ಒಂದು ತಳಿಯ ಅಕ್ಕಿಯ ಗಂಜಿ ಸೇವಿಸುವುದರಿಂದ ನಿಮಗೆ ತತ್‌ಕ್ಷಣ ಭೇದಿ ನಿಲ್ಲುತ್ತದೆ; ಮತ್ತೊಂದು ತಳಿಯ ಅಕ್ಕಿಯ ಗಂಜಿ ಉಣ್ಣುವುದರಿಂದ ಕಣ್ಣು ಕುರುಡಾಗುವುದು ತಪ್ಪುತ್ತದೆ!! ಇನ್ನೊಂದು ತಳಿಯ ಗಂಜಿ ಉಂಡರೆ ನೀವು ಆಧ್ಯಾತ್ಮ ಸಾಧನೆಯನ್ನು ಸುಲಭವಾಗಿ ಮಾಡಬಹುದು!!!

ಹೀಗೆ ಅನುಭವಸ್ಥರೋ, ವಿಜ್ಞಾನಿಗಳೋ ಹೇಳಿದರೆ ಏನು ಮಾಡುವಿರಿ?

ಒಂದಿಷ್ಟು ಜನ ಅಕ್ಕಿಯನ್ನು ತರಿಸಲು ಮುಂದಾಗುತ್ತಾರೆ.  ಒಂದಿಷ್ಟು ಜನ ಇದು ಶುದ್ಧ ಬೋಗಸ್ ಎಂದು ಪತ್ರಿಕೆಗಳಿಗೆ ಕಾಗದ ಬರೆಯುತ್ತಾರೆ.  ಕೆಲವರು ಅದನ್ನು ಉಪಯೋಗಿಸುತ್ತಲೇ ವಿರೋಧಿಸುತ್ತಾರೆ.  ಕೆಲವರದು ಸುಪ್ತಾವಸ್ಥೆ.  ವಿರೋಧಿಸುವುದೂ ಇಲ್ಲ, ಉಪಯೋಗಿಸುವುದೂ ಇಲ್ಲ.  ಸುದ್ದಿ ಹರಡುತ್ತಾರೆ.  ಏನಾಗುವುದೋ, ಯಾರಾದರೂ ಫಲಿತಾಂಶ ಹೇಳುವರೇನೋ ಕಾಯುತ್ತಾರೆ.

ಕೆಂಪು, ಅರಿಸಿನ, ಕೇಸು, ಬಿಳಿ, ಅಚ್ಚಬಿಳಿ, ಗುಲಾಬಿ ಹೀಗೆ ಅನೇಕ ಬಣ್ಣಗಳ ಅಕ್ಕಿಗಳಿವೆ.  ನೆಲದ ಗುಣವೋ, ನೀರಿನ ಗುಣವೋ, ಪರಿಸರದ ಗುಣವೋ ಅವುಗಳಲ್ಲಿ ಕೆಲವು ಔಷಧೀಯ ಗುಣವೂ ಇದೆ.  ಇದನ್ನು ನಮ್ಮ ಪೂರ್ವಿಕರು ನಂಬುತ್ತಿದ್ದರು.

ಉದಾಹರಣೆಗೆ ಉಪವಾಸದ ಸಂದರ್ಭಗಳಲ್ಲಿ ಅಕ್ಕಿಯ ಬಳಕೆ ಮಾಡುತ್ತಿರಲಿಲ್ಲ.  ಜ್ವರ ಬಂದಾಗ ಅನ್ನದ ಬದಲು ಗಂಜಿ ಸೇವನೆ.  ಮಧುಮೇಹಿಗಳಿಗೆ ಅಕ್ಕಿ ವರ್ಜ್ಯ.  ಚೆನ್ನಾಗಿ ನಿದ್ರೆ ಬರಬೇಕೆಂದರೆ ಬಿಸಿ ಬಿಸಿ ಅನ್ನ, ದೋಸೆ, ಇಡ್ಲಿಗಳ ಬಳಕೆ.  ಹೀಗೆ ಏನೆಲ್ಲಾ ರೀತಿಗಳು ಇತ್ತು.

