‘ಅಣ್ಣ, ರಾಜ್ಯವನ್ನು ನಿನಗೆ ಒಪ್ಪಿಸುತ್ತೇನೆ. ನೀನೇ ಬಂದು ಸಿಂಹಾಸನವೇರು, ರಾಜ್ಯವಾಳು.’

‘ಕುಮಾರ, ನೀನೆ ರಾಜ್ಯವನ್ನು ಆಳಬೇಕು. ನಾನು ಹದಿನಾಲ್ಕು ವರ್ಷ ಕಾಡಿನಲ್ಲಿದ್ದು ಬರುತ್ತೇನೆ.’

ಇಂತಹ ಸಂಭಾಷಣೆ ವಿಚಿತ್ರ ಎಂದು ತೋರುತ್ತದೆ. ಪದವಿ ಬೇಕು, ಅಧಿಕಾರ ಬೇಕು, ವೈಭವ ಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ, ಅದು ಸಹಜ. ಆದರೆ ತಾನಾಗಿ ಬಂದ ರಾಜಪದವಿಯನ್ನು ತಮ್ಮ ಅಣ್ಣನಿಗೆ ಅರ್ಪಿಸುವುದು, ನೀನೆ ರಾಜ್ಯವನ್ನು ಆಳಬೇಕು, ನಾನು ಕಾಡಿನಲ್ಲಿ ಇರುತ್ತೇನೆ ಎಂದು ಅಣ್ಣ ಹಠ ಹಿಡಿಯುವುದು – ಎಷ್ಟು ವಿಚಿತ್ರ, ಎಷ್ಟು ಉದಾತ್ತ!

ತಮ್ಮ ಭರತ, ಆಣ್ಣ ಶ್ರೀರಾಮ. ಇವರ ಕಥೆಯನ್ನು ವಾಲ್ಮೀಕಿಯು ರಾಮಾಯಣ ಎನ್ನುವ ಮಹಾಕಾವ್ಯದಲ್ಲಿ ಹೇಳಿದ್ದಾರೆ.

ರಾಮಾಯಣ ಮತ್ತು ಮಹಾಭಾರತಗಳು ಲೋಕಪೂಜ್ಯವಾದ ಗ್ರಂಥಗಳಾಗಿವೆ. ಇವೆರಡೂ ಲೋಕದ ಎಲ್ಲ ಜನರಿಗೆ ಮಾರ್ಗದರ್ಶನ ನೀಡುವ ಮಹಾಗ್ರಂಥಗಳಾಗಿವೆ. ಮಹಾಭಾರತವು ಸೋದರರು ಹೇಗೆ ಬಾಳಿದರೆಂಬುದನ್ನು ತಿಳಿಸುತ್ತದೆ. ರಾಮಾಯಣವು ಸೋದರರು ಹೇಗೆ ಬಾಳಬೇಕೆಂಬುದನ್ನು ತಿಳಿಸುತ್ತದೆ. ಜಗತ್ತಿನಲ್ಲಿ ಅಪೂರ್ವವೆಂಬಂತೆ ಬಾಳಿ ಬೆಳಗಿದ ರಾಮ, ಲಕ್ಷ್ಮಣ, ಭರತ, ಶತ್ರುಘ್ನ – ಈ ಸೋದರರ ಪುಣ್ಯಕಥೆಯು ರಾಮಾಯಣದಲ್ಲಿ ವಿಸ್ತಾರವಾಗಿ ಬಂದಿದೆ.

ದಶರಥನ ಮಕ್ಕಳು

ಭರತಖಂಡದಲ್ಲಿ ಹಿಂದೆ ಕೋಸಲ ದೇಶವು ಒಂದು ಪ್ರಸಿದ್ಧವಾದ ರಾಜ್ಯವಾಗಿದ್ದಿತು. ಇದು ಸಕಲ ಸಂಪತ್ತುಗಳಿಂದಲೂ ಕೂಡಿದ್ದಿತು.

ಕೋಸಲದ ರಾಜಧಾನಿ ಅಯೋಧ್ಯೆ. ಅಲ್ಲಿ ದಶರಥ ಮಹಾರಾಜನು ಚಕ್ರವರ್ತಿ. ಆತನು ವೈಭವದಿಂದಲೂ, ಧರ್ಮದಿಂದಲೂ ರಾಜ್ಯವನ್ನಾಗಳುತ್ತಿದ್ದನು. ಈತನಿಗೆ ಮೂರು ಜನ ಹೆಂಡತಿಯರು – ಕೌಸಲ್ಯೆ, ಕೈಕಯಿ ಮತ್ತು ಸುಮಿತ್ರೆ. ಬಹುಕಾಲದವರೆಗೆ ಈತನಿಗೆ ಮಕ್ಕಳಾಗಲಿಲ್ಲ. ರಾಜಗುರುಗಳ ಅಪ್ಪಣೆಯಂತೆ ಈತನು ಪುತ್ರಿಕಾಮೇಷ್ಟಿ ಯಾಗವನ್ನು ಭಕ್ತಿಪೂರ್ವಕವಾಗಿಯೂ ಸಮೃದ್ಧಿಯಿಂದಲೂ ಮಾಡಿದನು. ದಶರಥನಿಗೂ ಅವನ ಹೆಂಡತಿಯರಿಗೂ ದೈವಕೃಪೆ ಆಯಿತು.  ಅವರ ಪ್ರಾರ್ಥನೆ ಸಾರ್ಥಕವಾಯಿತು.

ದಶರಥನ ಮಡದಿಯರು ಶುಭ ದಿನದ ಶುಭ ಮುಹೂರ್ತಗಳಲ್ಲಿ ನಾಲ್ವರು ಗಂಡು ಮಕ್ಕಳನ್ನು ಪ್ರಸವಿಸಿದರು. ಕೌಸಲ್ಯೆಯ ಕುಮಾರನಿಗೆ ರಾಮಚಂದ್ರನೆಂದೂ, ಕೈಕಯಿ ಕುಮಾರನಿಗೆ ಭರತವೆಂದೂ, ಸುಮಿತ್ರೆಯ ಕುಮಾರರಿಗೆ ಲಕ್ಷ್ಮಣ, ಶತ್ರುಘ್ನರೆಂದೂ ಹೆಸರಿಟ್ಟರು. ಅರಮನೆಯಲ್ಲಿಯೂ ರಾಜ್ಯದಲ್ಲಿಯೂ ಸಂತೋಷ ಸಂಭ್ರಮಗಳು ತುಳುಕಾಡಿದವು.

ವಿನಯಗುಣಸಂಪನ್ನರೂ, ಅತ್ಯಂತ ತೇಜಸ್ವಿಗಳೂ ಆಗಿ ಈ ಮಕ್ಕಳು ಬೆಳೆದರು. ವೇದ, ಇತಿಹಾಸ, ಕಾವ್ಯಾದಿಗಳನ್ನು ಅಧ್ಯಯನ ಮಾಡಿದರು. ಕ್ಷತ್ರಿಯರಿಗೆ ಯೋಗ್ಯವಾದ ಅಶ್ವಾರೋಹಣ, ರಥಾರೋಹಣ, ಧನುರ್ವಿದ್ಯೆ ಮೊದಲಾದವುಗಳನ್ನು ಕಲಿತರು. ಮಕ್ಕಳ ರೂಪ, ತೇಜಸ್ಸು, ವಿದ್ಯೆ, ಸದ್ಗುಣಗಳನ್ನು ನೋಡಿ ತಂದೆ ತಾಯಿಯರಿಗೆ ಹಿಗ್ಗು.

ವಿಶ್ವಾಮಿತ್ರರು ಬಂದರು

ಮಕ್ಕಳು ಬೆಳೆದು ದೊಡ್ಡವರಾಗುತ್ತ ಬಂದರು. ಎಲ್ಲರೂ ಒಬ್ಬ ತಾಯಿಯ ಮಕ್ಕಳು ಎನ್ನುವಂತೆಯೇ ಬೆಳೆದರು. ತಾಯಿಯರೂ ಎಂದೂ ಇವನು ನನ್ನ ಮಗ, ಅವನು ಇನ್ನೊಬ್ಬಳ ಮಗ ಎನ್ನುವ ಯೋಚನೆ ಮಾಡಿದವರಲ್ಲ. ಲಕ್ಷ್ಮಣನಿಗೆ ರಾಮನೆಂದರೆ ವಿಶೇಷ ಪ್ರೀತಿ. ಭರತ-ಶತ್ರುಘ್ನರು ಯಾವಾಗಲೂ ಜೊತೆ. ಆದರೆ ರಾಮಚಂದ್ರ ಎಂದರೆ ಮೂವರು ತಮ್ಮಂದಿರಿಗೂ ಅಪಾರ ಗೌರವ, ಪ್ರೀತಿ . ರಾಮನೂ ಅವರನ್ನು ಅಷ್ಟೇ ಪ್ರೀತಿ ಅಭಿಮಾನಗಳಿಂದ ಕಾಣುವನು. ನಾಲ್ಕು ಜನ ಮಕ್ಕಳೂ ದಶರಥನ ಮೂವರು ರಾಣಿಯರನ್ನೂ ಒಂದೇ ಪ್ರೀತಿಯಿಂದ ಕಾಣುವರು. ಪ್ರೀತಿ, ವಾತ್ಸಲ್ಯ ಅಭಿಮಾನಗಳಿಂದ ಅರಮನೆಯ ವಾತಾವರಣದಲ್ಲಿಯೇ ಸಂತೋಷ ಬೆರೆತು ಹೋಗಿತ್ತು.

ಮಕ್ಕಳು ದೊಡ್ಡವರಾದರು. ವಿದ್ಯಾಭ್ಯಾಸವೂ ಮುಗಿದಂತಾಯಿತು. ಇವರಿಗೆ ಮದುವೆ ಮಾಡಬೇಕು ಎಂಬ ಯೋಚನೆ ದಶರಥನಿಗೂ ಅವನ ರಾಣಿಯರಿಗೂ ಬಂದಿತು.

ಇದೇ ಸಮಯದಲ್ಲಿ ಒಂದು ದಿನ ವಿಶ್ವಾಮಿತ್ರ ಮುನಿಯೂ ದಶರಥನಲ್ಲಿಗೆ ಬಂದನು. ರಾಜನು ಅವನನ್ನು ಗೌರವದಿಂದ ಬರಮಾಡಿಕೊಂಡ. ವಿಶ್ವಾಮಿತ್ರನು, “ಮಹಾರಾಜ, ನಾನು ಒಂದು ಯಜ್ಞ ಮಾಡುತ್ತಿದ್ದೇನೆ. ಇದಕ್ಕೆ ರಾಕ್ಷಸರಿಂದ ಮತ್ತೆ ಮತ್ತೆ ತೊಂದರೆಯುಂಟಾಗುತ್ತಿದೆ, ಯಜ್ಞ ರಕ್ಷಣೆಗಾಗಿ ನಿನ್ನ ಹಿರಿಯ ಮಗ ರಾಮನನ್ನು ನನ್ನ ಜೊತೆಗೆ ಕಳುಹಿಸು” ಎಂದು ಕೇಳಿದ.

ಈ ಪ್ರಾರ್ಥನೆಯನ್ನು ಕೇಳಿ ದಶರಥನಿಗೆ ಮನಸ್ಸು ಕಲಕಿತು. ಮುದ್ದು ಮಗನನ್ನು ಭಯಂಕರ ರಾಕ್ಷಸರ ವಧೆಯಂತಹ ಕಠಿಣವಾದ ಕೆಲಸಕ್ಕೆ ಹೇಗೆ ಕಳುಹಿಸಲಿ ಎಂದು ಚಿಂತಿಸಿದ. ಕೊನೆಗೆ ಅವನ ಗುರು ವಸಿಷ್ಠರು, “ದಶರಥಾ, ವಿಶ್ವಾಮಿತ್ರ ಋಷಿಗಳ ಬಳಿ ರಾಮನಿಗೆ ಅಪಾಯವೆಂತಹದು? ಸಂತೋಷವಾಗಿ ಕಳುಹಿಸು” ಎಂದರು. ರಾಮ ಲಕ್ಷ್ಮಣರನ್ನು ದಶರಥನು ಕಳುಹಿಸಿ ಕೊಟ್ಟನು.

ರಾಮಲಕ್ಷ್ಮಣರು ವಿಶ್ವಾಮಿತ್ರರೊಡನೆ ನಡೆದರು. ದಾರಿಯ ಮಧ್ಯದಲ್ಲಿ ವಿಶ್ವಾಮಿತ್ರನು ಈ ಅರಸು ಮಕ್ಕಳಿಗೆ ಕೆಲವು ಅಸಾಧಾರಣ ಮಂತ್ರಶಕ್ತಿಗಳನ್ನು ಉಪದೇಶಿಸಿದನು ಮತ್ತು ಕೆಲವು ವಿಶೇಷ ಅಸ್ತ್ರಗಳನ್ನು ಪ್ರಯೋಗಿಸುವ ಶಕ್ತಿಯನ್ನೂ ನೀಡಿದನು.

