ಅದೊಂದು ಭೀಕರ ಅಮಾವಸ್ಯೆಯ ದಿನ.

ಅವತ್ತು ಸರೋಜಳನ್ನು ಕೊಂದು ಹಾಕಿಬಿಟ್ಟದ್ದು. ಹಾಗೆಂದು ತಾನು ಅವನ ಕೊರಳಿನ ತಾಯಿತ ಕಾಣುವ ತನಕ ತಿಳಿದದ್ದು.

ಪಂಡಿತ ನಿತ್ಯ ಸಂಜೆ ಬರಲು ತೊಡಗಿದ್ದ. ಸದಾಚಾರದ ಯಾವ ಸಂಕೋಚವೂ ಅವನಲ್ಲಿ ಉಳಿದಿರಲಿಲ್ಲ. ಅವಳಿಗೆ ಸಂಗೀತ ಕಲಿಸುತ್ತಿದ್ದೇನೆಂಬುದು ಅವನಿಗೊಂದು ನೆವ. ಮತ್ತೆ ಮನೆಯ ಹಿತ್ತಲಿನಲ್ಲಿ ಅವನ ಗಿಡಮೂಲಿಕೆಗಳನ್ನು ಬೆಳೆಸಿಕೊಳ್ಳುವ ಕಾರ್ಯಕ್ರಮ ಬೇರೆ. ಹಿತ್ತಲಿನಲ್ಲಿ ಕೆಮ್ಮಣ್ಣಿನ ಒಂದು ಗುಂಡಿಯಿತ್ತು. ಆಳೆತ್ತರ ಅಗೆದು ತೆಗೆದರೂ ಇನ್ನೂ ಅದರಲ್ಲಿ ಕೆಮ್ಮಣ್ಣು ಉಳಿದಿತ್ತು. ಅವನೇ ಸ್ವತಃ ಇನ್ನಷ್ಟು ಕೆಮ್ಮಣ್ಣು ಅಗೆದು ಗುಂಡಿಯ ಮೇಲೆ ಒಟ್ಟಿದ್ದ. ಅದನ್ನು ನಿತ್ಯ ಯಥೋಚಿತವಾಗಿ ತಾನು ನೆಟ್ಟ ಹೊಸ ಹೊಸ ಮೂಲಿಕೆಗಳ ಬುದಕ್ಕೆ ಹಾಕುತ್ತಿದ್ದ. ಈ ಆಗಂತುಕ ವನಸ್ಪತಿಗೆ ನಿತ್ಯ ಬೇಕಾದಷ್ಟು ನೀರನ್ನು ತಪ್ಪದೆ ಹೊಯ್ಯುವುದು ಸರೋಜಳ ಕೆಲಸ.

ಬಾಣಲೆಯಲ್ಲಿ ಅವಳು ಕೆಮ್ಮಣ್ಣು ಹೊರುವುದನ್ನು ಶಾಸ್ತ್ರಿಗಳು ಕಂಡದ್ದುಂಟು. ತನ್ನೊಳಗಿಂದ ಸೀಳಿಕೊಂಡು ಅಟ್ಟಹಾಸದಿಂದ ಅಬ್ಬರಿಸಿದ್ದ ಊಳುವ ಧ್ವನಿ ಬರುಬರುತ್ತ ಒಂದು ವಿಕಾರವಾದ ಶ್ರುತಿಯಂತೆ, ನಾಡಿಯ ಬಡಿತದಂತೆ, ಸಣ್ಣಗೆ ಅವರಲ್ಲಿ ನರಳುತ್ತಲೇ ಮಿಡಿದಿತ್ತು.

ಒಂದು ದಿನ ಸಂಜೆ, ಹಿತ್ತಲಿನಲ್ಲಿ ಆ ಪಂಡಿತ ಪಂಚೆಯನ್ನು ಎತ್ತಿ ಕಟ್ಟಿಕೊಂಡು ನಿಂತು, ಸರೋಜಳ ಕಿವಿಗೆ ಮಾತ್ರವೆಂಬಂತೆ, ಇದು ವಿಷ್ಣುಗಂಧಿ, ಇದು ಭೃಂಗ ಎಂದು ವಿವರಿಸುತ್ತ ಅವಳ ಸನಿಯದಲ್ಲಿ ತನ್ನ ಗಂಧ ಸೂಸುತ್ತ ಇದ್ದ. ಅವಳ ಅಂಗೈ ಮೇಲೆ ಗಿಡಮೂಲಿಕೆಗಳ ಎಲೆಗಳನ್ನು ಇಟ್ಟು ವಿವರಿಸುತ್ತ, ಅದನ್ನು ತಾನೇ ಅವಳ ಕೈಮೇಲೆ ತಿಕ್ಕಿ, ಮೂಸು ಎನ್ನುತ್ತ, ಬಾಯಿಗೊಯ್ದು ನೆಕ್ಕು ಎನ್ನುತ್ತ ಇದ್ದವನು ತಾನು ಬಂದ ದೆವ್ವದಂತೆ ನಿಂತರೂ ಲೆಖ್ಖಕ್ಕೆ ತೆಗೆದುಕೊಂಡಿರಲಿಲ್ಲ. ಕೂದಲು ತುಂಬಿದ ನೇರವಾದ ಅವನ ಕಾಲುಗಳನ್ನು ಕಂಡು ತನ್ನ ಎದೆ ಬಡಿದುಕೊಳ್ಳತೊಡಗಿತ್ತು. ಈಳಾಟದ ಕ್ರೂರ ತಂಬೂರಿಯಂತೆ ತನ್ನ ಇಡೀ ಶರೀರ ಕಂಪಿಸತೊಡಗಿತ್ತು.

