ಭದ್ರಗಿರಿ ಭಾರತೀಯ ಸಂತ ವಾಙ್ಮಯದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂಥ ಇಬ್ಬರು ಮಹಾನ್‌ ಸಂತರನ್ನು ನೀಡಿದ ಶ್ರೀಕ್ಷೇತ್ರ. ಇದು ಪಂಢರಾಪುರದಂತೆ ದಾಸವಾಙ್ಮಯದ ಸಂತರನ್ನು ನೀಡಿದ ಮಹಾನ್‌ ಕ್ಷೇತ್ರ. ಅಲ್ಲಿನ ವಿಠಲನು  ಇಲ್ಲಿ ವೀರವಿಠಲನಾಗಿದ್ದಾನೆ. ಅಲ್ಲಿನ ಭೀಮಾನದಿ ಇಲ್ಲಿ ಸುವರ್ಣನದಿ. ಈ ನದೀ ತಟಾಕದ ಕ್ಷೇತ್ರವೇ ಭದ್ರಗಿರಿ. ಸಂತ ಕೇಶವದಾಸರ ಹುಟ್ಟೂರು.

ಭದ್ರಗಿರಿಯ ಮಧ್ಯಮ ವರ್ಗದ ಕುಟುಂಬ. ವೆಂಕಟರಮಣ ಪೈ ಹಾಗೂ ರುಕ್ಮಿಣೀಬಾಯಿ ದಂಪತಿಗಳ ತೃತೀಯ ಪುತ್ರ ಕೇಶವ (ರಾಧಾಕೃಷ್ಣ). ನರಸಿಂಹ, ಅಚ್ಯುತ ಇವರಿಗಿಂತ ಹಿರಿಯರು. ವೆಂಕಟರಮಣ ಪೈ ಹೆಸರೇ ಹೇಳುವಂತೆ ಗೌಡ ಸಾರಸ್ವತ ಬ್ರಾಹ್ಮಣ ವರ್ಗಕ್ಕೆ ಸೇರಿದವರು. ಮೂಲ್ಕಿಯ ಶ್ರೀ ನೃಸಿಂಹದೇವರ ಆದೇಶದಂತೆ ಹತ್ತಿರದ ಸಂತೆ ಕಟ್ಟೆಯಿಂಧ ಭದ್ರಗಿರಿಗೆ ವಲಸೆ ಬಂದವರು. ೧೯೩೪ರ ಭಾವನಾಮ ಸಂವತ್ಸರದ ಆಷಾಢ ಶುದ್ಧ ಏಕಾದಶಿಯಂದು ಜನಿಸಿದ ಮಗುವಿಗೆ ರಾಧಾಕೃಷ್ಣ ಪೈ ಎಂದು ನಾಮಕರಣ ಮಾಡಿದರು ತಂದೆ ತಾಯಿಗಳು. ಮಗುವಿನ ರಾಶಿಕುಂಡಲಿಯನ್ನು ಬರೆದ ಜೋಯಿಸರು ವೆಂಕಟರಮಣ ಪೈ ದಂಪತಿಗಳನ್ನು ಕರೆದು ಆನಂದದಿಂದ ಜಾತಕ ತೋರಿಸುತ್ತ ಇಂಥ ಕುಂಡಲಿಯನ್ನು ತಾವು ಕಂಡದ್ದೇ ಇಲ್ಲ. ಈತ ದೈವಾಂಶ ಸಂಭೂತ, ಜಗತ್ತಿನಾದ್ಯಂಥ ಹರಿಭಕ್ತಿ ಮಹಿಮೆಯನ್ನು ಸಾರುತ್ತಾ ವಿಶ್ವವಿಖ್ಯಾತನಾಗುತ್ತಾನೆ ಎಂದು ಅಂದೇ ಭವಿಷ್ಯ ನುಡಿದರು. ಆ ಭವಿಷ್ಯ ಸುಳ್ಳಾಗಲಿಲ್ಲ. ವಕೀಲಿ ವೃತ್ತಿಯನ್ನು ಹಿಡಿದು ನ್ಯಾಯವಾದಿಯಾಗಬೇಕೆಂಬ ಉತ್ಕಟಾಕಾಂಕ್ಷೆಯನ್ನು ಹೊಂದಿದ್ದಕ ಹುಡುಗ ದಾಸಪಂಥ ಹಿಡಿದ. ಕೀರ್ತನ ಕಲೆಯಲ್ಲಿ ನಿಷ್ಣಾತನಾಗಿ, ವಿಶ್ವವಿಖ್ಯಾತ ಶಾಂತಿದೂತನಾಗಿ ಭಾರತೀಯ ಭವ್ಯಪರಂಪರೆಯ ರಾಯಭಾರಿಯಾಗಿ ಲೋಕಕ್ಕೇ ಮಾರ್ಗದರ್ಶನ ನೀಡಿದ ಮಹಾನ್‌ ಸಂತನೆನಿಸಿದ. ಜನ್ಮನಾಮ ರಾಧಾಕೃಷ್ಣಾನದರೂ ರೂಢಿನಾಮದಲ್ಲಿ ಕೇಶವನಾದದ್ದೂ ಒಂದು ವಿಚಿತ್ರವೇ.

ಕೇಶವ-ಮಾಧವ: ವೆಂಕಟರಮಣ ಪೈಗಳವರ ನೆರೆಯಲ್ಲಿದ್ದವರು ರಾಧಾಕೃಷ್ಣಪೈ ಹಾಗೂ ಯಮುನಾಬಾಯಿ ದಂಪತಿಗಳು. ವಿವಾಹಿತರಾಗಿ ಹಲವಾರು ವರ್ಷಗಳು ಉರುಳಿದ್ದರೂ ಅವರಿಗೆ ಸಂತಾನ ಭಾಗ್ಯೊದಗಿ ಬಂದಿರಲಿಲ್ಲ. ರುಕ್ಮಿಣಮ್ಮನ ಆತ್ಮೀಯ ಗೆಳತಿಯಾಗಿದ್ದ ಯಮುನಾಬಾಯಿ ಅವರ ಎಳೆಯ ಮಕ್ಕಳಾದ ಅಚ್ಯುತ-ರಾಧಾಕೃಷ್ಣರನ್ನು ತಮ್ಮ ಮಕ್ಕಳಂತೆಯೇ ಕಂಡು ಮನೆಗೆ ಕರೆದೊಯ್ದು ತಿಂಡಿ-ತಿನಿಸುಗಳನ್ನು ಕೊಟ್ಟು, ಕೃಷ್ಣನನ್ನು ಸಲಹಿದ ಯಶೋದೆಯಂತೆ ಪ್ರೀತಿ ವಾತ್ಸಲ್ಯ ತೋರಿಸುತ್ತಿದ್ದರು. ಈಕೆಯ ಭಾವನ ಹೆಸರೂ ಅಚ್ಯುತ ಎಂದು.

ಈ ಮಕ್ಕಳಿಬ್ಬರನ್ನೂ ಆವ ಹಾಗೂ ಗಂಢನ ಹೆಸರಿನಿಂದ ಕೂಗುವುದು ಆಕೆಗೆ ಕಷ್ಟವೆನಿಸಿತು. ಹಾಗಾಗಿ ಅಚ್ಯುತನನ್ನು ‘ಮಾಧವ’ನೆಂದೂ, ರಾಧಾಕೃಷ್ಣನನ್ನು ‘ಕೇಶವ’ ನೆಂದು ಕರೆಯುತ್ತಿದ್ದರು. ಇದೇ ಹೆಸರು ರೂಢಿಯಾಗಿ ರಾಧಾಕೃಷ್ಣ ಕೇಶವನಾಗಿ ಎಲ್ಲರ ಬಾಯಲ್ಲೂ ನಲಿದಾಡಿದ. ಶಾಲೆಗೆ ಸೇರಿಸುವಾಗಲೂ ಇದೇ ಹೆಸರಿನಿಂದ ನೋಂದಾಯಿಸಿ ರಾಧಾಕೃಷ್ಣನೆಂಬ ಹೆಸರು ಮರೆಯಾಗಿ ‘ಕೇಶವ’ನೆಂಬ ಹೆಸರೇ ಸ್ಥಿರವಾಯಿತು. ಆದರೆ ಅಚ್ಯುತ ಮಾಧವನಾಗದೇ ‘ಅಚ್ಯುತ’ನಾಗೇ ಉಳಿದ. ಮುಂದೆ ಇವರಿಗೆ ಸರ್ವೋತ್ತಮ, ವಿಠಲ ಎಂಬ ಇಬ್ಬರು ತಮ್ಮಂದಿರೂ, ಪ್ರೇಮಾಬಯಿ ಎಂಬ ತಂಗಿಯೂ ದೊರೆತರು. ಹೆಸರಿಗೆ ತಕ್ಕಂತೆ ಕೇಶವ ಬಾಲಕೃಷ್ಣನಾಗಿ ಭದ್ರಗಿರಿಯ ಎಲ್ಲರ ಮನೆ ಮಗುವಾಗಿ ಕೃಷ್ಣನಂತೇ ತನ್ನ ಬಾಲಲೀಲೆಯಿಂದ ಅವರನ್ನು ನಲಿಸುತ್ತಾ ಎಲ್ಲರ ಪ್ರೇಮ ಪುತ್ಥಳಿಯಾಗಿ ಬೆಳೆದ.

ಮುಂದೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೈಗಳು ಉಡುಪಿಗೆ ವಲಸೆ ಬಂದು ಅಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಿದರು. ಜೊತೆ ಜೊತೆಯಲ್ಲೇ ಸಂಗೀತ ಯಕ್ಷಗಾನ ಕಲೆಯ ಶಿಕ್ಷಣವೂ ದೊರೆತು, ಗಾಯನ ಅಭಿನಯಗಳಲ್ಲಿ ಅಣ್ಣ ತಮ್ಮ ನಿಷ್ಣಾತರಾದರು. ಹಿರಿಯಣ್ಣ ನರಸಿಂಹ ಪೈ ಸಂಗೀತ ಕಲಿಯುವಾಗ ಆಸಕ್ತಿಯಿಂದ ಕುಳಿತು ಕೇಳಿ ಅದನ್ನು ಮನಸ್ಸಿನಲಕ್ಲಿ ತುಂಬಿ ಕೊಳ್ಳುತ್ತಿದ್ದರು. ಹಾರ್ಮೋನಿಯಂ, ತಬಲಾ ವಾದನಗಳನ್ನು ಕಲಿತು ಅದರಲ್ಲೂ ಪರಿಣತಿ ಗಳಿಸಿದರು.

