ತಟ್ಟೆಯಲ್ಲಿ ಹಾಕಿಕೊಟ್ಟ ಕುಟ್ಟವಲಕ್ಕಿಯನ್ನೂ ಮೊಸರನ್ನೂ ಸ್ವಾಮಿಯ ರೂಪದಲ್ಲಿದ್ದವ ಬಹಳ ದಿನ ಹಸಿದಿದ್ದವನಂತೆ ತಿನ್ನುವುದನ್ನು ತನಗೆ ಅರ್ಥವಾಗದ ವೇದನೆಯಿಂದ ನೋಡುತ್ತ ಕೂತಿದ್ದ ಎಂಬುದು ಶಾಸ್ತ್ರಿಗಳಿಗೆ ತನ್ನ ದೌರ್ಬಲ್ಯದಲ್ಲಿ ಆಧಾರವಾಗುವ ನೆನಪು. ಮುಚ್ಚಿದ ಯಾವುದೋ ಬಾಗಿಲು ತೆರೆದಿತ್ತು. ದಿಗಿಲಾಗಲು ತೊಡಗಿತ್ತು. ಮಡಿ ಗಂಟಿನಿಂದ ಬಾಳೆಹಣ್ಣಿಗಾಗಿ ತಾನು ಹುಡುಕುತ್ತಿದ್ದಾಗ ಸ್ವಾಮಿ ಸದೃಶನಂತೆ ಕಾನುತ್ತ ಹೋದ ಅವನು ತನ್ನ ಚೀಲದಿಂದ ಸೇಬನ್ನೂ ಬಾಳೆಹಣ್ಣನ್ನೂ ಸಿಹಿ ದ್ರಾಕ್ಷಿಯನ್ನು ಎಡಗೈಯಲ್ಲಿ ತೆಗೆದು ಸೀಟಿನ ಮೇಲಿಟ್ಟು, ತನ್ನ ಬಲಗೈಯಿಂದ ಕೊಳ್ಳಿರೆಂದು ಹಣ್ಣನ್ನು ತೋರಿಸಿದ್ದ. ಒಳ್ಳೆಯ ಮಡಿವಂತ ಕುಟುಂಬದವನಿರಲೇ ಬೇಕು. ಹಿಂದಿಯಲ್ಲಿ ಅವನು ಆಡಿದ ಮಾತಿಗೆ ಅದೇ ಭಾವದಲ್ಲಿ ತಾನು ಉತ್ತರಿಸುತ್ತಿದ್ದೇನೋ ತಿಳಿಯದೆ ತಮ್ಮ ಪೂರ್ವಜನ್ಮದ ಬೊಂಬಾಯಿ ಹಿಂದಿಯಲ್ಲಿ ಶಾಸ್ತ್ರಿಗಳು ಕೇಳಿದ್ದರು :

“ಹೊಟ್ಟೆ ತುಂಬಿತೆ ಸ್ವಾಮಿ?”

“ನನ್ನನ್ನು ಹಿರಿಯರಾದ ತಾವು ದಿನಕರ ಎಂದು ಕರೆಯಬಹುದು”.

ಸ್ವಲ್ಪ ತಡೆದು ಅದೆಷ್ಟು ಮೃದುವಾಗಿ, ತನಗೆ ತನ್ನ ಪೂರ್ವಜನ್ಮದ ಸುಕೃತ ಎಂಬಂತೆ, ನರಕದ ತನ್ನ ಆತಂಕ ಕಳೆಯುವಂತೆ ಹೇಳಿದ್ದ:

“ಬೇಡ, ಬೇಡ ನಿಮ್ಮ ಕುಟ್ಟವಲಕ್ಕಿಯಿಂದ ನನ್ನ ತಾಯಿ ಕರೆಯುತ್ತಿದ್ದ ಹೆಸರು ನೆನಪಾಯಿತು. ಪುಟಾಣಿ, ಪುಟಾಣಿ ಎಂದರೆ ಏನು? ಆ ಹೆಸರಿಗೆ ನಾನು ಯೋಗ್ಯ ಎನ್ನಿಸಿದರೆ ಹಾಗೇ ಕರೆಯಿರಿ.”

