ಜನನ : ೧೯೩೨ ರಲ್ಲಿ ಭದ್ರಗಿರಿಯಲ್ಲಿ ಉಡುಪಿ ಜಿಲ್ಲೆ

ಮನೆತನ : ಸುಸಂಸ್ಕೃತರ ಮನೆತನ. ಪೂರ್ವಜರು ಯಕ್ಷಗಾನ, ಕಥಾ ಕೀರ್ತನ ಕಲೆಯಲ್ಲಿ ಪರಿಣಿತರು. ತಂದೆ ವೆಂಕಟರಮಣ ಪೈ. ತಾಯಿ ರುಕ್ಮಿಣಿಯಮ್ಮ. ಕಿರಿಯ ಸಹೋದರರಾದ ಭದ್ರಗಿರಿ ಕೇಶವದಾಸರು, ಸರ್ವೋತ್ಮತ ದಾಸರು ವಿಶ್ವವಿಖ್ಯಾತ ಕೀರ್ತನಕಾರರು.

ಶಿಕ್ಷಣ : ಭದ್ರಗಿರಿಯ ಅಧಿದೇವತೆಯಾದ ಶ್ರೀ ವೀರ ವಿಠಲನೇ ಇವರ ಗುರು. ಅವನ ಸನ್ನಿಧಿಯಲ್ಲಿ ಹಾಡಿ -ಪಾಡಿ, ಕುಣಿದು ನರ್ತಿಸುತ್ತಾ ಗ್ರಾಮದ ಜನರ ಮುಂದೆ ಭಜನಾದಿಗಳನ್ನು ಮಾಡುತ್ತಾ ಕೀರ್ತನ ಕಲೆಯನ್ನು ರೂಢಿಸಿಕೊಂಡ ಸ್ವಾಧ್ಯಾಯಿ. ಇದಕ್ಕೊಂದು ರೂಪ ಕೊಟ್ಟು ಸಂಗೀತ-ಸಾಹಿತ್ಯಗಳನ್ನೊದಗಿಸಿ ದಾಸದೀಕ್ಷೆ ನೀಡಿದವರು ಕಾಶೀಮಠ ಸಂಸ್ಥಾನದ ಶ್ರೀ ಶ್ರೀ ಸುಧೀಂದ್ರ ತೀರ್ಥರು. ೧೯೫೩ ರಲ್ಲಿ ಇವರಿಗೆ ಈ ದೀಕ್ಷೆ ದೊರೆಯಿತು.

ಕ್ಷೇತ್ರ ಸಾಧನೆ : ೨೩-೨-೧೯೫೧ ಮಹಾಶಿವರಾತ್ರಿಯ ದಿನದಂದು. ಹರಿಕಥಾ ದಾಸರೊಬ್ಬರ ಗೈರುಹಾಜರಿಯಲ್ಲಿ ಈ ೧೯ ವರ್ಷದ ತರುಣ ಪ್ರಪ್ರಥಮವಾಗಿ ಯಾವ ಪೂರ್ವಸಿದ್ಧತೆ ಇಲ್ಲದೆ ಕಥೆ ಮಾಡಿ ಅಲ್ಲಿನ ವಿದ್ವಜ್ಜನರ ಪ್ರಶಂಸೆಗೆ ಪಾತ್ರರಾದ ಅಚ್ಯುತದಾಸರು ಅಲ್ಲಿಂದ ಹಿಂದಿರುಗಿ ನೋಡಿದವರೇ ಅಲ್ಲ, ಕೀರ್ತಿಯ ಸೋಪಾನವನ್ನೇರುತ್ತಲೇ ಹೋದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಲವಾರು ಬಾರಿ ಯಾತ್ರೆ ಮಾಡಿ ತಮ್ಮ ಕೀರ್ತನ ಸೌರಭವನ್ನು ಉಣಬಡಿಸಿದ್ದಾರೆ. ಇದುವರೆಗೆ ಅವರು ನೀಡಿರುವ ಕಾರ್ಯಕ್ರಮಗಳು ಅಗಣಿತ! ಇಂದು ರಾಷ್ಟ್ರಮಟ್ಟದಲ್ಲೇ ಅದ್ವಿತೀಯ ಕೀರ್ತನಕಾರರೆನಿಸಿದ ಮಹಾನ್ ಕಲಾವಿದರು.

ತಮ್ಮ ಗುರುಗಳಾದ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಂದ ತಪ್ತ ಮುದ್ರಾಂಕಿತದೊಂದಿಗೆ ’ಮೂಲ ನಾರಾಯಣ’ ಎಂಬ ಅಂಕಿತ ಹೊಂದಿ ಸಹಸ್ರಾರು ಕೀರ್ತನೆಗಳನ್ನು ರಚಿಸಿದ್ದಾರೆ. ಹರಿಕಥಾ ಪೂರ್ವರಂಗ, ಗೀತಾರ್ಥ ಚಿಂತನೆ, ಗುರು ಚರಿತ್ರೆ (ದತ್ತ ಮಹಿಮೆ), ಶ್ರೀನಿವಾಸ ಕಲ್ಯಾಣ ಮುಂತಾಗಿ ೨೫ ಕ್ಕೂ ಮಿಕ್ಕಿ ಗ್ರಂಥ ರಚನೆ ಮಾಡಿದ್ದಾರೆ. ಅಲ್ಲದೆ ಇವರ ಇತ್ತೀಚಿನ ಸಾಧನೆಯೆಂದರೆ “ಹರಿಕಥಾಮೃತ ಸಿಂಧು” ಎಂಬ ಆರು ಸಂಪುಟಗಳ ಬೃಹತ್ ಗ್ರಂಥ ರಚನೆ – ಅದರಲ್ಲಿ ಈಗಾಗಲೇ ಮೂರು ಸಂಪುಟಗಳು ಮುದ್ರಣ ಕಂಡಿದ್ದು ಉಳಿದವು ಮುದ್ರಣ ಹಂತದಲ್ಲಿದೆ. ಇದೊಂದು ವಿಶ್ವಕೋಶ – ಕೀರ್ತನ ಕಲಾಭ್ಯಾಸಿಗಳಿಗೆ ಮಾರ್ಗದರ್ಶಕ. ಆಕಾಶವಾಣಿ – ದೂರದರ್ಶನ ಕೇಂದ್ರಗಳಿಂದ ಇವರ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ.

