ಭದ್ರಬಾಹು ಭಟ್ಟಾರರ ಕಥೆಯಂ ಪೇೞ್ವೆಂ:

ಗಾಹೆ || ಓಮೋದರಿ ಏ ಘೋರಾ ಎ ಭದ್ದಬಾಹೂ ಅಸಂಕಿಲಿಟ್ಟಮದೀ
ಘೋರಾ ಎ ತಿಗಿಂಚ್ಛಾ ಏ ಪಡಿವಣ್ಣೋ ಉತ್ತಮಂ ಅಟ್ಟಂ ||

* ಓಮೋದರಿ ಏ – ಅರೆಉಣಿಸಿನಿಂದಂ, ಘೋರಾ ಎ – ಆದಮಾನುಂ ಕಡಿದಪ್ಪುದ ೞಂದಂ, ಭದ್ದಬಾಹೂ – ಭದ್ರಬಾಹು ಭಟ್ಟಾರರ್, ಅಸಂಕಿಲಿಟ್ಠಮದೀ – ಸಂಕ್ಲೇಶ ಪರಿಣಾಮಮಿಲ್ಲದೊನಾಗಿ, ಘೋರಾ ಎ – – ಕಡಿದಪ್ಪ, ತಿಗಿಂಚ್ಛಾ ಏ – ಪಸಿವಿನಿಂದಂ, ಪಡಿಮಣ್ಣೋ – ಪೊರ್ದಿದೊಂ, ಉತ್ತಮಂ ಅಟ್ಠಂ – ಮಿಕ್ಕದರ್ಶನಜ್ಞಾನ ಚಾರಿತ್ರಾರಾಧನೆಯಂ*

ಅದೆಂತೆಂದೊಡೆ: ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಪುರವರ್ಧನಮೆಂಬುದು ನಾಡಲ್ಲಿ ಕೌಂಡಿನೀನಗರಮೆಂಬುದು ಪೊೞಲದನಾಳ್ರ್ವೆಂ ಪದ್ಮರಥನೆಂಬೊನರಸನಾತನ ಮಹಾದೇವಿ ಪದ್ಮಶ್ರೀಯೆಂಬೊಳಂತವರ್ಗಳಿಷ್ಟವಿಷಯ ಕಾಮ ಭೋಗಂಗಳನನುಭವಿಸುತ್ತಿರೆ ಮತ್ತಾ ಅರಸನ ಪುರೋಹಿತಂ ನಾಲ್ಕು ವೇದಮುಮಾಱಂಗಮುಂ ಪದಿನೆಂಟು ಧರ್ಮಶಾಸ್ತ್ರಂಗಳುಮಂ ಬಲ್ಲೊಂ ಸೋಮಶರ್ಮನೆಂಬೊಂ ಪಾರ್ವನಾತನ ಭಾರ್ಯೆ ಪ್ರತ್ಯಕ್ಷ ಶ್ರೀಯಾದೇವತೆಯೆನೆ ಪೋಲ್ವ ಸೋಮಶ್ರೀಯೆಂಬೊಳಾಯಿರ್ವರ್ಗ್ಗಂ ಮಗಂ ಪುಟ್ಟಿದೊಂ ತಾಯ್ಗಂ ತಂದೆಗಮೆಲ್ಲಾ ನಂಟರ್ಗೆಯುತ್ಸಾಹಮುಂ ಸುಖಮುಂ ವಿಭವಮುಮಂ ಪಡೆವುದಱಂದಮಾ ಕೂಸಿಂಗೆ ಭದ್ರಬಾಹುವೆಂಬ ಪೆಸರನೆಲ್ಲರುಂ ನೆರೆದಿಟ್ಟೊಡಾತನುಂ ಬಿದಿಗೆಯ ಚಂದ್ರನಂತೆ ಕ್ರಮಕ್ರಮದಿಂ ಸುಖದಿಂ ಬಳೆದು ಮುಂಜಿಗಟ್ಟುವ ಪ್ರಾಯಮಾದೊಡೆ ಪ್ರಶಸ್ತ ದಿವಸ ವಾರ ನಕ್ಷತ್ರ ಮುಹೂರ್ತದೊಳ್

ಭದ್ರಬಾಹುಭಟ್ಟಾರರ (ಋಷಿಗಳ) ಕಥೆಯನ್ನು ಹೇಳುವೆನು: (ಭದ್ರಬಾಹು ಋಷಿ ಅರೆ ಉಣಿಸಿನಿಂದ ಅತ್ಯಂತ ಕಠಿನವಾದ ಕಷ್ಟದ ಪರಿಣಾಮವಿಲ್ಲದೆ ಅಂದರೆ ಪರಿಣಾಮವನ್ನು ಸಹಿಸಿ ತೀವ್ರವಾದ ಹಸಿವಿನಿಂದಲೇ ಶ್ರೇಷ್ಠವಾದ ದರ್ಶನ – ಜ್ಞಾನ – ಚಾರಿತ್ರಗಳ ಆರಾಧನೆಯನ್ನು ಮಾಡಿದನು.) ಅದು ಹೇಗೆಂದರೆ : ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಪುರವರ್ಧನವೆಂಬ ನಾಡಿದೆ. ಅಲ್ಲಿ ಕೌಂಜಿನೀನಗರವೆಂಬ ಪಟ್ಟಣವನ್ನು ಪದ್ಮರಥನೆಂಬ ರಾಜನು ಆಳುತ್ತಿದ್ದನು. ಅವನ ಮಹಾರಾಣಿ ಪದ್ಮಶ್ರೀ ಎಂಬುವಳು. ಅಂತು ಅವರು ಇಷ್ಟವಿಷಯದ ಕಾಮಸುಖಗಳನ್ನು ಅನುಭವಿಸುತ್ತಿದ್ದರು. ಆ ರಾಜನ ಪುರೋಹಿತನಾದ ಸೋಮಶರ್ಮನೆಂಬ ಬ್ರಾಹ್ಮಣನು ನಾಲ್ಕು ವೇದಗಳನ್ನೂ ಆರು ವೇದಾಂಗಗಳನ್ನೂ ಹದಿನೆಂಟು ಧರ್ಮಶಾಸಗಳನ್ನೂ ಬಲ್ಲವನಾಗಿದ್ದನು. ಅವನ ಹೆಂಡತಿಯಾದ ಸೋಮಶ್ರೀ ಎಂಬುವಳು ಪ್ರತ್ಯಕ್ಷ ಲಕ್ಷ್ಮೀದೇವಿಯನ್ನೇ ಹೋಲುತ್ತಿದ್ದಳು. ಆ ಇಬ್ಬರಿಗೆ ಒಬ್ಬ ಮಗನು ಹುಟ್ಟಿದನು. ತಾಯಿಗೆ, ತಂದೆಗೆ ಮತ್ತು ಎಲ್ಲ ನಂಟರಿಗೆ ಉತ್ಸಾಹವನ್ನೂ ಸುಖವನ್ನೂ ಐಶ್ವರ್ಯವನ್ನೂ ಉಂಟುಮಾಡುವವನೆಂಬ ಅರ್ಥದಿಂದ ಎಲ್ಲರೂ ಕೂಡಿ ಆ ಮಗುವಿಗೆ ಭದ್ರಬಾಹು ಎಂಬ ಹೆಸರನ್ನಿಟ್ಟರು. ಅವನು ಬಿದಿಗೆಯ ಚಂದ್ರನ ಹಾಗೆ ಕ್ರಮಕ್ರಮವಾಗಿ ಸುಖದಿಂದ ಬೆಳೆದನು. ಉಪನಯನ ಮಾಡುವ ಪ್ರಾಯವಾಗಲು ಉತ್ತಮವಾದ ದಿವಸ, ವಾರ, ನಕ್ಷತ್ರ, ಮುಹೂರ್ತದಲ್ಲಿ ಉಪನಯನ

ಮುಂಜಿಬಂಧನಕ್ರಿಯೆಯಂ ಮಾಡಿದ ಬಱಕ್ಕೆ ತನ್ನೋರಗೆಗಳಪ್ಪ ಪಲಂಬರ್ ಮಾಣಿಗಳ್ವೆರಸು ಪೊಱವೊೞಲೊಳ್ ಬಟ್ಟಾಡುತ್ತಿರೆ ಭದ್ರಬಾಹುವೆಂಬ ಮಾಣಿಯೊಂದುಬಟ್ಟಿನ ಮೇಗೆ ಪದಿನಾಲ್ಕು ಬಟ್ಟನೊಂದೊಂದಱ ಮೇಗೋಳಿಯೊಳಿಟ್ಟಾಡುತ್ತಿರ್ಪನ್ನೆಗಂ ಇತ್ತ ವರ್ಧಮಾನ ಭಟ್ಟಾರರ್ ಮೋಕ್ಷಕ್ಷೆವೋದಿಂ ಬೞಕ್ಕೆ ಚತುರ್ದಶ ಪೂರ್ವಧಾರಿಗಳಪ್ಪ ಶ್ರುತಕೇವಳಿಗಳ್ ನಾಲ್ಕನೆಯವರ್ ಗೋವರ್ಧನರೆಂಬ ಭಟಾರರುಜ್ಜಯಂತಮಂ ವಂದಿಸಲೆಂದು ವಿಹಾರಿಸುತ್ತುಂ ಬರ್ಪೊರಾ ಕೌಂಡಿನೀ ನಗರಕ್ಕೆವಂದು ಪೊಱವೊೞಲೊಳೊಂದು ಬಟ್ಟಿನ ಮೇಗೆ ಪದಿನಾಲ್ಕುಂ ಬಟ್ಟನೊಂದೊಂದಱ ಮೇಗೋಳಿಯೊಳಿಟ್ಟಾಡುತ್ತಿರ್ಪ್ಪ ಭದ್ರಬಾಹುಮಾಣಿಯಂ ಗೋವರ್ಧನ ಭಟ್ಟಾರರ್ ಪಿರಿದುಂ ಬೇಗಂ ನೋಡುತ್ತಿರ್ದಿಂತೆಂದುದ್ದೇಶಂ ಗೊಯ್ದೊರೀತನೆಮ್ಮಿಂ ಬೞಕ್ಕೆ ಚತುರ್ದಶಪೂರ್ವಧಾರಿಯಪ್ಪ ಮಹಾತ್ಮ್ಯಮನೊಡೆಯೊಂ ಭದ್ರಬಾಹು ಭಟಾರರೆಂಬೊರಪ್ಪೊರೆಂದು ಬಗೆದಾತನನವರ ಮನೆಗೊಡಗೊಂಡು ಪೋಗಿಯವರ ತಾಯ್ತಂದೆಗಮಿಂತೆಂದರೀತನನೆಮಗೊಪ್ಪಿಸಿಮೆಲ್ಲಾ ಶಾಸ್ತ್ರಂಗಳುಮಂ ಕಲ್ಪಿಸಿ ಪಂಡಿತನಂ ಮಾಡಿ ನಿಮಗೊಪ್ಪಿಸುವೊಮೆಂದೊಡವರುಮಂತೆಗೆಯ್ಯಿಮೆಂದೊಡಾತನನೊಡಗೊಂಡು ಪೋಗಿ ಕೆಲವು ದಿವಸದಿಂದೊಳಗೆ ವ್ಯಾಕರಣಂ ಪ್ರಮಾಣಂ ಛಂದಮಲಂಕಾರ ನಿಘಂಟು ಕಾವ್ಯ ನಾಟಕಂ ಮೊದಲಾಗೊಡೆಯ ಲೋಕದೊಳುಳ್ಳ ಶಾಸ್ತ್ರಂಗಳೆಲ್ಲಮಂ ಕಲ್ಪಿಸಿದೊಡಗಮ

ಸಂಸ್ಕಾರವನ್ನು ಮಾಡಿದರು. ಆಮೇಲೆ, ತನ್ನ ಸಂಗಡಿಗರಾದ ಹಲವರು ಬ್ರಹ್ಮಚಾರಿಗಳನ್ನು ಕೂಡಿಕೊಂಡು ಪಟ್ಟಣದ ಹೊರಗೆ ಬಿಲ್ಲೆಯಾಟವನ್ನು ಆಡುತ್ತಿದ್ದಾಗ, ಭದ್ರಬಾಹುವೆಂಬ ವಟು ಒಂದು ಬಿಲ್ಲೆಯ ಮೇಲೆ ಒಂದೊಂದರಂತೆ ಮೇಲೆ ಮೇಲೆ ಹದಿನಾಲ್ಕು ಬಿಲ್ಲೆಗಳನ್ನು ಸಾಲಾಗಿಟ್ಟು ಆಡುತ್ತದ್ದನು. ಇತ್ತ ವರ್ಧಮಾನ ತೀರ್ಥಂಕರರು ಮೋಕ್ಷಕ್ಕೆ ಹೋದ ಮೇಲೆ ಜೈನಧರ್ಮಶಾಸ್ತ್ರದ ಹದಿನಾಲ್ಕು ಪೂರ್ವಗ್ರಂಥಗಳನ್ನು ಬಲ್ಲವರಾದ, ಜೈನಾಗಮದ ಪರಿಪೂರ್ಣ ಜ್ಞಾನವುಳ್ಳವರಾದ, ವರ್ಧಮಾನರಿಂದ ನಾಲ್ಕನೆಯವರಾದ ಗೋವರ್ಧನರೆಂಬ ಋಷಿಗಳೂ ಉಜ್ಜಯಂತವೆಂಬ ಪರ್ವತನ್ನು ವಂದಿಸುವುದಕ್ಕಾಗಿ ಸಂಚಾರಮಾಡುತ್ತ ಬರುತ್ತಿದ್ದರು. ಅವರು ಕೌಂಡಿನೀನಗರಕ್ಕೆ ಬಂದು ಬಿಲ್ಲೆಯ ಮೇಲೆ ಇನ್ನೊಂದರಂತೆ ಹದಿನಾಲ್ಕು ಬಿಲ್ಲೆಗಳನ್ನು ಸಾಲಿನಲ್ಲಿ ಇಟ್ಟು ಆಡುತ್ತಿರುವುದನ್ನು ಕಂಡರು. ಅವರು ಭದ್ರಬಾಹು ಮಾಣಿಯನ್ನು ಬಹಳ ಹೊತ್ತು ನೋಡಿ ತಮ್ಮ ಮನಸ್ಸಿನಲ್ಲಿಯೇ ಹೀಗೆ ಹೇಳಿಕೊಂಡರು – “ಈತನು ನಮ್ಮ ನಂತರದಲ್ಲಿ ಹದಿನಾಲ್ಕು ಪೂರ್ವಗ್ರಂಥಗಳನ್ನು ಬಲ್ಲ ಮಾಹಾತ್ಮ್ಯವನ್ನುಳ್ಳ ಭದ್ರಬಾಹುವೆಂಬ ಮಹರ್ಷಿಯಾಗಲಿರುವನು”. ಹೀಗೆ ಭಾವಿಸಿ, ಆ ಋಷಿಗಳು ಭದ್ರಬಾಹುವನ್ನು ಕೂಡಿಕೊಂಡು ಅವನ ಮನೆಗೆ ಹೋಗಿ ಅವನ ತಾಯಿತಂದೆಯವರಿಗೆ ಹೀಗೆ ಹೇಳಿದರು – “ಈತನನ್ನು ನಮಗೆ ಕೊಡಿರಿ. ಇವನಿಗೆ ನಾವು ಎಲ್ಲಾ ಶಾಸಗಳನ್ನು ಅಭ್ಯಾಸ ಮಾಡಿಸಿ ವಿದ್ವಾಂಸನನ್ನಾಗಿ ಮಾಡಿ ನಿಮಗೆ ಒಪ್ಪಿಸುವೆವು.” ಹೀಗೆನ್ನಲು ಅವರು “ ಹಾಗೆಯೇ ಮಾಡಿ” ಎಂದರು ಋಷಿಗಳು ಅವನನ್ನು ಕರೆದುಕೊಂಡು ಹೋಗಿ ಕೆಲವು ದಿವಸಗಳ ಒಳಗಾಗಿ ವ್ಯಾಕರಣ, ಪ್ರಮಾಣ, ಛಂದಸ್ಸು, ಅಲಂಕಾರ, ನಿಘಂಟು, ಕಾವ್ಯ, ನಾಟಕ ಮೊದಲಾಗಿ ಲೋಕದಲ್ಲಿ ಇರತಕ್ಕ ಎಲ್ಲ ಶಾಸ್ತ್ರಗಳನ್ನೂ ಕಲಿಸಿದರು. ಇದರಿಂದ ಭದ್ರಬಾಹು ಸಮ್ಯಕ್ ದೃಷ್ಟಿಯನ್ನು ಪಡೆದು ಧರ್ಮಶಾಸ್ತ್ರಗಳೆಲ್ಲವನ್ನೂ ತಿಳಿದು ಸಂಸಾರದಲ್ಲಿಯೂ ಶರೀರದಲ್ಲಿಯೂ

