ಎದುರಿಗೆ ಕೂತವನ ಕತ್ತಿನಲ್ಲಿದ್ದ ತಾಯಿತ ಕಣ್ಣಿಗೆ ಬಿದ್ದು ವಿಶ್ವನಾಥ ಶಾಸ್ತ್ರಿಗಳಿಗೆ ತನ್ನಲ್ಲಿ ಒಂದು ಅಪದೇವತೆ ಪ್ರವೇಶಿಸಿಬಿಟ್ಟಂತೆ ಆಯಿತು. ಅದೊಂದು ಅಕಸ್ಮಾತ್ ಉದ್ಭವಿಸಿದ ಸಂಜ್ಞೆಯಂತೆಯೂ ಇತ್ತು. ಅವನು ಸೀಟಿನ ಮೇಲೆ ಕಾಲುಗಳನ್ನು ಮಡಚಿ ಸುಖಾಸನದಲ್ಲಿ ಕೂತಿದ್ದ. ಸ್ಟೀಲಿನ ಬಟ್ಟಲಿನಿಂದ ಮೊಳಕೆಯೊಡೆದ ಹೆಸರು ಕಾಳನ್ನು ತನ್ನ ಬೆರಳುಗಳಿಂದ ಆರಿಸಿ, ತುಸುವೇ ತೆರೆದ ತುಟಿಗಳಲ್ಲಿಟ್ಟು, ಸೂಕ್ಷ್ಮವಾಗಿ ಗದ್ದವನ್ನಾಡಿಸುತ್ತ ಅದು ಪರಮಾನ್ನವೆಂಬಂತೆ ಸುಖದಲ್ಲಿ ತಿನ್ನುತ್ತಿದ್ದ. ಫಸ್ಟ್ ಕ್ಲಾಸ್ ರೈಲಿನ ಹರಿದ ಕುಶನ್ನುಗಳು ಡಬ್ಬಿಯಲ್ಲಿ ತಾವಲ್ಲದೆ ಇನ್ನೂ ಇಬ್ಬರು ಇದ್ದರು. ಆದರೆ ಓಡುವ ರೈಲಿನ ಕಿಟಕಿಯಾಚೆ ಸತತವಾಗಿ ಕಣ್ಣುಗಳಿಗೆ ಏಳುತ್ತ ಒದಗುವ ಬಳ್ಳಾರಿ ಜಾಲಿಯ ಮೊಟ್ಟುಗಳನ್ನೂ, ಬಾಯಾರಿ ಕೂಗುವ ಕಾಗೆಗಳನ್ನೂ, ತಮ್ಮ ಮೈಗಳಿಗಷ್ಟೇ ಚಾಚುವ ನೆರಳುಗಳಲ್ಲಿ ಮಲಗಿರುವ ಎಮ್ಮೆಗಳನ್ನೂ ಯಾರ ಪರಿವೆಯೂ ಇಲ್ಲವೆಂಬಂತೆ ಅವನು ನೋಡುತ್ತ ಕೂತಿದ್ದ. ಅಯ್ಯಪ್ಪ ವ್ರತಧಾರಿಯಾದ ಅವನು ಕಪ್ಪುಜುಬ್ಬವನ್ನೂ ಕಪ್ಪು ಮುಂಡನ್ನೂ ತೊಟ್ಟು ಹೆಗಲಿನ ಮೇಲೊಂದು ಕಪ್ಪುವಸ್ತ್ರ ಚೆಲ್ಲಿದ್ದ. ಈ ಕಪ್ಪು ವಸ್ತ್ರದ ಮೇಲೆ ಅವನು ತೊಟ್ಟ ತಾಯಿತ ಬಂಗಾರದ ಚೈನಿನಲ್ಲಿ ತೋರುವಂತೆ ನೇತುಬಿದ್ದಿತ್ತು.

