ಭಯವಿರಲಿಲ್ಲ ನನಗೆ, ಹಿಂದು ಮುಂದಿಲ್ಲ-
ದೊಬ್ಬನೇ ತಿರುಗುತಿದ್ದಾಗ.
ಈಗ ಭಯ ನನಗೆ, ನಾನು ನನ್ನವರ ಮಧ್ಯೆ
ಸಂಸಾರಿಯಾಗಿ ಬದುಕುವಾಗ.

ಭಯವಿರಲಿಲ್ಲ ನನಗೆ, ಏಕಾಂಗಿಯಾಗಿ
ನಕ್ಷತ್ರಗಳ ನಡುವೆ ನಡೆಯುತಿದ್ದಾಗ.
ಭಯ ನನಗೆ, ಈ ನೂರಾರು ವಾಹನದ ಮಧ್ಯೆ
ಹೆದ್ದಾರಿಯಲ್ಲಿ ಪಯಣಿಸುವಾಗ.

ಭಯವಿರಲಿಲ್ಲ ನನಗೆ, ಜ್ವಾಲಮಾಲಾಕುಲದ
ಮಧ್ಯೆ ಗುರಿಯಿಲ್ಲದಲೆಯುತಿದ್ದಾಗ.
ಭಯ ನನಗೆ ಈಗ, ಹೊತ್ತು ಮುಳುಗಿರುವ
ಕತ್ತಲೆಯಲ್ಲಿ ತಡವರಿಸುವಾಗ.

ಭಯವಿರಲಿಲ್ಲ ನನಗೆ, ಆಕಾರಕ್ಕೆ ಕಾಯುತ್ತ
ಮಲಗಿದ್ದಾಗ ಗರ್ಭಗುಡಿಯೊಳಗೆ.
ಈಗಲೋ ಆಕಾರಕ್ಕೆ ವಿಕಾರದ ಭಯ, ವಿಗ್ರಹಕ್ಕೆ
ಭಗ್ನತೆಯ ಭಯ ಚರಿತ್ರೆಯೊಳಗೆ.