ಪೂಜೆ ಶುರುವಾಗುವುದಕ್ಕೆ ಮುಂಚೆ ಎಲ್ಲ ಸಿದ್ಧತೆಯೂ ನಡೆಯಿತು. ನಿರ್ಲಕ್ಷ್ಯದಲ್ಲಿ ಅಲೆಯುವ ಸರೋಜಳ ಕಣ್ಣುಗಳು ಕರುಣಾಕರ ಪಂಡಿತ ಪಟ್ಟೆಮುಡಿಯುಟ್ಟು ರಂಗೋಲೆಯನ್ನು ಕುಂಕುಮ ಅರಿಸಿನವನ್ನು ಬಳಸಿ ಮಂಡಳ ನಿರ್ಮಿಸುವುದನ್ನು ನೋಡುವುದರಲ್ಲಿ ತಲ್ಲೀನಗೊಂಡವು. ಅವನಿಗೆ ಶ್ರದ್ಧೆಯಿಂದ ಬತ್ತಿ ಹೊಸೆದುಕೊಟ್ಟಳು, ತೆಂಗಿನ ಸಿಪ್ಪೆ ಬಿಡಿಸಿಕೊಟ್ಟಳು. ಬೆಳಗಿದ ಚೊಂಬಿನಲ್ಲಿ ಶುಭ್ರವಾದ ಎಳ್ಳೆಣ್ಣೆ ತಂದುಕೊಟ್ಟಳು. ಇವನ್ನೆಲ್ಲ ಶಾಸ್ತ್ರಿಗಳು ಶುಭ ಚಿಹ್ನೆ ಎಂದು ಕಂಡು ಹರ್ಷಿತರಾದರು.

ಎಂದಿಲ್ಲದ ಗೆಲುವು ಸರೋಜಳಲ್ಲಿ ಮೂಡತೊಡಗಿತ್ತು. ಅವಳು ಅಡ್ಡಾದಿಡ್ಡಿಯಾಗಿ ತೆರೆಯುತ್ತಿದ್ದ ಬೈತಲೆ ನೇರವಾಯಿತು. ಮದುವೆಯಲ್ಲಿ ಕೊಟ್ಟ ಆಭರಣಗಳನ್ನೆಲ್ಲ ಧರಿಸತೊಡಗಿದಳು. ಪೂಜೆ ಮುಗಿದ ಮೇಲೆ ಅವಳು ಕೊಡುವ ಕಾಫಿ ಹದವಾದ ಬಿಸಿಯಲ್ಲಿ ತನ್ನ ವಾಸನೆಯನ್ನು ಕಳೆದುಕೊಳ್ಳದಂತೆ ರುಚಿಯಾಗಿರುತ್ತಿತ್ತು. ಯಾವತ್ತೂ ಹಳೆಯ ಡಿಕಾಕ್ಷನ್ ಬಿಸಿ ಮಾಡಿ ಅವಳು ಕಾಫಿ ಕೊಟ್ಟದ್ದಿಲ್ಲ.

ಕರುಣಾಕರ ಪಂಡಿತನನ್ನು ಕ್ರಮೇಣ ಅವಳು ವಿಶ್ವಾಸದಲ್ಲಿ ಹಚ್ಚಿಕೊಂಡಂತೆ ಕಂಡಿತು. ಒಂದು ತಿಂಗಳ ಪೂಜೆಯಲ್ಲಿ ಹದಿನೈದು ದಿನಗಳು ಕಳೆದವು. ಅವಳ ಐನೀರಿನ ನಂತರ ಪೂಜೆ ಶುರುವಾದದ್ದು. ಪೂಜೆಯ ಮಧ್ಯೆ ಅವಳು ಮುಟ್ಟಾದಗ ತಾನೊಬ್ಬನೇ ಪೂಜೆ ಮಾಡಬೇಕು. ಇನ್ನೊಂದು ಐನೀರಿನ ನಂತರ ಕೊನೆಯ ಮೂರುದಿನ ಅವಳೊಬ್ಬಳೇ ಬೆತ್ತಲೆ ಕೂತು ಪೂಜಿಸಬೇಕು.

ಇದು ಕರುಣಾಕರ ಪಂಡಿತನ ಪದ್ಧತಿಯಾಗಿತ್ತು. ಒಬ್ಬೊಬ್ಬರು ಒಂದು ಕ್ರಮದಲ್ಲಿದನ್ನು ನಡೆಸುತ್ತಾರೆ ಎಂದವನು ಹೇಳಿದ್ದ. ಕರುಣಾಕರ ಪಂಡಿತನಲ್ಲಿ ಅವಳಿಗೆ ಭಕ್ತಿ ಬೆಳೆಯುತ್ತಿರುವುದರಿಂದ ಸರೋಜ ಕೊನೆಯ ಹಂತದ ಪೂಜೆಗೆ ಸಮ್ಮತಿಸುತ್ತಾಳೆಂಬ ಶ್ರದ್ಧೆ ಶಾಸ್ತ್ರಿಗಳಲ್ಲಿ ಬೆಳೆದಿತ್ತು.

ಈ ಪೂಜೆಯ ನಡುವೆ ಶಾಸ್ತ್ರಿಗಳು ಹೆಣ್ಣನ್ನು ಸೇರುವಂತಿರಲಿಲ್ಲ. ರಾಧೆಯ ಮನೆಗೂ ಶಾಸ್ತ್ರಿಗಳು ಹೋಗದಂತೆ ವ್ರತಶಾಲಿಗಳಾಗಿ ಕರುಣಾಕರ ಪಂಡಿತ ಹೇಳಿದಂತೆ ನಡೆದುಕೊಂಡರು. ಸರೋಜ ಮುಟ್ಟಾಗಿ ಐನೀರು ಸ್ನಾನ ಮಾಡಿ ಬೆತ್ತಲೆಯಾಗಿ ಕೂತು ಪೂಜೆ ಮಾಡಿದ್ದೂ ಮುಗಿಯಿತು.