ಸೀಟಿನ ಮೇಲೆ ಕಿಟಕಿಗೆ ಎದುರಾಗಿ ಅವನು ಕೂತಿದ್ದರೆ ಕಿಟಕಿಯ ಪಕ್ಕ ವಿಶ್ವನಾಥಶಾಸ್ತ್ರಿ ಕೂತಿದ್ದರು. ತಿಂಗಳಿಗೊಮ್ಮೆ ಕ್ಷೌರ ಮಾಡಿಸಿಕೊಳ್ಳುವ ಅವರ ಮುಖದ ಮೇಲೆ ಬಿಳಿ ಕುರುಚಲು ಗಡ್ಡ ಬೆಳಿದಿತ್ತು. ಮೈಮೇಲೆ ಹಸಿರು ಅಂಚಿನ ಬಿಳಿಧೋತ್ರ ಹೊದ್ದಿದ್ದರು. ಅದೇ ಅಂಚಿನ ಪಂಚೆಯುಟ್ಟಿದ್ದರು. ಅವರ ವಯಸ್ಸು ಸುಮಾರು ಎಪ್ಪತ್ತರ ಒಳಗೆ ಎನ್ನಿಸುವಂತಿತ್ತು. ಪ್ಯಾಂಟು ಶರಟು ಧರಿಸಿದ ಉಳಿದ ಇಬ್ಬರಂತಲ್ಲದೆ, ಶಾಸ್ತ್ರಿಗಳು ಮತ್ತು ಅಯ್ಯಪ್ಪ ವ್ರತಧಾರಿಯಾದ ಅವನು ಫಸ್ಟ್ ಕ್ಲಾಸ್ ಡಬ್ಬಿಯಲ್ಲಿ ವಿಶೇಷ ಗಮನ ಸೆಳೆಯುವಂತೆ ಇದ್ದರು.

ಸಮಯ ಮಧ್ಯಾಹ್ನವಾಗಿತ್ತು. ಇನ್ನಿಬ್ಬರು ಹಿಂದಿನ ಸ್ಟೇಶನ್ನಿನಿಂದ ಊಟ ಪಡೆದಿದ್ದರು. ಅವರಲ್ಲಿ ಜೀನ್ಸ್ ತೊಟ್ಟವನೊಬ್ಬ ಮಾಂಸಾಹಾರಿಯಾದ್ದರಿಂದ ಜುಟ್ಟಿನಲ್ಲಿ ಬಾಡಿದ ತುಳಸಿಯನ್ನು ಮುಡಿದಿದ್ದ ಶಾಸ್ತ್ರಿಗಳಿಗೂ, ಕಪ್ಪು ವಸ್ತ್ರದ ಅಯ್ಯಪ್ಪ ಭಕ್ತನಿಗೂ ಮುಜುಗರವಾಗಬಾರದೆಂದು ಅಪ್ಪರ್ ಬರ್ತ್ ಹತ್ತಿ ನೆಟ್ಟಕೂರಲಾರದೆ ಬಾಗಿ ಕೂತು, ಕದ್ದು, ಮುಚ್ಚಿ, ಮೂಳೆ ಚೀಪುತ್ತಿದ್ದ. ಇನ್ನೊಬ್ಬ ಪ್ಯಾಂಟ್ ಧರಿಸಿ ಹಣೆಗೆ ಕುಂಕುಮ ಇಟ್ಟುಕೊಂಡವನು ಮದ್ರಾಸಿನ ಸಾಂಬಾರು ರಸ ಪಲ್ಯಗಳನ್ನೆಲ್ಲ ಒಟ್ಟುಮಾಡಿ ಕಿವುಚುತ್ತ ಉಂಡೆಕಟ್ಟಿ ಬಾಯಿಗೆಸೆದು ಸಶಬ್ದವಾಗಿ ತಿನ್ನುತ್ತಿದ್ದ. ಶಾಸ್ತ್ರಿಗಳು ತಮ್ಮ ಮಂಡಿಗಂಟಿನಿಂದ ಸ್ಟೀಲಿನ ಡಬ್ಬಿಯನ್ನು ಎತ್ತಿಕೊಂಡರು.

