ಹಿಂದೆ ಅನೇಕ ಸಾರಿ ಹೀಗೆ ಆಗಿದೆ. ವೆನಿಲ್ಲಾಕ್ಕೆ ಕೊಲೈಟೋ ಟ್ರೈಕಂ ಎಂಬ ವೈರಸ್ ಬಂತು. ಎಷ್ಟೆಲ್ಲಾ ವೆನಿಲ್ಲಾ ಗಿಡಗಳು ಸತ್ತುಹೋದವು. ನೂರಾರು ಎಕರೆ ವೆನಿಲ್ಲಾ ಕೃಷಿ ನಾಶವಾಯಿತು. ವಿಜ್ಞಾನಿಗಳು ರೋಗ ಬಂದ ವೆನಿಲ್ಲಾವನ್ನು ಸುಡಲು ಹೇಳಿದ್ರು. ಅನೇಕ ರೈತರು ಸುಟ್ಟರು. ಒಬ್ಬರ ವೆನಿಲ್ಲಾ ತೋಟದಲ್ಲಿ ರೋಗ ಬಂದಿದ್ದರೆ ಸಾಕು. ಮತ್ತೊಬ್ಬರ ತೋಟಕ್ಕೆ ಹರಡಿಬಿಡುತ್ತಿತ್ತು. ಅದೇ ರೀತಿ ಕಾಲುಬಾಯಿ ಜ್ವರ. ಹಸುಗಳಿಗೆ ಖಾಯಂ ವರ್ಷ ವರ್ಷ ಲಸಿಕೆ ಹಾಕುವ ಆಂದೋಲನ ಎಲ್ಲಾ ಕಡೆಯೂ ನಡೆಯುತ್ತದೆ. ಊರಲ್ಲಿ ಒಂದು ಹಸುವಿಗೆ ಬಂದರೆ ಉಳಿದವಕ್ಕೆ ಹಬ್ಬುವುದು ಗ್ಯಾರಂಟಿ. ಹಾಗಂತ ನಮ್ಮಲ್ಲಿ ಯಾರೂ ಹಸುವನ್ನು ಸುಟ್ಟಿಲ್ಲ, ಕೊಂದಿಲ್ಲ, ಹೂಳಿಲ್ಲ.
ಈಗ್ಗೆ ೫೦ ವರ್ಷಗಳ ಹಿಂದೆ ಪ್ಲೇಗ್ ಎಂಬ ಮಹಾಮಾರಿ ನುರಾರು ಜನರನ್ನು ನುಂಗಿಹಾಕಿತಂತೆ. ಆಮೇಲೆ ಸಿಡುಬು ಬಂದು ಸಾವಿರಾರು ಜನ ನಿರ್ನಾಮವಾದರು. ಇವೆಲ್ಲಾ ಭಯ ಹುಟ್ಟಿಸಿದ್ದು ಸಾವಿನ ಘಂಟೆಯ ನಾದದಿಂದ. ಇತ್ತೀಚೆಗೆ ಏಡ್ಸ್ ಇದೇ ರೀತಿ ಭಯ ಹುಟ್ಟಿಸುತ್ತಿದೆ.
ನೆಗಡಿ ಸಹ ವೈರಸ್ನಿಂದ ಬರುವ ರೋಗ. ಅದರಲ್ಲೀಗ ಇನ್ನೂರು ರೀತಿಗಳಿವೆ. ಆದರೆ ಸಾವು ಇಲ್ಲದ ಕಾರಣ ಭಯವಿಲ್ಲ. ಪ್ರತಿವರ್ಷ ಒಮ್ಮೆ ಫ್ಲೂ ಬಂದರೆ ಒಳ್ಳೆಯದೆಂದು ಹೇಳುತ್ತಾರೆ. ಅದರಿಂದ ದೇಹದಲ್ಲಿ ಫ್ಲೂವೈರಸ್ನ ಪ್ರತಿವಿಷಗಳು ಉತ್ಪತ್ತಿಯಾಗಿ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದು ವೈದ್ಯರ ಅಭಿಪ್ರಾಯ.
