ಕಲೆ ಎಂದರೇನು?

ಮನುಷ್ಯನ ಹೃದಯದ ಕಲಕಿಗೆ ಒಂದು ಸುಂದರ ರೂಪವೆ “ಕಲೆ”. ಅದು ಸಂಗೀತ, ನೃತ್ಯ, ಕಾವ್ಯ, ಶಿಲ್ಪ- ಇತ್ಯಾದಿ ಯಾವುದೇ ಕಲೆ ಆಗಿರಬಹುದು. ತನ್ನ ಪ್ರತಿಭೆಯಿಂದ, ಸಾಧನೆಯಿಂದ, ಸೃಜನಶೀಲತೆಯಿಂದ ಸಹೃದಯದಲ್ಲಿ ರಸೋತ್ಕರ್ಷವನ್ನು ಉಂಟು ಮಾಡಿ, ಜೀವಚೋದಕ ಸ್ಥಿತಿಗೆ ಕೊಂಡೊಯ್ಯುವವನೇ ನಿಜವಾದ ಕಲಾವಿದ.

ನಮ್ಮ ಶಾಸ್ತ್ರೀಯ ನೃತ್ಯದ ಮೂಲ ಸೆಲೆಯಾದ ಭರತನ “ನಾಟ್ಯಶಾಸ್ತ್ರ”, ವಿಶ್ವದಲ್ಲೇ ನಾಟ್ಯಕಲೆಯ ಅತ್ಯುತ್ತಮ ಆಕರಗ್ರಂಥವೆಂದು ಖ್ಯಾತಿ ಪಡೆದಿದೆ. ಮನುಷ್ಯನ ಭಾವಪ್ರಪಂಚವನ್ನೇ ಅಚ್ಚರಿ ಮೂಡಿಸುವಂತೆ ಅದು ತೆರೆದಿಡುತ್ತದೆ.

ಭರತಮುನಿ, ಬ್ರಹ್ಮದೇವನಿಂದ ಪಡೆದ ನಾಟ್ಯವೇದವನ್ನು ಬಳಸಿ, ತನ್ನ ನೂರು ಮಂದಿ ಮಕ್ಕಳೊಡನೆ, “ಅಮೃತಮಂಥನ” ಸಮವಕಾರವನ್ನು (ರೂಪಕಗಳಲ್ಲಿ ಒಂದು ವಿಧ) ಭಗವಾನ್ ಶಿವನಮುಂದೆ ಪ್ರದರ್ಶಿಸಿದ. ಅದನ್ನು ನೋಡಿ ಆನಂದಿಸಿದ ಶಿವನು, ತಂಡುವನ್ನು ಕರೆದು, ರೇಚಕ, ಅಂಗಹಾರಗಳಿಂದ ಕೂಡಿದ ತನ್ನ ನೃತ್ಯವನ್ನು ಸುಕುಮಾರ ಅಂಗಹಾರಗಳಿಂದ ಕೂಡಿದ ಪಾರ್ವತಿಯ ನೃತ್ಯವನ್ನೂ ಭರತನಿಗೆ ಹೇಳಿಕೊಡೆಂದು ನಿರ್ದೇಶಿಸಿದನು. ಹೀಗೆ ತಂಡುವಿನಿಂದ ಗ್ರಹೀತವಾದ ನೃತ್ಯ “ತಾಂಡವ”ವೆಂದೂ, ಪಾರ್ವತಿಯಿಂದ ಗ್ರಹೀತವಾದ ನೃತ್ಯ “ಲಾಸ್ಯ”ವೆಂದೂ ಪ್ರಸಿದ್ಧಿಯಾಯಿತು. ನಾಟ್ಯ ಶಾಸ್ತ್ರದಲ್ಲಿ ನಾಯಕ, ನಾಯಕಿ ಪಾತ್ರಗಳು ಎರಡೂ ವಿಫುಲವಾಗಿ ನಿರೂಪಿಸಲ್ಪಟ್ಟಿವೆ.

“ನಾಟ್ಯ” ಪ್ರಕಾರವಾಗಿರುವ ರೂಪಕಗಳಲ್ಲಿ ನಾಯಕನದೇ ಪ್ರಧಾನ ಪಾತ್ರ, ಇದು ಅವರ ಕಥೆ. ನಾಯಕನ ಭಾವ ಸಂಘರ್ಷಕ್ಕೇ ಇಲ್ಲಿ ಆದ್ಯತೆ. ನಮ್ಮ ಸಂಸ್ಕೃತ, ನಾಟಕಗಳು, ಕಾವ್ಯಗಳು ಈ ಸಂಪ್ರದಾಯವನ್ನೇ ಅನುಸರಿಸಿಕೊಂಡು ಬಂದಿವೆ. ತಮಿಳುನಾಡಿನ ಭಾಗವತಮೇಳ ನಾಟಕ, ಕೇರಳದ ಕೊಡಿಯಾಟ್ಟಂ, ಕಥಕ್ಕಳಿ, ಕೂಚಿಪುಡಿ ನೃತ್ಯ ನಾಟಕಗಳು, ಕರ್ನಾಟಕದ ಯಕ್ಷಗಾನ ಇತ್ಯಾದಿ ನಾಟ್ಯ ಪ್ರಕಾರಗಳು, ಪುರುಷ ಪಾತ್ರಪ್ರಧಾನವಾಗಿವೆ.

ಇಂದು ನಾವು “ಭರತನಾಟ್ಯ”ವೆಂದು ಕರೆಯುವ ಶಾಸ್ತ್ರೀಯ ನೃತ್ಯಪ್ರಕಾರ, ಹಿಂದೆ “ಸದಿರ್” ಅಥವಾ “ದಾಸಿ ಆಟ್ಟಂ” ಎಂದು ಕರೆಯಲ್ಪಡುತ್ತಿತ್ತು. ದೇವದಾಸಿಯರಿಂದ, ರಾಜನರ್ತಕಿಯರಿಂದ ನರ್ತಿಸಲ್ಪಡುತ್ತಿದ್ದ ಕಾರಣ, ಇದು “ನಾಟ್ಯ” ಪ್ರಕಾರದಲ್ಲಿದ್ದಂತೆ ಅಲ್ಲದೆ ನಾಯಕಿ ಪ್ರಧಾನವಾಗಿ ಬೆಳೆಯಿತು. ಇದಕ್ಕೆ ಪುರುಷ ಪ್ರಧಾನವಾದ ಸಮಾಜವೂ ಸ್ತ್ರೀಯನ್ನು ಭೋಗವಸ್ತುವೆಂದು ನೋಡುವ ದೃಷ್ಟಿ, ರಾಜಪೋಷಣೆ ಮುಂತಾದ ಅನೇಕ ಕಾರಣಗಳಿವೆ. ತಂಜಾವೂರು ಸಹೋದರರು, ಮತ್ತು ಹಲವು ವಾಗ್ಗೇಯಕಾರರು “ನಾಯಕಿಯ” ಪ್ರತಿಪಾದನೆಗೆ ಪ್ರಾಶಸ್ತ್ಯವನ್ನು ಕೊಟ್ಟರು. ವರ್ಣಮ್, ಪದಮ್, ಜಾವಳಿ ಹೀಗೆ ಅಭಿನಯ ಯೋಗ್ಯವಾದ ಬಹುಪಾಲು ಎಲ್ಲ ಕೃತಿಗಳು ಶೃಂಗಾರ ನಾಯಕಿಗೆ ಸಂಬಂಧಪಟ್ಟಿದ್ದವು. ಈ ಕಲೆ ಕೇವಲ ಹೆಂಗಸರ (ದಾಸಿಯರ) ಕಲೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಗಾಢವಾಗಿ ಮೂಡಿತ್ತು.

