ಎಷ್ಟು ನ್ಯಾನೋ ಶಬ್ದಗಳಿವೆ ಎಂಬುದು ನಿಮಗೆ ಗೊತ್ತೇ? ನ್ಯಾನೋ ಸ್ಕೇಲ್, ನ್ಯಾನೋ ಸೆಕೆಂಡ್, ನ್ಯಾನೋ ಔಷಧ, ನ್ಯಾನೋ ವಸ್ತು – ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನ್ಯಾನೋ ತಾಂತ್ರ ವಿಸ್ತಾರವಾಗಿ ಬೆಳೆಯುತ್ತ ಚರ್ಚೆಯ, ಕೌತುಕದ ತಾಂತ್ರಿಕ ವಿಷಯವಾಗಿದೆ. ವಾರಕ್ಕೊಂದರಂತೆ, ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಬಿತ್ತರಗೊಳ್ಳುತ್ತಿರುವ ನ್ಯಾನೋ ಕಾನ್‌ಫರೆನ್ಸ್ ಜಹಿರಾತುಗಳು ನ್ಯಾನೋ ತಾಂತ್ರದ ಮಹತ್ವವನ್ನು ತಿಳಿಸುತ್ತಲಿವೆ. ಸಾಮಾನ್ಯ ಜನರಲ್ಲಿ ಇದರ ಅರಿವು ಈಗ ಸದ್ಯಕ್ಕೆ ಸ್ವಲ್ಪ ಕಷ್ಟಕರವೆಂದೇ ಹೇಳಬಹುದು.

ನ್ಯಾನೋ ತಾಂತ್ರ ಇಷ್ಟು ಪ್ರಮುಖವಾಗಿ ಜಗತ್ತಿನ ಜನರ ಆಕರ್ಷಣೆಗೊಳಪಟ್ಟಿರುವುದಕ್ಕೆ ಪ್ರಮುಖ ಕಾರಣ, ಮಾನವನ ಅಭಿವೃದ್ದಿ ಮತ್ತು ಅಭ್ಯುದಯದ ಬಗ್ಗೆ ಅಧ್ಯಯನ ಮಾಡುವುದರಲ್ಲಿ ಮತ್ತು ಅರಿತುಕೊಳ್ಳುವುದರಲ್ಲಿ ಇದರ ಅಪ್ರತಿಮ ಬಳಕೆ. ಅತಿ ಸೂಕ್ಷ್ಮ ಕಣ ಕಣಗಳ ನಡುವಿನ ಮತ್ತು ಕೋಶಗಳ ಕಾರ್ಯವೈಖರಿ ಸೂಚಿಸುವ ತಂತ್ರಜ್ಞಾನ ಇದು. ನ್ಯಾನೋ ತಂತ್ರಜ್ಞಾನದ ಬೋಧನೆ ಮತ್ತು ವಿಷಯಗಳು ಜೀವವಿಜ್ಞಾನ, ರಸಾಯನವಿಜ್ಞಾನ, ಭೌತವಿಜ್ಞಾನ, ಕಂಪ್ಯೂಟರ್ ವಿಜ್ಞಾನ ಮುಂತಾದ ಈ ಎಲ್ಲ ಕ್ಷೇತ್ರಗಳಲ್ಲೂ ಇವೆ. ಎಲ್ಲಕ್ಕಿಂತಲೂ ಮಿಗಿಲಾಗಿ ಸಾಮಾಜಿಕ ಹಾಗೂ ಜೈವಿಕ ವಿಷಯಗಳ ಸೂಕ್ಷ್ಮ ಸಂಬಂಧದ ಬೆಸುಗೆಯ ಕೊಂಡಿಯಾಗಿ ಇದು ಕಾರ್ಯನಿರ್ವಹಿಸುತ್ತಿದೆ. ಪರಿಸರದಲ್ಲಿ ಜೀವಿ, ನಿರ್ಜೀವಗಳ ಸಂಬಂಧ ಮತ್ತು ಅಂತರ ಪ್ರಚೋದಿತ ಅವಲಂಬನಗಳ ವಿಷಯ ಇದರಿಂದ ಸ್ಪಷ್ಟವಾಗುತ್ತದೆ. ಕಣಗಾತ್ರದ ರೋಬೋಗಳನ್ನು ದೇಹದೊಳಗೆ ಬಿಟ್ಟು ಕ್ಯಾನ್ಸರ್‌ನಂತಹ ಭಯಾನಕ ರೋಗಗ್ರಸ್ತವಾಗಿರುವ ಕೋಶಗಳನ್ನು ಗುರುತಿಸಿ, ಅಂತಹ ಕೋಶಗಳನ್ನು ದೇಹದಿಂದ ಹೊರಹಾಕುವ ಕಾರ್ಯತಂತ್ರವನ್ನು ನ್ಯಾನೊ ವಿಜ್ಞಾನದ ಮೂಲಕ ಸಾಧಿಸಬಹುದು.