ಪಶ್ಚಿಮಘಟ್ಟವೇ ಔಷಧೀಯ ಸಸ್ಯಗಳ ಆಗರ.  ಇಲ್ಲಿಯ ಮಣ್ಣಿನಲ್ಲೇ ಔಷಧಿಗಳಿವೆ.  ಯಾವುದೇ ಸಸ್ಯವಿರಲಿ ಅದಕ್ಕೊಂದು ಔಷಧೀಯ ಗುಣ ಅಂಟಿಕೊಳ್ಳುವುದು ಗ್ಯಾರಂಟಿ.  ಅದನ್ನೇ ನಮ್ಮ ಆಯುರ್ವೇದವೂ ಹೇಳಿದೆ.

ಸುಶ್ರುತನಂತೂ ತನ್ನ ವೈದ್ಯಕೀಯ ಗ್ರಂಥದಲ್ಲಿ ಯಾವ ರೋಗಕ್ಕೆ ಯಾವ ತಳಿಯ ಅಕ್ಕಿಯನ್ನು ಬಳಸಿ ವಾಸಿಮಾಡಿಕೊಳ್ಳಬಹುದೆಂಬುದನ್ನು ವಿವರವಾಗಿ ತಿಳಿಸಿದ್ದಾನೆ.  ಅದೇ ರೀತಿ ವಾಗ್ಭಟನ ಅಷ್ಟಾಂಗಹೃದಯದಲ್ಲಿ ಅಕ್ಕಿಯ ಔಷಧೀಯ ಗುಣಗಳನ್ನು ಹೇಳುವುದರೊಂದಿಗೆ ಯಾವ ಸ್ವರೂಪದ ಅನ್ನವನ್ನು ಉಣ್ಣಬೇಕೆಂಬುದನ್ನೂ ತಿಳಿಸಿದ್ದಾನೆ.  ಬಾಣಂತಿಯರು ಭತ್ತವನ್ನೇ ಬೇಯಿಸಿ ದಿನಾ ೫೦ ಕಾಳುಗಳನ್ನು ತಿನ್ನಬೇಕೆಂದೂ ಉಲ್ಲೇಖವಿದೆ.

ಅದರಲ್ಲೂ ಷಷ್ಠಿಕ ಎನ್ನುವ ಭತ್ತ ಶಕ್ತಿಶಾಲಿ, ರಕ್ತಶಾಲಿ, ಗುಣಶಾಲಿ, ಆಧ್ಯಾತ್ಮಶಾಲಿ ಎಂದು ವಿವರಿಸಲಾಗಿದೆ.  ಷಷ್ಠಿಕವೆಂದರೆ ಬಿತ್ತಿದ ೬೦ನೇ ದಿನಕ್ಕೆ ಕೊಯ್ಲಿಗೆ ಬರುವ ಭತ್ತದ ತಳಿ.  ಇದು ದಪ್ಪ ಕೆಂಪುಬಣ್ಣದ ಅಕ್ಕಿ.  ಆರು ತಾಸುಗಳ ಕಾಲ ಇದನ್ನು ಬೇಯಿಸಬೇಕು.  ದಿನಕ್ಕೊಮ್ಮೆ ಉಂಡರೂ ಸಾಕು ಅತ್ಯುತ್ತಮ ಜೀರ್ಣಕಾರಿ.  ಇದೇ ಮಾದರಿಯ ಭತ್ತವನ್ನು ಉಡುಪಿ ಜಿಲ್ಲೆಯ ಕಾರ್ಕಳದ ಬಳಿ ಬೆಳೆಯುತ್ತಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಅತಿಕರಯ ಎನ್ನುವ ಭತ್ತವನ್ನು ಇಂದಿಗೂ ಆರೋಗ್ಯವರ್ಧನೆಗೆ ಬಳಸುತ್ತಾರೆ.  ಕರಿಭತ್ತವನ್ನು ಚರ್ಮರೋಗಕ್ಕೆ ಬಳಸುತ್ತಾರೆ.

ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಬೆಳೆಯುವ ದೊಡ್ಡ ಭೈರನೆಲ್ಲು ಭತ್ತ ಅನೇಕ ರೋಗಗಳ ನಿವಾರಕವಂತೆ.  ಅಲ್ಲಿಯ ಜನ ಎದೆನೋವು ಹಾಗೂ ರಕ್ತಭೇದಿಗಳಿಗೆ ಖಾಯಂ ಬಳಕೆ ಮಾಡುತ್ತಾರೆ.  ಕನಕಪುರದ ಕರಿನೆಲ್ಲು ಕಾಮಾಲೆಗೆ ಬಳಕೆ.  ಈ ರೀತಿಯ ತಳಿಗಳ ದಾಖಲಾತಿಯನ್ನು ಸಹಜ ಸಮೃದ್ಧ ಬಳಗ ಮಾಡುತ್ತಿದೆ.

ಅಕ್ಕಿ, ಭತ್ತ, ಅಕ್ಕಿನುಚ್ಚು, ಅಕ್ಕಚ್ಚು, ಅಕ್ಕಿನೀರು, ಅಕ್ಕಿಗಂಜಿ, ಗಂಜಿತಿಳಿ, ಅಕ್ಕಿಗೆ ಇತರ ಔಷಧೀಯ ಸಸ್ಯಗಳನ್ನು ಸೇರಿಸಿ ತಯಾರಿಸುವ ಚರುವಿನ ಮೂಲಕ ನೀಡುವ ಔಷಧಗಳ ಪಟ್ಟಿಯೇ ನಾಟೀವೈದ್ಯರಲ್ಲಿದೆ.

ಇಂದು ಪಂಚಕರ್ಮ ಚಿಕಿತ್ಸೆ ಜನಪ್ರಿಯವಾಗುತ್ತಿದ್ದಂತೆ ಅಕ್ಕಿಗೂ ಬೇಡಿಕೆ ಹೆಚ್ಚುತ್ತಿದೆ.  ಅಕ್ಕಿಹಿಟ್ಟನ್ನು ನೀರು, ಹಾಲು, ಮೊಸರು ಮುಂತಾದವುಗಳೊಂದಿಗೆ ಬೆರೆಸಿ ಮೈಗೆ ಸ್ನಾನ ಮಾಡಿಸುವ ಪದ್ಧತಿ.  ಅಕ್ಕಿಹಿಟ್ಟನ್ನು ಗಿಡಮೂಲಿಕೆಗಳ ಪುಡಿಯೊಂದಿಗೆ ಸೇರಿಸಿ ಚರ್ಮರೋಗಗಳಿಗೆ ಹಚ್ಚುವ ಪದ್ಧತಿ-ಹೀಗೆ ಆಯುರ್ವೇದದ ಅನೇಕ ಚಿಕಿತ್ಸಾ ಪದ್ಧತಿಗಳು ಅಕ್ಕಿಯನ್ನು ಹೆಚ್ಚು ಬಳಕೆಗೆ ತರುತ್ತಿವೆ.

ಇದರಿಂದ ಅಕ್ಕಿಯೊಂದಿಗೆ ತಳಿಗಳೂ ಜನಪ್ರಿಯವಾಗುತ್ತಿದೆ.ಆಯುರ್ವೇದದಲ್ಲಿ ಹೇಳಿದ ರೂಪ, ಗುಣಗಳನ್ನು ಇಂದಿರುವ ಅಕ್ಕಿಯೊಂದಿಗೆ ಹೋಲಿಸಲಾಗುತ್ತಿದೆ.  ದೇಸೀ ತಳಿಯ ಅಕ್ಕಿಗಳನ್ನು ಹುಡುಕುಲಾಗುತ್ತಿದೆ.

