ಎಣ್ಣೆಗೂ ಹುಳಿಗಂಜಿಗೂ ಕೊಟ್ಟು ಹೋಗುತ್ತಿದ್ದನು. ಹೀಗೆ ಅವನು ಜೀವನ ಸಾಗಿಸುತ್ತಿದ್ದನು. ನಂದಿಮಿತ್ರನು ಒಂದು ದಿವಸ ಸೌದೆಗೆ ಹೋಗಿ, ಸೌದೆಯ ಹೊರೆಯನ್ನು ಹೊತ್ತುಕೊಂಡು ಬರುತ್ತಿದ್ದನು. ಆಗ ದಾರಿಯಲ್ಲಿ ಲಕ್ಷಣ, ಅಂಗ, ಸ್ವರ, ವ್ಯಂಜನ, ಭೌಮ, ಅಂತರಿಕ್ಷ, ಸ್ವಪ್ನ, ಛಿನ್ನ – ಎಂಬ ಎಂಟು ಅಂಗಗಳುಳ್ಳ ಶಕುನ ಶಾಸ್ತ್ರವನ್ನು ಬಲ್ಲವರಾದ ಶಿವಗುಪ್ತಾಚಾರ್ಯರು ಕಾಡಿಗೆ ಹೋಗಿ ಶಾಸ್ತ್ರಸಿದ್ಧಾಂತವನ್ನು ಅನುಕ್ರಮವಾಗಿ ಹೇಳಿ ಆ ದಿನ ಅಲ್ಲಿಯೇ ದೇವರನ್ನು ವಂದಿಸಿ, ಎರಡುವಾರಗಳ ಉಪವಾಸ ಮಾಡಿ, ಆ ಉಪವಾಸ ಮುಗಿಸುವ ಊಟಕ್ಕೆಂದು ಪಟ್ಟಣಕ್ಕೆ ಭಿಕ್ಷೆಗಾಗಿ ಪ್ರವೇಶಿಸುತ್ತಿದ್ದರು. ಅವರನ್ನು ನಂದಿಮಿತ್ರನು ಕಂಡು ಆಶ್ಚರ್ಯಪಟ್ಟು ಹೆಚ್ಚು ಹೊತ್ತು ನೋಡಿ “ ಇವರು ಎಲ್ಲಿಗೆ ಹೋಗುತ್ತಾರೋ ! ” ಎಂದು ಹಿಂದಿನಿಂದಲೇ ಬಂದು ಪಟ್ಟಣದ ಹೊರಗಿನ ಬಸದಿಯ ದರೆಯ ಒಳಗೆ ಸೌದೆಹೊರೆಯನ್ನಿಟ್ಟು ನೋಡಿದನು. ಅವರ ಹಿಂದು ಹಿಂದಿನಿಂದಲೇ ಬಂದನು. ಆ ದಿವಸ ರಾಜನು ಶಿವಗುಪ್ತ ಋಷಿಗಳಿಗೆ ತಾನು ಪಾರಣೆಯ ಊಟ ಕೊಡುವೆನು, ಬೇರೆ ಯಾರೂ ಅವರನ್ನು ನಿಲ್ಲಿಸಕೂಡದೆಂದು ಪಟ್ಟಣದ ಹೊರಗೆಲ್ಲ ಡಂಗುರವನ್ನು ಸಾರಿಸಿದ್ದನು. ಇದರಿಂದ ಹೆದರಿ, ಯಾರೊಬ್ಬರೂ ನಿಲ್ಲಿಸುವವರಿಲ್ಲದೆ, ಋಷಿಗಳು ಚಿಕ್ಕಮನೆ ದೊಡ್ಡ ಮನೆ ಎನ್ನದೆ ಭೋಜನ ಮಾಡಲು ತಕ್ಕುದೆನಿಸಿದ ಮನೆಗಳನ್ನೆಲ್ಲಾ ಭಿಕ್ಷೆಗೆಂದು ಪ್ರವೇಶ ಮಾಡುತ್ತ ಬರುತ್ತಿದ್ದು ಅರಮನೆಯನ್ನು ಪ್ರವೇಶಿಸಿದರು. ಆಗ ರಾಜನು ಕಂಡು ಮಹಾರಾಣಿಯನ್ನು ಕೂಡಿಕೊಂಡ, ಚಿನ್ನದ ಪೂರ್ಣ ಕಳಶ, ಹೂವು, ಅಕ್ಕಿ, ಮಾದಳಹಣ್ಣು – ಮುಂತಾದವುಗಳುಳ್ಳ ಅನೇಕ ವಿಧವಾದ ಅರ್ಚನೆಯ ವಸ್ತುಗಳಿಂದ ಎದುರುಗೊಂಡು ಅವರನ್ನು ನಿಲ್ಲಿಸಿ, ಪ್ರದಕ್ಷಿಣೆ ಬಂದನು. ಮಹಾರಾಣಿ ನೀರು ಹೊಯ್ಯುತ್ತಿರಲು ರಾಜನು ಸ್ವತ: ಋಷಿಗಳ ಕಾಲನ್ನು ತೊಳೆದು. ಆಮೇಲೆ ಒಟ್ಟಿಗೆ ಹೋದಬೋಳುತಲೆಯ ಈ ದೇಶಿಕನನ್ನು (ದೇಶವನ್ನು ಅಲೆದಾಡುವವನ) ಕುರಿತು ರಾಣಿಯು “ಬ್ರಹ್ಮಯ್ಯಾ ನಿಮ್ಮ ಕಾಲು ತೊಳೆಯುವೆನು, ನೀಡಿರಿ” ಎಂದು ಆ ಮಹಾದೇವಿ ಅವನ

ತಾನೆ ಕಾಲಂ ಭಟ್ಟಾರಕರ್ಗೆಱಗಿ ಕುಳ್ಳಿರಿಸಿ ಪಿರಿಯ ಪೊನ್ನ ತಳಿಗೆಯುಮಚ್ಚಮಪ್ಪಡ್ಡವಣಿಗೆಯು ಮನಿಟ್ಟು ಬ್ರಹ್ಮಚಾರಿಗಂ ಪೊನ್ನತಳಿಗೆಯುಮಡ್ಡಣಿಗೆಯುಮನಿಟ್ಟು ಭಟ್ಟಾರಕರ್ಗರಸಮ ತಾನೆ ಬಡ್ಡಿಸಲ್ತಗುಳ್ದ ಬೞಯಂ ರಾಜಾನ್ನದ ಕೂೞುಂ ಪೆಸಱತೊವೆಯುಂ ಬೆಣ್ಣೆಗಾಸಿದಾಮೋದ ಸುಗಂಧ ಪರಿಮಳಂ ನಾರ್ಪ ತುಪ್ಪಮುಂ ಪಲವುಂ ತೆಱದ ಬಾಡುಗಳುಂ ತುಯ್ಯಲುಂ ಪೂರಿಗೆಯಿಡ್ಡಲಿಗೆ ಸೋದಿಗೆ ಲಾವಣಿಗೆ ಘೃತಪ್ರರಂ ಲಡ್ಡುಗೆ ಮಂಡಗೆ ಮೊದಲಾಗೊಡೆಯ ಪದಿನೆಂಟುಂ ತೆಱದ ಭಕ್ಷ್ಯರೂಪಂಗಳುಮಂ ನಾನಾಪ್ರಕಾರದ ಪಾನಂಗಳುಮಂ ಭಟ್ಟಾರರ್ಗೆ ಬಡ್ಡಿಸಿದಂತೆ ಬ್ರಹ್ಮಯ್ಯಂಗೆ ಮಹಾದೇವಿ ಬಡ್ಡಿಸಿದೊಡೆ ದೇಸಿಗಂ ಕಂಡು ಬೆಱಗಾಗಿ ಪುಟ್ಟಿದಂದಿಂ ತೊಟ್ಟಿಂತಪ್ಪುಣಿಸಂ ಕನಸಿನೊಳಪ್ರ್ಪೆಡಂ ಕಂಡಱಯದ ಮಗಂ ಚೋದ್ಯಂಬಟ್ಟೆಂದಪ್ರ್ಪೆಡಂ ತಣಿಯೆಯುಣಲ್ವೆಱದ ದೇಸಿಗಂ ನಾನಾಪ್ರಕಾರದುಣಿಸಂ ಸುಗಂಧಮಪ್ಪ ದಿವ್ಯಾಹಾರಮನಾಕಂಠಪ್ರಮಾಣಂ ಬರೆಗಂ ತಣಿಯುಂಡು ಬೞಕ್ಕೆ ಕರ್ಪೂರಸಮ್ಮಿಶ್ರಮಪ್ಪ ನೆಲಬತ್ತಿಯಡಕೆಯ ಪೋೞ್ಗಳುಮಂ ಕೈತೀವಿದೆಲೆಯುಮಂ ಬ್ರಹ್ಮಯ್ಯಂಗೆ ಕೊಟ್ಟುಭಟಾರರ್ ಚರಿಗೆ ಮಾಡಿದ ಬೞಕ್ಕಸರನುಮಂ ಮಹಾದೇವಿಯುಮಂ ಕರ್ಮಕ್ಷಯ ಮುಮಕ್ಷಯದಾನಮುಮಕ್ಕೆಂದು ಪರಸಿ ಪೊಱಮಟ್ಟು ಬಸದಿಗೆ ಪೋಪಾಗಳ್ ಭಟ್ಟಾರರ ಬೞವೞಯನೆ