ಆದರೆ ಅದರ ಮುಚ್ಚಳ ತೆರೆದು ತಿನ್ನಲಾರದಷ್ಟು ಅವರು ಬೆವರುತ್ತ ನಡುಗುತ್ತಿದ್ದರು. ಮತ್ತೆ ಮತ್ತೆ ಅವರ ಕಣ್ಣು ದುರೂಹ್ಯವಾದ ಸಂಜ್ಞೆಯನ್ನು ಬಿಡಿಸಿಕೊಳ್ಳಲು ಹೆಣಗುತ್ತ ತಾಯಿತವನ್ನು ದಿಟ್ಟಿಸುತ್ತಿತ್ತು. ಅವನು ಮಧ್ಯ ವಯಸ್ಕನೆ? ಅಥವಾ ಅದಕ್ಕಿಂತ ಕೊಂಚ ಇನ್ನೂ ಚಿಕ್ಕವನೆ? ಮುಖದಲ್ಲಿ ಬೆಳಿಯುತ್ತಿದ್ದ ಗಡ್ಡದಲ್ಲಿ ಅಲ್ಲೊಂದು ಇಲ್ಲೊಂದು ಬಿಳಿ ಕೂದಲಿದೆ-ಅಷ್ಟೆ. ನಾಟಕದಲ್ಲಿ ರಾಮನ ಪಾತ್ರಕ್ಕೆ, ಕೃಷ್ಣನ ಪಾತ್ರಕ್ಕೆ ಅರ್ಹವೆನ್ನಿಸುವಂತಹ ಗುಣಾತಿಶಯಗಳನ್ನು ತೋರುವ ಮುಖ. ಬಾಡಿದ ಮುಖ; ಆದರೆ ತೇಜಸ್ಸಿನ ಮುಖ. ಅವನ ನೀಳವಾದ ಮೂಗು, ಅವನ ಅಗಲವಾದ ಕಣ್ಣುಗಳ ಬಣ್ಣ, ಆ ನಿರ್ಲಕ್ಷ್ಯದ ಕಣ್ಣುಗಳು ಮೋಹಕತೆ ಥೇಟು ಸರೋಜಳದೇ ಎನ್ನಿಸಿ ಶಾಸ್ತ್ರಿಗಳು ಆವೇಗದಿಂದ ಉಸುರಾಡತೊಡಗಿದರು. ಈಗ ತನ್ನ ಭಾವನೆಗಳಿಗೆ ಮಾತು ಕೊಡಲಾರದೆ ಅವಾಕ್ಕಾಗಿ ಬಿಟ್ಟಿದ್ದರು. ತದನಂತರದ ದಿನಗಳಲ್ಲಿ ಶಾಸ್ತ್ರಿಗಳು ತನ್ನಲ್ಲೊಂದು ಅಕ್ಕರೆಯ ಭಾವನೆ ಹೊತ್ತಲ್ಲಿ ಹೀಗೆ ಉಮ್ಮಳಿಸಿ ಹುಟ್ಟಿಬಿಟ್ಟ ಪರಿಯನ್ನು ಅನಿಷ್ಟ ನಿವಾರಣೆಗಾಗಿ ನೆನೆಯುವರು.

ಮೊಳಕೆಯೊಡೆದ ಹೆಸರುಕಾಳನ್ನು ಬಾಯಲ್ಲಿ ಆಡಿಸುತ್ತ ಕೂತಿದ್ದ ಅವನು ಮೈಮೇಲೆ ಬಿದ್ದ ಬಿಸಿಲನ್ನೂ ಮಳೆಯನ್ನೂ ಸ್ವೀಕರಿಸುತ್ತ ತಟಸ್ಥವಾಗಿ ಮೆಲುಕು ಹಾಕುವ ಹಸುಗರುವಿನಂತೆ ಕಂಡಿದ್ದ. ಅವನ ಬಟ್ಟಲು ಬರಿದಾಗಿದ್ದಿರಬೇಕು; ಅವನ ಕಣ್ಣು ನಿರೀಕ್ಷೆಯಲ್ಲಿ ಬಟ್ಟಲು ಕಡೆ ನೋಡಿದ್ದೇ ಶಾಸ್ತ್ರಿಗಳಿಗೆ ತಡೆದುಕೊಳ್ಳಲು ಆಗಿರಲಿಲ್ಲ. ತನ್ನಲ್ಲಿ ಕರುಣೆ ಉಕ್ಕಿ ಚಕಿತರಾಗಿದ್ದರು. ತನ್ನ ಬಟ್ಟಲಿನ ಮುಚ್ಚಳವನ್ನು ತೆರೆದು ಎಡಗೈಯೂರಿ ಸೀಟಿಂದ ಜರಿಯುತ್ತ, ಅವನಿಗೆ ಹತ್ತಿರವಾಗಿ ಅದನ್ನು ಒಡ್ಡಿದ್ದರು. ‘ಇಕೊ’ ಎನ್ನಬೇಕೆಂದರೂ ಅನ್ನಲಾರದೆ ‘ಇಕೊಳ್ಳಿ’ ಎಂದಿದ್ದರು.

