ಮಂಗಳೂರಿನ ತನ್ನ ಮೂರನೇ ದಿನದ ಬೆಳಿಗ್ಗೆ ಬಹುಬೇಗ ಎದ್ದಿದ್ದೇನೆಂದು ತಿಳಿದು ಹೊರಬಂದ ದಿನಕರ ತನಗಿಂತಲೂ ಬೇಗ ಎದ್ದು ಬಿಟ್ಟಿದ್ದ ಅಮ್ಮ ಅಂಗಳವನ್ನು ಗುಡಿಸಿ, ಸಾರಿಸಿ, ರಂಗೋಲೆಯಿಕ್ಕಲು ತಯಾರಾಗಿದ್ದುದನ್ನು ಕಂಡ. “ನಿದ್ದೆ ಮಾಡಿದೆಯಾ? ಕುರ್ಚಿತಂದು ಕುಳಿತುಕೋ. ಇವತ್ತು ಏನು ಬಿಡಿಸುತ್ತೇನೆ ನೋಡು. ನಿನ್ನ ಕೊರಳಿನ ತಾಯಿತದಲ್ಲಿ ಇರೋ ಶ್ರೀಚಕ್ರಾನ್ನ ಇಡೀ ಅಂಗಳ ತುಂಬುವ ಹಾಗೆ ಬಿಡಿಸುತ್ತೇನೆ. ಅದು ನಿನ್ನ ತಾಯಿಯ ರಕ್ಷೆಯಲ್ಲವ? ನಿನ್ನನ್ನು ಕಾಪಾಡಿಕೊಂಡು ಬಂದಿದ್ದಲ್ಲವ?” ಎಂದು ಬಿಡಿಸಲು ತೊಡಗಿದರು.

ಅವರು ಶ್ರೀಚಕ್ರ ಎಂದದ್ದು ಮಾತ್ರ ಅವನಿಗೆ ಅರ್ಥವಾಗಿತ್ತು. ಆದರೆ ನೋಡು ನೋಡುತ್ತ, ಅರಿಶಿನ,ಕುಂಕುಮಗಳಲ್ಲಿ ಅಂಗಳದ ಮೇಲೆ ಏಳುತ್ತ ಹೋದದ್ದನ್ನು ಚೂರು ಚೂರಾಗಿ ಗ್ರಹಿಸುತ್ತ, ಅದು ಪೂರ್ಣ ಎದ್ದಮೇಲೆ ಕಣ್ಣುತುಂಬುವಂತೆ ನೋಡಿದ. ಹೀಗೆ ನೋಡುವಾಗ ಫ್ರೆಶ್ಯಾದ ಕಾಫಿಯನ್ನು ಸೇವಿಸುತ್ತಿದ್ದ.

ಒಂಬತ್ತು ತ್ರಿಕೋಣಗಳು ಒಂದರಲ್ಲಿನ್ನೊಂದು ಸಂಗಮವಾಗಿ, ಸಂಗಮಗೊಂಡದ್ದು ತನ್ನ ಪರಿಧಿಯಲ್ಲಿ ಚಕ್ರವಾಗಿ, ಚಕ್ರವಾದ್ದು ಹೂವಿನ ದಳಗಳಾಗಿ, ಇಡೀ ಹೂವು ಚೌಕಾಕಾರದಲ್ಲಿ ಒಳಗೊಂಡ ಆಕಾರವಾಗಿ, ನಾಲ್ಕುದಿಕ್ಕುಗಳಿಗೆ ಚಾಚಿ ದ್ಯಾವಾಪೃಥವಿಗಳ ಸೃಷ್ಟಿ ಚೈತನ್ಯವನ್ನು ತನ್ನಲ್ಲಿ ಗರ್ಭಿಸಿಕೊಂಡಿತ್ತು. ಅಮ್ಮನ ಧ್ಯಾನದಲ್ಲಿದು ರೂಪ ಪಡೆದಿತ್ತು. ನೋಡುವವನ ಕಣ್ಣುಗಳು ಯೋನಿ ಲಿಂಗಗಳ ಸತತ ಸಂಯೋಗದಲ್ಲಿ ತತ್ಪರವಾಗುತ್ತ, ಕುಂಕುಮ ಮತ್ತು ಅರಿಶಿನದ ಬಣ್ಣಗಳಲ್ಲಿ ತಂಗುತ್ತ, ಚಲಿಸುತ್ತ ಕೇಂದ್ರದ ಬಿಂದುವಿನಲ್ಲಿ ಏಕಾಗ್ರಗೊಳ್ಳುವಂತಿತ್ತು.