ಕಾಲನ್ನು ತೊಳೆದಳು. ಋಷಿಗಳಿಗೆ ವಂದಿಸಿ ಕುಳ್ಳಿರಿಸಿದಳು. ದೊಡ್ಡದಾದ ಹೊಂದಟ್ಟೆಯನ್ನೂ ಎತ್ತರದ ಅಡ್ಡಣಿಗೆ (ತಟ್ಟೆಯಿಡಲು ಮೂರುಕಾಲಿನ ಮಣೆ)ಯನ್ನೂ ಇಟ್ಟಳು. ಬ್ರಹ್ಮಚಾರಿಗೂ ಚಿನ್ನದ ತಟ್ಟೆ ಅಡ್ಡಣಿಗೆಗಳನ್ನಿಟ್ಟಳು. ಋಷಿಗಳಿಗೆ ರಾಜನು ಸ್ವತ: ಉಣಬಡಿಸಲು ಪ್ರಾರಂಭಿಸಿದ ನಂತರ ಮಹಾರಾಣಿ ಬಡಿಸತೊಡಗಿದಲು. ರಾಜಾನ್ನ ಎಂಬ ಅಕ್ಕಿಯ ಅನ್ನ, ಹೆಸರುಬೇಳೆಯ ತೊವ್ವೆ, ಬೆಣ್ಣೆಯನ್ನು ಕಾಸಿ ಬಹಳ ವಿಶೇಷವಾಗಿ ಮಗಮಗಿಸುತ್ತಿರುವ ತುಪ್ಪ, ಹಲವು ರೀತಿಯ ಕಾಯಿಪಲ್ಲೆಗಳು, ಪಾಯಸ, ಪೂರಿ, ಇಡ್ಡಲಿ, ಗೋರವೆಯ ಭಕ್ಷ್ಯ, ಉಪ್ಪಿನಕಾಯಿ, ತುಪ್ಪದ ಪೂರಿ, ಲಾಡು, ಮಂಡಿಗೆ – ಮುಂತಾಗಿ ಇರತಕ್ಕ ಹದಿನೆಂಟು ರೀತಿಯ ಭಕ್ಷ್ಯ ರೂಪಗಳನ್ನೂ ಹಲವಾರು ರೀತಿಯ ಪಾನೀಯಗಳನ್ನೂ ಮಹಾದೇವಿಯು ಋಷಿಗಳಿಗೆ ಬಡಿಸಿದಂತೆ ಬ್ರಹ್ಮಚಾರಿಗೂ ಬಡಿಸಿದಳು. ದೇಸಿಗನಾದ ನಂದಿಮಿತ್ರನು ಕಂಡು ಬೆರಗಾದನು. ಹುಟ್ಟಿದಂದಿನಿಂದ ಇಂಥದೊಂದು ಊಟವನ್ನು ಕನಸಿನಲ್ಲಿಯೂ ಕಂಡರಿಯದ ಮಗನೂ ಎಂದಿಗೂ ತೃಪ್ತಿಯಾಗುವಷ್ಟು ಊಟ ಮಾಡುವ ಯೋಗ್ಯತೆಯನ್ನೇ ಪಡೆಯದ ದೇಸಿಗನೂ ಆದ ನಂದಿಮಿತ್ರನು ಹಲವಾರು ವಿಧದ ಉಣಿಸನ್ನು – ಸುವಾಸನೆಯಿಂದ ಕೂಡಿದ ದಿವ್ಯವಾದ ಆಹಾರವನ್ನು ಕುತ್ತಿಗೆಯವರೆಗೂ ಪೂರ್ಣ ತೃಪ್ತಿಯಾಗುವತನಕವೂ ಉಂಡನು. ಆಮೇಲೆ ಕರ್ಪುರದಿಂದ ಸರಿಯಾಗಿ ಬೆರಕೆಯಾದ ನೆಲವತ್ತಿಯ ಅಡಕೆಯ ಹೋಳುಗಳನ್ನೂ ಕೈತುಂಬ ವೀಳೆಯವನ್ನೂ ಬ್ರಹ್ಮಚಾರಿಗೆ ಕೊಟ್ಟರು ಶಿವಗುಪ್ತಾಚಾರ್ಯರು ಭಿಕ್ಷೆ ಸ್ವೀಕರಿಸಿ(ಊಟ ಮಾಡಿ) ಆದ ನಂತರ ಅರಸನನ್ನೂ ಮಹಾರಾಣಿಯನ್ನೂ “ ನಿಮ್ಮ ಕರ್ಮವು ಅಳಿಯಲಿ! ಚಾನವು ಅಕ್ಷಯವಾಗಲಿ!” ಎಂದು ಆಶೀರ್ವದಿಸಿ ಹೊರಟು ಬಸದಿಗೆ ಹೋಗುವಾಗ ಅವರ ಹಿಂದಿನಿಂದಲೇ ಅವನೂ ಹೋದನು. ಋಷಿಗಳು ಬಸದಿಗೆ ಪ್ರದಕ್ಷಿಣೆ ಮಾಡಿ, ಕಾಲು ತೊಳೆದು ಒಳಹೊಕ್ಕು ಈರ್ಯಾಪತ್ತಿಯನ್ನು ಬಿಡಿಸಿ (ಹಿಂದೆಯಾಗದಂತೆ ಸೂಕ್ಷ್ಮಜೀವಿಗಳನ್ನು ಪರಿಹರಿಸಿಕೊಂಡು), ಸಾಧುವಿನ ಭಿಕ್ಷಾಕ್ರಮದಂತೆ ಗೋಚಾರ

ಪೋದಮ ಭಟ್ಟಾರರ್ ಬಸದಿಯಂ ಬಲಗೊಂಡು ಕಾಲಂ ಕರ್ಚಿಯೊಳಗಂ ಪೊಕ್ಕೀರ್ಯಾಪತ್ತಿಯಂ ಬಿಡಿಸಿ ಗೋಚಾರ ನಿಯಮಂಗೆಯ್ದುದಂ ನಂದಿಮಿತ್ರಂ ನೋಡುತ್ತಿರ್ದ್ದಿಂತೆಂದು ಮನದೊಳ್ ಬಗೆದಪ್ಪನಿಂತಪ್ಪ ರೂಪುಮಂ ಕೈಕೊಂಡೊಡೆ ಲೋಕದೊಳ್ ಗೌರವಮುಂ ಪೂಜೆಯುಮಂ ಪೆಱಲಕ್ಕುಮೊಂದುಂ ಕ್ಲೇಶಮಿಲ್ಲದೆ ದಿವ್ಯಾಹಾರಮನೆಲ್ಲಾ ಕಾಲಮುಣಲ್ಪೆಱಲಕ್ಕುಮೆಂದು ಬಗೆದು ಭಟಾರರ್ ನಿಮಯಮಂಗೆಯ್ದು ಸಮೆದಿರ್ದ ಬೞಕ್ಕೆ ಬಂದು ಮುಂದೆ ನಿಂದುಕೈಗಳಂ ಮುಗಿದಿಂತೆಂದನ್ ಭಟಾರಾ ಎನ್ನಂ ನಿಮ್ಮಂತೆ ಮಾಡಿಮೆಂದೊಳ್ ಭಟಾರರಾತನಂ ನೋಡಿಯಲ್ಪಾಯುಷ್ಯನುಮಾಸನ್ನ ಭವ್ಯನಪ್ಪುದನಱದೊಳ್ಳಿತಪ್ಪ ಮೂಹರ್ತದೊಳ್ ತಪಂಬಡಿಸಿದೊಡಾತನುಂ ತಪಂಬಟ್ಟು ದೀಕ್ಷೋಪವಾಸಂ ಗೆಯ್ದಿರ್ದನ್ ಅನ್ನೆಗಮರಸನುಮರಸಿಯುಂ ಭಟ್ಟಾರರೊಡವಂದ ಬ್ರಹ್ಮಚಾರಿ ತಪಂಬಟ್ಟನೆಂಬುದಂ ಕೆಳ್ದೊಸೆದು ಮುನ್ನೆಮ್ಮ ಮನೆಯೊಳುಂಡು ತಪಂಬಟ್ಟಿನಿಂ ನಾಳೆ ನಮ್ಮ ಮನೆಯೊಳ್ ಪಾನಿಗಟ್ಟುವಮೆಂದು ಬಗೆದಿರ್ದು ಮಱುದಿವಸಂ ಸಾಮಂತ ಮಹಾಸಾಮಂತರ್ಕಳುಂ ರಾಜ್ಯಚಿಹ್ನಂಗಳುಂ ಬೆರಸು ಮಹಾವಿಭೂತಿಯಿಂದರಸಂ ಪೊೞ್ತಡಿನ ಬೇಗಂ ಬಸದಿಗೆ ವಂದು ವಾಹನದಿಂದಿೞದು ಬಲಗೊಂಡು ಬಂದು ಗಂಧಪುಷ್ಪ ದೀಪ ಧೂಪಾಕ್ಷತೆಗಳಿಂ ದೇವರನರ್ಚಿಸಿ ಕ್ರಿಯಾಪೂರ್ವಕಂ ವಂದಿಸಿ ಭಟ್ಟಾರರ್ಗೆ ಗುರುಭಕ್ತಿಗೆಯ್ದು ಪಂಚಮುಷ್ಠಿಯಿಂ ವಂದಿಸಿಯಂತೆ ಕಿತ್ತಯ್ಯಂಗಳುಮನಾ ಮಾರ್ಗದಿಂ ವಂದಿಸಿ ಭಟಾರರಲ್ಲಿಗೆ ವಂದು ಕುಳ್ಳಿರ್ದು ಧರ್ಮಮಂ ಕೇಳ್ದ

