ಸೀತಮ್ಮನ ಮಾತು ಕೇಳಿಸಿಕೊಳ್ಳುತ್ತ ತನ್ನ ತಲೆಯಲ್ಲಿ ಎರ‍ಡು ಜೊತೆ ಕೆಂಗಣ್ಣುಗಳು ಕೆಕ್ಕರಿಸುತ್ತ ಒಂದನ್ನೊಂದು ದಿಟ್ಟಿಸುತ್ತಿದ್ದಾವೆ ಎಂದು ಶಾಸ್ತ್ರಿಗಳಿಗೆ ಎನ್ನಿಸಿತ್ತು. ತನ್ನ ಎರಡನೇ ಹೆಂಡತಿ ಮಹಾದೇವಿ ಮೌನವಾಗಿ ಹೀಗೆ ತನ್ನನ್ನು ದ್ವೇಷದಲ್ಲಿ ನೋಡುವುದಿದೆ. ತಾನೂ ಹಾಗೆ ಅವಳನ್ನು ನೋಡುವುದಿದೆ. ಯಾವ ಕಾರಣವಿಲ್ಲದೆ ಇಂಥ ದ್ವೇಷ ಉರಿಯುತ್ತದಲ್ಲ ಎಂದುಕೊಂಡು ಶಾಸ್ತ್ರಿಗಳು ಆಮೇಲೆ ವಿಹ್ವಲರಾಗುತ್ತಾರೆ. ತನ್ನ ಮಗಳೂ ಮನೆ ಬಿಟ್ಟು ಹೋಗುವ ಮುಂಚೆ ಹೀಗೇ ತನನ್ನು ನೋಡಿದ್ದಳು. ಮಗಳು ಕಾಲೇಜಲ್ಲಿ ಯಾರನ್ನೋ ಪ್ರೀತಿಸುತ್ತಿದ್ದಾಳೆಂದು ತಿಳಿದು ಈಗ ತನ್ನನ್ನು ಕಂಗಾಲುಗೊಳಿಸುತ್ತಿರುವ ಆ ಹಿಂದಿನ ರೋಷ ಮರುಕಳಿಸಿತ್ತು. ಮಗಳಿಗೆ ಆಡಬಾರದ್ದನ್ನು ಆಡಿದ್ದರು; ಅವಳು ತಂದೆಗೆ ಆಡಬಾರದ್ದನ್ನು ಆಡಿದ್ದಳು. ಪುರಾಣ ಪ್ರವಚನದಲ್ಲಿ ತೊಡಗಿದ್ದಾಗ ಪ್ರಹ್ಲಾದನ ಬಗ್ಗೆಯೋ, ಧ್ರುವನ ಬಗ್ಗೆಯೋ ಸಭಿಕರು ಅಷ್ಟೊಂದು ಆರ್ದ್ರಗೊಳ್ಳುವಂತೆ ಮಾತಾಡಬಲ್ಲವನು ಯಾರು, ಅದೂ ನಾನಿರಬಹುದೆ ಎಂದು ಶಾಸ್ತ್ರಿಗಳು ಬೆಚ್ಚುತ್ತಾರೆ ತಾನು ಸದಾ ತನ್ನಿಂದ ಓಡಿಹೋಗುತ್ತಿದ್ದೇನೆ ಎನ್ನಿಸಿದಿದ್ದೆ.

ಹೀಗೆ ಓಡುವುದನ್ನು ದಿನಕರನ ಕೊರಳಿನ ತಾಯಿತ ನಿಲ್ಲಿಸೀತೆ? ಅವ್ಯಕ್ತವಾದ ದಿಗಿಲಿಗೆ ತನ್ನನ್ನು ಅದು ಎದುರು ಮಾಡಿತ್ತು. ಆ ಎರಡು ಜೊತೆ ಕೆಕ್ಕರಿಸುವ ಕಣ್ಣುಗಳೂ ತನ್ನವೇ ಎಂದು ಅಸ್ಪಷ್ಟವಾಗಿ ಹೊಳೆದಂತಾಗಿ, ಗಾಬರಿಯಾಗಿ, ಇನ್ನೇನೋ ಯೋಚಿಸಲು ಪ್ರಯತ್ನಿಸುತ್ತ,

“ಸೀತಮ್ಮ ಎರಡು ದಿನ ದಿನಕರನನ್ನು ಇಲ್ಲೇ ಇಟ್ಟುಕೊಳ್ಳಿ. ನಾನು ಬಂದು ಅವರನ್ನು ನಮ್ಮ ಕಗ್ಗಾಡಿಗೆ ಕರೆದುಕೊಂಡು ಹೋಗುವೆ. ನಮ್ಮಲ್ಲಿ ಒಂದೆರಡು ದಿನವಿದ್ದು ಅವರು ಕೇರಳಕ್ಕೆ ಹೋಗುತ್ತಾರಂತೆ. ಬೇಡ, ನಾನಿವತ್ತು ಏನೂ ತಿನ್ನುವವನಲ್ಲ. ಇವತ್ತು ಏಕಾದಶಿಯಲ್ಲವ?” ಎಂದು ಎಷ್ಟು ಒತ್ತಾಯಿಸಿದರೂ ಕೇಳದೆ ಶಾಸ್ತ್ರಿಗಳು ಹೊರಟೇಬಿಟ್ಟರು.

ಟ್ಯಾಕ್ಸಿ ಸ್ಟ್ಯಾಂಡಿನಲ್ಲಿ ಒಂದು ಟ್ಯಾಕ್ಸಿಯನ್ನು ಪಡೆದು ನೇರವಾದ ದಾರಿಬಿಟ್ಟು ತನ್ನ ಗುಪ್ತಭಕ್ತಿಯ ದೇವತೆಯೊಬ್ಬಳ ಜೀರ್ಣಗೊಂಡ ಗುಡಿಯಿರುವ ಕಾಡನ್ನು ಹೊಕ್ಕರು. ಎತ್ತಿನ ಬಂಡಿಗಳು ಓಡಾಡುವ ದಾರಿಯಲ್ಲಿ ಕಾರು ಹೋಗಬೇಕಿತ್ತು. ‘ನಿನಗೆ ಎರಡರಷ್ಟು ಬಾಡಿಗೆ ಕೊಡುವೆ’ ಎಂದು ಸ್ಥಳೀಯ ಗತ್ತಿನಲ್ಲಿ ಶಾಸ್ತ್ರಿಗಳು ಹೇಳಿದ್ದರಿಂದ ಚಾಲಕ ಮಾತಾಡದೆ ಕಾರನ್ನು ಇಕ್ಕಟ್ಟಿನಲ್ಲಿ ಓಡಿಸಲು ಒಪ್ಪಿದ್ದ. ದಟ್ಟವಾದ ಕಾಡಿನ ಮಧ್ಯೆ ಕಾರನ್ನು ನಿಲ್ಲಿಸಿ, ‘ಅರ್ಧಗಂಟೆ ಕಾದಿರು’ ಎಂದು ಶಾಸ್ತ್ರಿಗಳು ಸವೆದ ಹಾದಿಯಿಲ್ಲದ ಪೊದೆಗಳ ನಡುವೆ ತನ್ನದೇ ದಾರಿ ಮಾಡಿಕೊಳ್ಳುತ್ತ ನಡೆದರು. ಹಾಳುಬಿದ್ದ ಭಗವತಿಯ ಗುಡಿಯೆದುರು ಬಂದು ನಿಂತರು.

