ಭದ್ರಗಿರಿಯು ನಿಸರ್ಗದ ನೆಲೆವೀಡಾದ ದಕ್ಷಿಣ ಕನ್ನಡ ಜಿಲ್ಲೆಯ ಪರಶುರಾಮ ಕ್ಷೇತ್ರವೆನಿಸಿರುವ ಉಡುಪಿಯಿಂದ ನಾಲ್ಕು ಮೈಲಿ ದೂರದಲ್ಲಿದೆ. ಸುವರ್ಣನದಿ ಮತ್ತು ಎಣ್ಣೆ ಹೊಳೆಯಸಂಗಮ. ಈ: ಸಂಗಮದ ಒಂದು ದಡ ಕಲ್ಯಾಣಪುರ ಮತ್ತೊಂದು ದಡವೇ ಶ್ರೀಕ್ಷೇತ್ರ ಭದ್ರಗಿರಿ.

ಇದು ಉಡುಪಿಯ ಬೈಕಾಡಿ ಗ್ರಾಮದ ಒಂದು ಬಡಾವಣೆ. ಇಲ್ಲಿ ಭಕ್ತರಕ ಅಭೀಷ್ಟಗಳನ್ನು ನೆರವೇರಿಸುವ ಶ್ರೀ ಕಾಮೇಶ್ವರನ ದೇವಸ್ಥಾನವಿದೆ. ವರ್ಷಕ್ಕೊಮ್ಮೆ ಸಂಭ್ರಮದಕ ದೀಪೋತ್ಸವ, ಭಜನೆಕ ಸತ್ಸಂಗಾದಿ ಕಾರ್ಯಕ್ರಮಗಳೂ, ಮಹಾ ಶಿವರಾತ್ರಿಯ ದಿನದಂದು ಅಹರ್ನಿಶಿ ಅಖಂಡ ಭಜನೆ ಕೀರ್ತನಾದಿ ಸತ್ಸಂಗಗಳೂ ವಿಶೇಷವಾಗಿ ನಡೆಯುತ್ತದೆ. ಅಷ್ಟೇ ಅಲ್ಲದೆ ಪುರಾತನವಾದ ವಿಠಲನ ದೇವಸ್ಥಾನವೂ ಇಲ್ಲಿದ್ದು ಭದ್ರಗಿರಿಯ ನಿವಾಸಿಗಳ ಆರಾದ್ಯಮೂರ್ತಿಯಾಗಿ “ಯೋಗಾ ವಿಠಲ” ನೆನಿಸಿ ಮರೆಯುತ್ತಿದ್ದಾನೆ.

ಬಡುಗು ತಿಟ್ಟಿನ ಯಕ್ಷಗಾನ ಕಲೆಯ ತವರೂರಾದ ಬ್ರಹ್ಮಾವರಕ್ಕೆ ತೀರ ಸಮೀಪವಾದ ಭದ್ರಗಿರಿಯಲ್ಲೂ ಯಕ್ಷಗಾನ ಕಲೆ ಸಾಕಷ್ಟು ಪಸರಿಸಿದ್ದು ಇಲ್ಲಿನ ಅನೇಕ ಕುಟುಂಬಗಳ  ಯುವಕರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಬೆಳಗುತ್ತಿದ್ದರು.

ಇಂಥ ಒಂದು ಕುಟುಂಬ ಭದ್ರಗಿರಿಯ  ವೆಂಕಟರಮಣ ಪೈ ಹಾಗೂ ರುಕ್ಮಿಣಿಯಮ್ಮನವರದ್ದು . ಗೌಡ ಸಾರಸ್ವತ ಬ್ರಾಹ್ಮಣ ದಂಪತಿಗಳು. ಇವರು ಮೂಲತಃ ಸಂತೆಕಟ್ಟೆಯವರು. ಇವರ ಮನೆದೇವರು ಮೂಲ್ಕಿಯ ಶ್ರೀ  ನೃಸಿಂಹದೇವರು. ಸಣ್ಣದಾದ ವ್ಯಾಪಾರ ವೃತ್ತಿಯಿಂದ ಸರಳ ಜೀವನ ನಡೆಸುತ್ತಿದ್ದು ಶ್ರೀ ನೃಸಿಂಹ ದೇವರ ಅಂತರಂಗ ಭಕ್ತರಾಗಿ ಸೇವೆ ನಡೆಸುತ್ತಿದ್ದರು. ಮುಂದೆ ಶ್ರೀ ನೃಸಿಂಹ ದೇವರ ಆದೇಶದಂತೆ ಭದ್ರಗಿರಿಗೆ ಬಂದು ನೆಲೆಸಿ ಅಲ್ಲಿನ ವೀರ ವಿಠಲನ ಆರಾಧಕರಾದರು.  ಅವನ ಅನುಗ್ರಹದಿಂಧ ಈ ದಂಪತಿಗಳಿಗೆ ಐವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳು ಜನಿಸಿದರು.

ಈಗ ಜನಿಸಿದ ಐವರು ಗಂಡುಮಕ್ಕಳಲ್ಲಿ ನರಸಿಂಹ ಪೈ ಹಿರಿಯರು. ಅವರ ನಂತರ ಅಚ್ಚುತ ಪೈ. ಸರ್ವೋತ್ತಮ ಪೈ ಹಾಗೂ ವಿಠಲ ಪೈ ಅಲ್ಲದೆ ಪ್ರೇಮಾಬಾಯಿ ಮತ್ತು ವಿಮಲಾಬಾಯಿ ಅಂತ ಇಬ್ಬರು ಹೆಣ್ಣುಮಕ್ಕಳು. ಇವರಲ್ಲಿ ಹಿರಿಯರಾದ ನರಸಿಂಹ ಪೈಯವರೂ ಸಹ ಅತ್ಯಂತ ಚಿಕ್ಕವಯಸ್ಸಿನಲ್ಲೇ ಹರಿಪಾದ ಸೇರಿದರು. ಹಾಗಾಗಿ ಈಗಿರುವ ಭದ್ರಗಿರಿ ಸಹೋದರರಲ್ಲಿ ಅಚ್ಯುತ ಪೈಯವರೇ ಹಿರಿಯರು.

