ವೇದಗಳು!

ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಈ ನಾಲ್ಕು ಭಾರತೀಯ ಸಂಸ್ಕೃತಿಯ ಭಂಡಾರಗಳು. ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ಬದುಕಿ ಬಾಳಿದ ಬಗೆ, ಅವರ ನಡವಳಿಕೆ, ಆಚಾರ ವ್ಯವಹಾರಗಳೆಲ್ಲವೂ ವೇದಗಳಿಂದ ತಿಳಿಯುತ್ತದೆ.

ಹಿರಿಯ ಬಾಳು

ಭರದ್ವಾಜರು ಈ ವೇದಗಳ ಕಾಲದ ಋಷಿ. ಋಗ್ವೇದದಲ್ಲಿ ಅವರಿಗೆ ಸಂಬಂಧಿಸಿದ ಅನೇಕ ಸ್ತೋತ್ರಗಳಿವೆ. ಅಷ್ಟೇ ಅಲ್ಲ, ಅವರು ಪರೋಪಕಾರಿಯಾಗಿ ಬಾಳಿದ ಮಹಾತ್ಮರು. ಪ್ರಜೆಗಳಿಗೆ ಅವರು ಬಾಳುವ ಬಗೆಯನ್ನು ಕಲಿಸಿದರು. ಧರ್ಮಾತ್ಮರಾದ ರಾಜರನ್ನು ಉದ್ಧಾರ ಮಾಡಿದರು. ಅವರು ದೇವತೆಗಳ ಮೆಚ್ಚಿಗೆಗೂ ಪಾತ್ರರಾಗಿ ಹೊಗಳಿಸಿಕೊಂಡರು. ಪೂಜ್ಯರಾದ ಸಪ್ತ ಋಷಿಗಳಲ್ಲಿ ಒಬ್ಬರೆಂದು ಕೀರ್ತಿಯನ್ನು ಪಡೆದರು. ಅಂತಹ ಮಹಾನುಭಾವರ ಜೀವನದ ಕಥೆಯೂ ಸ್ವಾರಸ್ಯವಾದುದು. ಅವರ ಸ್ಮರಣೆ ಪವಿತ್ರವಾದುದು.

ಯಾರು? ಈ ಮಹಾತ್ಮರಾದ ಭರದ್ವಾಜರು ಯಾರು?

ಕೇಳುವವರಿಲ್ಲದ ಮಗು

ದೇವಗಂಗಾನದಿಯ ತೀರದಲ್ಲಿ ಒಂದು ಗಂಡುಮಗು!

‘ಎಷ್ಟು ಮುದ್ದಾಗಿದ್ದಾನೆ ಈ ಪುಟ್ಟ ಕಂದ! ಬಂಗಾರದ ಮೈಬಣ್ಣ. ಆಗ ತಾನೇ ಹುಟ್ಟಿದಂತಿರುವ ಇವನ ಮುಖದಲ್ಲಿ ಸೂರ್ಯನ ತೇಜಸ್ಸು, ಚಂದ್ರನ ಕಾಂತಿ. ಹಸಿವಿನಿಂದಲೋ ಏನೋ ವಿಲಿವಿಲಿ ಒದ್ದಾಡುತ್ತಿದ್ದಾನೆ. ಕೇಳುವವರೇ ದಿಕ್ಕಿಲ್ಲವಲ್ಲ! ಇವನನ್ನು ಹೀಗೆ ಬಿಟ್ಟು ಹೋದವರು ಯಾರು? ಅಯ್ಯೋ ಪಾಪ!’

-ಮರುದ್ಗಣ ದೇವತೆಗಳು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು. ಆ ಪುಟಾಣಿಯನ್ನು ಎತ್ತಿಕೊಂಡರು. ಅವನ ಮೈ ತಡವಿ ಮುದ್ದಿಸಿದರು. ಆಗ ದೇವಲೋಕದ ಅಶರೀರವಾಣಿ ಕೇಳಿ ಬಂದಿತು.

‘ಈ ಕಂದನು ಲೋಕವನ್ನು ಉದ್ಧರಿಸುವ ಮಹಾತ್ಮನಾಗುತ್ತಾನೆ, ಜ್ಞಾನದ ಬೆಳಕನ್ನು ಕೊಡುವ ಋಷಿಯಾಗುತ್ತಾನೆ!’

ಹಾಗಾದರೆ ಇಂತಹ ಮಹಾತ್ಮನು ಅನಾಥನಾಗಬಾರದು, ಇವನನ್ನು ಪೋಷಿಸಲೇಬೇಕು. ಅದು ನಮ್ಮ ಕರ್ತವ್ಯ ಎಂದುಕೊಂಡರು ಮರುದ್ಗಣ ದೇವತೆಗಳು. ತಾವೇ ಅವನನ್ನು ಪೋಷಿಸಿದರು.  ತಂದೆ ತಾಯಿಗಳಿಗೆ ಬೇಡವಾದ ಆ ಕಂದನು ಆ ದೇವತೆಗಳ ಮಡಿಲಿನಲ್ಲಿ ಬೆಳೆದನು. ದೇವತೆಗಳ ಪ್ರೀತಿಗೆ ಪಾತ್ರನಾದನು. ಅವನು ಭರದ್ವಾಜ!

ತಪಸ್ಸು

ಭರದ್ವಾಜಕುಮಾರನಿಗೆ ಮರುದ್ಗಣ ದೇವತೆಗಳೇ ಉಪನಯನ ಮಾಡಿದರು. ತಾವೇ ಗುರುಗಳಾಗಿ ಅವನಿಗೆ ವಿದ್ಯೆಯನ್ನು ಕಲಿಸಿದರು. ಭರದ್ವಾಜನಿಗೆ ವೇದವಿದ್ಯೆಯಲ್ಲಿ ಅಪಾರವಾದ ಆಸಕ್ತಿ. ಕಲಿತಷ್ಟೂ ಇನ್ನೂ ಕಲಿಯುವ ಆಸೆ. ಮದುವೆಯ ವಯಸ್ಸು ಬಂದರೂ ಅವನ ಮನಸ್ಸು ವಿದ್ಯೆಯಲ್ಲೇ ನಿಂತಿತು. ವೇದಗಳನ್ನು ಪೂರ್ಣವಾಗಿ ಕಲಿಯುವವರೆಗೂ ತಾನು ಬ್ರಹ್ಮಚಾರಿಯಾಗಿರುತ್ತೇನೆಂದು ಅವನು ನಿರ್ಧರಿಸಿದನು.

ಭರದ್ವಾಜನ ವಿದ್ಯಾಭ್ಯಾಸ ಮುಂದುವರಿದೇ ಮುಂದುವರಿಯಿತು. ಎಷ್ಟು ಕಲಿತಿದ್ದರೂ ಅವನಿಗೆ ತೃಪ್ತಿಯಿಲ್ಲ. ಮರುದ್ಗಣ ದೇವತೆಗಳು ತಾವು ಕಲಿಸುವುದಷ್ಟನ್ನೂ ಹೇಳಿಕೊಟ್ಟರು. ಅಷ್ಟನ್ನೂ ಭರದ್ವಾಜ ಕಲಿತ. ಇನ್ನೂ ವಿದ್ಯೆಯ ಹಂಬಲ ಅವನಿಗೆ. ಕೊನೆಗೆ ಮರುದ್ಗಣ ದೇವತೆಗಳು ಬೇರೇನೂ ದಾರಿ ಕಾಣದೆ, ‘ಭರದ್ವಾಜ, ನಮಗೆ ತಿಳಿದಷ್ಟು ವೇದಗಳನ್ನು ನಿನಗೆ ಕಲಿಸಿದ್ದೇವೆ. ಇನ್ನೂ ಹೆಚ್ಚಿನ ಜ್ಞಾನ ಪಡೆಯಬೇಕಾಗಿದ್ದರೆ ತಪಸ್ಸಿನಿಂದ ಇಂದ್ರನನ್ನು ಒಲಿಸು” ಎಂದುಬಿಟ್ಟರು.

ಭರದ್ವಾಜನು ನಿಷ್ಠಾವಂತನಾದ ಬ್ರಹ್ಮಚಾರಿ. ಗುರುವಿನ ಅಪ್ಪಣೆಯಂತೆ ನಡೆಯುತ್ತಾ ಬೇರೇನನ್ನೂ ಬಯಸದೆ ವಿದ್ಯೆಯೊಂದನ್ನೇ ಬಯಸಿ. ವಿದ್ಯೆಯೊಂದರಲ್ಲೇ ಮನಸ್ಸಿಟ್ಟು ಕಲಿಯುವುದೇ ಬ್ರಹ್ಮಚರ್ಯ, ಭರದ್ವಾಜನಿಗಂತೂ ವಿದ್ಯೆಯನ್ನು ಬಿಟ್ಟು ಬೇರೇನೂ ಬೇಕಿರಲಿಲ್ಲ. ವೇದಗಳಿಗಾಗಿ ತಪಸ್ಸು ಮಾಡಲು ಆತನು ನಿರ್ಧರಿಸಿದ. ಪ್ರಶಾಂತವಾದ ಸ್ಥಳದಲ್ಲಿ ಕುಳಿತು ಇಂದ್ರನನ್ನು ಧ್ಯಾನಿಸತೊಡಗಿದ.

ಬ್ರಹ್ಮತೇಜಸ್ವಿ

ಭರದ್ವಾಜಕುಮಾರನ ಘೋರವಾದ ತಪಸ್ಸಿಗೆ ದೇವತೆಗಳೂ ಆಶ್ಚರ್ಯಪಡುವಂತಾಯಿತು. ಅವನು ಮಳೆ ಗಾಳಿಗಳಿಗೂ ಹೆದರಲಿಲ್ಲ. ಅನ್ನ-ನೀರುಗಳನ್ನೂ ಬಿಟ್ಟುಬಿಟ್ಟನು. ಬರಬರುತ್ತಾ ಅವನ ಶರೀರವೇ ಸವೆಯಿತು. ಅವನ ಸಾಹಸಕ್ಕೆ ಎಲ್ಲರೂ ಹೆದರುವಂತಾಯಿತು. ಆದರೆ ಅವನು ತಪಸ್ಸನ್ನು ಮಾತ್ರ ನಿಲ್ಲಿಸಲಿಲ್ಲ. ಕೊನೆಗೆ ಒಂದು ದಿನ ಕುಳಿತುಕೊಳ್ಳುವುದಕ್ಕೂ ಶಕ್ತಿಯಿಲ್ಲದೆ ಅವನು ನೆಲಕ್ಕೆ ಉರುಳಿಬಿಟ್ಟನು.

ಇಂದ್ರನು ಪ್ರತ್ಯಕ್ಷನಾದ.

“ಭರದ್ವಾಜ, ಮೇಲಕ್ಕೇಳು, ಇದೋ ನಾನು ಬಂದಿದ್ದೇನೆ!”

“ದೆವದೇವನೇ, ಬಂದೆಯಾ ಸ್ವಾಮಿ!”

ನಿಧಾನವಾಗಿ ಎದ್ದು ಕುಳಿತು ಕೈ ಜೋಡಿಸಿದವನು ಭರದ್ವಾಜ.

ಇಂದ್ರನು ಅವನನ್ನು ಆಶೀರ್ವದಿಸಿ ನುಡಿದನು.

ಇಂದ್ರನು, ‘ಭರದ್ವಾಜ, ಮೇಲಕ್ಕೇಳು. ಇದೋ ನಾನು ಬಂದಿದ್ದೇನು!’ ಎಂದನು.

“ಭರದ್ವಾಜ, ನಿನ್ನ ಬ್ರಹ್ಮಚರ್ಯದ ಮಹಿಮೆ ಅದ್ಭುತವಾದುದು. ನೀನು ಹಿಂದಿನ ಎರಡು ಜನ್ಮಗಳಲ್ಲೂ ಹೀಗೆಯೇ ವೇದಗಳಿಗಾಗಿ ತಪಸ್ಸು ಮಾಡಿದ್ದೆ. ಈಗಲೂ ಅದಕ್ಕಾಗಿಯೇ ಶರೀರವನ್ನು ಸವೆಸಿದ್ದೀಯೆ. ನಿನಗೆ ಇನ್ನೂ ಒಂದು ಜನ್ಮವನ್ನು ಕೊಟ್ಟರೆ ಶರೀರವನ್ನು ಹೇಗೆ ಬಳಸುವೆ?”

“ಸ್ವಾಮಿಯೇ, ಈಗಲೂ ನಾನು ಬ್ರಹ್ಮಚಾರಿಯಾಗಿದ್ದುಕೊಂಡು ವಿದ್ಯೆಗಾಗಿ ಶರೀರವನ್ನು ಸವೆಸುತ್ತೇನೆ!”