ಹೀಗೆ ಜನಪ್ರಿಯತೆಯ ತುದಿಗೇರಿದ ಅಕ್ಕಿ ನವರ.  ನವರವನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಬಿಸಿಮಾಡಿ ಮೈಕೈಗಳಿಗೆ ಶಾಖ ನೀಡಿದರೆ ಎಂತಹ ಸುಸ್ತೂ ಮಾಯ.  ನವರದ ಹಿಟ್ಟನ್ನು ಎಣ್ಣೆಯೊಂದಿಗೆ ಸೇರಿಸಿ ಮಸಾಜ್ ಮಾಡಲು ಬಳಸುತ್ತಾರೆ.  ನವರವನ್ನು ಕೆಲವು ಔಷಧೀಯ ಸಸ್ಯಗಳು ಹಾಗೂ ಹಾಲಿನೊಂದಿಗೆ ಬೇಯಿಸಿ ಬಟ್ಟೆಯ ಚೀಲಕ್ಕೆ ತುಂಬುತ್ತಾರೆ.  ಬಿಸಿ ಬಿಸಿ ಇರುವಾಗಲೇ ಸಂಧಿವಾತ ಜಾಗಕ್ಕೆ ಒತ್ತಿ ಒತ್ತಿ ಚಿಕಿತ್ಸೆ ನೀಡುತ್ತಾರೆ.  ಇದು ನರದೌರ್ಬಲ್ಯಕ್ಕೂ ಪರಿಣಾಮಕಾರಿ.

ಇದು ೬೦ ದಿನಗಳ ಭತ್ತ.  ಮಧ್ಯ ಕೇರಳದಲ್ಲಿ ಬಹು ಪ್ರಖ್ಯಾತ.  ಬೆಲೆ ಒಂದು ಕಿಲೋಗ್ರಾಂಗೆ ೧೫೦ ರೂಪಾಯಿ ದಾಟಿದೆ.  ಇದೇ ರೀತಿ ಕುಟ್ಟಿ, ಕಯದನ್ ಮುಂತಾದ ದಪ್ಪ, ಕೆಂಪು ಅಕ್ಕಿಗಳೂ ಸಹ ಜನಪ್ರಿಯ. ಕೇರಳದಲ್ಲಿ ಈ ರೀತಿಯ ೧೫ಕ್ಕೂ ಹೆಚ್ಚು ತಳಿಗಳನ್ನು ಔಷಧೀಯ ಕಾರಣಕ್ಕಾಗಿಯೇ ಬೆಳೆಯುತ್ತಿದ್ದಾರೆ ಹಾಗೂ ಬೆಲೆಯು ಒಂದು ಕಿಲೋಗ್ರಾಂಗೆ ನೂರು ರುಪಾಯಿಗಳಿಗಿಂತಲೂ ಹೆಚ್ಚು.

ಕೃಷಿ ದೃಷ್ಟಿಯಿಂದ ಕೇರಳದಲ್ಲಿ ಔಷಧೀಯ ಭತ್ತದ ಕೃಷಿ ಅತ್ಯಂತ ಲಾಭದಾಯಕ.  ಭತ್ತದಲ್ಲಿರುವ ಔಷಧಗಳಿಗಾಗಿಯೇ ಭತ್ತದ ಕೃಷಿ ಉಳಿಯುತ್ತಿದೆ.