ತಾಯಿಯೇ ಪ್ರಥಮ ಗುರು: “ಮಕ್ಕಳ ಸ್ಕೂಲ್‌ ಮನೇಲಲ್ವೇ” ಎಂಬ ಕೈಲಾಸಂ ನುಡಿ ಇವರ ಮನೆಯಲ್ಲಿ ಅಕ್ಷರಶಃ ನಿಜವೆನಿಸಿತು. ತಾಯಿ ರುಕ್ಮಿಣಮ್ಮ ಸಂಜೆ ಹೊತ್ತು ಕಳೆದ ನಂತರ ಮಕ್ಕಳನ್ನೆಲ್ಲ ಒಟ್ಟು ಸೇರಿಸಿ ಭಜನೆ ಹಾಡಿಸುವರು. ಸಾಧು ಸಂತರ ಕಥೆಗಳನ್ನು ಹೇಳುತ್ತಿದ್ದರು. ಅದರಲ್ಲಿ ಸಂತಜ್ಞಾನೇಶ್ವರ, ದಾಸಶ್ರೇಷ್ಠ ಪುರಂದರ ದಾಸರ ಚರಿತ್ರೆಗಳು ಈ ಹುಡುಗರ ಮೇಲೆ ಸಾಕಷ್ಟು ಪರಿಣಾಮ ಬೀರಿದರೂ ಕೇಶವನ ಮೇಲೆ ವಿಶೇಷ ಪ್ರಭಾವ ಬೀರಿತು. ಅವರ ಧ್ಯೇಯೊದ್ದೇಶಗಳನ್ನು ತಮ್ಮ ಜೀವನದುದ್ದಕ್ಕೂ ಅನುಷ್ಠಾನಿಸಿ ಅವರಂತೆ ತಾನೂ ಮಹಾನ್‌ ದಾರ್ಶನಿಕನಾಗಬೇಕೆಂಬ ಕನಸನ್ನು ಅಂದೇ ಕಂಡರು. ಅದು ಕೇವಲ ಕನಸಾಗೇ ಉಳಿಯದೇ ನನಸಾಗಿ ಅವರ ಜೀವನದ ಹಾಸುಹೊಕ್ಕಾಯಿತು. ತಾಯಿಯ ಬಾಯಿಂದ ಹೊರಹೊಮ್ಮುತ್ತಿದ್ದ ದಾಸರ ಕೀರ್ತನೆಗಳು, ಸಂತರ ಅಭಂಗಗಳೂ ಹುಡುಗನಿಗೆ ಕಂಠಪಾಠವಾಯಿತು. ಮುಂದೆ ಅಣ್ಣ ಅಚ್ಯುತನೊಂದಿಗೆ ಶಾಲೆಗೆ ಸೇರಿದ ಕೇಶವನಿಗೆ ಅಲ್ಲಿಯ ಅಧ್ಯಾಪಕಿ ನಾಗವೇಣಮ್ಮನೇ ಕೀರ್ತನ ಕಲೆಯ ಪ್ರಥಮ ಗುರುವಾದರು.

ಮೊದಲ ಕಥೆ: ಬಾಲಕ ಕೇವನ ಬಾಯಿಂದ ದಾಸಕೃತಿ-ಅಭಂಗಗಳನ್ನು ಕೇಳಿದ್ದ ನಾಗವೇಣಮ್ಮ ಕೀರ್ತನ ಕ್ಷೇತ್ರದಲ್ಲಿ ಈ ಹುಡುಗನಿಗೆ ಉಜ್ವಲ ಭವಿಷ್ಯವಿದೆ ಎಂದು ಮನಗಂಡು ಆತನಿಗೆ ಒಂದು ಪ್ರಸಂಗವನ್ನು ಕಂಠಪಾಠ ಮಾಡಿಸಿ ಶಾಲೆಯಲ್ಲೇ ಕಥೆ ಮಾಡಿಸಿದರು.

ಅಂದು ಕೇಶವನ ಉತ್ಸಾಹ ಹೇಳತೀರದು. ನಾಗವೇಣಮ್ಮ ಹುಡುಗನಿಗೆ ಕಚ್ಚೆಪಂಚೆ ಉಡಿಸಿ, ಶಲ್ಯ ಹೊದಿಸಿ, ದ್ವಾದಶ ನಾಮಗಳನ್ನು ತಿದ್ದಿ ಹಣೆಗೆ ತಿಲಕವಿಟ್ಟು ಕೈಗೆ ತಾಳ-ಚಿಟಿಕೆಗಳನ್ನು ಕೊಟ್ಟು ಸಭೆಗೆ ಕರೆತಂದರು. ತಾಯಿ ರುಕ್ಮಿಣಮ್ಮ ತಂದೆ ವೆಂಕಟರಮಣ ಪೈ ಮಗನನ್ನು ಹೃದಯ ತುಂಬಿ ಹರಸಿದರು. ಯಾವ ಅಳುಕೂ, ಸಭಾ ಕಂಪನವೂ ಇಲ್ಲದೆ ಒಬ್ಬ ಅನುಭವೀ ಕೀರ್ತನಕಾರನಂತೆ ತುಂಬು ಆತ್ಮವಿಶ್ವಾಸದಿಂದ ಗುರು ಹೇಳಿಕೊಟ್ಟ ‘ಇಂದ್ರಸೇನಾರಾಜ’ನ ಕಥೆಯನ್ನು ಯಾಥಾವತ್ತಾಗಿ ನಿರೂಪಿಸಿದ ಬಾಲಕನ ಪ್ರೌಢಿಮೆಯನ್ನು ಕಂಡು ಎಲ್ಲರೂ ಹೊಗಳಿದರು, ಹರಸಿದರು. ದೃಷ್ಟಿಯಾದೀತೆಂದು ದೃಷ್ಟಿ ನಿವಾಳಿಸಿದರು. ಹೀಗೆ ‘ಬಾಲ ಹರಿದಾಸ’ನಾದ ಹುಡುಗ ಕೇಶವ.

ಭದ್ರಗಿರಿಯ ಶಾಲೆಗೆ ಅಧಿಕಾರಿಗಳು ಬರುವ ದಿನ ಕೇಶವನಿಂದ ‘ಭದ್ರಾಚಲ ರಾಮದಾಸ್‌’ ನಾಟಕವನ್ನಾಡಿಸಿದಾಗ ‘ರಾಮದಾಸ’ನಾಗಿ ಕೇಶವನ ಭಕ್ತಿಯುತ ಪಾತ್ರವನ್ನು ಅಧಿಕಾರಿಗಳು ಮೆಚ್ಚಿಕೊಂಡದ್ದೇ ಅಲ್ಲದೆ ಕಲೆ ಈತನ ನರನಾಡಿಗಳಲ್ಲೂ ಹರಿಯುತ್ತಿದೆ. ಈತನಿಗೆ ಉಜ್ವಲ ಭವಿಷ್ಯವಿದೆ ಎಂದು ತಮ್ಮ ಪ್ರಶಂಸೆ ವ್ಯಕ್ತ ಪಡಿಸಿದರು. ನಾಟಕ, ಯಕ್ಷಗಾನ, ಕಲೆಗಳಿಗಾಗಿ ಅಭ್ಯಸಿಸುತ್ತಿದ್ದ ಭಾರತ, ರಾಮಾಯಣ, ಭಾಗವತಾದಿ ಕಥಾವಸ್ತುಗಳು ಕೇಶವನಿಗೆ ಕರಗತವಾಯಿತು. ಆಗಾಗ್ಗೆ ಅಲ್ಲಲ್ಲಿ ನಡೆಯುತ್ತಿದ್ದ ಶಂಕರನಾರಾಯಣ ಸಾಮಗ, ಉಪ್ಪೂರು ವೈಕುಂಠದಾಸರು, ಹಂಡೆ ಶ್ರೀಪಾದದಾಸರು, ಮಾಧವ ಬೋವಿಗಳು ಮಾಡುತ್ತಿದ್ದ ಹರಿಕಥೆಗಳನ್ನು ಕೇಳಿ ಸಾಕಷ್ಟು ಪ್ರಭಾವಿತನಾಗಿ ಕೀರ್ತನ ಕಲೆಯನ್ನೂ ಅಭ್ಯಸಿಸಿದ. ಆದರೂ ಸೂಕ್ತ ಗುರು ಮುಖೇನ ಈ ಕಲೆಯನ್ನು ವಿದ್ಯುಕ್ತವಾಗಿ ಕಲಿಯಬೇಕೆಂಬ ಹಂಬಲ ಹುಡುಗನಲ್ಲಿತ್ತು.

ಕಲಿಸಲು ಹುಟ್ಟಿದವನು: ಹುಡುಗನ ಕೀರ್ತನ ಕಲಾ ಸಾಮರ್ಥ್ಯವನ್ನು ಕಂಡುಕೊಂಡವರಲ್ಲಿ ಬಾರ್ಕೂರಿನ ರಾಮಕೃಷ್ಣ ಅವಧಾನಿ ಹಾಗೂ ಭದ್ರಗಿರಿಯ ಮಂಜುನಾಥ ಕಾಮತ್‌ ಅಲ್ಲದೆ ಹಿರಿಯ ಭಾವ ವಾಮನ ಗಡಿಯಾರ್ ಪ್ರಮುಖರು. ಭಾವ ಗಡಿಯಾರ್ ರವರು ಕೀರ್ತನಕಾರರು ಧರಿಸುವಂಥ ಪೋಷಾಕುಗಳನ್ನು ಹೊಲಿಸಿಕೊಟ್ಟಿದ್ದರು. ಆಗಿನ ಕಾಲಕ್ಕೆ ಸಂಜೀವರಾಯರು ಕೀರ್ತನ ಕಲೆಯ ಭೀಷ್ಮರೆನಿಸಿದ್ದರು. ಅವರ ಬಳಿ ಕೇಶವನಿಗೆ ಶಿಕ್ಷಣ ದೊರೆತರೆ ಹುಡುಗ ಪುಟಕ್ಕಿಟ್ಟ ಚಿನ್ನದಂಥಾಗುವ ಎಂದು ಈ ವಿಷಯವನ್ನು ಮಂಜುನಾಥ ಕಾಮತರು  ಅವರ ಬಳಿ ಪ್ರಸ್ತಾಫಿಸಿದಾಗ ರಾಯರು ತಮ್ಮ ಮನೆಯಲ್ಲಿಯೇ ಹುಡುಗನ ಕಥೆ ಏರ್ಪಡಿಸುವಂತೆ ತಿಳಿಸಿದರು. ಹುಡುಗ ಕೇಶವ ಎಂದಿನಂತೆ ಯಾವ ಅಳುಕೂ ಇಲ್ಲದೆ ಸುಮಾಋಉ ಎರಡು ಗಂಟೆಗಳ ಕಾಲ ಹರಿಕೀರ್ತನೆ ನಡೆಸಿ ಮಂಗಳ ಹಾಡಿದಾಗ ಸಂಜೀವರಾಯರು ಆನಂದಾಶ್ರು ಸುರಿಸುತ್ತಿದ್ದರು. ಕಾಮತರು ಮೂಕರಾಗಿದ್ದರು. ಶ್ರೋತೃಗಳು ಆ ಭಾವೋನ್ಮಾದದಿಂದ ಇನ್ನೂ ಹೊರಬಂದಿರಲಿಲ್ಲ.

