ವಿಳಾಸ : ವಿಶ್ವಶಾಂತಿ ಆಶ್ರಮ, ಅರಸಿನಕುಂಟೆ, ನೆಲಮಂಗಲ

ಜನನ : ೧೯೩೪ ರಲ್ಲಿ ಉಡುಪಿ ಜಿಲ್ಲೆ ಭದ್ರಗಿರಿಯಲ್ಲಿ

ಮನೆತನ : ಸುಪ್ರಸಿದ್ಧ ಕಥಾ ಕೀರ್ತನಕಾರರ ಮನೆತನ. ತಂದೆ ವೆಂಕಟರಮಣ ಪೈ. ತಾಯಿ ರುಕ್ಮಿಣಿಯಮ್ಮ. ಅಣ್ಣ ಸಂತ ಭದ್ರಗಿರಿ ಅಚ್ಯುತದಾಸರು. ತಮ್ಮ ಭದ್ರಗಿರಿ ಸರ್ವೋತ್ತಮದಾಸರು ಪ್ರಸಿದ್ಧ ಕೀರ್ತನಕಾರರು.

ಶಿಕ್ಷಣ : ಭದ್ರಗಿರಿಯ ವೀರ ವಿಠಲನೇ ಗುರು. ತಾಯಿ ರುಕ್ಮಿಣಿಯನ್ನು ಹಾಡುತ್ತಿದ್ದ ದೇವರ ನಾಮಗಳೇ ಇವರಿಗೆ ಸ್ಫೂರ್ತಿ. ಕುಲ ಗುರುಗಳಾದ ಕಾಶಿಮಠಾಧೀಶರಾದ ಶ್ರೀ ಶ್ರೀ ಸುಧೀಂದ್ರ ತೀರ್ಥರ ಅನುಗ್ರಹ. ಅಣ್ಣ ಭದ್ರಗಿರಿ ಅಚ್ಯುತದಾಸರ ಮಾರ್ಗದರ್ಶನ. ಲೌಕಿಕ ವಿದ್ಯಾಭ್ಯಾಸದಲ್ಲಿ ಕಾನೂನು ಶಾಸ್ತ್ರ ಪದವೀಧರರು.