ಎಂತಹ ನಿಷ್ಠೆಯ ಮಾತು! ವಿದ್ಯೆಯೆಂದರೆ ಹೀಗೆ ಆಸಕ್ತಿ ಇರಬೇಕು ಎಂದು ತಲೆದೂಗಿದನು ಇಂದ್ರ, ಭರದ್ವಾಜನ ಗಮನವನ್ನು ಸೆಳೆಯುತ್ತಾ, ‘ಇತ್ತ ನೋಡು’ ಎಂದನು.

ಭರದ್ವಾಜನ ಎದುರಿನಲ್ಲಿ ಬೆಟ್ಟಗಳಂತಿದ್ದ ಮೂರು ಬೆಳಕಿನ  ರಾಶಿಗಳು ಕಾಣಿಸಿದವು. ಮೂರು ರಾಶಿಗಳಿಂದಲೂ ಒಂದೊಂದು ಹಿಡಿಯಷ್ಟನ್ನು ಎತ್ತಿಕೊಂಡು ಇಂದ್ರನು ಭರದ್ವಾಜನ ಬೊಗಸೆಯಲ್ಲಿಟ್ಟನು. ಕೂಡಲೆ ಆ ಹೊಳೆಯುವ ಮೂರು ವಸ್ತುಗಳೂ ಭರದ್ವಾಜನ ಮೈಯಲ್ಲಿ ಕರಗಿ ಹೊಸ ಚೇತನ ಬಂದಿತು. ಭರದ್ವಾಜನಿಗೆ ಏನೊಂದೂ ಅರ್ಥವಾಗದೆ, “ಸ್ವಾಮಿಯೇ, ಇದು ಏನು?” ಎಂದು ಪ್ರಶ್ನಿಸಿದನು.

ಇಂದ್ರನು ನಗುತ್ತಾ ಹೇಳಿದನು – “ಭರದ್ವಾಜ, ವಿದ್ಯೆಯನ್ನು ಅಳೆಯಲು ಸಾಧ್ಯವೇ? ವೇದಗಳು ಅಪಾರ, ಅನಂತವಾಗಿವೆ. ಈಗ ನೀನು ಕಂಡ ಮೂರು ಬೆಟ್ಟಗಳಂತಹ ರಾಶಿಗಳೇ ಮೂರು ವೇದಗಳು. ನೀನು ಈವರೆಗಿನ ಮೂರು ಜನ್ಮಗಳಲ್ಲಿ ಸಾಧಿಸದ ವಿದ್ಯೆ ಮೂರು ಹಿಡಿಯಷ್ಟು ಮಾತ್ರ. ಆದೆರೆ ಇದೇನು ಸಾಮಾನ್ಯವಲ್ಲ. ಇಷ್ಟರಿಂದಲೇ ನೀನು ದೇವತೆಗಳನ್ನೂ ಮೀರಿದ ಬ್ರಹ್ಮ ತೇಜಸ್ವಿಯಾಗಿದ್ದೀಯೆ.”

“ಭಗವನ್‌, ಹಾಗಾದರೆ ನಾನು ಮುಂದೇನು ಮಾಡಬೇಕು?”

“ಭರದ್ವಾಜ, ವಿದ್ಯೆಯನ್ನು ಕಲಿಯುವುದಷ್ಟೇ ಮುಖ್ಯವಲ್ಲ; ಆ ವಿದ್ಯೆಯಿಂದ ಲೋಕವನ್ನು ಉದ್ಧರಿಸುವುದು ಮುಖ್ಯ. ಅದನ್ನೇ ನೀನು ಮಾಡಬೇಕಾಗಿದೆ. ಮಾನವ ಲೋಕಕ್ಕೆ ನಿನ್ನಿಂದ ಮಂಗಳವಾಗಲಿ” ಎನ್ನುತ್ತಾ ಇಂದ್ರನು ಹೊರಟುಹೋದನು.

ಮಾನವರ ಸೇವೆಗೆ

ಕೌಪೀನಧಾರಿಯಾಗಿ ಕಮಂಡಲವನ್ನೂ ಜಪಮಾಲೆಯನ್ನೂ ಹಿಡಿದು ಬಂದ ಭರದ್ವಾಜನನ್ನು ಮರುದ್ಗಣಗಳು ಕಂಡರು. ಶಾಂತವಾದ ಮುಖದಲ್ಲಿ ತೇಜಸ್ಸು ಉಕ್ಕುತ್ತಿತ್ತು.  ವೇದನಿಧಿಯಾಗಿ, ಸಿದ್ಧ ಪುರುಷನಾಗಿ, ಜ್ಞಾನಮೂರ್ತಿಯಾಗಿ ಬಂದ ಭರದ್ವಾಜನು ಮರುದ್ಗಣ ದೇವತೆಗಳಿಗೆ ನಮಸ್ಕರಿಸಿದನು. ಅವರು ಭರದ್ವಾಜನನ್ನು ಹರ್ಷದಿಂದ ಬಾಚಿ ತಬ್ಬಿಕೊಂಡು, “ಮಹಾತ್ಮ, ನೀನು ವಯಸ್ಸಿನಲ್ಲಿ ಚಿಕ್ಕವನಾಗಿದ್ದರೂ ಜ್ಞಾನದಿಂದ ನಮಗೂ ಪೂಜ್ಯನಾಗಿದ್ದೀಯೆ. ನೀನು ನಮಗೂ ಗುರು. ವಯಸ್ಸಿಗಿಂತಲೂ ಜ್ಞಾನವೇ ಮುಖ್ಯ” ಎಂದರು.ಭರದ್ವಾಜನನ್ನು ಅನುಗ್ರಹಿಸಲು ತಂಡೋಪತಂಡವಾಗಿ ದೇವತೆಗಳು ಬಂದರು. ಸೂರ್ಯ, ಚಂದ್ರ, ಅಗ್ನಿದೇವ, ವರುಣ, ಪೂಷ, ಸರಸ್ವತಿ – ಎಲ್ಲ ದೇವತೆಗಳಿಗೂ ಭರದ್ವಾಜನು ನಮಸ್ಕರಿಸಿದನು. ಅವರೆಲ್ಲರೂ ಭರದ್ವಾಜನಿಗೆ ಹೇಳಿದರು.

“ಭರದ್ವಾಜ, ವೇದವಿದ್ಯೆಯನ್ನು ಮಾನವಲೋಕದ ಶಿಷ್ಯರಿಗೂ ದಾನ ಮಾಡು. ಧರ್ಮವನ್ನು ನೆಲೆಗೊಳಿಸು. ಪ್ರಜೆಗಳಿಗೆ ಒಳ್ಳೆಯ ಬದುಕನ್ನು ಕಲಲಿಸು. ದುಷ್ಟರಾದ ಅಸುರರ ಕಾಟದಿಂದ ಮಾನವರಲ್ಲಿ ಅಶಾಂತಿಯುಂಟಾಗಿದೆ. ಅವರನ್ನು ನಿಗ್ರಹಿಸಲು ಪ್ರಯತ್ನಿಸು. ಈ ಕಾರ್ಯದಲ್ಲಿ ನಾವೆಲ್ಲರೂ ನಿನ್ನೊಡನೆ ಸಹಕರಿಸುತ್ತೇವೆ.”

ಭರದ್ವಾಜನು ಅವರ ಅಪ್ಪಣೆಗೆ ತಲೆಬಾಗಿದನು. ಇಂದಿನ ನನ್ನ ಜೀವನ, ಸೇವೆಗೆ ಮುಡಿಪು ಎಂದನು.

ಭರತ ಚಕ್ರವರ್ತಿಯ ಬಳಿಗೆ

ದುಷ್ಯಂತ ಮತ್ತು ಶಕುಂತಳೆಯರ ಹೆಸರುಗಳು ಭಾರತದಲ್ಲಿ ಬಹು ಪ್ರಸಿದ್ಧ. ಅವರ ಪುತ್ರನೇ ಭರತ ಚಕ್ರವರ್ತಿ. ಇಂದ್ರನಿಗೆ ಸಮನಾದ ವೀರ ಮತ್ತು ಧರ್ಮಾತ್ಮನಾದ ಅರಸ. ಆತನ ಪತ್ನಿ ಸುನಂದಾದೇವಿ, ಒಳ್ಳೆಯ ಪತಿವ್ರತೆ. ಇವರಿಗೆ ಮಕ್ಕಳೇ ಇರಲಿಲ್ಲ. ಹುಟ್ಟಿದ ಮಕ್ಕಳಲ್ಲಿ ಯಾರೂ ಉಳಿದಿರಲಿಲ್ಲ. ಮಕ್ಕಳಿಗಾಗಿ ಅವರು ಗಂಗಾತೀರದಲ್ಲಿ ಮರುತ್‌ಸೋಮ ಎಂಬ ಯಾಗವನ್ನು ಮಾಡಿದರು.

ಮರುದ್ಗಣ ದೇವತೆಗಳು ಭರದ್ವಾಜನೊಡನೆ ಯಾಗ ಮಂಟಪಕ್ಕೆ ಬಂದರು. ಭರತನಿಗೆ ಭರದ್ವಾಜನನ್ನು ತೋರಿಸಿ , “ರಾಜನೇ, ಈತನು ಅಂಗಿರಾ ವಂಶದ ಋಷಿ ಕುಮಾರನು. ಮಕ್ಕಳಿಲ್ಲದ ನೀನು ಈತನನ್ನು ಪುತ್ರನನ್ನಾಗಿ ಸ್ವೀಕರಿಸು. ನಿನ್ನ ವಂಶವನ್ನು ಈತನು ಉದ್ಧರಿಸುತ್ತಾನೆ” ಎಂದರು.

ಭರತನಿಗೆ ಈಗ ನಿಶ್ಚಿಂತೆಯಾಯಿತು. ಭರದ್ವಾಜನಿಗೆ ಸಕಾಲದಲ್ಲಿ ಮದುವೆಯಾಯಿತು. ಆತನ ಪತ್ನಿಯ ಹೆಸರು ಸುಶೀಲೆ. ಹೆಸರಿಗೆ ತಕ್ಕಂತೆ ಗುಣ-ರೂಪಗಳುಳ್ಳ ಪತಿವ್ರತೆ. ಭರದ್ವಾಜನಿಗೆ ಒಪ್ಪುವಂತಹ ಮಡದಿ. ಅಂತಹ ಸತಿಯನ್ನು ಪಡೆದ ಭರದ್ವಾಜನು ಭರತನ ಆಶೀರ್ವಾದ, ಕೃಪೆಗಳಿಗಾಗಿ ಮನಸ್ಸಿನಲ್ಲೇ ವಂದಿಸಿದನು.

ಭರತ ವಂಶದ ಉದ್ಧಾರ

ಭರತನು ಭರದ್ವಾಜರನ್ನು ಸ್ವೀಕರಿಸಿದ್ದ. ಭರತನಿಗೆ ಬೇರೆ ಮಕ್ಕಳಿರಲಿಲ್ಲ;, ಆದುದರಿಂದ ಭರದ್ವಾಜರೇ ಚಕ್ರವತಿಯಾಗಬಹುದಾಗಿತ್ತು. ಏನೇ ಆದರೂ ಭರದ್ವಾಜರಿಗೆ ರಾಜ್ಯದಾಸೆ ಇರಲಿಲ್ಲ. ಅವರ ಮನಸ್ಸಿನಲ್ಲಿ ದೇವತೆಗಳ ಮಾತು ಸ್ಥಿರವಾಗಿ ನಿಂತಿತ್ತು. ಅವರು ಕಲಿತ ವಿದ್ಯೆಯನ್ನು ಇತರರಿಗೆ ಕಲಿಸಬೇಕು, ಧರ್ಮವನ್ನು ನೆಲೆಗೊಳಿಸಬೇಕು, ಜನರಿಗೆ ಹಿರಿಯ ಬಾಳು ಬಾಳುವುದು ಹೇಗೆ ಎಂದು ಮಾರ್ಗದರ್ಶನ ಮಾಡಬೇಕು ಎಂದು ಅವರು ಹೇಳಿದ್ದರಲ್ಲವೆ? ಆದ್ದರಿಂದ ತಾವೇ ಮುಂದಾಳಾಗಿ ಭರತನಿಂದ ಮತ್ತೊಂದು ಯಾಗ ಮಾಡಿಸಿದರು. ಅಗ್ನಿದೇವನನ್ನು ಸ್ತುತಿಸಿ ಕರೆದರು, “ಅಗ್ನಿದೇವ, ಈ ಭರತ ಚಕ್ರವರ್ತಿಯ ಚಿಂತೆಯನ್ನು ನಿವಾರಿಸಿ ಆತನ ಇಷ್ಟವನ್ನು ನೆರವೇರಿಸು” ಎಂದು ಬೇಡಿದರು.

