ನಾನು ಒಬ್ಬನೇ ಇದ್ದಾಗ ಅಥವಾ ಒಬ್ಬನೇ ಕೆಲಸ ಮಾಡುವಾಗ ಉಸಿರಾಟ ಜೋರು ಮಾಡಿಕೊಂಡು ಸುಸ್ತಾಗುತ್ತೇನೆ. ಹೀಗೆ ಆದಾಗ ಗಾಬರಿಯಿಂದ ಒಂದು ಸ್ಥಳದಿಂದ ಬೇರೆ ಸ್ಥಳಕ್ಕೆ ಅಂದರೆ ಜನರಿದ್ದ ಕಡೆಗೆ ಹೋಗಿ ಅವರಲ್ಲಿ ಮಾತನಾಡುತ್ತಾ ಅಥವಾ ಅವರ ಜೊತೆಯಲ್ಲಿ ಇದ್ದು ಕಾಲ ಕಳೆಯುತ್ತೇನೆ. ಕೆಲವೊಮ್ಮೆ ಇದೇ ತರಹ ದೀರ್ಘ ಉಸಿರಾಟ ನಡೆಸುವ ಅಥವಾ ಉಸಿರು ಕಟ್ಟಿದಂತೆ ಆಗುವ ಅನ್ನಿಸಿಕೆ ಬಂದಾಗಲೂ ಸ್ಥಳದಿಂದ ಬೇರೆ ಸ್ಥಳಕ್ಕೆ ಹೋಗುವೆನು. ಇದಲ್ಲದೆ ನನಗೆ ಹಲವಾರು ಭೀತಿಗಳಿವೆ. ಉದಾಹರಣೆಗೆ ಕತ್ತಲಲ್ಲಿ ಹೋಗಬೇಕಾದರೆ ಭಯವಾಗುತ್ತದೆ.  ಎತ್ತರದಿಂದ ಕೆಳಕ್ಕೆ ನೋಡಿದಾಗ ಭಯ, ಡೆಡ್‌ಬಾಡಿ, ಕುಷ್ಠರೋಗಿಗಳನ್ನು ನೋಡಿದಾಗ ಭಯ, ಇಂತಹ ಸಂದರ್ಭದಲ್ಲಿ ಹೆಚ್ಚು ಉಸಿರಾಟ ಮಾಡುತ್ತೇನೆ.

ಯಾವುದೇ ವಸ್ತುವಿನ ಅಥವಾ ಸನ್ನಿವೇಶದ ಬಗ್ಗೆ ಅದರಿಂದ ಯಾವುದೇ ರೀತಿಯ ಅಪಾರ ಇರದಿದ್ದರೂ ನಿರಂತರವಾಗಿ ಭೀತಿ ಮೂಡುವ ಚಿತ್ತ – ಚಾಂಚಲ್ಯಕ್ಕೆ ನೀವು ’ಫೋಭಿಯಾ’ ಅಥವಾ ’ಅತಿ ಭಯದ ಸ್ಥಿತಿ’ ಎಂದು ಕರೆಯುತ್ತೇವೆ. ಈ ಸ್ಥಿತಿಯನ್ನು ನಾವು ದಿನನಿತ್ಯದಲ್ಲಿ ಹಲವಾರು ಸಂದರ್ಭದಲ್ಲಿ ಕಾಣುತ್ತೇವೆ. ರಕ್ತದ ಬಿಂದುವನ್ನು ಕಂಡೊಡನೆ ಪ್ರಜ್ಞಾಹೀನವಾಗುವುದು, ಪ್ರಾಂಶುಪಾಲರನ್ನು, ಮೇಲಾಧಿಕಾರಿಗಳನ್ನು ಕಂಡಾಗ ಆಗುವ ಭೀತಿ, ಜಿರಲೆಯನ್ನು, ಹಲ್ಲಿಯನ್ನು ಕಂಡಾಗ ಕಿರಿಚುಕೊಳ್ಳುವಿಕೆ ಅಥವಾ ಪ್ರಜ್ಞಾಹೀನನಾಗುವುದು, ಇವೆಲ್ಲ ಅತಿ ಭಯದ ಕೆಲವು ರೂಪ ಮಾತ್ರ. ವಸ್ತುವಿನಲ್ಲಿ, ಸನ್ನಿವೇಶದಲ್ಲಿ, ಕೆಲವು ಸಂದರ್ಭದಲ್ಲಿ ಸ್ವಲ್ಪ ಮಾತ್ರ ಭಯ ಅಡಗಿದ್ದರೂ ಅದನ್ನು ಅತಿಯಾಗಿ ಪರಿಭ್ರಮಿಸಿ ಅದರ ಉತ್ಕಟತೆಯನ್ನು ಹೆಚ್ಚು ಮಾಡುವ ಹಾಗೂ ಆ ಭಯವನ್ನು ತಪ್ಪಿಸಿಕೊಳ್ಳಲು ಯೋಚಿಸುವಷ್ಟು ಅಥವಾ ದೈಹಿಕ ಚಿಹ್ನೆಯಾಗಿ ಪ್ರಕಟಿಸುವಷ್ಟು ಉಂಟಾಗುವ ಆತಂಕಕ್ಕೆ ಅತಿ ಭಯ ಸ್ಥಿತಿ ಅಥವಾ ಫೋಭಿಯಾ ಎನ್ನುತ್ತೇವೆ.

ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೆಲವು ಫೋಭಿಯಾಗಳೆಂದರೆ ಆಕ್ರೋಫೋಭಿಯಾ. ಎತ್ತರದ ಸ್ಥಳದಿಂದ ಕೆಳಗೆ ನೋಡಿದಾಗ ಬೀಳುತ್ತೇನೆಯೇ ಅಥವಾ ಹಾರುತ್ತೇನೆಯೇ ಎಂಬ ಅತಿ ಭಯ ಸ್ಥಿತಿ ನಿಮ್ಮಲ್ಲಿ ಇದೆ. (ಅದರಂತೆಯೇ ಕತ್ತಲೆಯ ಬಗ್ಗೆ ಇರುವ ಭೀತಿ ವಿಕ್ಟೋಫೋಭಿಯಾ ಸಹ ನಿಮ್ಮಲ್ಲಿದೆ). ಇದಲ್ಲದೆ ರಕ್ತದ ಬಗ್ಗೆ ಇರುವ ಭೀತಿದೆ ಹಿಮ್ಯಾಟೋ ಫೋಭಿಯಾ ಎಂದೂ ತೆರೆದ ವಿಶಾಲ ಸ್ಥಳದ ಬಗ್ಗೆ ಇರುವ ಭೀತಿಗೆ ಆಗಾರೋ ಫೋಭಿಯಾ ಎಂದೂ, ಮುಚ್ಚಿದ ಸ್ಥಳಗಳ ಬಗ್ಗೆ ಕ್ಲಾಸ್ಟೋಫೋಭಿಯಾ ಎಂದು ಪ್ರಾಣಿಗಳ ಬಗ್ಗೆ ಇರುವ ಭೀತಿಗೆ ಝೂ ಫೋಭಿಯಾ ಎಂದೂ, ಬಗೆಬಗೆಯ ರೀತಿಯಲ್ಲಿ ಅತಿಭಯ ಸ್ಥಿತಿ ಪ್ರಕಟವಾಗುತ್ತದೆ. ನಿಮಗೆ ಇರುವ ಇನ್ನೊಂದು ಭೀತಿಯನ್ನು ಜನಸಂದಣಿಯಲ್ಲಿ ಕಾಣಿಸಿಕೊಳ್ಳುವ ಅತಿಭಯ ಸ್ಥಿತಿಗೆ ಖಮೋಲೋಫೋಭಿಯಾ ಎಂದು ಕರೆಯಲಾಗುತ್ತದೆ.

ಕೆಲವು ಭೀತಿಗಳು ಹಲವರಿಗೆ ಸರ್ವೇಸಾಮಾನ್ಯ. ಉದಾಹರಣೆಗೆ ಕತ್ತಲು ಕಾಯಿಲೆ, ಬೆಂಕಿ ಇತ್ಯಾದಿ. ಅತೀ ಭಯ ಸ್ಥಿತಿಯಲ್ಲಿ ಇರಬೇಕಾದ ಗುಣಗಳೆಂದರೆ ಅವ್ಯಕ್ತ ಅನವಶ್ಯಕ ಭಯ. ನಾವು ಭೀತರಾಗುವ ವಸ್ತು ಸನ್ನಿವೇಶ ಅಪಾಯಕಾರಿಗಳೇನಲ್ಲ. ಭೀತಿ ಹೆಚ್ಚಾದಾಗ ಮನೋದೈಹಿಕ ಚಿಹ್ನೆಗಳ ಪ್ರಕಟಣೆ ಅದರಿಂದ ತಪ್ಪಿಸಿಕೊಳ್ಳಲು ಹೆಣಗಾಟ ಕಾಣಿಸುತ್ತದೆ. ನಲಿವು, ಉಸಿರಾಟ ಜೋರು ಮಾಡಿಕೊಳ್ಳುವ ವ್ಯವಸ್ಥೆ ಹೈಪರ್‌ವೆಂಟಿಲೇಶನ್ ಎಂದು ಮನೋಸಂರಕ್ಷಣಾ ವಿಧಾನ. ಆತಂಕದಿಂದ ಮುಕ್ತನಾಗಲು ದೈಹಿಕ ಕ್ರಿಯೆಯನ್ನು ಬಳಸಿಕೊಳ್ಳುವುದು. ಇದರಿಂದ ಕಿರಿಕಿರಿಯಾದರೂ ಅದು ತಾತ್ಕಾಲಿಕ ಆತಂಕ ಪರಿಹಾರ ಮಾಡುವುದು ನಿಶ್ಚಿತ.

ಅತಿ ಭಯ ಸ್ಥಿತಿಗೆ ಚಿಕಿತ್ಸೆಯಿಂದ ಪರಿಹಾರ ಸಾಧ್ಯ. ನಿಮ್ಮ ಸಮಸ್ಯೆಯ ಸಮಗ್ರತೆಯ ಬಗ್ಗೆ ಅಮೂಲಾಗ್ರವಾದ ಪರಿಶೀಲನೆ, ಪ್ರತಿಕರಣದಿಂದ ಪರಿಹಾರ ಉಂಟಾಗುವುದು. ಅತಿಭಯ ಸ್ಥಿತಿಗೂ ಸುಪ್ತಾವಸ್ಥೆಯಲ್ಲಿರುವ ಸಮಸ್ಯೆಯ ಮೂಲಕ್ಕೂ ಕೊಂಡಿ ಇರುವ ಬಗ್ಗೆ ವಿವರಣೆ ನೀಡಿದಾಗ ನೀವು ನಿರಾಳ ಮನಸ್ಕರಾಗುತ್ತೀರಿ. ಮನೋವೈದ್ಯರೊಂದಿಗೆ ಸಂವಾದ ಹಾಗೂ ಪ್ರೋತ್ಸಾಹಕ ಮಾತು, ಒಳನೋಟ ನೀಡುವ ಮನೋ ಚಿಕಿತ್ಸೆ ಫಲಕಾರಿ.