ಸ್ವಾತಂತ್ರ್ಯ ಬಂದ ನಂತರ ನೃತ್ಯಕಲೆಯ ಪುನರುತ್ಥಾನದ ವಾಸ್ತುಶಿಲ್ಪಿಗಳಾದ ರುಕ್ಮಿಣೀದೇವಿ ಅರುಂಡೇಲ್ ಮತ್ತು ಇ.ಕೃಷ್ಣಯ್ಯರ್, ಅವನತಿಗೆ ಈಡಾಗಿದ್ದ ನೃತ್ಯ ಕಲೆಯನ್ನು ಪುನರ‍್ಜ್ಜೀವಿತಗೊಳಿಸಿ, ಈ ನೃತ್ಯಕಲೆಗೆ “ಭರತನಾಟ್ಯ”ವೆಂದು ಮರುನಾಮಕರಣ ಮಾಡಿದರು. ಇವರ ಪರಿಶ್ರಮದಿಂದ ನೃತ್ಯಕಲೆ (ಭರತನಾಟ್ಯ) ಮತ್ತೆ ಸಮಾಜದಲ್ಲಿ ಗೌರವಾದರಗಳನ್ನು ಪಡೆದು, ಇಂದು ವಿಶ್ವಮಾನ್ಯತೆಯನ್ನು ಹೊಂದಿದೆ. ರುಕ್ಮಿಣೀದೇವಿ, ಚೆನ್ನೈನಲ್ಲಿ “ಕಲಾಕ್ಷೇತ್ರ”ವನ್ನು ಸ್ಥಾಪಿಸಿ ಹಲವಾರು ಮಂದಿ ಅದ್ಭುತ ನರ್ತಕರನ್ನು ಬೆಳಕಿಗೆ ತಂದರು. ಕಲಾಕ್ಷೇತ್ರದ ಧನಂಜಯನ್, ಸಿ.ವಿ.ಚಂದ್ರಶೇಖರ್, ಜನಾರ್ದನನ್, ಬಾಲಗೋಪಾಲನ್ ಮುಂತಾದ ಮಹಾನ್ ಕಲಾವಿದರು ತಮ್ಮ ಅದ್ಬುತ ಕಲಾಪ್ರೌಢಿಮೆಯಿಂದ ನೃತ್ಯಕಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಇಂದಿನ ನರ್ತಕರಿಗೆ ಆದರ್ಶಪ್ರಾಯರಾಗಿದ್ದಾರೆ.

ತಮಿಳುನಾಡಿನಲ್ಲಿ ನಡೆದ ಈ ಸಾಂಸ್ಕೃತಿಕ ಪುನರುತ್ಥಾನದ ಪ್ರಭಾವ ಕರ್ನಾಟಕದಲ್ಲೂ ಆಯಿತು. ಆ ದಿನಗಳಲ್ಲಿ ಕರ್ನಾಟಕದವರೇ ಆದ ರಾಂಗೋಪಾಲ್ ನೃತ್ಯಕ್ಷೇತ್ರದ ತಾರೆ ಎನಿಸಿದರೂ ಇಲ್ಲಿಯ ಜನ ನೃತ್ಯಕಲೆಯಕಡೆ ಆಕರ್ಷಿತರಾದುದ್ದು, ನೃತ್ಯಕ್ಷೇತ್ರದ ಆದಿದಂಪತಿಗಳೆಂದೇ ಖ್ಯಾತರಾದ ಯು.ಎಸ್.ಕೃಷ್ಣರಾವ್ ಮತ್ತು ಚ್ರಂದ್ರಭಾಗದೇವಿಯವರಿಂದ. ಸಮಾಜದ ಕಟುಟೀಕೆ, ಅವಮಾನಗಳನ್ನು ಲೆಕ್ಕಿಸದೆ, ನೃತ್ಯ ಕ್ಷೇತ್ರವನ್ನು ತಮ್ಮ ಬದುಕನ್ನಾಗಿ ಸ್ವೀಕರಿಸಿ, ರಾಜ್ಯದ ಎಲ್ಲೆಡೆ ಶಾಲಾ ಕಾಲೇಜುಗಳಲ್ಲಿ ಸೋದಾಹರಣ ಭಾಷಣಗಳನ್ನು ನೀಡಿ ಕರ್ನಾಟಕದಲ್ಲಿ ನೃತ್ಯಕಲೆಗೆ ಮಾನ್ಯತೆಯನ್ನು ತಂದುಕೊಟ್ಟರು. ಇವರೆಲ್ಲರ ಶ್ರಮದಿಂದ ನೃತ್ಯಕಲೆಯ ಬಗ್ಗೆ ಇದ್ದ ಕೀಳು ಭಾವನೆ ಹೋಗಿ, ಅನೇಕ ಮಂದಿ ಸಂಪ್ರದಾಯಸ್ಥ ಹೆಣ್ಣುಮಕ್ಕಳು ನೃತ್ಯಕಲಿಯಲು ಮುಂದಾದರು. ಇಂದು ನೃತ್ಯ ಕಲಿಯುವುದು ಒಂದು ಹೆಗ್ಗಳಿಕೆ ಎನ್ನುವಷ್ಟರ ಮಟ್ಟಿಗೆ ಬದಲಾವಣೆಯನ್ನು ಕಾಣುತ್ತಿದ್ದೇವೆ.

ಆದರೆ ಕುಸಿಯುತ್ತಿರುವ ಜೀವನ ಮೌಲ್ಯಗಳು ಸಾರ್ವಜನಿಕವಾಗಿ ನೃತ್ಯ ಹೆಂಗಸರ ಕಲೆ ಎನ್ನುವ ಭಾವನೆಯಿಂದ ಹುಡುಗರು ಈ ಕ್ಷೇತ್ರವನ್ನು ಪ್ರವೇಶಿಸುವುದು ಅಷ್ಟು ಸುಲಭವಾಗಿರಲಿಲ್ಲ. ಸಮಾಜದಲ್ಲಿ ಮಧ್ಯಮವರ್ಗದ ಜನಕ್ಕೆ ತಮ್ಮ ಗಂಡುಮಕ್ಕಳ ಬಗ್ಗೆ ಇರುವ ಆಸೆ, ನಿರೀಕ್ಷೆಗಳಿಂದ ಕೂಡಿದ ನೃತ್ಯ ಕಲಿಸಲು ಹಿಂದೇಟು ಹಾಕುತ್ತಿದ್ದರು. ಈಗೀಗ ಈ ಪರಿಸ್ಥಿತಿ ಬದಲಾಗುತ್ತಿದೆ.

