ಶಾಸ್ತ್ರಿಗಳು ಟ್ಯಾಕ್ಸಿಯಿಂದಿಳಿದು ಸಿಳ್ಳೆ ಹಾಕುತ್ತ ಸುಖಿಸುತ್ತಿದ್ದ ಡ್ರೈವರಿಗೆ ಕಾಯುವಂತೆ ಹೇಳಿ ತನ್ನ ಚೀಲ ತೆಗೆದುಕೊಂಡು ರಾಧೆಯ ಮನೆಗೆ ಹೋದನು.

“ಇಗೋ ಮದ್ರಾಸಿನಿಂದ ನಿನಗೆಂದು ತಂದ ಸೀರೆ” ಎಂದು ಕೊಟ್ಟರು. ರಾಧೆಗೆ ಸಂತೋಷವಾದರೂ ಶಾಸ್ತ್ರಿಗಳು ಅನ್ಯಮನಸ್ಕರಾಗಿರುವುದು ಕಂಡು “ಏನು ಸಮಾಚಾರ?” ಎಂದು ಕೇಳಿದಳು. ತನ್ನ ಉತ್ತರದ ಸಮಾಧಾನ ಶಾಸ್ತ್ರಿಗಳಿಗೆ ಆಶ್ಚರ್ಯ ಹುಟ್ಟಿಸಿತ್ತು. “ನಿನಗೊಂದು ಸುಳ್ಳು ಹೇಳಿದ್ದೆ ಎಂದುಕೊಡಿದ್ದೆ. ಆದರೆ ಅದೇ ನಿಜವಿದ್ದೀತು ಎಂದು ನಲವತ್ತೈದು ವರ್ಷಗಳ ನಂತರ ಅನ್ನಿಸಕ್ಕೆ ಶುರುವಾಗಿದೆ” ಎಂದು ತನ್ನ ಸದ್ಯದ ಅತಂತ್ರ ಸ್ಥಿತಿಯನ್ನು ಸವಿವರವಾಗಿ ಹೇಳಿದ್ದರು.

“ರೋಷದಲ್ಲಿ ನಾನವಳ ಕತ್ತಿನಲ್ಲಿ ನೋಡುತ್ತಿದ್ದ ತಾಯಿತವನ್ನು ಮತ್ತೆ ಕಂಡು, ಅದೊಂದು ಮತ್ತೆ ಸತ್ತು ಹುಟ್ಟಲು ನನಗೊಂದು ಸಂಜ್ಞೆಯಾಗಿ ಬಿಟ್ಟಿತು” ಎಂದು ನಿಟ್ಟುಸಿರೆಳೆದಿದ್ದರು:

“ಆದರೆ ಅವನು ನನ್ನ ಮಗನೋ, ಪಂಡಿತನ ಮಗನೊ ಹೇಗೆ ಹೇಳಲಿ? ಮಹಾದೇವಿಗೆ ಮಗಳು ಹುಟ್ಟಿದ ಮೇಲೆ ನನಗೇ ಸರೋಜ ಬಸಿರಾದ್ದೋ ಏನೋ ಎಂದು ಅನುಮಾನವಾಗಿತ್ತು. ನಾನವಳನ್ನು ಕೊಂದು ನನ್ನ ಮಗುವನ್ನೂ ಕೊಂದಂತಾಗಿ ರೌರವ ನರಕದಲ್ಲಿ ನರಳಬೇಕಾದೀತೆಂದು ಹೀಗೆಲ್ಲ ವೇಷ ಕಟ್ಟಿಕೊಂಡು ಪುರಾಣ ಪ್ರವಚನಗಳಲ್ಲಿ ಜೀವ ಸವೆಸುತ್ತ ಬಂದೆ. ಆದರೂ ಈ ದೆವ್ವ ಹೊಕ್ಕ ಶರೀರ ಏನೂ ಕಲಿಯದೇ ಉಳಿದೇ ಬಿಟ್ಟಿತು. ಮಗಳನ್ನು ಸಾಯಿಸಬಹುದಾದಷ್ಟು ನನಗೆ ಸಿಟ್ಟು ಬಂದಿತ್ತಲ್ಲವೆ? ನನಗೇ ಅವಳು ಹುಟ್ಟಿದ್ದು ಹೌದೋ ಎಂದೂ ಅನ್ನಿಸಿತ್ತಲ್ಲವೆ? ಆದರೆ ಅವಳು ನನ್ನಿಂದ ಪಾರಾದಳು. ಈಗ ಮಹಾದೇವಿಗೆ ನನ್ನನ್ನು ಸಾಯಿಸಬೇಕೆನ್ನುವಷ್ಟು ರೋಷ ಉಕ್ಕುತ್ತದೆ. ನನಗೂ ಉಕ್ಕುತ್ತದೆ. ಆದರೆ ನಿನ್ನ ಜೊತೆ ಹೀಗೆ ಮಾತಾಡಿಕೊಂಡಿರುವ ನಾನು ಯಾರು? ಮಗನೆಂದು ಅನುಮಾನವಾಗಿ ಅವನು ಕುಟ್ಟವಲಕ್ಕಿ ತಿನ್ನುವುದು ನೋಡುತ್ತ ಕರುಳು ಹಿಂಡುವಷ್ಟು ವಾತ್ಸಲ್ಯಭಾವ ಹುಟ್ಟಿದ ಈ ನಾನು ಯಾರು?”

