ಪತ್ತು ಸಾಗರೋಪಮಾಯುಷ್ಯಮನೊಡೆಯೊಂ ಅಮಿತಕಾಂತಿಯೆಂಬೊಂ ದೇವನಾಗಿ ಪುಟ್ಟಿದೊಂ ಚಂದ್ರಗುಪ್ತ ಮುನಿಯುಂ ಭಟ್ಟಾರರ ನಿಸಿದಿಗೆಯಂ ಬಂದಿಸುತ್ತಮಾ ದೇವತೆ ಬೆಸಕೆಂಯ್ಕೆ ಚರಿಗೆಮಾಡಿ ತಪಂಗೆಯ್ಯುತ್ತುಂ ಪನ್ನೆರಡು ವರಷಂಬರೆಗಮಿಂತಿರ್ಪನ್ನೆಗಮಿತ್ತ ತಿಮುೞನಾೞ್ಗೆಪೋದ ಋಷಿಸಮುದಾಯಮೆಲ್ಲಂ ಪನ್ನೆರಡು ವರುಷಂಬರೆಗಂ ಸುಖದೊಳಿರ್ದು ನಿರುಪಸರ್ಗದಿಂ ದರ್ಶನಜ್ಙಾನಚಾರಿತ್ರಂಗಳಿಂ ಪ್ರತಿಪಾಳಿಸಿ ಬಡಗನಾಡ ಪಸವು ತಿಳೀದುದೆಂಬುದನಾ ನಾಡಿಂದಂ ಬಂದರ್ ಪೇೞೆ ಕೇಳ್ದಱದು ಭಟ್ಟಾರರ ನಿಸಿದಿಗೆಯಂ ಬಂದಿಸಿ ಪೋಪಮೆಂದು ವಿಶಾಖಾಚಾರ್ಯರ್ ಮೊದಲಾಗೊಡೆಯ ಋಷಿಸಮುದಾಯಮೆಲ್ಲಂ ದಕ್ಷಿಣಾಪಘದಿಂದಂ ಬಂದು ಭಟ್ಟಾರರ ನಿಸಿದಿಗೆಯನೆಮ್ದಿದಾಗಳ್ ಚಂದ್ರಗುಪ್ತಮುನಿಯುಂ ರಿಸಿಯರ್ಕಳಿಂತೆಂದು ಬಗೆದರೀಯಡವಿಯೊಳಿನ್ನೆಗಮಿವರ್ ಕಂದಮೂಲಫಲಂಗಳಂ ತಿಂದು ತೊಱೆಯ ಪಳ್ಳದ ನೀರ್ಗಳಂ ಕುಡಿದು ಪನ್ನೆರಡು ವರುಷಂಬರೆಗಮೆಂತು ಬರ್ದೊರೆಂದು ತಮ್ಮೊಳ್ ನುಡಿದು ಮತ್ತಂ ತಲೆನವಿರ್ ಬೆಳೆದುದುಮಂ ಕಂಡಾರಪ್ಪೊಡಂ ಪ್ರತಿವಂದನೆಯಂ ಕೊಟ್ಟುದಿಲ್ಲ ಮತ್ತಾ ರಿಸಿಯರ್ಕಳವಿಬರುಮಾ ದಿವಸಮುಪವಾಸಂ ಗೆಯ್ದರ್ಚಿಸಿ ಕ್ರಿಯೆಗೆಯ್ದು ಭಟ್ಟಾರರ ನಿಸಿದಿಗೆಯಮ ಬಂದಿಸಿಯಾ ದಿವಸಮಲ್ಲಿಯೆ ಕೆಂದು ಮಱುದಿವಸಂ ಪೋಪಾಗಳ್ ಚಂದ್ರಗುಪ್ತಮುನಿಗಳೆಂದರ್ ಭಟಾರಾ ನಿನ್ನೆ ಬಟ್ಟೆವಂದುಪವಾಸಂಗೆಯ್ದು ಸೇದೆವಟ್ಟಿರಿಂದಿನ

ಮತ್ತು ಪೊದರುಗಳ ಮನೆಯಲ್ಲಿದ್ದ ಈ ಪಟ್ಟಣವನ್ನು ನಾನು ಕಂಡಿಲ್ಲ. ಆದರೆ ಇಂದು ಸ್ವಲ್ಪ ಹೆಚ್ಚಾಗಿ ಸುತ್ತಾಡಿದಾಗ ದೊಡ್ಡದೊಂದು ಪಟ್ಟಣವನ್ನು ಕಂಡುಭಿಕ್ಷೆಗಾಗಿ ಹೋದೆನು. ಆಗ ಓರ್ವ ದೇವತಾಸ್ತ್ರೀ ತನ್ನ ಎದುರಿಗೆ ಪರಿವಾರದೊಡನೆ ಬಂದು ಊಟಕ್ಕೆ ನಿಲ್ಲಲು ಹೇಳಿ ತನ್ನ ಮನೆಗೆ ಕರೆದುಕೊಂಡು ಹೋದಳು. ಅಲ್ಲಿ ನನ್ನ ಕಾಲು ತೊಳೆದು, ಸತ್ಕರಿಸಿ ಗುರುಭಕ್ತಿಯಿಂದ ನಮಸ್ಕರಿಸಿ ಅತಿಶಯವಾದ ಭಕ್ತಿಯಿಂದ ದಿವ್ಯವಾದ ಭೋಜನವನ್ನು ಬಡಿಸಿದಳು. ನಾನು ನನ್ನ ಶ್ರಮವೆಲ್ಲ ಹೋಗುವ ಹಾಗೆ ಊಟಮಾಡಿ ಆಶೀರ್ವದಿಸಿ ಬಂದೆನು ” ಎಂದು ಹೇಳಿದರು. ಭದ್ರಬಾಹುಗಳು ‘ಒಳ್ಳೆಯದಾಯಿತು’ ಎಂದು ಹೇಳಿ ಸಂತೋಷಗೊಂಡು ಇದ್ದರು. ಹೀಗೆ ಪ್ರತಿದಿಸವೂ ಪಟ್ಟಣಕ್ಕೆ ಹೋಗಿ ಊಟಮಾಡುತ್ತಿದ್ದರು. ಇತ್ತ ಭದ್ರಬಾಹು ಋಷಿಗಳು ಹಿಂದೆ ತಾವು ತಪಸ್ಸು ಮಾಡುತ್ತಿದ್ದ ಎಲ್ಲಾ ಕಾಲದಲ್ಲಿಯೂ ಅವಮೋದರ್ಯ (ಹೊಟ್ಟೆ ತುಂಬುವುದಕ್ಕೆ ಬೇಕಾಗುವ ಮೂವತ್ತೆರಡು ತುತ್ತುಗಳಲ್ಲಿ ದಿನಕ್ಕೆ ಒಂದೊಂದೇ ತುತ್ತು ಕಡಮೆ ಮಾಡಿ ಊಟಮಾಡುವುದು) ಎಂಬ ವಿಧಾನದ ಊಟವನ್ನು ಮಾಡಿ ಹಸಿವನ್ನು ಸಹಿಸಿ, ದೇಹವನ್ನು ಕ್ಷೀಣಗೊಳಿಸು ಸಂನ್ಯಾಸ ಕೈಗೊಂಡು, ಹಲವು ದಿವಸಗಳಿಂದ ಹಸಿವು ಬಾಯಾರಿಕೆಗಳನ್ನು ಸಹಿಸಿದರು. ಮಂಗಳಕರ ಪರಿಣಾಮದಿಂದ ರತ್ನತರಯವನ್ನು ಸಾಸಿ ಸತ್ತು ಬ್ರಹ್ಮಕಲ್ಪದಲ್ಲಿ ಹತ್ತು ಸಾಗರಕ್ಕೆ ಸಮಾನವಾದ ಆಯುಷ್ಯವುಳ್ಳ ಅಮಿತಕಾಂತಿ ಎಂಬ ದೇವನಾಗಿ ಹುಟ್ಟಿದನು. ಚಂದ್ರಗುಪ್ತಮುನಿ ಭದ್ರಬಾಹು ಋಷಿಗಳ ಸಮಾಯನ್ನು ನಮಸ್ಕರಿಸಿ, ಅಲ್ಲಿಯ ದೇವತೆಯ ಅಪ್ಪಣೆಯಂತೆ ಭಿಕ್ಷೆ ಮಾಡಿಕೊಂಡು ತಪಸ್ಸನ್ನು ಎಸಗಿ ಹನ್ನೆರಡು ವರ್ಷಗಳವರೆಗೆ ಹೀಗೆಯೇ ಇದ್ದರು. ಇತ್ತ ತಮಿಳುನಾಡಿಗೆ ಹೋದ ಋಷಿಸಮೂಹದವರೆಲ್ಲ ಹನ್ನೆರಡು ವರ್ಷಗಳವರೆಗೆ ಸುಖವಾಗಿದ್ದು ಉಪಸರ್ಗಗಳಿದಲ್ಲದೆ ಸಮ್ಯಗ್ದರ್ಶನ ಸವ್ಮ್ಯಗ್ ಜ್ಞಾನ ಸಮ್ಯಕ್ ಚಾರಿತ್ರ ಎಂಬ ರತ್ನತ್ರಯವನ್ನು ನಡೆಸಿಕೊಂಡು ಬಂದರು. ಉತ್ತರಾಪಥದಲ್ಲಿ ಬಂದಿದ್ದ ಕ್ಷಾಮವು

ದಿವಸಮಿಲ್ಲಿರ್ದು ಚರಿಗೆಪೊಕ್ಕು ಸೇದೆಯನಾಱಸಿ ನಾಳೆ ಪೋಗಿಮೆಂದೊಡೆ ಭಟ್ಟಾರರೆಂದರೂರಿಲ್ಲ ಕೇರಿಯಿಲ್ಲೆಲ್ಲಿ ಚರಿಗೆವುಗುವಮಂತು ಕೆಮ್ಮನೇಕೆಮ್ಮಂ ತಾಂಗಿದಪಿರೆಂದೊಡೆ ಪಿರಿದೊಂದು ಪೊೞಲುಂಟು ನೀಮುಂ ಸಂಕ್ಲೇಶಂಬಡದಿರಿಂದಿನ ದಿವಸಮಿರ್ಕೆಂಡನಿಬರುಮೆಂದರಿಂದಿನ ದಿವಸಮುಪವಾಸಂ ಗೆಯ್ದಪ್ಪೊಡಮಿವರೆಂಬುದನಿಂಬುಕೆಯ್ವಮೆಂದಿರ್ದೊಡೆ ಮಧ್ಯಹ್ನಮಪ್ಪಾಗಳ್ ದೇವರಂ ಬಂದಿಸವೇೞ್ಕೊಡನಿಬರುಂಬಂದಿಸಿ ಚಂದ್ರಗುಪ್ತಮುನಿಯ ಬೞಯಂ ಋಷಿಸಮುದಾಯಮೆಲ್ಲಂ ತಗುಳ್ದು ಕಿಱದಂತರಮಂ ಪೋಪನ್ನೆಗಂ ಪಿರಿದೊಂದು ಪೊೞಲಂ ಕಮಡುಚರಿಗೆಪೊಕ್ಕನಿಬರುಮಂ ನಿಱೆಸಿ ಕೆಲ ರಿಸಿಯರುಮಾಚಾರ್ಯರ್ಕಳುಂ ಬೆಸಸುತಾಮೊಂದು ಮನೆಚಿiಳ್ ನಿಂದರಿಂತನಿಬರುಂ ದಿವ್ಯಾಹಾರಂಗಳಂ ಶ್ರಮಂ ವೋಗೆ ಚರಿಗೆ ಮಾಡಿ ತಮ್ಮಾವಾಸಕ್ಕೆ ಬಂದು ವಿಶಾಖಾಚಾರ್ಯರೆಂದರ್ ಬ್ರಹ್ಮಯ್ಯಾ ಕಾಲಂ ಕರ್ಚಲ್ ಗುಂಡಿಗೆಯಂ ಕೊಂಡು ಬನ್ನಿಮೆಂದೊಡೆ ಬ್ರಹ್ಮಯ್ಯನೆಂದಂ ಗುಂಡಿಗೆಯನುಂಡ ಮನೆಯೊಳ್ ಮಱೆದು ಬಂದೆನೆನೆ ಬೇಗಂ ಪೋಗಿ ಕೊಂಡು ಬಾಯೆನೆ ಬ್ರಹ್ಮಯಂ ಪೋಗಿ ಪೊೞಲೆಡೆಯಂ ಕಾಣದಡವಿಯೆಲ್ಲಮಂ ತೊೞಲ್ದು ನೋಡಿ ಗುಂಡಿಗೆಯಂ

ತೀರಿತೆಂದು ಆ ನಾಡಿನಿಂದ ಬಂದವರು ಹೇಳಿದುದನ್ನು ಕೇಳಿ ತಿಳಿದುಕೊಂಡು ಅವರು ಭದ್ರಬಾಹು ಭಟ್ಟಾರರ ಸಮಾಗೆ ವಂದನೆಯನ್ನು ಸಲ್ಲಿಸಿ ಹೋಗೋಣವೆಂದುಕೊಂಡು ವಿಶಾಖಾಚಾರ್ಯರೇ ಮೊದಲಾಗಿ ಉಳ್ಳ ಋಷಿಸಮೂಹದವರೆಲ್ಲ ದಕ್ಷಿಣ ದೇಶದಿಂದ ಬಂದು ಭಟ್ಟಾರರ ಸಮಾಯಿದ್ದಲ್ಲಿಗೆ ಬಂದರು. ಆಗ ಚಂದ್ರಗುಪ್ತ ಮುನಿಗಳು ಆ ಋಷಿಗಳ ಬರವನ್ನು ಎದುರುಗೊಂಡು ಋಷಿವೃಂದಗಳೀಗೆಲ್ಲ ವಂದನೆ ಮಾಡಿದರು. ಆಗ ಆ ಋಷಿಗಳು ತಮ್ಮೊಳಗೆ ಹೀಗೆ ಭಾವಿಸಿದರು – “ಇವರು ಈ ಕಾಡಿನಲ್ಲಿ ಇದುವರೆಗೂ ಗಡ್ಡೆ ಬೇರು ಹಣ್ಣುಗಳನ್ನು ತಿಂದು ಹೊಳೆಯ ಮತ್ತು ಹಳ್ಳದ ನೀರುಗಳನ್ನು ಕುಡಿದು ಹನ್ನೆರಡು ವರ್ಷಗಳವರೆಗೆ ಹೇಗೆ ಬಾಳಿದರು ? ” ಹೀಗೆ ತಮ್ಮಲ್ಲೇ ಹೇಳಿಕೊಂಡು, “ತಲೆಯ ಕೂದಲು ಬೆಳೆದುದನ್ನು ನೋಡಿ ಯಾರೊಬ್ಬರಾದರೂ ಇವರಿಗೆ ನಮಸ್ಕಾರಕ್ಕೆ ಪ್ರತಿಯಾಗಿ ನಮಸ್ಕಾರವನ್ನು ಮಾಡಿಲ್ಲ” ಎಂದುಕೊಂಡರು. ಆಮೇಲೆ ಆ ಋಷಿಗಳೆಲ್ಲರೂ ಆ ದಿವಸ ಉಪವಾಸ ಮಾಡಿದರು. ಪ್ರಜೆ ಕ್ರಿಯೆಗಳನ್ನಲ್ಲ ಮಾಡಿ ಭದ್ರಬಾಹುಭಟ್ಟಾರರ ಸಮಾಗೆ ವಂದನೆ ಸಲ್ಲಿಸಿದರು. ಆ ದಿನ ಅಲ್ಲಿಯೇ ಮಲಗಿ ಮರುದಿವಸ ಹೋಗುವ ಸಂದರ್ಭದಲ್ಲಿ ಚಂದ್ರಗುಪ್ತ ಮುನಿಗಳು ಅವರೊಡನೆ (ವಿಶಾಧಾಚಾರ್ಯರೊಡನೆ) ಹೀಗೆಂದರು – “ಪೂಜ್ಯರೇ, ನಿನ್ನೆ ನೀವೆಲ್ಲ ದಾರಿ ನಡೆದು ಬಂದು ಉಪವಾಸ ಮಾಡಿ ಆಯಾಸಪಟ್ಟಿದ್ದೀರಿ. ಈ ದಿವಸ ಇಲ್ಲೇ ಇದ್ದು ಊಟಮಾಡಿ ಬಳಲಿಕೆಯನ್ನು ನಿವಾರಿಸಿ ನಾಳೆ ಹೋಗಬಹುದು “. ಹೀಗೆ ಹೇಳಿದಾಗ ಅವರು – “ಇಲ್ಲಿ ಊರೂ ಇಲ್ಲ ಕೇರಿಯೂ ಇಲ್ಲ ಎಲ್ಲಿ ಭಿಕ್ಷೆಗೆ ಹೋಗೋಣ ? ಅಂತೂ ವ್ಯರ್ಥವಾಗಿ ನೀವು ನಮ್ಮನ್ನೇಕೆ ತಡೆಯುತ್ತೀರಿ? ” ಎಂದು ಕೇಳಿದರು. ಅದಕ್ಕೆ ಚಂದ್ರಮುನಿಗಳು – “ದೊಡ್ಡದಾದ ಒಂದು ಪಟ್ಟಣವಿದೆ. ನೀವೇನೂ ಕಷ್ಟಪಡಬೇಕಾಗಿಲ್ಲ. ಈ ದಿವಸ ಇದ್ದು ಬಿಡಿ” ಎಂದರು. ಆಗ ಅವರೆಲ್ಲರೂ ಹೀಗೆಂದರು – ಈ ದಿವಸ ಉಪವಾಸವನ್ನು ಮಾಡಿಯಾದರೂ ಇವರು ಹೇಳಿದ್ದನ್ನು ನೆರವೇರಿಸೋಣ”. ಹೀಗೆಂದು ಅವರೆಲ್ಲ ನಿಂತಿರಲು ಮಧ್ಯಾಹ್ನವಾದಾಗ, ದೇವರನ್ನು ನಮಸ್ಕರಿಸಲು ಹೇಳಿದಾಗ, ಅವರೆಲ್ಲರೂ ವಂದಿಸಿ, ಆ ಋಷಿಗಳ ತಂಡದವರೆಲ್ಲ ಚಂದ್ರಗುಪ್ತಮುನಿಯ ಜೊತೆಯಲ್ಲಿ ಸೇರಿಕೊಂಡು ಸ್ವಲ್ಪದೂರ

ಕಾಣದತ್ತಮಿತ್ತಂ ನೊೞ್ವನ್ನೆಗಮೊಂದು ಮರದ ತುತ್ತತುದಿಯೊಳಿರ್ದೆೞಲ್ವ ಗುಂಡಿಗೆಯಂ ಕಂಡು ಬಂದು ಗುರುಗಳ್ಗಿಂತೆಂದಂ ಭಟ್ಟಾರಾ ನಾವುಂಡೆಡೆಯೊಳಾ ಪೋೞಲಿಲ್ಲ ನಮ್ಮುಂಡ ಮನೆಯುಮಿಲ್ಲ ಗುಂಡಿಗೆಯುಮೊಂದು ನಿಡಿಯ ಮರದ ತುತ್ತತುದಿಯೊಳಿರ್ದುದಾರಾನುಮೇಱಲ್ ಬಲ್ಲೊರನಟ್ಟುಗೆಂದೊಡನಿಬರುಂ ರಿಸಿಯರ್ಕಳೆಲ್ಲಂ ಚೋದ್ಯಂಬಟ್ಟು ನೋಡಲ್ಪೋಗಿ ಪೊೞಲಂ ಕಾನದಡವಿಯೊಳ್ ನಿಡಿಯ ಮರದ ತುತ್ತತುದಿಯೊಳಿರ್ದೆೞಲ್ವ ಗುಂಡಿಗೆಯಂ ಕಂಡು ತೆಗೆಯಿಸಿಕೊಂಡು ಪೋಗಿ ಚಂದ್ರಗುಪ್ತಮುನಿಯನನಿಬುರಂ ರಿಸಿಯರ್ಕಳ್ ನೆರದಿಂತೆಂದರಾಮುಂ ನಿಮ್ಮನೀಯಡವಿಯೊಳ್ ಕಂದಮೂಲಫಲಂಗಳಂ ತಿಂದು ಪಳ್ಳದ ನೀರಂ ಕುಡಿದು ಇನಿತು ಕಾಲಂ ಬರ್ದಿರೆಂದು ನಿಮ್ಮಂ ಬಗೆದು ಬಂದಿಸಿದೆಮಿಲ್ಲಿದರ್ಕೆ ನೀಮುಂ ಮನದೊಳೇವಂಗೊಳ್ಳದೆ ಕ್ಷಮಿಯಿಸಿಮೆಂದು ನುಡಿದು ವಂದಿಸಿ ಮತ್ತಮಿಂತೆಂದರ್ ನೀಮುಂ ಸೇವಾಷ್ಠತರಿರ್ ನಿಮಗೆ ದೇವತೆಗಳ್ ಬೆಸಕೆಯ್ವುವು ದೇವತೆಗಳ್ ಮಾಡಿದಾಹಾರಮಂ ನೀಮಿನ್ನೆಗಮುಂಡು ತಪಂಗೆಯ್ದಿರಿನ್ನುಣಲ್ವೇಡ ದೇವತೆಗಳ ಮಾಡಿದಾಹಾರಮಂ ರಿಸಿಯರ್ಗೆ ಚರಿಗೆ ಮಾಡಲಾಗದೆಂದು ಬಾರಿಸಿಯವರ್ಗೆ ಲೊಚಂಗೆಯ್ದು

ಹೋದರು. ಆಗ ದೊಡ್ಡದೊಂದು ಪಟ್ಟಣ ಕಾಣಿಸಿತು. ಭಿಕ್ಷೆಗೆ ಹೋದ ಅವರೆಲ್ಲರನ್ನೂ ನಿಲ್ಲಿಸಿ ಕೆಲವು ಮಂದಿ ಋಷಿಗಳು ಮತ್ತು ಆಚಾರ್ಯರೂ ಕೂಡಿ ತಾವು ಒಂದು ಮನೆಯಲ್ಲಿ ನಿಂತರು. ಹೀಗೆ ಅವರೆಲ್ಲರೂ ತಮ್ಮ ದಣಿವು ಆರಿ ತೃಪ್ತಿಯಾಗುವವರೆಗೂ ದಿವ್ಯಾಹಾರಗಳನ್ನು ಉಂಡರು. ತಮ್ಮ ವಾಸಸ್ಥಳಕ್ಕೆ ಬಂದನಂತರ, ವಿಶಾಖಾಚಾರ್ಯರು ತಮ್ಮ ಶಿಷ್ಯನನ್ನು ಕರೆದು – “ಮಾಣಿಯೇ, ಕಾಲು ತೊಳೆಯಲು ಕಮಂಡಲು(ಜಲಪಾತ್ರೆ)ತೆಗೆದುಕೊಂಡು ಬಾ” ಎಂದುರು. ಆಗ ಆ ವಟುವು – “ಕಮಂಡಲುವನ್ನು ನಾನು ಊಟಮಾಡಿದ ಮನೆಯಲ್ಲಿ ಮರೆತು ಬಂದಿದ್ದೇನೆ” ಎಂದನು. “ಬೇಗನೆ ಹೋಗಿ ಅದನ್ನು ತೆಗೆದುಕೊಂಡು