ಹುಡುಗರು ನೃತ್ಯ ಕಲಿಯಲು ಆರಂಭಿಸಿದಾಗ ಕೆಲವು ಸಮಸ್ಯೆಗಳು ಎದುರಾದವು. 70-80ರ ದಶಕಗಳಲ್ಲಿ ಪುರುಷ ನಾಟ್ಯಾಚಾರ್ಯರ ಸಂಖ್ಯೆ ಕ್ಷೀಣಿಸಿ, ನೃತ್ಯ ಕ್ಷೇತ್ರದ ಗುರುಗಳು ಬಹುಪಾಲು ಸ್ತ್ರೀಯರೇ ಆಗಿದ್ದರು. ಇವರೆಲ್ಲಾ ಕಲಿತದ್ದು, ಪ್ರಚಲಿತವಾದ ಸಂಪ್ರದಾಯದಲ್ಲಿದ್ದ ರಚನೆಗಳು. ಇವು ಬಹುಪಾಲು ನಾಯಿಕಾಭಾವದಲ್ಲಿದ್ದವು. ಈ ಶಿಕ್ಷಕಿಯರು ಸಹಜವಾಗಿ, ಹುಡುಗರಿಗೆ ಸರಸಿಜಾಕ್ಷುಲು, ಸಾಮಿಯೈ ಆಳೈತ್ತುವಾ, ಇಂದೆಂದು ವಚ್ಚಿತಿವಿರಾ ಇತ್ಯಾದಿ ನಾಯಕೀಭಾವದ ನೃತ್ಯಬಂಧುಗಳನ್ನು ಹೇಳಿಕೊಡುತ್ತಿದ್ದರು. ನಟನಂ ಆಡಿನಾರ್, ಆಡಿಕೊಂಡಾರ್ ಮುಂತಾದ ಕೆಲವು ಆನಂದ ತಾಂಡವಗಳನ್ನು ಬಿಟ್ಟರೆ, ಎಲ್ಲರ ಪಠ್ಯಸೂಚಿಕೆಯಲ್ಲೂ ನಾಯಕಿಯೇ ತುಂಬಿದ್ದಳು. ಇದೇ ಸರಿಯೇನೋ ಎಂದು ಹುಡುಗರು ಇವುಗಳನ್ನೇ ಕಲಿಯುತ್ತಿದ್ದರು. ಮನುಷ್ಯ, ತನ್ನ ನಡೆ, ನುಡಿ, ಆಲೋಚನಾವಿಧಾನ, ಪ್ರತಿಕ್ರಿಯೆಗಳು ತನ್ನ ಪರಿಸರದಿಂದ ಕಲಿಯುತ್ತಾನೆ, ಪ್ರಭಾವಿತನಾಗುತ್ತಾನೆ. ಕಲಾವಿದನ ಬೆಳವಣಿಗೆಯಲ್ಲಿ ಸೂಕ್ತ ಮಾದರಿಯ, ಆದರ್ಶದ ಅವಶ್ಯಕತೆ ಇರುತ್ತದೆ. ಈ ಆದರ್ಶ ವ್ಯಕ್ತಿ ಆತನ ಗುರುವಾಗಿರಬಹುದು. ಅಥವಾ ಪ್ರಖ್ಯಾತ ನೃತ್ಯಪಟುವಾಗಿರಬಹುದು. ಬೆಳೆಯುವ ಹಂತದಲ್ಲಿರುವ ಕಲಾವಿದ, ಈ ಆದರ್ಶ ವ್ಯಕ್ತಿಯನ್ನು ನೋಡಿ ಸ್ಫೂರ್ತಿ ಪಡೆಯುತ್ತಾನೆ, ಅನುಕರಿಸುತ್ತಾನೆ. ನೃತ್ಯಮಾಧ್ಯಮದ ಮೇಲೆ ಹಿಡಿತ ಬಂದನಂತರ ತನ್ನದೇ ಆದ ಅಭಿವ್ಯಕ್ತಿಯನ್ನು ರೂಢಿಸಿಕೊಳ್ಳುತ್ತಾನೆ. ಸುತ್ತಲೂ ನೃತ್ಯಗಾತಿಯರೇ ಇರುವ ವಾತಾವರಣದಲ್ಲಿ ತನಗೆ ಅರಿವಿಲ್ಲದೆ ಹೆಣ್ಣಿನ ಹಾವ ಭಾವಗಳನ್ನು ಚರ್ಯೆಗಳನ್ನು ಅನುಕರಿಸಲು ತೊಡಗುವ ಅಪಾಯವಿರುತ್ತದೆ. ಒಂದು ಕಡೆ ನಾಯಕೀಭಾವದ ವಸ್ತುಗಳು, ಮತ್ತೊಂದು ಕಡೆ ಪರಿಸರದ ಪ್ರಭಾವ ತತ್ಫಲಿತವಾಗಿ ಬಹಳ ಮಂದಿ ಪುರುಷರು ಹೆಣ್ಣಿನಂತೆ ನರ್ತಿಸಲು ಪ್ರಾರಂಭಿಸಿದರು.

ಇದೇ ಸಂದರ್ಭದಲ್ಲಿ ನೃತ್ಯ ಕಲಿಯಲು ತೊಡಗಿದ ನಾನೂ ಸಹ ನನಗರಿವಿಲ್ಲದೆ ಹೆಣ್ಣಿನ ಆಂಗಿಕಗಳೊಡನೆ ನರ್ತಿಸುತ್ತಿದ್ದೆ. ಆದರೆ ಅದೃಷ್ಟವಶಾತ್, ಕೆಲವು ವಿದ್ವಾಂಸರ, ಹಿರಿಯರ, ಎಚ್ಚರಿಕೆ, ಮಾರ್ಗದರ್ಶನಗಳಿಂದ ಬಹುಬೇಗ ನನ್ನ ಆಂಗಿಕಗಳನ್ನು ಬದಲಾಯಿಸಿಕೊಂಡೆ. ಹಲವು ವರ್ಷ, “ಕಲಾಕ್ಷೇತ್ರ”ದ ನೃತ್ಯ ನಾಟಕಗಳನ್ನು ನೋಡುವ ತನಕ ನನ್ನಂತಹ ನರ್ತಕರಿಗೆ ಪುರುಷರ ನೃತ್ಯವನ್ನು ನೋಡುವ ಅವಕಾಶವೇ ಇರಲಿಲ್ಲ. ನಾನು ನೃತ್ಯ ಕಲಿಯುವ ವೇಳೆಗೆ ಕೃಷ್ಣರಾವ್ ದಂಪತಿಗಳು ಪ್ರದರ್ಶನಗಳಿಂದ ನಿವೃತ್ತರಾಗಿದ್ದರು. ಕಲಾಕ್ಷೇತ್ರದ ನರ್ತಕರನ್ನು ನೋಡಿದ ಮೇಲೆ ಒಮ್ಮೆಲೇ ಕಣ್ಣು ತೆರೆದಂತಾಯಿತು. ಹೊಸ ಪ್ರಪಂಚಕ್ಕೆ ಕಾಲಿಟ್ಟ ಅನುಭವ. ಧನಂಜಯನ್ ಅವರ ನೃತ್ಯ ನೋಡಿದ ಮೇಲಂತೂ ನಾನು ಆನಂದದಿಂದ ಕುಣಿದಾಡಿಬಿಟ್ಟೆ. ನನಗೆ ಮಾದರಿ ಸಿಕ್ಕಂತಾಯಿತು. ಮುಂದಿನ ಮಾರ್ಗ ಸುಗೋಚರವಾಯಿತು.