ಶಾಸ್ತ್ರಿಗಳು ಗಂಟಲು  ಆರ್ದ್ರವಾಯಿತು. ಹೀಗೆ ತಾನು ಆರ್ದ್ರವಾಗಿಬಿಟ್ಟು ರಾಧೆಯ ಕಾರುಣ್ಯ ಪಡೆದು ತನ್ನ ನರಕವನ್ನು ದಿಟ್ಟಿಸಿ ನೋಡಲಾರದ ಹೇಡಿಯಾಗಬಾರದು ಎಂದುಕೊಂಡರು. ರಾಧೆಯ ಕಡೆ ಉತ್ತರ ನಿರೀಕ್ಷಿಸುತ್ತ ನೋಡಿದರು.

“ನಾನು ನಿಮಗೆ ಹೇಳಿರಲಿಲ್ಲ. ಇಲ್ಲೆಲ್ಲ ಆಳು ಕಾಳುಗಳು ನೀವೇ ಹೆಂಡತಿಯನ್ನು ಕೊಂದು ಕೆಮ್ಮಣ್ಣು ಗುಂಡಿಯಲ್ಲಿ ಹುಗಿದಿರಿ ಎಂದುಕೊಳ್ಳುತ್ತಿದ್ದರಂತೆ. ಅದಕ್ಕೆ ಅಲ್ಲಿ ನೆಟ್ಟ ಹಲಸಿನ ಮರದಲ್ಲಿ ಫಲ ಬಿಡುತ್ತಿಲ್ಲ ಎನ್ನುತ್ತಾರಂತೆ. ನಿಮಗೆ ನೋವಾಗಬಾರದೆಂದು ನಾನು ಹೇಳಲಿಲ್ಲ” ಎಂದು ರಾಧೆ ನಿಟ್ಟುಸಿರಿಟ್ಟು, “ದೇವರೇ ನಿಮ್ಮನ್ನು ಕಾಪಾಡಿದ” ಎಂದು ಹಾಲು ಹಣ್ಣು ತರಲು ಹೋದಳು. ಮತ್ತೆ ಬಂದವಳು ಕೆಳಗೆ ಶಾಸ್ತ್ರಿಗಳು ಕಾಲೊತ್ತಲು ತೊಡಗಿದಳು. ಬೇಡವೆಂದು ಕಾಲೆಳೆದುಕೊಂಡ ಶಾಸ್ತ್ರಿಗಳು,

