ಮೊದಮೊದಲು ಗವಿಯ ಅಂತರಾಳದಿಂದ ಎಂಬಂತೆ ಒಂದೊಂದು ಎರಡೆರಡೇ ಮೊಳಕೆಗಳಂತಹ ನಾದ, ಆಗೊಂದು ಈಗೊಂದು ಸ್ಫುಟವಾಗಿ ಹೊರಬಂದಂತಿದ್ದ ಗಂಟೆಯ ಶಬ್ದ, ಮತ್ತೆ ಓ ಓ ಓ ಎನ್ನುವ ಮಂದರ ನಾದ, ಮತ್ತೆ ಪುಟ್ಟ ಪುಟ್ಟ ಗೆಜ್ಜೆಗಳಿಂದ ಹೊರಟನಿಂತಿರುವ ಕಿಲ ಕಿಲ ಶಬ್ದ. ನಾದವೆಲ್ಲವೂ ತನಗೇ ತಾನು ಒಳಗಿನಿಂದ ಮಾಡಿಕೊಂಡಂತೆ, ತನಗಾಗಿ ಮಾತ್ರ ಮಾಡಿಕೊಂಡಂತೆ. ಇನ್ನು ಇನ್ನೂ ಒಳಗೊಳಗೇ ಹೋಗುವಂತೆ ಸಂಚರಿಸುತ್ತ ಹುಡುಕುವ ತಳಾತಳದ ನಾದ. ಮುಗಿಯಿತೆನ್ನುವಷ್ಟರಲ್ಲೇ ಇನ್ನೊಂದು ಇನ್ನೂ ಆಳದ ಕುಂಡಲಿನಿಯಿಂದ ಎದ್ದಂತಿದ್ದ ನಾದ. ನಾದಕ್ಕೆ ಸಿಗಬೇಕಾದ್ದು ಸಿಕ್ಕಂತಾಯಿತೋ? ಇಗೊ ಇಗೋ ಎನ್ನಿಸುವಂತೆ ಮತ್ತೆ ಪುಟ್ಟ ಪುಟ್ಟ ಗಂಟೆಗಳ ದಿಗ್ಭ್ರಮೆ. ಅಥವಾ ಸಂಭ್ರಮವೊ?

ಟಿಬೆಟನ್ ಲಾಮಾರ ಗುಹ್ಯ ಸಮಾಜ ತಂತ್ರದ ಪಠಣವನ್ನು ತನ್ನ ವಾಕ್‍ಮನ್‍ನಲ್ಲಿ ಕೇಳಿಸಿಕೊಳ್ಳುತ್ತ, ಟಿಬೆಟನ್ನರ ಬಾರ್ದೊ ಥ್ರೋಟೋಲ್‍ನ ಇಂಗ್ಲಿಷ್ ಭಾಷಾಂತರವನ್ನು ಓದುತ್ತ, ತನ್ನ ಬಾರ್ದೊ ಸ್ಥಿತಿಗೆ ಓದಿದ್ದನ್ನು ಸಮೀಕರಿಸಿಕೊಳ್ಳುತ್ತ ದಿನಕರ ಚಾಪೆಯ ಮೇಲೆ ದಿಂಬಿಗೊರಗದಂತೆ ಕೂತಿದ್ದ.

ನಾರಾಯಣ ತಂತ್ರಿಯದು ವಿಶಾಲವಾದ ಮನೆ. ಹಾಸಿಗೆಗಳನ್ನು ಹಾಸಿ ಅವನ್ನು ಬಿಳಿ ಬಟ್ಟೆಯಿಂದ ಮುಚ್ಚಿ, ಬಿಳಿ ಬಟ್ಟೆಯನ್ನು ಸುತ್ತಿದ್ದ ದೊಡ್ಡ ಒರಗು ದಿಂಬುಗಳನ್ನಿಟ್ಟು ಹಜಾರದಲ್ಲಿ ದಿನಕರ ಮೂಲೆಯಲ್ಲಿ ಚಾಪೆ ಮೇಲೆ ದಿಂಬಿಗೊರಗದೆ ನೇರ ಕೂತಿದ್ದನ್ನು ಕಂಡು ಸೀತಮ್ಮ,

“ನಿನಗೇನಾಗಿದೆ? ಹಾಸಿಗೆ ಮೇಲೆ ಕೂರು” ಎಂದರು.

