“ನಾಣಿ ಯಾವಾಗಲೂ ಏಳುವುದು ತಡ. ಅವನ ಮಗ ಗೋಪಾಲ ಮಾತ್ರ ಬೇಗ ಎದ್ದು ಬಿಡುತ್ತಾನೆ. ನಾವು ಹರಿದ್ವಾರಕ್ಕೆ ಬಂದಾಗ ಅವನು ಕೂಸು. ತಾಯಿಯನ್ನು ಕಳೆದುಕೊಂಡ ಕೂಸು. ಕೂಸನ್ನು ನೋಡಿಕೊಳ್ಳಲೆಂದು ಗಂಗೂಬಾಯಿ ಎಂಬ ಹುಡುಗಿ ನಮ್ಮ ಜೊತೆಗಿದ್ದಳು. ನಿನಗವಳು ನೆನಪಿರಬೇಕು. ಬಳೆ ತೊಡಿಸಿಕೊಳ್ಳೋದೂಂದರೆ ಅವಳಿಗೆ ಹುಚ್ಚು. ಕಂಡಲ್ಲಿ ಬಳೆ ತೊಡಿಸಿಕೊಳ್ಳಬೇಕು ಅವಳಿಗೆ. ನಿನಗೆ ನೆನಪಿರಲಿಕ್ಕೆ ಸಾಕು. ಅವಳಿಗೂ ಈಗ ಒಬ್ಬ ಮಗ ಇದ್ದಾನೆ. ಗೋಪಾಲನಿಗಿಂತ ಒಂದು ವರ್ಷ ಚಿಕ್ಕವನು. ಅವಳು ಶಾಲೆಗೆ ಹೋಗಿ ಕಲಿತು ಈಗ ಹೈಸ್ಕೂಲಿನಲ್ಲಿ ಮೇಡಂ. ಅವಳ ಮಗನ ಹೆಸರು ಪ್ರಸಾದ. ನಾಣಿಯೇ ಅವರಿಗೊಂದು ಮನೆ ಕಟ್ಟಿಸಿಕೊಟ್ಟ. ಗಂಗೂಬಾಯಿಗೆ ಸೋದರಿಕೆ ಸಂಬಂಧ. ಅವಳ ಗಂಡನಿಗೆ ಏನೂ ತಿಳಿಯದು. ಹಸುವಿನಂಥ ಸಾಧುಪ್ರಾಣಿ. ಮನೇಲಿ ದನ ಸಾಕಿಕೊಂಡು ಹಾಲು ಕರೀತಾನೆ. ತಮಗಷ್ಟು ಇಟ್ಟುಕೊಂಡು ನಮಗಷ್ಟು ಕೊಟ್ಟು ಉಳಿದಿದ್ದನ್ನು ಮಾರತಾನೆ. ಆಯಿತ?

ನನ್ನ ಮೊಮ್ಮಗನೋ ಈಚೆಗೆ ಬಹಳ ಹಾರಾದಕ್ಕೆ ಶುರು ಮಾಡಿದಾನೆ. ನನ್ನ ಮಗ ಇಲ್ಲಿಯ ಮುನಿಸಿಪಾಲಿಟಿಯ ಪ್ರೆಸಿಡೆಂಟಾಗಿ ಭಾರೀ ಕಡಿದದ್ದು ಆಯಿತು. ಈಗ ಮೊಮ್ಮಗ ದೇಶೋದ್ಧಾರದ ಕೆಲಸಕ್ಕೆ ಶುರು ಮಾಡಿದಾನೆ. ಅಪ್ಪನ ಜೊತೆ ಲಾಯರು ಅಂತ ನೆವಕ್ಕೆ ಬೋರ್ಡ್ ಹಾಕ್ಕೊಂಡಿದ್ದಾನೆ. ಆದರೆ ಅಪ್ಪನ ಮಾತು ಕೇಳ್ತಾನೋ? ಇವತ್ತು ಈ ಪಾರ್ಟಿಯಾದರೆ, ನಾಳೆ ಇನ್ನೊಂದು ಪಾರ್ಟಿ. ಬೆಳಿಗ್ಗೆ ಎದ್ದು ಫೋನ್ ಮಾಡಕ್ಕೆ ಶುರು ಮಾಡ್ತಾನೆ-ಸುಬ್ಬಲಕ್ಷ್ಮಿ ಸ್ತೋತ್ರಾನ್ನ ಕೇಳಿಸಿಕೊಳ್ತಾ. ನೋಡ್ತಾ ಇರು: ನಿನ್ನ ಕಂಡದ್ದೇ ಹೇಗೆ ಹಾರಾಡ್ತಾನೆ ಅಂತ. ನಿನ್ನನ್ನ ಟೀವಿಯಲ್ಲಿ ನೋಡಿದಾಗಲೆಲ್ಲ ನಾವು ಮಾತಾಡಿಕೋತೀವಿ. ನಮ್ಮನ್ನು ಮರೆತುಬಿಟ್ಟಿರಬೇಕು ಅಂತ ನಾಣಿ ಹೇಳ್ತಾನೆ. ಆದರೆ ನಾನು ಹೇಳ್ತಿನಿ: ಅವನನ್ನು ಮತ್ತೆ ನೋಡದೆ ನಾನು ಸಾಯಲ್ಲ ಅಂತ. ‘ನೀನೇ ಬರೆಯೋ’ ಎಂದರೆ ನಾಣಿಗೆ ಸೋಮಾರಿತನ. ಎಷ್ಟು ವರ್ಷವಾಗಿ ಬಿಟ್ಟಿತು, ಮರೆತಿರಬಹುದು. ಬಹಳ ದೊಡ್ಡ ಮನುಷ್ಯ ಅಗಿಬಿಟ್ಟಿದ್ದಾನೆ ಅಂತ ಮುಜುಗರ. ಅದೇನು ದೊಡ್ಡ ಮನುಷ್ಯನೋ ನೀನು?”

