ಬಚ್ಚಲಿನ ಒಲೆಯಲ್ಲಿ ಬಿಸಿ ಬೂದಿಯ ಮೇಲೆ ಬಾಡಿಸಿದ ಬಾಳೆಲೆ. ಅದರದ್ದೇ ಆದ ಸುವಾಸನೆಯ ಈ ಕುಡಿಯೆಲೆಯ ಮೇಲೆ ಹಲಸಿನೆಲೆಯ ಕೊಟ್ಟೆಯಲ್ಲೇ ಬೇಯಿಸಿದ ಕಡುಬು. ಅದರ ಮೇಲೆ ಹಸುವಿನ ತುಪ್ಪ, ಮೂರು ಬಗೆಯ ಚಟ್ನೆಗಳು. ಬಾಳೆಲೆಯೆ ದೊನ್ನೆಯಲ್ಲೇ ಪ್ರತ್ಯೇಕವಾಗಿ ಕೆನೆ ಮೊಸರು. ಪಕ್ಕದಲ್ಲೇ ಬಿಸಿ ಬಿಸಿ ಕಾಫಿ.

ಈ ಪದಾರ್ಥಗಲ ಹೆಸರು ಗೊತ್ತಿಲ್ಲದ ದಿನಕರ ರುಚಿಪಡುತ್ತ ತಿನ್ನಲು ಕೂತ. ಸ್ನಾನ ಮಾಡಿ ಬಂದ ತಂತ್ರಿ ಮತ್ತು ಅವರ ಮಗ ಗೋಪಾಲತಂತ್ರಿಯೂ ಅವನ ಜೊತೆ ಕೂತು ಅವನಿಗಿಂತ ಹೆಚ್ಚಾಗಿ ಬಡಿಸಿಕೊಂಡರು. ಭಾನುವಾರವಾದ್ದರಿಂದ ಕೋರ್ಟಿನ ಕೆಲಸವಿಲ್ಲದ ನಾರಾಯಣತಂತ್ರಿ ಆರಾಮವಾಗಿರುವಂತೆ ಕಂಡಿತು. ಗೋಪಾಲ ಮಾತ್ರ ತನ್ನ ಗೆಳೆಯರಿಗೂ ತನ್ನ ಹಿಂಬಾಲಕರಿಗೂ ದಿನಕರನ ವಿಷಯ ಹೇಳಲು ತವಕಿಸುತ್ತ ಕೂತಿದ್ದ.

ಹಿತ್ತಲಿನಿಂದ ‘ಅಮ್ಮ’ ಎಂದು ಕರೆದದ್ದು ಕೇಳಿಸಿತು. ‘ಯಾರು ಚಂದ್ರಪ್ಪನ? ಸ್ವಲ್ಪ ಇರು’ ಎಂದು ಸೀತಮ್ಮ ಹಿತ್ತಲಿಗೆ ಹೋದರು.

ಒಳಗೆ ಬಂದು ಒಂದು ಬಾಳೆಲೆ ಮೇಲೆ ಕಡುಬು ಚಟ್ನಿಗಳನ್ನು ಬಡಿಸಿಕೊಂಡು ಮತ್ತೆ ಹಿತ್ತಲಿಗೆ ಹೋಗುವಾಗ ಮಗನಿಗೆ “ನೀನು ಮನೇಲಿ ಇರ್ತೀಯ ಅಂತ ಕೇಳಲಿಕ್ಕೆ ಚಂದ್ರಪ್ಪ ಬಂದಿದಾನೆ. ಗಂಗೂಬಾಯಿ ಯಾಕೊ ನಿನ್ನನ್ನ ನೋಡಬೇಕಂತೆ. ಬರಲಿ ಎಂದೆ” ಎನ್ನುತ್ತ ಹಿತ್ತಲಿಗೆ ಚಂದ್ರಪ್ಪನಿಗದನ್ನು ತಿನ್ನಲು ಕೊಡಲು ಹೋದರು. ಮಡಿ ಮುಸುರೆಗಳಲ್ಲಿ ನಿಷ್ಠೆಯವರಾದ ಸೀತಮ್ಮ ಚಂದ್ರಪ್ಪನಿಗಾಗಲೀ, ಗಂಗೂಬಾಯಿಗಾಗಲೀ, ಅವಳ ಮಗ ಪ್ರಸಾದನಿಗಾಗಲೀ ಒಳಗೆ ಬಡಿಸಿದರು; ಆದರೆ ಏನಾದರೂ ತಿನ್ನಲು ಕೊಡದೆಯೊ ಉಪಚಾರ ಮಾಡದೆಯೊ ಕಷ್ಟ ಸುಖ ಕೇಳದೆಯೊ ಎಂದೆಂದೂ ಅವರನ್ನು ಹಿಂದೆ ಕಳಿಸರು.