ಅವನಿಗೆ ಕನ್ನಡ ತಿಳಿಯದೆಂಬುದು ಅವನು ಪ್ರಶ್ನಾರ್ಥಕವಾಗಿ ತನ್ನ ಕಡೆ ನೋಡಿದ ಕ್ರಮದಿಂದ ಶಾಸ್ತ್ರಿಗಳಿಗೆ ಮನದಟ್ಟಾಗಿತ್ತು. ಹಾಗಾದರೆ ಇವನು ಯಾರೋ ಬೇರೆಯವನು ಎಂದು ಸಮಾಧಾನವಾಗಿತ್ತು. ಬೊಂಬಾಯಿಯಲ್ಲಿ ಸುಮಾರು ನಲವತ್ತೋ, ನಲವತ್ತೈದೋ ವರ್ಷಗಳ ಕೆಳಗೆ ಅಲೆದಾಡುತ್ತಿದ್ದಾಗ ತನ್ನ ಲಂಪಟತನದಿಂದಾಗಿ ಕಲಿತ ಒರಟಾದ ಹಿಂದೂಸ್ತಾನಿ ನೆನಪಾಗಿತ್ತು. ಅಯ್ಯಪ್ಪ ಭಕ್ತನಂತೆ ಕಂಡವನ ಜೊತೆ ಅ ಭಾಷೆಯಲ್ಲಿ ಮಾತಡಲು ಹಿಂಜರಿದಿದ್ದರು. ಅವರಿಗೆ ಇನ್ನೊಂದು ಅಶ್ಚರ್ಯ ಕಾದಿತ್ತು.

ಒಡ್ಡಿದ್ದ ಬಟ್ಟಲಲ್ಲಿರುವುದನ್ನು ನೋಡಿ ಅವನು ತನ್ನ ಗಡ್ಡದಲ್ಲಿ ಬೆರಳಾಡಿಸುತ್ತ ಅಸ್ವಸ್ಥ ನಾಗಿಬಿಟ್ಟಂತೆ ಕಂಡಿದ್ದ. ಶಾಸ್ತ್ರಿಗಳು ಒಡ್ಡಿದ್ದು ಅವನಿಗೆ ನಿಧಾನವಾಗಿ ಗುರುತು ಹತ್ತಿರಬೇಕು.

‘ಕು….ಟ್ಟ….ವ….ಲ…ಕ್ಕಿ’ ಎಂದಿದ್ದ ಕೊಂಚ ನಡುಗುವ ಸ್ವರದಲ್ಲಿ.

ಗುಹೆಯಿಂದ ಬಂದಂತಿದ್ದ ಶಬ್ದದಿಂದ ಶಾಸ್ತ್ರಿಗಳು ರೋಮಾಂಚಿತರಾಗಿದ್ದರು. ಆದರೆ ಮಾತು ಶುರು ಮಾಡುವವರ ಕೃತಕ ಸಲಿಗೆಯಿಂದ ಹೇಳಿದ್ದರು.

“ಹಾಗಾದರೆ ಇದು ಏನು ಗೊತ್ತು ನಿಮಗೆ. ಕುಟ್ಟುವಲಕ್ಕಿ ಗೊತ್ತೆಂದರೆ ಒಂದೋ ನೀವು ಕನ್ನಡಾ ಜಿಲ್ಲೆಯವರು, ಅಥವಾ ನನ್ನಂತೆ ಯಾರೋ ಕನ್ನಡಾ ಜಿಲ್ಲೆಯವರು ನಿಮಗೆ ಹಿಂದೆಂದಾದರೂ ಗಂಟು ಬಿದ್ದಿರಬೇಕು. ನಾನು ಹರಿಕಥೆ ಮಾಡುತ್ತ ಹೇಳೋದಿದೆ; ಕುಚೇಲ ಕನ್ನಡ ಜಿಲ್ಲೆಯವನು. ಅವನು ತನ್ನ ಬಾಲ್ಯದ ಸ್ನೇಹಿತನಿಗೆ ಒಯ್ದದ್ದು ಕೇವಲ ಅವಲಕ್ಕಿಯಲ್ಲ-ಕುಟ್ಟವಲ್ಲಕ್ಕಿ ಅಂತ”