ಎಂದು ಅಡಿಗೆ ಮನೆಯಲ್ಲಿ ಸ್ಟೂಲಿನ ಮೇಲೆ ಕೂತು ತನಗೆ ಎನೇನೊ ಅರ್ಥವಾಗದ ಸೀತಮ್ಮನ  ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ದಿನಕರನ ಕೆನ್ನೆ ಚಿವುಟಲು ಬಂದು ಸೀತಮ್ಮ, ತಾನು ಮಡಿಯಲ್ಲಿದ್ದೇನೆಂದು ನೆನಪಾಗಿ, ನಗುತ್ತಾ ಹಿಂದಕ್ಕೆ ಸರಿದು ಮತ್ತೆ ಒಲೆಯೆದುರು ಕೂತರು. ದಿನಕರನಿಗೆ ಕನ್ನಡ ಬರೆದೆಂಬುದನ್ನು ಸಂಪೂರ್ಣ ಮರೆತಂತೆ ಅವನ ಮೇಲೆ ಪ್ರೀತಿ ಸುರಿಯುವ ನೆಪದಲ್ಲಿ ಸೀತಮ್ಮ ಮಾತಾಡುತ್ತಲೇ ಹೋದರು, ಕಡುಬು ಬೇಯುವುದನ್ನು ಕಾಯುತ್ತ.

ಸೀತಮ್ಮ ಕೂತೇ ಅಡಿಗೆ ಮಾಡುವುದು. ಅದೂ ಸೌದೆ ಉರಿಯ ಮೇಲೆ. ಅವರೇ ಮಣ್ಣು ಕಲೆಸಿ ಕಟ್ಟಿದ ಕೂಡಲೊಲೆಯ ಮೇಲೆ. ನಿತ್ಯ ಬೆಳಿಗ್ಗೆ ಈ ಒಲೆಯನ್ನು ಶುಭ್ರಮಾಡಿ, ಕರಿ ಬೆರೆಸಿದ ಸಗಣಿಯಲ್ಲಿ ಸಾರಿಸಿ,ಅದರ ಮೇಲೂ ರಂಗೋಲೆ ಬಿಟ್ಟಿರಬೇಕು. ಅವರು ಕಟ್ಟಿಗೆ ಜೋಡಿಸಿದರೆ ಉರಿ ಹತ್ತಿಕೊಳ್ಳುವ ಹಾಗೆ ಬೇರೆಯವರು ಜೋಡಿಸಲಾರರು. ಉರಿ ಒಲೆಯಲ್ಲಿ ಹೆಚ್ಚಾಗಿ, ಇನ್ನೆರಡು ತೂತುಗಳಲ್ಲಿ ಸ್ವಲ್ಪ ಸ್ವಲ್ಪ ಕಡಿಮೆಯಾಗಿ, ಉರಿಯ ಪ್ರಮಾಣಕ್ಕೆ ಉಚಿತವಾದ ಮೇಲೋಗರಗಳನ್ನು ಬೇಯಿಸುತ್ತದೆ. ಸೀತಮ್ಮ ಒಲೆಯಲ್ಲಿ ಜೋಡಿಸಿದ ಕಟ್ಟಿಗೆಯನ್ನು ಅಲ್ಲಿ ಇಲ್ಲಿ ಚೂರು ಚೂರೇ ಒಳದಬ್ಬುತ್ತ, ಹೊರಗೆಳೆಯುತ್ತ, ಒಂದರ ಮೇಲೊಂದು ಒಡ್ಡಿಕೊಂಡು ಉರಿಯಲು ಸಹಕರಿಸುವಂತೆ ತುಸುವೇ ಹಂದಿಸುತ್ತ, ರಂಗೋಲೆಯಿಕ್ಕುವಾಗಿನಂತೆಯೇ ಏಕಾಗ್ರರಾಗುತ್ತಾರೆ. ದಿನಕರನಿಗೆ ಹರಿದ್ವಾರದಲ್ಲಿ ಅವರೊಡನೆ ಕಳೆದ ದಿನಗಳು ಅವರು ಒಲೆ ಉರಿಯುವ ಕೌಶಲ್ಯ ಕಂಡು ನೆನಪಾಗಿತ್ತು.

