ಶಾಸ್ತ್ರಿಗಳನ್ನು ಕಾಡುವ ದೆವ್ವದಿಂದ ಅವರಿಗೆ ಸದ್ಯದಲ್ಲೇ ಬಿಡುಗಡೆಯಾಗುವ ಚಿಹ್ನೆಗಳು ರಾಧೆಗೆ ಕಂಡವು. ಅವರ ಮುಕ್ತಿಗೆ ಅತ್ಯಂತ ಅಗತ್ಯವಾದ ಗುಟ್ಟೊಂದನ್ನು ಅವಳು ತನ್ನ ಹೃದಯದಲ್ಲಿ ಒಂದು ವರ್ಷದಿಂದ ಬಚ್ಚಿಟ್ಟುಕೊಂಡಿದ್ದಳು. ಇನ್ನೇನು ಕೆಲವೇ ದಿನಗಳಲ್ಲಿ ಅವರಿಗದನ್ನು ಬಯಲು ಮಾಡಬಹುದೆಂದು ಆಶಿಸುತ್ತ ಅವರ ಕಡೆ ನೋಡಿದಳು.

ರಾಧೆಯ ಬೆಳ್ಳಗಾದ ಕೂದಲನ್ನೂ ಇನ್ನೂ ಸುಕ್ಕಾಗದೆ ಮುದ್ದಾಗಿಯೇ ಉಳಿದ ಮುಖವನ್ನೂ ನೋಡುತ್ತ ಶಾಸ್ತ್ರಿಗಳು ಅಕ್ಕರೆಯಿಂದ ಹೇಳಿದರು:

“ಮತ್ತೆ ನಾನು ಯಾಕೆ ಮಹಾದೇವಿಯನ್ನು ಮದುವೆಯಾದೆನೊ. ನಿನ್ನ ಒತ್ತಾಯವಿತ್ತು ಎನ್ನು. ನಾನೂ ಏನು ಭಾವಿಸಿದೆನೆಂದರೆ, ನನಗೊಂದು ಸಂತಾನವಾದರೆ ನನ್ನ ಪೀಡೆಗಳೆಲ್ಲ ನಿವಾರಣೆಯಾಗಿ ನಾನು ಪ್ರಸನ್ನನಾಗುವೆನೆಂದು ಭಾವಿಸಿದ್ದೆ. ಸರೋಜ ತನ್ನ ಸೌಂದರ್ಯದ ನಿರ್ಲಕ್ಷ್ಯದಲ್ಲಿ ನನ್ನನ್ನು ಪೀಡಿಸಿದ್ದು. ಆದರೆ ಮಹಾದೇವಿ ಮೊದಲಿನಿಂದಲೂ ನನ್ನಂತೆಯೇ ಕಣ್ಣು ಕೆಕ್ಕರಿಸಿ ಎದುರು ಬಿದ್ದವಳು. ಸರೋಜಳ ಹಾಗೆ ಅವಳಲ್ಲ. ನೀನೆಂದರೆ ಮಹಾದೇವಿಗೆ ಕಂಡರೆ ಆಗದು. ನನ್ನ ಮಗಳೋ ಅದು ನನ್ನ ಮಗಳೇ ಅನ್ನು, ಹಠಮಾರಿ. ಅದು ಯಾರೋ ಕ್ರಾಂತಿ ಮಾಡುವ ಬೆಪ್ಪನನ್ನು ಮದುವೆಯಾಗಿ, ತನ್ನ ಜನ್ಮಕ್ಕೆ ಕಾರಣನಾದ ನನ್ನಂಥ ಕುಲೀನರನ್ನೆಲ್ಲ ನಿರ್ನಾಮ ಮಾಡಿಬಿಡಬೇಕೆಂದು ಮನೆ ಬಿಟ್ಟುಹೋದಳು. ಎಲ್ಲೆ ಹೋಗಿಬಿಟ್ಟಳೊ? ಅವಳನ್ನು ಹುಡುಕಿ ಮನೆಗೆ ತರಬೇಕೆಂದು ಆಗೀಗ ಆಸೆಯಾದ್ದಿದೆ ಎನ್ನು.  ಆದರೆ ಯಾವ ಕ್ಷಣದಲ್ಲಿ ನಾನು ಏನಾಗಿ ಬಿಡುತ್ತೇನೋ? ನನಗೆ ನಿಶ್ಚಯವಿಲ್ಲ. ಈ ಭವದಿಂದ ನನ್ನಂಥವರಿಗೆ ಮುಕ್ತಿಯಿಲ್ಲವೆನ್ನಿಸುತ್ತದೆ. ಆದರೆ ಸರೋಜ ನನ್ನ ಕೈಯಿಂದ ಸಾಯಲಿಲ್ಲವಲ್ಲ? ನನಗೆ ಮಗಳು ಹುಟ್ಟಿದ್ದೇ, ಸರೋಜ ನನ್ನಿಂದಲೇ ಬಸುರಾಗಿರಬೇಕೆಂದು ನಾನು ತುಂಬ ಯಾತನೆ ಪಡುತ್ತ ಭವದಿಂದ ಪಾರಾಗಲೆಂದು ದೇವರ ಕಡೆ ತಿರುಗಿದ್ದೆ. ಯಾವ ದೇವರಿಂದ ಸಮಾಧಾನ ಸಿಕ್ಕೀತು ಹೇಳು. ಎಲ್ಲ ಇರುವುದು ಇಲ್ಲಿ” ಎಂದು ತನ್ನ ಹಣೆ ಮುಟ್ಟಿ ತೋರಿಸಿ ತಾನು ಮಾತಾಡಿದ್ದೆ. ಆದರೆ ಮತ್ತೆ ಪುರಾಣಿಕನಂತೆ ಅಭ್ಯಾಸಗತವಾದ ಮಾತುಗಳನ್ನೇ ಆಡಿಬಿಟ್ಟಿದ್ದೆ ಎಂದು ಅನ್ನಿಸಿತ್ತು.