ದಿನಕರ ಸುಮ್ಮನೇ ನಕ್ಕದ್ದು ಕಂಡು, “ಅಯ್ಯೋ ನಿನಗೆ ಕನ್ನಡ ಅರ್ಥವಾಗಲ್ಲ ಅನ್ನೋದು ಮರೆತೇ ಹೋಗುತ್ತೆ. ಏಳು ಸ್ನಾನ ಮಾಡಿ ಬಾ. ನಿನಗೆ ತಿಂಡಿ ಬಡಿಸುತ್ತೇನೆ. ಇನ್ನೇನು ಅವರು ಎದ್ದು ಬಿಡುತ್ತಾರೆ. ಮೊಮ್ಮಗ ನಿನ್ನನ್ನು ಕಂಡದ್ದೇ ಕುಣಿದಾಡಿ ಹಾರಾಡಿ ಉಪದ್ರವ ಮಾಡ್ತಾನೇಂತ ಅವನನ್ನ ಫೋನಿಗಂಟಿಕೊಂಡಿರಲಿ ಅಂತ ಸುಮ್ಮನಿದ್ದೇನೆ – ಹೇಳಿಲ್ಲ. ಏಳು ಏಳು” ಎಂದು ಸ್ನಾನ ಮಾಡಬೇಕೆಂದು ತಲೆಗೆ ನೀರು ಸುರಿದುಕೊಳ್ಳುವ ಹಾವಭಾವ ಮಾಡಿತೋರಿಸಿದರು.

ದಿನಕರ ಅವರು ಕೊಟ್ಟ ಶುಭ್ರವಾದ ಟವಲನ್ನೂ ಪಿಯರ್ಸ್ ಸೋಪನ್ನೂ ಇಸಿದುಕೊಂಡ. ಅಮ್ಮನಿಗೆ ಪಿಯರ್ಸ್ ಸೋಪು ತನಗಿಷ್ಟವೆಂಬುದು ಇಪ್ಪತ್ತೈದು ವರ್ಷಗಳ ನಂತರವೂ ಇನ್ನೂ ನೆನಪಿದೆಯಲ್ಲ ಎಂದು ಆಶ್ಚರ್ಯವಾಯಿತು. “ಅಂತೂ ನನಗೆ ಇನ್ನೊಂದು ಅಮ್ಮ ಇದೆಯೆಂದಾಯಿತು” ಎಂದು ಹಾಸ್ಯದಲ್ಲಿ ಹಿಂದಿಯಲ್ಲಿ ಹೇಳಿದ, ಅಮ್ಮನಿಗೆ ಅರ್ಥವಾಗುವುದಿಲ್ಲ ಎಂಬುದನ್ನು ಮರೆತು. ಅದೇ ಹಾಸ್ಯದಲ್ಲಿ ಸೀತಮ್ಮ “ಏನೋ, ಬೆಳಗಾಗಿ ಎದ್ದು ಸಾಬರ ಭಾಷೆಯಲ್ಲಿ ನನ್ನ ಹತ್ತಿರ ಮಾತಾಡ್ತಿದಿಯಲ್ಲೋ” ಎಂದರು.

“ತ್ರಿಪಾಠಿಗಳು ಅಂಥ ಮಡಿ ಬ್ರಾಹ್ಮಣರು – ಈ ಭಾಷೆಯಲ್ಲಿ ಯಾಕೆ ಮಾತಾಡ್ತಾರೇಂತ ನನ್ನ ಮಂಕು ಬುದ್ಧಿಗೆ ಆಶ್ಚರ್ಯವೋ ಆಶ್ಚರ್ಯ” ಎಂದು ಆಡಬಾರದಾಗಿದ್ದ ಮಾತು ಎಂಬಂತೆ ಸೀರೆಯ ಸೆರಗಿನಿಂದ ಬಾಯಿಯನ್ನು ಮುಚ್ಚಿಕೊಂಡು ನಗುತ್ತ ಮತ್ತೆ ತಮ್ಮ ಅಡುಗೆ ಮನೆ ಹೊಕ್ಕರು.

ದಿನಕರ ಸ್ನಾನ ಮುಗಿಸಿ ಬರುವುದರಲ್ಲಿ ಮನೆ ತುಂಬ ಸಡಗರವೋ ಸಡಗರ. ನಾರಾಯಣ ತಂತ್ರಿಯ ಮಗ ದಿಡೀರನೆ ದಿನಕರನ ಕಾಲಿಗೆ ಸಾಷ್ಟಾಂಗ ಬಿದ್ದು ಕುಣಿದಾಡತೊಡಗಿದ್ದ. “ನೀನು ಮನೇಗೆ ಬಂದಿದಿ ಅನ್ನೋದನ್ನು ತನ್ನ ಪಟಾಲಮ್ಮಿಗೆಲ್ಲ ಹೇಳಿ ಕೊಚ್ಚಿಕೊಂಡು ಹೇಗೆ ಈ ಮಾಣಿ ತನ್ನ ಬೇಳೆ ಬೇಯಿಸಿಕೊಳ್ಳತ್ತೆ ನೋಡ್ತಾ ಇರು” ಎಂದು ಸೀತಮ್ಮ ಲೇವಡಿ ಮಾಡುತ್ತ ನಿಂತದ್ದನ್ನು ಕಂಡು, ನಾರಾಯಣ ತಂತ್ರಿ ತಾಯಿಕಡೆ ನೋಡಿ ಕಣ್ಣು ಮಿಟುಕಿಸಿದ, ದಿನಕರನಿಗೆ ಮುಜುಗರವಾಗಬಾರದು ಎಂದು.