ತಾನು ಹೀಗೆ ನಿರ್ವೀರ್ಯನಾಗುತ್ತ ಹೋಗಿದ್ದೆ. ಅವನು ದೇವರ ಮನೆಯಲ್ಲಿ ಕೂತು ಅವಳ ಶ್ರುತಿಗೆ ತನ್ನ ಶ್ರುತಿ ಸೇರಿಸಿ, ಎರಡು ಶರೀರಗಳೂ ಗಂಡು-ಹೆಣ್ಣು ದನಿಗಳ ಸಮ್ಮಿಶ್ರವಾಗಿ ಅಲೆ ಅಲೆಯಾಗಿ ವಿಸ್ತರಿಸಿ ಉತ್ಕಟವಾಗುತ್ತ ಹೋಗುವುದನ್ನು ಕೇಳಿಸಿಕೊಳ್ಳುತ್ತ ತನಗೆ ಕಾಮೋದ್ರೇಕವಾಗಿ ಬಿಡುವುದೂ ಇತ್ತು. ಆಗ ತಾನು ಸೀದ ರಾಧೆಯ ಬಳಿ ಹೋಗುವುದು. ಆದರೆ ಅಲ್ಲಿಯೂ ನಪುಂಸಕತ್ವ ತನ್ನನ್ನು ಆವರಿಸಿಬಿಡುವುದು.

ರಾಧೆ ಅವಳು ನಂಬಿದ ಭೂತಕ್ಕೆ ಹರಕೆ ಹೇಳಿಕೊಂಡು ನಿತ್ಯ ದೇವರಿಗೆ ತುಪ್ಪದ ದೀಪ ಹಚ್ಚಿಡಲು ಪ್ರಾರಂಭಿಸಿದ್ದಳು. ಅವಳ ಪ್ರಾರ್ಥನೆ ಶಾಸ್ತ್ರಿಗಳಿಗೆ ಸಂತಾನ ಪ್ರಾಪ್ತವಾಗಲೆಂದು. ಅವರನ್ನು ಕಾಡುವ ದೆವ್ವ ಅವರ ಮನೆಯಿಂದ ತೊಲಗಲಿ ಎಂದು. ಸರೋಜ ಅವಳ ಶೀತಲವಾದ ಸಂಕಲ್ಪದಿಂದ ಪಾರಾಗಿ ಸತೀತ್ವದಲ್ಲಿ ಅರಳಿಕೊಂಡು ಅವಳ ಜಡ ಗರ್ಭದಲ್ಲಿ ಶಾಸ್ತ್ರಿಗಳ ಪುರುಷತ್ವಕ್ಕೆ ಎಡೆಮಾಡಿಕೊಡಲಿ ಎಂದು. ಇದು ಶಾಸ್ತ್ರಿಗಳಿಗೆ ಮನವರಿಕೆಯಾಗಿತ್ತು.

ನಾಳೆ, ನಾಳೆ, ನಾಳೆ – ಮಾಯಾವಿಯಾದ ಪಂಡಿತನನ್ನು ದೂಷಿಸಿ, ಅವನ ಮುಖಕ್ಕೆ ಉಗುಳಿ ಅಟ್ಟಿಬಿಡುತ್ತೇನೆಂದು ಅವರು ಧೈರ್ಯ ತಂದುಕೊಳ್ಳುವರು; ಮತ್ತೆ ಮತ್ತೆ ಅಧೀರರಾಗಿ ಬಿಡುವರು. ಆದರೆ ರೋಮಮಯ ಎದೆ ಮತ್ತು ಕಾಲುಗಳು ಅ ಪಂಡಿತ ಮಾತ್ರ ತ್ರಿವಿಕ್ರಮನಂತೆ ಬೆಳೆಯತೊಡಗಿದ್ದ. ಪಂಡಿತ ದೇವರ ಕೋಣೆಯಲ್ಲಿ ಸರೋಜಳ ಜೊತೆ ಕೂತಿರುವುದನ್ನು ಕಂಡದ್ದೇ ‘ಸಂಗೀತ ಕಲಿಸಿಕೊಟ್ಟು ಸಾಯಲಿ’ ಎಂದು ತನ್ನ ನಿಶ್ಚಯವನ್ನು ಬಿಟ್ಟುಕೊಡುವರು.

ಒಂದು ದಿನ ಅರ್ಧ ರಾತ್ರೆಯಲ್ಲಿ ಮನೆಗೆ ಬಂದು ನೋಡಿದರೆ ಪಂಡಿತ ತನ್ನ ಮನೆಯ ಕಛೇರಿಯಲ್ಲಿ ಮಲಗಿ ನಿದ್ದೆಹೋಗಿದ್ದ. ತಾನು ನಿಲ್ಲಿಸಬೇಕಾದಲ್ಲಿ ಅವನ ಆ ದರಿದ್ರ ಕಾರನ್ನು ನಿಲ್ಲಿಸಿದ್ದ. ಕೋಣೆಯಲ್ಲಿ ಸರೋಜ ಶೀತಲವಾಗಿ ಸಮಾಧಾನವಾಗಿ ನಿದ್ದೆ ಹೋಗಿದ್ದಳು.

ಪಂಡಿತ ಸರೋಜಳ ಜೊತೆ ಸಂಭೋಗ ಮಾಡಿದ್ದರೆ ಹೇಗೆ ಮಾಡಿರುತ್ತಿದ್ದ ಎಂದು ಉದ್ರೇಕಗೊಂಡು, ಸರೋಜಳನ್ನು ನಿದ್ದೆಯಿಂದ ಎಬ್ಬಿಸಿ ಭೋಗಿಸಿದ್ದರು. ಮುಗಿದಿದ್ದೇ, ಅವಳು ಎದ್ದು ಹೋಗಿ ಸ್ನಾನ ಮಾಡಿ ಬಂದಿದ್ದಳು. ತನಗೆ ಅವಳನ್ನು ಕೊಂದು ಹಾಕಿಬಿಡಬೇಕೆನ್ನಿಸಿತ್ತು. ಅವಳ ಪಕ್ಕ ಮಲಗಲಾರದೆ ಇನ್ನೊಂದು ಕೋಣೆಯಲ್ಲಿ ಚಾಪೆಯ ಮೇಲೆ ಮಲಗಿದ್ದರು-ನಾನೇ ಈ ಮನೆಯಲ್ಲಿ ದೆವ್ವವಾಗಿ ಬಿಡುತ್ತಿದ್ದೇನೆ ಎಂದು ಹಲ್ಲು ಕಡೆಯುತ್ತ, ಇಡೀ ರಾತ್ರೆ ಪಂಡಿತ ನಿದ್ದೆಯಲ್ಲಿ ಹಂದುವುದನ್ನೂ ಗಮನಿಸುತ್ತ ತನ್ನ ಕರಾಳ ಇರುಳನ್ನು ಕಳೆದಿದ್ದರು.

ಬೆಳಗ್ಗೆ ಮಂಪರಿನಲ್ಲಿದ್ದ ತಾನು ಏಳುವುದರ ಒಳಗೆ ಸರೋಜ ಮಾಡಿಕೊಟ್ಟ ಕಾಫಿಯನ್ನು ಕುಡಿದಿರಬೇಕು. ಕಛೇರಿಯಲ್ಲಿ ಅವನು ಮಲಗಿದ್ದ ಹಾಸಿಗೆಯನ್ನು ನೀಟಾಗಿ ಮಡಿಸಿತ್ತು. ಸರೋಜಳೇ ಮಡಿಸಿಟ್ಟಿರಬೇಕು. ಪಂಡಿತ ಈಗಾಗಲೇ ಉಡುಪಿಯನ್ನು ಸೇರಿ ಸ್ನಾನ ಮಾಡಿ ತನ್ನ ಗಂಧವನ್ನು ಬಳೆದುಕೊಂಡು ತನ್ನ ವಶೀಕರಣ ವಿದ್ಯೆಯ ವ್ರತದಲ್ಲಿ ನಿರತನಾಗಿ ಧ್ಯಾನ ಮಾಡುತ್ತಿರಬೇಕು ಎಂದು ಊಹಿಸಿದರು.

ಅವರ ಮನೆಯ ಬೆನ್ನಿಗೆ ದೊಡ್ಡದೊಂದು ಗುಡ್ಡ. ಗುಡ್ಡದ ಮೇಲೆ ಚಿರತೆಗಳು ಓಡಾಡಿಕೊಂಡಿದ್ದ ದಟ್ಟ ಅರಣ್ಯ. ಮನೆಯ ಮುಂದೆ ದೊಡ್ಡ ಅಂಗಳ. ಅಂಗಳ ದಾಟಿ ಅರ್ಧ ಮೈಲು ದೂರದಲ್ಲಿ ಅವರ ತೋಟ. ಇನ್ನೆಷ್ಟೋ ಅವರ ತೋಟಗಳು, ಗದ್ದೆಗಳು ಹೀಗೆಯೇ ಊರಿನ ಆಸುಪಾಸಿನಲ್ಲಿ. ಮನೆಯ ಹತ್ತಿರ ಆಳುಕಾಳು ಸಹ ಸುಳಿಯದು. ಆಸ್ತಿಯ ವಹಿವಾಟೆಲ್ಲ ಒಬ್ಬ ಮ್ಯಾನೇಜರಿನದು. ಆಳುಗಳ ಬಿಡಾರದ ಬಳಿಯೇ ಅವನಿಗೊಂದು ಸಾದಾ ಹೆಂಚಿನ ಮನೆ. ಶಾಸ್ತ್ರಿಗಳು ಇವತ್ತು ಬಿಡಾರಗಳಿಗೆ ಹೋಗಿ ‘ಆಳುಗಳನ್ನು ಕೆಲಸಕ್ಕೆ ಇನ್ನೂ ಯಾಕೆ ಅಟ್ಟಿಲ್ಲ‘ವೆಂದು ಮ್ಯಾನೇಜರನ್ನು ಗದರಿಸಿ ತನ್ನ ಉಳಿದ ತೋಟಗದ್ದೆಗಳನ್ನು ನೋಡಿ ಬರಲು ಹೋದರು.