ವೆಂಕಟರಮಣ ಪೈಯವರದು ಆ ಕಾಲಕ್ಕೆ ಸಾಕಷ್ಟು ದೊಡ್ಡ ಕುಟುಂಬವೇ! ಸಾಧಾರಣವಾದ ವ್ಯಾಪಾರದಿಂದ ಬರುತ್ತಿದ್ದ ವರಮಾನ ಸಂಸಾರ ತೂಗುವಷ್ಟರ ಮಟ್ಟಿಗಿತ್ತು. ಆದರೂ ಪೈಯವರು ಮಕ್ಕಳಿಗೆ ಸಾಕಷ್ಟು ವಿದ್ಯಾಭ್ಯಾಸ ಕೊಡಿಸಿದರು. ಇದಕ್ಕೋಸ್ಕರ ಅವರು ಉಡುಪಿಗೆ ಬಂದು ನೆಲೆಸಿದರು. ಲೌಕಿಕಕ ವಿದ್ಯಾಭ್ಯಾಸದ ಜೊತೆ ಜೊತೆಗೇ ಸಂಗೀತ, ಯಕ್ಷಗಶಾನ ಕಲೆಯ ಬಗ್ಗೆಯೂ ಸಾಕಷ್ಟು ಶಿಕ್ಷಣ ದೊರೆಯಿತು. ಇದರಲ್ಲಿ ಅಚ್ಯುತ ಪೈ  ಸಾಕಷ್ಟು ನಿಷ್ಣಾತರಾಗಿ ಉಡುಪಿಯ ಸುತ್ತ ಮುತ್ತಲ ಪ್ರದೇಶಗಳಲ್ಲಿ ಉತ್ತಮ ಯಕ್ಷಗಾನ ಪಟುವೆನಿಸಿಕೊಂಡಿದ್ದರು.

ಹರಿಕಥಾ ಕ್ಷೇತ್ರಕ್ಕೆ ಪಾದಾರ್ಪಣೆ: ಅಚ್ಯುತ ಪೈಯವರು ಹರಿಕಥಾ ಕ್ಷೇತ್ರಕ್ಕೆ ಕಾಲಿರಿಸಿದ್ದೂ ಒಂದು ಆಕಸ್ಮಿಕವೇ. ೧೯೫೧ರ ಮಹಾಶಿವರಾತ್ರಿಯ ದಿನ,ಭದ್ರಗಿರಿಯ ಕಾಮೇಶ್ವರನ ಸನ್ನಿಧಿಯಲ್ಲಿ ಆಗಿನ ಪ್ರಸಿದ್ಧ ವಿದ್ವಾಂಸರೊಬ್ಬರ ಶಿವ ಹರಿಕಥೆ ಏರ್ಪಾಡಾಗಿತ್ತು. ನಿಗದಿತ ಸಮಯ ಮೀರಿದರೂ ದಾಸರ ಸುಳಿವಿಲ್ಲ. ಕಾರ್ಯಕರ್ತರು-ಸಂಚಾಲಕರು ಕಂಗಾಲಾಗಿದ್ದರು. ಆದರೆ ಉತ್ಸಾಹೀ ಯುವಕರು ಧೃತಿಗೆಡಲಿಲ್ಲ. ಈಗಾಗಲೇ ಯಕ್ಷಗಾನ ತಾಳಮದ್ದಳೆಯಲ್ಲಿ ಸಾಕಷ್ಟು ಪ್ರಭಾವೀ ಯುವಕನಾಗಿದ್ದ ಅಚ್ಯುತ ಪೈಯನ್ನು ಹಿಡಿದು ಒಲಿಸಿ ಹುರಿದುಂಬಿಸಿ ಸಭೆಗೆ ಕರೆತಂಧರು. ಯಕ್ಷಗಾನ ಕಲೆಯಲ್ಲಿ ನುರಿತವನಾದರೂ ಈ ಹುಡುಗನಿಗೆ ಹರಿಕಥೆ ಕೇಳಿ ಪರಿಚಯವಿತ್ತೇ ಹೊರತು ಕಥೆ ಮಾಡಿ ಅನುಭವವಿರಲಿಲ್ಲ. ಆದರೂ ಬಿಸಿರಕ್ತದ ಉತ್ಸಾಹ. ಆಗ ಇವರಿಗೆ ಇನ್ನೂ ೧೮ ವರ್ಷ. ಒಂದು ಕೈ ನೋಡೇ ಬಿಡೋಣವೆಂದು ಈ ಮಹಾ ಪ್ರಯೋಗಕ್ಕೆ ಒಪ್ಪಿಯೇ ಬಿಟ್ಟರು. ಯಾವ ಪೂರ್ವ ಸಿದ್ಧತೆಯೂ ಇಲ್ಲದೆ ಅಂದು ಕಾಮೇಶ್ವರನ ಮೇಲೆ ಸಂಪೂರ್ಣ ಭಾರ ಹಾಕಿ ಕಥೆ ನಡೆಸಿಯೇ ಬಿಟ್ಟರು. ಬಂದಂಥ ಶ್ರೋತೃಗಳು ಮೂಕ ವಿಸ್ಮಿತರಾಗಿ ಹುಡುಗನ ದಾರ್ಷ್ಟ್ಯಕ್ಕೆ, ರೂಪಕ್ಕೆ, ಮೇಲಾಗಿ ಆತನ ಗಾಯನಕ್ಕೆ ಮಾರುಹೋದರು . ಯಾರು ಈ ಹುಡುಗ? ಪರಿಚಯವಿಲ್ಲದವರು ಕೇಳಿದರೆ ಪರಿಚಯವಿದ್ದವರು “ನಮ್ಮ ವೆಂಕಟರಮಣ ಪೈಗಳವರ ಮಗ ಅಚ್ಯುತ ಅಲ್ವೋ” ಎಂದು ಉದ್ಗರಿಸಿದರು. ಬಂದವರೆಲ್ಲ “ಏನು ಕಂಠ ಮಾರಾಯ್ರೆ, ಎಂಥ ಗಾಯನ, ಮಾತೋ ಚೊಕ್ಕ; ಈ ಹುಡುಗ ಒಳ್ಳೆ ಕೀರ್ತನಕಾರನಾಗ್ತಾನೆ. ಇವನಿಗೆ ಉಜ್ವಲ ಭವಿಷ್ಯ ಉಂಟು” ಎಂದೆಲ್ಲ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು . ಹೀಗೆ ತಮಗೇ ಅರಿವಿಲ್ಲದಂತೆ ಆಕಸ್ಮಾತ್ತಾಗಿ ಕೀರ್ತನ ರಂಗ ಪ್ರವೇಶಿಸಿದ ಈ ಹುಡುಗ ಇಂದು ಕೀರ್ತನ ಕ್ಷೇತ್ರದ ಮೇರುವಾಗಿ; ಅನಭಿಷಕ್ತ ಸಾಮ್ರಾಟರಾಗಿ; ಕೀರ್ತನಕಾರರೆಂಧರೆ ಸಂತ ಭದ್ರಗಿರಿ ಅಚ್ಯುತದಾಸರು ಎಂಬ ಕೀರ್ತಿಗೆ ಭಾಜನರಾಗಿ ಇಡೀ ರಂಗಕ್ಕೇ ‘ದೊಡ್ಡಣ್ಣ’ ನಾಗಿ ಮೆರೆದಿದ್ದಾರೆ.