ದುಡ್ಡು ಕೊಡಹೋದರೆ ಕರುಣಾಕರ ಪಂಡಿತ ಒಪ್ಪಲಿಲ್ಲ. ಒತ್ತಾಯಕ್ಕೆ ಮಣಿದು ರೇಷ್ಮೆಯ ವಸ್ತ್ರಗಳನ್ನು ಕತ್ತಿಗೊಂದು ಬಂಗಾರದಲ್ಲಿ ಕಟ್ಟಿಸಿದ ರುದ್ರಾಕ್ಷಿಸರವನ್ನೂ ದಂಪತಿಗಳಿಂದ ಪಡೆದು, ನಮಸ್ಕಾರ ಮಾಡಿಸಿಕೊಂಡು ಅವರನ್ನು ಆಶೀರ್ವದಿಸಿದ್ದ. ಹತ್ತು ಮಕ್ಕಳ ತಾಯಿಯಾಗು ಎಂದು ಸರೊಜಳ ತಲೆಮುಟ್ಟಿ ಹೇಳಿದ್ದ.

ಗೆಲುವಾಗಿ ಬಿಟ್ಟಿದ್ದ ಶಾಸ್ತ್ರಿಗಳು ‘ನೀವು ಬಂದುಹೋಗುತ್ತಿರಬೇಕು’ ಎಂದು ಉಪಚರಿಸಿದರು. ಕರುಣಾಕರ ಪಂಡಿತ ಬಂದು ಹೋಗಲು ಶುರು ಮಾಡಿದ. ಒಂದು ಸಂಜೆ ಶಾಸ್ತ್ರಿಗಳು ರಾಧೆಯ ಮನೆಗೆ ಹೋಗಿದ್ದಾಗ ಬಂದು ಕಾದಿದ್ದು ಹೋದ. ಶಾಸ್ತ್ರಿಗಳು ಸರೋಜಳಿಗೆ ಹೇಳಿದರು, “ಸಂಜೆ ನಾನಿರುವುದಿಲ್ಲ, ಬೆಳಿಗ್ಗೆ ಬರಬೇಕಂತೆ ಎಂದು ಹೇಳು”. ಮತ್ತೆರಡು ದಿನಗಳಾದ ಮೇಲೆ ಅನುಮಾನವಾಗಿ “ಪಂಡಿತರು ಬಂದಿದ್ದರ?” ಎಂದು ಕೇಳಿದರು.

ಸರೋಜ ನಿರ್ಲಕ್ಷ್ಯದಿಂದ ಹೇಳಿದಳು: “ಬಂದಿದ್ದರು”.

ಶಾಸ್ತ್ರಿಗಳು ಉಕ್ಕಿ ಬಂದ ಕೋಪ ತಡೆದುಕೊಂಡು, ಅಣಕು ಸೌಜನ್ಯದಲ್ಲಿ ಕೇಳಿದರು:

“ಕಾಫಿ ಮಾಡಿಕೊಟ್ಟಿತಾನೆ?”

“ಕೊಟ್ಟೆ”

“ನಾನು ಸಂಜೆಯಿರುವುದಿಲ್ಲ. ಬೆಳಿಗ್ಗೆ ಬನ್ನಿ ಎಂದು ಹೇಳಲಿಲ್ಲವೆ?”

ಸರೋಜ ಉತ್ತರ ಕೊಡದೆ ಒಳಗೆ ಹೋಗಿಬಿಟ್ಟಿದ್ದಳು ಎಂಬುದನ್ನು ಮತ್ತೆ ಮತ್ತೆ ನೆನೆಯುತ್ತಾರೆ. ಅವಳು ಸೆರಗನ್ನು ಎಳೆದು ಹೊದ್ದುಕೊಂಡು ನಿರ್ಲಕ್ಷ್ಯದಲ್ಲಿ ನಡುಮನೆಯ ದೊಡ್ಡ ಹೊಸಲನ್ನು ಕಾಲೆತ್ತಿ ಇಟ್ಟು ದಾಟಿದ ಕ್ರಮ, ಆಗ ತನ್ನ ಕಣ್ಣಿಗೆ ಬಿದ್ದ ಅವಳ ಸೆಟೆದ ಬೆನ್ನು, ನೀಳವಾದ ಕತ್ತಿನ ದಾಷ್ಟ್ಯ ಅವರ ಎದೆಯಲ್ಲಿ ಬೆಂಕಿಯೇಳಿಸುತ್ತದೆ.

ಶಾಸ್ತ್ರಿಗಳು ಸೀದ ಕಾರು ಹತ್ತಿ ಉಡುಪಿಗೆ ಹೋಗಿದ್ದರು. ಅವರ ಉರಿಯುವ ಮೋರೆಯನ್ನು ಕರುಣಾಕರ ಪಂಡಿತ ನಗುತ್ತ ಸ್ವಾಗತಿಸಿದ್ದ.