ಭಗವತಿಗೆ ನಿತ್ಯ ದೀಪ ಉರಿಸಲೆಂದು ಹತ್ತಿರದ ಹಳ್ಳಿಯ ಬಡ ಬ್ರಾಹ್ಮಣನೊಬ್ಬನಿಗೆ ಶಾಸ್ತ್ರಿಗಳು ತಿಂಗಳಿಗೆ ೨೫೦ ರೂಪಾಯಿ ಕೊಡುತ್ತಿದ್ದರು. ಗುಡಿಯನ್ನು ಹೊಸದಾಗಿ ಕಟ್ಟಿಸಬೇಕೆಂದು ಒಮ್ಮೆ ಮನಸ್ಸಾಗಿತ್ತು. ಆದರೆ ಆ ದೇವಿಯ ಕಾರ್ಣಿಕ ಅವಳ ಗುಡಿ ಬದಲಾದರೆ ಉಳಿಯಲಿಕ್ಕಿಲ್ಲವೆಂದು ತನ್ನ ಎಲ್ಲ ಶಾಸ್ತ್ರಜ್ಞಾನವನ್ನೂ ಬದಿಗೊತ್ತಿ ನಂಬಿದ್ದರು ಶಾಸ್ತ್ರಿಗಳು. ತನ್ನ ಮಿದುಳಿನಲ್ಲಿ ಉರಿಯುವ ಕಣ್ಣುಗಳ ಕಠೋರ ದೇವಿ ಈ ಭಗವತಿ ಎಂದು ಅವರು ನಂಬಿದ್ದರು.

ಒಂದು ವರ್ಷದ ಹಿಂದೆ ತನ್ನ ಜಗಳಗಂಟಿ ಹೆಂಡತಿಯ ಪ್ರತಿನಿತ್ಯದ ರಾದ್ಧಾಂತ ತಡೆಯಲಾರದೆ, ಭಗವತಿಯ ಎದುರು ಹರಕೆ ಹೇಳಿಕೊಂಡು, ತನ್ನ ಹೆಂಡತಿಯನ್ನು ಇಲ್ಲಿಗೆ ಕರೆತಂದಿದ್ದರು. ಮಹಾದೇವಿ ಭಗವತಿಯ ಎದುರು ನಿಂತು ದುರುಗುಟ್ಟ ತೊಡಗಿದಳು. ಇಡೀ ಕಾಡಿನ ಮೌನ ಸೀಳುವಂತೆ ಕಿಟಾರನೆ ಕಿರುಚಿಕೊಂಡಳು. ಕಣ್ಣನ್ನು ಕೆಕ್ಕರಿಸಿ ಶಾಸ್ತ್ರಿಗಳ ಎದುರು ನಿಂತು ಏನೇನೋ ಬಡಬಡಿಸತೊಡಗಿದಳು. ಅವಳ ಆಪಾದನೆಗಳಿಂದ ಶಾಸ್ತ್ರಿಗಳು ದಿಗಿಲು ಬಿದ್ದಿದ್ದರು. ಮೊದಲ ಹೆಂಡತಿಯನ್ನು ಮಣೆಯನ್ನು ತಲೆಗೆ ಜಪ್ಪಿ ತಾನು ಕೊಂದಿದ್ದೇನೆಂಬುದು ಇವಳಿಗೆ ಹೇಗೆ ತಿಳಿಯಿತು? ಅವಳು ಜಕಣಿಯಾಗಿ ತನ್ನನ್ನು ಕಾಡುತ್ತಿದ್ದಾಳೆಂದು ಮಹಾದೇವಿ ಅಬ್ಬರಿಸಿದ್ದಳು. ಇದ್ದಕ್ಕಿಂದಂತೆ ಆ ಮಹಾದೇವಿ ತನ್ನ ಮೊದಲ ಹೆಂಡತಿಯಾಗಿಯೇ ಬಿಟ್ಟಿದ್ದಳು. “ನನ್ನನ್ನು ಜಪ್ಪಿ ಜಪ್ಪಿ ಕೊಂದಂತೆ, ತನ್ನ ಸವತಿಯ ಮಗಳನ್ನು ಜಪ್ಪಿ ಕೊಲ್ಲಲು ಹೋಗಿದ್ದೆಯಲ್ಲೋ. ಏ ಕಟುಕ ಬ್ರಾಹ್ಮಣಾ” ಎಂದು ಕಿರುಚತೊಡಗಿದ್ದಳು.

ಶಾಸ್ತ್ರಿಗಳು ದೇವಿಯ ಎದುರು ನಿಂತು ಕಣ್ಣುಮುಚ್ಚಿ ಕೇಳಿದರು:

‘ಭಗವತಿ ಯಾಕೆ ನನ್ನ ಹೆಂಡತಿಯ ಬಾಯಿಂದಲೂ ಸುಳ್ಳು ಹೇಳಿಸಿದೆ? ನನ್ನನ್ನೂ ಯಾಕೆ ಕೊಲೆಗಡುಕನಿರಬಹುದೆಂಬ ಭೀತಿಯಲ್ಲಿ ಈ ತನಕ ನಡೆಸಿಕೊಂಡೆ? ದಿನಕರ ನನ್ನ ಮಗನೋ, ಆ ಮಲೆಯಾಳಿ ಪಂಡಿತನ ಮಗನೋ ನಿಜ ಹೇಳು? ನಿಜ ತಿಳಿಯುವಂತೆ ನನಗೊಂದು ಸಂಜ್ಞೆ ಕೊಡು. ನನ್ನನ್ನು ಪ್ರೇತದಂತೆ ಅಲೆಸುತ್ತಿರಬೇಡ’

ಯಾವ ಸಂಜ್ಞೆಯೂ ಸಿಗಲಿಲ್ಲ. ತನ್ನ ಮಿದುಳಿನಲ್ಲಿ ಕೆಂಗಣ್ಣುಗಳು ಕೆಕ್ಕರಿಸುವುದು ನಿಲ್ಲಲಿಲ್ಲ.

