ಸ್ನಾನಕ್ಕೆಂದು ಹೊರಡಲೆಂದಿದ್ದ ನಾರಾಯಣ ತನ್ನ ರೂಮಿಗೆ ಬಂದು ಬಾಗಿಲು ಹಾಕಿಕೊಂಡ.

“ನನಗೇನು ಮಾಡುವುದು ಹೊಳೆಯುತ್ತಿಲ್ಲ” ಎಂದು ಮಾತಿಗೆ ಶುರುಮಾಡಿದ್ದ. ಹಿಂದಿನ ರಾತ್ರೆ ಕುಡಿದುಬಂದವನು ಮಗನನ್ನು ಎಬ್ಬಿಸಿ ತನ್ನ ನಿರ್ಧಾರ ಹೇಳಿದನಂತೆ. ಆಸ್ತಿಯನ್ನೆಲ್ಲ ನಿನಗೆ ಮಾತ್ರ ಬರೆದಿಡುತ್ತೇನೆಂದು ಕೂಡ ಹೇಳಿದ್ದನಂತೆ. ಆದರೆ ಮಗರಾಯ ರೋಷಾವೇಶದಲ್ಲಿ ಕುಣಿದಾಡಿ, ಇಂಥ ಅಪ್ಪನ ಮಗ ತಾನಾಗಿ ಯಾಕೆ ಹುಟ್ಟಿದನೆಂದು ಗೋಳಾಡಿ, ತನ್ನನ್ನು ಎತ್ತಿ ಸಾಕಿದ ಗಂಗೂವನ್ನು ಆಸೆಬುರುಕ ಸೂಳೆಮುಂಡೆಯೆಂದು ಬೈದಾಡಿ, ಪ್ರಸಾದನನ್ನು ಕಪಟ ಸನ್ಯಾಸಿಯೆಂದು ಹೀಯಾಳಿಸಿ ತನ್ನ ತಲೆಯನ್ನು ಗೋಡೆಗೆ ಬಡಿದುಕೊಳ್ಳುತ್ತ, ತಾನು ಈ ಮನೆಯಲ್ಲಿ ಇರುವುದಿಲ್ಲ, ಇರುವುದಿಲ್ಲ ಎಂದು ಕಿರುಚಿದ್ದನಂತೆ. ಮಹಡಿ ಮೇಲಿನ ದಿನಕರನ ಕಿರುಕೋಣೆಯಲ್ಲಿ ಈ ರಾದ್ಧಾಂತ ಕೇಳಿಸಿರಲಿಲ್ಲ. ಕುಡಿದುಬಿಟ್ಟ ಧೈರ್ಯದಲ್ಲಿ ನಾರಾಯಣ ಮಗನ ಹತ್ತಿರ ಮಾತು ಎತ್ತಿರಬೇಕು.

ಈ ರಾದ್ಧಾಂತ ಸೂಕ್ಷ್ಮವಾದ ಕಿವಿಯ ತಾಯಿಗೆ ಕೇಳಿಸಿತ್ತಂತೆ. ಅವರು ಎದ್ದು ಹೋಗಿ ಮೊಮ್ಮಗನನ್ನು ಸಮಾಧಾನ ಮಾಡಿ, “ಮೊದಲು ಈ ಮಾಣಿಗೊಂದು ಮದುವೆ ಮಾಡಿಬಿಡೋ, ಇಲ್ಲವಾದರೆ ಅವನಿಗೆ ಯಾರೂ ಹೆಣ್ಣು ಕೊಡದೆಹೋದಾರು ಅಂತ ಮಾಣಿಗೆ ಭಯವಿರಬಹುದು. ಅಲ್ಲದೆ ಅವನ ಎಲೆಕ್ಷನ್ನಿನ ಹುಚ್ಚೂ ಇಳಿದುಬಿಡಲಿ ಬಿಡು. ಎಷ್ಟಾದರೂ ನಿನ್ನ ಮಗನಲ್ಲವ? ಅಪ್ಪನ ಹಾಗೆ ತಾನೂ ಮುನಿಸಿಪಾಲಿಟಿ ಪ್ರೆಸಿಡೆಂಟಾಗಬೇಕು. ಆಗಿ ಮೆರೀಬೇಕು ಅಂತ ಬಯಸುತ್ತೆ” ಎಂದಿದ್ದರಂತೆ.