ಭಾವುಕರಾದ ಸಂಜೀವರಾಯರು “ಈ ಹುಡುಗ ಕಲಿಯಲು ಹುಟ್ಟಿಲ್ಲ ಕಲಿಸಲು ಹುಟ್ಟಿದವನು”. ಇವನಿಗೆ ಯಾರ ಉಪದೇಶವೂ ಬೇಕಿಲ್ಲ. ಸಾಕ್ಷಾತ್‌ ಪಾಂಢುರಂಗನೇ ಇವನ ನಾಲಿಗೆಯಲ್ಲಿ ನರ್ತಿಸುತ್ತಿದ್ದಾನೆ ಎಂದ ಮೇಲೆ ನಾವು ಹೇಳುವುದೇನಿದೆ? ಭಗವದನುಗ್ರಹ ಈ ಬಾಲಕನಲ್ಲಿ ವಿಶೇಷವಾಗಿದೆ. ನನಗೆ ನಮ್ಮ ಗುರುವರ್ಯರಾದ ಶಿರಾಲಿಯ ಚಿತ್ರಾಪುರ ಮಠದ ಶ್ರೀ ಶ್ರೀ ಆನಂದಾಶ್ರಮ ಸ್ವಾಮೀಜಿಯವರಿಂದ ಆಶೀರ್ವಾದರೂಪಿಯಾಗಿ ಕೊಡಲ್ಪಟ್ಟ ಶಾಲನ್ನು ಈ ಹುಡುಗ ಭದ್ರಗಿರಿ ಕೇಶವ ಪೈಗೆ ಪ್ರೀತಿಯಿಂದ ಹರಸಿ ಹೊದಿಸುತ್ತಿದ್ದೇನೆ ಎಂದು ಹರಸಿ ಶಲ್ಯ ಹೊದಿಸಿದರು. ಸರಿ! ಅಂದೇ ಹುಡುಗ ಕೇಶವನಿಗೆ ಗುರ್ವಾನುಗ್ರಹವೂ ಆಯಿತು. ವಿದ್ಯಾದಾಹ ಹೊಂದಿದ್ದ ಕೇಶವನಿಗೆ ಕಲ್ಯಾಣಪುರದ ಶೇಷಗಿರಿ ಮಲ್ಯ ಎಂಬುವರು ವಿದ್ಯಾಭ್ಯಾಸಕ್ಕಾಗಿ ವಿಶೇಷ ನೆರವು ನೀಡಿದರು. ಕೇವಲ ಕೀರ್ತನ ಕಲೆಯೇ ಅಲ್ಲದೆ ಲೌಕಿಕಕ ವಿದ್ಯಭ್ಯಾಸದಲ್ಲೂ ಮುಂದಿದ್ದು ಕೇಶವ ಕ್ರಮೇಣ ಮೆಟ್ರಿಕ್ಯುಲೇಶನ್‌ ಪರೀಕ್ಷೆಗೂ ಕಟ್ಟಿ ಉತ್ತೀರ್ಣನಾದ. ಪದವೀಧರನಾಗುವ ಕನಸನ್ನೂ ಕಂಡ.

ಅಣ್ಣ ಅಚ್ಯುತ ಪೈ ಭದ್ರಗಿರಿಯಲ್ಲೇ ಓದು ಮುಗಿಸಿ ಸದಾ ಪಾರಮಾರ್ಥ ಚಿಂತನೆಯಲ್ಲಿಯೇ ಅಪಾರವಾದ ಜ್ಞಾನ ಭಂಡಾರ ಬೆಳೆಸಿಕೊಂಡು ಸ್ವಅಧ್ಯಯನ ನಿರತರಾಗಿದ್ದರು. ಸುತ್ತಮುತ್ತಲ ಹಳ್ಳಿ ಊರುಗಳಲ್ಲಿ ಇವರ ಕಥೆ-ಕೀರ್ತನೆಗಳು ನಡೆಯುತ್ತಿದ್ದು ಭದ್ರಗಿರಿ ಸಹೋದರರ ಕೀರ್ತಿ ಎಲ್ಲೆಡೆ ಹಬ್ಬಿತ್ತು.

ಪದವೀಧರನಾಗುವ ಕನಸು ಕಾಣುತ್ತಿದ್ದ ಕೇಶವನ ಅಭೀಷ್ಠ ನೆರವೇರುವ ಸಮಯ ಸಹ ಬಂತು. ಮಣಿಪಾಲದಲ್ಲಿ ಡಾ. ಟಿ. ಮಾಧವ ಪೈಯವರು ಸ್ಥಾಪಿಸಿದ ಮಹಾತ್ಮಾ ಗಾಂಧಿ ಸ್ಮಾರಕ ಮಹಾವಿದ್ಯಾಲಯದಲ್ಲಿ ಕೇಶವನಿಗೆ ಪ್ರವೇಶ ದೊರೆಯಿತು. ಈ ಹೊತ್ತಿಗಾಗಲೇ ಶ್ರೀ ಕಾಶೀಮಠ ಸಂಸ್ಥಾನದ ಮಠಾಧೀಶರಾದ ಶ್ರೀ ಶ್ರೀ ಸುಧೀಂದ್ರ ತೀರ್ಥರು ಹಾಗೂ ಉಡುಪಿ ಭಂಢಾರಕೇರಿ ಮಠದ ಪೀಠಸ್ಥರಾದ ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥರ ಸಮ್ಮುಖದಲ್ಲಿ ಕೀರ್ತನೆ ನಡೆಸಿ ಅವರುಗಳ ಅನುಗ್ರಹಕ್ಕೆ ಪಾತ್ರರಾಗಿದ್ದರು. ಪೈಗಳವರಿಗೂ ಈ ವಿಷಯ ತಿಳಿದಿದ್ದು ಕೇಶವನಂಥ ವಿದ್ಯಾರ್ಥಿ ತಮ್ಮ ವಿದ್ಯಾಲಯದಲ್ಲಿರುವುದು ಸಂಸ್ಥೆಗೇ ಗೌರವ ತರುವಂಥದ್ದೆಂದು ಮನಗಂಡಿದ್ದರು. ಸಹಪಾಠಗಳೂ ಸಹ ಕೇಶವನ ಸ್ನೇಹ ಸನಿಹಕ್ಕಾಗಿ ಹಾತೊರೆಯುತ್ತಿದ್ದರು. ಹೀಗೆ ಪ್ರಥಮ ವರ್ಷದ ಇಂಟರ್ ಮೀಡಿಯಟ್‌ ಪರೀಕ್ಷೆಕ ಮುಗಿಸಿ ಬೇಸಿಗೆ ರಜೆಯಲ್ಲಿ ಪ್ರವಾಸ ಹೊರಟು ಕೀರ್ತನ ಕಲೆಯನ್ನೇ ಮಾಧ್ಯಮವಾಗಿಟ್ಟುಕೊಂಡು ಮುಂದಿನ ವಿದ್ಯಾಭ್ಯಾಸಕ್ಕೆ ಧನಾರ್ಜನೆಗಾಗಿ ಹೊರಟರು. ಕೇವಲ ದಕ್ಷಿಣ ಕನ್ನಡ ಜಿಲ್ಲೆಯೇ ಅಲ್ಲದೆ ಹತ್ತಿರದ ಕೊಡಗು, ಮೈಸೂರು, ಬೆಂಗಳೂರುಗಳಲ್ಲೂ ಪ್ರವಾಸ ಮಾಡಿದರು. ಕೊಡಗಿನ ಮಡಿಕೇರಿಯಲ್ಲಿ ಹೊಟೆಲ್‌ ಉದ್ಯಮಿಗಳು ಹೆಚ್ಚಿನಂಶ ಗೌಡ ಸಾರಸ್ವತ ಬ್ರಾಹ್ಮಣರೇ ಆದ್ದರಿಂದ ಅಲ್ಲಿ ಇವರಿಗೆ ಹೆಚ್ಚಿನ ಪ್ರಚಾರ ಹಾಗೂ ಸಾಕಷ್ಟು ಆರ್ಥಿಕ ಸಹಾಯವೂ ದೊರೆಯಿತು.