ನಾರಾಯಣ ತಂತ್ರಿಯಲ್ಲಾದ ಬದಲಾವಣೆಗಳನ್ನು ದಿನಕರ ಗಮನಿಸಿದ. ಇವನನ್ನು ಖಂಡಿತ ತಾನು ಗುರುತು ಹಿಡಿಯುತ್ತಿರಲಿಲ್ಲ. ತೋರವಾಗಿಬಿಟ್ಟಿದ್ದಾನೆ. ಸಾರ್ವಜನಿಕ ಮನುಷ್ಯನಂತೆ ಮಾತನ್ನು ಲೆಖ್ಖಾಚಾರ ಮಾಡಿ ಬಳಸುತ್ತಾನೆ. ಹಳೆಯ ಗೆಳೆಯನ ಚೂಟಿಯಾಗಲೀ, ತುಂಟತನವಾಗಲೀ ಉಳಿದಂತೆ ಕಾಣುವುದಿಲ್ಲ. ದಿನಕರನಿಗೆ ಕೊಂಚ ವ್ಯಥೆಯಾಯಿತು – ಅಮ್ಮ ಸಿಕ್ಕರೂ ಬಂಧು ಸಿಗಲಾರ ಎಂದು.

ಒಂದು ಕ್ಷಣದಲ್ಲೇ ನಾರಾಯಣ ತಂತ್ರಿಯನ್ನು ನೋಡಿದವನಿಗೆ ತಾನು ಮಾಡಿಕೊಂಡು ಬಂದ ನಿರ್ಧಾರ ಕುಸಿದಿತ್ತು. ತನ್ನನ್ನು ಕಾಡುತ್ತಿರುವ ಒಂದು ದೊಡ್ಡ ಗುಟ್ಟನ್ನು ಅವನಿಗೆ ಹೇಳಬೇಕೆಂದಿದ್ದ. ಆದರೆ ಈ ಸಾರ್ವಜನಿಕನಾಗಿಬಿಟ್ಟ ಯಶಸ್ವಿ ಲಾಯರಿಗೆ ಅದನ್ನು ಹೇಳಲಾರೆನೇನೋ ಎಂದು ಕಸಿವಿಸಿ ಪಡುತ್ತಲೆ ತನ್ನೊಳಗೇ ಮುಂದಿನ ಮಾತುಗಳನ್ನು ಸಿದ್ಧಪಡಿಸಿಕೊಳ್ಳುತ್ತಾ ಹೋದ:

“ನೋಡು ನಾರಾಯಣ, ನನ್ನ ಜೀವನದಲ್ಲಿ ಪವಿತ್ರವಾದ್ದು ಏನೂ ಉಳಿದಿಲ್ಲವೆನ್ನಿಸಿ ಈ ಬಟ್ಟೆ ತೊಟ್ಟು ಹೊರಟಿದ್ದೇನೆ. ನನ್ನನ್ನು ಸಾಕಿದ್ದ ತಾಯಿತಂದೆಯರು ಸತ್ತ ಮೇಲೆ ಅವರ ಮಕ್ಕಳು ಶುದ್ಧ ವ್ಯಾಪಾರಿಗಳಾಗಿ ಬಿಟ್ಟರು. ತ್ರಿಪಾಠಿಗಳು ಖರ್ಚು ಮಾಡಲು ಬಿಡದೆ ನನ್ನದಾಗಿ ಉಳಿದೇ ಬಿಟ್ಟಿದ್ದ ಬಂಗಾರದ ಮೇಲೆ ಕಣ್ಣು ಹಾಕಿದರು. ನನಗೆ ಹೇಸಿಗೆಯಾಗಿ ಅವರು ಬಯಸಿದಷ್ಟನ್ನು ಅವರಿಗೆ ಕೊಟ್ಟುಬಿಟ್ಟೆ. ನನ್ನನ್ನು ಬೆಳೆಸಿದವರು ಇಲ್ಲವಾದ ಮೇಲೆ ಆ ಮನೆಗೆ ಹೋಗುವುದೇ ಕಡಿಮೆಯಾಯಿತು. ತ್ರಿಪಾಠಿಗಳ ಶ್ರಾದ್ಧಕ್ಕಷ್ಟೇ ನಾನೀಗ ಹೋಗುವುದು. ಇಂಗ್ಲೆಂಡಲ್ಲಿ ಓದು ಮುಗಿಸಿ ಬಂದವನು ದೆಹಲಿ ಸೇರಿ ಪ್ರಸಿದ್ಧನಾಗುತ್ತ ಹೋಗಿ ಠೊಳ್ಳಾಗುತ್ತಲೂ ಹೋದೆ. ಸಾರ್ವಜನಿಕವಾಗಿ ಬೇಕಾದ್ದನ್ನು ಸರಾಗವಾಗಿ ಆಡಿ ಬಿಟ್ಟು, ಯಾರನ್ನಾದರೂ ಮೋಡಿ ಮಾಡುವ ಮನುಷ್ಯನಾಗಿ ಬಿಟ್ಟೆ. ನನ್ನ ಬೇರುಗಳು ಎಲ್ಲಿ ತಿಳಿಯಲಾರದೆ, ಹುಡುಕಿದರೂ ಅವು ಸಿಗದವು ಎನ್ನಿಸಿ, ಒಂಟಿಯಾಗಿ ಇರಲಾರದೆ ಲೋಲುಪನಾದೆ. ನನ್ನ ಪ್ರೇಯಸಿಯರು ಈಗ ಎಲ್ಲೆಲ್ಲೂ ಇದಾರೆ. ಇಂಗ್ಲೆಂಡಿನಲ್ಲಿ, ಲಕ್ನೋದಲ್ಲಿ, ದೆಹಲಿಯಲ್ಲಿ – ಹೀಗೆ ಪ್ರೀತಿ ಮಾಡಿದ್ದೂ ಬಳಲಿಕೆಯಲ್ಲಿ ಕೊನೆಯಾಗತೊಡಗಿತು. ಒಂದು ಪ್ರೀತಿಯಿಂದ ಇನ್ನೊಂದನ್ನು ಮುಚ್ಚಿಡುತ್ತ, ಒಟ್ಟಾಗಿ ಹಲವು ಹೆಣ್ಣುಗಳನ್ನು ನಿರ್ವಹಿಸುವುದು ಬಾಧೆಯಾಗುತ್ತ ಹೋಯಿತು. ಅದೊಂದು ಬಿಡಲಾರದ ಚಟವೂ ಆಯಿತು.

ಈ ನನ್ನ ಉದ್ಯೋಗವೂ ಶುರುವಾದ್ದು ಹರಿದ್ವಾರದಲ್ಲಿ. ನನ್ನ ಇಪ್ಪತ್ತನೆ ವಯಸ್ಸಿನಲ್ಲೇ. ನಿನ್ನ ಜೊತೆ ಇದ್ದಾಗಲೇ. ನಿನ್ನ ತಾಯಿಯನ್ನು ನಾನು ಕಳಕೊಂಡ ತಾಯನ್ನು ಕಾಣುತ್ತ ನಾನು ಹೊಸ ಹುಟ್ಟು ಪಡೆಯುತ್ತಿದ್ದಾಗಲೇ. ಅಂಥ ಪವಿತ್ರವಾದ ದಿನಗಳಲ್ಲೂ ನಾನು ಒಂದು ದೊಡ್ಡ ರಹಸ್ಯವನ್ನು ಯಾವ ಪಶ್ಚಾತ್ತಾಪವೂ ಇಲ್ಲದಂತೆ ಬೆಳೆಸಿಕೊಳ್ಳುತ್ತ ಸುಖವನ್ನೂ ಪಟ್ಟೆ. ಅಂದರೆ ಅದರ ಅರ್ಥ ಏನು ಎಂದು ತಿಳಿಯಲು….”

ಇತ್ಯಾದಿ ಮಾತುಗಳಲ್ಲಿ ಬಳಸೀ ಬಳಸೀ ಮುಖ್ಯ ವಿಷಯಕ್ಕೆ ಹೇಗೆ ಬರುವುದೆಂದು ತನ್ನನ್ನು ಸಿದ್ಧಪಡಿಸಿಕೊಳ್ಳುತ್ತಿದ್ದ ದಿನಕರ ಹತಾಶೆಯಲ್ಲಿ ತನ್ನ ಹಳೆ ಗೆಳೆಯನ ಕಡೆ ನೋಡಿದ. ನಾರಾಯಣ ತಂತ್ರಿ ಅತಿಶಯವಾದ ಸೌಜನ್ಯದಿಂದ ದಿನಕರನ ಮುಖಸ್ತುತಿ ಮಾಡಲು ತೊಡಗಿದ್ದ. ತನ್ನ ಗೆಳೆಯನೂ ಯಾವುದೋ ದುಃಖವನ್ನು ಮರೆಯಲು ಇಂಥ ಗಂಟಲನ್ನು ಸಿದ್ಧಪಡಿಸಿಕೊಂಡಿದ್ದಾನೆ ಎಂದು ದಿನಕರನಿಗೆ ಅನುಮಾನವಾಯಿತು.