ಸಮ್ಯಗ್ ದೃಷ್ಟಿಯಾಗಿಯಾಗಮದೊಳೆಲ್ಲಮನೞದು ಸಂಸಾರ ಶರೀರ ಭೋಗ ವೈರಾಗ್ಯ ಪರಾಯಣನಾಗಿ ಭಟ್ಟಾರಾ ಎನಗೆ ದೀಕ್ಷೆಯಂ ದಯೆಗೆಯ್ಯಿಮೆನೆ ಭಟಾರರೆಂದರೆಮಗಂತು ದೀಕ್ಷೆಯಂ ಕುಡಲಾಗ ಮಗನೆ ನಿನ್ನ ಪೊೞಲ್ಗೆ ನೀಂ ಪೋಗಿ ನಿನ್ನ ಕಲ್ತ ವಿದ್ಯೆಯಂ ಪಂಡಿತಿಕ್ಕೆಯುಮನಾ ಪೊೞಲೊಳ್ ನೆಗೞ ನೆಗೞ್ದ ಪಂಡಿತರ್ಕಳೊಡನೆ ವಾದಂಗೆಯ್ದವರಂ ಗೆಲ್ದು ದಶದಿಶೆಗಳೊಳೆಲ್ಲಂ ನಿನ್ನ ಪಾಂಡಿತ್ಯದ ಯಶಮಂ ಪಸರಿಸಿ ನಿನ್ನ ಪೊೞಲೊಳ್ ನಾಮೊಡಗೊಂಡು ಬಂದುದರ್ಕೆ ತಾಯ್ತಂದೆಗಂ ಸಂತೋಸಂಮಾಡಿಯವರಂ ಬಿಡಿಸಿಯೊಡಂಬಡಿಸಿ ಬಂದೊಡೆ ತಪಮಂ ಕುಡಲಕ್ಕುಮಂತೆ ಯಾಗದೆಂದೊಡೆ ಭದ್ರಬಾಹುಮಾಣಿಯುಂ ಭಟ್ಟಾರರಂ ವಂದಿಸಿ ತನ್ನ ಪೊೞಲ್ಗೆವೋಗಿ ತಾಯುಂ ತಂದೆಯುಮಂ ಕಂಡು ಪೊೞಲೊಳ್ ನೆಗೞ್ದ ಪಂಡಿತರ್ಕಳೊಡನೆ ವಾದಂಗೆಯ್ದು ಗೆಲ್ಲು ದಶದಿಶೆಗಳೊಳೆಲ್ಲಂ ತನ್ನ ಪಾಂಡಿತ್ಯದ ಯಶಮಂ ಪಸರಿಸಿ ತಾಯ್ತಂದೆಗಂ ಸಂತೋಸಂ ಮಾಡಿಯವರನೊಡಂಬಡಿಸಿ ಬಂದು ಗೋವರ್ಧನ ಭಟ್ಟಾರರ ಪಕ್ಕದೆ ಕುಮಾರಬ್ರಹ್ಮಚಾರಿಯಾಗಿ ಭದ್ರಬಾಹು ತಪಂಬಟ್ಟು ಕೆಲವು ದಿವಸದಿಂದೊಳಗೆ ದ್ವಾದಶಾಂಗ ಚತುರ್ದಶಪೂರ್ವಮಪ್ಪಾಗ ಮಮೆಲ್ಲಮಂ ಗ್ರ್ರಂಥಾರ್ಥಸ್ವರೂಪದಿಂ ಕಲ್ತು ಸಕಲಶಾಸ್ತ್ರಪಾರಾವಾರಗನಾಗಿ ಎಲ್ಲಾವೋದುಗಳುಮಂ ನೆಱೆಯೋದಿ ಕಲ್ತು ಶ್ರುತದೊಳಪ್ಪ ಭಕ್ತಿಕಾರಣಮಾಗಿ ಪ್ರತಿಮಾಯೋಗಂನಿಂದೊರಂ ದೇವರ್ಕಳುಂ ಮನುಷ್ಯರ್ಕಳುಂ ಬಂದು ಪಿರಿದಪ್ಪ ಪೂಜೆಯಂ ಮಾಡಿಯರ್ಚಿಸಿ ಪೂಜಿಸಿ ಬಂದಿಸಿದೊಡೆಲ್ಲಾ

ಸುಖಾನುಭವದಲ್ಲಿಯೂ ವೈರಾಗ್ಯಾಸಕ್ತನಾಗಿ ಗೋವರ್ಧನ ಭಟಾರರೊಡನೆ “ ಪೂಜ್ಯರೇ ನನಗೆ ಜೈನದೀಕ್ಷೆಯನ್ನು ಕರುಣಿಸಿರಿ* ಎಂದು ಕೇಳಿದನು. ಅದಕ್ಕೆ ಭಟಾರರು ಹೀಗೆಂದರು – “ ನಮಗೆ ಹಾಗೆ ಸುಲಭದಲ್ಲಿ ದೀಕ್ಷೆ ಕೊಡಲಿಕ್ಕೆ ಆಗುವುದಿಲ್ಲ. ಮಗನೇ, ನೀನು ನಿನ್ನ ಪಟ್ಟಣಕ್ಕೆ ಹೋಗಿ ನಿನ್ನ ಕಲಿತ ವಿದ್ಯೆಯನ್ನೂ ವಿದ್ವತ್ತೆಯನ್ನೂ ಆ ಪಟ್ಟಣದಲ್ಲಿ ತೋರಿಸಿ ಪ್ರಸಿದ್ಧರಾದ ವಿದ್ವಾಂಸರೊಡನೆ ವಾದ ಮಾಡಿ, ಅವರನ್ನು ಸೋಲಿಸಿ ಹತ್ತು ದಿಕ್ಕುಗಳಲ್ಲೆಲ್ಲ ನಿನ್ನ ಪಾಂಡಿತ್ಯದ ಕೀರ್ತಿಯನ್ನು ಹಬ್ಬಿಸು. ನಿನ್ನನ್ನು ನಾವು ಕರೆದುಕೊಂಡು ಬಂದುದಕ್ಕೆ ನಿನ್ನ ತಂದೆತಾಯಿಗಳಿಗೆ ಸಂತೋಷವನ್ನುಂಟುಮಾಡಿ, ಅವರು ಒಪ್ಪುವಂತೆ ಮಾಡಿ ಅವರನ್ನು ಬಿಟ್ಟು ಬಂದರೆ, ತಪಸ್ಸನ್ನು ನಿನಗೆ ಉಪದೇಶಿಸಬಹುದು. ಅದಲ್ಲವಾದರೆ ಸಾಧ್ಯವಾಗದು’ ಎಂದರು ಭದ್ರಬಾಹು ವಟು ಋಷಿಗಳನ್ನು ನಮಸ್ಕರಿಸಿ ತನ್ನ ಪಟ್ಟಣಕ್ಕೆ ಹೋದನು. ತನ್ನ ತಾಯಿತಂದೆಯರನ್ನು ಕಂಡು ಪಟ್ಟಣದಲ್ಲಿ ಪ್ರಸಿದ್ಧರಾದ ವಿದ್ವಾಂಸರೊಡನೆ ವಾದಮಾಡಿ ಗೆದ್ದು ಹತ್ತು ದಿಕ್ಕುಗಳಲ್ಲೆಲ್ಲ ತನ್ನ ವಿದ್ವತ್ತಿನ ಕೀರ್ತಿಯನ್ನು ಹಬ್ಬಿಸಿದನು. ತಾಯಿತಂದೆಗಳಿಗೆ ಸಂತೋಷವನ್ನುಂಟುಮಾಡಿ, ಅವರನ್ನು ಒಪ್ಪುವಂತೆ ಮಾಡಿ ಬಂದು ಗೋವರ್ಧನ ಋಷಿಗಳ ಬಳಿಯಲ್ಲಿ ಭದ್ರಬಾಹು ಬಾಲಬ್ರಹ್ಮಚಾರಿಯಾಗಿ ತಪಸ್ಸನ್ನು ಮಾಡಿದನು. ಕೆಲವು ದಿವಸಗಳೊಳಗಾಗಿ ಹನ್ನೆರಡು ಅಂಗ ಮತ್ತು ಹದಿನಾಲ್ಕು ಪೂರ್ವಗಳು ಉಳ್ಳ ಶಾಸ್ತ್ರಗಳನ್ನೆಲ್ಲ ಗ್ರಂಥದ ಅರ್ಥದೊಂದಿಗೆ ಕಲಿತನು. ಎಲ್ಲ ಶಾಸ್ತ್ರಗಳಲ್ಲಿಯೂ ಪಾರಂಗತನಾಗಿ ಎಲ್ಲ ವಿದ್ಯೆಗಳನ್ನೂ ವಿಶೇಷವಾಗಿ ಓದಿ, ಶಾಸ್ತ್ರಗಳಲ್ಲಿರುವ ಭಕ್ತಿಯೇ ಕಾರಣವಾಗಿ ಕಲಿತು ಪ್ರತಿಮಾಯೋಗದಲ್ಲಿ ನಿಂತನು. ದೇವತೆಗಳೂ ಮನುಷ್ಯರೂ ಬಂದು ಭದ್ರಬಾಹು ಋಷಿಗಳನ್ನು ಅತಿಶಯವಾಗಿ ಗೌರವಿಸಿ, ಪೂಜಿಸಿದರು. ಎಲ್ಲಾ ಋಷಿಗಳ ಸಮೂಹಕ್ಕೂ

ಋಷಿಸಮುದಾಯಮುಮಂ ಪ್ರತಿಪಾಲಿಸಲ್ಕೆ ಸಮರ್ಥರಾಗಿರ್ಪ್ಪನ್ನೆಗಂ ಗೋವರ್ಧನ ಭಟ್ಟಾರರ್ ಸಮಾ ಮರಣದಿಂದಂ ರತ್ನತ್ರಯಮಂ ಸಾಸಿ ಮುಡಿಪಿ ದೇವಲೋಕಕ್ಕೆ ವೋದರ್. ಇತ್ತ ಭದ್ರಬಾಹು ಭಟ್ಟಾರರ್ ಚತುರ್ದಶ ಪೂರ್ವಧಾರಿಗಳುಂ ಕಡೆಯಾ ರಿಸಿಯಯ್ದನೆಯ ಶ್ರುತಕೇವಳಿಗಳವಜ್ಞಾನಿಗಳುಂ ಪಲವುಂ ಋದ್ಧಗಳಿಂ ಕೂಡಿದೊರೆಲ್ಲಾ ಋಷಿಸಮುದಾಯಮುಮಂ ಪ್ರತಿಪಾಳಿಸುತ್ತಂ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಿರ್ಪ್ಪನ್ನೆಗಂ ಮತ್ತಿತ್ತ ಮಗಧೆಯೆಂಬುದು ನಾಡಲ್ಲಿ ಪಾಟಳೀಪುತ್ರಮೆಂಬುದುಪೊೞಲದನಾಳ್ರ್ವೆಂ ನಂದನೆಂಬರಸಂ ಪಲಕಾಲಮರಸುಗೆಯ್ಯುತ್ತಿರೆ ಮತ್ತೊಂದುದಿವಸಂ ಚಾಣಕ್ಯನೆಂಬ ಭಟ್ಟನಂ ನಂದಂ ಪರಿಭವಿಸಿ ನೂಂಕಿಯಟ್ಟಿ ಕಳೆಯಿಸಿದೊಡಾತನುಂ ಮುಳಿದು ನಂದನಂ ಕೆಡಿಸಿ ರಾಜ್ಯಸ್ಥಾನದೊಳ್ ಪೆಱನೊರ್ವನಂ ಚಂದ್ರಗುಪ್ತನೆಂಬೊನಂ ನಿಱಸಿದೊಡಾತನುಂ ಪಲಕಾಲಮರಸುಗೆಯ್ದು ಕೞದೊಡಾತನ ಮಗಂ ಬಿಂದುಸಾಗರನೆಂಬೊನರಸುಗೆಯ್ದು ಕೞದ ಬೞಕ್ಕಾತನ ಮಗನಶೋಕನೆಂಬೊನರಸುಗೆಯ್ಯುತ್ತಿರೆ ಆತನ ಮಗಂ ಪ್ರತಾಪರಿಂ ತೇಜದಿಂದಾದಿತ್ಯನೊಳೋರನ್ನನಪ್ಪೊಂ ಕುಣಾಳನೆಂಬೊನಂತವರ್ಗಳಿಷ್ಟ ವಿಷಯ ಕಾಮಬೋಗಂಗಳನನುಭವಿಸುತ್ತಂ ಕಾಲಂ ಸಲೆ ಮತ್ತೊಂದು ದಿವಸಮಶೋಕಮಹಾರಾಜಂ ಪರಚಕ್ರದ ಮೇಗೆತ್ತಿ ಪೋಗಿ ಅಲ್ಲಿಂದಂ ಮಂತ್ರಿ ಪುರೋಹಿತ ತಳವಱಾದಿಗಳ್ಗಿಂತೆಂದೋಲೆಯನಟ್ಟಿದೊನುಪಾಧ್ಯಾಯಂಗೆ ಕೞವೆಯ ಕೂೞಂ ತುಪ್ಪಮಂ ತೊವೆಯುಮನುಣಲ್ ಕೊಟ್ಟು