ರಾಮ ಲಕ್ಷ್ಮಣರು ತಾಟಕಿ, ಮಾರಿಚ, ಸುಬಾಹು ಮೊದಲಾದ ರಾಕ್ಷಸರನ್ನು ಕೊಂದರು. ವಿಶ್ವಾಮಿತ್ರನ ಯಜ್ಞವು ಯಾವ ತೊಂದರೆಯೂ ಇಲ್ಲದೆ ಕೊನೆಗೊಂಡಿತು. ಮುನಿಯು ಸಂತೋಷಗೊಂಡನು.

ಮದುವೆಗಳ ಸಂಭ್ರಮ

ಆಗ ಮಿಥಿಲಾನಗರದಲ್ಲಿ ಅಲ್ಲಿಯ ಅರಸನಾದ ಜನಕನು ಒಂದು ಯಜ್ಞವನ್ನು ಮಾಡುತ್ತಾನೆಂಬ ಸುದ್ಧಿಯು ತಿಳಿಯಿತು. ವಿಶ್ವಾಮಿತ್ರನು ರಾಮಲಕ್ಷ್ಮಣರನ್ನು ಅಲ್ಲಿಗೆ ಕರೆದೊಯ್ದನು. ಜನಕನ ಬಳಿ ಒಂದು ಅಮೋಘವಾದ ಶಿವಧನುಸ್ಸಿದ್ದಿತು. ಆ ಶಿವಧನುಸ್ಸನ್ನು ಹೆದೆಯೇರಿಸಿದವರಿಗೆ ಸೀತೆಯನ್ನು ಕೊಟ್ಟು ಮದುವೆ ಮಾಡುವುದಾಗಿ ಜನಕನು ತಿಳಿಸಿದ್ದನು. ಅನೇಕರು ಈ ಪ್ರಯತ್ನದಲ್ಲಿ ವಿಫಲರಾಗಿದ್ದರು.

ಶ್ರೀರಾಮನು ಶಿವಧನುಸ್ಸಿನ ಬಳಿಗೆ ಬಂದು ಎಲ್ಲ ದೇವತೆಗಳಿಗೂ ವಂದಿಸಿ, ಕ್ಷಣಮಾತ್ರದಲ್ಲಿ ಅದನ್ನು ಹೆದೆಯೇರಿಸಿ ವಿಜಯಶಾಲಿಯಾದನು. ಜನಕನೂ ಸಂತೋಷಗೊಂಡನು. ದಶರಥನನ್ನು ಪರಿವಾರ ಸಹಿತ ಬರಮಾಡಿಕೊಂಡನು.  ಸೀತಾದೇವಿಯನ್ನು ರಾಮನಿಗೆ ಕೊಟ್ಟು ಲಗ್ನ ಮಾಡಿದನು. ಅಲ್ಲದೆ ರಾಮನ ಸಹೋದರನಾದ ಲಕ್ಷ್ಮಣನಿಗೆ ತನ್ನ ಮಗಳು ಊರ್ಮಿಳೆಯನ್ನು ಕೊಟ್ಟು ಮದುವೆ ಮಾಡಿದನು. ಜನಕರಾಜನ ತಮ್ಮ ಕುಶಧ್ವಜನಿಗೆ ಇಬ್ಬರು ಹೆಣ್ಣು ಮಕ್ಕಳು, ಮಾಂಡವಿ ಮತ್ತು ಶ್ರುತಕೀರ್ತಿ. ಮಾಂಡವಿ ಭರತನ ಕೈಹಿಡಿದಳು, ಶ್ರುತಕೀರ್ತಿ ಶತ್ರುಘ್ನನ ಹೆಂಡತಿಯಾದಳು. ಮದುವೆಗಳು ಬಹು ಸಂಭ್ರಮದಿಂದ ನಡೆದವು. ಎಲ್ಲರೂ ಸಂತೋಷದಿಂದ ಅಯೋದ್ಯೆಗೆ ಹಿಂದಿರುಗಿದರು.

ರಾಮನಿಗೆ ಪಟ್ಟಾಭಿಷೇಕ ಮಾಡುತ್ತೇನೆ

ಕೆಲವು ದಿನಗಳು ಕಳೆದವು. ಭರತನ ತಾಯಿ ಕೈಕಯಿ ಕೇಕಯ ರಾಜ್ಯದ ರಾಜನ ಮಗಳು. ಕೇಕಯ ರಾಜನು ಭರತ ಶತ್ರುಘ್ನರನ್ನು ತನ್ನ ರಾಜಧಾನಿಗೆ ಬರುವಂತೆ ಕರೆದ. ಅವರಿಬ್ಬರೂ ಅಲ್ಲಿ ಕೆಲವು ದಿನಗಳನ್ನು ಕಳೆದುಬರಲು ಹೊರಟರು.

ದಿನಗಳು ಕಳೆದಂಥೆ ದಶರಥನಿಗೆ , ತನಗೆ ಮುಪ್ಪಾಯಿತು, ಬಲ ಕುಂದುತ್ತಿದೆ ಎಂಬ ಭಾವನೆ ಬೆಳೆಯತೊಡಗಿತು. ಶ್ರೀರಾಮ ಮೊದಲನೆಯ ಮಗ, ಶೂರ, ಎಲ್ಲ ಗುಣಗಳ ಸಂಪನ್ನ. ಅವನಿಗೆ ಪಟ್ಟಾಭಿಷೇಕ ಮಾಡಿ ತಾನು ರಾಜ್ಯಭಾರದ ಹೊರೆಯನ್ನು ಬಿಡುವುದು ಸರಿ ಎಂದು ತೋರಿತು. ರಾಮನಿಗೆ ಪಟ್ಟಾಭಿಷೇಕ ಮಾಡುವೆನೆಂದು ತೀರ್ಮಾನಿಸಿದ. ತೀರ್ಮಾನಿಸಿದುದುಏ ತಡ, ಆದಷ್ಟು ಬೇಗನೆ ಇದು ನಡೆದು ಹೋಗಲಿ ಎಂದು ಎನ್ನಿಸಿತು. ತನ್ನ ಮಂತ್ರಿಗಳನ್ನೂ ಪ್ರಜಾಪ್ರಮುಖರನ್ನೂ ಕರೆದು ತನ್ನ ನಿಶ್ಚಯವನ್ನೂ ತಿಳಿಸಿದ.  ದಶರಥನಿಗೆ ಕೇಕಯ ರಾಜನಿಗಾಗಲೀ, ಜನಕ ಮಹಾರಾಜನಿಗಾಗಲೀ ಹೇಳಿ ಕಳುಹಿಸುವಷ್ಟು ತಾಳ್ಮೆ ಇಲ್ಲ. ಅವರಾದರೂ ರಾಮನ ಹಿತೈಷಿಗಳೇ, ವಿಷಯ ತಿಳಿದಾಗ ಸಂತೋಷಪಡುತ್ತಾರೆ ಎಂದುಕೊಂಡ.

ನಿನ್ನ ಗಂಡಾಂತರವನ್ನು ಮರೆತಿದೀಯೆ

ಅಯೋಧ್ಯಾ ಪಟ್ಟಣವೆಲ್ಲವೂ ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ಬಹು ಸುಂದರವಾಗಿ ಸಿಂಗಾರಗೊಂಡಿತು. ಎಲ್ಲೆಡೆಯೂ ತಳಿರು ತೋರಣಗಳು, ಸಡಗರ ಸಂಭ್ರಮ ಕಂಡುಬಂದವು. ಸಂಗೀತ, ನರ್ತನ ಗೋಷ್ಠಿಗಳು ಸಿದ್ಧವಾದುವು. ಬ್ರಾಹ್ಮಣರು ವೇದಮಂತ್ರಗಳನ್ನು ಜಪಿಸುತ್ತಿದ್ದರು. ಪಟ್ಟಾಭಿಷಿಕ್ತನಾದ ರಾಮನನ್ನು ಕಾಣಲು ಜನಗಳು ಉತ್ಸಾಹದಿಂದ ಕಾದಿದ್ದರು.

ಕೈಕಯಿಯ ದಾಸಿಯರಲ್ಲಿ ಒಬ್ಬಳು ಮಂಥರೆ ಎಂಬವಳು ಅವಳು ಸದಾ ಕೈಕಯಿಯ ಜೊತೆಯಲ್ಲಿರುವಳು. ಅವಳಲ್ಲಿ ಕೈಕಯಿಗೆ ಬಹು ಪ್ರೀತಿ. ಅವಳಿಗೆ , ಶ್ರೀರಾಮನಿಗೆ ಪಟ್ಟಾಷೇಕ ಎಂದು ಕೇಳುತ್ತಲೇ ಸಂಕಟವಾಯಿತು. ತನ್ನ ಯಜಮಾನಿ ಕೈಕಯಿಯ ಮಗನಿಗೆ ರಾಜ್ಯವಿಲ್ಲ, ಕೌಸಲ್ಯೆ ಇನ್ನು ರಾಜನ ತಾಯಿ ಎನ್ನಿಸಿಕೊಳ್ಳುತ್ತಾಳೆ ಎಂದು ದುಃಖವಾಯಿತು.

ಅವಳು ಕೈಕಯಿಗೆ ದುರ್ಬೋಧನೆ ಮಾಡಿದಳು. “ಎಲೈ ಮೂಢೆಯಾದ ದೇವಿಯೇ, ಬಂದ ಗಂಡಾಂತರವನ್ನು ಅರಿಯದೆ ಮೈಮರೆತಿದ್ದೀಯೆ. ನಿನ್ನ ಪತಿ ದಶರಥನು ಮಹಾ ಕಪಟಿ. ಸಮಸ್ತವನ್ನೂ ಕೌಸಲ್ಯೆಯ ಅಧೀನ ಮಾಡುತ್ತಿದ್ದಾನೆ. ನಾಳೆಯೇ ಆಕೆಯ ಮಗನಿಗೆ ಪಟ್ಟಾಭಿಷೇಕ. ಇದಕ್ಕಾಗಿ ನಿನ್ನ ಮಗ ಭರತನನ್ನು ಸೋದರಮಾವನ ಮನೆಗೆ ಕಳುಹಿಸುವ ನೆಪದಿಂದ ದೂರಮಾಡಿದ್ದಾನೆ. ದಶರಥನು ನಿನಗೆ ಪತಿರೂಪದ ಮಹಾ ಶತ್ರು” ಎಂದು ಹೇಳಿ ಅತ್ತಳು.

ಶ್ರೀರಾಮ ರಾಜನಾಗುತ್ತಾನೆ ಎಂದು ಕೇಳಿ ಕೈಕಯಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ‘ಎಂತಹ ಸಂತೋಷದ ಸುದ್ದಿ ತಂದೆ!’ ಎಂದು ಮಂಥರೆಗೆ ಒಂದು ಒಡವೆಯನ್ನು ಬಹುಮಾನವನ್ನಾಗಿ ಕೊಟ್ಟಳು. ಮಂಥರೆಯು ಅವಳಿಗೆ, “ನಿನಗೆ ಬುದ್ಧಿ ಇಲ್ಲ. ರಾಮನು ರಾಜನಾದರೆ ನೀನೂ ಒಬ್ಬ ಸೇವಕಿಯಾಗುತ್ತಿ, ಅಷ್ಟೆ ನಿನಗಾಗಲಿ ನಿನ್ನ ಮಗನಿಗಾಗಲಿ ಗೌರವ ಉಂಟೇ, ಪದವಿ ಉಂಟೇ!” ಎಂದಳು. ಕೈಕಯಿಯು, “ಮಂಥರೆ, ಶ್ರೀರಾಮನು ಎಲ್ಲ ರೀತಿಗಳಲ್ಲಿಯೂ ರಾಜನಾಗುವ ಯೋಗ್ಯತೆ ಪಡೆದವನು. ನನ್ನನ್ನು ತನ್ನ ತಾಯಿಯ ಹಾಗೆಯೇ ಪ್ರೀತಿಸುತ್ತಾನೆ. ಅವನು ರಾಜನಾದರೆ ಭರತನೇ ರಾಜನಾದಂತೆ” ಎಂದು ಉತ್ತರ ಹೇಳಿದಳು. ಆದರೂ ಮಂಥರೆ ಬಿಡುವವಳಲ್ಲ. ಅಂತೂ ಕಡೆಗೆ, ರಾಮನು ರಾಜನಾಗುವುದು ತನಗೂ ಭರತನಿಗೂ ಕೇಡು ಎಂದು ಕೈಕಯಿ ನಂಬುವಂಥೆ ಮಾಡಿದಳು.