ಬಾಲ್ಯ-ವಿದ್ಯಾಭ್ಯಾಸ: ಅಚ್ಯುತದಾಸರ ಜನನ ೧೯೩೨ರ ಮಾಘ ಬಹುಳ ದ್ವಿತೀಯ ದಿನದಂದು. ಹಿರಿಯ ಮಗನಿಗೆ ಕುಲದೇವರ ಹೆಸರನ್ನಿಟ್ಟಿದ್ದರು ನರಸಿಂಹನೆಂದು. ಈ ಮಗುವಿಗೆ ಅಚ್ಯುತನೆಂಧು ನಾಮಕರಣವಾಯಿತು. ಬ್ರಹ್ಮಾವರ, ಭದ್ರಗಿರಿ ಕಲ್ಯಾಣಪುರಗಳು  ಯಕ್ಷಗಾನ, ಸಂಗೀತ, ಸಾಹಿತ್ಯಗಳ ತೌರೂರು, ಭಜನೆ, ಪುರಾಣ, ಪ್ರವಚನಗಳು ಇಲ್ಲಿ ದಿನನಿತ್ಯ ನಡೆಯುವ ಪರಿಪಾಠ. ಈ ಪರಿಸರದಲ್ಲೇ ಬೆಳೆದ ಅಚ್ಯುತ ಪೈ ಸಹಜವಾಗಿ ಕಲೆ-ಸಾಹಿತ್ಯದ ಕಡೆಗೆ ಒಲಿದರು. ಯಕ್ಷಗಾನ ಭಾಗವತಿಕೆ, ಭಜನೆಯಲ್ಲಿ ಪಾಲ್ಗೊಳ್ಳುವಿಕೆ ಮುಂತಾದವುಗಳಿಂದ ತಮ್ಮಲ್ಲಿ ಸುಪ್ತವಾಗಿದ್ದ ಕಲಾಶ್ರೀಮಂತಿಕೆಯನ್ನು ಉಜ್ಜೀವನಗೊಳಿಸಿದರು. ಹೀಗಾಗಿ ಇವರ ಲೌಕಿಕ ವಿದ್ಯಭ್ಯಾಸ ಪ್ರಾಥಮಿಕ ಶಿಕ್ಷಣಕ್ಕೇ ಸೀಮಿತವಾಗಿ ಸದಾ ಪಾರಮಾರ್ಥ ಚಿಂತನೆಯಲ್ಲಿಯೇ ತೊಡಗಿ ಸ್ವಾಧ್ಯಾಯ ನಿರತರಾದರು. ಅಪಾರವಾದ ಜ್ಞಾನಭಂಡಾರ ಬೆಳೆಸಿಕೊಂಡರು.

ಅಣ್ಣ ನರಸಿಂಹ ಪೈ ಸಂಗೀತ ಕಲಿಯುವಾಗ ತಾವೂ ತಮ್ಮ ಸಹೋದರ ಕೇಶವನೊಡಗೂಡಿ ಅಲ್ಲಿ ಕುಳಿತು ಕೇಳುವುದು ಅಭ್ಯಸಿಸುವುದು ಹೀಗೆ ಸಂಗೀತ ಕಲೆಯಲ್ಲೂ ನಿಷ್ಣಾತರಾದರು. ಸಂಗೀತಕ್ಕೆಕ ಸಂಬಂಧಿಸಿದ ಶಾಸ್ತ್ರಗ್ರಂಥಗಳ ಅಧ್ಯಯನವನ್ನು ಆಳವಾಗಿ ಮಾಡಿ ಅದರಲ್ಲೂ ಸಾಕಷ್ಟು ಪರಿಣತಿ ಗಳಿಸಿದರು. ಉತ್ತಮ ಕಂಠಶ್ರೀ, ರಾಗ ಮಾಧುರ್ಯ ಹೊಂದಿದ್ದ ಅಚ್ಯುತ ಪೈಗಳ ಹಾಡುಗಾರಿಕೆಗೆ ಅಲ್ಲಿನ ಜನ ಮರುಳಾಗಿದ್ದರು. ೧೯೫೧ರಲ್ಲಿ ಮಹಾಶಿವರಾತ್ರಿಯಂದು ಕೀರ್ತನ ರಂಗಕ್ಕೆ ಪ್ರಪ್ರಥಮವಾಗಿ ಯಾವ ಪೂರ್ವಸಿದ್ಧತೆ ಇಲ್ಲದೆ ಪದಾರ್ಪಣ ಮಾಡಿದ ಬಾಲಕ ಅಚ್ಯುತ ಪೈ ಅಲ್ಲಿಂದ ಮುಂದೆ ಹಿಂದುರುಗಿ ನೋಡಲೇ ಇಲ್ಲ. ಮುಂದಿನ ಭವಿಷ್ಯದತ್ತ ದಾಪುಗಾಲು ಹಾಕುತ್ತ ಕೀರ್ತಿ ಶಿಖರದ ಮೇರುವನ್ನು ತಲುಪಿದರು. ಭದ್ರಗಿರಿ ಅಚ್ಯುತ ಪೈಃ ಅಚ್ಯುತದಾಸರಾದರು.

ದಾಸದೀಕ್ಷೆ: ಅಚ್ಯುತದಾಸರು ಆಕಸ್ಮಿಕವಾಗಿ ಕೀರ್ತನ ರಂಗ ಪ್ರವೇಶ ಮಾಡಿದರು. ಅದರಲ್ಲಿ ಹೆಸರನ್ನು ಗಳಿಸಿದರು. ಆದರೂ ಗುರ್ವಾನುಗ್ರಹಪೂರ್ವಕ ವಿದ್ಯುಕ್ತವಾಗಿ ದಾಸದೀಕ್ಷೆ ಪಡೆದು ಹರಿದಾಸ ನಾಗಬೇಕೆಂದು ಉತ್ಕಟಾಕಾಂಕ್ಷೆ ಅವರಲ್ಲಿತ್ತು. ಇದಕ್ಕಾಗಿ ತಕ್ಕ ಸಂದರ್ಭಕ್ಕೆ ಕಾಯುತ್ತಿದ್ದರು. ಅದೂ ಭಗವದನುಗ್ರಹದಿಂದ ಕೂಡಿ ಬಂತು. ಹರಿಕಥಾರಂಗಕ್ಕೆ ಪದಾರ್ಪಣೆ ಮಾಡಿದ ದಿನದಿಂದ ಎರಡು ವರ್ಷದ ನಂತರ ಇವರು ಕಾಯುತ್ತಿದ್ದ ದಿನ ಬಂದೇ ಬಂತು.