ಫ್ಯಾಷನಬಲ್ ಆದ ಜೀನ್ಸ್ ಧರಿಸಿದವನು, ಇದನ್ನು ಕೇಳಿಸಿಕೊಳ್ಳುತ್ತಾ ತಾನು ಓದುತ್ತಿದ್ದ ಇಂಡಿಯಾ ಟುಡೇ ಮುಚ್ಚಿ ನಕ್ಕ.

“ಅಚ್ಛಾ ನನ್ನ ಯ್ಹೆ ಹಾಗಾದರೆ ನಿಜವಾಯಿತು” ಎಂದು ತನ್ನ ಮ್ಯಾಗಜೀನ್‍ಗೆ ಹಿಂದಿರಿಗಿದ್ದ – ಈ ಬಾರಿ ಹಿಂದಿಯಲ್ಲಿ ಮಾತಾಡಿ.

* * *

ದಿನಕರ ನಿಧಾನವಾಗಿ ಶಾಸ್ತ್ರಿಗಳಿಗೆ ಅರ್ಥವಾಗುವಂತೆ ಸರಳವಾದ ಹಿಂದಿಯಲ್ಲಿ ಹೇಳತೊಡಗಿದ:

“ನನ್ನ ತಾಯಿ ಕನ್ನಡದವರು ಇರಬಹುದೆಂದು ಕೇಳಿದ್ದೇನೆ. ನನಗೆ ಐದು ವರ್ಷವಿದ್ದಾಗ ಅವರು ಗಂಗಾನದಿಯ ಪಾಲಾಗಿ ಹರಿದ್ವಾರದಲ್ಲಿ ಸತ್ತರು. ಅವರು ಕುಟ್ಟವಲಕ್ಕಿಯನ್ನು ನನಗೆ ಪ್ರಿಯವೆಂದು ತಿನ್ನಿಸುತ್ತಿದ್ದರೆಂದು ಬಹಳ ವರ್ಷಗಳ ನಂತರ ಇನ್ನೊಬ್ಬ ತಾಯಿ ನೆನಪು ಮಾಡಿಕೊಟ್ಟದ್ದನ್ನು ಈಗ ನಿಮ್ಮ ವಿಶ್ವಾಸದಿಂದಾಗಿ ಥಟ್ಟನೆ ನೆನಪಾಯಿತು. ನನ್ನ ತಂದೆ ಯಾರೋ ನನಗೆ ಗೊತ್ತಿಲ್ಲ. ಮೊದಲೇ ಅವರನ್ನು ಕಳಕೊಂಡಿರಬಹುದು. ಆಮೇಲೆ ತಾಯಿಯನ್ನು ಕಳೆದುಕೊಂಡೆ. ಒಂದೆರಡು ತಿಂಗಳುಗಳ ಹಿಂದಿನಿಂದ ನನ್ನ ಹೆಸರನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.”

‘ಅಚ್ಛಾ’ ಎಂದು ಕುಶಲವಾಗಿ ನಕ್ಕ. ಅದೆಷ್ಟು ನಿರಾಯಾಸವಾದ ಸಲಿಗೆಯಲ್ಲಿ ಮಾತಾಡಲು ಅವನು ತೊಡಗಿದ್ದ! ಥಟ್ಟನೆ ಒದಗಿಬಿಟ್ಟ ಕೃಪೆಯಂತೆ ಅವನ ಮಾತು ಕಂಡಿತ್ತು. “ನಿಮ್ಮ ವಿಶ್ವಾಸಕ್ಕಾಗಿ ಮತ್ತೆ ನನ್ನ ಹೆಸರಿಗೆ ಹಿಂದಿರುಗುತ್ತೀನಿ. ನಿಮಗಿಷ್ಟವಾದರೆ ನನ್ನ ತಾಯಿ ಕರೀತಿದ್ದ ಹೆಸರಿಗೂ.”