ರಾಮನಿಗೆ ಸಿಂಹಾಸನ ದೊರೆಯದಂಥೆ ಮಾಡಿ ಭರತನನ್ನು ರಾಜನನ್ನಾಗಿ ಮಾಡುವುದು ಹೇಗೆ ಎಂದು ಕೈಕಯಿಗೆ ಚಿಂತೆಯಾಯಿತು.

ಎರಡು ವರಗಳು

ಮಂಥರೆಯೇ ದಾರಿ ತೋರಿಸಿದಳು. ಹಿಂದೊಮ್ಮೆ ದೇವತೆಗಳಿಗೂ ರಾಕ್ಷಸರಿಗೂ ಯುದ್ಧವಾದಾಗ ದಶರಥನು ದೇವತೆಗಳ ಪರವಾಗಿ ಯುದ್ಧ ಮಾಡಿದ. ರಣರಂಗದಲ್ಲಿ ಏಟಿನಿಂದ ದಶರಥ ಮೂರ್ಛೆಹೋದ. ಕೈಕಯಿ ಅವನ ರಥವನ್ನು ನಡೆಸಿ ಅವನನ್ನು ಕಾಪಾಡಿದಳು. ದಶರಥನು ಅವಳ ಸಹಾಯವನ್ನು ಮೆಚ್ಚಿಕೊಂಡು, ನೀನು ಕೇಳಿದಾಗ ಎರಡು ವರಗಳನ್ನು ಕೊಡುತ್ತೇನೆ ಎಂದು ಮಾತುಕೊಟ್ಟ.

ಮಂಥರೆ ಇದನ್ನು ಕೈಕಯಿಗೆ ಜ್ಞಾಪಿಸಿದಳು.

“ದೇವಿ, ಈಗ ನಿನ್ನ ಮಗ ಭರತನಿಗೆ ರಾಜ್ಯಾಭಿಷೇಕವೂ, ರಾಮನಿಗೆ ದೇಶತ್ಯಾಗವೂ ಆಗುವ ಉಪಾಯವೊಂದನ್ನು ಹೇಳುತ್ತೇನೆ ಕೇಳು.  ಹಿಂದೆ ದೇವ-ದಾನವರ ಯುದ್ಧದಲ್ಲಿ ನಿನ್ನ ಪತಿಯು ನಿನಗೆ ಎರಡು ವರಗಳನ್ನು ಕೊಟ್ಟಿದ್ದನಷ್ಟೆ. ಒಂದು ವರದಿಂದ ಭರತನಿಗೆ ಪಟ್ಟಾಭಿಷೇಕ ಮಾಡಿಸು. ಮತ್ತೊಂದು ರಾಮನಿಗೆ ಹದಿನಾಲ್ಕು ವರ್ಷ ವನವಾಸವಾಗುವ ಹಾಗೆ ಮಾಡು. ಈಗ ನೀನು ಅಂತಃಪುರದ ಕೋಪಗೃಹದಲ್ಲಿ ಕೊಳೆಯಾದ ಬಟ್ಟೆಗಳನ್ನುಟ್ಟು ದುಃಖಗೊಂಡವಳಂತಿರು. ದಶರಥನಿಗೆ ನಿನ್ನ ಮೇಲೆ ಅತಿ ಪ್ರೀತಿಯುಂಟು. ನಿನಗಾಗಿ ಪ್ರಾಣವನ್ನೂ ಕೊಡುತ್ತಾನೆ. ಅವನು ಬಂದಾಗ ಈ ವರಗಳನ್ನೆ ಬೇಡು. ಆದರೆ ಈ ವರಗಳಿಗೆ ಬದಲಾಗಿ ಅವನು ಕೊಡಬಹುದಾದ ಯಾವುದೇ ವಸ್ತು, ವಾಹನ, ಒಡವೆಗಳಿಗೆ ನೀನು ಮನಸೋಲಬೇಡ. ಭರತನ ರಾಜ್ಯವು ಸ್ಥಿರವಾಗಲಿ, ನಡೆ” ಎಂದು ಪ್ರೇರೇಪಿಸಿದಳು.

ಕೈಕಯಿಯು ತನ್ನ ಒಡವೆಗಳನ್ನೆಲ್ಲ ತೆಗೆದಿಟ್ಟು, ಕೊಳೆಯಾದ ಬಟ್ಟೆಯುಟ್ಟು ಕೋಪಗೃಹವನ್ನು ಪ್ರವೇಶಿಸಿದಳು.

ಅವಳನ್ನು ಆ ಸ್ಥಿತಿಯಲ್ಲಿ ಕಂಡ ದಶರಥನಿಗೆ ದಿಗ್ಭ್ರಮೆಯಾಯಿತು. ಅವಳ ಕೋಪಕ್ಕೆ ಕಾರಣವನ್ನು ಕೇಳಿದನು. ತನಗೆ ಎರಡು ವರಗಳು ಬೇಕು ಎಂದಳು. ವರಗಳನ್ನು ಕೊಡುತ್ತೇನೆ ಎಂದು ಅವನಿಂದ ಭಾಷೆ ತೆಗೆದುಕೊಂಡಳು. ಅನಂತರ ಹೇಳಿದಳು: “ಭರತನಿಗೆ ಪಟ್ಟಾಭಿಷೇಕ ಮಾಡು. ರಾಮನನ್ನು ಹದಿನಾಲ್ಕು ವರ್ಷ ಕಾಡಿಗೆ ಕಳುಹಿಸು.”

ಇದನ್ನು ಕೇಳುತ್ತಿದ್ದಂತೆಯೇ ದಶರಥನು ಮೂರ್ಛೆ ಹೋದನು. ಕೈಕಯಿಯ ಸಿಟ್ಟು ಸ್ವಲ್ಪವೂ ಇಳಿಯಲಿಲ್ಲ.

ದಶರಥನು ಕೈಕಯಿಯನ್ನು ಕುರಿತು, “ಎಲೈ ಪಾಪಿಷ್ಠೆ, ಎಂಥ ಕಠಿಣವಾದ ವರಗಳನ್ನು ಬೇಡಿದೆ. ನಾನು ನನ್ನ ಕೇಡಿಗಾಗಿ ನಿನ್ನನ್ನು ಮದುವೆಯಾದೆನೆಂದು ಕಾಣುತ್ತದೆ. ರಾಮನಿಲ್ಲದೆ ನಾನು ಒಂದು ನಿಮಿಷವೂ ಬದುಕಲಾರೆ. ಈ ದುಷ್ಟಬುದ್ಧಿಯನ್ನು ಬಿಡು” ಎಂದು ಅನೇಕ ವಿಧವಾಗಿ ಹೇಳಿದನು. ಬೇಡಿಕೊಂಡನು. ಆದರೆ ಕೈಕಯಿ ತನ್ನ ಹಠಮಾರಿತನ ಬಿಡಲಿಲ್ಲ. “ರಾಮನಿಗೆ ಪಟ್ಟಾಭಿಷೇಕ ಮಾಡಿದುದಾದರೆ ಇದೋ ನಿನ್ನ ಮುಂದೆಯೇ ನಾನು ವಿಷಪಾನ ಮಾಡುತ್ತೇನೆ” ಎಂದೇ ನುಡಿದಳು. ದಶರಥನು ದೈನ್ಯದಿಂದ , ವಿನಯದಿಂದ ಎಷ್ಟೇ ಬೇಡಿಕೊಂಡರೂ ಪ್ರಯೋಜನವಿಲ್ಲದಂತಾಯಿತು. ಮತ್ತೆ ಮೂರ್ಛೆಗೊಂಡನು. ಅತ್ಯಂತ ಕಷ್ಟದಿಂದ ಆ ರಾತ್ರಿಯನ್ನು ಕಳೆದನು.

ರಾಮನು ಕಾಡಿಗೆ

ಬೆಳಗಾಯಿತು.

ಕೈಕಯಿಯೇ ರಾಮನನ್ನು ತನ್ನ ಅರಮನೆಗೆ ಬರಮಾಡಿಕೊಂಡಳು. ರಾಮನಿಗೆ ವನವಾಸಕ್ಕೆ ಹೋಗಬೇಕೆಂಬುದನ್ನು ತಿಳಿಸಿದಳು. ರಾಮನು ಸಂತೋಷದಿಂದ ಒಪ್ಪಿ ಸಿದ್ಧನಾದನು. ಲಕ್ಷ್ಮಣನೂ, ಸೀತೆಯೂ ಅವನೊಡನೆ ನಡೆದರು. ಅಂತಃಪುರದಲ್ಲಿ ಕೈಕಯಿ ಮಂಥರೆಯರನ್ನುಳಿದು ಎಲ್ಲರೂ ಗೋಳಿಟ್ಟರು. ಕೌಸಲ್ಯೆಯ ಸಂಕಟ ಹೇಳತೀರದು.

ಶ್ರೀರಾಮ ಲಕ್ಷ್ಮಣ ಸೀತೆಯರು ಸುಮಂತನು ನಡೆಸುತ್ತಿದ್ದ ರಥದಲ್ಲಿ ಕುಳಿತು ಕಾಡಿನ ಕಡೆಗೆ ಪ್ರಯಾಣ ಬೆಳೆಸಿದರು.

ಅವರನ್ನು ಗಂಗಾನದಿಯ ತೀರದಲ್ಲಿ ಬಿಟ್ಟು ಬಂದ ಸುಮಂತನು ಅವರ ನಡೆನುಡಿಗಳನ್ನು ದಶರಥನಿಗೆ ವಿವರಿಸಿದನು. ರಾಜನ ಹೃದಯ ದುಃಖದಿಂದ ಬೇಯುತ್ತಿತ್ತು. ರಾಮನು ಅಯೋಧ್ಯೆಯನ್ನು ಬಿಟ್ಟ ಕೆಲವೇ ದಿನಗಳಲ್ಲಿ ದಶರಥನು ಪ್ರಾಣಬಿಟ್ಟನು.

ರಾಜಗುರುಗಳು, ಮಂತ್ರಿಗಳು ಎಲ್ಲರೂ ಸೇರಿ ಮುಂದೇನು ಮಾಡಬೇಕು ಎಂದು ಯೋಚಿಸಿದರು. ರಾಜನ ದೇಹವನ್ನು ತೈಲದಲ್ಲಿಟ್ಟರು.

ಭರತ ಹಿಂದಿರುಗಿದ

ರಾಜನಿಲ್ಲದಿದ್ದರೆ ಬಹಳ ತೊಂದರೆಯುಂಟು. ಸತ್ಯ, ಧರ್ಮ ನ್ಯಾಯಗಳು ಅಲ್ಲೋಲಕಲ್ಲೋಲವಾಗುವುವು. ಜನರಲ್ಲಿ ಅಶಾಂತಿ ನೆಲೆಸುವುದು. ಜನರಲ್ಲಿ ಭಯಭೀತಿಗಳುಂಟಾಗುವುವು. ಆದ್ದರಿಂದ ಭರತನನ್ನು ಬೇಗನೆ ಬರಮಾಡಿಕೊಂಡು ಪಟ್ಟಾಭಿಷೇಕ ನಡೆಸಬೇಕೆಂದು ಆಲೋಚಿಸಿದರು. ದೂತರನ್ನು ಕರೆದು, “ಇಲ್ಲಿ ಅತ್ಯಗತ್ಯವಾದ ಕೆಲಸವಿರುವುದರಿಂದ ತಡಮಾಡದೆ ಬರಬೆಕೆಂದು ಭರತನಿಗೆ ತಿಳಿಸಿರಿ. ಮತ್ತೆ ಯಾವ ಮಾತನ್ನೂ ಹೇಳಕೂಡದು” ಎಂದು ಅಪ್ಪಣೆಮಾಡಿದರು.

ದೂತರು ಪಟ್ಟಣವನ್ನು ತಲುಪುವ ಮೊದಲೇ ಭರತನು ರಾತ್ರಿ ಕೆಟ್ಟ ಸ್ವಪ್ನವೊಂದನ್ನು ಕಂಡು ಚಿಂತೆಯಿಂದ ಕೂಡಿದ್ದನು. ದೂತರು ಬಂದರು. ಅಯೋಧ್ಯೆಗೆ ಬೇಗನೆ ಬರಬೇಕೆಂದು ತಿಳಿಸಿದರು. ತಂದಿದ್ದ ಉಡುಗೊರೆಗಳನ್ನು ಕೊಟ್ಟರು. ಆಗ ಭರತನು ಅಯೋಧ್ಯೆಗೆ ಹೊರಡುವುದಾಗಿ ತಾತನಿಗೆ ತಿಳಿಸಿ, ಶತ್ರುಘ್ನನೊಂದಿಗೆ ರಥದಲ್ಲಿ ಹೊರಟನು. ಏಳು ದಿನಗಳ ಪ್ರಯಾಣದ ಬಳಿಕ ಅಯೋಧ್ಯೆಗೆ ಭರತನು ಬಂದನು.