ಕ್ಷೇತ್ರ ಸಾಧನೆ : ಬಾಲ್ಯದಿಂದಲೇ ಕಥಾ ಕೀರ್ತನ ಕ್ಷೇತ್ರಕ್ಕೆ ಪಾದಾರ್ಪಣೆ. ಜೊತೆಗೆ ವಿದ್ಯಾದಾಹಿ. ಹರಿಕಥೆಯನ್ನೇ ಮಾಧ್ಯಮವನ್ನಾಗಿ ಮಾಡಿಕೊಂಡು ನಾಡಿನಾದ್ಯಂತ ಸಂಚಾರ ಮಾಡಿ ವಿದ್ಯಾರ್ಜನೆಗಾಗಿ ಧನ ಸಂಪಾದನೆ ಮಾಡಿ ಕಾನೂನು ಶಾಸ್ತ್ರದಲ್ಲಿ ಉನ್ನತ ದರ್ಜೆಯಲ್ಲಿ ಪದವಿ ಗಳಿಕೆ. ವಕೀಲಿ ವೃತ್ತಿಯನ್ನು ಹಿಡಿಯಬೇಕಾದವರು ದಾಸ ಪಂಥವನ್ನು ಹಿಡಿದರು. ಅದೂ ಒಂದು ಪವಾಡವೇ. ಮಲ್ಲೇಶ್ವರದಲ್ಲಿ ಇವರ ನಿರಂತರ ಹರಿಕಥಾ ಕಾರ್ಯಕ್ರಮ ನಡೆಯುತ್ತಿತ್ತು. ಅದರ ಮಂಗಳೋತ್ಸವ ಮರುದಿನ ಪ್ರಪ್ರಥಮವಾಗಿ ಕೋರ್ಟಿಗೆ ಹಾಜರಾಗಿ ವಕೀಲರಾಗಿ ಸನ್ನದನ್ನು ಪಡೆಯಬೇಕಿತ್ತು. ಮಂಗಳದ ದಿನ ಭಕ್ತಾದಿಗಳಿಂದ ಕೃತಜ್ಞತಾಪೂರ್ವಕ್ಷ ಕಾಣಿಕೆ – ದ್ರವ್ಯ, ಆಭರಣ, ಧಾನ್ಯ, ವಸ್ತ್ರ ಇತ್ಯಾದಿಯಾಗಿ ವಸ್ತುಗಳು ಇವರ ಪಾದದಡಿ ಬಂದು ಬಿದ್ದಿತು. ಭಗವನ್ನಾಮಾಮೃತದಿಂದ ಇಷ್ಟೊಂದು ಧನ-ಧಾನ್ಯಗಳು ಸಂಗ್ರಹವಾದಾಗ ಕೋರ್ಟಿಗೆ ಹೋಗಿ ನ್ಯಾಯವಾದಿಯಾಗಿ ಸುಳ್ಳನ್ನೂ ಹೇಳಬೇಕಾಗುತ್ತದೆ. ಅಂಥ ವೃತ್ತಿಯೇ ಬೇಡ. ಹರಿನಾಮ ಸ್ಮರಣೆಯೇ ಸಾಕು ಎಂದು ದಾಸ ಪಂಥಕ್ಕೇ ಜೋತು ಬಿದ್ದು ವಕೀಲಿ ವೃತ್ತಿ ತ್ಯಜಿಸಿದರು. ಕನ್ನಡ, ಹಿಂದಿ, ಮರಾಠಿ, ಕೊಂಕಣಿ, ತುಳು ಹಾಗು ಆಂಗ್ಲ ಭಾಷೆಯಲ್ಲೂ ನಿರರ್ಗಳವಾಗಿ ಹರಿಕಥೆ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದರು. ಮೊದ ಮೊದಲಿಗೆ ಕರ್ನಾಟಕದಾದ್ಯಂತ ಸಂಚರಿಸಿ ಅನಂತರ ರಾಷ್ಟ್ರದ್ಯಂತ ಇವರ ಕೀರ್ತನ ಕಾರ್ಯಕ್ರಮಗಳು ನಡೆಯುತ್ತಿದ್ದು ಅನೇಕ ವಿದೇಶಿ ಭಕ್ತರನ್ನು ಹೊಂದಿ ವಿದೇಶ ಪ್ರವಾಸವನ್ನೂ ಕೈಗೊಂಡರು. ಸುಮಾರು ೩೭ ಮಂದಿ ವಿಶ್ವ ಪರ್ಯಟನೆ ಮಾಡಿ ಭಾರತದ ಶಾಂತಿದೂತ ಎಮಬ ಹೆಗ್ಗಳಿಕೆಗೆ ಪಾತ್ರರಾದರು. ವಿದೇಶಕ್ಕೆ ಹರಿಕಥೆಯನ್ನು ಕೊಂಡೊಯ್ದ ಪ್ರಥಮ ಕೀರ್ತನಕಾರ ಎಂಬ ಹಿರಿಮೆಗೆ ಪಾತ್ರರಾದರು. ಅಮೆರಿಕಾ, ಪಶ್ಚಿಮ – ಇಂಡೀಸ್ ಮುಂತಾದ ಸ್ಥಳಗಳಲ್ಲಿ ಆಶ್ರಮಗಳನ್ನು ಸ್ಥಾಪಿಸಿದ್ದೇ ಅಲ್ಲದೆ, ಬೆಂಗಳೂರಿನಲ್ಲಿ ದಾಸಾಶ್ರಮ, ಅಂತರರಾಷ್ಟ್ರೀಯ ಕೇಂದ್ರ, ಕೀರ್ತನ ಮಹಾ ವಿದ್ಯಾಲಯಗಳನ್ನು ಸ್ಥಾಪಿಸಿ ನೆಲಮಂಗಲ ತಾಲೂಕಿನ ಅರಸಿನಕುಂಟೆಯಲ್ಲಿ ಸುಮಾರು ೧೪ ಎಕರೆ ವಿಸ್ತೀಣದ  ನಿವೇಶನದಲ್ಲಿ ವಿಶ್ವಶಾಂತಿ ಆಶ್ರಮವನ್ನು ಸ್ಥಾಪಿಸಿ. ಗೀತೋಪದೇಶದ ಹದಿನೆಂಟು ಅಧ್ಯಾಯಗಳ ಶ್ಲೋಕಗಳನ್ನು ಶಿಲೆಯಲ್ಲಿ ಕೆತ್ತಿಸಿ ಒಂದು ವಿಶಿಷ್ಟ ಗೀತಾ ಮಂದಿರವನ್ನು ನಿರ್ಮಿಸಿದ್ದಾರೆ. ಈ ಕ್ಷೇತ್ರವನ್ನು ಒಂದು ಪವಿತ್ರ ಧಾರ್ಮಿಕ ಸ್ಥಳವನ್ನಾಗಿ ಪರಿವರ್ತಿಸಿದ ಶಿಲ್ಪಿ ಕೇಶವದಾಸರು. ಸ್ವತಃ ಕವಿಗಳೂ ಆಗಿ ಅನೇಕ ಕೃತಿ ರಚನೆಗಳನ್ನೂ ಮಾಡಿದ್ದಾರೆ. ಭಾರತದ ಹಲವಾರು ಕಡೆ ಪ್ರಮುಖವಾಗಿ ಆಂಧ್ರದ ರಾಜಮಹೇಂದ್ರಿಯಲ್ಲಿ ವಿಶ್ವಶಾಂತಿ ಆಶ್ರಮ ಸ್ಥಾಪಿಸಿದ್ದಾರೆ. ಭಾರತದಲ್ಲಿ ಅನೇಕ ಬಾರಿ ವಿಶ್ವಶಾಂತಿ ಸಮ್ಮೇಳನಗಳನ್ನು ನಡೆಸಿದ್ದಾರೆ. ಆಕಾಶವಾಣಿ, ದೂರದರ್ಶನದಲ್ಲಿ ವಿಶ್ವವ್ಯಾಪಿಯಾಗಿ ಕಾರ್ಯಕ್ರಮಗಳು ಪ್ರಸಾರವಾಗಿವೆ.