ಕಾಫಿ ಕುಡಿದು ಮುಗಿಸಿ ಮನಸ್ಸು ಪ್ರಸನ್ನವಾದಂತಾಗಿ ಮಹಡಿ ಮೇಲಿನ ತನ್ನ ರೂಮಿಗೆ ಹೋಗಿ ಮತ್ತೆ ಬರೆಯುತ್ತ ಕೂತ. ಈಗ ತಾನು ಬಿಟ್ಟುಹೊರಟ್ಟಿದ್ದ ಹೆಂಡತಿಗೆ:

ಪ್ರಿಯ ರಂಜನ,

ಅವತ್ತು ನನಗೆ ಅನ್ನಿಸಿದ ತೀವ್ರವಾದ ದ್ವೇಷ ಮತ್ತು ಅಸೂಯೆಯಲ್ಲೇ ನನ್ನ ಬಿಡುಗಡೆಯ ಮುನ್ಸೂಚನೆಯಿದ್ದೀತು. ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ನಿನ್ನನ್ನು ನುರಿದು ಸಾಯಿಸಬೇಕು ಎನ್ನಿಸಿತ್ತು.

ಹಾಗೆಯೇ ರಂಡೆಯಾಗಿ ಬಿಟ್ಟ ನಿನಗೂ ಕೂಡ ನಿನ್ನ ಬಿಡುಗಡೆ ಅವನಿಂದ ಜಡಿಸಿಕೊಳ್ಳುವಾಗ ಇದ್ದೀತು. ನೀನು ಅವನಿಗೆ ತೆರೆದುಕೊಳ್ಳುತ್ತ ತೆರೆದುಕೊಳ್ಳುತ್ತ ನಿನ್ನ ಎಲ್ಲ ಸಂದಿ ಮೂಲಿಗಳಲ್ಲೂ ಅವನನ್ನು ಪಡೆದು ಸುಖದ ಉತ್ಕಟತೆಯಿಂದ ನರಳುತ್ತಿದ್ದುದನ್ನು ಈಗ ಅಸೂಯೆಯಿಲ್ಲದಂತೆ ನೆನಪು ಮಾಡಿಕೊಳ್ಳಲು ನಾನು ಹೆಚ್ಚು ಹೆಚ್ಚು ಸಮರ್ಥನಾಗುತ್ತ ಹೋದಂತೆ ಹಾಗೆ ನನಗೆ ತಿಳಿಯಲು ತೊಡಗಿದೆ. ಸತ್ತುಬಿಡುತ್ತಿದ್ದೇನೆ ಎನ್ನುವಷ್ಟು, ತಾಳಿಕೊಳ್ಳಲಾರದಷ್ಟು ನಿನಗೊಂದು ಅಪೂರ್ವ ಸುಖದ ಅನುಭವವಾದಾಗಲೂ ಅದು ಸಾಧ್ಯ. ಉಪಾಯಗಾರಳಾದ ರಂಡೆಯಾಗಿಯೇ ನೀನು ಉಳಿದುಬಿಟ್ಟರೆ ನೀನು ಹೊರಳಿಕೊಳ್ಳುವಷ್ಟು ಪರಾಧೀನೆಯಾಗಲಾರೆ. ಪ್ರೇಮೋತ್ಕಟತೆಯಲ್ಲಿ ನನ್ನಿಂದ ಮುಟ್ಟಿಸಿಕೊಂಡ ಹುಡುಗಿಯೊಬ್ಬಳು ಮಹಾಮಾತೆಯಾಗಿರುವುದನ್ನು ನೋಡಿ ಈ ಮಾತನ್ನು ನಾನು ಆಡುತ್ತಿರುವುದು.

ಹಾಗೆಯೇ ನಾನು ಕೊಟ್ಟ ಬಂಗಾರವನ್ನು ನೋಡುತ್ತ ಅದರ ಭ್ರಮೆಯಲ್ಲಿ ನಿನ್ನ ಮುಖ ಅರಳಿದ್ದನ್ನು ನೆನೆದಾಗಲೂ ನೀನು ಪಟ್ಟ ಭ್ರಮೆಯ ಉತ್ಕಟತೆಯೇ ನಿನ್ನಲ್ಲಿ ವೈರಾಗ್ಯವನ್ನೂ ಅರಳಿಸಬಹುದೆಂಬ ಭರವಸೆ ನನಗಿದೆ.