“ಏನು ಶಾಸ್ತ್ರಿಗಳೇ, ಬನ್ನಿ ಎಂದು ನಿಮ್ಮ ಒತ್ತಾಯ. ಬಂದರೆ ನೀವಿರುವುದೇ ಇಲ್ಲವಲ್ಲ. ಪ್ರತಿನಿತ್ಯ ನೀವು ನಾಪತ್ತೆಯಲ್ಲ! ನಿಮ್ಮ ಹೆಂಡತಿ ಉಪಚಾರ ಮಾಡಿ ಕಳಿಸುತ್ತಾರೆ ಎನ್ನಿ” ಎಂದು ಒಂದು ಚಿಟಿಕೆ ನಸ್ಯವೇರಿಸಿ ಆಪ್ತವಾಗಿ ಕೇಳಿದ್ದ.

“ನೀವು ಮಲಗುವ ಕೋಣೆಯನ್ನು ಬದಲಾಯಿಸಿದ್ದೀರ ಎಂದು ಕೇಳಿದರೆ ನಿಮ್ಮ ಹೆಂಡತಿ ಯಾಕೋ ಉತ್ತರಿಸಲೇ ಇಲ್ಲ. ನೀವಿಲ್ಲದಾಗ ನಾನು ಆ ಪ್ರಶ್ನೆಯನ್ನು ಕೇಳಬಾರದಿತ್ತೋ ಏನೋ. ಮನೆ ಹೆಚ್ಚು ಶಾಂತವಾಗಿದೆ ಎನ್ನಿಸುತ್ತದೆಯ ನಿಮಗೆ?”

ಶಾಸ್ತ್ರಿಗಳಿಗೆ ಅವನ ಮಾತಿನ ಮೋಡಿಯಿಂದ ಮನಸ್ಸು ತಂಪಾಗಿತ್ತು.

“ಯಾಕೆ ಕೇಳಿದೆ ಅಂದರೆ, ನಾನು ಬಂದಾಗಲೆಲ್ಲ ಮನೆಯ ಒಂದು ಕತ್ತಲಿನ ಮೂಲೆಯಲ್ಲಿ ಇನ್ನೂ ಅವಿತುಕೊಂಡಿರುವ ಒಂದು ರೋಷದ ದೆವ್ವ ನನಗೆ ಕಾಣಿಸಿದಂತಾಗುತ್ತದೆ. ಅದು ನಿಮ್ಮನ್ನು ಕವಿದುಕೊಳ್ಳಲು ಹೊಂಚಿ ಕಾಯುತ್ತಿದೆ. ಸಾಮಾನ್ಯದ ದೆವ್ವವಲ್ಲ; ರಕ್ತದಾಹದ ದೆವ್ವ ಅದು. ನಾನು ಹೇಳಿಕೊಟ್ಟ ಮಂತ್ರವನ್ನು ಮನಸ್ಸಿನಲ್ಲೇ ಸದಾ ಜಪಿಸುತ್ತಿರಿ.”

“ನಿಮ್ಮನ್ನು ಸಂಜೆ ಬರಬೇಡಿ, ಬೆಳಿಗ್ಗೆ ಬಂದು ಹೋಗಿ ಎಂದು ಹೇಳಲು ಬಂದೆ. ಸಂಜೆ ನಾನು ಮನೆಯಲ್ಲಿ ಇರುವುದು ಕಡಿಮೆ. ನನ್ನ ಇನ್ನೊಂದು ತೋಟವಿದೆ. ಅದರ ಉಸ್ತುವಾರಿ ನಾನೇ ನೋಡಿಕೋಬೇಕು. ಅಲ್ಲಿರುವ ತೆಂಗಿಗೆ ಏನೋ ರೋಗ ಹತ್ತಿದಂತಿದೆ”

ಎಂದು ಶಾಸ್ತ್ರಿಗಳು ಸ್ನೇಹದಲ್ಲಿ ಹೇಳಲು ಪ್ರಯತ್ನಿಸಿದ್ದರು. ತಾನು ರಾಧೆಯ ಜೊತೆ ಇಟ್ಟುಕೊಂಡಿದ್ದ ಸಂಬಂಧ ಪಂಡಿತನಿಗೆ ಗೊತ್ತಿಲ್ಲವೆಂದು ಭಾವಿಸಿದ್ದರು. ಆದರೆ ಪಂಡಿತ ಅವಿತುಕೊಂಡ ದೆವ್ವದ ಮಾತಾಡುವುದು ಕೇಳಿ ದಿಗಿಲಾಗಿತ್ತು. ಈ ಪಂಡಿತನಿಗೆ ಎಲ್ಲ ಗೊತ್ತಾಗಿ ಬಿಡುತ್ತದೆ ಎನ್ನಿಸಿತ್ತು.