ತ್ರಿಪಾಠಿಗಳ ಮನೆಯಲ್ಲೂ ಅವರು ತಕ್ಕುದಾದ ಮಣ್ಣು ತರಿಸಿಕೊಂಡು ಒಲೆಯನ್ನು ನಿರ್ಮಿಸಿ ಅಡಿಗೆ ಮಾಡುತ್ತಿದ್ದದ್ದು. ಹತ್ತು ದಿನಕ್ಕೆಂದು ಬಂದವರು ಒಂದು ತಿಂಗಳು ಇದ್ದರು.

* * *

‘ಏನೋ ಹೇಳ್ತ ಇದ್ದೆ’ ಎಂದು ಸೀತಮ್ಮ ಮತ್ತೆ ದಿನಕರನ ಜೊತೆ ಮಾತಿಗೆ ಪ್ರಾಂರಭಿಸಿದ್ದರು.

“ನಿನ್ನೆ ಕತ್ತಿನ ತಾಯಿತ ನೋಡಿದ್ದೆ ನೀನು ಯಾರೆಂದು ಗೊತ್ತಾಗಿ ಬಿಟ್ಟಿತು. ನಾಣಿಗೂ ನಿನ್ನೆ ಈ ವೇಷದಲ್ಲಿ ಗೊತ್ತಾಗತ್ತ ನೋಡಬೇಕು. ಗಂಗೂಗು ಗೊತ್ತಾಗತ್ತ ನೋಡಬೇಕು. ಟೀವಿಯಲ್ಲಿ ನಿನ್ನ ನೋಡಿದವರು ಯಾಕೆ ಮರೀತಾರೆ? ನಿನ್ನ ಕಣ್ಣನ್ನ ಯಾಕೆ ಮರೀತಾರೆ? ನೀನು ಹೀಗೆ ವ್ರತ ಹಿಡೀದೇ ಇದ್ದಿದ್ದರೆ ನಿನಗೆ ದೃಷ್ಟಿ ಸುಳಿದು ಹಾಕ್ತಾ ಇದ್ದೆ.”

ಸೀತಮ್ಮ ಅಡಿಗೆ ಮನೆ ಬಾಗಿಲಲ್ಲಿ ಶಾಸ್ತ್ರಿಗಳು ತನ್ನ ಮಾತು ಕೇಳಿಸಿಕೊಳ್ಳುತ್ತ ನಿಂತುದನ್ನು ನೋಡಿದರು:

“ನನ್ನ ಹುಚ್ಚು ಕಂಡುಬಿಟ್ಟಿರಾ ಶಾಸ್ತ್ರಿಗಳೆ. ಈ ಮಣ್ಣಿಗೆ ಕನ್ನಡ ಬರಲ್ಲಾ ಅನ್ನೋದನ್ನ ಮರೆತೇ ಬಿಟ್ಟು ಹೇಗೆ ಬಡಬಡಿಸ್ತ ಇದೀನಿ ನೋಡಿ. ಇದು ಪರದೇಶಿ ಮಾಣಿ ಅಂತ ನನ್ನ ಕರಳು ಚುಂಯ್ ಎಂದು ಬಿಟ್ಟಿತು ನೋಡಿ: ತ್ರಿಪಾಠಿಗಳ ಮನೇಲಿ ಬೆಳೀತಿದ್ದ ಇದನ್ನು ಕಂಡು. ಅವರು ಪಾಪ ದೊಡ್ಡವರು – ಇವನನ್ನು ಬಿಟ್ಟು ಹಾಕಲಿಲ್ಲ. ಕೂಸಿಗೆ ಐದು ವರ್ಷ: ಅದರ ತಾಯಿ ಅವರ ಮನೇಲಿ ಪರದೇಶಿ ಹಾಗೆ ಬಂದಿಳಿದಾಗ. ಒಂದು ಟ್ರಂಕು, ಕೈಚೀಲದಲ್ಲಿ ಒಂದಷ್ಟು ಬಟ್ಟೆ ಇಟ್ಟುಕೊಂಡು ಸೀದಾ ಇದರ ಅಮ್ಮ ತ್ರಿಪಾಠಿಗಳ ಮನೆಗೆ ಬಂದದ್ದಂತೆ. ಅವರಿಗೆ ಇವನ ತಾಯಿ ದಕ್ಷಿಣ ದೇಶದವಳು ಅಂತ ಮಾತ್ರ ಗೊತ್ತು. ತ್ರಿಪಾಠಿಗಳು ದೊಡ್ಡ ಮನಸ್ಸಿನವರು. ಅವಳಿದ್ದ ಪಾಡು ನೋಡಿ ಯಾರು ನೀನು? ಏನು? ಎತ್ತ? ಯಾವುದೂ ಕೇಳಲಿಲ್ಲ. ಅಡಿಗೆ ಮಾಡಿಕೊಂಡು ಇರೋದಿಕ್ಕೆ ಜಾಗ ಕೊಟ್ಟರು. ಬೇಕಾದ ಸಾಮಾನು ಸರಂಜಾಮು ಒದಗಿಸಿದರು. ಹಣೆಯಲ್ಲಿ ಕುಂಕುಮವಿದ್ದದ್ದು ಕಂಡು ‘ನಿನ್ನ ಗಂಡನ್ನ ಹುಡುಕಿಕೊಂಡು ಬರಲ?’ ಅಂತ ಒಂದು ಸಾರಿ ಮಾತ್ರ ಕೇಳಿದ್ದರಂತೆ. ಅವಳಿಗೆ ಅಷ್ಟಿಷ್ಟು ಹರಕು ಮುರಕು ಹಿಂದಿ ಗೊತ್ತಿತ್ತಂತೆ. ಅವಳು ಏನೂ ಉತ್ತರ ಕೊಡದೆ ಕಣ್ಣು ತುಂಬ ನೀರು ತುಂಬಿಕೊಂಡು ನಿಂತದ್ದು ಕಂಡು ಮತ್ತೆ ತ್ರಿಪಾಠಿಗಳು ಆ ಪ್ರಶ್ನೆ ಕೇಳಲೇ ಇಲ್ಲವಂತೆ. ಏನೂ ಕೇಳಕೂಡದು ಅಂತ ಮನೆ ಹೆಂಗಸರನ್ನು ಗದರಿಸಿ ಇಟ್ಟಿದ್ದರಂತೆ. ಒಂದು ಹೆಂಗಸಿಗೆ ಇನ್ನೊಂದು ಹೆಂಗಸೂಂದರೆ ಕುತೂಹಲ ಅಲ್ಲವ?”

ಶಾಸ್ತ್ರಿಗಳು ಬಿಳುಚಿಕೊಂಡದ್ದು ನೋಡಿದ ಸೀತಮ್ಮ,

‘ಯಾಕೆ ಹುಷಾರಿಲ್ವ? ರಾತ್ರೆ ನಿದ್ದೆ ಬರಲಿಲ್ಲವ?’ ಎಂದು ಅಡಿಗೆ ಮನೆಯಲ್ಲಿ ಒಂದು ಮಣೆ ಹಾಕಿ ಕೂರಿಸಿದರು.

