ಶಾಸ್ತ್ರಿಗಳು ಗರ ಬಡಿದವರಂತೆ ಮಂಕಾಗಿ ಬಿಟ್ಟಿದ್ದರು. ಪುರಾಣ ಪ್ರವಚನದಿಂದ ತನಗೆ ಅಭ್ಯಾಸವಾದ ಅನ್ಯಶ್ರವಣಕ್ಕಾಗಿ ಸೊಗಸುಗೊಂಡ ಭಾಷೆಯೂ, ಪೂರ್ವಜನ್ಮದಂತೆ ನೆನಪಾಗುವ ತನ್ನ ಬೊಂಬಾಯಿ ವ್ಯಸನದ ಭಂಡು ಭಾಷೆಯೂ ತನಗೇ ಅವರು ಭಯಪಡುತ್ತ ಅಂದುಕೊಳ್ಳುತ್ತಿದ್ದುದನ್ನು ಹೇಳಲಾರದಾಗಿ ಬಿಟ್ಟಿತ್ತು. ದಿನಕರ ಕಾರು ಮಾಡಿಕೊಂಡು ಮಂಗಳೂರಿಗೆ ಹೋಗೋನವೆಂದು ಒತ್ತಾಯ ಮಾಡಿದ:

“ಅಯ್ಯಪ್ಪ ವ್ರತ ಹಿಡಿದಿದ್ದರೂ ನನ್ನ ಹತ್ತಿರ ಕ್ರೆಡಿಟ್ ಕಾರ್ಡಿದೆ. ಇದೋ ನೋಡಿ ಚಿಕ್ಕಪ್ಪ”.

“ಅಯ್ಯೋ ಅದು ಖರ್ಚಿನ ಪ್ರಶ್ನೆಯಲ್ಲ. ರಾತ್ರೆ ಘಾಟಿಯಲ್ಲಿ ಪ್ರಯಾಣ ಕ್ಷೇಮವಲ್ಲ. ನನ್ನ ಹತ್ತಿರವೂ ಮಸ್ತು ದುಡ್ಡಿದೆ. ಅಡಿಕೆಯಲ್ಲಿ ಪ್ರತಿವರ್ಷ ಐದುಲಕ್ಷಕ್ಕೂ ಕಮ್ಮಿಯಿಲ್ಲದಂತೆ ಮಿಕ್ಕುತ್ತದೆ. ನನಗೇನು ಮಕ್ಕಳೊ, ಮರಿಯೊ-ಯಾವುದರ ಖರ್ಚು? ಕರ್ಮ ಸವೆಸಲೆಂದು ಹಚ್ಚಿಕೊಂಡ ವ್ಯಸನ ಇದು-ಪುರಾಣ ಪ್ರವಚನ ಅಂತ ಅಲೆದಾಡೋದು”.

ಇಷ್ಟು ಮಾತನ್ನು ಕಷ್ಟಪಟ್ಟು ಹೊರಗೆ ಹಾಕುವಾಗ ಅವನನ್ನು ‘ಪುಟಾಣಿ’ಯೆಂದು ಸಂಬೋಧಿಸಬೇಕೆಂದರೂ ಗಂಟಲು ಕಟ್ಟಿತ್ತು. ಅವನು ಆ ಸೂಳೆಮಗ ಪಂಡಿತನ ಮಗನಾಗಿದ್ದರೆ?

ಸ್ಟೇಶನ್ನಿನಿಂದ ಟ್ಯಾಕ್ಸಿ ಮಾಡಿಕೊಂಡು ಕಿರಿದಾದ ಬೀದಿಗಳಲ್ಲಿ ಸುತ್ತಿ ಬಳಸಿ ಹತ್ತಿ ಇಳಿದು ಅಡ್ವೊಕೇಟ್ ನಾರಾಯಣ ತಂತ್ರಿಗಳ ಬಂಗಲೆಯ ಎದುರು ಇಳಿದರು. ಮನೆಗಳಿಗೆ ಹೊದಿಸಿದ ಹೆಂಚುಗಳ ಅದೇ ಬಣ್ಣದ ಹಲವು ಶೇಡುಗಳು, ಹಳೆಯ ಕಾಲದ ಮನೆಗಳ ಮುಖಮಂಟಪಗಳು, ಬಳಸುತ್ತ ಸಾಗುವ ಬೀದಿಗಳು-ಇವು ದೆಹಲಿಯಲ್ಲಿ ಕಣ್ಣು ಕಿವಿಗಳನ್ನು ಕೆಡಿಸಿಕೊಂಡ ದಿನಕರನಿಗೆ ಖುಷಿಕೊಟ್ಟಿದ್ದವು.