ಇದು ಯಾವತ್ತೂ ಆಗುವುದೋ ಹೇಳಲಾರೆ. ಆದರೆ ಆದಾಗ, ಅದೆಷ್ಟು ಸುಲಭದ್ದು, ಯಾವತ್ತಾದರೂ ನನಗೆ ಅದು ಅನ್ನಿಸಬಹುದಾಗಿತ್ತು ಎಂದು ನಿನಗೆ ಗೊತ್ತಾತುತ್ತದೆ.

ಒಳ್ಳೆಯದಾಗಲಿ. ಆದರೆ ನಾನು ನಿನ್ನನ್ನು ನಿಜವಾಗಿ ಮುಟ್ಟಿ ಪಡೆದಿದ್ದಿಲ್ಲ. ನೀನು ನನ್ನನ್ನು ನಿಜವಾಗಿ ಮುಟ್ಟಿ ಕಂಡಿದ್ದಿಲ್ಲ. ನಿನ್ನ ತೊಡೆಯ ಮೇಲಿನ ಆ ಮಚ್ಚೆಯನ್ನು ಅವನು ಸವರುತ್ತಾನೆಂದು ಆಗೀಗ ನನಗಾಗುವ ಅಸೂಯೆ ತಮಾಷೆಯಾಗಿ ನನಗೆ ಕಾಣಬಹುದೆಂಬ ಭರವಸೆಯಲ್ಲಿ ನಾನಿರುತ್ತೇನೆ. ಇರಲಿ. ಎಂಜಲು ಬುರುಕನಾದ ಒಬ್ಬ ಹಲ್ಕಾನಿಂದ ಅದು ಯಾಕೆ ಹಾಗೆ ಜಡಿಸಿಕೊಳ್ಳುತ್ತೀಯೊ ನನಗೆ ತಿಳಿಯದಾಗಿದೆ.

ನನ್ನ ಫ್ಲ್ಯಾಟನ್ನು ಎಷ್ಟು ದಿವಸಗಳು ಬೇಕಾದರೂ ಇಟ್ಟುಕೋ. ನಾನು ಥಟ್ಟನೆ ಅಲ್ಲಿ ಪ್ರತ್ಯಕ್ಷನಾಗಿ ಬಿಡಬಹುದೆಂಬ ಭಯವೂ ನಿನಗೆ ಬೇಡ. ನನಗೆ ಅಂಥ ಪ್ರಲೋಭನೆಯೂ ಹುಟ್ಟುವುದು ಬೇಡವೆಂದು ರಿಜಿಸ್ಟರ್ಡ್ ಪೋಸ್ಟಿನಲ್ಲಿ ನನ್ನ ಕೀ ಕಳಿಸುತ್ತಿದ್ದೇನೆ.

ಮರೆತಿದ್ದೆ. ಮದುವೆಯಾಗಿ ಒಂದು ವರ್ಷದ ಕಾಲ ನೀನು ಆಸೆಪಟ್ಟು ನನ್ನಿಂದ ಪಡೆದ ಮನೆಯ ಎಲ್ಲ ವಸ್ತುಗಳು ನಿನ್ನವೇ

ನಿನ್ನಿಂದ ಬಳಲಿ ದ್ವೇಷದಿಂದ ಮುಕ್ತನಾಗಲಾರದೆ ದಾರಿ ಹುಡುಕುತ್ತಿರುವ
ದಿನಕರ.

ತನ್ನ ಎಲ್ಲ ಪ್ರೇಯಸಿಯರನ್ನೂ ನೆನೆದುಕೊಂಡು ಒಂದೊಂದಾಗಿ ಪುಟ್ಟ ಪುಟ್ಟ ಪತ್ರಗಳನ್ನು ಬರೆದ.

ಪ್ರಿಯ ಸುದರ್ಶಿನಿ,

ನಿನ್ನನ್ನು ನಾನು ಮನಸಾರೆ ಪ್ರೀತಿಸಲಿಲ್ಲ. ನೀನೂ ನನ್ನನ್ನು ಪ್ರೀತಿಸಲಿಲ್ಲ. ಆದರೆ ಪರಸ್ಪರರ ಆಕ್ರಮಣಕ್ಕೆ ಹಾತೊರೆದೆವು.

ಒಂದು ದಿನ ನೀನು ಗುನುಗಿಕೊಳ್ಳುತ್ತ ಏಕಾಕಿಯಾಗಿ ಒಳಗಣ್ಣಾಗಿ ಕೂತಿದ್ದನ್ನು ನೋಡಿದ್ದು ನೆನಪಾಗುತ್ತದೆ. ಭವದಿಂದ ನೀನು ಬಿಡುಗಡೆ ಪಡೆಯುವ ಸಾಧ್ಯತೆ ಅದರಲ್ಲಿ ನನಗೆ ಕಾಣುತ್ತದೆ.