“ಅವನು ಕೆಮ್ಮಣ್ಣು ಗುಂಡಿಯಿಂದ ಅವಳನ್ನೂ, ತಿಜೋರಿಯಿಂದ ಬಂಗಾರವನ್ನೂ ಎತ್ತಿಕೊಂಡು ಹೋಗಿ ಅರ್ಧ ಸತ್ತವಳನ್ನು ಮತ್ತೆ ಬದುಕಿಸಿರಬೇಕು ಅಲ್ಲವ? ಅವನು ಕಳ್ಳನಲ್ಲವೆನ್ನಿಸತ್ತೆ. ಎಲ್ಲ ಬಂಗಾರವೂ ಅವಳು ಹೊಳೆಯ ಪಾಲಾದಾಗ ಅವಳ ಹತ್ತಿರವೇ ಉಳಿದಿತ್ತಂತೆ. ಆದರೆ ಯಾಕೆ ಅವನೂ ಅವಳನ್ನು ಬಿಟ್ಟುಬಿಟ್ಟ ಹಾಗಾದರೆ? ಅಥವಾ ಅವನು ಸತ್ತು ಅವಳು ಅತಂತ್ರಳಾಗಿ ತ್ರಿಪಾಠಿಗಳ ಮನೆ ಸೇರಿದಳೇ? ಮಗನಿಗೆ ಐದು ವರ್ಷಗಳಾಗುವ ತನಕವಾದರೂ ಪಂಡಿತನ ಜೊತೆಯೇ ಅವಳು ಬಾಳ್ವೆ ಮಾಡಿರಬೇಕು. ಕುಂಕುಮವಿಟ್ಟುಕೊಂಡೇ ಅವಳು ತ್ರಿಪಾಠಿಗಳ ಆಶ್ರಯ ಪಡೆದಿದ್ದೆಂದು ಕೇಳಿದೆ” ಎಂದರು. ಒಂದಷ್ಟು ಹೊತ್ತು ಮೌನವಾದರು.

“ನನಗೆ ಹಾಗೆ ಅನ್ನಿಸಬಾರದು ಆದರೂ ಅನ್ನಿಸುತ್ತೆ. ಪಂಡಿತನ ಮಗನೇ ಅವನಾಗಿರಬಹುದಲ್ಲವೆ? ಅಥವಾ ಅದು ನಾನೇ ದೆವ್ವದಂತೆ ಊಳಿಡುತ್ತ ಅವನನ್ನು ಹುಟ್ಟಿಸಿರಬಹುದು. ನನಗೀಗ ಏನೂ ತೋಚದು. ಅಥವಾ ಅದು ಅವಳೋ ಅವಳ ಹಾಗಿನ ಇನ್ನು ಯಾರೋ?” ಎಂದು ದೇವರೇ ಈ ಅಂತರ ಪಿಶಾಚಿತ್ವದ ಅನುಮಾನಗಳಿಂದ ನನ್ನನ್ನು ಪಾರು ಮಾಡು ಎಂದು ಮೌನವಾಗಿ ಪ್ರಾರ್ಥಿಸಿದರು.

ರಾಧೆ ಅವರ ಪಕ್ಕಬಂದು ಕೂತು ಅವರ ಕೈಗಳನ್ನು ಮುದ್ದಾಗಿ ಹಿಡಿದು,

“ನಿಮ್ಮ ಮಗನೆಂದೇ ತಿಳಿದುಕೊಳ್ಳಿ” ಎಂದಳು.

“ಹಾಗೆ ಒಂದು ಕ್ಷಣ ಎನಿಸತ್ತೆ. ಇನ್ನೊಂದು ಕ್ಷಣ ಪಂಡಿತ ಅವನನ್ನು ಹುಟ್ಟಿಸಿದ ಎಂದು ಹೊಟ್ಟೆಯಲ್ಲಿ ಬೆಂಕಿ ಬಿದ್ದ ಹಾಗಾಗುತ್ತೆ” ಎಂದು ಶಾಸ್ತ್ರಿಗಳು ಹಾಲನ್ನು ಕುಡಿಯದೆ ಎದ್ದರು.

“ಯಾಕೆ?” ಎಂದು ರಾಧೆ ಕೇಳಿದರೆ “ಇನ್ನು ಮುಂದೆ ಏಕಾದಶಿ ದಿನ ಹಾಲನ್ನೂ ಬಿಟ್ಟು ಬಿಡುತ್ತೇನೆ” ಎಂದರು.