“ನಾನು ಯಾರೆಂದು ಹೇಳಬೇಡಿ ಚಿಕ್ಕಪ್ಪ. ಅಮ್ಮನಿಗೆ ಈ ಇಪ್ಪತ್ತೈದು ವರ್ಷಗಳ ನಂತರ ಗುರ್ತು ಹತ್ತತ್ತೋ ನೋಡುವ, ಅದೂ ಈ ನನ್ನ ವೇಷದಲ್ಲಿ ಹತ್ತಿದರೆ ಇನ್ನೂ ದಿನಕರ ನಿರ್ನಾಮವಾಗಿಲ್ಲ ಅಂತ.”

ದಿನಕರ ಹಗುರಾಗಿ ಬಿಟ್ಟಿದ್ದ. ಲಗುಬಗೆಯಿಂದ ತನ್ನ ಕೈಚೀಲವನ್ನು ಹೆಗಲಿಗೆ ನೇತುಹಾಕಿ ಗೇಟನ್ನು ತೆಗೆದು ನೋಡಿದ. ಹಸಿರಾದ ಸಾಲು ಮರಗಳನ್ನೂ ಮಾವಿನ ಮರಗಳನ್ನೂ, ತೆಂಗಿನ ಮರಗಳನ್ನೂ ಸಮೃದ್ಧವಾಗಿ ಪಡೆದು, ಕಂಡೂ ಕಾಣದ ಹಾಗೆ, ಕಣ್ಣು ಮುಚ್ಚಾಲೆಯಾಡುವ ಹಳೆಯ ಕಾಲದ ಬಂಗಲೆಯನ್ನು ಸುಮಾರು ಎರ‍ಡು ಎಕರೆ ತೋಟದ ಡ್ರೈವ್‍ವೇನಲ್ಲಿ ಸುತ್ತಿ ಬಳಸಿ ನಡೆದು ಮುಟ್ಟಬೇಕು.

ಜಪದ ಮಣಿ ಎಣಿಸುತ್ತ ಶಾಸ್ತ್ರಿಗಳು ಹಿಂಬಾಲಿಸಿದ್ದರು.

ಮನೆಯ ಎದುರಿನ ಅಂಗಳದಲ್ಲಿ ಬಿಳಿಕೂದಲನ್ನು ನೀಟಾಗಿ ಬಾಚಿಕೊಂಡ ಮುದುಕಿಯೊಬ್ಬಳು ನಿಂತಿದ್ದಳು. ಬರುತ್ತಿರುವವರನ್ನು ಕಾಣಲೆಂದು ನಿರೀಕ್ಷೆಯಲ್ಲಿ ಎತ್ತಿದ ಸುಕ್ಕುಗಟ್ಟಿದ ಮುಖದ ಮೇಲೆ ಮನೆಯದುರು ನೆಟ್ಟ ಕಂದೀಲಿನ ಬೆಳಕು ತುಸುಬಿದ್ದು ಅವಳ ಕಣ್ಣುಗಳು ಹೊಳೆಯುತ್ತಿದ್ದವು. ಸಪುರವಾದ ಮೈಕಟ್ಟಿನವರಿಗೆ ವಯಸ್ಸಾದ್ದು ಗೊತ್ತಾಗುವುದಿಲ್ಲವೆನ್ನುತ್ತಾರೆ. ಹರಿದ್ವಾರದಲ್ಲಿ ಕಂಡಂತೆಯೇ ಸೀತಮ್ಮ ಲಕ್ಷಣವಂತೆಯಾಗಿ ಕಂಡಿದ್ದರು. ಇನ್ನಷ್ಟು ಸುಕ್ಕು, ಇನ್ನಷ್ಟು ಬಿಳಿಗೂದಲು ಬಿಟ್ಟರೆ ಬದಲಾವಣೆಯಿಲ್ಲ. ಅವರು ತೊಟ್ಟ ಶುಭ್ರವಾದ ಬಿಳಿಸೀರೆ, ಒಣಗಲೆಂದು ತುದಿಯಲ್ಲಿ ಗಂಟು ಹಾಕಿದ ಕೂದಲು ನೋಡಿದರೆ, ಸ್ನಾನ ಮಾಡಿದಂತೆ ಕಾಣುತ್ತಿತ್ತು.