“ನಿಮಗೆ ಮಿದುಳಲ್ಲಿ ಕೆಂಪಾಗಿ ಏನೋ ಉರಿದಮ್ತೆ ಕಾಣುತ್ತದಲ್ಲವೆ? ಎಲ್ಲ ಸರಿಹೋದರೆ ದೈವಕೃಪೆಯಿಂದ ನಿಮ್ಮ ಹೃದಯದ ಒಳಗೆ ತಂಪಾದ ಕಣ್ಣುಗಳು ತೆರೆದಂತಾಗಬೇಕು. ಅಲ್ಲಿಯ ತನಕ ರಕ್ತದಾಹಿಗಳಾದ ದೆವ್ವಗಳ ಕಾತ ತಪ್ಪಿದ್ದಲ್ಲ. ನಾನು ನಾನು ನಾನು ಎಂಬ ಹೂಂಕಾರ ಹೋಗೋ ತನಕ ಶಾಂತಿಯಿಲ್ಲ ನೋಡಿ. ನೀಲವಾದ ಆಕಾಶವನ್ನು ನೆನೆಯುತ್ತ, ತೇಲುತ್ತಿರುವಂತೆ ಭಾವಿಸುತ್ತ ಜಪ ಮಾಡಿ. ನಿಮಗಾಗಲೀ ನಿಮ್ಮ ಹೆಂಡತಿಗಾಗಲೀ ಆಪತ್ತಾದಾಗ ನನ್ನನ್ನು ಎಚ್ಚರಿಸುವಂತೆ, ನನ್ನ ಇಷ್ಟದೇವತೆಗೆ ಅರಿಕೆ ಮಾಡಿಕೊಂಡಿದ್ದೇನೆ. ಬೆಳಿಗ್ಗೆ ಬನ್ನಿ ಎಂದಿರಿ. ಅದು ನನಗೆ ಸಾಧ್ಯವಿಲ್ಲ. ನನಗೂ ಹಿಡಿದ ವ್ರತವಿರುತ್ತದಲ್ಲ? ರೋಗಿಗಳು ಬೇರೆ ಕಾಣಲು ಬರುತ್ತಾರೆ” ಎಂದು ನಸ್ಯವೇರಿಸಿ, “ನೋಡಿ ನನಗೂ ಈ ಒಂದು ಚಟ ಹತ್ತಿಕೊಂಡಿದೆ. ಈ ದೇಹದಲ್ಲಿರುವ ತನಕ ನಾವೆಲ್ಲರೂ ಮನುಷ್ಯರೇ, ಕ್ರೋಧ, ಕಾಮ, ಮೋಹ ಯಾರನ್ನೂ ಬಿಟ್ಟಿದ್ದಿಲ್ಲ” ಎಂದು ಪಂಡಿತ ನಗುತ್ತ, ಬಿಚ್ಚಿದ್ದ ತನ್ನ ತಲೆಗೂದಲನ್ನು ಕಟ್ಟಿಕೊಂಡಿದ್ದ. ಅವನು ಕೂದಲನ್ನು ಕಟ್ಟಿಕೊಳ್ಳುವಾಗ ಎಷ್ಟು ಮೋಹಕವಾಗಿ ಕಂಡು ತನ್ನನ್ನು ಉರಿಸಿದ್ದ ನೆನಪಾಗುತ್ತದೆ.

ಶಾಸ್ತ್ರಿಗಳಿಗೆ ತಾನೊಂದು ಮೋಡಿಗೆ ಒಳಪಡುತ್ತಿದ್ದೆನೆ ಎಂದು ಭಯವಾಗಿತ್ತು. ‘ನಾನಿಲ್ಲದಾಗ ಮನೆಗೆ ನೀನು ಬರಕೂಡದು’ ಎಂದು ರೋಷದಲ್ಲಿ ಹೇಳಬೇಕೆನ್ನಿಸಿತ್ತು. ಹಾಗೆ ಹೇಳಿ ಬಿಟ್ಟರೆ ಈ ಪಂಡಿತನ ಮೋಡಿಯಿಂದ ತಾನು ಪಾರಾದೇನು. ಆದರೆ ಆ ಮಾತು ಬಾಯಿಂದ ಬರಲಾರದೆ ಹೋಗಿತ್ತು. ‘ಎಲಾ ನನ್ನ ಮೇಲೇ ಈ ಪಂಡಿತ ಇಂಥ ಮೋಡಿ ಹಾಕಿಬಿಟ್ಟಿದ್ದರೆ ಸರೋಜಳ ಪಾಡೇನು’ ಎಂದು ಯೋಚಿಸುತ್ತ ಕಾರನ್ನು ತನ್ನ ಹಳ್ಳಿಗೆ ನಡೆಸಿದ್ದರು. ಪಂಡಿತ ಮಹಾ ರಸಿಕನಂತೆ ಕಾಣುತ್ತಾನೆ. ಏನೋ ತಿನ್ನುತ್ತಾನೆಂದು ಕಾಣುತ್ತದೆ. ಅವನ ಉಸಿರಾಟದ ಸುವಾಸನೆ ಮತ್ತು ಬರಿಸುತ್ತದೆ. ಮತ್ತೆ ಅದು ಯಾವ ಗಂಧವನ್ನು ಮೈಗೆಲ್ಲ ಬಳಿದುಕೊಳ್ಳುತ್ತಾನೊ.