ರಾಧೆಯ ಮನೆಗೆ ಹೋಗಿ ಒಂದಷ್ಟು ಬಾಳೆ ಹಣ್ಣು ತಿಂದು ಬಿಸಿ ಹಾಲು ಕುಡಿದರು. ಅವಳು ಮಾಡಿದ ದೋಸೆಯನ್ನು ತಾನು ತಿನ್ನುತ್ತೇನೆಂದರೆ ‘ನನ್ನ ಮನೆಯಲ್ಲಿ ಅದೆಲ್ಲ ಆಗದು’ ಎಂದು ಅವಳು ನಕ್ಕುಬಿಟ್ಟಳು. ತನ್ನ ಮಡಿಯನ್ನು ಅವಳು ಕಾಯುವುದು ನೋಡಿ ಹಾಗಾದರೆ ತಾನಿನ್ನೂ ಪಿಶಾಚಿಯಾಗಿಲ್ಲ ಎಂದುಕೊಂಡು ಶಾಸ್ತ್ರಿಗಳು ವಿಕಾರವಾಗಿ ನಕ್ಕರು. ಅವರು ವಿಕಾರವಾಗಿ ನಕ್ಕದ್ದು ನೋಡಿ ರಾಧೆ ದೇವರ ಕೋಣೆಗೆ ಹೋಗಿ ಉರಿಯುವ ಬತ್ತಿ ತಳ್ಳಿ ದೀಪವನ್ನು ಇನ್ನಷ್ಟು ಬೆಳಸಿ, ‘ಕಾಪಾಡು’ ಎಂದು ಬೇಡಿಕೊಂಡಳು.

ಶಾಸ್ತ್ರಿಗಳಿಗೆ ಹಸಿವಾಗಲೇ ಇಲ್ಲ. ಅಲ್ಲಿ ಇಲ್ಲಿ ಸುತ್ತಾಡಿಕೊಂಡಿದ್ದು ಮಧ್ಯಾಹ್ನ ಸುಮಾರು ಮುರು ಗಂಟೆಗೆ ಮನೆಗೆ ಬಂದರು. ಅಂಗಳದಲ್ಲಿ ಕೊರಗನೊಬ್ಬ ನಿಂತದ್ದು ನೋಡಿ, ‘ಇಲ್ಲಿ ನಿನಗೇನು ಕೆಲಸ ದನ ಮೇಯಿಸಿಕೊಂಡಿರೋದು ಬಿಟ್ಟು’ ಎಂದು ಗದರಿಸಿದರು. ‘ಅಮ್ಮ ತಂಗಳು ಕೊಡುತ್ತೇನೆ ಎಂದರು’, ಅಂದು ಅವನು ಬಾಗಿ ನಮಸ್ಕರಿಸಿದ. ತನಗೆ ಮಾಡಿಟ್ಟ ಅನ್ನವನ್ನೂ ಹುಳಿಯನ್ನೂ ಸರೋಜ ಅವನಿಗೆ ಸುರಿದು ಒಳಹೋದಳು. ಶಾಸ್ತ್ರಿ ಇನ್ನೇನು ಪಂಡಿತ ಬಂದು ಬಿಡುವ ಹೊತ್ತೆಂದು ಅಂದುಕೊಳ್ಳುತ್ತಿದ್ದಂತೆ, ತನ್ನ ಒಳಗೆ ಈಳಿಡುವುದಕ್ಕೆ ಶುರುವಾದ್ದನ್ನು ಗಮನಿಸಿ, ಅದು ಆವೇಶಗೊಳ್ಳಲು ಕಾಯುತ್ತ, ಕಛೇರಿಯಲ್ಲಿ ಕೂತರು. ‘ಇವತ್ತು ಕೊನೆ’ ಎಂದು ಸಂಕಲ್ಪ ಮಾಡಿಕೊಂಡರು. ಹಲ್ಲಿ ಶಕುನವಾಯಿತು. ಆಗ ದೊಡ್ಡ ಗಡಿಯಾರ ನಾಲ್ಕು ಗಂಟೆಗಳನ್ನು ಗವ್ವೆನ್ನುವ ತನ್ನ ಮಿದುಳೊಳಗೆ ಬಡಿಯುತ್ತ ಹೋದದ್ದು ನೆನೆಪಾಗುತ್ತದೆ.

ಇದ್ದಕ್ಕಿದ್ದಂತೆ ಬಚ್ಚಲಿನಲ್ಲಿ ವಾಂತಿ ಮಾಡುವ ಧ್ವನಿ ಕೇಳಿಸಿತು. ಎದ್ದು ಹೋಗಿ ನೋಡಿದರೆ ಸರೋಜ ವಾಂತಿಯಾಗದೆ ವಾಂತಿ ಮಾಡಲು ಪ್ರಯತ್ನಿಸಿತ್ತಿದ್ದಾಳೆ. ಕಣ್ಣು ಕತ್ತಲೆ ಕಟ್ಟಿದಂತಾಗಿ “ಮುಂಡೇ ಬಸುರಾಗಿಬಿಟ್ಟೆಯಾ?” ಎಂದು ದೆವ್ವದಂತೆ ಕೇಳಿದರು. ಅವಳು ಬಾಗಿ ನಿಂತವಳು ಕತ್ತನ್ನು ಹಂದಿಸಿದ್ದು, ವಾಂತಿಯನ್ನು ಹೊರತರಲೆಂದೋ, ಅಥವಾ ಹೌದೆಂದು ತನಗೆ ಉತ್ತರಿಸಲೋ ಎಂದು ಎಲ್ಲ ಮುಗಿದ ಮೇಲೆ ಅವರು ಯೋಚಿಸಿದ್ದಿದೆ. ಆದರೆ ಅವತ್ತು ಅವಳು ಹೌದೆಂದು ಉತ್ತರಿಸಿದಂತೆ ಮಾತ್ರ ಕಂಡಿತ್ತು. ಸರೋಜ ನೇರವಾಗಿ ನಿಂತು, ಚೊಂಬಿನಿಂದ ನೀರು ತೆಗೆದುಕೊಂಡು ಬಾಯಿ ಮುಕ್ಕಳಿಸಿದ್ದಳು. ತನಗೆದುರಾಗಿ ಆಗ ಹೇಗೆ ನಿಂತುಬಿಟ್ಟಳು!

“ಆ ಮುಂಡೇ ಮಗ ಪಂಡಿತನಿಗೆ ಬಸುರಾಗಿ ಬಿಟ್ಟೆಯಾ ಹಾದರಗಿತ್ತಿ?” ಎಂದು ಊಳಿಡುತ್ತ ತನ್ನ ಒಳಗಿನ ದೆವ್ವ ವಿಕಾರವಾಗಿ ನಗಲು ಪ್ರಾರಂಭಿಸಿತ್ತು. ಸರೋಜ ಆಗ ನಿರ್ವಿಕಾರವಾಗಿ ಶಾಂತವಾಗಿ ನಿಂತಿದ್ದಲ್ಲವೆ? ಉಸಿರಾಟದಲ್ಲಿ ಏರಿ ಇಳಿಯುವ ಅವಳ ಎಡ ಮೊಲೆಯ ಮೇಲೆ ಅವಳು ತೊಟ್ಟ ತಾಯಿತ ಇತ್ತಲ್ಲವೆ? ಯಾಕೆ ತಾನು ಅಷ್ಟು ಪೂರ್ಣವಾಗಿ ಆ ಕ್ಷಣದಲ್ಲಿ ಮೈಮರೆತುಬಿಟ್ಟೆ? ಅವಳ ನಿರ್ಲಕ್ಷ್ಯದ ಕಣ್ಣುಗಳು ದಿವ್ಯ ಲಾವಣ್ಯವನ್ನು ಕಂಡು ತಡೆದುಕೊಳ್ಳಲಾರದೆ ಹೋಗಿಬಿಟ್ಟನೆ? ಅಥವಾ ಆ ಕಣ್ಣುಗಳು ‘ಅದನ್ನು ಕೇಳಲು ಯಾವ ಮುಂಡೇ ಮಗನೋ ನೀನು?’ ಎನ್ನುತ್ತಿದ್ದಂತೆ ನನಗೆ ಭಾಸವಾಯಿತೆ? ಅಥವಾ ಮುಂದಿನ ಭೀಕರ ಕ್ರಿಯೆಗೆ ಸಜ್ಜಾಗಲು ಭವದ ತನ್ನ ಈ ಶರೀರ ಹಾಗೆಂದುಕೊಂಡಿತೆ?