ಬಾ” ಎನ್ನಲು ಆ ಬ್ರಹ್ಮಚಾರಿ ಹೋಗಿ ಪಟ್ಟಣವಿರುವ ಸ್ಥಳವನ್ನೇ ಕಾಣದೆ, ಕಾಡನ್ನೆಲ್ಲ ಸುತ್ತಾಡಿ ನೋಡಿದನು. ಕಮಂಡಲವನ್ನು ಕಾಣದೆ ಅತ್ತಿತ್ತ ನೋಡುತ್ತಿದ್ದನು. ಆಗ ಒಂದು ಮರದ ತುತ್ತತುದಿಯಲ್ಲಿದ್ದುಕೊಂಡು ನೇತಾಡುತ್ತಿರುವ ಕಮಂಡಲವನ್ನು ಕಂಡು ಬಂದು ತನ್ನಗುರುಗಳಿಗೆ ಹೀಗೆಂದನು – “ಪೂಜ್ಯರೇ, ನಾವು ಊಟಮಾಡಿದ ಸ್ಥಳದಲ್ಲಿ ಆ ಪಟ್ಟಣವಿಲ್ಲ. ನಾವು ಊಟ ಮಾಡಿದ ಮನೆಯೂ ಇಲ್ಲ ಕಮಂಡಲು ಮಾತ್ರ ಒಂದು ಉದ್ದವಾದ ಮರದ ತುತ್ತತುದಿಯಲ್ಲಿದೆ. ಮರವನ್ನು ಹತ್ತಬಲ್ಲ ಯಾರನ್ನಾದರೂ ಕಳುಹಿಸಬೇಕು” ಆಗ ಆ ಋಷಿಗಳೆಲ್ಲರೂ ಆಶ್ಚರ್ಯಪಟ್ಟು ನೋಡುವುದಕ್ಕೆ ಹೋಗಿ ಪಟ್ಟಣವನ್ನು ಕಾಣದೆ ಕಾಡಿನಲ್ಲಿ ಎತ್ತರವಾದ ತುತ್ತತುದಿಯಲ್ಲಿ ಜೋತಾಡುತ್ತಿರುವ ಕಮಂಡಲವನ್ನು ಕಂಡರು. ಅದನ್ನು ತೆಗೆಯಿಸಿಕೊಂಡು ಹೋಗಿ ಆ ಋಷಿಗಳೆಲ್ಲರೂ ಒಟ್ಟಾಗಿ ಚಂದ್ರಗುಪ್ತಮುನಿಯ ಬಳಿಗೆ ಬಂದರು. “ನೀವು ಈ ಕಾಡಿನಲ್ಲಿ ಗೆಡ್ಡೆ ಬೇರು ಹಣ್ಣುಗಳನ್ನು ತಿಂದು ಹಳ್ಳದ ನೀರನ್ನು ಕುಡಿದು ಇಷ್ಟುಕಾಲ ಬಾಳಿದ್ದೀರೆಂದು ನಿಮ್ಮನ್ನ ಕುರಿತು ಭಾವಿಸಿ ವಂದನೆಮಾಡಲಿಲ್ಲ. ಇದಕ್ಕೆ ನೀವು ಮನಸ್ಸಿನಲ್ಲಿ ಸಿಟ್ಟಾಗಬಾರದು, ಕ್ಷಮಿಸಬೇಕು” ಎಂದು ಹೇಳಿ ವಂದಿಸಿ ಆಮೇಲೆ ಹೀಗೆ ಹೇಳಿದರು – “ನೀವು ಸೇವೆಗೆ ಪಾತ್ರರಾಗಿದ್ದೀರಿ. ದೇವತೆಗಳು ನಿಮ್ಮ ಆಜ್ಞಾಪಾಲಕರಾಗಿ ನಡೆದುಕೊಳ್ಳತ್ತಿರುವರು. ದೇವತೆಗಳು ಮಾಡಿದ ಆಹಾರವನ್ನು ಇದುವರೆಗೂ ನೀವು ಊಟ ಮಾಡಿ ತಪಸ್ಸನ್ನು

ಬ್ರತಂಗಳನೇಱಸಿ ಪಡಿಕವ್ಮಣಂಬೇೞ್ದೊಡಗೊಂಡುತ್ತರಾಪಥಕ್ಕೆ ಪಯಣಂಬೋಗಿ ಕತಿಪಯದಿವಸಂಗಳಿಂದಂ ಮಧ್ಯದೇಶಮನೆಯ್ದಿಯಾ ನಾಡೊಳ್ ಋಷಿಸಮುದಾಯಮೆಲ್ಲಂ ನಿರುಪಸರ್ಗಮಿರ್ದ್ದತ್ತು ಮತ್ತಿತ್ತ ರಾಮಿಲಾಚಾರ್ಯರಂ ಸ್ಥೂಲಾಚಾರ್ಯರುಂ ಸ್ಥೂಲಭದ್ರಾಚಾರ್ಯರುಮಂತು ಮೂವರುಂ ಸಿಂದುವಿಷಯಕ್ಕೆ ತಂತಮ್ಮ ಋಷಿಸಮುದಾಯಂ ಬೆರಸು ಪೋದೊಡಾ ನಾಡೊಳ್ ಮಾನಸರ್ ತಿಂಬಂತುಟಪ್ಪ ಮಹಾಘೋರಂ ಪಸವಾದೊಡಲ್ಲಿಯ ಶ್ರಾವಕರೆಲ್ಲಂ ನೆರೆದು ರಿಸಿಯರಲ್ಲಿಗೆ ವೋಗಿ ಇಂತೆಂದರ್ ಭಟಾರಾ ಲವಟುಗಳ ಕೈಯಲ್ ಪಗಲುಣಲುಮಡಲುಂ ಪೆಱಲಾಗ ಮೇಲ್ವಾಯ್ಗೆೞೆದು ಕೊಂಡುಂಬರ್ ಲೋಗರೆಲ್ಲಮವರ ಭಯಕ್ಕೆ ಪಗಲಡುಗೆಮಂ ಬಸುಟ್ಟಿರುಳಟ್ಟುಣಲ್ ತಗುಳ್ದರದಱಂ ನೀಮುಮಿಂದಿತ್ತಿರುಳ್ ಭೈಕ್ಷಭಾಜನಂಗಳಂ ಕೊಂಡುಪೋಗಿ ಶ್ರಾವಕರ ಮನೆಗಳಂ ತೊೞಲ್ದು ಭೈಕ್ಷಂ ಬೇಡಿಕೊಂಡು ಕೂೞನಿರುಳ್ ತಂದಿಟ್ಟು ಪಗಲುಣ್ಬುದೆಂದೊಡಂತೆಗೆಯ್ವಮೆಂದು ಇರುಳ್ ತೊೞಲ್ದು ಭೈಕ್ಷಮಂ ತಂದು ಮಡಗಿಟ್ಟು ಪಗಲುಣ್ಬೊರಾದರಿಂತೀ ಪಾಂಗಿನೊಳ್ ಕಾಲಂ ಸಲೆ ಮತ್ತೊಂದು ದಿವಸಮೊರ್ವ ನಿರ್ಗ್ರಂಥಯತಿ ಭೈಕ್ಷಭಾಜನಮಂ ಕೊಂಡು ಶ್ರಾವಕರ ಮನೆಗಳನಿರುಳ್ ಭೈಕ್ಷಂ ಬೇಡಿ ತೊೞಲುತ್ತಂ ಪೋಪರೊಂದು