ಪಟ್ಟದ ಕಲ್ಲಿನ ಶಾಸನಗಳಲ್ಲಿ “ಅಚಲ”ನೆಂಬ ಕಲಾವಿದನ ಬಗ್ಗೆಯೂ, “ನಟಸೇವ್ಯ” ಎಂಬ ನರ್ತಕರನ ಅದ್ಭುತ ನರ್ತನದ ಬಗ್ಗೆಯೂ ಉಲ್ಲೇಖಿತವಾಗಿದೆ. ಭಾರತೀಯ ನೃತ್ಯಕಲೆ ಕಂಡ ಅತ್ಯದ್ಭುತ ನರ್ತಕ ಉದಯಶಂಕರ್. ಅವರ “ಕಾರ್ತಿಕೇಯ” ಮತ್ತು ಶಿವ ತಾಂಡವಗಳು ಇಂದಿಗೂ ರಸಿಕರ ಹೃದಯದಲ್ಲಿ ಅಚ್ಚಳಿಯದೇ ಉಳಿದಿದೆ. ಉದಯಶಂಕರ್ ಯಾವುದೇ ಶಾಸ್ತ್ರೀಯ ನೃತ್ಯ ಶೈಲಿಯನ್ನು ಪ್ರತಿನಿಧಿಸಿರಲಿಲ್ಲ. ಅವರದು “ಓರಿಯಂಟಲ್” ಶೈಲಿ. ಆಂಗಿಕದಲ್ಲಿ, ಕಲಾಪ್ರಜ್ಞೆಯಲ್ಲಿ, ಸೃಜನಾತ್ಮಕತೆಯಲ್ಲಿ, ನೃತ್ಯ ಸಂಯೋಜನೆಯಲ್ಲಿ ಅವರು ಅಪ್ರತಿಮರಾಗಿದ್ದರು. ಅವರ ಅದ್ಭುತ ನರ್ತನವನ್ನು ಸೃಜನಶೀಲತೆಯನ್ನು ಗ್ರಹಿಸಲು ಅವರೇ ನಿರ್ಮಿಸಿದ “ಕಲ್ಪನ” ಚಲನಚಿತ್ರವನ್ನು ನಮ್ಮ ಯುವಕಲಾವಿದರೆಲ್ಲರು ತಪ್ಪದೆ ವೀಕ್ಷಿಸಬೇಕು. ಕಥಕ್ ಶೈಲಿಯ ಬಿರ್ಜು ಮಹಾರಾಜ್, ದುರ್ಗಾಲಾಲ್, ಕಥಕ್ಕಳಿಯ ಕುಂಜು ಕುರೂಪ್, ಕಲಾಮಂಡಲಮ್ ಕೃಷ್ಣನ್ ನಾಯರ್, ಯಕ್ಷಗಾನದ ಮಾಬಲ ಹೆಗ್ಗಡೆ, ಶಂಭೂ ಹೆಗ್ಗಡೆ, ಚಿಟ್ಟಾಣಿ ಮುಂತಾದ ಅನೇಕ ಮಂದಿ ಕಲಾವಿದರು ನರ್ತಕರಲ್ಲಿ ಅಗ್ರಮಾನ್ಯರಾಗಿದ್ದಾರೆ.

ಹಿಂದೆ ಕಾರಣಾಂತರಗಳಿಂದ ನಾಯಕಿಯ ಅಭಿನಯದ ಸಂಪ್ರದಾಯವಿತ್ತು. ಈ ಸಂಪ್ರದಾಯವು ಕಾಲದ ಯಾವುದೋ ಘಟ್ಟದಲ್ಲಿ ಆದ ಬದಲಾವಣೆತಾನೆ. ಈಗ ಮತ್ತೆ ಬದಲಾವಣೆಯ ಕಾಲ ಬಂದಿದೆ. ನರ್ತಕರು ಬಹುಸಂಖ್ಯೆಯಲ್ಲಿ ನೃತ್ಯಕ್ಷೇತ್ರವನ್ನು ಪ್ರವೇಶಿಸುತ್ತಿದ್ದಾರೆ. ಶೃಂಗಾರ ನಾಯಕಿಯ ಸಂಪ್ರದಾಯ ಈಗಾಗಲೇ ಸ್ವಲ್ಪಮಟ್ಟಿಗೆ ಭಕ್ತಿಗೆ ದಾರಿಮಾಡಿಕೊಟ್ಟಿದೆ. ಇಂದು ನರ್ತಕಿಯರೇ ಶೃಂಗಾರನಾಯಕಿಯನ್ನು ಬಿಟ್ಟು ಭಕ್ತಿಪ್ರಧಾನವಾದ ಕೃತಿಗಳನ್ನು ನರ್ತಿಸುತ್ತಿದ್ದಾರೆ. ಕಲೆಯ ದೃಷ್ಟಿಯಿಂದ, ರಸೋತ್ಪತ್ತಿಯ ದೃಷ್ಟಿಯಿಂದ, ಭಕ್ತಿ ಬಹಳ ಸೀಮಿತ ಅಭಿನಯಾವಕಾಶವುಳ್ಳದ್ದು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇರಲಿ, ಸದ್ಯದ ಪರಿಸ್ಥಿತಿಯಲ್ಲಿ ನರ್ತಕರು ಭಕ್ತಿ ಭಾವದ ನಿರೂಪಣೆಗೆ ಮೊರೆ ಹೋಗಬೇಕಾಗಿದೆ. ದಾಸ ಸಾಹಿತ್ಯದಲ್ಲಿ ಇದಕ್ಕೆ ವಿಫುಲವಾದ ಅವಕಾಶವಿದೆ. ಭಕ್ತಿಯಲ್ಲಿ, ನವವಿಧ ಭಕ್ತಿಯನ್ನು ನಾರದ ಭಕ್ತಿಸೂತ್ರ ತಿಳಿಸುತ್ತದೆ. ಅಷ್ಟೇ ಅಲ್ಲದೆ, ಸಾಮಾಜಿಕ ವಿಡಂಬನೆಯ ದೇವರ ನಾಮಗಳೂ ಅಭಿನಯಿಸಲು ಯೋಗ್ಯವಾಗಿದೆ. ಇನ್ನು ಶೃಂಗಾರಾದಿರಸಗಳ ದೃಷ್ಟಿಯಿಂದ ರಾಮಾಯಣ, ಮಹಾಭಾರತಗಳಲ್ಲಿನ ಪಾತ್ರಗಳು, ಹಲವು ಸನ್ನಿವೇಶಗಳೂ ಅಭಿನಯಕ್ಕೆ ಒಳ್ಳೆಯ ಅವಕಾಶವನ್ನು ನೀಡುತ್ತವೆ. ಹಾಗೇ ಕಾಳಿದಾಸಾದಿ ಮಹಾನ್ ಕವಿಗಳು ಕಾವ್ಯಗಳೂ ನಾಯಕ ಪಾತ್ರಗಳ ಅಭಿವ್ಯಕ್ತಿಗೆ ವಿಫುಲವಾದ ಸಾಮಗ್ರಿಗಳನ್ನು ಒದಗಿಸುತ್ತವೆ.