ಶಾಸ್ತ್ರಿಗಳಿಗೆ ಗತ್ತಿನ ತನ್ನ ಪರಿಚಿತ ಭಾಷೆಗೆ ಹಿಂದಿರುಗಿ ಸ್ವಸ್ಥರಂತೆ ಕಾಣುವುದು ಸಾಧ್ಯವಾದರೂ ತನ್ನ ಒಳಗಿನ ತಳಮಳಕ್ಕೆ ತಕ್ಕ ಮಾತಲ್ಲವೆಂದು ಮುಜುಗರವಾಗಿತ್ತು. ಅವನು ಏನೂ ಅರ್ಥವಾಗದವನಂತೆ ವಿನಯದಲ್ಲಿ ಕೈಮುಗಿದು ತನ್ನ ಪಾಡಿಗೆ ತನ್ನನ್ನು ಬಿಡಿ ಎಂಬಂತೆ ಶಾಸ್ತ್ರಿಗಳಿಗೆ ತನ್ನ ಸ್ವಮನಸ್ಕವಾದ ಕಣ್ಣುಗಳಿಂದ ಸೂಚಿಸಿದ್ದ. ಆ ಕಣ್ಣುಗಳು ಮತ್ತೆ ಗೂಢವಾಗಿ ಶಾಸ್ತ್ರಿಗಳನ್ನು ಬಾಧಿಸುತ್ತಿದ್ದಂತೆ ಅವನು ‘ಅಚ್ಛಾ’ ಎಂದು ಕುಟ್ಟವಲಕ್ಕಿಗೆ ಕೈಯೊಡ್ಡಿದ್ದ. ಶಾಸ್ತ್ರಿಗಳು ಅಕ್ಕರೆಯಲ್ಲಿ ಅವನ ಕೈಮೇಲೆ ಸುರಿದದ್ದನ್ನು ಬಾಯಿಗೆ ಹಾಕಿಕೊಂಡಿದ್ದ. ಅದರ ರುಚಿ ಅವನ ಕಣ್ಣುಗಳನ್ನು ಏನೋ ಹುಡುಕುವಂತೆ ಮುಚ್ಚಿಸಿದ್ದಾನ್ನು ಕಂಡು ಶಾಸ್ತ್ರಿಗಳಿಗೆ ಭಯವನ್ನೂ ಭರವಸೆಯನ್ನೂ ಕುದುರಿಸಿತ್ತು.

* * *

ಇಷ್ಟರಲ್ಲಿ ತನ್ನ ಮಾಂಸದ ಊಟ ಮುಗಿಸಿ ಕೆಳಗಿಳಿದವನು ಇಂಗ್ಲಿಷಿನಲ್ಲಿ, ‘ನಿಮ್ಮಹೆಸರು ಕೇಳಬಹುದೆ?’ ಎಂದ, ಕುಟ್ಟವಲಕ್ಕಿಯನ್ನು ನಿಧಾನವಾಗಿ ಮೆಲ್ಲುತ್ತಲೇ ಇದ್ದ ಅಯ್ಯಪ್ಪ ವ್ರತದವನಿಗೆ. ವ್ರತದವನು ಕುಶಲದ ಪ್ರಶ್ನೆಯನ್ನು ಗಮನಿಸಲಿಲ್ಲ. ಆದರೆ ನಿಧಾನವಾಗಿ ತನಗಾಗಿ ಮಾತ್ರ ತೆರೆದ ಅವನ ಕಣ್ಣುಗಳಲ್ಲಿ ನೀರನ್ನು ಕಂಡು ಶಾಸ್ತ್ರಿಗಳು ಗಾಬರಿಯಾಗಿ ‘ಖಾರವ?’ ಎಂದರು. ಹಿಂದುಸ್ತಾನಿಯಲ್ಲಿ ಅದೇ ಪ್ರಶ್ನೆ ಕೇಳಿದರು. ಅವನು ಮೊದಲ ಸಾರಿಗೆ ಮುಗುಳ್ನಕ್ಕು ಹಿಂದಿನಂತೆಯೇ ತಲೆಯಾಡಿಸಿದ.

ಡಬ್ಬಿಯಿಂದ ಹೊರ ಹೋಗಿ ಕೈತೊಳೆದು ಬಂದವನು ತನ್ನ ಜೀನ್ಸ್‌ನ ಜೋಬಿನಿಂದ ಕರ್ಚೀಫನ್ನು ತೆರೆದು ಕೈಯೊರೆಸಿಕೊಳ್ಳುತ್ತ ಮತ್ತೊಮ್ಮೆ ಅದೇ ಪ್ರಶ್ನೆಯನ್ನು ಇನ್ನಷ್ಟು ಪೊಲೈಟಾಗಿ ಕೇಳಿದ:

“ನಿಮ್ಮ ಹೆಸರು ಕೇಳಬಹುದೆ?”