ನಿಯಮವನ್ನು ಮಾಡಿದರು. ನಂದಿಮಿತ್ರನು ಇದನ್ನು ನೋಡುತ್ತಿದ್ದು ಮನಸ್ಸಿನಲ್ಲಿ ಹೀಗೆ ಭಾವಿಸಿದನು. – “ಈ ರೀತಿಯ ರೂಪವನ್ನು ತಾಳಿದರೆ ಲೋಕದಲ್ಲಿ ಗೌರವನ್ನೂ ಪೂಜೆಯನ್ನೂ ಪಡೆಯಬಹುದು. ಎನೊಂದೂ ಕಷ್ಟವಿಲ್ಲದೆ ದಿವ್ಯವಾದ ಆಹಾರವನ್ನು ಎಲ್ಲ ಕಾಲದಲ್ಲಿಯೂ ಉಣ್ಣಲು ಪಡೆಯಬಹುದು. ” ಹೀಗೆ ಯೋಚಿಸಿ, ಋಷಿಗಳು ತಮ್ಮ ನಿಯಮಗಳನ್ನು ಮಾಡಿ ಮುಗಿಸಿದ ನಂತರ ಅವರ ಹತ್ತಿರಕ್ಕೆ ಬಂದು ಮುಂದೆ ನಿಂತು ಕೈಗಳನ್ನು ಮುಗಿದು ಅವರೊಡನೆ “ಪೂಜ್ಯರೇ ನನ್ನನ್ನು ನಿಮ್ಮ ಹಾಗೆಯೇ ಮಾಡಿ” ಎಂದನು. ಭಟಾರರು ಅವನನ್ನು ನೋಡಿ, ಅವನು ಸ್ವಲ್ಪ ಮಾತ್ರ ಆಯುಷ್ಯವುಳ್ಳವನೂ ಮೋಕ್ಷಕ್ಕೆ ಹೋಗುವ ಪುಣ್ಯಜೀವಿಯೂ ಆದುದರಿಂದ ಸುಮುಹೂರ್ತದಲ್ಲಿ ತಪಸ್ಸಿಗೆ ಉಪದೇಶಕೊಟ್ಟರು. ನಂದಿಮಿತ್ರನು ತಪಸ್ಸನ್ನು ಸ್ವೀಕರಿಸಿ ದೀಕ್ಷೆ – ಉಪವಾಸಗಳನ್ನು ಆಚರಿಸುತ್ತಿದ್ದನು. ಆ ವೇಳೆಗೆ ರಾಜನೂ ರಾಣಿಯೂ ಶಿವಗುಪ್ತ ಋಷಿಗಳೊಂದಿಗೆ ಬಂದ ಬ್ರಹ್ಮಚಾರಿ ತಪಸ್ಸನ್ನು ಆಚರಿಸಿದ್ದಾನೆ – ಎಂಬುದನ್ನು ಕೇಳಿ ಪ್ರೀತಿಪಟ್ಟು, ಹಿಂದೆ ನಮ್ಮ ಮನೆಯಲ್ಲಿ ಊಟಮಾಡಿ ತಪಸ್ಸು ಮಾಡಿದವನನ್ನು ನಾಳೆ ನಮ್ಮ ಮನೆಗೆ ಕರೆದು ಪಾದತೊಳೆದು ಊಟಹಾಕೋಣ ಎಂದು ಬಗೆದರು. ಮರುದಿನ ರಾಜನು ಹೊತ್ತಾರೆಯ ಸಮಯದಲ್ಲಿ ಸಾಮಂತರು, ಮಹಾಸಾಮಂತರು, ರಾಜ್ಯ ಚಿಹ್ನೆಗಳು – ಇವನ್ನು ಕೂಡಿಕೊಂಡು ಬಹಳ ವೈಭವದಿಂದ ಬಸದಿಗೆ ಬಂದನು. ವಾಹನದಿಂದ ಕೆಳಗಿಳಿದು ಪ್ರದಕ್ಷಿಣೆ ಮಾಡಿ ಬಂದು ಗಂಧ, ಪುಷ್ಪ, ದೀಪ, ಧೂಪ, ಅಕ್ಷತೆಗಳಿಂದ ಜಿನದೇವರನ್ನು ಪೂಜಿಸಿ, ಕ್ರಿಯೆಗಳನ್ನು ಮಾಡಿ ನಮಸ್ಕರಿಸಿದರು. ಶಿವಗುಪ್ತಾಚಾರ್ಯರಿಗೆ ಗುರುಭಕ್ತಿಯನ್ನು ಸಲ್ಲಿಸಿ ಕೈಮುಗಿದು, ಹಾಗೆಯೇ ಚಿಕ್ಕಸ್ವಾಮಿಗಳನ್ನು (ನಂದಿಮಿತ್ರನನ್ನು) ಅದೇ ರೀತಿಯಾಗಿ ನಮಸ್ಕರಿಸಿದನು. ಆಮೇಲೆ ಋಷಿಗಳ ಬಳಿಗೆ ಬಂದು ಕುಳಿತು ಧರ್ಮೋಪದೇಶವನ್ನು

ತದನಂತರ ಮೆರ್ದು ಭಟಾರಾ ಬಿನ್ನಪಂ ಕಿತ್ತಯ್ಯಂಗಳನಿಂದೆಮಗೆ ಕಾರುಣ್ಯಂಗೆಯ್ವುದಾವು ನಿಱಸಿ ಪಾನಿUಟ್ಟಿ ಪುಣ್ಯಮಂ ನೆರಪಿಕೊಳ್ವಮೆಂದೊಡಂತೆಗೆಯ್ಯಿಮೆಂದಾನ್ಮಡಿಯಂ ಕಿತ್ತಯ್ಯಂಗಳ್ ಕೇಳ್ದು ಸಾಮಂತ ಮಹಾಸಾಮಂತರ್ಗೆ ಸ್ವಾಮಿಯಪ್ಪೀ ಪೃಥ್ವೀಶ್ವರಂ ಬಂದೆನ್ನುಮನರ್ಚಿಸಿ ಬಂದಿಸಿ ನೀಚವೃತ್ತಿಯಿಂ ಕಿಂಕುರ್ವಾಣಂಗೆಯ್ದಪ್ಪನಹೋ ಆಶ್ಚರ್ಯಮೀ ತಪದ ಧರ್ಮದ ಫಲಮಿಲ್ಲಿಯೆ ಪ್ರತ್ಯಕ್ಷಮಾಯ್ತಿನ್ನುಂ ಮುಂದೆ ಪಿರಿದಾಗದೆ ಮಾಣದೆಂದು ತನ್ನೊಳೆ ತಱಸಚಿದು ಮತ್ತಮಾ ದಿವಸಮುಪವಾಸಮಂ ಕೈಕೊಂಡರ್ ಇತ್ತಲ್ ಜಯವರ್ಮ ಮಹಾರಾಜಂ ಭಟಾರರುಮಂ ಕಿತ್ತಯ್ಯಂಗಳುಮಂ ಬಂದಿಸಿದುದಂ ಭಟಾರರಱದೆ ಕಿತ್ತಯ್ಯಂಗಳ್ಗೆ ಏಷಣಾಸಮಿತಿ ಮೊದಲಾಗೊಡೆಯ ಬ್ರತಂಗಳಂ ಮತ್ತಂ ಸಂಕ್ಷೇಪದಿಂ ಪೇೞ್ದು ಕಿತ್ತಯ್ಯಂಗಳಿರಾ ನಿಮಗೆ ಶ್ರಮಮಾದಪ್ಪುದು ದೇವರಂ ಬಂದಿಸಿ ಚರಿಗೆಗೆ ಪೊಱಮಡುವುದೆನೆ ಮತ್ತಂ ತಾವು ಕೊಂಡುಪವಸಮಂ ಗುರುಗಳ್ಗೆ ಪ್ರಕಟಿಸಿದನರಸಂ ಜಯವರ್ಮ ಮಹಾರಾಜಂ ಕೇಳ್ದು ಬಿನ್ನನೆ ಮೊಗಂ ಮಾಡಿ ಭಟಾರರುಮಂ ಕಿತ್ತಯ್ಯಂಗಳುಮಂ ಬಂದಿಸಿ ತನ್ನರಮನೆಗೆ ವೋಗಿ ಮಹಾದೇವಿಗೆಂದನಿಂದೆನಗೆ ರಿಸಿಯರಂವಿಱಸಿ ಪುಣ್ಯಂಗೊಳ್ವ ಭಾಗ್ಯಮಿಲ್ಲೆಂದೊಡೆ ಮಹಾದೇವಿಯಂತಪ್ಪೊಡೆ ನಾಳೆಯಾಂ ನಿಱಮಂ ಪುಣ್ಯಮಂ ಕೈಕೊಳ್ವೆನೆಂದೊಡರಸನೆಂದೊಂ ನಿನಗಮೆನಗಂ ಸಮಭಾಗಂ ಪುಣ್ಯಮೆಂದುಸಿರಿ ನೀಮೇಕೆನಗಿಂದು ಸಮಭಾಗಮೀಯಾದಾದರೀ ಪುಣ್ಯಮನಾನಿಂದುನಿಱಸಿ