ಹಂಡೆಯ ಮೇಲೆ ಮುಚ್ಚಿದ ಭಾರವಾದ ಮಣೆಯನ್ನು ಎತ್ತಿಕೊಂಡುಬಿಟ್ಟೆ. ಆಗ ಅವಳು ತನ್ನ ನೆತ್ತಿಯ ಮೇಲೆ ತನ್ನ ಎರಡು ಕೈಗಳನ್ನು ಎತ್ತಿ ಇಟ್ಟುಕೊಂಡು ತಲೆಬಾಗಿಸಿದ್ದಳು. ಆದರೆ ಅದು ಯಾಚನೆಯಂತಾಗಲೀ, ಭಯಗೊಂಡಂತಾಗಲೀ ತನಗೆ ಅನ್ನಿಸಲಿಲ್ಲ. ಕಣ್ಣಿ ಬಿಚ್ಚಲು ಹೋದಾಗ ಹಸುಗಳು ಕತ್ತನ್ನಲ್ಲಾಡಿಸಿ ಕೊಸರಿಕೊಳ್ಳುವಂತೆ ಅವಳು ಮಾಡಿದ್ದು ಕಂಡಿತ್ತು. ಮುಂದೇನು ಅರಿಯುವುದರ ಒಳಗೆ ಎರಡು ಮೂರು ಸಾರಿ ಅವಳನ್ನು ಜಪ್ಪಿದ್ದರು. ರಕ್ತ ಝಲ್ಲೆಂದು ತನ್ನ ಮುಖದ ಮೇಲೆ ಚಿಮ್ಮಿತ್ತು. ಕುಸಿದು ಬಿದ್ದ ಅವಳನ್ನು ತನ್ನ ಎರಡು ಕೈಗಳಲ್ಲೂ ಎತ್ತಿ, ದೆವ್ವದಂತೆ ಅಟ್ಟಹಾಸದಲ್ಲಿ ಎರಡು ಕಾಲುಗಳನ್ನೂ ದಾಪು ಹಾಕಿ ಇಡುತ್ತ ಬಚ್ಚಲಿನಿಂದ ಹಿತ್ತಲಿಗೆ ಬಂದಿದ್ದರು. ಕೆಮ್ಮಣ್ಣಿನ ಹಸಿ ಗುಂಡಿಯಲ್ಲಿ ಸತ್ತವಳಂತೆ ತನ್ನ ತೋಳುಗಳಲ್ಲಿ ಚೆಲ್ಲಿಕೊಂಡ ಅವಳನ್ನು ಬಿಸಾಡಿ, ಊಳಿಡುತ್ತ ಒಳಬಂದು, ತನ್ನ ಬಟ್ಟೆ ಬದಲಾಯಿಸಿ, ರಕ್ತದಿಂದ ಒದ್ದೆಯಾದ ತನ್ನ ಬಟ್ಟೆಗಳನ್ನು ಕೆಮ್ಮಣ್ಣು ಗುಂಡಿಯಲ್ಲಿ ಬಿದ್ದುಕೊಂಡಿದ್ದ ಅವಳ ಮೇಲೆಸಿದು, ತಾನು ಕಾರು ಹತ್ತಿ ವೇಗವಾಗಿ ಚಲಿಸಿಬಿಟ್ಟದ್ದು. ತಲೆಯ ಹಿಂಭಾಗದಲ್ಲಿ ಪೆಟ್ಟುತಿಂದು ಎಚ್ಚರ ತಪ್ಪಿದ ಅವಳು ಸತ್ತಿರಬಹುದೇ ಎಂಬ ಅನುಮಾನ ತನಗೇಕೆ ಆಗ ಆಗಲೇ ಇಲ್ಲ? ದುರ್ದೈವವಶಾತ್ ಹಾಗೇನಾದರೂ ಆಗಿದ್ದರೆ, ಮತ್ತೆ ಪೆಟ್ಟು ತಿಂದು ಅವಳು ಸತ್ತೇ ಹೋಗಿರುತ್ತಿದ್ದಳು.

ಇನ್ನೇನು ಪಂಡಿತ ಬಂದುಬಿಡುತ್ತಾನೆ. ನೋಡಿ ಬಿಡುತ್ತಾನೆ. ಪೋಲೀಸಿಗೆ ದೂರು ಕೊಡುತ್ತಾನೆ ಎಂದುಕೊಳ್ಳುತ್ತ, ಅವನನ್ನೂ ಸಾಯಿಸಿ ಗುಂಡಿಗೆಸೆದು ಬಿಡುವುದೆಂದು ಕೇರಳಕ್ಕೆ ಹೋಗಿ ಅಲ್ಲಷ್ಟು ದಿನ ಇದ್ದು ಬಿಡುವುದೆಂದು ಕಾಸರಗೋಡಿನ ಕಡೆ ಹೋಗುತ್ತಿದ್ದವರು ಕಾರನ್ನು ಹಿಂದಕ್ಕೆ ತಿರುಗಿಸಿ ಮತ್ತೆ ಮನೆಗೆ ಅವರು ಬಂದಾಗ ರಾತ್ರಿ ಎಂಟು ಗಂಟೆಯಾಗಿಬಿಟ್ಟಿತ್ತು. ಅಮಾವಾಸ್ಯೆಯ ಕತ್ತಲು ಕವಿದುಬಿಟ್ಟಿತ್ತು. ಬೀಗ ಹಾಕಿ ಹೋಗಲು ತಾನು ಆವೇಶದಲ್ಲಿ ಮರೆತೇ ಬಿಟ್ಟಿದ್ದೆ. ಮನೆಯ ಒಳಗೆ ಬಂದರೆ ಗವ್ವೆಂದಿತ್ತು.

ಪಂಡಿತ ಬಂದು ಹೋಗಿಬಿಟ್ಟಿರಬಹುದೆ? ಇನ್ನೇನು ಬಂದುಬಿಡಬಹುದೆ? ಎಂದುಕೊಳ್ಳುತ್ತ, ಕತ್ತಲಿನಲ್ಲಿ ಸೀದ ಕೆಮ್ಮಣ್ಣಿನ ಗುಂಡಿಗೆ ಹೋಗಿ ಮೇಲೆ ಒಟ್ಟು ಮಾಡಿದ ಕೆಮ್ಮಣ್ಣನ್ನೆಲ್ಲ ಒಂದು ಗಂಟೆಯ ಕಾಲ ಹಾರೆಯಿಂದ ಎಳೆದೆಳೆದು ಬುಸುಗುಡುತ್ತ ಹೊಂಡ ತುಂಬಿಸಿದ್ದರು. ಹೆಣವನ್ನು ಮುಚ್ಚಿಯಾಯಿತು; ನಾಳೆ ಬೆಳಿಗ್ಗೆ ಎದ್ದು, ನೆಲಸಮವಾಗುವಂತೆ ಇನ್ನಷ್ಟು ಮಣ್ಣು ಮುಚ್ಚಿ, ಅಲ್ಲೊಂದು ಹಲಸಿನ ಸಸಿ ನೆಟ್ಟು ಬಿಡುವುದು ಎಂದುಕೊಂಡು ಮನೆಯ ಎದುರು ಕತ್ತಿಯನ್ನು ಹಿಡಿದು ಕೂತರು. ಪಂಡಿತನನ್ನು ಸಾಯಿಸಲು ಕಾದರು.