ಭಗವತಿಯ ಕಾನಿನಲ್ಲಿ ದಾರಿ ಹುಡುಕುತ್ತಾ ಟ್ಯಾಕ್ಸಿಯನ್ನು ನಿಲ್ಲಿಸಿದಲ್ಲಿಗೆ ಮರಳಿದರು. ಉಡುಪಿಯಿಂದ ಹತ್ತು ಮೈಲಿ ದೂರದ ಇನ್ನೊಂದು ಹಳ್ಳಿಗೆ ಕಾರು ನಡೆಸುವಂತೆ ಹೇಳಿದರು.

ಆ ಹಳ್ಳಿಗೆ ಅದೊಂದೇ ದೊಡ್ಡ ಮನೆ. ಅದನ್ನು ಕಟ್ಟಿಸಿದವರು ಶಾಸ್ತ್ರಿಗಳೇ. ಆ ಮನೆಯಲ್ಲಿ ಮಾತ್ರ ಅವರ ಮಿದುಳಿನಲ್ಲಿ ಉರಿಯುವ ಕಣ್ಣುಗಳು ಶಾಂತವಾಗುತ್ತವೆ. ಅದು ಅವರ ಸೂಳೆಯ ಮನೆ.

ರಾಧಾ ಎಂದು ಅವಳ ಹೆಸರು. ಆ ಹೆಸರೂ ಅವರು ಇಟ್ಟದ್ದೇ. ಬೊಂಬಾಯಿಯಲ್ಲಿ ಅವರ ಕಣ್ಣಿಗೆ ಬಿದ್ದ ಅನಾಥ ಹುಡುಗಿ ಅವಳು.

ಸುಮಾರು ಐವತ್ತು ವರ್ಷಗಳ ಹಿಂದೆ ಅವರು ಇಪ್ಪತ್ತು ವರ್ಷ ಪ್ರಾಯದವರಾಗಿದ್ದಾಗ ಅಣ್ಣನ ಜೊತೆ ಜಗಳವಾಡಿ ತನ್ನ ಆಸ್ತಿಯಲ್ಲಿ ಅರ್ಧಪಾಲು ಪಡೆದು ಬೊಂಬಾಯಿಗೆ ಹೋಗಿದ್ದರು. ಅಲ್ಲೊಂದು ‘ಭಗವತಿ ಕೃಪಾ’ ಎಂಬ ಹೆಸರಿನ ಹೋಟೆಲು ತೆರೆದಿದ್ದರು. ಆಗ ಅವರನ್ನು ಕಂಡಿದ್ದವರು ಇವರೇ ಈಗಿನ ಶಾಸ್ತ್ರಿಗಳು ಎನ್ನುತ್ತಿರಲಿಲ್ಲ. ಪೈಜಾಮು, ಅಂಗಿ, ತಲೆಗೊಂದು ಟೋಪಿ ಹಾಕಿಕೊಂಡು ಸಿಂಧಿಯೋ, ಮಾರ್ವಾಡಿಯೋ ಎನ್ನುವಂತೆ ಅವರು ರೂಪಾಂತರ ಹೊಂದಿದ್ದರು. ಜುಟ್ಟು ಕತ್ತರಿಸಿ, ಕ್ರಾಪು ಬಿಡುವಷ್ಟು ಧೈರ್ಯ ಸಾಲದೆ ಆ ಟೋಪಿ.

ಅಣ್ಣನೆಂದರೆ ತಮ್ಮನಿಗೆ ದ್ವೇಷ. ತಮ್ಮನೆಂದರೆ ಅಣ್ಣನಿಗೆ ದ್ವೇಷ. ಅಣ್ಣನಿಗೆ ಸಂತಾನವಿಲ್ಲ. ಹೆಂಡತಿ ಸತ್ತಿದ್ದಳು. ಅವನಿಗೆ ಗೂರಲು ಬೇರೆ.

ಅಣ್ಣ ಮತ್ತೆ ಮದುವೆಯಾಗಿರಲಿಲ್ಲ. ವಂಶವನ್ನು ಉಳಿಸಲು ನೀನಾದರೂ ಮದುವೆಯಾಗು ಎಂದರೆ, ಶಾಸ್ತ್ರಿಗಳು ಒಪ್ಪಿರಲಿಲ್ಲ. ಕಗ್ಗಾಡಲ್ಲಿ ತೋಟ, ಮಾಡಿಕೊಂಡು, ಮಳಿಗಾಲವೆಲ್ಲ ಹಲಸಿನ ಪಲ್ಯವನ್ನೋ ಬಣ್ಣದ ಸೌತೆಕಾಯಿ ಹುಳಿಯನ್ನೋ ತಿಂದುಕೊಂಡು, ಕಾಸು ಬಿಚ್ಚದ ಅಣ್ಣನ ಗೂರಲಿನ ಏದುಸಿರು ಕೇಳಿಸಿಕೊಳ್ಳುತ್ತ ಬದುಕಿರುವುದು ಸಹಿಸಲಾರದೆ, ತನ್ನ ಪಾಲು ಪಡೆದು, ಬೊಂಬಾಯಿಯಲ್ಲಿ ಅದನ್ನು ಪೋಲು ಮಾಡಲು ತೊಡಗಿದ್ದರು.

ಹೋಟೆಲಿಟ್ಟರೂ ಗಲ್ಲದ ಮೇಲೆ ಕೂರುವುದು ಇನ್ನು ಯಾರೋ! ತನ್ನ ಆದಾಯವೆಷ್ಟು, ಖರ್ಚೆಷ್ಟು ಎನ್ನುವ ಎಗ್ಗಿಲ್ಲ.

ಬೊಂಬಾಯಿಯಲ್ಲಿ ಶಾಸ್ತ್ರಿಗಳಿಗೆ ಹೆಣ್ಣಿನ ಚಟ ಹತ್ತಿತ್ತು. ತಲೆಹಿಡುಕರು ಸ್ನೇಹಿತರಾದರು. ಇಡೀ ದಿನ ಇಸ್ಪೀಟಾಡುವುದು ಶುರುವಾಯಿತು. ಸಾಕಷ್ಟು ನಿದ್ದೆಯಿಲ್ಲದೆ ಕಣ್ಣು ಸದಾ ಕೆಂಪಾಗಿರುತ್ತಿತ್ತು. ಸೀಗರೇಟು ಸೇದಿ, ಕೆಮ್ಮು ಶುರುವಾಗಿತ್ತು. ಅಣ್ಣನಂತೆ ತನಗೂ ಗೂರಲು ಹತ್ತುವುದೆಂದು ದಿಗಿಲಾಗಲು ತೊಡಗಿತ್ತು.

