ಇವತ್ತು ಇನ್ನೊಂದು ಚೆಲುವಾದ ಸೀರೆಯುಟ್ಟು ಅದಕ್ಕೊಪ್ಪುವ ಗಾಜಿನ ಬಳೆಗಳನ್ನು ತೊಟ್ಟು, ಹೆರಳಿನಲ್ಲಿ ಮಲ್ಲಿಗೆ ಮುಡಿದು, ಸ್ನಾನ ಮಾಡಿಯೇ ಬಂದಂತಿದ್ದ ಗಂಗೂನನ್ನು ಸೀತಮ್ಮ ಅಡಿಗೆ ಮನೆ ಪಕ್ಕದಲ್ಲಿ ಶ್ರೋತ್ರೀಯರಲ್ಲದ ನಾರಾಯಣನ ಕೋರ್ಟಿನ ಸ್ನೇಹಿತರಿಗಾಗಿ ಇದ್ದ ಬೇರೊಂದು ಊಟದ ಮನೆಯಲ್ಲಿ ಕೂರಿಸಿ ದೋಸೆ ಬಡಿಸಿದರು. ತಿಂಡಿ ಮುಗಿಸಿ, ಎಲೆಯನ್ನು ಬಿಸಾಕಿ, ‘ಡೈನಿಂಗ್ ಹಾಲಾದ’ ಈ ಊಟದ ಮನೆಯಲ್ಲಿ ಅದು ಅನಗತ್ಯವೆಂದರೂ ಕೇಳದೆ ತಾನು ಕೆಳಗೆ ಕೂತು ತಿಂದಲ್ಲಿ ಗೋಮಯದ ಶಾಸ್ತ್ರ ಮಾಡಿ, ಗಂಗೂ ನಾರಾಯಣನನ್ನು ನೋಡಲು ಮಹಡಿ ಹತ್ತಿ ಹೋದಳು.

ನಾರಾಯಣನೂ ಮಾತು ಮುಗಿದಾದ ಮೇಲೆ ಕಪ್ಪುಕೋಟು ಧರಿಸಿ, ಬಿಳಿಯ ಪ್ಯಾಂಟ್ ಹಾಕಿಕೊಂಡು, ಬಿಳಿಯಂಗಿಯ ಗರಿಗರಿ ಕಾಲರಿಗೆ ಲಾಯರ್ ಟೈ ಧರಿಸಿ, ಕೈಯಲ್ಲೊಂದು ಗೌನನ್ನೂ ಕೇಸುಗಳ ಕಟ್ಟನ್ನೂ ಹಿಡಿದು ಅವಳ ಜೊತೆಯೇ ಕೆಳಗಿಳಿದಿದ್ದ. ಅವನ ಬೆನ್ನ ಹಿಂದೆ ಬಂದ ಗಂಗೂ ದಿನಕರನಿಗೆ ನಮಸ್ಕರಿಸಿ ಎದ್ದು,

“ನಿಮ್ಮ ಪ್ರಸಾದ ನಿಮ್ಮನ್ನು ನೋಡಬೇಕೆಂದು ಕೇಳಿದ. ಸಂಜೆ ಬರುತ್ತೀರ” ಎಂದು ಹಿಂದಿಯಲ್ಲಿ ಕೇಳಿದಳು.

ಅವಳು ಸ್ಕೂಲಲ್ಲಿ ಕಲಿತಿದ್ದ ಹಿಂದಿಯನ್ನು ಎಷ್ಟು ಚೆನ್ನಾಗಿ ಬಳಸುತ್ತಾಳೆ ಎಂದು ಗಮನಿಸಿ “ಆಗಲಿ” ಎಂದ ದಿನಕರ. “ಇಲ್ಲೇ ಹತ್ತಿರದಲ್ಲೇ ಗಂಗೂ ಮನೆಯಿರೋದು. ನೇರ ಮನೆಯೆದುರಿನ ರೋಡಿನಲ್ಲಿ ಬಲಕ್ಕೆ ತಿರುಗಿ ಹೋದರೆ ಟಪಾಲು ಪೆಟ್ಟಿಗೆ ಸಿಗುತ್ತದೆ. ಅಲ್ಲಿಂದ ಎಡಕ್ಕೆ ತಿರುಗಿ ಸ್ವಲ್ಪ ದೂರ ಹೋದರೆ ಒಂದು ಬ್ಯಾಂಕ್, ಸಿಂಡಿಕೇಟ್ ಬ್ಯಾಮ್ಕ್ ಸಿಗುತ್ತದೆ. ಸಿಂಡಿಕೇಟ್ ಬ್ಯಾಂಕ್‍ಗೆ ಎದುರಾಗಿ ನಿಂತರೆ ನಿನ್ನ ಎಡಕ್ಕೇ ಒಂದು ಸಣ್ಣ ಬೀದಿಯಿದೆ. ಆ ಬೀದಿಯಲ್ಲಿ ಐದನೇ ಮನೆ ಇವಳದು. ಋಷಿಕೇಶವೆಂದು ಮನೆಯ ಹೆಸರು. ಪ್ರಸಾದನಿಗೆ ಒಪ್ಪುವ ಹೆಸರು” ಎಂದು ನಾರಾಯಣ ನಗೆಯಾಡಿದ.