ಅವನು ಕಣ್ಣೊರೆಸಿಕೊಂಡು ತನ್ನ ವಸ್ತ್ರದ ಕಡೆ ಬೆರಳು ಮಾಡಿ ‘ಸ್ವಾಮಿ’ ಎಂದ. ‘ನನ್ನ ಹೆಸರನ್ನು ಕಳೆದುಕೊಂಡಿದ್ದೇನೆ’ ಎಂದ ನಿರ್ಭಾವದಲ್ಲಿ.

ಆದರೆ ಜೀನ್ಸ್‌ಧಾರಿ ತನ್ನ ಉತ್ಸಾಹ ಕಳಿದುಕೊಳ್ಳಲಿಲ್ಲ.

“ಈ ನಿಮ್ಮ ಉಡುಪಿನಲ್ಲೂ ನನಗೆ ಗೊತ್ತಾಗಲಿಲ್ಲವೆಂದುಕೊಂಡಿರ? ನೀವು ದಿನಕರ್. ಟೀವಿಯಿಂದಾಗಿ ನೀವು ದೇಶದಲ್ಲೆಲ್ಲ ಪ್ರಸಿಧ್ದರು. ನನ್ನ ತಮ್ಮನಿಗೆ ನೀವು ದೊಡ್ಡ ಹೀರೋ. ಏಷ್ಯಾ ಖಂಡದ ಎಲ್ಲ ನಾಯಕರನ್ನು ನೀವು ಮಾಡಿರುವ ಇಂಟರ್ವ್ಯೂ ನೋಡದವರು ಇಲ್ಲ. ನೀವು ದೇವರು ಗೀವರುಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುವವರಲ್ಲ ಎಂದುಕೊಂಡು ಇಷ್ಟುಹೊತ್ತೂ ಅನುಮಾನದಲ್ಲೇ ನಿಮ್ಮನ್ನು ನೋಡುತ್ತಿದ್ದೆ. ಅಮಿತಾಬ್ ಬಚನ್ ಕೂಡ ಅಯ್ಯಪ್ಪ ದರ್ಶನ ಮಾಡಿದನೆಂದು ಕೇಳಿದ್ದೇನೆ. ಇಂಟರಸ್ಟಿಂಗ್. ಮದ್ರಾಸಿನಲ್ಲಿ ನೀವು ರೈಲು ಹತ್ತಿದ್ದೇ ಯಾರೋ ಪರಿಚಯದವರಂತೆ ಕಾಣುತ್ತಾರಲ್ಲ ಎಂದು ಚಿಂತಿಸುತ್ತಲೇ ಇದ್ದೆ. ಮದ್ರಾಸಿನ ಸುತ್ತಮುತ್ತಲ ದೇವಸ್ಥಾನಗಳನ್ನು ನೀವು ನೋಡಿ ಬಂದಿರಬೇಕು. ದೆಹಲಿಯಿಂದ ಪ್ರಯಾನ ಮಾಡುತ್ತಿರಬೇಕು. ಟೀವಿಯಲ್ಲೂ ನಿಮ್ಮನ್ನು ನೋಡದೆ ತಿಂಗಳ ಮೇಲಾಯಿತು. ನಿಮ್ಮನ್ನು ದುರುಗುಟ್ಟಿ ನೋಡುವುದು ಇಂಪೊಲೈಟ್ ಎಂದು ಇಷ್ಟು ಹೊತ್ತೂ ಸುಮ್ಮನಿದ್ದೆ. ಕ್ಷಮಿಸಿ. ನಾನು ಡಿಸೈನರ್ ಬಟ್ಟೆಯ ಎಕ್ಸ್ ಪೋರ್ಟರ್-ಬೊಂಬಾಯಿಯವನು. ಮದ್ರಾಸಿಗೆ ಬಟ್ಟೆ ಖರೀದಿಸಲು ಬಂದಿದ್ದೆ” ಎಂದು ಕೈಯೊಡ್ಡಿದ. ತನ್ನ ಪತ್ತೆಯ ಖುಷಿಯಲ್ಲಿದ್ದ ಜೀನ್ಸ್ ಧಾರಿ ಅಯ್ಯಪ್ಪ ವ್ರತದವನು ಕೈಯೊಡ್ಡಲಿಲ್ಲವೆಂದು ಹುರುಪು ಕಳೆದುಕೊಳ್ಳಲಿಲ್ಲ. ಸೊಗಸಾದ ಶರ್ಟ್ ಗಳನ್ನು ಧರಿಸಿ ನುಣ್ಣಗೆ ಕ್ಷೌರ ಮಾಡಿಕೊಂಡ ನಗುಮುಖದ ತನ್ನ ಟೀವಿ ಹೀರೋ ಜೊತೆಯೇ ಅವನು ಮಾತು ಮುಂದುವರಿಸಿದ್ದ:

“ನನ್ನ ಮಗಳು ಎಂಬಿಬಿಎಸ್ ಓದುತ್ತಿದ್ದಾಳೆ. ಅವಳಿಗಾಗಿ ನಿಮ್ಮ ಆಟೋಗ್ರಾಫ್ ಬೇಕು. ಬೆಂಗಳೂರಿನಲ್ಲಿ ಇಳಿಯುದಲ್ಲವೇ? ನಿಮ್ಮ ಆಟೋಗ್ರಾಫ್ ಆಮೇಲೆ ತೆಗೆದುಕೊಳ್ಳುವೆ”ಆಟೋಗ್ರಾಫ್ ಸಿಗುವುದು ಖಚಿತವೆಂಬಂತೆ ಮಾತಾಡಿ ಎದುರಿನ ಸೀಟಿನಲ್ಲಿ ಕೂತು ಇಂಗ್ಲಿಷ್ ಮ್ಯಾಗಸೀನ್ ಒಂದನ್ನು ತೆರೆದು ಓದತೊಡಗಿದ.

ಶಾಸ್ತ್ರಿಗಳು ಬಟ್ಟಲನ್ನು ಎದುರು ಹಿಡಿದು ಇನ್ನಷ್ಟು ಸಂಜ್ಞೆಗೆ ಕಾದವರಂತೆ ಎವೆಯಿಕ್ಕದೆ ಅವನ ಕಡೆ ನೋಡುತ್ತಲೇ ಇದ್ದರು. ಅವನು ಅಯ್ಯಪ್ಪ ವ್ರತ ಹಿಡಿದಿದ್ದರಿಂದ ಕೇವಲ ‘ಸ್ವಾಮಿ’ ಎಂಬ ಹೆಸರಿನವನೆಂದೂ, ಟೀವಿಯಲ್ಲಿ ಅವನು ಖ್ಯಾತನೆಂದೂ ಅವರು ಅರ್ಧಂಬರ್ಧ ಅರ್ಥ ಮಾಡಿಕೊಂಡಿದ್ದರು. ಅವನು ಕುಟ್ಟವಲಕ್ಕಿಯನ್ನು ಆಸಕ್ತಿಯಿಂದ ನೋಡುತ್ತಿದ್ದಾನೆಂದು ಅವರಿಗೆ ಹಿತವಾಯಿತು. ಇನ್ನೊಂದು ಬಟ್ಟಲಿನಿಂದ ಮೊಸರು ತೆಗೆದು,

‘ಕೈಕಾಲು ತೊಳೆದು ಬಂದು ಇದನ್ನು ತಿನ್ನಿ’ ಎಂದರು.

ಸ್ವಾಮಿಗೆ ಶಾಸ್ತ್ರಿಗಳ ಮಾತು ಅರ್ಥವಾಗದಿದ್ದರೂ ಆಗ್ರಹ ತಿಳಿದಂತೆ ಕಂಡಿತು. ಎದ್ದು ಡಬ್ಬಿಯ ಬಾಗಿಲು ತೆರೆದು ಹೋದನು. ತನ್ನೊಳಗೆ ಆವೇಶವಾದ್ದು ಅಪದೇವತೆಯಲ್ಲವೆಂದು ಸಮಾಧಾನಪಡುತ್ತ ಕೊರಳಿನಿಂದ ರುದ್ರಾಕ್ಷಿ ತೆಗೆದು ಆಗ ತಾನು ಜಪಕ್ಕೆ ತೊಡಗಿದ್ದೆ ಎಂದು ಶಾಸ್ತ್ರಿಗಳು ನೆನೆಯುವರು.

* * *

ಡಬ್ಬಿಯಲ್ಲಿ ಕೂತಿದ್ದ ಇನ್ನೊಬ್ಬ ಊಟ ಮುಗಿಸಿ ಎಲೆಗೆ ಸುಣ್ಣ ಹಚ್ಚುತ್ತ ಶಾಸ್ತ್ರಿಗಳ ಜೊತೆಗೆ ಮಾತಿಗೆ ತವಕಿಸಿದ.

