ದಿನವೂ ತೆರೆಯುವ ಬೆಳಗಿನ ಬಾನೊಳು
ರಕ್ತದ ಕಲೆಗಳ ಛಾಯೆಯಿದೆ
ದಿನವೂ ಮುಚ್ಚುವ ಸಂಜೆಗತ್ತಲೊಳು
ನೋವಿನ ದನಿಗಳ ಹುಯ್ಯಲಿದೆ.

ದಟ್ಟ ಕತ್ತಲಿನ ಕಾರಿರುಳಲ್ಲಿ
ಒಳ ಸಂಚಿನ ಪಿಸುಮಾತುಗಳು
ನೆಮ್ಮದಿಗಳ ಮನೆ ಬಾಗಿಲ ಬಡಿಯುವ
ಭಯ-ಸಂಶಯಗಳ ಭೂತಗಳು.

ದಿನ ಬೆಳಗಾದರೆ ಹತ್ಯಾಕಾಂಡದ
ತತ್ತರಿಸುವ ದುರ್ವಾರ್ತೆಗಳು
ಮೂರು ಬಣ್ಣಗಳ ಧ್ವಜದೆತ್ತರಕೂ
ಹಬ್ಬಿದ ಭೀತಿಯ ಜ್ವಾಲೆಗಳು.

ಛಿದ್ರವಾಗುತಿದೆ ಮುಗ್ಧರ ಬದುಕು
ಕ್ಷುದ್ರ ಸ್ವಾರ್ಥಗಳ ದಾಳಿಯಲಿ
ಸೀದು ಹೋಗುತಿದೆ ಹೂವಿನ ತೋಟ
ಕುರುಡು ಬೆಂಕಿಗಳ ಕುಣಿತದಲಿ.

ವ್ಯರ್ಥವಾಗುತಿವೆ ಹಿರಿಯರು ಕಲಿಸಿದ
ಸತ್ಯ ಅಹಿಂಸೆಯ ಮಂತ್ರಗಳು
ಉಸಿರು ಕಟ್ಟಿಸುವ ದಟ್ಟ ಹೊಗೆಯೊಳಗೆ
ತಡವರಿಸುತ್ತಿವೆ ಹೆಜ್ಜೆಗಳು.