ಆದರೆ ಕೇರಳ ಯಾವಾಗಿನ ರೂಢಿಯಂತೆ ಭತ್ತದ ವಿಚಾರದಲ್ಲೂ ಅತಿ ವೈಭವೀಕರಣದ ತುದಿ ತಲುಪಿದೆ.  ಅಲ್ಲಿ ಬೆಳೆಯುತ್ತಿರುವ ಔಷಧೀಯ ತಳಿಯ ಭತ್ತಗಳಿಗೆಲ್ಲಾ ಒಂದೊಂದು ವೆಬ್‌ಸೈಟ್‌ಗಳಿವೆ.  ಅದರಲ್ಲಿ ಆ ಅಕ್ಕಿ ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು, ಎಷ್ಟೆಲ್ಲಾ ಔಷಧೀಯ ಗುಣಗಳು ಎಂದು ಪುಂಖಾನುಪುಂಖ ವಿವರಣೆಗಳಿವೆ.

ಉದಾಹರಣೆಗೆ ನವರವನ್ನೇ ನೋಡಿದರೆ ಶೀತ ನಿವಾರಕ, ನವಜಾತ ಶಿಶುಗಳಿಗೆ ಆಹಾರ, ಮೂಲವ್ಯಾಧಿ ನಿವಾರಕ, ರೋಗನಿರೋಧಕ ಶಕ್ತಿಯ ಹೆಚ್ಚಳ, ಮಧುಮೇಹಿಗಳಿಗೂ ಒಳ್ಳೆಯದು, ಎದೆಹಾಲು ಹೆಚ್ಚಿಸುತ್ತದೆ, ಪೋಲಿಯೋಪೀಡಿತ ಮಕ್ಕಳೂ ಸಹ ಬಲಗೊಳ್ಳುತ್ತಾರೆ, ದೇಹದ ತೂಕ ಹೆಚ್ಚುತ್ತದೆ, ತೇಜಸ್ಸು ವೃದ್ಧಿ, ವೀರ್‍ಯವೃದ್ಧಿ ಹೀಗೆ ಎಂಟು ಪುಟಗಳ ಹೊಗಳಿಕೆ ತುಂಬಿದೆ.  ಯಾವುದೇ ಅಡ್ಡಪರಿಣಾಮಗಳಿಲ್ಲ.  ಸಮಸ್ಯೆಗಳಂತೂ ಇಲ್ಲವೇ ಇಲ್ಲ ಇತ್ಯಾದಿ.

ನವರ ಬೆಳೆಗಾರರ ಸಂಘ, ನವರ ಕ್ಲಬ್, ನವರ ಕೊಳ್ಳುವವರ ಸಹಕಾರ ಸಂಘ, ನವರ ರಫ್ತು ಮಾಡುವವರು ಹೀಗೆ ಉದ್ದನೆಯ ಪಟ್ಟಿ.

ಈ ಸುದ್ದಿಯನ್ನೆಲ್ಲಾ ಕೇಳಿ ಕೇರಳದ ಥನಲ್ ಸಂಸ್ಥೆಯ ಉಷಾ ಹಾಗೂ ಶ್ರೀಧರ್ ನಗುತ್ತಾರೆ.  ಪಾರಂಪರಿಕ ಅಧ್ಯಯನದ ಪ್ರಕಾರ ನವರವೊಂದೇ ಯಾವ ರೋಗಕ್ಕೂ ಔಷಧಿಯಲ್ಲ.  ಕೇರಳದಲ್ಲಿ ಸಿಗುವ ಔಷಧೀಯ ಸಸ್ಯಗಳನ್ನು ಇದರೊಂದಿಗೆ ಬೆರೆಸಿ ಔಷಧವಾಗಿ ಪರಿವರ್ತಿಸಲಾಗುತ್ತದೆ.  ನವರಕ್ಕೆ ರೋಗ ಬಾರದಂತೆ ತಡೆಯುವ ಶಕ್ತಿ ಇರಬಹುದು.  ಅದಿನ್ನೂ ಸಂಶೋಧನೆಯಾಗಬೇಕಿದೆ ಎನ್ನುತ್ತಾರೆ.  [ಥನಲ್ ಕೇರಳದ ಸಾವಯವ ಕೃಷಿ ಸಂಶೋಧನಾ ಸಂಸ್ಥೆ, ಉಷಾ/ಶ್ರೀಧರ್ ಸಂಶೋಧಕರು]