ಆಚರಿಸಿದ್ದೀರಿ. ಇನ್ನು ನೀವು ಅದನ್ನುಉಣಬಾರದು. ದೇವತೆಗಳು ಮಾಡಿದ ಆಹಾರವನ್ನು ಋಷಿಗಳು ಉಣಬಾರದು” ಹೀಗೆ ಹೇಳಿ ಅವರನ್ನು ಪಡೆದು ಅವರಿಗೆ ಲೋಚು (ಕೂದಲು ಕೀಳುವುದು) ಕ್ರಿಯೆಯನ್ನು ಮಾಡಿ ವ್ರತ ಸ್ವೀಕಾರ ಮಾಡಿಸಿ ಪಡಿಕಮಣವನ್ನು (ಹಿಂದಿನ ಪಾಪಗಳಿಗೆ ಪಶ್ಚಾತ್ತಾಪ ಹೇಳಿಸುವುದು) ಹೇಳಿಸಿ, ಅವರನ್ನು ಕೂಡಿಕೊಂಡು ಉತ್ತರದೇಶಕ್ಕೆ ಪ್ರಯಾಣ ಮಾಡಿದರು. ಕೆಲವು ದಿವಸಗಳಲ್ಲಿ ಮಧ್ಯದೇಶಕ್ಕೆ ತಲಪಿದರು. ಅಲ್ಲಿ ಋಷಿ ಸಮೂಹದವರೆಲ್ಲರೂ ಉಪಸರ್ಗಗಳಿಲ್ಲದೆ ಇದ್ದರು. ಆಮೇಲೆ ಇತ್ತ ರಾಮಿಲಾಚಾರ್ಯರು ಸ್ಥೂಲಲಾಚಾರ್ಯರು ಸ್ಥೂಲಭದ್ರಾಚಾರ್ಯರು ಅಂತು ಈ ಮೂವರು ಸಿಂಧುದೇಶಕ್ಕೆ ತಮ್ಮತಮ್ಮ ಋಷಿಸಮೂಹವನ್ನು ಕೂಡಿಕೊಂಡು ಹೋದರಷ್ಟೆ. ಆ ಕಾಡಿನಲ್ಲಿ ಮನುಷ್ಯರು ಮನುಷ್ಯರನ್ನೇ ತಿಂದುಬಿಡತಕ್ಕಂತಹ ಅತಿ ಭಯಂಕರವಾದ ಕ್ಷಾಮ ತಲೆದೋರಿದ್ದಿತು. ಅಲ್ಲದ್ದ ಶ್ರಾವಕರೆಲ್ಲರೂ ಒಟ್ಟುಗೂಡಿ ಈ ಋಷಿಗಳ ಬಳಿಗೆ ಹೋಗಿ ಹೀಗೆಂದರು – “ಅನ್ಯದೇಶೀಯರಾದ ಕೆಟ್ಟವರಾದ ಇಲ್ಲಿಯ ಜನರೊಂದಿಗೆ ಹಗಲು ಹೊತ್ತನಲ್ಲಿ ಊಟಮಾಡಲೂ ಬಾರದು, ಅಡುಗೆ ಮಾಡಲೂ ಬಾರದು. ಮಾಡಿದರೆ, ಅವರು ಮೇಲೆ ಬಿದ್ದು ಎಳೆದು ತೆಗೆದುಕೊಂಡು ತಿಂದುಬಿಡುತ್ತಾರೆ. ಆದುದರಿಂದ ಜನರೆಲ್ಲರೂ ಅವರ ಭಯದಿಂದ ಹಗಲು ಅಡುಗೆ ಮಾಡುವುದನ್ನು ಬಿಟ್ಟು ರಾತ್ರಿ ಅಡುಗೆ ಮಾಡಿ ಉಣ್ಣಲು ತೊಡಗಿದ್ದಾರೆ. ಆದುದರಿಂದ ನೀವು ಇಂದಿನಿಂದ ರಾತ್ರಿ ವೇಳೆಯಲ್ಲಿ ಭಿಕ್ಷಾಪಾತ್ರೆಗಳನ್ನು ತೆಗೆದುಕೊಂಡು ಶ್ರಾವಕರ ( ಜಿನಧರ್ಮದಲ್ಲಿ ನಿಷ್ಠೆಯುಳ್ಳ ಗೃಹಸ್ಥರ) ಮನೆಗಳಿಗೆ ಸುತ್ತಾಡಿ ಭಿಕ್ಷೆ ಬೇಡಿಕೊಂಡು, ಅನ್ನವನ್ನು ರಾತ್ರಿಯ ವೇಳೆಯಲ್ಲಿ ತಂದು ಇಟ್ಟುಕೊಳ್ಳರಿ. ಅದನ್ನು ಹಗಲು ಊಟಮಾಡಿ” ಹೀಗೆ ಹೇಳಲು ಅವರು ‘ಹಾಗೆಯೇ ಮಾಡುವೆವು’ ಎಂದುಕೊಂಡು ರಾತ್ರಿಯಲ್ಲಿ ಸುತ್ತಾಡಿ ಭಿಕ್ಷೆಯನ್ನು ತಂದು ಇಟ್ಟು ಅದನ್ನು ಹಗಲು ಊಟಮಾಡುವವರಾದರು. ಈ ರೀತಿಯಲ್ಲಿ ಸ್ವಲ್ಪ ಕಾಲ ಕಳೆಯಿತು. ಆಮೇಲೆ

ಮನೆಯಂ ಪೊಕ್ಕುಂ ಬೈಕ್ಷಮಂ ಬೇಡಿದೊಡೆರ್ವಳ್ ಪೊಸಶ್ರಾವಕಿ ಬಸಿರ್ಪೆಂಡತಿ ವೇಳಾಸ್ವಮಿನಿಯೆಂಬೊಳ್ ಕರ್ದಿಂಗಳಿರುಳೊಳ್ ಕೞ್ತಲೆಯೊಳ್ ನಿರ್ಗ್ರಂಥಮಪ್ಪ ರೂಪಂ ಕಂಡು ಬೆರ್ಚಿದೊಡಾಕೆಗೆ ಬಸಿಱೞದತ್ತದಂ ಕಂಡು ಶ್ರಾವಕರೆಲ್ಲಂ ನೆರೆದು ರಿಸಿಯರಲ್ಲಿಗೆ ವೋಗಿ ಇಂತೆಂದರ್ ಭಟ್ಟಾರಾ ಕಾಲಮಪ್ಪೊಡೆ ಕೆಟ್ಟತ್ತೊಳ್ಳಿತಪ್ಪ ಕಾಲಮಾದಂದು ಪ್ರಾಯಶ್ಚಿತ್ತಂಗೊಂಡು ನಿಮ್ಮ ತಪಂಗಳೊಳ್ ನಿಲ್ಲಿಮೀಗಳೀ ಪಸವು ಕೞವನ್ನೆಗಂ ನೀಮುಮೆಡದ ಕೈಯನೆೞಲಿಕ್ಕಿಯರ್ಧಗಪ್ಪಡಮನೆಡದ ಮುಯ್ವಿನ ಮೇಗಿಕ್ಕಿ ಒಳಗೆ ನಿರ್ಗ್ರಂಥಮಪ್ಪ ರೂಪಂ ತಾಳ್ದಿ ಬಲದ ಕೈಯೊಳ್ ಭೈಕ್ಷದ ಭಾಜನಮಂ ಪಿಡಿದು ತೊೞಲ್ದು ಭೈಕ್ಷಮಂ ಬೇಡಿ ಮಡಗಿಟ್ಟು ಪಗಲುಣ್ಣಿಮೆಂದೊಡವರ್ಗಳುಮಂತೆ ಗೆಯ್ವಮೆಂದವರ ಪೇೞ್ದ ಪಾಂಗಿನೊಳ್ ನೆಗೞ್ದು ಪಸವಂ ನೀಗಿ ಕಾಲವೊಳ್ಳಿತ್ತಾದೊಡೆ ರಾಮಿಲಾಚಾರ್ಯರುಂ ಸ್ಥೂಲಾಚಾರ್ಯರುಂ ಸ್ಥೂಲಭದ್ರಾಚಾರ್ಯರುಮಂತು ಮೂವರುಂ ತಮತಮ್ಮ ಋಷಿಸಮುದಾಯಂ ಬೆರಸು ವಿಹಾರಿಸುತ್ತಂ ಮಧ್ಯದೇಶಕ್ಕೆ ರಿಸಿಯರ್ಕಲಿರ್ದಲ್ಲಿಗೆ ಬಂದೊಡೆ ವಿಶಾಖಾಚಾರ್ಯರ್ ಮೊದಲಾಗೊಡೆಯ ಆಚಾರ್ಯರ್ಕಳವರನಿಂತೆಂದರ್ ನೀಮೆಳ್ಲರುವ್ಮರ್ಧಗಪ್ಪಡಮಂ ಬಿಸುಟ್ಟು ನಿರ್ಗ್ರಂಥ ರೂಪುಮಂ ಕೈಕೊಂಡು ಬ್ರತಂಗಳನೇಱಸಿ ಪ್ರಯಶ್ಚಿತ್ತಂಗೊಂಡು ಪಡಿಕಮಣಂಗೇಳ್ದು ತಪದೊಳ್ ನಿಲ್ಲಿಮೆಂದೊಡಂ ತೆಗೆಯ್ವಮೆಂದು ರಾಮಿಲಾಚಾರ್ಯರುಂ ಸ್ಥೂಲಾಚಾರ್ಯರುಂ ತಂತಮ್ಮ ಋಷಿಸಮುದಾಯಂ ಬೆರಸು