ನ್ಯಾನೋ ತಾಂತ್ರ ಅಥವಾ ತಂತ್ರಜ್ಞಾನ ಎಂದರೇನು? ಇದೊಂದು ಬಹುಉಪಯೋಗಿ ತಂತ್ರಜ್ಞಾನ. ಇದರಿಂದ ಸೂಕ್ಷ್ಮಾತಿಸೂಕ್ಷ್ಮ ವಸ್ತುವಿನ ವಿನ್ಯಾಸವನ್ನು ಗುರುತಿಸಬಹುದು. ಆನೆಯ ಎತ್ತರವನ್ನು ಮೀಟರ್‌ಗಳಲ್ಲಿ, ಮನುಷ್ಯನ ಎತ್ತರವನ್ನು ಸೆಂ.ಮೀಟರ್‌ಗಳಲ್ಲಿ ಇರುವೆಯನ್ನು ಮಿಲಿ ಮೀಟರ್‌ಗಳಲ್ಲಿ, ಬ್ಯಾಕ್ಟಿರಿಯಾಗಳನ್ನು ಮೈಕ್ರೊ ಮೀಟರ್‌ಗಳಲ್ಲಿ ಅಳೆಯಬಹುದು. ಇದಕ್ಕಿಂತ ಇನ್ನೂ ಕಡಿಮೆ ಅಂದರೆ ಅತ್ಯಂತ ಸೂಕ್ಷ್ಮ ಕಣಗಳನ್ನು ಅಳೆಯಲು ನಾವು ನ್ಯಾನೊ ಮೀಟರ್‌ಗಳನ್ನು ಬಳಸಬೇಕಾಗುವುದು.

ಒಂದು ನ್ಯಾನೋ ಮೀಟರ್ ಅಂದರೆ ಮೀಟರ್‌ನ ಒಂದು ಬಿಲಿಯನ್‌ನ ಒಂದು ಭಾಗ. ಅಂದಾಜು ಮೂಲ ವಸ್ತುವಿನ ಮೂರು ಅಥವಾ ನಾಲ್ಕನೆಯ ಒಂದು ಭಾಗದಷ್ಟು ಅಗಲವಾಗಿರುತ್ತದೆ. ಮನುಷ್ಯನ ಕೂದಲು 77 ನ್ಯಾನೋ ಮೀಟರ್‌ನಷ್ಟು ದಪ್ಪವಾಗಿರುತ್ತದೆ. ನ್ಯಾನೋ ತಂತ್ರಜ್ಞಾನವು ಸೂಕ್ಷ್ಮಾತಿಸೂಕ್ಷ್ಮ ಅಳತೆಗೋಲಾಗಿದೆ. ಇಂದು ಈ ತಂತ್ರಜ್ಞಾನ ವಸ್ತುಗಳ ಪ್ರಪಂಚದ ಕೇಂದ್ರ ಬಿಂದುವಾಗಿ ಪರಿಣಮಿಸಿದೆ.  ದೊಡ್ಡ ವಸ್ತುಗಳ ರಚನೆಗೆ ಆಧಾರವಾದ ಸೂಕ್ಷ್ಮಾತಿಸೂಕ್ಷ್ಮ ಮೂಲ ವಸ್ತುಗಳ ಸಂಘಟನೆ ಮತ್ತು ಅವುಗಳ ರಾಸಾಯನಿಕ, ಭೌತಿಕ ರಚನೆಗಳ ಮೂಲ ಅಳತೆಗೋಲು ಇದಾಗಿದೆ.