ತಮಿಳುನಾಡಿನವರು ಕೇರಳದಷ್ಟು ಮುಂದಿಲ್ಲ. ಕಾವೇರಿ ಬಳಸಿಕೊಂಡು ಬೆಳೆಯುವ ಭತ್ತವೆಲ್ಲಾ ಹೈಬ್ರಿಡ್ ತಳಿಗಳು.  ದೇಸಿ ತಳಿಗಳನ್ನು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಹುಡುಕಬೇಕಿದೆ.  ಹಾಗೆ ಸಿಕ್ಕಿದ್ದು ನೀಲನ್‌ಸಾಂಬ- ಸಹಜ ಸಮೃದ್ಧದ ಶೋಧನೆಯಿದು.

ನೀಲನ್‌ಸಾಂಬಾ ಅತ್ಯಂತ ಪೌಷ್ಟಿಕ ಹಾಗೂ ವಿಟಮಿನ್ ಎ ಹೊಂದಿರುವ ತಳಿ.  ಗರ್ಭಿಣಿಯರನ್ನು ನೋಡಲು ಹೋಗುವವರು ನೀಲನ್‌ಸಾಂಬಾದ ಅಕ್ಕಿಯನ್ನು ಒಯ್ಯುತ್ತಾರಂತೆ.  ಆದರೆ ಇದರ ಬೇರು ಮಾತ್ರ ಘೋರ ವಿಷವಂತೆ!!  ಯಾರೇ ತಿಂದರೂ ಸಾವು ತಪ್ಪದು ಎನ್ನುತ್ತಾರೆ ಸಹಜ ಸಮೃದ್ಧದ ಜಿ. ಕೃಷ್ಣಪ್ರಸಾದ್. ಅಲ್ಲಿ ಚಂಪಾ ಹಾಗೂ ರಕ್ತಪಾಲಿ ಎನ್ನುವ ತಳಿಗಳೂ ಔಷಧೀಯವೆನ್ನಲಾಗಿದೆ.

ಛತ್ತೀಸ್‌ಘಡ ಇಂದಿಗೂ ದೇಸೀ ಭತ್ತಗಳ ವೈವಿಧ್ಯದ ರಾಜಧಾನಿ.  ೧೯೭೦ರಲ್ಲಿಯೇ ಡಾ.ರಿಚಾರಿಯೇರವರು ೨೦ ಸಾವಿರಕ್ಕೂ ಅಧಿಕ ತಳಿಗಳನ್ನು ಸಂಗ್ರಹಿಸಿದರು.  ಕೆಲವನ್ನು ತಮ್ಮ ಸಂಶೋಧನಾಲಯದಲ್ಲೇ ಬೆಳೆಸಿದರು.  ನಾಟೀ ಭತ್ತದಲ್ಲಿ ಅಧಿಕ, ಅತ್ಯಧಿಕ ಇಳುವರಿ ನೀಡುವ ತಳಿಗಳನ್ನು ಗುರುತಿಸಿದರು.  ಹುಲ್ಲು ತಳಿಗಳು, ರೋಗ ಎದುರಿಸಬಲ್ಲ ತಳಿಗಳು ಹೀಗೆ ನೂರಾರು ಪ್ರಯೋಗಗಳನ್ನು ಮಾಡಿದರು.