“ಸುಮಾರು ಹೀಗೆ ಐದಾರು ತಿಂಗಳು ಕಳಿತಂತೆ. ಒಂದು ದಿನ ಬೆಳಗಿನ ಜಾವ ಇವನ ತಾಯಿ ಎದ್ದವಳು ಸೀದ ತ್ರಿಪಾಠಿಗಳಿದ್ದಲ್ಲಿಗೆ ಹೋದಳಂತೆ. ಅವರು ಆಗ ತಮ್ಮ ಪೂಜೆಯ ಮನೆಯಲ್ಲಿ ಕೂತು ಧ್ಯಾನ ಮಾಡ್ತ ಇದ್ದರು. ಇವರ ಅಮ್ಮನೋಡೋಕೆ ತುಂಬ ಲಕ್ಷಣವಂತೆ. ಇವನದೇ ಕಣ್ಣಂತೆ. ಈ ತಾಯಿತದ ಜೊತೆ ಮಂಗಳಸೂತ್ರ ಅವಳ ಕೊರಳಲ್ಲಿ ಇತ್ತಂತೆ. ಇದನ್ನೆಲ್ಲ ತ್ರಿಪಾಠಿಗಳೇ ನನಗೆ ಹೇಳಿದ್ದು. ಆಯಿತ? ಏನೋ ಹೇಳಲಿಕ್ಕೆ ಹೋಗಿ ಇನ್ನೇನೋ ಹೇಳ್ತಾ ಇದೀನಿ. ತ್ರಿಪಾಠಿಗಳಿಗೆ ಇವನ ತಾಯಿ ನಮಸ್ಕಾರ ಮಾಡಿ, ಅವರ ಎದುರು ತನ್ನ ಟ್ರಂಕನ್ನು ಇಟ್ಟು, ಅದರ ಮುಚ್ಚಳ ತೆಗೆದಳಂತೆ.

ತ್ರಿಪಾಠಿಗಳಿಗೆ ತಮ್ಮ ಕಣ್ಣನ್ನು ನಂಬಲಿಕ್ಕೆ ಆಗಲಿಲ್ಲ. ಅದರಲ್ಲಿ ಎರಡು, ಮೂರು ಮಣದಷ್ಟಾದರೂ ಬಂಗಾರ. ಕತ್ತಿನ ಸರ, ಬುಗುಡಿ, ಬೆಂಡೋಲೆ, ಬಳೆ, ಬಂಗಾರದ ಪಟ್ಟಿ ಮಾತ್ರವಲ್ಲ, ಮುರುಸದ ಬಂಗಾರದ ಗಟ್ಟಿಗಳು – – ನನಗೂ ಈ ಟ್ರಂಕನ್ನು ಬಿಚ್ಚಿ ತ್ರಿಪಾಠಿಗಳೇ ತೋರಿಸಿದ್ದು ಈ ಟ್ರಂಕಿನ ಮೇಲೆ ಸರ್ಪಗಾವಲು ತ್ರಿಪಾಠಿಗಳದ್ದು.

“ನನ್ನ ಮಗನನ್ನು ನಿಮ್ಮ ಮೊಮ್ಮಗ ಅಂತ ತಿಳಕೊಳ್ಳಿ. ನನ್ನನ್ನು ನಿಮ್ಮ ಮಗಳು ಅಂತ ತಿಳಕೊಳ್ಳಿ” ಎಂದು ಇವನ ತಾಯಿ ದೇವರಿಗೂ, ತ್ರಿಪಾಠಿಗಳಿಗೂ ನಮಸ್ಕಾರ ಮಾಡಿದಳಂತೆ. ತ್ರಿಪಾಠಿಗಳು ಅವಳ ತಲೆ ಮುಟ್ಟಿ ಆಶೀರ್ವದಿಸಿ, ಪೆಟ್ಟಿಗೆಯನ್ನು ತಮ್ಮ ತಿಜೋರಿಯಲ್ಲಿಟ್ಟು ಬಂದರಂತೆ. ಆ ಬಂಗಾರವನ್ನು ನೋಡಲಿಕ್ಕೆ ಎರಡು ಕಣ್ಣು ಸಾಲದು. ವಿಜಯನಗರದ ಕಾಲದ ಅಭರಣಗಳು ಮೇಲೆ, ಕೆಳಗೆ ಬಂಗಾರದ ಇಡಿ ಇಡೀ ಗಟ್ಟಿಗಳು.

ಇದಾದ ಮೇಲೆ ಒಂದು ತಿಂಗಳು ಎಲ್ಲ ಸುಸೂತ್ರವಾಗಿ ಕಳೀತು. ತ್ರಿಪಾಠಿಗಳು ದಿನಕರನನ್ನು ಮನೇ ಮಗು ಅಂತಲೇ ಹಚ್ಚಿಕೊಂಡರು. ತಮ್ಮ ಮನೇಲೇ ಇಟ್ಟುಕೊಂಡರು. ತನ್ನ ಖರ್ಚಿನಲ್ಲೇ ಓದಿಸಿದರು. ಆ ಬಂಗಾರದ ಮುಟ್ಟಲಿಲ್ಲ. ಅದೊಂದು ದೊಡ್ಡ ಕಥೆ ಎನ್ನಿ.