ನಡುರಾತ್ರೆಯಾದರೂ ಪಂಡಿತ ಬರಲೇ ಇಲ್ಲ. ಅರೆ, ಮಾಯಾವಿ ಬಂದುಬಿಟ್ಟು ಹೋಗಿರಬಹುದೇ? ಪೋಲೀಸಿಗೆ ದೂರುಕೊಟ್ಟು ಬಿಡುವನೆ? ಎಂದು ತವಕಿಸುತ್ತ ನಿದ್ದೆ ಮಾಡದೆ ಕಾದರು. ಯಾರೂ ಬದಲಿಲ್ಲ. ಪೋಲೀಸರು ಬರಲಿಲ್ಲೆಂದು ಸಮಾಧಾನವಾಯಿತು.

ಬೆಳಗಾದ ಮೇಲೆ ಗುಂಡಿಯ ಹೊರಗೆ ಇನ್ನೂ ಉಳಿದಿದ್ದ ಕೆಮ್ಮೆಣ್ಣನ್ನು ಎಳೆದು ಹಾಕಿ, ಮನೆಗೆ ಭದ್ರವಾದ ಬೀಗ ಹಾಕಲು ಮರೆಯಲಿಲ್ಲ. ಕಾರು ನಡೆಸಿಕೊಂಡು ಸೀದಾ ಮಂಗಳೂರಿಗೆ ಹೋಗಿ ಅಲ್ಲೊಂದು ಹೋಟೆಲಲ್ಲಿ ಉಳಿದರು. ಆತಂಕದಲ್ಲಿ ಎರಡು ದಿನ ಕಾದು ತಾನು ಕ್ಷೇಮವಾಗಿದ್ದೇನೆಂದು ಆಶ್ಚರ್ಯಪಡುತ್ತ ಮನೆಗೆ ಹಿಂದಿರುಗಿದ್ದರು.

ಕೆಮ್ಮಣ್ಣು ಗುಂಡಿ ತಾನು ಮುಚ್ಚಿದಂತೆಯೇ ಇತ್ತು. ಅಂಗಳದಲ್ಲಿ ಪಂಡಿತನ ಕಾರಿನ ಚಕ್ರದ ಗುರುತಿತ್ತು. ತಾನು ಕೊಲೆ ಮಾಡಿದ ನಂತರ ಮನೆ ಬಿಟ್ಟು ಹೋದ ಹೊತ್ತಿನಲ್ಲಿ ಅವನು ಬಂದು ಹೋಗಿರುವ ಗುರುತೆ? ಎಂದು ಅನುಮಾನಿಸುತ್ತ ಅವರು ದೇವರ ಕೋಣೆಗೆ ಹೋದರು. ಅಲ್ಲಿ ಅವರ ತಿಜೋರಿಯ ಬಾಗಿಲು ತೆರೆದಿತ್ತು. ಅದರೊಳಗೆ ಬಂಗಾರವಿಟ್ಟ ಟ್ರಂಕಿರಲಿಲ್ಲ. ಕೊಲೆ ಮಾಡಿಬಿಟ್ಟಿದ್ದರ ಆತಂಕ ಮಾಯವಾಗಿ ಪಂಡಿತನ ಮೇಲಿನ ಕ್ರೋಧ ಊಳಿಡಲು ತೊಡಗಿತ್ತು.

ಕಳುವು ಮಾಡಿ ನಡೆದುಬಿಟ್ಟ ಮಾಯಾವಿ, ಅವನ ಕಣ್ಣಿದ್ದದ್ದು ಬಂಗಾರದ ಮೇಲೇ ಹೊರತು ಸರೋಜಳ ಮೇಲಲ್ಲ. ಆದರೆ ಬಸಿರೂ ಮಾಡಿಬಿಟ್ಟ ಮಾಯಾವಿ – ಎಂದು ವ್ಯಾವಹರಿಕವಾಗಿ ಲೆಖ್ಖಾಚಾರ ಹಾಕುತ್ತ, ಅವನೇ ಕೊಲೆ ಮಾಡಿ ಬಿಟ್ಟನೆಂದು ದೂರುಕೊಟ್ಟು ಬಿಡಲೆ ಎಂದು ವಿಚಾರ ಮಾಡುತ್ತ ಕಾರುಬಿಟ್ಟುಕೊಂಡು ಉಡುಪಿಗೆ  ಹೋಗಿ ಪಂಡಿತನ ಅಂಗಡಿಯೆದುರು ನಿಲ್ಲಿಸಿದರು.

ಅಂಗಡಿ ಬಾಗಿಲು ಹಾಕಿತ್ತು. ‘ಎಲ್ಲಿ?’ ಎಂದು ಕೆಂಪಾದ ತನ್ನ ಕಣ್ಣು ತೆರೆದು ಪಕ್ಕದ ಅಂಗಡಿಯವನನ್ನು ಕೇಳಿದರು.