ಮನೆಗೆ ಬಂದವರೇ ಚಡಪಡಿಸತೊಡಗಿದ್ದರು. ಸರೋಜ ತನಗೆ ಅಡಿಗೆ ಮಾಡಿ ಊಟವನ್ನೇನೋ ಬಡಿಸುವಳು. ಕಾಫಿಯನ್ನೂ ಬೇಕಾದಾಗ ಕೊಡುವಳು. ಆದರೆ ಮಾತು ಆಡಳು. ತನ್ನತ್ತ ನೋಡಳು. ನೋಡಿದರೂ ಅವಳ ದಿವ್ಯ ನಿರ್ಲಕ್ಷ್ಯದ ಕಣ್ಣಿನಲ್ಲಿ ಎತ್ತಲೋ ದೂರ ನೋಡಿದಂತೆ ಇರುತ್ತದೆ. ಪುಸ್ತಕ ಹಿಡಿದು ಕೂತಾಗ ಮಾತ್ರ ಅವಳ ನೋಟ ಓದುವುದರಲ್ಲಿ ಏಕಾಗ್ರವಾಗಿ ನೆಟ್ಟಿರುತ್ತದೆ. ಆಸಕ್ತವಾಗಿ ಅವಳು ತನಗೆ ತಾನೇ ಮಾತಾಡಿಕೊಳ್ಳುತ್ತಿರುವಂತೆ ತೋರುತ್ತದೆ. ಹೂವು ಪೋಣಿಸುವಾಗಲೂ ಅವಳ ಹಲ್ಲು ಕೆಳತುಟಿಯನ್ನು ಕಡಿಯುತ್ತ, ಮುಗುಳ್ನಗುತ್ತ ಹೂವಿನ ತೊಟ್ಟಿನ ಜೊತೆ ಸಲ್ಲಾಪದಲ್ಲಿ ಮಗ್ನವಾಗಿರುವಂತೆ ಕಾಣುತ್ತದೆ. ಸೊಂಟದ ಮೇಲೆ ಕೈಯಿಟ್ಟುಕೊಂಡು ಪಾರಿಜಾತದ ಮರ ನೋಡುತ್ತ ತನಗೆ ತಾನೇ ಅವಳು ಗುನುಗಿಕೊಳ್ಳುವುದೂ ಉಂಟು. ಇವೆಲ್ಲ ತಾನು ನೋಡುತ್ತಿಲ್ಲವೆಂದು ಅವಳು ತಿಳಿದಿದ್ದಾಗ ಮಾತ್ರ. ಉಳಿದಂತೆ ಅವಳೂ ಈ ಮನೆಯಲ್ಲಿ ಇನ್ನೊಂದು ದೆವ್ವವೇ.

ರಾತ್ರೆ ಅವಳ ಜೊತೆ ಮಲಗಬೇಕೆಂದು ಸಂಕಲ್ಪಿಸಿಕೊಂಡ ದಿನ ಯಾತನೆ ಯಾಗತೊಡಗುತ್ತದೆ. ಪಕ್ಕ ಒಂದು ಕ್ಷಣ ಮಲಗಿ, ಮಲಗಿರಲಾರದೆ ಎದ್ದು ಸೀದ ರಾಧೆಯ ಬಳಿ ಹೋಗಿಬಿಡುತ್ತಾರೆ. ಇವತ್ತು ಪಂಡಿತ ಬರದೆ ಇರಬಹುದು ಎಂದುಕೊಂಡು ಮನಯಲ್ಲಿ ನಿಲ್ಲದೆ ರಾಧೆಯ ಹತ್ತಿರವೇ ನೇರ ಹೋದರು. ರಾಧೆಯೋ ಯಾವಾಗಲು ರಾತ್ರೆ ಹೀಗೆ ತನ್ನ ಮನೆಗೆ ಬರಕೂಡದು, ಹೆಂಡತಿ ಜೊತೆ ಮಲಗಬೇಕು ಎಂದು ಬಾದಾಮಿ ಹಾಲು ಕುಡಿಸುತ್ತ ಬೇಡಿಕೊಂಡಳು.

ಹೆಂಡತಿಯ ಜಘನ ಪ್ರದೇಶದಲ್ಲೂ, ಯೋನಿ ಪ್ರದೇಶದಲ್ಲೂ ಎಲ್ಲೆಲ್ಲಿ ಏನೇನು ಕಾಮಗಾರಿಯನ್ನು ಪೂರ್ವಭಾವಿಯಾಗಿ ಕೈಗೊಂಡು ಅವಳನ್ನು ಒಲಿಸಿಕೊಳ್ಳಬೇಕು ಎಂದು ತನ್ನ ಅನುಭವದ ವಶೀಕರಣ ವಿದ್ಯೆಯನ್ನು ಬೋಧಿಸಿದಳು. ರುಚಿಕರವಾದ ಈ ಪಾಠಗಳಿಂದಾಗಿ ತನ್ನ ಸಂಬಂಧಕ್ಕಿಂತ ಮುಂಚೆಯೇ ಯಾರೋ ಪರರು ಹೀಗೆಲ್ಲ ಅವಳಿಗೆ ಮಾಡಿರಬೇಕೆಂದು ಶಾಸ್ತ್ರಿಗಳು ಅಸೂಯೆಯಲ್ಲಿ ಅವಳನ್ನು ಪೀಡಿಸಲು ಶುರುಮಾಡಿದರು. “ನೀವೇನು ಈ ವಿದ್ಯೆಯಲ್ಲಿ ಕಡಿಮೆಯೆ? ಬೇರೆ ಯಾರಿಂದಾದರೂ ಇದನ್ನು ಏಕೆ ಕಲಿಯಬೇಕು?” ಎಂದು ಅವಳು ಶಾಸ್ತ್ರಿಗಳಿಗೆ ಸಮಾಧಾನ ಮಾಡುತ್ತಾ, “ಮರೆತುಬಿಟ್ಟಿರ? ಈ ಮನೆಗೆ ನನ್ನನ್ನು ತಂದ ಶುರುವಿನಲ್ಲಿ ನೀವು ಏನೇನು ಮಾಡಿಲ್ಲ. ನನ್ನಿಂದ ಏನೇನು ಮಾಡಿಸಿಕೊಂಡಿಲ್ಲ. ಈಗ ಮಾತ್ರ ನಿಮ್ಮನ್ನು ಒಂದು ದೆವ್ವ ಹೊಕ್ಕಿದೆ. ನಿಮಗೆ ಮಂಕು ಹಿಡಿಸಿಬಿಟ್ಟಿದೆ” ಎಂದು ನಗೆಯಾಡಿದಳು. ಪಂಡಿತ ಹೇಳಿದ್ದನ್ನೇ ರಾಧೆ ಹೇಳಿದ್ದು ಕೇಳಿ ಶಾಸ್ತ್ರಿಗಳಿಗೆ ಕಸಿವಿಸಿಯಾಗಿತ್ತು.