ಬೇಡಿಕೆ ಫಲಿಸಿತು. ಸ್ವಲ್ಪ ಕಾಲದಲ್ಲೇ ಭರತನಿಗೆ ಭುಮನ್ಯುವೆಂಬ ಪುತ್ರನು ಹುಟ್ಟಿದನು. ಈ ಸಮಯದಲ್ಲೇ ಭರತನೂ ತೀರಿಕೊಂಡಿದ್ದರಿಂದ ಭರದ್ವಾಜರ ಹೊಣೆ ಹೆಚ್ಚಿತು. ಭುಮನ್ಯುವಿಗೆ ವಯಸ್ಸು ಬರುವವರೆಗೆ ಅರಮನೆಯಲ್ಲೇ ಇದ್ದು, ಅವನಿಗೆ ಮಾರ್ಗದರ್ಶನ ಮಾಡಿ, ರಾಜ್ಯಾಭಿಷೇಕ ಮಾಡಿದರು.

ಭರದ್ವಾಜರು ಹೀಗೆ ನಶಿಸಿಹೋಗುತ್ತಿದ್ದ ಭರತನ ವಂಶವನ್ನು ಉದ್ಧರಿಸಿದ್ದು ಬಹು ದೊಡ್ಡ ಸತ್ಕಾರ್ಯ. ಈ ಭರತನ ವಂಶದಲ್ಲೇ ಮುಂದೇ ಪಾಂಡವರೇ ಮೊದಲಾದ ಧರ್ಮಾತ್ಮರು ಹುಟ್ಟಿದ್ದು.

ಜನರ ಪಾಡು

ಭುಮನ್ಯುವಿನಿಂದ ಬೀಳ್ಕೊಂಡ ಭರದ್ವಾಜರು ತೀರ್ಥಯಾತ್ರೆಗೆ ಹೊರಟರು. ಅನೇಕ ರಾಜ್ಯಗಳನ್ನೂ ದೇಶ ಕೋಶಗಳನ್ನೂ ಸುತ್ತಿದರು. ತಪೋವನಗಳಲ್ಲಿ ಅನೇಕ ಮಂದಿ ಋಷಿ-ಮುನಿಗಳ ಸಂದರ್ಶನ ಪಡೆದರು. ಕೈಲಾಸ ಪರ್ವತದವರೆಗೂ ನಡೆದು ಅಲ್ಲಿನ ಆಶ್ರಮದಲ್ಲಿ ಭೃಗುಮುನಿಯನ್ನು ಕಂಡರು. ಭೈಗುವೂ ಸಹ ಬ್ರಹ್ಮ ಜ್ಞಾನಿಯೂ ಪೂಜ್ಯನೂ ಆದ ಋಷಿ. ಪ್ರಪಂಚದ ಪರಿಸ್ಥಿತಿ, ಧರ್ಮ ಮೊದಲಾದ ಅನೇಕ ವಿಷಯಗಳನ್ನು ಅವರಿಬ್ಬರೂ ಚರ್ಚಿಸಿದರು.

ಈ ಪಾದಯಾತ್ರೆಯಿಂದ ಭರದ್ವಾಜರಿಗೆ ತಮ್ಮ ಮುಂದಿನ ಕರ್ತವ್ಯವೇನೆಂದು ತಿಳಿಯಿತು. ಭೂಮಿಯಲ್ಲಿ ಎಲ್ಲೆಲ್ಲೂ ಬಡತನ ಆವರಿಸಿತ್ತು. ದೊಣ್ಣೆಯಿದ್ದವನದೇ ಬೆಣ್ಣೆ ಎಂಬಂತೆ ಬಲವಿದ್ದವನು ಬಡವರ  ಐಶ್ವರ್ಯವನ್ನು ದೋಚುತ್ತಿದ್ದನು. ಜನರಿಗೆ ಪ್ರತಿ ನಿಮಿಷದಲ್ಲೂ ದುಷ್ಟರಾದ ಅಸುರರ ಭಯ ಕಾಡುತ್ತಿತ್ತು. ವಾರಶಿಖರು, ಶಂಬರರು ಎಂಬ ಅಸುರ ಪರಿವಾರದವರು ಜನರನ್ನು ಹಿಂಸಿಸುತ್ತಿದ್ದರು. ಇವರಿಗೆ ಧರ್ಮ, ಕರುಣೆ, ನೀತಿ ಏನೊಂದೂ ಇರಲಿಲ್ಲ. ಎಲ್ಲೆಲ್ಲೂ ಕೊಲೆ, ಸುಲಿಗೆ, ಹಿಂಸೆ, ಅತ್ಯಾಚಾರ ತುಂಬಿದ್ದವು. ಎಲ್ಲೆಲ್ಲೂ ಅಶಾಂತಿ. ಜನರಿಗೆ ಸರಿಯಾದ ನಾಯಕನೇ ಇರಲಿಲ್ಲ. ಅಲ್ಲಲ್ಲಿ ಆಳುತ್ತಿದ್ದ ಕ್ಷತ್ರಿಯರೂ ಸಹ ಅಸುರರಿಗೆ ಹೆದರಿಕೊಂಢು ಹೇಗೋ ಕಾಲ ನೂಕುತ್ತಿದ್ದರು.

ಜನರ ಬಡತನವನ್ನು ಕೊನೆಗಾಣಿಸಿ, ಶಾಂತಿ ಸ್ಥಾಪಿಸಿ

ಜನರ ಕಷ್ಟನಷ್ಟಗಳನ್ನು ಕಂಡು ಭರದ್ವಾಜರ ಮನಸ್ಸು ನೊಂದಿತು. ಅನ್ನ ಬಟ್ಟೆಗಳಿಲ್ಲದೆ ನರಳುತ್ತಿರುವ ದೀನರನ್ನೂ ದರಿದ್ರರನ್ನೂ ಕಂಡು ಅವರ ಕರುಣೆ ಉಕ್ಕಿತು. ಅವರು ಪ್ರತಿಜ್ಞೆಯನ್ನು ಘೋಷಿಸಿದರು:

ಈ ಪ್ರಪಂಚದ ಪ್ರಜೆಗಳೆಲ್ಲರೂ ನನ್ನ ಬಂಧುಗಳು. ಇವರ ಸೇವೆಗೆ ನನ್ನ ಬಾಳನ್ನು ಮುಡಿಪಾಗಿಟ್ಟಿದ್ದೇನೆ. ಶಿಷ್ಯರಿಗೆ ವಿದ್ಯಾದಾನ ಮಾಡಿ ವೇದಧರ್ಮವನ್ನು ಉದ್ಧರಿಸುತ್ತೇನೆ. ಪರೋಪರಕ್ಕಾಗಿ ನನ್ನ ತಪಶ್ಯಕ್ತಿಯನ್ನೂ, ಶರೀರವನ್ನೂ ವಿನಿಯೋಗಿಸುತ್ತೇನೆ. ಪವಿತ್ರವಾದ ಭಾರತ ಭೂಮಿಯ ಮಕ್ಕಳೇ, ದೇವತೆಗಳನ್ನು ಒಲಿಸಿರಿ. ಜ್ಞಾನವಂತರಾಗಿ ಧರ್ಮವನ್ನು ಉದ್ಧರಿಸಿರಿ. ಅಧರ್ಮಇಗಳಾದ ಅಸುರರನ್ನು ನಿಗ್ರಹಿಸಲು ಕ್ಷತ್ರಿಯ ವೀರರೆಲ್ಲರೂ ಒಂದಾಗಿರಿ. ಜನರ ಬಡತನ ನೀಗಿ ಶಾಂತಿಯನ್ನು ಸ್ಥಾಪಿಸಿರಿ!”

ಗುರುಕುಲಪುರೋಹಿತ

ಭರದ್ವಾಜರ ಘೋಷಣೆ ದೇಶದೇಶಗಳಲ್ಲಿ ಹರಡಿತು. ಅನೇಕ ಮಂದಿ ಶಿಷ್ಯರು ಭರದ್ವಾಜರಲ್ಲಿ ವಿದ್ಯೆ ಕಲಿಯಲು ಬಂದರು. ಅವರಿಗಾಗಿ ಸರಸ್ವತೀ ನದಿಯ ತೀರದಲ್ಲಿ ಒಂದು ಆಶ್ರಮವನ್ನು ನಿರ್ಮಿಸಿ, ಗುರುಕುಲವನ್ನು ಸ್ಥಾಪಿಸಲಾಯಿತು. ಇಲ್ಲೇ ಭರದ್ವಾಜರ ಸುಪುತ್ರತನಾದ ಗರ್ಗನು ಹುಟ್ಟಿದ್ದು.

ದಿನದಿನಕ್ಕೂ ಗುರುಕುಲದ ವಿದ್ಯಾರ್ಥಿಗಳ ಸಂಖ್ಯೆ ಬೆಳೆಯಿತು. ಸರಸ್ವತೀ ನದಿಯ ತೀರದ ತಪೋವನ ವೇದಘೋಷಗಳಿಂದ ಮೊಳಗಿತು. ವೇದಗಳನ್ನೇ ಅಲ್ಲದೆ ಕ್ಷತ್ರಿಯರಿಗೆ ತಿಳಿದಿರಬೇಕಾದ ಧನುರ್ವೇದ ಮತ್ತು ದಂಡ ನೀತಿಯೇ ಮೊದಲಾದುವನ್ನೊ ಅಲ್ಲಿ ಕಲಿಸಲಾಗುತ್ತಿತ್ತು.

ಗುರುಕುಲದಲ್ಲಿ ವಿದ್ಯೆ ಕಲಿಯುವವರಿಗೆ ಅನ್ನವಸ್ತ್ರಗಳು ಬೇಕಲ್ಲವೇ? ಅದನ್ನು ಕೊಡುವವರು ಆಳುವ ರಾಜರು. ಭರದ್ವಾಜರ ಪ್ರಭಾವವನ್ನೂ ಮಹಿಮೆಯನ್ನೂ ಕೇಳಿ ಅನೇಕ ಮಂದಿ ರಾಜರು ಆಗಾಗ ಆಶ್ರಮಕ್ಕೆ ಬರುತ್ತಿದ್ದರು. ಗುರುಕುಲಕ್ಕೆ ಅವರು ಉದಾರವಾಗಿ ದಾನಗಳನ್ನು ಕೊಡುತ್ತಿದ್ದರು. ಹಾಲಿಗಾಗಿ ಕೊಡಲ್ಪಟ್ಟ ಹಸುಗಳೆ ಅಲ್ಲಿ ನೂರಾರು ಸಂಖ್ಯೆಯಲ್ಲಿದ್ದವು.

ರಾಜರ ಈ ಅಭಿಮಾನಕ್ಕೆ ಮತ್ತೊಂದು ಕಾರಣವೂ ಇತ್ತು. ರಾಜರು ಭರದ್ವಾಜರನ್ನು ತಮ್ಮ ಪುರೋಹಿತರನ್ನಾಗಿ ಪಡೆಯಲು ಮತ್ತೆ ಮತ್ತೆ ಬೇಡುತ್ತಿದ್ದರು. ಪ್ರಜೆಗಳನ್ನು ಪಾಲಿಸುವ ರಾಜರಿಗೆ ಆ ಕಾಲದಲ್ಲಿ ಪುರೋಹಿತನು ಬಲ ಭುಜವಿದ್ದ ಹಾಗೆ. ರಾಜರಿಗೆ ಪಟ್ಟಾಭಿಷೇಕ ಮಾಡುವವನು ಪುರೋಹಿತ. ಧರ್ಮದ ಮಾರ್ಗವನ್ನು ತೋರಿಸಿಕೊಡುವವನು ಪುರೋಹಿತ. ಆಡಳಿತದಲ್ಲಿ ಅವನ ಸಲಹೆಯೇ ಮುಖ್ಯ. ಕಷ್ಟಕಾಲದಲ್ಲಿ ಶಕ್ತಿ ಯುಕ್ತಿಗಳಿಂದ ರಾಜನನ್ನೂ ಪ್ರಜೆಗಳನ್ನೂ ರಕ್ಷಿಸಬೇಕಾದರೂ ಅವನೇ. ಕೆಲವೊಮ್ಮೆ ಪುರೋಹಿತನು ಯುದ್ಧತಂತ್ರಗಳನ್ನೂ ಕ್ಷತ್ರಿಯ ಕುಮಾರರಿಗೆ ಕಲಿಸಿ ಕೊಡುವಂತಹ ವಿದ್ವಾಂಸನಾಗಿರುತ್ತಿದ್ದನು. ಭರದ್ವಾಜರು ಈ ಎಲ್ಲ ವಿದ್ಯೆಗಳಲ್ಲೂ ನಿಪುಣರು. ದೇವಾಂಶದಿಂದ ಜನಿಸಿ, ದೇವತೆಗಳ ಪ್ರೀತಿಗೂ ಪಾತ್ರರಾದ ಮಹಮಾವಂತರು. ಇನ್ನು ಕೇಳಬೇಕೆ?