ಗೃಹಸ್ಥಾಶ್ರಮ ಧರ್ಮ: ಹೀಗೆ ಪ್ರವಾಸ ಕಾರ್ಯದಲ್ಲಿದ್ದಾಗಲೇ ಅವರಿಗೆ ಕಂಕಣಬಲವೂ ಕೂಡಿಬಂತು. ಕೇರಳದ ಹೊಸದುರ್ಗದ ಸುಶೀಲಾಬಾಯಿ ಎಂಬುವರ ಮನೆಯಲ್ಲಿ ರಾಮನವಮಿ ಉತ್ಸವದ ಅಂಗವಾಗಿ ರಾಮಾವತಾರದ ಕಥೆ ಏರ್ಪಾಡಾಗಿತ್ತು. ಈ ಕಥೆಗೆ ಅಲ್ಲಿನ ಆನಂದಿ ಬಾಯಿ ಹಾಗೂ ವಿಠಲ ಪೈಯವರ ಮೊಮ್ಮಗ ಮಾಧವ ಶೆಣೈ ಅವರೊಂದಿಗೆ ಸಹೋದರಿ ನಿರ್ಮಲ ಸಹ ಬಂದಿದ್ದರು. ಕೇಶವ ಪೈಯವರು ಕಥೆ ಮಾಡುವ ರೀತಿ, ಸಂಗೀತ ಜ್ಞಾನ, ಮಾತಿನ ವಾಗ್ಝರಿಗಳ ಮೋಡಿಗೆ ಸಿಲುಕಿದ ನಿರ್ಮಲ ಅವರಲ್ಲಿ ಅನುರಕ್ತರಾದರು. ಕಾಲಕ್ರಮದಲ್ಲಿ ಕಂಕಣಬಲ ಕೂಡಿ ಬಂದು ಎರಡೂ ಕುಟುಂಬದ ಹಿರಿಯರು ಕೂಡಿ ಮಾತುಕತೆ ನಡೆಸಿ ಕೇಶವ-ನಿರ್ಮಲರ ವಿವಾಹ ನಡೆಸಿಯೇ ಬಿಟ್ಟರು. ಆ ನಿರ್ಮಲಳೇ ಕೇಶವ ಪೈಯ ಗೃಹಿಣಿಯಾಗಿ ‘ರಮಾಬಾಯಿ’ ಎಂಬ ಅಭಿದಾನ ಹೊಂದಿ ಇಂದು ಎಲ್ಲ ಭಕ್ತರ ಬಾಯಲ್ಲೂ ರಮಾ ಮಾತೆಯಾಗಿ ವಿಜೃಂಭಿಸುತ್ತಿದ್ದಾರೆ.

ಪ್ರಥಮ ವರ್ಷದ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದರು ಕೇಶವ ಪೈ. ಇದೇ ಸಂದರ್ಭದಲ್ಲಿ ‘ಗೀತಾ ಜಯಂತಿ’ಯ ಅಂಗವಾಗಿ ಉಡುಪಿಯ ಪ್ರತಿಷ್ಠಿತ ಹಾಗೂ ಪ್ರಭಾವಯುತ ವ್ಯಕ್ತಿಯಾಗಿದ್ದ ಶ್ರೀ ಟಿ. ಉಪೇಂದ್ರ ಪೈಯವರು ಮಣಿಪಾಲದ ತಮ್ಮ ಗೀತಾಮಂದಿರಕ್ಕೆ ಕಾಶೀಮಠಾಧೀಶರಾದ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿಯವರನ್ನು ಬರಮಾಡಿಕೊಂಡಿದ್ದರು. ಅವರ ಸನ್ನಿಧಿಯಲ್ಲಿ ಕೇಶವ ಪೈಯವರ ಕೀರ್ತನೆ ಏರ್ಪಾಡಿಸಲಾಗಿತ್ತು. ಈಗಾಗಲೇ ಶ್ರೀಗಳವರ ಅನುಗ್ರಹಕ್ಕೆ ಪಾತ್ರರಾಗಿದ್ದ ಕೇಶವ ಪೈಯವರ ಕೀರ್ತನೆ ಕೇಳಿ ಮೆಚ್ಚಿಕೊಂಡ ಶ್ರೀಗಳವರು ಮಠದ ಮರ್ಯಾದೆಯೊಂದಿಗೆ ಕೀರ್ಥನ ಕೇಸರಿ ಎಂಬ ಬಿರುದು ನೀಡಿ ಸನ್ಮಾನಿಸಿದರು. ಹೀಗೆ ಕೀರ್ತಿಯ ಮೆಟ್ಟಿಲನ್ನು ಹಂತ ಹಂತವಾಗಿ ಏರುತ್ತಾ ಕೀರ್ಥನ ಮಾಧ್ಯಮದೊಂದಿಗೆ ತಮ್ಮ ಪದವಿ ಪರೀಕ್ಷೆ ಮುಗಿಸಿ ಕಾನೂನು ಶಾಸ್ತ್ರ ಪದವಿಯನ್ನು ಪಡೆಯಲು ಉಡುಪಿಯಲ್ಲಿ ಆಗತಾನೆ ಪ್ರಾರಂಭಗೊಂಡ ಕಾಲೇಜಿಗೆ ಸೇರಿದರು.

ಬಿ.ಎ. ಮುಗಿಸಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಆಸೆ ಹೊತ್ತಿದವರು ಕೇಶವ ಪೈ. ವಾರಣಾಸಿಯ ವಿಶ್ವವಿದ್ಯಾಲಯದಲ್ಲಿ ಪ್ರವೇಶವೂ ದೊರೆತಿತ್ತು. ಆದರೆ ವೃದ್ಧರಾದ ವೆಂಕಟರಮಣ ಪೈ ದಂಪತಿಗಳು ಮಗನನ್ನು ಅಷ್ಟು ದೂರ ಕಳುಹಿಸಲು ಸಿದ್ಧರಿರಲಿಲ್ಲ. ಹಾಗಾಗಿ ಹಿರಿಯರ ಆದೇಶದಂತೆ ತಮ್ಮ ಆಸೆ-ಆಕಾಂಕ್ಷೆಗಳನ್ನು ಹತ್ತಿಕ್ಕಿ ಕಾನೂನು ಶಾಸ್ತ್ರಕ್ಕೆ ಮೊರೆಹೊಕ್ಕರು. ಕಾಲೇಜು ತೆರೆಯಲು ಸಾಕಷ್ಟು ಅವಧಿ ಇದ್ದುದರಿಂದ ಮುಂದೆ ಮುಂಬೈ ಪ್ರವಾಸ ಕೈಕೊಂಡರು. ಈ ಹೊತ್ತಿಗಾಗಲೇ ಮುಂಬೈಗೆ ವಲಸೆ ಹೋಗಿದ್ದ ಸ್ಥಳೀಕರಿಂದ ಇವರ ಪ್ರತಿಭೆ ಕೇಳಿ ತಿಳದಿದ್ದವರು ಪೈಯವರನ್ನು ಆದರದಿಂದ ಬರಮಾಡಿಕೊಂಢು ಅಲ್ಲಿಯೂ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಸಾಕಷ್ಟು ಧನಸಂಪಾದನೆಯೂ ಆಯಿತು. ಮುಂದಿನ ವಿದ್ಯಾಭ್ಯಾಸಕ್ಕೆಕ ಅನುಕೂಲವಾಯಿತು. ಹೀಗೆ ಹರಿಕಥೆಯ ಸಂಪಾದನೆಯಿಂದಲೇ ಕಾನೂನು ಪದವಿಯ ಕೊನೆಯ ವರ್ಷಕ್ಕೆ ತಲುಪಿದರು ಕೇಶವ ಪೈ. ಇದೇ ಸಂದರ್ಭದಲ್ಲಿ ಅವರಿಗೆ ಪಿತೃವಿಯೋಗವಾಗಿ ತಂದೆ ವೆಂಕಟರಮಣ ಪೈಯವರು ಕೊನೆಯುಸಿರೆಳೆದರು.

ಕರ್ನಾಟಕದ ರಾಜಧಾನಿ ಬೆಂಗಳೂರಿಗೆ: ಕೀರ್ತನ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ ಭದ್ರಗಿರಿ ಸಹೋದರರು ಈಗ ಅಚ್ಯುತದಾಸ್‌, ಕೇಶವದಾಸರಾಗಿ ಪ್ರಸಿದ್ಧಿ ಹೊಂದಿದ್ದರು. ಕೇಶವದಾಸರ ಪ್ರತಿಭೆಯನ್ನು ಕೇಳಿದ ಬೆಂಗಳೂರು ಆಕಾಶವಾಣಿ ಕೇಂಧ್ರ ಕಥಾ ಕೀರ್ತನ ಕಾರ್ಯಕ್ರಮದ ಪ್ರಸಾರಕ್ಕಾಗಿ ಇವರಿಗೆ ಆಹ್ವಾನ ನೀಡಿ ಮೂರು ತಿಂಗಳಿಗೊಮ್ಮೆ ಕಾರ್ಯಕ್ರಮ ನೀಡುವಂತೆ ಕರಾರು ಮಾಡಿಕೊಂಡಿತು. ಇದರಿಂದ ರಾಜ್ಯದ ನಾನಾ ಭಾಗದಿಂದ ಎಲ್ಲೆಡೆ ಇವರ ಕಥಾಕೀರ್ತನ ಶ್ರವಣಿಸುವ ಸುಯೋಗ ಜನರಿಗೆ ಸಂದಿತು. ಬೆಂಗಳೂರಿನ ಅನೇಕ ಸಂಸ್ಥೆಗಳು ಇವರ ಕಾರ್ಯಕ್ರಮಗಳನ್ನೇರ್ಪಡಿಸಿದವುಇ. ಅಲ್ಲದೆ ತಾವು ಕಾನೂನು ಪದವೀಧರರಾದ ಮೇಲೆ ಬೆಂಗಳೂರಿನಲ್ಲೇ ‘ಪ್ರಾಕ್ಟೀಸ್‌’ ಮಾಡುವ ಇರಾದೆಯಿಂದಿದ್ದ ದಾಸರು ಬೆಂಗಳೂರಿಗೆ ವಲಸೆಕ ಬಂದರು. ಅಣ್ಣ ಅಚ್ಯುತದಾಸರೂ ಬೆಂಗಳೂರಿನ ಶೇಷಾದ್ರಿಪುರದಲ್ಲಿಲ ಎರಡು ತಿಂಗಳ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಅಣ್ಣನ ಕಥೆಗಳಲ್ಲಿ ಭಾಗವಹಿಸುತ್ತಿದ್ದ ಇವರ ತಮ್ಮ ತಾವೇ ಸ್ವತಃ ಹಾರ್ಮೋನಿಯಂ ನುಡಿಸುತ್ತಿದ್ದರು. ಕೆಲವೊಮ್ಮೆ ಅಣ್ಣನ ಹಾಡಿಗೆ ದನಿಗೂಡಿಸುತ್ತಿದ್ದರು. ಅಶ್ವಿನೀ ದೇವತೆಗಳಂತೆ ಅತ್ಯಂತ ತೇಜಸ್ವಿಗಳಾಗಿ ಕಂಗೊಳಿಸುತ್ತಿದ್ದ ಈ ಸಹೋದರರನ್ನು ಕಂಢು ಶ್ರೋತೃವೃಂದ ತಮ್ಜಮ ಸಂತಸ-ತೃಪ್ತಿ ವ್ಯಕ್ತಪಡಿಸಿದರು.