ಮಾರನೆ ದಿನ ಪರೀಕ್ಷೆ ಮಾಡಿಯೇ ಬಿಡುವುದೆಂದು ಸಂಜೆ ಹೊತ್ತಿಗೆ ರಾಧೆಯ ಮನೆಗೆ ಹೋಗಿ, ರಾತ್ರೆ ಹನ್ನೊಂದರ ತನಕ ಕಾದಿದ್ದು ತಮ್ಮ ಮನೆಗೆ ಬಂದರು. ಮನೆಯ ಎದುರು ಪಂಡಿತನ ಕಾರಿತ್ತು. ಎದೆ ಹೊಡೆದುಕೊಳ್ಳತೊಡಗಿತು. ಇವತ್ತು ನನ್ನಿಂದ ಎರಡು ಕೊಲೆಯಾಗಿ ಬಿಡುತ್ತದೆಂದು ಭಯವಾಗಿತ್ತು.

ನಡುಗುತ್ತ ಮನೆಯ ಬಾಗಿಲು ತಳ್ಳಿದರು – ಅದರ ಅಗಳಿ ಹಾಕಿರಲಿಲ್ಲ. ನಡುಗುವ ರೋಷದಲ್ಲೂ ಏನವರ ಸೊಕ್ಕು! ಆಶ್ಚರ್ಯವಾಗಿತ್ತು. ರಕ್ತ ನುಗ್ಗಿ ಅವರ ಕಿವಿಗಳು ಗವ್ವೆನ್ನುತ್ತಿದ್ದವು. ಹೀಗೆ ಗವ್ವೆನ್ನುವುದರ ಶಬ್ದದ ಒಳಗೇ ಸಂಗೀತದ ಆಲಾಪ ಕೇಳಿಸಿದಂತಾಯಿತು. ಮುಂಡೇ ಮಕ್ಕಳು ರೇಡಿಯೋ ಹಾಕಿಕೊಂಡು ತಮ್ಮ ಕೆಲಸ ನಡೆಸಿದ್ದಾರೆ ಎನ್ನಿಸಿ ಕಾಲುಗಳು ದುರ್ಬಲವಾದವು. ಸಂಗೀತ ಬರುತ್ತಿದ್ದುದು ಪಂಡಿತ ತನ್ನ ತಿಂಗಳಿನ ಪೂಜೆ ನಡೆಸಿದ ಕೋಣೆಯಿಂದ. ಅಲ್ಲಿಯೇ ಅವನು ಅವಳನ್ನು ಪವಿತ್ರಗೊಳಿಸುತ್ತೇನೆಂದು ಬೆತ್ತಲೆ ಮಾಡಿಯಾಗಿದೆ. ಈಗ ಸೂಳೇಮಗ ಗರ್ಭಾದಾನ ಮಾಡುತ್ತಿರಬೇಕು ಎಂದುಕೊಳ್ಳುತ್ತ, ಕತ್ತಲಿನಲ್ಲಿ ತಡಕಾಡುತ್ತ, ದೇವರ ಕೋಣೆಗೆ ಹೋದರು. ಅದರ ಬಾಗಿಲು ಹಾಕಿತ್ತು. ತಳ್ಳಿದರು.

ಅಲ್ಲಿ ದೊಡ್ಡ ಎರಡು ನೀಲಾಂಜನಗಳಲ್ಲಿ ಹತ್ತು ಬೆಳಕಿನ ಕುಡಿಗಳು ಉರಿಯುತ್ತಿವೆ. ಅವುಗಳ ನಡುವೆ ಸರೋಜ ಹೆರಳನ್ನು ಹೆಗಲಮೇಲೆ ಇಳಿಬಿಟ್ಟುಕೊಂಡು ಒಂದು ಕಾಲು ಮಡಚಿ ಕೂತು ತಂಬೂರಿ ಮೀಟುತ್ತ ಹಾಡುತ್ತಿದ್ದಾಳೆ. ಬಾಗಿಲನ್ನು ದಡಾರನೆ ತಾನು ತೆಗೆದರೂ ಅವಳ ಕಣ್ಣುಗಳು ಮುಚ್ಚಿಯೇ ಇವೆ. ತನ್ನ ಆಗಮನ ಅಪ್ರಸ್ತುತವೆನ್ನುವಂತೆ ತಾಯಿ ಮನೆಯಿಂದ ತಂದ ತಂಬೂರಿ ಮೀಟುತ್ತ ಹಾಡುತ್ತಿದ್ದಾಳೆ. ಹೀಗೆ ಅವಳು ಹಾಡಿದ್ದನ್ನು ಅವರು ಕೇಳಿರಲಿಲ್ಲ. ಸಂಗೀತ ಕಲಿತಿದ್ದಾಳೆಂದು ಮಾತ್ರ ಗೊತ್ತಿತ್ತು. ಅವಳ ಎದುರು ಪದ್ಮಾಸನ ಹಾಕಿ ಪಂಡಿತನೂ ಕೂತಿದ್ದ. ತನ್ನ ಕಡೆ ನೋಡದೆ, ತಾನು ಬಂದದ್ದು ಗಮನಿಸಿ, ತನ್ನನ್ನೂ ಜೊತೆಗೆ ಕೂರುವಂತೆ ಸನ್ನೆ ಮಾಡಿದ್ದ. ಅವಲ ಜೊತೆ ಆಲಾಪದಲ್ಲಿ ಮಿಳಿಯ ತೊಡಗಿದ. ಈಗ ಕೂಡುವುದು, ಅವಳು ಬಿಟ್ಟಲ್ಲಿಂದ ಇವನು ಮುಂದುವರಿಯುವುದು, ಮತ್ತೆ ಅವಳು ನಿರೀಕ್ಷಿಸುತ್ತ ಕೂಡಿಕೊಳ್ಳುವುದು – ಹೀಗೆ.