ಪಟ್ಟಣವನ್ನು ಪ್ರವೇಶಿಸಿದ ಭರತನಿಗೆ ಕಳವಳವಾಯಿತು. ರಾಜಧಾನಿಗೆ ಕಳೆಯೇ ಇಲ್ಲದೆ ಮಂಕಾಗಿದ್ದಿತು. ಹೋಮಧೂಮವಿಲ್ಲದ ಯಜ್ಞಶಾಲೆ, ಜನಗಳಿಲ್ಲದ ರಾಜಬೀದಿ, ಬಾಗಿಲು ಹಾಕಿದ್ದ ಅಂಗಡಿಗಳು, ದುಃಖಗೊಂಡ ಪುರಜನರು. ಭರತನು ದುಗುಡದಿಂದ ನೇರವಾಗಿ ಅರಮನೆಗೆ ಬಂದನು.

ಅರಮನೆಯಲ್ಲಿ ತಂದೆಯು ಕಾಣಲಿಲ್ಲ. ತಾಯಿಯಾದ ಕೈಕಯಿಯ ಅಂತಃಪುರದಲ್ಲಿರಬಹುದೆಂದು ಅಲ್ಲಿಗೆ ಹೋದನು. ಕೈಕಯಿಯು ಮಗನನ್ನು ಬಹು ಸಂಭ್ರಮದಿಂದಲೇ ಎದುರುಗೊಂಡಳು. “ಅಮ್ಮ, ತಂದೆಗೆ ನಾನು ನಮಸ್ಕರಿಸಬೇಕು. ಆರೋಗ್ಯದಿಂದಿರುವನೇ?” ಎಂದು ಭರತ ಕೇಳಿದ. ಕೈಕಯಿ, “ಎಲೈ ಭರತನೇ ಮಹಾನುಭಾವನಾಗಿದ್ದ ನಿಮ್ಮ ತಂದೆಯು ಸಕಲ ಜೀವಿಗಳೂ ಪಡೆಯುವ ಅಂತಿಮ ಗತಿಯನ್ನು ಪಡೆದನು” ಎಂದು ತಿಳಿಸಿದಳು. 

‘ಶ್ರೀರಾಮನೇ ಮಹಾರಾಜನಾಗಲು ಯೋಗ್ಯ’

 ದೂತರು ಕರೆಯಲು ಬಂದಾಗ ತನ್ನನ್ನು ಕರೆಯಿಸುತ್ತಿರುವುದು ರಾಮನ ಪಟ್ಟಾಭಿಷೇಕಕ್ಕೆಂದೋ ಅಥವಾ ತಂದೆಯ ಯಜ್ಞ ಮಾಡುವುದಕ್ಕೆಂದೋ ಎಂದು ತಿಳಿದಿದ್ದನು. ತಾಯಿಯ ಮಾತುಗಳನ್ನು ಕೇಳಿ ಅವನಿಗೆ ದುಃಖವನ್ನು ತಡೆಯಲಾಗಲಿಲ್ಲ, ಮೂರ್ಛೆ ಹೋದನು. ಕೈಕಯಿಯೂ ಇತರರೂ ಉಪಚಾರ ಮಾಡಿದ ನಂತರ ಎದ್ದನು. ತನ್ನ ತಂದೆಯ ಅಂತ್ಯದರ್ಶನವನ್ನು ಮಾಡುವ ಭಾಗ್ಯವೂ ತನಗಿಲ್ಲವಾಯಿತೆ? ರಾಮ ಲಕ್ಷ್ಮಣ ಸೀತೆಯರು ಎಲ್ಲಿ?

ನೀನು ಪಾಪಿ!’

ರಾಮನು ಕಾಡಿಗೆ ಹೋದ, ಸಿಂಹಾಸನ ತನ್ನದಾಯಿತು ಎಂದು ಕೇಳಿ ಭರತನು ತುಂಬ ಸಂತೋಷಪಡುತ್ತಾನೆ ಎಂದುಕೊಂಡಿದ್ದಳು ಕೈಕಯಿ. ಸಂತೋಷದಿಂದ, “ರಾಮ ಲಕ್ಷ್ಮಣ ಸೀತೆಯರು ಕಾಡಿಗೆ ಹೋದರು” ಎಂದು ಹೇಳಿದಳು.

ಈ ಸುದ್ದಿಯನ್ನು ಕೇಳಿ ಭರತನಿಗೆ ಸಿಡಿಲು ಹೊಡೆದಂತೆ ಆಯಿತು. “ಅಮ್ಮಾ, ಇದೇನು ಮಾತು ನೀನು ಹೇಳುತ್ತಿರುವುದು? ತಂದೆ ರಾಮನನ್ನು ಕಾಡಿಗೆ ಕಳುಹಿಸಿದರೆ? ಯಾರನ್ನೇ ಆಗಲಿ ಊರಿನಿಂದ ಕಾಡಿಗಟ್ಟ ಬೇಕಾದರೆ ಆತ ಬಹು ಕೆಟ್ಟ ಕೆಲಸವನ್ನು ಮಾಡಿರಬೇಕು. ಶ್ರೀರಾಮನು ಅಂತಹ ಪಾಪ ಕೆಲಸವನ್ನು ಮಾಡುವವನಲ್ಲ. ಅವನು ಕಾಡಿಗೆ ಏಕೆ ಹೋದ?” ಎಂದು ಕೇಳಿದ.

ಭರತನು ರಾಮನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತು ಹಿಂತಿರುಗಿದನು.

ಕೈಕಯಿಯು ತಾನು ವರಗಳನ್ನು ಬೇಡಿದುದನ್ನು ವಿವರಿಸಿದಳು. ತಾನೇ ಅಲ್ಲವೆ ಅವನಿಗೆ ರಾಜ್ಯ ದೊರೆಯುವಂತೆ ಮಾಡಿದವಳು? ತನ್ನನ್ನು ಭರತ ಹೊಗಳುತ್ತಾನೆ ಎಂದೂ ಭಾವಿಸಿದ್ದಳು.

ತಾನಾಗಿ ಭರತನ ಕೈಗೆ ರಾಜ್ಯ ಬಂದಿತ್ತು. ಅವನು ಸಂತೋಷಪಡಲಿಲ್ಲ. ಅವನಿಗೆ ತಂದೆ ಮತ್ತು ಅಣ್ಣ ಇಬ್ಬರಲ್ಲಿಯೂ ಅಪಾರ ಪ್ರೀತಿ, ಗೌರವ. ತಾಯಿಯ ಮಾತುಗಳನ್ನು ಕೇಳಿ ಅವನಿಗೆ ಬಹಳ ಸಂಕಟವಾಯಿತು. ತಾಯಿಯ ವಿಷಯದಲ್ಲಿ ಬಹು ಕೋಪ, ತಿರಸ್ಕಾರ ಉಂಟಾಯಿತು. “ನೀನು ನಮ್ಮ ಕುಲಕ್ಕೆ ಮೃತ್ಯುವಾಗಿ ಬಂದೆ. ರಾಮನಿಗೆ ನಿನ್ನಲ್ಲಿ ಎಷ್ಟು ಪ್ರೀತಿ, ನಿನಗೆ ತಿಳಿಯದೆ? ಅವನೇ ಮಹಾರಾಜನಾಗಲು ಯೋಗ್ಯನಾದವನು. ನೀನು ಪಾಪಿ! ಗಂಡನನ್ನು ಕೊಂದೆ. ನನಗೆ ಅಪಕೀರ್ತಿ ಬಂದಿತು. ನೀನು ರಾಜ್ಯವನ್ನು ಬಿಟ್ಟು ತೊಲಗು”  ಎಂದು ಕೋಪದಿಂದ ಮಾತನಾಡಿದನು.

ಅವನ ಧ್ವನಿಯನ್ನು ಕೇಳಿ ಕೌಸಲ್ಯೆಯು ಅಲ್ಲಿಗೆ ಬಂದಳು. ಅವಳಿಗೆ ಭರತನ ಮನಸ್ಸು ತಿಳಿಯದು. “ನಿನಗೆ ಈಗ ರಾಜ್ಯ ದೊರೆಯಿತಲ್ಲ, ಸಂತೋಷವಾಯಿತೆ? ನನ್ನನ್ನು ರಾಮನಿರುವ ಕಡೆಗೆ ಕಳುಹಿಸಿಬಿಡು” ಎಂದು ಗೋಳಾಡಿದಳು.

ಭರತನ ಸಂಕಟ ಇನ್ನೂ ಹೆಚ್ಚಿತು. “ತಾಯಿ, ನನ್ನನ್ನು ಹೀಗೇಕೆ ನಿಂದಿಸುತ್ತಿ? ಶ್ರೀರಾಮನಲ್ಲಿ ನನಗೆ ಎಷ್ಟು ಭಕ್ತಿ, ಪ್ರೀತಿ ನೀನು ಕಾಣೆಯ? ನನಗೆ ಅವನು ಕಾಡಿಗೆ ಹೋಗುವ ವಿಷಯವೇ ತಿಳಿಯದು” ಎಂದು ಹೇಳಿ ದುಃಖದಿಂದ ಬಿದ್ದುಬಿಟ್ಟನು. ಅವನನ್ನು ಕೌಸಲ್ಯೆಯೇ ಸಮಾಧಾನ ಮಾಡಿದಳು.

ವಸಿಷ್ಠರ ಅಪ್ಪಣೆಯಂತೆ ಭರತನು ತಂದೆಯ ಉತ್ತರಕ್ರಿಯಾದಿಗಳನ್ನು ಮಾಡಿದ. ಅವನಿಗೆ ತಡೆಯಲಾರದ ಸಂಕಟ. ಅಂತೂ ಕ್ರಿಯೆಗಳು ಮುಗಿದವು.

ಮಾರನೆಯ ದಿನ ಬೆಳಗಾಗುತ್ತಿದ್ದಂತೆಯೆ ಎಂದಿನಂತೆ ಮಂಗಳವಾದ್ಯಗಳು ಮೊಳಗಿದವು. ದುಃಖಗೊಂಡಿದ್ದ ಭರತನಿಗೆ ಅವನ ಕಿವಿಯನ್ನು ಕತ್ತಿಯಿಂದ ಸೀಳುವಂತೆ ತೋರಿತು. ಅವನು ಕೂಡಲೇ “ವಾದ್ಯಘೋಷವನ್ನು ನಿಲ್ಲಿಸಿ, ನಾನೇನೂ ರಾಜನಲ್ಲ” ಎಂದು ಹೇಳಿ ಆ ವಾದ್ಯಗಳನ್ನು ನಿಲ್ಲಿಸಿದನು.

ರಾಮನನ್ನೆ ಕರೆತರೋಣ

ಆಸ್ಥಾನದಲ್ಲಿ ಸಭೆ ಸೇರಿತು. ಮುಂದಿನ ರಾಜ್ಯಭಾರದ ವ್ಯವಸ್ಥೆ ನಡೆಯಬೇಕಾಗಿದ್ದಿತು. ಭರತನ ಅಂತಃಕರಣವು ಹೇಗೆ ಮಿಡಿಯುತ್ತಿದೆಯೆಂದು ವಸಿಷ್ಠರಿಗೆ ತಿಳಿಯದೆ ಇರಲಿಲ್ಲ. ಆದರೂ ಅವರು ಸಂಪ್ರದಾಯದಂತೆ, “ಭರತ ಕುಮಾರ, ನಿನ್ನ ತಂದೆಯೂ ಅಣ್ಣನೂ ನಿಷ್ಕಂಟಕವಾಗಿ ನಿನಗೆ ರಾಜ್ಯವನ್ನು ಬಿಟ್ಟುಕೊಟ್ಟಿರುತ್ತಾರೆ. ನೀನು ಈ ರಾಜ್ಯವನ್ನು ಪರಿಪಾಲಿಸು. ಬೇಗನೆ ಪಟ್ಟಾಭಿಷಿಕ್ತನಾಗು” ಎಂದರು.

“ಗುರುಗಳೇ, ಇದು ರಾಮನ ರಾಜ್ಯ. ಅದನ್ನು ನಾನು ಅಪಹರಿಸಬಹುದೆ? ತಂದೆ ತೀರಿದ ನಂತರ ಹಿರಿಯಣ್ಣನೇ ತಂದೆ, ಹಿರಿಯಣ್ಣನೇ ಗುರು. ನಾನೂ ಅಣ್ಣನನ್ನೇ ಸೇವಿಸುತ್ತೇನೆ. ನೀವು ನನಗೆ ಧರ್ಮಮಾರ್ಗವನ್ನು ಉಪದೇಶಿಸಬೇಕಲ್ಲದೆ ಇಂಥ ಮಾತುಗಳನ್ನು ಹೇಳುವುದು ತರವಲ್ಲ” ಎಂದೇ ಭರತ ಆಕ್ಷೇಪಿಸಿದನು.