ಮುಂದೆ ಬೆಂಗಳೂರಿನ ಮಲ್ಲೇಶ್ವರ ಬಡಾವಣೆಯ ಸಿದ್ಧಾಶ್ರಮ, ಅಲ್ಲದೆ ರಾಮೋತ್ಸವ, ಪುರಂದರೋತ್ಸವಗಳಲ್ಲಿ ಇವರ ಕೀರ್ತನೆಗಳು ನಡೆದು ಕೇಶವದಾಸರ ಹೆಸರು ಮನೆಮಾತಾಯಿತು. ಆಗ ಬಂತು ದಾಸರಿಗೆ ಆಹ್ವಾನ ಮಲ್ಲೇಶ್ವರದ ‘ಶ್ರೀ ರಾಮಭಜನ ಸಭಾ’ದ ಕಾರ್ಯಕಾರಿಣಿಯಿಂದ. ‘ಶ್ರೀ ಮದ್ರಾಮಾಯಾಣ’ದ ಸಂಪೂರ್ಣ ಕಥಾನಕದ ಕೀರ್ಥನ ಮಾಲೆಯೇ ಇಲ್ಲಿ ನಡೆಯಿತು. ಕಥಾಶ್ರವಣದಿಂಧ ಪ್ರಭಾವಿತರಾದ ಅನೇಕ ಸೋದರ ಸೋದರಿಯರು ಕೇಶವದಾಸರ ಶಿಷ್ಯರಾದರು. ಕೆಲವು ವಿದೇಶೀ ಭಕ್ತರೂ ಇವರ ಕಥೆಗೆ ಮಾರುಹೋದರು. ಕಾನೂನು ಶಾಸ್ತ್ರ ಪದವೀಧರರಾಗಿದ್ದರಿಂಧ ಆಂಗ್ಲ ಭಾಷೆಯಲ್ಲಿಯೂ ಸಾಕಷ್ಟು ಪ್ರೌಢಿಮೆ ಹೊಂದಿದ್ದ ದಾಸರು ತಮ್ಮ ಕೀರ್ತನೆಯಲ್ಲಿ ವಿಶ್ವದ ಎಲ್ಲ ಧರ್ಮಗಳ ಕುರಿತು ಪ್ರತಿಪಾದಿಸವಾಗ ಹಲವಾರು ದೃಷ್ಟಾಂತಗಳನ್ನು ಆಂಗ್ಲ ಭಾಷೆಯಲ್ಲಿ ನಿರೂಪಿಸುತ್ತಿದ್ದರು. ಇದು ನಗರಕ್ಕೆ ಆಗಮಿಸಿ ಇವರ ಕಥೆ ಕೇಳಿದ ವಿದೇಶೀಯರ ಮೇಲೆ ಸಾಕಷ್ಟು ಪ್ರಭಾವ ಬೀರಿ ಅವರೂ ಸಹ ದಾಸರ ಶಿಷ್ಯವರ್ಗಕ್ಕೆ ಸೇರಿದರು. ತಮ್ಮ ಶಿಷ್ಯವರ್ಗವನ್ನು ಕೂಡಿಸಿ ದಾಸ ಕೀರ್ತನ ಮಂಡಳಿಯನ್ನು ಸ್ಥಾಪಿಸಿದರು ಕೇಶವದಾಸರು.

ನ್ಯಾಯಾಲಯದ ನಷ್ಟ-ಕೀರ್ತನ ಕ್ಷೇತ್ರದ ಲಾಭ: ರಾಮಭಜನ ಸಭಾದಲ್ಲಿ ಒಂದು ತಿಂಗಳ ಕಾಲ ಅವ್ಯಾಹತವಾಗಿ ಕೇಶವದಾಸರ ಕೀರ್ತನರೂಪೀ ಪ್ರವಚನ ನಡೆಯಿತು. ಕೊನೆಯದಿನದ ಮಂಗಳ ಹಾಗೂ ಸಮಾರೋಪದ ಕಾರ್ಯಕ್ರಮ. ಮಾರನೆಯ ದಿನವೇ ದಾಸರು ವಕೀಲಿ ವೃತ್ತಿಗಾಗಿ ಕೋರ್ಟಿನಲ್ಲಿ ಸನ್ನದನ್ನು ಪಡೆಯಬೇಕಿತ್ತು. ನ್ಯಾಯವಾದಿಯಾಗಿ ವೃತ್ತಿ ಆರಂಭಿಸಬೇಕಿತ್ತು. ಅಂದು ಕಾರ್ಯಕ್ರಮಕ್ಕೆ ಭಕ್ತರ-ಶ್ರೋತೃಗಳ ಮಹಾಪೂರವೇ ಹರಿದಿತ್ತು. ದಾಸರು ಮಂಗಳ ಶ್ಲೋಕ ಹಾಡಿ ಮುಗಿಸುತ್ತಿದ್ದ ಹಾಗೇ ಬಂದಂಥ ಎಲ್ಲ ಭಕ್ತರು ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಧನ ಹಾಗೂ ವಸ್ತು ರೂಪದಲ್ಲಿ ಕಾಣಿಕೆಯನ್ನು ದಾಸರ ಪದತಲದಲ್ಲಿ ಅರ್ಪಿಸಿದರು. ರಾಶಿರಾಶಿಯಾಗಿ ತಮ್ಮ ಪದತಲದಲ್ಲಿ ಬಂದು ಶೇಖರವಾದ ಸಂಪತ್ತನ್ನು ನೋಡಿದ ಕೇಶವದಾಸರು ಸಮರ್ಪಣ ಭಾವದಿಂದ ಭಗವಂತನನ್ನು ಸ್ತುತಿಸಿ ಜನರಲ್ಲಿ ನೀತಿಬೋಧೆ ಮಾಡಿ ಅವರನ್ನು ಸನ್ಮಾರ್ಗಕ್ಕೆ ಎಳೆಯುವ ಈ ಕೀರ್ತನ ಮಾಧ್ಯಮಕ್ಕಿಂತ ಬೇರೊಂದು ಉದ್ಯೋಗವಿಲ್ಲ. ನ್ಯಾಯಕ್ಕಾಗಿ, ಅನೃತವನ್ನು ನುಡಿಯಬೇಕಾಗಬಹುದಾದ ನ್ಯಾಯವಾದಕ್ಕಿಂತ ಈ ತತ್ವವಾದವೇ ಮೇಲು ಎಂದು ನಿಶ್ಚೈಸಿ ತಮ್ಮ ವಕೀಲಿ ವೃತ್ತಿಯನ್ನು ತ್ಯಜಿಸಿದರು. ಭಗವಂತನ ವಕೀಲರಾಗಿ ಆಧ್ಯಾತ್ಮ ಚಿಂತನೆಗೆ ತಮ್ಮನ್ನು ತಾವೇ ಅರ್ಪಿಸಿಕೊಂಡು ಧನ್ಯರಾದರು. ಭದ್ರಗಿರಿ ಕೇಶವದಾಸರು. ಇದು ನ್ಯಾಯಾಲಯಕ್ಕೆ ತುಂಬಲಾಗದ ನಷ್ಟವಾದರು ಧಾರ್ಮಿಕ ಕ್ಷೇತ್ರಕ್ಕೆ ಇದರಿಂದ ಅಪಾರ ಲಾಭವಾಯಿತು. ದೇಶಕ್ಕೇ ಒಬ್ಬ ದಾರ್ಶನಿಕನನ್ನು ನೀಡಿ ವಿಶ್ವಮಾತೆ ಧನ್ಯಳಾದಳು. ಬೆಂಗಳೂರಿನ ಅನೇಕ ಸಂಸ್ಥೆಗಳು ಸಭೆಗಳನ್ನು ಏರ್ಪಡಿಸಿ ದಾಸರನ್ನು ಗೌರವಿಸಿ ಸನ್ಮಾನಿಸಿ ತಮ್ಮ ಘನತೆಯನ್ನು  ಕಾಪಾಡಿಕೊಂಡರು.

ದಾಸಾಶ್ರಮ ಸ್ಥಾಪನೆ: ಬೆಂಗಳೂರಿಗೆ ವಲಸೆ ಬಂದ ಕೇಶವದಾಸರು ಮಲ್ಲೇಶ್ವರದ ಪ್ಯಾಲೆಸ್‌ ಗುಟ್ಟಹಳ್ಳಿಯಲ್ಲಿ ಒಂದು ಬಾಡಿಗೆ ಮನೆ ಹಿಡಿದು ಅಲ್ಲಿ ವಾಸಿಸುತ್ತಿದ್ದರು. ಮುಂದೆ ಸಂಸಾರ ಬೆಳೆಯಿತು. ಅವರಿಗೂ ಎರಡು ಗಂಡು ಒಂದು ಹೆಣ್ಣು ಮಗು ಜನಿಸಿದರು . ಭದ್ರಗಿರಿ ಅಚ್ಯುತದಾಸರು ಗೃಹಸ್ಥರಾಗಿ ಮಕ್ಕಳನ್ನು ಪಡೆದಿದ್ದರು. ತಮ್ಮ ಸರ್ವೋತ್ತಮ ಪೈ ಬು,ಎಸ್ಸಿ. ಪದವಿ ಪಡೆದು ಬೆಂಗಳೂರಿಗೆ ಬಂದಿದ್ದರು. ಅವರಿಗೂ ವಿವಾಹವಾಗಿ ಈಗಿದ್ದ ಮನೆ ಸಾಲದೆ ಬಂದಿದ್ದರಿಂದ ಈಜುಕೊಳ ಬಡಾವಣೆಯಲ್ಲಿ ಒಂಧು ದೊಡ್ಡಮನೆಯನ್ನು ಬಾಡಿಗೆಗೆ ಪಡೆದು ಅಲ್ಲಿ ವಾಸಿಸಲಾರಂಭಿಸಿದರು. ಪ್ಯಾಲೆಸ್‌ ಗುಟ್ಟಹಳ್ಳಿಯ ಮನೆಯಲ್ಲಿ ದಾಸಾಶ್ರಮ ಮತ್ತು ಕೀರ್ಥನ ಮಹಾವಿದ್ಯಾಲಯ ಸ್ಥಾಪಿಸಿ ಕೀರ್ತನ ರಂಗದ ಅಭಿವೃದ್ದಿಗೆ ಭದ್ರಬುನಾದಿ ಹಾಕಿದರು. ಹೀಗೆ ಆರಂಭವಾಯಿತು ದಾಸಾಶ್ರಮ.