ಧರ್ಮಪ್ರಿಯರಾದ ರಾಜರೇ ಶಿಷ್ಯರಾಗಬೇಕು

ಆದರೆ ಭರದ್ವಾಜರಿಗೆ ಧರ್ಮಾತ್ಮರಾದ ಕ್ಷತ್ರಿಯರೇ ಬೇಕಾಗಿತ್ತು. ಅಸುರರನ್ನು ನಿಗ್ರಹಿಸುವ ವೀರರೂ ಧರ್ಮಪ್ರಿಯರೂ ಆದ ರಾಜರು ಬೇಕಾಗಿತ್ತು. ಕೊನೆಗೂ ಅಂತಹವರೇ ಸಿಕ್ಕಿದರು.

ಸಿಂಧೂ ನದಿಯ ಪೂರ್ವ ಪ್ರದೇಶದ ರಾಜ್ಯಗಳಲ್ಲಿ ಸೃಂಜಯ ವಂಶದವರು ಆಳುತ್ತಿದ್ದರು. ಈ ರಾಜರು ತುಂಬಾ ಧರ್ಮಾತ್ಮರು, ಯಜ್ಞ ಯಾಗಗಳಿಂದ ಪ್ರಸಿದ್ಧರಾದವರು, ದಾನಧರ್ಮಗಳಿಂದ ಜನರ ಪ್ರೀತಿಗೆ ಪಾತ್ರರಾಗಿದ್ದವರು. ಅವರಲ್ಲಿ ಸಾಮ್ರಾಟನೆಂದು ಪ್ರಖ್ಯಾತಿ ಪಡೆದಿದ್ದವನು ಚಯಮಾನನ ಪುತ್ರನಾದ ಅಭ್ಯಾವರ್ತಿ. ಮತ್ತೊಬ್ಬನು ಕಾಶೀರಾಜ್ಯದ ದೊರೆಯಾದ ದಿವೋದಾಸ. ಈ ದಿವೋದಾಸನನ್ನೇ ಪ್ರಸ್ತೋಕನೆಂದೂ ಕರೆಯುತ್ತಿದ್ದರು. ಇವರಿಬ್ಬರೂ ಭರದ್ವಾಜರನ್ನು ತಮ್ಮ ಪುರೋಹಿತರಾಗಿರುವಂತೆ ಬೇಡಿದಾಗ, ಭರದ್ವಾಜರು ‘ಆಗಲಿ’ ಎಂದು ಒಪ್ಪಿದರು.

ಆಯುರ್ವೇದ

ಭರದ್ವಾಜರ ಆಶ್ರಮ ಕೇವಲ ಗುರುಕುಲವಷ್ಟೇ ಆಗಿರಲಿಲ್ಲ. ಆಗಾಗ ಆ ಮಾರ್ಗವಾಗಿ ಬರುವ ಯಾತ್ರಿಕರು ಅಲ್ಲಿ ತಂಗಬಹುದಾಗಿತ್ತು. ಅರಣ್ಯವಾಸಿಗಳಾಗಿದ್ದ ಬೇಡರೇ ಮೊದಲಾದವರು ತಮ್ಮ ಕಷ್ಟಗಳನ್ನು ಭರದ್ವಾಜರಲ್ಲಿ ಹೇಳಿಕೊಳ್ಳಲು ಬರುತ್ತಿದ್ದರು. ಇತರ ತಪೋವನಗಳಲ್ಲಿದ್ದ ಋಷಿಮುನಿಗಳೂ ಬರುತ್ತಿದ್ದುದುಂಟು. ಭರದ್ವಾಜರ ಪತ್ನಿಯಾದ ಸುಶೀಲಾ ದೇವಿಯು ತುಂಬಾ ಸಹನೆಯುಳ್ಳ ಮಹಾತಾಯಿ. ಹೀಗೆ ಬರುವವರೆಲ್ಲರನ್ನೂ ಅನ್ನಪಾನೀಯಗಳಿಂದ ಉಪಚರಿಸುವಾಗ ಒಂದಿಷ್ಟೂ ಬೇಸರ ಪಡುತ್ತಿರಲಿಲ್ಲ. ಎಲ್ಲಕ್ಕೂ ದೊಡ್ಡದೆಂದರೆ ಭರದ್ವಾಜರು ಮಾಡುತ್ತಿದ್ದ ಔಷಧೋಪಚಾರ. ಅವರಿಗೆ ಆಯುರ್ವೇದ ತಿಳಿದಿತ್ತು. ರೋಗದಿಂದ ನರಳುತ್ತಾ ಬಂದವರನ್ನು ಆಶ್ರಮದಲ್ಲೇ ಇರಿಸಿಕೊಂಡು ಚಿಕಿತ್ಸೆಯಿಂದ ಗುಣಪಡಿಸಿ ಕಳುಹಿಸುತ್ತಿದ್ದರು. ಆಯುರ್ವೇದವನ್ನು ಅವರು ಪಡೆದ ಸಂದರ್ಭವೂ ಸ್ವಾರಸ್ಯವಾಗಿದೆ.

ಜನರಿಗಾಗಿ ಇಂದ್ರನಿಂದ ವರ

ಒಂದು ಸಲ ಎಲ್ಲೆಲ್ಲೂ ಸಾಂಕ್ರಾಮಿಕ ರೋಗಗಳ ಹಾವಳಿ ಹಬ್ಬಿತು. ರೋಗಗಳಿಂದ ನರಳಿ ಸಾಯುವವರ ಸಂಖ್ಯೆ ಹೆಚ್ಚಿತು. ರೋಗದ ಪೀಡೆ ತಪೋವನಗಳಿಗೂ ಹಬ್ಬಿತು. ಮುನಿಗಳಿಗೂ ವ್ಯಾಧಿ ತಗುಲಿತು. ವ್ಯಾಧಿಯ ಲಕ್ಷಣವಾಗಲೀ ಅದಕ್ಕೆ ಔಷಧಿಯಾಗಲೀ ಒಬ್ಬರಿಗೂ ಗೊತ್ತಾಗಲಿಲ್ಲ. ಕೊನೆಗೆ ಮುನಿಗಳೆಲ್ಲರೂ ಭರದ್ವಾಜರನ್ನು ಬೇಡಿಕೊಂಡರು.

‘ಈ ಪ್ರಪಂಚದ ಪ್ರಜೆಗಳೆಲ್ಲರೂ ನನ್ನ ಬಂಧುಗಳು. ಇವರ ಸೇವೆಗೆ ನನ್ನ ಬಾಳನ್ನು ಮುಡಿಪಾಗಿಟ್ಟಿದ್ದೇನೆ.’

“ಭರದ್ವಾಜರೇ, ರೋಗವು ಶರೀರದ ಶಕ್ತಿಯನ್ನು ಮೊದಲು ಸೆಳೆಯುತ್ತದೆ. ಕೆಲಸ ಮಾಡದಂತೆ ನರಳಿಸಿ ಕೊನೆಗೆ ಪ್ರಾಣವನ್ನೇ ಬಲಿಗೊಳ್ಳುತ್ತದೆ. ಇದಕ್ಕೆ ಇರುವ ದಾರಿಯೊಂದೇ. ಇಂದ್ರನನ್ನು ಮೆಚ್ಚಿಸಿ ಅವನಿಂದ ಆಯುರ್ವೇದವನ್ನು ತಿಳಿಯಬೇಕು. ಈ ಕೆಲಸವನ್ನು ಮಾಡುವ ಯೋಗ್ಯತೆಯುಳ್ಳ ಮಹಾನುಬಾವರು ನೀವೊಬ್ಬರೇ, ಇಂದ್ರನಿಂದ ಆಯುರ್ವೇದವನ್ನು ಪಡೆದು , ನಮ್ಮ ವ್ಯಾಧಿಗಳನ್ನು ಗುಣಪಡಿಸಿ ಕಾಪಾಡಿ.”

ಭರದ್ವಾಜರು ಕರೆಯುವುದೇ ತಡ, ಇಂದ್ರನು ಪ್ರತ್ಯಕ್ಷನಾದನು. ಮುನಿಯ ಅಪೇಕ್ಷೆಯಂತೆ ಆಯುರ್ವೇದವನ್ನು ಕೊಟ್ಟನು. ಮುಂದೆ ಭರದ್ವಾಜರ ಶಿಷ್ಯನಾದ ದಿವೋದಾಸರಾಜನು ಅದನ್ನು ಹೆಚ್ಚು ಪ್ರಚುರಪಡಿಸಿದನು. ವ್ಯದ್ಯದೇವತೆಯಾದ ಧನ್ವಂತರಿಯ ಅವತಾರ ಎನಿಸಿದನು ದಿವೋದಾಸ.

ಅಸುರರಿಂದ ಹಿಂಸೆ

ವಾರಶಿಖರೆಂಬ ಅಸುರರ ಹೆಸರನ್ನು ಈ ಮೊದಲೇ ಕೇಳಿದ್ದೇವೆ. ವರಶಿಖನೆಂಬ ಅಸುರನ ಮಕ್ಕಳೇ ವಾರ ಶಿಖರು. ಪರಮನೆಂಬ ಅಸುರನು ಇವರಲ್ಲಿ ಹಿರಿಯ. ಅವನಿಗೆ ನೂರು ಜನ ತಮ್ಮಂದಿರು. ಹರಿಯೋಪೀಯಾ ಎಂಬ ನದಿಯ ತೀರಪ್ರದೇಶದಲ್ಲಿ ಇವರ ರಾಜಧಾನಿಯಿತ್ತು. ಇವರೆಲ್ಲರೂ ದುಷ್ಟರು, ಧನಲೋಭಿಗಳು, ಪ್ರಜಾಹಿಂಸಕರು, ಇವರ ಬಳಿ ದೊಡ್ಡ ಸೈನ್ಯವೂ ಇತ್ತು. ಬೇರಾರಿಗೂ ಗೊತ್ತಿಲ್ಲದಂತಹ ಕವಚ ಧಾರಣೆಯನ್ನು ಇವರು ಕಲಿತಿದ್ದರು. ಯುದ್ಧದಲ್ಲಿ ಶತ್ರುಗಳ ಬಾಣಗಳೆಲ್ಲವೂ ಇವರ ಕವಚಕ್ಕೆ ಬಿದ್ದು ವ್ಯರ್ಥವಾಗುತ್ತಿದ್ದುವೆ ಹೊರತು ಶರೀರಕ್ಕೆ ನಾಟುತ್ತಿರಲಿಲ್ಲ. ಹೀಗಾಗಿ ಇವರನ್ನು ಎದುರಿಸುವ ವೀರರೇ ಇರಲಿಲ್ಲ. ಅಂತೆಯೇ ಇವರ ಹಿಂಸೆಗಳಿಗೆ ಲೋಕವೇ ತತ್ತರಿಸುವಂತಾಗಿತ್ತು.

ವಾರಶಿಖರು ಅಭ್ಯಾವರ್ತಿಯ ರಾಜ್ಯದೊಳಕ್ಕೆ ನುಗ್ಗಿದರು. ಯಜ್ಞ-ಯಾಗಗಳನ್ನು ಕೆಡಿಸಿದರು;, ಮನೆ-ಮಾರುಗಳನ್ನು ಹಾಳುಗೆಡವಿದರು. ಕಂಡ-ಕಂಡ ಪ್ರಜೆಗಳನ್ನು ಮಕ್ಕಳೆನ್ನದೆ, ಹೆಂಗಸರೆನ್ನದೆ, ತಲೆ ಕಡಿದರು. ಸಿಕ್ಕಿದ ಸಂಪತ್ತನ್ನು ದೋಚಿಕೊಂಡರು.

ಅಭ್ಯಾವರ್ತಿಯ ಸಹಾಯಕ್ಕೆ ಸೈನ್ಯದೊಡನೆ ದಿವೋದಾಸನು ಬಂದನು. ಇಬ್ಬರೂ ವಾರಶಿಖರನ್ನು ಎದುರಿಸಿ ಹೋರಾಡಿದರು. ಆದರೆ ಅಸುರರ ಕೈ ಮೇಲಾಯಿತು. ರಾಜರ ಸೈನ್ಯಗಳು ನಷ್ಟವಾಗಿ ಚದುರಿಹೋದವು. ಸೋಲು ನಿಶ್ಚಯವಾಯಿತು. ಬೇರೆ ದಾರಿ ಕಾಣದೆ ಅಭ್ಯಾವರ್ತಿ ಮತ್ತು ದಿವೋದಾಸರು ತಲೆ ಮರೆಸಿಕೊಂಡು ಭರದ್ವಾಜರ ಆಶ್ರಮಕ್ಕೆ ಬಂದು ಬಿದ್ದರು.