ಈ ಬಾರಿ ತನ್ನನ್ನೆ ಹಾಸ್ಯ ಮಾಡಿಕೊಳ್ಳುವವನಂತೆ ತನ್ನ ಟೀವಿ ವ್ಯಕ್ತಿತ್ವದ ಮೋಹಕವಾದ ಧಾಟಿಯಲ್ಲಿ ಹೇಳಿ ಗಂಬೀರವಾಗಿ ಮುಂದುವರಿದ:

“ಅಚ್ಛಾ, ನಿಮ್ಮಿಂದ ಒಂದು ಸಹಾಯವಾಗಬೇಕು ನನಗೆ. ಇಪ್ಪತ್ತೈದು ವರ್ಷಗಳ ಕೆಳಗೆ ನನಗೊಬ್ಬರು ಮಂಗಳೂರಿನವರು ಹರಿದ್ವಾರದಲ್ಲಿ ಗುರುತಾಗಿದ್ದರು. ಈಗ ಅವರು ಪ್ರಸಿದ್ಧರಾದ ಅಡ್ವೊಕೇಟರಾಗಿದ್ದಾರೆಂದು ಕೇಳಿದ್ದೇನೆ. ಅವರು ಒಂದು ತಿಂಗಳ ಕಾಲ ನನ್ನ ಅತ್ಯಂತ ಆತ್ಮೀಯರಾದರು. ಅದಕ್ಕೆ ಕಾರಣ ಅವರ ತಾಯಿ, ಸೀತಮ್ಮ ಅಂತ. ನನಗೆ ತಾಯಿಯೆನ್ನಿಸಿದ್ದು ಅವರೊಬ್ಬರೇ. ಅವರು ಬದುಕಿದ್ದರೆ ಅವರನ್ನು ನೋಡಬೇಕು”

ಎಂದು ದಿನಕರ ತನ್ನ ಚೀಲದಿಂದ ಒಂದು ಹಳೆಯ ಅಡ್ರೆಸ್ ಪುಸ್ತಕ ತೆಗೆದು ‘ನಾರಾಯಣ ತಂತ್ರಿ’ ಎಂಬುವರ ವಿಳಾಸ ತೋರಿಸಿದ. ಶಾಸ್ತ್ರಿಗಳಿಗೆ ತನ್ನ ಬದುಕು ಬದಲಾಗುವ ಸಂಜ್ಞೆ ಗಟ್ಟಿಯಾದಂತಾಗಿ, ವೇದನೆಯಾಗಿ, ಆದರೆ ಅವನಂತೆಯೇ ತನ್ನ ದೈನಿಕ ವ್ಯಕ್ತಿತ್ವಕ್ಕೆ ಹೊರಳಿ ಕೇಳಿದರು:

“ಅಯ್ಯೋ ಇವರು ನನಗೆ ಬೇಕಾದವರು. ಅವರ ಮನೆಯಲ್ಲಿ ಒಂದು ದಿನವಿದ್ದೇ ನಾನು ನನ್ನ ಊರಿಗೆ ಹೋಗುವುದು. ಅವರ ತಾಯಿ ಇನ್ನೂ ಇದ್ದಾರೆ. ಅವರ ಮನೆಗೆ ಹೋದಾಗಲೆಲ್ಲ ನಾನು ಅವರಿಗೆ ಪುರಾಣ ಓದಿ ಹೇಳಬೇಕು. ಅದೇ ಪುರಾಣವನ್ನು ಅದೆಷ್ಟೋ ಸಲ ಈ ಹತ್ತು ಹದಿನೈದು ವರ್ಷಗಳಿಂದ ಅವರಿಗೆ ಪಠಿಸಿದ್ದೇನೆ. ನಿಮ್ಮನ್ನು ನಾನೇ ಖುದ್ದು ಕರೆದುಕೊಂಡು ಹೋಗುತ್ತೇನೆ. ಬೆಂಗಳೂರಿಗೆ ಈ ರೈಲು ಸಂಜೆ ತಲುಪುತ್ತದೆ. ರಾತ್ರೆ ಲಕ್ಸುರಿ ಬಸ್ಸಿದೆ ಮಂಗಳೂರಿಗೆ” ಎಂದು ಆಡಬಾರದಷ್ಟು ಮಾತನ್ನು ಆಡಿಬಿಟ್ಟರು.

