ಅರುಣ ನಭವನು ಹೊದ್ದು ಬಂದು ನಿಂತಿದೆ ಇದೆಕೊ
ಭವ್ಯ ದೈನ್ಯ !
ಕೈಯ ಕಿರಣವ ಚಾಚಿ ಕೇಳುತಿದೆ :
‘ಭವತಿ ಭಿಕ್ಷಾಂದೇಹಿ’.

ಮುಗಿಲೆ ಬಂದೀ ತೆರದಿ ನೆಲವ ಬೇಡುವುದುಂಟೆ !
ಹೆಗ್ಗಡಲು ಹನಿಯೆದುರು ಕೈಯ ಚಾಚುವುದುಂಟೆ !
ನೇಸರೇ ಹಣತೆಯೆಡೆ ಬೆಳಕ ಬೇಡಿದ್ದುಂಟೆ
ನಡುಗುತಿದೆ ಉಡುಗುತಿದೆ ಮಣ್ಣ ಹೆಂಟೆ.

ಅಕ್ಕರೆಯ ಸಕ್ಕರೆಯ ಮುದ್ದು ಮಗುವನು ತಬ್ಬಿ
ಕಣ್ಣೆತ್ತಿ ನಿಂತಿಹಳು ತಾಯಿ ಪೃಥುವೀ ;
ಯಾರವರು ?
ಅರಮನೆಯ ಹೆಬ್ಬಾಗಿಲನು ಮೀರಿ ಬಳೆಬಳೆದು ನಿಂತವರು !
ಕೊಡುವ ಮೊದಲೇ ಕೊಂಡು ಕೈಚಾಚಿ ನಿಂದವರು !
ಸೂರ್ಯತೀರ್ಥದಿ ಮಿಂದು ವೈಶಾಖ ಪೂರ್ಣಿಮೆಯ
ಹಾಲ್ಗಡಲ ಹಾದಿಯಲಿ ನಡೆದು ಬಂದವರು !
ಅಕ್ಕರೆಯ ಸಕ್ಕರೆಯ ಮುದ್ದು ಮಗುವನು ತಬ್ಬಿ
ಕೊರಳೆತ್ತಿ ನಿಂತಿಹಳು ತಾಯಿ ಪೃಥುವೀ-
ಓ ಅಲ್ಲಿ, ಮೇಲೆ, ಇನ್ನೂ ಮೇಲೆ
ಮುಗಿಲಲ್ಲಿ ರಾಜಿಸಿದೆ ಕರುಣೆಯೇ ಮಡುಗೊಂಡ
ಮುಖ ಮಂಡಲ |
ಕಣ್ಣೊ ತಿಂಗಳ ಬಿಂಬ, ನಿಲುವೊ ದೀಪಸ್ತಂಭ,
ಕಾಲಡಿಯ ನೆರಳಲ್ಲಿ ಭೂಮಂಡಲ |

* ಅಜಂತಾ ವರ್ಣಚಿತ್ರ ‘ತಾಯಿ-ಮಗು’ ಎಂಬುದರಿಂದ ಪ್ರೇರಿತ