ಭರತನು ಮುಂದಿನ ಮಾರ್ಗವನ್ನು ತಾನೇ ನಿರ್ಧರಿಸಿದ್ದನು.

ಈತನು ಈಗ ರಾಜ್ಯವನ್ನು ಒಪ್ಪಿಕೊಳ್ಳದ ನಿರ್ಧಾರವು ಎಲ್ಲರಿಗೂ ಆಶ್ಚರ್ಯವೇ! ತಾನಾಗಿ ಬಂದ ಚಕ್ರಾಧಿಪತ್ಯವನ್ನು ಯಾರು ತಾನೆ ಬೇಡವೆಂದಾರು? ತಾನಾಗಿ ಬಂದ ಭಾಗ್ಯಲಕ್ಷ್ಮಿಯನ್ನು ಯಾರು ತಾನೇ ತಿರಸ್ಕರಿಸುವರು? ಎಲ್ಲರಿಗೂ ಆಶ್ಚರ್ಯ. ಧರ್ಮಕ್ಕೆ ವಿರುದ್ಧವಾಗಿ ಯಾವುದೇ ಸೌಭಾಗ್ಯ ಬಂದರೂ ಒಪ್ಪಿಕೊಳ್ಳದಿರುವುದು ಧರ್ಮವನ್ನು ತಿಳಿದವನ ರೀತಿಯೇ ಆಗಿದೆ.

ಭರತನಿಗೆ ಸಿಂಹಾಸನ, ಸುಖ, ವೈಭವ ಇವೇ ಬೇಕಾಗಿದ್ದರೆ ಈಗ ಅಪೂರ್ವವಾದ ಸುಸಮಯವೇ ಒದಗಿತ್ತು. ಆದರೆ ಧರ್ಮಾತ್ಮನೂ ಹಿರಿಯ ಮಗನೂ ಆದ ರಾಮನನ್ನು ವನವಾಸಕ್ಕೆ ಅಟ್ಟಿ, ತಾನು ರಾಜನಾಗುವುದು ಒಪ್ಪಿಗೆಯಾಗಲಿಲ್ಲ. ಇದು ಧರ್ಮಕ್ಕೆ ವಿರೋಧವೂ ಹೌದು. ಹಿರಿಯಣ್ಣನು ತಂದೆಗೆ ಸಮಾನನು. ಹಿರಿಯಣ್ಣನೇ ರಾಜ್ಯಕ್ಕೆ ಅಧಿಕಾರಿ. ತಂದೆಯ ಸಾವಿಗೆ,. ಪುರಜನ ಪರಿಜನರ ದುಃಖಕ್ಕೆ, ಅಣ್ಣ ಅತ್ತಿಗೆಯರ ವನವಾಸಕ್ಕೆ ಕಾರಣಳಾದ ತನ್ನ ತಾಯಿಯ ಮಾತು ಈಗ ನಿಜವಾಗಿ ಪಾಲಿಸಬೇಕಾದ ಅಪ್ಪಣೆಯೆನಿಸಲಿಲ್ಲ.

ಭರತ ಗುರು ಹಿರಿಯರಿಗೆ, ಮಂತ್ರಿ ಪರಿಜನರಿಗೆ ಹೇಳಿದ: “ರಾಮನಿಗೆ ಬದಲಾಗಿ ನಾನು ಹದಿನಾಲ್ಕು ವರ್ಷಗಳ ಕಾಲ ಕಾಡಿನಲ್ಲಿ ವಾಸ ಮಾಡುತ್ತೇನೆ. ಅವನೇ ರಾಜನಾಗಿರಬೇಕು. ಕಾಡಿನಲ್ಲೇ ಅವನಿಗೆ ಪಟ್ಟಾಭಿಷೇಕ ಮಾಡಿ ಕರೆತರೋಣ. ನಾಳೆಯೇ ದೊಡ್ಡ ಸೈನ್ಯದೊಡನೆ ಹೊರಡುತ್ತೇನೆ.”

ಅವನ ಮಾತುಗಳನ್ನು ಕೇಳಿ ಜನರೆಲ್ಲ ಬೆರಗಾದರು, ಸಂತೋಷಪಟ್ಟರು.

ಗುಹನ ಭೇಟಿ

ಅಣ್ಣಂದಿರು ವನವಾಸಕ್ಕೆ ತೆರಳಿದ ದಾರಿ ಯಾವುದೆಂದು ತಿಳಿದುಕೊಂಡು ಭರತನು ಅದೇ ದಾರಿಯಲ್ಲಿ ಹೊರಟ. ಗಂಗಾನದಿಯ ದಡದಲ್ಲಿ ಬೇಡರ ರಾಜ ಗುಹ ಎಂಬುವನಿದ್ದನು. ಈತನೇ ಮೊದಲು ಅಲ್ಲಿಂದ ರಾಮ, ಸೀತೆ, ಲಕ್ಷ್ಮಣರನ್ನು ದೋಣಿಯಲ್ಲಿ ಗಂಗಾನದಿಯನ್ನು ದಾಟಿಸಿದ್ದನು. ಅವರಲ್ಲಿ ಗುಹನಿಗೆ ಬಹು ಗೌರವ. ಭರತನು ದೊಡ್ಡ ಸೈನ್ಯದ ಜೊತೆಗೆ ಬಂದುದನ್ನು ಕಂಡು ಗುಹನಿಗೆ ಅನುಮಾನ; ರಾಮನಿಗೆ ಏನೋ ಕೆಡುಕು ಮಾಡಲು ಬಂದಿದ್ದಾನೆ ಎಂದೇ ಅವನ ಊಹೆ. ಆದುದರಿಂದ ಗುಹನು ತನ್ನ ಸೈನಿಕರಿಗೆ ಸಿದ್ಧವಾಗಿರಲು ತಿಳಿಸಿದ. “ರಾಮ ಲಕ್ಷ್ಮಣರ ವಿಷಯದಲ್ಲಿ ಭರತನಿಗೆ ಕೆಟ್ಟ ಭಾವನೆ ಇಲ್ಲದೆ ಹೋದರೆ ನಮ್ಮ ಸೈನ್ಯವು ಹಿಂತಿರುಗಲಿ” ಎಂದು ಹೇಳಿ ಕಾಣಿಕೆ ಸಹಿತ ಭರತನಲ್ಲಿಗೆ ಹೊರಟ.

ಗುಹ ಭರತನನ್ನು ಕಂಡ. “ಹಿರಿಯಣ್ಣನು ತಂದೆಗೆ ಸಮಾನ, ಅವನನ್ನು ಪುನಃ ಕರೆದು ತರಲು ಹೊರಟಿದ್ದೇನೆ” ಎಂದು ಭರತನು ಹೇಳಿದ.

ಗುಹನಿಗೆ ಆಶ್ಚರ್ಯವಾಯಿತು, ಭರತನ ದೊಡ್ಡತನವನ್ನು ಕಂಡು ಮೆಚ್ಚಿಕೆಯಾಯಿತು. “ಲೋಕದಲ್ಲಿ ನಿನ್ನಂತಹ ಧರ್ಮಾತ್ಮರು ಮತ್ತೊಬ್ಬರಿಲ್ಲ” ಎಂದು ಭರತನನ್ನು ಕೊಂಡಾಡಿದ. ರಾಮ ಸೀತೆ ಲಕ್ಷ್ಮಣರು ತನ್ನ ಮನೆಯಲ್ಲಿ ನಡೆದುಕೊಂಡ ರೀತಿಯನ್ನು ವರ್ಣಿಸಿದ. ತಾನು ವಿಶೇಷ ಭಕ್ಷ್ಯಭೋಜನಗಳನ್ನು ತಂದುಕೊಟ್ಟರೂ ಅವರು ತೆಗೆದಕೊಳ್ಳದೆ ಗೆಡ್ಡೆ ಗೆಣಸು ತಿಂದರು, ಬರಿಯ ನೆಲದ ಮೇಲೆ ಮಲಗಿದರು ಎಂದು ಭರತನಿಗೆ ಹೇಳಿದ. ಭರತನಿಗೆ ಮೊದಲೇ ದುಃಖ. ಇದನ್ನು ಕೇಳಿ ಮತ್ತಷ್ಟು ದುಃಖವಾಯಿತು. ಚಕ್ರವರ್ತಿ ವೈಭವದ ಅಣ್ಣನಿಗೆ ಇಂಥ ದುಃಸ್ಥಿತಿಯ ವನವಾಸವೇ! ಅಣ್ಣನ ಜೊತೆಯಲ್ಲಿರುವ ಲಕ್ಷ್ಮಣ ಸೀತೆಯರೇ ಧನ್ಯರು ಎಂದುಕೊಂಡ. “ನನ್ನಿಂದ ಅಣ್ಣನಿಗೆ ವನವಾಸವಾಯಿತು. ಅಣ್ಣನನ್ನು ಅಗಲಿದ ನಾವು ಹತಭಾಗ್ಯರು. ಈಗ ನಾನು ಇಂದಿನಿಂದ ಮೊದಲು ಗೊಂಡು ಅಣ್ಣನಂತೆಯೇ ನಾರುಡೆಯುಟ್ಟು ಗೆಡ್ಡೆ ಗೆಣಸು ಸೇವಿಸುತ್ತೇನೆ; ನೆಲದ ಮೇಲೆ ಮಲಗುತ್ತೇನೆ. ಅಣ್ಣನಿಗೆ ಪಟ್ಟಾಭಿಷೇಕವಾಗಬೇಕು; ಇಲ್ಲವೆ ನಾನು ಅಣ್ಣನ ಜೊತೆಯಲ್ಲಿಯೇ ಅವನ ಸೇವೆಯನ್ನು ಮಾಡಿಕೊಂಡಿರುವೆನು. ದೇವತೆಗಳು ಈ ನನ್ನ ಪ್ರಾರ್ಥನೆಯನ್ನು ಈಡೇರಿಸಲಿ” ಎಂದು ಹಂಬಲಿಸಿದ.

ಬೆಳಗಾಯಿತು. ಐನೂರು ದೋಣಿಗಳು ಸಿದ್ದವಾದುವು. ಅಲ್ಲಿಂದ ಶುಭ ಮುಹೂರ್ತದಲ್ಲಿ ಹೊರಟು ಪ್ರಯಾಗಕ್ಕೆ ಭರತನು ಪ್ರಯಾಣ ಬೆಳೆಸಿದನು.

ಭರದ್ವಾಜರ ಸಂದರ್ಶನ

ಅಲ್ಲಿ ಭರದ್ವಾಜ ಮುನಿಗಳ ಆಶ್ರಮವಿದ್ದಿತು. ಭರತನು ಸೈನ್ಯವನ್ನು ದೂರದಲ್ಲಿಯೇ ನಿಲ್ಲಿಸಿ, ಕೆಲವರೊಂದಿಗೆ ಪಾದಚಾರಿಯಾಗಿ ಹೋಗಿ ಮುನಿಗಳಿಗೆ ವಂದಿಸಿದನು. ತನ್ನ ಪರಿಜನರ ಪರಿಚಯ ಮಾಡಿಕೊಟ್ಟ. ಕೈಕಯಿ ಸಂಗತಿಯನ್ನು ಹೇಳುವಾಗ ಸಹಜವಾಗಿಯೇ ಭರತನಿಗೆ ಕೋಪ, ನಿಟ್ಟುಸಿರು ಬಂದು ತಾಯಿಯನ್ನು ನಿಂದಿಸಿದ. ಆಗ ಮುನಿಯು, ಭರತಕುಮಾರ, ನೀನು ನಿನ್ನ ತಾಯಿಯನ್ನು ದೋಷಿಯೆಂದೆಣಿಸಬೇಡ. ರಾಮನನ್ನು ವನವಾಸಕ್ಕೆ ಕಳುಹಿಸಿ ಈ ಲೋಕಕ್ಕೆ ಮಹತ್ತರವಾದ ಉಪಕಾರವನ್ನು ಮಾಡಿದ್ದಾಳೆ. ಇದು ಅನಂತರ ತಿಳಿದು ಬರುತ್ತದೆ. ರಾಮನ ವನವಾಸವು ಲೋಕದ ಕ್ಷೇಮಕ್ಕೆ ಕಾರಣವಾಗಿದೆ ಎಂದು ಹೇಳಿ ಸಮಾಧಾನ ಮಾಡಿದರು.