ಗಂಗೂಬಾಯಿಗೆ ಮನೆಗೇ ಬರುವಂತೆ ಅಜ್ಜಿ ಹೇಳಿದಳೆಂಬುದು ಗೋಪಾಲನಿಗೆ ಇಷ್ಟವಾದಂತೆ ಕಾಣಲಿಲ್ಲ. ಮಗನ ಮುಖ ಸಿಂಡರಿದ್ದನ್ನು ಕಂಡು ನಾರಾಯಣ ತಂತ್ರಿ ಕಳಿಗುಂದಿದ. ಅಪ್ಪ ಮಗನ ನಡುವೆ ಅದೇನು ನಡೆಯುತ್ತಿದೆ ದಿನಕರನಿಗೆ ತಿಳಿಯಲಿಲ್ಲ. ಮಗುವಾಗಿದ್ದಾಗ ಅವನು ಹಠಮಾರಿಯಾಗಿದ್ದಾನೆಂದು ದಿನಕರನಿಗೆ ನೆನಪಿದೆ, ಅವನನ್ನು ಹೇಗಾದರೂ ನಿದ್ದೆ ಮಾಡಿಸಲೆಂದು ಹುಡುಗಿಯಾಗಿದ್ದ ಗಂಗೂ ಮಾಡುತ್ತಿದ್ದ ಚತುರೋಪಾಯಗಳೂ ಅವನಿಗೆ ನೆನಪಿವೆ. ವಾತಾವರಣ ಬಿಗಿಯಾದ್ದನ್ನು ಲೆಕ್ಕಿಸದೆ ಸೀತಮ್ಮ ಹಿತ್ತಲಿಗೆ ಹೋಗಿ ಸರಿಯಾಗಿ ಮಾತನಾಡಲಾರದ, ಮಂದಬುದ್ಧಿಯ ಚಂದ್ರಪ್ಪನ ಜೊತೆ ಕಷ್ಟಸುಖ ಹಣ್ಚಿಕೊಳ್ಳುತ್ತ ಮಾತಾಡತೊಡಗಿದರು.

ಹಸು ಎಷ್ಟು ಹಾಲು ಕೊಡುತ್ತಿದೆ? ಆ ಬಿಳಿ ಹಸುವಿಗೆ ಗಬ್ಬ ನಿಂತಿತೆ? ಹೋರಿಕರುಗಳ ಮಾರಾಟವಾಯಿತೆ? ಎಷ್ಟು ಸಿಕ್ಕಿತು? ಗಂಗೂಬಾಯಿಯ ಸ್ಕೂಲಿನ ರಜ ಎಲ್ಲಿವರೆಗೆ? ಪ್ರಸಾದ ಯಾಕೆ ಇತ್ತ ಕಡೆ ಮುಖ ಹಾಕುತ್ತಲೇ ಇಲ್ಲ? ಅವನ ಸಂಗೀತ ಅಭ್ಯಾಸ ಹೇಗೆ ನಡೆದಿದೆ? ದೇವಸ್ಥಾನದಲ್ಲಿ ರಾಮನವಮಿ ದಿವಸ ಅವನು ಹಾಡಿದ್ದು ಎಷ್ಟು ಚೆಂದಾಗಿತ್ತು – ಹೀಗೆ ಸೀತಮ್ಮ ಈ ವಾರದಲ್ಲಿ ಅದೆಷ್ಟು ಬಾರಿಯೋ, ಕೇಳಿದ್ದೇ ಕೇಳುತ್ತಿರುವಾಗ ಚಂದ್ರಪ್ಪನಿಂದ ಯಾವ ಉತ್ತರವನ್ನೂ ಅವರು ನಿರೀಕ್ಷಿಸಿರಲಿಲ್ಲ. ಅವನನ್ನು ತಣಿಸುವುದು ಮಾತ್ರ ಅವರ ಮಾತಿನ ಗುರಿಯಾಗಿತ್ತು. ಚಂದ್ರಪ್ಪನೂ, ಸೀತಮ್ಮನ ಅಕ್ಕರೆಯ ಮಾತುಗಳಿಂದ ತಣಿದು ಬಾಯಿ ಬಿಟ್ಟು ಕೇಳಿಸಿಕೊಳ್ಳುತ್ತಾನೆ. ಅವನು ಬಾಯಿ ಬಿಟ್ಟೇ ತನ್ನ ಕಡೆ ನೋಡುವುದನ್ನು ಗಮನಿಸಿ ಸೀತಮ್ಮ,