ಇಂಥ ಪರಿಶುದ್ಧವಾದ ಮಾತುಗಳನ್ನಾಡಲು ಅವರು ಈ ಭಾಷೆಯನ್ನು ಬಳಸಿದ್ದೇ ನೆನಪಾಗಿತ್ತು; ತಾನು ಶರ್ಟು ಪೈಜಾಮಗಳನ್ನು ಹಾಕಿಕೊಂಡು, ಜುಟ್ಟು ಮುಚ್ಚಲೆಂದು ತಲೆಯ ಮೇಲೊಂದು ಕಪ್ಪು ಟೊಪ್ಪಿಯನ್ನೂ ಧರಿಸಿ, ಹಣೆಯ ಮೇಲೆ ಅಕ್ಷತೆಯಿಲ್ಲದೆ, ಬೊಂಬಾಯಿ ಬೀದಿಗಳಲ್ಲಿ ಸುಮಾರು ಅರ್ಧ ಶತಮಾನಗಳ ಹಿಂದೆ ಅಂತರ ಪಿಶಾಚಿಯಾಗಿ ಅಲೆದಾಡುತ್ತ ರೂಢಿಮಾಡಿಕೊಂಡಿದ್ದ ಭಾಷೆ ಅದು. ಆದ್ದರಿಂದ ಹೀಗೆ ಮಾತಾಡುತ್ತಿರುವುದು ತಾನಲ್ಲ, ತನ್ನನ್ನು ಹೊಕ್ಕ ಅಪದೇವತೆ ಎನ್ನಿಸಿತ್ತು. ಆದರೆ ಅವರ ಮುಖ ಆರ್ತವಾದ ನಿರೀಕ್ಷೆಯಲ್ಲಿ ಅವನನ್ನು ನೋಡುತ್ತಿತ್ತು. ಬಾಯಿಗೆ ಬಂದದ್ದನ್ನು ಹೇಳಿಬಿಟ್ಟಿದ್ದರು:

“ಪುಟಾಣಿ ಎಂದರೆ ಮುದ್ದಿನ ಮಗ ಅಂತ. ನನಗೆ ಈಗ ಮಕ್ಕಳಿಲ್ಲ. ಇದ್ದ ಒಬ್ಬ ಮಗಳು ಎರಡು ವರ್ಷಗಳ ಕೆಳಗೆ ಮನೆಬಿಟ್ಟು ನಡೆದುಬಿಟ್ಟಳು. ಒಟ್ಟು ನನ್ನ ಗ್ರಹಚಾರ ಎನ್ನದೇ ವಿಧಿಯಿಲ್ಲ. ನನಗೆ ನೀವು ಮಗನಾಗಬಹುದಿತ್ತು.”

ಹೀಗೆ ತಾನು ಎಸೆದುಬಿಟ್ಟ ಮಾತಿಗೆ ದಿನಕರ ಸುಲಭವಾದ ಸೌಜನ್ಯದಿಂದ ಉತ್ತರಿಸಿದ್ದ.

“ದಾಡಿ ಬಿಟ್ಟ ನನ್ನಂಥ ದಾಂಢಿಗನನ್ನು ಹಾಗೆ ಕರೆಯೋದು ಸರಿ ಅನ್ನಿಸಿದರೆ ನಿಮ್ಮನ್ನ ಏನೂಂತ ಕರೀಲಿ?ಚಿಕ್ಕಪ್ಪನೋ ದೊಡ್ಡಪ್ಪನೋ ಮಾವನೋ?”

ಈ ಮಾತು ಕೇಳಿ ತಾನು ಪ್ರೇತ ಸಮಾನವಾಗಿ ಬಿಟ್ಟೆ ಎಂದು ವೃದ್ದನಾದ ತನಗೆ ಅನ್ನಿಸಿತ್ತು. ಆದರೆ ಅವನು ಎಷ್ಟು ಗೆಲುವಾಗಿ ಬಿಟ್ಟಿದ್ದನೆಂದರೆ, ಆಟೋಗ್ರಾಫ್ ಪುಸ್ತಕವನ್ನು ತನ್ನ ಲೆದರ್ ಬ್ರೀಫ್‍ಕೇಸಿನಿಂದ ತೆಗೆದು ಒಡ್ಡಿದ ಜೀನ್ಸ್‌ಧಾರಿಗೂ ಖುಷಿಯ ಹಾಸ್ಯದಲ್ಲಿ ಹೀಗೆ ಹಿಂದಿಯಲ್ಲಿ ಬರೆದಿದ್ದ:

“ಟೀವಿಯ ದಿನಕರನಲ್ಲ. ಅವನಿಂದ ಕಳಚಿಕೊಂಡು ಬೆಂಗಳೂರು ತಲುಪುತ್ತಿರುವ ಅರಿಯದ ಒಬ್ಬ ಪುಟಾಣಿ”

ಮತ್ತೆ ಬಿಳಿಚಿಕೊಂಡಿದ್ದ ತನ್ನ ಕಡೆ ನೋಡಿ, ಪುಟಾಣಿಯಂತೆಯೇ ಮುದ್ದಾಗಿ ಅಂದಿದ್ದ:

“ಚಿಕ್ಕಪ್ಪ, ನಿಮ್ಮ ಕಚ್ಚಾ ಹಿಂದಿ ಚೆನ್ನಾಗಿಯೇ ಇದೆ. ಆದರೆ ನನಗೆ ಬಹುವಚನ ಉಪಯೋಗಿಸಬೇಡಿ.”

ದಿನಕರನ ಕೊರಳಿಗೆ ತಾಯಿತನವನ್ನು ತಾನು ನೋಡುತ್ತಿರುವುದನ್ನು ಗಮನಿಸಿ ಅಪರಿಚಿತನಾದ ತನಗೆ ಅವನು ಹೇಳಿಬಿಟ್ಟ ಮುಂದಿನ ಮಾತು ಶಾಸ್ತ್ರಿಗಳನ್ನು ಇನ್ನಷ್ಟು ಅಧೀರಗೊಳಿಸಿತ್ತು.

“ಚಿಕ್ಕಪ್ಪ ನೋಡಿ. ಈ ತಾಯಿತನವನ್ನು ನನ್ನ ತಾಯಿ ಗಂಗೆಯಲ್ಲಿ ಇಳಿಯುದಕ್ಕೆ ಮುಂಚೆ ನನ್ನ ಕೊರಳಲ್ಲಿ ಹಾಕಿದ್ದು. ನೀರಿಗಿಳಿದವರು ಮತ್ತೆ ಬರಲಿಲ್ಲ. ನೀವು ಕೊಟ್ಟ ತಿಂಡಿಯ ಫಲವಾಗಿ ಈಗ ಮತ್ತೆಲ್ಲ ನೆನಪು. ಈ ನಲವತ್ತು ವರ್ಷಗಳಿಂದ ಈ ತಾಯಿತ ನನ್ನ ಕೊರಳಲ್ಲೇ ಮಾತೃ ರಕ್ಷೆಯಿಂದ ಇದೆ” ಎಂದಿದ್ದ.

ಈ ಮಾತು ಕೇಳಿ ಶಾಸ್ತ್ರಿಗಳು ‘ಶಿವ ಶಿವಾ ನನ್ನನ್ನು ಕಾಪಾಡು’ ಎಂದು ಜಪಮಣಿ ಹಿಡಿದು ಕಣ್ಣುಮುಚ್ಚಿ ಪ್ರಾರ್ಥಿಸಿದ್ದರು.