ಬೆಂಗಳೂರಿನ ಗಾಂಧಿನಗರದ ಧರ್ಮರತ್ನಾಕರ ಅರಸೋಜಿರಾಯರು ಹೆಸರಿಗೆ ತಕ್ಕಂತೆ ಧರ್ಮಭೀರುಗಳು. ಯಾತ್ರಿಕರಿಗೆ, ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ ಅನೇಕ ಧರ್ಮಛತ್ರಗಳನ್ನು ಕಟ್ಟಿಸಿಕೊಟ್ಟು ತಮ್ಮ ಹೆಸರನ್ನು ಶಾಶ್ವತವಾಗಿ ನಿಲ್ಲಿಸಿ ಹರಿಪಾದ ಸೇರಿದರು. ಅವರ ಪತ್ನಿ ಮುನ್ನೂಬಾಯಿ ಸಾಧ್ವಿ. ಗಂಡನ ಹಾದಿಯಲ್ಲೇ ಬಾಳು ಸಾಗಿಸಿದವರು. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕೇಶವದಾಸರ ಕಥಾಕೀರ್ತನೆಗಳನ್ನು ಕೇಳಿ ಪ್ರಭಾವಿತರಾದರು. ಗುರುಭಾವನೆಯನ್ನು ತಳೆದಿದ್ದವರು. ಇವರಿಗೆ ಏನಾದರೂ ಗುರುಸೇವೆ ಮಾಡಬೇಕೆಂಬ ತೀರ್ಮಾನಕ್ಕೆಕ ಆಕೆ ಮತ್ತು ಆಕೆಯ ಮಕ್ಕಳು ಬಂದಿದ್ದರು. ಕೀರ್ತನ ಶ್ರವಣದಿಂದ ಆಕೆಯ ಮನಃಕ್ಲೇಶದೂರವಾಗಿ ಅಪಾರ ಶಾಂತಿಯನ್ನು ನೀಡಿತ್ತು. ಕೇಶವದಾಸರು ದಾಸಾಶ್ರಮವನ್ನು ಸ್ಥಾಪಿಸಿ ಅಲ್ಲಿ ಕೀರ್ತನ ಶಿಕ್ಷಣವನ್ನು ನೀಡುತ್ತಿರುವ ವಿಷಯ ಆಕೆಗೆ ತಿಳಿದಿತ್ತು. ಅದು ಬಾಡಿಗೆಯ ಮನೆಯೆಂದೂ ಗೊತ್ತಿತ್ತು. ರಾಜಾಜಿನಗರದ ಐದನೇ ವಿಆಗದಲ್ಲಿ ಅರಸೋಜಿರಾಯರು ಕಟ್ಟಿಸಿದ ಧರ್ಮಛತ್ರವೊಂದಿದ್ದು ಅದೊಂದು ಪವಿತ್ರ ವಾತಾವರಣದಿಂದ ಕೂಡಿದ ತಾಣವಾಗಿತ್ತು. ಮುನ್ನೂಬಾಯಿ ಅದನ್ನು ದಾಸಾಶ್ರಮಕ್ಕೆ ದಾನವಾಗಿ ನೀಡಲು ಸಂಕಲ್ಪಿಸಿ ಒಂದು ಶುಭಮುಹೂರ್ತದಲ್ಲಿ ದಾನಪತ್ರ ಬರೆಸಿ ಅದನ್ನು ಕೇಶವದಾಸರಿಗೆ ನೀಡಿದರು. ೧೯೬೧ರ ವಿಜಯದಶಮಿ ದಿನ ರಾಜಾಜಿನಗರದಲ್ಲಿ ಉಡುಪಿಯ ಅಧಮಾರು ಮಠಾಧೀಶರಾದ ಶ್ರೀ ಶ್ರೀ ವಿಭುದೇಶ ತೀರ್ಥರ ಅಮೃತ ಹಸ್ತದಿಂದ ದಾಸಾಶ್ರಮ ಉದ್ಘಾಟಿಸಲ್ಪಟ್ಟಿತು.

ಅಲ್ಲಿ ಪಾಂಡುರಂಗ, ರುಕ್ಮಾಯಿ, ಈಶ್ವರ , ಸುಬ್ರಹ್ಮಣ್ಯ, ಗಣಪತಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಒಂದು ಮಂದಿರ ನಿರ್ಮಾಣಕ್ಕಾಗಿ ಪುಣ್ಯತಾಣವಾಯಿತು. ಮುಂದೆ ಪುರಂದರದಾಸರ ೪ನೇ ಶತಾಬ್ಧಿಯ ಅಂಗವಾಗಿ ಅಮೃತ ಶಿಲೆಯ ಪುರಂದರದಾಸರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಜೊತಯಲ್ಲಿಯೇ ಶ್ರೀ ಸತ್ಯನಾರಾಯಣ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಹುಣ್ಣಿಮೆ, ಸಂಕ್ರಮಣ ಪರ್ವದಿನಗಳಲ್ಲಿ ಪೂಜಾದಿ ಕೈಂಕರ್ಯಗಳನ್ನು ನಡೆಸುವಂತಾಯಿತು. ಈ ಪವಿತ್ರಕ್ಷೇತ್ರಕ್ಕೆ ಪುರಂದರಪುರವೆಂಧು ನಾಮಕರಣ ಮಾಡಲಾಯಿತು. ಈಗ ಈ ದಾಸಾಶ್ರಮ ವಿಶ್ವವಿಖ್ಯಾತವಾಗಿ ದಾಸಾಶ್ರಮ ಅಂತರಾಷ್ಟ್ರೀಯ ಕೇಂದ್ರವಾಗಿ ಪರಿವರ್ತಿತವಾಗಿದೆ.

ಅಖಿಲ ಕರ್ಣಾಟಕ ಕೀರ್ತನ ಕಲಾ ಸಮ್ಮೆಳನ: ಕರ್ನಾಟಕಾದ್ಯಂತ ಹರಿದು ಹಂಚಿಹೋಗಿರುವ ಕೀರ್ತನಕಾರರನ್ನು ಒಟ್ಟುಗೂಡಿಸಿ ಒಂದು ಪರಿಷತ್ತನ್ನು ಸ್ಥಾಪಿಸುವ ಸಂಕಲ್ಪ ಹೊಂದಿದ್ದ ಕೇಶವದಾಸರು ಇದಕ್ಕಾಗಿ ಒಂದು ಸಮ್ಮೇಳನ ನಡೆಸಲು ತೀರ್ಮಾನಿಸಿದರು. ಈ ಹೊತ್ತಿಗೆ ಕೇಶವದಾಸರು ಕೀರ್ತನಕಾರ ಮಾತ್ರವಲ್ಲದೆ ಕವಿ-ಸಾಹಿತಿಯೂ ಆಗಿ ಅನೇಕ ಕೀರ್ತನೆಗಳನ್ನು ರಚಿಸಿದ್ದರು. ‘ಪುರಂದರೋಪನಿಷತ್‌’ ಎಂಬ ಉದ್ಗಂಥ ಸಹ ರಚಿತವಾಗಿತ್ತು. ಅನೇಕ ಪತ್ರಿಕೆಗಳಲ್ಲಿ ಇವರ ಕುರಿತು ಪ್ರಶಂಸಾತ್ಮಕ ಲೇಖನಗಳು ಬಂದು ಅದು ಅಂದಿನ ರಾಜ್ಯಪಾಲ ಮೈಸೂರು ಸಂಸ್ಥಾನದ ಕೊನೆಯ ಆಳರಸರಾಗಿದ್ದ ಶ್ರೀ ಜಯಚಾಮರಾಜ ಒಡೆಯರ ಕಿವಿಗೂ ಬಿದ್ದಿತ್ತು. ಮೈಸೂರು ರಾಜ್ಯದ ವಿಧಾನ ಸಭಾಪತಿಗಳಾಗಿದ್ದ ವೈಕುಂಠ ಬಾಳಿಗಾ ಅವರ ಮೂಲಕ ಕೇಶವದಾಸರಿಗೆ ಒಡೆಯರ್ ಅವರ ಭೇಟಿ ಲಭಿಸಿತು. ರಾಜ್ಯ ಮಟ್ಟದ ಕೀರ್ತನಕಾರರ ಸಮ್ಮೇಳನದ ಉದ್ಘಾಟನೆಗೆ ಮಹಾರಾಜರನ್ನು ಆಹ್ವಾನಿಸಿದಾಗ ಅವರು ಸಂತೋಷದಿಂದ ಒಪ್ಪಿಕೊಂಡರು.

ಕರ್ನಾಟಕ ಕೀರ್ತನಕಾರರ ವಿಳಾಸವನ್ನು ಸಂಗ್ರಹಿಸಿ ಎಲ್ಲ ಕೀರ್ತನಕಾರರನ್ನು ಸಮ್ಮೇಳನಕ್ಕೆ ಆಹ್ವಾನಿಸಿದರು. ೪-೩-೧೯೬೪ ರಂದು ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಿದ ಮಹಾರಾಜರು ಸರ್ವರಿಗೂ ಶುಭ ಕೋರಿದರು. ‘ನಭೂತೋ ನಭವಿಷ್ಯತಿ’ ಎನ್ನುವಂತೆ ಈ ಸಮ್ಮೇಳನ ಅತ್ಯಂತ ವಿಜೃಂಭಣೆಯಿಂದ ನಡೆದು ಭದ್ರಗಿರಿ ಸಹೋದರರ ಕೀರ್ತಿ ಉತ್ತುಂಘ ಶಿಖರಕ್ಕೇರಿತು. ಅಷ್ಟೇ ಅಲ್ಲದೆ ೧೯೬೫ರಲ್ಲಿ ಅಖಿಲ ಭಾರತ ಕೀರ್ತನಕಾರರ ಸಮ್ಮೇಳನವನ್ನು ನಡೆಸಿ-ಭಾರತೀಯ ಸಂತ ಸಮ್ಮೇಳನದ ಸಂಘಟಕರಾದರು.