ಅಂದು ಭರದ್ವಾಜ ಮುನಿಯು ತನ್ನ ತಪೋಬಲದಿಂದಲೇ ಅದ್ಭುತವಾದ ರೀತಿಯಲ್ಲಿ ಅವರೆಲ್ಲರಿಗೂ ಆತಿಥ್ಯ ನೀಡಿದರು.

ಭರತನು ಮುನಿಜನರಿಗೆಲ್ಲ ವಂದಿಸಿದನು. ಅನಂತರ ಅವರು ಹೇಳಿದಂತೆ ಅದೇ ದಾರಿಯಲ್ಲಿ ಹೊರಟು ರಾಮ, ಸೀತೆ, ಲಕ್ಷ್ಮಣರು ಇದ್ದ ಚಿತ್ರಕೂಟಕ್ಕೆ ಬಂದ. ಭರತನಿಗೂ, ಭರತನ ಜೊತೆಯಲ್ಲಿ ಬಂದಿರುವ ಪರಿಜನರೆಲ್ಲರಿಗೂ ರಾಮ, ಲಕ್ಷ್ಮಕಣ, ಸೀತೆಯರನ್ನು ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೇ ಕಾಣುತ್ತೇವೆ ಎಂದು ಸಂತೋಷ, ಕಾತರ. ಜೊತೆಗೆ ಅರಮನೆಯನ್ನು ಬಿಟ್ಟು ತೆರಳಿರುವವರನ್ನು ಕಂಡು ಹೇಗಾದರೂ ಪುನಃ ಕರೆದುತರಲು ಸಾಧ್ಯವಾದೀತು ಎಂದು ಕನಸುಕಾಣುತ್ತ ಮುಂದೆ ನಡೆದರು.

ಭರತನು ಧರ್ಮಿಷ್ಟ

ಅತ್ತ ಚಿತ್ರಕೂಟದಲ್ಲಿ ಒಂದೆಡೆ ರಾಮನು ಸೀತೆಗೆ ಅಲ್ಲಿಯ ಸೌಂದರ್ಯವನ್ನು ಬಣ್ಣಿಸುತ್ತಿದ್ದ. ಚಿತ್ರಕೂಟವನ್ನೇ ಅಯೋಧ್ಯೆಯನ್ನಾಗಿಯೂ, ಗಂಗಾನದಿಯನ್ನೇ ಸರಯೂ ನದಿಯನ್ನಾಗಿಯೂ, ಕಾಡಿನ ಪ್ರಾಣಿಗಳನ್ನೇ ಪುರಜನರಂತೆಯೂ ಕಾಣಬೇಕು ಎಂದು ಹೇಳುತ್ತಿದ್ದ. ಲಕ್ಷ್ಮಣನೂ ಅಲ್ಲಿಯೇ ಸಮೀಪದಲ್ಲಿದ್ದನು.

ಇದ್ದಕ್ಕಿದ್ದಂತೆ ಕಾಡಿನಲ್ಲಿ ಧೂಳೆದ್ದಿತು. ಕಾಡು ಪ್ರಾಣಿಗಳು ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದವು.ರಾಮನು ಲಕ್ಷ್ಮಣನಿಗೆ, ಲಕ್ಷ್ಮಣಾ ಯಾವುದೋ ಸೈನ್ಯ ಈ ಕಡೆಗೆ ಬರುತ್ತಿರುವಂತಿದೆ. ಮರವನ್ನು ಹತ್ತಿ ನೋಡು ಎಂದು ಹೇಳಿದ.

ಲಕ್ಷ್ಮಣನು ಮರವನ್ನು ಹತ್ತಿ ನೋಡಿದ. ಸೈನ್ಯ ಬರುತ್ತಿದ್ದುದು ಕಾಣಿಸಿತು. ಅದರ ಧ್ವಜಗಳು ಅಯೋಧ್ಯೆಯ ಧ್ವಜಗಳು ಎಂದು ಅವನಿಗೆ ತಿಳಿಯಿತು. ಭರತನ ಗುರುತು ಗೊತ್ತಾಯಿತು. ಅವನು ಕೋಪದಿಂದ, “ಕೈಕಯಿಯ ಮಗನಾದ ಭರತನು ದೊಡ್ಡ ಸೈನ್ಯದೊಡನೆ ಬರುತ್ತಿದ್ದಾನೆ. ನಮಗೆ ತೊಂದರೆ ಕೊಡುವುದಕ್ಕಾಗಿಯೇ ಬರುತ್ತಿದ್ದಾನೆ. ಬರಲಿ, ಅವನನ್ನು ಕೊಲ್ಲುತ್ತೇನೆ. ಅವನ ಸೈನ್ಯದ ರಕ್ತದಿಂದ ನೆಲವನ್ನು ತೋಯಿಸುತ್ತೇನೆ” ಎಂದನು.

ರಾಮನು, “ಲಕ್ಷ್ಮಣಾ, ಇದೇನು ಮಾತುಗಳನ್ನು ಆಡಿದೆ? ಭರತನನ್ನು ಕೊಂದು ನಾನು ಸಾಧಿಸುವುದೇನು? ತಮ್ಮಂದಿರ ಜೊತೆಗೆ ನಾನು ಸುಖವಾಗಿರಬೇಕು. ನನ್ನ ಪ್ರಾಣಕ್ಕಿಂತ ಪ್ರಿಯವಾದ ಭರತನು ಬರುತ್ತಿದ್ದಾನೆ. ಅವನು ಧರ್ಮಿಷ್ಠ. ನನಗೆ ಕೆಟ್ಟದನ್ನು ಮಾಡುವುದಿರಲಿ, ಯೋಚಿಸುವುದೂ ಇಲ್ಲ. ನಿನಗೆ ರಾಜ್ಯವು ಬೇಕಾದರೆ ಭರತನಿಗೆ ಹೇಳುತ್ತೇನೆ, ಅವನೂ ಒಪ್ಪುತ್ತಾನೆ” ಎಂದು ಹೇಳಿದನು.

ಲಕ್ಷ್ಮಣನಿಗೆ ನಾಚಿಕೆಯಾಯಿಕತು.

ಭರತ ರಾಮನನ್ನು ಕಂಡ

ಚಿತ್ರಕೂಟವು ಹತ್ತಿರ ಬಂದಂತೆ ಭರತನು ಸೈನ್ಯಕ್ಕೆ ವಿಶ್ರಮಿಸಲು ಹೇಳಿದನು. ಕಾಲುನಡಿಗೆಯಲ್ಲಿ ತಾನೊಬ್ಬನೇ ಮುಂದೆ ಹೊರಟನು. ರಾಮ, ಸೀತೆ, ಲಕ್ಷ್ಮಣರನ್ನು ಕಾಣುವ ತನಕ ಅವನ ಮನಸ್ಸಿಗೆ ನೆಮ್ಮದಿಯಿಲ್ಲ. ಶಾಂತಿಯಿಲ್ಲ. ರಾಮ, ಸೀತೆ, ಲಕ್ಷ್ಮಣರಿದ್ದ  ಪರ್ಣಶಾಲೆಗೆ ಭರತನು ಓಡೋಡಿ ಬಂದನು. ‘ಅಯೋಧ್ಯೆ ಪಟ್ಟಣದಲ್ಲಿ ಸಿಂಹಾಸನದ ಮೇಲೆ ಕುಳಿತು ಸಮಸ್ತ ಮಂತ್ರಿಗಳೊಂದಿಗೆ ಶೋಭಿಸಬೇಕಾದ ಅಣ್ಣನನ್ನು ಈ ಎಲೆಮನೆಯಲ್ಲಿ ಕಾಣುವಂತಾಯಿತೇ! ಪೀತಾಂಬರಗಳನ್ನು ಧರಿಸುತ್ತಿದ್ದವನನ್ನು ನಾರುಡೆಯಲ್ಲಿ ಕಾಣುವಂತಾಯಿತೇ!  ಈ ದುಃಸ್ಥಿತಿಗೆಲ್ಲ ನಾನೇ ಕಾರಣನಾದೆ. ರಾಜ್ಯದ ನಿಮಿತ್ತವಾಗಿ ಅಣ್ಣನನ್ನು ದೇಶದಿಂದ ಹೊರಡಿಸಿದೆನೆಂಬ ಅಪಕೀರ್ತಿ ಬಂದಿತು. ನನ್ನ ಬಾಳು ಸುಡಲಿ’ ಎಂದುಕೊಂಡನು. ಹತ್ತಿರ ಬಂದಂತೆ ಭರತನ ಮೈ ಬೆವರಿತು. ಅಣ್ಣಾ ಎಂದು ಒಂದು ಸಾರಿ ನುಡಿದು ಮತ್ತೇನನ್ನೂ ನುಡಿಯಲಾರದೆ ಶಕ್ತಿಗುಂದಿ ರಾಮನ ಪಾದದೆಡೆಗೆ ಬಿದ್ದನು. ಆಗ ಅಣ್ಣನು ಅವನನ್ನು ಅಪ್ಪಿ ಸಮಾಧಾನಪಡಿಸಿತೊಡಗಿದನು.

ನೀನೇ ರಾಜನಾಗಬೇಕು

‘ಭರತಕುಮಾರ, ಸಮಾಧಾನ ಮಾಡಿಕೊ. ಕಾಡಿಗೆ ಏಕೆ ಬಂದೆ? ತಂದೆಯು ಕ್ಷೇಮದಿಂದಿರುವನೆ? ರಾಜ್ಯದಲ್ಲಿ ರಾಜನಿಲ್ಲದಿದ್ದರೆ ಗತಿಯೇನು?” ಎಂದು ರಾಮನು ಪ್ರಶ್ನಿಸಿದನು.

ಭರತನು, “ಅಣ್ಣಾ, ನಿನ್ನನ್ನು ಸೇವಿಸಬೇಕೆಂಬ ನನಗೆ ರಾಜ್ಯದಿಂದ ಪ್ರಯೋಜನವೇನು? ಹಿರಿಯಣ್ಣನಿರುವಾಗ ತಮ್ಮನು ರಾಜ್ಯಾಧಿಕಾರಕ್ಕೆ ಅರ್ಹನಲ್ಲ. ನಮ್ಮ ಕುಲಕ್ಕೇ ಮಂಗಳವಾಗಲು ನೀನು ಅಯೋಧ್ಯೆಗೆ ಹಿಂತಿರುಗಿ, ರಾಜ್ಯವನ್ನು ಒಪ್ಪಿಕೊಳ್ಳಬೇಕು” ಎಂದು ಬೇಡಿದನು. “ನಾನು ಕೇಕೆಯ ರಾಜನ ಪಟ್ಟಣದಲ್ಲಿದ್ದು ನೀನು ಕಾಡಿಗೆ ಬಂದಾಗ ತಂದೆ ತೀರಿಕೊಂಡನು. ನೀನೇ ಬಂದು ಪಟ್ಟಾಭಿಷಿಕ್ತನಾಗು” ಎಂದು ಹೇಳಿದನು.

ತಂದೆಯ ಸಾವಿನ ಸುದ್ದಿಯನ್ನು ಕೇಳಿ ರಾಮನು ಬಹಳ ಸಂಕಟಪಟ್ಟನು. ಅವನ ತಮ್ಮಂದಿರೂ ಸೀತೆಯೂ ಸಮಧಾನ ಮಾಡಿದರು.

ವಸಿಷ್ಠರೂ ಅಲ್ಲಿಗೆ ಬಂದರು. ಕೌಸಲ್ಯೆ, ಸುಮಿತ್ರೆಯರೂ, ಕೆಲವರು ಪರಿಜನರೂ ಅಲ್ಲಿಗೆ ಬಂದರು. ಭರತನು ಮತ್ತೆ ಶ್ರೀರಾಮನಿಗೆ ಹೇಳಿದನು: “ನನ್ನ ತಾಯಿಯಿಂದ ಮಹಾಪರಾಧವಾಯಿತು. ನೀನು ಕಾಡಿಗೆ ಬಂದೆ. ತಂದೆ ಸ್ವರ್ಗಸ್ಥನಾದ. ನನ್ನ ತಾಯಿಯೂ ವಿಧವೆಯಾದಳು. ರಾಜ್ಯಕ್ಕೂ ಕಷ್ಟ ಬಂದಿತು. ನಿನ್ನನ್ನು ಬೇಡುತ್ತೇನೆ. ಅಯೋಧ್ಯೆಗೆ ಬಂದು ಸಿಂಹಾಸನವನ್ನು ಏರು. ನೀನೇ ರಾಜನಾಗಬೇಕು.”