ಬದುಕಿನ ಹೋರಾಟ

‘ಮಹಾತ್ಮ, ಘಾತಕರಾದ ವಾರಶಿಖರಿಂದ ಸೋತು ಬಂದಿದ್ದೇವೆ. ನಮ್ಮ ರಾಜ್ಯಗಳನ್ನು ಅವರು ಆಕ್ರಮಿಸಿದ್ದಾರೆ. ನಮ್ಮ ಸಂಪತ್ತು, ಕೋಶಗಳು ಅವರದಾಗಿವೆ. ಇನ್ನು ನಮಗೆ ತಪೋವನವೇ ಶರಣು” ಎಂದರು ಅಭ್ಯಾವರ್ತಿ ಮತ್ತು ದಿವೋದಾಸ.

ಭರದ್ವಾಜರಿಗೆ ಆ ಮಾತನ್ನು ಕೇಳಿ ಆಕಾಶವೇ ಕಳಚಿ ಬಿದ್ದಂತಾಯಿತು. ತಾವು ಧರ್ಮದ ಸ್ತಂಭಗಳನ್ನಾಗಿ ಯಾರನ್ನು ನಂಬಿಕೊಂಡಿದ್ದರೋ ಅವರೇ ಹೀಗೆ ನಿರಾಶರಾಗಿ ಬಂದಿದ್ದಾರೆ! ಕೋಪವನ್ನೇ ಕಂಡರಿಯದ ಭರದ್ವಾಜರ ಕಣ್ಣು ಕೆಂಪಗಾಯಿತು. ಕೆರಳಿದ ಕಾಳಸರ್ಪದಂತೆ ಬುಸುಗುಟ್ಟುತ್ತಾ ನುಡಿದರು,

“ಛೇ, ಕ್ಷೇತ್ರಧರ್ಮಕ್ಕೆ ಅಪಕೀರ್ತಿಯನ್ನು ತರುವಿರಾ? ಹೇಡಿಗಳಂತೆ ಯುದ್ಧಕ್ಕೆ ಹೆದರುವಿರಾ? ಅಭ್ಯಾವರ್ತಿ, ಏಳು, ನಿನ್ನ ಬಿಲ್ಲಿಗೆ ಹೆದೆಯೇರಿಸಿ ಅಧರ್ಮಿಗಳನ್ನು ಚೆಂಡಾಡು. ದಿಕ್ಕಿಲ್ಲದೆ ಅನಾಥರಂತೆ ಗೋಳಾಡುವ ನಿಮ್ಮ ಪ್ರಜೆಗಳನ್ನು ಒಮ್ಮೆ ಸ್ಮರಿಸಿಕೊಳ್ಳಿ. ಅವರ ಕ್ಷೇಮಕ್ಕಾಗಿ ನಿಮ್ಮ ಶರೀರವನ್ನು ಧಾರೆಯೆರೆಯಿರಿ!”

“ಭಗವಾನ್‌, ನೀವು ಕುಲಪುರೋಹಿತರು. ಮೇಲಾಗಿ ಸಜ್ಜನರ ರಕ್ಷಣೆಗಾಗಿ ಅವತರಿಸಿದ್ದೀರಿ. ದೇವತೆಗಳನ್ನು ನೀವು ಪ್ರತ್ಯಕ್ಷವಾಗಿ ಕರೆಯಬಲ್ಲಿರಿ. ನಿಮ್ಮ ಸಹಾಯವಿದ್ದರೆ ನಾವು ನಿಶ್ಚಯವಾಗಿಯೂ ಗೆಲ್ಲುತ್ತೇವೆ.  ಅಜ್ಞಾಪಿಸಿರಿ” ಎಂದು ಅಭ್ಯಾವರ್ತಿ , ದಿವೋದಾಸರು ಹೇಳಿದರು.

ದೇವತೆಗಳ ಸಹಾಯ
ಭರದ್ವಾಜಮುನಿಯ ಹೊಣೆ ಈಗ ಹೆಚ್ಚಿತು. ಅಸುರರೊಡನೆ ಯುದ್ಧವೆಂದರೆ ಸಾಮಾನ್ಯವಲ್ಲ. ಆಯುದ ಸಾಮಗ್ರಿ ಬೇಕು. ಯೋಧರಿಗೆ ಅನ್ನ-ಬಟ್ಟೆಗಳು ಬೇಕು. ಅರಸು ಮಕ್ಕಳು ಬರಿಗೈಯಲ್ಲಿದ್ದರು. ಪ್ರಜೆಗಳು ಬಡತನದಿಂದ ನರಳುತ್ತಿದ್ದರು. ಭೂಮಿಯ ಸಂಪತ್ತೆಲ್ಲಾ ಅಸುರರ ಕೈಸೇರಿತ್ತು.  ಈ ಪರಿಸ್ಥಿತಿಯಲ್ಲಿ ಭರದ್ವಾಜರು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು.

ಆಶ್ರಮದ ಅಗ್ನಿಕಂಡದಲ್ಲಿ ಅಗ್ನಿದೇವನು ಜ್ವಲಿಸುತ್ತಿದ್ದನು. ಭರದ್ವಾಜಮುನಿ ವೇದಿಕೆಯಲ್ಲಿ ಕುಳಿತರು. ನಿಷ್ಠೆಯಿಂದ ಇಂದ್ರನನ್ನು ಸ್ತುತಿಸಿದರು:

“ದೇವನೇ, ಸತ್ಕಾರ್ಯ ಸಹಾಯಕನು ನೀನು. ನೀನೇ ಲೋಕದ ಒಡೆಯ. ನನ್ನ ಪೂರ್ವಿಕರ ಲೋಕ ಕಲ್ಯಾಣ ಕಾರ್ಯಗಳಿಗೆ ನೀನು ಸಹಾಯಕನಾಗಿದ್ದೆ. ಈಗಲೂ ನಾನು ಅಂತಹುದೇ ಕಾರ್ಯವನ್ನು ಕೈಗೊಂಡಿದ್ದೇನೆ. ಅವರನ್ನು ಅನುಗ್ರಹಿಸಿದಂತೆಯೇ ನನ್ನನ್ನೂ ಅನುಗ್ರಹಿಸು.

ಇಂದ್ರನ ನೆರವು
ಯಜ್ಞಮಂಟಪದಲ್ಲಿ ಮಿಂಚಿನಂತಹ ಅದ್ಭುತವಾದ ಬೆಳಕು ಮೂಡಿತು. ಇಂದ್ರನು ಪ್ರತ್ಯಕ್ಷನಾದನು.

“ಭರದ್ವಾಜ, ನಿನ್ನ ಇಷ್ಟವು ನೆರವೇರಲಿ. ನನ್ನಿಂದ ಏನಾಗಬೇಕೋ ಹೇಳು.”

“ಇಂದ್ರದೇವ, ನೀನು ಮರುತ್ತುಗಳೊಡನೆ ಲೋಕವನ್ನು ಪಾಲಿಸುವ ಪ್ರಭು. ಅಸುರರು ತಾವೆ ಹೆಚ್ಚಿನವರೆಂಬ ಅಹಂಕಾರದಿಂದ ಲೋಕವನ್ನು ಹಿಂಸಿಸುತ್ತಿದ್ದಾರೆ.  ಅವರನ್ನು ದಮನಮಾಡು. ವಿಶ್ವದ ಈ ಮಕ್ಕಳಿಗಾಗಿ, ಪಶುಗಳಿಗಾಗಿ ಮತ್ತು ಎಲ್ಲರ ಅನ್ನ ನೀರುಗಳಿಗಾಗಿ ನಿನ್ನನ್ನು ಸ್ತುತಿಸುತ್ತೇನೆ.”

“ತಥಾಸ್ತು. ಅಸುರರನ್ನು ನಿಗ್ರಹಿಸಿ ಧರ್ಮರಕ್ಷಣೆ ಮಾಡಲು ದೇವತೆಗಳಾದ ನಾವೆಲ್ಲರೂ ಈ ಕ್ಷತ್ರಿಯ ವೀರರಿಗೆ ಬೆಂಗಾವಲಾಗಿರುತ್ತೇವೆ. ನೀನು ಅಶ್ವಿನೀ ದೇವತೆಗಳ ಸಹಾಯದಿಂದ ಈಗ ಯುದ್ಧ ಸಾಮಗ್ರಿಗೆ ಬೇಕಾದ ಸಂಪತ್ತನ್ನು ಪಡೆದುಕೋ.”

ಇಂದ್ರನು ಅಂತರ್ಧಾನನಾದನು. ಭರದ್ವಾಜರು ಅಶ್ವಿನೀ ದೇವತೆಗಳನ್ನು ಸ್ಮರಿಸಿದರು. ಅವರು ಭರದ್ವಾಜರಿಗೆ ಒಂದು ಗುಪ್ತ ನಿಧಿಯನ್ನೇ ತೋರಿಸಿದರು. ಆ ಸಂಪತ್ತನ್ನು ತಂದು ಭರದ್ವಾಜರು ದಿವೋದಾಸನಿಗೆ ಕೊಟ್ಟರು.

ಯುದ್ಧ

ಸೈನ್ಯಗಳು ಸಜ್ಜಾಗಿ ನಿಂತವು. ಭರದ್ವಾಜರ ಶಿಷ್ಯ ಪಾಯಮುನಿಯು ಕ್ಷತ್ರಿಯ ವೀರರ ಮೈಗೆ ಮಂತ್ರಯುಕ್ತವಾದ ಕವಚಗಳನ್ನು ತೊಡಿಸಿದನು. ಅಭ್ಯಾವರ್ತಿ, ದಿವೋದಾಸರಿಬ್ಬರೂ ಭರದ್ವಾಜರ ಪಾದಗಳಿಗೆ ವಂದಿಸಿ ಆಶೀರ್ವಾದ ಪಡೆದರು. ಎಲ್ಲರೂ ರಥಗಳನ್ನೇದರು.

ಭೀಕರ ಹೋರಾಟ ಪ್ರಾರಂಭವಾಯಿತು. ಅಭ್ಯಾವರ್ತಿಯೂ ದಿವೋದಾಸನೂ ವೀರಾವೇಶದಿಂದ ಹೋರಾಡಿದರು. ಒಬ್ಬೊಬ್ಬರಾಗಿ ಅಸುರ ನಾಯಕರು ಸತ್ತು ಉರುಳಿದರು.

ರಾಜರಿಗೆ ಜಯವಾಯಿತು. ವಾರಶಿಖರು ಸೆರೆಯಲ್ಲಿಟ್ಟಿದ್ದ ಮಂದಿಯೆಲ್ಲವನ್ನೂ ಬಿಡುಗಡೆ ಮಾಡಲಾಯಿತು. ಅವರು ಸೂರೆಮಾಡಿ ಸಂಗ್ರಹಿಸಿದ್ದ ಅಪಾರ ಸಂಪತ್ತನ್ನು ಅಭ್ಯಾವರ್ತಿಯು ತನ್ನ ರಾಜಧಾನಿಗೆ ಸಾಗಿಸಿದನು.

ಶಂಬರಾಸುರ

ವಾರಶಿಖರು ಸತ್ತರೆಂಬ ಸುದ್ದಿ ತಿಳಿದೊಡನೆ  ಶಂಬರನೆಂಬ ಅಸುರನು ವಿಷಸರ್ಪದಂತೆ ಬುಸುಗುಟ್ಟಿದನು. ಏಕೆಂದರೆ ಅವನು ಸಹ ವಾರಶಿಖರಂತೆ ದುಷ್ಟನಾಗಿ ತನಗೆ ಎದುರಿಲ್ಲವೆಂದು ಗರ್ವಪಡುತ್ತಿದ್ದವನು.

ಶಂಬರನು ಕಾಶೀರಾಜ್ಯದ ನೆರೆಯಲ್ಲೇ ಇದ್ದ ಬೆಟ್ಟ ಗುಡ್ಡಗಳ ನಾಡಿನ ಪ್ರಭು, ನೂರು ಪಟ್ಟಣಗಳ ಒಡೆಯ. ಎಷ್ಟೋ ಮಂದಿ ರಾಜರು ಅವನ ಹಾವಳಿಗೆ ಹೆದರಿ ಸೋಲನ್ನೊಪ್ಪಿದ್ದರು. ದಿವೋದಾಸನಿಗೆ ಅವನು ಪ್ರಬಲ ಶತ್ರು.  ಅವನು ಅಪಾರ ಸೈನ್ಯದೊಡನೆ ಕಾಶೀರಾಜ್ಯದ ಮೇಲೆ ದಂಡೆತ್ತಿ ಬಂದನು. ದಿವೋದಾಸನಿಲ್ಲದ ವೇಳೆಯಲ್ಲೇ ರಾಜ್ಯಕ್ಕೆ ಕಷ್ಟ ಒದಗಿತು.