ಪ್ರಶಸ್ತಿ – ಪುರಸ್ಕಾರಗಳು : ವಿಶ್ವಾದ್ಯಂತ ಪ್ರಶಸ್ತಿಗೆ ಪಾತ್ರರಾದವರು ಕೇಶವದಾಸರು. ಶಾಂತಿದೂತ, ಸದ್ಗುರು, ಕೀರ್ತನ ವಿಶಾರದ, ಕೀರ್ತನ ಕೇಸರಿ ಮುಂತಾಗಿ ಹತ್ತು – ಹಲವು ಪ್ರಶಸ್ತಿಗಳಿರುವುದೇ ಅಲ್ಲದೆ ಮಾಧ್ವ ಮಠಗಳಿಂದ, ಶೃಂಗೇರಿ ಸಂಸ್ಥಾನದ ಮಠಗಳಿಂದ, ವೀರಶೈವ ಮಠಗಳಿಂದ ಸನ್ಮಾನ ಗೌರವಗಳ ಮಹಾಪೂರವೇ ಹರಿದಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೨-೯೩ರ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿದೆ.

ಶಾಂತೂದೂತ, ವಿಶ್ವಕುಟುಂಬಿ ಎಂದೆಲ್ಲ ಖ್ಯಾತಿಗೆ ಪಾತ್ರರಾದ ಕೇಶವದಾಸರು ೧೯೯೭ರಲ್ಲಿ ರಾಜಮಹೇಂದ್ರಿಗೆ ಹೋದವರು ಹಿಂದಿರುಗಲಿಲ್ಲ ಅವರ ಪಾರ್ಥೀವ ಶರೀರ ಮಾತ್ರ ಬಂತು. ವಿಶ್ವಶಾಂತಿ ಆಶ್ರಮದ ಶಾಂತಿವನದಲ್ಲಿ ಐಕ್ಯವಾದರು.