ಹೀಗಿರಲು ಒಂದು ದಿನ ಶ್ರೀಮಂತಳಾದ ಸೂಳೆಮನೆಯೊಂದರಲ್ಲಿ ಕನ್ನಡವನ್ನೂ ತುಳುವನ್ನೂ ಮಾತನಾಡುವ ರಾಧೆ ಕಣ್ಣಿಗೆ ಬಿದ್ದಳು. ಶಾಸ್ತ್ರಿಗಳಿಗೆ ಇಪ್ಪತ್ತೈದು ವರ್ಷವಾದರೆ ಅವಳಿಗಿನ್ನೂ ಹದಿನೇಳೋ ಹದಿನೆಂಟೋ ಇರಬಹುದು. ‘ನಿಮ್ಮ ಕಡೆಯದೇ ಒಂದು ಹೈಸ್ಕೂಲು ಓದುವ ಹುಡುಗಿ’ ಎಂದು ಸದ್ಗೃಹಸ್ಥನಂತೆ ಸಿಲ್ಕಿನ ಪಂಚೆಯುಟ್ಟು ಸಿಲ್ಕಿನ ಧೋತ್ರ ಹೊದೆದ ತಲೆಹಿಡುಕನೊಬ್ಬ ಶಿಫಾರಸು ಮಾಡಿದ ಕರೆದುಕೊಂಡು ಹೋಗಿದ್ದ.

ಈ ರಾಧೆ ಹಾರಿಸಿಕೊಂಡು ಬಂದ ಶಿವಮೊಗ್ಗೆಯ ಹತ್ತಿರದ ಹಳ್ಳಿಯ ಬಡವರ ಮನೆಯ ಹುಡುಗಿ ಎಂದು ತಿಳಿಯಿತು. ಅಷ್ಟೊಂದು ಲಂಪಟನೂ, ಹೆಣ್ಣಿನ ಬಗ್ಗೆ ಕ್ರೂರವಾದ ಆಸೆಗಳನ್ನು ಪಡೆದವನೂ ಆದ ತನಗೆ ರಾಧೆ ಬಗ್ಗೆ ಹುಟ್ಟಿದ ಅಕ್ಕರೆ ತನಗೇ ವಿಚಿತ್ರವಾಗಿ ಕಂಡಿತ್ತು. ಅವಳನ್ನು ಕೊಂಡ ಯಜಮಾನಿ ಚತುರೋಪಾಯಗಳಲ್ಲಿ ಮೂರಾದ ಸಾಮ, ಭೇದ, ದಂಡಗಳಿಗೂ ಜಗ್ಗದಿದ್ದಾಗ ಇನ್ನೊಂದನ್ನು ಅವಳ ನಿರೀಕ್ಷೆಗೆ ಮೀರುವಷ್ಟು ಬಳಸಿ, ಅವಳಿಗೆ ರಾಧೆಯನ್ನು ಪಡೆಯಲು ಖರ್ಚಾದ್ದರ ನಾಲ್ಕರಷ್ಟು ಹಣ ಕೊಟ್ಟು, ಹುಡುಗಿಯನ್ನು ಕೊಂಡು ಕೃತಜ್ಞಳಾದ ಹುಡುಗಿಯನ್ನು ತನ್ನ ಹೋಟೆಲಿಗೆ ತಂದರು. ತನ್ನ ಹೆಣ್ಣೆಂದು ಒಂದು ರೂಮಲ್ಲಿ ಇಟ್ಟುಕೊಂಡರು. ಇಸ್ಪೀಟು ಜೂಜು ಎಂದು ಅಲೆಯುತ್ತಿದ್ದವರು ಅವಳ ಮೇಲೆ ಕಣ್ಣಿಟ್ಟು ಕಾಪಾಡಲು ತೊಡಗಿದರು.

ಅಣ್ಣನಿಗೆ ಆರೋಗ್ಯ ಸರಿಯಿಲ್ಲವೆಂದು ಇದ್ದಕ್ಕಿದ್ದಂತೆ ತಾರು ಬಂದಾಗ ಅವಳನ್ನೂ ಕರೆದುಕೊಂಡು ಹೊರಟರು. ಅವಳನ್ನು ಜೋಪಾನವಾಗಿ ಕಾಪಾಡಿ ಎಂದು ತನಗೆ ಗೊತ್ತಿದ್ದ ಮಂಗಳೂರಿನ ಹೋಟೆಲೊಂದರಲ್ಲಿ ಇರಿಸಿ, ಹಳ್ಳಿಗೆ ಬಂದರು. ಅಣ್ಣನ ಸಂಸ್ಕಾರಕ್ಕೆಂದು ಹತ್ತಿರದ ಬಂಧುಗಳು ತನಗಾಗಿ ಕಾದಿದ್ದರು.

ಉಸಿರಾಡಲೆಂದು ಸದಾ ತೆರೆದುಕೊಂಡಿರುತ್ತಿದ್ದ ಅಣ್ಣನ ಬಾಯಿ ಮುಚ್ಚಿತ್ತು. ಮೂಗಿನ ಸುತ್ತ ನೊಣಗಳು ಕೂತಿದ್ದವು. ಎಷ್ಟೊಂದು ಸಾರಿ ಅಣ್ಣನ ಈ ಚೂಪಾದ ಮೂಗನ್ನು ಚಚ್ಚ ಬೇಕೆನ್ನುವಷ್ಟು ರೋಷ ಉಕ್ಕಿದೆ ತನ್ನಲ್ಲಿ ಎಂದು ನೆನೆದರು. ಹೀಗೆನ್ನಿಸಿ, ಅಣ್ಣನ ಶವ ಕಂಡಾಗಲೂ ತನ್ನ ಕಣ್ಣಿನಲ್ಲಿ ನೀರು ಬಂದಿರಲಿಲ್ಲ. ಅಷ್ಟು ಕ್ರೂರವಾದ ಮಾತುಗಳನ್ನು ಒಬ್ಬರಿಗೊಬ್ಬರು ಆಡಿಕೊಂಡಿದ್ದರು. ಅಣ್ಣ ನಿರ್ಬೀಜ, ಜುಗ್ಗ, ಸದಾ ಕರೆಕರೆಯಲ್ಲಿರುವ ರೋಗಗ್ರಸ್ತ. ಈಗ ಯೋಚಿಸಿದರೆ ತಮ್ಮದು ಒಂದು ಶಾಪಗ್ರಸ್ತ ಕುಟುಂಬವೆಂದು ಶಾಸ್ತ್ರಿಗಳಿಗೆ ಅನ್ನಿಸುತ್ತದೆ. ಅವರು ತನ್ನ ತಾಯಿಯ ಪ್ರೀತಿ ಕಂಡಿರಲಿಲ್ಲ. ಚಿಕ್ಕ ವಯಸ್ಸಲ್ಲೆ ಶಾಸ್ತ್ರಿಗಳಿಗೆ ಜನ್ಮವಿತ್ತು ತಾಯಿ ಸತ್ತದ್ದರಿಂದ ಅವರ ತಂದೆ ಮತ್ತೊಂದು ಮದುವೆಯಾಗಿದ್ದರು. ಅದೂ ಇಳಿ ವಯಸ್ಸಿನಲ್ಲಿ. ಅವರ ಚಿಕ್ಕತಾಯಿ ತಾನೊಬ್ಬ ಶಾಪಗ್ರಸ್ತೆಯೆಂದೇ ತಿಳಿದು ಎಲ್ಲರನ್ನೂ ಹಿಂಸಿಸುತ್ತ ಬದುಕಿ ತೋಟದಲ್ಲಿ ನಾಗರ ಹಾವು ಕಚ್ಚಿ ಸತ್ತಿದ್ದರು. ಅವರ ಅಪ್ಪ ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡು ಸತ್ತಿದ್ದರು. ಅಣ್ಣನ ಹೆಂಡತಿ ನ್ಯುಮೋನಿಯಾ ಆಗೆ ಸತ್ತಿದ್ದಳು. ಈಗ ಅಣ್ಣ ಎಕಾಂಗಿಯಾಗಿ, ಜುಗ್ಗನಾಗಿ ಬದುಕಿ, ಹಳೆಮನೆಯ ಮೂಲೆ ಮೂಲೆಯಲ್ಲೂ ಪೂರ್ವಿಕರು ಹುಗಿದಿದ್ದಿರಬಹುದಾದ ಬಂಗಾರಕ್ಕಾಗಿ ಅಗೆದು, ಹುಡುಕಿ, ಸತ್ತಿದ್ದ.