ಬೆಂಗಳುರಿನ ದಾಸಾಶ್ರಮ ಅಂತರರಾಷ್ಟ್ರೀಯ ಕೇಂದ್ರ ಕೀರ್ತನ ಮಹಾ ವಿದ್ಯಾಲಯ, ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಮುಂತಾದ ಸಂಸ್ಥೆಗಳ ಸ್ಥಾಪನೆಗೆ ಸಹೋದರ ಕೇಶವದಾಸರ ಜೊತೆಗೂಡಿ ಸಹಕರಿಸಿದ್ದಾರೆ. ಇಂದು ಈ ಎಲ್ಲಾ ಸಂಸ್ಥೆಗಳ ಗೌರವಾಧ್ಯಕ್ಷರಾಗಿದ್ದಾರೆ.

ಕನ್ನಡ, ಮರಾಠಿ, ತುಳು, ಕೊಂಕಣಿ, ಹಿಂದಿ ಭಾಷೆಗಳಲ್ಲಿ ಸಮಾನಾತ್ಮಕ ಪ್ರಭುತ್ವ ಹೊಂದಿ ಈ ಎಲ್ಲಾ ಭಾಷೆಗಳಲ್ಲೂ ಕೀರ್ತನ ಮಾಡುವ ಸಾಮರ್ಥ ಹೊಂದಿರುವ ಒಬ್ಬ ಅಪೂರ್ವ ಕಲಾವಿದರು. ’ಭಾರತ ಜ್ಯೋತಿ ಪ್ರಕಾಶನ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ತನ್ಮೂಲಕ ಅನೇಕ ಧಾರ್ಮಿಕ ಗ್ರಂಥಗಳನ್ನು ಪ್ರಕಟಿಸಿರುತ್ತಾರೆ. ’ದಾಸವಾಣಿ’ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿರುತ್ತಾರೆ. ಅನೇಕ ಧ್ವನಿ ಮುದ್ರಿಕಾ ಸಂಸ್ತೆಗಳು ಪ್ರಮುಖವಾಗಿ ’ಮಾಸ್ಟರ್ ರೆಕಾರ್ಡಿಂಗ್ ಕಂಪೆನಿ’ಯ ಸಂಗೀತಾ ಕ್ಯಾಸೆಟ್‌ಗಳ ಮೂಲಕ ಇವರು ಮಾಡಿರುವ ಅನೇಕ ಹರಿಕಥಾ ಪ್ರಸಂಗಗಳು ಧ್ವನಿ ಸುರುಳಿಗಳಾಗಿ ಹೊರ ಬಂದಿವೆ.

ಪ್ರಶಸ್ತಿ – ಪುರಸ್ಕಾರಗಳು : ಇವರಿಗೆ ಸಂದಿರುವ ಪ್ರಶಸ್ತಿ ಪುರಸ್ಕಾರಗಳು ಅಪಾರ ’ಕೀರ್ತನಾಚಾರ್ಯ’ ’ಕೀರ್ತನಾಗ್ರೇಸರ’, ’ಕೀರ್ತನ ಕೇಸರಿ’. ಮುಂತಾದ ಬಿರುದುಗಳೊಂದಿಗೆ ಸಂಸ್ಥೆಗಳಿಂದ, ಮಠ ಮಾನ್ಯಗಳಿಂದ ಸತ್ಕರಿಸಿ ಗೌರವಿಸಲ್ಪಟ್ಟಿದ್ದಾರೆ. ಅಖಿಲ ಕರ್ನಾಟಕ ಕೀರ್ತನಕಾರರ ಎರಡನೇ ಸಮ್ಮೇಳನದ ಅಧ್ಯಕ್ಷ ಪದವಿ, ಕರ್ನಾಟಕ ಗಾನಕಲಾ ಪರಿಷತ್ತಿನ ವಿದ್ವತ್ ಸದಸ್‌ನಲ್ಲಿ ಸನ್ಮಾನಗಳೇ ಅಲ್ಲದೆ ಕರ್ನಾಟಕ ರಾಜ್ಯೋತ್ಸವ ’ನಾಡೋಜ’ ಪ್ರಶಸ್ತಿ ಮುಂತಾಗಿ ಅನೇಕ ಪ್ರಶಸ್ತಿ ಗಳಿಸಿರುವ ದಾಸರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೮೯-೯೦ರ ಸಾಲಿನ ’ಕರ್ನಾಟಕ ಕಲಾ ತಿಲಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೆ ಇವರ ಒಂದು ಸಾಕ್ಷ್ಯಾಚಿತ್ರದ ಸಿ.ಡಿ.ಯನ್ನು ಹೊರತಂದಿದೆ.