“ತಾವು ಪ್ರಸಿದ್ಧ ಕೀರ್ತನಕಾರ ವಿಶ್ವನಾಥ ಶಾಸ್ತ್ರಿಗಳೆಂದು ನನಗೆ ಗೊತ್ತಿದೆ. ನಾನೂ ನಿಮ್ಮ ಕಡೆಯವನೇ, ನಮ್ಮ ಅಜ್ಜನ ಕಾಲದಲ್ಲಿ ಅಡಿಕೆ ತೋಟ ಕಳೆದುಕೊಂಡು ಊರು ಬಿಟ್ಟಿದ್ದು, ಎಮ್‍ಡನ್ ಹಡಗಿನ ಕಥೆ ತಾವು ಕೇಳಿರಬಹುದು. ಹಾಗಾಗಿ ನಾವು ನಿರ್ವಾಹವಿಲ್ಲದೆ ವ್ಯಾಪಾರಕ್ಕೆ ಇಳಿದದ್ದು. ನನ್ನ ಉದ್ಯೋಗ ಮಲೆನಾಡಿನಲ್ಲಿ ಅಡಿಕೆ ಕೊಂಡು ಮಾರುವುದು. ನೀವು ಶಿವಳ್ಳಿ ಸ್ಮಾರ್ತರಾದರೆ ನಾನು ಮಾಧ್ವರವನು. ನಿಮ್ಮ ಹರಿಕಥೆ ಕೇಳಿಸಿಕೊಂಡಿದ್ದೇನೆ. ಶ್ರೀಕೃಷ್ಣ ಪರಮಾತ್ಮನನ್ನು ಕಣ್ಣಿಗೆ ಕಟ್ಟುವಂತೆ ಹಾಡುತ್ತ ನೀವು ವರ್ಣಿಸುತ್ತೀರಿ. ನಿಮ್ಮ ಭೇಟಿಯಾದ್ದು ನನ್ನ ಪುಣ್ಯ” ಎಂದು ತನ್ನ ಎಲೆಯಡಿಕೆ ಕೈಚೀಲವನ್ನು ಶಾಸ್ತ್ರಿಗಳಿಗೆ ಒಡ್ಡಿದನು.

ಜಪದ ಮಣಿಯನ್ನು ಹಿಡಿದುಕೊಂಡೇ ಕಣ್ಣು ಬಿಟ್ಟು ಶಾಸ್ತ್ರಿಗಳು,

‘ನನ್ನದಿನ್ನೂ ಫಲಾಹಾರವಾಗಿಲ್ಲ’ ವೆಂದರು.

“ಅವರಿಗೆ ನಿಮ್ಮ ಫಲಾಹಾರ ಕೊಟ್ಟು ಬಿಡುತ್ತಿದ್ದೀರಲ್ಲ. ನಿಮಗೇನು ಉಳಿಯುತ್ತದೆ. ಮುಂದಿನ ಸ್ಟೇಶನ್ನಿನಲ್ಲಿ ಇಡ್ಲಿ ಸಿಗುತ್ತದೆ. ತಂದುಕೊಡಲೆ?” ಎಂದ.

“ನಾನು ಹೋಟೆಲಲ್ಲಿ ತಿನ್ನುವುದಿಲ್ಲ. ಪ್ರಯಾಣ ಮಾಡುವಾಗ ಸ್ವಲ್ಪ ಅವಲಕ್ಕಿ ಮೊಸರು ತೆಗೆದುಕೊಳ್ಳುತ್ತೇನೆ ಅಷ್ಟೆ. ಅವರಿಗೆ ಕೊಟ್ಟೂ ನನಗೆ ಮಿಕ್ಕಿರುತ್ತದೆ. ನಿಮ್ಮ ಉಪಕಾರಕ್ಕೆ ಕೃತಜ್ಞ. ತಮ್ಮ ನಾಮಧೇಯ ತಿಳಿಯಬಹುದೋ?” ಎಂದರು. ಶಾಸ್ತ್ರಿಗಳಿಗೆ ತನ್ನ ಭಾಷೆಗೆ ಮರುಕಳಿಸುವುದು ಸಾಧ್ಯವಾಗಿ ಸಂತೋಷವಾದಂತೆ ಇತ್ತು.