ಆದರೆ ಮನೆಯಲ್ಲಿ ಹಿರಿಯರು ಮಾಡಿಟ್ಟ ಆಸ್ತಿ ದಂಡಿಯಾಗಿತ್ತು. ಒಂದು ಟ್ರಂಕಿನ ತುಂಬ ಬಂಗಾರವಿತ್ತು. ಯಾರೋ ಪೂರ್ವಿಕರು ವಿಜಯನಗರ ಸಾಮ್ರಾಜ್ಯದ ಅವನತಿ ಕಾಲದಲ್ಲಿ ಕೊಳ್ಳೆ ಹೊಡೆದದ್ದು ಅದು ಎಂದು ಪ್ರತೀತಿ. ಮನೆಯನ್ನೆಲ್ಲ ಅಗೆದು ನೋಡಿಯಾದ ಮೇಲೆ ಮನೆಯ ಹಿಂದಿನ ತೋಟದಲ್ಲಿ ಎಲ್ಲೋ ಇನ್ನಷ್ಟು ಹುಗಿದ ಬಂಗಾರವಿದೆ ಎಂದು ನಂಬಿ ಅವರ ಅಣ್ಣ ಎಲ್ಲೆಲ್ಲೋ ಅಗೆಸಿ ಹುಡುಕುತ್ತಲೇ ತನ್ನ ಆಯುಷ್ಯ ಸವೆಸಿ ಸತ್ತಿದ್ದ.

ಈಗ ಇಡೀ ಆಸ್ತಿಗೆ ಶಾಸ್ತ್ರಿ ಹಕ್ಕುದಾರರಾದರು. ಅಣ್ಣನ ಸಂಸ್ಕಾರ ಮುಗಿಸಿ, ಟ್ರಂಕಿನಲ್ಲಿದ್ದ ಬಂಗಾರವನ್ನು ತಿಜೋರಿ ತೆಗೆದು ನೋಡಿ, ‘ಅಣ್ಣ ಪೋಲು ಮಾಡಲಿಲ್ಲವಲ್ಲ’ ಎಂದು ಸಂತೋಷಪಟ್ಟಿದ್ದರು. ತನ್ನ ಅರಗಿಣಿ ರಾಧೆಯನ್ನು ಹೋಟೆಲಿಂದ ಕರೆದು ತಂದು ತನ್ನ ಆಸ್ತಿಗೆ ಐದು ಮೈಲಿ ದೂರದಲ್ಲಿ ನದಿಯ ದಂಡೆಯೊಂದರ ಮೇಲಿದ್ದ ತೋಟದಲ್ಲಿ ಒಂದು ಗುಡಿಸಲು ಕಟ್ಟಿಸಿ ಇಳಿಸಿದ್ದರು. ಅವಳನ್ನು ಕಾಯುವುದಕ್ಕೆ ನಂಬಿಕಸ್ತರಾದವರನ್ನು ಹುಡುಕುತ್ತಿದ್ದಾಗ ರಾಧೆ ತನ್ನ ಚಿಕ್ಕಮ್ಮನೊಬ್ಬಳು ಶಿವಮೊಗ್ಗದಲ್ಲಿ ಇರುವುದಾಗಿ ಹೇಳಿದಳು. ಅವಳಿಗೊಬ್ಬ ಗಂಡನೂ ಇದ್ದ. ಅವನು ಟೈಲರಾಗಿದ್ದ. ಚನ್ನಗಿರಿಯಲ್ಲಿ ಇಟ್ಟುಕೊಂಡ ಸಾಹುಕಾರನಿಗೆ ಮುದುಕಿಯಾಗಿ ಬೇಡವಾಗಿಬಿಟ್ಟಿದ್ದ ಅವಳ ತಾಯಿಯನ್ನೂ ಮತ್ತು ಅವಳ ಶಿವಮೊಗ್ಗದ ಮರ್ಯ್ಯಾದಸ್ಥ ಬಳಗವನ್ನೂ ಹುಡುಕಿ ಶಾಸ್ತ್ರಿಗಳು ಕರೆದುಕೊಂಡು ತೋಟದ ಬಳಿಯಲ್ಲೊಂದು ಹೆಂಚಿನ ಮನೆ ಕಟ್ಟಿಸಿದ್ದರು. ಚಿಕ್ಕಮ್ಮನ ಗಂಡ ಟೈಲರಿಗೆ ಹತ್ತಿರದ ಪೇಟೆಯಲ್ಲಿ ಒಂದು ಬಟ್ಟೆಯಂಗಡಿ ತೆಗೆಸಿಕೊಟ್ಟಿದ್ದರು.

ಕಗ್ಗಾಡಿನಲ್ಲಿದ್ದ ಶಾಸ್ತ್ರಿಗಳ ತೋಟದ ಮನೆಗೆ ಸ್ವಜಾತಿಯ ನೆರೆಹೊರೆಯಿಲ್ಲ. ದೂರದಲ್ಲಿದ್ದ ಬಂಧು ಬಳಗ ಯಾವತ್ತೂ ದೂರವಿದ್ದವರೇ. ಮನೆಯಲ್ಲಿ ಶ್ರಾದ್ಧವಾದಾಗ ನಿರ್ವಾಹವಿಲ್ಲದೆ ಬರುವವರು ಬಿಟ್ಟರೆ, ಜಾತಿಯ ಒಂದೇ ಒಂದು ನರಪಿಳ್ಳೆ ಮನೆಯ ಹತ್ತಿರ ಸುಳಿಯದು. ಆದ್ದರಿಂದ ಶಾಸ್ತ್ರಿಗಳು ನಿರ್ಭೀತರಾಗಿ ರಾಧೆಯ ಜೊತೆ ಸಂಬಂಧವಿಟ್ಟುಕೊಂಡರು. ಒಂದು ಹಳೆಯ ಅರಿವೆ ಟಾಪಿನ ಫೋರ್ಡ್ ಕಾರನ್ನು ಕೊಂಡು, ಪೈಜಾಮದ ಬದಲು ಕಚ್ಚೆ ಪಂಚೆಯುಟ್ಟು ಮೇಲೊಂದು ಶರ್ಟನ್ನು ಹಾಕಿಕೊಂಡು, ಪಂಪ್ ಶೂ ಧರಿಸಿ, ಎತ್ತಿನ ಬಂಡಿಯ ದಾರಿಯಲ್ಲಿ ಅದನ್ನು ನಡೆಸಾಡುತ್ತಾ ಬಂಧು ಬಳಗದಿಂದ ಇನ್ನಷ್ಟು ದೂರವಾಗಿದ್ದರು.