“ಯಾಕೆ ಚಂದ್ರಪ್ಪ ಕಡುಬು ರುಚಿಯಾಗಿಲ್ಲವ? ಒಂದಿಷ್ಟು ಮೊಸರು ತರಲ? ನಿನ್ನದೇ ತುಂಗೆಯ ಹಾಲಿನ ಮೊಸರು. ಚಾಕಲ್ಲಿ ಕತ್ತರಿಸಬೇಕು, ಅಷ್ಟು ಗಟ್ಟಿ ಮೊಸರು” ಎಂದು ಸೀತಮ್ಮ ಅಂದದ್ದು ಚಂದ್ರಪ್ಪನಿಗೆ ಅರ್ಥವಾಯಿತು. ಅವನು ತಲೆಯಲ್ಲಾಡಿಸುತ್ತ “ಇಲ್ಲಮ್ಮ” ಎಂದು ಕಡುಬನ್ನು ತಿನ್ನತೊಡಗಿದ.

ಹಿತ್ತಲಿನ ಬಲಿತು ಬಿದ್ದಿದ್ದ ತೆಂಗಿನ ಕಾಯನ್ನು ಸೀತಮ್ಮ ಎತ್ತಿ ತಂದು, “ಚಂದ್ರಪ್ಪ ಇದನ್ನು ಸುಲಿದುಕೊಡುತ್ತೀಯ” ಎಂದರು. ಅವರಿಗೆ ಈ ಕಾಯಿಯನ್ನು ಸುಲಿಯುವುದೇನೂ ಬೇಕಿರಲಿಲ್ಲ. ಆದರೆ ಕತ್ತಿ ಹಿಡಿದು ಮಾಡುವ ಇಂಥ ಕೆಲಸಗಳೆಂದರೆ ಚಂದ್ರಪ್ಪ ಖುಷಿಯಾಗಿ ಬಿಡುತ್ತಾನೆಂದು ಅವರಿಗೆ ಗೊತ್ತು. ಮನೆಯಲ್ಲಿ ಅವನು ಪ್ರಸಾದನ ಸೈಕಲ್ಲನ್ನು ಒಂದು ಕಣ ಧೂಳಿಲ್ಲದಂತೆ ಶುಭ್ರವಾಗಿ ಒರಸಿ, ಆಯಿಲ್ ಬಿಟ್ಟು, ಸೈಕಲ್ಲಿನ ಹ್ಯಾಂಡಲ್‍ಗೆ ಅವನೇ ಕಟ್ಟಿದ ಚಂಡುಹೂವಿನ ಸರವನ್ನು ಸುತ್ತುತ್ತಾನೆ – ಪ್ರತಿ ದಿವಸವೂ ಹಬ್ಬ ಹರಿದಿನಗಳಲ್ಲಿ ಮಾವಿನೆಲೆಯನ್ನು ತಂದು ತಮ್ಮ ಮನೆಗೆ ತೋರಣ ಕಟ್ಟುವುದೂ ಅವನೇ.