ತಾನು ಟ್ಯಾಕ್ಸಿಯಲ್ಲಿ ಮನೆ ಸೇರಿ ಒಳಗೆ ಹೋದದ್ದೆ ಮಹಾದೇವಿ ತನ್ನ ಮೇಲೆ ವಿನಾಕಾರಣ ಎಗರುವಳೆಂದು ನಿರೀಕ್ಷಿಸಿರಲಿಲ್ಲ. ದುರ್ಬಲ ಹೆಂಗಸು ತನ್ನನ್ನು ತಿಂದು ಬಿಡುವಂತೆ ಎದುರು ನಿಂತದ್ದನ್ನು ನೋಡಿ, ಅವಳ ಕುರೂಪದ ಮುಖದಲ್ಲಿ ಅರಳಿಕೊಂಡ ಹೊಳ್ಳೆಗಳ ಮೂಗನ್ನು ಕಂಡು ಶಾಸ್ತ್ರಿಗಳಿಗೆ ತಾನೇ ಚಕಿತಗೊಳ್ಳುವಂತೆ, ಕರುಣೆಯುಕ್ಕಿಬಿಟ್ಟಿತ್ತು.

ಮಹಾದೇವಿ ರಾಧೆಯ ಶ್ರಿಮಂತಿಕೆಯನ್ನೂ, ಅವಳು ತನ್ನ ಮೊಮ್ಮಗಳಿಗೆ ಮಾಡಿಸಿಕೊಟ್ಟ ಚಿನ್ನದ ಬಳೆಗಳನ್ನೂ ಎತ್ತಿಕೊಂಡು ಜಗಳ ಶುರು ಮಾಡಿದ್ದಳು. ‘ನಿಮ್ಮ ಕೊಲೆಗಡುಕ ಬುದ್ಧಿಯಿಂದ’ ಎಂದು ಪ್ರತಿ ವಾಕ್ಯ ಶುರು ಮಾಡಿ ತಾನು ಕಳೆದುಕೊಂಡ ಮಗಳ ಬಗ್ಗೆ ರೋಷದಲ್ಲಿ ಕಿರುಚತೊಡಗಿದ್ದಳು. ಶಾಸ್ತ್ರಿಗಳು ತಾನೆಂದರೂ ಅವಳನ್ನು ಮುಟ್ಟಿ ಸಂತೈಸಲು ಹೋದದ್ದಿಲ್ಲ. ಆದರೆ ಅವಳು ಕೊಸರಿಕೊಂಡರೂ ಇವತ್ತು ಮಹಾದೇವಿಯನ್ನು ತಬ್ಬಿ ಹಿಡಿದರು. ತನ್ನನ್ನು ಯಥಾಪ್ರಕಾರ ಚಚ್ಚಿ ಬಿಡುತ್ತಾರೆ ಎಂದು ಮಹಾದೇವಿ ನಿರೀಕ್ಷಿಸಿರಬೇಕು. ‘ಮಹಾದೇವಿ’ ಎಂದು ಮೃದುವಾಗಿ ಮತ್ತೆ ಮತ್ತೆ ಕರೆದರು.