ಶ್ರೀರಾಮನು ಭರತನಿಗೆ ಹೇಳಿದ:

“ವತ್ಸ, ಪ್ರಪಂಚದಲ್ಲಿ ಸ್ಥಿರವಾದುದು ಧರ್ಮ. ಧರ್ಮದಿಂದಲೇ ಅರ್ಥ, ಧರ್ಮದಿಂದಲೇ ಕಾಮ, ಧರ್ಮದಿಂದಲೇ ಮೋಕ್ಷ. ಧರ್ಮವೊಂದೇ ಶಾಶ್ವತ. ಹುಟ್ಟಿದವನಿಗೆ ಮರಣ ನಿಶ್ಚಯ. ಅಲ್ಪವಾದ ಸುಖಕ್ಕೆ ನಾವು ಆಶಿಸಬಾರದು. ತಂದೆತಾಯಿಗಳ ಅಪ್ಪಣೆಯಂತೆ ನಡೆಯುವುದು ನಮ್ಮ ಧರ್ಮ.”

“ಅಣ್ಣಾ ತಾಯಿಯಿಂದ ನನಗೆ ಈ ರಾಜ್ಯವು ದೊರೆಯಿತು. ಇದು ನನ್ನದಾಯಿತು. ಈಗ ನಾನು ನನ್ನ ರಾಜ್ಯವನ್ನು ನಿನಗೆ ಒಪ್ಪಿಸುತ್ತೇನೆ. ನೀನು ಅಯೋಧ್ಯೆಗೆ ಹಿಂತಿರುಗಬೇಕು. ಎಲ್ಲರೂ ನಿನ್ನನ್ನು ಪ್ರಾರ್ಥಿಸಲು ಬಂದಿರುವರು. ನಮ್ಮ ಆಸೆಯನ್ನು ಈಡೇರಿಸು.”

“ಕುಮಾರ, ನೀನೇ ಅಯೋಧ್ಯೆಯನ್ನು ಆಳಬೇಕು. ನಾನು ವನವಾಸ ಮಾಡಬೇಕು. ಇದು ತಂದೆಯವರ ಅಪ್ಪಣೆ. ಇದು ಬದಲಾಗಬಾರದು.”

“ಹಿರಿಯಣ್ಣನಿರುವಾಗ ತಮ್ಮನಾದ ನಾನು ರಾಜ್ಯವನ್ನಾಳಬಾರದು. ಇದು ಧರ್ಮಕ್ಕೆ ವಿರೋಧವಲ್ಲವೆ?”

“ತಮ್ಮ, ನೀನು ಹೇಳುವುದು ಸರಿಯಲ್ಲ. ಧರ್ಮವು ಬಹು ಸೂಕ್ಷ್ಮವಾದುದು. ಧರ್ಮವು ಕಣ್ಣಿಗೆ ಕಾಣಿಸುವುದಿಲ್ಲ. ಕಣ್ಣಿಗೆ ಕಾಣುವಂತಹ ಧರ್ಮರೂಪಿಗಳು ತಾಯಿತಂದೆಯರು. ತಂದೆಯ ಮಾತಿಗೆ ತಪ್ಪಬಾರದೆಂದು ನಾನು ವನಕ್ಕೆ ಬಂದೆನು. ನೀನು ಅಯೋಧ್ಯೆಗೆ ಹೋಗಿ ಪ್ರಭುವಾಗು. ಅಲ್ಲಿ ಬೆಳ್ಗೊಡೆಯು ನಿನಗೆ ನೆರಳಾಗಲಿ. ನನಗೆ  ಈ ಅರಣ್ಯದ ಗಿಡಮರಗಳೇ ನೆರಳು. ಚಿಂತಿಸದಿರು. ನಿನಗೆ ಶತ್ರುಘ್ನನು ಸಹಾಯಕನಾಗಿರಲಿ. ನನಗೆ ಲಕ್ಷ್ಮಣ ಸಹಾಯಕನಾಗಿರುವನು. ನಾವು ನಾಲ್ವರೂ ದಶರಥನ ಸತ್ಪುತ್ರರೆಂಬ ಸತ್ಕೀರ್ತಿಗೆ ಭಾಗಿಗಳಾಗೋಣ.”

ಯಾರು ಏನು ಹೇಳಿದರೂ, ಬೇಡಿದರೂ ರಾಮನು ಮನಸ್ಸನ್ನು ಬದಲಾಯಿಸಲಿಲ್ಲ.

ಭರತನು ತನ್ನ ಹಂಬಲವು ಈಡೇರಲಿಲ್ಲವೆಂದು ಚಿಂತಿಸಿ, ‘ರಾಮನು ಅಯೋಧ್ಯೆಗೆ ಬರಲು ಒಪ್ಪುವತನಕ ಇಲ್ಲಿಯೆ ದರ್ಭೆಯ ಮೇಲೆ ಮಲಗುತ್ತೇನೆ.” ಎಂದನು. ರಾಮನು, “ಕುಮಾರ, ಕ್ಷತ್ರಿಯ ವೀರರಿಗೆ ಇದು ಉಚಿತವಲ್ಲ. ಅಯೋಧ್ಯೆಗೆ ಹಿಂದಿರುಗು” ಎಂದನು. “ರಾಜ್ಯವನ್ನು ಧರ್ಮದಿಂದ ಪರಿಪಾಲಿಸು. ನಿನ್ನ ತಾಯಿಯನ್ನು ಪ್ರೀತಿಯಿಂದ ನೋಡಿಕೋ” ಎಂದು ಹೇಳಿದನು.

ಪಾದುಕೆಗಳನ್ನು ಅನುಗ್ರಹಿಸು

ಶ್ರೀರಾಮನ ನಿಶ್ಚಯವನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎಂದು ಭರತನಿಗೆ ಅರ್ಥವಾಯಿತು.

“ಅಣ್ಣಾ, ನಿನ್ನ ಪಾದುಕೆಗಳನ್ನಾದರೂ ಅನುಗ್ರಹಿಸು. ಅವನ್ನು ಸಿಂಹಾಸನದ ಮೇಲಿರಿಸಿ, ಅವುಗಳಿಗೆ ಸೇವಕನಾಗಿ ರಾಜ್ಯವನ್ನು ನಡೆಸುತ್ತೇನೆ” ಎಂದನು ಭರತ.

ರಾಮನು ತನ್ನ ಪಾದುಕೆಗಳನ್ನು ಕೊಟ್ಟನು. ಭರತನು ತನ್ನ ತಲೆಯ ಮೇಲೆ ಆ ಎರಡೂ ಪಾದುಕೆಗಳನ್ನು ಇಟ್ಟುಕೊಂಡನು. ರಾಮನನ್ನು ಪ್ರದಕ್ಷಿಣೆ ಮಾಡುತ್ತಾ, “ಹದಿನಾಲ್ಕು ವರುಷಗಳು ಕಳೆದ ಒಡನೆಯೇ ನೀನು ಅಯೋಧ್ಯೆಗೆ ಬಂದು ರಾಜ್ಯವನ್ನು ಒಪ್ಪಿಸಿಕೊಳ್ಳಬೇಕು. ಬಾರದಿದ್ದಲ್ಲಿ ನಾನು ಅಗ್ನಿ ಪ್ರವೇಶ ಮಾಡುತ್ತೇನೆ” ಎಂದನು.

“ಹಾಗೆಯೇ ಆಗಲಿ” ಎಂದು ರಾಮನು ಅವನನ್ನು ಕಳುಹಿಸಿಕೊಟ್ಟನು.

ರಾಮನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತು ಸಂತೋಷದಿಂದ ಭರತನು ಪರಿವಾರ ಸಹಿತ ಹಿಂತಿರುಗಿದನು.

ರಾಮನ ಪ್ರತಿನಿಧಿ ಭರತ

ಭರತನಿಗೆ ಈಗ ಅಯೋಧ್ಯೆಗೆ ಹೋಗಲು ಮನಸ್ಸು ಬರಲಿಲ್ಲ. ಸಮೀಪದ ನಂದಿಗ್ರಾಮದಲ್ಲೆ ಈ ಅವಧಿಯ ದಿನಗಳನ್ನು ಕಳೆಯತೊಡಗಿದನು. ಸಿಂಹಾಸನದ ಮೇಲೆ ಆ ಪಾದುಕೆಗಳನ್ನಿಟ್ಟು ಅಭಿಷೇಕ ಮಾಡಿದನು. ಅವುಗಳಿಗೆ ಬೆಳ್ಗೊಡೆ ಹಿಡಿದನು. ಸಕಲ ಪೂಜೆ ಸಲ್ಲಿಸಿದನು. ಪಾದುಕೆಗಳ ಹೆಸರಿನಲ್ಲಿ ರಾಜ್ಯವನ್ನು ಆಳತೊಡಗಿದನು. ಅಲ್ಲದೆ ಭರತನು ರಾಮ ಲಕ್ಷ್ಮಣರಂತೆಯೇ ಜಟೆ, ನಾರುಮಡಿ ಧರಿಸಿ, ನಿಯತ ಆಹಾರ ಸೇವಿಸುತ್ತಾ, ಋಷಿಯಂತೆ ಜೀವನವನ್ನು ನಡೆಸಿದನು. ಇದು ನಿಜವಾದ ಸೋದರತನ.

ಭರತನು ವಿನಯಶಾಲಿ, ಸೌಜನ್ಯಪರ, ಶೂರ, ಬುದ್ಧಿವಂತ. ಅವನಿಗೆ ಅಣ್ಣತಮ್ಮಂದಿರಲ್ಲಿ ಅಪಾರ ಪ್ರೀತಿ. ಶ್ರೀರಾಮನು ಹೇಳಿದಂತೆ ಕೈಕಯಿಯನ್ನು ಪ್ರೀತಿಯಿಂದ ನೋಡಿಕೊಂಡನು. ಮಗನಲ್ಲಿನ ಪ್ರೀತಿಯಿಂದ ತಪ್ಪು ಹೆಜ್ಜೆ ಇಟ್ಟು, ಎಲ್ಲ ಕಷ್ಟಕ್ಕೆ ನಾನು ಕಾರಣಳಾದೆ. ಮಗನಿಗೂ ನಾನು ಮಾಡಿದ್ದು ಪ್ರಿಯವಾಗಲಿಲ್ಲ ಎಂದು ಪಶ್ಚಾತ್ತಾಪದಿಂದ ಅವಳು ಬೇಯುತ್ತಿದ್ದಳು. ಅವಳೂ ಶ್ರೀರಾಮನ ಬರವನ್ನೇ ಕಾಯುತ್ತಿದ್ದಳು.

ಭರತನು ಪ್ರಜೆಗಳ ಹಿತಕ್ಕಾಗಿಯೇ ರಾಜ್ಯವಾಳಿದನು. ಧರ್ಮದಿಂದ ರಾಜ್ಯವಾಳಿದನು. ಜನರು ಶಾಂತಿ, ಸಂತೋಷಗಳಿಂದ ಬಾಳಿದರು.

ರಾಮನ ಆಗಮನ

ಕಾಡಿನಲ್ಲಿ ರಾಮ. ಲಕ್ಷ್ಮಣ, ಸೀತೆಯರು ಬಹು ಕಷ್ಟಗಳನ್ನು ಅನುಭವಿಸಬೇಕಾಯಿತು. ರಾವಣನೆಂಬ ರಾಕ್ಷಸ ರಾಜನು, ರಾಮ ಲಕ್ಷ್ಮಣರು ಆಶ್ರಮದಲ್ಲಿ ಇಲ್ಲದಿದ್ದಾಗ ಸೀತಾದೇವಿಯನ್ನು ಕದ್ದುಕೊಂಡು ಹೋದನು, ಲಂಕೆಯಲ್ಲಿ ಸೆರೆ ಇಟ್ಟನು. ರಾಮ ಲಕ್ಷ್ಮಣರಿಗೆ ಸುಗ್ರೀವ ಎಂಬ ವಾನರ ರಾಜನ ಸ್ನೇಹವಾಯಿತು. ಅವನ ಸಹಚರರಲ್ಲಿ ಒಬ್ಬನಾದ ವೀರಶ್ರೇಷ್ಠನಾದ ಆಂಜನೇಯನು ರಾಮನ ನೆಚ್ಚಿನ ಬಂಟನಾದನು. ಬಹು ಘೋರವಾದ ಯುದ್ಧದಲ್ಲಿ ರಾಮನು ರಾವಣನನ್ನು ಸೋಲಿಸಿದನು, ಅವನ ತಮ್ಮ ವಿಭೀಷಣನಿಗೆ ಪಟ್ಟಕಟ್ಟಿದನು. ವಿಭೀಷಣನು ಕೊಟ್ಟ ಪುಷ್ಪಕ ಎಂಬ ವಿಮಾನದಲ್ಲಿ ರಾಮ ಲಕ್ಷ್ಮಣ ಸೀತೆ ಎಲ್ಲರೂ ಅಯೋಧ್ಯೆಗೆ ಹೊರಟರು.

