ಈ ನಡುವೆ ಶಾಸ್ತ್ರಿಗಳ ಇಡೀ ಬದುಕನ್ನೇ ಬುಡಮೇಲು ಮಾಡುವಂತಹ ಒಂದು ಘಟನೆ ನಡೆಯಿತು. ಕನ್ನಡ ಮಾತಾಡಬಲ್ಲ ಮಲಯಾಳಿಯೊಬ್ಬ ಉಡುಪಿಯಲ್ಲಿ ಒಂದು ಆಯುರ್ವೇದದ ಶಾಪು ತೆರೆದ. ಕರುಣಾಕರ ಪಂಡಿತ ಎಂದು ಅವನ ಹೆಸರು. ಶಾಸ್ತ್ರಿಗಳಷ್ಟೇ ವಯಸ್ಸಿನ ಅವನು ಅವನ ಮುಖದ ಕಳೆಯನ್ನು ಹೆಚ್ಚುಮಾಡುವಂತಹ ಗಡ್ಡ ಮೀಸೆಗಳನ್ನು ಬಿಟ್ಟಿದ್ದ. ತಲೆಗೂದಲನ್ನು ಕತ್ತರಿಸದೆ ಅದನ್ನು ಗಂಟುಹಾಕಿ ಕಟ್ಟುತ್ತಿದ್ದ. ಹಣೆಯ ಮೇಲೆ ಗಂಧದ ಬೊಟ್ಟು ಇಟ್ಟಿರುತ್ತಿದ್ದ. ಸೌಮ್ಯವಾದ ಲಕ್ಷಣವಾದ ಮುಖ ಅವನದು. ಅವನ ಹತ್ತಿರ ತನ್ನದಕ್ಕಿಂತ ಚೆನ್ನಾದ ಕಾರು ಇತ್ತು. ಅವನ ಉಡುಪು, ಅವನ ಹಾವ ಭಾವ ನೋಡಿದರೆ ತುಂಬ ಅನುಕೂಲವಂತನಂತೆಯೂ ಕಾಣುತ್ತಿದ್ದ. ಶಾಸ್ತ್ರಿಗಳು ಕಲಿತದ್ದಕ್ಕಿಂತ ಒಳ್ಳೆಯ ಹಿಂದಿ ಅವನಿಗೆ ಬರುತ್ತಿತ್ತು. ಇಂಗ್ಲಿಷ್ ಕೂಡ ಬರುತ್ತಿತ್ತು – ಆಧುನಿಕ ಅಲೋಪತಿಯ ವೈದ್ಯಕ್ರಮವೂ ಆತನಿಗೆ ಗೊತ್ತು. ಸಂಸ್ಕೃತವೊ – ಅವನಿಗೆ ನೀರು ಕುಡಿದಂತೆ.

‘ನೀವಿಟ್ಟ ಕಾರು ಯಾವ ಮಾಡೆಲು’ ಎಂದು ಕೇಳಲು ಹೋಗಿ, ವೀರ್ಯವರ್ಧಕ ಲೇಹ್ಯಗಳನ್ನು ಗುಪ್ತ ಸಮಾಲೋಚನೆಯಲ್ಲಿ ಪಡೆಯುವುದರಲ್ಲಿ ಈ ಪರಿಚಯ ಬೆಳೆದು, ಇಬ್ಬರೂ ಸ್ನೇಹಿತರಾದರು. ಒಮ್ಮೆ ಅವನನ್ನು ಮನೆಗೆ ಊಟಕ್ಕೆಂದು ಕರೆದುಕೊಂಡು ಹೋದರು.

ಮನೆಯನ್ನು ಹೊಕ್ಕವನೇ ಅವನು ಸುತ್ತು ಮುತ್ತಲೂ ನೋಡಿ ಚಿಂತಿಸುತ್ತ ನಿಂತ. ಅವನ ಕಣ್ಣುಗಳು ಗಂಭೀರವಾಗಿ ಧ್ಯಾನಸ್ಥವಾದುದನ್ನು ಕಂಡು, ಚಿಂತೆಯಾಗಿ ಸಿಗರೇಟು ಹಚ್ಚಿದ ಶಾಸ್ತ್ರಿಗಳು ವಿನಯದಲ್ಲಿ ಅವನೆದುರು ನಿಂತರು. ಸೋಫಾ ತೋರಿಸಿ ಕೂರಿ ಎಂದರು. ಶಾಸ್ತ್ರಿಗಳು ಯಜಮಾನರಾದ ಕೂಡಲೇ ಮಂಗಳೂರಿನಿಂದ ತಂದ ಮೆತ್ತನೆಯ ಸೋಫಾದ ಮೇಲೆ ಕರುಣಾಕರ ಪಂಡಿತ ಕೂತ. ಇನ್ನೂ ತುಸು ಹೊತ್ತು ಕಣ್ಣು ಮುಚ್ಚಿದ್ದವನು ಹೆಬ್ಬರಳಿನಿಂದ ಉಳಿದ ಬೆರಳುಗಳನ್ನು ಅವುಗಳ ಸಂದಿಗಳಲ್ಲಿ ಮುಟ್ಟಿ ನೋಡುತ್ತ ಏನೋ ಜಪಿಸತೊಡಗಿದ. ಕಣ್ಣುಬಿಟ್ಟು ಶಾಸ್ತ್ರಿಗಳಿಗೆ,