ಶ್ರೀಮದಾಚಾರ್ಯರೆನಿಸಿದದ ಶ್ರೀಮನ್ಮಧ್ವರ ಪರಂಪರೆಯ ಔತ್ತರೇಯ ಪೀಠಗಳಲ್ಲಿ ಒಂದಾದ ಶ್ರೀ ಕಾಶೀಮಠ ಪರಂಪರೆಯಲ್ಲಿ ಬಂದ ಶ್ರೀಮತ್ಸುಧೀಂದ್ರ ತೀರ್ಥ ಶ್ರೀ ಪಾದಂಗಳವರು ಚಾತುರ್ಮಾಸ್ಯ ವ್ರತದ ಅಂಗವಾಗಿ ಕೋಟೇಶ್ವರದ ಶ್ರೀ ಪಟ್ಟಾಭಿರಾಮ ದೇವಸ್ಥಾನದಲ್ಲಿ ಬೀಡು ಬಿಟ್ಟಿದ್ದರು. ಅಲ್ಲಿ ಪ್ರತಿದಿನ ನಡೆಯುತ್ತಿದ್ದ ಸತ್ಸಂಗದಲ್ಲಿ ಅಚ್ಯುತದಾಸರ ಹರಿಕಥೆ ಏರ್ಪಾಡಾಗಿತ್ತು. ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ದಾಸರು ಶ್ರೀಗಳವರ ದರ್ಶನ ಪಡೆದು ತಮ್ಮ ಮನದಾಕಾಂಕ್ಷೆಯನ್ನು ನಿವೇದಿಸಿದರು. ತಾವು ಹರಿಗುರು ಸೇವಕನಾಗಿ ದಾಸಪಂಥವನ್ನು ಹಿಡಿದು ವಿದ್ಯುಕ್ತವಾಗಿ ಹರಿದಾಸನಾಗುವಂತೆ ಅನುಗ್ರಹಿಸಬೇಕೆಂದು ಬೇಡಿದರು. ಶ್ರೀಗಳಾದರೂ ದಾಸರಿಗೆ ಮಠದಲ್ಲಿ ಆಶ್ರಯವಿತ್ತು. ಕಾಲಕಾಲಕ್ಕೆ ತತ್ವರಹಸ್ಯ, ಧರ್ಮಾಚರಣೆ, ಕೀರ್ತನ ಪದ್ಧತಿಯ ರಹಸ್ಯ, ಸಾಧನ ಮಾರ್ಗಗಳನ್ನು ಬೋಧಿಸಿ, ನಿತ್ಯವೂ ತಮ್ಮ ಉಪಾಸನಾ ದೇವರು ಶ್ರೀ ವ್ಯಾಸ ರಘುಪತಿಯ ಸನ್ನಿಧಿಯಲ್ಲಿ ಕೀರ್ಥನೆ ಮಾಡಿಸಿ ಅದರಲ್ಲಿ ಕಂಡುಬಂದ ಲೋಪದೋಷಗಳನ್ನು ತಿದ್ದಿ ಆಶೀರ್ವದಿಸಿ ಅವರಿಗೆ ವಿದ್ಯುಕ್ತವಾಗಿ ದಾಸದೀಕ್ಷೆ ನೀಡಿ “ಅಚ್ಯುತದಾಸ”ನೆಂದು ಕರೆದರು. ಹೀಗೆ ಗುರುಗಳಿಂದ ಅನುಗ್ರಹಿತರಾದ ದಾಸರು ಅಂದಿನಿಂದ ಇಂದಿನವರೆಗೂ ಶ್ರೀಗಳವರ ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಅವರು ಎಲ್ಲೇ ಮೊಕ್ಕಾಂ ಹೂಡಿದರೂ ಅಲ್ಲಿ ತಾವು ಉಪಸ್ಥಿತರಿದ್ದು ಹರಿಕಥಾ ಸೇವೆ ನಡೆಸುವ ಪರಿಪಾಠವನ್ನಿಟ್ಟುಕೊಂಡಿದ್ದಾರೆ.

ಅಂಕಿತ ಪ್ರದಾನ: ಸಾಹಿತ್ಯದಲ್ಲೂ ಸಾಕಷ್ಟು ಅಧ್ಯಯನ ನಡೆಸಿದ್ದ ಅಚ್ಯುತದಾಸರು ಭಗವಂತನನ್ನು ಕುರಿತು ಅನೇಕ ಕೃತಿಗಳನ್ನು ರಚಿಸುತ್ತಿದ್ದರೂ ದಾಸಪಂಥದ ಸಂಪ್ರದಾಯದಂತೆ ಅಂಕಿತ ವಿಲ್ಲದೆ ಕೃತಿರಚನೆ ಕೂಡದು ಎಂದು ನಂಬಿದ್ದವರು. ಆದರೆ ಇವರ ಪೂರ್ವಜರು ಯಾರೂ ಹೀಗೆ ‘ಅಂಕಿತ’ ಪಡೆದವರಿರಲಿಲ್ಲವಾದ್ದರಿಂದ ಇದು ಗುರ್ವಾನುಗ್ರಹ ಮೂಲಕವೇ ಆಗಬೇಕೆಂದು ಮನಗಂಡು ಅದಕ್ಕಾಗಿಯೂ ಸಮಯವನ್ನು ಎದುರು ನೋಡುತ್ತಿದ್ದರು. ದೈವಾನುಗ್ರಹ ಆ ದಿನವೂ ಬಂದೇ ಬಂದಿತು. ದಾಸದೀಕ್ಷೆ ಪಡೆದ ಮೂರನೇ ವರ್ಷಕ್ಕೆ ಅಂದರೆ ೧೯೫೬ರಲ್ಲಿ ಕಾಶೀಮಠದ ಶ್ರೀಗಳವರು ಉಡುಪಿಯಲ್ಲಿ ಚಾತುರ್ಮಾಸ್ಯ ವ್ರತಕ್ಕಾಗಿ ಮೊಕ್ಕಾಂ ಹೂಡಿದರು. ಆ ಹೊತ್ತಿಗೆ ಇವರ ಕುಟುಂಬ ಸಹ ಅಂದರೆ ವೆಂಕಟರಮಣ ಪೈ ಅವರ ಸಂಸಾರ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಉಡುಪಿಗೇ ಬಂದಿದ್ದರು. ಉಡುಪಿಯ ಕಾಲೇಜಿನಲ್ಲಿ ಅಚ್ಯುತದಾಸರ ಸಹೋದರರಾದ ಕೇಶವ ಪೈ ಹಾಗೂ ಸರ್ವೋತ್ತಮ ಪೈ (ಲೇಖಕ) ಓದುತ್ತಿದ್ದರು.