ಸೀತಮ್ಮ ಒಳಬಂದವರು ತನ್ನೊಡನೆ ಮಾತಾಡಲೆಂದು ಅಡುಗೆ ಮನೆಯಲ್ಲೇ ಕಾದಿದ್ದ ಗೋಪಾಲನನ್ನು ಸಿಟ್ಟಿನಲ್ಲಿ ನೋಡಿದರು. ಅವನು ಏನು ಹೇಳಲಿಕ್ಕೆ ಕಾದಿದ್ದಾನೆ ಎಂಬುದು ಅವರಿಗೆ ಗೊತ್ತಿತ್ತು. ಗೋಪಾಲ ಅಳುಬುರುಕ ಮುಖ ಮಾಡಿಕೊಂಡು ಹೇಳಿದ:

“ಅಪ್ಪ ಬೇಕಾದರೆ ಅಲ್ಲೇ ಹೋಗಲಿ. ಅವಳು ಇಲ್ಲಿ ಬರೋದು ಬೇಡ. ಊರವರೆಲ್ಲ ಏನು ಆಡಿಕೋತಾರೆ ನಿನಗೆ ಗೊತ್ತುಂಟಲ್ಲ.”

“ಆಡೋವರ ಬಾಯೀನ ಮುಚ್ಚಿಸಲಿಕ್ಕೆ ಆಗುತ್ತೇನೋ? ಅವರಿಂದ ನಮಗೇನಾಗಬೇಕು ಹೇಳು. ನಿನ್ನ ದರಿದ್ರ ರಾಜಕೀಯಕ್ಕಷ್ಟು ಬೆಂಕಿ ಹಾಕಿತು. ಇಲ್ಲಿನ ಬ್ರಾಹ್ಮಣರು ಓಟು ಕೊಡಲ್ಲಾಂತ ನಿನ್ನ ಚಿಂತೆಯಲ್ಲವ? ನಿನ್ನನ್ನು ಕಣ್ಣು ಬಿಟ್ಟು ನೋಡದೆ ನಿನ್ನ ಅಮ್ಮ ಹೆತ್ತವಳೇ ಸತ್ತದ್ದು ಗೊತ್ತ? ಈ ಗಂಗೂನೇ ನಿನ್ನ ಎತ್ತಿ ಆಡಿಸಿದವಳು. ಅವಳು ನಿನ್ನ ತಾಯಿಗೆ ಸಮ ಅನ್ನೋದನ್ನ ಮರಿಬೇಡ. ಎಲ್ಲಿ ಏಳು, ಹೋಗು. ಕೆಟ್ಟ ಯೋಚನೆ ಮಾಡಿದ್ದಕ್ಕೆ ತಪ್ಪಾಯ್ತೂಂತ ದೇವರಿಗೆ ನಮಸ್ಕಾರ ಮಾಡಿ ಬಾ. ತಗೋ, ಈ ರೂಪಾಯಿ ಕಾಣಿಕೇನ ದೇವರ ಎದುರಿನ ತಿರುಪತಿ ಹುಂಡಿಗೆ ಹಾಕಿಬಾ” ಎಂದು ಸೊಂಟಕ್ಕೆ ಸಿಕ್ಕಿಸಿಕೊಂಡ ಚಿಲ್ಲರೆಯಲ್ಲಿ ಒಂದು ರೂಪಾಯಿ ಕೊಟ್ಟರು. ಇನ್ನೂ ಚಿಲ್ಲರೆ ಹಣ ಸೊಂಟದಲ್ಲಿತ್ತು: ಮನೆಗೆ ಬಂದ ಭಿಕ್ಷುಕರಿಗೆ ಹಾಕಲಿಕ್ಕೆ ಅಂತ ಸೊಂಟದಲ್ಲಿ ಸದಾ ಸೀತಮ್ಮ ಚಿಲ್ಲರೆ ಹಣ ಇಟ್ಟುಕೊಳ್ಳುವುದು.

ಗೋಪಾಲ ಸಣ್ಣ ಬಾಲನಂತೆ ಅವರು ಕೊಟ್ಟ ರೂಪಾಯನ್ನು ತೆಗೆದುಕೊಂಡು ನಿಟ್ಟುಸಿರು ಬಿಡುತ್ತ ದೇವರ ಕೋಣೆಗೆ ಹೋಗುವುದನ್ನು ಕಂಡು ಸೀತಮ್ಮ ತಣಿದು ತಾವೂ ನಿಟ್ಟುಸಿರು ಬಿಟ್ಟರು.