ಒಂದು ದಿವಸ ಒಬ್ಬ ದಿಗಂಗರ ಸಂನ್ಯಾಸಿಗಳು ಭಿಕ್ಷಾಪಾತ್ರೆಯನ್ನು ಹಿಡಿದುಕೊಂಡು ಜೈನಗೃಹಸ್ಥರ ಮನೆಗಳಲ್ಲಿ ರಾತ್ರಿವೇಳೆ ಭಿಕ್ಷೆ ಬೇಡಿದರು. ಆಗ ಓರ್ವ ಗರ್ಭಿಣಿಯಾದ ಶ್ರಾವಕಿ ವೇಳಸ್ವಾಮಿನಿಯೆಂಬವಳು ಅಮಾವಾಸ್ಯೆಯ ಕತ್ತಲೆಯಲ್ಲಿ ಆ ಯತಿಯ ದಿಗಂಬರವಾಗಿರುವ (ಬಟ್ಟೆಬರೆಯಿಲ್ಲದ) ರೂಪವನ್ನು ಕಂಡು ಬೆಚ್ಚಿ ಬೀಳಲು, ಆಕೆಗೆ ಗರ್ಭಸ್ರಾವವಾಯಿತು. ಅದನ್ನು ಕಂಡು ಶ್ರಾವಕರೆಲ್ಲ ಒಟ್ಟಾಗಿ ಋಷಿಗಳಲ್ಲಿಗೆ ಹೋಗಿ ಹೀಗೆಂದರು – “ಪೂಜ್ಯರೇ, ಕಾಲವಾದರೋ ಕೆಟ್ಟುಹೋಗಿದೆ. ಒಳ್ಳೆಯ ಕಾಲ ಬಂದಾಗ ಪ್ರಾಯಶ್ಚಿತ್ತ ಮಾಡಿಕೊಂಡು ನಿಮ್ಮ ತಪಸ್ಸನ್ನು ಆಚರಿಸಿರಿ. ಈ ಬರಗಾಲ ಮುಗಿಯುವವರೆಗೂ ನೀವು ಎಡಗೈಯನ್ನು ಜೋಲುವಂತೆ ಬಿಟ್ಟು ಅರೆಬಟ್ಟೆಯನ್ನು ಎಡದ ಹೆಗಲ ಮೇಲೆ ಹಾಕಿ ಒಳಗೆ ದಿಗಂಬರ ರೂಪವನ್ನು ತಾಳಿ, ಬಲದ ಕೈಯಲ್ಲಿ ಭಿಕ್ಷಾಪಾತ್ರೆಯನ್ನು ಹಿಡಿದುಕೊಂಡು ಸುತ್ತಾಡುತ್ತ ಭಿಕ್ಷೆಯನ್ನು ಬೇಡಿ, ಅದನ್ನು ಹಾಗೆಯೇ ಮಾಡೋಣ” ಎಂದು ಹೇಳಿ, ಅವರು ಹೇಳಿದ ರೀತಿಯಲ್ಲೇ ಮಾಡಿದರು. ಬರಗಾಲ ಕಳೆದು ಒಳ್ಳೆಯ ಕಾಲ ಬರಲು, ರಾಮಿಲಾಚಾರ್ಯರು ಸ್ಥೂಲಾಚಾರ್ಯರು ಸ್ಥೂಲಭದ್ರಾಚಾರ್ಯರು – ಅಚಿತು ಮೂರು ಮಂದಿಯೂ ತಮ್ಮ ತಮ್ಮ ಋಷಿಸಮೂಹವನ್ನು ಕೂಡಿಕೊಂಡು ಸಂಚಾರ ಮಾಡುತ್ತ ಮಧ್ಯದೇಶದಲ್ಲಿ ಋಷಿಗಳಿದ್ದಲ್ಲಿಗೆ ಬಂದರು. ಆಗ ವಿಶಾಖಾಚಾರ್ಯರು ಮೊದಲಾಗಿ ಉಳ್ಳ ಆಚಾರ್ಯರುಗಳು ಅವರೊಡನೆ ಹೀಗೆಂದರು – “ನೀವೆಲ್ಲರೂ ಅರೆಬಟ್ಟಿಯನ್ನು ಬಿಸಾಡಿ (ಅರೆಬತ್ತಲೆಯನ್ನು ಇಟ್ಟುಕೊಳ್ಳದೆ) ಪ್ರರ್ತಿಯಾಗಿ ದಿಗಂಬರತ್ವವನ್ನು ಸ್ವೀಕರಿಸಿಕೊಳ್ಳಿ. ವ್ರತಗಳನ್ನು ಧರಿಸಿ ಪ್ರಾಯಶ್ಚಿತ್ತ ಕೈಕೊಂಡು

ವಿಶಾಖಾಚಾರ್ಯರ ಪಕ್ಕದೆ ಅರ್ಧಗಪ್ಪಡಮಂ ಬಿಸುಟ್ಟು ಪಡಿಕಮಣಂಗೇಳ್ದು ಪ್ರಾಯಶ್ಚಿತ್ತಂ ಗೊಂಡು ಯಥೋಕ್ತಮಪ್ಪ ಚಾರಿತ್ರದೊಳ್ ನಿಂದರ್ ಸ್ಥೂಲಭದ್ರಾಚಾರ್ಯರ್ ಮೊದಲಾಗಿ ಕೆಲಂಬರ್ ಕೊಳಲೊಲ್ಲದವರ್ ಜಿನಕಲ್ಪಂ ಸ್ಥವಿರಕಲ್ಪಮೆಂದೆರಡು ಭೇದಂ ಮಾಡಿ ಅರ್ಧಗಪ್ಪಡದ ತೀರ್ಥಮಂ ನೆಗೞದರ್ ಇಂತರ್ಧಗಪ್ಪಡದ ತೀರ್ಥ ಪಾರಂಪರ್ಯದಿಂದಂ ಸುರಥಮೆಂಬುದು ನಾಡಲ್ಲಿ ವಳಭಿಯೆಂಬುದು ಪೊೞಲದನಾಳ್ಪೊಂ ವಪ್ರಪಾಳನೆಂಬೊನರಸನ ರಾಜ್ಯಂಬರೆಗಮರ್ಧಗಪ್ಪಡದ ತೀರ್ಥಂ ನೆಗೞ್ದತ್ತು ಮತ್ತಂ ವಪ್ರಪಾಳನೆಂಬರಸಂ ಮಿಥ್ಯಾದೃಷ್ಟಿಯಾತನ ಮಹಾದೇವಿ ಸ್ವಾಮಿನಿಯೆಂಬೊಳರ್ಧಗಪ್ಪಡದ ತೀರ್ಥದ ತಪಸ್ವಿಯರ ಶ್ರಾವಕ್ಕಾಗಿ ಇಂತು ಕಾಲಂ ಸಲೆ ಮತ್ತೊಂದು ದಿವಸಂ ನಡುವಗಲರಸನುಂ ಮಹಾದೇವಿಯುಮಿಂತಿರ್ವರುಂ ಪ್ರಾಸಾದದ ಮೇಗಿರ್ದು ಗವಾಕ್ಷ ಪಾಳಾಂತರಂಗಳಿಂದಂ ದಿಶಾವಲೋಕನಂಗೆಯ್ಯುತ್ತಿರ್ಪನ್ನೆಗವ್ಮರ್ಧಗಪ್ಪಡದ ಸಂಘಂ ಭೈಕ್ಷಂ ಕಾರಣಮಾಗಿಯರಮನೆಯಂ ಪುಗುವುದನರಸಂ ಕಂಡರಸಿಯನಿಂತೆಂದನೆಲೆ ಮಹಾದೇವಿ ಈ ನಿನ್ನರ್ಧಗಪ್ಪಡದ ಯತಿಯರ ಧರ್ಮಮೊಳ್ಳಿತಲ್ತಮರುಟ್ಟರುಮಲ್ಲರ್ ಬತ್ತಲೆಗರುಮಲ್ಲರೆಂದು ನುಡಿದು ಮತ್ತೂಂದು ದಿವಸವ್ಮರ್ಧಗಪ್ಪಡದ ಸಂಗಮನರಸಂ ಬೞಯಟ್ಟಿವರಿಸಿ ಇಂತೆಂದಂ ನೀವ್ಮರ್ಧಗಪ್ಪಡಮಂ ಬಿಸುಟು ನಿರ್ಗ್ರಂಥಮಪ್ಪ ರಿಸಿ ರೂಪಂ ಕೈಕೊಂಡು ಬೞಯೆ ತಪಂಗೆಯ್ವುದೆಂದೊಡವರೊಲ್ಲದಿರ್ದೊಡರಸಂ ಮತ್ತಮಿಂತೆಂದಂ ನಿರ್ಗ್ರಂಥಮಪ್ಪರೂಪಂ ಕೈಕೊಳಲೊಲ್ಲಿರಪ್ರ್ಪೆಡರ್ಧಗಪ್ಪಡಮಂ ಬಿಸುಟ್ಟು ಪೞಯಮ ಸಯ್ತುಟ್ಟುಕೊಂಡಿರಿಮೆಂದೊಡಂತೆ ಗೆಯ್ವೆಮೆಂದಾ ದಿವಸಂ ತಗುಳ್ದು ಬಡಗನಾಡವರ್ ವಪ್ರಪಾಳನ

ಪಡಿಕಮಣವನ್ನು (ದೋಷಗಳಿಗೆ ಪಶ್ಚಾತ್ತಾಪವನ್ನು) ಮಾಡಿ ತಪೋನಿರತರಾಗಿರಿ”. ಹೀಗೆನ್ನಲು ಅದಕ್ಕೆ ಒಪ್ಪಿ ರಾಮಿಲಾಚಾರ್ಯರೂ ಸ್ಥೂಲಾಚಾರ್ಯರೂ ತಮ್ಮ ತಮ್ಮ ಋಷಿಸಮೂಹವನ್ನು ಕೂಡಿಕೊಂಡು ವಿಶಾಖಾಚಾರ್ಯರ ಬಳಿಯಲ್ಲಿ ತಮ್ಮ ಅರೆಬಟ್ಟೆ (ಅರ್ಧಮಾತ್ರ ವಸಧಾರಣೆ)ಯನ್ನು ಬಿಟ್ಟರು. ಪಡಿಕಮಣವನ್ನು ಕೇಳಿ ಪ್ರಾಯಶ್ಚಿತ್ತವನ್ನು ಮಾಡಿ ಯೋಗ್ಯವಾದಂತಹ ಸಮ್ಯಕ್ ಚಾರಿತ್ರವನ್ನುಳ್ಳವರಾದರು. ಸ್ಥೂಲಭದ್ರಾಚಾರ್ಯರೇ ಮೊದಲಾದ ಕೆಲವುರ ದಿಗಂಬರತ್ವವನ್ನು ಸ್ವೀಕರಿಸಲು ಒಪ್ಪದವರು, ಜಿನಕಲ್ಪ, ಸ್ಥವಿರಕಲ್ಪ – ಎಂದು ಎರಡು ಪ್ರಭೇದಗಳನ್ನು ಮಾಡಿ ಅರೆಬಟ್ಟೆಯನ್ನು ಧರಿಸುವ ಸಂಪ್ರದಾಯವನ್ನು ಮಾಡಿದರು. ಈ ಅರೆಬಟ್ಟೆಯ ಸಂಪ್ರದಾಯ ವಿಸ್ತಾರವಾಗತೊಡಗಿತು. ಸ್ಮರಥಿ ಎಂಬ ನಾಡಿವಲ್ಲಿ ವಳಭಿ ಎಂಬ ಪಟ್ಟಣವನ್ನು ವಪ್ರಪಾಳನೆಂಬ ರಾಜನುಆಳುತ್ತಿದ್ದನು. ಅವನ ರಾಜ್ಯದವರೆಗೂ ಅರೆಬಟ್ಟೆಯ ಸಂಪ್ರದಾಯವು ವ್ಯಾಪಿಸಿಕೊಂಡಿತು. ವಪ್ರಪಾಳರಾಜನು ಮಿಥ್ಯಾದೃಷ್ಟಿ(ಧರ್ಮದಲ್ಲಿ ನಂಬಿದೆಯಿಲ್ಲದವನು). ಯತಿಗಳ ಬೋಧನೆಯನ್ನು ಕೇಳುತ್ತಿದ್ದಳು. ಹೀಗೆ ಸ್ವಲ್ಪ ಕಾಲ ಕಳೆಯಿತು. ಆಮೇಲೆ ಒಂದು ದಿವಸ ನಡುಹಗಲಿನ ವೇಳೆ ರಾಜ ಮತ್ತು ರಾಣಿ ಇಬ್ಬರೂ ತಮ್ಮಅರಮನೆಯ ಉಪ್ಪರಿಗೆಯಲ್ಲಿದ್ದರು. ಅವರು ಕಿಟಕಿಯ ಬಲೆಯ ಒಳಗಿನಿಂದ ದಿಕ್ಕುಗಳ ಕಡೆನೋಡುತ್ತಿದ್ದಾಗ ಅರೆಬಟ್ಟೆಯುಳ್ಳ ಸಂಘ ಭಿಕ್ಷೆಗಾಗಿ ಅರಮನೆಯೊಳಗೆ ಬಂದುದನ್ನು ಕಂಡರು. ಆಗ ರಾಜನು ರಾಣಿಯೊಡನೆ – “ಎಲೈ ಮಹಾದೇವಿ, ಈ ನಿನ್ನ ಅರೆಬಟ್ಟೆಯ ಮುನಿಗಳ ಧರ್ಮ ಒಳ್ಳೆಯದಲ್ಲ. ಇವರು ವಸ್ತ್ರಧರಿಸಿದವರೂ ಅಲ್ಲ ನಗ್ನರೂ ಅಲ್ಲ” ಎಂದು ನುಡಿದನು. ಆಮೇಲೆ ಒಂದು ದಿವಸ