ಕೇಳಿದನಂತರ ಎದ್ದು – ಪೂಜ್ಯರೇ, ನನ್ನ ವಿಜ್ಞಾಪನಗಳು. ಚಿಕ್ಕಸ್ವಾಮಿಗಳನ್ನು ನಮಗೆ ಇಂದು ಕರುಣಿಸಬೇಕು. ನಾವು ಅವರನ್ನು ನಿಲ್ಲಿಸಿ ಕಾಲುತೊಳೆದು ಊಟ ಹಾಕಿ ಪುಣ್ಯವನ್ನು ಕೊಡಿಸುವೆವು” ಎಂದಾಗ, ‘ಹಾಗೆಯೇ ಮಾಡಿ’ಎಂದರು. ಆ ಮಾತನ್ನು ಚಿಕ್ಕಸ್ವಾಮಿಗಳು ಕೇಳಿ – “ಸಾಮಂತರಿಗೂ ಮಹಾಸಾಮಂತರಿಗೂ ಒಡೆಯನಾಗಿರುವ ಈ ಭೂಪನು ಬಂದು ನನ್ನನು ಕೂಡ ಪೂಜಿಸಿ ವಂದಿಸಿರುತ್ತಾನೆ. ಕೀಳುವೃತ್ತಿಯಿಂದ ಸೇವೆಯನ್ನು ಮಾಡುತ್ತಾನೆ. ! ಆಹಾ, ಆಶ್ಚರ್ಯವೆ ! ಈ ತಪೋಧರ್ಮದ ಫಲ ಇಲ್ಲಿಯೇ ಕಾಣುವಂತಾಯಿತು. ಇನ್ನೂ ಮುಂದೆ ಹೋದರೆ ಇದಕ್ಕಿಂತ ಹಿರಿದಾದ ಫಲ ಆಗದೆ ಇರದು” ಎಂದು ತನ್ನಲ್ಲಿಯೇ ನಿಶ್ಚಯ ಮಾಡಿಕೊಂಡು, ಆಮೇಲೆ ಆ ದಿವಸ ಉಪವಾಸವನ್ನು ಕೈಗೊಂಡರು. ಇತ್ತ ಜಯವರ್ಮ ಮಹಾರಾಜನು ಭಟಾರರನ್ನೂ ಚಿಕ್ಕಸ್ವಾಮಿಗಳನ್ನೂ ವಂದಿಸಿದ್ದನ್ನು ಭಟಾರರು ತಿಳಿದೇ ಚಿಕ್ಕಸ್ವಾಮಿಗಳಿಗೆ ಏಷಣಾ ಸಮಿತಿ ಮುಂತಾಗಿರತಕ್ಕ ವ್ರತಗಳನ್ನು ಅಮೇಲೆ ಸಂಕ್ಷೇಪದಿಂದ ತಿಳಿಸಿದನು. “ಚಿಕ್ಕಸ್ವಾಮಿಗಳೇ ನಿಮಗೆ ಶ್ರಮವಾಗುತ್ತದೆ, ದೇವರನ್ನು ವಂದಿಸಿ ಭಿಕ್ಷಾಟನೆಗೆ ಹೊರಡಿರಿ ” ಎಂದರು. ಆಗ ತಾನು ಸ್ವೀಕರಿಸಿರುವ ಉಪವಾಸದ ಸಂಗತಿಯನ್ನು ಗುರುಗಳಿಗೆ ತಿಳಿಸಿದನು. ಜಯವರ್ಮ ಮಹಾರಾಜನು ಕೇಳಿ, ಮೌನಮುಖಮುದ್ರೆಯನ್ನು ತಾಳಿ ಋಷಿಗಳನ್ನೂ ಚಿಕ್ಕಸ್ವಾಮಿಗಳನ್ನೂ ವಂದಿಸಿ ತನ್ನ ಅರಮನೆಗೆ ತೆರಳಿದನು. ಅರಸನು ರಾಣಿಯೊಡನೆ – “ ಇಂದು ನನಗೆ ಋಷಿಗಳನ್ನು ನಿಲ್ಲಿಸಿ ಪುಣ್ಯವನ್ನು ಪಡೆಯುವ ಯೋಗ್ಯತೆಯಿಲ್ಲ” ಎಂದು ಹೇಳಿದನು. ಆಗ ಮಹಾರಾಣಿ – “ಹಾಗಾದರೆ ನಾಳೆ ನಾನು ಅವರನ್ನು ಕರೆದು ನಿಲ್ಲಿಸಿ ಪುಣ್ಯವನ್ನು ಪಡೆಯುವೆನು” ಎಂದಳು. ಅದಕ್ಕೆ ರಾಜನು – “ನಿನಗೂ ನನಗೂ ಪುಣ್ಯವು ಸಮಪಾಲು” ಎಂದು ಹೇಳಲು ಆಕೆ ಹೀಗೆಂದಳು – “ನೀವು ಇಂದು ನನಗೆ ಯಾಕೆ ಸರಿಪಾಲನ್ನು ಕೊಡಲಿಲ್ಲ. ? ಈ ಪುಣ್ಯವನ್ನು ನಾನು ಮರಿಸ್ವಾಮಿಗಳನ್ನು ಮನೆಗೆ ಕರೆದು ನಿಲ್ಲಿಸಿ

ಕೈಕೊಳ್ವೆಂ ನೀಂ ನಾಳೆ ನಿಱಸೆಂದು ನುಡಿದು ಬಸದಿಗೆ ಪೋಗಿರೆನ್ನ ಭಾಗ್ಯಮೇಂ ಕಿಡಿಸುಗುಮೆ ನಾಳೆಯುಂ ನಿಱಸಿಯಾವಗಂ ಪುಣ್ಯಮಂ ಕೈಕೊಳ್ವೆನೆಂದರಸಂಗೆ ಮಱುಮಾತುಗೊಟ್ಟು ಮಱುದಿವಸಂ ಧಾರಣೆ ಮಹಾದೇವಿಯಯನ್ನೂರ್ವರರಸಿಯರ್ಕಳುಂ ಪೆಂಡವಾಸದಗ್ಗಳದ ಸೂಳೆಯರ್ಕಳುಂಬೆರಸು ವೇಸರಿಗೞ್ತೆಗಳುಂ ಪಿಡಿಗಳುಂ ಸಿಬಿಗೆಗಳುಮನೇಱ ಸೀಗುರಿಗಳುಮಂ ಕೊಡೆಗಳುಮಂ ಪಿಡಿಯಿಸಿ ಎಕ್ಕಮದ್ದಳೆಯ ಕೊೞಲ ಝಂಕಾರದ ಪಱೆಗಳ್ ಮುಂದೆ ಬಾಜಿಸುತ್ತಂ ಬೞಯಂ ಕಾಪಿವನರ್ವರೆ ಮುಂದಣ ಮಾನಸರಂ ಪಡಿಯಱರ್ ತೊಲಗಿಸುತ್ತಂ ಬರೆ ವಿದ್ಯಾಧರಿಯರ್ಕಳ್ ಬರ್ಪತೆ ಬಂದು ಬಾಗಿಲ್ಮಾಡದ ಪೊಱUಣ ದೆಸೆಒಳ್ ತಂತಮ್ಮ ವಾಹನಂಗಳಿಂದಿೞದು ಪೊಕ್ಕು ಬಸದಿಯಂ ಬಲಗೊಂಡು ಬಂದೊಳಗಂ ಪೊಕ್ಕು ದರ್ಶನವಂದನೆಗಳುಮಂ ಪೇೞರ್ಯಾಪತ್ತಿಯಂ ಬಿಡಿಸಿ ಗಂಧ ಪುಷ್ಪ ದೀಪ ಧೂಪಾಕ್ಷತಂಗಳಿಂ ದೇವರನರ್ಚಿಸಿ ಕ್ರಿಯಾಪೂರ್ವಕಂ ದೇವರಂ ಬಂದಿಸಿ ಶಿವಗುಪ್ತ ಭಟ್ಟಾರರುಮನರ್ಚಿಸಿ ಗುರುಭಕ್ತಿಗೆಯ್ದು ಬಂದಿಸಿ ಶ್ರಾವಕಬ್ರತಂಗಳನೇಱಸಿಕೊಂಡು ಬೞಕಿಂತೆಂದಳ್ ಭಟ್ಟಾರಾ ಇಂದೆಮ್ಮಲ್ಲಿಗೆ ನೀಮುಂ ಕಿತ್ತಯ್ಯಂಗಳನೊಡಗೊಂಡು ಬಂದು ಪಕ್ಕದಿರ್ದು ಪಾನಿಗಟ್ಟಿ ಮಾರ್ಗಮಂ ತೋಱ ಮಗುೞ ಬಿಜಯಂಗೆಯ್ಯಿಮೆನೆ ಕಿತ್ತಯ್ಯಂಗಳಂ ನೀಮೆ ಬೆಸಗೊಳ್ಳಿಮವರೊಡಂಬಟ್ಟೊಡಾಮೊಡಗೊಂಡು ಬರ್ಪೆಮೆಂದೊಡೆ ಧಾರಿಣಿ ಮಹಾದೇವಿ