ಈ ಚಾತುರ್ಮಾಸ್ಯದ ಸಂದರ್ಭದಲ್ಲಿ ಅಚ್ಯುತದಾಸರು ಶ್ರೀಗಳವರ ಸಮ್ಮುಖದಲ್ಲಿ ನಾಲ್ಕು ತಿಂಗಳ ಕಾಲ ಸತತವಾಗಿ ಕೀರ್ತನ ರೂಪೀ ಮಹಾಭಾರತ ಪ್ರವಚನ ನಡೆಸಿದರು. ಮಂಗಳದ ದಿನ ಬೆಳಿಗ್ಗೆ ತಮ್ಮ ಪ್ರಾತರ್ವಿಧಿಗಳನ್ನು ಮುಗಿಸಿ ಶ್ರೀಗಳವರಿಗೆ ಅಡ್ಡಬಿದ್ದು ತಮಗೆ ಅಂಕಿತ ಪ್ರಧಾನ ಮಾಡುವಂತೆ ನಿವೇದಿಸಿಕೊಂಡರು. ಅದರಂತೆ ಸ್ವಾಮಿಗಳು ಅವರಿಗೆ ಚಕ್ರಂಆಕನಗೈದು ಸಾಲಿಗ್ರಾಮ ಮುಷ್ಟಿಕೆಗಳನ್ನೂ ತುಲಸೀಮಾಲೆಯನ್ನು ಕೊಟ್ಟು, ರಕ್ಷಾವಸನ, ಶಾಲು ಜೋಡಿಯ ಮಠ ಮರ್ಯಾದೆಯೊಂದಿಗೆ ಸ್ವರ್ಣಪದಕ ನೀಡಿ ಕೀತಾನಾಗ್ರೇಸರ ಎಂಬ ಬಿರುದಿನೊಂದಿಗೆ ನೆರೆದಿದ್ದ ಸರ್ವಶ್ರೋತೃಗಳ ಸಮ್ಮುಖದಲ್ಲಿ ಮೂಲನಾರಾಯಣ ಎಂಬ ಅಂಕಿತ ಪ್ರದಾನ ಮಾಡಿ ಹರಸಿದರಂತೆ. ಆ ಸಂದರ್ಭದಲ್ಲಿ ಮೊದಲೇ ಸಾತ್ವಿಕ ಕಳೆಯಿಂದಿದ್ದ ದಾಸರ ಮುಖ ಅದರ ಇಮ್ಮಡಿಯಷ್ಟು ವರ್ಚಸ್ಸಿನಿಂದ ಬೆಳಗಿತು. ಹೀಗೆ ಗುರುಗಳ ಸಂಪೂರ್ಣಾನುಗ್ರಹವನ್ನು ಪಡೆದ ಅಚ್ಯುತದಾಸರ ಲೇಖನಿಯಿಂದ ಮೂಲನಾರಾಯಣ ಅಂಕಿತದಲ್ಲಿ ಪುಂಖಾನುಪುಂಖವಾಗಿ ಸಹಸ್ರಾರು ಸಂಖ್ಯೆಯಲ್ಲಿ ಕೃತಿಗಳು ಮೂಡಿಬಂದವು. ಈ ಹೊತ್ತಿಗೆ ಅವರಿಗೆ ಕಂಕಣ ಬಲವೂ ಕೂಡಿ ಬಂದಿದ್ದು ವಿವಾಹವೂ ಆಗಿತ್ತು. ಮಂಗಳೂರಿನ ಶ್ರೀ ವಾಮನ ನಾಯಕರ ಮಗಳು ಸೌಭಾಗ್ಯವತಿ ಶ್ರೀಮತಿ ಎಂಬ ಕನ್ಯೆಯೊಡನೆ ಭದ್ರಗಿರಿಯ ವೀರವಿಠಲನ ಸನ್ನಿಧಿಯಲ್ಲಿ ವಿವಾಹ ನೆರವೇರಿ ದಾಸರು ಗೃಹಸ್ತಾಶ್ರಮ ಧರ್ಮವನ್ನು ಸ್ವೀಕರಿಸಿದರು. ಕಾಲಕ್ರಮದಲ್ಲಿ ಅವರಿಗೆ ಮೂವರು ಗಂಡುಮಕ್ಕಳೂ, ನಾಲ್ವರು ಹೆಣ್ಣುಮಕ್ಕಳು ಜನಿಸಿ ಸಂತಾನಾಭಿವೃದ್ಧಿಯೂ ಆಯಿತು.

ತಮ್ಮ ಅಚ್ಯುತದಾಸರ ತಮ್ಮ ಕೇಶವ ಪೈ ಸಹ ಹರಿಕಥಾ ಕ್ಷೇತ್ರದಲ್ಲಿ ಅದ್ವಿತೀಯ ಪಾಂಡಿತ್ಯ ಗಳಿಸಿ ಕೇವಲ ದಕ್ಷಿಣ ಕನ್ನಡ ಜಿಲ್ಲೆಯೇ ಅಲ್ಲದೆ ಕರ್ನಾಟಕ, ಆಂಧ್ರ , ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಸಂಚರಿಸಿ ಖ್ಯಾತರಾಗಿದ್ದರು. ಹೀಗಾಗಿ ತಮ್ಮ ಕಾರ್ಯಕ್ಷೇತ್ರ ವಿಸ್ತರಣೆಗಾಗಿ ಅವರು ಬೆಂಗಳೂರಿಗೆ ವಲಸೆ ಬಂದರು. ಅಚ್ಯುತ ದಾಸರಾದಿಯಾಗಿ ಎಲ್ಲರೂ ಕಲ್ಯಾಣನಗರಿಗೆ ಬಂದು ವಲಸೆ ಹೂಡಿದರು. ಆ ಹೊತ್ತಿಗೆ ಅಚ್ಯುತದಾಸರೂ ಖ್ಯಾತನಾಮರಾಗಿ ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಇವರ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕೆಲವೊಮ್ಮೆ ಅಣ್ಣ ತಮ್ಮಂದಿರಿಬ್ಬರೂ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿ ಅಶ್ವಿನೀದೇವತೆಗಳಂತೆ ಕಂಗೊಳಿಸುತ್ತಿದ್ದರು. ತಮ್ಮ ಕೇಶವದಾಸರಿಗೆ ಅಣ್ಣನೆಂದರೆ ಅಪಾರ ಗೌರವ! ಅಲ್ಲದೆ ಗುರುಭಾವನೆ. ಇವರು ಕೀರ್ತನ ಕಲೆಯ ಮಾರ್ಗದರ್ಶಕರು. ಅಚ್ಯುತದಾಸರಿಗೆ ತಮ್ಮ ಕೇಶವನ ಮೇಲೆ ಅಪಾರ ಪ್ರೀತಿ. ಅಷ್ಟೇ ಅಲ್ಲ “ಆತ ಹುಟ್ಟಿನಲ್ಲಿ ತಮ್ಮ, ತಮ್ಮನಾದರೂ ಆಚರಣೆಯಲ್ಲಿ ಸರ್ವವಿಧದಲ್ಲೂ ನನಗಿಂತ ಮುಂದೆ ಇದ್ದಾನೆ. ಆ ವಿಚಾರದಲ್ಲಿ ಆತ ನನಗಿಂತ ಹಿರಿಯ” ಎಂದು ಹೇಳುವುದಲ್ಲದೆ ತಮ್ಮ ಎಂಬ ಭಾವನೆಯಿಂದ ಅವರನ್ನು ನೋಡಲೇ ಇಲ್ಲ. ಕೇಶವದಾಸರನ್ನು ಎಂದೂ ಅವರು ಏಕವಚನದಲ್ಲಿ ಸಂಬೋಧಿಸಲಿಲ್ಲ. ಬಹುವಚನವನ್ನೇ ಪ್ರಯೋಗಿಸುತ್ತಿದ್ದರು. ಕೇಶವದಾಸದರು ಹರಿಸಾಯುಜ್ಯವನ್ನೈದಿದ ಸಂದರ್ಭದಲ್ಲಿ, “ಎಲ್ಲ ವಿಚಾಋದಲ್ಲೂ ನನಗಿಂತ ಮುಂದಿದ್ದ ಕೇಶವದಾಸರು ಇಲ್ಲಿಯೂ ನಮಗಿಂತ ಮುಂದೆ ಹೋದರು” ಎಂದು ಕಂಬನಿ ಮಿಡಿದರು.