ಅಂಗಳದಲ್ಲಿ ಯಾಕೆ ನಿಂತಿದ್ದಾರೆಂಬುದು ಅವರು ಕೈಯಲ್ಲಿ ಹಿಡಿದ ರಂಗೋಲೆ ಬಟ್ಟಲಿನಿಂದ ಖಚಿತವಾಗಿತ್ತು. ಕಪ್ಪುಕಲ್ಲಿನ ಆ ಬಟ್ಟಲೂ ಹರಿದ್ವಾರದಲ್ಲಿ ಖರೀದಿಸಿದ್ದಿರಬೇಕು. ಹರಿದ್ವಾರದಲ್ಲಿ ತನ್ನ ಸಾಕುತಂದೆ ಕಟ್ಟಿಸಿದ ಛತ್ರದಲ್ಲಿ ನಿಲ್ಲಲೆಂದು ಎಲ್ಲ ಯಾತ್ರಿಕರಂತೆ ಯಾರೋ ಅಪರಿಚಿತರಾಗಿ ಬಂದವರು, ತಮ್ಮ ದಿವ್ಯವಾದ ಮುಖಲಕ್ಷಣದ ತೇಜಸ್ಸಿನಿಂದ ಒಂದೆರಡು ದಿನಗಳಲ್ಲೇ ತನ್ನ ಸಾಕುತಂದೆಗೆ ಬೇಕಾದವರಾಗಿ ತಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು. ನಸುಕಿನಲ್ಲೆದ್ದು ಮನೆಯ ಅಂಗಳ ಗುಡಿಸಿ, ಸಾರಿಸಿ, ಗಂಗಾಸ್ನಾನ ಮಾಡಿಕೊಂಡು ಒದ್ದೆಗೂದಲನ್ನು ಬೆನ್ನಿನ ಮೇಲೆ ಹರಡಿಕೊಂಡು ಎಷ್ಟು ಏಕಾಗ್ರವಾಗಿ, ಸುಂದರವಾಗಿ, ದಿನಕ್ಕೊಂದು ಬಗೆಯ ರಂಗೋಲಿಯನ್ನು ಅಂಗಳದಲ್ಲಿ ಬಿಡಿಸುತ್ತಿದ್ದರೆಂದರೆ ತ್ರಿಪಾಠಿಗಳ ಪುರಾತನ ಮನೆಗೆ ಸೌಭಾಗ್ಯದ ಕಳೆ ಬಂದಿತ್ತು. ರಂಗೋಲೆ ಮುಗಿದಿದ್ದೇ ಸೀತಮ್ಮ ಸ್ವಯಂಪಾಕದ ವ್ರತ ಹಿಡಿದವರಾದ್ದರಿಂದ ತಾವೇ ಸ್ವತಃ ಅಡಿಗೆ ಮನೆಗೆ ಒತ್ತಾಯದಿಂದ ನುಗ್ಗಿ, ಅವಲಕ್ಕಿಯ ಉಪ್ಪಿಟ್ಟನ್ನೋ, ಕೇಸರಿಬಾತನ್ನೋ, ಇಡ್ಲಿಯನ್ನೋ ಮಾಡಿ ಮನೆ ಮಂದಿಗೆಲ್ಲಾ ಹೊಸರುಚಿಯ ತಿಂಡಿಗಳನ್ನು ಬಡಿಸಿ, ಎಲ್ಲರಿಗೂ ಪ್ರೀತಿಯ ಅಮ್ಮನಾಗಿಬಿಟ್ಟಿದ್ದರು.