ದಿನಕರನಿಗೆ ಋಷಿಕೇಶದ ಶಿವಾನಂದರ ಆಶ್ರಮದಲ್ಲಿ ತಾವು ಇಳಿದುಕೊಂಡದ್ದು ನೆನಪಾಯಿತು. ಹಠ ಹಿಡಿದಿದ್ದ ಗೋಪಾಲನನ್ನು ನಾರಾಯಣನೇ ಎತ್ತಿಕೊಂಡು ತಾಯಿಯ ಜೊತೆ ಸೇತುವೆ ದಾಟಿ ಹೋಗಿದ್ದ. ಅದೊಂದು ಏಕಾಂತದ ಅಪೂರ್ವ ಸಂದರ್ಭವಾಗಿತ್ತು. ಗಂಗೂ ಈಗ ಮಾತ್ರ ನಿರ್ಭಾವದಲ್ಲಿ ನಿಂತಿದ್ದಳು.

“ಬೇಡ ಗಂಗೂ, ಚಂದ್ರಪ್ಪನನ್ನೆ ಕಳಿಸಿಬಿಡು. ದಿನಕರನಿಗೆ ದಾರಿ ತಪ್ಪುವುದು ಬೇಡ” ಎಂದು ನಾರಾಯಣ ಗೆಲುವಾಗಿ ಹೇಳಿ, “ಸ್ವಲ್ಪ ಬಾ ಮಾತಾಡಬೇಕು. ನನ್ನ ಕಛೇರಿಗೆ ಬಾ. ಕಾರಲ್ಲಿ ಹಿಂದಕ್ಕೆ ಕಳಿಸುವೆ” ಎಂದು ದಿನಕರನನ್ನು ಕೈ ಹಿಡಿದು ಕರೆದುಕೊಂಡು ಹೋದ. ಗಂಗೂ ಅಮ್ಮನ ಜೊತೆ ಸ್ವಲ್ಪ ಕಷ್ಟಸುಖ ಹೇಳಿಕೊಳ್ಳುವುದೆಂದು ನಿಂತಳು.

ರಸ್ತೆಯಲ್ಲಿ ಕಾರು ನಡೆಸುತ್ತ ನಾರಾಯಣ ಒಂದು ಆಪತ್ತಿನಿಂದ ಪಾರಾದವನಂತೆ ಮಾತಾಡಲು ತೊಡಗಿದ್ದ. ಬೆಳಿಗ್ಗೆ ಎದ್ದು ಮಂಡನ ಮಾಡಿಸಿಕೊಂಡು ಬಂದ ಪ್ರಸಾದನನ್ನು ಕಂಡು ಗಂಗೂ ಹೆದರಿದ್ದಳಂತೆ. ಆದರೆ ಪ್ರಸಾದ ತನ್ನ ಸಂಗೀತದ ಪ್ರಾಕ್ಟೀಸು ಮುಗಿಸಿ ತಾಯಿಗೆ ಬಂದು ಕಾಲೆರಗಿ ನಿಂತ. ನಾರಾಯಣ ತಂತ್ರಿಗಳು ಮನೆಗೇ ಬಂದು ಹೋಗಲಿ, ಅಮ್ಮ ನಾನು ಇಲ್ಲೇ ಇರುತ್ತೇನೆ; ಅಲೆದಾಡಿಕೊಂಡು ಇರುತ್ತೇನೆ ಎಂದುಬಿಟ್ಟ. ಸಂನ್ಯಾಸದ ಕಾವಿ ವೇಷದ ಹಂಗೂ ನನಗೆ ಬೇಡ, ಎಂದ.