ವಿದೇಶ ಪ್ರವಾಸ: ಭಾರತೀಯ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿದು ಆಧ್ಯಾತ್ಮದ ಮೂಲಕ ಶಾಂತಿ ಸಂದೇಶ ನೀಡುತ್ತಿದ್ದ ಕೇಶವದಾಸರ ಕೀರ್ತಿ ಸಾಗರದಾಚೆಯೂ ಪಸರಿಸಿ ಜರ್ಮನಿಯ ದಿವ್ಯಜೀವನ ಸಂಘದ ವತಿಯಿಂದ ಕೆಲವು ದಿನಗಳ ಕಾಲ ಪ್ರವಚನ ನೀಡುವಂತೆ ಆಹ್ವಾನ ಬಂತು. ಅದರಂತೆ ವಿದೇಶಯಾತ್ರೆಗೆ ಬೇಕಾದ ಸಕಲ ಸಂಪ್ರದಾಯಗಳನ್ನು ಮುಗಿಸಿ ೧೯೬೬ರಲ್ಲಿ ತಮ್ಮ ಪ್ರಥಮ ವಿಶ್ವಯಾತ್ರೆಯನ್ನು ಆರಂಭಿಸಿದ ಕೇಶವದಾಸರು ಅವ್ಯಾಹತವಾಗಿ ೩೮ ಬಾರಿ ವಿಶ್ವಪರ್ಯಟನೆ ಮಾಡಿ ಭಾರತೀಯ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾದರು. ವಿಶ್ವದಾದ್ಯಂತ ಅನೇಕ ಶಿಷ್ಯಸಮೂಯವನ್ನು ಪಡೆದರು. ಅಮೆರಿಕಾ, ಪಶ್ಚಿಮ ಇಂಡೀಸ್‌, ಆಫ್ರಿಕಾ, ಲಂಡನ್‌ ನಗರ ಮುಂತಾದೆಡೆಗಳಲ್ಲಿ ವಿಶ್ವಶಾಂತಿ ಆಶ್ರಮವನ್ನು ಸ್ಥಾಪಿಸಿದರು. ಸ್ವಾಮಿ ವಿವೇಕಾನಂದರ ವಾಣಿ ಅಮೇರಿಕನ್‌ ಪ್ರಜೆಗಳಲ್ಲಿ  ಇನ್ನೂ ಅಚ್ಚಳಿಯದಂತಿರುವಾಗಲೇ ಅವರ ಉಪದೇಶಾಮೃತದ ಸಾರವನ್ನು ಮತ್ತೊಮ್ಮೆ ಪಸರಿಸುವಂತೆ ಮಾಡಿದ ಮತ್ತೊಬ್ಬ ದಾರ್ಶನಿಕರಾದರು ಕೇಶವದಾಸರು. ಶಾಂತಿ ದೂತನೆನೆಸಿದರು. ೧೯೬೦ರಲ್ಲಿ ದಾಸವಾಣಿ ಎಂಬ ದಿನ ಪತ್ರಿಕೆಯನ್ನು ಆರಂಭಿಸಿ ಮನೆಮನೆಗೂ ಆಧ್ಯಾತ್ಮ ಸಂದೇಶ ಮುಟ್ಟುವಂತೆ ಶ್ರಮಿಸಿದರು. ಅನಂತರ ಇದು ೧೯೬೪ರಲ್ಲಿ ಮಾಸ ಪತ್ರಿಕೆಯಾಗಿ ಪರಿವರ್ತಿತವಾಯಿತು.

ವಿಶ್ವಶಾಂತಿ ಆಶ್ರಮ: ಬೆಂಗಳೂರಿನ ಭವ್ಯವಾದ ವಿಠಲಮೂರ್ತಿಯನ್ನು ಪ್ರತಿಷ್ಠಾಪಿಸಿ ಒಂದು ವಿಶ್ವಶಾಂತಿ ಆಶ್ರಮವನ್ನೇ ಸ್ಥಾಪಿಸಬೇಕೆಂಬ ಉತ್ಕಟಾಕಾಂಕ್ಷೆ ಕೇಶವದಾಸರಲ್ಲಿ ಮನೆಮಾಡಿತ್ತು. ಇದಕ್ಕಾಗಿ ಒಂದು ಪ್ರಶಸ್ತವಾದ ಸ್ಥಳಕ್ಕಾಗಿ ಶೋಧ ನಡೆದೇ ಇತ್ತು. ಅದಕ್ಕೂ ಮುಹೂರ್ತ ಕೂಡಿ ಬಂತು. ನೆಲಮಂಗಲ ತಾಲೂಕಿನ ಅರಸಿನಕುಂಟೆ ಗ್ರಾಮದಲ್ಲಿ ಸುಮಾರು  ೧೪ ಎಕರೆಯಷ್ಟು ವಿಸ್ತಾರವಾದ ಸ್ಥಳ ಬಿಕರಿಗೆ ಸಿದ್ಧವಾಗಿತ್ತು. ಬೆಲೆಯೂ ಸುಮರು ೧೪ ಲಕ್ಷ ಎಂದು ಅಂದಾಜು ಮಾಡಲಾಗಿತ್ತು. ಆದರೆ ಅಷ್ಟೊಂದು ಹಣ ಎಲ್ಲಿಂದ ಒದಗಿಸುವುದೆಂಬ ಚಿಂತೆ ಅವರನ್ನು ಕಾಡಿದಾಗ ಅವರ ಸಹಾಯಕ್ಕೆ ಸಾಕ್ಷಾತ್‌ ಪಾಂಡುರಂಗನೇ ಬಂದ.

ವೆಸ್ಟ್‌ ಇಂಡೀಸ್‌ನ ಟ್ರಿನಿಡಾಡ್‌ನಲ್ಲಿದ್ದ ಓರ್ವ ಭಾರತೀಯ-ಪ್ರೇಮರಾಜ್‌ ಭಜರಂಗಿ ಎಂದು ಆತನ ಹೆಸರು, ಆತ ಮನಸ್ಥೈರ್ಯ ಕಳೆದುಕೊಂಡು ಚಿತ್ತ ಶಾಂತಿಯಿಲ್ಲದೆ ತೊಳಲುತ್ತಿದ್ದ. ಕೇಶವದಾಸರ ಪ್ರವಚನಕ್ಕೆ ಪ್ರಭಾವಿತನಾಗಿ ಅವರ ಸತ್ಸಂಗದಿಂದ ತಕ್ಕಮಟ್ಟಿನ ಮನಶ್ಯಾಂತಿ ಪಡೆದಿದ್ದ. ಆತ ಕೇಶವದಾಸರ ಸಂಕಲ್ಪವನ್ನು ತಿಳಿದು ಅರಸಿನಕುಂಟೆಯ ಭೂಮಿಯನ್ನು ಖರೀದಿಸಿ ವಿಶ್ವಶಾಂತಿ ಆಶ್ರಮದ ನಿರ್ಮಾಣಕ್ಕಾಗಿ ದಾನ ನೀಡಿದ. ದಾಸರ ಸತತ ಶ್ರಮದಿಂದ ಅಲ್ಲಿ ೩೨ ಅಡಿಗಳ ಭವ್ಯ ಮೂರ್ತಿ ವಿಶ್ವವಿಜಯವಿಠಲ ಇಂದು ವಿಜೃಂಭಿಸಿದ್ದಾನೆ. ಅವನ ಸುತ್ತಲೂ ಅಷ್ಟಲಕ್ಷ್ಮಿಯರು ವಿರಾಜಮಾನರಾಗಿದ್ದಾರೆ.  ರಾಮತಾರಕ ಮಂತ್ರದ ಜಪ ಪುಸ್ತಕಗಳನ್ನು ಸಂಗ್ರಹಿಸಿ ವಿಠಲನ ಎಡ ಬಲದ ಸ್ಥಂಭಗಳ;ಲ್ಲಿ ಇಡಲಾಗಿದೆ. ಗಣಪತಿ, ಆಂಜನೇಯ, ದತ್ತಾತ್ರೇಯ, ಕನಕ-ಪುರಂದರದಾಸರು ಆಶ್ರಮದ ಆವರಣದಲ್ಲಿ ವಿರಾಜಮಾನರಾಗಿದ್ದಾರೆ. ಈಗ ಇದೊಂದು ದೊಡ್ಡ ಸಂಸ್ಥೆಯಾಗಿ ವಿಶ್ವಶಾಂತಿನಗರವೆನಿಸಿಕೊಂಡಿದೆ.