ಅವರಿಗೆ ಆಗ ನಡುಪ್ರಾಯ. ನಲವತ್ತೈದು ವರ್ಷದ ವಿಧವೆ. ತ್ರಿಪಾಠಿಗಳಿಗೆ ಆಗಲೇ ಎಪ್ಪತ್ತೈದು ವರ್ಷ. ಕುಲೀನ ಶ್ರೀಮಂತರು. ಮಹಾಧರ್ಮಿಷ್ಠರು. ಸೀತಮ್ಮನನ್ನು ಅವರು ಅಕ್ಕರೆಯಿಂದ ‘ತಂಗಿ’ ಎಂದು ಕರೆಯುವುದು:

“ತಂಗಿ ನಾವು ಕೂಡ ಬ್ರಾಹ್ಮಣರೇ. ಈರುಳ್ಳಿಯನ್ನು ಕೂಡ ತಿನ್ನುವವರಲ್ಲ. ನಮ್ಮ ಅಡಿಗೆ ನೀವು ಊಟ ಮಾಡಬಹುದು.”

ಅವರು ಹಿಂದಿಯಲ್ಲಿ ಮಾತಾಡಿದ್ದು ಸೀತಮ್ಮನಿಗೆ ಅರ್ಥವಾಗುತ್ತಿರಲಿಲ್ಲ. ಅವರ ಮಗ ನಾರಾಯಣ ತಂತ್ರಿಗೆ ಸ್ಕೂಲಿನಲ್ಲಿ ಹಿಂದಿ ಪ್ರಚಾರ ಸಭಾದ ಉತ್ಸಾಹದ ಫಲವಾಗಿಯಲ್ಲದೆ, ಅವನ ಚಿಕ್ಕವಯಸ್ಸಿನ ಡಿಬೇಟಿನ ಮೋಜಿನಿಂದಾಗಿ ಅಷ್ಟಿಷ್ಟು ಹಿಂದಿ ಬರುತ್ತಿತ್ತು. ಅವನಿಗೆ ಸತತವಾಗಿ ದುಭಾಷಿಯ ಕೆಲಸ.

* * *

ಸೀತಮ್ಮನ ಎದುರು ಹೋಗಿ ದಿನಕರ ನಿಂತ. ‘ಅಮ್ಮ’ ಎಂದ. ಸೀತಮ್ಮ ದಿನಕರನ ಕೊರಳಿನ ತಾಯಿತವನ್ನು ಕಣ್ಣು ಕಿರಿದು ಮಾಡಿ ಶಾಸ್ತ್ರಿಗಳಂತೆಯೇ ದಿಟ್ಟಿಸಿದ್ದರು. ಮತ್ತೆ ಅವನನ್ನು ಕಣ್ಣಿಗೆ ಕಣ್ಣಿಟ್ಟು ನೋಡಿದ್ದರು. ಅವರ ಕಣ್ಣುಗಳು ಕ್ರಮೇಣ ಮಾತೃವಾತ್ಸಲ್ಯದಲ್ಲಿ ಬೆಳಗುತ್ತ, ಕಾಲದಲ್ಲಿ ಹಿಂದಾಗುತ್ತ, ತನ್ನನ್ನು ಪುನಃ ಸೃಷ್ಟಿಸಿಕೊಳ್ಳುವುದನ್ನು ಆತಂಕದಲ್ಲೂ ಏರಿ ಇಳಿಯುವ ಸುಖಕರವಾದ ವೇದನೆಯಲ್ಲೂ ನಿರೀಕ್ಷಿಸುತ್ತ ದಿನಕರ ನಿಂತಿದ್ದ. “ಅಯ್ಯೋ ದಿನಕರನಲ್ಲವ” ಎಂದಿದ್ದರು. ಅವನನ್ನು ಮಡಿಯಲ್ಲಿದ್ದುದರಿಂದ ಆ ಕ್ಷಣವೇ ತಬ್ಬಿಕೊಳ್ಳಲಿಲ್ಲ, ಅಷ್ಟೆ. ಆದರೆ ಅವರ ಕಣ್ಣುಗಳು ಮಾತೃಸ್ಪರ್ಶದ ಸುಖವನ್ನೆಲ್ಲ ಅವನಿಗೆ ಕೊಟ್ಟಿತ್ತು. ಹೀಗೆ ಒಂದು ಕ್ಷಣ ಕಳೆಯಿತು ಅಷ್ಟೆ. ಸೀತಮ್ಮ ಶಾಸ್ತ್ರಿಗಳ ಕಡೆ ತಿರುಗಿ,