ಅರೆ, ತನ್ನ ಮನೆಯಲ್ಲೇ ಅವನು ತನ್ನನ್ನು ಉಪಚರಿಸುತ್ತಿದ್ದಾನೆಂದು ಆಶ್ಚರ್ಯವಾಗಿತ್ತು. ಏನು ಮಾಡುವುದು ತಿಳಿಯದೆ ಸುಮ್ಮನೇ ಕೂತರು. ಸರೋಜ ತನ್ನ ಸಂಗೀತ ಮುಗಿಸಿ ತಂಬೂರಿಯನ್ನು ಕಣ್ಣಿಗೊತ್ತಿಕೊಂಡು ಕೆಳಗಿಟ್ಟಳು. ಮಂದವಾದ ನೀಲಾಂಜನದ ತಂಪಾದ ಬೆಳಕಿನಲ್ಲಿ ಏನೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ತನ್ನ ಮಿದುಳಲ್ಲಿ ಕೆಂಗಣ್ಣುಗಳು ತೆರೆಯಲು ತವಕಿಸುತ್ತಿವೆ ಎಂದು ಭಾಸವಾಗಿ ಶಾಸ್ತ್ರಿಗಳು ಉಸಿರನ್ನು ಬಿಗಿ ಹಿಡಿದರು. ಪಂಡಿತನನ್ನಾಗಲೀ, ಸರೋಜಳನ್ನಾಗಲೀ ಹೊಡೆದು ಸಾಯಿಸಲಾರೆ ಎನ್ನಿಸಿ, ತಾನು ನಿರ್ವೀರ್ಯನಾಗಿ ಬಿಟ್ಟೆ ಎನ್ನಿಸಿ ಕುಸಿದರು.

ಪಂಡಿತ ಸಂಗೀತ ಮುಗಿದ ನಂತರ ನಾಳೆ ಮತ್ತೆ ಬರುವೆನೆಂದು ಅವಳಿಗೆ ಮಾತ್ರ ಉಸುರಿ ಹೊರನಡೆದು ಚಪ್ಪಲಿ ಹಾಕಿಕೊಂಡ. ಅವನು ಚಪ್ಪಲಿಯನ್ನು ಹಾಕಿಕೊಳ್ಳುವ ಶಬ್ದ ಕೇಳಿಸಿತ್ತು. ಮತ್ತೆ ಅವನು ತನ್ನ ಕಾರನ್ನು ಸ್ಟಾರ್ಟ್ ಮಾಡುವ ಶಬ್ದ. ಸ್ಟಾರ್ಟ್ ಮಾಡಿ ಅದು ಗೇರಿನಲ್ಲಿ ಚಲಿಸುವ ಶಬ್ದ. ಮತ್ತೆ ಎಲ್ಲ ಶಬ್ದಗಳೂ ಕರಗಿದ್ದರ ಮೌನ. ಮತ್ತೆ ಕೊಟ್ಟಿಗೆಯಲ್ಲಿ ಮೆಲಕು ಹಾಕುವ ದನಗಳ ಕೊರಳ ಗಂಟೆಯ ಶಬ್ದ – ಆಗ, ಈಗ. ಮತ್ತೆ ಯಾವ ಸದ್ದೂ ಇಲ್ಲ. ದೆವ್ವಗಳು ಮಾತ್ರ ತಿರುಗುಮುರುಗು ಪಾದಗಳಲ್ಲಿ ಸದ್ದಿಲ್ಲದಂತೆ ಚಲಿಸುತ್ತಿರಬೇಕು.

ಏನೂ ಆಗಿಯೇ ಇಲ್ಲವೆನ್ನುವಂತೆ ಸರೋಜ ಎದ್ದು ಮಲಗುವ ಕೋಣೆಗೆ ಹೋದಳು. ತಾನು ಸತ್ತು ಪ್ರೇತವಾಗಿಬಿಟ್ಟೆ ಎಂದು ಶಾಸ್ತ್ರಿಗಳು ಕುಸಿದೇ ಕೂತಿದ್ದರು.