ಅದ್ವಿತೀಯ ಗೀತಾಮಂದಿರ: ಇಷ್ಟಾದರೂ ಇನ್ನೇನಾದರೂ ಸಾಧಿಸಬೇಕೆಂಬ ಕಾಮನೆ ಮನಸ್ಸಿನಲ್ಲಿತ್ತು. ಭಗವದ್ಗೀತಾಚಾರ್ಯ ನೆನೆಸಿಕೊಂಡಿರುವ ಶ್ರೀಕೃಷ್ಣನ ಅಪಾರ ಭಕ್ತಶಿರೋಮಣಿದಾಸರು. ಗೀತೆಯ  ಬಗ್ಗೆ ಅಪಾರ ಗೌರವ ಭಕ್ತಿ ತಮ್ಮ ಜೀವನದುದ್ದಕ್ಕೂ ಭಗವದ್ಗೀತೆಯ ಪ್ರಚಾರ-ಪ್ರವಚನ ಗೈದ ದಾಸರಿಗೆ ಆ ಗೀತಾಚರ್ಯನಿಗೆ ಸೂಕ್ತ ಮಂದಿರ ನಿರ್ಮಿಸಿ ಭಗವದ್ಗೀತಾ ಶ್ಲೋಕ ಪ್ರತಿಯೊಬ್ಬ ಮಾನವನಿಗೂ ಮುಟ್ಟಬೇಕೆಂಬ ಹಿರಿದಾಸೆ ಅವರಲ್ಲಿತ್ತು. ಅದಕ್ಕೂ ಕಾಲವೊದಗಿ ಬಂದು  ವಿಶ್ವಶಾಂತಿ ಆಶ್ರಮದ ಆವರಣದಲ್ಲೇ ಭವ್ಯವಾದ ಗೀತಾಮಂದಿರ ನಿರ್ಮಾಣವಾಯಿತು. ಭಗವದ್ಗೀತೆಯ  ಹದಿನೆಂಟು ಅಧ್ಯಾಯದ ಶ್ಲೋಕಗಳೂ ಕೃಷ್ಣಶಿಲೆಯಲ್ಲಿ ರೂಪಗೊಂಡು ಅದೇ ಮಂದಿರದ ಗೋಡೆಯಾಯಿತು. ಭಗವಂತ ತನ್ನ ವಿಶ್ವರೂಪವನ್ನು ಅರ್ಜುನನಿಗೆ ತೋರಿಸುತ್ತಿರುವ ಭವ್ಯಮೂರ್ತಿ, ಮಂದಿರವೇ ರಥದ ವಿನ್ಯಾಸದಲ್ಲಿದ್ದು ಅರ್ಜುನನಿಗೆ ಗೀತೋಪದೇಶ ನೀಡುತ್ತಿರುವ ಭವ್ಯ ಕೆತ್ತನೆ ಇಲ್ಲಿ ಮೂಡಿಬಂದಿದೆ. ದಾನಿಗಳ ಮಹಾಪೂರವೇ ಹರಿದು ಈ ನಿರ್ಮಾಣಕಾರ್ಯ ಅತಿಕಡಿಮೆ ಅವಧಿಯಲ್ಲೇ ಮುಗಿದು ಭಾರತೀಯ ಸಂಸ್ಕೃತಿಯ  ಪ್ರೇರಕ ಶಕ್ತಿಯಾಗಿ ನಿಂತಿದೆ. ಅಲ್ಲಿಯೇ ಇರುವ ಗಾಯತ್ರೀ ಮಂದಿರ ಇಂದು ಒಂದು ಆಧ್ಯಾತ್ಮ ಮಹಾವಿದ್ಯಾಲಯವಾಗಿ ಪರಿವರ್ತಿತವಾಗಿದೆ. ಇದಲ್ಲದೆ ಇವರು ಸ್ಥಾಪಿಸಿದ ಕೀರ್ತನ ಮಹಾವಿದ್ಯಾಲಯ ಸಹ ಒಂದು ವಿಶ್ವವಿದ್ಯಾಲಯವಾಗಿ ಅನೇಕ ಕೀರ್ತನಕಾರರು ಇಲ್ಲಿಂದ ತಯಾರಾಗಿದ್ದಾರೆ. ಆಂಧ್ರದ ವಿಶಾಖಪಟ್ಟಣ, ರಾಜಮಂದ್ರಿ ಮುಂತಾದೆಡೆಯೂ ಆಶ್ರಮ ಸ್ಥಾಪನೆ ಮಾಡಿದ್ದಾರೆ. ಹೀಗೆ ಕೇಶವದಾಸರು ಕೇವಲ ಕೀರ್ತನೆಕಾರರಾಗಿ ಮಾತ್ರವಲ್ಲ ಭಾರತೀಯ ಸಂಸ್ಕೃತಿ ಪರಂಪರೆಯ ಭವ್ಯ ಶಿಲ್ಪಿಯಾಗಿ ಮೆರೆದಿದಾರೆ.

ಹಾಡಿಕೆಯ ಶೈಲಿ: ಕರ್ನಾಟಕ ಹಿಂದೂಸ್ತಾನೀ ಎರಡೂ ಪದ್ಧತಿಗಳಲ್ಲೂ ಸಾಕಷ್ಟು ಪರಿಶ್ರಮ ಹೊಂದಿರುವ ಕೇಶವದಾಸರು ಎರಡೂ ಪದ್ಧತಿಯ ರಾಗಗಳನ್ನು ಬಳಸಿಕೊಂಡು ಹಾಡುವ ಪರಿಣತಿ ಪಡೆದಿದ್ದರು. ಗೌಳ ಶಾರೀರ, ಮಾಧುರ್ಯಯುಕ್ತ ಗಾಯನದೊಂದಿಗೆ ಸಾಹಿತ್ಯಕ್ಕೆ ತಕ್ಕ ಸ್ವರಪೋಷಣೆ ನೀಡುವಲ್ಲಿ ಸಮರ್ಥರು. ಸ್ವತಃ ಹಾರ್ಮೋನಿಯಂ ನುಡಿಸಿಕೊಂಡು ಹಾಡುವ ಪರಿಪಾಠ ಇವರದ್ದು. ಚಿಕ್ಕದಾದ ಚೊಕ್ಕ ಸಂಸಾರ. ಪತ್ನಿ ರಮಾಬಾಯಿ, ಗಂಡುಮಕ್ಕಳು ಮುರಳೀಧರ ಪೈ ಹಾಗೂ ರಾಧೇಶ್ಯಾಮ ಪೈ, ಮಗಳು ಗೀತಾಭಟ್‌ ಎಲ್ಲರೂ ಗೃಹಸ್ಥರಾಗಿ ದಾಸರಿಗೆ ಮೊಮ್ಮಕ್ಕಳನ್ನು ನೀಡಿದ್ದಾರೆ. ತಬಲಾ ವಾದನದಲ್ಲಿ ಇಬ್ಬರೂ ನಿಷ್ಣಾತರು. ತಂದೆಯ ಅನೇಕ ಕಥೆಗಳಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ ಅಪಾರ ಶಿಷ್ಯಕೋಟಿಯನ್ನು ಹೊಂದಿದ್ದಾರೆ.

ಗ್ರಂಥ ರಚನೆ ಹಾಗೂ ಧ್ವನಿ ಸುರುಳಿಗಳು: ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಅನೇಕ ಗ್ರಂಥ ರಚನೆ ಮಾಡಿದ್ದಾರೆ. ಮುಖ್ಯವಾಗಿ ಪುರಂದರೋಪನಿಷತ್ತು-೪ ಸಂಪುಟಗಳು, ದಾಸ ರಾಮಾಯಣ; ದಾಸಭಾರತ; ಸದ್ಗುರು ವಚನಾಮೃತ; ದಾಸಹೃದಯ ತರಂಗ ಅಲ್ಲದೆ ಆಂಗ್ಲ ಭಾಷೆಯಲ್ಲಿ Doctrine of Reincarnation,Voice of Bhadragiri, Prema Yoga, Bhakti Yoga, Essence of Bhagavadgita, Gitacharya and Other Dramas, Sadguru Dattatreya, etc. etc.

ಮದರಾಸಿನ ಮಾಸ್ಟರ್ ರೆಕಾರ್ಡಿಗ್‌ ಸಂಸ್ಥೆಯವರು ನೂರಕ್ಕೂ ಮಿಕ್ಕಿ ಕೇಶವದಾಸರ ಕಥಾಪ್ರಸಂಗಗಳ ಧ್ವನಿ ಸುರಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಇವರು ಹಾಡಿರುವ ದೇವರನಾಮಗಳು, ವಚನಗಳು, ಭಕ್ತಿಗೀತೆಗಳು ಅತ್ಯಂತ ಬೇಡಿಕೆಯಲ್ಲಿದ್ದು ಎಲ್ಲ ಮನೆಮಾತಾಗಿದೆ.

ಪ್ರಶಸ್ತಿ ಗೌರವಗಳು: ಪ್ರಶಸ್ತಿ ಗೌರವಗಳನ್ನು ಕೇಶವದಾಸರು ಎಂದೂ ಹುಡುಕಿಕೊಂಡು ಹೋದವರಲ್ಲ. ಅವು ತಾವಾಗಿಯೇ ಅವರ ಮಡಿಲಿಗೆ ಬಂದು ಬಿದ್ದಿವೆ. ಹರಿಕಥಾ ಕಲಾವಿಚಕ್ಷಣ, ಕೀರ್ತನ ಕೇಸರಿ, ಕೀರ್ತನ ನಾಟಕ ವಿಶಾರದ, ಹೀಗೆ ಒಂದೇ ಎರಡೇ ಪಟ್ಟಿ ಮಾಡಲಸಾಧ್ಯವೆನಿಸುವಷ್ಟು ಪ್ರಶಸ್ತಿಗಳು ದೇಶವಿದೇಶಗಳಿಂದ ಲಭಿಸಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶ್ತಿ, ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸರ್ಕಾರ ತನ್ನ ಘನತೆಯನ್ನು ಕಾಪಾಡಿಕೊಂಡು ಬಂದಿತೆಂಧರೆ ಅತಿಶಯೋಕ್ತಿಯೇನಲ್ಲ.

ಶಾಂತಿದೂತ-ಅಸ್ತಂಗತ: ಭಾರತೀಯ ಸಾಂಸ್ಕೃತಿಕ ಪರಂಪರೆಯ ಶಾಂತಿದೂತನಾಗಿ,ವಿಶ್ವಶಾಂತಿಯ  ರಾಯಭಾರಿಯಾಗಿ, ಕೀರ್ತನ ಕಲಾಕ್ಷೇತ್ರದ ಧ್ರುವತಾರೆಯಾಗಿ ಮೆರೆದ ಕೇಶವದಾಸರು ಈಗ್ಗೆ ಕೆಲವು ಸಮಯದಿಂದ ಅಸ್ವಸ್ಥರಾಗಿದ್ದರೂ ಅವರ ಕಾರ್ಯಾಚರಣೆಗೆ ಯಾವ ಭಂಗವೂ ಬಂದಿರಲಿಲ್ಲ. ಯಾವುದೋ ಕಾರ್ಯ ನಿಮಿತ್ತ ವಿಶಾಖಪಟ್ಟಣಕ್ಕೆ ತೆರಳಿದ್ದ ಕೇಶವದಾಸರು ಮತ್ತೆ ಹಿಂದಿರುಗಲಿಲ್ಲ. ತೀವ್ರ ಹೃದಯಾಘಾತದಿಂದ ಅಲ್ಲೇ ಕೊನೆಯುಸಿರೆಳೆದರು.

ಈಶ್ವರನಾಮ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು ಕೀರ್ತನ ಕ್ಷೇತ್ರದ ಧ್ರುವತಾರೆಯ ಅಸ್ತಂಗತವಾಯಿತು. ವಿಶಾಖಪಟ್ಟಣಕ್ಕೆ ತೆರಳಿದ ದಾಸರ ಪಾರ್ಥಿವ ಶರೀರ ಮಾತ್ರ ಬಂದು ವಿಶ್ವಶಾಂತಿ ಆಶ್ರಮದ ಗೀತಾಚಾರ್ಯನಲ್ಲಿ ಲೀನವಾಗಿ ಹೋಯಿತು.

ಕೇಶವದಾಸರು ಅಸ್ತಂಗತರಾದರು, ಆದರೆ ಅವರ ಅಮರವಾಣಿ ಮಾತ್ರ ಎಲ್ಲರ ಹೃದಯದಲ್ಲಿ ಮೊಳಗುತ್ತಿದೆ. ಅದಕ್ಕೆ ಸಾವಿಲ್ಲ!