ಪಾಲಕರಾಗಿ ಸಮರ್ಥರಾಗಿ ಭದ್ರಬಾಹು ಋಷಿಗಳು ಇದ್ದರು. ಆಗ ಗೋವರ್ಧನ ಋಷಿಗಳು ರತ್ನತ್ರಯವನ್ನು ಸಂಪಾದಿಸಿ ಸಮಾಮರಣದಿಂದ ಸತ್ತು ದೇವಲೋಕಕ್ಕೆ ಹೋದರು. ಇತ್ತ ಭದ್ರಬಾಹು ಋಷಿಗಳು ಹದಿನಾಲ್ಕು ಪೂರ್ವಗಳುಳ್ಳ ಶಾಸ್ತ್ರಗಳನ್ನರಿತವರೂ ಋಷಿ ಪರಂಪರೆಯಲ್ಲಿ ಐದನೆಯವರೂ ಕೇವಲಜ್ಞಾನ ಅವಜ್ಞಾನಗಳನ್ನು ಪಡೆದವರೂ ಹಲವು ತಪಸ್ಸಿದ್ಧಿಗಳುಳ್ಳವರೂ ಆಗಿ, ಎಲ್ಲ ಋಷಿ ಸಮೂಹವನ್ನೂ ಪಾಲಿಸುತ್ತ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚರಿಸುತ್ತ ಇದ್ದರು. ಹೀಗಿರಲು, ಇತ್ತ ಮಗಧೆ ಎಂಬ ನಾಡಿನಲ್ಲಿ ಪಾಟಳೀಪುತ್ರವೆಂಬ ಪಟ್ಟಣವನ್ನಾಳುವ ನಂದನೆಂಬ ರಾಜನಿದ್ದನು. ಅವನು ಹಲವು ಕಾಲ ರಾಜ್ಯಭಾರಮಾಡುತ್ತ ಇದ್ದನು. ಅನಂತರ, ನಂದನು ಒಂದು ದಿವಸ ಚಾಣಕ್ಯನೆಂಬ ಭಟ್ಟನನ್ನು ಅಪಮಾನಗೊಳಿಸಿ, ನೂಕಿ, ಅಟ್ಟಿ ಹೊರಪಡಿಸಿದನು. ಚಾಣಾಕ್ಯನು ಕೋಪಗೊಂಡು ನಂದನನ್ನು ನಾಶಗೊಳಿಸಿ ರಾಜ್ಯದ ಅಕಾರ ಸ್ಥಾನದಲ್ಲಿ ಚಂದ್ರಗುಪ್ತನೆಂಬ ಬೇರೊಬ್ಬನನ್ನು ನಿಲ್ಲಿಸಿದನು. ಆತನು ಹಲವು ಕಾಲ ಅರಸುತನವನ್ನು ನಡೆಸಿ ಸತ್ತುಹೋಗಲು, ಅವನ ಮಗನಾದ ಬಿಂದುಸಾಗರ ನೆಂಬಾತನು ರಾಜ್ಯಭಾರ ಮಾಡಿ ತೀರಿಹೋದನು. ಅವನ ನಂತರ, ಅವನ ಮಗನಾದ ಅಶೋಕವೆಂಬವನು ರಾಜ್ಯಭಾರಮಾಡುತ್ತಿದ್ದನು. ಅಶೋಕನ ಮಗನಾದ ಕುಣಾಳನು ಪರಾಕ್ರಮದಲ್ಲಿಯೂ ತೇಜಸ್ಸಿನಲ್ಲಿಯೂ ಸೂರ್ಯನಂತಿದ್ದನು. ಅಂತು ಅವರು ಇಷ್ಟವಾದ ವಿಷಯದ ಬಯಕೆಯ ಸುಖಗಳನ್ನು ಅನುಭವಿಸುತ್ತಿದ್ದು ಹೀಗೆಯೇ ಕಾಲ ಕಳೆಯಿತು. ಆಮೇಲೆ ಒಂದು ದಿವಸ ಅಶೋಕ ಮಹಾರಾಜನು ಶತ್ರುಗಳ ರಾಜ್ಯದ ಮೇಲೆ ದಂಡೆತ್ತಿಹೋದನು. ಅಲ್ಲಿಂದ ಮಂತ್ರಿ ಪುರೋಹಿತ – ನಗರ ರಕ್ಷಕ ಮುಂತಾದವರಿಗೆ ಈ ರೀತಿಯಾಗಿ ಪತ್ರವನ್ನು ಕಳುಹಿಸಿದನು – “ಉಪಾಧ್ಯಾಯನಿಗೆ ಕಳಮೆಯ ಅನ್ನ, ತುಪ್ಪ ತೊವ್ವೆಗಳನ್ನು ಉಣಲಿಕ್ಕೆ ಕೊಟ್ಟ ರಾಜಕುಮಾರನನ್ನು (ಅಧ್ಯಾಪಯೇತ್)

ಕುಮಾರನನೋದಿಸುಗೆಂದೋಲೆಯನಟ್ಟಿದೊಡೆ ವಾಚಕನೋಲೆಯರ್ಥಮನಱಯದೆ ವಿಪರೀತಮಾಗಿಂತೆಂದು ಬಾಚಿಸಿದನ್ ಉಪಾಧ್ಯಾಯಂ ಶಾಲಿಂ ಕೂರಂ ಚ ಮಶಿಂ ಘೃತಂ ದತ್ವಾ ಕುಮಾರಮಂಧಾಪಯೇತ್ ಎಂದಿಂತು ವಿಪರೀತಮಾಗಿ ಲೇಖಾ ರ್ಥಮಂ ಬಾಚಿಸಿದೊಡನಿಬರುಂ ಕೇಳ್ದು ಅಪ್ರತಿಹತಶಾಸನನಪ್ಪ ನೃಪತಿಯಾಜ್ಞೆಗೆ ಭಯಸ್ಥರ್ಕಳಾಗಿ ಉಪಾಧ್ಯಾಯಂಗೆ ಕೞಮೆಯ ಕೂೞುಂ ಮಸಿಯುಂ ತುಪ್ಪಮುಮನುಣಲ್ಕೊಟ್ಟು ಕುಣಾಳನೆಂಬ ಕುಮಾರನೆರಡುಂ ಕಣ್ಗಳುಮನೊಡೆದು ಕುರುಡಂ ಮಾಡಿದ ಕೆಲವು ದಿವಸದಿಂದರಸಂ ಪರಚಕ್ರಮಂ ಸಾಧಸಿ ಬಂದು ಮಗಂ ಕುರುಡಾದುದಂ ಕಂಡಾದಮಾನುಮುಬ್ಬೆಗಂಬಟ್ಟು ಸೈರಿಸಲಾಱದೆ ಕುಣಾಳನರಸಿ ಚಂದ್ರಾನನೆಯೆಂಬೊಳ್ಗೆ ಮಗಂ ಪುಟ್ಟಿದೊಡಾತಂಗೆ ಸಂಪ್ರತಿ ಚಂದ್ರಗುಪ್ತನೆಂದು ಪೆಸರನಿಟ್ಟು ರಾಜ್ಯಾಭಿಷೇಕಂಗೆಯ್ದು ಪಟ್ಟಂಗಟ್ಟಿ ಸಮಸ್ತ ರಾಜ್ಯಭಾರಮೆಲ್ಲಮಂ ನಿರೂಪಿಸಿ ಕುಣಾಳನುಮನೆಂದಂ ಮಗನೆ ಬೇಡು ನೀನೆಂದೊಡಾತನುಂ ಕಾಕಿಣೀರತ್ನಮಂ ಬೇಡಿದೊಡಾ ರತ್ನಂ ಚಕ್ರವರ್ತಿಗಲ್ಲದಿಲ್ಲೆಂದು ಮಗಂಗೆ ಮಱುಮಾತುಗೊಟ್ಟು ಸಂಸಾರವೈರಾಗ್ಯಮಾದಮಾನುಂ ಪೆರ್ಚಿ ಸುವ್ರತರೆಂಬ ಭಟ್ಟಾರರ ಪಕ್ಕದೆ ಜಿನದೀಕ್ಷೆಯಂ ಕೈಕೊಂಡು ಪರತ್ರಯಂ ಸಾಸಿದೊಂ ಮತ್ತಿತ್ತ ಸಂಪ್ರತಿ ಚಂದ್ರಗುಪ್ತಮಹಾರಾಜನರಸುಗೆಯ್ಯುತ್ತಿರೆ ಸಮಾಗುಪ್ತ ರೆಂಬಾಚಾರ್ಯರವಜ್ಞಾನಿಗಳ್ ವಿಹಾರಸುತ್ತಂ ಬರ್ಪರಾ ಪಾಟಳೀಪುತ್ರಕ್ಕೆ ವಂದು ಪೊಱವೊೞಲ ಬಹಿರುದ್ಯಾನವನದೊಳಿರ್ದೊರಂ ಸಂಪ್ರತಿ ಚಂದ್ರಗುಪ್ತಂ ಪೋಗಿ ವಂದಿಸಿ ಧರ್ಮಮಂ ಕೇಳ್ದು