“ಆವತ್ತು ಒಂದು ದಿನ ಸಾಯಂಕಾಲ, ಮೂರು ದಿನಗಳ ಕೆಳಗೆ, ಹೌದೂ ಅಮಾವಾಸ್ಯೆ ದಿನ ಬುಧವಾರದ ಸಾಯಂಕಾಲ ಅವರು ಹೋದವರು ಮತ್ತೆ ಬಂದಿಲ್ಲ. ನಿಮ್ಮ ಮನೆಗೆ ಹೋದದ್ದು ಎಂದುಕೊಂಡಿದ್ದೆ.” ಎಂದು ಅಂಗಡಿಯ ಕಾಮತ ತನ್ನ ಮಾತಲ್ಲೊಂದು ಇಂಗಿತವಿದ್ದಂತೆ ಹುಸಿಯಾಗಿ ನಕ್ಕಿದ್ದನೆ? ಅವನೂ ತನ್ನ ವಾರಿಗೆಯವನೇ. ಮಕ್ಕಳು ಮರಿ ಪಡೆದು ಸುಖವಾಗಿದ್ದು ಲಾರಿಯನ್ನೂ ಇಟ್ಟವ ಆತ. ಅವನಿಗೆ ತಾನೊಬ್ಬ ಕೊಲೆಗಾರ ಎಂದು ಅನ್ನಿಸಿರಲಿಲ್ಲೆಂದು ಸಮಾಧಾನವಾಗಿತ್ತು. ತನ್ನಲ್ಲೊಬ್ಬ ಗಿರಾಕಿಯನ್ನು ಮಾತ್ರ ಕಂಡು, “ಹೈದರಾಬಾದು ಕಡೆಯ ಇಳ್ಳೆಯ ತೊಗರಿ ಬೇಳೆ ತರಿಸಿದ್ದೇನೆ. ಒಂದು ಚೀಲ ಮಾತ್ರ ಉಳಿದಿದೆ. ಎತ್ತಿಸಿ ನಿಮ್ಮ ಕಾರಿಗೆ ಹಾಕಿಸಲ” ಎಂದಿದ್ದ.

ಬೇಡವೆಂದು ಸೀದ ತಾನು ರಾಧೆಯ ಮನೆಗೆ ಹೋಗಿದ್ದೆ.

ಇಷ್ಟು ದಿನ ಕಾಣಿಸಿಕೊಳ್ಳದ ತನ್ನನ್ನು ಉಪಚರಿಸುತ್ತ ರಾಧೆ ಹಣೆಮುಟ್ಟಿ ‘ಅಯ್ಯೋ ಜ್ವರ’ವೆಂದು, ಹಾಸಿಗೆ ಹಾಸಿ ತನ್ನನ್ನು ಮಲಗಿಸಿದ ಮೇಲೆ ತಾನು ಪ್ರಥಮ ಬಾರಿಗೆ ರಾಧೆಗೊಂದು ಸುಳ್ಳು ಹೇಳಿದ್ದು:

“ಮೂರು ದಿನಗಳ ಕೆಳಗೆ ನನ್ನ ದರಿದ್ರದವಳು ಪಂಡಿತನ ಜೊತೆ ಓಡಿಹೋಗಿಬಿಟ್ಟಳು. ಹಾದರಗಿತ್ತಿ ತಿಜೋರಿಯಲ್ಲಿದ್ದ ಬಂಗಾರವನ್ನೂ ಲಪಾಟಾಯಿಸಿ ಬಿಟ್ಟಳು” ಎಂದಿದ್ದರು. ಪಂಡಿತನ ಮೇಲೆ ಕೊಲೆಯ ದೂರು ಕೊಡುವುದೂ ಬೇಡ, ಕ್ರಿಮಿನಲ್ ಸೂಟಿನ ಉಪದ್ವ್ಯಾಪವೂ ಬೇಡ ಎಂದು ಸುಸ್ತಾದ ತನ್ನ ವ್ಯವಹಾರ ಬುದ್ಧಿಗೆ ಹೊಳೆದಿತ್ತು.

ಮನೆಗೆ ಬಂದು ಗದ್ದೆಯಿಂದ ಮಣ್ಣು ತರಿಸಿ ಕೆಮ್ಮಣ್ಣುಗುಂಡಿಯನ್ನು ಪೂರ್ಣ ಮುಚ್ಚಿಸಿದರು. ಅದರ ನಡುವೆಯೊಂದು ಹಲಸಿನ ಸಸಿ ತಂದು ಸ್ವತಃ ನೆಟ್ಟರು. “ಇದರ ತೊಳೆ ಜೇನುತುಪ್ಪಕ್ಕೆ ಸಮನಾಗಿರುವುದಂತೆ” ಎಂದು ಕಂಡ ಕಂಡವರಿಗೆ ಹೇಳಿದರು. ಉರಿಮುಖದ ಶಾಸ್ತ್ರಿಗಳು ಥಟ್ಟನೇ ಕಾಣಿಸಿಕೊಂಡ ಸ್ನೇಹಪರತೆಗೆ ಜನ ಬೆರಗಾದರು.