ಅರೆ – ಈ ರಾದ್ಧಾಂತದ ಸುಳುವೂ ಕೂಡ ಕೊಡದಂತೆ ಅಮ್ಮ ರಂಗೋಲೆಯಿಕ್ಕುತ್ತ ಇದ್ದರಲ್ಲ ಎಂದು ದಿನಕರ ಬೆರಗಾಗಿ, “ನಿನ್ನ ತಾಯಿಯೇ ನಿಜವಾಗಿ ಮಹಾಮಾತೆ. ಈ ಪ್ರಪಂಚದಲ್ಲಿದ್ದು ಎಲ್ಲರನ್ನೂ ಪಾಲನೆಮಾಡುತ್ತ ಎಲ್ಲವನ್ನೂ ಬಿಟ್ಟಿರುವಂತೆಯೂ ಇದ್ದಾರೆ” ಎಂದ.

ನಾಲ್ಕು ದೋಸೆಗಳನ್ನು ಹೊಯ್ಯುಬಲ್ಲ ಒಲೆಯ ಮೇಲಿನ ಕಾವಲಿ ಮೇಲೆ ದೋಸೆಗಳನ್ನು ಚುಂಯ್ ಎಂದು ಹರಡುತ್ತ, ದೋಸೆಗಳ ಮೇಲೆ ತುಪ್ಪ ಸವರಿ ಅದನ್ನು ಗರಿ ಗರಿಯಾಗುವಂತೆ ಮಗಚುತ್ತ, ಹದಗೊಂಡದ್ದರ ಮೇಲೆ ತುಸು ಕೆಂಪು ಚಟ್ನಿಯನ್ನೂ ಸವರಿ, ಈರುಳ್ಳಿ ಆಲೂಗಡ್ಡೆಯ ಪಲ್ಯವನ್ನು ತುಂಬಿ, ಮಡಸಿ, ಸಟ್ಟಗದಿಂದ ನೀಟಾಗಿ ಎತ್ತಿ ಎಲೆಯ ಮೇಲೆ ಬಡಿಸಿ, ಇನ್ನೊಂದಷ್ಟು ಹಸಿ ಮೆಣಸಿನ ಕಾಯಿ ಚಟ್ನಿಯನ್ನು ಪಕ್ಕದಲ್ಲಿ ಬಡಿಸುತ್ತ ಸೀತಮ್ಮ ತನ್ನ ಕಾಯಕದಲ್ಲಿ ಮಗ್ನರಾಗಿದ್ದರು. ಶ್ರೀಯಂತ್ರದ ಒಂಬತ್ತು ತ್ರಿಕೋಣಗಳನ್ನು ದೈವಿಕ ಸಂಯೋಗದಲ್ಲಿ ಕೂಡುವಂತೆ ಮಾಡಿದ್ದ ಅವರ ಕೈಚಳಕವೇ ಅವರ ದೋಸೆಗಳ ಹದದಲ್ಲೂ ದಿನಕರನಿಗೆ ಕಂಡಿತ್ತು.

ಇಂಗ್ಲಿಷಿನಲ್ಲಿ ಹೇಳಿದರೆ ತನ್ನ ಗೋಳು ಅಮ್ಮನಿಗೆ ಗೊತ್ತಾಗದೆಂದು ದಿನಕರನಿಗೆ ನಾರಾಯನ ಹೇಳಿದ:

“ನನಗೇ ಹುಟ್ಟಿದ್ದೆಂದು ಖಾತ್ರಿಯಿರುವ ಈ ಮಗ, ನನ್ನ ಲೀಗಲ್ ಹಕ್ಕುದಾರ ನನ್ನ ಮಗನೇ ಅಲ್ಲವೆನಿಸುತ್ತದೆ…”