ಬಹುಉಪಯೋಗಿ ಮೂಲ ವಸ್ತುವಾದ ತಾಮ್ರ ಅತಿ ತೆಳುವಾಗುತ್ತದೆ, ಪ್ಲಾಟಿನಮ್ ವೇಗೋತ್ಕರ್ಷವಾಗುತ್ತದೆ, ಅಲ್ಯೂಮಿನಿಯಮ್ ತಂತಿಯಾಗುತ್ತದೆ, ಘನವಾದ ಚಿನ್ನ ಉಷ್ಣತೆಯಲ್ಲಿ ದ್ರವವಾಗುತ್ತದೆ – ವಸ್ತುವಿನ ಸ್ವರೂಪದಲ್ಲಿ ಇಂತಹ ಹಲವು ರೀತಿಯ ಬದಲಾವಣೆಗಳು ಸಾಮಾನ್ಯ ಪ್ರಕ್ರಿಯೆ.  ಆದರೆ, ಇದೇ ವಸ್ತುಗಳು ನ್ಯಾನೋ ರೂಪ ತಳೆದಾಗ ಈ ವಸ್ತುಗಳ ಎಲ್ಲಾ ಸಾಮಾನ್ಯ ಗುಣಗಳೂ ಬದಲಾಗುತ್ತದೆ.

ಉದಾಹರಣೆಗೆ: ಚಿನ್ನ ಸಾಮಾನ್ಯರೂಪದಲ್ಲಿ ವಿದ್ಯುದ್ವಾಹಕ. ಹೊಳೆಯುವ ಆಕರ್ಷಕ ಹೊಂಬಣ್ಣವನ್ನು ಹೊಂದಿದೆ.  ಆದರೆ ನ್ಯಾನೊ ರೂಪದಲ್ಲಿ ಚಿನ್ನ ಉಷ್ಣವಾಹಕವಲ್ಲ.  ಆ ರೂಪದಲ್ಲಿ ಅದು ನೀಲಿ ಅಥವಾ ಕಪ್ಪುಬಣ್ಣಕ್ಕೆ ತಿರುಗಬಹುದು ಮತ್ತು ಅದರ ಕರಗುವ ಬಿಂದು ಬದಲಾಗುತ್ತದೆ.

ನ್ಯಾನೋ ತಾಂತ್ರದ ಕೆಲವು ಉಪಯೋಗಗಳು:

– ಆರೋಗ್ಯ ಮತ್ತು ಔಷಧಗಳ ತಯಾರಿಕೆಯಲ್ಲಿ

– ನೀರಿನ ಶುದ್ದೀಕರಣ

– ಶಕ್ತಿ ಮತ್ತು ಪರಿಸರ ಸಮಸ್ಯೆ

– ಮಾಹಿತಿ ತಂತ್ರಜ್ಞಾನ

– ಗ್ರಾಹಕ ವಸ್ತುಗಳು

– ಆಹಾರ ಉತ್ಪಾದನೆ ಮತ್ತು ಬಳಕೆ

– ಕ್ಷಿಪಣಿ ಉಡಾವಣೆ

– ಅಂತರಿಕ್ಷ ಜಲದ ಸಮೀಕ್ಷೆ

– ವೈದ್ಯಕೀಯ ತಂತ್ರಜ್ಞಾನ

ಹೀಗೆ ಹಲವಾರು ರೀತಿಯಲ್ಲಿ ಆಧುನಿಕ ಮಾನವನ ಅಭಿವೃದ್ದಿಗೆ ಪ್ರಮುಖ ಪಾತ್ರವಹಿಸುತ್ತಿರುವ ನ್ಯಾನೋ ಮುಂದೊಂದು ದಿನ ನಿತ್ಯ ಜೀವನದ ನ್ಯಾನೋ ಆಗುವುದರಲ್ಲಿ ಸಂದೇಹವಿಲ್ಲ.