ಹಿಂದೆಲ್ಲ ಪ್ರಾಣಿಗಳಿಗೆ, ಪಕ್ಷಿಗಳಿಗೆ ಬರುವ ರೋಗಗಳೆಲ್ಲಾ ಮನುಷ್ಯರಿಗೆ (ಈತ ಪ್ರಾಣಿಯೂ ಅಲ್ಲ-ಪಕ್ಷಿಯೂ ಅಲ್ಲ) ಬರುವುದಿಲ್ಲ ಎಂದು ತಿಳಿಯಲಾಗಿತ್ತು. ಈಗ ಪ್ರಾಣಿಗಳಿಂದ ಅನೇಕ ರೋಗಗಳು ಮನುಷ್ಯರಿಗೆ ಬರುತ್ತವೆ ಎಂದು ಸಾಬೀತಾದ ಮೇಲೆ ಮನುಷ್ಯನ ಭಯ, ಅನುಮಾನಗಳು ಹೆಚ್ಚಿದವು. ಈ ಭಯಕ್ಕೆ ಬಲಿಯಾಗುವುದು ಪ್ರಾಣಿ-ಪಕ್ಷಿಗಳೇ ಆಗಿವೆ. ಸ್ವಲ್ಪವೇ ಅನುಮಾನ ಬಂದರೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಅವುಗಳನ್ನು ಸಾಯಿಸಲಾಗುತ್ತದೆ. ಈಗ ಹೇಳಿ ಕೋಳಿಜ್ವರದ ಭಯ ಯಾರಿಗೆ?
ಕೋಳೀಜ್ವರದ ನೆರಳು ಮಾತ್ರ ಭಾರತದ ಮೇಲಿದೆಯೇ ಹೊರತು ಕೋಳಿಜ್ವರ ಇರುವುದು ಇಂಡೋನೇಶ್ಯಾದಲ್ಲಿ, ವಿಯೆಟ್ನಾಂನಲ್ಲಿ, ಜಪಾನ್, ಕೊರಿಯಾ, ಚೀನಾ, ತೈವಾನ್ಗಳಲ್ಲಿ. ಇತ್ತ ಜರ್ಮನಿ, ಪೋಲ್ಯಾಂಡ್, ಬ್ರಿಟನ್ಗಳಲ್ಲಿ. ಹಾಗಿದ್ದರೆ ಮಹಾರಾಷ್ಟ್ರದ ಪ್ರದೇಶದಲ್ಲಿ ಏಕೆ ಕೋಳಿಜ್ವರದ ವದಂತಿ ಹಬ್ಬಿತು. ಶಿವಮೊಗ್ಗದ ಜಾವಳ್ಳಿಯ ವಿಘ್ನೇಶ್ವರ ಫಾರಂನಲ್ಲಿ ೧೮,೦೦೦ ಕೋಳಿಗಳು ಸತ್ತರೂ ಹಾಹಾಕಾರವೇಕೆ ಎದ್ದಿಲ್ಲ? ಹಿಂದೆ ಗಣೇಶ ಹಾಲು ಕುಡಿದು ಹಬ್ಬಿದ ಗಲಾಟೆಯಂತೆ ಇದೊಂದು ಸಾಮೂಹಿಕ ಸನ್ನಿವೇಶ ಮಾತ್ರವೇ?
ಶಿವಮೊಗ್ಗ ಬಳಿಯ ಜಾವಳ್ಳಿಯಲ್ಲಿ ವಿಘ್ನೇಶ್ವರ ಫಾರಂನಲ್ಲಿ ಕೇವಲ ೧೨ ದಿನಗಳಲ್ಲಿ ೧೮,೦೦೦ ಕೋಳಿಗಳು ಸತ್ತವು. ದಿನಕ್ಕೆ ಒಂದೂವರೆ ಸಾವಿರ ಕೋಳಿಗಳೆಂದರೆ ಸಾಮಾನ್ಯವೇ? ಕಾರಣ ಗುಂಬರೋ ಕಾಯಿಲೆ ಐಬಿಡಿ ಅಥವಾ ಇನ್ಫೆಕ್ಷಿಯಸ್ ಬರ್ಸಲ್ ಡಿಸೀಸ್ ಎನ್ನುವ ಅರ್ಥವಾಗದ ಇಂಗ್ಲೀಷ್ ಕಾಯಿಲೆ. ಇದರಲ್ಲಿ ಸಾಮಾನ್ಯವಾಗಿ ವೈರಸ್ಗಳು ತೊಂದರೆ ಕೊಡುವುದೇ ಶ್ವಾಸಕೋಶಗಳಿಗೆ. ಕೋಳಿಗಳ ಶ್ವಾಸಕೋಶಗಳು ಬರೀ ಈ ರೋಗಕ್ಕೊಂದೇ ಅಲ್ಲ, ಬೇರೆ ಬೇರೆ ರೋಗಗಳಿಗೂ ಬಲಿಯಾಗುತ್ತಲೇ ಇರುತ್ತವೆ.
