆರ್.ಭಟ್‌ ಅವರಿಗೆ ‘ಮಹಾಮಹೋಪಾಧ್ಯಾಯ’ ಸುರಸಿಂಗಾರ ಸಂಸದ್‌ನ ‘ಸಾರಂಗದೇವ’, ‘ತಾನ್‌ಸೇನ್‌ ಪ್ರಶಸ್ತಿ’ಗಳೂ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೯-೨೦೦೦ನೇ ಸಾಲಿನ ತನ್ನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.