ಓದಿಸತಕ್ಕದ್ದು”. ಹೀಗೆ ಪತ್ರವನ್ನು ಕಳುಯಿಸಲು ಅದನ್ನು ಓದುವವನು ಪತ್ರದ ಅರ್ಥವನ್ನು ತಿಳಿಯದೆ ವ್ಯತ್ಯಸ್ತವಾಗಿ ಅದನ್ನು ಓದಿದನು. “ಉಪಾಧ್ಯಾಯನಿಗೆ ಶಾಲ್ಯನ್ನವನ್ನೂ ಮಸಿಯನ್ನೂ ತುಪ್ಪವನ್ನೂ ಕೊಟ್ಟು ರಾಜಕುಮಾರನನ್ನು (ಅಂಧಾಪಯೇತ್) ಕುರುಡನನ್ನಾಗಿ ಮಾಡತಕ್ಕದ್ದು ” ಈ ರೀತಿಯಾಗಿ ನಿಜವಾದ ಅರ್ಥಕ್ಕೆ ವ್ಯತಿರಿಕ್ತವಾಗಿ ಆ ಬರವಣಿಗೆಯ ಅರ್ಥವನ್ನು ಓದಿದನು. ಅವರೆಲ್ಲರೂ ಇದನ್ನು ಕೇಳಿ ತಡೆಯಿಲ್ಲದ ಶಾಸನವುಳ್ಳವನಾದ ರಾಜನ ಆಜ್ಞೆಗೆ ಹೆದರಿ, ಉಪಾಧ್ಯಾಯನಿಗೆ ಶಾಲ್ಯನ್ನವನ್ನೂ ತುಪ್ಪವನ್ನೂ ಮಸಿ(ಶಾಯಿ)ಯನ್ನೂ ಉಣ್ಣಲು ಕೊಟ್ಟು ಕುಣಾಳನೆಂಬ ರಾಜಕುಮಾರನ ಕಣ್ಣುಗಳನ್ನು ಒಡೆದು ಕುರುಡನನ್ನಾಗಿ ಮಾಡಿದರು. ಕೆಲ ದಿನಗಳಲ್ಲಿ ಅಶೋಕರಾಜನು ಶತ್ರುಗಳ ರಾಜವನ್ನು ಗೆದ್ದು ಬಂದಾಗ ಮಗನು ಕುರುಡನಾದುದನ್ನು ಕಂಡನು. ಅವನು ಅತ್ಯಂತ ದು:ಖವನ್ನು ಹೊಂದಿ ಸಯಿಸಲಾರದಾದನು. ಕುಣಾಳನ ಪತ್ನಿಯಾದ ಚಂದ್ರಾನನೆ ಎಂಬವಳಿಗೆ ಒಬ್ಬ ಮಗನು ಹುಟ್ಟಲು ಅವನಿಗೆ ಸಂಪ್ರತಿ ಚಂದ್ರಗುಪ್ತನೆಂಬ ನಾಮಕರಣವನ್ನು ಮಾಡಿ, ರಾಜ್ಯಾಭಿಷೇಕ ಮಾಡಿ, ಪಟ್ಟವನ್ನು ಕಟ್ಟಿ ತನ್ನ ಸಮಸ್ತ ರಾಜ್ಯಭಾರವನ್ನು ಅವನಿಗೆ ಒಪ್ಪಿಸಿದನು. ಆಮೇಲೆ ಅಶೋಕನು ಕುಣಾಳನೊಡೆನೆ – “ಮಗನೇ ನಿನಗೆ ಏನು ಬೇಕು, ಕೇಳು” ಎಂದನು. ಆಗ ಕುಣಾಳನು ಅಶೋಕನ ವಶದಲ್ಲಿದ್ದ ಕಾಕಿಣಿ ಎಂಬ ಚಿಂತಾರತ್ನವನ್ನು ತನಗೆ ಕೊಡಬೇಕೆಂದು ಕೇಳಿದನು. ಅದಕ್ಕೆ ಅಶೋಕನು ಆ ರತ್ನವು ಚಕ್ರವರ್ತಿಗೆ ಮಾತ್ರ ಸಲ್ಲತಕ್ಕದ್ದು, ಇತರರಿಗೆ ಸಲ್ಲತಕ್ಕದ್ದಲ್ಲವೆಂದು ಮಗನಿಗೆ ಪ್ರತ್ಯುತ್ತರ ಕೊಟ್ಟು ಸಂಸಾರದಲ್ಲಿ ಅತಿಶಯ ವೈರಾಗ್ಯವು ಹೆಚ್ಚಾಗಿ ಸುವ್ರತರೆಂಬ ಋಷಿಗಳ ಬಳಿಯಲ್ಲಿ ಜಿನದೀಕ್ಷೆ ಸ್ವೀಕರಿಸಿ ಪರಗತಿಯನ್ನು ಪಡೆದನು. ಆಮೇಲೆ , ಇತ್ತ ಸಂಪ್ರತಿ ಚಂದ್ರಗುಪ್ತ ಮಹಾರಾಜನು ರಾಜ್ಯವಾಳುತ್ತ ಇದ್ದನು. ಹೀಗಿರಲು ಅವಜ್ಞಾನಿ (ತ್ರಿಕಾಲಜ್ಞಾನಿ)ಗಳಾದ

ತದನಂತರಂ ತನ್ನ ಭವಾಂತರಂಗಳಂ ಬೆಸಗೊಂಡೊಡೆ ಭಟಾರರ್ ಪೇೞಲ್ ತೊಡಗಿದರ್ ಈ ಜಂಬೂದ್ವೀಪದ ಭರಕ್ಷೇತ್ರದೊಳವಂತಿಯೆಂಬುದು ನಾಡಲ್ಲಿ ವೈದಿಶಮೆಂಬುದು ಪೊೞಲದನಾಳ್ವೊಂ ಜಯವರ್ಮನೆಂಬೊನರಸನಾತನ ಮಹಾದೇವಿ ಧಾರಿಣಿಯೆಂಬೊಳಂತವರ್ಗಳಿಷ್ಟವಿಷಯ ಕಾಮ ಭೋಗಂಗಳನನುಭವಿಸುತ್ತಿರೆ ಮತ್ತಾ ಪೊೞಲ ಸಾರೆ ಪರಾಳಕೂಟಮೆಂಬೂರೊಳ್ ದೇವಿಲನೆಂಬೊಂ ಶಾಕಟಿಕಂ ಪರದನಾತನ ಭಾರ್ಯೆ ಪೃಥ್ವಿಶ್ರೀಯೆಂಬೊಳಾಕೆಯ ಗರ್ಭದೊಳ್ ಪಾಪಕರ್ಮಜೀವಂ ನೆಲಸಿದೊಡೇನುಂ ನೆವಮಿಲ್ಲದೆ ಕಸವರಮೆಲ್ಲಂ ಕೆಟ್ಟತ್ತು ಮತ್ತೊಂದು ದಿವಸಂ ಪಲಂಬರ್ ಶಾಕಟಿಕ ಪರದರುಂ ಬೆರಸು ಬಂಡಿಗಳೊಳ್ ಪೞಯುಂ ಧಾನ್ಯಮಂ ತೀವಿಕೊಂಡು ಪೊೞಲ್ಗೆ ಮಾಱಲೆಂದು ಪೋಪನ್ನೆಗಮೆಡೆಯೊಳಡವಿಯೊಳ್ ಕಳ್ಳರ್ ಬಟ್ಟೆಗಟ್ಟಿ ಮೇಲ್ವಾಯ್ದಿಱದೊಡೆ ದೇವಿಲಂ ಮೊದಲಾಗೊಡೆಯ ಪಲಂಬರ್ ಪರದರ್ ಸತ್ತರುೞದರೆಲ್ಲಮೋಡಿ ಕೆಟ್ಟೊಡೆ ಬಂಡಮುಮೆೞ್ತುಗಳುಂ ಮೊದಲಾಗೆಲ್ಲಮಂ ಕಳ್ಳರ್ ಕೊಂಡುಪೋದರಾ ಪ್ರಸ್ತಾವದೊಳ್ ಪೃಥ್ವಿಶ್ರೀ ಬೆಸಲೆಯಾಗಿ ನಂದಿಮಿತ್ರನೆಂದಾ ಕೂಸಿಂಗೆ ಪೆಸರನಿಟ್ಟು ಎರೞ್ಮೂರು ತಿಂಗಳಿಂಗೆ ತಾಯ್ ಕೞದೊಡೆ ಬಂದ ನಂಟರ್ ನಡಪೆ ಬಳೆದೊಡಾ ನಂಟರುಂ ಕೞದುಳ್ಳರೆಲ್ಲಂ ಸತ್ತು ಕುಲಕ್ಷಯಮಾದೊಡೂರವರೆಲ್ಲಮಿಂತೆಂದರೀ ತರುವಲಿ ನಮ್ಮೂರೊಳಿರೆ ನಮಗೆ ಸಾವುಂ ಕೇಡುಮಮೋಘಮಕ್ಕುಮಿವನನಟ್ಟಿ ಕಳೆಯಿಮೆಂದೂರಿಂದನಿಬರುಮಟ್ಟಿ