ಔಷಧೀಯ ಗುಣ ಇದೆ ಎನ್ನಲಾದ ೬೦ ರೀತಿಯ ತಳಿಗಳ ಅಧ್ಯಯನವನ್ನು ಪ್ರತ್ಯೇಕವಾಗಿ ಮಾಡಿದರು.  ಈ ಬಗ್ಗೆ ಆದಿವಾಸಿ ಕೃಷಿ ತಜ್ಞರೊಂದಿಗೆ ಚರ್ಚಿಸಿದರು.  ಅವರು ನೀಡಿದ ಮಾಹಿತಿಗಳಿಗೆ ಮೊದಲ ಆದ್ಯತೆ.  ಕಾರ್‌ಹಾನಿ ಎಂಬ ಭತ್ತಕ್ಕೆ ಚರ್ಮರೋಗ ನಿವಾರಣೆ ಮಾಡುವ ಗುಣವಿದೆಯೆಂದು ಒಬ್ಬ ಆದಿವಾಸಿ ಹೇಳಿದ.  ಡಾ. ರಿಚಾರಿಯೇ ೧೫ ದಿನಗಳ ಕಾಲ ಅವರೊಂದಿಗೆ ಉಳಿದು ಅವರು ಔಷಧವಾಗಿ ಅಕ್ಕಿಯನ್ನು ಹೇಗೆ ಬಳಸುತ್ತಾರೆಂದು ದಾಖಲಿಸಿದರು.

ಪಾರ್ಶ್ವವಾಯು ನಿವಾರಕ, ಬಲವರ್ಧಕ, ಮೊಡವೆ ನಿವಾರಕಗಳವರೆಗೆ ಸಾಕಷ್ಟು ರೀತಿಯ ಭತ್ತಗಳಿವೆಯೆಂದು ತಮ್ಮ ಪ್ರಬಂಧದಲ್ಲಿ ಬರೆದಿದ್ದಾರೆ.

ಇಂದಿಗೂ ಭೇದಿ, ಉರಿಮೂತ್ರ, ಕೆಂಪುಮೂತ್ರ ಮುಂತಾದ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಅಕ್ಕಿನೀರು ಎಂಬುದೇ ಅವರ ನಂಬಿಕೆ.

ಭತ್ತ, ಅಕ್ಕಿಯ ಬಗ್ಗೆ ಅತಿ ರಂಜನೀಯ ವಿಚಾರಗಳೇನೇ ಇರಲಿ, ಅದನ್ನು ಬಿಟ್ಟು ನೋಡಿದರೂ ಅನೇಕ ಅಕ್ಕಿಗಳನ್ನು ಉಂಡಮೇಲೆ ನಾವೇ ಅದರ ಒಳ್ಳೆಯ ಗುಣಗಳನ್ನು ಹೇಳತೊಡಗುತ್ತೇವೆ.

ಸಾವಯವದಲ್ಲಿ ಬೆಳೆಯುವ ಕೆಂಪಕ್ಕಿ, ನವರ, ರತ್ನಚೂಡಿ ಮುಂತಾದ ಅಕ್ಕಿಗಳ ಗುಣಗಳೇ ಮತ್ತೆ ಮತ್ತೆ ಅದನ್ನು ಬಯಸುವಂತೆ ಮಾಡುತ್ತದೆ.  ವರ್ಷವಿಡೀ ಆರೋಗ್ಯ ಹಾಳಾಗದಿದ್ದರೆ ಅಕ್ಕಿಯ ಗುಣವಿರಬಹುದು ಎಂದು ಅಂದುಕೊಳ್ಳುವುದೇ ಇಲ್ಲ.  ಅಕ್ಕಿಯ ಗುಣಾವಗುಣವನ್ನು ನಾವೇ ಒರೆಗೆ ಹಚ್ಚಬಹುದಲ್ಲಾ ಎಂದೂ ನಮಗೆ ಅನ್ನಿಸಲಿಲ್ಲ ಅಲ್ಲವೇ?  ಇನ್ನೇಕೆ ತಡ?  ನಮಗ್ಯಾವ ಅಕ್ಕಿ, ನಮಗ್ಯಾವ ಆಹಾರ ಎನ್ನುವುದನ್ನು ನಿರ್ಧರಿಸಿ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೆ ಇದೆ.