ನಾಯಕ ಮನೋಭಿವ್ಯಕ್ತಿಯ ಕೃತಿಗಳು ಅತ್ಯಂತ ವಿರಳವಾಗಿರುವುದರಿಂದ, ಹಲವು ಮಂದಿ ನರ್ತಕರು, ತಾವು ನರ್ತಿಸಬಯಸುವ ವಸ್ತುಗಳನ್ನು ವಿದ್ವಾಂಸರಿಂದ ಬರೆಯಿಸಿಕೊಂಡು, ಅವುಗಳಿಗೆ ರಾಗ, ನೃತ್ಯ ಸಂಯೋಜನೆಯನ್ನು ಮಾಡಿ ನರ್ತಿಸುತ್ತಿದ್ದಾರೆ. ನಾನೂ ನನ್ನ ಧರ್ಮಪತ್ನಿ ಅನುರಾಧಾ ಜೋಡಿಯಾಗಿ ನರ್ತಿಸುವ ಮಹಾಭಾರತ, ಕಾಳಿದಾಸನ ಕುಮಾರಸಂಭವ, ರಾಮಾಯಣ ಮತ್ತು ಹಲವು ರೂಪಕಗಳು ಪುರುಷ ನೃತ್ಯ ಪಟುವಾಗಿ, ನನ್ನ ಕಲಾಭಿವ್ಯಕ್ತಿಗೆ ನಾನು ಕಂಡು ಕೊಂಡ ಮಾರ್ಗವೂ ಹೌದು. ಶತಾವಧಾನಿ ಗಣೇಶ್ ಅವರು, ಅಷ್ಟನಾಯಕಿಯರಿಗೆ ಸಂವಾದಿಯಾದ, ಕಾಂತಾವಿಧೇಯ, ಭಾಮಿನೀಭೀತ ಇತ್ಯಾದಿ ಅಷ್ಟನಾಯಕರನ್ನು ಪ್ರತಿಪಾದಿಸಿದ್ದಾರೆ. ಮತ್ತು ಇವುಗಳ ನಿರೂಪಣೆಗಾಗಿ ಅನೇಕ ಕೃತಿಗಳನ್ನು ಸಹ ರಚಿಸಿದ್ದಾರೆ. ಕನ್ನಡದ ಹಲವು ಭಾವಗೀತೆಗಳೂ ಅಭಿನಯಿಸಲು ಯೋಗ್ಯವಾಗಿವೆ.

ಶಿಕ್ಷಣದ ಪ್ರಾರಂಭಿಕ ಹಂತದಿಂದಲೇ ಪುರುಷರು ನಾಯಕಿಯ ನೃತ್ಯಬಂಧಗಳನ್ನು ಕಲಿಯಬಾರದು. ಮೊದಲು ಪುರುಷಾಭಿನಯವನ್ನು ಕಲಿತು ಅನಂತರ ನಾಯಕಿಯನ್ನು ಅಧ್ಯಯನ ಮಾಡಬಹುದು. ಈ ಅಡಿಪಾಯ ನರ್ತಕರಿಗೆ ಅತ್ಯಗತ್ಯ. ಈ ನಿಟ್ಟಿನಲ್ಲಿ ನೃತ್ಯಗುರುಗಳು (ವಿಶೇಷವಾಗಿ ಶಿಕ್ಷಕಿಯರು) ಬಹಳ ಜಾಗರೂಕತೆಯಿಂದ, ನರ್ತಕರಿಗೆ ಯೋಗ್ಯವಾದ ಕೃತಿಗಳನ್ನು ಹೇಳಿಕೊಡಬೇಕು. ತಮ್ಮ ಆಂಗಿಕಗಳ ಮೇಲೆ ಹಿಡಿತ ಬಂದನಂತರ ನರ್ತಕರು, ನಾಯಕಿಯ ಅಭಿನಯವನ್ನು ಖಂಡಿತ ಕಲಿಯಬಹುದು. ಕಾರ್ಯಕ್ರಮದಲ್ಲಿ ಪ್ರಧಾನವಾಗಿ ನಾಯಕನನ್ನು ಅಭಿನಯಿಸಿ, ಅನಂತರ ನಾಯಕೀಭಾವದ ವಸ್ತುವನ್ನು ನರ್ತಿಸಬಹುದು.

ನರ್ತಕರು ಹೇಗೆ ನರ್ತಿಸಬೇಕು?

ನೃತ್ಯಕಲೆಯ ಪುನರುತ್ಥಾನದ ಕಾಲದಿಂದ ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಾ ಇದೆ. ನೃತ್ಯದ ಮುಖ್ಯ ವಿಭಾಗ ಆಂಗಿಕಾಭಿನಯ. ಇದು ಶರೀರದ ಭಾಷೆ, ಅಂದರೆ, ಕಲಾಭಿವ್ಯಕ್ತಿಗೆ ನಮ್ಮ ಶರೀರವೇ ಸಾಧನ. ಮಾಧ್ಯಮ, ಲೋಕಧರ್ಮಿಯಲ್ಲಿ ಪುರುಷರಿಗೂ, ಸ್ತ್ರೀಯರಿಗೂ ಆಂಗಿಕಗಳಲ್ಲಿ, ಹಾವಭಾವಗಳಲ್ಲಿ, ಬಹಳ ವ್ಯತ್ಯಾಸವಿರುತ್ತದೆ. ಮಾನಸಿಕವಾಗಿ ಪ್ರತಿಯೊಬ್ಬ ಗಂಡಿನಲ್ಲೂ ಒಂದಷ್ಟು ಹೆಣ್ಣಿನ ಅಂಶವಿರುತ್ತದೆ. ಹಾಗೆಯೇ ಪ್ರತಿಯೊಬ್ಬ ಹೆಣ್ಣಿನಲ್ಲೂ ಒಂದಷ್ಟು ಗಂಡಿನ ಅಂಶವಿರುತ್ತದೆ. ನಿಜ. ಆದರೆ ಇವರ ಶಾರೀರಕ ಜೇಷ್ಟೆಗಳನ್ನು ಸಾಮಾನ್ಯೀಕರಿಸಿ ನೋಡಿದಾಗ ನಾವು ಇದು ಪುರುಷತ್ವ, (ಮಾಸ್ಕುಲೈನ್), ಇದು ಸ್ತ್ರೀತ್ವ (ಫೆಮಿನೈನ್) ಎಂದು ವಿಭಜಿಸುತ್ತೇವಲ್ಲವೆ, ಯಾರೊಬ್ಬರಲ್ಲಿ ಈ ಅಂಶಗಳ ಪ್ರಮಾಣ ಏರುಪೇರಾದರೂ ಅದು ನಮಗೆ ಅಹಿತಕರವಾಗುತ್ತದೆ.