ಸಮಾಗುಪ್ತರೆಂಬ ಆಚಾರ್ಯರು ಸಂಚಾರಮಾಡುತ್ತ ಬರತಕ್ಕವರು ಪಾಟಳೀಪುತ್ರಕ್ಕೆ ಬಂದರು. ಅಲ್ಲಿ ಪಟ್ಟಣದ ಹೊರಗಿನ ಉದ್ಯಾನದಲ್ಲಿದ್ದರು. ಸಂಪ್ರತಿ ಚಂದ್ರಗುಪ್ತನು ಅವರಲ್ಲಿಗೆ ಹೊಗಿ ನಮಸ್ಕರಿಸಿ ಧರ್ಮಬೋಧನೆಯನ್ನು ಕೇಳಿದನಂತರ ತನ್ನ ಬೇರೆ ಬೇರೆ ಜನ್ಮಗಳ ಸಂಗತಿಯೇನೆಂದು ಕೇಳಿದನು. ಋಷಿಗಳು ಆಗ ಹೇಳತೊಡಗಿದರು. ಈ ಜಂಬೂದ್ವೀಪದ ಭರತಕ್ಷೆತ್ರದಲ್ಲಿ ಆವಂತಿ ಎಂಬ ನಾಡಿದೆ. ಅಲ್ಲಿ ವೈದಿಶವೆಂಬ ಪಟ್ಟಣವಿದೆ. ಅದನ್ನು ಜಯವರ್ಮವೆಂಬ ಅರಸನು ಆಳುತ್ತದ್ದನು. ಅವನ ಮಹಾರಾಣಿ ಧಾರಿಣಿ ಎಂಬುವಳು. ಅಂತು ಅವರು ತಮಗೆ ಮೆಚ್ಚುಗೆಯಾದ ವಿಷಯದ ಇಷ್ಟುಸುಖಗಳನ್ನು ಅನುಭವುಸುತ್ತ ಇದ್ದರು. ಆ ಪಟ್ಟಣದ ಸಮೀಪದಲ್ಲಿರುವ ಪರಾಳಕೂಟವೆಂಬ ಊರಿನಲ್ಲಿ ದೇವಿಲನೆಂಬ ಸರಕು ಸಾಗಿಸುವ ಗಾಡಿಗಳನ್ನುಳ್ಳ ವರ್ತಕನಿದ್ದನು. ಅವನ ಹೆಂಡತಿ ಪೃಥ್ವಿಶ್ರೀ ಎಂಬುವಳು. ಆಕೆಯ ಬಸಿರಿನಲ್ಲಿ ಪಾಪಕೃತ್ಯವನ್ನು ಮಾಡಿದ ಒಂದು ಜೀವವು ನೆಲಸಿತು. ಇದರಿಂದ ಏನೊಂದು ಕಾರಣವೂ ಇಲ್ಲದೆ ಅವನ ಹೊನ್ನೆಲ್ಲ (ಐಶ್ವರ್ಯವೆಲ್ಲ) ಹಾಳಾಯಿತು. ಆಮೇಲೆ ಒಂದು ದಿವಸ ಅವನು ಹಲವು ಮಂದಿ ಗಾಡಿಯುಳ್ಳ ವ್ಯಾಪಾರಿಗಳನ್ನು ಕೂಡಿಕೊಂಡು ಗಾಡಿಗಳಲ್ಲಿ ಹತ್ತಿಯನ್ನೂ ಧಾನ್ಯವನ್ನೂ ತುಂಬಿಸಿಕೊಂಡು ಪಟ್ಟಣಕ್ಕೆ ಮಾರಲಿಕ್ಕೆಂದು ಹೋಗುತ್ತಿದ್ದನು. ಹಾಗೆ ಹೋಗುವಾಗ ನಡುವೆ ಕಾಡಿನಲ್ಲಿ ಕಳ್ಳರು ಇವರ ದಾರಿಯನ್ನು ಕಟ್ಟಿ ಮೇಲೆ ಹಾರಿ ಬಂದು ತಿವಿಯಲು ದೇವಿಲ ಮೊದಲಾಗಿ ಉಳ್ಳ ಹಲವರು ವರ್ತಕರು ಸತ್ತರು. ಉಳಿದವರೆಲ್ಲ ಓಡಿ ತಪ್ಪಿಸಿಕೊಂಡರು. ಸರಕುಗಳು ಎತ್ತುಗಳು ಮುಂತಾದ ಎಲ್ಲವನ್ನೂ ಕಳ್ಳರು ಕೊಂಡುಹೋದರು. ಆ ಸಂದರ್ಭದಲ್ಲಿ ಪೃಥ್ವಿಶ್ರೀ ಗಂಡುಮಗುವನ್ನು ಹೆತ್ತಳು. ಆ ಮಗುವಿಗೆ ನಂದಿಮಿತ್ರನೆಂದು ಹೆಸರಿಟ್ಟು, ಎರಡು ಮೂರು ತಿಂಗಳಾಗಲು ತಾಯಿ ಮಡಿದಳು. ನಂಟರು ಆ ಮಗುವನ್ನು ಸಾಕಿ ಸಲಹಲು ನಂದಿಮಿತ್ರನು ದೊಡ್ಡವನಾದನು. ಅವನನ್ನು ಸಾಕಿದ ನಂಟರೂ ಸತ್ತರು. ಇನ್ನೂ ಇದ್ದ ಇತರರೂ ಸತ್ತು ಅವರ ಕುಲವೇ

ಕಳೆದೊಡಾತಂ ಕೆಲದೂರ್ಗಳುಮಂ ನಾೞ್ಕಳುಮಂ ತೊೞಲ್ದು ಬೈಕಂದಿರಿದೆಲ್ಲಿಯಾನುಂ ಪೆತ್ತುಂ ಪೆಱದೆಯುಮಿಂತು ಬಾೞುತ್ತಂ ಪದಿನೈದು ಪದಿನಾಱು ಪ್ರಾಯದಾತನಾಗಿ ವೈದಿಶಮೆಂಬ ಪೊಱಲ್ಗೆವರ್ಪೊನ್ ಅನ್ನಗಂ ಕಾಷ್ಠಕೂಟನೆಂಬ ಬೆಸದವಂ ಪುಳ್ಳಿಯ ಪೊಱೆಯಂ ಪೊತ್ತು ಪೊೞಲ್ಗೆವ ರ್ಪೊನಂ ಕಂಡಾತನೊಡನೆ ಗೊಟ್ಟಿಯೊಳ್ ಬಂದು ಪೊಱಪೊೞಲೊಳಾರವೆಯೊಳ್ ಕಾಷ್ಠಕೂಟಂ ಸೇದೆಗೆಟ್ಟು ಪುಳ್ಳಿಯ ಪೊಱೆಯನಿೞಪಿ ಪಟ್ಟಿರ್ದೊಡೆ ತಾನುಂ ಪಟ್ಟರಲೆಂದು ಬಗೆದು ತಲೆಯ ತ್ತಿಡಲ್ಕರಸಿಯೇನುಮಂ ಕಾಣದೆ ತರ್ಪೊನೆಣ್ಬರಿಂದಂ ತಳರ್ಚಲಾಱದಂತಪ್ಪ ಪಿರಿದೊಂದುಸಿಲೆಯಂ ತಂದು ತಲೆಯತ್ತಿಟು ಪಟ್ಟಿರ್ದುದಂ ಕಾಷ್ಠಾಕೂಟನಾತನ ಬಲಮಂ ಕಂಡು ತನ್ನ ಮನೆಗೊಡಗೊಂಡು ಪೋಗಿಯೂಡಿ ನಿನಗೀ ಪೊೞಲೊಳಾರಾನುಂ ನಂಟರೊಳರೆಯೆಂದು ಬೆಸಗೊಂಡೊಡಾರುಮಿಲ್ಲೆಂದೊಡಂತಪ್ಪೊಡೆ ನೀನೆನ್ನೊಡನಿರೆತ್ತಲುಂ ಪೋಗದಿರೆಂದು ತಾಂಗಿ ತಾನುಮಾತನುಮಂ ತಿರ್ವರುಂ ದಿವಸಕ್ಕಂ ಪುಳ್ಳಿಯಂ ತರೆ ಪದಿಂಬರ್ ತರ್ಪ ಪೊಱೆಯನೊರ್ವನೆ ತರ್ಪನಂತು ಪಲವು ದಿವಸಂ ಸಲೆ ಕಾಷ್ಠಕೂಟಂ ತನ್ನ ಪೆಂಡತಿ ಜಯಘಂಟೆಯೆಂಬೊಳನಿಂತೆಂದು ಕಲ್ಪಿಸಿದ ನೀತಂಗೆ ನೀಂ ಬಸಿಱ್ತೀವೆ ಬಡ್ಡಿಸದಿರೆಣ್ಣೆಯಂ ತಿಣ್ಣಮೆಱೆಯದಿರ್ ಮೀಯಲ್ಬೇಡಿದೊಡ ಮೆಱೆಯದಿರೆಂದು ಕಲ್ಪಿಸಿದೊಡಾಕೆಯುಮಾ ಪಾಂಗಿನೊಳ್ ದಿವಸಕ್ಕಂ ಬಡ್ಡಿಸೆ ನಂದಿಮಿತ್ರನುಂ