ಏನೆಲ್ಲಾ ರೋಗ ಬಂದು ಗುರುತಿಸುವ ವೇಳೆಗೆ ಅಥವಾ ಸೂಕ್ತ ಲಸಿಕೆ ಮೊದಲೇ ಹಾಕಿಸಿದರೂ ಅದರ ಶಕ್ತಿ ಕಡಿಮೆ ಆದಕೂಡಲೇ ಸಾಯುತ್ತವೆ. ಅದಕ್ಕೂ ಹೊರತಾದ ಮತ್ತೊಂದು ರಹಸ್ಯವೊಂದಿದೆ. ಕೋಳಿಫಾರಂನಲ್ಲಿ ಮಾಂಸಕ್ಕಾಗಿಯಾಗಲೀ, ಮೊಟ್ಟೆಗಳಿಗಾಗಿಯಾಗಲೀ ಸಾಕುವ ಕೋಳಿಗಳಿಗೆ ಮರಿ ಇದ್ದಾಗಿನಿಂದ ಅವುಗಳ ಅಂತ್ಯದವರೆಗೆ ಕೇವಲ ರಾಸಾಯನಿಕ ಆಹಾರ, ರೋಗ ನಿರೋಧಕ ಚುಚ್ಚುಮದ್ದನ್ನು ನೀಡುತ್ತಲೇ ಬೆಳೆಸಿರುತ್ತಾರೆ. ಇಳುವರಿಯೇ ಮುಖ್ಯ ಗುರಿಯಾಗಿಸಿಕೊಂಡು ಬೆಳೆಸುವ ಇಂತಹ ಕೋಳಿಗಳು ರೋಗನಿರೋಧಕ ಶಕ್ತಿ ಕಳೆದುಕೊಂಡು ಬಹುಬೇಗ ರೋಗಗಳಿಗೆ ಬಲಿಯಾಗುತ್ತವೆ.
ಕೋಳಿ ಹಾಗೂ ಮೊಟ್ಟೆ ಉತ್ಪಾದನೆಯಲ್ಲಿ ಕರ್ನಾಟಕ ಮೂರನೆಯ ಸ್ಥಾನದಲ್ಲಿದೆ. ಶಿವಮೊಗ್ಗದಲ್ಲೇ ೩೫೦ಕ್ಕೂ ಹೆಚ್ಚು ಫಾರಂಗಳಿವೆ. ಅದಕ್ಕಾಗಿ ಕೋಳಿಜ್ವರದ ಭೀತಿ ಹೆಚ್ಚಿದೆ. ಅದಕ್ಕೆ ಪೂರಕವೆಂಬಂತೆ ಮಲೆನಾಡಿನಲ್ಲೇ ಎರಡು ಪ್ರಖ್ಯಾತ ಪಕ್ಷಿಧಾಮಗಳಿವೆ. ಮಂಡಗದ್ದೆ ಹಾಗೂ ಗುಡವಿಗಳಿಗೆ ಬರುವ ನೂರಾರು ಜಾತಿಯ ಪಕ್ಷಿಗಳು ಈಗ ಸಂತಸ ನೀಡುವ ಬದಲು ಭಯದ ರಾಕೆಟ್ಗಳಾಗಿವೆ.
ನಿಜವಾಗಿಯೂ ಇಷ್ಟೆಲ್ಲಾ ಭಯಪಡುವ ಅಗತ್ಯವಿದೆಯೇ ಎನ್ನುವ ಪ್ರಶ್ನೆಗೆ ತಜ್ಞರ ಉತ್ತರಗಳು ಹೀಗಿವೆ.