ಶ್ರೀರಾಮನು ಗಂಗಾ ನದಿಯ ತೀರಕ್ಕೆ ಬಂದು ಅಲ್ಲಿ ಪುಷ್ಪಕ ಎಂಬ ವಿಮಾನದಿಂದಿಳಿದು ಮೊದಲು ಆಂಜನೇಯನನ್ನು ಅಯೋಧ್ಯೆಗೆ ಕಳುಹಿಸಿಕೊಟ್ಟನು. “ಭರತನ ಬಳಿಗೆ ಹೋಗಿ ಆತನ ಕುಶಲವನ್ನು ವಿಚಾರಿಸು; ನಾನು ಸೀತಾ ಲಕ್ಷ್ಮಣರೊಡನೆ ಹಿಂತಿರುಗಿ ಬರುತ್ತಿದ್ದೇನೆ ಎಂದು ತಿಳಿಸು. ಅಲ್ಲದೆ ಆತನ ಮುಖಚರ್ಯೆ, ಮಾತುಗಳಿಂದ ಅವನ ಮನಸ್ಸಿನಲ್ಲಿರುವುದನ್ನು ತಿಳಿದುಕೋ. ತನಗೆ ಬಂದು ತಾನು ಅನುಭವಿಸಿದ ರಾಜ್ಯವನ್ನು ಯಾರು ಬಿಡುತ್ತಾರೆ? ಭರತನಿಗೆ ನಾನು ಬಂದ ವಿಷಯದಿಂದ ಸಂತೋವಾಗದಿದ್ದರೆ ಭರತನೇ ರಾಜ್ಯವನ್ನಾಳುತ್ತಾ ಸುಖದಿಂದಿರಲಿ. ಆತನ ಅಭಿಪ್ರಾಯವನ್ನೂ ಆತನು ಯೋಚಿಸಿಕೊಂಡಿರುವ ಕೆಲಸಗಳನ್ನೂ ತಿಳಿದುಕೊಂಡು ನಮಗೆ ಮುಂಚಿತವಾಗಿ ತಿಳಿಸು” ಎಂದು ಹೇಳಿ ಕಳುಹಿಸಿದನು.

ಭರತನಿದ್ದ ನಂದಿಗ್ರಾಮಕ್ಕೆ ಆಂಜನೇಯನು ಬಂದನು. ಭರತನು ವ್ರತ ಉಪವಾಸಗಳಿಂದ ಬಡವಾಗಿದ್ದನು. ರಾಮನನ್ನು ಧ್ಯಾನಿಸುತ್ತಾ, ಪಾದುಕೆಗಳನ್ನು ಪೂಜಿಸುತ್ತಾ, ರಾಮನು ಬರುವುದನ್ನೇ ಕಾದು ಕುಳಿತಿದ್ದನು. ಭರತನು ರಾಜ್ಯ ಸುಖದಲ್ಲೆ ಲೋಲುಪ್ತಿ ಪಡೆಯದೆ ಧರ್ಮವೇ ಮೂರ್ತಿವೆತ್ತಂತೆ ಒಪ್ಪುತ್ತಿದ್ದನು. ಆಂಜನೇಯನು ಈಗ ಇವನಿಗೆ ರಾಮನ ಆಗಮನದ ಸಂತೋಷದ ಸುದ್ದಿಯನ್ನು ತಿಳಿಸಿದನು.

“ಹೇ ರಘುಕುಲೋತ್ತಮ, ಯಾವ ರಾಮನಿಗಾಗಿ ನೀನು ಇಷ್ಟು ವರ್ಷಗಳ ಕಾಲ ಪರಿತಪಿಸುತ್ತಿದ್ದೆಯೋ  ಆ ರಾಮನು ಸೀತಾ ಲಕ್ಷ್ಮಣರೊಡನೆ ಭರದ್ವಾಜಾಶ್ರಮಕ್ಕೆ ಬಂದಿದ್ದಾನೆ. ಸ್ವಲ್ಪ ಹೊತ್ತಿನಲ್ಲಿಯೇ ಇಲ್ಲಿಗೆ ಆತನು ಬರಲಿದ್ದಾನೆ.

ಈ ಮಾತುಗಳನ್ನು ಕೇಳಿದೊಡನೆಯೇ ಭರತನಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ಆಂಜನೇಯನನ್ನು ಅಪ್ಪಿ ಆಲಂಗಿಸಿದನು. “ಬಹುಮಾನವಾಗಿ ನಿನಗೆ ಮೂರು ಲೋಕಗಳನ್ನೇ ಕೊಟ್ಟರೂ ಸಾಲದು” ಎಂದನು. “ನೀನು ಯಾರು? ಶ್ರೀರಾಮನು ನಿನ್ನನ್ನು ಕಳುಹಿಸಿದುದು ಹೇಗೆ?” ಎಂದು ಕೇಳಿದನು. ಆಂಜನೇಯನು ಸಂಗ್ರಹವಾಗಿ ಭರತನು ಅಯೋಧ್ಯೆಗೆ ಹಿಂದಿರುಗಿದನಂತರ ನಡೆದುದ್ದೆಲ್ಲವನ್ನೂ ತಿಳಿಸಿದನು.

ನಂದಿಗ್ರಾಮಕ್ಕೆ ಅಯೋಧ್ಯೆಯವರೆಗೆ ವೈಭವದ ಅಲಂಕಾರ ಮಾಡಿದ್ದರು. ನಂದಿಗ್ರಾಮಕ್ಕೆ ರಾಮನ ವಿಮಾನ ಬಂದಿಳಿಯಿತು. ಎಲ್ಲರೂ, “ಶ್ರೀರಾಮಚಂದ್ರ, ನಿನಗೆ ಸ್ವಾಗತ,  ಸ್ವಾಗತ”  ಎಂದು ಅಂತಃಕರಣಪೂರ್ವಕವಾಗಿ ಘೋಷಿಸುತ್ತಿದ್ದರು.

ಭರತನು ಅತ್ಯಂತ ಭಕ್ತಿಯಿಂದ ಹಿರಿಯಣ್ಣನನ್ನು ಸ್ವಾಗತಿಸಿದನು. ರಾಮನ ಪಾದುಕೆಗಳನ್ನು ಭರತನು ರಾಮನ ಪಾದಗಳಿಗೆ ತೊಡಿಸಿ ಅವನ ಎರಡು ಪಾದಗಳನ್ನೂ ಬಿಗಿಯಾಗಿ ಹಿಡಿದುಕೊಂಡು ಆನಂದಬಾಷ್ಪ ಸುರಿಸತೊಡಗಿದನು. ರಾಮನು ತನ್ನ ಎರಡು ಕೈಗಳಿಂದಲೂ ಅವನನ್ನು ಮೇಲಕ್ಕೆತ್ತಿ ಆಲಂಗಿಸಿದನು. ಭರತನು, “ಅಣ್ಣಾ, ಇಂದು ನಾನು ಧನ್ಯನಾದೆನು. ನೀನು ಬರುವವರೆಗೆ ಕಾಪಾಡಿಕೊಂಡಿರಲು ನೀನು ಕೊಟ್ಟಿದ್ದ ಈ ಸಮಸ್ತ ರಾಜ್ಯವನ್ನೂ ನೀನು ಒಪ್ಪಿಸಿಕೋ. ಅನೇಕ ತೊಂದರೆಗಳನ್ನು ಪರಿಹರಿಸಿಕೊಂಡು ಅಯೋಧ್ಯೆಗೆ ಹಿಂತಿರುಗಿದ ನಿನ್ನನ್ನು ಕಾಣುವ ಪುಣ್ಯವು ನನಗೆ ಒದಗಿತು. ಕೋಶ, ಸೈನ್ಯ ಮೊದಲಾದುವಲ್ಲ ಒಂದಕ್ಕೆ ಹತ್ತರಷ್ಟು ವೃದ್ಧಿಯಾಗಿವೆ. ಇಗೋ ರಾಜ್ಯವನ್ನು ಒಪ್ಪಿಸಿಕೋ” ಎಂದು ವಿನಯದಿಂದ ಬೇಡಿದನು. ರಾಮನು ರಾಜ್ಯವನ್ನು ಒಪ್ಪಿಕೊಂಡನು.

‘ಅಣ್ಣಾ, ಈ ಸಮಸ್ತ ರಾಜ್ಯವನ್ನೂ ನೀನು ಒಪ್ಪಿಸಿಕೋ.’

ಅನಂತರ ಭರತನು ಸುಗ್ರೀವನನ್ನು ಅಪ್ಪಿಕೊಂಡು, “ಸುಗ್ರೀವ, ನೀನು ನನಗೆ ಐದನೆಯ ಸೋದರ, ನಿನ್ನ ಸ್ನೇಹದಿಂದ ಬಹಳ ಸಹಾಯವಾಯಿತು. ನಿಜವಾದ ಸ್ನೇಹಿತ ಎಂದರೆ ನೀನೇ” ಎಂದನು. ಹಾಗೆಯೇ, “ವಿಭೀಷಣ, ನಿನ್ನಿಂದ ಬಹಳ ಸಹಾಯವಾಯಿತು” ಎಂದು ಅವನನ್ನು ಅಭಿನಂದಿಸಿದನು.

ಸೋದರವತ್ಸಲನಾದ ಭರತನ ಮಾತುಗಳನ್ನು ಕೇಳಿ ಸುಗ್ರೀವ, ವಿಭೀಷಣರ ಕಣ್ಣುಗಳಲ್ಲಿ ನೀರು ಬಂದಿತು. ಭರತನ ಧರ್ಮನಿಷ್ಠೆಯನ್ನೂ ತನಗಾಗಿ ಏನನ್ನೂ ಬಯಸದ ಹಿರಿಮೆಯನ್ನೂ ಕಂಡು ಎಲ್ಲರಿಗೂ ಮೆಚ್ಚಿಕೆಯಾಯಿತು.

ಅನಂತರ ಶಾಸ್ತ್ರೋಕ್ತವಾಗಿ ಅಯೋಧ್ಯೆಯಲ್ಲಿ ರಾಮನಿಗೆ ಪಟ್ಟಾಭಿಷೇಕ ನಡೆಯಿತು . ಎಲ್ಲರೂ ಸಂತೋಷಗೊಂಡರು. ಭರತನ ನಿಷ್ಠೆ, ಹಿರಿಯಣ್ಣನ ಮೇಲಿನ ಭಕ್ತಿ, ಪ್ರಜೆಗಳ ಮೇಲಿನ ವಿಶ್ವಾಸ ಆದರ್ಶವಾಗಿವೆ.

ತಮ್ಮ, ಭರತ, ತಪಸ್ವಿ ಭರತ

ತಾನಾಗಿ ಬಂದ ಚಕ್ರಾಧಿಪತ್ಯವನ್ನು ಯಾರು ಬೇಡವೆನ್ನುತ್ತಾರೆ? ಲಕ್ಷ್ಮಿಯೇ ಒಲಿದು ಬಂದಿರುವಾಗ ಬೇಡವೆನ್ನುವುದೇ? ಹೌದು. ಹಾಗೆ ನಡೆದುಕೊಂಡ ಮಹಾತ್ಮ ಭರತ. ಭರತನು ದಶರಥನ ಸತ್ಪುತ್ತ; ರಾಮನ ಸೋದರ; ಲೋಕದಲ್ಲಿಯೇ ಇಂಥ ಅಪುರ್ವ ಸೋದರರು ಮತ್ತೆ ಬೇರೆ ಯಾರೂ ದೊರೆಯುವುದಿಲ್ಲ. ರಾಮನು ಕಾಡಿನಲ್ಲಿ ಹದಿನಾಲ್ಕು ವರ್ಷ ಕಳೆದನು. ಆ ಹದಿನಾಲ್ಕು ವರ್ಷಗಳೂ ತಾನೂ ನಾರುಬಟ್ಟೆ ಉಟ್ಟು, ನೆಲದ ಮೇಲೆ ಮಲಗಿ, ಭರತನೂ ತಪಸ್ಸನ್ನೆ ಆಚರಿಸಿದ. ಬಂದ ರಾಜ ಪದವಿಯನ್ನೂ ಅಧಿಕಾರವನ್ನೂ ಪ್ರಜೆಗಳಿಗಾಗಿ ಬಳಸಿದ. ದೊಡ್ಡ ಪದವಿಗಾಗಿ ಮೋಹ ಪಡಬಾರದು, ಪದವಿ ಬಂದರೂ ಅದು ಇತರರಿಗೆ ಒಳ್ಳೆಯದು ಮಾಡುವುದಕ್ಕಲ್ಲದೆ ತನ್ನ ಸುಖಕ್ಕಲ್ಲ ಎಂಬ ತತ್ವವನ್ನು ಬಾಳಿ, ಎಲ್ಲ ಕಾಲಕ್ಕೆ ಮೇಲ್ಪಂಕ್ತಿಯಾದ.