ಪಡೆಯುತ್ತೇನೆ. ನೀನು ನಾಳೆ ನಿಲ್ಲಿಸು ಎಂದು ಹೇಳಿ ಬಸದಿಗೆ ಹೋದರಿ. ಇದರಿಂದ ನನ್ನ ಭಾಗ್ಯ ಕೆಟ್ಟುಹೋಗುವುದೇ ? ನಾಳೆ ನಾನೇ ಅವರನ್ನು ನಿಲ್ಲಿಸಿ ಪುಣ್ಯವನ್ನು ಪಡೆಯುವೆನು” ಹೀಗೆ ರಾಣಿ ಪ್ರತ್ಯುತ್ತರಕೊಟ್ಟು ಮಾರನೆಯ ದಿನ ಧಾರಿಣಿ ಮಹಾದೇವಿ ಚಿಕ್ಕಸ್ವಾಮಿಗಳನ್ನು ಕರೆಯಲು ಹೊರಟಳು. ಐನೂರು ಮಂದಿ ಅರಸಿಯರೂ ರಾಣೀವಾಸದಲ್ಲಿದ್ದ ಶ್ರೇಷ್ಠರಾದ ದಾಸಿಯರೂ ಅವಳ ಒಡನಿದ್ದರು. ಅವರು ಹೇಸರಕತ್ತೆಗಳನ್ನೂ ಹೆಣ್ಣಾನೆಗಳನ್ನೂ ಪಲ್ಲಕ್ಕಿಗಳನ್ನೂ ಏರಿದ್ದರು. ಚಾಮರಗಳನ್ನೂ ಛತ್ರಗಳನ್ನೂ ಹಿಡಿಸಿದೊಂಡು, ಮುಂಗಡಯಲ್ಲಿ ಎಕ್ಕಮದ್ದಳೆ ಕೊಳಲು ಝಂಕಾರವನ್ನು ಕೊಡುವ ಚರ್ಯವಾದ್ಯಗಳನ್ನು ಬಾರಿಸುತ್ತಿರುಲು ಹಿಂದಿನಿಂದ ಅಂಗರಕ್ಷಕರು ಬರುತ್ತಿರಲು, ಮುಂದುಗಡೆ ಅಡ್ಡವಾಗಿ ಬರುತ್ತಿದ್ದವರನ್ನು ಪ್ರತೀಹಾರರು ತೊಲಗಿಸುತ್ತ ಬರಲು ವಿದ್ಯಾಧರಿಯರು ಬರುವ ರೀತಿಯಲ್ಲಿ ಅವರೆಲ್ಲರೂ ಬಂದರು. ಪಟ್ಟಣದ ಗೋಪುರದ ಹೊರಗಡೆಯಲ್ಲಿ ಅವರು ತಮ್ಮತಮ್ಮ ವಾಹನಗಳಿಂದ ಇಳಿದು ಹೊಕ್ಕರು. ಬಸದಿಗೆ ಪ್ರದಕ್ಷಿಣೆ ಮಾಡಿ ಬಂದು ಒಳಗೆ ಹೋಗಿ ದರ್ಶನ ವಂದನೆಗಳನ್ನು ಹೇಳಿ ದಾರಿಯನ್ನು ಸೂಕ್ಷ್ಮಜಂತುಗಳಿಲ್ಲದಂತೆ ಗುಡಿಸಿ ಗಂಧ ಪುಷ್ಷ ದೀಪ ಧೂಪ ಅಕ್ಷೆತೆಗಳಿಂದ ಜಿನದೇವರನ್ನು ಪೂಜಿಸಿ ಕ್ರಿಯೆಗಳ ಮೂಲಕ ದೇವರಿಗೆ ವಂದಿಸಿದರು. ಶಿವಗುಪ್ತಾಚಾರ್ಯರನ್ನೂ ಪೂಜಿಸಿ ಗುರುಭಕ್ತಿಯನ್ನು ತೋರಿಸಿ ನಮಸ್ಕರಿಸಿ ಶ್ರಾವಕ ವ್ರತಗಳನ್ನು ಸ್ವೀಕರಿಸಿಕೊಂಡು ಮಹಾರಾಣಿ ಅವರೊಡನೆ – “ಪೂಜ್ಯರೇ, ಈ ದಿವಸ ನೀವು ಚಿಕ್ಕಸ್ವಾಮಿಗಳೊಂದಿಗೆ ನಮ್ಮಲ್ಲಿಗೆ ಬಂದು ಒಟ್ಟಿಗೆ ಇದ್ದು ನಮ್ಮ ಉಪಚಾರವನ್ನು ಸ್ವೀಕರಿಸಿ ಮಾರ್ಗದರ್ಶನವನ್ನು ಮಾಡಿ ಆಮೇಲೆ ಹಿಂದೆರಳಬಹುದು” ಎಂದು ಹೇಳಿದಳು. ಅದಕ್ಕೆ ಅವರು “ಚಿಕ್ಕಸ್ವಾಮಿಗಳನ್ನು ನೀವೇ ಕೇಳಿಕೊಳ್ಳಿ. ಅವರು ಒಪ್ಪಿದರೆ ನಾವು ಕೂಡಿಕೊಂಡು ಬರುವೆವು” ಎಂದರು ಧಾರಿಣಿದೇವಿ ಚಿಕ್ಕಸ್ವಾಮಿಗಳ ಬಳಿಗೆ ಹೋದಳು. ಅವರನ್ನು ಪಾದಮುಟ್ಟಿ ವಂದಿಸಿದಳು.

ಕಿತ್ತಯ್ಯಂಗಳಲ್ಲಿಗೆ ಪೋಗಿ ಕಾಲಂಪಿಡಿದು ವಂದಿಸಿ ಇಂತೆಂದಳ್ ಕಿತ್ತಯ್ಯಾ ನಿಮಗಿಂದು ನಾಮ್ ಪಾನಿಗಟ್ಟುವೆಮೆಮ್ಮ ಮನೆಗೆೞ್ತರಮೇೞ್ಪುದೆಂದು ಕಾಲಂ ಪಿಡಿದು ಪೊಡೆವಟ್ಟಿರ್ದಾಗಳರಸಿಯ ಮೊಗಮಂ ನೋಡಿ ನೆಱೆಯತೊಟ್ಟುಟ್ಟು ಪಸದನಂಗೊಂಡಿರ್ದ ದೇವಗಣಿಕೆಯರನೆ ಪೋಲ್ವಯ್ನೂರ್ವರರಸಿಯರ್ಕಳಿಂದಂ ಸೂಲೆಯರ್ಕಳಿಂವಂ ಪರಿವೇಷ್ಟಿತೆಯಾಗಿರ್ದ ಶಚೀ ಮಹಾದೇವಿಯನೆ ಪೋಲ್ವ ಧಾರಿಣಿ ಮಹಾದೇವಿಯೆನ್ನ ಕಾಲ್ಗೆಱಗಿ ಪೊಡೆವಟ್ಟಿರ್ದಳಿದೆಲ್ಲಮೀ ತಪದ ಫಲಮಿನ್ನುಂ ಮುಂದೆ ಪಿರಿದುಂಟೆಂದು ಬಗೆದರಸಿಗೆಂದರಬ್ಬಾ ಇಚಿದೆಮಗುಣಲ್ಕೆ ಬಗೆಯಿಲ್ಲುಪವಾಸಂ ಗೆಯ್ದಪ್ಪೆಮೆಂದು ಪರಿಚ್ಛೇದಿಸಿ ನುಡಿದೊಡೆ ಬಿನ್ನನೆ ಮೊಗಂ ಮಾಡಿ ಭಟಾರರಂ ವಂದಿಸಿ ಪೋಗಿಯರಸಂಗೆ ಕಿತ್ತಯ್ಯಗಳಿಂದುಪವಾಸಂಗೆಯ್ದೊರೆಂದು ಪೇೞ್ದಾಗಳ್ ಮತ್ತಿರುಳಿನ ಕರಣವೇಳೆಯೊಳ್ ವಜ್ರಸೇನನೆಂಬ ಮಂತ್ರಿಯರಸಂಗಿಂತೆಂದು ಬಿನ್ನಪಂ ಗೆಯ್ದಂ ದೇವಾ ನಾಳೆಯಾಂ ನಿಱಸಿ ಕಿತ್ತಯಂಗಳ್ಗೆ ಪಾರಣೆಯಮ ಮಾಡುವೆನೆನೆ ಅಂತೆಗೆಯ್ಯೆಂದೊಡೆ ಮಱುದಿವಸಂ ಬಸದಿಗೆ ವಂದು ಭಟ್ಟಾರಾ ಕತ್ತಯ್ಯಂಗಳ ನಮ್ಮಲ್ಲಿಗೊಡಗೊಂಡು ಬಂದು ಚರಿಗೆದೋಱ ನೀಮುಂ ಬಿಜಯಂಗೆ ಯ್ಯಿಮೆನೆ ಕಿತ್ತಯ್ಯಂಗಳೊಡಂಬಟ್ಟೊಡೊಡಗೊಂಡು ಬರ್ಪೆಮವರನೊಡಂಬಡಿಸಿಮೆಂದೊಡೆ ಕಿತ್ತಯ್ಯಂಗಳಲ್ಲಿಗೆ ವೋಗಿ ಕಿತ್ತಯ್ಯಾ ಇಂದೆಮ್ಮ ಮನೆಯೊಳ್ ಪಾರಿಸಲ್ವೇೞ್ಕುಮೆಂದು ಕಾಲಂ

“ಚಿಕ್ಕಸ್ವಾಮಿಗಳೇ, ನಿಮಗೆ ಇಂದು ನಾವು ಭೋಜನ ಮಾಡಿಸಬೇಕೆಂದಿದ್ದೇವೆ. ನಮ್ಮ ಮನಗೆ ನೀವು ಬರಬೇಕು” ಎಂದು ಕಾಲು ಹಿಡಿದು ಸಾಷ್ಟಾಂಗ ವಂದನೆ ಮಾಡಿದಳು. ಆಗ ಚಿಕ್ಕಸ್ವಾಮಿಗಳು ಅವಳ ಮುಖವನ್ನು ನೋಡಿದರು. “ಅತ್ಯಂತ ವಿಶೇಷವಾಗಿ ಉಡಿಗೆ ತೊಡಿಗೆಗಳನ್ನು ಧರಿಸಿ ಶೃಂಗಾರ ಮಾಡಿಕೊಂಡಿರುವ ದೇವತಾಸ್ತ್ರೀಯರನ್ನು ಹೋಲುವಂತಹ ಐನೂರು ಮಂದಿ ರಾಣಿಯರಿಂದಲೂ ದಾಸಿಯರಿಂದಲೂ ಈಕೆ ಸುತ್ತುವರಿಯಲ್ಪಟ್ಟಿದ್ದಾಳೆ. ಇಂದ್ರನ ಪತ್ನಿಯಾದ ಶಚೀದೇವಿಯನ್ನೇ ಹೋಲುತ್ತಿದ್ದಾಳೆ. ಅಂತಹ ಧಾರಿಣಿ ಮಹಾದೇವಿ ನನ್ನ ಕಾಲಿಗೆ ಎರಗಿ ಸಾಷ್ಟಾಂಗ ವಂದನೆ ಮಾಡಿದ್ದಾಳೆ. ಇದೆಲ್ಲವು ಈ ತಪಸ್ಸಿನ ಫಲವಾಗಿದೆ. ಇನ್ನೂ ಮುಂದೆ ಇದಕ್ಕಿಂತ ಹೆಚ್ಚಿನ ಫಲ ಕಾಣಲಿಕ್ಕಿದೆ” ಎಂದು ಭಾವಿಸಿಕೊಂಡರು. ರಾಣಿಯೊಡನೆ – “ಅಮ್ಮಾ ಈ ದಿವಸ ನಮಗೆ ಊಟ ಮಾಡಲು ಮನಸ್ಸಿಲ್ಲ; ಉಪವಾಸ ಮಾಡುತ್ತೇವೆ” ಎಂದು ನಿಶ್ಚಯವಾಗಿ ಹೇಳಿದರು. ಆಗ ರಾಣಿಯು ಮಾತಿಲ್ಲದೆ ಮೋರೆ ಮಾಡಿಕೊಂಡು ಋಷಿಗಳಿಗೆ ವಂದಿಸಿ, ತೆರಳಿದಳು. ರಾಜನೊಡನೆ, ಚಿಕ್ಕಸ್ವಾಮಿಗಳು ಈ ದಿವಸ ಉಪವಾಸಕೈಗೊಂಡಿದ್ದಾರೆ ಎಂದು ಹೇಳಿದಳು. ಆನಂತರ ರಾತ್ರಿಯ ಕರಣದ ಹೊತ್ತನಲ್ಲಿ (ಸುಮಾರು ಐದೂವರೆಗಳಿಗೆ) ವಜ್ರಸೇನನೆಂಬ ಮಂತ್ರಿಯು ರಾಜನಿಗೆ ಈ ರೀತಿಯಾಗಿ ವಿಜ್ಞಾಪನೆ ಮಾಡಿದನು – “ದೇವಾ, ನಾಳೆ ನಾನು ಚಿಕ್ಕಸ್ವಾಮಿಗಳನ್ನು ಕರೆದು ನಿಲ್ಲಿಸಿ ಭೋಜನ ಮಾಡಿಸುವೆನು. ” ಹೀಗೆ ನುಡಿದಾಗ “ಹಾಗೆಯೇ ಮಾಡು” ಎಂದು ಅರಸನು ಹೇಳಿದನು. ಮರುದಿವಸ ಮಂತ್ರಿ ಬಸದಿಗೆ ಹೋಗಿ ಶಿವಗುಪ್ತಾಚಾರ್ಯರೊಡನೆ “ಪೂಜ್ಯರೇ ಚಿಕ್ಕಸ್ವಾಮಿಗಳನ್ನು ಕೊಡಿಕೊಂಡು ನೀವು ನಮ್ಮಲ್ಲಿಗೆ ಬಂದು ಭಿಕ್ಷೆ ಮಾಡಿಸಿ ನೀವು ದಯಮಾಡಿಸಿ” ಎಂದು ಹೇಳಿದನು. ಅದಕ್ಕೆ ಋಷಿಗಳು “ಚಿಕ್ಕ ಸ್ವಾಮಿಗಳು ಬರಲು ಒಪ್ಪುವುದಾದರೆ ಒಟ್ಟಿಗೆ ಕರೆದುಕೊಂಡು ಬರುತ್ತೇವೆ. ಅವರು ಒಪ್ಪುವಂತೆ ನೀವೇ ಮಾಡಬೇಕು” ಎಂದರು. ಮಂತ್ರಿಯು ಚಿಕ್ಕಸ್ವಾಮಿಗಳ ಬಳಿಗೆ ಹೋಗಿ – “ಚಿಕ್ಕಸ್ವಾಮಿಗಳೇ, ಇಂದು ನಮ್ಮ ಮನೆಯಲ್ಲಿ ನೀವು ಪಾರಣೆ ಮಾಡಬೇಕು” ಎಂದು