‘ಏನು ಶಾಸ್ತ್ರಿಗಳೆ, ಮತ್ತೆ ಸ್ನಾನ ಮಾಡಿ ನಿಮಗೆ ಫಲಾಹಾರ ಮಾಡಿದರಾಯಿತು, ಅಲ್ಲವ?’ ಎಂದು ಹತ್ತಿರ ಬಂದು ಅವನ ಕೈಹಿಡಿದುಕೊಂಡರು. ಇಷ್ಟು ವರ್ಷ ಯಾಕೆ ತನ್ನನ್ನು ಬಂದು ನೋಡಲಿಲ್ಲೆಂದು ಕೇಳಿರಲಿಲ್ಲ. “ನಾಗವೇಣಿ ಕಾಫಿ ತಗೊಂಡು ಬಾ” ಎಂದು ಕೂಗಿದ್ದರು. ತಾವೇ ಒಳಗಿನಿಂದ ಬೆತ್ತದ ಕುರ್ಚಿಗಳನ್ನು ಅಂಗಳಕ್ಕೆ ತರಲು ಸೀತಮ್ಮ ಹೋಗುವುದನ್ನು ಕಂಡು ದಿನಕರ ಲಗುಬಗೆಯಿಂದ ಹೇಳಿದ್ದ.

‘ಅಮ್ಮ ರಂಗೋಲಿಯಿಕ್ಕಿ, ನೋಡಬೇಕು’.

ಸೀತಮ್ಮನಿಗೆ ಅರ್ಥವಾಗದಿದ್ದರೂ ಗೊತ್ತಾಗದಂತೆ ಇತ್ತು.

‘ನಿನಗೆ ಇಷ್ಟವಲ್ಲವ? ಕೂತುಕೋ. ನಿನಗೆ ಹರಿದ್ವಾರದಲ್ಲಿ ಇಷ್ಟವಾದ್ದನ್ನೇ ಬಿಡಿಸುತ್ತೇನೆ. ಕಾಫಿ ಕುಡಿಯುತ್ತ ನೋಡುವಿಯಂತೆ. ಶಾಸ್ತ್ರಿಗಳೇ ನೀವು ಒಳಗೆ ಹೋಗಿ ಸ್ನಾನ ಮಾಡಿ. ಬೇಕಾದರೆ ಬಿಸಿ ನೀರು ಕಾಯಿಸಿದ್ದಿದೆ’ ಎಂದು ತನ್ನಷ್ಟಕ್ಕೆ ನಗುತ್ತ ರಂಗೋಲೆಯಿಕ್ಕಲು ಕೂತರು ಸೀತಮ್ಮ. ಶಾಸ್ತ್ರಿಗಳು ತಮ್ಮ ಹಿಂದುಸ್ತಾನಿಯಲ್ಲಿ ಭಾಷಾಂತರಿಸಿ ಸ್ನಾನದ ಮನೆಗೆ ಹೋಗಿದ್ದರು.

ಹೆಬ್ಬರಳಿಂದಲೂ ತೋರು ಬೆರಳಿಂದಲೂ ರಂಗೋಲೆ ಪುಡಿಯನ್ನು ಹಿಡಿದು, ಅದನ್ನು ಬೆರಳಿನಲ್ಲಿ ತಿಕ್ಕುತ್ತ ಬಿಗಿಮಾಡಿ, ರೇಖೆಗೆ ಅಗತ್ಯವಾದಷ್ಟು ಅದನ್ನು ಸರಿಸುತ್ತ, ಕ್ಷಣಾರ್ಧದಲ್ಲಿ ಸಾರಿಸಿದ ಅಂಗಳದ ನಡುವಿನಲ್ಲೆಂದರೆ ನಡುವಿನಲ್ಲಿ, ಎರಡು ತ್ರಿಕೋಣಗಳನ್ನು ಒಂದರೊಳಗೊಂದು ಮೂಡಿಸಿದ್ದರು. ಒಂದರಲ್ಲಿ ದೇವರ ಕೃಪೆ ಮೇಲಿನಿಂದ ಭೂಮಿಗಿಳಿದರೆ, ಇನ್ನೊಂದರಲ್ಲಿ ಜೀವಾತ್ಮನ ಆಕಾಂಕ್ಷೆ ಕೆಳಗಿನಿಂದ ಮೇಲೇರುತ್ತಿತ್ತು. ಎರಡೂ ಸೀತಮ್ಮನ ನಿರ್ದೋಷದ ನೋಟದಿಂದಾಗಿ ಒಂದಕ್ಕೊಂದು ಸಮನಾಗಿ ಸಂಧಿಸಿತ್ತು.