ಒಂದು ದಿನ ಬೆಳಿಗ್ಗೆ ಗಂಗಾಸ್ನಾನಕ್ಕೆ ಅಂತ ಹೋದ ಇವನ ತಾಯಿ ಹಿಂದಕ್ಕೆ ಬರಲಿಲ್ಲ. ಎಲ್ಲೋ ದೂರದಲ್ಲಿ ಅವಳ ಹೆಣ ಸಿಕ್ಕಿತು. ಕಾಲು ಜಾರಿ ಹೋಗಿರಬಹುದು ಅಂತಲೂ ಅಂತಾರೆ. ಆದರೆ ತ್ರಿಪಾಠಿಗಳ ಮನೆ ಮಂದಿಗೆಲ್ಲ ಆಶ್ಚರ್ಯ ಎಂದರೆ ಅವಳು ಗಂಗಾಸ್ನಾನಕ್ಕೆ ಹೋಗೋಕೆ ಮುಂಚೆ ತನ್ನ ಕತ್ತಿನಲ್ಲಿದ್ದ ತಾಯಿತವನ್ನು ಮಗನ ಕೊರಳಿಗೆ ಯಾಕೆ ಹಾಕಿದಳು?ಯಾಕೆ ಮಗನ್ನ ಅಷ್ಟು ಬೇಗ ಎಬ್ಬಿಸಿ ಹಾಲನ್ನು ಕಾಯಿಸಿ ಕುಡಿಸಿದಳು?”

ಸೀತಮ್ಮ ಅಳಲು ಪ್ರಾರಂಭಿಸಿದ್ದರು. ದಿನಕರ ಮಾತಾಡದೆ ಕೇಳಿಸಿಕೊಳ್ಳುತ್ತ ಅವರು ಏನು ಹೇಳುತ್ತಿದ್ದಾರೆಂದು ಊಹಿಸಿದ್ದ. ಶಾಸ್ತ್ರಿಗಳು ಕಣ್ಣುಮುಚ್ಚಿ ಕೂತು ಜಪದ ಸರ ಎಣಿಸುತ್ತಿದ್ದರು.

“ನಾನು ತಾಯಿತ ನೋಡಿದ್ದೇ ಇದರೊಳಗೆ ಶ್ರೀಚಕ್ರ ಇದೆ. ಇದು ನಮ್ಮ ಕಡೇದು ಎಂದುಬಿಟ್ಟೆ. ಯಾರ ಮನೆಯ ಮಾಣಿಯೋ? ಇದರ ಅಪ್ಪ ಯಾರೊ? ಯಾಕೆ ಇವನ ತಾಯಿ ಹಸುಗೂಸು ಕಟ್ಟಿಕೊಂಡು ಮನೆ ಬಿಡಬೇಕಾಯಿತೊ? ಪುರಾಣ ಹೇಳ್ತೀರಲ್ಲ ಶಾಸ್ತ್ರಿಗಳೇ, ವೇದವ್ಯಾಸರು ಮಾತ್ರ ಇವನ ಕಥೆ ಬರೆದಾರು. ಇಡೀ ದೇಶವೆಲ್ಲಾ ಈ ಮಾಣಿಯನ್ನು ಭಾರಿ ತಿಳುವಳಿಕಸ್ತ ಅಂತ ಗೌರವಿಸುತ್ತದೆ. ಆದರೆ ಈ ಮಾಣಿಗೆ ತನ್ನ ತಾಯಿ ಯಾರು ತಿಳಿಯದು. ತಂದೆ ಯಾರು ತಿಳಿಯದು. ತನ್ನ ಊರು ಯಾವುದು ತಿಳಿಯದು. ಅದಕ್ಕೇ ದೇವರನ್ನೆ ತಾಯಿ, ತಂದೆ ಅಂತ ತಿಳೀಲಿಕ್ಕೆ ಏನೋ ಈ ವೇಷದಲ್ಲಿ ಅಲೀತಿದೆ.”

ಶಾಸ್ತ್ರಿಗಳನ್ನು ನೋಡಿ ಸೀತಮ್ಮ ಗಾಬರಿಯಾಗಿ, “ಯಾಕೆ?” ಎಂದು ಅವರಿಗೆ ಕುಡಿಯಲು ನೀರು ಕೊಟ್ಟರು.