ಗುಲ್ಬರ್ಗಾದ ಡಾ||ಪಿ.ಎಸ್. ಶಂಕರ್ರವರು, ಕೋಳಿಜ್ವರದಿಂದ ಮನುಷ್ಯ ಹೆದರುವ ಅಗತ್ಯ ಇಲ್ಲ. ಆದರೆ ಒಮ್ಮೆ ಕೋಳಿ ಜ್ವರದ ವೈರಸ್ ಮನುಷ್ಯನಿಗೆ ಬಂದರೆ ಅವನಲ್ಲಿರುವ ಜ್ವರದ ವೈರಸ್ನೊಂದಿಗೆ ತಳಿ ಬದಲಾವಣೆ ಮಾಡಿಕೊಳ್ಳಬಹುದು. ಆಗ ಹೊಸ ಹೈಬ್ರಿಡ್ ವೈರಸ್ ಉತ್ಪತ್ತಿಯಾಗುತ್ತದೆ. ಇದಕ್ಕೆ ಹೊಸದಾಗಿ ಲಸಿಕೆ ತಯಾರಿಸುವವರೆಗೂ ಅಪಾಯಕಾರಿಯಾಗಿರುತ್ತದೆ. ಹೈಬ್ರಿಡ್ ವೈರಸ್ ಆಗಿರುವ ಪ್ರಯುಕ್ತ ಅಪಾಯವು ಸ್ವಲ್ಪ ಹೆಚ್ಚೇ ಆಗಿರುತ್ತದೆ. ಅದಕ್ಕಾಗಿ ಕೋಳಿಗಳಿಗೆ ಲಸಿಕೆಗಳನ್ನು ಮೊದಲೇ ಕೊಡಿಸುವುದು ಒಳ್ಳೆಯದು ಎನ್ನುತ್ತಾರೆ.
ಪಶುವೈದ್ಯಾಧಿಕಾರಿಗಳಾದ ಸೋಮವಾರಪೇಟೆಯ ಡಾ|| ಪ್ರಸಾದ್ರವರು ಸೂಚಿಸುವಂತೆ ಕೋಳಿಫಾರಂಗಳು ಬಹಳ ಸ್ವಚ್ಛವಾಗಿರಬೇಕು. ಎಲ್ಲಾ ಸಲಕರಣೆಗಳನ್ನೂ ಫಾರ್ಮಾಲಿನ್, ಅಯೋಡಿನ್ಗಳನ್ನು ಬಳಸಿ ನಂಜುರಹಿತ ಮಾಡಿರಬೇಕು. ಕೋಳಿಫಾರಂಗಳು ಒಂದಕ್ಕೊಂದು ಸಂಬಂಧವಿರದಂತೆ ದೂರವಿರಬೇಕು. ಕೋಳಿಗಳ ಮತ್ತು ಮೊಟ್ಟೆಗಳ ವಿನಿಮಯ ನಡೆಯಬಾರದು. ಕೆಲಸಗಾರರು ಶುದ್ಧರಾಗಿರಬೇಕು. ಕೋಳಿಗಳಿಗೆ ಆಹಾರ ನೀಡುವುದರಿಂದ ಹಿಡಿದು ಮಾರಾಟ ಮಾಡುವವರೆಗೆ ಕೈಗವಸು, ಬಾಯಿಗವಸು ಹಾಗೂ ರೋಗ ನಿರೋಧಕ ಉಡುಪು ಧರಿಸಿ ಕೆಲಸ ಮಾಡಬೇಕು. ಕೋಳಿಫಾರಂ ಎಂದರೆ ಮೈಲುದೂರದಿಂದಲೇ ವಾಸನೆ ಪ್ರಾರಂಭವಾಗುತ್ತದೆ. ಹಿಕ್ಕೆಗಳಂತೂ ಕಟುವಾಸನೆಯಿಂದಲೇ ಕಾಯಿಲೆಗಳಿಗೆ ಕಾರಣವಾಗಿರುತ್ತವೆ. ಹೀಗಿರುವಾಗ ಸ್ವಚ್ಛತೆಯ ಪಾಠ ನಮ್ಮ ದೇಶದಲ್ಲಿ ಅರ್ಥವಾದರೆ ಅರ್ಧರೋಗ ವಾಸಿಯಾದಂತೆ ಎನ್ನುವ ಅಭಿಪ್ರಾಯ ಇವರದು.