ಪಿಡಿದು ಪೊಡೆವಟ್ಟಿರ್ದೊನಂ ನೋಡಿ ‘ರಾಜೋ ವಾ ಮರ್ತ್ಯೋ ವಾ’ ಎಂದು ಸಾಮಂತ ಮಹಾಸಾಮಂತರ್ಕಳಿಂ ಪರಿವೇಷ್ಟಿತನಾಗಿರ್ದ ಮಂತ್ರಿಯೆನಗೆ ಪೊಡೆಮಟ್ಟನಿವೆಲ್ಲಂ ತಪದ ಮಹಾತ್ಮ್ಯಾಮಿನಯ್ನಂ ಮುಂದೆ ಪಿರಿದುಂಟೆಂದು ಬಗೆದಿಂತೆಂದರಾಮಿಂದುಪವಾಸಂಗೆಯ್ದೆಮೆಂದೊ ಡಾತನೆನನಗೆ ಪುಣ್ಯಮಿಲ್ಲಾಗದೆ ಎಂದು ನುಡಿದು ಭಟ್ಟಾರರಂ ವಂದಿಸಿ ಪೋದಂ ಮತ್ತಮಿರುಳಿನ ಕರಣವೇಳೆಯೊಳರ್ಹದ್ದಾಸನೆಂಬೊಂ ರಾಜಶ್ರೇಷ್ಟಿಯರಸಂಗೆ ಬಿನ್ನಪಂಗೆಯ್ದಂ ನಾಳೆಯಾಂ ಕಿತ್ತಯ್ಯಂಗಳ್ಗೆ ಪಾರಣೆಯಂ ಮಾಡುವೆನೆಂದೊಡರಸನಂತೆ ಗೆಯ್ಯಿಮೆಂದೊಡಾತನುಂ ಬಸದಿಗೆವೋಗಿ ಭಟ್ಟಾರರಂ ವಂದಿಸಿ ಕಿತ್ತಯ್ಯಗಳುಮಂ ವಂದಿಸಿ ಗುರುಗಳನುಮತದಿಮದೆಮ್ಮ ಮನೆಗೆ ಚರಿಗೆ ವರಲ್ವೇೞ್ಕುಮೆಂದು ನುಡಿದೊಡುಪವಾಸಂಗೆಯ್ದೆನೆಂದೊಡಾತನುಂ ಭಟ್ಟಾರರಂ ವಂದಿಸಿಪೋದಂ ಇತ್ತ ನಂದಿಮಿತ್ರ ಕಿತ್ತಯ್ಯಂಗಳ್ಗೆ ಶ್ರಮಮಂ ಭಟ್ಟಾರರಱೆದು ಕಿತ್ತಯ್ಯಾ ಪಂಚನಮಸ್ಕಾರಮಂ ಮಾಣದಿರುಳುಂ ಪಲಗುಮೋದುತ್ತಮಿರಿಮೆಂದು ಕಲ್ಪಿಸಿದೊಡವರುಮಿರುಳುಂ ಪಗಲುಮೋದುತ್ತಿರೆ ಮತ್ತಿತ್ತ ಇರುಳಿನೋಲಗದೊಳ್ ನೆರೆದಿರ್ದ ನೆರವಿಯೊಳರಸನುಂ ಮಹಾದೇವಿಯುಂ ತಪಮುಂ ಗುಣಮುಮಂ ಪೊಗೞುತ್ತೆ ತಪಂಬಟ್ಟ ದಿವಸದಿಂ ತಗುಳ್ದಿಂದಿಗಯ್ದು ದಿವಸಮುಣ್ಬುದಿಲ್ಲ ಕುಡಿವುದಿಲ್ಲುಪ ವಾಸಂಗೆಯ್ದಿರ್ದರಾಮೆನಿತು ಕೀಱ ನಿಡಿದೊಡಂ ಚರಿಗೆಮಾಡಲೊಲ್ಲರಿನ್ನವು ಸಾಹಸಮುಂ

ಕಾಲುಹಿಡಿದು ಸಾಷ್ಟಾಂಗ ವಂದನೆ ಮಾಡಿದನು. ಅವನನ್ನು ಚಿಕ್ಕಸ್ವಾಮಿಗಳು ನೋಡಿ ತಮ್ಮ ಮನಸ್ಸಿನಲ್ಲಿ ಹೀಗೆ ಯೋಚಿಸಿದರು. “ರಾಜನೋ, ರಾಜನ ಜನವೋ! ಎಂಬ ಹಾಗೆ ಸಾಮಂತರಿಂದಲೂ ಮಹಾಸಾಮಂತರಿಂದಲೂ ಸುತ್ತುವರಿದಿರುವ ಮಂತ್ರಿ ಬಂದು ನನಗೆ ನಮಸ್ಕರಿಸಿದ್ದಾನೆ. ಇವೆಲ್ಲವೂ ನನ್ನ ತಪಸ್ಸಿನ ಮಹಾತ್ಮೆ ! ಇನ್ನು ಮುಂದೆ ಇದಕ್ಕಿಂತಲೂ ಹೆಚ್ಚಿನದು ಉಂಟು” ಈ ರೀತಿ ಭಾವಿಸಿ ಮಂತ್ರಿಯೊಡನೆ – “ನಾವು ಈ ದಿವಸ ಉಪವಾಸ ಮಾಡಿರುತ್ತೇವೆ ” ಎನ್ನಲು, ಆತನು “ನನಗೆ ಪುಣ್ಯವಿಲ್ಲದಾಯಿತೆ” ! ಎಂದು ಹೇಳಿಕೊಂಡು ಋಷಿಗಳನ್ನು ವಂದಿಸಿ ತೆರಳಿದನು. ಅನಂತರದ ರಾತ್ರಿಯ ಕರಣದ ವೇಳೆಯಲ್ಲಿ ಅರ್ಹದ್ದಾಸನೆಂಬ ರಾಜಶ್ರೇಷ್ಠಿ ಅರಸನಿಗೆ “ನಾಳೆ ನಾನು ಚಿಕ್ಕಸ್ವಾಮಿಗಳಿಗೆ ಪಾರಣೆಯನ್ನು ಏರ್ಪಡಿಸುವೆನು” ಎಂದು ವಿಜ್ಞಾಪನೆ ಮಾಡಿದನು. ರಾಜನು “ಹಾಗೆಯೇ ಮಾಡು” ಎನ್ನಲು ಆತನು ಬಸದಿಗೆ ಹೋಗಿ ಶಿವಗುಪ್ತ ಋಷಿಗಳನ್ನು ವಂದಿಸಿದನು. ಚಿಕ್ಕಸ್ವಾಮಿಗಳನ್ನೂ ವಂದಿಸಿ – “ನೀವು ಗುರುಗಳ ಒಪ್ಪಿಗೆಯಿಂದ ನಮ್ಮ ಮನೆಗೆ ಭಿಕ್ಷಕ್ಕೆ ಬರಬೇಕು” ಎಂದನು ಆಗ ‘ ನಾನು ಉಪವಾಸದಲ್ಲಿದ್ದೇನೆ, ಎಂದು ಹೇಳಲು, ಅರ್ಹದ್ದಾಸಸೆಟ್ಟಿಯು ಋಷಿಗಳಿಗೆ ವಂದಿಸಿ ಹೋದನು. ಇತ್ತ ನಂದಿಮಿತ್ರ ಚಿಕ್ಕಸ್ವಾಮಿಗಳಿಗೆ ಆದ ಶ್ರಮವನ್ನು ಋಷಿಗಳು ತಿಳಿದು “ಚಿಕ್ಕಸ್ವಾಮಿಗಳೇ, ನೀವು ಪಂಚನಮಸ್ಕಾರಗಳನ್ನು ಬಿಡದೆ ಇರುಳೂ ಹಗಲೂ ಅವನ್ನು ಹೇಳುತ್ತಾ ಇರಿ” ಎಂದು ತಿಳಿಸಿದರು. ಅವರು ಅದರಂತೆ ಇರುಳೂ ಹಗಲೂ ಅವನ್ನು ಹೇಳುತ್ತಾ ಇದ್ದರು. ಆಮೇಲೆ ಇತ್ತ ರಾಜನೂ ರಾಣಿಯೂ ರಾತ್ರಿಯ ಸಭೆಯಲ್ಲಿ ಸೇರಿದ್ದ ಸಮುದಾಯದ ಮುಂದೆ ಚಿಕ್ಕಸ್ವಾಮಿಗಳ ತಪಸ್ಸನ್ನೂ ಗುಣವನ್ನೂ ಹೊಗಳುತ್ತಿದ್ದರು. “ಅವರು ತಪಸ್ಸನ್ನು ಆಚರಿಸಿದ ದಿನದಿಂದ ಪ್ರಾರಂಭವಾಗಿ ಇಂದಿನ ತನಕ ಐದು ದಿವಸವೂ ಉಣ್ಣದೆ, ಕುಡಿಯದೆ ಉಪವಾಸ ಮಾಡಿದ್ದಾರೆ. ನಾವು ಎಷ್ಟು ಒತ್ತಾಯ ಮಾಡಿ ಹೇಳಿದರೂ ಭಿಕ್ಷೆ ಸ್ವೀಕರಿಸಲು ಒಪ್ಪಲಿಲ್ಲ. ಇಂತಹ ಸಾಹಸವೂ