ಗೊತ್ತಾಯಿತ ದಿನಕರ? ಪ್ರಸಾದ ನನ್ನನ್ನು ಹೆಸರು ಹಿಡಿದು ಕರೆದದ್ದು ಇದೇ ಮೊದಲು. ಗಂಗೂಗೆ ಆಶ್ಚರ್ಯವಾಗಿಬಿಟ್ಟಿತು. ಪ್ರಸಾದ ತುಂಬ ಸಮಾಧಾನದಿಂದ ಅಕ್ಕರೆಯಿಂದ ಮಾತಾಡಿದ್ದ. ನನ್ನ ಮೇಲಿನ ದ್ವೇಷದಿಂದ ಕಳಚಿಕೊಂಡಿದ್ದ. ಗಂಗೂಗೆ ಕಣ್ಣಲ್ಲಿ ನೀರು ಬಂದಿತು. ಮಗನೇ ಸರ್ವತ್ಯಾಗಿಯಾಗಿ ಆದಿಶಂಕರನಂತೆ ಎದುರು ನಿಂತು ಅಭಯದ ಮೂರ್ತಿಯಂತೆ ಕಂಡಾಗ ಜನ್ಮವಿತ್ತ ತಾಯಿಗೇ ಇನ್ನೊಂದು ಜನ್ಮ ಪಡೆದಂತೆ ಆಗದೆ ಇರುತ್ತದೆಯೇ? ನೀವು ನನಗೆ ಶಾಸ್ತ್ರೋಕ್ತವಾಗಿ ತಾಳಿ ಕಟ್ಟಿ ಸಮಾಜದ ಕಣ್ಣೊರೆಸುವುದು ಬೇಡ ಎಂದುಬಿಟ್ಟಳು. ಅದೊಂದು ದಿವ್ಯ ಮುಹೂರ್ತವೆನ್ನಿಸಿದ್ದರಿಂದ ನಿನ್ನ ಸಂಗತಿಯನ್ನೂ ಮಗನಿಂದ ಮುಚ್ಚಿಡದೆ ಅವಳು ಹೇಳಿಬಿಟ್ಟಾಗಿದೆ. ಆದ್ದರಿಂದ ನೀನು ಮನೆಗೆ ಹೋಗಿ ಪ್ರಸಾದನನ್ನು ಆಶೀರ್ವದಿಸಿ ಬಿಡಲಿ ಎಂದಳು ಗಂಗು. ಅದಕ್ಕೇ ನಿನ್ನನ್ನು ಬರಲು ಕರೆದದ್ದು ಅವಳು. ಗಂಗೂ ತುಂಬ ದೊಡ್ಡ ಹೆಂಗಸು ದಿನಕರ” ಎಂದು ಭಾವೋದ್ರೇಕದಿಂದ ನಾರಾಯಣ ಮಾತಾಡುತ್ತಿರುವುದು ಕೇಳಿ ದಿನಕರನಿಗೆ ಕಸಿವಿಸಿಯಾಯಿತು.

ಒಂದು ದೊಡ್ಡ ಮುಜುಗರದಿಂದ ಪಾರಾಗಿ ನಿರಂಬಳ ಭಾವ ಅವನ ಮಾತಿನಲ್ಲೂ ಹಾವಭಾವದಲ್ಲೂ ಇತ್ತು. ಆದರೆ ನಾರಾಯಣನಂತೆ ಸಂಸಾರದಲ್ಲಿದ್ದು ಆಪತ್ತುಗಳನ್ನು ಎದುರಿಸಿದವನ ಔದಾರ್ಯವನ್ನೂ ಸಮಾಧಾನವನ್ನೂ ಉಪಾಯಗಾರಿಕೆಯನ್ನೂ ತಾನು ತಿಳಿಯಲಾರೆ. ತನ್ನಂಥವನು ಯಾವ ದೊಡ್ಡಸ್ತಿಕೆಯ ನೈತಿಕ ಭಾವನೆಗೂ ಅರ್ಹನಲ್ಲವೆಂದುಕೊಂಡು ದಿನಕರ ವಿನಯದಲ್ಲಿ ನಾರಾಯಣನನ್ನ ಅವನ ಕಛೇರಿಗೆ ಹಿಂಬಾಲಿಸಿದ. ಮಂಗಳೂರಿನ ಸಣ್ಣ ಸೆಖೆ ಚಳಿಗಾಲದಲ್ಲೂ ತೋರತೊಡಗಿತ್ತು. ಹಲವು ಕ್ಲರ್ಕುಗಳ, ಕಪಾಟು ತುಂಬ ದಪ್ಪ ದಪ್ಪ ಪುಸ್ತಕಗಳ ಭರ್ಜರಿಯಾದ ತನ್ನ ಆಫೀಸನ್ನು ಅಭಿಮಾನದಿಂದ ನಾರಾಯಣ ತೋರಿಸಿದ್ದನ್ನು ಮೆಚ್ಚಿ ಸ್ನೇಹದಲ್ಲಿ ಕೈಕುಲುಕಿದ. ಹೋಗಿ ಬರುತ್ತೇನೆ ಎಂದ. ನಾರಾಯಣನ ಕ್ಲಾರ್ಕ್ ಒಬ್ಬನಿಂದ ಡ್ರೈವ್ ಮಾಡಿಸಿಕೊಂಡು ದಿನಕರ ಮನೆಗೆ ಹಿಂದಕ್ಕೆ ಬಂದ. ‘ಹುಷಾರಿಲ್ಲವ’ ಎಂದು ಅಮ್ಮ ಕೇಳಿದರು. ಮಧ್ಯಾಹ್ನದ ಊಟಕ್ಕೆ ತಯಾರಿ ನಡೆದಿತ್ತು. ಉಣ್ಣುವುದಕ್ಕೆ ಕೈ ಮಾಡಿ ತೋರಿಸಿ ‘ಇವತ್ತು ಪತ್ರಡೆ ಮಾಡ್ತೇನೆ’ ಎಂದಿದ್ದರು.