ವಿಷಯವನ್ನು ತಿಳಿದು ದಿವೋದಾಸನು ರಾಜಧಾನಿಗೆ ಧಾವಿಸಿದನು. ಆದರೆ ಆ ವೇಳೆಗಾಗಲೆ ಅಸುರರು ಕಾಶಿಯನ್ನು ಹಾಳು ಕೆಡವಿದ್ದರು. ಎಲ್ಲೆಲ್ಲೂ ಪ್ರಜೆಗಳ ಹಾಹಾಕಾರ. ಗೋಳಾಟ.

ಮತ್ತೆ ಭರದ್ವಾಜರೇ

ದಿವೋದಾಸನಿಗೆ ಮತ್ತೊಮ್ಮೆ ಭರದ್ವಾಜಮುನಿ ಬೆಂಬಲವಾಗಿ ನಿಂತರು. ರಾಜರಿಂದ ಸೋಮರಸದ ಸಮರ್ಪಣೆಯೊಡನೆ ಯಜ್ಞವನ್ನು  ಮಾಡಿಸಿ ಇಂದ್ರನನ್ನು ಬರಮಾಡಿದರು. ಅಶ್ವಿನೀ ದೇವತೆಗಳೇ ಮೊದಲಾದ ಇತರ ದೇವತೆಗಳ ಸಹಾಯವೂ ದೊರಕಿತು.

ಅಸುರರ ದಮನಕ್ಕಾಗಿ ಇದು ಕೊಟ್ಟ ಕೊನೆಯ ಯುದ್ಧವಾಗಿತ್ತು. ಶಂಬರನ ಸೈನಿಕರೆಲ್ಲರೂ ದಿಕ್ಕು ದಿಕ್ಕುಗಳಿಂದ ದಾಳಿ ಮಾಡಿದರಾದರೂ ಅವರ ಆಟ ಸಾಗಲಿಲ್ಲ. ಯುದ್ಧದಲ್ಲಿ ಅವರೆಲ್ಲರೂ ಸತ್ತುಬಿದ್ದರು. ದಿವೋದಾಸನ ಬಾಣದಿಂದ ಶಂಬರನ ತಲೆ ಉರುಳಿ ಬಿದ್ದಿತು. ಅವನು ದೋಚಿಕೊಂಡಿದ್ದ ಐಶ್ವರ್ಯವೂ ಅವನ ರಾಜ್ಯವೂ ದಿವೋದಾಸನ ವಶವಾಯಿತು.

ಭೂಮಿಯ ಒಡೆತನವೆಲ್ಲವೂ ಅಭ್ಯಾವರ್ತಿ ಮತ್ತು ದಿವೋದಾಸರದೇ ಆಯಿತು. ಆ ಧರ್ಮಾತ್ಮರ ಆಳ್ವಿಕೆಯಲ್ಲಿ ಪ್ರಜೆಗಳಿಗೆ ನೆಮ್ಮದಿ ಬಂದಿತು.

ಲೋಕೋಪಕಾರ

ದಿವೋದಾಸನಲು ರಾಜನಾಗಿಯೂ ಋಷಿಯಂತೆ ಬಾಳಿದ ರಾಜರ್ಷಿ, ಬೇಡಿದವರಿಗೆ ಇಲ್ಲವೆನ್ನದೆ ಕೊಡುವ ದಾನಿ. ಅತಿಥಿ ಸೇವೆಯೇ ಆತನಿಗೆ ದೇವನ ಪೂಜೆ. ಅಭ್ಯಾವತಿ ಸಾಮ್ರಾಟನೂ ಅಷ್ಟೇ ವಿನಯಶಾಲಿ. ದೈವ ಭಕ್ತ. ಪ್ರಜಾಪ್ರೇಮಿ. ಈ ಇಬ್ಬರೂ ಭರದ್ವಾಜರ ಮೆಚ್ಚಿನ ಶಿಷ್ಯರಾದರು.

ರಾಜರಿಬ್ಬರೂ ತಮ್ಮ ಗೆಲುವಿನ ಸೂಚಕವಾಗಿ ವಿಜಯೋತ್ಸವವನ್ನು ಏರ್ಪಡಿಸಿದರು. ಅದು ಬಹು ದೊಡ್ಡ ಉತ್ಸವ . ಲಕ್ಷಾಂತರ ಮಂದಿ ಸೇರಿದ್ದರು. ದೂರದೂರಗಳಿಂದ ಜನರೂ ಋಷಿಮುನಿಗಳೂ ಬಂದಿದ್ದರು. ಬೇಕಾದ ಹಾಗೆ ದಾನ ಧರ್ಮಗಳಾದವು.

ತುಂಬಿದ ಸಭೆಯಲ್ಲಿ ಭರದ್ವಾಜ ಮತ್ತು ಅವರ ಪುತ್ರನಾದ ಗರ್ಗನ ಪಾದಗಳನ್ನು ರಾಜರಿಬ್ಬರೂ ತೊಳೆದರು. ಅನಂತರ ತಾವು ಅಸುರರನ್ನು ಗೆದ್ದು ತಂದಿದ್ದ ಮುತ್ತು ರತ್ನಗಳೇ ಮೊದಲಾದ ಐಶ್ವರ್ಯವ್ನು ಮುನಿಯ ಎದುರಿನಲ್ಲಿ ಸುರಿದರು. ಎಷ್ಟೊಂದು ಸಂಪತ್ತು! ಬೆಟ್ಟದ ಹಾಗೆ ರಾಶಿ ಕಂಗೊಳಿಸಿತು. ಭರದ್ವಾಜರು ಆಶ್ಚರ್ಯದಿಂದ “ಏನಿದು?” ಎಂದರು.

“ಭಗವನ್‌, ಇದು ಅಸುರರನ್ನು ಗೆದ್ದುತಂದ ಸಂಪತ್ತು. ಅಸುರರನ್ನು ನಿಮ್ಮ ಕೃಪೆಯಿಂದಲೇ ಗೆದ್ದೆವು. ಆದ್ದರಿಂದ ಇದೆಲ್ಲವೂ ನಿಮಗೆ ಸೇರಬೇಕಾದುದು” ಎಂದರು ರಾಜರಿಬ್ಬರೂ.

ಭರದ್ವಾಜರು ನಕ್ಕುಬಿಟ್ಟರು. “ತಪೋವನದಲ್ಲಿರುವ ನಮಗೆ ಈ ಧನಕೋಶದಿಂದ ಪ್ರಯೋಜನವೇನು? ಈ ಬೆಳ್ಳಿ ಬಂಗಾರಗಳು ನಮಗೇತಕ್ಕೆ? ದುರಾಸೆಯನ್ನು ಹುಟ್ಟಿಸುವ ಧನ ಬಹು ಕೆಟ್ಟದ್ದು.  ಆಸೆಯೆಂಬುದು ದಾರವುಳ್ಳ ಸೂಜಿಯಂತೆ ಪಾಪಗಳನ್ನು ಬೆಸೆದು ಗಂಟು ಹಾಕುತ್ತದೆ” ಎಂದರು ಭರದ್ವಾಜರು.

“ಮಹಾತ್ಮ, ಏನೇ ಆದರೂ ಈ ಸಂಪತ್ತನ್ನು  ನಿಮಗೆ ಕಾಣಿಕೆ ಕೊಟ್ಟಿದ್ದೇವೆ. ಇದನ್ನು ನಿಮ್ಮಿಷ್ಟ ಬಂದಂತೆ ಉಪಯೋಗಿಸಿರಿ” ಎಂದರು ಅಭ್ಯಾವರ್ತಿ ಮತ್ತು ದಿವೋದಾಸ.

ಧರ್ಮಾತ್ಮರಾದ ರಾಜರ ಈ ದಾನ ಮತ್ತು ಭರದ್ವಾಜರ ಆಸೆಯಿಲ್ಲದ ತ್ಯಾಗಕ್ಕೆ ಮೆಚ್ಚಿ ದೇವತೆಗಳೆಲ್ಲರೂ ಅಲ್ಲಿ ಕಾಣಿಸಿಕೊಂಡರು. ಇಂದ್ರ, ವರುಣ,ಅಗ್ನಿದೇವ ಮೊದಲಾದವರೆಲ್ಲರೂ ಮುನಿಯನ್ನು ಹೊಗಳುತ್ತಾ, “ಭರದ್ವಾಜರೇ, ನೀವು ಭೂಮಿಯನ್ನು ಬೆಳಗಲು ಸ್ವರ್ಗದಿಂದ ಇಳಿದ ದಿವ್ಯಜ್ಯೋತಿ. ವೇದಗಳನ್ನು ಉದ್ಧರಿಸಿದ ಜ್ಞಾನದ ನಿಧಿ, ಭೂಮಿಯಲ್ಲಿ ಶಾಂತಿಯನ್ನು ಸ್ಥಾಪಿಸಿದ ತಪೋಬ್ರಹ್ಮ” ಎಂದರು.

ಭರದ್ವಾಜರು ರಾಜರಿಬ್ಬರ ದಾನವನ್ನು ದೇವತೆಗಳಿಗೆ ವಿವರಿಸಿದರು. “ಔದಾರ್ಯವೇ ಸದ್ಗುಣ. ದಾನವೇ ಶ್ರೇಷ್ಠವಾದ ಸೇವೆ. ಈ ಇಬ್ಬರ ಹೆಸರುಗಳೂ ವೇದಗಳಲ್ಲಿ ಅಮರವಾಗಿರಲಿ” ಎಂದು ಹಾರೈಸಿದರು.

ಅನೇಕ ರಥಗಳಲ್ಲಿ ಸಂಪತ್ತನ್ನು ಹೇರಿ ಸಾಗಿಸಲಾಯಿತು. ಭರದ್ವಾಜರು ಅದನ್ನು ಬಡಬಗ್ಗರಿಗೂ ದೀನರಿಗೂ ಹಂಚಿದರು. ಬಡವರಾಗಿದ್ದ ಪ್ರಜೆಗಳು ಇದರಿಂದ ಮತ್ತೆ ಸಮೃದ್ಧರಾದರು.

ಸಪ್ತರ್ಷಿಗಳು

ತಾರಕಾಸುರ ಎಂಬವನು ಒಬ್ಬ ದುಷ್ಟ. ಅವನು ಬ್ರಹ್ಮನಿಂದ ವರಗಳನ್ನು ಪಡೆದಿದ್ದವನು. ಆ ವರಬಲದಿಂದಲೇ ದೇವತೆಗಳನ್ನು ಸೋಲಿಸಿ ಅವರ ರಾಜ್ಯವನ್ನು ಕಿತ್ತುಕೊಂಡಿದ್ದನು. ಪಾರ್ವತೀ ಪರಮೇಶ್ವರರ ಮಗನಾದ ಷಣ್ಮುಖನು ಯುದ್ಧದಲ್ಲಿ ಅವನನ್ನು ಕೊಂದಿದ್ದರಿಂದ ದೇವತೆಗಳಿಗೆ ಮತ್ತೆ ರಾಜ್ಯ ಲಭಿಸಿ ಸಂತೋಷವಾಯಿತು. ಪರಮೇಶ್ವರನ ಮದುವೆಯಿಂದ ಇಷ್ಟೆಲ್ಲಾ ಲೋಕಕಲ್ಯಾಣವಾಯಿತು. ಈ ಮದುವೆಗೆ ಸಹಕರಿಸಿದ ಋಷಿಗಳೆಂದರೆ ಭರದ್ವಾಜ, ಗೌತಮ, ಜಮದಗ್ನಿ, ಕಶ್ಯಪ, ಅತ್ರಿ, ವಸಿಷ್ಠ ಮತ್ತು ವಿಶ್ವಾಮಿತ್ರ – ಈ ಏಳು ಮಂದಿ. ದೇವತೆಗಳು ಇವರನ್ನು ಸಪ್ತರ್ಷಿಗಳೆಂದು ಕರೆದರು.