ಹೀಗೆ ಎರಡು ವರ್ಷ ಕಳೆದಿತ್ತು. ರಾಧೆ ಪೀದಿಸತೊಡಗಿದ್ದಳು: “ನಾನು ಎಷ್ಟೆಂದರೂ ನೀವು ಇಟ್ಟುಕೊಂಡವಳು. ನೀವು ಮದುವೆಯಾಗಲೇ ಬೇಕು” ಎಂದು. ರಾಧೆಯಲ್ಲಿ ಅವಳಿಗೆ ಮಕ್ಕಳಾಗಿರಲಿಲ್ಲ. ಶಾಸ್ತ್ರಿಗಳಿಗೆ ಅದೊಂದು ಚಿಂತೆಯಾಗಿತ್ತು: ‘ಈ ಶಾಪಗ್ರಸ್ತ ಕುಟುಂಬದ ತಾನೂ ನಿರ್ಬೀಜನೆ?’ ಎಂದು. ‘ಅದು ನನ್ನ ಹಣೆ ಬರಹ. ನೀವು ಮದುವೆಯಾಗಿ ನೋಡಿ’ ಎಂದು ರಾಧೆ ಗಂಟುಬಿದ್ದಿದ್ದಳು.

ಶಾಸ್ತ್ರಿಗಳು ಅವರ ಅನುಭವದಲ್ಲಿ ರಾಧೆಯಂತಹ ಇನ್ನೊಂದು ಜೀವವನ್ನು ಕಂಡಿರಲಿಲ್ಲ. ಅವಳಿಗೆ ಆಸೆ ಇಲ್ಲವೆಂದಲ್ಲ. ಆದರೆ ಅವಳ ಆಸೆ ಸಂಸಾರದ ಮಿತಿಯಲ್ಲಿತ್ತು. ಗಂಜಿಗೆ ತೆಂಗಿನ ಹಾಲೂ, ಮಾವಿನ ಮಿಡಿಯ ಉಪ್ಪಿನ ಕಾಯಿಯೂ ಸಿಕ್ಕಂತಾಯಿತಲ್ಲ ಎಂದೇ ಅವಳಿಗೆ ಸಂತೋಷ. ಸದಾ ಉರಿದಾಡಿಕೊಂಡು ರೋಷದಲ್ಲೇ ಓಡಾಡುವ ಶಾಸ್ತ್ರಿಗಳು, ಬಾಯಿಯನ್ನು ಮುದ್ದಾಗಿ ತೆರೆದು ಮುದ್ದಾಗಿ ಮಾತಾಡುವ ರಾಧೆಯಿಂದ ಮೋಹಿತರಾಗಿ ಅವಳ ಬಳಿ ಮಾತ್ರ ಮೃದುವಾಗುವರು. ಅವಳ ಒತ್ತಾಯಕ್ಕೆ ಇಲ್ಲವೆನ್ನಲಾರದೆ, ತನಗೆ ಮಗುವಾಗಬಹುದೋ ಎಂಬ ಕುತೂಹಲದಿಂದಲೂ ಹೆಣ್ಣು ಹುಡುಕಲು ಶುರು ಮಾಡಿದರು.

ಹತ್ತಿರದ ಯಾರೂ ಈ ಶ್ರೀಮಂತ ಶಾಪಗ್ರಸ್ತ ಮನೆಗೆ ಹೆಣ್ಣು ಕೊಡಲು ಮುಂದಾಗಲಿಲ್ಲ. ಏನೋ ಜಾತಕದ ನೆವ ಹೇಳಿ ಅಗುವುದಿಲ್ಲ ಎಂದು ಬಿಡುವರು. ಅಲ್ಲದೆ, ಮದುವೆ ಮಾಡಿಸುವ ಯಾವ ಹಿರಿಯರೂ ಶಾಸ್ತ್ರಿಗಳಿಗೆ ಆಪ್ತರಾಗಿ ಉಳಿದಿರಲಿಲ್ಲ. ತಾನೇ ಸ್ವತಃ ಹೋಗಿ ಹೆಣ್ಣು ಕೇಳುವವರನ್ನು ಯಾರೂ ಗೌರವಿಸುತ್ತಾರೆ? ಕೊನೆಗೆ ಚಿಕ್ಕಮಗಳೂರಿನ ಹಳ್ಳಿಯೊಂದರಲ್ಲಿ ಬಡ ಕುಟುಂಬದ ಹೆಣ್ಣೊಂದು ಇದೆಯೆಂದು ಗೊತ್ತಾಯಿತು.

ಮೈಮೇಲೆ ಜರಿಯ ಶಲ್ಯ ಹೊದ್ದು, ಕಚ್ಚೆ ಕಾಕಿದ ಪಂಚೆಯುಟ್ಟು, ತಲೆಗೆ ಮೈಸೂರಿವನರ ಥರ ಪೇಟ ಕಟ್ಟಿಕೊಂಡು ವಿಭೂತಿ, ಕುಂಕುಮ ಧರಿಸಿ ಆಚಾರವಂತರಂತೆ ಕಾಣುತ್ತ ಶಾಸ್ತ್ರಿಗಳು ಹೆಣ್ಣು ಕೇಳಲು ಹೋದರು. ಎಂಟು ಹೆಣ್ಣುಗಳನ್ನು ಹೆತ್ತು ಮೊದಲನೆಯವಳು ಮದುವೆಯಾದರೆ ಸಾಕೆಂದು ಹಾತೊರೆಯುತ್ತಿದ್ದ ಹುಡುಗಿಯ ತಾಯಿ ತಂದೆಯರು ಭಾವೀ ಅಳಿಯನ ಶ್ರೀಮಂತಿಕೆ, ಅವನ ಕುಲ, ಅವನ ಗೋತ್ರ, ಅವನ ಜಾತಕ ನೋಡಿ, ಮತ್ತೇನು ಬೇರೆ ಏನಾದರೂ ತಿಳಿಯಬೇಕೆಂದೂ ಕುತೂಹಲ ಕೂಡ ಪಡದೆ ಸರೋಜಳನ್ನು ಮದುವೆ ಮಾಡಿಕೊಡಲು ಸಮ್ಮತಿಸಿದ್ದರು.