ರಾಜ್ಯದೊಳರ್ಧಗಪ್ಪಡಮಂ ಬಿಸುಟ್ಟು ಕಚ್ಚೆಗಟ್ಟದೆ ಸಯ್ತುಡುವರುಂ ಕುಱವಡವಂ ಪೊದೆವರುಮಾದೊರಲ್ಲಿಂದಿತ್ತ ಕಂಬಳತೀರ್ಥಮೆಂಬುದಾದವರುಂ ಶ್ವೇತಪಟರೆಂಬೊರಾದರ್ ದಕ್ಷಿಣಾಪಥದೊಳ್ ಸಾಮಳಿಪುತ್ರನೆಂಬರಸನಪ್ಪನವರಯೆ ಸಚಿತತಿಯ ಶ್ವೇತಭಿಕ್ಷುಜಾಪುಲಿ ಸಂಘಕ್ಕೆ ಮೊದಲಿಗನಾದಂ ಮತ್ತಿತ್ತ ಸಂಪ್ರತಿಚಂದ್ರಗುಪ್ತಮುನಿಯುಮುಗ್ರೋಗ್ರ ತಪಶ್ಚರನಂಗೆಯ್ದು ಸಂನ್ಯಸನವಿಧಾನದಿಂದಂ ಪರಮ ಶುದ್ಧ ಸಹಜ ರತ್ನತ್ರಯಮಂ ಸಾಸಿ ಮುಡಿಪಿ ಬ್ರಹ್ಮಕಲ್ಪಕೊಳ್ ಪತ್ತುಸಾಗರೋಪಮಾಯುಷ್ಯಮನೊಡೆಯೊಂ ಶ್ರೀದರನೆಂಬೊ ದೇವನಾಗಿ ಪುಟ್ಟಿದೊನಿಂತಿದು ಭದ್ರಬಾಹು ಭಟಾರರ ಕಥೆ ಪೇೞ್ದುದು. ಪೆಱರುಂ ಸಂನ್ಯಸನಂ ಗೆಯ್ದೊರೆಲ್ಲಂ ಭದ್ರಬಾಹು ಭಟಾರಕರ ಮನದೆ ಬUದವರೆಂತು ಪಸಿವುಂ ನೀರೞ್ಕೆ ಶೀತಮುಷ*ದಂಸ ಮಸಕಾದಿ ಪರೀಷಹಂಗಳಂ ಸೈರಿಸಿ ಪರಮಶುದ್ಧ ರತ್ನತ್ರಯಮಂ ಸಾಸಿದರಂತೆ ಸಂನ್ಯಸನಂಗೆಯ್ದು ಭವ್ಯರ್ಕಳುಂ ಪಸಿವುಂ ನಿರೞ್ಕೆ ಮೊದಲಾಗೊಡೆಯ ಪರೀಷಹಂಗಳಂ ಸೈರಿಸಿ ಸಮಾ ಮರಣದಿಂ ಮುಡಿಪಿ ಪರಮ ಶುದ್ಧಸಹಜ ರತ್ನತ್ರಯಂಗಳಂ ಸಾಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ

ರಾಜನು ಅರೆಬಟ್ಟೆಯ ಯತಿ ಸಂಘವನ್ನು ಕರೆಕಳುಹಿಸಿ ಬರಮಾಡಿ, ಹೀಗೆಂದನು – “ನೀವು ಅರೆಬಟ್ಟೆಯನ್ನು ಬಿಸಾಡಿ, ದಿಗಂಗಬರ ಯತಿ ಸ್ವರೂಪವನ್ನು ಕೈಕೊಂಡು, ಅನಂತರ ತಪಸ್ಸನ್ನುಅಚರಿಸಿರಿ “. ಹೀಗೆ ಹೇಳಿದಾಗ ಅವರು ಒಪ್ಪಲಿಲ್ಲ. ರಾಜನು ಆಮೇಲೆ ಅವರೊಡನೆ – “ನೀವು ಇಡೀ ಬತ್ತಲೆಯಗಿರುವ ರೂಪವನ್ನು ಸ್ವೀಕರಿಸಿಲು ಒಪ್ಪುವುದಿಲ್ಲವಾದರೆ ಅರ್ಧವಸ್ತ್ರ ಧಾರಣೆಯನ್ನು ಬಿಸಾಡಿ ವಸ್ತ್ರವನು ಉಟ್ಟುಕೊಂಡಿರಿ” ಎಂದು ಹೇಳಿದನು. “ಹಾಗೆಯೆ ಮಾಡುವೆವು” ಎಂದುಕೊಂಡು, ಆ ದಿನದಿಂದ ಹಿಡಿದು ಉತ್ತರ ದೇಶದವರು ವಪ್ರಪಾಳನ ರಾಜ್ಯದಲ್ಲಿ ಅರೆಬಟ್ಟೆ ಉಡುವುದನ್ನು ಬಿಟ್ಟುಕಚ್ಚೆ ಹಾಕದೆ ಸರಿಯಾಗಿ ಧರಿಸುವವರೂ ಚಿಕ್ಕ ಮಡಿಬಟ್ಟೆಯನ್ನು ಹೊದೆಯುವವರೂ ಆದರು. ಅಲ್ಲಿಂದೀಚೆಗೆ ಕಂಬಳಿ ಹೊದೆಯುವ ಶಾಖೆಯೂ (ಸಂಪ್ರದಾಯವೂ) ಆಯಿತು. ಆ ಶಾಖೆಯವರು ಶ್ವೇತಾಂಬರರಾದರು. ದಕ್ಷಿಣ ದೇಶದಲ್ಲಿ ಸಾಮಳಿ ಪುತ್ರನೆಂಬ ರಾಜನು ಅವರದೇ ಪರಂಪರೆಗೆ ಸೇರಿದ ಶ್ವೇತಾಂಬರಯತಿಗಳ ಜಾಪುಲಿ ಎಂಬ ನಗರದ ಸಂಘಕ್ಕೆ ಮೂಲಪುರುಷನಾದನು. ಇತ್ತ ಸಂಪ್ರತಿ ಚಂದ್ರಗುಪ್ತಮುನಿ ಅತ್ಯಂತ ಘೋರವಾದ ತಪಸ್ಸನ್ನು ಆಚರಿಸಿ ಸಂನ್ಯಾಸ ಕ್ರಮದಿಂದ ಅತ್ಯಂತ ಪರಿಶುದ್ಧವೂ ಸಹಜವೂ ಆದ ಸಮ್ಯಗ್ದರ್ಶನದ ಜ್ಞಾನ ಚಾರಿತ್ರಗಳೆಂಬ ರತ್ನತ್ರಯವನ್ನು ಪಡೆದು, ಸತ್ತು ಬ್ರಹ್ಮಕಲ್ಪದಲ್ಲಿ ಹತ್ತು ಸಾಗರದಷ್ಟು ಆಯುಷ್ಯವಿರತಕ್ಕ ಶ್ರೀಖರನೆಂಬ ದೇವನಾಗಿ ಹುಟ್ಟಿದನು. ಹೀಗೆ ಈ ಭದ್ರಬಾಹು ಋಷಿಗಳ ಕಥೆ ಹೇಳಲ್ಪಟ್ಟಿತು. ಸಂನ್ಯಾಸವನ್ನು ಕೈಗೊಂಡ ಬೇರೆಯವರು ಕೂಡ, ಭದ್ರಬಾಹುಋಷಿಗಳನ್ನು ಮನಸ್ಸಿನಲ್ಲಿ ಧ್ಯಾನಿಸಿಕೊಂಡು, ಹಸಿವು, ಬಾಯಾರಿಕೆ, ಶೀತ, ಸೊಳ್ಳೆ, ನೊಣ ಮುಂತಾದವುಗಳಿಂದ ಆಗತಕ್ಕ ಬಾಧೆಯನ್ನು ಸಹಿಸಿ, ಅತ್ಯಂತ ಪರಿಶುದ್ಧವಾದ ರತ್ನತ್ರಯವನ್ನು ಪಡೆದರು. ಹಾಗೆಯೇ ಸಂನ್ಯಾಸವನ್ನು ಮಾಡಿದ ಪುಣ್ಯವಂತರು ಹಸಿವು ಬಾಯಾರಿಕೆ ಮೊದಲಾಗಿ ಉಳ್ಳ ತೊಂದರೆಗಳನ್ನು ಸಹಿಸಿ, ಸಮಾ ಸ್ಥಿತಿಯಲ್ಲಿ ಸತ್ತು ಅತ್ಯಂತ ಪರಿಶುದ್ಧವೂ ಸಹಜವೂ ಆದ ರತ್ನತ್ರಯಗಳನು ಸಾಸಿ ಸ್ವರ್ಗ – ಮೋಕ್ಷ ಸುಖಗಳನ್ನು ಪಡೆಯಲಿ !