ಹಲವು ಯುಗಗಳು ಸೇರಿದರೆ ಒಂದು ಮನ್ವಂತರ ಕಾಲವೆನಿಸುತ್ತದೆ. ಪ್ರತಿ ಮನ್ವಂತರದಲ್ಲೂ ಸಪ್ತರ್ಷಿಗಳ ಸ್ಥಾನ ಬದಲಾಗುತ್ತದೆ. ಇಂತಹ ಹದಿನಾಲ್ಕು ಮನ್ವಂತರಗಳಿರುತ್ತದೆ. ವೈವಸ್ವತ ಮನ್ವಂತರದಲ್ಲಿ ಭರದ್ವಾಜರಿಗೆ ಸಪ್ತರ್ಷಿ ಮಂಡಲದಲ್ಲಿ ಸ್ಥಾನ ಲಭಿಸುವುದೆಂದು ನಮ್ಮ ಪುರಾಣಗಳು ಹೇಳುತ್ತವೆ. ಈಗ ನಡೆಯುತ್ತಿರುವುದಾದರೂ ವೈವಸ್ವತ ಮನ್ವಂತರವೇ! ಈ ಮನ್ವಂತರದಲ್ಲಿ ಭರದ್ವಾಜರು ವೇದಗಳನ್ನು ಉದ್ಧರಿಸಿದ ಮಹರ್ಷಿಗಳಲ್ಲಿ ಒಬ್ಬರಾಗಿದ್ದಾರೆ.

ದಿವೋದಾಸನ ಮೊರೆ

ಭರದ್ವಾಜರ ಕೃಪೆಯಿಂದ ರಾಜ್ಯವನ್ನು ಪಡೆದ ದಿವೋದಾಸನು ಬಹುಕಾಲ ಸುಖವಾಗಿ ರಾಜ್ಯವಾಳಿದನು. ಹಿಂದೆ ಶತ್ರುಗಳಿಂದ ಅವನ ರಾಜಧಾನಿಯಾದ ಕಾಶಿ ಧ್ವಂಸವಾಗಿತ್ತು. ಇಂದ್ರನ ಸಹಾಯದಿಂದ ಅವನು ವಾರಣಾಸಿಯೆಂಬ ಹೊಸ ರಾಜಧಾನಿಯನ್ನು  ಕಟ್ಟಿ ಕೊಂಡಿದ್ದನು.

ವತ್ಸ ದೇಶವು ದಿವೋದಾಸನ ನೆರಯಲ್ಲಿದ್ದ ರಾಜ್ಯ. ವೀತಹವ್ಯನೆಂಬಾತನು ಅಲ್ಲಿಯ ದೊರೆ. ಮೊದಮೊದಲು ಅವನು ದಿವೋದಾಸನ ಅಧೀನನಾಗಿಯೇ ಆಳುತ್ತಿದ್ದನು. ಕಾಲಕಳೆದಂತೆ ಅವನ ಪುತ್ರ ಪೌತ್ರರ ಸಂಖ್ಯೆ ನೂರಕ್ಕೂ ಮೀರಿತು. ಹಾಗೆಯೇ ಅವನ ದುರಾಸೆಯೂ ಹೆಚ್ಚಿತು. ಸಮಯವನ್ನು ನೋಡಿಕೊಂಡು ವೀತಹವ್ಯನ ಕಡೆಯವರೆಲ್ಲರೂ ಒಟ್ಟಾಗಿ ದಿವೋದಾಸನ ರಾಜ್ಯದ ಮೇಲೆ ದಾಳಿ ಮಾಡದರು.

ದಿವೋದಾಸನು ಈ ವೇಳೆಗೆ ಸಾಕಷ್ಟು ಮುದುಕನಾಗತೊಡಗಿದ್ದ. ಶತ್ರುಗಳನ್ನು ಎದುರಿಸುವಷ್ಟು ಶಕ್ತಿ ಸಾಮರ್ಥ್ಯಗಳು ಈಗಿರಲಿಲ್ಲ. ಅವನು ಸೋತುಹೋದನು. ಆದರೂ ಶತ್ರುಗಳಿಗೆ ಸೆರೆಯಾಗದೆ ಹೇಗೋ ತಪ್ಪಿಸಿ ಪತ್ನಿಯೊಡನೆ ಭರದ್ವಾಜರ ಆಶ್ರಮವನ್ನು ಸೇರಿದನು. ಭರದ್ವಾಜಮುನಿಗೆ ತನ್ನ ಕಷ್ಟವನ್ನು ಹೇಳಿಕೊಂಡನು-

“ಭಗವನ್‌, ಹೈಹಯ ವಂಶದ ವೀತಹವ್ಯರು ನನ್ನ ಸರ್ವಸ್ವವನ್ನೂ ಆಕ್ರಮಿಸಿಕೊಂಡಿದ್ದಾರೆ. ರಣರಂಗಕ್ಕೆ ನಾನು ಹೆದರಿ ಬರಲಿಲ್ಲ. ಆದರೆ ಶತ್ರುಗಳ ಸೈನ್ಯ ಅಪಾರವಾಗಿದೆ. ಅವರಿಗೆ ಜಯ ಲಭಿಸಿಯೇ ತೀರುತ್ತದೆ. ನನಗಾದರೋ ಮಕ್ಕಳೇ ಇಲ್ಲ. ಯುದ್ಧದಲ್ಲಿ ನಾನು ಮಡಿದರೆ ನನ್ನ ವಂಶವೇ ಇಲ್ಲದಂತಾಗುತ್ತದೆ. ಆದ್ದರಿಂದ ತಮ್ಮ ಸಲಹೆಗಾಗಿ ಬಂದಿದ್ದೇನೆ.”

ದಿವೋದಾಸನಿಗೆ ಅನುಗ್ರಹ

ಭರದ್ವಾಜರು ತುಂಬಾ ಕರುಣಾಳು. ದಿವೋದಾಸನ ಮೇಲೆ ಅವರಿಗೆ ಕರುಣೆ ಉಕ್ಕಿತು. “ಹೆದರ ಬೇಡ, ನಿನಗೆ ಒಳ್ಳೆಯದಾಗುವಂತೆ ಮಾಡುತ್ತೇನೆ” ಎಂದು ಭರವಸೆ ನೀಡಿದರು . ದಿವೋದಾಸನು ಪತ್ನಿಯೊಡನೆ ಭರದ್ವಾಜರ ಆಶ್ರಮದಲ್ಲೇ ನಿಂತನು.

ಭರದ್ವಾಜರು ದಿವೋದಾಸನಿಂದ ಮಕ್ಕಳಿಗಾಗಿ ಯಜ್ಞಗಳನ್ನು ಮಾಡಿಸಿದರು. ಶುಭಮುಹೂರ್ತದಲ್ಲಿ ದಿವೋದಾಸನ ರಾಣಿಯು ಗಂಡುಮಗುವನ್ನು ಹೆತ್ತಳು. ಅವನೇ ಮುಂಧೆ ಧರ್ಮಾತ್ಮನೆಂದು ಪ್ರಸಿದ್ಧನಾದ ಪ್ರತರ್ದನ.

ಪ್ರತರ್ದನನಿಗೆ ಭರದ್ವಾಜರೆಏ ಧನುರ್ವೇದವನ್ನೂ ಯೋಗವಿದ್ಯೆಯನ್ನೂ ಕಲಿಸಿದರು. ಅವನು ಹದಿಮೂರು ವರ್ಷದವನಾಗುತ್ತಲೆ ಅರಣ್ಯವಾಸಿಗಳಾದ ಯುವಕರ ಸೈನ್ಯವನ್ನು ಕಟ್ಟಿದನು.

ದಿವೋದಾಸನ ಆನಂದಕ್ಕೆ ಮಿತಿಯೇ ಇಲ್ಲ. ಭರದ್ವಾಜರು ಆಶ್ರಮದಲ್ಲೇ ಅವನಿಗೆ ಯುವರಾಜ ಪಟ್ಟಾಭಿಷೇಕ ಮಾಡಿದರು. ಅನಂತರ ಅವನಿಗೆ ಕವಚವನ್ನು ತೊಡಿಸಿ, ಬಿಲ್ಲು ಬಾಣಗಳನ್ನು ಕೈಗಿತ್ತರು. ಪ್ರತರ್ದನ, ಶತ್ರುಗಳನ್ನು ಸೋಲಿಸಿ ನಿನ್ನ ತಂದೆಯ ಋಣವನ್ನು ತೀರಿಸು” ಎಂದು ಹರಸಿದರು.

ಗಂಗಾನದಿಯ ತೀರದಲ್ಲಿ ಭಯಂಕರ ಯುದ್ಧವಾಯಿತು. ವೀತಹವ್ಯರೆಲ್ಲರೂ ಹತರಾದರು. ಉಳಿದುಕೊಂಡಿದ್ದ ಮುದುಕನಾದ ವೀತಹವ್ಯನೊಬ್ಬನು ಮಾತ್ರ ಭೃಗುಮುನಿಯ ಆಶ್ರಮಕ್ಕೆ ಹೋಗಿ ತಪೋದೀಕ್ಷೆ ಪಡೆದುಕೊಂಡನು.

ಪ್ರತರ್ದನನು ಭೃಗುವಿನ ಆಶ್ರಮದವರೆಗೂ ಬೆನ್ನಟ್ಟಿ ಹೋದನಾದರೂ ವಿಷಯವನ್ನು ತಿಳಿದು ಶಾಂತನಾದನು. ಅವನು ಭೃಗಮುನಿಯ ಆಶೀರ್ವಾದವನ್ನು ಪಡೆದು ಹಿಂತಿರುಗಿದನು. ದಿವೋದಾಸನು ಮುಂದೆ ತನ್ನ ಮಗನನ್ನು ಸಿಂಹಾಸನದಲ್ಲಿ ಕೂಡಿಸಿ ರಾಜನನ್ನಾಗಿ ಮಾಡಿದ ಮೇಲೆ, ಮತ್ತೆ ತಪಸ್ಸಿಗಾಗಿ ಭರದ್ವಾಜರ ಆಶ್ರಮಕ್ಕೆ ಬಂದು ಬಿಟ್ಟನು.

ದೇವತೆಗಳ ನಡುವೆ

ಭರದ್ವಾಜರು ಮತ್ತೊಮ್ಮೆ ತೀರ್ಥಯಾತ್ರೆ ಕೈಗೊಂಡರು. ಈ ಸಲ ಭೂಮಿಯಲ್ಲಿ ಪ್ರಜೆಗಳು ನೆಮ್ಮದಿಯಿಂದಿರುವುದನ್ನು ಕಂಡು ಅವರಿಗೆ ಸಮಾಧಾನವಾಯಿತು. ಅತ್ರಿಯೇ ಮೊದಲಾದ ಇತರ ಮಹರ್ಷಿಗಳೊಡನೆ ಅವರು ಹೆಜ್ಜೆಯಿಟ್ಟ ಭಾರತದ ಪ್ರತಿ ಕ್ಷೇತ್ರವೂ ಪವಿತ್ರ ತೀರ್ಥವಾಯಿತು. ಸಪ್ತರ್ಷಿಗಳ ಹೆಸರಿನಲ್ಲಿ ಇಂದಿಗೂ ಅನೇಕ ಜಲಕುಂಡಗಳೂ ತೀರ್ಥಗಳೂ ಕಂಡು ಬರುತ್ತವೆ.

ಸರಸ್ವತೀ ನದಿಯ ತೀರದಲ್ಲಿ ಅವರ ಆಶ್ರಮ ತಪೋಧಾಮವಾಯಿತು. ಅಪಾರ ಸಂಖ್ಯೆಯ ಶಿಷ್ಯರ ವೇದಘೋಷವು ಆ ರಮ್ಯವಾದ ತಪೋವನದ ಗಿಡ ಗಿಡವನ್ನೂ ಪವಿತ್ರವನ್ನಾಗಿ ಮಾಡಿತು. ಶಾಂತನಾದ ಆ ಮುನಿಯು ವಾಸಿಸುತ್ತಿದ್ದ ಅರಣ್ಯದಲ್ಲಿ ಕ್ರೂರ ಮೃಗಗಳೂ ಸಹ ಋಷಿಯಂತೆಯೇ ವೈರಾಗ್ಯ ತಾಳಿದ ಹಾಗೆ ಶಾಂತ ಸ್ವಭಾವ ಪಡೆದಿದ್ದವು.