ಪೂನಾದ ವೈರಾಣು ಶಾಸ್ತ್ರದ ಮಾಜಿ ನಿರ್ದೇಶಕರಾದ ಕಲ್ಯಾಣ್ರವರ ಅಭಿಪ್ರಾಯ ಹೀಗಿದೆ. ಮಹಾರಾಷ್ಟ್ರದಲ್ಲಿ ರಾಣಿಖೇತ್ ಎನ್ನುವ ರೋಗ ಕೋಳಿಜ್ವರವೆಂಬ ವದಂತಿಯನ್ನು ಬೇಕೆಂದಲೇ ಹಬ್ಬಿಸಲಾಗಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು. ನಂದೂರ್ಬಾರ್ನಲ್ಲಿ ಕೋಳಿಜ್ವರ ಬಂದ ಬಗ್ಗೆ ವ್ಯಾಪಕ ಸುದ್ದಿ ಹರಡಿದ ರೀತಿ ನೋಡಿದರೆ, ಇದರ ಹಿಂದೆ ಬಹುರಾಷ್ಟ್ರೀಯ ಔಷಧಿ ಕಂಪೆನಿಗಳ ಹುನ್ನಾರ ಇದೆ ಎಂಬುದು ಸ್ಪಷ್ಟ. ರಾಜ್ಯದ ೧೦ ಲಕ್ಷ ಕೋಳಿಗಳ ನಾಶ, ಅದಕ್ಕಾಗಿ ಸರ್ಕಾರದಿಂದ ೫ ಲಕ್ಷ ಪರಿಹಾರ, ೪೨ ಲಕ್ಷ ಲಸಿಕೆಗಳ ಆಮದು. ಈಗಾಗಲೇ ಡಚ್ ಸರ್ಕಾರದಿಂದ ೨೦ ಲಕ್ಷ ಲಸಿಕೆಗಳ ಖರೀದಿ. ಇವೆಲ್ಲಾ ಯಾವುದೋ ಸಂಚಿನ ಹಿನ್ನೆಲೆಯಂತೆಯೇ ಇದೆ ಎನ್ನುವ ಆರೋಪ ಅವರದು.
ಈಗಾಗಲೇ ೨೬ ದೇಶಗಳಲ್ಲಿ ಹಕ್ಕಿಜ್ವರವಿದೆ. ಅಲ್ಲೆಲ್ಲಾ ಲಸಿಕೆಗಳು ಅವಶ್ಯವಿದೆ ಹಾಗೂ ಹಕ್ಕಿಜ್ವರದ ಲಸಿಕೆ ತಯಾರಿಸುವ ಅನೇಕ ಕಂಪೆನಿಗಳಲ್ಲಿ ಪೈಪೋಟಿ ಇದೆ. ನಂದೂರ್ಬಾರಲ್ಲಿ ಯಾವುದೇ ರೀತಿಯಲ್ಲೂ ವಿದೇಶೀ ಹಕ್ಕಿಗಳ ಸಂಪರ್ಕವಾಗಲೀ ಅಂತರರಾಷ್ಟ್ರೀಯ ಗಡಿಯಾಗಲೀ ಅಥವಾ ಮಾಂಸದ ವಿದೇಶಿ ವಿನಿಮಯ ಮಾಡಿಕೊಳ್ಳುವ ಪ್ರದೇಶವಾಗಲೀ ಇಲ್ಲ. ಹೀಗಿರುವಾಗ ಇದ್ದಕ್ಕಿದ್ದಂತೆ ಹರಡಿದ ವದಂತಿಯು ನಂಬಲು ಸಾಧ್ಯವೇ ಇಲ್ಲ. ನಮ್ಮ ಹ್ಯಾಚರೀಸ್ನಿಂದ ೯೪೫ ಕೋಳಿಗಳ ರಕ್ತವನ್ನು ತಪಾಸಣೆಗೆ ಕಳುಹಿಸಿದ್ದೇವೆ. ೭೪೫ರಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಇನ್ನುಳಿದಿದ್ದನ್ನು ಮರುಪರೀಕ್ಷೆ ಮಾಡುತ್ತಿದ್ದಾರೆ. ಇದು ಖಂಡಿತಾ ಕೋಳಿಜ್ವರವಲ್ಲ ಎನ್ನುವ ಖಂಡನೆ ವೆಂಕಟೇಶ್ವರ ಹ್ಯಾಚರೀಸ್ನ ಅನುರಾಧ ದೇಸಾಯಿಯವರದು.