ನಾಶವಾಯಿತು. ಆಗ ಊರಿನವರೆಲ್ಲ ಹೀಗೆ ಹೇಳಿಕೊಂಡರು – “ ಈ ಬಾಲಕನು ನಮ್ಮ ಊರಿನಲ್ಲಿದ್ದರೆ ನಮಗೆಲ್ಲ ನಿಶ್ಚಯವಾಗಿಯೂ ಮರಣವೂ ಕೆಡುಕೂ ಉಂಟಾಗುವುದು. ಇವನನ್ನು ಇಲ್ಲಿಂದ ಓಡಿಸಿ ಕಳೆದು ಬಿಡಿ ” . ಹೀಗೆಂದು ಅವರೆಲ್ಲರೂ ನಂದಿಮಿತ್ರನನ್ನು ಊರಿನಿಂದ ಓಡಿಸಿಬಿಟ್ಟರು. ಅವನು ಸಮೀಪದ ಊರುಗಳನ್ನೂ ನಾಡುಗಳನ್ನೂ ಸುತ್ತಾಡುತ್ತ ಭಿಕ್ಷೆ ಬೇಡಿಕೊಂಡು ಅಲೆಯುತ್ತ ಎಲ್ಲಿಯಾದರೂ ಭಿಕ್ಷೆ ಸಿಕ್ಕಿದರೂ ಆಯಿತು ಸಿಕ್ಕದಿದ್ದರೂ ಆಯಿತು ಎಂಬ ರೀತಿಯಲ್ಲಿ ಬಾಳುತ್ತ ಹದಿನೈದು ಹದಿನಾರು ವರ್ಷ ವಯಸ್ಸಿನವನಾಗಿ ವೈದಿಶವೆಂಬ ಪಟ್ಟಣಕ್ಕೆ ಬರುತ್ತಿದ್ದನು. ಆ ವೇಳೆಗೆ ಕಾಷ್ಠಕೂಟನೆಂಬ ಕೆಲಸದವನು (ಕಾರ್ಮಿಕನು) ಸೌದೆಯ ಹೊರೆಯನ್ನು ಹೊತ್ತುಕೊಂಡು ಪಟ್ಟಣಕ್ಕೆ ಬರುತ್ತಿದ್ದನು. ನಂದಿಮಿತ್ರನು ಅವನನ್ನು ಕಂಡು, ಅವನ ಜೊತೆಯಲ್ಲಿ ಬಂದನು. ಪಟ್ಟಣದ ಹೊರಗಿನ ಉದ್ಯಾನದಲ್ಲಿ ಕಾಷ್ಠಕೂಟನು ಆಯಾಸದಿಂದ ಅಶಕ್ತನಾಗಿ ತಲೆಯಲ್ಲಿದ್ದ ಸೌದೆ ಹೊರೆಯನ್ನು ಇಳಿಸಿ ಮಲಗಿದನು. ಆಗ ನಂದಿಮಿತ್ರನು ತಾನೂ ಮಲಗಬೇಕೆಂದು ಯೋಚಿಸಿ ತಲೆಯ ಕಡೆ ಒತ್ತಾಗಿ (ತಲೆದಿಂಬಾಗಿ) ಇಡಲಿಕ್ಕೆ ಹುಡುಕಲು ಏನೂ ಕಾಣದೆ, ಎಂಟು ಜನರಿಂದ ಅಲುಗಾಡಿಸಲು ಕೂಡ ಸಾಧ್ಯವಾಗದಂತಹ ದೊಡ್ಡದೊಂದು ಕಲ್ಲನ್ನು ತರತೊಡಗಿದನು. ಅದನ್ನು ತಂದು ತಲೆಯ ಕಡೆ ಇಟ್ಟು ಮಲಗಿದನು. ಕಾಷ್ಠಕೂಟನು ಇದನ್ನು ನೋಡಿ, ಅವನ ಬಲವನ್ನು ಕಂಡು ತನ್ನ ಮನೆಗೆ ಅವನನ್ನು ಕರೆದುಕೊಂಡು ಹೋದನು. “ ಈ ಪಟ್ಟಣದಲ್ಲಿ ನಿನಗೆ ಯಾರಾದರೂ ನಂಟರಿರುವರೆ ? ಎಂದು ಕೇಳಲು, “ಯಾರೂ ಇಲ್ಲ” ಎಂದು ನಂದಿಮಿತ್ರನು ಉತ್ತರ ಕೊಟ್ಟನು. ಆಗ ಕಾಷ್ಠಕೂಟನು – “ಹಾಗಾದರೆ ನೀನು ನನ್ನೊಡನೆ ಇರು. ಎಲ್ಲಗೂ ಹೋಗಬೇಡ” ಎಂದು ಅವನಿಗೆ ಆಶ್ರಯಕೊಟ್ಟನು. ತಾನೂ ಅವನೂ ಹೀಗೆ ಇಬ್ಬರೂ ಪ್ರತಿದಿನವೂ ಸೌದೆ ತರುತ್ತಿದ್ದರು. ಹತ್ತು ಮಂದಿ ತರತಕ್ಕ ಹೊರೆಯನ್ನು ನಂದಿಮಿತ್ರನೊಬ್ಬನೆ ತರುತ್ತಿದ್ದನು. ಅಂತೂ ಹಲವು

ಪಿರಿಯ ಪುಳ್ಳಿಯ ಪೊಱೆಗಳಂ ದಿವಸಕ್ಕಂ ತಂದು ಕುಡಲವಂ ಮಾಱ ಕಾಷ್ಠಕೂಟನೊಡೆಯೊ ನಾದೊನಿಂತು ದಿವಸಂಗಳ್ ಸಲೆ ಮತ್ತೊಂದು ದಿವಸಂ ಜಯಘಂಟೆ ಕರುಣಿಸಿ ತಣಿಯೆ ಬಡ್ಡಿಸಿದೊ ಡುಂಡು ಮಱುದಿವಸಮಿರ್ವರುಂ ಪುಳ್ಳಿಗೆ ಪೋದಲ್ಲಿ ನಂದಿಮಿತ್ರನೆಂದನಯ್ಯಾ ಎನೆಗುಡಲಿಲ್ಲೇನುಮೊಂದು ದಮ್ಮಕ್ಕಾದೊಡಂ ಸೀರೆಯಂ ಕೊಂಡೀಯಿಮೆಂದೊಡಂತೆಗೆಯ್ವಮೆಂದು ಮಱುಮಾತು ಗೊಟ್ಟಿರ್ವರುಂ ಪುಳ್ಳಿಯ ಪೊಱೆಯಂ ಮನೆಗೆ ತಂದ ಬೞಕ್ಕೆ ಕಾಷ್ಠಕೂಟಂ ಪೆಂಡತಿಯನೆಂದನೀ ತಂಗೆ ನೀಂ ಬಸಿಱ್ ತೀವೆಯುಣಲಿಕ್ಕಿದಾ ಎಂದೊಡೆ ಕರುಣಿಸಿ ಪರ್ವಮೆಂದು ತಣಿಯುಣಲಿಕ್ಕಿದೆನೆಂದೊಡೆ ಮುಳಿದು ಸಾಯೆ ಬಡಿದು ಮನೆಯಿಂ ಪೆಂಡತಿಯನಟ್ಟಿ ಕಳೆದೊಡೆ ನಂದಿಮಿತ್ರಂ ಪೋಗಿ ಜಯಘಂಟೆಯಂ ಬೆಸಗೊಂಡನ್ ನಿನ್ನನೇಕೆ ಕಾಷ್ಠಕೂಟಂ ಬಡಿದನಬ್ಬಾ ಎಂದು ಬೆಸಗೊಂಡೊಡೆ ನಿನಗೆ ನಿನ್ನೆ ತಣಿಯೆಯುಣಲಿಕ್ಕಿದೆನೆಂದು ಮುಳಿದು ಬಡಿದಟ್ಟಿ ಕಳೆದೊನೆಂ ದೊಡಿಂತಪ್ಪ ಪಂಚಮಹಾಪಾತಕನ ಮನೆಯೊಳ್ ಮಾರಿಯಿರ್ಕೆಂದು ಕಾಷ್ಠಕೂಟನಂ ಬಿಸುಟ್ಟು ಪೋಗಿ ಬೇಱೆ ತನಗೆ ಪುಳ್ಳಿಗಳಂ ದಿವಸಕ್ಕಂ ತಂದು ಮಾಱಲ್ ತಗುಳ್ದೊಡೆಂಟು ದಮ್ಮದ ಪುಳ್ಳಿಯಂ ತಂದೊಡಮೊಂದು ಪಣಮನಪ್ಪೊಡಂ ಪೆಱದೆ ಬಸಿಕೂ ೞ್ಗಮಂಬಲಿಗಮೆಣ್ಣೆಗಂ ಕೞಗಂ