ಮತ್ತೆ ಅವರಿಗೆ ಏನಾಗಿಬಿಟ್ಟಿತೋ, ದಟ್ಟವಾದ ಕಾಡಿನಲ್ಲಿ ಪೊದೆಗಳ ನಡುವೆ ಗುಪ್ತವಾಗಿ ಸಂಚರಿಸುವ ಕ್ರೂರವಾದ ಪಶುವಿನಂತೆ ಮುಚ್ಚಿದ ಬಾಯಲ್ಲೇ ಭಯಾನಕವಾದ ಶಬ್ದ ಹೊರಡಿಸಲು ತೊಡಗಿದರು. ಆ ಶಬ್ದ ದೀರ್ಘವಾಗಿತ್ತು. ಏರುತ್ತೇರುತ್ತ ಹೋಗಿ ಹಾಗೆಯೇ ಇಳಿಯುತ್ತಿಳಿಯುತ್ತ ಮೌನವಾಗಿ, ಮೌನವಾಗಿಯೂ ಭಯ ಹುಟ್ಟಿಸುತ್ತ, ಮತ್ತೆ ಏರುತ್ತಿತ್ತು. ಅದು ನರಳುವ ಶಬ್ದದಂತೆಯೂ ಹಸಿದ ಪ್ರಾಣಿ ಘೀಳಿಟ್ಟಂತೆಯೂ ಇತ್ತು. ಮನುಷ್ಯ ಪ್ರಾಣಿ ಹೊರಡಿಸುವ ಶಬ್ದದಂತಿರಲಿಲ್ಲ. ಯಾವ ಕ್ರೂರವಾದ ಮಾತಿಗೂ ಸಹ ನಿಲುಕಲಾರದ್ದನ್ನು, ಮಾತಿನ ಪ್ರೇತದಂತಿದ್ದುದನ್ನು ತನ್ನ ದೇಹ ಉಂಟು ಮಾಡುತ್ತಿದೆ ಎಂದೂ, ಒಳಗೆ ತಾನು ಸೊಕ್ಕಿ ಅಗಾಧವಾಗುತ್ತಿದ್ದೇನೆಂದೂ, ಶಾಸ್ತ್ರಿಗಳಿಗೆ ಭಾಸವಾಯಿತು. ಸರೋಜಳ ದಿವ್ಯವಾದ ಕಂಠ ಸ್ವಲ್ಪ ಹೊತ್ತಿನ ಮುಂಚೆ ಉಂಟುಮಾಡಿದ್ದ ಆಲಾಪದ ಅಲೆಗಳನ್ನೆಲ್ಲ ಧ್ವಂಸಗೊಳಿಸುವ, ಭಾಷೆಯನ್ನು ತಿನ್ನುವ, ಎಲ್ಲ ಸೌಂದರ್ಯವನ್ನೂ ಅಣಕಿಸಿ ನಾಶಮಾಡುವ ಅಟ್ಟಹಾಸ ಅದಾಗಿತ್ತು. ಮರಗಿಡಗಳ ಬೇರುಗಳಿಗೆ ಪೋಷಕವಾಗುವ, ಹಕ್ಕಿಗಳಿಂದ ತಮ್ಮ ಮರಿಗಳನ್ನು ಸಾಕಲು ಗೂಡುಕಟ್ಟಿಸುವ, ಕ್ರಿಮಿಕೀಟಗಳಿಗೂ ಚಲನಶಕ್ತಿ ಕೊಡುವ, ಈ ಪೃಥಿವಿಯ  ಒಳಿತಿನ ಒತ್ತಾಸೆಯನ್ನೇ ಕೊಲ್ಲುವಂತಿದ್ದ ಅಟ್ಟಹಾಸದಲ್ಲಿ ಈಳಿಡುತ್ತ ಮಲಗುವ ಕೋಣೆಗೆ ದಾಪು ಹೆಜ್ಜೆ ಹಾಕುತ್ತ ಶಾಸ್ತ್ರಿಗಳು ಹೋದರು. ಅರೆನಿದ್ದೆಯಲ್ಲಿ ಮುಗುಳ್ನಗುತ್ತಿದ್ದ ಸರೋಜಳನ್ನು ದೀಪ ಹಾಕಿ ನೋಡಿದರು.

ದೆವ್ವಗಳು ಸಹ ಅಂಥ ಮೈಥುನದಲ್ಲಿ ತೊಡಗಿರಲಿಕ್ಕಿಲ್ಲ. ಸರೋಜಳ ಬಟ್ಟೆಗಳನ್ನು ಕಿತ್ತು ಬಿಸಾಕಿ ಅವಳ ಮೈಮೇಲೆ ಈಳಿಡುತ್ತಲೇ ಎರಗಿದ್ದರು. ಅವಳ ಒಳಗೆ ಶೀತಲವಾಗಿ ಮಡುಗಟ್ಟಿಕೊಂಡ ಸಂಕಲ್ಪವನ್ನು, ತನ್ನನ್ನು ನಿರಾಕರಿಸುವ ಅವಳ ದಿವ್ಯನಿರ್ಲಕ್ಷ್ಯವನ್ನು ಹಿಚುಕಿ ಸಾಯಿಸುವಂತೆ ಅವಳನ್ನು ಸಂಭೋಗಿಸತೊಡಗಿದ್ದರು. ಅವಳೂ ತನ್ನಂತೆ ನರಳುತ್ತಿಲ್ಲವೆನ್ನುವುದು, ತನ್ನನ್ನು ಕೊಲ್ಲುವಂತೆ, ಅವಳ ಕಣ್ಣುಗಳು ಕಿಡಿಕಾರಲಿಲ್ಲವೆನ್ನುವುದು, ಅವಳ ಮೇಲಿನ ತನ್ನ ಎಗರಾಟ ಅಪ್ರಸ್ತುತವೆನ್ನಿಸುವಂತೆ ಅವಳು ಸಹಿಸಿಕೊಂಡಿದ್ದಾಳೆಂಬುದು ಇನ್ನಷ್ಟು ಅವರ ಅಟ್ಟಹಾಸಕ್ಕೆ ಕಾರಣವಾಗಿತ್ತು.

ಅವಳೂ ಕೊನೆಯಲ್ಲಿ ಸಡಿಲಾಗಿ ಬಿಟ್ಟಿರಬಹುದೇ ಎಂದು ಆಮೇಲೆ ಅವರು ಚಿಂತಿಸಿದ್ದಿದೆ.

ರಾಧೆಯ ಮನೆಯ ಬಳಿ ಕಾರು ನಿಲ್ಲಿಸಿ ಈಗ ಇಳಿಯುವಾಗ ಅವರಿಗೆ ದಿಗ್ಗನೆ ನೆನಪಿಗೆ ಬಂದದ್ದು ಅದು.