ಸತ್ವವುಮಾರ್ಗವೊಳವೆ ಎಂದರಸನುರಸಿಯುಂ ಪೊಗೞ್ವುದಂ ಕೇಳ್ದು ಯುವರಾಜನೆರ್ದು ಬಿನ್ನಪಂಗೆಯ್ದು ದೇವಾ ಕಿತ್ತಯ್ಯಂಗಳ್ಗೆ ನಾಳೆಯಾಂ ಪಾರಣೆಯಂ ಮಾಡಿಸುವೆ ನೆಂದೊಡರಸನಂತೆಗೆಯ್ಯೆಂದೊಡೆಮಱುದಿವಸಂ ಯುವರಾಜಂ ಮಹಾವಿಭೂತಿವೆಸಸು ಬಸದಿಗೆ ವೋಗಿ ದೇವರಂ ಭಟ್ಟಾರರುಮನರ್ಚಿಸಿ ಬಂದಿಸಿ ಭಟಾರಾ ಕಿತ್ತಯ್ಯಂಗಳಿಂದೆಮ್ಮ ಮನೆಚಿiಳ್ ಪಾರಿಸುವಂತಿರೆ ಬೆಸಸಿಮೆನೆ ಕಿತ್ತಯ್ಯಂಗಳನ್ರೆಡಂಬಡಿಸಿ ವಿಱಸಿಮೆನೆ ಕಿತ್ತಯ್ಯಂಗಳ ಕಾಲಂಪಡಿದು ಪೊಡೆಮಟ್ಟು ಕಿತ್ತಯ್ಯ ಎಮ್ಮ ಮನೆಯೊಳಿಂದು ನೀಮುಂ ಪಾರಿಸಲ್ವೇೞ್ಪುದೆಂದೊಡೆ ಕಿತ್ತಯ್ಯಂಗಳಾತನ ಶ್ರೀಯುಂ ವಿಭೂತಿಯುಂ ತೇಜಮುಮಂ ಕಂಡು ಇಂತಪ್ಪ ಕ್ಷತ್ರಿಯ ಪುತ್ರಾದಿಗಳೆಲ್ಲಮೆನಗೆಱಗಿ ಪೊಡೆಮಟ್ಟು ಕಿಂಕುರ್ವಾಣಂಗೆಯ್ದಪ್ಪರುಣ್ಬುದರ್ಕೇನೀಗಳ್ ಸಂಕಟಮೀ ತಪದ ಫಲಮಿನ್ನುಂ ಮುಂದೆ ಪಿರಿದುಂಟೆಂದು ಬಗೆದಿಂದುಪವಾಸಂಗೆಯ್ದೆವೆಂದು ಮಱುಮಾತುಗೊಟ್ಟೊಡೆ ವಿರಾಗನಾಗಿ ಯುವರಾಜಂ ಭಟಾರರಂ ವಂದಿಸಿ ಪೋದನಿಂತಾಱು ದಿವಸಂ ಪೋದ ಬೞಕ್ಕೇೞನೆಯ ದಿವಸದಂದು ನೇಸಱ್ ಮೂಡಿದೊಡೆ ಭಟಾರರಲ್ಲಿಗೆ ನಂದಿಮಿತ್ರಂ ವಂದು ಬಂದಿಸಿ ಇಂತೆಂದಂ ಭಟಾರಾ ಇನಿತುಕಾಲಮುಂಡುದು ಸಾಲ್ಗುಮೆಮಗೆ ಯಾವಜ್ಜೀವಂ ಬಾೞ್ವನ್ನೆಗಮುಪವಾಸ ಪಚ್ಚಕ್ಖಾಣಂ ಗುಡುವುದೆಂದೊಡೆ ಭಟಾರರೆಂದರ್ ನೀಮುಂ ಮಹಾಪುರುಷರಿರ್ ನಿಮ್ಮನ್ನರ್ ಧೈರ್ಯವಂತರುಂ ಸತ್ವವಂತರುಮಾರುಮಿಲ್ಲಂ ಇನಿತುಕಾಲಂ ತಪಂಗೆಯ್ದಪ್ಪೆಮಗಪ್ಪೊಡಮಿನಿತು ಧೈರ್ಯಮುಂ

ಸತ್ವವೂ ಯಾರಿಗಾದರೂ ಇದೆಯೇ ?” ಎಂದು ಅರಸನೂ ಅರಸಿಯೂ ಹೊಗಳುವುದನ್ನು ಯುವರಾಜನು ಕೇಳಿ ಎದ್ದು ವಿಜ್ಞಾಪನೆ ಮಾಡಿದನು. “ಪಿತೃದೇವನೇ ಚಿಕ್ಕಮಸ್ವಾಮಿಗಳಿಗೆ ನಾನು ನಾಳೆ ಪಾರಣೆ ಮಾಡಿಸುವೆನು “ ಎಂದು ಹೇಳಿದನು. “ಹಾಗೆಯೆ ಮಾಡು“ ಎಂದು ರಾಜನು ಹೇಳಲು, ಮಾರನೆಯ ದಿನ ಯುವರಾಜನು ಬಹಳ ವೈಭವದಿಂದ ಕೊಡಿ ಬಸದಿಗೆ ಹೋದನು. ಅಲ್ಲಿ ಜಿನದೇವರನ್ನೂ ಋಷಿಗಳನ್ನೂ ವಂದಿಸಿ – “ಸ್ವಾಮಿ, ಚಿಕ್ಕಸ್ವಾಮಿಗಳು ಈ ದಿವಸ ನಮ್ಮ ಮನೆಯಲ್ಲಿ ಪಾರಣೆ ಮಾಡುವಂತೆ ಅಪ್ಪಣೆ ಮಾಡಿ“ ಎಂದನು. ಋಷಿಗಳು ಆಗ “ಚಿಕ್ಕಸ್ವಾಮಿಗಳನ್ನು ಒಪ್ಪುವಂತೆ ಮಾಡಿಕೊಂಡು ಹೋಗಿ ನಿಲ್ಲಿಸಿ“ ಎಂದರು. ಯುವರಾಜನು ಚಿಕ್ಕಸ್ವಾಮಿಗಳ ಕಾಲನ್ನು ಹಿಡಿದು ಸಾಷ್ಟಾಂಗ ವಂದಿಸಿ “ಚಿಕ್ಕಸ್ವಾಮಿಗಳೇ, ನಮ್ಮ ಮನೆಯಲ್ಲಿ ಇಂದು ನೀವು ಪಾರಣೆ ಮಾಡಬೇಕು“ ಎಂದನು. ಚಿಕ್ಕಸ್ವಾಮಿಗಳು ಅವನ ಐಶ್ವರ್ಯ ವೈಭಯ ತಪಸ್ಸುಗಳನ್ನು ಕಂಡು – “ಇಂತಹ ರಾಜಕುಮಾರ ಮುಂತಾದವರು ನನಗೆ ವಂದಿಸಿ ಅಡ್ಡಬಿದ್ದು ಸೇವೆ ಮಾಡುತ್ತಾರೆ. ಊಟ ಮಾಡುವುದಕ್ಕೆ ಈಗ ಸಂಕಷ್ಟವೇನಿದೆ? ಈ ತಪಸ್ಸಿನ ಫಲ ಮುಂದೆ ಇನ್ನೂ ಹೆಚ್ಚಾಗಲಿಕ್ಕಿದೆ“ ಎಂದು ಭಾವಿಸಿದರು. “ ಈ ದಿವಸ ನಾವು ಉಪವಾಸ ಮಾಡಿರುತ್ತೇವೆ“ ಎಂದು ಪ್ರತ್ಯುತ್ತರ ಕೊಟ್ಟರು. ಯುವರಾಜನು ಬೇಸರಗೊಂಡು ಋಷಿಗಳಿಗೆ ವಂದಿಸಿ ಹೋದನು. ಈ ರೀತಿಯಾಗಿ ಆರು ದಿವಸಗಳು ಕಳೆದನಂತರ ಏಳನೆಯ ದಿವಸ ಸೂರ್ಯೋದಯದ ವೇಳೆಗೆ ನಂದಿಮಿತ್ರನು ಋಷಿಗಳ ಬಳಿಗೆ ಬಂದು ವಂದಿಸಿ ಹೀಗೆ ಹೇಳಿದನು – ‘ಪೂಜ್ಯರೇ, ಇಷ್ಟು ಕಾಲ ಊಟ ಮಾಡಿದ್ದು ಸಾಕು. ನನಗೆ ಪ್ರಾಣವಿರುವವರೆಗೆ ಬದುಕುವ ತನಕ ಉಪವಾಸವಿರಲು ಉಪದೇಶ ಕೊಡಿ” ಎಂದು ಹೇಳಲು, ಋಷಿಗಳು “ ನೀವು ಮಹಾಪುರುಷರಾಗಿದ್ದೀರಿ. ನಿಮ್ಮಂತೆ ಧೈರ್ಯಶಾಲಿಗಳೂ ಸತ್ವವಂತರೂ ಯಾರೂ ಇಲ್ಲ.