ದಿವಸ ಕಳೆಯಲು ಕಾಷ್ಠಕೂಟನು ತನ್ನ ಹೆಂಡಿತಿಯಾದ ಜಯಘಂಟೆಗೆ ಹೀಗೆ ಹೇಳಿಕೊಟ್ಟನು. – “ಈತನಿಗೆ ನೀನು ಹೊಟ್ಟೆ ತುಂಬುವಷ್ಟು ಬಡಿಸಬೇಡ. ಎಣ್ಣೆಯನ್ನು ಹೆಚ್ಚು ಹೂಯ್ಯಬೇಡ. ಸ್ನಾನಕ್ಕಾಗಿ ಕೇಳಿದರೆ ಕೂಡ ಎಣ್ಣೆಯನ್ನು ಹೊಯ್ಯಬೇಡ” ಹೀಗೆ ಹೇಳಿಕೊಡಲು, ಆಕೆ ಅದೇ ರೀತಿಯಲ್ಲಿಯೇ ಬಡಿಸುತ್ತದ್ದಳು. ನಂದಿಮಿತ್ರನು ಪ್ರತಿದಿವಸವೂ ಕಟ್ಟಿಗೆಯ ದೊಡ್ಡ ದೊಡ್ಡ ಹೊರೆಗಳನ್ನು ತಂದು ಕೊಡುತ್ತಿದ್ದನು. ಕಾಷ್ಠಕೂಟನು ಅವನ್ನು ಮಾರಿ ಧನಿಕನಾದನು. ಹೀಗೆ ದಿವಸಗಳು ಕಳೆದುವು. ಒಂದಿ ದಿನ ಜಯಘಂಟೆ ಕನಿಕರಪಟ್ಟು ನಂದಿಮಿತ್ರನಿಗೆ ತೃಪ್ತಿಯಾಗುವಷ್ಟು ಬಡಿಸಿದಳು. ಅದನ್ನು ಉಂಡು ಮಾರನೆ ದಿನ ಇಬ್ಬರೂ ಸೌದೆ ತರಲು ಹೋದಾಗ ನಂದಿಮಿತ್ರನು – “ ಅಯ್ಯಾ, ನನಗೆ ಉಡಲಿಕ್ಕೆ ಗತಿಯಿಲ್ಲ, ಎಲ್ಲಾದರೊಂದು ದಮ್ಮಕ್ಕೆ (ದಮ್ಮ – ಒಂದು ನಾಣ್ಯ) ಸಿಗುವಷ್ಟಾದರೂ ಬಟ್ಟೆ ತಂದುಕೊಡಿ “. ಎಂದನು. “ಹಾಗೆ ಮಾಡೋಣ” ಎಂದು ಕಾಷ್ಠಕೂಟನು ಪ್ರತ್ಯುತ್ತರ ಕೊಟ್ಟನು. ಇಬ್ಬರೂ ಸೌದೆಯ ಹೊರೆಯನ್ನು ಮನಗೆ ತಂದನಂತರ ಕಾಷ್ಠಕೂಟನು ತನ್ನ ಹೆಂಡತಿಯೊಡನೆ “ಇವನಿಗೆ ನೀನು ಹೊಟ್ಟೆತುಂಬ ಉಣಬಡಿಸಿದೆಯಾ? ” ಎಂದು ಕೇಳಿದನು. ಅದಕ್ಕೆ ಆಕೆ – “ನಾನು ಕನಿಕರಪಟ್ಟು ಹಬ್ಬವೆಂದು ಅವನಿಗೆ ತೃಪ್ತಿಯಾಗುವಷ್ಟು ಉಣಬಡಿಸಿದೆನು ” ಎಂದಳು. ಆಗ ಕಾಷ್ಠಕೂಟನು ಸಿಟ್ಟಾಗಿ ಸಾಯುವಂತೆ ಬಡಿದು ತನ್ನ ಮನೆಯಿಂದ ಹೆಂಡಿತಿಯನ್ನು ಓಡಿಸಿ ಬಿಟ್ಟನು. ನಂದಿಮಿತ್ರನು ಜಯಘಂಟೆ ಬಳಿಗೆ ಹೋಗಿ – “ ತಾಯೇ, ನಿನ್ನನ್ನು ಕಾಷ್ಠಕೂಟನು ಯಾಕೆ ಬಡಿದನು? ” ಎಂದು ಕೇಳಿದನು. “ನಿನ್ನೆ ನಿನಗೆ ತೃಪ್ತಿಯಾಗುವಷ್ಟು ಉಣಬಡಿಸಿದೆನೆಂದು ಕೋಪಗೊಂಡು ಅವನು ನನ್ನನ್ನು ಹೊಡೆದು ಓಡಿಸಿದನು ” ಎಂದು ಜಯಘಂಟೆ ನುಡಿದಳು. ಆಗ ನಂದಿಮಿತ್ರನು – “ಇಂತಹ ಪಂಚಮಹಾಪಾಪ ಮಾಡಿದವನ ಮನೆಯಲ್ಲಿ ಮಾರಿದೇವತೆ ನೆಲಸಲಿ !” ಎಂದು ಹೇಳಿ, ಕಾಷ್ಠಕೂಟನನ್ನು ಬಿಟ್ಟು ಹೋದನು. ತಾನು ಬೇರೆಯಾಗಿ ಪ್ರತಿದಿನವೂ ಸೌದೆಹೊರೆಗಳನ್ನು ತಂದು ತೊಡಗಿದನು. ಎಂಟು ದಮ್ಮದ ಸೌದೆಯನ್ನು ತಂದರೂ ಚಿಕ್ಕನಾಣ್ಯವಾದ ಒಂದು ಹಣವೂ ಸಂಪಾದನೆಯಾಗದೆ, ಅದನ್ನು ಹೊಟ್ಟೆಯ ಅನ್ನಕ್ಕೂ ಅನ್ನದ ಗಂಜಿಗೂ

ಕೊಟ್ಟು ಪೋಕುಮಿಂತು ಬಾೞುತ್ತುಮಿರೆ ಮತ್ತೊಂದು ದಿವಸಂ ಪುಳ್ಳಿಗೆ ಪೋಗಿ ಪುಳ್ಳಿಯ ಪೊಱೆಯಂ ಪೊತ್ತು ಬರ್ಪೊನನ್ನೆಗಮೆಡೆಯೊಳ್ ಶಿವಗುಪ್ತಚಾರ್ಯರಷ್ಟಾಂಗ ನಿಮಿತ್ತಂಗಳಂ ಬಲ್ಲೊರಡವಿಗೆ ವೋಗಿ ಸಿದ್ಧಾಂತಮಂ ಪರಿವಿಡಿಗೆಯ್ದಂದಿನ ದಿವಸಮಲ್ಲಿಮೆ ದೇವರಂ ವಂದಿಸಿ ಪಕ್ಷೋಪವಾಸದ ಪಾರಣೆಗೆಂದು ಪೊೞಲ್ಗೆ ಚರಿಗೆವುಗುತಂದೊಡೆ ನಂದಿಮಿತ್ರಂ ಕಂಡಾಶ್ಚರ್ಯಭೂತನಾಗಿ ನೀಡುಂ ನೋಡಿಯಿವರೆಲ್ಲಿಗೆ ವೋದಪ್ಪರೋ ಎಂದು ಬೞವೞಯನೆವಂದು ಪೊಱಪೊೞಲ ಬಸದಿಯ ಪ್ರಾಕಾರದೊಳಗೆ ಪುಳ್ಳಿಯ ಪೊಱೆಯನಿಕ್ಕಿ ನೋೞ್ಪನನ್ನೆಗಮಿವರನೆಂದವರಂ ಬೞವೞಯನೆ ಬರ್ಪನ್ನೆಗಮಾದಿವಸಮರಸಂ ಶಿವಗುಪ್ತ ಭಟ್ಟಾರಕರ್ಗ್ಗಾಂ ಪಾರಣೆಯಂ ಮಾಡುವೆಂ ಪೆಱರಾರುಂ ನಿಱಸಲ್ ಸಲ್ಲೆಂದು ಪೊೞಲೊಳಗೆಲ್ಲಂ ಗೋಸನೆಯಂ ತೊೞಲ್ಚಿದೊಡಂಜಿಯಾರುಂ ನಿಱಸುವರಿಲ್ಲದೆ ಭಟಾರರುಂ ಕಿಱುಮನೆ ಪೆರ್ಮನೆಯೆನ್ನದುಣಲ್ತಕ್ಕ ಮನೆಗಳಂ ಚರಿಗೆವುಗುತ್ತಂ ಬರ್ಪೊರರಮನೆಯಂ ಪೊಕ್ಕಾಗಳ್ ಕಂಡರಸನುಂ ಮಹಾದೇವಿಯುಂ

ಸುವರ್ಣಪೂರ್ಣಕಳಶಮುಂ ಕನ್ನಡಿಯುಂ ಪೂವುಮಕ್ಕಿಯುಂ ಮಾದುಫಲಮುಂ ಮೊದಲಾಗೊಡೆಯನೇಕಾರ್ಚನೆಯಿಂದಿದಿರಂ ಬಂದು ನಿಱಸಿ ಬಲಗೊಂಡು ಬಂದು ಭಟಾರರ ಕಾಲಂ ಮಹಾದೇವಿ ನೀರ್ವೊಯ್ಯೆ ಅರಸಂ ತಾನೆ ಪ್ರಕ್ಷಾಳಿಸಿ ಬೞಕ್ಕೊಡವೋದ ಬೋೞದಲೆಯ ದೇಸಿಗನ ಕಾಲಂ ಬ್ರಹ್ಮಯ್ಯಾ ನೀಡಿಂ ನಿಮ್ಮ ಕಾಲಂ ತೊಳೆವೆಮೆಂದು ಮಹಾದೇವಿ