ನಾಟ್ಯಧರ್ಮಿಯಲ್ಲಿ, ಈ ಸ್ವಭಾವಗಳ ಆಧಾರದಿಂದಲೇ ನಾಯಕ, ನಾಯಕಿಯರ ಪ್ರಕೃತಿಭೇದ, ಸತ್ವಭೇದಗಳನ್ನೂ, ಸ್ಥಾನಕ, ಚಾರೀ, ಗತಿ ಭೇದಗಳನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಲೋಕರೀತಿಯನ್ನು ಗಮನಿಸಿದರೆ ಈ ಭೇದ ಚೆನ್ನಾಗಿ ಮನದಟ್ಟಾಗುತ್ತದೆ. ಇಲ್ಲಿಯವರೆಗೆ ನೃತ್ಯ ಸಂಪ್ರದಾಯದಲ್ಲಿ ನಾಯಕಿಗೇ ಆದ್ಯತೆ ನೀಡಿದ್ದರಿಂದ ಪ್ರತಿಯೊಂದು ಆಂಗಿಕ, ಅದು ನೃತ್ಯವೇ ಆಗಲಿ, ಅಭಿನಯವೇ ಆಗಲಿ, ಹೆಣ್ಣುತನವನ್ನು ತೋರಿಸುತ್ತಿತ್ತು. ಭರತನಾಟ್ಯದ ಕೆಲವು ಶೈಲಿಗಳಲ್ಲಿ ನರ್ತಕಿಯೊಬ್ಬಳು ಸಾಧಾರಣವಾಗಿ ನಡೆದಾಗ, ಗುರುಗಳು “ಬಳಕುತ್ತಾ ಒಯ್ಯಾರದಿಂದ ನಡೆ” ಎಂದು ಹೇಳುತ್ತಿದ್ದರು. ಸಹಜವಾದ ಲಾಲಿತ್ಯಕ್ಕಿಂತ ಮಿಗಿಲಾದ ಬಳಕು, ಒಯ್ಯಾರಗಳನ್ನು ಇಂದು ನಿಜಜೀವನದಲ್ಲಿ ಯಾವ ಹೆಣ್ಣೂ ಬಳಸದಿದ್ದರೂ, ನಾಟ್ಯಧರ್ಮಿಯಲ್ಲಿ ಹೀಗೇ ಇರಬೇಕು ಎಂಬ ಭಾವನೆ, ಸಂಪ್ರದಾಯವಾಗಿ ಮುಂದುವರೆದಿತ್ತು. ಈ ನಾಟ್ಯಧರ್ಮಿ, ನಾಟ್ಯಶಾಸ್ತ್ರದ ನಾಯಕಿಯಿಂದ ಗ್ರಹೀತವಾದದ್ದು. ಸ್ತ್ರೀಯರೇ ನರ್ತಿಸುತ್ತಿದ್ದ ಕಾರಣ ಆಂಗಿಕ, ದೃಷ್ಟಿ, ಚಾರೀ ಭೇದಗಳಲ್ಲಿ ಸ್ತ್ರೀತ್ವವನ್ನು, ವಿಶೇಷವಾಗಿ ಶೃಂಗಾರವನ್ನು ಬಳಸುತ್ತಿದ್ದರು. (ಶೃಂಗಾರಾಭಿನಯಕ್ಕೆ “ಅತಿಯಾದ” ಒತ್ತು ಬಂದಿದ್ದೂ ಸಹ ಸಾಮಾಜಿಕ ಕಾರಣಗಳಿಂದ ಎಂದು ಸುಲಭವಾಗಿ ಗ್ರಹಿಸಬಹುದು). ಆಗ “ನೃತ್ಯ” ಕ್ಷೇತ್ರದಲ್ಲಿ ನರ್ತಕ ಇರಲಿಲ್ಲ.

ಆದರೆ ಈಗ ಅನೇಕ ಮಂದಿ ನರ್ತಕರು ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಈಗ ಈ ನೃತ್ಯಕಲೆ “ದಾಸಿ ಆಟ್ಟಮ್” ಅಲ್ಲ. “ಭರತನಾಟ್ಯ”, ನಾಟ್ಯಶಾಸ್ತ್ರದ, ಧೀರೋದ್ಭತ, ಧೀರಲಲಿತ ಧೀರೋದಾತ್ತ, ಧೀರಪ್ರಶಾಂತ, ನಾಯಕರನ್ನು ಭರತನಾಟ್ಯದಲ್ಲಿ ಈಗ ಪುನಪ್ರತಿಷ್ಠಾಪನೆ ಮಾಡಬೇಕಾಗಿದೆ. ನರ್ತಕರು, ಪುರುಷತ್ವದ ಆಂಗಿಕಗಳನ್ನು ಬಳಸಬೇಕು. ಗಂಡು, ಹೆಣ್ಣಿನಂತೆ ನರ್ತಿಸುವ ಅಗತ್ಯವಿಲ್ಲವೆಂದು ಮನಗಾಣಬೇಕು. ಪುರುಷ, ಪೌರುಷನಾಗಿ ನರ್ತಿಸಬೇಕೆಂದ ಮಾತ್ರಕ್ಕೆ, ಬಿಗಿದ ಸ್ನಾಯುಗಳಿಂದ, ಗಡುಸು ಮುಖಚರ್ಯೆಯಿಂದ ನರ್ತಿಸಬೇಕೆಂದು ಅರ್ಥವಲ್ಲ. “ಕೈಶಿಕಿ” ಪ್ರಧಾನವಾದ ಭರತನಾಟ್ಯವನ್ನು ನರ್ತಕರು, ಗಡುಸಲ್ಲದ ಆದರೆ ಸುಲಲಿತವಾದ, ಜಾಳಲ್ಲದ ಆದರೆ, ನಿಖರವಾದ, ಹೆಣ್ಣುತನವಲ್ಲದ ಆದರೆ ಪುಂಸತ್ವವುಳ್ಳ ಆಂಗಿಕದಿಂದ ನರ್ತಿಸಬೇಕು. ಇಂದಿನ ಕಾಲದಲ್ಲಿ ಹೆಂಗಸರೇ ಹೆಣ್ಣುತನದ ಆಂಗಿಕವನ್ನು ಬಿಟ್ಟಿದ್ದಾರೆ. ಇನ್ನು ನರ್ತಕರು ಹೆಣ್ಣಿನ ಬಳುಕು, ಒಯ್ಯಾರಗಳನ್ನು ಅನುಕರಿಸುವುದು ಸರ್ವಥಾ ಸಲ್ಲದು.

“ನೃತ್ಯ”ದಲ್ಲಿ ಅಭಿನಯ, ಆಂಗಿಕ, ಸಾತ್ವಿಕ ಪ್ರಧಾನವಾದದ್ದು. “ನಾಟ್ಯ”ದಲ್ಲಿ ವಾಚಿಕ, ಆಹಾರ್ಯಗಳೂ, ಮುಖ್ಯವಾಗುತ್ತವೆ. ಸಾತ್ವಿಕಾಭಿನಯ ಮಾನಸಿಕ ಕ್ರಿಯೆ. ಜೀವನದ ವಿವಿಧ ಸಂದರ್ಭಗಳಲ್ಲಿ, ಪುರುಷರ ಪ್ರತಿಕ್ರಿಯೆ ಬೇರೆಬೇರೆ ರೀತಿಯದ್ದಾಗಿರುತ್ತದೆ. ಶೃಂಗಾರ, ವೀರ, ರೌದ್ರ, ಕರುಣಾದಿ ರಸಗಳ ವಿಭಾವಗಳಲ್ಲಿ, ಪುರುಷರ ಅನುಭಾವ, ಸಂಚಾರೀ ಭಾವಗಳೂ ಭಿನ್ನವಾಗಿರುತ್ತವೆ. ಈ ಬೇಧವನ್ನು ಗಮನಿಸಿ ನರ್ತಕರು ಅಭಿನಯಿಸಬೇಕು.

“ಪುರುಷರ ಚೇಷ್ಠೆಗಳು, ಧೈರ್ಯ ಲೀಲಾಂಗ ಸಂಪನ್ನವಾಗಿಯೂ ಸ್ತ್ರೀಯರ ಚೇಷ್ಠೆಗಳು, ಮೃದು ಲೀಲಾಂಗಹಾರೋಪೇತವಾಗಿಯೂ, ಹಾಗೆಯೇ ಕರ, ಪಾದ, ಅಂಗಸಂಚಾರಗಳನ್ನು ಪುರುಷರು ಧೀರ ಔಧ್ಧತಗಳಿಂದ ಸ್ತ್ರೀಯರು, ಲಲಿತವಾಗಿಯೂ ಅಭಿನಯಿಸಬೇಕು ಎಂದು ನಾಟ್ಯಶಾಸ್ತ್ರದ ಅಭಿನಯ ಸಾಮಾನ್ಯ ಲಕ್ಷಣವು ಹೇಳುತ್ತದೆ.