ಮುನಿಗೆ ಮುದಿತನ ಆವರಿಸಿತ್ತು. ದೀರ್ಘಕಾಲದ ತಪಸ್ಸಿನಿಂದ ಅವರು ಒಂದು ದಿನ ನಿಧಾನವಾಗಿ ಕಣ್ಣು ತೆರೆದರು. ಆಗ ತಾನೇ ಬೆಳಗಾಗುವುದರಲ್ಲಿತ್ತು. ಹಕ್ಕಿಗಳ ಚಿಲಿಪಿಲಿ ಕಲರವ ಕಿವಿಗೆ ಇಂಪಾಗಿತ್ತು. ಎಲ್ಲೆಲ್ಲೂ ಗಿಡಗಳ ಹಸಿರು , ಹೂಗಳ ಸುಗಂಧದಿಂದ ಕೂಡಿದ ತಂಗಾಳಿ. ಸಮೀಪದಲ್ಲೇ ಅವರ ಪತಿವ್ತೆಯಾದ ಪತ್ನಿ ಸುಶೀಲಾದೇವಿಯೂ ಕೈಜೋಡಿಸಿ ಆಕಾಶದೆಡೆಗೆ ನೋಡುತ್ತಿದ್ದಳು. ಭರದ್ವಾಜರು ಬೆಳಗಿನ ದೇವಿಯಾದ ಉಷೆಗೆ ತಮ್ಮ ಪ್ರಾರ್ಥನೆ ಸಲ್ಲಿಸಿದ್ದರು. ಕ್ರಮವಾಗಿ ಅವರ ಪ್ರಾರ್ಥನೆ ಎಲ್ಲ ದೇವತೆಗಳಿಗೂ ಸಲ್ಲುತ್ತಾ ಹೋಯಿತು.

“ಉಷಾದೇವಿಯೇ, ನೀನು ಮೂಡಿದಾಗ ಪಕ್ಷಿಗಳೂ ಸಹ ತಮ್ಮ ನಿವಾಸಗಳಿಂದ ಹೊರಕ್ಕೆ ಹಾರುತ್ತವೆ. ಮಾನವರು ಅನ್ನ ಸಂಪಾದನೆಗಾಗಿ ಓಡಾಡುತ್ತಾರೆ. ನಿನ್ನನ್ನು ಪೂಜಿಸುವವನಿಗೆ ಸಂಪತ್ತು ಕೊಡು… ಪೂಷ ದೇವನೆ, ನಮಗೆ ವಿವೇಕಿಗಳ ಸಹವಾಸವನ್ನು ಕೊಡು… ಸೋಮರುದ್ರರೇ, ನಮ್ಮ ಎಲ್ಲಾ ಸಾಂಕ್ರಾಮಿಕ ರೋಗಗಳನ್ನೂ ನಾಶ ಪಡಿಸಿರಿ. ಸರೀರದಲ್ಲೇ ರೋಗ ನಿವಾರಕ ಸಾಮಗ್ರಿ ತುಂಬಿರಿ….ಇಂದ್ರಾವರುಣರೇ, ನಿಮ್ಮ ಕೃಪೆಯಿಉಂದ, ಪ್ರವಾಹವನ್ನು ದೋಣಿಯಿಂದ ದಾಟುವಂಎ ನಾವು ಪಾಪಗಳನ್ನು ದಾಟುವಂತಾಗಲಿ…”

ಇದು ಕೇವಲ ಭರದ್ವಾಜರು ತಮಗಾಗಿ ಮಾತ್ರವೇ ಸಲ್ಲಿಸಿದ ಪ್ರಾರ್ಥನೆಯಲ್ಲ. ಮಾನವಕೋಟಿಗಾಗಿ ಸಲ್ಲಿಸಿದ ಋಷಿಯ ಪ್ರಾರ್ಥನೆ.

ಆಕಾಶದಲ್ಲಿ ಅದೊಂದು ಅದ್ಭುತ ಪ್ರಕಾಶ ಮೂಡಿತು. ಭರದ್ವಾಜ ದಂಪತಿಗಳ ಮೇಲೆ ದೇವತೆಗಳು ಹೂಮಳೆ ಸುರಿಸಿದರು. ದಿವ್ಯರಥವೊಂದು ಇಳಿಯಿತು. ಇಂದ್ರಾದಿ ದೇವತೆಗಳು ಆ ಪುಣ್ಯಮೂರ್ತಿಗೆ ಕೈಮುಗಿದು, “ಮಹಾತ್ಮ, ದೇವಲೋಕದಲ್ಲಿ ನೆಲೆಸಲು ಬಾ” ಎಂದರು. ದಿವ್ಯದೇಹದೊಡನೆ ಭರದ್ವಾಜ ದಂಪತಿಗಳು ರಥವನ್ನೇರಿ ದೇವಲೋಕವನ್ನು ಸೇರಿದರು.

ಋಷಿವಿಭೂತಿ

ಭಾರತವು ಋಷಿಗಳ ತೌರಾಗಿ ಜಗಜ್ಜನನಿಯೆನಿಸಿದೆ. ಭರದ್ವಾಜರು ಋಷಿಗಳಲ್ಲಿ ಶ್ರೇಷ್ಠರೆನಿಸಿದ್ದ ವಿಭೂತಿ ಪುರುಷರು. ಋಷಿಪಂಚಮಿಯ ದಿನ ಇಂದಿಗೂ ಸಪ್ತರ್ಷಿಗಳಲ್ಲಿ ಭರದ್ವಾಜ ದಂಪತಿಗಳನ್ನು ಪೂಜಿಸುವುದುಂಟು.

ಋಗ್ವೇದದ ಆರನೇ ಮಂಡಲದಲ್ಲಿ ಭರದ್ವಾಜರ ಸೂಕ್ತಗಳಿವೆ. ಅವರ ಶಿಷ್ಯರಾದ ಗರ್ಗ, ಪಾಯು, ಸುಹೋತ್ರ ಮೊದಲಾದವರ ಸೂಕ್ತಗಳೂ ಇವೆ. ಅಭ್ಯಾವರ್ತಿ ಮತ್ತು ದಿವೋದಾಸ ಅಥವಾ ಪ್ರಸ್ತೋಕನ ಹೆಸರುಗಳೂ ಅಲ್ಲಿ ಪ್ರಶಂಸಿತವಾಗಿವೆ. ಋಗ್ವೇದದ ಮಹಿಮೆಯನ್ನು ಪಾಶ್ಚಾತ್ಯರೂ ಹೊಗಳಿದ್ದಾರೆ. “ಭೂಮಿಯಲ್ಲಿ ನದಿ ಪರ್ವತಗಳಿರುವವರೆಗೆ ಋಗ್ವೇದದ ಮಹಿಮೆ ಶಾಶ್ವತ” ಎಂದು ಮ್ಯಾಕ್ಸ್‌ ಮುಲ್ಲರ್ ಎಂಬ ಪಾಶ್ಚಾತ್ಯ ವಿದ್ವಾಂಸ ನುಡಿದಿದ್ದಾನೆ.

‘ಮಹಾತ್ಮ, ದೇವಲೋಕದಲ್ಲಿ ನೆಲೆಸಲು ಬಾ.’

 

ಹೀಗೆ ಜ್ಞಾನಕ್ಕಾಗಿ ಮತ್ತು ಇತರರ ಕಲ್ಯಾಣಕ್ಕಾಗಿ ಬದುಕಿದ ಮಹಾಪುರುಷ ಭರದ್ವಾಜ. ಚಕ್ರವರ್ತಿಯಾಗುವ ಅವಕಾಶ ತಾನಾಗಿ ಬಂದರೂ ಅದರಿಂದ ಆಕರ್ಷಿತರಾಗದೆ, ಲೋಕದ ಸೇವೆಗಾಗಿ ನಿಂತ ಹಿರಿಯ ಚೇತನ. ಅಗಾಧವಾದ ವಿದ್ಯೆಯನ್ನು ಲಕಷ್ಟಪಟ್ಟು ಸಂಪಾದಿಸಿದರು: ಆ ವಿದ್ಯೆಯನ್ನೆಲ್ಲ ಲೋಕಕಲ್ಯಾಣಕ್ಕೆ ಧಾರೆ ಎರೆದರು. ಒಳ್ಳೆಯವರಿಗೂ ಕೆಟ್ಟವರಿಗೂ ಘರ್ಷಣೆ ಪ್ರಪಂಚದಲ್ಲಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಭರದ್ವಾಜರ ಕಾಲದಲ್ಲಿಯೂ ಈ ಘರ್ಷಣೆ ನಡೆಯುತ್ತಲೇ ಇತ್ತು. ಈ ಘರ್ಷಣೆಯಲ್ಲಿ ಒಳ್ಳೆಯುವರ ರಕ್ಷಣೆಗೆ ನಿಂತ ಭರದ್ವಾಜರು, ಸಜ್ಜನರಿಗೆ ತಾವೇ ಒಂದು ಕೋಟೆ ಎನ್ನುವಂತೆ ಬಾಳಿದರು. ಭರದ್ವಾಜರ ಅಸಮಾನ ವಿದ್ಯೆ-ಶಕ್ತಿಗಳನ್ನು ಕಂಡು ಅನೇಕ ರಾಜರು ಅವರನ್ನು ಪುರೋಹಿತರನ್ನಾಗಿ ಮಾಡಿಕೊಂಡು ಅವರ ಶಿಷ್ಯರಾಗಿ ರಾಜ್ಯಭಾರ ಮಾಡಲು ಬಯಸಿದರು. ಆದರೆ ರಾಜಾಧಿರಾಜರಲ್ಲಿಯೂ ಅವರು ಹುಡುಕಿದುದು ಧರ್ಮಾತ್ಮರನ್ನು. ತಮ್ಮ ವಿದ್ಯೆ, ತಮ್ಮ ಶಕ್ತಿ, ಧರ್ಮ ಮಾರ್ಗದಲ್ಲಿ ನಡೆಯುವ ಲೌಕಿಕ ಶಕ್ತಿಗೆ ಮಾತ್ರ ನೆರವಾಗಬೇಕು ಎಂಬುದು ಅವರ ನಿರ್ಧಾರ. ತಮ್ಮ ಶಿಷ್ಯಂದಿರಾದ ವೀರರು ತಂದು ಪಾದ ಕಾಣಿಕೆಯಾಗಿ ಒಪ್ಪಿಸಿದ, ಕಣ್ಣು ಕೋರೈಸುವ ಸಂಪತ್ತನ್ನೆಲ್ಲ ಬಡಬಗ್ಗರಿಗೆ ದಾನ ಮಾಡಿದರು ಈ ಮಹಾತ್ಮರು. ಅವರು ಮಾಡಿದ ಪ್ರತಿಜ್ಞೆ ಎಲ್ಲ ಕಾಲದಲ್ಲಿ ಎಲ್ಲ ಜ್ಞಾನಿಗಳ, ಎಲ್ಲ ಧೀರರ, ಎಲ್ಲ ಶ್ರೀಮಂತರ, ಹೃದಯದಲ್ಲಿ ನಿಲ್ಲಬೇಕು, ಅವರ ಪ್ರತಿಜ್ಞೆ ಆಗಬೇಕು:

‘ಪ್ರಪಂಚದ ಎಲ್ಲ ಮಾನವರೂ ನನ್ನ ಬಂಧುಗಳು. ಇವರ ಸೇವೆಗೆ ನನ್ನ ಬಾಳನ್ನು ಮುಡಿಪಾಗಿಟ್ಟಿದ್ದೇ ನೆ.  ಪರೋಪಕಾರಕ್ಕಾಗಿ ನನ್ನ ತಪಶ್ಯಕ್ತಿಯನ್ನೂ ಶರೀರವನ್ನೂ ಉಪಯೋಗಿಸುತ್ತೇನೆ.”

ಭರದ್ವಾಜಮುನಿ ದೇವಲೋಕಕ್ಕೂ ಭೂಲೋಕಕ್ಕೂ ಸೇತುವೆಯಂತೆ ಬಾಳಿದ ದೇವಮಾನವ; ತಮ್ಮ ಜ್ಞಾನ, ತಪಸ್ಸು, ದಯೆ, ಪ್ರಜಾಸೇವೆಯಿಂದ ಭಾರತದ ಕೀರ್ತಿಯನ್ನು ಬೆಳಗಿದ ಋಷಿ. ಪ್ರತಿದಿನ ಬೆಳಗ್ಗೆ ಭಕ್ತಿಯಿಂದ ಅವರನ್ನು ಹೀಗೆ ಸ್ಮರಿಸುವುದು ಪುಣ್ಯ-

ಭರದ್ವಾಜಂ ಮಹಾಶಾಂತಂ
ಸುಶೀಲಾಪತಿ ಮೂರ್ಜಿತಂ |

ಅಕ್ಷ ಸ್ರಗ್ಗಂಧ ಹಸ್ತಂಚ
ಮುನಿಮಾಂಗೀರಸಂ ಭಜೇ ||

(ಜಪಮಾಲೆಯನ್ನೂ ಚಂದನವನ್ನೂ ಕೈಯಲ್ಲಿ ಹಿಡಿದಿರುವ ಶಾಂತನೂ ಸುಶೀಲಾದೇವಿಯ ಪತಿಯೂ ಅಂಗಿರಸ ವಂಶದವರೂ ಆದ ಭರದ್ವಾಜರಿಗೆ ನಮಸ್ಕರಿಸುತ್ತೇನೆ.)