ಸರೋಜ ಸ್ಫುರದ್ರೂಪಿಯಾದ ಹುಡುಗಿ. ದಿವ್ಯ ನಿರ್ಲಕ್ಷ್ಯದ ಅಗಲವಾದ ಕಣ್ಣುಗಳುಳ್ಳ ಸರೋಜ ತನಗೇನು ಬೇಕು ಬೇಡ ಹೇಳದೆ ಮದುವೆಯಾಗಿದ್ದಳು. ಅವಳಿಗೆ ಪುಸ್ತಕಗಳನ್ನು ಓದುವುದರಲ್ಲಿ ಆಸಕ್ತಿಯಿದೆ; ಸೊಗಸಾಗಿ ಭಾರತ ವಾಚನ ಮಾಡುತ್ತಾಳೆಂಬುದು ಶಾಸ್ತ್ರಿಗಳಿಗೆ ಮೊದಲಿಗೆ ಹೆಮ್ಮೆಯ ವಿಷಯವಾಗಿತ್ತು. ಹುಡುಗಿಯ ವಿದ್ಯಾಸಂಪನ್ನತೆ ಕೇಳಿ ರಾಧೆಯೂ ಸಂತೋಷಪಟ್ಟಿದ್ದಳು.

ಪ್ರೀತಿ ಇಲ್ಲದ ಗಂಡಿನ ಕಡೆಯ ದಿಬ್ಬಣದಲ್ಲಿ ಅವಳೊಬ್ಬಳೇ ಪ್ರೀತಿಯುಳ್ಳವಳಾಗಿ ಸಾಕ್ಷಾತ್ ಗೌರಿಯಂತೆ ಸಿಂಗರಿಸಿಕೊಂಡು ಬಳಗದವಳಾಗಿ ಮದುವೆಗೂ ಬಂದಿದ್ದಳು. ಶ್ರೀಮಂತರಾದ ಶಾಸ್ತ್ರಿಗಳ ಈ ಸಂಬಂಧ ಸರೋಜಳ ತಾಯಿ ತಂದೆಯ ಕಿವಿಗೂ ಬಿದ್ದಿರಲಿಲ್ಲವೆಂದಲ್ಲ. ಆದರೆ ಅದನ್ನು ನಂಬದಂತೆ ಅವರು ನಟಿಸಿದ್ದರು. ರಾಧೆಗೆ ಮದುವೆ ಮನೆಯಲ್ಲಿ ಎಲ್ಲಿ ಊಟಕ್ಕೆ ಹಾಕಬೇಕೆಂಬುದು ಮಾತ್ರ ಅವರಿಗೆ ಸಮಸ್ಯೆಯಾಗಿತ್ತು. ಶಾಸ್ತ್ರಿಗಳು ಮಾಡಿಕೊಟ್ಟ ತೋಟದ ಫಸಲಿನಿಂದ ಬಂದ ಇಡೀ ವರ್ಷದ ಉಳಿತಾಯವನ್ನು ಬಳಸಿ ಅವಳು ವಧುವಿಗೆ ಸೀರೆಯನ್ನೂ, ಮಂಗಳೂರಿನ ಹೆಸರಾಂತ ಅಕ್ಕಸಾಲಿಗರು ಮಾಡಿಕೊಟ್ಟ ಹವಳ ಜೋಡಿಸಿದ ಬಂಗಾರದ ಬಳೆಗಳನ್ನೂ ಖರೀದಿಸಿದ್ದಳು. ಶಾಸ್ತ್ರಿಗಳ ಪರವಾಗಿ ಅವಳಲ್ಲದೆ, ಬೇರೆ ಯಾರೂ ಇ ಮದುವೆಯಲ್ಲಿ ಸಂಭ್ರಮಿಸಿರಲಿಲ್ಲ; ಉಡುಗೊರೆಯನ್ನೂ ಕೊಡಲಿಲ್ಲ. ಎಂಟು ಹೆಣ್ಣು ಹೆತ್ತು ಸೊರಗಿದ ಸರೋಜಳ ತಾಯಿ ತಂದೆಯರು ರಾಧೆಯ ಅಕ್ಕರೆಯಿಂದಲೂ, ಅದ್ದೂರಿಯ ಉಡುಗೊರೆಯಿಂದಲೂ, ತಮ್ಮ ಮಗಳಿಗೆ ಚಿಂತೆಯಿಲ್ಲವೆಂದು ಸಮಾಧಾನ ಪಟ್ಟಿದ್ದರು.

ಹತ್ತಿರದ ಬಂಧುಗಳಿಗೆಲ್ಲ ಅವರು ಹೇಳುತ್ತಿದ್ದುದು ಹೀಗೆ – “ನನ್ನ ಅಳಿಯ ಕಾರಿಟ್ಟಿದ್ದಾನೆ. ಬೊಂಬಾಯಿಯಲ್ಲಿ ಹೋಟಲಿದೆಯಂತೆ. ಯಾರೋ ಅದನ್ನು ನೋಡಿಕೊಂಡು ಪ್ರತಿ ತಿಂಗಳು ಕ್ಯಾಶನ್ನು ಕಳಿಸುತ್ತಾರಂತೆ. ನೂರಾರು ಎಕರೆ ತೋಟದ ಮಾಲೀಕರು ನನ್ನ ಅಳಿಯ. ಮುಖ್ಯವೆಂದರೆ ನನ್ನ ಮಗಳಿಗೆ ಅತ್ತೆಯೂ ಇಲ್ಲ, ಮಾವನೂ ಇಲ್ಲ. ಎಲ್ಲ ಅವಳದೇ ವಹಿವಾಟು”.

ಮನೆ ತುಂಬಿಸಿಕೊಂಡದ್ದಾಯಿತು. ಬೀಗರು ಹೋದದ್ದಾಯಿತು. ಶಾಸ್ತ್ರಿಗಳು ಈಗಲೂ ನೆನೆಯುತ್ತಾರೆ:

ಅಷ್ಟೊಂದು ಲಕ್ಷಣವತಿಯಾದ ಹೆಂಡತಿ ತನ್ನನ್ನು ಮುಖವೆತ್ತಿ ನೋಡಿರಲಿಲ್ಲ. ಅದಕ್ಕೆ ಕಾರಣ ನಾಚಿಕೆಯಲ್ಲ. ತಾನೆಂದರೆ ಸಸಾರ ಎನ್ನುವುದು ಹೊಳೆಯಿತು. ಸರಸದಲ್ಲಿ ಕೈಹಿಡಿದರೆ ಕಲ್ಲಿನ ಗೊಂಬೆಯಂತೆ ನಿಲ್ಲುವಳು. ಅವಳ ಕಣ್ಣುಗಳ ದೃಷ್ಟಿ ತನ್ನ ದೃಷ್ಟಿಯನ್ನು ಕೂಡಿದ್ದೇ ನೆನಪಿಲ್ಲ. ಏನನ್ನೂ ನೋಡದಂತೆ, ಅವಳ ನಿರ್ಲಿಪ್ತ ಕಣ್ಣುಗಳು ಓಡಾಡುವವು.