ಹೀಗೆ,
ದಿನಕರ

ಪ್ರಿಯ ಪ್ರೀತಿ,

ಯೌವನ ಕಳೆಯುತ್ತಿದೆ ಎಂಬ ದಿಗಿಲಿನಲ್ಲಿ ನನ್ನನ್ನು ನೀನು ಕೂಡಬಯಸಿದ್ದು, ಯಾವ ಹೆಣ್ಣೆಂದರೂ ಪ್ರಾರಂಭದ ಕುತೂಹಲದ ನಾನು ನಿನ್ನನ್ನು ಕೂಡಿದ್ದು. ಆಮೇಲೆ ನಿನ್ನಿಂದ ತಪ್ಪಿಸಿಕೊಳ್ಳಲು ನಾನು ಏನೇನೋ ಉಪಾಯಗಳನ್ನು ಹುಡುಕತೊಡಗಿದೆ. ಪ್ರೀತಿಯ ಭ್ರಮೆಯಲ್ಲಿ ನಿನ್ನನ್ನು ಉಳಿಸಿಕೊಂಡೇ ಇದ್ದೆ. ಯಾಕೆಂದರೆ ಯಾವತ್ತೂ ನಿನ್ನಂತೆ ನಾನೂ ಏಕಾಕಿಯೆ.ನನ್ನಿಂದ ಸುಖ ಕಾಣದಿದ್ದಾಗಲೂ ಕೂಡಿದಾಗ ನೀನು ನಿನಗೇ ಮೋಸ ಮಾಡಿಕೊಳ್ಳಲು ನನಗೆ ಹಿತವೆನ್ನಿಸಲೆಂದು ನರಳುತ್ತಿದ್ದಿ. ಅದನ್ನು ನಂಬಿದವನಂತೆ ನಟಿಸುತ್ತಿದ್ದ ನನ್ನ ಮೋಸವನ್ನು ಕ್ಷಮಿಸಿಬಿಡು.

ಒಂದು ದಿನ ನೀನು ಮುಡಿದ ಹೂವನ್ನು ಎಷ್ಟು ಜೋಪಾನವಾಗಿ ಹೆರಳಿನಿಂದ ತೆಗೆದು ಎಲೆಯ ಮೇಲಿಟ್ಟು ಅದನ್ನು ನಿನ್ನ  ಬೆರಳುಗಳಿಂದ ನೀರು ಚಿಮುಕಿಸಿ, ಬೇಕೆನ್ನುವಷ್ಟು ಮಾತ್ರ ಒದ್ದೆ ಮಾಡಿ ಅಕ್ಕರೆಯಲ್ಲಿ ಅದನ್ನು ನೀನು ನೋಡಿದ ನೆನಪಾಗುತ್ತದೆ. ನಾನು ಅದನ್ನು ಬೆರಗಿನಲ್ಲಿ ನೋಡುತ್ತಿದ್ದೇನೆಂಬ ಪರಿವೆ ನಿನಗಿರಲಿಲ್ಲ. ನಮಗೆ ಒಳ್ಳೆಯದಾಗುತ್ತದೆ ಎಂದು ಇದರಿಂದ ಭರವಸೆ ಹುಟ್ಟುತ್ತದೆ.