ಸತ್ವಮುಮಿಲ್ಲೆಂದು ಗುರುಗಳ್ ಪೊಗೞ್ದೊಡೆ ಗುರುಗಳ ಪೊಗೞ್ತೆಗೆ ರಾಗಿಸಿ ಸಮತೋಸಂಬಟ್ಟಿರ್ದೊಡೆ ಭಟಾರರೆಂದರ್ ನಿಮಗಿಂದಿನ ದಿವಸದನಿತೆಯಾಯುಷ್ಯಮೆಂದು ಪೇೞ್ದುಂ ಜಾವಜ್ಜೀವಂ ಚತುರ್ವಿಧಮಪ್ಪಾಹಾರಕ್ಕಂ ಶರೀರಕ್ಕಂ ನಿವೃತ್ತಿಗೆಯ್ಯೆಂದು ಪಚ್ಚಕ್ಖಾಣಂಗೊಟ್ಟು ಬಸದಿಯೊಳೊಂದು ಕೋಣೆಯೋಳೀ ಎಡೆಯೊಳ್ ನೀಮೊಂದು ಕೆಲದೊಳ್ ಮಗುೞದೆ ತಳರದೆ ಕೈಯುಂ ಕಾಲ್ಗಳುಮನುಡುಗದೆ ನೀಡದೆ ಬಾೞ್ವನ್ನೆಗಂ ಪಟ್ಟರ್ದು ಪಂಚನಮಸ್ಕಾರಮಂ ಮನದೊಳೋದುತ್ತಿರಿಮೆಂದು ಕಲ್ಪಿಸಿ ಪಟ್ಟರಿಸಿ ಆರಾಧನೆಯನರ್ಚಿಸಿ ಭಟ್ಟಾರರಾರಾಧನೆಯಂ ವಕ್ಖಾಣಿಸುವ್ಯದಂ ಕೇಳ್ಮತ್ತಿರ್ದಂ ಮತ್ತಿತ್ತ ಕಿತ್ತಯ್ಯಂಗಳ್ ಸಂನ್ಯಸನಂಗೆಯ್ದರೆಂಬಾ ಮಾತನರಸನಾದಿಯಾಗಿ ಪೊೞಲ ಜನಂಗಳೆಲ್ಲಂ ಕೇಳ್ದು ಪಿರಿದುಂ ಸಂಭ್ರಮಮಾಗಿಯರಸನುಂ ಮಹಾದೇವಿಯುಂ ಮಂತ್ರಿಯುಂ ರಾಜಶ್ರೇಷ್ಠಿಯುಂ ಯುವರಾಜಂ ಮೊದಲಾಗಿ ಪೊೞಲ ಜನಮೆಲ್ಲಮಿರ್ಪೊತ್ತುಮರ್ಚನೆಯಂ ಕೊಂಡುಬಂದರ್ಚಿಸಿ ಕಿಱದು ಬೇಗಮಿರ್ದಾರಾಧನೆಯಂ ವಕ್ಖಾಣಿಸುವ್ಯದಂ ಕೇಳ್ದು ಮಿಥ್ಯಾದೃಷ್ಟಿಗಳಪ್ಪವರ್ ಶಾವಕಬ್ರತಂಗಳಂ ಕೈಕೊಂಡರ್ ಶ್ರಾವಕರುಂ ದೃಢಸಮ್ಯಗ್ದೃಷ್ಟಿಗಳಾಗಿ ಬಂದಿಸಿ ಪೋದರ್ ಇತ್ತ ನೇಸಱ್ ಪಟ್ಟೊಡೆ ಕಿತ್ತಯ್ಯಂಗಳ್ಗಾಸನ್ನಕಾಲಮಾದುದೆಂಬುದಂ ಭಟಾರರಱದಿಂತೆಂದರ್ ಕಿತ್ತಯ್ಯಾ ನಿಮಗೀಗಳ್ ಪ್ರಾಣಂಪೋಗಲ್ ಬಗೆದಪ್ಪುದು ದೇವರಂ ಜಾನಿಸುವುದು

ಇಷ್ಟು ಕಾಲವೂ ತಪಸ್ಸು ಮಾಡುತ್ತಿರುವ ನಮಗಾದರೂ ಕೂಡ ಇಷ್ಟು ಧೈರ್ಯವೂ ಇಲ್ಲ” ಎಂದು ಶಿಷ್ಯನನ್ನು ಹೊಗಳಿದರು. ಗುರುಗಳ ಹೊಗಳಿಕೆಗೆ ನಂದಿಮಿತ್ರನು ಪ್ರೀತಿಗೊಂಡು ಸಂತೋಷಪಟ್ಟು ಇರಲು, ಋಷಿಗಳು ಅವನಿಗೆ ಹೀಗೆಂದರು – “ನಿಮಗೆ ಇಂದಿನ ದಿವಸದ ವರೆಗೆ ಮಾತ್ರವೇ ಆಯುಷ್ಯ. ಜೀವವಿರುವ ತನಕವೂ ನಾಲ್ಕು ವಿಧವಾದ ಆಹಾರಕ್ಕೂ ದೇಹಕ್ಕೂ ಪರಿಹಾರ ಮಾಡಿ” ಎಂದು ಉಪದೇಶಕೊಟ್ಟರು. “ಈ ಬಸದಿಯ ಒಂದು ಮೂಲೆಯಲ್ಲಿ ಈ ಸ್ಥಳದಲ್ಲಿ ಬದಿಯಲ್ಲಿದ್ದು ಮಗುಚಿಕೊಳ್ಳದೆ, ಆಲುಗಾಡದೆ, ಕೈಕಾಲುಗಳನ್ನು ಮುದುಡಿಸಿಕೊಳ್ಳದೆ ಬದುಕಿರುವವರೆಗೂ ಮಲಗಿರಬೇಕು. ಮನಸ್ಸಿನಲ್ಲಿ ಅರ್ಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು, ಸಾಧುಗಳು ಎಂಬ ಪಂಚಪರಮೇಷ್ಠಿಗಳಿಗೆ ಪಂಚನಮಸ್ಕಾರಗಳನ್ನು ಮನಸ್ಸಿನಲ್ಲಿಯೇ ಹೇಳುತ್ತಿರಬೇಕು” ಎಂದು ಹೇಳಿಕೊಟ್ಟು ಮಲಗಿಸಿ ಆರಾಧನೆ ಮಾಡಿ, ಋಷಿಗಳು ಆರಾಧನೆಯನ್ನು ವ್ಯಾಖ್ಯಾನಿಸುವುದನ್ನು ಕೇಳುತ್ತಿದ್ದನು. ಇತ್ತ ಚಿಕ್ಕಸ್ವಾಮಿಗಳು ವೈರಾಗ್ಯ ಸ್ವೀಕರಿಸಿದರೆಂಬ ಮಾತನ್ನು ಅರಸನೇ ಮೊದಲಾಗಿ ಪಟ್ಟಣಿಗರೆಲ್ಲ ಕೇಳಿ ಬಹಳ ಸಂಭ್ರಮಗೊಂಡರು. ಅರಸ, ಅರಸಿ, ಮಂತ್ರಿ, ರಾಜಶ್ರೇಷ್ಠಿ, ಯುವರಾಜ ಮುಂತಾದ ಪಟ್ಟಿಣಿಗರೆಲ್ಲರೂ ಎರಡೂ ಹೊತ್ತೂ

ಪೂಜಾದ್ರವ್ಯಗಳನ್ನು ತೆಗೆದುಕೊಂಡು ಬಂದು ಪೂಜಿಸಿ ಸ್ವಲ್ಪ ಹೊತ್ತಿನವರೆಗೆ ಇದ್ದು ಆರಾಧನೆಯನ್ನು ವ್ಯಾಖ್ಯಾನಿಸುವುದನ್ನು ಕೇಳಿದ ಮಿಥ್ಯಾದೃಷ್ಚಿಯುಳ್ಳವರಾದ ಜನರು ಶ್ರಾವಕವ್ರತಗಳನ್ನು ಸ್ವೀಕರಿಸಿದರು ಶ್ರಾವಕರಾದವರು ಅಲುಗಾಡದಿರುವ ಸಮ್ಯಕ್ ದೃಷ್ಟಿಯುಳ್ಳವರಾಗಿ ವಂದಿಸಿ ತೆರಳಿದರು. ಇತ್ತ ಸೂರ್ಯಾಸ್ತವಾಗಲು, ಚಿಕ್ಕಸ್ವಾಮಿಗೆ ಮರಣದ ಹೊತ್ತು ಬಂತೆಂಬುದನ್ನು ಋಷಿಗಳು ತಿಳಿದು ಹೀಗೆಂದರು – “ಚಿಕ್ಕಸ್ವಾಮಿಗಳೇ ನಿಮಗೆ ಈಗ ಪ್ರಾಣವು ಹೋಗಲು ಯೋಚಿಸುತ್ತಿದೆ. ದೇವರನ್ನು ಧ್ಯಾನಿಸಿರಿ, ಪಂಚನಮಸ್ಕಾರವನ್ನು ಓದುತ್ತ ಉಚ್ಚಾರಣೆ