ಶಾಸ್ತ್ರಿಗಳು ಬೈದರು, ಹೊಡೆದರು. ಆದರೆ ಸರೋಜಳ ನಿರ್ಲಕ್ಷ್ಯ ಬದಲಾಗಲಿಲ್ಲ. ಪಕ್ಕದಲ್ಲಿ ಮಲಗುವಳು – ತನ್ನ ಕರ್ತವ್ಯವೆಂಬಂತೆ ಗಂಡನ ಜೊತೆ ಕೂಡುವಳು. ಆದರೆ ಅವರಿಂದ ಯಾವ ಫಲವೂ ದೊರೆಯಲಿಲ್ಲ.

ಐದು ವರ್ಷಗಳಾದರೂ ಅವಳು ಗರ್ಭವತಿಯಾಗಿರಲಿಲ್ಲ. ರಾಧೆ ಏನೇನೊ ಮದ್ದು ಮಾಡಿಕೊಟ್ಟಳು. ಹೆಂಡತಿಯನ್ನು ಶಯ್ಯೆಯಲ್ಲಿ ಒಲಿಸಿಕೊಳ್ಳುವುದು ಹೇಗೆಂದು ಕಲಿಸಿಕೊಟ್ಟಳು. ಆದರೆ ಶಾಸ್ತ್ರಿಗಳು ಕಲಿತು ಉಪಯೋಗಿಸುತ್ತಿದ್ದ ಯಾವ ಕಾಮಕಲೆಯೂ ಸರೋಜಳನ್ನು ಸಡಿಸಲಿಲ್ಲ. ಬದಲಾಗಿ ಹೇಸುವಳು. ಕಾಮಕೇಳಿ ಮುಗಿದದ್ದೇ ಬಚ್ಚಲಿಗೆ ಹೋಗಿ ತಲಿಗೂ ಸ್ನಾನ ಮಾಡಿ ಬಂದು. ಒದ್ದೆ ತಲೆಯಲ್ಲೇ ಮಲಗಿ ಬಿಡುವಳು. ಶಾಸ್ತ್ರಿಗಳು ತಮ್ಮ ರೋಷವನ್ನು ಕಳೆದುಕೊಳ್ಳಲು ರಾಧೆಯ ಮನೆಗೆ ಕಾರು ಬಿಟ್ಟುಕೊಂಡು ನಡುರಾತ್ರೆಯಲ್ಲೇ ಹೋಗಿಬಿಡುವರು.

ಆಶ್ಚರ್ಯವೆಂದರೆ ರಾಧೆಯ ಜೊತೆ ಮಾತ್ರ ಸರೋಜ ಎಷ್ಟು ಬೇಕೋ ಅಷ್ಟು ವಿಶ್ವಾಸದಲ್ಲಿ, ಆದರೆ ಸಲಿಗೆಯಿಲ್ಲದಂತೆ ಇರುವಳು. ರಾಧೆಗೆ ಓದುವುದರಲ್ಲಿ ಖುಷಿಯಿದ್ದುದರಿಂದ ತಾನು ತರಿಸಿಕೊಂಡ ಕಥೆ ಪುಸ್ತಕಗಳನ್ನು ರಾಧೆಗೆ ಕಳಿಸುವಳು. ರಾಧೆ ತಾನು ಬೆಳೆದ ಮಲ್ಲಿಗೆಯನ್ನು ಬಾಳೆಯ ನಾರಿನಲ್ಲಿ ಸುಂದರವಾಗಿ ಹೆಣೆದು ಮುಡಿಯಲು ಸರೋಜಳಿಗೆ ಕಳಿಸುವಳು. ಸರೋಜ ಮೊದಲು ಅದನ್ನು ತಾನು ಪೂಜಿಸುವ ಶಾರದೆಗೆ ಮುಡಿಸಿ ತನ್ನ ಹೆರಳಿಗೆ ಸಿಕ್ಕಿಸಿಕೊಳ್ಳುವಳು.

ರಾಧೆ ಮನೆಗೆ ಬರುವುದುಂಟು – ಬಾಳೆಲೆ ಬೇಕೆಂದೋ, ಹಗ್ಗ ಬೇಕೆಂದೋ ಅಥವಾ ರಂಗೋಲೆ ಪುಡಿ ಬೇಕೆಂದೋ ನೆವ ಮಾಡಿಕೊಂಡು. ಬರುವಾಗ ತಾನೇ ಕುಟ್ಟಿ ತಯಾರಿಸಿದ ಅವಲಕ್ಕಿಯನ್ನೊ, ಹಿತ್ತಲಿನಲ್ಲಿ ಬೆಳೆದ ತೊಂಡೆಯನ್ನೊ ತರುವಳು. ಅವಳನ್ನು ಬಹುವಚನದಲ್ಲಿ ‘ಒಳಗೆ ಬನ್ನಿ’ ಎಂದು ಸರೋಜ ಸತ್ಕರಿಸಿ ಕಾಫಿ ಮಾಡಿಕೊಡುವಳು. ಆದರೆ ಎಷ್ಟು ಬೇಕೋ ಅಷ್ಟು ಮಾತು. ಸಲಿಗೆ ಬೆಳೆಯಲೇ ಇಲ್ಲ. ಒಬ್ಬರನ್ನೊಬ್ಬರು ಹೆಸರು ಕರೆದದ್ದೇ ಇಲ್ಲ. ರಾಧೆ ಬಂದಾಗ ಶಾಸ್ತ್ರಿಗಳು ಮನೆಯಲ್ಲಿ ಇದ್ದರೆ ಸೀದಾ ತನ್ನ ಕಾರು ನಿಲ್ಲಿಸಿದಲ್ಲಿಗೆ ಹೋಗಿ ಜವಾನನನ್ನು ಕರೆದು ಅದನ್ನು ತೊಳೆಸಲು ತೊಡಗಿಸುವರು. ರಾಧೆ ಹೆಚ್ಚು ಕಾಲವಿದ್ದು ಬಿಟ್ಟರೆ ಹಳ್ಳಿಯ ದಾರಿಯಲ್ಲಿ ಓಡಾಡುವ ಕಾರು ಒಂದು ದೂಳಿನ ಕಣವೂ ಇಲ್ಲದ ದೇವತಾ ವಿಗ್ರಹದಂತೆ ಮಿಂದು ಮಡಿಯಾಗಿ ಬಿಡುವುದು.