ಭಾರತಾದ್ಯಂತ ಪ್ರವಾಸ: ಅಚ್ಯುತದಾಸರ ಕೀರ್ತಿ ದಿನದಿನಕ್ಕೆ ಊರಿಂದೂರಿಗೆ ಪಸರಿಸುತ್ತಾ ಅದು ಭಾರತಾದ್ಯಂತ ಹರಡಿತು. ಕಥಾ ಕಾರ್ಯಕ್ರಮಕ್ಕಾಗಿ ಆಹ್ವಾನಗಳ ಮಹಾಪೂರವೇ ಹರಿಯಿತು. ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ ಅಲ್ಲಿನ ಕನ್ನಡಿಗರಿಂದ ಅವರ ಮತೀಯ ಬಾಂಧವರಿಂದ ಆಹ್ವಾನಗಳು ಬಂದು ಮುಂಬಯಿಯಲ್ಲಿ ಅನೇಕ ಸಪ್ತಾಹ, ಪಾಕ್ಷಿಕ, ತಿಂಗಳ ಅವಧಿಯ ಕಾರ್ಯಕ್ರಮಗಳನ್ನು ನೀಡಿದರು. ಕನ್ನಡದಷ್ಟೇ ಕೊಂಕಣಿ, ಹಿಂದಿ, ಸಂಸ್ಕೃತ, ಮರಾಠೀ ಭಾಷೆಗಳಲ್ಲಿ ಪಾಂಡಿತ್ಯ-ಪ್ರಭುತ್ವ ಪಡೆದಿದ್ದ ದಾಸರು ಈ ಎಲ್ಲ ಭಾಷೆಗಳಲ್ಲೂ ಕಥೆ ಮಾಡುವ ಪ್ರಾವೀಣ್ಯತೆ ಪಡೆದಿದ್ದರು. ಕೇಶವದಾಸರು ಸ್ಥಾಪಿಸಿದ ದಾಸಾಶ್ರಮ ಅಂತರಾಷ್ಟ್ರೀಯ ಕೇಂದ್ರದ ಗೌರವಾದ್ಯಕ್ಷರಾಗಿ ಇಂದೂ ಸೇವೆ ಸಲ್ಲಿಸುತ್ತಿದ್ದಾರೆ. ಕೇವಲ ಹರಿಕಥಾ ರಂಗಕ್ಕೇ ಅಲ್ಲದೆ ಸಾಹಿತ್ಯ ಕೃಷಿಯನ್ನೂ ಮಾಡಿ ಅನೇಕ ಗ್ರಂಥಗಳನ್ನೂ ಹೊರತಂದಿದ್ದಾರೆ. ಅದನ್ನು ಪ್ರಕಾಶಿಸಿ ಪ್ರಕಟಿಸಲು “ಭಾರತ ಜ್ಯೋತಿ ಪ್ರಕಾಶನ” ಎಂಬ ಪ್ರಕಾಶನ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ.

ಕೀರ್ತನ ಕಲೆಯ ಪ್ರಚಾರಕ್ಕಾಗಿ, ಉತ್ತಮ ಕೀರ್ತನಕಾರರನ್ನು ತಯಾರು ಮಾಡುವ ಸಲುವಾಗಿ ದಾಸಾಶ್ರಮದ ಆವರಣದಲ್ಲೇ ಕೀರ್ತನ ಮಹಾವಿದ್ಯಾಲಯವನ್ನು ಸ್ಥಾಪಿಸಿ ಆ ಮೂಲಕ ಅನೇಕ ಕೀರ್ತನಕಾರರನ್ನು ನಾಡಿಗೆ ನೀಡುವಲ್ಲಿ ಸಫಲರಾಗಿದ್ದಾರೆ. ಕೀರ್ತನಕಾರರನ್ನು ಸಂಘಟಿಸುವ ಸಲುವಾಗಿ ೧೯೬೪ರಲ್ಲಿ ಅಖಿಲ ಕರ್ನಾಟಕ ಕೀರ್ತನ ಕಲಾವಿದರ ಸಮ್ಮೇಳನವನ್ನು ನಡೆಸಿದ್ದೇ ಅಲ್ಲದೆ ಕೀರ್ತನ ಕಲಾ ಪರಿಷತ್ತನ್ನು ಸಹ ಸ್ಥಾಪಿಸಿದ್ದಾರೆ.

ಕೃತಿ ರಚನೆಗಳು: ‘ಗೀತಾರ್ಥ ಚಿಂತನೆ’ ಎಂಬ ಬೃಹತ್‌ ಸಂಪುಟವನ್ನು ಬರೆದು ಭಗವದ್ಗೀತಾ ಸಾರವನ್ನು ದಾಸರ ಕೀರ್ತನೆ ಅಭಂಗಗಳ ಸಾಮರಸ್ಯದೊಂದಿಗೆ ಕೀರ್ತನ ಕಲೆಗೆ ಅನುಕೂಲವಾಗುವ ರೀತಿಯಲ್ಲಿ ಹೊರತಂದಿದ್ದಾರೆ.