ಮುಂದಿನ ಮಾತನ್ನು ಹೇಳಲು ಹೋದರೆ ಅತಿಥಿಯಾದ ಗೆಳೆಯನಿಗೆ ನೋವಾಗುತ್ತದೆಂದು ಸಜ್ಜನಿಕೆಯಲ್ಲಿ ಮಾತು ತಿರುಗಿಸಿದ. ದೇಶಕ್ಕೆಲ್ಲ ಒಂದೇ ಪರ್ಸನಲ್ ಲಾ ಇರಬೇಕೆಂದು ತನ್ನ ರಾಜಕೀಯ ಧೋರಣೆಗಳನ್ನು ವಿವರಿಸುತ್ತ ದಿನಕರನ ಅಭಿಪ್ರಾಯಕ್ಕಾಗಿ ಕಾದ. ದಿನಕರ ಒತ್ತಾಯದ ಎರಡು ಮಸಾಲೆ ದೋಸೆಗಳನ್ನು ತಿಂದು, ಇನ್ನಷ್ಟು ಒತ್ತಾಯದ ಸಾದಾ ಗರಿಗರಿ ದೋಸೆ ತಿನ್ನುತ್ತಿದ್ದಾಗ, “ಅಮ್ಮ” ಎಂದು ಕರೆಯುವ ಚಂದ್ರಪ್ಪನ ಧ್ವನಿ ಕೇಳಿಸಿತು. ಮಗನಿಗೆ ಬಡಿಸಲಿದ್ದ ದೋಸೆಯನ್ನು ಎಲೆಯ ಮೇಲೆ ಹಾಕಿಕೊಂಡು ಹಿತ್ತಲಿನಲ್ಲಿದ್ದ ಚಂದ್ರಪ್ಪನಿಗೆ ಬಡಿಸಿ ಒಳಬಂದು ಕೇಳಿದರು:

“ನೋಡಲು ಇಲ್ಲಿಗೆ ಬರುವುದೋ, ಪೇಟೆಯ ಕಛೇರಿಗೆ ಬರುವುದೋ ಎಂದು ಚಂದ್ರಪ್ಪ ಕೇಳಿದ. ದೋಸೆಯನ್ನು ಗಂಗೂಗೆ ಕೊಡಬಹುದಲ್ಲ ಎಂದು ಅವಳು ಸ್ನಾನ ಮಾಡದಿದ್ದರೂ ಸರಿಯೆ, ಒಂದು ಕ್ಷಣಕ್ಕಾದರೂ ಇಲ್ಲೇ ಬಂದುಹೋಗಲಿ ಎಂದೆ. ಅವಳಿಗೆ ರಜಾ ಅಲ್ಲವ? ಅವಳು ಎಲ್ಲರಿಗೂ ಮನೇಲಿ ಗಂಜಿ ಮಾಡಿ ಬಡಿಸುವುದಲ್ಲವ? ಗಂಜಿಯೂಟ ಮಾಡಲು ಹೇಗೂ ಹೊತ್ತಾಗುತ್ತೆ ಅಂತ ಇಲ್ಲಿಗೇ ಬರಲು ಹೇಳಿದೆ. ನಿನ್ನದೇನು ಅವಸರ? ಇದ್ದದ್ದೇ. ಅರ್ಧಗಂಟೆ ತಡವಾಗಿ ಪೇಟೆ ಕಛೇರಿಗೆ ಹೋದರಾಯಿತು. ಮೊಮ್ಮಗ ಮಹಾರಾಯ ಇನ್ನೂ ಯಾಕೆ ತಿಂಡಿಗೆ ಬರಲಿಲ್ಲವೋ? ಹಾಳು ಫೋನನ್ನು ಮಾಡಿಕೊಂಡು ಊಟತಿಂಡಿ ಮರೆತುಬಿಡುತ್ತೆ ಮಾಣಿ”.

ಎಂದು ಸದಗರದಲ್ಲಿ ಮಾತಾಡುತ್ತ ಗಂಗೂಗೆ ಆಗುವಷ್ಟು ದೋಸೆ ಹಿಟ್ಟಿದೆಯೆ ಎಂದು ನೋಡಿ, ಒಲೆಯುರಿಯನ್ನು ಸಣ್ಣ ಮಾಡಿ, “ನಿನಗಿನ್ನೊಂದು ಬಡಿಸಲ?” ಎಂದು ಕೇಳಿ, ತೇಗಿ ತನ್ನ ತೃಪ್ತಿ  ತೋರಿಸಿದ ಮಗನಿಂದ ಸಮಾಧಾನಗೊಂಡು ಸೀತಮ್ಮ ಚಂದ್ರಪ್ಪನ ಜೊತೆ ಮಾತಾಡಲು ಹಿತ್ತಲಿಗೆ ಹೋದರು. ಆದರೆ ಚಂದ್ರಪ್ಪ ಕಾಯದೆ, ಕೈಯಲ್ಲೇ ಹಿಡಿದು ತಿಂದ ಮುಸುರೆಯ ಎಲೆಯನ್ನು ಹಿತ್ತಲಿನ ತೊಟ್ಟಿಯಲ್ಲಿ ಹಾಕಿ, ಹೋಗಿಬಿಟ್ಟಿದ್ದ.