ಜೀವಾತ್ಮಪರಮಾತ್ಮ ಸಂಬಂಧ

ಪರಮಾತ್ಮನೊಬ್ಬನೇ ಪುರುಷ, ಜೀವಾತ್ಮರೆಲ್ಲಾ ಸ್ತ್ರೀಯರೇ ಎಂದು ಭಕ್ತಿಪಂಥದ ಒಂದು ವರ್ಗದವರು (ಚೈತನ್ಯ ಮಹಾಪ್ರಭು, ಸೂಫಿ ಸಂತರು ಮುಂತಾದವರು) ಹೇಳುತ್ತಾರೆ. ಈ ತತ್ತ್ವದ ಪ್ರಕಾರ, ಕಲಾವಿದರೆಲ್ಲರೂ ನಾಯಕಿಯರೇ, ಭಗವಂತನೊಬ್ಬನೇ ನಾಯಕ. ಆದ್ದರಿಂದ ಪುರುಷರು ಸಹ ತಾವು ಹೆಣ್ಣೆಂದು ಭಾವಿಸಿ, ವಾಸಕಸಜ್ಜ, ವಿರಹೋತ್ಕಂಠಿತಾದಿ ನಾಯಕಿಯರನ್ನು ಅಭಿನಯಿಸಬೇಕು ಎಂಬ ವಾದವೊಂದಿದೆ. ಈ ತತ್ತ್ವದ ಪ್ರಕಾರ ನೋಡಿದರೆ ನೃತ್ಯದಲ್ಲಿ ಧೀರೋದಾತ್ತಾದಿ ನಾಯಕರು, ಪತಿ, ಉಪಪತಿ-ಇತ್ಯಾದಿ ಶೃಂಗಾರ ನಾಯಕರ ಅವಶ್ಯಕತೆಯೇ ಇಲ್ಲ. ಜೀವರೆಲ್ಲರೂ ನಾಯಕಿಯರೇ ಎಂದು ಭಾವಿಸಿದರೆ ಇನ್ನು ನಾಟ್ಯ ಶಾಸ್ತ್ರವೇಕೆ? ನಾಯಕ ಭೇದಗಳೇಕೆ?

ಆತ್ಮತತ್ತ್ವ ನೃತ್ಯದಲ್ಲಿ ಆಂತರ್ಲೀನವಾಗಿದೆ. ನಾಯಕಿಯ ವಿರಹ, ಆತ್ಮದ ವಿರಹ ಎಂದು ನಾವು ವ್ಯಾಖ್ಯಾನಿಸುತ್ತೇವೆ. ಆದರೆ ನೃತ್ಯದಲ್ಲಿ ಆತ್ಮತತ್ತ್ವವನ್ನು ನಾವು ವೇದಾಂತದಲ್ಲಿದ್ದಂತೆ ವಿದೇಹ ಸ್ತರದಲ್ಲಿ ಅರ್ಥೈಸುತ್ತಿಲ್ಲ. ಲೌಕಿಕಸ್ತರದಲ್ಲಿ, ದೇಹ, ಮನಸ್ಸುಗಳನ್ನು ಉಪಾಧಿಯಾಗಿಟ್ಟುಕೊಂಡು ಅಭಿನಯಿಸುತ್ತೇವೆ. ನರ್ತಕ, ಪುರುಷ ಆಹಾರ್ಯದಲ್ಲಿ, ರತಿಬಾಧೆಯನ್ನು ಅಭಿನಯಿಸುತ್ತಿದ್ದರೆ, ಸಾಮಾನ್ಯ ಪ್ರೇಕ್ಷಕನಿಗೆ ಅಪಥ್ಯವಾಗುತ್ತದೆ.

ಭರತದೇಶದಲ್ಲಿ ಒಂದಲ್ಲ, ಎರಡಲ್ಲ, ಆರು ತತ್ತ್ವ ದರ್ಶನಗಳಿವೆ. ಇವೆಲ್ಲವು ಆತ್ಮತತ್ವವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತವೆ. ಆದೈತವು, ಸರ್ವವೂ ಆತ್ಮನೇ. “ತತ್ವಮಸಿ- ನೀನೇ ಆತ್ಮನಾಗಿದ್ದೀಯ” ಎಂದು ಹೇಳುತ್ತದೆ. ಭಗವದ್ಗೀತೆ, ಆಧ್ಯಾತ್ಮ ಸಾಧನೆಗೆ, ಜ್ಞಾನಯೋಗ, ಶರ್ಮಯೋಗ, ಭಕ್ತಿಯೋಗಗಳನ್ನು ಉಪದೇಶಿಸುತ್ತದೆ. ಇಷ್ಟೊಂದು ಮಾರ್ಗಗಳಲ್ಲಿ, ಭಕ್ತಿಮಾರ್ಗದ ಒಂದು ಪಂಥ. ಈ ಸತಿ-ಪತಿ ತತ್ತ್ವವನ್ನು ಅನುಸರಿಸುತ್ತೆ. ನವವಿಧ ಭಕ್ತಿಯನ್ನು ಹೇಳಿದ ನಾರದರು, ಆಂಜನೇಯ, ಪ್ರಹ್ಲಾದ, ಅರ್ಜುನ, ತುಳಸೀದಾಸ, ಪುರಂದರದಾಸ, ಕನಕದಾಸ, ತ್ಯಾಗರಾಜ, ಬಸವಣ್ಣ, ನಂದನಾರ್ ಮುಂತಾದ ಮಹಾಭಕ್ತರು, ಭಗವಂತನನ್ನು ತಾವು ಹೆಣ್ಣೆಂಬ ಭಾವನೆಯಲ್ಲೇ ಆರಾಧಿಸಲಿಲ್ಲವಲ್ಲ! ಶೃಂಗಾರನಾಯಕಿಯ ವಿರಹಕ್ಕಿಂತ ನರ್ತಕನಿಗೆ, ಭಕ್ತನ ಆರಾಧನೆ, ಯಾತನೆ, ತುಮುಲ, ಹೆಚ್ಚು ಸೂಕ್ತವಲ್ಲವೆ.