“ಹರಿಕಥಾ ಪೂರ್ವರಂಗ” ಇವರ ಮತ್ತೊಂದು ಉತ್ಕೃಷ್ಠ ಕೃತಿ. ಕಥಾ ಕೀರ್ತನದ ಪ್ರಸಂಗಕ್ಕೆ ಪೂರ್ವಭಾವಿಯಾಗಿ ನೀಡುವ ಸಂದೇಶ ಹೇಗಿರಬೇಕು ಎಂಬ ವಿಷಯ ಇಲ್ಲಿ ಪ್ರತಿಪಾದಿತವಾಗಿದ್ದು ಇದೊಂದು ವಿಶ್ವಕೋಶವೆನಿಸಿದೆ.

ಇದಲ್ಲದೆ “ಸಂತಗಾಥಾ”, ಮೂಲನಾರಾಯಣಅಂಕಿತದಲ್ಲಿ ಅನೇಕ ಕೃತಿಗಳನ್ನು ಸಹ ರಚಿಸಿದ್ದಾರೆ.

ಇವರ ಜೀವನದ ಮಹತ್ತರ ಸಾಧನೆಯೆಂದರೆ ಇವರಿಂದ ರಚಿತವಾದ ಹರಿಕಾಮೃತ ಸಿಂಧು. ಇದು ಆರು ಆರು ಸಂಪುಟಗಳ ಬೃಹದ್ಗಂಥ. ಹರಿಕಥಾರಂಗಕ್ಕೆ ಬೇಕಾಗುವಂಥ ಎಲ್ಲ ಸರಕುಯಗಳು ಇದರಲ್ಲಿ ಅಡಕವಾಗಿವೆ. ರಾಮಾಯಣ, ಮಹಾಭಾರತ, ಭಾಗವತಗಳ ಕಥಾನಕದ ಮಹಾಪೂರವೆ ಇದರಲ್ಲಿ ಪ್ರತಿಪಾದಿಸಲಾಗಿದ್ದು ಅನೇಕ ತತ್ವಸಂದೇಶಗಳು, ಉಪಕತೆಗಳು,ದಾಸಕೀರ್ತನೆಗಳು ದೃಷ್ಟಾಂತರೂಪಿಯಾಗಿ ಚಿತ್ರಿಸಲಾಗಿದೆ. ಇದರಲ್ಲಿ ಮೂರು ಸಂಪುಟಗಳು ಮಾತ್ರ ಪ್ರಕಟವಾಗಿದ್ದು ಉಳಿದ ಸಂಪುಟಗಳು ಮುದ್ರಣವಾಗಬೇಕಿದೆ.

ಇವರ ಅನೇಕ ಕೀರ್ತನೆಗಳು, ಯಕ್ಷಗಾನಗಳು, ಧ್ವನಿಸುರುಳಿ ರೂಪದಲ್ಲಿ ವೀಡಿಯೊ ಕ್ಯಾಸೆಟ್‌ಗಳಾಗಿ ಪ್ರಕಟವಾಗಿವೆ. ಕೊಂಕಣಿ ಭಾಷೆಯಲ್ಲಿ ರಚಿತವಾಗಿರುವ ಶ್ರೀಗುರು ಚರಿತಾಮೃತಮ್ ಇವರ ಮತ್ತೊಂದು ಬೃಹದ್ಗಂಥ.

ಸಂತ ಭದ್ರಗಿರಿ ಅಚ್ಯುತದಾಸರು ದಾಸದೀಕ್ಷೆ ಪಡೆದು ೨೫ ವರ್ಷಗಳನ್ನು ಕಳೆದ ಸವಿನೆನಪಿಗಾಗಿ ಅವರ ಅಭಿಮಾನಿಗಳು,ಬಂಧು ವರ್ಗವೆಲ್ಲ ಸೇರಿ ಸಂತರ್ಪಣ ಎಂಬ ಅಭಿನಂದನಾ ಸಂಪುಟವನ್ನು ಪ್ರಕಟಿಸಿದೆ. ಇದಲ್ಲದೆ ಇವರ ಐವತ್ತನೇ ಹುಟ್ಟುಹಬ್ಬದ ಸವಿನೆನಪಿಗಾಗಿ ಸ್ವರ್ಣಸಂಚಿಕೆ ಎಂಬ ಸಂಸ್ಮರಣ ಸಂಪುಟವನ್ನು ಹೊರತರಲಾಯಿತು . ಈ ಎರಡೂ ಸಂಪುಟಗಳಲ್ಲಿ ಅವರ ಸಾಧನೆ-ಸಂಘಟನೆಯ  ಸಮಗ್ರ ಪರಚಯವನ್ನು ಮಾಡಿಕೊಡಲಾಗಿದೆ. ಸಂತ ಅಚ್ಯುತದಾಸರು ಕೇವಲ ಕೀರ್ತನಕಾರರಾಗಿಯೇ ಉಳಿಯಲಿಲ್ಲ. ವ್ಯಾಸಕೂಟ ದಾಸಕೂಟಗಳ ಹರಿಕಾರರಾದವರು. ವ್ಯಾಸಕೂಟದ ಮುಖಾಂತರ ಪುಣ್ಯಕಥಾ ನಿರೂಪಣೆ ಮತ್ತು ತತ್ತ್ವಜ್ಞಾನಗಳ ಪ್ರಸಾರ ದಾಸಕೂಟದ ಸಂಪ್ರದಾಯದಂತೆ ಗುರು ಮುಖೇನ ಅಂಕಿತ ಪಡೆದು ದೇವರನಾಮಗಳ ರಚನೆ, ಸದಾಚಾರ ಸಂಹಿತೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಿತ್ಯ ದೇವತಾರಾಧನೆ ಹಾಗೂ ವೈಃದಿಕ ಮತಾವಲಂಬಿಗಳಾಗಿ ಇತರರಿಗೆ ಸೂಕ್ತ ಮಾರ್ಗದರ್ಶಿಗಳಾದರು.

ಕೇವಲ ಗೌಡಸಾರಸ್ವತ ಬ್ರಾಹ್ಮಣ ವರ್ಗದ ಮಠ ಮಾನ್ಯತೆಯೇ ಅಲ್ಲದೆ ಶೃಂಗೇರಿ ಶಾರದಾ ಪೀಠ, ಆದಿಚುಂಚನಗಿರಿ ಸಂಸ್ಥಾನ, ವೀರಶೈವ ಪಂಥಕ್ಕೆ ಸೇರಿದಂಥ ಮೂರು ಸಾವಿರ ಮಠ,ಶಿವರಾತ್ರೀಶ್ವರ ಮಠ, ಮುರುಘರಾಜೇಂಧ್ರ ಮಠ, ಸುತ್ತೂರು ಮಠ, ಅಲ್ಲದೆ ಭಕ್ತಿಪಂಥಕ್ಕೆ ಸೋಪಾನವೆನಿಸಿರುವಂಥ ಶ್ರೀ ರಾಮಕೃಷ್ಣ ಮಠಗಳ ಹಾಗೂ ವಿಶ್ವ ಹಿಂದೂಪರಿಷತ್ತು, ದಿವ್ಯಜೀವನ ಸಂಘ ಮುಂತಾಗಿ ಸರ್ವಮಠಗಳಿಂದ ಸಹ ಮಾನ್ಯತೆ ಪಡೆದ ಏಕೈಕ ಸಂತರು ಭದ್ರಗಿರಿ ಅಚ್ಯುತದಾಸರು.