ತಾನು ರುಚಿಕರವಾದ ಬಿಸಿಯಾದ ಕಾಫಿಯನ್ನು ಬೆಳ್ಳಿಯ ಬಟ್ಟಲಿನಲ್ಲಿ ಇಪ್ಪತ್ತೈದು ವರ್ಷಗಳ ಹಿಂದಿನಂತೆಯೇ ಚೂರು ಚೂರೇ ಕುಡಿಯುತ್ತ ಸೀತಮ್ಮನ ಸೃಷ್ಟಿಯಲ್ಲಿ ಏಕಾಗ್ರನಾಗಿ ಬಿಟ್ಟಿದ್ದೆ. ಸಾವಿರಾರು ವರ್ಷಗಳಿಂದ ಸತತವಾಗಿ ದೇವಾಲಯಗಳ ಗೋಡೆಗಳ ಮೇಲೂ ಬಡವರ ಗುಡಿಸಲುಗಳ ಅಂಗಳದಲ್ಲೂ ಮೂಡುತ್ತಲೇ ಇದ್ದದ್ದು ಈ ಪ್ರಾತಃಕಾಲವೂ ಸಗಣಿ ಹಾಕಿ ಸಾರಿಸಿದ ಅಂಗಳದಲ್ಲಿ ಮೂಡತೊಡಗಿತ್ತು. ಎಲ್ಲಿ ಬೇಕೋ ಅಲ್ಲಿ ಬಳ್ಳಿ, ಬಳ್ಳಿಗೆ ಎಲೆ, ಎಲೆ ಎಲೆಗೂ ಹೂವು, ರಕ್ಷೆಗೆಂದು ಅಲ್ಲಿ ಇಲ್ಲಿ ಮೂಲೆಯಲ್ಲಿ ಸ್ವಸ್ತಿಕ, ಮತ್ತೆ ನವಿಲುಗಳು – ಮತ್ತೆ ಅದೋ ಗಣೇಶ. ಅವನಿಗೊಂದು ಮೂಷಿಕ ಕೂಡ.

ಇಲಿಯನ್ನು ಬಿಡಿಸುತ್ತ ಸೀತಮ್ಮ ಮುಗುಳ್ನಕ್ಕು ಹೇಳಿದ್ದರು: ‘ಸ್ವಲ್ಪ ಅಡ್ಡಂಬಡ್ಡವಾಗಿ ಬಿಟ್ಟಿತ್ತು. ಈಗ ನನ್ನ ಬೆರಳಿಗೆ ಶಕ್ತಿ ಸಾಲದು. ಕೈ ನಡುಗುತ್ತೆ. ನಾಳೆ ಇನ್ನೂ ಚೆನ್ನಾಗಿ ಬಿಡಿಸುವೆ, ಆಯಿತಾ ದಿನಕರ? ನಾಳೆ ಗಣೇಶ ನಡುವೆ ಬರುತ್ತಾನೆ. ಕೂತಿರುವುದಿಲ್ಲ ಕುಣಿಯುತ್ತಾನೆ’ ಎಂದು ತನ್ನಷ್ಟಕ್ಕೆ ಅಂದುಕೊಂಡರು. ದಿನಕರನಿಗೆ ಕನ್ನಡ ಅರಿಯದೆಂದು ಅವರಿಗೆ ಎಗ್ಗಿಲ್ಲ.