ವೈರಾಗ್ಯಕ್ಕಾಗಿ ಬಯಸಿ, ಬಯಸುವುದರಿಂದ ಅದನ್ನು ಪಡೆಯಲು ಸಾಧ್ಯವಿಲ್ಲೆಂದು ತಿಳಿದಿರುವ

ಇತಿ ನಿನ್ನ
ದಿನಕರ

ಪ್ರಿಯ ಮಮತಾ,

ನಿನ್ನನ್ನು ಬೆತ್ತಲೆ ನೋಡಲು ನೀನು ಬಿಟ್ಟಿದ್ದೇ ಇಲ್ಲ. ಆದರೆ ಒಂದು ದಿನ ಅವಸರದಲ್ಲಿ ನೀನು ಬಟ್ಟೆ ಬಿಚ್ಚಿ ಹೊದಿಕೆಯ ಒಳಗೆ ಸೇರುವಾಗ ನಿನ್ನ ತೊಡೆಯ ಮೇಲೆ ಅಗಲವಾದ ಬಿಳಿಯ ಲುಕೊಡರ್ಮಾ ಕಲೆಯನ್ನು ಕಂಡೆ. ಅದು ಲೆಪ್ರಸಿಯಲ್ಲವೆಂದು ನನಗೆ ಗೊತ್ತು. ಹಾಗೆ ನಾನು ತಿಳಿದೇನೆಂದು ನಿನಗೆ ಭಯ. ನನ್ನನ್ನು ಮೆಚ್ಚಿಸಲು ನೀನು ಮಾಡದ ತ್ಯಾಗವಿಲ್ಲ. ನನ್ನ ಎಲ್ಲ ಪ್ರೇಯಸಿಯರನ್ನೂ ಅಸೂಯೆಯಿಲ್ಲದಂತೆ ನೀನು ಕಂಡಿ.

ತೊಡೆಯಿಂದ ಕ್ರಮೇಣ ನಿನ್ನ ಮೈಯನ್ನೆಲ್ಲ ಆವರಿಸಿ ಬಿದಬಹುದಾದ ನಿನ್ನ ಲುಕೊಡರ್ಮಾ ರೋಗದಲ್ಲೇ ನಿನ್ನ ಮುಕ್ತಿಯಿದ್ದೀತು. ದೇವರು, ನಿನಗೆ ಅದನ್ನು ಎದುರಿಸುವ ಧೈರ್ಯಕೊಡಲಿ.

ನಿನ್ನಿಂದ ನಾನು ನಿಜವಾಗಿ ಉದ್ರೇಕಗೊಂಡದ್ದಿಲ್ಲ. ಕನಿಕರದಿಂದ ಮಾತ್ರ ನಿನ್ನನ್ನು ಕೂಡುತ್ತಿದ್ದುದು.

ಇತಿ ನಿನಗಾಗಿ ಪ್ರಾರ್ಥಿಸುವ
ದಿನಕರ

ನಾಳೆಯೆದ್ದು ಲಕ್ನೋದವಳಿಗೆ, ಅಲಹಾಬಾದಿನವಳಿಗೆ, ಲಂಡನ್ನಿನಲ್ಲಿರುವವಳಿಗೆ, ತಾನು ಕೂಡಲು ಹೊಂಚುತ್ತಿದ್ದ, ಆದರೆ ವಿಳಂಬಿಸಿ ತನ್ನಲ್ಲಿ ಆಸೆಯನ್ನು ಬೆಳೆಸುತ್ತಿದ್ದ, ದೆಹಲಿ ಪತ್ರಿಕೆಯೊಂದರ ಒಬ್ಬ ವರದಿಗಾರಳಿಗೆ ಬರೆಯುವುದು ಎಂದುಕೊಂಡು, ಬರೆದ ಕಾಗದಗಳನ್ನೆಲ್ಲ ಕವರಿಗೆ ಹಾಕಿದ. ಮಹಾಮಾತೆಗೆ ಬರೆದಿದ್ದನ್ನು ಮಾತ್ರ ಅಂಚೆಗೆ ಹಾಕಿ ಪ್ರಯೋಜನವಿಲ್ಲ. ಅವಳಿಗೆ ಉಸಿರಾಡಲೂ ಪುರುಸೊತ್ತಿಲ್ಲ ಎಂದುಕೊಂಡ. ಟಪ್ಪಾಲು ಪೆಟ್ಟಿಗೆ ಹುಡುಕಿಕೊಂಡು ಮನೆಯಿಂದ ಹೊರಗೆ ಹೊರಟ.

“ವಾಕಿಂಗ್ ಮುಗಿಸಿ ಬಂದವನೇ ಸ್ನಾನ ಮಾಡಿ ತಿಂಡಿ ತಿನ್ನು. ಇವತ್ತು ನಿನಗೆ ಇಷ್ಟವಾಗಬಹುದೆಂದು ದೋಸೆ ಹಿಟ್ಟು ಕಲಸಿಟ್ಟಿದ್ದೇನೆ. ನನ್ನ ಮಗರಾಯ ಏಳುವುದು ಎಷ್ಟು ಹೊತ್ತೋ? ಇವತ್ತು ಅವನಿಗೆ ಕೋರ್ಟಿದೆ ಬೇರೆ” ಎಂದು ಸೀತಮ್ಮ ಕರೆದು ಹೇಳಿದರು. ಅವರ ಮಾತು ಅರ್ಥವಾಗದಿದ್ದರೂ ಅವರ ಆರ್ತತೆ ಹಿತವಾಗಿತ್ತು.