“ನಾನು ಕೊಲೆ ಮಾಡಲಿಲ್ಲ ಮಹಾದೇವಿ. ಆಳುಗಳು ತಿಳಿದದ್ದು ತಪ್ಪು. ನಾನೂ ಹಾಗೆ ತಿಳಕೊಂಡಿದ್ದೆ. ನಿನ್ನೆ ರೈಲಿನಲ್ಲಿ ಸತ್ಯ ತಿಳಿಯಿತು” ಎಂದರು.

ಮಹಾದೇವಿ ಇದರಿಂದ ಏನೂ ಅರ್ಥವಾದದೆಂದು ತನಗೆ ಗೊತ್ತಿತ್ತು. ಆದರೆ ಅವಳು ತನ್ನಿಂದ ಮುಟ್ಟಿಸಿಕೊಂಡ ಮಾರ್ದವದಿಂದಾಗಿ ಬಿಕ್ಕಲು ಶುರುಮಾಡಿದ್ದಳು. ಅವಳನ್ನು ತಡವುತ್ತ ತಾನು ಹೇಳಿದ್ದೆ:

“ನಮ್ಮ ಮಗಳನ್ನು ಪತ್ತೆ ಮಾಡಿ ತರುತ್ತೇನೆ. ಅಳಬೇಡ”

ಸೆರಗಿನ ಮೂಗನ್ನು ಒರೆಸುತ್ತ ಚಕಿತಳಾದಂತೆ ಕಂಡ ಮಹಾದೇವಿ ಒಳಗೆ ಹೋದಳು. ತಾನು ಗುಣಮುಖನಾಗುತ್ತಿರುವ ಭರವಸೆ ಸಣ್ಣಗೆ ಶಾಸ್ತ್ರಿಗಳಿಗೆ ತೋರಿದಂತಾಯಿತು. ಮನೆಯ ಎದುರು ಅಡ್ಡಾದಿಡ್ಡಿ ಬೆಳೆದುಕೊಂಡು, ಪ್ರಾತಃಕಾಲ ತನ್ನ ಎಲ್ಲ ಕೋಮಲವಾದ ಹೂವುಗಳನ್ನೂ ನೆಲದ ಮೇಲೆ ಚೆಲ್ಲಿಕೊಂಡು, ಆರಾಮಾಗಿ ಬಿಡುವ ಅಷ್ಟಾವಕ್ರ ಪಾರಿಜಾತದ ಮರವನ್ನು ನೋಡಿದರು. ಸರೋಜ ತನ್ನ ಬೆರಳಿನ ಬಿಸಿ ತಾಗಿ ಪಾರಿಜಾತ ಮಲಿನವಾಗಬಾರದೆಂದು, ಉಗುರಿನ ತುದಿಯಿಂದ ಅವನ್ನು ಒಂದೊಂದಾಗಿ ಎತ್ತಿ, ಬಾಳೆ ದೊನ್ನೆಯಲ್ಲಿ ಶೇಖರಿಸಿ, ಹಿತ್ತಲಿನಲ್ಲಿ ಬೆಳೆದುಕೊಂಡ ಒಂದು ಹುತ್ತಕ್ಕೆ ಸುರಿಯುತ್ತಿದ್ದಳು. ಈ ನೆನಪಿನ ಜೊತೆಯೇ ಭಾದೆಯಾಯಿತು. ಹೊಳೆ ಪಾಲಾಗುವಾಗ ಯಾಕೆ ಅವಳ ಹಣೆಯಲ್ಲಿ ಕುಂಕುಮವಿತ್ತು? ಕೊರಳಲ್ಲಿ ತಾಳಿಯಿತ್ತು? ಪಂಡಿತ ಹಾಗಾದರೆ ಸಾಯಲಿಲ್ಲವೋ? ಅಥವಾ ಖಾಸಾ ಕೈಹಿಡಿದವನು ಸತ್ತಿರಲಿಕ್ಕಿಲ್ಲ ಎಂದೋ?

ಹೀಗೂ ಎನ್ನಿಸಿಬಿಟ್ಟು ತಾನು ಗುಣಮುಖನಾಗುವ ಚಿಹ್ನೆ ಕಾಣದೆ ಶಾಸ್ತ್ರಿಗಳು ಬಳಲುತ್ತ ಸ್ನಾನದ ಮನೆಗೆ ಹೋದರು. ಅದು ಸರೋಜಳನ್ನು ಹಣೆಯ ಮೇಲೆ ಜಪ್ಪಿದ ಸ್ನಾನದ ಮನೆಯಾಗಿರಲಿಲ್ಲ. ಅದನ್ನು ಕೆಡವಿಸಿ ಇನ್ನೊಂದು ಜಾಗದಲ್ಲಿ ಹೊಸ ಸ್ನಾನದ ಮನೆ ಕಟ್ಟಿಸಿಕೊಂಡಿದ್ದರು.