ಸಾಮಾನ್ಯವಾಗಿ ಬಹುತೇಕ ನರ್ತಕರು ನಾಯಕಿಯನ್ನು ಅಭಿನಯಿಸಲು ಇಷ್ಟಪಡುವುದಿಲ್ಲ. ಹಿಂದೆ ಕೆಲವರು ಅನಿವಾರ್ಯತೆಯಿಂದ, ಗತ್ಯಂತರವಿಲ್ಲದೆ ನರ್ತಿಸಿದರು. ಭಾಗವತ ಮೇಳನಾಟಕ, ಕೂಚಿಪುಡಿ ರೂಪಕಗಳಲ್ಲಿ, ಕರ್ನಾಟಕದ ಯಕ್ಷಗಾನಗಳಲ್ಲಿ ಪುರುಷರೇ ಸ್ತ್ರೀಪಾತ್ರವನ್ನು ಮಾಡುತ್ತಾರೆ. ಇದಕ್ಕೆ ಸಾಮಾಜಿಕ ಕಾರಣಗಳಿವೆ. ಒಬ್ಬ ನರ್ತಕ, ತಾನು ನಾಯಕಿಯನ್ನು ಅಭಿನಯಿಸಬೇಕೆಂದು ಬಯಸಿದರೆ, ಆತನಿಗೆ ಸಂಪೂರ್ಣ ಸ್ವಾತಂತ್ರ‍್ಯವಿದೆ. ಪ್ರದರ್ಶನದಲ್ಲಿ, ನರ್ತಕನ ದೇಹದ ಮಿತಿಯನ್ನು ಮರೆತು, ಪ್ರೇಕ್ಷಕ ರಸಾನಂದವನ್ನು ಪಡೆಯುವ ಮಟ್ಟದಲ್ಲಿ ಕಲಾವಿದ ಅಭಿನಯಿಸಿದರೆ, ಅದು ಪ್ರಶಂಸನೀಯ, ವಂದನೀಯ. ಒಡಿಸ್ಸಿ ಗುರುಗಳಾದ ಕೇಲೂಚರಣ್ ಮಹೋಪಾತ್ರ ಅವರ ಮನೋಹರ ಲಾಸ್ಯಭರಿತ ಶೃಂಗಾರನಾಯಕಿ, ಅತಿರೇಕವಿಲ್ಲದೆ, ಸಂಯಮದಿಂದ ಅಭಿನಯಿಸುವ ಸತ್ಯಭಾಮ, ಕಲಾಪ್ರೇಮಿಗಳಿಗೆ ಅಲೌಕಿಕ ಆನಂದವನ್ನು ನೀಡಿದೆ.

ಸ್ತ್ರೀಪುರುಷ ತತ್ತ್ವ ಸೃಷ್ಟಿಯ ಅತ್ಯಂತ ಸುಂದರ ಅಂಶ. ಅದು ಶಿವಪಾರ್ವತಿಯರ ತತ್ತ್ವ. ಒಂದು ಅಂಶವನ್ನೇ ಅಭಿನಯಿಸುತ್ತಾ ಬಂದಿದ್ದೇವೆ. ಇನ್ನೊಂದು ಅಂಶವಾದ ಪುರುಷತ್ವವನ್ನೂ ಅಭಿನಯಿಸಿದರೆ, ನೃತ್ಯದ ಅಧಿ ದೇವತೆಯಾದ ನಟರಾಜನಿಗೆ ನಮನಗಳನ್ನು ಸಲ್ಲಿಸಿದಂತಾಗುತ್ತದೆ. ಪುರುಷತ್ವದಿಂದ ನರ್ತಿಸುವ ನರ್ತಕರು, ಇಂದು ತಮ್ಮ ಪ್ರತಿಭೆಯಿಂದ, ಸಾಧನೆಯಿಂದ ಅಂತರಾಷ್ಟ್ರೀಯ ಖ್ಯಾತಿಗಳಿಸಿದ್ದಾರೆ. ಹಿಂದಿನಂತಲ್ಲದೆ, ಇಂದು ಅನೇಕ ಮಂದಿ ಪುರುಷರು ನೃತ್ಯಕ್ಷೇತ್ರವನ್ನು ವೃತ್ತಿಯನ್ನಾಗಿ ಸ್ವೀಕರಿಸುತ್ತಿದ್ದಾರೆ. ಯಶಸ್ಸನ್ನು ಪಡೆಯುತ್ತಿದ್ದಾರೆ. ಆದರೆ ಗಮನವಿರಲಿ, ಯಶಸ್ಸು ಹೂವಿನ ಹಾದಿಯಲ್ಲ. ಅದಕ್ಕೆ ಹತ್ತಿರದ ದಾರಿಯಿಲ್ಲ. ಶ್ರದ್ಧೆ, ಭಕ್ತಿ, ಸಾಧನೆ, ಶಿಸ್ತು, ವಿನಯಗಳಿಂದ ಕಲಾವಿದ ಮೇರು ಶಿಖರಗಳನ್ನೇರುತ್ತಾನೆ. ಅಮರನಾಗುತ್ತಾನೆ.

ನರ್ತಕನ ಗುಣಮಟ್ಟ ಹೆಚ್ಚಿಸಿಕೊಳ್ಳುವುದಕ್ಕೆ ಈ ಕೆಳಗಿನ ಸೂಚನೆಗಳು ಸಹಕಾರಿಯಾಗಬಲ್ಲವು.

1.    ಉತ್ತಮ ತಂತ್ರ-ಉತ್ತಮ ಕಲಾಭಿವ್ಯಕ್ತಿ ಕಲಾವಿದನಿಗೆ ಮಾಧ್ಯಮದ ಮೇಲೆ ಇರುವ ಹಿಡಿತವನ್ನವಲಂಬಿಸಿರುತ್ತೆ. ಮಾರ್ಗ ಪದ್ಧತಿಯಲ್ಲಿ ತಂತ್ರವೇ ಅಡಿಪಾಯ.

2.   ಪುರುಷನ ನೃತ್ಯ ಶೈಲಿಗಳಾದ ಕಥಕ್ಕಳಿ, ಕಲರಿ, ಚೌ ಇತ್ಯಾದಿಗಳನ್ನು ಅಧ್ಯಯನ ಮಾಡಿ ಅವುಗಳ ಸೂಕ್ಷ್ಮಗಳನ್ನು ಗ್ರಹಿಸುವುದು.

3.    ಹಿರಿಯ ನರ್ತಕರು ತಮ್ಮ ಸಮಸ್ಯೆಗಳಿಗೆ ಕಂಡುಕೊಂಡ ಪರಿಷ್ಕಾರವನ್ನು ಕಲಾವಿದರು ತಿಳಿದುಕೊಳ್ಳುವುದು/ಮಾರ್ಗ ದರ್ಶನ ಪಡೆಯುವುದು.

ಸಂಗೀತ ನೃತ್ಯ ಅಕಾಡೆಮಿಯು ಹಮ್ಮಿಕೊಳ್ಳಬಹುದಾದ ಕೆಲವು ಯೋಜನೆಗಳು:

1.    ನರ್ತಕರಿಗೆ ಸೂಕ್ತವಾದ ರಚನೆಗಳನ್ನು ಸಮೀಕರಿಸಿ ಪ್ರಕಟಿಸುವುದು.

2.    ನರ್ತಕರಿಗೆ ಹೊಸ ಪಠ್ಯಸೂಚಕೆಯನ್ನು ಸಿದ್ಧಪಡಿಸಿ, ಇದನ್ನು ಪ್ರತಿ ನೃತ್ಯಶಾಲೆಗೂ ತಿಳಿಸುವುದು.

3.    ನುರಿತ ನರ್ತಕರಿಂದ ಕಾರ್ಯಾಗಾರಗಳನ್ನು ನಡೆಸುವುದು.

4.    ನರ್ತಕರಿಗೆ ಹೆಚ್ಚು ಪ್ರದರ್ಶನಾವಕಾಶವನ್ನು ನೀಡುವುದು.

5.    ನೃತ್ಯ ಗುರುಗಳಿಗೆ ನೃತ್ಯ ರೂಪಕಗಳನ್ನು ಸಂಯೋಜಿಸಲು ಪ್ರೇರೇಪಿಸಿ ನರ್ತಕರಿಗೆ ಅವಕಾಶ ಕಲ್ಪಿಸುವುದು.

ಸಮಾಜ, ಮತ್ತು ಕಲೆಯ ದೃಷ್ಟಿಯಿಂದ ನರ್ತಕನ ಬಗ್ಗೆ ಇನ್ನೂ ಹೆಚ್ಚು ಅಧ್ಯಯನವಾಗಬೇಕಾಗಿದೆ.