ದಾಸರು ನಿಷ್ಠಾವಂತರಾಗಿ ಮಾಧ್ವ ಮತಾವಲಂಬಿಗಳಾದರೂ ಭಾರತದ ಎಲ್ಲ ಮತಗಳ ಬಗ್ಗೆ ಸಮತಾ ಭಾವ ಹೊಂದಿದವರು. ಸರ್ವ ಧರ್ಮ ಸಮನ್ವಯತೆಗೆ ಟೊಂಕಕಟ್ಟಿ ದುಡಿದವರು.

ಶಿಷ್ಯ ಸಂಪತ್ತು: ಅಚ್ಯುತದಾಸರ ಶಿಷ್ಯಸಂಪತ್ತು ಅಪಾರ. ಶಿಷ್ಯರು ಪ್ರಶಿಷ್ಯರು ಇಂದು ರಾಷ್ಟ್ರದ್ಯಂತ ಪಸರಿಸಿದ್ದಾರೆ. ಲಕ್ಷ್ಮಣದಾಸ್‌ ವೇಲಣಕರ್, ಪೊಳಲಿ ಜಗದೀಶದಾಸರು, ಶಿರ್ಸಿನಾರಾಯಣದಾಸರು, ಈಶ್ವರ ದಾಸರು, ರಮಾನಂದ ಸಾಖಳಕರ್, ದೇ.ಸು. ವೆಂಕಟೇಶದಾಸರು, ನೀವಣೆ ಗಣೇಶಭಟ್ಟ ಹೀಗೆ ಅನೇಕ ದಾಸರು ಇವರ ಮಾರ್ಗದರ್ಶನ ಪಡೆದು ಉತ್ತಮ ಕೀರ್ತನಕಾರರೆನಿಸಿದ್ದಾರೆ. ದಾಸರು ಅಕಾಡೆಮಿ ಸದಸ್ಯರಾಗಿದ್ದಾಗ, ಕೀರ್ತನ ಕಲಾಪರಿಷತ್ತಿನ ಮೂಲಕ ಅನೇಕ ಶಿಕ್ಷಣ ಶಿಬಿರಗಳನ್ನು ನಡೆಸಿ ಕಥಾಕೀರ್ತನರಂಗದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲಲು ಕಾರಣರಾಗಿದ್ದಾರೆ.

ಇವರಿಗೆ ಸಂದ ಪ್ರಶಸ್ತಿ ಗೌರವಗಳು, ಸನ್ಮಾನ ಸಮಾರಂಭಗಳು ಎಣಿಕೆಗೂ ಮೀರಿದ್ದು. ಇವರನ್ನು ಸನ್ಮಾನಿಸಿ ಗೌರವಿಸದ ಭಾರತೀಯ ಮಠಗಳೇ ಇಲ್ಲವೆನ್ನಬಹುದು. ಅಲ್ಲದೆ ನಗರದ ಪ್ರತಿಷ್ಠಿತ ಸಂಗೀತ ಸಂಸ್ಥೆಗಳೂ ಸಹ ಇವರನ್ನು ಕರೆಸಿ ಗೌರವಿಸಿವೆ. ಇವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕನಕ ಪುರಂದರ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.

ಸಾತ್ವಿಕ ಜೀವಿ: ನಿಜಜೀವನದಲ್ಲಿ ಅಚ್ಯುತದಾಸರು ಸಾತ್ವಿಕ ಜೀವಿ. ಸದಾ ಹಸನ್ಮುಖಿ ಯಾರನ್ನೂ ನೋಯಿಸಿದವರಲ್ಲ. ಅಜಾತ ಶತ್ರು. ತಮ್ಮ ಕೀರ್ತನದ ಮೂಲಕ ‘ಸದಾಚಾರ ಸಂಹಿತೆ’ಯನ್ನು ಬೋಧಿಸುವ ದಾಸರು ಅದನ್ನು ಮೊದಲು ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತಂದು ಇತರರಿಗೆ ಮಾದರಿಯಾಗಬೇಕು ಎನ್ನುವ ಪಂಥದವರು ಹಾಗೇ ನಡೆದುಕೊಂಡವರು. ಹಾಗಾಗಿ ಇವರಿಗೆ ‘ಸಂತ’ ಎನ್ನುವ ಸೇರ್ಪಡೆ ಅನ್ವರ್ಥ.

‘ದಾಸವಾಣಿ’, ‘ದಾಸಜ್ಯೋತಿ’ ಪ್ರಧಾನ ಸಂಪಾದಕರಾಗಿ, ದಾಸಾಶ್ರಮದ ಗೌರವಾಧ್ಯಕ್ಷರಾಗಿ, ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಸ್ಥಾಪಕಾಧ್ಯಕ್ಷರಾಗಿದ್ದುದೇ ಅಲ್ಲದೆ ಕರ್ನಾಟಕ ಕೀರ್ತನ ಮಹಾವಿದ್ಯಾಲಯದ ಕುಲಪತಿಗಳಾಗಿದ್ದಾರೆ.

ಹರಿಕಥೆಯೆಂಧರೆ ಅಚ್ಯುತದಾಸರು, ಅಚ್ಯುತದಾಸರೆಂದರೆ ಹರಿಕಥೆ ಎನ್ನುವಷ್ಟರ ಮಟ್ಟಿಗೆ ಅದರಲ್ಲಿ ತಮ್ಮನಕ್ನು ತೊಡಗಿಸಿಕೊಂಡವರು ದಾಸರು. ಅವರು ನಿಜಕ್ಕೂ ನಮ್ಮ ನಾಡಿನ ಬಹುದೊಡ್ಡ ಆಸ್ತಿ. ಈ ಶತಮಾನದ ಅಭಿನವ ಪುರಂದರದಾಸರು ಎಂದೇ ಖ್ಯಾತರಾದ ಇಂಥವರ ಬಗ್ಗೆ ಚಿಂತನೆ ಮಾಡಿದರೆ ಸಾಕು ನಾವು ಕೃತಾರ್ಥರೆನಿಸುತ್ತೇವೆ.