“ಬೇಸರವಾಗದಿದ್ದರೆ ನಾನು ಏನೋ ಹೇಳುವುದಿದೆ. ನನಗೆ ಜ್ಯೋತಿಷ್ಯವೂ ಒಂದಿಷ್ಟು ಗೊತ್ತು. ನಮ್ಮ ಮನೆತನದ ಸಂಪ್ರದಾಯದಿಂದ ಕಲಿತದ್ದು” ಎಂದ.

ಶಾಸ್ತ್ರಿಗಳಿಗೆ ಅವನ ಬಗ್ಗೆ ಗೌರವ ಇಮ್ಮಡಿಯಾಯಿತು. ಭಕ್ತಿಯಿಂದ “ದಯಮಾಡಬೇಕು” ಎಂದರು.

“ಈ ಮನೆಯಲ್ಲಿ ಅನಿಷ್ಟವಿದೆ. ತಪ್ಪು ತಿಳಿಯಬೇಡಿ. ಪೂರ್ವಕಾಲದಲ್ಲಿ ಇಲ್ಲೊಂದು ಸ್ತ್ರೀಹತ್ಯೆ ನಡೆದಿದೆ. ಆದ್ದರಿಂದ ಇಲ್ಲಿ ಸಂತಾನವಿಲ್ಲ. ಇಲ್ಲಿ ಬದುಕುವವರಿಗೆ ಶಾಂತಿಯಿಲ್ಲ. ಕ್ಷುದ್ರ ಭೂತಗಳು ಇಲ್ಲಿ ಇರುವವರನ್ನು ಕವಿದುಬಿಡುತ್ತವೆ. ಇಲ್ಲಿ ಬಂದದ್ದೇ ನನ್ನ ಮಿದುಳಲ್ಲಿ ಕಿಡಿಕಾರುವ ಕಣ್ಣುಗಳೆರಡು ತೆರೆದಂತಾದವು. ಅವುಗಳನ್ನು ದಿಟ್ಟಿಸಲು ಇನ್ನೆರಡು ಕಣ್ಣುಗಳು ತೆರೆಯುತ್ತಿದ್ದಂತೆ ನಾನು ಜಪಮಾಡತೊಡಗಿದೆ….” ಎಂದು ಕರುಣಾಕರ ಪಂಡಿತ ಹೇಳಿದ್ದನ್ನು ಕೇಳಿ ಶಾಸ್ತ್ರಿಗಳು ಬೆಚ್ಚಿದರು.

“ಇಲ್ಲೊಂದು ತಾಂತ್ರಿಕ ಪೂಜೆ ನಡೆಯಬೇಕು. ಅದಕ್ಕೆ ದಂಪತಿಗಳಿಬ್ಬರೂ ಸಹಕರಿಸಬೇಕು. ಅಂದರೆ ನಿಮ್ಮನೆಯಾಕೆ ಬೆತ್ತಲೆಯಾಗಿ ಒಬ್ಬರೆ ಕೂತು ಪೂಜೆ ಮಾಡಬೇಕು – ಕೊನೆಯಲ್ಲಿ” ಎಂದು ಕರುಣಾಕರ ಪಂಡಿತ ರೋಗಿಗೆ ಔಷಧದ ಸೇವನಾಕ್ರಮ ಹೇಳುವಂತೆ ಹೇಳಿದ್ದ.

ಶಾಸ್ತ್ರಿಗಳು ನಿಟ್ಟುಸಿರು ಬಿಟ್ಟು, “ನೀವು ಮಾಡಿಸುತ್ತೀರ?” ಎಂದಿದ್ದರು. ಕರುಣಾಕರ ಪಂಡಿತ ‘ಆಗಬಹುದು’ ಎಂದು ಪಂಚಾಂಗ ನೋಡಿ ಶುಭ ದಿನ ಗೊತ್ತುಮಾಡಿದ್ದ. “ಈ ಪೂಜೆ ಗುಪ್ತವಾಗಿ ನಡೆಯತಕ್ಕದ್ದು” ಎಂದಿದ್ದ.