ಮೈಸೂರಿನ ಹವ್ಯಾಸಿ ಹಕ್ಕಿತಜ್ಞರಾದ ಮನುರವರು ವದಂತಿಗಳ ಬಗ್ಗೆ ಕನಿಕರ ವ್ಯಕ್ತಪಡಿಸುತ್ತಾರೆ.
ಹಕ್ಕಿಜ್ವರ ವಿದೇಶಗಳಲ್ಲಿ ಇರಬಹುದು. ಆದರೆ ಅಲ್ಲಿಂದ ಬರುವ ಹಕ್ಕಿಗಳು ಜ್ವರವನ್ನು ಹೊತ್ತು ತರುತ್ತವೆ ಎನ್ನುವ ಮಾತು ಹಾಸ್ಯಾಸ್ಪದ. ಒಂದೊಮ್ಮೆ ಹಕ್ಕಿಗಳಿಗೆ ಜ್ವರವಿದ್ದರೆ ವಿದೇಶಗಳಿಂದ ಸಾವಿರಾರು ಮೈಲು ಹಾರಿಬರಲು ಸಾಧ್ಯವೇ? ಹಕ್ಕಿಗಳು ರೋಗಪೀಡಿತವಾದರೆ ತಮ್ಮ ಸಂತತಿಯನ್ನು ಮುಂದುವರಿಸುವುದಿಲ್ಲ. ಅದಕ್ಕಾಗಿ ಕೇವಲ ಮೊಟ್ಟೆ ಇಡಲು, ಮರಿ ಮಾಡಲು ಬರುವ ಹಕ್ಕಿಗಳೂ ಸಹ ಜ್ವರ ಬಿಟ್ಟು ಯಾವುದೇ ರೋಗ ಬಂದರೂ ಇಲ್ಲಿಯವರೆಗೆ ಬರುವುದಿಲ್ಲ. ಇನ್ನು ಕೊಕ್ಕರೆ ಬೆಳ್ಳೂರು, ರಂಗನತಿಟ್ಟುಗಳಲ್ಲಿರುವ ಹಕ್ಕಿಗಳು ವಿದೇಶೀಯವಲ್ಲ. ಇದನ್ನೆಲ್ಲಾ ವದಂತಿಯಿಂದ ಕಿವುಡಾಗಿ ಏನೆಲ್ಲಾ ಹಾರಾಟ ಮಾಡುತ್ತಿರುವ ಅಧಿಕಾರಿಗಳಿಗೆ ಹೇಳುವವರಾರು? ಅಜ್ಞಾನ-ಭಯಗಳೇ ಹಕ್ಕಿಜ್ವರಕ್ಕಿಂತ ಹೆಚ್ಚು ಅಪಾಯಕಾರಿ ಎನ್ನುತ್ತಾರೆ.
೨೯ ಸಾವಿರ ಕೋಟಿ ರೂಪಾಯಿಗಳ ದೇಶೀಯ ವಹಿವಾಟು ಹಾಗೂ ಎರಡು ಸಾವಿರ ಕೋಟಿ ರೂಪಾಯಿಗಳ ರಾಜ್ಯದ ವಹಿವಾಟು ವಿದೇಶೀಯರ ಕಣ್ಣಿಗೆ ಬಿದ್ದ ಧೂಳಾಗಿದೆ. ಅಮೇರಿಕಾದಂತಹ ದೇಶ ತನ್ನ ಮಾರುಕಟ್ಟೆಗೆ ಎಲ್ಲಿ ತೊಂದರೆ ಉಂಟಾಗುವುದೋ ಎಂಬ ಚಿಂತೆಯಿಂದ ನಮ್ಮ ದೇಶದ ಉದ್ಯಮಕ್ಕೆ ನೀಡುತ್ತಿರುವ ಪೆಟ್ಟಿದು. ಇದರಲ್ಲಿ ನಮ್ಮ ರಾಜಕಾರಣಿಗಳು, ಕಂಪೆನಿಗಳೂ ಶಾಮೀಲಾಗಿರುವುದು ವಿಷಾದನೀಯ. ಇನ್ನು ಇದರಿಂದ ವಿದೇಶೀಯರಿಗಾಗುವ ಮತ್ತೊಂದು ಲಾಭವೆಂದರೆ ಲಸಿಕೆಗಳ ಮಾರಾಟ. ಹಿಂದೆ ಜಪಾನ್ನಲ್ಲಿ ಇದೇ ರೀತಿ ಲಸಿಕೆಗಳನ್ನು ಮಾರಿದರು. ಅವುಗಳನ್ನು ಚುಚ್ಚಿಸಿಕೊಂಡ ಮೇಲೆ ಬೇರೆ ರಿತಿಯ ರೋಗಗಳು ಬರತೊಡಗಿದವು. ಅದಕ್ಕೆ ಮತ್ತೊಂದು ರೀತಿಯ ಲಸಿಕೆಗಳನ್ನು ಕಂಪೆನಿ ಸಂಶೋಧಿಸಿತು. ಹೀಗೆ ಒಂದರ ಹಿಂದೊಂದು ಬಾಲದಂತೆ ರೋಗಗಳು, ಲಸಿಕೆಗಳು ಬರುತ್ತವೆ. ಈಗ ಬಂದಿರುವ ಟಾಮಿಫ್ಲು ಲಸಿಕೆಯೂ ಪರಿಣಾಮಕಾರಿ ಮದ್ದಲ್ಲ ಎಂಬುದನ್ನು ತಜ್ಞರೇ ತಿಳಿಸಿರುವಾಗ ಅದನ್ನು ತರಿಸಲು ಹೊರಟ ನಮ್ಮ ಜನರ ನಿಜವಾದ ಹಿನ್ನೆಲೆ ಏನೆಂಬುದು ತನಿಖೆಯಾಗಬೇಕೆಂದು ಸ್ವದೇಶಿ ಆಂದೋಲನಕಾರರು ಒತ್ತಾಯಿಸುತ್ತಿದ್ದಾರೆ.
ಇಷ್ಟಾಗಿಯೂ ಕೋಳಿಜ್ವರ ಅಥವಾ ಅದರ ರೋಗಗಳು ಮನುಷ್ಯನಿಗೆ ಹರಡುವುದು ಕೋಳಿಯನ್ನು ತಿನ್ನುವುದರಿಂದ ಅಲ್ಲ, ಕಾರಣ ನಮ್ಮಲ್ಲಿ ಬೇಯಿಸುವ ರೀತಿಯಲ್ಲಿ ಯಾವ ವೈರಾಣು ಉಳಿಯಲು ಸಾಧ್ಯ ಹೇಳಿ. ಕಾಲು ಬಾಯಿಜ್ವರ ಅಥವಾ ಏನೆಲ್ಲಾ ಖಾಯಿಲೆಗಳಿಂದ ನರಳುವ ಪ್ರಾಣಿಗಳೆಲ್ಲಾ ಹೋಗುವುದು ಕಸಾಯಿಖಾನೆಗೆ ತಾನೇ. ಅಲ್ಲಿಂದ ಮಾಂಸ ತಂದು ತಿನ್ನುವವರೆಲ್ಲಾ ಎಂದಾದರೂ ಸತ್ತಿರುವ ಸುದ್ದಿ ಇದೆಯೇ?
ಏನೇ ಆಗಲಿ, ಈ ವದಂತಿಯಿಂದ ಕೋಳಿ ಉದ್ಯಮವೊಂದೇ ಅಲ್ಲ, ಯಾವುದೇ ಉದ್ಯಮಗಳೂ ಶಿಸ್ತು, ಸ್ವಚ್ಛತೆ, ಕಾನೂನುಪಾಲನೆ, ಆರೋಗ್ಯದ ಎಚ್ಚರಿಕೆ, ವಿಮೆ, ಆರ್ಥಿಕ ಎಚ್ಚರಿಕೆ ಹೀಗೆ ಏನೆಲ್ಲಾ ವಿಷಯಗಳಲ್ಲಿ ಜಾಗೃತರಾಗಬಹುದು ಎಂಬುದೇ ಆಶಾದಾಯಕ ವಿಚಾರ.
– ಈ ಲೇಖನ ವಿವಿಧ ಪತ್ರಿಕೆಗಳ ವರದಿಯನ್ನು ಆಧರಿಸಿದೆ. ಹೆಚ್ಚುವರಿ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಹ ಸಂಪರ್ಕಿಸಲಾಗಿದೆ.
Leave A Comment